ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಒಂದು ಲಕ್ಷ ರೂಪಾಯಿ ಸಹಾಯಧನವನ್ನು ನೀಡಿದ್ದು ಬುಧವಾರ ಜಿಲ್ಲೆಯ ನಿರ್ದೇಶಕ ರಾಧಾಕೃಷ್ಣ ಮತ್ತು ತಾಲ್ಲೂಕಿನ ಯೋಜನಾಧಿಕಾರಿ ಬಿ.ಆರ್ ಯೋಗೀಶ್ ದೇವಸ್ಥಾನದ ಮುಖ್ಯಸ್ಥರಿಗೆ ಡಿ.ಡಿ ಯನ್ನು ಹಸ್ತಾಂತರಿಸಿದರು. ದೇವಾಲಯದ ಅಧ್ಯಕ್ಷರಾದ ಎಚ್.ಎಂ ಕೃಷ್ಣಪ್ಪ. ಮುಖಂಡರಾದ ಎಚ್.ಸಿ ರಮೇಶ್, ಎಚ್.ಎಂ ಮುನಿರಾಜು, ಎಚ್.ಕೆ.ಸುರೇಶ್, ನಾಗರಾಜು, ಕದಿರಪ್ಪ ಹಾಜರಿದ್ದರು.
ಜಯಂತಿಗ್ರಾಮದ ಮೊದಲ ದೇವಾಲಯ ಪೂಜಾಪ್ರತಿಷ್ಠಾಪನಾ ಕಾರ್ಯಕ್ರಮ
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿಯ ಜಯಂತಿಗ್ರಾಮದಲ್ಲಿ ಏಕೈಕ ಮತ್ತು ಮೊಟ್ಟಮೊದಲ ದೇವಾಲಯವಾದ ಓಂಕಾರ ಮಹಾಗಣಪತಿ ದೇವಾಲಯದ ಪೂಜಾಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಗುರುವಾರ ನೆರವೇರಿಸಲಾಯಿತು.
ತಾಲ್ಲೂಕಿನ ದ್ಯಾವಪ್ಪನಗುಡಿ ಇತಿಹಾಸ ಪ್ರಸಿದ್ಧವಾಗಿದ್ದು, ದ್ಯಾವಪ್ಪ ತಾತನ ಸೇವೆಗಾಗಿ ತಾಲ್ಲೂಕು, ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದೆಲ್ಲಾ ಭಕ್ತರು ಆಗಮಿಸುತ್ತಾರೆ. ಈ ಪ್ರದೇಶದಲ್ಲಿ ಜನರು ಬಂದು ನೆಲೆಸುತ್ತಾ ಗ್ರಾಮ ಬೆಳೆದು ಜನರ ಬಾಯಲ್ಲಿ ದೇವರಾಜಪುರ ಎಂದು ಕೆರಸಿಕೊಂಡರೂ 1978 ರಲ್ಲಿ ಸರ್ಕಾರಿ ದಾಖಲೆಯಲ್ಲಿ ಜಯಂತಿ ಗ್ರಾಮ ಎಂದು ಹೆಸರಾಯಿತು. ಗ್ರಾಮದಲ್ಲಿನ ದೇವಾಲಯ ಇರದಿರುವುದರಿಂದ ಗ್ರಾಮಸ್ಥರು ಒಗ್ಗೂಡಿ ಓಂಕಾರ ಮಹಾಗಣಪತಿ ದೇವಾಲಯ ನಿರ್ಮಿಸಿಕೊಂಡಿದ್ದು ಪೂಜಾಪ್ರತಿಷ್ಠಾಪನೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹೋಮ, ಹವನ, ಅಭಿಷೇಕ, ದೇವರಿಗೆ ವಿಶೇಷ ಅಲಂಕಾರ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೊಡ್ಡಚನ್ನೇಗೌಡ, ನಾಗರಾಜ್, ದೇವರಾಜ್, ಅಶ್ವತ್ಥ, ನಾಗಭೂಷಣ್, ಕೇಶವಪ್ಪ, ಬೈರೇಗೌಡ, ಪ್ರಕಾಶ್, ಅರ್ಚಕರಾದ ಮಲ್ಲಿಕಾರ್ಜುನ್, ವಿಶ್ವನಾಥ್ ಹಾಜರಿದ್ದರು.
ಸಾರಿಗೆ ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮವನ್ನು
ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವವರಿಗೆ ದಂಡ ವಿಧಿಸಬೇಕೆಂಬ ಕಾನೂನನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಘವೇಂದ್ರ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಸಂಘಟನೆಯ ಸದಸ್ಯರೊಂದಿಗೆ ಸೇರಿ ಗುರುವಾರ ಪೊರಕೆಗಳನ್ನಿಡಿದು ಸ್ವಚ್ಛಗೊಳಿಸಿ ಅವರು ಮಾತನಾಡಿದರು. ನಮ್ಮ ಸಂಘಟನೆಯ ತಾಲ್ಲೂಕು ಘಟಕದ ಸದಸ್ಯರ ನೇಮಕ ಮಾಡಲು ಬಂದಾಗ ಬಸ್ ನಿಲ್ದಾಣ ಹಾಗೂ ಸುತ್ತ ಮುತ್ತ ಬೀಡಿ, ಸಿಗರೇಟ್, ಬಾಟಲ್, ಪಾನ್ ಪೊಟ್ಟಣಗಳ ತ್ಯಾಜ್ಯಗಳನ್ನು ಕಂಡು ಬೇಸರವಾಯಿತು. ಒಂದೆಡೆ ಜನರಲ್ಲಿ ನಮ್ಮ ಊರು, ನಮ್ಮ ಬಸ್ ನಿಲ್ದಾಣ ಎಂಬ ಧೋರಣೆ ಇಲ್ಲದಿರುವುದು ಕಂಡರೆ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾಣಿಸಿತು. ನಮ್ಮ ಸಂಘಟನೆಯ ಸದಸ್ಯರೇ ಈ ದಿನ ಬಸ್ ನಿಲ್ದಾಣವನ್ನು ಶುಭ್ರಗೊಳಿಸಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಪ್ರತಿಭಟನೆಗಳನ್ನು ನಡೆಸುವುದಾಗಿ ಎಚ್ಚರಿಸಿದರು.
ಜಯ ಕರ್ನಾಟಕ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ, ಕಾರ್ಯದರ್ಶಿ ಸುಬ್ರಮಣ್ಯಾಚಾರಿ, ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಛಲಪತಿ, ಶಶಿಕುಮಾರ್, ನಿಜಾಮ್, ಕೃಷ್ಣಾರೆಡ್ಡಿ, ವೆಂಕಟೇಶ, ದೀಪು, ವಿನೋದ್‌್, ನಾಸಿರ್, ನವೀನ್, ಮಹೇಶ್, ಚಂದ್ರು, ಜಗದೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ
ಪ್ರಧಾನಿ ನರೇಂದ್ರಮೋದಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಜನರಿಗೆ ಇನ್ನಷ್ಟು ಹತ್ತಿರವಾಗಬೇಕು ಎಂದು ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಬಿ.ಜೆ.ಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯತಿ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿದ್ದು ಈಗಲಿಂದಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷ ಮತ್ತು ದೇಶದ ಪ್ರಧಾನಿ ಮೋದಿಯವರು ಕೈಗೊಂಡಿರುವ ಸ್ವಚ್ಛಭಾರತ್, ಜನ್ ಧನ್ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡುವುದರೊಂದಿಗೆ ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕು ಎಂದರು.
ಬಿ.ಜೆ.ಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರನಾರಾಯಣ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ೬೫ ವರ್ಷವಾದರೂ ಹಿಂದಿನ ಎಲ್ಲಾ ಸರ್ಕಾರಗಳು ಸಾರ್ವಜನಿಕರಿಗೆ ನೇರವಾಗಿ ತಲುಪುವ ಯಾವುದೇ ಯೋಜನೆ ರೂಪಿಸಲು ವಿಫಲವಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ನಂತರವಷ್ಟೇ ಜನಾನುರಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಬಗ್ಗೆ ನಾಗರೀಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಪಕ್ಷದಿಂದ ಆಗಬೇಕಿದೆ ಎಂದು ಹೇಳಿದರು.
ಬಿ.ಜೆ.ಪಿ ತಾಲ್ಲೂಕು ಉಸ್ತುವಾರಿಯಾದ ಚಂದ್ರಶೇಖರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ತಾಲ್ಲೂಕು ಕಾರ್ಯದರ್ಶಿ ಶ್ರೀಧರ್, ಶಿವಕುಮಾರ್‌ಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೀರು ಬರುವವರೆಗೂ ಹೋರಾಟ ನಿಲ್ಲದು
‘ಹರಿಯಲಿ ಹರಿಯಲಿ ಕೆರೆಗೆ ನೀರು ಹರಿಯಲಿ’, ‘ತುಂಬಲಿ ತುಂಬಲಿ ನಮ್ಮ ಕೆರೆ ತುಂಬಲಿ’ ಎಂದು ಘೋಷಣೆಗಳನ್ನು ಕೂಗುತ್ತಾ ‘ನೀರಿಗಾಗಿ ಪರದಾಟ, ಪರಿಹಾರಕ್ಕಾಗಿ ಹೋರಾಟ’ ಎನ್ನುತ್ತಾ ಜನ–ಜಲ ಜಾಗೃತಿ ಪಾದಯಾತ್ರೆ ನಡೆಸುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಬುಧವಾರ ತಾಲ್ಲೂಕಿನ ಕುಂದಲಗುರ್ಕಿ ಪಂಚಾಯತಿಯನ್ನು ಪ್ರವೇಶಿಸಿದರು.
ತಮಟೆಗಳ ಸದ್ದಿನೊಂದಿಗೆ ಘೋಷಣೆಗಳನ್ನು ಕೂಗುತ್ತಾ 28ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಆಗಮಿಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರನ್ನು ಗ್ರಾಮಸ್ಥರು ಪಂಚಾಯತಿ ಮುಂದೆ ಸ್ವಾಗತಿಸಿದರು.
‘ನೀರಿಗೆ ಜಾತಿಯಿಲ್ಲ, ರಾಜಕೀಯ ಪಕ್ಷವಿಲ್ಲ, ಮೇಲು ಕೀಳೆಂಬ ಬೇಧವಿಲ್ಲ, ಬಡವ ಬಲ್ಲಿದನೆಂಬ ತಾರತಮ್ಯವಿಲ್ಲ, ರೈತ ಅಧಿಕಾರಿ ಎಂಬ ವ್ಯತ್ಯಾಸವಿಲ್ಲ. ಬಯಲು ಸೀಮೆಯ ಎಲ್ಲರಿಗೂ ನೀರು ಅತ್ಯವಶ್ಯ. ಶಾಶ್ವತವಾದ ನೀರಿನ ಹರಿವು ಬರದಿದ್ದಲ್ಲಿ ನಮ್ಮ ಭೂಭಾಗ ಬೆಂಗಾಡಾಗಿ ಮರುಭೂಮಿಯಾಗುತ್ತದೆ. ನಮಗಿಲ್ಲಿ ಉತ್ಪಾದನೆಗಳಾಗದೆ, ಜನ ಜಾನುವಾರುಗಳಿಗೆ ನೀರಿಲ್ಲದೆ, ಬೆಳೆ ಬೆಳೆಯಲಾಗದೆ ವಲಸೆ ಪ್ರಕ್ರಿಯೆ ಮೊದಲಾಗುತ್ತಿದೆ. ನಮ್ಮ ನೆಲವನ್ನು ತೊರೆಯುವುದೋ ಅಥವಾ ನೀರಿಗಾಗಿ ಹೋರಾಡುವುದೋ ಜನರು ಶೀಘ್ರವಾಗಿ ತೀರ್ಮಾನಿಸಬೇಕು. ಜನರಲ್ಲಿ ನಮ್ಮ ಕರಾಳ ಭವಿಷ್ಯದ ಬಗ್ಗೆ ತಿಳಿಸುತ್ತಾ ಪರಿಹಾರಕ್ಕಾಗಿ ಹೋರಾಟ ಮನೋಭೂಮಿಕೆಯನ್ನು ಸಿದ್ಧಪಡಿಸುತ್ತಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನೂರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಪಾದಯಾತ್ರೆ ನಡೆಸಿದ್ದಾರೆ. ಎಲ್ಲರೂ ಕೈಜೋಡಿಸಿ ಒಗ್ಗೂಡಿ ಸರ್ಕಾರದ ಕಣ್ಣು ತೆರೆಸೋಣ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂ.ಎಂ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ, ಪಲಿಚೆರ್ಲು, ದೊಡ್ಡತೇಕಹಳ್ಳಿ ಮತ್ತು ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಬುಧವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ನಡೆಸಿದ ಪಾದಯಾತ್ರೆಯಲ್ಲಿ ಜನರು ಬೆಂಬಲಿಸಿದ್ದಲ್ಲದೆ, ತಮ್ಮ ಪಂಚಾಯತಿ ಮತ್ತು ಹಾಲು ಉತ್ಪಾದಕರ ಸಹಕಾರ ಸೊಸೈಟಿಗಳಿಂದ ಬೆಂಬಲ ಸೂಚಿಸುವ ಪತ್ರಗಳನ್ನೂ ನೀಡಿದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಮಳ್ಳೂರು ಹರೀಶ್, ದೊಣ್ಣಹಳ್ಳಿ ರಾಮಣ್ಣ, ತಾದೂರು ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೋಟೆ ಸರ್ಕಾರಿ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಕಲಾಶ್ರೀ ಶಿಬಿರ
ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೧೪-–೧೫ನೇ ಸಾಲಿನ ಕಲಾಶ್ರೀ ಶಿಬಿರವನ್ನು ಕೋಟೆ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ತಾಲ್ಲೂಕಿನ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ೯ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಮಾತ್ರ ಆಯೋಜಿಸಿದ್ದ ಕಲಾಶ್ರೀ ಶಿಬಿರದಲ್ಲಿ, ಸೃಜನಾತ್ಮಕ ಕಲೆ ವಿಭಾಗದಲ್ಲಿ ಚಿತ್ರಕಲೆ, ಕರಕುಶಲೆ, ಜೇಡಿ ಮಣ್ಣಿನ ಕಲೆ ಸ್ಪರ್ಧೆ, ಸೃಜನಾತ್ಮಕ ಬರವಣಿಗೆ ವಿಭಾಗದಲ್ಲಿ ಕಥೆ, ಕವನ, ಪ್ರಬಂಧ ರಚನಾ ಸ್ಪರ್ಧೆ, ಸೃಜನಾತ್ಮಕ ಪ್ರದರ್ಶನ ಕಲೆ ವಿಭಾಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಯಕ್ಷಗಾನ, ಜಾನಪದ ನೃತ್ಯ, ವಾದ್ಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ ಹಾಗೂ ಯಕ್ಷಿಣಿ ಪ್ರದರ್ಶನ ಸ್ಪರ್ಧೆ ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಭಾಗದಲ್ಲಿ ಮಾದರಿ ತಯಾರಿಕೆ, ವಿವರಣೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
‘ಬೆಂಗಳೂರಿನ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಲಾಶ್ರೀ ಶಿಬಿರವನ್ನು ಆಯೋಜಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿನ ವಿಜೇತರನ್ನು ಜಿಲ್ಲಾಮಟ್ಟಕ್ಕೆ ನಂತರ ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತದೆ. ಮಕ್ಕಳ ಪ್ರತಿಭೆಗೆ ಮನ್ನಣೆ ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕರು ತಿಳಿಸಿದರು.
ಡಿ.ವೈ.ಎಫ್.ಐ ನೇತೃತ್ವದಲ್ಲಿ ಪ್ರತಿಭಟನೆ
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಬುಧವಾರ ಡಿ.ವೈ.ಎಫ್.ಐ ನೇತೃತ್ವದಲ್ಲಿ ಆಸ್ಪತ್ರೆಯ ಮುಂದೆ ಪ್ರತಿಭಟಿಸಲಾಯಿತು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಕುಸಿಯುವಂತಿದೆ. 1970ರಲ್ಲಿ ನಿರ್ಮಿಸಿರುವ ಹಳೆಯ ಕಟ್ಟಡದ ಮೇಲೆ ಹೊಸ ಕಟ್ಟಡವನ್ನು ನಿರ್ಮಿಸುತ್ತಿರುವುದು ಖಂಡನೀಯ. ಇದರ ಬಗ್ಗೆ ಶಾಸಕರೊಂದಿಗೆ ಚರ್ಚಿಸಿದ್ದರೂ ಸಹಾ ಯಾವುದೇ ಪ್ರಯೋಜನವಾಗದಿರುವುದು ದುರಂತದ ಸಂಗತಿಯಾಗಿದೆ. ಪ್ರತಿ ದಿನ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ನೂರಾರು ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುತ್ತಾರೆ. ಒಂದು ವೇಳೆ ಆಸ್ಪತ್ರೆಯ ಕಟ್ಟಡ ಕುಸಿದು ಪ್ರಾಣಾಪಾಯವಾದಲ್ಲಿ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಆರೋಪಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಮಳೆ ನೀರು ಸೋರಿ ವಾರ್ಡುಗಳಲ್ಲಿ ನೀರು ತುಂಬಿದ್ದು ಸ್ವಚ್ಛತೆಯಿಲ್ಲದಂತಾಗಿದೆ. ಕುಡಿಯುವ ನೀರಿಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಖಾಲಿ ಇರುವ 130 ಸಿಬ್ಬಂದಿಯನ್ನು ನೇಮಿಸಬೇಕು. ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡವನ್ನು ತಕ್ಷಣವೇ ಸರಿಪಡಿಸಬೇಕು. ಹಳೇ ಕಟ್ಟಡದ ಮೇಲೆ ನಿರ್ಮಿಸುತ್ತಿರುವ ಹೊಸ ಕಟ್ಟಡದ ಕೆಲಸ ತಕ್ಷಣ ನಿಲ್ಲಿಸಬೇಕು. ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಹಾಗೂ ಸ್ವಚ್ಛತೆಯನ್ನು ಒದಗಿಸಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಲುಪಿಸಲು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಅವರಿಗೆ ನೀಡಿದರು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ವಾಸು, ಮಂಜುನಾಥ್, ನರಸಿಂಹ, ಚಂದ್ರಪ್ಪ, ನಾಗರಾಜಪ್ಪ, ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದ ಶ್ರೀಕೃಷ್ಣಕಲಾ ಕುಂಜ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಮ್ರಪಾಲಿ ನೃತ್ಯರೂಪಕ ಪ್ರದರ್ಶನ
ಪಟ್ಟಣದ ಶ್ರೀಕೃಷ್ಣಕಲಾ ಕುಂಜ ನೃತ್ಯ ಸಂಸ್ಥೆಯ ಸುಮಾರು ಐವತ್ತು ಮಂದಿ ವಿದ್ಯಾರ್ಥಿಗಳು, ಬುದ್ಧನ ತತ್ವಗಳ ಕುರಿತಾದ ಆಮ್ರಪಾಲಿ – ನೃತ್ಯರೂಪಕವನ್ನು ನೃತ್ಯ ಶಿಕ್ಷಕ ಜಿ.ಪವನ್‌ಕುಮಾರ್ ಅವರ ನೃತ್ಯ ಸಂಯೋಜನೆಯಲ್ಲಿ ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಈಚೆಗೆ ಪ್ರದರ್ಶಿಸಿದರು.
ಅತ್ಯಂತ ರೂಪವತಿ ವೈಶಾಲಿ ರಾಜ್ಯದ ರಾಜನರ್ತಕಿ ಆಮ್ರಪಾಲಿ, ಬುದ್ಧನ ತತ್ವಕ್ಕೆ ಶರಣಾಗುವುದು ಹಾಗೂ ಆಕೆ ತನ್ನೆಲ್ಲ ಭೋಗಭಾಗ್ಯಗಳನ್ನು ತೊರೆದು ಆತ್ಮೋನ್ನತಿಯತ್ತ ಮುಖಮಾಡುವ ಕಥನ ಬುದ್ಧನ ಜಾತಕ ಕಥೆಗಳಿಂದ ತಿಳಿದುಬರುತ್ತದೆ. ಮಗಧ ರಾಝ್ಯದ ಸಾಮ್ರಾಟ ಅಜಾತಶತ್ರುವೆಂದೇ ಪ್ರಸಿದ್ಧನಾದ ಬಿಂಬಿಸಾರ ಆಮ್ರಪಾಲಿ ಮೋಹಕ್ಕೊಳಗಾಗಿ ನಡೆಸುವ ಯುದ್ಧ, ಬಾಹ್ಯ ಮತ್ತು ಆಂತರಿಕ ಯುದ್ಧಗಳನ್ನು ಬುದ್ಧನ ನೆರವಿನಿಂದ ಜಯಿಸುವ ಆಮ್ರಪಾಲಿ ದೇಹ, ದೇಶ, ಕಾಲವನ್ನು ಮೀರುವ ಆತ್ಮೋನ್ನತಿಯನ್ನು ಸಾಧಿಸಿ ಚರಿತ್ರೆಯಲ್ಲಿ ಅಜರಾಮರ ಸ್ತ್ರೀಯಾಗಿ ಗುರುತಿಸಲ್ಪಟ್ಟಿದ್ದಾಳೆ.
ಬುದ್ಧ ಕರುಣೆಯಿಂದ ಸಾಂತ್ವನಗೊಂಡ ಮೈಮನಗಳು ಕೋಟಿಕೋಟಿ. ನೊಂದ, ಬೆಂದ, ಬದುಕೆ ಬೇಸರವಾದ, ತಿರಸ್ಕರಿಸಲ್ಪಟ್ಟ, ದನಿಯಿಲ್ಲದ, ಬೆಲೆಯಿಲ್ಲದ, ಶೋಷಿಸಲ್ಪಟ್ಟ, ದೂಷಿಸಲ್ಪಟ್ಟ ಮನಗಳಿಗೆ, ನೆಮ್ಮದಿಯ, ಶಾಂತಿಯ, ಅಕ್ಕರೆಯ, ಸಕ್ಕರೆಯ ಸವಿ ನೀಡಿ ಧನ್ಯಮನವನ್ನಾಗಿಸಿಸದ ಜ್ಯೋತಿ ಬುದ್ಧಜ್ಯೋತಿ. 2500 ವರ್ಷಗಳ ಹಿಂದೆ ಬೆಳಗಿದ ಬುದ್ಧ ಪ್ರಭೆ ಇಂದಿಗೂ ಜಗತ್ತಿನ ದಾರಿ ದೀವಿಗೆಯಾಗಿದೆ. ಆಮ್ರಪಾಲಿ ಬುದ್ಧ ಸಂದೇಶ ಕೇಳಿ ಬದುಕನ್ನು ಭವ್ಯವಾಗಿಸಿಕೊಂಡವಳು. ಈ ಸಾರ್ವಕಾಲಿಕ ಸಂದೇಶವನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿರುವುದಾಗಿ ನೃತ್ಯ ಶಿಕ್ಷಕ ಜಿ.ಪವನ್‌ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಾಗವಹಿಸಿದ ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ನೃತ್ಯ ಶಾಲೆಯ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿ ಡಾ.ವರದಾ ಶ್ರೀನಿವಾಸ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ, ನಿವೃತ್ತ ಉಪ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್ ಪ್ರಶಸ್ತಿಪತ್ರಗಳನ್ನು ವಿತರಿಸಿದರು.
[images cols=”four”]
[image link=”#” image=”2020″]
[image link=”#” image=”2018″]
[image link=”#” image=”2019″]
[image link=”#” image=”2017″]
[/images]
ಶಾಶ್ವತ ನೀರಾವರಿ ಹೋರಾಟಕ್ಕೆ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಬೆಂಬಲ
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರಿಗೆ ಗ್ರಾಮ ಪಂಚಾಯತಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನೀರಾವರಿ ಹೋರಾಟಕ್ಕೆ ಬೆಂಬಲಿಸಿರುವ ಪತ್ರವನ್ನು ನೀಡಲಾಯಿತು.
ದೊಡ್ಡತೇಕಹಳ್ಳಿಯ ಕಬಡ್ಡಿ ತಂಡಕ್ಕೆ ಪ್ರಥಮ ಸ್ಥಾನ
ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿಯ ಕಬಡ್ಡಿ ತಂಡ ಬಾಗೇಪಲ್ಲಿ ತಾಲ್ಲೂಕಿನ ಕಾನಗಮಾಕಲಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು 5001 ರೂಗಳ ಬಹುಮಾನವನ್ನು ಪಡೆದಿದ್ದಾರೆ.

