ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಅವರ 85ನೇ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ರೈತ ಯುವಕ ಸಂಘ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಮೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ರಕ್ತದಾನ ಶಿಬಿರವನ್ನು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಉದ್ಘಾಟಿಸಿದರು.
‘ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲೇ ಹೆಚ್ಚು ರಕ್ತದಾನ ಮಾಡಿದ ದಾಖಲೆ ಮತ್ತು ಕೀರ್ತಿ ಶಿಡ್ಲಘಟ್ಟ ತಾಲ್ಲೂಕಿಗೆ ಲಭಿಸಿದೆ. ರಕ್ತದಾನದ ಬಗ್ಗೆ ಅರಿವು ಗ್ರಾಮಾಂತರ ಪ್ರದೇಶಗಳಲ್ಲೂ ಹರಡಿ ವ್ಯಾಪಕವಾಗಬೇಕು. ಜಿಲ್ಲಾ ಕೇಂದ್ರದಲ್ಲಿ ರಕ್ತನಿಧಿ ಬ್ಯಾಂಕ್ ಸ್ಥಾಪಿಸಿರುವುದರಿಂದ ಸಂಗ್ರಹಿಸಿದ ರಕ್ತ ಅವಶ್ಯಕತೆಯಿರುವವರಿಗೆ ಲಭ್ಯವಾಗುತ್ತದೆ. ಡಾ.ರಾಜ್‌ಕುಮಾರ್ ಮಾದರಿ ವ್ಯಕ್ತಿತ್ವವುಳ್ಳವರು. ಅವರು ಎಲ್ಲರಿಗೂ ಪ್ರೇರಕರಾಗಿದ್ದವರು. ಅವರ ಸವಿನೆನಪಿನಲ್ಲಿ ರಕ್ತದಾನ ಶಿಬಿರವನ್ನು ಕಳೆದ ಹದಿನೈದು ವರ್ಷಗಳಿಂದ ಆಯೋಜಿಸುತ್ತಿರುವುದು ಗ್ರಾಮಸ್ಥರ ಸಾಮಾಜಿಕ ಕಾಳಜಿಯನ್ನು ಪ್ರತಿನಿಧಿಸುತ್ತದೆ’ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು. ಒಟ್ಟು 70 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ನಾರಾಯಣಾಚಾರ್, ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಡಾ.ಉಷಾರಾಣಿ, ಪಶುವೈದ್ಯಾಧಿಕಾರಿ ಡಾ.ಜಯಶೀಲರೆಡ್ಡಿ, ಶ್ರೀನಿವಾಸಮೂರ್ತಿ, ರಾಮಾಂಜಿನಪ್ಪ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಧರ್ಮೇಂದ್ರ, ಸುಧೀರ್, ಸುದರ್ಶನ್, ಆನಂದ್, ಶ್ರೀನಿವಾಸ್, ಗೋಪಾಲ್, ಲಕ್ಷ್ಮಣ್, ಗ್ರಾಮಪಂಚಾಯಿತಿ ಸದಸ್ಯರಾದ ಕೆ.ಮಂಜುನಾಥ್, ರೂಪೇಶ್, ಮುನಿಕೃಷ್ಣಪ್ಪ, ರೇಣುಕಾ ಆನಂದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೇಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಅವರ 85ನೇ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ
ಮೇಲೂರು ಗ್ರಾಮದಲ್ಲಿ 26 ನೇ ವರ್ಷದ ಧರ್ಮರಾಯಸ್ವಾಮಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವ
ತಾಲ್ಲೂಕಿನ ಮೇಲೂರು ಗ್ರಾಮದ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗವನ್ನು ಬುಧವಾರ ರಾತ್ರಿ ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮದಲ್ಲಿ ನಡೆಯುತ್ತಿರುವ 26 ನೇ ವರ್ಷದ ಹೂವಿನ ಕರಗ ಮಹೋತ್ಸವದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದರು. ಮನೆಗಳ ಮುಂದೆ ರಂಗವಲ್ಲಿಯನ್ನು ಹಾಕಿ ಕರಗಕ್ಕೆ ಆರತಿ ಬೆಳಗಿ ಮಲ್ಲಿಗೆ ಹೂವನ್ನು ಅರ್ಪಿಸಿದರು. ವಹ್ನೀಕುಲ ಕ್ಷತ್ರಿಯರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕರಗ ಮಹೋತ್ಸವಕ್ಕೆಂದು ಧರ್ಮರಾಯಸ್ವಾಮಿ ದ್ರೌಪದಮ್ಮನವರ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿದ್ದರು. ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕರಗವನ್ನು ಧರ್ಮೇಂದ್ರ ಅವರು ಹೊತ್ತಿದ್ದು, ಗ್ರಾಮದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆಯಲ್ಲಿ ತೆರಳಿ ಪ್ರತಿ ಮನೆಯ ಬಳಿಯೂ ಪೂಜೆಯನ್ನು ಸ್ವೀಕರಿಸಿದರು. ಕರಗದೊಂದಿಗೆ ತಮಟೆ, ನಾದಸ್ವರ ಸೇರಿದ ವಾದ್ಯಗೋಷ್ಠಿ, ವೀರಕುಮಾರರು ಮೆರವಣಿಗೆಯಲ್ಲಿ ಸಾಗಿದರು.
Now sidlaghatta.com is on WhatsApp, text ‘HI’ to +91 9986904424
ಎಂ.ಶಶಿಧರ ಗೆ ‘ಇಂಡಿಯನ್ ಲೀಡರ್‌ಷಿಪ್ ಅವಾರ್ಡ್ ಫಾರ್ ಎಜುಕೇಷನ್ ಎಕ್ಸಲೆನ್ಸ್’ ಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ, ನವದೆಹಲಿಯ ಗ್ಲೋಬಲ್ ಅಚೀವರ್ಸ್ ಫೌಂಡೇಷನ್ ನೀಡುವ ‘ಇಂಡಿಯನ್ ಲೀಡರ್‌ಷಿಪ್ ಅವಾರ್ಡ್ ಫಾರ್ ಎಜುಕೇಷನ್ ಎಕ್ಸಲೆನ್ಸ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಜೂನ್ 12 ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
Now sidlaghatta.com is on WhatsApp, text ‘HI’ to +91 9986904424
ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕ
ಪಟ್ಟಣದ ಗಾರ್ಡನ್ ರಸ್ತೆಯಲ್ಲಿರುವ ಸುಮಾರು ಏಳುನೂರು ವರ್ಷಗಳ ಇತಿಹಾಸವಿರುವ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕವನ್ನು ಬುಧವಾರ ರಾತ್ರಿ ಆಯೋಜಿಸಲಾಗಿತ್ತು.
ಗಂಧದ ಅಭಿಷೇಕದ ನಿಮಿತ್ತ ಉಚಿತವಾಗಿ ಬಡಮಕ್ಕಳಿಗೆ ಸಾಮೂಹಿಕ ಸುನ್ನತಿ, ವೈದ್ಯಕೀಯ ಚಿಕಿತ್ಸೆ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು.
ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ನೆರವು ಕಾರ್ಯಕ್ರಮದಲ್ಲಿ ನಾನ್ನೂರು ಮಂದಿ ಚಿಕಿತ್ಸೆ ಪಡೆದುಕೊಂಡರು. ಬೆಂಗಳೂರು ಬಿಜಾಪುರ ಮತ್ತು ಮೈಸೂರಿನಿಂದ ಆಗಮಿಸಿದ್ದ ವೈದ್ಯರು ಚಿಕಿತ್ಸೆ ನೀಡಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಸುಮಾರು 20 ಮಂದಿ ಬಡ ಮಕ್ಕಳಿಗೆ ಸುನ್ನತಿಯನ್ನು ಉಚಿತವಾಗಿ ವೈದ್ಯರಿಂದ ಮಾಡಿಸಲಾಯಿತು. ನಂತರ ಸುನ್ನತಿ ಮಾಡಿಸಿಕೊಂಡ ಮಗುವಿಗೆ ಅಕ್ಕಿ, ತುಪ್ಪ, ಬಟ್ಟೆ, ಗೋದಿ, ಬೆಲ್ಲ, ಕೊಬ್ಬರಿಗಳನ್ನು ದರ್ಗಾ ಸಮಿತಿಯ ವತಿಯಿಂದ ನೀಡಲಾಯಿತು.
ರಾತ್ರಿ ನಡೆದ ಗಂಧದ ಅಭಿಷೇಕ್ಕೆ ದರ್ಗಾವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗಂಧವನ್ನು ಅಭಿಷೇಕ ಮಾಡಿ ಮಲ್ಲಿಗೆ ಹೂಗಳಿಂದ ಅಲಂಕರಿಸಿದ ಚಾದರ್ ಹೊದಿಸಿದ ನಂತರ ಧರ್ಮಗುರುಗಳು ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ಅವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂರ್ಭದಲ್ಲಿ ಖವ್ವಾಲಿಯನ್ನು ಹಾಗೂ ಪ್ರಾರ್ಥನಾ ಗೀತೆಗಳು ವಾದ್ಯದೊಂದಿಗೆ ಹಾಡುಗಾರರು ಹಾಡಿ ಮಲ್ಲಿಗೆ ಕಂಪಿನೊಂದಿಗೆ ತಮ್ಮ ಕಂಠದ ಇಂಪನ್ನೂ ಸೇರಿಸಿದರು.
ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾ ಸಮಿತಿ ಮುಖಂಡರಾದ ಹಫೀಜುಲ್ಲಾ, ಷಫೀಯುಲ್ಲಾ, ಆಜಂಖಾನ್, ಸರ್ದಾರ್‌ಖಾನ್, ಗುರುಗಳಾದ ನೂರ್ ಮೌಲಾ ಹಾಜರಿದ್ದರು.
ಬ್ರಿಟಿಷ್ ಅಧಿಕಾರಿ ಕಂಡ "ಸಿಲಗುಟ್ಟ"
ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಶಿಡ್ಲಘಟ್ಟ ಹೀಗಿರಲಿಲ್ಲ. ಇಲ್ಲಿನ ಜನರಿಗೆ ರೇಷ್ಮೆಯ ಗಂಧಗಾಳಿಯೂ ಇರಲಿಲ್ಲ. ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಈ ಮಾತುಗಳನ್ನು ಹೇಳಿದವರು ಮೂಲನಿವಾಸಿಗಳಲ್ಲ, ಭಾರತೀಯ ಇತಿಹಾಸಕಾರರೂ ಅಲ್ಲ. ಈ ಪ್ರದೇಶದ ಕುರಿತು ಅತೀವ ಆಸಕ್ತಿಯಿಂದ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಈ ವಿಷಯವನ್ನು ತಿಳಿಸಿದ್ದಾರೆ.
1807 ರಲ್ಲಿ ಪ್ರಕಟವಾದ ಅವರ ಪುಸ್ತಕ “A journey from Madras through the countries of Mysore, Canara, and Malabar” ದಲ್ಲಿ ಗತಕಾಲದ ಶಿಡ್ಲಘಟ್ಟದ ಇತಿಹಾಸದ ಚಿತ್ರಣವನ್ನೇ ಅವರು ನೀಡಿದ್ದಾರೆ.
ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿಗೆ ವೈದ್ಯಾಧಿಕಾರಿಯಾಗಿದ್ದರು ಫ್ರಾನ್ಸಿಸ್ ಬುಕನನ್. 1799ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಭಾರತವನ್ನು ಸರ್ವೇಕ್ಷಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು.
ಸ್ಥಳವರ್ಣನೆ, ನಕ್ಷೆ, ಸ್ವರೂಪ, ಇತಿಹಾಸ, ಪ್ರಾಚೀನ ಅವಶೇಷ, ಸ್ಥಳೀಯರ ನಡವಳಿಕೆ, ಪದ್ಧತಿ, ಧರ್ಮ, ಆಹಾರ, ಉತ್ಪಾದನೆ, ಬೆಳೆ, ಕೃಷಿ, ತರಕಾರಿ, ಗೊಬ್ಬರ, ಪ್ರವಾಹ, ಸಾಕು ಪ್ರಾಣಿಗಳು, ಜಮೀನು, ಗಡಿರೇಖೆ, ಕಲೆ, ವಾಣಿಜ್ಯ ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ದಾಖಲಿಸಿದ್ದಾರೆ. ಇವರು ತಯಾರಿಸಿದ ವರದಿಗಳು ಮತ್ತು ದಾಖಲಾತಿಗಳು ಈಗಲೂ ಲಂಡನ್ನಿನ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ. ಈ ಸರ್ವೇಕ್ಷಣಾ ಕಾರ್ಯದಲ್ಲಿ ಇವರು ಶಿಡ್ಲಘಟ್ಟಕ್ಕೂ ಬಂದಿದ್ದರು. ತಮ್ಮ ಪುಸ್ತಕದಲ್ಲಿ ಶಿಡ್ಲಘಟ್ಟವನ್ನು ಸಿಲಗುಟ್ಟ(Silagutta) ಎಂದು ಕರೆದಿದ್ದಾರೆ. ಎರಡು ಶತಮಾನಗಳ ಹಿಂದಿನ ಶಿಡ್ಲಘಟ್ಟವನ್ನು ಬುಕನನ್ ಅತ್ಯಂತ ಆಪ್ತವಾಗಿ ಪರಿಚಯಿಸಿದ್ದಾರೆ.
‘ಜುಲೈ 13ರ ಬೆಳಿಗ್ಗೆ ಸಿಲಗುಟ್ಟಕ್ಕೆ ಬಂದೆ. ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಜನರು ರಾಗಿ ಬಿತ್ತುವುದರಲ್ಲಿ ಮಗ್ನರಾಗಿದ್ದರು. ಪಶ್ಚಿಮದಿಂದ ಬೀಸುವ ಗಾಳಿಯ ಆರ್ಭಟ ಒಂದೆಡೆಯಾದರೆ, ಆಗಾಗ ಬೀಳುವ ಮಳೆ ಇನ್ನೊಂದೆಡೆ. ಇಲ್ಲಿ ಕಲ್ಲು ಬಂಡೆಗಳಿಲ್ಲದೆ ಭೂಮಿ ಫಲವತ್ತಾಗಿದೆ. ಸಿಲಗುಟ್ಟ ಪಟ್ಟಣದಲ್ಲಿ ಕೇವಲ ೫೦೦ ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನವನಗಳಿವೆ’ ಎಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದಾರೆ.
‘ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ನಗರ್ತರು, ಸಾತಾನಾನರು ಇಲ್ಲಿ ವಾಸವಾಗಿದ್ದಾರೆ. ಸಿಲಗುಟ್ಟದಲ್ಲಿ ಒರಟಾದ ದಪ್ಪದ ಹತ್ತಿಯ ಕೋರಾ ಬಟ್ಟೆಗಳನ್ನು ನೇಕಾರರು ತಯಾರಿಸುತ್ತಾರೆ. ನೇಕಾರರು ಪದ್ಮಶಾಲಿ ಕುಲದವರು.
ಸಿಲಗುಟ್ಟದ ವ್ಯಾಪಾರಸ್ಥರು ಅಡಿಕೆ ಮತ್ತು ಕರಿ ಮೆಣಸನ್ನು ಕಟೀಲು ಮತ್ತು ನಗರದಿಂದ ತರುತ್ತಾರೆ. ಇಲ್ಲಿ ಸುತ್ತಮುತ್ತ ಬೆಳೆದ ತಂಬಾಕು ಮತ್ತು ನೇಯ್ದ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮೆಣಸು ಮತ್ತು ಅಡಿಕೆಯನ್ನು ವಾಲಾಜಪೇಟೆಯಲ್ಲಿ ಮಾರುತ್ತಾರೆ. ಸಮುದ್ರದ ಮಾರ್ಗದಿಂದ ಮದ್ರಾಸಿಗೆ ಬರುತ್ತಿದ್ದ ರೇಷ್ಮೆಯನ್ನೂ ತಂದು ಬೆಂಗಳೂರು, ಬಳ್ಳಾರಿ, ಆದೋನಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿ ಹತ್ತಿಯ ನೂಲನ್ನು ಹಾಗೂ ಕಂಬಳಿಗಳನ್ನು ಕೊಳ್ಳುತ್ತಾರೆ.
ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ಇಲ್ಲಿ ಒಂದು ಎಕರೆಗೆ ಆರು ಕಂಡುಗ ರಾಗಿ ಬೆಳೆಯುತ್ತಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನೇ ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು’ ಎಂಬ ಚಿತ್ರಣವನ್ನು ನೀಡಿದ್ದಾರೆ.
ಬುಕನನ್ ನ ಅಧ್ಯಯನವನ್ನು ವಿವರವಾಗಿ ತಿಳಿಸುವ ಈ ಪುಸ್ತಕ University of Pittsburgh online library ಅಲ್ಲಿ ಲಭ್ಯವಿದೆ ಓದಲು ಇಲ್ಲಿ click ಮಾಡಿ
ಶಿಡ್ಲಘಟ್ಟದ ಇತಿಹಾಸವನ್ನು ತಿಳಿಯಲು ಇಲ್ಲಿ click ಮಾಡಿ
ಶಿಡ್ಲಘಟ್ಟ ತಾಲ್ಲೂಕು ಬೂದಾಳ ಗ್ರಾಮಕ್ಕೆ ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಭೇಟಿ
ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹಿಪ್ಪುನೇರಳೆ ಸೊಪ್ಪಿಗೆ ಈಚೆಗೆ ಧಾಳಿಯಿಡುತ್ತಿರುವ ಹೊಸ ಬಕಾಸುರ ಕೀಟಗಳ ಬಗ್ಗೆ ಪರಿಶೀಲಿಸಲು ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಬೂದಾಳ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದರು. ತಾಲ್ಲೂಕಿನ ಬೂದಾಳದ ಕೆರೆಯಂಚಿನ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ಕಳೆದ ಮೂರು ರಾತ್ರಿಗಳಿಂದ ಹೊಸ ರೀತಿಯ ಜೀರುಂಡೆಗಳು ಧಾಳಿಯಿಡುತ್ತಿದ್ದು, ಜೇನು ನೊಣಗಳಂತೆ ನೂರಾರು ಜೀರುಂಡೆಗಳು ರಾತ್ರಿಯಾಗುತ್ತಿದ್ದಂತೆಯೇ ಆಗಮಿಸಿ ಹಿಪ್ಪುನೇರಳೆ ಸೊಪ್ಪಿನ ಸುಳಿಗಳಿಗೆ ಜೋತು ಬೀಳುತ್ತಿವೆ. ಅವುಗಳು ಸೊಪ್ಪನ್ನು ತಿನ್ನುವ ವೇಗವಂತೂ ಗಾಬರಿಗೊಳ್ಳುವಂತಿದೆ ಎಂದು ರೈತರು ಅಧಿಕಾರಿಗಳಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ವಿಜ್ಞಾನಿಗಳೊಂದಿಗೆ ಆಗಮಿಸಿದ್ದ ಅಧಿಕಾರಿಗಳು ರೈತರು ಹಿಡಿದಿಟ್ಟಿದ್ದ ಜೀರುಂಡೆಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಬೂದಾಳದ ರೈತರಾದ ರಾಮಾಂಜಿನಪ್ಪ, ಸದಾಶಿವರೆಡ್ಡಿ, ಮುನಿಶಾಮಿರೆಡ್ಡಿ, ಶಂಕರ್, ವೆಂಕಟಪ್ಪ ತಮ್ಮ ಹಿಪ್ಪುನೇರಳೆ ತೋಟಕ್ಕೆ ಬಂದು ಸೊಪ್ಪು ತಿನ್ನುವ ಕೀಟಗಳ ಕುರಿತಂತೆ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
‘ಈ ಜೀರುಂಡೆಗಳು ನೂರಾರು ಸಂಖ್ಯೆಯಲ್ಲಿ ರಾತ್ರಿ ವೇಳೆ ಹಿಪ್ಪುನೇರಳೆ ತೋಟಗಳಿಗೆ ಬಂದು ಎಲೆಗಳಿಗೆ ಕುಚ್ಚುಕುಚ್ಚಾಗಿ ಜೋತು ಬಿದ್ದು ಒಂದು ಕಡೆಯಿಂದಾ ತಿನ್ನುತ್ತಾ ಬರುತ್ತಿವೆ. ಇವು ರಾತ್ರಿ ವೇಳೆಯಲ್ಲಿ ಮಾತ್ರ ಬರುತ್ತಿವೆ. ಎಲ್ಲಿಂದ ಬರುತ್ತಿವೆಯೋ, ಎಲ್ಲಿಗೆ ಹೋಗುತ್ತವೆಯೋ ತಿಳಿಯದು. ಇವುಗಳ ಸಂಖ್ಯೆಯನ್ನು ನೋಡಿದರೆ ರೈತರ ಪಾಲಿನ ಬಕಾಸುರರಂತೆ ಕಾಣುತ್ತಿವೆ’ ಎಂದು ರೈತರು ತಿಳಿಸಿದರು.
‘ಈ ಕೀಟಗಳನ್ನು ಮೇ ಜೂನ್ ಬೀಟಲ್ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯಾ ಸೆರ್ರಾಟ ಎಂದಿದೆ. ಇದರ ಜೀವನ ಚಕ್ರ ಒಂದು ವರ್ಷ ಕಾಲವಿದ್ದು ಎಲ್ಲಾ ನೆಲದೊಳಗೇ ನಡೆಯುತ್ತದೆ. ಮೊದಲ ಮಳೆ ಬಿದ್ದೊಡನೆಯೇ ನೆಲದಿಂದ ಹೊರ ಬರುವ ಈ ಕೀಟಗಳು ಸಾಮಾನ್ಯವಾಗಿ ಗುಲಾಬಿ, ಜಾಲಿ, ಬೇವು, ಕಬ್ಬು ಮುಂತಾದವುಗಳ ಎಲೆಗಳನ್ನು ತಿನ್ನುತ್ತವೆ. ಅಚ್ಚರಿಯಾಗುವಂತೆ ಹಿಪ್ಪುನೇರಳೆ ಸೊಪ್ಪಿಗೂ ಆಕರ್ಷಿತವಾಗಿವೆ. ಒಂದು ತಿಂಗಳು ಮಾತ್ರ ಇವುಗಳು ನೆಲದಿಂದ ಹೊರವಿರುತ್ತವೆಯಷ್ಟೆ. ಒಂದು ಬಾರಿ ಸುಮಾರು ಎಂಟು ನೂರು ಮೊಟ್ಟೆಗಳನ್ನಿಡುವ ಇವುಗಳ ಸಂಖ್ಯೆಯೂ ದೊಡ್ಡದೇ. ಕಟಾವಿಗೆ ಬಂದಿರುವ ಸೊಪ್ಪಿಗೆ ಔಷಧಿಯನ್ನು ಸಿಂಪಡಿಸಲಾಗದು. ಆದ್ದರಿಂದ ತೋಟದಲ್ಲಿ ಅಲ್ಲಲ್ಲಿ ಬೇವಿನ ಸೊಪ್ಪನ್ನು ಕಟ್ಟಿ ಹುಳುಗಳನ್ನು ಆಕರ್ಷಿಸಿ ಹಿಡಿದು ಸೀಮೆಎಣ್ಣೆ ಮಿಶ್ರಿತ ನೀರಲ್ಲಿ ಹಾಕಿ ಸಾಯಿಸಬೇಕು. ಅಲ್ಲಲ್ಲಿ ಪ್ರಕರವಾದ ಬೆಳಕು ಹಾಯಿಸಿ ಈ ಹುಳುಗಳನ್ನು ಆಕರ್ಷಿಸಿ ಸಾಯಿಸಬಹುದು ಅಥವಾ ಸುಡಬಹುದು. ಈ ರೀತಿ ಸಾಯಿಸುವುದರಿಂದ ಇವುಗಳ ಸಂತತಿಗೆ ಕಡಿವಾಣ ಬಿದ್ದು ಮುಂದಿನ ಬಾರಿ ಇವು ಬರದಂತಾಗುತ್ತದೆ’ ಎಂದು ವಿಜ್ಞಾನಿ ಡಾ.ಎಚ್.ಎಸ್.ಫಣಿರಾಜ್ ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್, ಸಹಾಯಕ ನಿರ್ದೇಶಕ ಚಂದ್ರಪ್ಪ, ಅಧಿಕಾರಿಗಳಾದ ಕೃಷ್ಣಪ್ಪ, ತಿಮ್ಮಪ್ಪ, ರೈತರಾದ ಜೆ.ವಿ.ವೆಂಕಟಸ್ವಾಮಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
ಶಿಡ್ಲಘಟ್ಟ ರೇಷ್ಮೆ ಉದ್ಯಮದ ಹರಿಕಾರ ಆನೂರು ಎ.ಎಂ.ಮುನೇಗೌಡರು
ಶಿಡ್ಲಘಟ್ಟ ರೇಷ್ಮೆ ಉದ್ಯಮದ ಬೀಡು, ರೇಷ್ಮೆ ಉದ್ಯಮದಲ್ಲಿ ಸಣ್ಣಪುಟ್ಟ ಬದಲಾವಣೆ ಆದರೂ ನೆನಪಾಗುವುದೇ ಶಿಡ್ಲಘಟ್ಟ. ರೇಷ್ಮೆ ಕೃಷಿಕರ ಹಾಡು-ಪಾಡು, ನೂತನ ತಂತ್ರಜ್ಞಾನದ ಪರಿಚಯ, ಬೆಲೆ ಏರಿಕೆ ಮತ್ತು ಕುಸಿತ, ರಫ್ತು ಮತ್ತು ಆಮದು ಮುಂತಾದವುಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅನಿಸಿಕೆ, ಅಭಿಪ್ರಾಯ ನೀಡತೊಡಗುತ್ತಾರೆ.
ಆಸಕ್ತಿಮಯ ಸಂಗತಿಯೆಂದರೆ, ಈ ರೀತಿಯ ಚರ್ಚೆ ಸಂವಾದಗಳು ಇಂದಿನದಲ್ಲ. ಇದಕ್ಕೆ ಸುಮಾರು 50 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಅದು 60 ರ ದಶಕದ ಸಮಯ, ವೈಜ್ಞಾನಿಕ ರೇಷ್ಮೆ ಬೇಸಾಯ ಆಗ ತಾನೆ ಅಖಂಡ ಕೋಲಾರ ಜಿಲ್ಲೆಗೆ ಪರಿಚಯವಾಗಿತ್ತು. ರೈತರು ಹಿಂಜರಿಯುತ್ತಲೇ ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನು ಕಂಡುಕೊಳ್ಳುತ್ತಿದ್ದರು. ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲೆಂದೇ ಶಿಡ್ಲಘಟ್ಟ ತಾಲ್ಲೂಕಿನ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹೊರತಂದರು.
ರೇಷ್ಮೆಯಿಂದ ಯಾವ ರೀತಿ ಆರ್ಥಿಕ ಸಬಲತೆ ಕಾಣಬಹುದು ಎಂಬುದು ಸೇರಿದಂತೆ ಯಾವುದೆಲ್ಲ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದನ್ನು ಅವರು ಪುಸ್ತಕಗಳ ಮೂಲಕ ತಿಳಿಪಡಿಸುತ್ತಿದ್ದರು. ಹಾಗೆಂದು ಅವರೇನೂ ಸಾಹಿತಿಯಾಗಿರಲಿಲ್ಲ. ಆದರೆ ಸಾಹಿತ್ಯದ ಕುರಿತು ತುಂಬ ಆಸಕ್ತಿ ಇತ್ತು. ರೇಷ್ಮೆ ಕೃಷಿ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಎ.ಎಂ.ಮುನೇಗೌಡ. ಆನೂರಿನ ಪಟೇಲ ಮುನಿಶಾಮೇಗೌಡರ ಪುತ್ರ.ಆಗಿನ ಕಾಲದಲ್ಲೇ ಕೃಷಿಗೆ ಸಂಬಂಧಿಸಿದಂತೆ ಎಲ್.ಎಜಿ ಎಂಬ ಡಿಪ್ಲೊಮ ಗಳಿಸಿದ್ದರು. ಸರ್ಕಾರಿ ಉದ್ಯೋಗ ತಿರಸ್ಕರಿಸಿದ್ದ ಅವರು ತಮ್ಮ ಕುಲ ವೃತ್ತಿಯಾದ ವ್ಯವಸಾಯವನ್ನೇ ನಂಬಿ ಗ್ರಾಮಕ್ಕೆ ಹಿಂದಿರುಗಿದ್ದರು. ದೊಡ್ಡ ಕುಟುಂಬದ ಹಿರಿಯರಾಗಿದ್ದ ಅವರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಹಿತ್ಯಾಭಿಮಾನಿಯಾಗಿದ್ದರು. ಆವರು ಜಿಲ್ಲೆಯ ಹಿರಿಯ ಸಾಹಿತಿಗಳಲ್ಲೊಬ್ಬರಾದ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಯವರ ಒಡನಾಟವನ್ನು ಹೊಂದಿದ್ದು, ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದರು.
ರೇಷ್ಮೆ ವ್ಯವಸಾಯದ ಬಗ್ಗೆ ರೈತರಿಗೆ ಸರ್ಕಾರ ಅರಿವು ಮೂಡಿಸುವ ಮುನ್ನವೇ ಮುನೇಗೌಡ ಅವರು “ರೇಷ್ಮೆ ಕೈಗಾರಿಕೆ” ಎಂಬ ದ್ವೈಮಾಸಿಕ ಪತ್ರಿಕೆ ತರುವ ಸಾಹಸಕ್ಕೆ ಕೈಹಾಕಿದರು. ಅವರಿಗೆ ಪತ್ರಿಕೋದ್ಯಮ ಮತ್ತು ಮುದ್ರಣದ ಬಗ್ಗೆ ಸಾಮಾನ್ಯ ಪರಿಚಯವೂ ಇರಲಿಲ್ಲ. ಆದರೆ ರೇಷ್ಮೆ ಬೇಸಾಯದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಬೇರೆ ದೇಶಗಳಲ್ಲಿ ರೇಷ್ಮೆ ಕೃಷಿ ಹೇಗೆ ನಡೆದಿದೆ, ವ್ಯಾಪಿಸಿದೆ. ಅದರ ಸಾಧ್ಯಾಸಾಧ್ಯತೆಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದರು. ತಾವು ತಿಳಿದುಕೊಂಡ ವಿಷಯಗಳನ್ನು ರೈತರಿಗೆ ತಿಳಿಸಬೇಕೆಂಬ ಕಾಳಜಿ, ಕಳಕಳಿಯಿತ್ತು. ಬೆಂಗಳೂರಿನ ಕಲಾಸಿಪಾಳ್ಯಂನ ಹಾಸನದ ವೆಂಕಟೇಶಯ್ಯ ಅವರ ಮುದ್ರಣಾಲಯದಲ್ಲಿ ಇವರ ಪತ್ರಿಕೆ ರೂಪುಗೊಳ್ಳುತ್ತಿತ್ತು. ಪತ್ರಿಕೆಯ ಕರಡು ತಿದ್ದುವುದು, ಭಾಷೆಯನ್ನು ಪರಿಷ್ಕರಿಸುವುದು ಮುಂತಾದ ಕೆಲಸಗಳನ್ನು ಶಾಸ್ತ್ರಿಗಳು ಮಾಡುತ್ತಿದ್ದರು. 16 ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ಅದರ ಬ್ಲಾಕುಗಳ ತಯಾರಿಕೆಗಾಗಿ ಬಹಳಷ್ಟು ಹಣ ವ್ಯಯವಾಗುತ್ತಿತ್ತು. ಈ ಪತ್ರಿಕೆಗೆ ಚಂದಾದಾರರಿದ್ದರೋ ಇಲ್ಲವೋ ಎಂಬುದನ್ನು ಪರಿಗಣಿಸದೇ, ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಕೆಲ ಕಾಲ ಪತ್ರಿಕೆ ಹೊರತಂದರು. ಆರ್ಥಿಕ ಮುಗ್ಗಟ್ಟಿನಿಂದ, ಜನರ ಮತ್ತು ಸರ್ಕಾರದ ಪ್ರೋತ್ಸಾಹದ ಕೊರತೆಯಿಂದಾಗಿ ಪತ್ರಿಕೆ ಕೊನೆಯುಸಿರೆಳೆಯಿತು.
ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ’ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. 1944-45 ನೆಯ ವರ್ಷದಲ್ಲಿ ಗ್ರಾಮಾಭ್ಯುದಯ ಮತ್ತು ಒಕ್ಕಲಿಗರ ಪತ್ರಿಕೆಗಳಲ್ಲಿ ರೈತರ ಬಗ್ಗೆ ಇವರು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ’ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕದ ಬಿನ್ನಹದಲ್ಲಿ, “ಗ್ರಾಮವಾಸಿಗಳು ಸಂಘಗಳನ್ನು ಏರ್ಪಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಬೇಕು. ಪ್ರತಿಯೊಂದಕ್ಕೂ ಇತರರನ್ನೇ ನಂಬಿಕೊಂಡಿರುವುದು ಹಿಂದುಳಿದವರ ಲಕ್ಷಣ. ಇದು ತೊಲಗಿದಂತೆಲ್ಲಾ ರೈತನು ಅಭಿವೃದ್ಧಿ ಹೊಂದುತ್ತಿದ್ದಾರೆಂದು ತಿಳಿಯಬೇಕು. ಹೀಗಾಗಬೇಕಾದರೆ ರೈತನ ಹಿತಚಿಂತಕರೆಲ್ಲರೂ ರೈತನ ಅವಶ್ಯಕತೆಗಳ ನಿಜ ಸ್ವರೂಪವನ್ನು ತಿಳಿದು ನಡೆಯಬೇಕು. ಓದುಗರು ಸಾಹಿತ್ಯದೋಷಗಳನ್ನು ಮನ್ನಿಸಿ ರೈತನೊಬ್ಬನಿಂದ ಬರೆಯಲ್ಪಟ್ಟಿರುವ ಈ ಪುಸ್ತಕದಲ್ಲಿರುವ ವಿಷಯಗಳನ್ನು ಗಮನಿಸಬೇಕೆಂದು ವಿಜ್ಞಾಪನೆ’ ಎಂದು ಬರೆಯುತ್ತಾರೆ ಮುನೇಗೌಡರು.
ಮುನೇಗೌಡರು ರೇಷ್ಮೆ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಿಯಾಶೀಲರಾಗಿದ್ದವರು. ರೇಷ್ಮೆ ಬೇಸಾಯ ಸುಣ್ಣಕಟ್ಟು ರೋಗ ಮತ್ತು ಹೂಜಿ ನೊಣಗಳ ಹಾವಳಿಯಿಂದಾಗಿ ಸೊರಗಿದಾಗ ಅದರಿಂದ ಪಾರಾಗುವ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಿದ್ದರು. ಆಗ ಸರ್ಕಾರದ ರೇಷ್ಮೆ ಇಲಾಖೆ ಮುನೇಗೌಡರ ಸೂಚನೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೈಸೂರಿನ ರೇಷ್ಮೆ, ಜಪಾನಿನ ರೇಷ್ಮೆ, ರೇಷ್ಮೆ ಕುರಿತ ಕವನಗಳು, ರೇಷ್ಮೆ ಇಲಾಖೆ, ರೇಷ್ಮೆ ಕೈಗಾರಿಕೆಯ ವಿವಿಧ ಕಸುಬುಗಳ ಹಾಗೂ ಸಮಸ್ಯೆಗಳ ಕುರಿತಂತೆ ವೈವಿಧ್ಯಮಯ ಲೇಖನಗಳನ್ನು ಇವರ ’ರೇಷ್ಮೆ ಕೈಗಾರಿಕೆ’ ರೇಷ್ಮೆ ಕೈಗಾರಿಕೆಯ ಪ್ರಗತಿಗೆ ಮೀಸಲಾದ ಏಕೈಕ ತ್ರಿಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖನ – ಡಿ ಜಿ ಮಲ್ಲಿಕಾರ್ಜುನ
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇಕಡಾ 79.42 ರಷ್ಟು ಮತದಾನ
ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇಕಡಾ 79.42 ರಷ್ಟು ಮತದಾನ ನಡೆದಿದೆ.
ತಾಲ್ಲೂಕಿನ 92,697 ಪುರುಷರು, 90604 ಮಹಿಳೆಯರು ಸೇರಿದಂತೆ ಒಟ್ಟು 1,83,311 ಮತದಾರರಲ್ಲಿ ಮತಚಲಾಯಿಸಿದವರು 75,953 ಪುರುಷರು ಮತ್ತು 69,624 ಮಹಿಳೆಯರು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಮತದಾನ ಮಾಡಿದ್ದವರು ಶೇಕಡಾ 75.78 ರಷ್ಟಿದ್ದರೆ, ಈ ಬಾರಿ ಅದು ಶೇಕಡಾ 79.42ಕ್ಕೆ ಏರಿಕೆ ಕಂಡಿದೆ. ಮತದಾನದ ಮಹತ್ವದ ಬಗ್ಗೆ ಸರ್ಕಾರ ಅರಿವು ಮೂಡಿಸುವ ಅಭಿಯಾನದ ಪರಿಣಾಮ ಶೇಕಡಾ 3.64 ರಷ್ಟು ಮತದಾನ ಹೆಚ್ಚಾಗಿದೆ.
ತಾಲ್ಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ಮತಯಾಚಿಸಲು ತೆರಳಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಬಗ್ಗೆ 75 ಮನೆಗಳು ಹಾಗೂ 25 ಗುಡಿಸಳುಗಲಿರುವ ಈ ಗ್ರಾಮದಲ್ಲಿ ಬರುವ ಮಳೆಗಾಲವನ್ನು ತಡೆಯಲು ಈಗಿನಿಂದಲೇ ಗುಡಿಸಲನ್ನು ಸರಿಪಡಿಸಿಕೊಳ್ಳುತ್ತಿದ್ದ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದರು. ವಿಶೇಷವೆಂದರೆ ಈ ರೀತಿ ಆಕ್ರೋಷ ವ್ಯಕ್ತಪಡಿಸಿದ್ದ ಬ್ರಾಹ್ಮಣರಹಳ್ಳಿಯಲ್ಲಿ ಶೇಕಡಾ 100 ರಷ್ಟು ಮತದಾನವಾಗಿದ್ದು ತಾಲ್ಲೂಕಿನಲ್ಲೇ ಹೆಚ್ಚಿನ ಮತದಾನ ಕಂಡ ಮತಗಟ್ಟೆಯಾಗಿದೆ.
ಶಾಶ್ವತ ನೀರಾವರಿಗಾಗಿ ನಾವು ಮತದಾನವನ್ನು ಬಹಿಷ್ಕರಿಸುತ್ತೇವೆಂದು ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮಸ್ಥರು ತಿಳಿಸಿದ್ದರಿಂದ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ತೆರಳಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದರಾದರೂ ಈ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ 32.138 ರಷ್ಟು ಮತದಾನ ನಡೆದಿದೆ.
ತಾಲ್ಲೂಕಿನ ಕಲ್ಯಾಪುರ, ಗೊರಮಡುಗು, ಗುಡಿಹಳ್ಳಿ, ಮಿತ್ತನಹಳ್ಳಿ, ಅಮರಾವತಿ, ಚೊಕ್ಕಂಡಹಳ್ಳಿ, ಅರಿಕೆರೆ. ಎ.ಹುಣಸೇನಹಳ್ಳಿ, ವೀರಾಪುರ, ಚೀಮನಹಳ್ಳಿ, ಗಡಿಮಿಂಚೇನಹಳ್ಳಿ, ಕೋಟಗಲ್, ಹರಳಹಳ್ಳಿ, ಕಂಬದಹಳ್ಳಿ ಮತಗಟ್ಟೆಗಳಲ್ಲಿ ಶೇಕಡಾ 90 ಕ್ಕೂ ಹೆಚ್ಚು ಮತದಾನವಾಗಿದೆ.
2009 ರಿಂದ 2014 ರ ವರೆಗೆ ನಡೆದ ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಯ ಮತದಾನದ ಸಂಪೂರ್ಣ ಮಾಹಿತಿ
ಮೇಲೂರು ಗ್ರಾಮದ ಗಂಗಾದೇವಿ ರಥೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಗಂಗಾದೇವಿ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿಜಯನಾಮ ಸಂವತ್ಸರದ ಚೈತ್ರ ಶುದ್ಧ ಪೂರ್ಣಿಮೆ ಮಂಗಳವಾರ ಮಧ್ಯಾಹ್ನ ಗ್ರಾಮಸ್ಥರೆಲ್ಲರು ಪೂಜೆ ಸಲ್ಲಿಸಿ ವಿಶೇಷವಾಗಿ ಅಲಂಕರಿಸಿದ್ದ ದೇವಿಯ ರಥವನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ವಿವಿಧ ರೀತಿಯ ತಮಟೆ ನಾದ, ಡೊಳ್ಳು ಕುಣಿತ ಹಾಗೂ ಕಲಾ ತಂಡಗಳೊಂದಿಗೆ ಸಾಗಿದ ರಥವನ್ನು ಎಲ್ಲರೂ ಸೇರಿ ಎಳೆದರು. ದವನ ಸಿಕ್ಕಿಸಿದ ಬಾಳೆಹಣ್ಣನ್ನು ರಥಕ್ಕೆ ಎಸೆದು ಜನರು ಪ್ರಾರ್ಥಿಸಿದರು.
ಸುತ್ತಮುತ್ತಲಿನ ಗ್ರಾಮಗಳಿಂದ ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ಗ್ರಾಮ ದೇವತೆ ಗಂಗಾದೇವಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಂತರ ರಥವನ್ನು ಎಳೆದರು. ಗಂಗಾದೇವಿಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಲೂನು, ಬತ್ತಾಸು ಮಕ್ಕಳ ಆಕರ್ಷಣೆಯಾಗಿತ್ತು. ಹೆಸರು ಬೇಳೆ, ಪಾನಕ, ಮಜ್ಜಿಗೆ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.
ವಿದ್ಯುತ್ ಆಘಾತದಲ್ಲಿ ತಾಯಿಯನ್ನು ಕಳೆದುಕೊಂಡ ಬಾವಲಿ ಮರಿಯ ರಕ್ಷಣೆ
ಶಿಡ್ಲಘಟ್ಟದ ಹೊರವಲಯದ ಇದ್ಲೂಡಿನಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ದೊಡ್ಡದಾದ ಬಾವಲಿಯೊಂದು ಸಂತೆಪ್ಪನವರ ಮೂರ್ತಿ ಅವರಿಗೆ ಸಿಕ್ಕಿದ್ದು, ತಾಯಿಯನ್ನು ಅಪ್ಪಿಕೊಂಡು ಬದುಕುಳಿದಿದ್ದ ಅದರ ಮರಿಯನ್ನು ಅವರು ರಕ್ಷಿಸಿದ್ದಾರೆ.
ಇನ್ನೂ ಕಣ್ಣು ಬಿಡದ ಪುಟ್ಟ ಕಂದಮ್ಮವದು. ತಾಯಿಯ ಮೊಲೆಯನ್ನು ಹೀರುತ್ತಿದೆ. ಆದರೆ ಅದರ ತಾಯಿ ಮೃತಪಟ್ಟಿರುವುದು ಮಾತ್ರ ಅದರ ಅರಿವಿಗೆ ಬಂದಿಲ್ಲ. ಬಾವಲಿ ತಾಯಿ ಹಾಗೂ ಮರಿಯ ಈ ಕರುಣಾಜನಕ ದೃಶ್ಯಕ್ಕೆ ಸಾಕ್ಷಿಯಾದವರು ಶಿಡ್ಲಘಟ್ಟದ ಹೊರವಲಯದ ಇದ್ಲೂಡಿನ ಸಂತೆಪ್ಪನವರ ಮೂರ್ತಿ.
ಬೆಳಿಗ್ಗೆಯೇ ತಮ್ಮ ತೋಟದ ಕೆಲಸವನ್ನು ಮುಗಿಸಿಕೊಂಡು ಬರುವಾಗ ವಿದ್ಯುತ್ ತಂತಿಯಿಂದ ಧಡ್ ಎಂಬ ಸದ್ದಿನೊಂದಿಗೆ ಬಿದ್ದದ್ದನ್ನು ನೋಡಿದಾಗ ಅವರ ಕಣ್ಣಿಗೆ ಬಿದ್ದ ದೃಶ್ಯ ಮನಕಲುಕುವಂತಿತ್ತು. ದೊಡ್ಡದಾದ ಬಾವಲಿಯು ವಿದ್ಯುತ್ ಆಘಾತಕ್ಕೆ ಒಳಗಾಗಿ ಕೆಳಗೆ ಬಿದ್ದು ಮೃತಪಟ್ಟಿತ್ತು. ಅದರ ಪುಟ್ಟ ಮರಿ ಮಾತ್ರ ತನ್ನ ತಾಯಿಯು ಸತ್ತಿದ್ದು ಕೂಡ ತಿಳಿಯದಂತೆ ಅದನ್ನು ಅಪ್ಪಿಕೊಂಡಿತ್ತು.
’ಸಾಮಾನ್ಯವಾಗಿ ಬಾವಲಿಗಳು ವಿದ್ಯುತ್ ತಂತಿಗೆ ಸಿಲುಕುವುದಿಲ್ಲ. ಮರಿಯನ್ನು ಹೊತ್ತು ಸಾಗುವಾಗ ಸುಸ್ತಾಗಿ ಬಹುಶಃ ವಿದ್ಯುತ್ ತಂತಿಯ ಆಸರೆ ಪಡೆಯಲು ಹೋಗಿ ಅವಘಡಕ್ಕೆ ತುತ್ತಾಗಿರಬೇಕು. ಮರಿಯು ಬದುಕಿರುವುದು ಕೂಡ ಪವಾಡವೇ. ನಿಶಾಚರಿಯಾದ ಇಂಥಹ ಬಾವಲಿಯನ್ನು ಹಾರುವ ನರಿ(ಫ್ಲೈಯಿಂಗ್ ಫಾಕ್ಸ್) ಎನ್ನುತ್ತಾರೆ’ ಎಂದು ಮರಿಯನ್ನು ರಕ್ಷಿಸಿದ ಸಂತೆಪ್ಪನವರ ಮೂರ್ತಿ ತಿಳಿಸಿದರು.

