Sidlaghatta : ಶಿಡ್ಲಘಟ್ಟ ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ಕಸಾಪ ತಾಲ್ಲೂಕು ಘಟಕದ ವತಿಯಿಂದ ಎಸ್ ಎಲ್ ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೂಪಸಿ ರಮೇಶ್ ಮಾತನಾಡಿ, ಭೈರಪ್ಪನವರು ಜೀವನದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಸಾಹಿತ್ಯದ ಮೂಲಕ ಬಿಂಬಿಸಿದ್ದು, ಅವರ ಕಾದಂಬರಿಗಳು ಪ್ರತಿಯೊಬ್ಬರ ಜೀವನ ಸತ್ಯಗಳ ಅನಾವರಣ ಮಾಡಿವೆ. ರಾಷ್ಟ್ರದ ಎಲ್ಲ ಪ್ರಮುಖ ಭಾಷೆಗಳಲ್ಲಿ ಇವರ ಕೃತಿಗಳು ಭಾಷಾಂತರಗೊಂಡಿದೆ. ಕನ್ನಡ ನಾಡಿನ ಸಾಹಿತ್ಯದ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಎಂದರು.
ತಾಲ್ಲೂಕು ಕಸಾಪ ಅದ್ಯಕ್ಷ ನಾರಾಯಣಸ್ವಾಮಿ, ಕೃಷ್ಣ, ಎಸ್. ವಿ. ನಾಗರಾಜ ರಾವ್, ನರಸಿಂಹ ಮೂರ್ತಿ, ಸುಂದರ್, ಎಂ. ವೆಂಕಟ ಸ್ವಾಮಿ, ಮುನಿನಾರಾಯಣಪ್ಪ, ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹೇಶ್ ಬಾಬು, ಎಚ್. ಎಂ. ಶಿವಕುಮಾರ್, ನಾಗಭೂಷಣ್, ವಾಸವಿ ವಿದ್ಯಾಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
Sidlaghatta : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಶಿಕ್ಷಕರು ತಹಶೀಲ್ದಾರ್ ಗಗನ ಸಿಂಧು ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸರಸ್ವತಮ್ಮ ಮಾತನಾಡಿ, “ಸಮೀಕ್ಷಾ ಕಾರ್ಯದಲ್ಲಿ ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆ, ಭಾಷಾ ಅಡಚಣೆಗಳು, ಸ್ಥಳಾವಕಾಶದ ಕೊರತೆ, ಹಾಗೂ ಶಿಕ್ಷಕರಿಗೆ ಮೂಲಭೂತ ಸೌಲಭ್ಯಗಳ ಅಭಾವದಿಂದಾಗಿ ಕಾರ್ಯನಿರ್ವಹಿಸಲು ತೊಂದರೆ ಎದುರಾಗುತ್ತಿದೆ. ಶಿಕ್ಷಕರಿಗೆ ಗೌರವಧನ, ಭತ್ಯೆ ಹಾಗೂ ಗಳಿಕೆ ರಜೆ ನೀಡಬೇಕು. ಜೊತೆಗೆ ನಿಯೋಜನೆಗಳನ್ನು ಅವರ ಶಾಲಾ ವ್ಯಾಪ್ತಿಯಲ್ಲೇ ಮಾಡಬೇಕು” ಎಂದು ಒತ್ತಾಯಿಸಿದರು.
ಶಿಕ್ಷಕರು ವೈಯಕ್ತಿಕ ಮೊಬೈಲ್ ಮತ್ತು ಇಂಟರ್ನೆಟ್ ಬಳಸಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕಷ್ಟ ಅನುಭವಿಸುತ್ತಿರುವುದರೊಂದಿಗೆ, ಮೊಬೈಲ್ ಆಪ್‌ನಲ್ಲಿ ಹಲವಾರು ದೋಷಗಳು ಎದುರಾಗುತ್ತಿವೆ. ಸಮೀಕ್ಷೆಗೆ ನಿಯೋಜಿಸಲಾದ ಪ್ರದೇಶಗಳ ಯುಎಚ್‌ಐಡಿ ಸಂಖ್ಯೆಗಳ ಪಟ್ಟಿಯನ್ನು ಒದಗಿಸುವಂತೆ ಅವರು ಮನವಿ ಸಲ್ಲಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗಗನ ಸಿಂಧು, ಶಿಕ್ಷಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸಹ ಕ್ರಮ ಜರುಗಿಸಲಾಗುವುದು ಎಂದರು. ಜೊತೆಗೆ, “ಜಿಲ್ಲಾಧಿಕಾರಿಗಳ ಸೂಚನೆಯಂತೆ ಪ್ರತಿಯೊಬ್ಬರೂ ಕರ್ತವ್ಯಕ್ಕೆ ಹಾಜರಾಗಬೇಕು, ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸುಂದರಾಚಾರಿ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.
Kalanayakanahalli, Sidlaghatta : ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಪೋಷಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದರೊಂದಿಗೆ ಹುಟ್ಟಿದ ಊರಿಗೆ ಹೆಸರು ತರಬೇಕು ಎಂದು PLD ಬ್ಯಾಂಕಿನ ನಿರ್ದೇಶಕ ಭೀಮೇಶ್ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ GKVK ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮ ವಾಸ್ತವ್ಯ ಮಾಡುತ್ತಾ ಗ್ರಾಮಸ್ಥರ ಮನಗೆಲ್ಲುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಕೆವಿಕೆ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಕೈಗೊಂಡಿರುವ ಸೇವ ಕಾರ್ಯಗಳು ಪ್ರದರ್ಶನ ಮಾಡಲು ಇದೇ ಅಕ್ಟೋಬರ್ 8 ರಂದು ನಡೆಯಲಿರುವ ಬೆಳೆ ಕ್ಷೇತ್ರ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಕೈಗೊಂಡಿರುವ ಸೇವಾ ಕಾರ್ಯಗಳ ಕುರಿತು ವಿವರಣೆ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.
Sidlaghatta : ಶಿಡ್ಲಘಟ್ಟ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಸ್ದಾನದಲ್ಲಿ ಶಾಶ್ವತ ನೀರಾವರಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅ.02 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯುವ ಬಯಲು ಸೀಮೆ ಜಿಲ್ಲೆಗಳ ಸಮಾವೇಶದ ಅಂಗವಾಗಿ ಪೂರ್ವಬಾವಿ ಸಭೆ ನಡೆಯಿತು.
ಶಾಶ್ವತ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಗೋಪಾಲ ಗೌಡ ಅವರ ನೇತೃತ್ವದಲ್ಲಿ ಮತ್ತೆ ಶಾಶ್ವತ ಹೋರಾಟ ಮುನ್ನಲೆಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಶಾಶ್ವತವಾಗಿ ಕೃಷ್ಣಾ ನದಿ ನೀರು ತರಬೇಕೆಂದು ಹಾಗೂ ಮುಂದಿನ ಪೀಳಿಗೆಗೆ ನೀರಿನ ಅವಶ್ಯಕತೆಯ ಮಹತ್ವ ತಿಳಿಸುವ ಸಲುವಾಗಿ ವಿಜಯ ದಶಮಿ ಹಾಗೂ ಗಾಂಧಿ ಜಯಂತಿಯಂದು ಚಿಕ್ಕಬಳ್ಳಾಪುರ ನಗರ ಕೆಇಬಿ ಮುಂಭಾಗದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಈ ಸಭೆಗೆ ಎಲ್ಲಾ ಜಿಲ್ಲೆ ಮತ್ತು ಎಲ್ಲಾ ತಾಲ್ಲೂಕುಗಳ ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್, ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯ ಉಪಾಧ್ಯಕ್ಷರಾದ ಮುನಿಕೆಂಪಣ್ಣ, ನಲ್ಲೇನಹಳ್ಳಿ ಸುಬ್ರಮಣಿ, ಡಿ.ವಿ. ನಾರಾಯಣಸ್ವಾಮಿ, ಬಸವಾಪಟ್ಟಣ ನಾಗರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಎಚ್. ಎನ್. ಕದೀರೇಗೌಡ, ಈ ಧರೆ ಪ್ರಕಾಶ್, ಕನ್ನಡ ಜನಪರ ವೇದಿಕೆ ಅಧ್ಯಕ್ಷ ರಾಮಾಂಜನೇಯ, ಸುರೇಶ್ ಭಗತ್, ಅಹಿಂದ ಸಂಘಟನೆಯ ಅಪ್ಸರ್ ಪಾಷ್, ಮುನಿಯಪ್ಪ, ಪ್ರದೀಪ್, ಹಿತ್ತಲಹಳ್ಳಿ ಸುರೇಶ್, ಬೀಮಣ್ಣ,ವೆಂಕಟೇಶ್, ಶ್ರೀನಿವಾಸ್, ಮಂಜುನಾಥ್, ಬೋದಗೂರು ಮುನಿರಾಜ್ ಹಾಜರಿದ್ದರು.
Sidlaghatta : ಜನರ ನಾಡಿಮಿಡಿತವನ್ನು ಅರ್ಥೈಸಿ ಹೋರಾಟ ಮನೋಭಾವವನ್ನು ರೂಢಿಸಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಇಂದಿನ ಯುವಜನತೆಗೆ ಆದರ್ಶವಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಗುರುವಾರ ಉಪಾಧ್ಯಾಯರ 109ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ಪಂಡಿತ್ ಉಪಾಧ್ಯಾಯರು ಭಾರತೀಯ ಜನಸಂಘದ ಪ್ರಮುಖ ನಾಯಕರಾಗಿದ್ದು, ಏಕಾತ್ಮ ಮಾನವತಾವಾದ ತತ್ವವನ್ನು ಪ್ರಸ್ತಾಪಿಸಿದರು. ಸಾಮ್ಯವಾದ ಹಾಗೂ ಬಂಡವಾಳಶಾಹಿ ತತ್ವಗಳನ್ನು ವಿಮರ್ಶಿಸಿ, ಅದರ ಬದಲಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಹೊಂದುವ ಮಾರ್ಗಗಳನ್ನು ಸೂಚಿಸಿದ್ದರು. ಸರಳ ಜೀವನ ನಡೆಸಿದ ಅವರು ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಅತ್ಯುತ್ತಮ ಸೇವೆ ಸಲ್ಲಿಸಿದರು. ಯುವಕರು ಅವರ ಆದರ್ಶವನ್ನು ನೆನೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಸಾಹಿತಿ ಡಾ. ಎಸ್.ಎಲ್. ಬೈರಪ್ಪ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನೂ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಮಾಜಿ ನಗರಸಭೆ ಅಧ್ಯಕ್ಷ ಸುರೇಂದ್ರಗೌಡ, ಸದಸ್ಯ ನಾರಾಯಣಸ್ವಾಮಿ, ರೂಪಸಿ ರಮೇಶ್, ನರೇಶ್ ಸೇರಿದಂತೆ ಅನೇಕರಿದ್ದರು.
Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು KIADB ರೈತ ಪರ ಹೋರಾಟ ಸಮಿತಿ ಪದಾಧಿಕಾರಿಗಳು ಬೃಹತ್ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನ ಸಚಿವರ ಗೃಹ ಕಚೇರಿಯಲ್ಲಿ ಸಮಿತಿ ಪ್ರತಿನಿಧಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು. ಸುಮಾರು 13 ಹಳ್ಳಿಗಳ 2,823 ಎಕರೆ ಜಮೀನನ್ನು KIADB ಮೂಲಕ ಭೂಸ್ವಾಧೀನ ಪಡಿಸಿಕೊಂಡು ಕೈಗಾರಿಕಾ ಹೂಡಿಕೆಗಳಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಿ 13 ತಿಂಗಳು ಕಳೆದರೂ ಯಾವುದೇ ಪ್ರಗತಿ ಇಲ್ಲವೆಂದು ಅವರು ದೂರಿದರು.
ಮನವಿಯಲ್ಲಿ, ಸರ್ಕಾರ ತ್ವರಿತಗತಿಯಲ್ಲಿ ಪ್ರಕ್ರಿಯೆ ಚುರುಕುಗೊಳಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ನೀರಾವರಿ ಪ್ರದೇಶಗಳನ್ನು ಹೊರಗಿಟ್ಟು, ರೈತರಿಗೆ ಪ್ರತಿ ಎಕರೆಗೆ ₹3 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, 520 ಎಕರೆ ಜಮೀನು ಸಂಪೂರ್ಣವಾಗಿ ಪಿ.ಎಸ್.ಎಲ್. ಕಂಪನಿಯ ಹೆಸರಿನಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ, ಅದರ ಮೂಲ ರೈತರಿಗೆ ಪರಿಹಾರದ ಹಣ ತಕ್ಷಣ ಜಮಾ ಆಗುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಯಿತು.
ಇದೇ ವೇಳೆ, ಕೆ.ಐ.ಎ.ಡಿ.ಬಿ ಪರ ನಿಂತ ಕೆಲ ರೈತರ ಮೇಲೆ ಹಲ್ಲೆ ಮತ್ತು ದಬ್ಬಾಳಿಕೆ ನಡೆಸಲಾಗುತ್ತಿರುವುದನ್ನು ಖಂಡಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಎಂ.ಬಿ. ಪಾಟೀಲ್, “ನಾನು ರೈತನ ಕುಟುಂಬದಿಂದ ಬಂದವನಾಗಿದ್ದು, ರೈತರಿಗೆ ಅನ್ಯಾಯವಾಗದಂತೆ ಉತ್ತಮ ಪರಿಹಾರ ನೀಡಲು ಬದ್ಧನಾಗಿದ್ದೇನೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ನಾಗೇಶ್ ಗೌಡ, ಕದಸಂಸ ತಾಲ್ಲೂಕು ಸಂಚಾಲಕ ರಾಮಾಂಜನೇಯ ಮತ್ತು ಸುಬ್ರಮಣಿ ಉಪಸ್ಥಿತರಿದ್ದರು.
Budagavarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬುಡಗವಾರಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗೋಮಾಳ ಜಮೀನಿನಲ್ಲಿ ಸ್ವಾಧೀನದಲ್ಲಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲಬ್ಬಿಸುವ ಹುನ್ನಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿ, ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.
ತಹಶೀಲ್ದಾರ್ ಗಗನ ಸಿಂಧು ಅವರು ಪೊಲೀಸರ ಸರ್ಪಗಾವಲಿನಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದೊಡನೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರದೇಶಕ್ಕೆ ತೆರಳಿದ ವೇಳೆಯಲ್ಲಿ ಅಲ್ಲಿ ಸ್ವಾಧೀನದಲ್ಲಿರುವ ರೈತರು ಮತ್ತು ಮಹಿಳೆಯರು ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 50 ವರ್ಷಗಳಿಂದ ನಾವು ಸ್ವಾಧೀನದಲ್ಲಿದ್ದೇವೆ ಇದರಿಂದಾಗಿ ನಮ್ಮ ಜೀವನ ನಡೆಯುತ್ತಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ನಮಗೆ ಗಿಡಗಳು ಕೊಟ್ಟು ತಮ್ಮ ತಮ್ಮ ತೋಟಗಳಲ್ಲಿ ಹಾಕಿಕೊಳ್ಳಿ ಎಂದು ಹೇಳಿದ್ದರಿಂದ ನಾವು ಹಾಕಿಕೊಂಡಿದ್ದೇವೆ. ಹಾಕಿರುವ ದುಡ್ಡು ಸಹ ನಮಗೆ ಕೊಟ್ಟಿಲ್ಲ. ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆಸಿದ್ದಾರೆ. ಈಗ ನಮ್ಮ ಜಮೀನು ಸರ್ವೇ ಮಾಡಲು ಬಂದಿರೋದು ಎಷ್ಟರಮಟ್ಟಿಗೆ ಸರಿ ಎಂದು ತಾಲ್ಲೂಕು ದಂಡಾಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಿ ಗೋಮಾಳದಲ್ಲಿ ನಾವು ಸ್ವಾಧೀನದಲ್ಲಿದ್ದೇವೆ. ಕಾನೂನಿನ ಪ್ರಕಾರ ಸಾಗುವಳಿ ಚೀಟಿ ನೀಡಲು 51, 53, 57 ಅರ್ಜಿಗಳನ್ನು ಹಾಕಿಕೊಂಡಿದ್ದೇವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಯಾವುದಾದರೂ ದಾಖಲೆ ಇದ್ದರೆ, ಅವರ ಹೆಸರಿನಲ್ಲಿ ಆರ್. ಟಿ. ಸಿ ಬರುತ್ತದೆ. ಆದರೆ ಪಹಣಿಯಲ್ಲಿ ಯಾವುದು ಇಲ್ಲ, ಸರ್ವೆ ಯಾಕೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರನ್ನು ರೈತರು ಪ್ರಶ್ನಿಸಿದರು.
ತಹಶೀಲ್ದಾರ್ ಅವರು, ಯಾರು ಯಾವ ಬೆಳೆಗಳನ್ನು ಬೆಳೆದಿದ್ದಾರೆ, ಅರಣ್ಯ ಇಲಾಖೆಗಳು ಅಧಿಕಾರಿಗಳು ಗಿಡಗಳನ್ನು ನಾಟಿ ಮಾಡಿದ್ದಾರೆ ಎಂದು ಪರಿಶೀಲನೆ ನಡೆಸೋಣ ಎಂದಾಗ ಮುಂದೆ ಸಾಗಲು ಮಹಿಳೆಯರು ಮತ್ತು ರೈತರು ಅಡ್ಡ ಪಡಿಸಿದರು. ಇದೇ ವೇಳೆಯಲ್ಲಿ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಅರಣ್ಯಾಧಿಕಾರಿಗಳನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಈ ಕೆಲಕಾಲ ಗೊಂದಲ ಮತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ತಹಶೀಲ್ದಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಾನು ಯಾವುದೇ ಕಾರಣಕ್ಕೂ ರೈತ ವಿರೋಧಿ ನೀತಿಯನ್ನು ಅನುಸರಿಸುವುದಿಲ್ಲ. ರೈತರ ಪರವಾಗಿ ಇರ್ತೀನಿ ಎಂದು ಭರವಸೆ ನೀಡಿದ ಬಳಿಕ ಎಲ್ಲಾ ರೈತರು ಮತ್ತು ಮಹಿಳೆಯರು ಎದ್ದು ತಾವು ಸ್ವಾದೀನದಲ್ಲಿರುವ ಜಮೀನುಗಳನ್ನು ತೋರಿಸಿದರು.
ಸರ್ಕಲ್ ಇಸ್ಪೆಕ್ಟರ್ ರೈತರನ್ನು ಸಮಾಧಾನ ಮಾಡಿಸಿ ತಾಲೂಕು ದಂಡಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಅನುಕೂಲ ಮಾಡಿಕೊಟ್ಟರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ. ಕೆ. ಅರುಣ್ ಕುಮಾರ್ ಮಾತನಾಡಿ, 60 ವರ್ಷಗಳಿಂದ ರೈತರು ಇಲ್ಲಿ ಸಾಧೀನದಲ್ಲಿದ್ದಾರೆ, ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ವತಃ ತಹಶೀಲ್ದಾರ್ ವೀಕ್ಷಣೆ ಮಾಡಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಕೇವಲ ಗಿಡ ನಾಟಿ ಮಾಡಲು ಅವಕಾಶ ಕೊಟ್ಟು ಜಮೀನೇ ನಮ್ಮದು ಅಂತ ಹೇಳಿಕೊಂಡು ಬಂದಿರೋದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಯಾವುದೇ ರೀತಿ ದಾಖಲೆಗಳಿಲ್ಲದೆ ಕೇವಲ ಗಿಡಗಳನ್ನು ಮುಂದೆ ಇಟ್ಕೊಂಡು ರೈತರನ್ನು ಒಕ್ಕಲುಬ್ಬಿಸುವ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಗೋಮಾಳ ಜಮೀನು ರೈತರಿಗೆ ಹಸ್ತಾಂತರ ಮಾಡುವ ಅಥವಾ ಮಂಜೂರು ಮಾಡುವ ಹಕ್ಕನ್ನು ತಹಶೀಲ್ದಾರ್ ಹೊಂದಿರುತ್ತಾರೆ. ಅದು ಹೊರತು ಪಡಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡಲು ಅಧಿಕಾರವೇನು ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಬಳಿ ಏನಾದರೂ ದಾಖಲೆ ಇದ್ರೆ ತೋರಿಸಿರಿ. ಅದನ್ನು ಆಧಾರವಾಗಿಟ್ಟುಕೊಂಡು ಸರ್ವೇ ಮಾಡಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ರೈತ ಮುಖಂಡರು ತಹಶೀಲ್ದಾರ್ ಅವರಿಗೆ ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಶ್ಯಾಮಲಾ, ವೇಣುಗೋಪಾಲ್ ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಭಾಗಿಯ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ರೆಡ್ಡಿ, ಜಿಲ್ಲಾಧ್ಯಕ್ಷ ಟಿ.ಕೆ. ಅರುಣ್ ಕುಮಾರ್, ಕಾರ್ಯದರ್ಶಿ ಮಾರುತಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಬಾಬು, ಜಿಲ್ಲಾ ಸಂಚಾಲಕ ರೆಡ್ಡಪ್ಪ, ಈಶ್ವರ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ಪೆದ್ದಪಯ್ಯ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಈಶ್ವರೆಡ್ಡಿ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಯರಪ್ಪ, ನಕ್ಕಲಹಳ್ಳಿ , ಬುಡಗವಾರಹಳ್ಳಿ, ದಾಸಾರ್ಲಹಳ್ಳಿ ಗ್ರಾಮಗಳ ರೈತರು ಹಾಗೂ ರೈತ ಮುಖಂಡರು ಹಾಜರಿದ್ದರು.