ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ರಾ.ಕೃಷ್ಣಪ್ಪ ಅವರು ತಮ್ಮ ಕನ್ನಡ ಪ್ರೇಮವನ್ನು ಆರು ಕನ್ನಡದ ಧೀಮಂತ ಸಾಹಿತಿಗಳ ಗಡಿಯಾರವನ್ನು ಮಾಡಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಹಾಸ್ಯಲೇಖಕ ಬೀಚಿ, ನಾಟಕಕಾರ ಟಿ.ಪಿ.ಕೈಲಾಸಂ, ಶಿಕ್ಷಣತಜ್ಞ ಎಚ್.ನರಸಿಂಹಯ್ಯ, ಲೇಖಕ ಲಂಕೇಶ್ ಅವರನ್ನೊಳಗೊಂಡ ತೇಗದ ಗಡಿಯಾರವು ಕನ್ನಡದ ಸುಸಮಯವನ್ನು ತೋರಿಸುತ್ತಿದೆ.
ರೇಷ್ಮೆ ಗೂಡಿಗಿಂತ ಬದುಕು ಭಾರ!
ಸ್ವಾವಲಂಬಿ ದೇಶ ನಿರ್ಮಾಣದತ್ತ ಎಲ್ಲರೂ ಸಂತಸದಿಂದ ಮುನ್ನಡೆಯುತ್ತಿದ್ದರೆ, ಕೆಲವರು ಬಡತನದ ದಾಸ್ಯದಿಂದ ಹೊರಬರಲಾಗದೇ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ವಿಫುಲವಾಗಿದ್ದರೂ, ಅವುಗಳ ನೆರವಿಲ್ಲದೇ -ಸರ್ಕಾರದ ಆಶ್ರಯವಿಲ್ಲದೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕಷ್ಟನಷ್ಟಗಳ ನಡುವೆಯೂ ಪುಟ್ಟ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುವ ಆ ಕೆಲವರಲ್ಲಿ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಕೂಲಿ ಕಾರ್ಮಿಕರು ಕೂಡ ಸೇರಿದ್ದಾರೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯ ವಹಿವಾಟು ನಡೆಯುತ್ತದೆ, ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ೧೫೦ ರೂಪಾಯಿಯ ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ 30 ರಿಂದ 50 ಕೆ.ಜಿಯಷ್ಟು ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್‌ನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ಸಹ ವಹಿಸಬೇಕು.
ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ನೀಡುವ ಭರವಸೆಗಳ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ೧೫೦ ರೂಪಾಯಿಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.
‘ನಾವು ಸುಮಾರು 268 ಕಾರ್ಮಿಕರಿದ್ದೇವೆ. ನಿತ್ಯವೂ 20 ರಿಂದ 50 ಕೆಜಿ ತೂಕದವರೆಗೂ ಗೂಡನ್ನು ಹೊರುತ್ತೇವೆ. ಮಾರುಕಟ್ಟೆಯಲ್ಲಿ ಗೂಡು ಬರುವುದರ ಮೇಲೆ ನಮ್ಮ ಸಂಪಾದನೆ ಅವಲಂಬಿತವಾಗಿರುತ್ತದೆ. ದಿನಕ್ಕೆ 150 ರೂಪಾಯಿ ಸಂಪಾದಿಸುತ್ತೇವೆ. ಆದರೆ ಸೈಕಲ್ ಬಾಡಿಗೆ, ಬಸ್ ಪ್ರಯಾಣ, ಹೋಟೆಲ್ ಊಟ ಎಲ್ಲ ಕಳೆದು ೭೫ ರಿಂದ ೧೦೦ ರೂಪಾಯಿ ಉಳಿಯುತ್ತದೆ. ಅಲ್ಪಸಂಪಾದನೆಯಲ್ಲೇ ಸಂಸಾರ ನಡೆಸಬೇಕು, ಮಕ್ಕಳಿಗೆ ಓದಿಸಬೇಕು, ಆಹಾರದ ಕೊರತೆ ಕಾಡದಂತೆ ನೋಡಿಕೊಳ್ಳಬೇಕು’ ಎಂದು ಹಮಾಲಿ ಕಾರ್ಮಿಕರು ಹೇಳುತ್ತಾರೆ.
‘ಸಂಸಾರದ ನಿತ್ಯ ಜಂಜಾಟವನ್ನು ಹೇಗಾದರೂ ತೂಗಿಸಬಹುದು. ಆದರೆ ಅಪಘಾತ ಅಥವಾ ಅನಾರೋಗ್ಯ ಕಾಡಿದಲ್ಲಿ ಔಷಧಿ ಕೊಳ್ಳಲು ಮತ್ತು ಆಸ್ಪತ್ರೆಗೆ ದಾಖಲಾಗಲು ಹಣವಿರುವುದಿಲ್ಲ. ಸರ್ಕಾರದ ಯಾವುದೇ ಯೋಜನೆಗೆ ಒಳಪಡದ ನಮಗೆ ಯಾವುದೇ ಸೌಕರ್ಯಗಳು ಸಹ ಸಿಗುವುದಿಲ್ಲ. ಬದುಕಲು ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ತೀರಿಸುವುದರಲ್ಲೇ ನಮ್ಮ ಬದುಕು ಕೊನೆಯಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.
‘ದೇಹವನ್ನು ದಂಡಿಸಿ ಕೆಲಸ ಮಾಡುವ ಈ ಕಾರ್ಮಿಕರು ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಬದಕುಲು ಆಗುವುದಿಲ್ಲ. ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಭವಿಷ್ಯ ನಿಧಿ ಮುಂತಾದ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮನೋಭಾವವನ್ನೇ ಕಳೆದುಕೊಂಡ ಸ್ಥಿತಿಯಲ್ಲಿರುವ ಈ ಕಾರ್ಮಿಕರು ನಿರಾಸೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಬಹುತೇಕ ಕಾರ್ಮಿಕರಿಗೆ ಓದು-ಬರಹ ಗೊತ್ತಿಲ್ಲ. ಸರ್ಕಾರದಿಂದ ಸೌಲಭ್ಯಗಳಿವೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಪರಿವೆ ಅವರಿಗಿಲ್ಲ’ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದರು.
Say ‘HI’ to Sidlaghatta.com on WhatsApp: +91 9986904424
ಗ್ರಾಮದ ಶ್ರೇಯಸ್ಸಿಗೆ ನೆಟ್ಟಿನಿಲ್ಲಿಸಿರುವ ಯಂತ್ರದ ಕಲ್ಲುಗಳು
ಮಕ್ಕಳು ರಚ್ಚೆ ಹಿಡಿದಾಗ, ಹುಶಾರು ತಪ್ಪಿದಾಗ ಮಂತ್ರ ಹಾಕಿಸುವುದು, ತಾಯತ ಕಟ್ಟಿಸುವ ಪದ್ಧತಿ ಗ್ರಾಮೀಣ ಭಾಗದಲ್ಲಿ ಈಗಲೂ ಇದೆ. ಬೆಳ್ಳಿ, ಪಂಚಲೋಹ ಅಥವಾ ತಾಮ್ರದ ಹಾಳೆಯ ಮೇಲೆ ಬೀಜಾಕ್ಷರ, ಮಂತ್ರ ಇತ್ಯಾದಿಗಳನ್ನು ಬರೆದು ತಾಯತದಲ್ಲಿಟ್ಟು ಕಟ್ಟುವುದರಿಂದ ದುಷ್ಟ ಶಕ್ತಿಗಳಿಂದ, ವ್ಯಾಧಿಗಳಿಂದ ವಿಮುಕ್ತಿ ಸಿಗುವುದೆಂಬ ನಂಬುಗೆಯದು. ಇದೇ ರೀತಿ ಇಡೀ ಗ್ರಾಮಕ್ಕೇ ಪೀಡಾ ಪರಿಹಾರಕ್ಕೆಂದು ಬಹಳ ಹಿಂದೆ ಕಲ್ಲುಗಳನ್ನು ನಿರ್ಮಿಸುತ್ತಿದ್ದರು. ಇವನ್ನು ಯಂತ್ರದ ಕಲ್ಲುಗಳೆಂದು ಕರೆಯುತ್ತಾರೆ.
ಗ್ರಾಮದ ಶ್ರೇಯಸ್ಸಿಗಾಗಿ ನಿರ್ಮಿಸುತ್ತಿದ್ದ ಇಂತಹ ಪುರಾತನ ಕಲ್ಲುಗಳು ತಾಲ್ಲೂಕಿನ ಕೆಲವೆಡೆಯಿದ್ದು ನಮ್ಮಲ್ಲೂ ಈ ರೀತಿಯ ಪದ್ಧತಿ ಆಚರಣೆಯಲ್ಲಿದ್ದುದಕ್ಕೆ ನಿದರ್ಶನವಾಗಿದೆ. ಇಂತಹ ಕಲ್ಲುಗಳನ್ನು ಅದರ ಬಗ್ಗೆ ತಿಳಿಯದೇ ಪೂಜನೀಯ ವಸ್ತುವೆಂದು ಭಾವಿಸಿ ಕೆಲವೆಡೆ ಪೂಜಿಸುತ್ತಿದ್ದರೆ, ಇನ್ನು ಕೆಲವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ.
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್‍ವೇಶ್ವರ ದೇವಾಲಯದ ಬಳಿಯೊಂದು ಯಂತ್ರದಕಲ್ಲಿದ್ದು ಅದನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳು ಪೂಜಿಸುವರು. ತಾಲ್ಲೂಕಿನ ಹನುಮಂತಪುರ ಗ್ರಾಮದ ಬಸವಣ್ಣನ ದೇಗುಲದ ಬಳಿ ಮೂರು ಯಂತ್ರದ ಕಲ್ಲುಗಳಿವೆ. ಆದರೆ ಹಳೆಯ ಗ್ರಾಮ ತಗ್ಗಿನಲ್ಲಿದ್ದುದರಿಂದ ಏರಿನೆಡೆಗೆ ಗ್ರಾಮವು ಅಭಿವೃದ್ಧಿ ಕಂಡುಕೊಳ್ಳುತ್ತಾ ಈ ಕಲ್ಲುಗಳು ತಗ್ಗಿನಲ್ಲೇ ಉಳಿದಿವೆ.
ಸಾಮಾನ್ಯವಾಗಿ ಈ ಬಗೆಯ ಶಾಸನಗಳನ್ನು ಹಳ್ಳಿಗಳ ಮುಂದೆ ಗಮನಿಸಬಹುದು. ಪೀಡಾ ಪರಿಹಾರಕ್ಕಾಗಿ ಯಂತ್ರವನ್ನು ಬರೆದು ನಿಲ್ಲಿಸಿರುತ್ತಾರೆ. ಇವುಗಳನ್ನು ಹಳ್ಳಿಯ ಜನ ಇಂದಿಗೂ ಹಲವೆಡೆ ಪೂಜಿಸುತ್ತಾರೆ. ಈ ರೀತಿ ಪೂಜಿಸುವುದರಿಂದ ತಮ್ಮ ದನಕರುಗಳಿಗೆ ಅಥವಾ ತಮಗೆ ಒದಗಿರುವ ಪೀಡೆಯು ಪರಿಹಾರವಾಗುತ್ತದೆಂದು ಅವರ ನಂಬಿಕೆ.
ಕೆಲವು ಯಂತ್ರಗಳಲ್ಲಿ ಕೇವಲ ಬೀಜಾಕ್ಷರಗಳಿದ್ದರೆ ಕೆಲವು ಪೀಡಾ ಪರಿಹಾರಕ್ಕೆ ಹಾಕಿಸಿರುವ ಕಟ್ಟುಯಂತ್ರ ಅಥವಾ ದಿಗ್ಬಂಧನ ಯಂತ್ರವಾಗಿರುತ್ತವೆ.
ಹೆಚ್ಚಾಗಿ ತಾಮ್ರಪಟಗಳ ಮೇಲೆ ಈ ರೀತಿಯ ಯಂತ್ರ ಮಂತ್ರಗಳನ್ನು ಬರೆದಿರುವುದೇ ಹೆಚ್ಚು. ಈಗಲೂ ಚಿಕ್ಕದಾದ ತಾಮ್ರದ ಹಾಳೆಯಲ್ಲಿ ಬರೆದು ತಾಯತದಲ್ಲಿಟ್ಟು ಕಟ್ಟುವುದು, ಕೊಂಚ ದೊಡ್ಡದಾದರೆ ಅದಕ್ಕೆ ಚೌಕಟ್ಟನ್ನು ಹಾಕಿಸಿ ಅಂಗಡಿ ಮನೆಗಳಲ್ಲಿ ನೇತುಹಾಕುವುದು ಬಳಕೆಯಲ್ಲಿದೆ.
ಈ ಪುರಾತನ ಯಂತ್ರದ ಕಲ್ಲುಗಳಿಂದ ಯಂತ್ರ ಮಂತ್ರ ಚಿಕಿತ್ಸಾ ವಿಧಾನಗಳು ಕರ್ನಾಟಕದಲ್ಲಿ ಅದರಲ್ಲೂ ನಮ್ಮ ತಾಲ್ಲೂಕಿನಲ್ಲಿ ಪ್ರಚಲಿತವಿತ್ತು ಎಂದು ತಿಳಿದುಬರುತ್ತದೆ. ಈ ರೀತಿಯ ಚಿಕಿತ್ಸಾ ಕ್ರಮದ ಒಂದು ಅನುಸರಣೆಯೇ ಈ ಬಗೆಯ ಶಾಸನಗಳಿಗೆ ಪ್ರೇರಣೆಯನ್ನು ನೀಡಿ ಕಾಲಾಂತರದಲ್ಲಿ ಅಜ್ಞಾನದಿಂದ ಜನರಿಗೆ ಯಾವುದು ಯಂತ್ರ ಯಾವುದು ಅಲ್ಲ ಎಂಬುದು ತಿಳಿಯದಂತಾಗಿದೆ. ಈ ಯಂತ್ರ ಚಿಕಿತ್ಸಾ ಕ್ರಮದ ಬಗ್ಗೆ, ಅದರ ಯಶಸ್ಸಿನ ಬಗ್ಗೆ ವೈಜ್ಞಾನಿಕ ಯುಗದಲ್ಲಿರುವ ನಮ್ಮ ಧೋರಣೆ ಬದಲಾಗಿರಬಹುದು. ಆದರೆ ಯಂತ್ರ ಮಂತ್ರಗಳ ಮೂಲಕವೂ ನಮ್ಮ ಜನ ತಮ್ಮ ಶ್ರೇಯಸ್ಸಿಗಾಗಿ ಪ್ರಯತ್ನಿಸಿದರು ಎಂಬುದು ಈ ಶಾಸನಗಳಿಂದ ತಿಳಿದುಬರುತ್ತದೆ.
ವೀರಾಪುರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪೂಜೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ
ಶ್ರೀರಾಮನವಮಿ ನಂತರದ ದಿನಗಳಲ್ಲಿ ಆಚರಿಸುವ ವಿಶೇಷ ಪೂಜೆ ಅಂಗವಾಗಿ ಸೋಮವಾರ ವೀರಾಪುರದಲ್ಲಿ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪೂಜೆ ಹಮ್ಮಿಕೊಳ್ಳಲಾಗಿತ್ತಲ್ಲದೆ ಸಾಮೂಹಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ನೆಲೆಸಿರುವ ವರಸಿದ್ದಿ ವಿನಾಯಕಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವರಿಗೆ ವಿಶೇಷ ವೀಳ್ಯದ ಎಲೆ ಹಾಗೂ ಒಂಭತ್ತು ವಿಧದ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಪೂಜೆ ಆರಂಭಿಸಿ ಪಂಚಾಮೃತಾಭಿಷೇಕ ಸೇರಿದಂತೆ ನಾನಾ ವಿಧವಾದ ಪೂಜೆಗಳನ್ನು ನೆರವೇರಿಸಿ ಮಹಾ ಮಂಗಳಾರತಿ ನೀಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಜತೆಗೆ ಗ್ರಾಮಸ್ಥರು ದಾನಿಗಳಿಂದ ಸಂಗ್ರಹಿಸಿದ ದವಸ ದಾನ್ಯ, ತರಕಾರಿಗಳಿಂದಲೆ ತಯಾರು ಮಾಡಿದ ಮುದ್ದೆ, ಸಾಂಬಾರು, ಅನ್ನ, ರಸ ಮುಂತಾದ ಖಾದ್ಯಗಳಿಂದ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟದಲ್ಲಿ 48ನೇ ದಿನದ ಹೋಮ ಮತ್ತು ದೀಪೋತ್ಸವ
ತಾಲ್ಲೂಕಿನ ಮಳಮಾಚನಹಳ್ಳಿ, ಮುಗಿಲಡಿಪಿ ಮತ್ತು ಚಿಕ್ಕದಾಸರಹಳ್ಳಿ ಗ್ರಾಮಗಳ ಗಡಿಯಲ್ಲಿರುವ ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟದಲ್ಲಿ ಸೋಮವಾರ ದೇವಾಲಯ ನಿರ್ಮಾಣದ 48ನೇ ದಿನದ ಹೋಮ ಮತ್ತು ದೀಪೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವರ ಮೂರ್ತಿ, ಪಾದಗಳ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಿ ಭಕ್ತರೆಲ್ಲಾ ಸೇರಿ ಗುಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಿದ್ದು, 48 ದಿನಗಳಿಂದ ಪೂಜಾವಿಧಿಯನ್ನು ಆಚರಿಸುತ್ತಾ ಸೋಮವಾರ ಹೋಮವನ್ನು ನಡೆಸಿ ಮಹಿಳೆಯರು ದೀಪಗಳನ್ನು ಹೊತ್ತು ತಂದು ಪೂಜೆ ಸಲ್ಲಿಸಿದರು.
ಮಾಗಡಿಯಿಂದ ಮಳಮಾಚನಹಳ್ಳಿ ಗ್ರಾಮಕ್ಕೆ ಬ್ಯಾಟರಾಯಸ್ವಾಮಿ ಬಂದಿದ್ದರು. ಕೆಲ ಕಾಲ ಅಲ್ಲಿ ನೆಲೆಸಿದ್ದವರು, ಅಲ್ಲಿಂದ ತನ್ನ ಪಾದವನ್ನು ಈ ಗುಟ್ಟದ ಮೇಲೆ ಇಟ್ಟರಂತೆ. ಇಲ್ಲಿಂದ ಇನ್ನೊಂದು ಪಾದವನ್ನು ಚಿಕ್ಕದಾಸರಹಳ್ಳಿ ಬಳಿಯ ಗುಟ್ಟದ ಮೇಲಿಟ್ಟು ಅಲ್ಲಿಯೇ ನೆಲೆಸಿದರೆಂಬುದು ಅತ್ಯಂತ ಹಿಂದಿನ ಕಥೆ. ಹೀಗೆ ಪಾದವನ್ನಿಟ್ಟ ಗುರುತಿರುವ ಈ ಗುಟ್ಟವು ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟವೆಂದೇ ಹೆಸರಾಗಿದೆ. ಇಲ್ಲಿ ಪ್ರತಿ ವರ್ಷವೂ ಪೂಜೆಯನ್ನು ನಡೆಸಲಾಗುತ್ತಿತ್ತು. ಈಚೆಗೆ ಭಕ್ತರೆಲ್ಲಾ ಸೇರಿ ದೇವರನ್ನು ಪ್ರತಿಷ್ಠಾಪಿಸಿ ಪುಟ್ಟ ಗುಡಿಯನ್ನು ಕಟ್ಟಿದ್ದಾರೆ. ಈ ಗುಟ್ಟದಿಂದ ನೋಡಿದಾಗ ಈಗ ಬ್ಯಾಟರಾಯಸ್ವಾಮಿ ನೆಲೆಸಿರುವರೆಂದು ನಂಬಿರುವ ತಾಲ್ಲೂಕಿನ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯವು ಕಣ್ಣಿಗೆ ಗೋಚರಿಸುತ್ತದೆ.
ಮಳಮಾಚನಹಳ್ಳಿ, ಮುಗಿಲಡಿಪಿ ಮತ್ತು ಚಿಕ್ಕದಾಸರಹಳ್ಳಿ ಗ್ರಾಮಗಳ ಮಹಿಳೆಯರು ದೀಪೋತ್ಸವ ನಡೆಸಿದರೆ, ಉಳಿದ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸುಬ್ಬಾಚಾರಿ, ಜಿ.ಕೆ.ವೆಂಕಟೇಶ್, ಮುನಿರಾಜು, ದೇವರಾಜ್, ನಾಗರಾಜ್, ಮೋಹನ್, ಅರ್ಚಕ ರಂಗಪ್ಪ, ರಾಜಣ್ಣ, ರಮೇಶ್, ಗೋಪಾಲ್,ರತ್ನಮ್ಮ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.
ಶಿಡ್ಲಘಟ್ಟದ ರಸ್ತೆಗಳ ಅಭಿವೃದ್ಧಿಗಾಗಿ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕ ಎಚ್.ಎಲ್.ಶಶಿಧರರವರ ನೀಲನಕ್ಷೆ
ರಾಜಧಾನಿಯಂಥಹ ದೊಡ್ಡ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ರಸ್ತೆಯ ನಿರ್ಮಾಣ, ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿಯೇ ಪ್ರತ್ಯೇಕ ಇಲಾಖೆಗಳಿರುತ್ತವೆ. ಅದರಿಂದಾಗಿಯೇ ವಾಹನ ದಟ್ಟಣೆ, ಪಾದಚಾರಿಗಳು, ಮರಗಿಡಗಳು ಮತ್ತು ಅಂಗಡಿ ಮುಂಗಟ್ಟುಗಳು ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ರಸ್ತೆಗಳ ನಿರ್ಮಾಣವಾಗುತ್ತವೆ. ಇಂಥಹ ಅನುಕೂಲ ಸಣ್ಣ ಊರುಗಳಿಗೆ ಲಭ್ಯವಿರುವುದಿಲ್ಲ. ಆದರೆ ಶಿಡ್ಲಘಟ್ಟ ಪಟ್ಟಣಕ್ಕೂ ವಿದೇಶಿ ಮಾದರಿಯ ಉನ್ನತ ದರ್ಜೆಯ ರಸ್ತೆ ಹಾಗೂ ಪರಿಸರವನ್ನು ನಿರ್ಮಾಣಮಾಡಬೇಕೆಂಬ ಕನಸನ್ನು ಕೆಲವರು ಕಂಡಿದ್ದರು.
ಪಟ್ಟಣದಲ್ಲಿ ಉತ್ತಮ ರಸ್ತೆ ನಿರ್ಮಾಣದ ಕನಸು ಕಂಡಿದ್ದ ವ್ಯಕ್ತಿಯೊಬ್ಬರ ಕನಸು ಹಾಗೇ ಉಳಿದಿದೆ. ಅವರ ಕನಸಿಗೆ ಮೂರು ವರ್ಷಗಳು ಸಂದಿವೆ. ಶಿಡ್ಲಘಟ್ಟ ಪುರಸಭೆ ಮೇಲ್ದರ್ಜೆಗೆ ಏರಿ ನಗರಸಭೆಯಾಗಲಿದೆ. ಈ ಕಾರಣಕ್ಕೆ ಹೊಸದಾಗಿ ಆಯ್ಕೆಯಾದ ಸದಸ್ಯರು ಹುರುಪಿನಲ್ಲಿದ್ದಾರೆ. ಪಟ್ಟಣವನ್ನು ಅಭಿವೃದ್ಧಿಗೊಳಿಸುವುದಾಗಿ ಶಾಸಕ ಎಂ.ರಾಜಣ್ಣ ಕೂಡ ಭರವಸೆ ನೀಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಹಳೆ ಕನಸಿಗೆ ಮತ್ತೆ ಮರುಜೀವ ದೊರೆತೀತೆ ಎಂಬ ಆಶಾಭಾವ ಮೂಡಿದೆ.
ಶಿಡ್ಲಘಟ್ಟದಲ್ಲಿ ಓದಿ, ಬೆಳೆದು ಈಗ ಬೆಂಗಳೂರಿನ ವಾಹನ ಸಂಚಾರಿ ಯೋಜನಾ ಸಂಚಾಲಕರಾಗಿರುವ ಎಚ್.ಎಲ್.ಶಶಿಧರ್ ಪಟ್ಟಣದ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸಿಕೊಟ್ಟಿದ್ದರು. ಶಿಸ್ತು ಬದ್ಧ ಸಂಚಾರ, ವಾಹನ ನಿಲುಗಡೆ ವ್ಯವಸ್ಥೆ, ಪಾದಚಾರಿಗಳ ಸುರಕ್ಷತೆ ಹಾಗೂ ರಸ್ತೆ ಬದಿಯಲ್ಲಿ ಮರಗಿಡ ಬೆಳೆಸುವುದು ಈ ನೀಲನಕ್ಷೆಯ ಪ್ರಮುಖ ಉದ್ದೇಶಗಳಾಗಿತ್ತು.
ರಸ್ತೆಯ ಅಗಲ 12.2 ಮೀಟರ್(40 ಅಡಿಗಳು) ಇರಬೇಕು. ಇದರಲ್ಲಿ ಎರಡೂ ಬದಿಯಲ್ಲಿ 2 ಮೀಟರ್ ಅಗಲ ವಾಹನ ನಿಲುಗಡೆಗೆ, 1.2 ಮೀಟರ್ ಪಾದಚಾರಿ ರಸ್ತೆಗೆ ಬಿಟ್ಟು ಉಳಿದ 5.8 ಮೀಟರ್ ಸ್ಥಳವನ್ನು ವಾಹನ ಸಂಚಾರಕ್ಕೆ ಬಳಸಬಹುದಾಗಿದೆ. ಅಲ್ಲಲ್ಲಿ ಪಾದಚಾರಿಗಳಿಗಾಗಿ ರಸ್ತೆಯನ್ನು ದಾಟಲು ಉಬ್ಬುಗಳು, ಮರ ಗಿಡ ಬೆಳೆಸಲೆಂದೇ ಸ್ಥಳಗಳು, ರಸ್ತೆ ತಿರುವುಗಳು ಎಲವನ್ನೂ ವೈಜ್ಞಾನಿಕವಾಗಿ ಮತ್ತು ಕಾರ್ಯರೂಪಕ್ಕೆ ತರಬಲ್ಲಂತೆ ರೂಪುರೇಷೆಯನ್ನು ತಯಾರಿಸಿದ್ದಾರೆ.

‘ನೂರು ವರ್ಷಗಳ ಹಿಂದೆ ಅಂದರೆ 1891ರಲ್ಲಿ ಶಿಡ್ಲಘಟ್ಟದ ಜನಸಂಖ್ಯೆಯಿದ್ದದ್ದು ಕೇವಲ 6,572. ಆದರೆ 2001 ರಲ್ಲಿ 41,105 ಕ್ಕೆ ಏರಿತ್ತು. ಈಗ ಹತ್ತು ವರ್ಷಗಳ ತರುವಾಯ ಇನ್ನಷ್ಟು ಏರಿದೆ. ಭವಿಷ್ಯದ ದೃಷ್ಟಿಯಿಂದ ಮಾದರಿ ನಗರವಾಗುವಂತೆ ಪಟ್ಟಣವನ್ನು ರೂಪಿಸುವ ಅಗತ್ಯವಿದೆ. ನಾನು ಓದಿ ಬೆಳೆದ ಊರಿಗೆ ಏನಾದರೂ ಸೇವೆ ಸಲ್ಲಿಸುವ ಉದೇಶದಿಂದ ಈ ನೀಲನಕ್ಷೆಯನ್ನು ತಯಾರಿಸಿದೆ. ಬೆಂಗಳೂರು ನಗರದಲ್ಲಿರುವ ವಿಟ್ಟಲ್ ಮಲ್ಯ ರಸ್ತೆಯಂತೆ ನಮ್ಮೂರಿನ ಎರಡು ಪ್ರಮುಖ ರಸ್ತೆಗಳಾದ ಅಶೋಕ ಮತ್ತು ಟಿ.ಬಿ.ರಸ್ತೆಗಳು ಮಾದರಿ ರಸ್ತೆಗಳಾಗಬೇಕೆಂಬುದು ನನ್ನಾಸೆ. ಶಿಸ್ತು ಬದ್ಧ ಸಂಚಾರದಿಂದ ಅಪಘಾತಗಳು ಇಲ್ಲವಾಗುತ್ತವೆ. ಗಿಡಮರಗಳಿರುವುದರಿಂದಾಗಿ ಕಣ್ಮನ ತಣಿಯುವುದರೊಂದಿಗೆ ಆರೋಗ್ಯವೂ ವೃದ್ಧಿಸುತ್ತದೆ. ಸಂಜೆ ವೇಳೆ ಮರಗಳ ಅಡಿಯಿರುವ ಕಟ್ಟೆಗಳ ಮೇಲೆ ಜನರು ಬಂದು ಕೂರುವುದರಿಂದ ವಾಣಿಜ್ಯ ವ್ಯವಹಾರಗಳೂ ಅಭಿವೃದ್ಧಿಯಾಗುತ್ತವೆ’ ಎಂದು ಎಚ್.ಎಲ್.ಶಶಿಧರ್ ವಿವರಿಸಿದರು.
‘ಮೊದಲು ಹೂ ವೃತ್ತದಿಂದ ವೇಣುಗೋಪಾಲಸ್ವಾಮಿ ರಸ್ತೆಯವರೆಗೆ ಸುಮಾರು ೨೨೦ ಅಡಿಗಳಷ್ಟು ದೂರದ ರಸ್ತೆಯನ್ನು ಈ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಜನರಿಗೆ ಒಂದು ಮಾದರಿ ಸಿದ್ಧವಾದಾಗ ಅವರಲ್ಲೂ ವಿಶ್ವಾಸ ಮೂಡುತ್ತದೆ. ಮುಂದೆ ರಿಂಗ್ ರೋಡ್ ನಿರ್ಮಾಣ, ದೊಡ್ಡದಾದ ಸರಕು ಸಾಗಾಣಿಕೆ ವಾಹನಗಳ ಪಥ ಬದಲಾವಣೆ, ಮೂಲಭೂತ ಸೌಕರ್ಯಗಳಾದ ನೀರಿನ ನಿರ್ವಹಣೆ, ಮಳೆಕೊಯ್ಲು ಮುಂತಾದವುಗಳನ್ನು ಅಭಿವೃದ್ಧಿ ಪಡಿಸಿ ನಮ್ಮ ಊರನ್ನು ಮಾದರಿ ಪಟ್ಟಣವನ್ನಾಗಿಸುವ ಉದ್ದೇಶವಿದೆ. ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕರಿಸಬೇಕು. ಮೂರು ವರ್ಷಗಳ ಹಿಂದೆ ಆಗಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಸಹಕಾರ ನೀಡಿದ್ದರು. ಪುರಸಭೆಯ ಅಧಿಕಾರಿಗಳಿಗೆ ಈ ನೀಲನಕ್ಷೆಯನ್ನು ನೀಡಿದ್ದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ನಮ್ಮ ಕ್ಷೇತ್ರದ ಕೇಂದ್ರ ಸಚಿವರನ್ನೂ ಸಂಪರ್ಕಿಸಿ ವಿವರಿಸಿದ್ದೆ. ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇದೇ ರಸ್ತೆಗಳ ಅಭಿವೃದ್ಧಿಯ ನೀಲನಕ್ಷೆಯನ್ನು ಕೇಂದ್ರ ಸಚಿವ ಕಮಲ್‌ನಾಥ್ ಅವರಿಗೂ ತೋರಿಸಿದೆ. ತಕ್ಷಣವೇ ಅವರು ಮಧ್ಯಪ್ರದೇಶದ ಚಿಂದವಾಡದಲ್ಲಿ ರೂಪಿಸಲು ನನ್ನನ್ನು ಕಳುಹಿಸಿದರು. ನಮ್ಮ ಊರಿನಲ್ಲಿ ಆಗಬೇಕಾದ ಅಭಿವೃದ್ಧಿ ಮಧ್ಯಪ್ರದೇಶದಲ್ಲಾಯಿತು. ನಮ್ಮ ಊರಿನ ಅಭಿವೃದ್ಧಿಗಾಗಿ ಈಗಲೂ ಆಶಾವಾದಿಯಾಗಿದ್ದೇನೆ’ ಎಂದು ಅವರು ಹೇಳಿದರು.
ಪರಿಸರ ಸಂರಕ್ಷಕ ಕೊತ್ತನೂರಿನ ಸ್ನೇಕ್ ನಾಗರಾಜ್
ಪರಿಸರ ಸಂರಕ್ಷಣೆಗಾಗಿ ಕೆಲವರು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರೆ, ಕೆಲವರು ಗಿಡಮರಗಳನ್ನು ನೆಟ್ಟು ಪರಿಸರಕ್ಕೆ ತಮ್ಮ ಕಾಣಿಕೆ ಸಲ್ಲಿಸುತ್ತಿರುತ್ತಾರೆ. ಸಾಂಘಿಕ ಪ್ರಯತ್ನ ಕೆಲವರದ್ದಾದರೆ, ಏಕಾಂಗಿ ಹೋರಾಟ ಕೆಲವರದ್ದು. ಆದರೆ ಗ್ರಾಮೀಣ ಭಾಗದಲ್ಲಿದ್ದುಕೊಂಡು ತಮ್ಮ ಚಟುವಟಿಕೆಯಿಂದ ತಮಗೇ ಅರಿವಿಲ್ಲದೆ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಿರುವವರೂ ಕೆಲವರಿದ್ದಾರೆ. ಅವರ ಸಾಲಿನಲ್ಲಿ ಸೇರುವವರು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಸ್ನೇಕ್ ನಾಗರಾಜ್.
ಯಾವುದೇ ರೀತಿಯ ಹಾವಾದರೂ ಸಲೀಸಾಗಿ ಹಿಡಿದು ರಕ್ಷಿಸಿ ಸುರಕ್ಷಿತ ಸ್ಥಾನಕ್ಕೆ ಬಿಡುವ ಇವರು ಹಾವನ್ನಷ್ಟೇ ಅಲ್ಲದೆ ಹಲವಾರು ಹಕ್ಕಿಗಳು ಹಾಗೂ ವಿವಿಧ ಜೀವಜಂತುಗಳನ್ನೂ ರಕ್ಷಿಸಿದ್ದಾರೆ. ದ್ರಾಕ್ಷಿ ತೋಟಗಳಲ್ಲಿ ಹಕ್ಕಿಗಳಿಂದ ಬೆಳೆಯನ್ನು ರಕ್ಷಿಸಲು ತೆಳ್ಳನೆಯ ಬೇಲಿಯನ್ನು ಕಟ್ಟಿರುತ್ತಾರೆ. ಆ ಬೇಲಿಗೆ ಸಿಕ್ಕಿ ನರಳುವ ಬಾವಲಿ, ಮಿಂಚುಳ್ಳಿ, ಗೂಬೆ, ಅಳಿಲು, ಕಾಗೆ, ಭರಧ್ವಾಜ, ಗಿಳಿ, ಕೋಗಿಲೆ, ಕೆಂಬೂತ ಮುಂತಾದ ಹಲವಾರು ಹಕ್ಕಿಗಳನ್ನು ರಕ್ಷಿಸಿದ್ದಾರೆ.
‘ಹಾಲಿನ ಡೈರಿಯಲ್ಲಿ ಕೆಲಸ ಮಾಡುವುದರಿಂದ ಬೆಳಿಗ್ಗೆ ಬೇಗ ಎದ್ದು ಹೊರಡುತ್ತೇನೆ. ದ್ರಾಕ್ಷಿ ತೋಟಗಳ ಬೇಲಿಗುಂಟ ನಡೆದು ಹೋಗುವಾಗ ಯಾವುದಾದರೂ ಹಕ್ಕಿ ಅಥವಾ ಬಾವಲಿ ತೋಟದ ಬಲೆಗೆ ಸಿಕ್ಕಿದ್ದು ಕಂಡು ಬಂದಲ್ಲಿ ಬಿಡಿಸಿ ನೀರು ಕುಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಡುತ್ತೇನೆ. ನನ್ನ ಚಟುವಟಿಕೆಗಳನ್ನು ಕಂಡಿರುವ ನಮ್ಮ ಗ್ರಾಮದವರು ಏನಾದರೂ ಜಂತುಗಳನ್ನು ಕಂಡರೆ ನನಗೆ ತಿಳಿಸುತ್ತಾರೆ. ಕೆಲವು ಬಾರಿ ಅವುಗಳ ಜೀವ ಉಳಿಸಲು ಅಸಾಧ್ಯವಾದಾಗ ತುಂಬ ಬೇಸರವಾಗುತ್ತದೆ.
ನಮ್ಮಲ್ಲಿ ಹಾವನ್ನು ವಿಷಜಂತು ಎಂದು ಪರಿಗಣಿಸಿರುದರಿಂದ ಎಲ್ಲಾದರೂ ಹಾವು ಕಂಡಲ್ಲಿ ದೂರವಾಣಿ ಮೂಲಕ ತಿಳಿಸುತ್ತಾರೆ. ನಾನು ಹಿಡಿದು ರಕ್ಷಿಸುತ್ತೇನೆ. ಸುರಕ್ಷಿತ ಸ್ಥಳಕ್ಕೆ ಬಿಟ್ಟುಬರುತ್ತೇನೆ. ಹಾಗೆಯೇ ಯಾವುದೇ ಹಕ್ಕಿ, ಚೇಳು ಮುಂತಾದ ಯಾವುದೇ ಜೀವಿಗೆ ತೊಂದರೆಯಾಗಿರುವುದು ಕಂಡರೂ ರಕ್ಷಿಸಲು ಪ್ರಯತ್ನಿಸುತ್ತೇನೆ. ಅವೂ ನಮ್ಮಂತೆಯೇ. ಆದರೆ ಮಾತು ಬರದಷ್ಟೇ. ಎಲ್ಲಾ ಪ್ರಾಣಿಗಳಿಗೂ ಬದುಕಲು ನಮ್ಮಷ್ಟೇ ಹಕ್ಕಿದೆ. ಸುತ್ತ ಮುತ್ತ ಯಾವುದೇ ಜೀವಿಗೆ ತೊಂದರೆಯಾದರೂ ಸಾಧ್ಯವಾದಷ್ಟೂ ಸಹಾಯ ಮಾಡುವುದು ನನ್ನ ಹವ್ಯಾಸವಾಗಿಬಿಟ್ಟಿದೆ’ ಎನ್ನುತ್ತಾರೆ ಕೊತ್ತನೂರಿನ ಸ್ನೇಕ್ ನಾಗರಾಜ್.
ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಸ್ನೇಕ್ ನಾಗರಾಜ್ ರ ಅನಿಯಮಿತ ಕೊಡುಗೆ ಪ್ರಶಂಸನೀಯ ಹಾಗೂ ಜೀವ ಜಂತುಗಳ ಪ್ರತಿ ಅವರ ಕಾಳಜಿ ನಮ್ಮೆಲ್ಲರಿಗೂ ಮಾದರಿಯೇ ಸರಿ.
ನಾಗರಾಜ್ ರನ್ನು ಸಂಪರ್ಕಿಸಲು ಕರೆಮಾಡಿ +91 9342515443
ತಾಲ್ಲೂಕಿನ ಔಷಧಿ ವ್ಯಾಪಾರಿಗಳ ಸಭೆ
ಶಿಡ್ಲಘಟ್ಟದಲ್ಲಿ ಶನಿವಾರ ಔಷಧಿ ವ್ಯಾಪಾರಿಗಳು ಸಭೆ ಸೇರಿ ಸಂಘದ ಚಟುವಟಿಕೆಗಳು ಮತ್ತು ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.
ಇದ್ಲೂಡು ರಸ್ತೆಯಲ್ಲಿನ ಮಾರುತಿ ನಗರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಪಟ್ಟಣದ ಹೊರವಲಯದ ಇದ್ಲೂಡು ರಸ್ತೆಯಲ್ಲಿನ ಮಾರುತಿ ನಗರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 19 ನೇ ವರ್ಷದ ಉಟ್ಲು ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ದೇವರಿಗೆ ಪೂಜೆ, ಪಂಚಾಮೃತಾಭಿಷೇಕ, ಮಹಾಮಂಗಳಾರತಿಯ ನಂತರ ಹಾಲು ಉಟ್ಲು ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಮನರಂಜನಾ ಉಟ್ಲು ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲ ಗ್ರಾಮಗಳು ಹಾಗೂ ಪಟ್ಟಣದಿಂದ ನೂರಾರು ಮಂದಿ ಭಕ್ತರು ಪೂಜೆಯಲ್ಲಿ ಮತ್ತು ಉಟ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಗಮಿಸಿದ್ದ ಭಕ್ತರಿಗೆಲ್ಲಾ ಮಾರುತಿ ನಗರದ ಯುವಕ ಬಳಗದ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ಇದ್ಲೂಡು ಗ್ರಾಮಸ್ಥರು ಮತ್ತು ಮಲ್ಲೆಪ್ಪನವರ ಮಠದಿಂದ ಪಾನಕವನ್ನು ವಿನಿಯೋಗಿಸಲಾಯಿತು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ದೀಪೋತ್ಸವ
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಶನಿವಾರ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ದೀಪೋತ್ಸವ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸತ್ತಮುತ್ತಲಿನ ಗ್ರಾಮಗಳಿಂದ ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಬೆಳಗಿದರು. ದೇವರಿಗೆ ಬೆಳಿಗ್ಗೆಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ಈ ಪುರಾತನ ದೇವಾಲಯಕ್ಕೆ ಆಗಮಿಸಲು ಇತ್ತೀಚೆಗಷ್ಟೆ ನರೇಗಾ ಯೋಜನೆಯಲ್ಲಿ ರಸ್ತೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಯನ್ನು ಮಾಡಲಾಗುವುದು. ಮಳೆ ಬೆಳೆ ಚೆನ್ನಾಗಿ ಆಗಲೆಂದು ಮಹಿಳೆಯರು ದೀಪೋತ್ಸವ ನಡೆಸಿದ್ದಾರೆ. ಪ್ರಕೃತಿಯ ನೆರವಿದ್ದಾಗ ಮಾತ್ರ ರೈತರು ಉತ್ತಮ ಬೆಳೆಯಲು ಸಾಧ್ಯ‘ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಲೀಲಾ ರಾಜಣ್ಣ, ಬಂಕ್ ಮುನಿಯಪ್ಪ, ಕೆ.ಎಂ.ವೆಂಕಟೇಶ್, ಜಿ.ಟಿ.ನಾರಾಯಣಸ್ವಾಮಿ, ಮುನಿಯಪ್ಪ, ನಂಜಪ್ಪ, ನಾರಾಯಣಪ್ಪ, ಆರ್.ವಿ.ನಾಗರಾಜ್, ಕೆ.ಎಸ್.ವೀರಣ್ಣ, ವೆಂಕಟೇಶ್, ಅರುಣ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

