ಪಟ್ಟಣದ ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಗಾಯತ್ರಿದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಚಂಡಿಕಾ ಮಹಾಯಾಗ, 16ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಮತ್ತು ಕಲ್ಯಾಣ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸೋಮವಾರದಿಂದ ಪ್ರಾರಂಭಗೊಂಡು ಬುಧವಾರದವರೆಗೂ ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ತಾಲ್ಲೂಕಿನ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
ಮಹಾಗಣಪತಿ ಪೂಜೆ, ಚಂಡಿಕಾ ಮಹಾಯಾಗ, ತೈಲಾಭಿಷೇಕ, ಪಂಚಾಮೃತಾಭಿಷೇಕ, ರಥ ಕಳಶಸ್ಥಾಪನೆ, ಜ್ಯೇಷ್ಠಾದೇವಿ, ನೀಳಾದೇವಿ ಸಮೇತ ಶನೈಶ್ಚರಸ್ವಾಮಿಯ ಕಲ್ಯಾಣೋತ್ಸವ, ಸಾಮೂಹಿಲ ಎಳ್ಳು ದೀಪೋತ್ಸವ, ತಿಲಹೋಮ, ಕ್ಷೀರಾಭಿಷೇಕ, ವಿಶೇಷ ಶಾಲ್ಯಾನ್ನ ಅಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು. ರಥದ ಮೆರವಣಿಗೆಯಲ್ಲಿ ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕೆ.ಎಚ್.ಬಿ.ಕಾಲೋನಿಯ ರಸ್ತೆಗಳಲ್ಲಿ ರಥವನ್ನು ಎಳೆದರು.
ವಿವಿಧ ದೇವರುಗಳಿಗೆ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿದ್ದು, ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ಪ್ರಧಾನ ಅರ್ಚಕ ರಾಮಮೋಹನ್ ಶಾಸ್ತ್ರಿ, ಭಾಸ್ಕರ ಸ್ವಾಮಿ, ಮುತ್ತೂರು ಶಿವಗುರು ಶರ್ಮ, ದೇವಾಲಯದ ಕಾರ್ಯಕಾರಿ ಮಂಡಲಿ ಸದಸ್ಯರು ಮತ್ತಿತರರು ಹಾಜರಿದ್ದರು.
ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಬ್ರಹ್ಮರಥೋತ್ಸವ
ಬೆಳ್ಳೂಟಿ ರಂಗನಾಥಸ್ವಾಮಿಯ ತೃತೀಯ ತಿರುಕಲ್ಯಾಣ ಮಹೋತ್ಸವ
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ರಂಗನಾಥಸ್ವಾಮಿಯ ತೃತೀಯ ತಿರುಕಲ್ಯಾಣ ಮಹೋತ್ಸವವನ್ನು ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಭೂನೀಳಾ ಸಮೇತ ರಂಗನಾಥಸ್ವಾಮಿಯ ಕಲ್ಯಾಣ ಮಹೋತ್ಸವವನ್ನು ಉತ್ತರಾಯಣ ವೈಶಾಖ ಮಾಸದ ಶನಿವಾರ ಮತ್ತು ಭಾನುವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.
ಬೆಳಿಗ್ಗೆಯಿಂದ ಪ್ರಾರಂಭವಾದ ಸುಪ್ರಭಾತಸೇವೆ, ವಿಶ್ವಕ್ಷೇನಪೂಜೆ, ತುಳಸಿಪೂಜೆ, ಅಗ್ನಿಮುಖ, ಗಣಪತಿಹೋಮ, ನವಗ್ರಹಹೋಮ, ಮಹಾಸುದರ್ಶನಹೋಮ, ಪ್ರಧಾನಹೋಮ, ಶಾಂತಿಹೋಮ, ಪೂರ್ಣಾಹುತಿ, ಪಂಚಾಮೃತಾಭಿಷೇಕ, ಮಹಾಕುಂಭಾಭಿಷೇಕ, ಅಲಂಕಾರ, ಕಲ್ಯಾಣೋತ್ಸವ, ಅಷ್ಟೋತ್ತರ, ರಾಷ್ಟ್ರಾಶಿರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ತಾಲ್ಲೂಕಿನ ವಿವಿದೆಡೆಗಳಿಂದ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನ ಅರ್ಚಕ ಕೆ.ವಿಷ್ಣುವರ್ಧನಾಚಾರ್, ರಂಗನಾಥಸ್ವಾಮಿ ಕುಲಬಾಂಧವರು, ಬೆಳ್ಳೂಟಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.

ಬಿ.ಎನ್.ಚಂದ್ರಪ್ಪ (ಬಿ.ಎನ್.ಸಿ) ಮೇಸ್ಟ್ರು
ಇವರಿಗೆ 76 ವರ್ಷಗಳಾದರೂ ಬಿ.ಎನ್.ಸಿ ಮೇಸ್ಟ್ರು ಎಂದೇ ತಾಲ್ಲೂಕಿನಾದ್ಯಂತ ಚಿರಪರಿಚಿತರು. ಇವರು ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಮೇಲೂರು, ಪಿಯುಸಿ ಬೋರ್ಡ್, ಜ್ಯೂನಿಯರ್ ಕಾಲೇಜು, ಗಂಜಿಗುಂಟೆ ಮತ್ತು ಚೀಮಂಗಲದಲ್ಲಿ ಹೈಸ್ಕೂಲ್ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಇವರ ಶಿಷ್ಯರಲ್ಲಿ ಮೂವರು ಐಎಎಸ್, ೫ ಕೆಎಎಸ್ ಮತ್ತು ಒಬ್ಬರು ಐಪಿಎಸ್ ಆಗಿರುವರು. ಗ್ರಾಮಾಂತರ ಪ್ರದೇಶಗಳಲ್ಲಿ ರಜಾ ದಿನಗಳಲ್ಲಿ ಉಪಾದ್ಯಾಯರುಗಳ ತಂಡಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿಗಳನ್ನು ನೀಡಿದ್ದಾರೆ.
1968ರಲ್ಲಿ ಕರ್ನಾಟಕ ಯುವಜನ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಗಣೇಶೋತ್ಸವ ಹಾಗೂ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾಜ್ಯ ಮಟ್ಟದ ಹೆಸರಾಂತ ಕಲಾವಿದರನ್ನು ಕರೆಸಿ ಪಟ್ಟಣದಲ್ಲಿ ರಂಗಭೂಮಿ ಕಲೆ ಬೆಳೆಯಲು ಶ್ರಮಿಸಿರುವರು. ತಾಲ್ಲೂಕಿನಲ್ಲಿ ಹೆಚ್ಚಾಗಿ ತೆಲುಗು ಪೌರಾಣಿಕ ನಾಟಕಗಳೇ ನಡೆಯುತ್ತಿದ್ದ ಕಾಲದಲ್ಲಿ ಕನ್ನಡ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದರು. ಮಂಗಳಾ ನನ್ನ ಅತ್ತಿಗೆ, ದುಡ್ಡೇ ದೊಡ್ಡಪ್ಪ, ಮಕ್ಮಲ್ ಟೋಪಿ, ಸಂಸಾರ ನೌಕೆ, ದೇಶಭಕ್ತರು ಇವರು ನಿರ್ದೇಶಿಸಿ ನಟಿಸಿದ ನಾಟಕಗಳು. ನಾಟಕಗಳಲ್ಲಿ ಇವರು ಮಾಡುತ್ತಿದ್ದ ಹಾಸ್ಯ ಪಾತ್ರಗಳು ವಿಶಿಷ್ಟವಾಗಿರುತ್ತಿದ್ದವು.
ಪಟ್ಟಣಕ್ಕೆ ಹೆಸರಾಂತ ಗಾಯಕಿಯರಾದ ಎಸ್.ಜಾನಕಿ, ಪಿ.ಸುಶೀಲಾ ಮತ್ತು ಎಲ್.ಆರ್.ಈಶ್ವರಿ ಅವರನ್ನು ಕರೆಸಿದ್ದರು. ತಾಲ್ಲೂಕಿನಲ್ಲಿ ಕನ್ನಡ ರಂಗಭೂಮಿ ಪಸರಿಸಲು ಶ್ರಮಿಸಿದ್ದಾರೆ. ತಾಲ್ಲೂಕಿನಾದ್ಯಂತ ಥಿಯೋಸೋಫಿಕಲ್ ಸೊಸೈಟಿಯ ಮೂಲಕ ಮಾನಸಿಕ ಸದೃಢತೆಗಾಗಿ ಹಲವು ಶಿಬಿರಗಳನ್ನು ಆಯೋಜಿಸಿದ್ದಾರೆ.
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ದರ್ಗಾದಲ್ಲಿ ಗಂಧದ ಅಭಿಷೇಕ
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ಅನುಯಾಯಿಗಳು ರಾಜೀವ್‌ಗಾಂಧಿ ಲೇಔಟ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಮೆರವಣಿಗೆಯಲ್ಲಿ ಸಾಗಿದರು. ದರ್ಗಾದಲ್ಲಿ ನಡೆಸುವ ಗಂಧದ ಅಭಿಷೇಕಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಅಲಂಕರಿಸಿಕೊಂಡು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ದರ್ಗಾದಲ್ಲಿ ಹೊದಿಸುವ ಚಾದರ್, ಮಲ್ಲಿಗೆ ಹೂಗಳು, ಮೆಕ್ಕಾ ಮುಂತಾದ ವಿವಿಧ ದರ್ಗಾಗಳ ಪ್ರತಿಕೃತಿಗಳು ವಾದ್ಯವೃಂದದೊಂದಿಗೆ ಸಾಗಿದವು. ಕೇಸರಿ ಮತ್ತು ಹಸಿರು ಬಣ್ಣದ ಉಡುಪುಗಳನ್ನು ಧರಿಸಿಕೊಂಡು ಪೂಜೆ ನಡೆಸುವ ಫಕ್ರಾಗಳ ಡೋಲಿನ ವಾದನದೊಂದಿಗೆ ರಸ್ತೆಯಲ್ಲಿ ಸಾಗಿದಾಗ ಆಕರ್ಷಕವಾಗಿ ಕಂಡುಬಂದಿತು.
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಅಸ್ಲಂ, ಉಪಾಧ್ಯಕ್ಷ ನಸೀರ್ ಅಹ್ಮದ್, ಕಾರ್ಯದರ್ಶಿ ನಿಜಾಮುದ್ದೀನ್, ಷೇಕ್‌ಹುಸೇನ್, ಫಕ್ರುದ್ದೀನ್ ಸಾಬ್, ಸಯ್ಯದ್ ನಯಾಜ್, ಅಲೀಖಾನ್, ಅಮ್ಜದ್ ಖಾನ್, ಸುಭಾನ್, ರಿಯಾಜ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿಜಯಲಕ್ಷ್ಮೀ ಟಾಕೀಸ್ ಬಳಿಯ ದಸ್ತು ನ HKGN ಟೀ ಸ್ಟಾಲ್
ವಿಜಯಲಕ್ಷ್ಮೀ ಟಾಕೀಸ್ ಬಳಿಯ HKGN ಟೀ ಸ್ಟಾಲ್ ಇಲ್ಲಿಯ ಜನರ ಮೆಚ್ಚಿನ ಸ್ಥಳಗಳಲ್ಲೊಂದು. ದಸ್ತು ನ ಟೀ ರುಚಿ ಎಲ್ಲರಿಗೂ ಅಚ್ಚುಮೆಚ್ಚು. ಕಛೇರಿಗೆ ಹೋಗುವವರಿಂದ ಹರಟೆಗೆ ಕೂರುವವರ ವರೆಗೂ ಈ ಟೀ ಸ್ಟಾಲ್ ಗೆ ಭೇಟಿ ನೀಡದ ವ್ಯಕ್ತಿಯಿಲ್ಲ. ಇನ್ನು ರೈಲ್ವೆ ಸ್ಟೇಷನ್ ನ ಬಳಿ ಗಾಳಿ ಸಂಚಾರಕ್ಕೆ ಬರುವ ಜನರಂತೂ ಈ ಸ್ಟಾಲ್ ನ ದರ್ಶನ ಮಾಡಿಯೇ ಮನೆಗಳಿಗೆ ತೆರಳುವುದು
ಜಾನಪದ ಕಲಾ ಪ್ರದರ್ಶನದೊಂದಿಗೆ ಮುಕ್ತಾಯಗೊಂಡ ಜೀರಂಗಿ ಮೇಳ ಮಕ್ಕಳ ಬೇಸಿಗೆ ಶಿಬಿರ
ಶಿಡ್ಲಘಟ್ಟ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭಾನುವಾರ ರಾತ್ರಿ ಜೀರಂಗಿ ಮೇಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಟ ಕುಣಿತ, ಕಂಸಾಲೆ ನೃತ್ಯ, ಸೋಮನ ಕುಣಿತ, ವೀರಗಾಸೆ, ಪೂಜಾ ಕುಣಿತ ಮುಂತಾದ ಜನಪದ ಪ್ರಕಾರಗಳನ್ನು ಮಕ್ಕಳು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ಮುದಗೊಳಿಸಿದರು.
ಕಳೆದ ಹದಿನೈದು ದಿನಗಳಿಂದ ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ನಡೆಸಿಕೊಂಡು ಬಂದ ಜಾನಪದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಕಲಿತ ಕಲೆಗಳನ್ನು ಪ್ರದರ್ಶಿಸಲಾಯಿತು. ಮಕ್ಕಳು ಶಿಬಿರದಲ್ಲಿ ಕಲಿತಿರುವ ಚಿತ್ರಕಲೆ, ಕಾಗದ ಕಲೆ, ಮಣ್ಣಿನ ಗೊಂಬೆ, ಮುಖವಾಡ, ಹಸೆ ಚಿತ್ರಣ ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು.
ಈಧರೆ ತಿರುಮಲ ಪ್ರಕಾಶ್ ರಚಿಸಿರುವ ‘ಮಳೆ ಹಕ್ಕಿ’ ನಾಟಕವನ್ನು ಮೈಸೂರು ಮೋಹನ್ ನಿರ್ದೇಶನದಲ್ಲಿ ಶಿಬಿರದ ಮಕ್ಕಳು ಅಭಿನಯಿಸಿದರು. ಹುಲಿಮಂಗಲ ಶಿವಕುಮಾರ್ ಮೇಳವನ್ನು, ಆದಿಮ ಹರೀಶ್ ಬೆಳಕಿನ ವಿನ್ಯಾಸವನ್ನು ಮತ್ತು ಬಂಗಾರಪೇಟೆ ಶಾಂತಮ್ಮ ಪ್ರಸಾದನ ಮಾಡಿದ್ದರು. ಮಕ್ಕಳು ಪ್ರದರ್ಶಿಸಿದ ಲಂಬಾಣಿಕುಣಿತ, ಪಟಾ, ಪೂಜಾ, ಸೋಮ, ವೀರಗಾಸೆ, ಕಂಸಾಳೆ ಕುಣಿತಕ್ಕೆ ಚನ್ನಪಟ್ಟಣ ಸಿ.ಎಸ್.ಶಿವಕುಮಾರ್ ನೃತ್ಯ ಸಂಯೋಜಿಸಿದ್ದರೆ, ವಸಂತಕಾಲದಲಿ ಎಂಬ ನೃತ್ಯರೂಪಕ ಮತ್ತು ಕಂಗೀಲು ಕುಣಿತಕ್ಕೆ ತಿರುಮಲಪ್ರಕಾಶ್ ನೃತ್ಯ ಸಂಯೋಜಿಸಿದ್ದರು.
ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಛಲಪತಿಗೌಡ ಮಾತನಾಡಿ,‘ಮಕ್ಕಳ ವಿವಿಧ ಪ್ರದರ್ಶನಗಳಿಂದ ಇಲ್ಲಿ ಪುಟ್ಟ ಜನಪದ ಲೋಕವೇ ಅನಾವರಣಗೊಂಡಿದೆ. ಕೇವಲ ಹದಿನೈದು ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವುದಲ್ಲದೆ, ವಿವಿಧ ಕಲೆಗಳನ್ನು ಕಲಿಸಿ ಪ್ರದರ್ಶನ ಕೊಡುವಷ್ಟು ತಯಾರಿ ನೀಡುವುದೂ ಬಹಳ ಕಷ್ಟ. ನಗರಗಳಲ್ಲಿ ಬೇಸಿಗೆ ಶಿಬಿರಗಳು ಆರ್ಥಕ ಸಂಪಾದನೆಯ ಮೂಲಗಳಾಗಿರುವಾಗ ಕೇವಲ ಕಲೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿರುವ ಇಂಥಹ ಶಿಬಿರಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ’ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಶಿಡ್ಲಘಟ್ಟದ ಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪೊಲೀಸ್ ಪೇದೆಗಳಾದ ಶ್ರೀನಿವಾಸ ಅವರ ಮಗಳು ಭುವನಶ್ರೀ(546), ರವೀಂದ್ರ ಅವರ ಮಗಳು ಪಿ.ಆರ್.ಶ್ರೀಲಕ್ಷ್ಮಿ(542), ಅಶ್ವತ್ಥ ಅವರ ಮಗ ಮಹೇಶ್(517) ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದರೆ, ನಾರಾಯಣಸ್ವಾಮಿ ಅವರ ಮಗ ಸಿ.ಚಂದನ್(511) ಮತ್ತು ಆನಂದರೆಡ್ಡಿ ಅವರ ಮಗ ಕೆ.ಚರಣ್(416) ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಪ್ರತಿಭಾವಂತ ಮಕ್ಕಳನ್ನು ಗೌರವಿಸಿ ಪುರಠಾಣೆ ಸಬ್‌ಇನ್ಸ್‌ಪೆಕ್ಟರ್ ಪುರುಷೋತ್ತಮ್ ಮಾತನಾಡಿ,‘ಪೊಲೀಸರು ತಮ್ಮ ಕೆಲಸದ ಒತ್ತಡದಲ್ಲಿ ಸಂಸಾರ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಲಿಕ್ಕಾಗದು. ಪೊಲೀಸರ ಮನೆಗಳಲ್ಲೂ ಪ್ರತಿಭಾವಂತ ಮಕ್ಕಳು ಇದ್ದು, ಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ತಮ್ಮ ಪೋಷಕರಿಗೆ ಹಾಗೂ ತನ್ಮೂಲಕ ಪೊಲೀಸ್ ಇಲಾಖೆಗೂ ಹೆಮ್ಮೆ ತಂದಿದ್ದಾರೆ. ಅಂಥಹ ಮಕ್ಕಳನ್ನು ಗೌರವಿಸಿ ಪ್ರೋತ್ಸಾಹಿಸುವುದರ ಮೂಲಕ ಅವರ ಯಶಸ್ಸು ಮತ್ತು ಶ್ರೇಯಸ್ಸನ್ನು ಕೋರಿದ್ದೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ವೀರಕೆಂಪಣ್ಣರ ವೀರಗಾಥೆ
ಪಿಯುಸಿ ಪಾಸಾಗಿದ್ದ ಹದಿನೆಂಟರ ಯುವಕ ಕೃಷಿ ಪ್ರದರ್ಶನದಲ್ಲಿ ಕುರಿಗಳನ್ನು ನೋಡಿದ. ತಾನೂ ತಂದು ಸಾಕಬೇಕೆಂದು ಆಸೆಪಟ್ಟ. ಆದರೆ ಉತ್ಸಾಹ ಮತ್ತು ಬಿಸಿರಕ್ತವಿರುವೆಡೆ ಹಣವಿರಬೇಕಲ್ಲ. ಹಣ ಹೊಂಚಿ ಎರಡು ಕುರಿ ತರುವಷ್ಟರಲ್ಲಿ ಐದು ವರ್ಷ ಕಳೆದಿತ್ತು. ಇದೆಲ್ಲಾ ನಡೆದು ಮೂವತ್ತೈದು ವರ್ಷಗಳಾಗಿವೆ. ಈಗ ಈತನ ಕಣ್ಮುಂದೆ ಸಾವಿರದ ಮುನ್ನೂರು ರಾಂಬೊಲೇಟ್, ಡಾರ್ಸೆಟ್, ಬನ್ನೂರು ಮುಂತಾದ ಕುರಿಗಳಿವೆ. ಈತನೇ ಕುರಿಸಾಕಾಣಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆನೂರಿನ ವೀರಕೆಂಪಣ್ಣ. ಇವರ ಈ ಸಾಧನೆಗೆ ಆಧುನಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ತಳಿಯ ಅಭಿವೃದ್ಧಿ ವಿಧಾನಗಳನ್ನು ಅಳವಡಿಸಿಕೊಂಡಿರುವುದಲ್ಲದೆ, ಪರಿಶ್ರಮ, ಸಂಶೋಧನಾ ಪ್ರವೃತ್ತಿ ಮತ್ತು ಪ್ರಯೋಗಶೀಲತೆಯೇ ಕಾರಣ.
1978ರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕುರಿ ಸಂವರ್ಧನ ಕೇಂದ್ರದಲ್ಲಿ ಒಂದು ಕಾರಿಡಾಲ್ ತಳಿ ಖರೀದಿಸಿ, ಆ ಟಗರಿನಿಂದ ಸ್ಥಳೀಯ ಬನ್ನೂರು ಕುರಿಗಳಿಗೆ ಸಂವರ್ಧನೆ ಮಾಡಿ ಹೊಸ ತಳಿಗಳನ್ನು ಸಾಕಲು ಪ್ರಾರಂಭಿಸಿದರು. ೧೯೮೦ರಲ್ಲಿ ಚಳ್ಳಕೆರೆ ಕುರಿ ಅಭಿವೃದ್ಧಿ ಕೇಂದ್ರದಲ್ಲಿ ಆಗ ತಾನೆ ಆಮದು ಮಾಡಿದ ಟಗರನ್ನು ವೀಕ್ಷಿಸಿ, ತಮಗೂ ಕುರಿ ಸಾಕುವ ಅನುಭವವಿರುವುದರಿಂದ ವಿದೇಶದಿಂದ ತರಿಸಿದ ಮೂಲ ತಳಿ ನೀಡಬೇಕೆಂದು ಕೇಳಿಕೊಂಡರು. ಅಲ್ಲಿಯ ತಜ್ಞರು ಈ ತಳಿಗಳನ್ನು ವೃದ್ಧಿ ಮಾಡುವ ಕಾರ್ಯ ತಳಿ ವರ್ಧಕರಿಗೆ ಮಾತ್ರ ಗೊತ್ತು ಎಂದು ಹೇಳಿ ಇವರನ್ನು ತಿರಸ್ಕರಿಸಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಕೆಂಪಣ್ಣ ದೆಹಲಿಯ ಕೃಷಿ ಭವನದಲ್ಲಿರುವ ಕುರಿ ಸಂಗೋಪನಾ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಅನುಭವವನ್ನು ತಿಳಿಸಿ ತಮಗೂ ಒಂದು ಆಮದಾಗಿರುವ ಮೂಲ ತಳಿ ಟಗರನ್ನು ನೀಡಬೇಕೆಂದು ಕೋರಿದರು. ಇವರ ಆಸಕ್ತಿ, ಅನುಭವ, ಜ್ಞಾನವನ್ನು ಪರೀಕ್ಷಿಸಿ ವಿದೇಶದಿಂದ ಆಮದು ಮಾಡಿದ ಮೂರು ಟಗರುಗಳನ್ನು ಮತ್ತು ೨೫ ಮೂಲ ತಳಿ ಮೆರೀನೋ ಹೆಣ್ಣು ಕುರಿ ಮತ್ತು ಹತ್ತು ಟಗರುಗಳನ್ನು ಚಳ್ಳಕೆರೆ ಮತ್ತು ತಮಿಳುನಾಡಿನ ಕೊಯಿಮತ್ತೂರಿನ ಫಾರಂನಿಂದ ನೀಡಲು ಆದೇಶಿಸಿದರು. ಇವರಿಗೆ ತರಬೇತಿ ನೀಡಲೂ ಆದೇಶಿಸಿದರು. ಇಕ್ರಿಸೆಟ್‌ನಿಂದ ಕುದುರೆ ಮಸಾಲೆಯನ್ನು ಬಿತ್ತನೆಗೆ ತರಿಸಿ ನಾಲ್ಕು ಎಕರೆ ಪ್ರದೇಶದ ನೀರಾವರಿ ಮೇವು ಬೆಳೆದರು. ೧೯೮೫ರಲ್ಲಿ ಆಸ್ಟ್ರೇಲಿಯಾದ ಕುರಿ ತಳಿ ಸಂವರ್ಧಕರಿಂದ ರಾಜ್ಯದ ರಾಣೇಬೆನ್ನೂರಿನಲ್ಲಿ ತರಬೇತಿ ಪಡೆದರು.
ಕುರಿಗಳಿಗೆ ಬರುವ ರೋಗ ಪರೀಕ್ಷಿಸುವುದು, ಕಾಲಕಾಲಕ್ಕೆ ಲಸಿಕೆ ಹಾಕುವುದು, ಮೇವನ್ನು ಸಣ್ಣ ಸಣ್ಣಗೆ ಕತ್ತರಿಸಿ, ಕುರಿಗಳನ್ನು ಕೊಟ್ಟಿಗೆಗಳಲ್ಲಿ ಸಾಕುವ ಪದ್ಧತಿ ಪ್ರಾರಂಭಿಸಿದರು. ವೈದ್ಯರು, ವಿಜ್ಞಾನಿಗಳು ಬೇಕೆಂದಾಗ ಸಿಗುವುದಿಲ್ಲ. ಹಾಗಾಗಿ ಅನಿವಾರ್ಯತೆಯಿಂದ ತಾನೇ ಕುರಿ ವಿಜ್ಞಾನಿ ಮತ್ತು ವೈದ್ಯನಾಗಬೇಕಾಯಿತು ಎನ್ನುತ್ತಾರೆ ಕುರಿಗಳ ರೋಗಗಳನ್ನು ನೋಡಿದ ತಕ್ಷಣ ಕಂಡುಹಿಡಿಯಬಲ್ಲ ಈ ತಜ್ಞ ಕೆಂಪಣ್ಣ. ಆಹಾರ ಪದ್ಧತಿ, ರೋಗಗಳಿಗೆ ಬಳಸುವ ಔಷಧಿ, ತಳಿಸಂವರ್ಧನೆಗಳಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಇವರು ಸಫಲತೆ ಸಾಧಿಸಿದ್ದಾರೆ. ಕೊಟ್ಟಗೆಯಲ್ಲೇ ಆಹಾರ ನೀಡುವುದು ಮತ್ತು ಪ್ರತಿ ಜಾತಿಯ ಕುರಿಗಳನ್ನು ಸ್ವಚ್ಛವಾದ ಗಾಳಿ ಬೆಳಕು ಬರುವ ಕೊಟ್ಟಿಗೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಇವರು ಯಾವ ತಜ್ಞರಿಗೂ ಕಡಿಮೆಯಿಲ್ಲ ಎನ್ನಬಹುದು.
ಇವರ ಪಿತ್ರಾರ್ಜಿತ ೨ ಎಕರೆ ಜಮೀನನ್ನು ೧೧ ಎಕರೆವರೆಗೂ ವಿಸ್ತರಿಸಿ ಹೆಚ್ಚಿನ ಪಾಲು ಕುರಿ ಮೇವಿಗಾಗಿ ಉತ್ತಮ ಮೇವಿನ ತಳಿಗಳನ್ನು ಬೆಳೆಸಿದ್ದಾರೆ. ಪ್ರತಿ ಮುಂಗಾರಿನಲ್ಲಿ ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ಸೈಲೇಜ್ ಮಾಡಿ ಶೇಖರಿಸಿಡುವುದು ಇವರ ವೈಶಿಷ್ಟ್ಯ.
ರೈತರಿಗೆ, ಸ್ವಸಹಾಯ ಸಂಘದ ಸದಸ್ಯರುಗಳಿಗೆ, ಹೊರ ರಾಜ್ಯದ ರೈತರಿಗೆ, ಪಶುಸಂಗೋಪನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕುರಿ ಸಾಕುವ ತರಬೇತಿ ನೀಡುತ್ತಾರೆ. ಕುರಿಗಳ ಆರೋಗ್ಯ, ಮೂಲ ತಳಿಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ, ಯಾವ ತಿಂಗಳಲ್ಲಿ ಸಂತಾನ ಕ್ರಿಯೆ ಮಾಡಿಸಬೇಕು, ಆಹಾರ, ಲಸಿಕೆ, ರೋಗಗಳನ್ನು ಕಂಡುಹಿಡಿಯುವುದು, ರಕ್ತ ಪರೀಕ್ಷೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡುತ್ತಾರೆ. ಇವರ ಫಾರಂಗೆ ದೇಶ ವಿದೇಶಗಳಿಂದ ರೈತರು, ಅಧಿಕಾರಿಗಳು ಹೇಗೆ ಇವರು ಕುರಿ ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಮಾಡುತ್ತಿದ್ದಾರೆಂದು ಅರಿಯಲು ಭೇಟಿ ನೀಡುತ್ತಾರೆ.
1995 ರಲ್ಲಿ ಭಾರತ ಸರ್ಕಾರದ ಬೆಸ್ಟ್ ಶೀಪ್ ಬ್ರೀಡರ್ ಪ್ರಮಾಣಪತ್ರ ಗಳಿಸಿರುವ ಇವರು ಭಾರತದ ಪಶುಗಳ ಪ್ರದರ್ಶನದಲ್ಲಿ ತಮ್ಮ ತಳಿಗಳನ್ನು ಪ್ರದರ್ಶಿಸಿ ಬಹುಮಾನಗಳನ್ನು ಪಡೆದ್ದಿದಾರೆ. ಆಂದ್ರ ಸರ್ಕಾರದ ತಳಿ ವರ್ಧಕ ರೈತ ಪ್ರಮಾಣ ಪತ್ರ, ರಾಜ್ಯ ಸರ್ಕಾರದ 2007ರ ಕೃಷಿ ಪಂಡಿತ್ ಪ್ರಶಸ್ತಿ, 2008ರಲ್ಲಿ ಜಗಜೀವನರಾಂ ಕಿಸಾನ್ ಪುರಸ್ಕಾರಗಳು ಇವರ ಸಾಧನೆಗೆ ಸಂದಿವೆ. ಭಾರತ ಸರ್ಕಾರದ ಕುರಿ, ಮೇಕೆ ಮತ್ತು ಮೊಲ ಅಭಿವೃದ್ಧಿಯ ಕೇಂದ್ರ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯ ಸರ್ಕಾರದ ಪಶು ವೈದ್ಯ ವಿಶ್ವವಿದ್ಯಾನಿಲಯದ ಎಜುಕೇಷನ್ ಕೌನ್ಸಿಲ್ ಸದಸ್ಯರೂ ಆಗಿದ್ದಾರೆ. ಕೇಂದ್ರ ಕೃಷಿ ಮಂತ್ರಿ ಶರತ್ ಪವಾರ್ “ಹಾರ್ವೆಸ್ಟ್ ಆಫ್ ಹೋಪ್” ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ಪ್ರಧಾನ ಮಾಡಿದ್ದಾರೆ.
ಮನೆಯಲ್ಲಿ ಕುರಿ, ಮೇಕೆಗಳಿದ್ದರೆ ಬ್ಯಾಂಕಿನಲ್ಲಿ ಹಣವಿದ್ದಂತೆ. ವಿದ್ಯಾವಂತ ಯುವಕರು ಕೈಗೊಳ್ಳಬಹುದಾದ ಲಾಭದಾಯಕ ಉದ್ದಿಮೆಯಿದು. ರೈತರು ತಮ್ಮ ಶಕ್ತ್ಯಾನುಸಾರ ಕುರಿ ಸಾಕುವುದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನುತ್ತಾರೆ ವೀರಕೆಂಪಣ್ಣನವರು.
ವೆಂಕಿಸ್ ಜ್ಯೂಸ್ ಸೆಂಟರ್
ಶಿಡ್ಲಘಟ್ಟ ತಾಲ್ಲೂಕು ಕಛೇರಿಯ ಮುಂಭಾಗ ಕಾಣಸಿಗುವ ವೆಂಕಿಸ್ ಜ್ಯೂಸ್ ಸೆಂಟರನ ಕಬ್ಬಿನ ಹಾಲು ಇಲ್ಲಿನ ಜನರ ಮೆಚ್ಚುಗೆ ಗಳಿಸುತ್ತಿದೆ.
ಆಶಾಕಿರಣ ಅಂಧ ಮಕ್ಕಳ ಶಾಲೆಗೆ SSLC ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ
ಶಿಡ್ಲಘಟ್ಟದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
1992 ರಿಂದ ಪ್ರಾರಂಭವಾದ ಅಂಧಮಕ್ಕಳ ಶಾಲೆಯು ತಾಲ್ಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂಧ ಮಕ್ಕಳಿಗೆ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದೆ. 2009 ರಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮೊದಲು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದರು. ಅಂದಿನಿಂದ ಈ ಶಾಲೆಯು ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದು ಮಾದರಿಯಾಗಿದೆ.
‘ಕಣ್ಣಿರದಿದ್ದರೂ ಮಕ್ಕಳಲ್ಲಿ ಅಪಾರ ಪ್ರತಿಭೆಯನ್ನು ಹೊಂದಿರುತ್ತಾರೆ. ಹೆಚ್ಚು ಅಂಕಗಳನ್ನು ಪಡೆದು ಮಕ್ಕಳು ಆತ್ಮವಿಶ್ವಾಸದಿಂದ ಮುಂದೆ ಟೀಚರಾಗುತ್ತೇನೆ, ಸ್ವಂತ ಉದ್ಯೋಗವನ್ನು ಕೈಗೊಳ್ಳುತ್ತೇನೆ ಎಂದೆಲ್ಲಾ ಹೇಳುವುದನ್ನು ಕಂಡಾಗ ಹೆಮ್ಮೆ ಎನಿಸುತ್ತದೆ. ಇಲ್ಲಿಯವರೆಗೂ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ 45 ಅಂಧ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಶಾಲೆಯ ಸಂಯೋಜಕ ಗೋಪಾಲಯ್ಯ ತಿಳಿಸಿದರು.
ಈ ಬಾರಿ ಒಂಭತ್ತು ಮಂದಿ ಅಂಧ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು:
ಗೌತಮಿ(503), ಚಿಕ್ಕರೆಡ್ಡಪ್ಪ(499), ಎಲ್.ಗಾಯಿತ್ರಿ(475), ರಾಧಾ(458), ವೈ.ವಿ.ನಂದಿನಿ(457), ಎಲ್.ಮಮತಾ(448), ಗಾಯಿತ್ರಿ(446),ಚಿಟ್ಟಮ್ಮ(392), ಎಂ.ಭವ್ಯ(382).

