ದೇಶದ ಬೆನ್ನೆಲುಬಾದ ರೈತನ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ರೈತರು ಪ್ರತಿಭಟಿಸಿದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಷ ಕುಡಿದು ಸತ್ತ ರೈತ ವಿಠಲ ಅರಬಾವಿ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ಮತ್ತು ಆತನ ಮಗನಿಗೆ ಉದ್ಯೋಗ ಕೊಡುತ್ತೇನೆಂದು ಹೇಳಿದ್ದವರು, ಈಗ ರೈತ ಮದ್ಯ ಸೇವಿಸಿ ಸತ್ತ ಎಂದು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದು, ರೈತರ ಬಗ್ಗೆ ಕೀಳಾಗಿ ಮಾತನಾಡಿರುವ ರಾಜ್ಯದ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ತಿಳಿಸಿ, ಶಿರಸ್ತೆದಾರರಿಗೆ ಮನವಿಯನ್ನು ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಲೋಕೇಶ್, ಅಂಬರೀಷ್, ದೇವರಾಜ್, ವೇಣು, ಕೃಷ್ಣಪ್ಪ, ರಾಮಚಂದ್ರ, ಜಿ.ಎಂ.ವೆಂಕಟರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತನ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಿರುವುದನ್ನು ವಿರೋಧಿಸಿ ಪ್ರತಿಭಟನೆ
ರೇಣುಕಾ ಎಲಮ್ಮದೇವಿಯ ಹೂವಿನ ಕರಗ
ಶಿಡ್ಲಘಟ್ಟದ ರೇಣುಕಾ ಎಲಮ್ಮದೇವಿಯ ಹೂವಿನ ಕರಗವು 02/04/2014 ಬುಧವಾರ ರಾತ್ರಿ ನಡೆಯಿತು.
ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ ಪ್ರಾಚೀನವಾದದ್ದು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.
ಕರಗಕ್ಕೆ ಪೂಜೆ ಸಲ್ಲಿಸಿ ತಲೆಯ ಮೇಲೆ ಹೊರಿಸಿದ ನಂತರ ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಎಲಾ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿದ್ದರು.
ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವ
ಶಿಡ್ಲಘಟ್ಟದ ಕುಕ್ಕಲಚಿನ್ನಪೇಟೆಯಲ್ಲಿ ನೆಲೆಸಿರುವ ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವವನ್ನು ಸೋಮವಾರ ರಾತ್ರಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕರಗ ಮಹೋತ್ಸವವು ಯುಗಾದಿಯ ದಿನದಂದು ಧ್ವಜಾರೋಹಣದಿಂದ ಆರಂಭವಾಗಿ ಆರುದಿನಗಳ ಕಾಲ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯುಗಾದಿಯ ದಿನ ರಾತ್ರಿ ನಡೆಯುವ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದುದು.
ಪಿ.ಎಂ.ರಮೇಶ್ ಅವರು ಈ ಬಾರಿ ಕರಗವನ್ನು ಹೊರುತ್ತಿದ್ದು, ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ಅವರಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸಿದ್ದರು. ಅನಂತರ ಶಕ್ತಿಸ್ವರೂಪನಾದ ಅವರನ್ನು ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಸಿ, ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ದೇವಸ್ಥಾನಕ್ಕೆ ಕರೆತಂದರು.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿದರು.
ಕರಗವನ್ನು ಸ್ವಾಗತಿಸಲು ಬಹುತೇಕರು ಮನೆಗಳ ಮುಂದೆ ರಂಗವಲ್ಲಿಯನ್ನು ಇಟ್ಟಿದ್ದು, ಕರಗ ಬಂದ ಮೇಲೆ ಆರತಿ ಬೆಳಗಿ ಪೂಜಿಸಿ ಮಲ್ಲಿಗೆ ಹೂಗಳನ್ನು ಅರ್ಪಿಸಿದರು.
ಮನೆಗೊಂದು ಉದ್ಯೋಗ ಸೃಷ್ಠಿ ನನ್ನ ಉದ್ದೇಶ – ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಿಯಮಾನುಸಾರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗದೇ ರೈಲ್ವೆ ಕೋಚ್ ಫ್ಯಾಕ್ಟರಿಗಾಗಿ ಅರಣ್ಯ ಇಲಾಖೆಯ ಜಮೀನಿನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಇಂಥಹ ಚುನಾವಣಾ ತಂತ್ರಗಾರಿಕೆಯನ್ನು ಮಾಡುತ್ತಿರುವ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಕೇವಲ ಗೆಲ್ಲುವ ಉದ್ದೇಶದ ಒಳಮರ್ಮವನ್ನು ಜನರು ಮನಗಾಣಬೇಕಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಇಷ್ಟು ಮಾತ್ರದ ಕೆಲಸಕ್ಕೆ ಮೂವತ್ತು ವರ್ಷಗಳ ಕಾಲ ಜನರು ಅಧಿಕಾರ ನೀಡಿದ್ದರಾ ಎಂಬುದನ್ನು ಪ್ರಶ್ನಿಸಬೇಕಿದೆ. ಗಡಿ ಭಾಗದಲ್ಲಿರುವ ನಾವಿಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದರೆ, ಕೆಲವೇ ಕಿಲೋಮೀಟರ್ ದೂರದ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಕಾರಣ ಅಲ್ಲಿ ರಾಜಕಾರಣಿಗಳ ರಾಜ್ಯಪ್ರೇಮವಾಗಿದೆ. ಅಲ್ಲಿ ಆರಿಸಿ ಬರುವವರೆಲ್ಲರೂ ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯದ ಬೆಳವಣಿಗೆಗೆ ಶ್ರಮಿಸುತ್ತಾರೆ. ಆದರೆ ಇಲ್ಲಿ ಆಯ್ಕೆಯಾಗಿದ್ದವರು ಶಾಶ್ವತ ನೀರನ್ನು ತರಲಾಗದೇ ಕೇವಲ ಚುನಾವಣೆ ಸಮಯದಲ್ಲಿ ಎತ್ತಿನಹೊಳೆ ಶಂಕುಸ್ಥಾಪನೆ ಮಾಡುವ ಮೂಲಕ ಜನರ ದಿಕ್ಕುತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಸೋಲಿನ ಭೀತಿಯಿಂದ ನನ್ನ ಎದುರಾಳಿಗಳು ನನ್ನ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಲು ಪ್ರಯತ್ನಿಸಿದ್ದರು. ಆದರೂ ಅವರ ಆಟ ನಡೆಯಲಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡುವುದು, ಮನೆಗೊಂದು ಉದ್ಯೋಗ ಸೃಷ್ಠಿಸುವುದು ನನ್ನ ಉದ್ದೇಶ. ಆರೋಗ್ಯ, ನೀರು, ನೈರ್ಮಲ್ಯ, ಪರಿಸರ ಬಗ್ಗೆ ಕೆಲಸ ಮಾಡುವುದಾಗಿ ಹೇಳಿದರು. ಕುಮಾರಸ್ವಾಮಿ ಅವರು ಕೇವಲ 20 ತಿಂಗಳ ಅಧಿಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದೇ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದಾಗಿ ನನ್ನ ವಿರುದ್ಧವೂ ಅಪಪ್ರಚಾರ ನಡೆಯುತ್ತಿದೆ. ಭ್ರಷ್ಟ ಕಾಂಗ್ರೆಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯ ನನಗಿಲ್ಲ ಎಂದು ನುಡಿದರು.
ಜೆಡಿಎಸ್ ಮುಖಂಡರಾದ ಶಿವಾರೆಡ್ಡಿ, ಆಯಿಷಾ ಸುಲ್ತಾನ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಮ್ಮ ನಡುವೆ ಯಾವುದೇ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳಿಲ್ಲ – ವಿ.ಮುನಿಯಪ್ಪ
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಚೆಗೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಸ್ಫೋಟಗೊಂಡಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಆರೋಪಗಳ ಕುರಿತಂತೆ ಈಗ ಮುಖಂಡರ ನೇತೃತ್ವದಲ್ಲಿ ಸರಿಪಡಿಸಿಕೊಂಡಿದ್ದು, ಯಾವುದೇ ಅವಿಶ್ವಾಸಗಳು ಇಲ್ಲ ಎಂದು ಅವರು ಹೇಳಿದರು.
ರೈಲು, ರಸ್ತೆ, ನೀರು ಮುಂತಾದ ಕಾಂಗ್ರೆಸ್ ಅವಧಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಾ, ನಮ್ಮಗಳ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಈಗಿನ ಶಾಸಕರು ತಮ್ಮದೆಂದು ಜನರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶ್ರೀನಿವಾಸಪುರ ಶಾಸಕ ರಮೇಶ್ಕುಮಾರ್ ಮಾತನಾಡಿ, ‘ಕ್ಷೇತ್ರದಲ್ಲೆಲ್ಲಾ ಓಡಾಡಿ ಕಾಂಗ್ರೆಸ್ ಗೆಲುವಿಗೆ ನಾವೆಲ್ಲಾ ಒಗ್ಗೂಡಿ ಶ್ರಮಿಸುತ್ತೇವೆ. ಎತ್ತಿನಹೊಳೆ ಯೋಜನೆ ಅಂತ್ಯವಲ್ಲ ಕೇವಲ ನಮ್ಮ ಕುಡಿಯುವ ನೀರಿನ ಅವಶ್ಯಕತೆಗೆ ತಾತ್ಕಾಲಿಕ ಪರಿಹಾರವಷ್ಟೆ. ರಾಜಕೀಯವಾಗಿ ಯಾರೂ ಯಾರನ್ನೂ ತುಳಿಯಲು ಸಾಧ್ಯವಿಲ್ಲ. ನಮ್ಮೆಲ್ಲರ ಮೇಲಿರುವ ಅಧೃಶ್ಯ ಶಕ್ತಿಯ ಕೆಲಸವದು’ ಎಂದು ಹೇಳಿದರು.
ಚಿಂತಾಮಣಿಯ ಮಾಜಿ ಶಾಸಕ ಸುಧಾಕರರೆಡ್ಡಿ ಅವರು ಬಹಿರಂಗವಾಗಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲು ಜೆ.ಡಿ.ಎಸ್ಗೆ ಬೆಂಬಲಿಸಿರುವುದರ ಬಗ್ಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ನಜೀರ್ಅಹಮದ್ ರ ಬಗ್ಗೆ,‘ಅವರೇ ಗೆಲ್ಲಲಾಗದಿದ್ದಾಗ ಬೇರೆಯವರನ್ನು ಸೋಲಿಸಲು ಸಾಧ್ಯವೇ’ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಮುನಿಕೃಷ್ಣಪ್ಪ, ಸುಬ್ರಮಣಿ, ಪುರಸಭಾ ಸದಸ್ಯರು ಮತ್ತಿತರರು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಇಂಟರ್ ಸ್ಕೂಲ್ ಕರಾಟೆ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು
ಪಟ್ಟಣದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಜಯಪುರದ ನಂದಿನಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಇಂಟರ್ ಸ್ಕೂಲ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.
Yellow Belt ಕತಾ ಸ್ಪರ್ಧೆಯಲ್ಲಿ ನರಸಿಂಹ(ದ್ವಿತೀಯ), Green Belt ಕತಾ ಸ್ಪರ್ಧೆಯಲ್ಲಿ ಹರ್ಷನ್(ಪ್ರಥಮ), 25 ರಿಂದ 30 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಚೇತನ್(ಪ್ರಥಮ), 30 ರಿಂದ 35 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಹರ್ಷನ್(ಪ್ರಥಮ), ನರಸಿಂಹ(ದ್ವಿತೀಯ), ಗಂಗರಾಜು ಮತ್ತು ಪುನೀತ್ ಸಮಾಧಾನಕರ ಬಹುಮಾನ ಪಡೆದಿರುವುದಾಗಿ ತರಬೇತುದಾರ ಅರುಣ್ಕುಮಾರ್ ತಿಳಿಸಿದ್ದಾರೆ.
ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್ಪಿಜಿ ಇಂಧನ ಉಳಿಸುವ ಅಸ್ತ್ರ ಒಲೆ ನಿರ್ಮಾಣ
LPG ಇಂಧನ ಉಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಎರಡು ಸರ್ಕಾರಿ ಪ್ರೌಢಶಾಲೆಗಳು ಅಸ್ತ್ರ ಒಲೆಗಳನ್ನು ನಿರ್ಮಿಸಿಕೊಂಡಿವೆ.
ನಿತ್ಯಜೀವನಕ್ಕೆ ಉಪಯುಕ್ತವಾದ ವೈಜ್ಞಾನಿಕ ಸಾಧನಗಳನ್ನು ಹಳ್ಳಿಗಳಲ್ಲಿ ಪ್ರಾಯೋಗಿಕವಾಗ ತರಲು ಪ್ರೊ.ಸತೀಶ್ ಧವನ್ ನಿರ್ದೇಶಕರಾಗಿದ್ದ ಅವಧಿಯಲ್ಲಿ ಎ.ಕೆ.ಎನ್.ರೆಡ್ಡಿ, ಮಾಧವ ಗಾಡ್ಗೀಳ್, ರೊದ್ದಂ ನರಸಿಂಹ ಮುಂತಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಅಸ್ತ್ರ(ಸೆಂಟರ್ ಫಾರ್ ಅಪ್ಲಿಕೇಷನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ರೂರಲ್ ಏರಿಯಾಸ್) ಎಂಬ ಕೇಂದ್ರವನ್ನು ಪ್ರಾರಂಭಿಸಿದ್ದರು. ಕಡಿಮೆ ಸೌದೆ ಬಳಸಿ ಹೆಚ್ಚು ಶಾಖವನ್ನು ಉತ್ಪಾದಿಸುವ ಮಾಲಿನ್ಯರಹಿತ ಒಲೆಗಳು ಅವರ ಕೊಡುಗೆಯಾಗಿದ್ದು, ಅವು ಅಸ್ತ್ರ ಒಲೆಗಳೆಂದೇ ಪ್ರಸಿದ್ಧಿಯಾಗಿವೆ.
ದಿ.ಸಂಜಯ್ದಾಸ್ಗುಪ್ತರ ನೆನಪಿನಲ್ಲಿ ನಡೆಸುವ ‘ನಮ್ಮ ಮುತ್ತೂರು’ ಸಂಸ್ಥೆಯ ವತಿಯಿಂದ ಆಗಮಿಸಿದ್ದ ರಮೇಶ್ ಕಿಕ್ಕೇರಿ ತಾಲ್ಲೂಕಿನ ಎರಡೂ ಶಾಲೆಗಳಲ್ಲಿ ಅಸ್ತ್ರ ಒಲೆಗಳನ್ನು ಕಟ್ಟಿದ ನಂತರ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಕೆಯಲ್ಲಿ ಈ ಹೊಸ ಒಲೆಯಿಂದ ಶೇಕಡಾ 50 ರಷ್ಟು ಇಂಧನ ಉಳಿತಾಯ ಮಾಡಬಹುದು, ಶಾಖದ ಸದುಪಯೋಗ ಮಾಡಿಕೊಳ್ಳುತ್ತಾ ಒಂದೆಡೆ ಅಡುಗೆ ಮತ್ತೊಂದೆಡೆ ಬಿಸಿ ನೀರನ್ನು ಪಡೆಯಬಹುದು, ಕಡಿಮೆ ಇಂಧನದಿಂದ ತಯಾರಾಗುವ ಶೀಘ್ರ ಅಡುಗೆಯ ಬಗ್ಗೆ ವಿವರಿಸಿದರು. ಎಲ್ಪಿಜಿ ಗ್ಯಾಸ್ ಉಳಿತಾಯ ಹಾಗೂ ಭೂಮಿಯಿಂದ ಬಗೆದು ಉಪಯೋಗಿಸುತ್ತಿರುವ ಇಂಧನಗಳ ಉಳಿತಾಯದ ಅಗತ್ಯತೆಯ ಬಗ್ಗೆ ತಿಳಿಸಿದರು.
ಹೊಗೆಯಿಂದಾಗಿ ಆರೋಗ್ಯ ಹಾಳಾಗುತ್ತದೆ. ಕ್ಯಾನ್ಸರ್, ಟಿಬಿ, ಅಸ್ತಮಾ ಹೀಗೆ ನೂರಾರು ರೋಗಗಳಿಗೆ ಸೌದೆ ಒಲೆಗಳೇ ತೌರುಮನೆ. ಈ ಅಸ್ತ್ರ ಒಲೆಗಳಲ್ಲಿ ಯಾವುದೇ ಕೃಷಿತ್ಯಾಜ್ಯಗಳನ್ನು ಇಂಧನವಾಗಿ ಬಳಸಬಹುದು. ಇವು ಪ್ರತ್ಯಕ್ಷವಾಗಿ ಕಟ್ಟಿಗೆ ಉಳಿಸುತ್ತವೆ. ಮರಗಿಡಗಳನ್ನು ಕಡಿಯುವುದು ಕಡಿಮೆಯಾಗುತ್ತದೆ. ಹೀಗೆ ಒಂದರ ಹಿಂದೊಂದು ಸರಪಳಿ ಉಪಯೋಗಗಳಿವೆ. ಅಸ್ತ್ರ ಒಲೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಟ್ಟಿಗೆಗಾಗಿ ವ್ಯರ್ಥವಾಗುತ್ತಿದ್ದ ಇಡೀ ದಿನದ ಸಮಯದ ಉಳಿತಾಯದಿಂದ ಆರೋಗ್ಯದವರೆಗೂ ಉಪಯುಕ್ತ. ಇದು ಮಹಿಳೆಯರಿಗೆ ಅತ್ಯಂತ ಸಹಾಯಕ. ಒಲೆಯೊಂದು ಬದುಕನ್ನೇ ಬದಲಿಸುತ್ತದೆ ಎಂದು ಹೇಳಿದರು.
ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರ ಮೆರವಣಿಗೆ
ಶಿಡ್ಲಘಟ್ಟದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡ ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ತಂತ್ರಗಾರಿಕೆಯಿಂದ ಇದುವರೆಗೂ ಜಯಗಳಿಸುತ್ತಿದ್ದ ಕೆ.ಎಚ್.ಮುನಿಯಪ್ಪ ಅವರಿಗೀಗ ಸೋಲುವ ಭೀತಿ ಬಂದಿದೆ ಹಾಗಾಗಿ ಇತರ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೆ.ಎಚ್.ಮುನಿಯಪ್ಪ ಅವರ ಕುತಂತ್ರದಿಂದ ಕೋಲಾರ ಲೋಕಸಭಾ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರು ಬಲಿಪಶುಗಳಾಗಿದ್ದಾರೆ. ನಾನೂ ಸೇರಿದಂತೆ ಚಿಂತಾಮಣಿಯ ಸುಧಾಕರ್, ಕೋಲಾರದ ಕೆ.ಶ್ರೀನಿವಾಸಗೌಡ ಕಾಂಗ್ರೆಸ್ ಪಕ್ಷವನ್ನು ತೊರೆಯಲು ಕೆ.ಎಚ್.ಮುನಿಯಪ್ಪ ಅವರ ಕುತಂತ್ರ ರಾಜಕಾರಣ ಕಾರಣವಾಗಿದೆ. ಇದೀಗ ತಾನು ರಾಜಕೀಯವಾಗಿ ಬೆಳೆಯಲು ಬುನಾದಿ ಹಾಕಿಕೊಟ್ಟಂಥಹ ಶಿಡ್ಲಘಟ್ಟದ ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಹೊರಟಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಆರು ಬಾರಿಯಿಂದ ಕೆ.ಎಚ್.ಮುನಿಯಪ್ಪ ಅವರನ್ನು ಆಯ್ಕೆ ಮಾಡುತ್ತಾ ಬಂದಿದ್ದರೂ ಈ ಕ್ಷೇತ್ರಕ್ಕೆ ಯಾವ ಶಾಶ್ವತ ಕೊಡುಗೆಯನ್ನೂ ನೀಡಿಲ್ಲ. ಅವರ ಕೊಡುಗೆಯೇನಿದ್ದರೂ ಪಕ್ಷದಲ್ಲಿ ಬೆಳೆಯುವವರನ್ನು ಮೂಲೆಗುಂಪು ಮಾಡುವುದಾಗಿದೆ. ಅವರ ವರ್ಷಾನುಗಟ್ಟಲೆಯ ತಂತ್ರಗಾರಿಕೆಯು ಜನರಿಗೆ ಮನವರಿಕೆಯಾಗಿದೆ. ನರೇಂದ್ರ ಮೋದಿಯವರ ಅಲೆಯಲ್ಲಿ ಈ ಬಾರಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಜನರು ಕೆ.ಎಚ್.ಮುನಿಯಪ್ಪ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವೀರಯ್ಯನವರು ಮೊದಲು ಮುನಿಸಿಕೊಂಡಿದ್ದು ನಿಜವೇ ಆದರೂ ನಮಗೆಲ್ಲಾ ಪಕ್ಷ ಹಾಗೂ ಅದರ ಸಿದ್ದಾಂತ ದೊಡ್ಡದೆಂದು ಈಗಾಗಲೇ ಪತ್ರಿಕಾ ಹೇಳಿಕೆಯನ್ನು ಅವರು ನೀಡಿದ್ದು, ನಾವೆಲ್ಲಾ ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಾಗಿ ನುಡಿದರು.
ನರೇಂದ್ರಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಪ್ರಗತಿಯತ್ತ ಸಾಗಬೇಕೆಂಬ ಆಶಯದಿಂದ ಜನರು ಆಶೀರ್ವದಿಸುತ್ತಿದ್ದಾರೆಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರು ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮತಯಾಚಿಸಿದರು.
ಬಿ.ಜೆ.ಪಿ ಮುಖಂಡರಾದ ಕೃಷ್ಣಾರೆಡ್ಡಿ, ಸುರೇಂದ್ರಗೌಡ, ಶಿವಕುಮಾರಗೌಡ, ಸದಾಶಿವ, ಲೋಕೇಶ್ಗೌಡ, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ರಮೇಶ್ಬಾಯಿರಿ, ಕೆಂಪರೆಡ್ಡಿ, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ಯಾಟ್ ಫಿಶ್ ಸಾಗಿಸುತ್ತಿದ್ದ ಲಾರಿ ಪೊಲೀಸರ ವಶ
ನಿಷೇಧಿತ ಕ್ಯಾಟ್ ಫಿಶ್ ಅಥವಾ ಮಾರ್ವೆ ಮೀನನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಶಿಡ್ಲಘಟ್ಟದ ಚೆಕ್ಪೋಸ್ಟ್ನಲ್ಲಿ ಪೊಲೀಸರು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.
ಇಡೀ ಲಾರಿಯನ್ನೇ ಪ್ಲಾಸ್ಟಿಕ್ ಶೀಟ್ ಬಳಸಿ ತೊಟ್ಟಿಯಂತೆ ಮಾಡಿ ಅದರ ತುಂಬಾ ನೀರು ತುಂಬಿಸಿ ಅದರಲ್ಲಿ ಕ್ಯಾಟ್ ಫಿಶ್ ತುಂಬಿಸಿ ಸಾಗಾಣಿಕೆ ಮಾಡುತ್ತಿದ್ದುದನ್ನು ಚುನಾವಣಾ ಪ್ರಯುಕ್ತ ಮಾಡಿರುವ ಚೆಕ್ಪೋಸ್ಟ್ನಲ್ಲಿದ್ದ ಪೊಲೀಸರು ಹಿಡಿದಿದ್ದಾರೆ. ಮಧ್ಯಪ್ರದೇಶದ ರಿಜಿಸ್ಟ್ರೇಶನ್ ಇರುವ ಲಾರಿಯಲ್ಲಿ ತಾಲ್ಲೂಕಿನ ಕ್ಯಾಟ್ ಫಿಷ್ ಸಾಕಾಣಿಕೆ ತೊಟ್ಟಿಯಿಂದ ಮೀನುಗಳನ್ನು ಬಾಂಬೆಗೆ ಸಾಗಿಸುತ್ತಿರುವುದಾಗಿ ಲಾರಿ ಚಾಲಕ ಅವತಾರ್ ಸಿಂಗ್ ತಿಳಿಸಿದ್ದು, ಇದನ್ನು ಖರೀದಿಸಿದವರು ಯಲಹಂಕದ ರಜಾಕ್ಪಾಳ್ಯದ ನಿವಾಸಿ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನು ತುಂಬಿರುವ ಲಾರಿಯನ್ನು ಪೊಲೀಸರು ತಹಶೀಲ್ದಾರ್ ಅವರ ವಶಕ್ಕೆ ಒಪ್ಪಿಸಿದ್ದು, ಅವರು ಮೀನುಗಾರಿಕೆ ಇಲಾಖೆಗೆ ನೀಡಿದರು. ಮೀನುಗಾರಿಕೆ ಇಲಾಖೆಯವರು ದೊಡ್ಡ ಗುಂಡಿ ತೋಡಿ ಅದರಲ್ಲಿ ಮೀನುಗಳನ್ನು ಹಾಕಿ ಮುಚ್ಚುವ ಮೂಲಕ ನಾಶಪಡಿಸುವುದಾಗಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಹಲವೆಡೆ ನಿಷೇಧಿತ ಕ್ಯಾಟ್ ಫಿಶ್ ಅಥವಾ ಮಾರ್ವೆ ಮೀನನ್ನು ಸಾಕುತ್ತಿರುವ ಬಗ್ಗೆ ಮಾಹಿತಿಯಿದ್ದರೂ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳದ ಕಾರಣ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಚುನಾವಣೆ ಇಲ್ಲದಿದ್ದಲ್ಲಿ ಇದನ್ನು ಹಿಡಿಯುತ್ತಿರಲಿಲ್ಲ ಮತ್ತು ಯಾರಿಗೂ ತಿಳಿಯುತ್ತಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.




