ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮತ್ತು ಶಿಡ್ಲಘಟ್ಟ ಮಾಜಿ ಶಾಸಕ ವಿ.ಮುನಿಯಪ್ಪ ನಡುವಿನ ಮುಸುಕಿನ ಗುದ್ದಾಟ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬಹಿರಂಗಗೊಂಡು ಚರ್ಚೆಗೆ ಗ್ರಾಸವಾಯಿತು.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿ.ಮುನಿಯಪ್ಪ ಅವರಿಗೆ ಕೆ.ಎಚ್.ಮುನಿಯಪ್ಪ, ಅವರ ಕುಟುಂಬದವರಿಂದ ಹಾಗೂ ಬೆಂಬಲಿಗರಿಂದ ಮತದಾರರಲ್ಲಿ ವಿ.ಮುನಿಯಪ್ಪ ಅವರ ವಿರುದ್ಧ ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ಬಿತ್ತಿ ಸೋಲಲು ಕಾರಣರಾದರೆಂದು ಕಳೆದೊಂದು ವರ್ಷದಿಂದಲೂ ಕಾರ್ಯಕರ್ತರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಸಂಗತಿ ಹಾಗೂ ಇವರ ನಡುವಿನ ಮನಸ್ತಾಪ ಇಂದಿನ ಸಭೆಯಲ್ಲಿ ಕಾರ್ಯಕರ್ತರ ಮುಂದೆ ಸ್ಪೋಟಗೊಂಡಿತು.
ಪಟ್ಟಣದ ಕಾಂಗ್ರೆಸ್ ಭವನದ ಮುಂದೆ ಬುಧವಾರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಬಂದಿದ್ದ ಸಚಿವ ರೋಷನ್ ಬೇಗ್, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಹಾಗೂ ನೆರೆದಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದ ಸಭೆಯಲ್ಲಿ ಮಾತನಾಡಿದ ಕೆ.ಎಚ್.ಮುನಿಯಪ್ಪ, ‘ವಿ.ಮುನಿಯಪ್ಪ ಅವರಿಗೆ ನಮ್ಮ ಕಡೆಯಿಂದ ದ್ರೋಹವಾಗಿಲ್ಲ. ಅವರು ಹೇಳಿದ ಎಲ್ಲಾ ಕೆಲಸಗಳನ್ನೂ ಮಾಡಿಕೊಡುತ್ತಾ ಬಂದಿದ್ದೇನೆ. ಇವರಿಗೆ ನಾನು ದ್ರೋಹ ಬಗೆದಿಲ್ಲವೆಂದು ಯಾವ ದೇವಸ್ಥಾನದಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ. ಖುರಾನ್ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಭಾವೋದ್ರೇಕದಿಂದ ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರೊಂದಿಗೆ ಸೇರಿ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇವೆ. ಲೋಕಸಭಾ ಚುನಾವಣೆ ಮುಗಿದ ನಂತರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಿ.ಮುನಿಯಪ್ಪ ಅವರಿಗೆ ಸೂಕ್ತ ಸ್ಥಾನಮಾನ ಕೊಡಿಸುವುದಾಗಿ ತಿಳಿಸಿದರು.
‘ದೇವರ ಬಗ್ಗೆ ನಂಬಿಕೆಗಿಂತ ಕಳೆದ ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಯಾರು ಯಾವ ರೀತಿ ನಡೆದುಕೊಂಡರೆಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆ.ಎಚ್.ಮುನಿಯಪ್ಪ ಅವರು ರಾಜಕೀಯ ಪ್ರವೇಶಿಸಿದಾಗ ಇದ್ದ ಪರಿಸ್ಥಿತಿಯೇ ಬೇರೆ. ಈಗ ಅವರು ನನ್ನಂಥ ನೂರು ಜನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿದ್ದಾರೆ. ಆದರೂ ರಾಜಕೀಯವಾಗಿ ನನಗೆ ಇದುವರೆಗೂ ಅವರಿಂದ ಸಹಾಯವಾಗಿಲ್ಲ. ನಾನು ಶಾಸಕನಾಗಿದ್ದಾಗ ಕೆ.ಎಚ್.ಮುನಿಯಪ್ಪ ಅವರು ತಮ್ಮ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡವು. ಆದರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪರವಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪರವಾಗಿ ಮತಯಾಚಿಸುತ್ತೇನೆ’ ಎಂದು ಮಾಜಿ ಶಾಸಕ ವಿ.ಮುನಿಯಪ್ಪ ಮಾರ್ಮಿಕವಾಗಿ ಕೆ.ಎಚ್.ಮುನಿಯಪ್ಪ ಅವರಿಗೆ ತಿಳಿಸಿದರು.
ಕಾರ್ಯಕರ್ತರ ಸಭೆಯ ಮುನ್ನ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮತ್ತು ಮುಖಂಡರು ಪಟ್ಟಣದ ಗಾರ್ಡನ್ ರಸ್ತೆಯಲ್ಲಿರುವ ಸೈಯದ್ ಸರ್ಮಸ್ತ್ ಹುಸೇನಿ ಶಾವಾಲಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವ ರೋಷನ್ ಬೇಗ್, ಶಾಸಕರಾದ ಡಾ.ಸುಧಾಕರ್, ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಹನುಮಂತಯ್ಯ, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿ ಕೆ.ಎಚ್.ಮುನಿಯಪ್ಪ ಪರವಾಗಿ ಮತಯಾಚಿಸಿದರು.
ಕಾಂಗ್ರೆಸ್ ಮುಖಂಡರಾದ ಮುನಿಕೃಷ್ಣಪ್ಪ, ಎಂ.ಶಶಿಧರ್, ಎಸ್.ಎಂ.ನಾರಾಯಣಸ್ವಾಮಿ, ಗುಡಿಯಪ್ಪ, ಬಿಸೇಗೌಡ, ಮೌಲಾ, ಸುಬ್ರಮಣಿ, ಎಚ್.ಎಂ.ಮುನಿಯಪ್ಪ, ತಮ್ಮಣ್ಣ, ಮುನೇಗೌಡ, ಸತೀಶ್ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಸುಕಿನ ಗುದ್ದಾಟ ಬಹಿರಂಗ
ತಲದುಮ್ಮನಹಳ್ಳಿ ಗ್ರಾಮದಲ್ಲಿ ಚುನಾವಣೆ ಭಹಿಷ್ಕಾರ
ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ಅಂತರಜಲ ಕುಸಿದಿದ್ದು. ಕುಡಿಯಲು, ಕೃಷಿ ಮಾಡಲು ನೀರಿಲ್ಲದೆ ಹಾಹಾಕಾರ ಎದ್ದಿದೆ. ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ನಾವು ಇರುವ ಊರನ್ನು ಬಿಟ್ಟು ಗುಳೇ ಹೋಗಬೇಕಾಗುತ್ತದೆ. ನಾವು ಕೃಷಿ ಮಾಡಿಕೊಂಡು ಸ್ವಾಭಿಮಾನಿಗಳಾಗಿ ಬದುಕಲು ನಮಗೆ ಶಾಶ್ವತ ನೀರು ಬೇಕೇಬೇಕು. ಆದರೆ ನಮ್ಮನ್ನು ಆಳುವ ಸರ್ಕಾರಗಳು ಕಳೆದ ಮೂವತ್ತು ವರ್ಷಗಳಿಂದ ಆಶ್ವಾಸನೆಗಳನ್ನಷ್ಟೇ ನೀಡುತ್ತಾ ಬಂದಿದ್ದಾರೆ. ಇನ್ನು ನಮಗೆ ತಾಳ್ಮೆ ಇಲ್ಲ. ಇಡೀ ಕ್ಷೇತ್ರದ ಮತದಾರ ಬಂಧುಗಳು ಮತದಾನ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡಿದ್ದೇ ಆದಲ್ಲಿ ನಮ್ಮ ಜನಪ್ರತಿನಿಧಿಗಳಿಗೆ ಬುದ್ಧಿ ಬರುತ್ತದೆ. ಶಾಶ್ವತ ನೀರಾವರಿ ಯೋಜನೆ ಜಾರಿಯಾಗುತ್ತದೆ ಎಂದು ತಲದುಮ್ಮನಹಳ್ಳಿಯ ಶಾಶ್ವತ ನೀರಾವರಿ ಹೋರಾಟಗಾರರು ಕರಪತ್ರದ ಮೂಲಕ ಜನರಲ್ಲಿ ಮನವರಿಕೆ ಮಾಡುತ್ತಿದ್ದರು.
‘ಲೋಕಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೇ, ಎಲ್ಲಾ ಪಕ್ಷಗಳ ಮುಖಂಡರೇ, ಬಯಲುಸೀಮೆಯ ಪ್ರದೇಶಕ್ಕೆ ಪರಮಶಿವಯ್ಯನವರ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡದ ಹೊರತು ನಮ್ಮೂರಿನ ಪ್ರಜ್ಞಾವಂತ ಮತದಾರರಲ್ಲಿ ಮತಯಾಚಿಸುವ ಹಕ್ಕು ನಿಮಗಿರುವುದಿಲ್ಲ. ನಾವು ನಿಮಗೆ ಮತಹಾಕುವುದಿಲ್ಲ’ ಎಂದು ತಲದುಮ್ಮನಹಳ್ಳಿ ಗ್ರಾಮಸ್ಥರು ಬ್ಯಾನರನ್ನು ಮತಯಾಚಿಸಲು ಬರುವವರ ಮುಖಕ್ಕೆ ರಾಚುವಂತೆ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಕಟ್ಟಿದ್ದರು.
ತಲದುಮ್ಮನಹಳ್ಳಿ ಗ್ರಾಮಸ್ಥರ ಮತದಾನದ ಬಹಿಷ್ಕಾರದ ವಿಷಯ ತಿಳಿದು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಹಾಯಕ ಚುನಾವಣಾ ಅಧಿಕಾರಿ ಯೋಗೇಶ್, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಗ್ರಾಮಸ್ಥರ ಉದ್ದೇಶ ಹಾಗೂ ನೀರಿಗಾಗಿನ ಹೋರಾಟದ ಬಗ್ಗೆ ಕೇಳಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಚುನಾವಣೆಗೆ ನಿಂತ ಅಭ್ಯರ್ಥಿಗಳು ಸೂಕ್ತರಲ್ಲವೆಂದು ಅನ್ನಿಸಿದಲ್ಲಿ ಮತಯಂತ್ರದಲ್ಲಿ ನೋಟಾ ಎಂಬ ಬಟನ್ ಒತ್ತುವುದರಿಂದ ತಮ್ಮ ಇಚ್ಛೆಯನ್ನು ಅಭಿವ್ಯಕ್ತಿಸಬಹುದು. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಚುನಾವಣೆಯನ್ನು ಬಹಿಷ್ಕರಿಸುವುದು ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡುವಂತಿಲ್ಲ’ ಎಂದು ಹೇಳಿ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರು.
ಈ ಬಾರಿ ಲೋಕಸಭೆಗೆ ನಿಂತ ಎಲ್ಲಾ ಅಭ್ಯರ್ಥಿಗಳನ್ನೂ ತಿರಸ್ಕರಿಸುತ್ತೇವೆ. ಮತಯಂತ್ರದಲ್ಲಿ ನೋಟಾ ಎಂಬ ಬಟನ್ ಒತ್ತುವುದರ ಮೂಲಕ ನಾವು ಶಾಶ್ವತ ನೀರಾವರಿಗಾಗಿ ಒತ್ತಾಯಿಸುತ್ತೇವೆ. ನಮ್ಮ ಗ್ರಾಮದಿಂದಲೇ ಪ್ರಾರಂಭವಾಗಲಿರುವ ಈ ಹೋರಾಟ ಬರಪೀಡಿತ ಜಿಲ್ಲೆಯಾದ್ಯಂತ ಹಬ್ಬಿದಲ್ಲಿ ಶಾಶ್ವತ ನೀರಾವರಿಗಾಗಿ ಹೋರಾಟ ಬಲಗೊಳ್ಳುತ್ತದೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆಯಾಗುತ್ತದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಭಕ್ತರಹಳ್ಳಿ ಬೈರೇಗೌಡ, ನಂಜಪ್ಪ, ತಲದುಮ್ಮನಹಳ್ಳಿ ಗ್ರಾಮಸ್ಥರಾದ ಟಿ.ಬಚ್ಚೇಗೌಡ, ಚನ್ನೇಗೌಡ, ಮುನೇಗೌಡ, ಕೆಂಪಣ್ಣ, ಸೌಮ್ಯ, ದೇವರಾಜ್, ಶ್ರೀನಿವಾಸ್, ಮಂಜುನಾಥ್, ಲಕ್ಷ್ಮೀನಾರಾಯಣ್, ಕುಮಾರ್, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ಯಾಸ್ ಸಿಲಿಂಡರನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ರಸ್ತೆ ತಡೆ
ಗ್ಯಾಸ್ ಸಿಲಿಂಡರನ್ನು ಸಮರ್ಪಕವಾಗಿ ನೀಡುತ್ತಿಲ್ಲವೆಂದು ಪಟ್ಟಣದಲ್ಲಿ ನೂರಾರು ಮಂದಿ ಖಾಲಿ ಗ್ಯಾಸ್ ಸಿಲಿಂಡರನ್ನು ರಸ್ತೆಯಲ್ಲಿಟ್ಟು ಭಾನುವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ವಾರಕ್ಕೆರಡು ದಿನ, ಗುರುವಾರ ಮತ್ತು ಭಾನುವಾರ ಸಿಲಿಂಡರ್ ವಿತರಿಸುತ್ತಾರೆ. ಮೊನ್ನೆ ಗುರುವಾರ ಕೊಡದೆ ವಾಪಸ್ ಕಳುಹಿಸಿದರು. ಗ್ರಾಮಾಂತರ ಪ್ರದೇಶಗಳಿಂದ ಖಾಲಿ ಸಿಲಿಂಡರ್ ಹೊತ್ತು ತರುವ ನಾವು ಬೆಳಿಗ್ಗೆ ಐದು ಗಂಟೆಯಿಂದ ಕಾಯುತ್ತಿದ್ದೇವೆ. ಈಗ ನೋಡಿದರೆ ಸಿಲಿಂಡರ್ ಇಲ್ಲವೆನ್ನುತ್ತಿದ್ದಾರೆ. ಹಣ ಪಾವತಿಸಿಕೊಂಡು ರಸೀತಿ ನೀಡಿ ಗ್ರಾಹಕರನ್ನು ಶೊಷಣೆ ಮಾಡುತ್ತಿದ್ದಾರೆಂದು ಜನರು ಆರೋಪಿಸಿದರು.
ಕಾನೂನಿನನ್ವಯ ಗ್ರಾಹಕರ ಮನೆಗಳಿಗೆ ಸಿಲಿಂಡರ್ ತಲುಪಿಸಬೇಕು. ಆದರೆ ಇವರು ಬಯಲಲ್ಲಿ ಬಿಸಿಲಿನಲ್ಲಿ ಗ್ರಾಹಕರನ್ನು ನಿಲ್ಲಿಸಿ ಕಾಯಿಸುತ್ತಾರೆ. ವಿತರಣಾ ಕೇಂದ್ರವು ಒಂದೇ ಇರುವುದರಿಂದ ಗ್ರಾಹಕರಿಗೆ ಸರಿಯಾದ ಸೇವೆಯನ್ನು ಸಲ್ಲಿಸುತ್ತಿಲ್ಲ. ಗ್ರಾಹಕರು ಹೆಚ್ಚಾಗಿರುವುದರಿಂದ ವಿತರಣಾ ಕೇಂದ್ರಗಳನ್ನು ಹೆಚ್ಚಿಸಬೇಕು. ಖಾಲಿ ಸಿಲಿಂಡರ್ ಹೊತ್ತು ಬೆಳಿಗ್ಗೆಯಿಂದ ಕಾಯುತ್ತಿರುವ ನಮಗೆ ವಿತರಕರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಗ್ರಾಹಕರು ಪ್ರತಿಭಟಿಸಿದರು.
ಖಾಲಿ ಸಿಲಿಂಡರುಗಳನ್ನು ಹೊತ್ತು ತಂದ ಗ್ರಾಹಕರು ಪುರಪೋಲಿಸ್ ಠಾಣೆಯ ಮುಂದೆ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ತಾಲ್ಲೂಕು ಕಚೇರಿಯ ಬಳಿ ತೆರಳಿ ಅಲ್ಲಿಯೂ ಪ್ರತಿಭಟಿಸಿದರು.
ವಿತರಕರ ಪರವಾಗಿ ಬಂದ ಮುರಳಿ ಎಂಬುವರು ಲಾರಿ ಬರದಿರುವುದರಿಂದ ಗ್ಯಾಸ್ ಸಿಲಿಂಡರ್ ವಿತರಿಸಲಾಗಿಲ್ಲ ಎಂದು ಲಾರಿಗೆ ಸಂಬಂಧಿಸಿದ ಹಾಗೂ ಸಿಲಿಂಡರಿಗೆ ಸಂಬಂಧಿಸಿದ ಹಣ ಪಾವತಿಸಿರುವ ದಾಖಲೆಗಳನ್ನು ತೋರಿಸಿ ಗ್ರಾಹಕರನ್ನು ಸಮಾಧಾನಗೊಳಿಸಿದರು.
ಚಿಕ್ಕದಾಸೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಮಂಡಲಪೂಜೆ
ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ೪೧ನೇ ದಿನದ ಮಂಡಲ ಪೂಜಾ ಕಾರ್ಯಕ್ರಮವನ್ನು ಶನಿವಾರ ಭಕ್ತಿಭಾವದಿಂದ ಆಚರಿಸಲಾಯಿತು. ಚಿಕ್ಕದಾಸೇನಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಭಕ್ತರು ಮಂಡಲಪೂಜೆಯಲ್ಲಿ ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕದಾಸೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ದಾರ ಮಾಡಿದ ೪೧ನೇ ದಿನವಾದ ಶನಿವಾರ ದೇವಾಲಯದಲ್ಲಿ ಮಂಡಲ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಿನಿಂದಲೇ ನಾನಾ ರೀತಿಯ ಹೋಮ, ಹವನಗಳೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಹಾಗೂ ಗ್ರಾಮಸ್ಥರಿಗೆ ಯಾವುದೇ ಅನಿಷ್ಠಗಳು ಕಾಡದಂತೆ ಮಂಡಲ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.
ಚಿಕ್ಕದಾಸೇನಹಳ್ಳಿ, ಮಾರಪ್ಪನಹಳ್ಳಿ, ಬೀರಪ್ಪನಹಳ್ಳಿ, ಬಸವನಪರ್ತಿ ಮುಂತಾದ ಗ್ರಾಮಗಳಿಂದ ನೂರಾರು ಮಹಿಳೆಯರು ತಂಬಿಟ್ಟಿನ ದೀಪಗಳನ್ನು ತಂದು ದೇವರಿಗೆ ಬೆಳಗಿದರಲ್ಲದೆ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಂತರ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಚಿಕ್ಕದಾಸೇನಹಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಪುರಸಭೆಯ ನೂತನ ಅಧ್ಯಕ್ಷೆ ಮುಷ್ಠರಿ ತನ್ವೀರ್ ಮತ್ತು ಉಪಾಧ್ಯಕ್ಷೆ ಸುಮಿತ್ರಾ ರಮೇಶ್
ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯಲ್ಲಿ 17ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಮುಷ್ಠರಿ ತನ್ವೀರ್ ಅಧ್ಯಕ್ಷೆಯಾಗಿ ಮತ್ತು 8ನೇ ವಾರ್ಡ್ನ ಜೆಡಿಎಸ್ ಸದಸ್ಯೆ ಸುಮಿತ್ರಾ ರಮೇಶ್ ಉಪಾಧ್ಯಕ್ಷೆಯಾಗಿ ಆಯೆ್ಕಯಾದರು. ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿತ್ತು.
ಪರಿಶಿಷ್ಠ ಜಾತಿಯ ಏಕೈಕ ಮಹಿಳಾ ಅಭ್ಯರ್ಥಿ ಜೆಡಿಎಸ್ನ ಸುಮಿತ್ರಾ ರಮೇಶ್ ಬಹುಮತದ ಕೊರತೆಯಿದ್ದರೂ ಉಪಾಧ್ಯಕ್ಷೆಯಾಗುವುದು ಬಹುತೇಕ ಖಚಿತವಾಗಿತ್ತು. 27 ಮಂದಿ ಸದಸ್ಯರಿರುವ ಪುರಸಭೆಯಲ್ಲಿ ಕಾಂಗ್ರೆಸ್–14, ಜೆಡಿಎಸ್–11, ಬಿಜೆಪಿ –1 ಮತ್ತು ಪಕ್ಷೇತರ –1 ಸ್ಥಾನವಿದೆ. ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್ನಿಂದ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಮುಷ್ಠರಿ ತನ್ವೀರ್ ಮತ್ತು ಜೆಡಿಎಸ್ನ ಪ್ರಭಾವತಿ ಸುರೇಶ್ ಸ್ಪರ್ಧಿಸಿದರು. ಮುಷ್ಠರಿ ತನ್ವೀರ್ 15 ಮತ ಗಳಿಸಿ ವಿಜೇತರಾದರೆ, ಪ್ರಭಾವತಿ ಸುರೇಶ್ 14 ಮತ ಪಡೆದು ಪರಾಭವಗೊಂಡರು. ಅಧ್ಯಕ್ಷೆ ಮುಷ್ಠರಿ ತನ್ವೀರ್ ಮತ್ತು ಉಪಾಧ್ಯಕ್ಷೆ ಸುಮಿತ್ರಾ ಮಹೇಶ್ ಅವರನ್ನು ಅಭಿನಂದಿಸಲಾಯಿತು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಶಿರಸ್ತೆದಾರ್ ಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪೂಜಮ್ಮ ದೇವಿಯ ಹೂವಿನ ಕರಗ ಮಹೋತ್ಸವ
ಪಟ್ಟಣದ ಹಳೇ ರೇಷ್ಮೆ ಗೂಡು ಮಾರುಕಟ್ಟೆ ಹಿಂಭಾಗದಲ್ಲಿರುವ ಪೂಜಮ್ಮ ದೇವಿಯ ಹೂವಿನ ಕರಗ ಮಹೋತ್ಸವವನ್ನು ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ಕೀಲುಕುದುರೆ, ಮುತ್ತಿನ ಪಲ್ಲಕ್ಕಿ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಮುಳಬಾಗಿಲ ಎಂ.ಶಂಕರಪ್ಪ ರಾತ್ರಿಯಿಡೀ ಕರಗವನ್ನು ಹೊತ್ತು ನಾಡೋಜ ಮುನಿವೆಂಕಟಪ್ಪನವರ ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು.
ಪಟ್ಟಣದಲ್ಲಿ ಹೋಳಿ ಸಂಭ್ರಮ
ಪಟ್ಟಣದಲ್ಲಿ ಪ್ರೀತಿ ಮತ್ತು ಸ್ನೇಹದ ಸಂಕೇತವಾದ ಬಣ್ಣದ ಹಬ್ಬ ಹೋಳಿಯನ್ನು ಸೋಮವಾರ ಸಡಗರದಿಂದ ಆಚರಿಸಿದ್ದಲ್ಲದೇ ಕಾಮನ ಮೆರವಣಿಗೆಯನ್ನು ನಡೆಸಿದರು. ಮಕ್ಕಳು ಹಿರಿಯರೆಂಬ ಬೇಧವಿಲ್ಲದೆ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದರು. ಎಳೆಯ ಹುಡುಗರಂತೂ ಬೀದಿ ಬೀದಿ ಸುತ್ತುತ್ತಾ ತಮ್ಮ ಸ್ನೇಹಿತರೊಂದಿಗೆ ಬಣ್ಣವನ್ನು ಹಾಕಿಕೊಳ್ಳುತ್ತಾ ಆನಂದಿಸಿದರು.
ಪಟ್ಟಣದ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾಮಣ್ಣ ಮತ್ತು ರತಿದೇವಿಯರ ವಿಗ್ರಹಗಳ ಮರೆವಣಿಗೆಯಲ್ಲಿ ಚಿಣ್ಣರು, ಯುವಕರು ಸೇರಿದಂತೆ ಹಿರಿಯರು ಪರಸ್ಪರ ಬಣ್ಣ ಎರಚಿ ಹೋಳಿಯಲ್ಲಿ ಮಿಂದೆದ್ದರು. ಪ್ರಮುಖ ಬೀದಿಗಳಲ್ಲಿ ನಡೆಸಿದ ಮೆರವಣಿಗೆಯ ನಂತರ ಪಟ್ಟಣದ ಹೂವೃತ್ತದಲ್ಲಿ ಇದುವರೆಗೂ ಸಂಗ್ರಹಿಸಿದ್ದ ಉರುವಲುಗಳನ್ನು ಹಾಗೂ ಕಾಮನ ಬೊಂಬೆಯನ್ನು ಬೆಂಕಿ ಹಚ್ಚಿ ಭಸ್ಮ ಮಾಡಿದ್ದಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹೋಳಿ ಹುಣ್ಣಿಮೆ ಅಂಗವಾಗಿ ಪಟ್ಟಣದಲ್ಲಿ ಎರಡು ದಿನಗಳಿಂದ ನಡೆದ ಕಾಮನ ಮೆರವಣಿಗೆ ಆಕರ್ಷಕವಾಗಿತ್ತು. ರಾವಣಾಸುರ, ಬೇಡರಕಣ್ಣಪ್ಪ, ಆಂಜನೇಯ, ವೀರಬ್ರಹ್ಮೇಂದ್ರಸ್ವಾಮಿ, ಕೃಷ್ಣ, ಪಾಳೇಗಾರ, ಮಂತ್ರವಾದಿ ವೇಷಗಳು ವಿಶೇಷ ಆಕರ್ಷಣೆಯಾಗಿತ್ತು.
ನಗರ್ತಮಂಡಳಿಯ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಎಸ್.ಎಸ್.ನಾಗರಾಜ್, ಕೆ.ಎಂ.ವಿನಾಯಕ, ಕೆ.ಸಿ.ಸುರೇಶ್ಬಾಬು, ಮಂಜುನಾಥ್, ದೇವರಾಜ್, ನವೀನ್, ಮುಕೇಶ್ ಮತ್ತಿತರರು ಹಾಜರಿದ್ದರು.
ಚಿಕ್ಕದಾಸರಹಳ್ಳಿ ಬ್ಯಾಟರಾಯಸ್ವಾಮಿಯ ಬ್ರಹ್ಮರಥೋತ್ಸವ
ಬಂಬೈನೂರ ಎರಡು ವರ್ಷಗಳ ಇತಿಹಾಸ ಪ್ರಸಿದ್ದ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿ ಗುಟ್ಟದ ಮೇಲಿರುವ ಬ್ಯಾಟರಾಯಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಚಾಲನೆ ನೀಡುವುದರೊಂದಿಗೆ ನಡೆಯಿತು. ಬ್ಯಾಟರಾಯಸ್ವಾಮಿ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.
ನೂರಾರು ಭಕ್ತರು ಸುತ್ತ ಮುತ್ತಲ ಗ್ರಾಮಗಳು ಮತ್ತು ತಾಲ್ಲೂಕು ಕೇಂದ್ರಗಳಿಂದ ಆಗಮಿಸಿದ್ದರು. ತೇರಿಗೆ ದವನದ ಜೊತೆ ಬಾಳೆಹಣ್ಣನ್ನು ಅರ್ಪಿಸುತ್ತ, ತೇರನ್ನು ಗುಟ್ಟದ ಪ್ರದಕ್ಷಿಣೆ ಮಾಡಿಸಿದರು. ವಾದ್ಯಗಳೊಂದಿಗೆ ವೀರಗಾಸೆ ಮತ್ತು ಡೊಳ್ಳುಕುಣಿತ ರಥದ ಮುಂದೆ ಎಲ್ಲರನ್ನೂ ಆಕರ್ಷಿಸುತ್ತಿತ್ತು.
ವಿಜಯನಗರ ಕಾಲದ ಈ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡ ಅಥವಾ ದಿಬ್ಬದ ಮೇಲೆ ವಿಸ್ತಾರವಾಗಿ ಹರಡಿಕೊಂಡಿದೆ. ಬ್ಯಾಟರಾಯಸ್ವಾಮಿಯು ನಾಯಕ ಜನಾಂಗದವರ ಕುಲದೈವವಾಗಿದ್ದು, ಈ ದೇವರ ಪೂಜಾ ಕೈಂಕರ್ಯಗಳನ್ನು ನಾಯಕ ಜನಾಂಗದವರೇ ನಡೆಸುತ್ತಿರುವರು.
ದೇವಾಲಯವು ವಿಶಾಲವಾದ ಪ್ರಾಕಾರ, ಗರ್ಭಗೃಹ, ಅರ್ಧಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡವು ಅಲಂಕಾರಿಕವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಬಿಂಬವನ್ನು ಹೊಂದಿದೆ ಹಾಗೂ ದ್ವಾರದ ಎರಡೂ ಕಡೆ ದ್ವಾರಪಾಲಕರ ವಿಗ್ರಹಗಳಿವೆ. ಬ್ಯಾಟರಾಯಸ್ವಾಮಿಯ ವಿಗ್ರಹವು ಸುಮಾರು ೪.೫ ಅಡಿ ಎತ್ತರವಿದೆ. ಈ ವಿಗ್ರಹವು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಅಭಯ ಹಾಗೂ ಗದೆಗಳನ್ನು ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿಯ ಜೊತೆಗೆ ಶ್ರೀದೇವಿ ಭೂದೇವಿಯರ ಸುಂದರ ಶಿಲ್ಪಗಳು ಆಕರ್ಷಕವಾಗಿವೆ.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ದೇವಾಲಯದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಯರ್ರಪ್ಪ, ಪಾಪಣ್ಣ, ಲೋಕೇಶ್, ಲಕ್ಷ್ಮಣಮೂರ್ತಿ, ಆಗಮಿಕರಾದ ವಿ.ಎಸ್.ಕೇಶವಭಟ್ಟಾಚಾರ್ಯ, ವೈ.ಎನ್.ದಾಶರಥಿ, ಜಿ.ಕೆ.ವಾಸುದೇವ, ಆಂಜನಪ್ಪ, ರಂಗಪ್ಪ ಮತ್ತಿತರರು ಹಾಜರಿದ್ದರು.
ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ವಾಸವಿ ಕಲ್ಯಾಣ ಮಂಟಪದ ಬಳಿ ಬೆಳಿಗ್ಗೆ ಪ್ರಧಾನ ನ್ಯಾಯಾಧೀಶರಾದ ಎಸ್.ಮಹೇಶ್ ರಾಷ್ಟ್ರ ಧ್ವಜಾರೋಹಣ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ನಾಡಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ ಪರಿಷತ್ತಿನ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು.
ಸಮ್ಮೇಳನಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರನ್ನು ತೆರೆದ ಜೀಪಿನಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ನಾಡಧ್ವಜಗಳ ನಡುವಿನಿಂದ ಕರೆತರಲಾಯಿತು. ಮೆರವಣಿಗೆಗೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು. ಪೂರ್ಣಕುಂಭ ಹೊತ್ತ ಶಾಲಾ ವಿದ್ಯಾರ್ಥಿನಿಯರು, ವಿವಿಧ ಶಾಲೆಗಳ ವಾದ್ಯವೃಂದಗಳು, ವಾಲಗ ಡೋಲುಗಳ ಮಂಗಳವಾದ್ಯ, ಡೊಳ್ಳು ಕುಣಿತ, ಗಾರುಡಿಗೊಂಬೆ ಮುಂತಾದ ಕಲಾತಂಡಗಳೊಂದಿಗೆ ಮೆರವಣಿಗೆ ಕಳೆಗಟ್ಟಿದ್ದು, ರಸ್ತೆಯುದ್ದಕ್ಕೂ ಜನರು ನಿಂತು ನೋಡಿದರು.
ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನವನ್ನು ರಾಷ್ಟ್ರಕವಿ ಡಾ.ಜಿ.ಎಸ್ ವೇದಿಕೆಯಲ್ಲಿ ಉದ್ಘಾಟಿಸಿದ ನಂತರ ಸಮ್ಮೇಳನಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಮಾತನಾಡಿ, ’ಮಾತೃಭಾಷೆ ಅರಿವಿನ ದಾರಿ. ಅದರ ಮಹತ್ವವನ್ನು ಅರಿಯಬೇಕು. ಪ್ರಯೋಜನವನ್ನು ಮನಗಾಣಬೇಕು. ಪೋಷಕರು ಮೊದಲು ಜಾಗೃತರಾಗಬೇಕು. ಮಳೆಯ ಅಭಾವದಿಂದ, ಕೆರೆಗಳಲ್ಲಿ ನೀರಿಲ್ಲದೆ, ಅಂತರ್ಜಲ ಬತ್ತಿದ್ದು, ಫ್ಲೋರೈಡ್ ಸಮಸ್ಯೆ ಕಾಡುತ್ತಿದೆ. ನಮ್ಮ ಕೃಷಿಗೆ ಅಗತ್ಯವಾದ ನೀರನ್ನು ಒದಗಿಸಿದರೆ ಚಿನ್ನದಂಥ ಬೆಳೆಯನ್ನು ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗಬಲ್ಲರು. ಸರ್ಕಾರ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಸಮುದ್ರದ ಪಾಲಾಗುವ ನೇತ್ರಾವತಿ ನೀರನ್ನು ತಂದು ಬರಪೀಡಿತ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸಬೇಕು’ ಎಂದು ನುಡಿದರು.
ತಮ್ಮ ಅಧ್ಯಕ್ಷ ಭಾಷಣದಲ್ಲಿ ಶಿಡ್ಲಘಟ್ಟದ ಇತಿಹಾಸ, ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು, ತಾಲ್ಲೂಕಿನ ವಿಶೇಷತೆಗಳು, ಸಾಹಿತ್ಯ, ಸಂಸ್ಕೃತಿ, ಜನಪದ ಕಲಾ ಪ್ರಕಾರಗಳು, ವೈಶಿಷ್ಟ್ಯಗಳು, ದೇವಾಲಯಗಳು, ತಾಲ್ಲೂಕಿನಲ್ಲಿ ಜನಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು, ಬದಲಾಗುತ್ತಿರುವ ಆಚಾರ ವಿಚಾರ ಮತ್ತು ಸಂಸ್ಕೃತಿ, ಜಿಲ್ಲೆಯ ಭಾರತರತ್ನರು, ಕನ್ನಡ ಭಾಷೆ ಬಗ್ಗೆ ಅವರು ವಿಸ್ತೃತವಾಗಿ ಮಾತನಾಡಿದರು.
ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಎಲ್.ಹನುಮಂತರಾವ್, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಕೃಷ್ಣ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ್, ರಾಮಪ್ರಸಾದ್, ಎಸ್.ವಿ.ನಾಗರಾಜರಾವ್, ಕೆ.ಎಂ.ವಿನಾಯಕ, ಬಿ.ಆರ್.ಅನಂತಕೃಷ್ಣ, ಚಿಕ್ಕವೆಂಕಟರಾಯಪ್ಪ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

