14.1 C
Sidlaghatta
Thursday, December 25, 2025
Home Blog Page 1049

ಗುಡಿಹಳ್ಳಿಯ ಪಾರ್ವತಾಂಬ ಸಮೇತ ಸೋಮೇಶ್ವರ ದೇವಾಲಯದಲ್ಲಿ ರಥೋತ್ಸವ

0

ಮಾಘ ಮಾಸ ಬಹುಳ ಶುಕ್ರವಾರ ವಿಶೇಷ ಪೂಜೆ, ಹೋಮ, ಅಭಿರ್ಜನ್ ಮಹೂರ್ತದಲ್ಲಿ ಮಧ್ಯಾಹ್ನ ಬ್ರಹ್ಮರಥೋತ್ಸವವನ್ನು ವೀರಗಾಸೆ ಮುಂತಾದ ಕಲಾ ತಂಡಗಳು ಹಾಗೂ ವಾಂದ್ಯ ವೃಂದ ಸಮೇತ ನಡೆಸಲಾಯಿತು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಯಿತು.
ಸುತ್ತಮುತ್ತಲ ಗ್ರಾಮಗಳು ಹಾಗೂ ತಾಲ್ಲೂಕುಗಳಿಂದ ನೂರಾರು ಭಕ್ತರು ಪೂಜೆ ಹಾಗೂ ರಥೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮಗಳವರು ಪಾನಕ ಬಂಡಿಗಳನ್ನು ತಂದು ಬಿಸಿಲಿನಲ್ಲಿ ದಣಿದ ಭಕ್ತರಿಗೆ ಉಚಿತವಾಗಿ ವಿತರಿಸಿದರು.
ರಥೋತ್ಸವಕ್ಕೆ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮತ್ತು ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಸುಮಾರು ಆರು ನೂರು ವರ್ಷಗಳ ಇತಿಹಾಸವಿರುವ ಸೋಮೇಶ್ವರ ದೇವಾಲಯದ ಆವರಣದಲ್ಲಿ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಹಾಗೂ ಶಾಸನ ಕಲ್ಲುಗಳಿವೆ. ರಥೋತ್ಸವದ ಅಂಗವಾಗಿ ಮಹಿಳೆಯರು ಮನೆಮನೆಯಿಂದಲೂ ದೀಪಗಳನ್ನು ತಂದು ದೇವರಿಗೆ ಬೆಳಗಿದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು.
ಗುಡಿಹಳ್ಳಿ ಜಿ.ವಿ.ಮುನಿವೆಂಕಟಸ್ವಾಮಪ್ಪ, ಚಿಕ್ಕವೆಂಕಟರೆಡ್ಡಿ, ಕಮಲಮ್ಮ, ಅಬ್ಲೂಡು ಬಿ.ಆಂಜನೇಯ, ಅರ್ಚಕ ಗಾಣಿಗರಹೊಸಹಳ್ಳಿಯ ಎಸ್.ನಂಜುಂಡಯ್ಯ, ಆಗಮಿಕರಾದ ಆರ್.ಗಣೇಶ್ ದೀಕ್ಷಿತ್, ಚನ್ನಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಬೆಳ್ಳೂಟಿ ಗ್ರಾಮದಲ್ಲಿ ಆರ್.ಓ. ಪದ್ಧತಿಯ ಶುದ್ಧಿಕರಿಸಿದ ನೀರು ಸರಬರಾಜು ಘಟಕ

0

ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗ್ರಾಮದಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಆರ್.ಓ. ಪದ್ಧತಿಯ ಶುದ್ಧಿಕರಿಸಿದ ನೀರು ಸರಬರಾಜು ಘಟಕವನ್ನು ಉದ್ಘಾಟಿಸಲಾಯಿತು.
ಸುಮಾರು ಎಂಟು ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಆರ್.ಓ. ಘಟಕವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ಈಗಾಗಲೇ ನಮ್ಮ ಭಾಗದಲ್ಲಿ ಅಂತರ್ಜಲ ಕುಸಿದಿದೆ. 1500 ಅಡಿಯವರೆಗೂ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದು, ಎಲ್ಲೆಡೆ ಫ್ಲೋರೈಡ್ ವ್ಯಾಪಿಸಿದೆ. ತಾಯಿಯ ಹಾಲಿನಲ್ಲೂ ಫ್ಲೋರೈಡ್ ಅಂಶಗಳಿವೆ ಎಂಬುದು ದೃಢಪಟ್ಟಿದೆ. ಹಾಗಾಗಿ ಜಿಲ್ಲಾ ಪಂಚಾಯಿತಿಯ ವತಿಯಿಂದ ಪ್ರತಿ ಪಂಚಾಯಿತಿಯಲ್ಲೂ ಫೋರೈಡ್ ಅಂಶ ಹೆಚ್ಚಿರುವ ಎರಡು ಹಳ್ಳಿಗಳನ್ನು ಗುರುತಿಸಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಗ್ರಾಮಸ್ಥರೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಕುಡಿಯಲು ಮಾತ್ರ ಈ ನೀರನ್ನು ಬಳಸಿ. ನೀರನ್ನು ಮಿತವ್ಯಯವಾಗಿ ಬಳಸಿ, ಅಮೂಲ್ಯವಾದ ನೀರನ್ನು ಪೋಲು ಮಾಡಬಾರದು. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗೂ ಇಂಥಹ ನೀರು ಶುದ್ಧಿಕರಣ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಮುಖಂಡರಾದ ನಂದಮುನಿಕೃಷ್ಣಪ್ಪ, ಆರ್.ಶ್ರೀನಿವಾಸ್, ಬೆಳ್ಳೂಟಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹನುಮೇಗೌಡ, ಬೈರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್, ಕಾರ್ಯದರ್ಶಿ ಶ್ರೀನಾಥ, ಕೆಂಪರೆಡ್ಡಿ, ಬೆಳ್ಳೂಟಿ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಯಕ್ಷಗಾನದ ಪ್ರಸಂಗ

0

ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದ ಯಕ್ಷಗಾನವನ್ನು ತಾಲ್ಲೂಕಿನ ಮಳ್ಳೂರಿನ ಹೊರವಲಯದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡದ ಕಲಾವಿದರೇ ನಡೆಸಿಕೊಟ್ಟ ‘ಶ್ವೇತ ಕುಮಾರ ಚರಿತ್ರೆ’ ಎಂಬ ಪ್ರಸಂಗವನ್ನು ಅಲ್ಲಿನ ಭಾಷಾ ಸೊಗಡು, ವೇಷ, ಕಲಾವಿದರ ನೃತ್ಯ, ಹಿಮ್ಮೇಳದ ತಾಳಮದ್ದಲೆ ಸಂಗೀತ, ಹಾಡುಗಾರಿಕೆ, ಹಾವಭಾವವನ್ನೆಲ್ಲಾ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಜನರು ನೋಡಿ ಆನಂದಿಸಿದರು.
ಸಾಯಿನಾಥ ಜ್ಞಾನ ಮಂದಿರದಲ್ಲಿರುವ ಜಲಕಂಠೇಶ್ವರಸ್ವಾಮಿಗೆ ರುದ್ರಾಭಿಷೇಕ ಮಾಡಿ, ಭಕ್ತರಿಗೆಲ್ಲಾ ಪ್ರಸಾದ ವಿನಿಯೋಗಿಸಲಾಯಿತು. ಸಾಯಿಬಾಬಾ, ಗಣಪತಿ ಮತ್ತು ಸುಬ್ರಮಣ್ಯಸ್ವಾಮಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಿವರಾತ್ರಿಯ ಜಾಗರಣೆಯ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ದೇವಾಲಯದಲ್ಲಿ ’ಶಿವರಾತ್ರಿ ಕವಿರಾತ್ರಿ’ ಎಂಬ ಕವನ ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕವಿಗಳಾದ ಈಧರೆ ಪ್ರಕಾಶ್, ದೇವರಮಳ್ಳೂರು ಚನ್ನಕೃಷ್ಣ, ದೇವರಾಜ್, ಈಶ್ವರ್ ಸಿಂಗ್ ಕವನ ವಾಚಿಸಿದರು. ವರದನಾಯಕನಹಳ್ಳಿಯ ಈಧರೆ ತಂಡದಿಂದ ಡೊಳ್ಳುಕುಣಿತ, ದೇವರಮಳ್ಳೂರು ಮಹೇಶ್ ಮತ್ತು ಪ್ರಕಾಶ್ ಅವರಿಂದ ಜನಪದ ಗಾಯನ, ಮಕ್ಕಳಿಂದ ಕೋಲಾಟವೂ ನಡೆಯಿತು. ಫಲಾಹಾರವನ್ನು ಭಕ್ತರಿಗೆಲ್ಲಾ ವಿತರಿಸಿದರು.
ಬೆಳಗಿನ ಜಾವದವರೆಗೂ ಸಂಪೂರ್ಣ ಜಾಗರಣೆ ಮಾಡಿ ಚಟುವಟಿಕೆಯಿಂದಿದ್ದ ಹತ್ತು ಜನರನ್ನು ಆಯ್ದು ದೇವಾಲಯದ ವತಿಯಿಂದ ಬಹುಮಾನ ವಿತರಿಸಿದರು.

ತಾಲ್ಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

0

ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಐದು ಕೋಟಿ ಮೂರು ಲಕ್ಷ ರೂಗಳ ವೆಚ್ಚದಲ್ಲಿ ತಾಲ್ಲೂಕಿನ ಪುರಬೈರೇನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡದ ಸಮರ್ಪಣೆ, ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ, 45 ಲಕ್ಷ ರೂಗಳ ವೆಚ್ಚದ ಚಿಂತಾಮಣಿ ತಾಲ್ಲೂಕು ಏನಿಗದೆಲೆ ಗ್ರಾಮದ ಜವಾಹರ್ ನೆಹರೂ ವಿದ್ಯಾಪೀಠದ ಕಾಮಗಾರಿಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ನೆರವೇರಿಸಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಇದರಲ್ಲಿ ಹೆಚ್ಚಿ ಭಾಗವಿದೆ ಎಂದು ಅವರು ಹೇಳಿದರು.
ಶಾಶ್ವತ ನೀರು ಬರದಿದ್ದಲ್ಲಿ ನಮ್ಮ ಭಾಗದ ಜನರು ಗುಳೇ ಹೋಗಬೇಕಾದ ಪರಿಸ್ಥಿತಿಯಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದೇವೆ. ಜಿಲ್ಲೆಗೆ ನೀರು ಬರುವ ಯಾವ ಯೋಜನೆಯಾದರೂ ಮಾಡಲೇ ಬೇಕೆಂಬ ಒತ್ತಡ ಹೇರಲಾಗಿದೆ. ಎತ್ತಿನ ಹೊಳೆ ಅಥವಾ ಪರಮಶಿವಯ್ಯನವರ ಯೋಜನೆಯಾಗಲೀ ಜಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಪಟ್ಟಣದಲ್ಲಿ ಐದರಿಂದ ಆರು ಕೋಟಿ ರೂ ವೆಚ್ಚದಲ್ಲಿ ರಂಗಮಂದಿರ ಹಾಗೂ ಬಸ್ ಡಿಪೊಗಾಗಿ ಸ್ಥಳ ಪರಿಶೀಲನೆಗಳು ನಡೆದಿವೆ. ಎಲ್ಲರ ಸಹಕಾರವಿದ್ದಲ್ಲಿ ಶೀಘ್ರವಾಗಿ ಕಾಮಗಾರಿಗಳು ಪ್ರಾರಂಭವಾಗುತ್ತವೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೀಲಾ ಮಂಜುನಾಥ್, ಉಪವಿಭಾಗಾಧಿಕಾರಿ ಶಾಂತಲಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದೇವರಾಜೇಗೌಡ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಮುನಿಕೃಷ್ಣಪ್ಪ, ಪುರಸಭಾ ಸದಸ್ಯ ಅಫ್ಸರ್ ಪಾಷ, ಬ್ಯಾಟರಾಯಶೆಟ್ಟಿ, ಬಂಕ್ ಮುನಿಯಪ್ಪ, ಅಶ್ವತ್ಥನಾರಾಯಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತೈಬಾನಗರದ ಸರ್ಕಾರಿ ಹಿರಿಯ ಉರ್ದು ಶಾಲೆಯಲ್ಲಿ ವೈಜ್ಞಾನಿಕ ವಸ್ತುಪ್ರದರ್ಶನ

0

ಪ್ರಾಣಿಗಳಿರುವ ಕಾಡಿನ ಪ್ರತಿಕೃತಿ, ಜ್ವಾಲಾಮುಖಿ, ಕಡ್ಲೆಕಾಯಿಯಿಂದ ಮಿದುಳಿನ ಪ್ರತಿಕೃತಿ, ಶ್ವಾಸಕೋಶದ ಕಾರ್ಯನಿರ್ವಹಣೆ, ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ, ಗ್ರಹಗಳು ಮತ್ತು ತಾರೆಗಳ ಚಲನವಲನ, ಮೊಟ್ಟೆಯಿಂದ ಚಿಟ್ಟೆಯ ವರೆಗಿನ ರೇಷ್ಮೆ ತಯಾರಿಕಾ ವಿಧಾನ, ರೇಷ್ಮೆ ಗೂಡಿನ ಮಾರುಕಟ್ಟೆಯ ಪ್ರತಿಕೃತಿ ಮುಂದಾದವುಗಳ ಪ್ರದರ್ಶನವನ್ನು ವಿದ್ಯಾರ್ಥಿಗಳು ಮಾಡಿದ್ದರು.
ಹಾಗೆಂದು ಇದೇನೂ ಮುಂದುವರೆದ ಪ್ರದೇಶದ ಖಾಸಗಿ ಶಾಲೆಯಲ್ಲ. ಪಟ್ಟಣದ ಅತ್ಯಂತ ಹಿಂದುಳಿದ ಪ್ರದೇಶ ಹಾಗೂ ರೇಷ್ಮೆ ತಯಾರಿಕಾ ಕೇಂದ್ರಗಳಲ್ಲಿ ಕೂಲಿ ಮಾಡುವವರೇ ಹೆಚ್ಚಾಗಿರುವ ತೈಬಾನಗರದ ಸರ್ಕಾರಿ ಹಿರಿಯ ಉರ್ದು ಶಾಲೆಯ ವಿದ್ಯಾರ್ಥಿಗಳು ವೈಜ್ಞಾನಿಕ ವಸ್ತು ಪ್ರದರ್ಶನವನ್ನು ಭಾನುವಾರ ಏರ್ಪಡಿಸಿದ್ದರು. ಜಿಲ್ಲೆಯಲ್ಲೇ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಸರ್ಕಾರಿ ಶಾಲೆಯಲ್ಲಿ 389 ವಿದ್ಯಾರ್ಥಿಗಳಿದ್ದು, ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಈ ಪ್ರದರ್ಶನವನ್ನು ವೀಕ್ಷಿಸಲು ಪಟ್ಣದ ಎಲ್ಲಾ ಉರ್ದು ಶಾಲೆಗಳಿಂದ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಆಗಮಿಸಿ ವೀಕ್ಷಿಸಿದರು.
ರಾಗಿ ಬೆಳೆ ಬೆಳೆಯುವ ಬಗ್ಗೆ, ರೇಷ್ಮೆಗೆ ಪ್ರಧಾನವಾದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವುದು. ಬೆಳೆದ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಹಾಕಿ ಮೇಯಿಸುವುದು, ನಂತರ ಚಂದ್ರಂಕಿಗೆ ಹಾಕಿ ಗೂಡು ತೆಗೆಸುವುದು, ಮಾರುಕಟ್ಟೆಯಲ್ಲಿ ಜಾಲರಿಯಲ್ಲಿಟ್ಟು ಮಾರಾಟ ಮಾಡುವುದು, ಹಮಾಲಿ ಕಾರ್ಮಿಕರು ತಲೆಯ ಮೇಲೆ ಗೂಡಿನ ಮೂಟೆನ್ನು ಇಟ್ಟುಕೊಂಡು ಸೈಕಲ್ ತುಳಿಯುತ್ತಾ ಹೋಗುವುದು, ಅಲ್ಲಿಂದ ಗೂಡನ್ನು ಫಿಲೇಚರಿನಲ್ಲಿ ಕುದಿಯುವ ನೀರಲ್ಲಿ ಹಾಕಿ ಕಚ್ಛಾ ರೇಷ್ಮೆ ತೆಗೆಯುವುದು ಮುಂತಾದ ಅವರ ಸುತ್ತಮುತ್ತ ನಡೆಯುವ, ಅವರ ಪೋಷಕರು ಶ್ರಮಿಸುವ ರೇಷ್ಮೆ ಕೆಲಸಗಳನ್ನು ಎಳೆಎಳೆಯಾಗಿ ಗೊಂಬೆಗಳು ಹಾಗೂ ಬಿದಿರನ್ನು ಬಳಸಿ ಸುಂದರವಾಗಿ ತಯಾರಿಸಿದ್ದುದು ಪ್ರದರ್ಶನದ ವಿಶೇಷ ಆಕರ್ಷಣೆಯಾಗಿತ್ತು. ತಾವು ಪ್ರದರ್ಶಿಸಿದವುಗಳನ್ನು ವಿದ್ಯಾರ್ಥಿಗಳು ಉರ್ದುವಿನಲ್ಲೇ ವಿವರಣೆ ನೀಡುತ್ತಿದ್ದರು.
ಶಾಲೆಯ ಮುಖ್ಯಶಿಕ್ಷಕಿ ರಜಿಯಾ ಮುಬಿನ್, ಸಹಶಿಕ್ಷಕರಾದ ಮೈಮೂನಾ ಬಾನು, ಜಿಯಾವುಲ್ಲಾ, ಜಕಿಯಾ, ಬಿ.ಆರ್.ಸಿ ಯ ಮುಕ್ತಿಯಾರ್ ಅಹ್ಮದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವ್ಯ ಕಲರವ

0

ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕವಿ ಕಾವ್ಯದ ಸಂಗಮದಂತಿದ್ದ ಅಪರೂಪದ ಕಾವ್ಯ ಕಲರವ ನಡೆಯಿತು.
ಒಂದೆಡೆ ಹಿರಿಯ ಕವಿಗಳ ಪರಿಚಯ ಮಾಡಿಕೊಡುತ್ತಾ ಕವನಗಳನ್ನು ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು ಕವಿಗಳು ಓದುವಂತೆಯೇ ಕವನ ವಾಚಿಸಿದರೆ, ಮತ್ತೊಂದೆಡೆ ಶಾಲೆಯ ಪುಟ್ಟ ಕವಿಗಳು ಬರೆದಿರುವ ಕವನಗಳನ್ನು ಶಾಲೆಯ ಮುಖ್ಯ ಶಿಕ್ಷಕರು ವಾಚಿಸಿದರು.
ಕುವೆಂಪು ಅವರ ಗಗನಗುರು, ಬೇಂದ್ರೆಯವರ ಕವನ, ಡಾ.ಸಿದ್ದಲಿಂಗಯ್ಯ ಅವರ ನನ್ನ ಕವನ, ಬಿ.ಆರ್.ಲಕ್ಷ್ಮಣರಾವ್ ಅವರ ಮಾದರಿ, ಲಂಕೇಶ್ ಅವರ ಅವ್ವ, ಕೆ.ಎಸ್.ನರಸಿಂಹಸ್ವಾಮಿಯವರ ಇದುವೆ ನಮ್ಮ ಹಾಡು, ಕೆ.ಎಸ್.ನಿಸಾರ್ ಅಹಮದ್ ಅವರ ಹಾಡು ಕವಿಯೆ ಹಾಡು, ಪಂಜೆ ಮಂಗೇಶರಾಯರ ಹುತ್ತರಿ ಹಾಡು, ಪು.ತಿ.ನ ಅವರ ನನ್ನ ಹಾಡು, ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಕಷ್ಟ ಕವನಗಳನ್ನು ವಿದ್ಯಾರ್ಥಿಗಳಾದ ವರ್ಷ, ಅನುಷಾ, ಸ್ವಾತಿ, ಕಾವ್ಯ, ವಾಣಿಶ್ರೀ, ಚಂದ್ರಕಲಾ, ಶಿಲ್ಪ, ಅಮೃತಾ, ಅಂಜಲಿ, ಭವ್ಯ ವಾಚಿಸಿದರೆ, ವಿದ್ಯಾರ್ಥಿಗಳಾದ ರಾಜೇಶ, ನವೀನ, ಸಂತೋಷ, ಮೋಹನ್, ದಿಲೀಪ, ಅರವಿಂದ, ಶೇಖರ, ಮುರಳಿ, ಮುನಿಕೃಷ್ಣ ಕವಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತ, ವಂದನಾರ್ಪಣೆ ಹಾಗೂ ಅಧ್ಯಕ್ಷತೆಯನ್ನು ಕೂಡ ವಿದ್ಯಾರ್ಥಿಗಳೇ ವಹಿಸಿಕೊಂಡು ಕಾವ್ಯ ಕಲರವ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಅತಿಥಿಗಳಿಗೆ ಹಾಗೂ ಶಿಕ್ಷಕರಿಗೆ ತಾವೇ ತಯಾರಿಸಿದ ಹೂಗುಚ್ಛಗಳನ್ನು ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಐದನೇ ತರಗತಿಯ ವಿದ್ಯಾರ್ಥಿ ಡಿ.ಕೆ.ಕಿರಣ್ ಬರೆದ ಕವನ ’ನನ್ನ ಜೀವನದ ಕವನ’ ವನ್ನು ಶಾಲೆಯ ಮುಖ್ಯ ಶಿಕ್ಷಕ ಎಚ್.ಮುನಿಯಪ್ಪ ವಾಚಿಸಿದರು.
ಕವಿ ಪರಿಚಯ ಹಾಗೂ ಕವನವನ್ನು ವಾಚಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸ್ನೇಹ ಯುವಕ ಸಂಘದ ಸದಸ್ಯರು, ಶಿಕ್ಷಕ ಬಸವರಾಜ್ ಮತ್ತು ಹರೀಶ್ ವಿತರಿಸಿದರು.
ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಶಿಕ್ಷಕ ಬಸವರಾಜ್, ಕನ್ನಮಂಗಲದ ಸ್ನೇಹ ಯುವಕ ಸಂಘದ ಕಾರ್ಯದರ್ಶಿ ವಾಸುದೇವ್, ಶಿಕ್ಷಕರಾದ ಎಚ್.ಬಿ.ಮಂಜುನಾಥ್, ಕೆ.ಶಿವಶಂಕರ್, ಜೆ.ಶ್ರೀನಿವಾಸ, ಎಸ್.ಕಲಾಧರ್. ಟಿ.ಜೆ.ಸುನೀತಾ ಹಾಜರಿದ್ದರು.

ಅಪರಿಚಿತರು ತ್ಯಜಿಸಿ ಹೋಗಿದ್ದ ವೃದ್ಧೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ

0

ಪಟ್ಟಣದ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಗಿನ ಜಾವ ಅಪರಿಚಿತರು ಸುಮಾರು 85 ಕ್ಕೂ ಹೆಚ್ಚು ವಯಸ್ಸಿನ ವೃದ್ಧೆಯನ್ನು ಬಿಟ್ಟು ಹೋಗಿರುವ ಮನ ಕಲಕುವ ಘಟನೆ ನಡೆದಿದೆ.
ಬಸ್ ನಿಲ್ದಾಣದ ಪುಸ್ತಕ ಅಂಗಡಿಯ ಮಾಲೀಕ ಮುನಿರಾಜು ಬೆಳಿಗ್ಗೆ ಅಂಗಡಿ ತೆಗೆಯಲು ಬಂದಾಗ ರಸ್ತೆಯಲ್ಲಿ ಸುಸ್ತಾಗಿ ಮಲಗಿದ್ದ ವೃದ್ಧೆಯನ್ನು ಗಮನಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ತಿಮ್ಮಕ್ಕನ ಸಹಾಯ ಪಡೆದು ನೆರಳಿನಲ್ಲಿ ತಂದು ಮಲಗಿಸಿದ್ದಾರೆ. ಹೋಟೆಲಿನಿಂದ ಇಡ್ಲಿ ತಂದು ತಿನಿಸಿದ್ದಾರೆ. ನಂತರ ಮಾತನಾಡಿಸಿ ವಿಚಾರಿಸಿದಾಗ ಅಜ್ಜಿ ಕೈ ಸನ್ನೆಯ ಮೂಲಕ ಮಾತುಬಾರದೆಂದು ತಿಳಿಸಿದಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಾಶ್ ಕುಮಾರ್ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಮತ್ತು ವಯೋವೃದ್ಧರ ಇಲಾಖೆಯ ಅಧಿಕಾರಿ ಶಾಂತಾ ಅರಸ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ತಾಲ್ಲೂಕಿನ ಗೊರಮಡುಗು ಗ್ರಾಮದ ವೃದ್ಧಾಶ್ರಮದ ಓಬಣ್ಣ ಅವರ ವಶಕ್ಕೆ ಈ ವೃದ್ಧೆಯನ್ನು ಒಪ್ಪಿಸಿದರು.

ಸಿ.ಇ.ಟಿ ಶುಲ್ಕ ಏರಿಕೆ ಹಾಗೂ ಕಾಮೆಡ್ ಕೆ ಪರವಾಗಿ ಸರ್ಕಾರ ನೀತಿಗಳನ್ನು ವಿರೋಧಿಸಿ ಮನವಿ

0

ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಸಿ.ಇ.ಟಿ ಶುಲ್ಕ ಏರಿಕೆ ಹಾಗೂ ಕಾಮೆಡ್ ಕೆ ಪರವಾಗಿ ಸರ್ಕಾರ ನೀತಿಗಳನ್ನು ರೂಪಿಸುತ್ತಿರುವುದನ್ನು ವಿರೋಧಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಆಶಾಕಿರಣ ಅಂಧ ಮಕ್ಕಳಿಗೆ ನ್ಯಾಯಾಲಯದ ಕಾರ್ಯಕಲಾಪಗಳ ಬಗ್ಗೆ ವಿವರಣೆ

0

ಶಿಡ್ಲಘಟ್ಟ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾಕಿರಣ ಅಂಧ ಮಕ್ಕಳಿಗೆ ಹೆಚ್ಚುವರಿ ಸಿವಿಲ್ ನ್ಯಾಯಾಶರಾದ ವಿಜಯ ದೇವರಾಜ್ ಅರಸ್ರು ನ್ಯಾಯಾಲಯದ ಕಾರ್ಯಕಲಾಪಗಳ ಬಗ್ಗೆ ವಿವರಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್, ಆಶಾಕಿರಣ ಅಂಧಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರಿದ್ದರು.

ಮೂರನೇ ವರ್ಷದ ಕುಸ್ತಿ ಪಂದ್ಯಾವಳಿ

0

ಶಿಡ್ಲಘಟ್ಟದ ಅಮೀರ್ಬಾಬಾ ದರ್ಗಾ ಹತ್ತಿರ ಹೈದರಾಲಿ ಗರಡಿ ವತಿಯಿಂದ ಭಾನುವಾರ ನಡೆಸಿದ ಮೂರನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.

error: Content is protected !!