ಬೇಸಿಗೆ ರಜೆಯಲ್ಲೂ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ರಿಂಗಣಿಸುತ್ತಿದೆ. ಹಾಗೆಂದು ಇಲ್ಲೇನೂ ಬೇಸಿಗೆ ಶಿಬಿರವನ್ನು ಏರ್ಪಡಿಸಿಲ್ಲ. ಮಕ್ಕಳೇ ಸ್ವಯಂಪ್ರೇರಿತರಾಗಿ ಶಾಲೆಯ ಆವರಣದೊಳಕ್ಕೆ ಬರುತ್ತಾರೆ.
ಕೇರಂ, ಅಳಗುಳಿಮನೆ, ಕ್ರಿಕೆಟ್, ಮರಕೋತಿಯಾಟ, ಗಿಲ್ಲಿದಾಂಡ್ಲು, ಕುಂಟೆಬಿಲ್ಲೆ, ಶಟಲ್ ಕಾಕ್ ಮುಂತಾದ ಆಟಗಳನ್ನು ಮನಸೋ ಇಚ್ಛೆ ಆಡುತ್ತಾರೆ. ಶಾಲೆಯ ಆವರಣದಲ್ಲಿ ಕೆಂಪಾದ ಹೂವರಳಿಸಿಕೊಂಡು ಗುಲ್‌ಮೊಹರ್‌ನ ಸಾಲು ಮರಗಳು ಮಕ್ಕಳ ಮರಕೋತಿ ಆಟಕ್ಕೆ ಮತ್ತು ಉಯ್ಯಾಲೆ ಜೀಕಲಿಕ್ಕೆ ಬಳಕೆಯಾಗುತ್ತಿವೆ. ಕೆಂಪು ಹೂಗಳ ಕೆಳಗೆ ನಲಿವ ಮಕ್ಕಳ ಆಟವನ್ನು ನೋಡುವುದೇ ಒಂದು ಆನಂದ.
ಮಧ್ಯಾನ್ಹವಾಗುತ್ತಿದ್ದಂತೆ ಶಿಕ್ಷಕರು ಪೀಪಿ ಊದುತ್ತಿದ್ದಂತೆಯೇ ಸಾಲಾಗಿ ಬಂದು ಕೈಕಾಲು ಹಾಗೂ ತಮ್ಮ ತಟ್ಟೆ ಲೋಟಗಳನ್ನು ತೊಳೆದುಕೊಂಡು ಬಿಸಿಬಿಸಿ ಮುದ್ದೆಯನ್ನು ಅನ್ನ ಸಾರನ್ನು ಸೇವಿಸುತ್ತಾರೆ. ಯಾವುದಾದರೂ ಮಗುವಿನ ಹುಟ್ಟಿದ ದಿನವಿದ್ದಲ್ಲಿ ಆವತ್ತು ಮಕ್ಕಳಿಗೆಲ್ಲಾ ಪಾಯಸದ ಔತಣ.
ಆಟದ ನಡುವೆ ಶಿಕ್ಷಕರು ಮಕ್ಕಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ತರಗತಿಗಳನ್ನೂ ನಡೆಸುತ್ತಿದ್ದಾರೆ. ಕಂಪ್ಯೂಟರಿನಲ್ಲಿ ಬೆರಳಚ್ಚು ಮತ್ತು ಚಿತ್ರ ಬಿಡಿಸುವುದರಲ್ಲಿ ಮಕ್ಕಳು ಈಗಾಗಲೇ ಪಳಗಿದ್ದಾರೆ. ಶಿಕ್ಷಣ ಇಲಾಖೆಯ ವಿವಿಧ ಸಿಡಿಗಳನ್ನು ಮತ್ತು ಉತ್ತಮ ಶೈಕ್ಷಣಿಕ ಸಂಬಂಧಿ ಸಾಕ್ಷ್ಯಚಿತ್ರಗಳನ್ನೂ ತೋರಿಸುತ್ತಾರೆ. ಮಕ್ಕಳು ಕಂಪ್ಯೂಟರನ್ನು ತಾವೇ ಬಳಸುವಷ್ಟು ಶಕ್ತರಾಗಿದ್ದಾರೆ. ಇಂಗ್ಲಿಷ್ ಕಲಿಕೆ ಕೂಡ ನಡೆಸಲಾಗುತ್ತಿದೆ.
‘ನಮ್ಮ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂದು ಪೋಷಕರೊಬ್ಬರು ಒಮ್ಮೆ ಸಲಹೆ ನೀಡಿದರು. ಅದೇ ವಿಷಯವನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರ ಮುಂದೆ ಪ್ರಸ್ತಾಪಿಸಿದೆವು. ತಕ್ಷಣವೇ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದವರು ದೇಣಿಗೆ ನೀಡುವ ಮೂಲಕ ಶಾಲೆಗೆ ಕಂಪ್ಯೂಟರನ್ನು ತಂದೆವು. ರಜೆ ಸಮಯದಲ್ಲಿ ಈಗದರ ಬಳಕೆ ಹೆಚ್ಚಾಗಿ ಆಗುತ್ತಿದೆ. ಶಾಲೆಗೆ ರಜೆಯಿದ್ದರೂ ಸುಮಾರು 70 ರಿಂದ 80 ಮಕ್ಕಳು ಬಂದೇ ಬರುತ್ತಾರೆ. ಹೇಗಿದ್ದರೂ ಆಡುತ್ತಾರೆ ಮತ್ತು ಬಿಸಿಯೂಟ ಕೂಡ ಇರುತ್ತದೆ. ಅದರೊಂದಿಗೆ ಮಕ್ಕಳಿಗೆ ಕೊಂಚ ಕಲಿಕೆಯೂ ಆಗಲೆಂದು ಕಂಪ್ಯೂಟರ್ ಮತ್ತು ಇಂಗ್ಲಿಷ್ ಕಲಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕರು.
‘ನಮಗೆ ರಜೆ ಕಳೆಯುತ್ತಿರುವುದೇ ತಿಳಿಯುತ್ತಿಲ್ಲ. ಬೆಳಿಗ್ಗೆ ಬಂದರೆ ನಾವು ಮನೆಗೆ ಹೋಗುವುದು ಸಂಜೆಯೇ. ನಮ್ಮ ಸ್ನೇಹಿತರು ಇರುವುದರಿಂದ ಎಲ್ಲಾ ತರಹದ ಆಟಗಳನ್ನೂ ಆಡುತ್ತೇವೆ. ಊಟ ಮಾಡುತ್ತೇವೆ. ಕಂಪ್ಯೂಟರಿನಲ್ಲಿ ಆಡುತ್ತೇವೆ. ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮನೆಗಿಂತ ನಮಗೆ ಶಾಲೆಯೇ ಇಷ್ಟ‘ ಎಂದು ಶಾಲೆಯ ವಿದ್ಯಾರ್ಥಿಗಳಾದ ಶ್ರಾವಣಿ ಮತ್ತು ನಯನ ತಿಳಿಸಿದರು.
ಬೇಸಿಗೆ ರಜೆಯಲ್ಲೂ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ
ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹಜಯಂತಿಯ ಪೌರ್ಣಿಮೆ ಪೂಜೆ
ಪಟ್ಟಣದ ಶಂಕರಮಠ ಬೀದಿಯಲ್ಲಿರುವ ಶಾಮಣ್ಣನ ಬಾವಿಯ ಬಳಿಯ ಪುರಾತನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹಜಯಂತಿಯ ಪೌರ್ಣಿಮೆ ಪೂಜೆಯನ್ನು ಬುಧವಾರ ಆಚರಿಸಲಾಯಿತು.
ಐದು ಗರ್ಭಗುಡಿಗಳಿರುವ ಪಟ್ಟಣದ ಏಕೈಕ ಕಲ್ಯಾಣಿ ಇರುವ ಪುರಾತನ ದೇವಾಲಯದಲ್ಲಿ ಸೂರ್ಯನಾರಾಯಣಸ್ವಾಮಿ, ಗಣಪತಿ, ಸುಬ್ರಮಣ್ಯಸ್ವಾಮಿ, ಶ್ರೀಕಂಠೇಶ್ವರ, ಗಿರಿಜಾಂಬ, ಚಂಡಿಕೇಶ್ವರ, ಲಕ್ಷ್ಮೀನರಸಿಂಹಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ವಿಗ್ರಹಗಳಿವೆ.
ಲಕ್ಷ್ಮೀನರಸಿಂಹಸ್ವಾಮಿ ಜಯಂತಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆಯನ್ನು ನಡೆಸಲಾಗಿದ್ದು, ಪಾರಣೆಯ ಪೂಜೆಯ ಪ್ರಯುಕ್ತ ಬುಧವಾರವೂ ವಿಶೇಷ ಪೂಜೆಯನ್ನು ಆಯೋಜಿಸಿದ್ದರಿಂದ ಅನೇಕ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವರುಗಳಿಗೆಲ್ಲಾ ವಿವಿಧ ಹೂಗಳಿಂದ ಅಲಂಕರಿಸಿದ್ದು, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.
ಪುರಸಭಾ ಸದಸ್ಯೆ ಸುಗುಣಾ ಲಕ್ಷ್ಮಿನಾರಾಯಣ್, ಎ.ಎಸ್.ರವಿ, ಅನಂತಕೃಷ್ಣ, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಅರ್ಚಕ ರಾಜಶೇಖರ್, ಸಾಯಿಈಶ ಮತ್ತಿತರರು ಹಾಜರಿದ್ದರು.
ಬಾವಲಿಗಳು ಮತ್ತು ಗ್ರಾಮಸ್ಥರ ನಡುವಿನ ಸಹಬಾಳ್ವೆ
ಜೀವಜಂತುಗಳಿರುವ ಕಾಡು, ಮಾನವನ ವಾಸಸ್ಥಳವಾದ ಊರು ಒಂದಕ್ಕೊಂದು ಬೆಸೆದುಕೊಂಡಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಸಾಮರಸ್ಯ ಇಲ್ಲದಿದ್ದರೆ ಅನೇಕ ಜೀವಿಗಳು ನಾಶವಾಗುತ್ತವೆ.
ಬದುಕಿಗಾಗಿ ನಡೆಯುವ ಇಂಥ ಸಹಬಾಳ್ವೆಯು ಬಾವಲಿಗಳು ಮತ್ತು ಗ್ರಾಮಸ್ಥರ ನಡುವೆ ತಾಲ್ಲೂಕಿನ ಕೋಟಹಳ್ಳಿ ಬಳಿ ಏರ್ಪಟ್ಟಿದೆ. ಪಟ್ಟಣದಿಂದ ದಿಬ್ಬೂರಹಳ್ಳಿಗೆ ಹೋಗುವ ದಾರಿಯಲ್ಲಿ ಕೋಟಹಳ್ಳಿ ಬಳಿ ರಸ್ತೆ ಬದಿಯಿರುವ ನಾಲ್ಕು ಆಲದ ಮರ ಮತ್ತು ಒಂದು ಬೇವಿನ ಮರ ನೂರಾರು ಬಾವಲಿಗಳ ವಾಸಸ್ಥಾನವಾಗಿದೆ. ಮೊದಲು ಒಂದು ಮರದಲ್ಲಿ ವಾಸಿಸುತ್ತಿದ್ದ ಬಾವಲಿಗಳು ಸಂತಾನೋತ್ಪತ್ತಿ ಮಾಡುತ್ತಾ ಈಗ ಐದು ಮರಗಳಿಗೆ ವಿಸ್ತರಿಸಿವೆ. ಇದಕ್ಕೆ ಮುಖ್ಯ ಕಾರಣ ಕೋಟಹಳ್ಳಿ ಮತ್ತು ಶೆಟ್ಟಹಳ್ಳಿ ಗ್ರಾಮಸ್ಥರು ಈ ಬಾವಲಿಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುತ್ತಿರುವುದು. ಹಾರಾಡುವ ಸಸ್ತನಿಯಾದ ಬಾವಲಿ ಉದ್ದುದ್ದ ಕೈಕಾಲುಗಳು, ಜೋತಾಡುವ ರೆಕ್ಕೆಯ ಪರೆ, ದೊಡ್ಡ ಕಿವಿ, ತೀಕ್ಷ್ಣ ಕಣ್ಣುಗಳು ಮತ್ತು ನರಿಯನ್ನು ಹೋಲುವ ಮುಖದಿಂದಾಗಿ ಕುರೂಪಿಯಾಗಿ ಕಾಣುತ್ತದೆ. ಆದರೆ ಕೋಟಿಗಟ್ಟಲೆ ಹಾನಿಕಾರಕ ಕೀಟಗಳನ್ನು ತಿಂದು ರೈತರ ಬೆಳೆಗೆ ರಕ್ಷಣೆ ಒದಗಿಸುತ್ತದೆ ಮತ್ತು ಇದರ ಮಲ ಉತ್ತಮ ಗೊಬ್ಬರ ಕೂಡ. ಇವು ಸಮೂಹ ಜೀವಿಗಳು. ಹಗಲ್ಲೆಲಾ ತಲೆಕೆಳಗಾಗಿ ನಿದ್ರಿಸುತ್ತಿದ್ದು ಮುಸ್ಸಂಜೆಯ ಸಮಯದಲ್ಲಿ ಆಹಾರ ಸಂಪಾದನೆಗೆ ಹೊರಡುವ ಬಾವಲಿ ನಿಶಾಚರ ಜೀವಿ.
ಬಾವಲಿಯ ರಾತ್ರಿ ಹಾರಾಟಕ್ಕೆ ಸಹಾಯಕವಾಗುವುದು ಅದರ ವಿಶಿಷ್ಟವಾದ ಧ್ವನಿಪೆಟ್ಟಿಗೆ ಮತ್ತು ಕಿವಿ. ಅದು ನಿರ್ದಿಷ್ಟ ಸಮಯಗಳಲ್ಲಿ ೧೦,೦೦೦ ದಿಂದ ೫೦,೦೦೦ದ ತನಕ ಆವರ್ತಾಂಕವುಳ್ಳ ಧ್ವನಿಯ ಸ್ಪಂದನಗಳನ್ನು ಹೊರಡಿಸುತ್ತದೆ. ಸುತ್ತಮುತ್ತಲ ವಸ್ತುಗಳಿಂದ ಬಂದ ಪ್ರತಿಧ್ವನಿಯನ್ನು ಕಿವಿಗಳು ವಿಶ್ಲೇಷಿಸುವುದರಿಂದ ಕತ್ತಲಲ್ಲಿ ಬಾವಲಿ ಅಡೆತಡೆ ಮತ್ತು ಆಹಾರವನ್ನು ಗುರುತಿಸುತ್ತದೆ. ಈ ತಂತ್ರಜ್ಞಾನವನ್ನು ರಾಡಾರ್ ಮತ್ತು ಸೋನಾರ್ ಉಪಕರಣಗಳಲ್ಲಿ ಕಾಣಬಹುದು.
‘ಹಲವಾರು ವರ್ಷಗಳಿಂದ ಈ ಬಾವಲಿಗಳು ಇಲ್ಲಿವೆ. ಮೊದಲು ಕಡಿಮೆಯಿದ್ದವು. ಈಗ ಹೆಚ್ಚಾಗಿವೆ. ಇವುಗಳಿಂದ ನಮಗೇನೂ ತೊಂದರೆಯಿಲ್ಲ. ಬದಲಿಗೆ ಬೆಳೆಗಳಿಗೆ ತೊಂದರೆ ಮಾಡುವ ಕೀಟಗಳನ್ನು ತಿಂದು ಸಹಾಯ ಮಾಡುತ್ತವೆ. ಬಾವಲಿಗಳನ್ನು ಬೇಟೆಯಾಡಲು ಇಲ್ಲಿ ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಕೋಟಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.
ಜೀರಂಗಿ ಮೇಳದಲ್ಲಿ ಪವಾಡ ರಹಸ್ಯ ಬಯಲು
ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಈಧರೆ ಮತ್ತು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ‘ಜೀರಂಗಿ ಮೇಳ’ ಮಕ್ಕಳ ಬೇಸಿಗೆ ಶಿಬಿರದಲ್ಲಿ ಶನಿವಾರ ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಎಂ.ಎ.ರಾಮಕೃಷ್ಣಪ್ಪ ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮವನ್ನು ನೀಡಿ ಮಕ್ಕಳಿಗೆ ವೈಜ್ಞಾನಿಕ ವಿವರಣೆಗಳನ್ನು ನೀಡಿದರು.
ನಾಲಿಗೆಯಿಲ್ಲದ ಗಂಟೆಯಿಂದ ಶಬ್ದ ಮಾಡುವುದು, ತ್ರಿಶೂಲದಿಂದ ನಾಲಿಗೆ ಚುಚ್ಚಿಕೊಳ್ಳುವುದು, ಖಾಲಿ ಬಾಟಲಿಯಿಂದ ಪೆನ್ಸಿಲ್ ಹೊರತೆಗೆಯುವುದು, ಹಗ್ಗವನ್ನು ತುಂಡು ಮಾಡಿ ಪುನಃ ಜೋಡಿಸುವುದು ಮುಂತಾದ ಪ್ರದರ್ಶನಗಳನ್ನು ನೀಡಿ ಅವುಗಳ ಹಿಂದಿನ ವೈಜ್ಞಾನಿಕ ರಹಸ್ಯವನ್ನು ವಿವರಿಸಿದರು. ಜನರಿಗೆ ಈ ರೀತಿಯ ಪವಾಡಗಳ ಮೂಲಕ ವಂಚಿಸುವವರ ಬಗ್ಗೆಯೂ ಹೇಳಿ ಮೋಸ ಹೋಗದಂತೆ ಕಿವಿಮಾತನ್ನು ಹೇಳಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಿದರು.
ಈಧರೆ ತಿರುಮಲ ಪ್ರಕಾಶ್, ಮೋಹನ್, ವೇಣುಗೋಪಾಲ್, ಮಂಜುನಾಥ್, ನಾಗಭೂಷಣ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ವಾಸವಿ ಜಯಂತಿ
ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ವಾಸವಿ ಜಯಂತಿಯ ಪ್ರಯುಕ್ತ ಆರ್ಯವೈಶ್ಯ ಮಂಡಳಿಯ ವತಿಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜಾ ವಿಧಿಗಳಲ್ಲಿ ಅಗ್ರೋದಕಾಕರಣ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ದೇವೀ ಸಪ್ತಶತಿ ಪಾರಾಯಣ, ಕಳಶಸ್ಥಾಪನೆ, ವಾಸವಿ ನವಗ್ರಹ ಕಲ್ಪೋಕ್ತ ಹೋಮಾದಿಗಳು, ಪೂರ್ಣಾಹುತಿ, ಮಹಾನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ಗಣಪತಿ, ಕನ್ನಿಕಾಪರಮೇಶ್ವರಿ, ವಾಸವಿದೇವಿ ಮತ್ತು ಆಂಜನೇಯ ದೇವರುಗಳಿಗೆ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಮೂರು ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಪ್ರತಿದಿನವೂ ಅಭಿಷೇಕ, ಲಲಿತಾ ಸಪ್ತಶತಿ ಪಾರಾಯಣ, ವಿಶೇಷ ಅಲಂಕಾರಗಳನ್ನು ಮಾಡಿದ್ದು, ಭಕ್ತರಿಗೆ ತೀರ್ಥಪ್ರಸಾದಗಳನ್ನು ವಿತರಿಸಲಾಗುತ್ತಿತ್ತು. ವಾಸವಿ ದೇವಿಗೆ ಉಯ್ಯಾಲೋತ್ಸವವನ್ನೂ ನಡೆಸಲಾಯಿತು.
ಋತ್ವಿಜ ವಿ.ನಾಗರಾಜಶರ್ಮ, ಅರ್ಚಕರಾದ ಎಸ್,ಸತ್ಯನಾರಾಯಣರಾವ್, ವೈ.ಎನ್.ದಾಶರಥಿ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಜಿ.ನಾಗೇಂದ್ರ, ವಿ.ರಾಧಾಕೃಷ್ಣಯ್ಯಶೆಟ್ಟಿ, ಎಲ್.ವಿ.ವಿ.ಗುಪ್ತ, ಎಸ್.ಎನ್.ಸತ್ಯನಾರಾಯಣಶೆಟ್ಟಿ, ಕೆ.ವಿ.ಎಲ್.ಪ್ರಸಾದ್, ಕಾಶಿನಾಥ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪಿ.ಎನ್.ಗಜಲಕ್ಷ್ಮಿ, ಜಯಶ್ರೀ, ಅರುಣಾ, ಗಾಯಿತ್ರಿ, ಪ್ರತಿಮಾ, ವಾಸವಿ ಯುವಜನ ಸಂಘದ ಅಧ್ಯಕ್ಷ ಎ.ಎನ್.ಕೇದಾರನಾಥ್, ವಿ.ರಾಜೇಂದ್ರಪ್ರಸಾದ್, ಸಂತೋಷ್, ಮುರಳಿಕೃಷ್ಣ, ಸಂದೀಪ್‌ರಾಜ್, ಟಿ.ಕೆ.ಅರವಿಂದ್ ಮತ್ತಿತರರು ಹಾಜರಿದ್ದರು.
ಶಿಡ್ಲಘಟ್ಟದ ಮುಸ್ಸಂಜೆಯ ಮೆರುಗು
ಶುಕ್ರವಾರ 09/05/2014 ರಂದು ಶಿಡ್ಲಘಟ್ಟದ ರೈಲ್ವೆ ಮೇಲ್ಸೇತುವೆಯಿಂದ ಮುಸ್ಸಂಜೆಯ ದೃಶ್ಯಾವಳಿ ಕಂಡದ್ದು ಹೀಗೆ
ಸುಡುವ ನೆಲಕೆ ತಂಪೆರೆದ ಮಳೆರಾಯ
ಗುರುವಾರ 08/05/2014 ಮಧ್ಯಾಹ್ನ ಆಗಮಿಸಿದ ಮಳೆರಾಯ ಬಿಸಿಲ ಬೇಗೆಯಲ್ಲಿ ಬೆಂದಿದ್ದ ಶಿಡ್ಲಘಟ್ಟಕ್ಕೆ ತಂಪೆರೆದ.
ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ
ತಾಲ್ಲೂಕಿನ ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ, ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದ ವಾರ್ಷಿಕೋತ್ಸವ, ಬಸವ ಜಯಂತಿ ಹಾಗೂ ಶಿವಕುಮಾರಸ್ವಾಮಿಗಳ 107ನೇ ಜನ್ಮದಿನವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಪುರಾತನ ನಗರೇಶ್ವರ ದೇವಾಲಯದಲ್ಲಿ ಬುಧವಾರ ಸಂಜೆಯಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಅಗ್ರೋಧಕ ಗಂಗಾಪೂಜೆ, ಗಣಪತಿಪೂಜೆ, ವರುಣ ವಾಸ್ತುಪೂಜೆ, ನಾಂದಿ, ಋತ್ವಿಗಾವರಣ, ರಕ್ಷಾಬಂಧನ, ಅಸ್ತ್ರರಾಜ ಪೂಜೆ, ಮೃತ್ರಂಗರಣ, ಅಂಕುರಾರ್ಪಣೆ, ವಾಸ್ತುಹೋಮ, ಗಣಪತಿಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಗುರುವಾರ ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜೆಗಳಲ್ಲಿ ಭಕ್ತರೆಲ್ಲ ಪಾಲ್ಗೊಂಡಿದ್ದರು. ಗಣಪತಿ ಪೂಜೆ, ಸರ್ವದೇವತಾ ಕಳಶಗಳ ಪೂಜೆ, ನವಗ್ರಹ ಪೂಜೆ, ಪ್ರಧಾನ ಕಳಶಗಳ ಪೂಜೆ, ಧ್ವಜಾರೋಹಣ, ಮೂಲದೇವರಿಗೆ ರುದ್ರಾಭಿಷೇಕ, ಪ್ರಧಾನ ಹೋಮ, ಪೂರ್ಣಾಹುತಿ ನಂತರ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವವನ್ನು ನಡೆಸಲಾಯಿತು. ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗಿಸಿದ ನಂತರ ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು.
‘ನಗರ್ತ ಮಂಡಳಿ ವತಿಯಿಂದ ಆಯೋಜಿಸಿರುವ ದೇವರ ಕಲ್ಯಾಣೋತ್ಸವ, ಬಸವ ಜಯಂತಿ ಹಾಗೂ ಶಿವಕುಮಾರಸ್ವಾಮಿಗಳ 107ನೇ ಜನ್ಮದಿನ ಆಚರಣೆಯ ಉದ್ದೇಶ ದೇವರ ಅನುಗ್ರಹ ಎಲ್ಲರ ಮೇಲೂ ಆಗಿ ಮಳೆ ಬೆಳೆ ಕಾಲಕಾಲಕ್ಕೆ ಆಗಲಿ ಎಂಬುದಾಗಿದೆ. ಲೋಕಕಲ್ಯಾಣಕ್ಕಾಗಿ ನಡೆಯುವ ಈ ಪೂಜಾ ಕಾರ್ಯಕ್ರಮಗಳು ಸದ್ಭಾವನೆಯಿಂದ ಕೂಡಿದ್ದು, ಎಲ್ಲರ ಪಾಲ್ಗೊಳ್ಳುವಿಕೆಯಿಂದ ಅರ್ಥಪೂರ್ಣವಾಗಿದೆ’ ಎಂದು ಶಾಸಕ ಎಂ.ರಾಜಣ್ಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಳಿಸಿದರು.
ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಕೆ.ಎಂ.ವಿನಾಯಕ, ಕೆ.ಸಿ.ಸುರೇಶ್‌ಬಾಬು, ಆರ್.ಮಲ್ಲಿಕಾರ್ಜುನ, ಎಸ್.ನಾಗರಾಜ್, ನಗರ್ತ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ಸುರೇಶ್‌ಬಾಬು, ಉಷಾ ನಾಗರಾಜ್, ರೂಪಾ, ವಿದ್ಯಾ, ಮುಕ್ತಾಂಬ, ಶುಭಾ, ನಗರ್ತ ಯುವಕ ಮಂಡಳಿ ಅಧ್ಯಕ್ಷ ಮಂಜುನಾಥ್, ದೇವರಾಜ್, ಮುಖೇಶ್, ನವೀನ್, ಅನಿಲ್‌ಕುಮಾರ್, ರೋಹಿತ್, ರೋಹನ್ ಆರ್.ಗಂಧರ್ವ, ಮಹೇಶ್, ಶಿವಶಂಕರ್, ಭರತ್, ಮುರಳಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ.ಕೆ.ಚಂಗಲ್‌ರಾವ್ ನಿಧನ.
ಕಳೆದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಬಚ್ಚಹಳ್ಳಿಯ ಬಿ.ಕೆ.ಚಂಗಲ್‌ರಾವ್(೯೪)ರವರು ಬುಧವಾರ ಬೆಳಗ್ಗೆ ೫ ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಐವರು ಪುತ್ರಿಯರು, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹುಟ್ಟೂರು ಬಚ್ಚಹಳ್ಳಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಿತು.
ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಹಾರ್‍ನಳ್ಳಿ ಅಶೋಕ್, ಶಾಸಕ ಎಂ.ರಾಜಣ್ಣ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಅಪಾರ ಬಂಧು ಬಳಗ, ಅಭಿಮಾನಿಗಳ ಸಾಕ್ಷಿಯಲ್ಲಿ ಅಂತಿಮ ಸಂಸ್ಕಾರದ ವಿದಿವಿಧಾನಗಳನ್ನು ಪೂರೈಸಲಾಯಿತು.
ಶ್ರೀ ಬಿ.ಕೆ.ಚಂಗಲ್‌ರಾವ್ ರ ಕುರಿತಾದ ಲೇಖನವನ್ನು ಇಲ್ಲಿ ಓದಬಹುದು
ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ.ಕೆ.ಚಂಗಲ್‌ರಾವ್
‘ತಾಲ್ಲೂಕು ಕಚೇರಿ ಮುಂದೆ ಸತ್ಯಾಗ್ರಹ ಕುಳಿತಿದ್ದೆವು. ನಾನು ಇನ್ನಿತರೆ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಹರತಾಳ ಮಾಡುತ್ತಿದ್ದಾಗ ಅಲ್ಲಿಗೆ ಡಿಸಿ ಜಾರ್ಜ್ ಮ್ಯಾಥ್ಯೂನ್ ಹಾಗೂ ಎಸ್‌ಪಿ ಜೈಸಿಂಗ್ ಬಂದು ನಮ್ನನ್ನು ಸತ್ಯಾಗ್ರಹ ಬಿಡುವಂತೆ ಹೇಳಿದರು. ನಾವು ಒಪ್ಪದೆ ಸತ್ಯಾಗ್ರಹ ಮುಂದುವರೆಸಿದಾಗ ಬ್ರಿಟೀಷ್ ಪೊಲೀಸರ ಬಂದೂಕಿನಿಂದ ಹಾರಿದ ಗುಂಡಿಗೆ ಭಕ್ತರಹಳ್ಳಿಯ ಕುಂಬಾರದೊಡ್ಡಿ ನಾರಾಯಣಪ್ಪ ಬಲಿಯಾಗಿದ್ದು ಇನ್ನೂ ನನ್ನ ಕಣ್ಣೆದುರಿಗೆ ಕಟ್ಟಿದಂತಿದೆ’ ಎಂದು ಸ್ವಾತಂತ್ರ್ಯ ಹೋರಾಟದ ದಿನಗಳನ್ನುನೆನೆಸಿಕೊಂಡು ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನೂ ಕಂಡ ಬಚ್ಚಹಳ್ಳಿಯ ಚಂಗಲ್‌ರಾವ್ ತನ್ನ ಕಳೆದ ಹೋರಾಟದ ದಿನಗಳ ಬಗ್ಗೆ ವಿವರಿಸುತ್ತಿದ್ದರು.
ನನಗೆ ಜನವಾಣಿ ಪತ್ರಿಕೆಯು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ನೀಡಿತಲ್ಲದೆ ಆಗಿನ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಪುರದ ಜಿ.ನಾರಾಯಣಗೌಡರ ಸಂಪರ್ಕ ಕೂಡ ನೇರವಾಗಿ ಹೋರಾಟಕ್ಕೆ ದುಮುಕಲು ಕಾರಣವಾಯಿತು. ೧೯೪೧ನೇ ವರ್ಷ ಇರಬೇಕು. ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ನಾನು ಸೇರಿದಂತೆ ಮಳ್ಳೂರಿನ ಪಾಪಣ್ಣ, ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ, ಕುಂಬಾರದೊಡ್ಡಿ ನಾರಾಯಣಪ್ಪ, ಜಿ.ನಾರಾಯಣಗೌಡರು, ವೀರಪ್ಪ, ಕೆ.ಎಂ.ನಂಜುಂಡಪ್ಪ, ಕಂಬದಹಳ್ಳಿಯ ಮುನಿಸ್ವಾಮಪ್ಪ, ಮಳಮಾಚನಹಳ್ಳಿಯ ದ್ಯಾವಪ್ಪ ಇನ್ನಿತರರು ನೇತೃತ್ವದಲ್ಲಿ ಕೊತ್ತನೂರು, ತಿಪ್ಪೇನಹಳ್ಳಿ, ಮೇಲೂರು, ಮಳ್ಳೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಬೋದಗೂರು ಹಾಗೂ ಪಟ್ಟಣದ ನೂರಾರು ನಾಗರೀಕರು ಪಾಲ್ಗೊಂಡಿದ್ದೆವು. ಒಂದು ದಿನ ಕಂಬದಹಳ್ಳಿಯ ಮುನಿಸ್ವಾಮಿ ತನ್ನ ಸೈಕಲ್ ಮಾರಿ ಬುರುಗು ಖರೀದಿಸಿ ಅದನ್ನು ಪಟ್ಟಣದ ಎಲ್ಲಾ ಶಾಲೆಗಳ ಮಕ್ಕಳಿಗೂ ಹಂಚಿ ೧ ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಆ ಸತ್ಯಾಗ್ರಹಕ್ಕೆ ಕರೆದುಕೊಂಡು ಬಂದಿದ್ದ. ಸತ್ಯಾಗ್ರಹ ಜೋರಾಗಿತ್ತು.
ಅಲ್ಲಿಗೆ ಬಂದ ಎಸ್‌ಪಿ ಹಾಗೂ ಡಿಸಿ ಸತ್ಯಾಗ್ರಹವನ್ನು ಕೈ ಬಿಡುವಂತೆ ಹೇಳಿದರು. ನಾವು ಜಗ್ಗಲಿಲ್ಲ. ಆಗ ಎಸ್‌ಪಿ ಬಂದೂಕು ತೆಗೆದು ಗುಂಡು ಹಾರಿಸ್ತೇನೆ ಅಂತ ಬೆದರಿಸಿದರು. ಆಗ ಕಂಬದಹಳ್ಳಿಯ ಮುನಿಸ್ವಾಮಪ್ಪ ತನ್ನ ಅಂಗಿಯನ್ನು ಹರಿದು ಹಾಕಿ ನಿನ್ನ ಬಂದೂಕಿನಲ್ಲಿ ಗುಂಡು ಇದ್ದರೆ, ನಿನಗೆ ದೈರ್ಯ ಇದ್ದರೆ ನನಗೆ ಗುಂಡು ಹಾರಿಸು ಎಂದು ಎಸ್‌ಪಿಯವರಿಗೆ ಸವಾಲು ಹಾಕಿದರು. ಆಗ ಜತೆಯಲ್ಲಿದ್ದ ಎಸ್‌ಐ ನಾರಾಯಣ್ ಏಯ್ ಎಸ್ಪಿ ಸಾಹೇಬರಿಗೆ ನೀನು ರೋಫ್ ಹಾಕ್ತೀಯ ಅಂತ ಮುನಿಸ್ವಾಮಿಗೆ ಒಂದು ಬಾರಿಸಿದರು. ಆಗ ಮುನಿಸ್ವಾಮಿಯೂ ಎಸ್‌ಐ ನಾರಾಯಣ್‌ರಿಗೆ ಬಲವಾಗಿ ಗುದ್ದಿದರು. ಆಗ ನಾರಾಯಣ್‌ರ ಪೊಲೀಸ್ ಟೋಪಿ ಕೆಳಗೆ ಬೀಳುತ್ತಿದ್ದಂತೆ ಲಾಠಿ ಚಾರ್ಜ್ ಮಾಡಲಾಯಿತು. ಲಾಠಿ ಏಟಿನಿಂದ ಕಂಬದಹಳ್ಳಿಯ ಮುನಿಸ್ವಾಮಿಯ ತಲೆಗೆ ಬಲವಾದ ಏಟುಬಿದ್ದರೂ ಬದುಕುಳಿದ. ಆದರೆ ಬಂದೂಕಿನ ಗುಂಡಿಗೆ ಕುಂಬಾರದೊಡ್ಡಿ ನಾರಾಯಣಪ್ಪ ತೀವ್ರವಾಗಿ ಗಾಯಗೊಂಡರು. ಚಿಕ್ಕಬಳ್ಳಾಪುರದ ಸಿಎಸ್‌ಐ ಆಸ್ಪತ್ರೆಗೆ ಕರೆದೊಯ್ದರು ಕೂಡ ಬದುಕುಳಿಯಲಿಲ್ಲ.
ಇದರಿಂದ ರೊಚ್ಚಿಗೆದ್ದ ಜನ ಇಷ್ಟೆಲ್ಲಾ ರಾದ್ದಾಂತಕ್ಕೂ ಕಾರಣವಾದ ಎಸ್‌ಐ ನಾರಾಯಣ್‌ರ ಮನೆ ಮೇಲೆ(ಪಟ್ಟಣದ ಅಶೋಕ ರಸ್ತೆಯ ಕೊಂಡಪ್ಪನವರ ಮನೆ ಸಮೀಪದಲ್ಲಿ ಮನೆಯಿತ್ತು) ದಾಳಿ ನಡೆಸಿ ಲೂಠಿ ಮಾಡಿದರು. ಮೊದಲೆ ದಾಳಿಯ ಸುಳಿವು ಅರಿತಿದ್ದ ಎಸ್‌ಐ ನಾರಾಯಣ್‌ರ ಮನೆಯವರು ಮನೆಯಲ್ಲಿ ಎಲ್ಲವನ್ನೂ ಇದ್ದಹಾಗೆ ಬಿಟ್ಟು ಮನೆ ಬಿಟ್ಟು ಬಚ್ಚಿಟ್ಟುಕೊಂಡಿದ್ದರು. ಮನೆ ದರೋಡೆ ಹಾಗೂ ಕೊಲೆ ಯತ್ನದ ಮೇಲೆ ನನ್ನನ್ನು ಸೇರಿ ೩೦ಕ್ಕೂ ಹೆಚ್ಚು ಮಂದಿಯನ್ನು ಚಿಕ್ಕಬಳ್ಳಾಪುರದ ಜೈಲಿಗೆ ಅಟ್ಟಲಾಯಿತು. ೫೨ ದಿನ ಜೈಲುವಾಸ ಕಂಡು ಬೇಷರತ್ ಮೇಲೆ ಬಿಡುಗಡೆಯಾಗಿ ಬಂದೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ ಚಂಗಲರಾವ್‌ರವರು ಸ್ವಾತಂತ್ರ್ಯ ನಂತರ ಗಾಂಧೀಜಿವರ ಸ್ವಾವಲಂಬನೆಯ ಕರೆಗೆ ಒಗೊಟ್ಟು ಪಟ್ಟಣದಲ್ಲಿನ ತನ್ನ ಮನೆಯನ್ನು ತೊರೆದು ತಮ್ಮ ವಂಶಪಾರಂಪರ್‍ಯವಾಗಿ ಬಂದಿದ್ದ ಜೋಡಿ ಗ್ರಾಮ ಬಚ್ಚಹಳ್ಳಿಗೆ ಬಂದು ನೆಲೆಸಿ ವ್ಯವಸಾಯ ಮಾಡಿಕೊಂಡು ಮಾದರಿಯಾಗಿ ಬದುಕುತ್ತಿದ್ದರು.

