Home Blog Page 1067

ತಾಲ್ಲೂಕಿನಾದ್ಯಂತ ವಿವಿಧ ರಾಮ ದೇವಾಲಯಗಳಲ್ಲಿ ಶ್ರೀ ರಾಮ ನವಮಿ ಆಚರಣೆ

0

ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಂಗಮಕೋಟೆ, ನಾಗಮಂಗಲ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗೇಟ್‌, ಸಾದಲಿ, ದಿಬ್ಬೂರಹಳ್ಳಿ,ಮೇಲೂರು, ಹುಣಸೇನಹಳ್ಳಿ ಸ್ಟೇಷನ್‌, ಎಚ್‌.ಕ್ರಾಸ್‌, ಮಳಮಾಚನಹಳ್ಳಿ ಮುಂತಾದೆಡೆ ದೇವಾಲಯಗಳಲ್ಲಿವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ಪಟ್ಟಣದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆಯ ಭಜನೆ ಮಂದಿರ ಹಾಗೂಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ರಾಮನವಮಿಯ ಪ್ರಯುಕ್ತಪೂಜಾಕಾರ್ಯಕ್ರಮಗಳು ನಡೆದವು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣಆಂಜನೇಯಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ನೂತನ ಉತ್ಸವ ವಿಗ್ರಹಗಳ ಪ್ರಾಣಪ್ರತಿಷ್ಠಾಪಿಸಿ ಕುಂಭಾಭಿಷೇಕವನ್ನು ನಡೆಸಲಾಯಿತು. ವೀರಾಂಜನೇಯಸ್ವಾಮಿಗೆ ಅಭಿಷೇಕ, ಪೂಜೆ, ದ್ರಾಕ್ಷಿ ಗೋಡಂಬಿ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೀತಾರಾಮ ಕಲ್ಯಾಣೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಉಟ್ಲು ಕಂಬದ ಪೂಜೆ, ಕ್ಷೀರ ಉಟ್ಲು ಮಹೋತ್ಸವಹಾಗೂ ಮನರಂಜನಾ ಉಟ್ಲೋತ್ಸವವನ್ನು ನಡೆಸಿದರು.


ದೇಶದಪೇಟೆಯ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಪೈರುಹಬ್ಬ

0

ಯುಗಾದಿಯಾದ ಒಂಬತ್ತನೇ ದಿನ ಆಚರಿಸುವ ರೈತರ ಹಬ್ಬವಾದ ಪೈರುಹಬ್ಬವನ್ನು ಸೋಮವಾರ ಪಟ್ಟಣದ ದೇಶದಪೇಟೆಯಲ್ಲಿರುವ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಆಚರಿಸಲಾಯಿತು.
ಯುಗಾದಿಯ ದಿನ ದೇವಾಲಯದಲ್ಲಿ ಬೇವು, ಬೆಲ್ಲ ಹಂಚಿ ಬಂದು ಮನೆಯಲ್ಲಿ ಅವರೆ, ಜೋಳ, ರಾಗಿ, ಹುರುಳಿ, ಹಲಸಂದಿ ಇತ್ಯಾದಿ ಧಾನ್ಯಗಳನ್ನು ಮಣ್ಣು ಮತ್ತು ಗೊಬ್ಬರದಲ್ಲಿ ಬೆರೆಸಿ ಇಡುತ್ತಾರೆ. ಜೊತೆಯಲ್ಲಿ ನೇಗಿಲನ್ನು ಇಟ್ಟು ಪೂಜಿಸಲಾಗುತ್ತದೆ. ರೈತರಿಗೆ ನೇಗಿಲು ಪೂಜನೀಯವಾದುದು. ಒಂಬತ್ತು ದಿನಗಳು ಪೂಜಿಸಿದ ಪೈರನ್ನು ಒಂಬತ್ತನೇ ದಿವಸ ಶ್ರೀರಾಮನವಮಿಯಂದು ತಮ್ಮ ಜಮೀನಿನಲ್ಲಿ ನೀರು ಹರಿಯುವೆಡೆ ಬಿಡುತ್ತಾರೆ. ನಂತರ ಈ ನೇಗಿಲಿನಿಂದ ಉಳುತ್ತಾರೆ.
pairu habba‘ಮನೆಯಲ್ಲಿ ಪೈರು ಎಷ್ಟು ಚೆನ್ನಾಗಿ ಬೆಳೆದಿದ್ದರೆ ತಮ್ಮ ಜಮೀನಿನಲ್ಲಿ ಫಸಲು ಅಷ್ಟು ಚೆನ್ನಾಗಿ ಬರುವುದೆಂಬ ನಂಬಿಕೆ ರೈತರದು. ಈಗ ಟ್ರಾಕ್ಟರ್‌ಮತ್ತು ಟಿಲ್ಲರ್‌ಗಳ ಕಾಲ. ಹಾಗಾಗಿ ಈ ಹಬ್ಬವನ್ನು ಆಚರಿಸುವವರೇ ಕಡಿಮೆಯಾಗಿದ್ದಾರೆ. ಮೊದಲು ದೊಡ್ಡ ನೇಗಿಲನ್ನೇ ಪೂಜೆಗೆ ಇಡುತ್ತಿದ್ದವರು ನಂತರ ಸಾಂಕೇತಿಕವಾಗಿ ಜಾಲಿಮರದ ತುಂಡನ್ನು ಇಡಲು ಪ್ರಾಂಭಿಸಿದ್ದಾರೆ. ನಾವು ಮಾತ್ರ ಉತ್ತಮ ಜಾಲಿ ಮರದಲ್ಲಿ ಪ್ರತಿ ವರ್ಷ ಹೊಸ ನೇಗಿಲನ್ನು ಮಾಡಿಸಿ ಪೂಜಿಸಿ ನಂತರ ಉಳುಮೆ ಪ್ರಾರಂಭಿಸುತ್ತೇವೆ. ಆದರೂ ಈಗಲೂ ಹಳ್ಳಿಗಳಲ್ಲಿ ನೇಗಿಲನ್ನೇ ಇಟ್ಟು ಪೂಜಿಸುವರು ಕೂಡ ಇದ್ದಾರೆ’ ಎನ್ನುತ್ತಾರೆ ಶೆಟ್ಟಪ್ಪನವರ ಎಸ್.ರವಿ.

ಷರಾಫ್‌ ರಸ್ತೆಯ ಪ್ರತಾಪ್ ಸ್ವೀಟ್ಸ್‌

0

ಶಿಡ್ಲಘಟ್ಟದ ಷರಾಫ್‌ ರಸ್ತೆಯ ಅರಳಿಕಟ್ಟೆಯ ಪಕ್ಕದ ‘ಪ್ರತಾಪ್ ಸ್ವೀಟ್ಸ್‌’ ಎಂದೊಡನೆ ಬಾಯಲ್ಲಿ ನೀರೂರುತ್ತದೆ. ಸಂಜೆ 6 ಗಂಟೆಯ ನಂತರವಷ್ಟೆ ತೆರೆಯುವ ಈ ತಿನಿಸಿನ ದುಖಾನಿನಲ್ಲಿ ಸಿಗುವ ಖಾದ್ಯಗಳು ವೈವಿಧ್ಯಮಯ. ತೈರೊಡೆ, ಆಲೂಗಡ್ಡೆಬೋಂಡ, ಕ್ಯಾಪ್ಸಿಕಮ್‌, ಈರುಳ್ಳಿಬೋಂಡ, ಮೆಣಸಿನಕಾಯಿ ಬಜ್ಜಿ, ವಿವಿಧ ರೀತಿಯ ಹಲ್ವಾಗಳು, ಜಾಮೂನ್‌, ಚಮ್‌ಚಮ್‌, ಮಿಕ್ಸ್‌ಚರ್‌ ಇತ್ಯಾದಿ. ಎಲ್ಲಕ್ಕಿಂತ ಮಿಗಿಲಾಗಿ ಗ್ರಾಹಕರನ್ನು ಅತಿಥಿಗಳಂತೆ ಮಾತನಾಡಿಸುವುದು ಪ್ರತಾಪ್‌ ಅವರ ವಿಶೇಷ ಗುಣ.

ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ಸೀತಾ ರಾಮಚಂದ್ರರ ತಿರುಕಲ್ಯಾಣೋತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ಭಾನುವಾರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೀತಾ ರಾಮಚಂದ್ರರ ತಿರುಕಲ್ಯಾಣೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಜಯನಾಮ ಸಂವತ್ಸರ ಚೈತ್ರ ಮಾಸ ಶುದ್ಧ ಸಪ್ತಮಿ ಭಾನುವಾರ ಬೆಳಿಗ್ಗೆ ಸೀತಾ ರಾಮರಿಗೆ ಸುಪ್ರಭಾತ, ದೇವತಾ ಪ್ರಾರ್ಥನೆ, ಭಗವತ್‌ ವಾಸುದೇವ ಪುಣ್ಯಾಹ, ಕಲಶಸ್ಥಾಪನೆ, ಪೂಜೆ, ಅವಭೃತ ಸ್ನಾನ, ಅಲಂಕಾರ, ಮಹೋತ್ಸವ ಹೋಮವನ್ನು ನಡೆಸಲಾಯಿತು. ಮಧ್ಯಾಹ್ನ ನಡೆದ ಸ್ವಾಮಿಯವರ ಕಲ್ಯಾಣ ಮಹೋತ್ಸವದಲ್ಲಿ ಅಷ್ಟೋತ್ತರ, ಅಷ್ಟಾವಧಾನ ಸೇವೆ, ಮಂಗಳರಾಗಾಲಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಪ್ರಧಾನ ಅರ್ಚಕ ಸತ್ಯಪ್ರಕಾಶ್‌ ಹಾಗೂ ಶ್ರೀರಾಮ ಭಜನೆ ಮಂದಿರದ ಕಾರ್ಯಕಾರಿ ಸಮಿತಿ ಹಾಗೂ ಭಕ್ತಮಂಡಳಿ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.

ನ್ಯಾಯಾಧೀಶರಾಗಿ ಆಯ್ಕೆಯಾದ ಬಿ.ಎನ್.ರಮೇಶ್‌ಬಾಬುರವರಿಗೆ ಸನ್ಮಾನ

0

ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನ್ಯಾಯಾಧೀಶರಾಗಿ ಆಯ್ಕೆಯಾದ ಬಿ.ಎನ್.ರಮೇಶ್‌ಬಾಬುರವರನ್ನು ತಾಲ್ಲೂಕು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್‌, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವಿಜಯದೇವರಾಜ ಅರಸ್‌, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್‌.ಶೀಲಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರಿದ್ದು ರಮೇಶ್‌ಬಾಬುರವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಸ್ವಭಾವ, ಕಾರ್ಯವೈಖರಿ, ಸ್ನೇಹಶೀಲತೆ ಹಾಗೂ ವೃತ್ತಿಪರತೆಯನ್ನು ಕೊಂಡಾಡಿದರು. ಗ್ರಾಮಾಂತರ ಪ್ರದೇಶವಾದ ತಾಲ್ಲೂಕಿನ ಬಚ್ಚಹಳ್ಳಿ ಮೂಲದವರಾಗಿದ್ದು, ತಾಲ್ಲೂಕಿನಲ್ಲಿ ನ್ಯಾಯಾಲಯ ಪ್ರಾರಂಭವಾದಾಗಿನಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಪ್ರಥಮ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿ ಮಾದರಿಯಾಗಿದ್ದಾರೆಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎನ್.ರಮೇಶ್‌ಬಾಬು, ನ್ಯಾಯಾಧೀಶನಾಗಿ ಆಯ್ಕೆಯಾದ ಕೀರ್ತಿ ನನ್ನೊಬ್ಬನಿಗೆ ಸಲ್ಲುವುದಿಲ್ಲ. ಅದು ನಮ್ಮ ಹೆತ್ತವರು, ನನ್ನ ಸಹಪಾಠಿಗಳು, ಹಿರಿಯ ವಕೀಲರು ಹಾಗೂ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು, ಸಿಬ್ಬಂದಿ ಸೇರಿದಂತೆ ನನಗೆ ಸಹಕರಿಸಿದ ಪ್ರೋತ್ಸಾಹಿಸಿದ ಹಾಗೂ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಸಲ್ಲುತ್ತದೆ. ಅವರು ನ್ಯಾಯಾಧೀಶರ ಪರೀಕ್ಷೆಯನ್ನು ತೆಗೆದುಕೊಂಡು ಹೆಚ್ಚಿನ ಅಂಕಗಳಿಸಿ ಆಯ್ಕೆಯಾಗುವ ಪ್ರತಿ ಹಂತದಲ್ಲೂ ಸಹಕಾರ ನೀಡಿ, ಪ್ರೋತ್ಸಾಹಿಸಿದ ಎಲ್ಲರನ್ನೂ ನೆನಪಿಸಿಕೊಂಡರು.
ಈ ಸಮಾಜದಲ್ಲಿ ಜನರು ದೇವಾಲಯದಲ್ಲಿ ಹಾಗೂ ನ್ಯಾಯಾಲಯದಲ್ಲಿ ಮಾತ್ರವೇ ಕೈ ಮುಗಿದು ನಿಲ್ಲುತ್ತಾರೆ. ಅಂತಹ ಪವಿತ್ರವಾದ ನ್ಯಾಯಾಲಯದಲ್ಲಿ ನ್ಯಾಯದಾನ ನೀಡುವಂತ ಪವಿತ್ರ ಸ್ಥಾನ ನಿಮ್ಮದೆನ್ನುವ ಅರಿವು ಸದಾ ಜಾಗೃತರಾಗಿರಲಿ. ಹಿರಿಯರಿಗೆ ಗೌರವ ಕೊಡಿ, ಸಿಬ್ಬಂದಿಗೂ ಮರ್ಯಾದೆ ನೀಡಿ, ಮಹಿಳಾ ಸಿಬ್ಬಂದಿಯನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ನೋಡಿ. ಆದರೆ ನ್ಯಾಯದಾನ ಮಾಡುವಾಗ ಮಾತ್ರ ನ್ಯಾಯ ಧರ್ಮವನ್ನಷ್ಟೆ ಪಾಲಿಸಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್‌ ಈ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.
ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವಿಜಯದೇವರಾಜ ಅರಸ್‌, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್‌.ಶೀಲಾ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಶ್ರೀನಾಥ್‌, ಸತ್ಯನಾರಾಯಣ ಬಾಬು, ಅಶೋಕ್‌, ಈ.ನಾರಾಯಣಪ್ಪ, ಕೆ.ಮಂಜುನಾಥ್‌, ಎಂ.ಬಿ.ಲೋಕೇಶ್‌, ಬಿ.ಕೆ.ವೆಂಕಟೇಶ್‌, ವಿ.ಸುಬ್ರಮಣ್ಯಪ್ಪ, ಲಕ್ಷ್ಮಿ, ವೀಣಾ, ನಾಗಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೈತನ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಿರುವುದನ್ನು ವಿರೋಧಿಸಿ ಪ್ರತಿಭಟನೆ

0

ದೇಶದ ಬೆನ್ನೆಲುಬಾದ ರೈತನ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ರೈತರು ಪ್ರತಿಭಟಿಸಿದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಷ ಕುಡಿದು ಸತ್ತ ರೈತ ವಿಠಲ ಅರಬಾವಿ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ಮತ್ತು ಆತನ ಮಗನಿಗೆ ಉದ್ಯೋಗ ಕೊಡುತ್ತೇನೆಂದು ಹೇಳಿದ್ದವರು, ಈಗ ರೈತ ಮದ್ಯ ಸೇವಿಸಿ ಸತ್ತ ಎಂದು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದು, ರೈತರ ಬಗ್ಗೆ ಕೀಳಾಗಿ ಮಾತನಾಡಿರುವ ರಾಜ್ಯದ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ತಿಳಿಸಿ, ಶಿರಸ್ತೆದಾರರಿಗೆ ಮನವಿಯನ್ನು ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್‌, ಅಪ್ಪೇಗೌಡನಹಳ್ಳಿ ತ್ಯಾಗರಾಜ್‌, ಲೋಕೇಶ್‌, ಅಂಬರೀಷ್‌, ದೇವರಾಜ್‌, ವೇಣು, ಕೃಷ್ಣಪ್ಪ, ರಾಮಚಂದ್ರ, ಜಿ.ಎಂ.ವೆಂಕಟರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೇಣುಕಾ ಎಲಮ್ಮದೇವಿಯ ಹೂವಿನ ಕರಗ

0

ಶಿಡ್ಲಘಟ್ಟದ ರೇಣುಕಾ ಎಲಮ್ಮದೇವಿಯ ಹೂವಿನ ಕರಗವು 02/04/2014 ಬುಧವಾರ ರಾತ್ರಿ ನಡೆಯಿತು.
ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ ಪ್ರಾಚೀನವಾದದ್ದು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.
ಕರಗಕ್ಕೆ ಪೂಜೆ ಸಲ್ಲಿಸಿ ತಲೆಯ ಮೇಲೆ ಹೊರಿಸಿದ ನಂತರ ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಎಲಾ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿದ್ದರು.

ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವ

0

ಶಿಡ್ಲಘಟ್ಟದ ಕುಕ್ಕಲಚಿನ್ನಪೇಟೆಯಲ್ಲಿ ನೆಲೆಸಿರುವ ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವವನ್ನು ಸೋಮವಾರ ರಾತ್ರಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕರಗ ಮಹೋತ್ಸವವು ಯುಗಾದಿಯ ದಿನದಂದು ಧ್ವಜಾರೋಹಣದಿಂದ ಆರಂಭವಾಗಿ ಆರುದಿನಗಳ ಕಾಲ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯುಗಾದಿಯ ದಿನ ರಾತ್ರಿ ನಡೆಯುವ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದುದು.
ಪಿ.ಎಂ.ರಮೇಶ್‌ ಅವರು ಈ ಬಾರಿ ಕರಗವನ್ನು ಹೊರುತ್ತಿದ್ದು, ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ಅವರಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸಿದ್ದರು. ಅನಂತರ ಶಕ್ತಿಸ್ವರೂಪನಾದ ಅವರನ್ನು ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಸಿ, ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ದೇವಸ್ಥಾನಕ್ಕೆ ಕರೆತಂದರು.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿದರು.
ಕರಗವನ್ನು ಸ್ವಾಗತಿಸಲು ಬಹುತೇಕರು ಮನೆಗಳ ಮುಂದೆ ರಂಗವಲ್ಲಿಯನ್ನು ಇಟ್ಟಿದ್ದು, ಕರಗ ಬಂದ ಮೇಲೆ ಆರತಿ ಬೆಳಗಿ ಪೂಜಿಸಿ ಮಲ್ಲಿಗೆ ಹೂಗಳನ್ನು ಅರ್ಪಿಸಿದರು.

ಮನೆಗೊಂದು ಉದ್ಯೋಗ ಸೃಷ್ಠಿ ನನ್ನ ಉದ್ದೇಶ – ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ

0

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಿಯಮಾನುಸಾರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗದೇ ರೈಲ್ವೆ ಕೋಚ್ ಫ್ಯಾಕ್ಟರಿಗಾಗಿ ಅರಣ್ಯ ಇಲಾಖೆಯ ಜಮೀನಿನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಇಂಥಹ ಚುನಾವಣಾ ತಂತ್ರಗಾರಿಕೆಯನ್ನು ಮಾಡುತ್ತಿರುವ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಕೇವಲ ಗೆಲ್ಲುವ ಉದ್ದೇಶದ ಒಳಮರ್ಮವನ್ನು ಜನರು ಮನಗಾಣಬೇಕಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಇಷ್ಟು ಮಾತ್ರದ ಕೆಲಸಕ್ಕೆ ಮೂವತ್ತು ವರ್ಷಗಳ ಕಾಲ ಜನರು ಅಧಿಕಾರ ನೀಡಿದ್ದರಾ ಎಂಬುದನ್ನು ಪ್ರಶ್ನಿಸಬೇಕಿದೆ. ಗಡಿ ಭಾಗದಲ್ಲಿರುವ ನಾವಿಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದರೆ, ಕೆಲವೇ ಕಿಲೋಮೀಟರ್ ದೂರದ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಕಾರಣ ಅಲ್ಲಿ ರಾಜಕಾರಣಿಗಳ ರಾಜ್ಯಪ್ರೇಮವಾಗಿದೆ. ಅಲ್ಲಿ ಆರಿಸಿ ಬರುವವರೆಲ್ಲರೂ ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯದ ಬೆಳವಣಿಗೆಗೆ ಶ್ರಮಿಸುತ್ತಾರೆ. ಆದರೆ ಇಲ್ಲಿ ಆಯ್ಕೆಯಾಗಿದ್ದವರು ಶಾಶ್ವತ ನೀರನ್ನು ತರಲಾಗದೇ ಕೇವಲ ಚುನಾವಣೆ ಸಮಯದಲ್ಲಿ ಎತ್ತಿನಹೊಳೆ ಶಂಕುಸ್ಥಾಪನೆ ಮಾಡುವ ಮೂಲಕ ಜನರ ದಿಕ್ಕುತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಸೋಲಿನ ಭೀತಿಯಿಂದ ನನ್ನ ಎದುರಾಳಿಗಳು ನನ್ನ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಲು ಪ್ರಯತ್ನಿಸಿದ್ದರು. ಆದರೂ ಅವರ ಆಟ ನಡೆಯಲಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡುವುದು, ಮನೆಗೊಂದು ಉದ್ಯೋಗ ಸೃಷ್ಠಿಸುವುದು ನನ್ನ ಉದ್ದೇಶ. ಆರೋಗ್ಯ, ನೀರು, ನೈರ್ಮಲ್ಯ, ಪರಿಸರ ಬಗ್ಗೆ ಕೆಲಸ ಮಾಡುವುದಾಗಿ ಹೇಳಿದರು. ಕುಮಾರಸ್ವಾಮಿ ಅವರು ಕೇವಲ 20 ತಿಂಗಳ ಅಧಿಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದೇ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದಾಗಿ ನನ್ನ ವಿರುದ್ಧವೂ ಅಪಪ್ರಚಾರ ನಡೆಯುತ್ತಿದೆ. ಭ್ರಷ್ಟ ಕಾಂಗ್ರೆಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯ ನನಗಿಲ್ಲ ಎಂದು ನುಡಿದರು.
ಜೆಡಿಎಸ್ ಮುಖಂಡರಾದ ಶಿವಾರೆಡ್ಡಿ, ಆಯಿಷಾ ಸುಲ್ತಾನ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಮ್ಮ ನಡುವೆ ಯಾವುದೇ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳಿಲ್ಲ – ವಿ.ಮುನಿಯಪ್ಪ

0

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಚೆಗೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಸ್ಫೋಟಗೊಂಡಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಆರೋಪಗಳ ಕುರಿತಂತೆ ಈಗ ಮುಖಂಡರ ನೇತೃತ್ವದಲ್ಲಿ ಸರಿಪಡಿಸಿಕೊಂಡಿದ್ದು, ಯಾವುದೇ ಅವಿಶ್ವಾಸಗಳು ಇಲ್ಲ ಎಂದು ಅವರು ಹೇಳಿದರು.
ರೈಲು, ರಸ್ತೆ, ನೀರು ಮುಂತಾದ ಕಾಂಗ್ರೆಸ್ ಅವಧಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಾ, ನಮ್ಮಗಳ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಈಗಿನ ಶಾಸಕರು ತಮ್ಮದೆಂದು ಜನರ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶ್ರೀನಿವಾಸಪುರ ಶಾಸಕ ರಮೇಶ್ಕುಮಾರ್ ಮಾತನಾಡಿ, ‘ಕ್ಷೇತ್ರದಲ್ಲೆಲ್ಲಾ ಓಡಾಡಿ ಕಾಂಗ್ರೆಸ್ ಗೆಲುವಿಗೆ ನಾವೆಲ್ಲಾ ಒಗ್ಗೂಡಿ ಶ್ರಮಿಸುತ್ತೇವೆ. ಎತ್ತಿನಹೊಳೆ ಯೋಜನೆ ಅಂತ್ಯವಲ್ಲ ಕೇವಲ ನಮ್ಮ ಕುಡಿಯುವ ನೀರಿನ ಅವಶ್ಯಕತೆಗೆ ತಾತ್ಕಾಲಿಕ ಪರಿಹಾರವಷ್ಟೆ. ರಾಜಕೀಯವಾಗಿ ಯಾರೂ ಯಾರನ್ನೂ ತುಳಿಯಲು ಸಾಧ್ಯವಿಲ್ಲ. ನಮ್ಮೆಲ್ಲರ ಮೇಲಿರುವ ಅಧೃಶ್ಯ ಶಕ್ತಿಯ ಕೆಲಸವದು’ ಎಂದು ಹೇಳಿದರು.
ಚಿಂತಾಮಣಿಯ ಮಾಜಿ ಶಾಸಕ ಸುಧಾಕರರೆಡ್ಡಿ ಅವರು ಬಹಿರಂಗವಾಗಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲು ಜೆ.ಡಿ.ಎಸ್ಗೆ ಬೆಂಬಲಿಸಿರುವುದರ ಬಗ್ಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ನಜೀರ್ಅಹಮದ್ ರ ಬಗ್ಗೆ,‘ಅವರೇ ಗೆಲ್ಲಲಾಗದಿದ್ದಾಗ ಬೇರೆಯವರನ್ನು ಸೋಲಿಸಲು ಸಾಧ್ಯವೇ’ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಮುನಿಕೃಷ್ಣಪ್ಪ, ಸುಬ್ರಮಣಿ, ಪುರಸಭಾ ಸದಸ್ಯರು ಮತ್ತಿತರರು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.