ತಾಲ್ಲೂಕಿನ ಮಳ್ಳೂರು ಗ್ರಾಮ ನಾಗಲಮುದ್ದಮ್ಮ ದೇವಿಯ ವಿಗ್ರಹ ಪುನರ್ ಪ್ರತಿಷ್ಠಾಪನೆ ಮತ್ತು ಕೆರೆಕಟ್ಟೆ ಮೇಲೆ ನಾಗರ ಪ್ರತಿಸ್ಥಾಪನೆ ಮಹೋತ್ಸವವನ್ನು ಗ್ರಾಮಸ್ಥರು ಶ್ರದ್ದಾಭಕ್ತಿ ಭಾವದಿಂದ ನೆರವೇರಿಸಿದರು.
ಪ್ರತಿಷ್ಠಾಪನೆ ಅಂಗವಾಗಿ ಕ್ಷೀರಾಭಿಷೇಕ, ಕಂಬಾಭಿಷೇಕ, ಪ್ರರ್ಣಾವುತಿ, ಮಹಾಮಂಗಳಾರತಿ ಹಾಗೂ ಭಕ್ತರ ಅರಿಕೆ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು. ನಂತರ ಮಳ್ಳೂರು ಕೆರೆ ಕಟ್ಟೆ ಮೇಲೆ ನಾಗರ ದೇವರುಗಳನ್ನು ಪ್ರತಿಷ್ಠಾಪಿಸಲಾಯಿತು.
ನಾಗಲಮುದ್ದಮ್ಮ ದೇವಿ ವಿಗ್ರಹವನ್ನು ಗ್ರಾಮದ ಯುವಕರು ಹೊತ್ತು ಮೆರವಣಿಗೆ ಮಾಡಿದರು. ಸಂಜೆ ಮಹಿಳೆಯರು ದೀಪಗಳನ್ನು ಹೊತ್ತು ಹಿರಿಮುಡಿಯಲ್ಲಿ ದೇವಾಲಯಕ್ಕೆ ಬಂದು ದೇವರಿಗೆ ದೀಪಾರಾಧನೆ ಮಾಡಿದರು. ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಜರಿದ್ದು ದೇವರ ದರ್ಶನ ಪಡೆದರು.
ದೇವಾಲಯ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಹಾಗೂ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಜಿ.ಎಂ.ರಾಮರೆಡ್ಡಿ, ಟಿ.ನಾಗರಾಜಪ್ಪ, ಸಿ.ಎನ್.ಪಿಳ್ಳವೆಂಕಟಸ್ವಾಮಪ್ಪ, ಮುನಿಕೃಷ್ಣಪ್ಪ, ದೇವರಾಜ್, ಎಂ.ಎನ್.ನಾರಾಯಣಸ್ವಾಮಿ, ಎಂ.ಪಿ.ಸಿ.ಎಸ್.ಮಾಜಿ ಅಧ್ಯಕ್ಷ ಕೆಂಪೇಗೌಡ, ನಾಗಲಮುದ್ದಮ್ಮ ದೇವಿಯ ಕುಲಬಾಂಧವರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಲ್ಲೂಕಿನ ಮುತ್ತೂರು ಗ್ರಾಮದ ಪುರಾತನ ಜಲಕಂಠೇಶ್ವರ ದೇವಾಲಯದ ಮುಂದೆ ನವಗ್ರಹ ವನದಲ್ಲಿ ಗಿಡಗಳನ್ನು ನೆಟ್ಟು ಬೆಂಗಳೂರಿನ ರೀಫಾರೆಸ್ಟ್ ಇಂಡಿಯಾ ಟ್ರಸ್ಟ್ ಸಂಚಾಲಕಿ ಉಷಾಶೆಟ್ಟಿ ಮಾತನಾಡಿದರು.
ಸಂಸ್ಥೆಯ ನೆರವಿನಿಂದ ನವಗ್ರಹ ವನಕ್ಕೆ ಬೇಕಾದ ಗಿಡಗಳನ್ನು ಪಡೆದು ಜಲಕಂಠೇಶ್ವರ ದೇವಾಲಯದ ಮುಂದೆ ನೆಡುತ್ತಿದ್ದು, ಅತ್ಯುತ್ತಮ ನವಗ್ರಹವನವನ್ನು ಮಾಡುತ್ತಿರುವುದಾಗಿ ಗ್ರಾಮಾಂತರ ಅವರು ತಿಳಿಸಿದರು.
ಮುತ್ತೂರು ಗ್ರಾಮದ ಪುರಾತನ ಜಲಕಂಠೇಶ್ವರ ದೇವಾಲಯದ ಮೂರ್ತಿಗಳನ್ನು 17 ನೇ ಶತಮಾನದಲ್ಲಿ ಸೊಣ್ಣಬೈರೇಗೌಡರು ಪ್ರತಿಷ್ಠಾಪಿಸಿರುವರೆಂದು ಹಿರಿಯರು ಹೇಳುತ್ತಾರೆ. ಈ ಪುರಾತನ ದೇವಸ್ಥಾನವನ್ನು ಎರದು ವರ್ಷಗಳ ಹಿಂದೆ ನವೀಕರಣಗೊಳಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ನವಗ್ರಹ ವನವನ್ನು ರೂಪಿಸುವ ಉದ್ದೇಶದಿಂದ ಸೂಕ್ತ ಸ್ಥಳಗಳಲ್ಲಿ ಸೂಕ್ತವಾದ ಗಿಡಗಳನ್ನು ನೆಡುತ್ತಿರುವುದಾಗಿ ಹೇಳಿದರು.
ಗ್ರಾಮದ ನಾರಾಯಣಮೂರ್ತಿ, ವೆಂಕಟೇಶಮೂರ್ತಿ, ಎಂ.ಎಲ್.ರಾಜಣ್ಣ, ಶಿವಕುಮಾರ್ ಹಾಜರಿದ್ದರು.
ಮಹಿಳೆಯೋರ್ವಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ದಿಬ್ಬೂರಹಳ್ಳಿ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ ಗೊಲ್ಲಹಳ್ಳಿ ಗ್ರಾಮದ ಜ್ಯೋತಿ ಎಂಬ ಮಹಿಳೆಯನ್ನು ಕಳೆದ ಆರು ತಿಂಗಳ ಹಿಂದೆ ಪೂಸಗಾನದೊಡ್ಡಿಯಲ್ಲಿರುವ ಆಕೆಯ ಗಂಡ ನರಸಿಂಹಪ್ಪ ಹಾಗು ಆತನ ಮಗ ನವೀನ್ ಕುಮಾರ್ ಮತ್ತಿತರರು ಕೊಲೆ ಮಾಡಿದ್ದು ಕಾನೂನು ಕ್ರಮ ಜರುಗಿಸುವಂತೆ ಮೃತ ಜ್ಯೋತಿಯ ತಾಯಿ ಎಸ್ ಗೊಲ್ಲಹಳ್ಳಿಯ ಮುನಿನಾರಾಯಣಮ್ಮ ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕಸಾಪ ವತಿಯಿಂದ ಆಯೋಜಿಸಿದ್ದ ದ.ರಾ.ಬೇಂದ್ರೆ ಅವರ 125 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ವರಕವಿ ದ.ರಾ. ಬೇಂದ್ರೆಯವರ ಮಾತೃಭಾಷೆ ಮರಾಠಿಯಾದರೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ (ನಾಕುತಂತಿ ಕೃತಿ) ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟವರು ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.ಬೇಂದ್ರೆ. ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ವಿವಿಧ ಸಾಹಿತಿಗಳ ಕುರಿತಾದ ಪುಸ್ತಕಗಳನ್ನು ನೀಡಲಾಯಿತು.
ಮುಖ್ಯ ಶಿಕ್ಷಕಿ ಪಿ.ವಿ.ಸುಜಾತ, ಶಿಕ್ಷಕಿಯರಾದ ಎಲ್.ಕೋಮಲ, ಸಿ.ವರಮ್ಮ ಹಾಜರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ಸಂಘದ ಸದಸ್ಯರಿಗೆ ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಯೋಜನೆ ವತಿಯಿಂದ ಪ್ರವಾಸ ಹೊರಟ ಬಸ್ಸುಗಳಿಗೆ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಚಾಲನೆ ನೀಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರತಿವರ್ಷ ತಾಲ್ಲೂಕಿನಲ್ಲಿ ಪ್ರತಿ ಹಳ್ಳಿಗಳಿಂದ ಆಯ್ದ ಸಂಘದ ಸದಸ್ಯರಿಗೆ ಅಧ್ಯಯನ ಪ್ರವಾಸವನ್ನು ಹಮ್ಮಿಕೊಂಡಿದ್ದು ಈಗಾಗಲೇ 14 ಅಧ್ಯಯನ ಪ್ರವಾಸವನ್ನು ಈ ವರ್ಷದಲ್ಲಿ ನಡೆಸಲಾಗಿದೆ. ಇದರ ಉದ್ದೇಶ ಪ್ರತಿ ಸದಸ್ಯರಿಗೂ ಸರ್ಕಾರದ ವಿವಿಧ ಇಲಾಖೆಗಳ ಪರಿಚಯ ಆಗಬೇಕು. ಸ್ವಉದ್ಯೋಗ, ಕೃಷಿ, ಹೈನುಗಾರಿಕೆಯ ಮೂಲಕ ಅಭಿವೃದ್ಧಿ ಸಾಧಿಸಿದ ಸದಸ್ಯರನ್ನು ನೋಡಿ ನಮ್ಮ ಸಂಘದ ಸದಸ್ಯರು ಅಭಿವೃದ್ಧಿಯನ್ನು ಸಾಧಿಸಿ, ಸ್ವಾವಲಂಬಿ ಜೀವನ ಸಾಗಿಸಬೇಕು ಎನ್ನುವುದು ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಸುಮಾರು 1 ಲಕ್ಷ ವೆಚ್ಚದಲ್ಲಿ 14 ಅಧ್ಯಯನ ಪ್ರವಾಸವನ್ನು ನಡೆಸಲಾಗಿದೆ. ಸದಸ್ಯರು ಇದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ” ಎಂದು ತಿಳಿಸಿದರು.
ಕೈವಾರ, ಕೈಲಾಸಗಿರಿಬೆಟ್ಟ, ರೇಷ್ಮೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಗ್ನಿಶಾಮಕದಳಕ್ಕೆ ಸದಸ್ಯರನ್ನು ಕರೆದೊಯ್ದು ಮಾಹಿತಿ ನೀಡಲಾಯಿತು.
ನಗರದ ಅಗ್ನಿಶಾಮಕದಳಕ್ಕೆ ಸದಸ್ಯರು ಭೇಟಿ ನೀಡಿದಾಗ, ಅಲ್ಲಿಯ ಅಧಿಕಾರಿಗಳು ಅಗ್ನಿ ಅವಘಡ ಆದಾಗ ಯಾವ ರೀತಿ ಬೆಂಕಿಯನ್ನು ನಂದಿಸಬೇಕು ಹಾಗೂ ಅಗ್ನಿಶಾಮಕ ದಳದವರ ಉಪಯೋಗ ಹೇಗೆ ಪಡೆದುಕೊಳ್ಳಬೇಕು, ಅವರಿಂದ ಆಗುವ ಉಪಯೋಗವೇನು ಎಂದು ತಿಳಿಸಿಕೊಟ್ಟರು.
ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಇದೀಗ ವೈಯಕ್ತಿಕವಾಗಿ ಸಿಗುತ್ತಿರುವ ಅಲ್ಪ ಪ್ರಮಾಣದ ಸಾಲಕ್ಕೆ ತೃಪ್ತಿ ಪಡದೇ 50-100 ಜನರ ಗುಂಪು ರಚಿಸಿಕೊಂಡು ಸ್ವಯಂ ಉದ್ಯೋಗ ಮಾಡಲು ಮುಂದಾದಲ್ಲಿ ಯಾವುದೇ ಭದ್ರತೆಯಿಲ್ಲದೇ ಡಿಸಿಸಿ ಬ್ಯಾಂಕ್‌ನಿಂದ ಮತ್ತಷ್ಟು ಸಾಲ ಸೌಲಭ್ಯ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಹೊರವಲಯದ ವರದನಾಯಕನಹಳ್ಳಿ ಬಳಿಯಿರುವ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರೈತರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಠಿ ಮಾಡಲು ಡಿಸಿಸಿ ಬ್ಯಾಂಕ್ ಮುಂದಾಗಿದೆ. ಪ್ರತಿಯೊಬ್ಬರೂ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾಗಬೇಕು. ಸಾಲ ನಮ್ಮಲ್ಲಿ ಪಡೆದು ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇಡುವುದನ್ನು ಪ್ರತಿಯೊಬ್ಬರೂ ಬಿಡಬೇಕು. ಡಿಸಿಸಿ ಬ್ಯಾಂಕ್ ಬಡವರ ಹಾಗೂ ಮಹಿಳೆಯರ ಪರವಾಗಿದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ನಷ್ಟದಲ್ಲಿದ್ದ ಕೋಲಾರ ಡಿಸಿಸಿ ಬ್ಯಾಂಕ್‌ನ್ನು ಅತಿ ಕಡಿಮೆ ಅವಧಿಯಲ್ಲಿ ದೇಶದಲ್ಲಿಯೇ ಮಾದರಿ ಬ್ಯಾಂಕನ್ನಾಗಿ ರೂಪಿಸಿದ ಕೀರ್ತಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಗೋವಿಂದಗೌಡ ಸೇರಿದಂತೆ ಅವರ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಸಲ್ಲುತ್ತದೆ ಎಂದರು.
ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕಿನಿಂದ ರೈತರು ಸೇರಿದಂತೆ ಮಹಿಳಾ ಸ್ವಸಹಾಯ ಸಂಘಗಳಿಗೆ ಒದಗಿಸುತ್ತಿರುವ ಸಾಲವನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ರಾಜ್ಯಾಧ್ಯಂತ ಅತಿಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಕೀರ್ತಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಸಲ್ಲುತ್ತದೆ.
ಈ ಹಿಂದೆ ಠೇವಣಿದಾರರಿಗೆ ಹಣ ವಾಪಸ್ಸು ನೀಡಲಾರದ ಸ್ಥಿತಿ ತಲುಪಿದ್ದ ಡಿಸಿಸಿ ಬ್ಯಾಂಕ್ ಇನ್ನೇನು ಬೆಂಗಳೂರಿನ ಬೇರೊಂದು ಬ್ಯಾಂಕಿಗೆ ವಿಲೀನವಾಗುತ್ತದೆ ಎನ್ನುವ ಕೂಗು ಕೇಳಿಬಂದಿತ್ತು. ಅಂತಹ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರ ವಹಿಸಿಕೊಂಡ ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದ ಆಡಳಿತ ಮಂಡಳಿ ನಷ್ಟವನ್ನು ತುಂಬುವ ಜೊತೆಗೆ ಲಾಭ ಗಳಿಸಿ ಎನ್‌ಪಿಎ ಶೇ 2ಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರಿಗೆ ಸಾವಿರಾರು ಕೋಟಿ ಸಾಲ ನೀಡಿದ ದೇಶದ ನಂ 1 ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದರು
ಈ ಸಂದರ್ಭದಲ್ಲಿ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸುಮಾರು 54 ಸ್ವಸಹಾಯ ಸಂಘಗಳಿಗೆ 2 ಕೋಟಿ 38 ಲಕ್ಷ, 245 ರೈತರಿಗೆ ಕೆಸಿಸಿ ಸಾಲವಾಗಿ 4 ಕೋಟಿ ಇಪ್ಪತ್ತೇಳು ಲಕ್ಷ, ರೇಷ್ಮೆ ಹುಳು ಮನೆ ನಿರ್ಮಾಣ ಮಾಡಲು 11 ಜನರಿಗೆ 81 ಲಕ್ಷ, ಸೇರಿದಂತೆ ಕೋಳಿ ಸಾಕಾಣಿಕೆಗಾಗಿ ಓರ್ವ ರೈತನಿಗೆ 10 ಲಕ್ಷ ಒಟ್ಟು 7,56,00,000 (ಏಳು ಕೋಟಿ ಐವತ್ತಾರು ಲಕ್ಷ) ರೂಗಳ ಸಾಲ ವಿತರಣೆ ಮಾಡಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷರಾದ ಶೆಟ್ಟಹಳ್ಳಿ ರಾಮಚಂದ್ರಪ್ಪ, ವಿ.ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ವೇಣುಗೋಪಾಲ್, ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಶ್ರೀನಾಥ್, ಟೌನ್ ಎಸ್ ಎಫ್ ಸಿ ಎಸ್ ಕಾರ್ಯನಿರ್ವಹಣಾಧಿಕಾರಿ ದೇವಿಕ, ತಾಲ್ಲೂಕು ಪಂಚಾಯಿತಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್ ಹಾಜರಿದ್ದರು.
ನಗರದ ಕೋಟೆ ವೃತ್ತದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕ ಭಾನುವಾರ ಆಯೋಜಿಸಿದ್ದ ಕರ್ನಾಟಕ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸಿ.ಇ.ರಂಗಸ್ವಾಮಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳು ಸುಂಕವನ್ನು ಕಟ್ಟಬೇಡಿ. ಪಟ್ಟಣ ವ್ಯಾಪಾರ ಸಮಿತಿ ರಚನೆಯಾಗಿ ನಿಮಗೆ ಬಾಡಿಗೆಯನ್ನು ನಿಗದಿ ಪಡಿಸುವರು. ಆ ಅಕೌಂಟಿಗೆ ಬಾಡಿಗೆಯನ್ನು ಪಾವತಿಸಿ ಎಂದು ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳು ನಿರ್ದಿಷ್ಟ ಸ್ಥಳದಲ್ಲಿ ವ್ಯಾಪಾರ ಮಾಡಲು ಸರಕಾರಗಳು ಅವಕಾಶ ಮಾಡಿಕೊಡಬೇಕು. ವ್ಯಾಪಾರಿಗಳಿಗೆ ಮೂಲಸೌಲಭ್ಯ ಕಲ್ಪಿಸಿ, ಕ್ರಮಬದ್ಧ ವ್ಯಾಪಾರ ವಹಿವಾಟಿಗೆ ಕ್ರಮ ಕೈಗೊಳ್ಳಬೇಕು, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರಕಾರ ಎಲ್ಲ ಪಾಲಿಕೆಗಳಿಗೆ ನಿರ್ದೇಶನ ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗಾಗಿ ಪಟ್ಟಣ ವ್ಯಾಪಾರ ಸಮಿತಿ ಅಡಿಯಲ್ಲಿ ಮಾರುಕಟ್ಟೆಯನ್ನು ಮಾಡಿಕೊಡಬೇಕು. ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಗೋದಾಮು, ಅಂಗನವಾಡಿ ಶಿಶುವಿಹಾರ ಎಲ್ಲವನ್ನೂ ಒದಗಿಸಬೇಕು ಇದರಿಂದ ನಗರದ ಆರ್ಥಿಕ ಪ್ರಗತಿಯೂ ಸಾಧ್ಯವಾಗಲಿದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು. ಸಾಲ ಸೌಲಭ್ಯಕ್ಕೂ ನೆರವಾಗುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು ಮಾತನಾಡಿ, ರೈತರು ದೇಶದ ಬೆನ್ನೆಲುಬಾದರೆ, ಬೀದಿ ಬದಿ ವ್ಯಾಪಾರಸ್ಥರು ದೇಹದಂತೆ. ಬಿಸಿಲು, ಚಳಿ, ಮಳೆಯೆಂಬುದನ್ನು ಲೆಕ್ಕಿಸದೆ ಕಾಯಕಯೋಗಿಗಳಾದ ಇವರ ಕೊಡುಗೆ ದೇಶದ ಅಭಿವೃದ್ಧಿಗೆ ಪೂರಕವಾದುದು. ಸಂಘಟನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳು ಒಗ್ಗೂಡಿ ತಮ್ಮ ಹಕ್ಕುಗಳನ್ನು ಪಡೆಯಿರಿ. ಕುಟುಂಬ ಭದ್ರತೆಗೆ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಗಮನಕೊಡುವಂತೆ ಹೇಳಿದರು.
ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅಸ್ಲಮ್ ಪಾಷ, ತಾಲ್ಲೂಕು ಅಧ್ಯಕ್ಷ ಶ್ರೀಧರ್ ಶ್ರೀರಾಮ್, ಕೆ.ಎಸ್.ಗೋಪಾಲ್, ಇಲಿಯಾಜ್, ಸುರೇಶ್, ಮಹೇಶ್ ತಿಮ್ಮರಾಯಪ್ಪ, ಗೋವಿಂದರಾಜು, ವೆಂಕಟರೋಣಪ್ಪ, ಲಕ್ಷ್ಮೀದೇವಿ, ಮುನಿರತ್ನಮ್ಮ, ಪಾರ್ವತಮ್ಮ, ನಗರಸಭಾ ಸದಸ್ಯರು ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಡಿ.ಎಂ.ಮಹೇಶ್ ಕುಮಾರ್ ಅವರು ಸಾಂಸ್ಕೃತಿಕ ರಂಗದಲ್ಲಿ ನೀಡಿರುವ ಕೊಡುಗೆಯನ್ನು ಗುರುತಿಸಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಪ್ರಗತಿಪರ ಸಂಘಟನೆಗಳು ನಡೆಸಿದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶಿಡ್ಲಘಟ್ಟ ತಾಲೂಕಿನ ಜಯಂತಿಗ್ರಾಮದ ಲಕ್ಷ್ಮಣ ರೆಡ್ಡಿ ಮಂಜುಳ ದಂಪತಿಗಳ ಪುತ್ರಿ ಎಲ್. ಯಶಸ್ವಿನಿ ಅವರಿಗೆ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ ರವರ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ 2021 ನೇ ಸಾಲಿನ ಜಿಲ್ಲಾ ಮಟ್ಟದ ಅಸಾಧಾರಣ ಮಕ್ಕಳ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಯಶಸ್ವಿನಿ ಪ್ರಸ್ತುತ ವರದನಾಯಕನಹಳ್ಳಿ ಬಳಿಯ ಯುನಿವರ್ಸಲ್ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ತಾಲ್ಲೂಕಿನ ಒಟ್ಟು 28 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಮೀಸಲಾತಿ ಪಟ್ಟಿ ಹೊರಡಿಸಲಾಯಿತು.
ನಗರದ ಹೊರವಲಯದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ಪಟ್ಟಿ ಅಂತಿಮಗೊಳಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ :
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಉಪಾಧ್ಯಕ್ಷ ಸ್ಥಾನ
1. ಅಬ್ಲೂಡು ಸಾಮಾನ್ಯ (ಮ) ಪರಿಶಿಷ್ಟ ಜಾತಿ
2. ವೈ ಹುಣಸೇನಹಳ್ಳಿ ಸಾಮಾನ್ಯ (ಮ) ಪರಿಶಿಷ್ಟ ಜಾತಿ
3. ದೇವರಮಳ್ಳೂರು ಸಾಮಾನ್ಯ ಪರಿಶಿಷ್ಟ ಜಾತಿ (ಮ)
4. ಕೊತ್ತನೂರು ಸಾಮಾನ್ಯ ಸಾಮಾನ್ಯ (ಮ)
5. ತುಮ್ಮನಹಳ್ಳಿ ಸಾಮಾನ್ಯ ಸಾಮಾನ್ಯ (ಮ)
6. ಆನೂರು ಪರಿಶಿಷ್ಠ ಜಾತಿ (ಮ) ಸಾಮಾನ್ಯ
7. ಹಂಡಿಗನಾಳ ಸಾಮಾನ್ಯ ಪರಿಶಿಷ್ಠ ಜಾತಿ (ಮ)
8. ಮೇಲೂರು ಸಾಮಾನ್ಯ ಪರಿಶಿಷ್ಠ ಪಂಗಡ (ಮ)
9. ಮಳ್ಳೂರು ಸಾಮಾನ್ಯ ಪರಿಶಿಷ್ಠ ಜಾತಿ (ಮ)
10 . ಜೆ ವೆಂಕಟಾಪುರ ಪರಿಶಿಷ್ಠ ಜಾತಿ (ಮ) ಸಾಮಾನ್ಯ
11. ಜಂಗಮಕೋಟೆ ಹಿಂದುಳಿದ ವರ್ಗ ಬ ಸಾಮಾನ್ಯ (ಮ)
12. ಕುಂಭಿಗಾನಹಳ್ಳಿ ಪರಿಶಿಷ್ಟ ಪಂಗಡ (ಮ) ಹಿಂದುಳಿದ ವರ್ಗ ಅ
13. ಚೀಮಂಗಲ ಹಿಂದುಳಿದ ವರ್ಗ ಅ ಪರಿಶಿಷ್ಟ ಪಂಗಡ (ಮ)
14. ದೊಡ್ಡತೇಕಹಳ್ಳಿ ಸಾಮಾನ್ಯ ಸಾಮಾನ್ಯ (ಮಹಿಳೆ)
15. ಬಶೆಟ್ಟಹಳ್ಳಿ ಪರಿಶಿಷ್ಟ ಪಂಗಡ (ಮ) ಹಿಂದುಳಿದ ವರ್ಗ ಬ
16. ದಿಬ್ಬೂರಹಳ್ಳಿ ಸಾಮಾನ್ಯ (ಮ) ಸಾಮಾನ್ಯ
17. ತಿಮ್ಮನಾಯಕನಹಳ್ಳಿ ಪರಿಶಿಷ್ಟ ಜಾತಿ ಸಾಮಾನ್ಯ (ಮ)
18. ಗಂಜಿಗುಂಟೆ ಸಾಮಾನ್ಯ (ಮ) ಪರಿಶಿಷ್ಟ ಜಾತಿ
19. ಈ ತಿಮ್ಮಸಂದ್ರ ಪರಿಶಿಷ್ಟ ಜಾತಿ (ಮ) ಹಿಂದುಳಿದ ವರ್ಗ ಅ (ಮ)
20. ಸಾದಲಿ ಪರಿಶಿಷ್ಟ ಜಾತಿ ಸಾಮಾನ್ಯ
21. ಎಸ್ ದೇವಗಾನಹಳ್ಳಿ ಸಾಮಾನ್ಯ ಪರಿಶಿಷ್ಟ ಜಾತಿ (ಮ)
22. ಫಲಿಚೆರ್ಲು ಸಾಮಾನ್ಯ (ಮ) ಸಾಮಾನ್ಯ
23. ಕುಂದಲಗುರ್ಕಿ ಪರಿಶಿಷ್ಠ ಪಂಗಡ ಸಾಮಾನ್ಯ (ಮ)
24.ತಲಕಾಯಲಬೆಟ್ಟ ಹಿಂದುಳಿದ ವರ್ಗ ಅ (ಮ) ಸಾಮಾನ್ಯ
ತಾಲೂಕಿನ 28 ಗ್ರಾ.ಪಂ ಗಳ ಪೈಕಿ 24 ಗ್ರಾ.ಪಂ ಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿದ್ದು ಉಳಿದ ನಾಲ್ಕು ಗ್ರಾ.ಪಂ ಗಳಾದ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಹಾಗೂ ನಾಗಮಂಗಲ ಗ್ರಾ.ಪಂ ಗಳ ಅವಧಿ ಮುಕ್ತಾಯವಾಗದೇ ಇರುವುದರಿಂದ ಈ ಗ್ರಾ.ಪಂ ಗಳಲ್ಲಿ ಪ್ರಸ್ತುತ ಇರುವ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಮೀಸಲಾತಿಯನ್ನು ಐದು ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೂ ಮುಂದುವರೆಸಲಾಗಿದೆ. ಅವಧಿ ಮುಕ್ತಾಯವಾದ ನಂತರ ಈ ಗ್ರಾ.ಪಂ ಗಳಿಗೆ ಚುನಾವಣೆ ನಡೆದ ನಂತರ ಈ ಕೆಳಕಂಡಂತೆ ನಿಗಧಿಪಡಿಸಿರುವ ಮೀಸಲಾತಿ ಮೊದಲ 30 ತಿಂಗಳ ಅವಧಿಗೆ ಅನ್ವಯವಾಗುತ್ತದೆ.
ಬಯಲು ಸೀಮೆಯಲ್ಲಿ ಅಲೆಮಾರಿಗಳು ತಮ್ಮ ಗುಡಾರದ ವಸ್ತುಗಳು, ಅಡುಗೆ ಸಾಮಗ್ರಿಗಳನ್ನು ಸಾಗಿಸುವುದಕ್ಕೆ ಕತ್ತೆಗಳನ್ನು ಬಳಸುತ್ತಾರೆ. ಶಿಡ್ಲಘಟ್ಟದ ಹೊರವಲಯದಲ್ಲಿ ಇಂತಹ ತಂಡವೊಂದು ಬೀಡುಬಿಟ್ಟಿದ್ದು, ಅಲೆಮಾರಿ ಜನರು ತಮ್ಮ ಟೆಂಕಿ ಹುಡುಕುವ ಮುಂಚೆ ತಮ್ಮ ಗುಡಾರದ ವಸ್ತುಗಳು, ಅಡುಗೆ ಸಲಕರಣೆಗಳು, ವಿಶೇಷವಾಗಿ ನೀರಿನ ಬಿಂದಿಗೆಗಳು ಎಲ್ಲವನ್ನೂ ಕತ್ತೆಗಳ ಬೆನ್ನ ಮೇಲೆ ಕಟ್ಟಿ ಅವುಗಳನ್ನು ಮೇಯಲು ಬಿಟ್ಟಿದ್ದರು. ಅವು ಈ ಹೊರೆಯನ್ನು ಹೊತ್ತುಕೊಂಡೇ ಮೇಯಬೇಕು.
ಕತ್ತೆಗಳ ಮುಂದಿನ ಕಾಲುಗಳ ಗೊರಸುಗಳ ಮಧ್ಯದಲ್ಲಿ ಹಾಕಿ ಕಟ್ಟಿದ್ದರು. ಅವುಗಳು ಕುಂಟುತ್ತಾ ಅಲ್ಲಲ್ಲೇ ನಿಂತು ಮೇಯುತ್ತಿದ್ದವು. ದಿನಗಳೆದಂತೆ ಕುದುರೆ, ದನಗಳ ಬಳಕೆ ಕಡಿಮೆಯಾದಂತೆ, ಕತ್ತೆಗಳು ಕೂಡ ಕಡಿಮೆ ಬಳಕೆಯಾಗುತ್ತಾ ಬಂದಿವೆ. ಆದರೆ ಅವು ಅವಶೇಷಗೊಂಡಿಲ್ಲ. ಕೆಲವು ಅಲೆಮಾರಿ ಪಂಗಡಗಳು ಇವತ್ತಿಗೂ ಈ ಕತ್ತೆಗಳ ಸಾರಿಗೆ ಪರಂಪರೆಯನ್ನು ಉಳಿಸಿಕೊಂಡೇ ಬಂದಿವೆ.
ಈ ದೃಶ್ಯವನ್ನು ಕಂಡಾಗ “ನೀ ನನಗಿದ್ದರೆ ನಾ ನಿನಗೆ” ಎಂಬ ನೀತಿ ಸಾರುವ ಕಯ್ಯಾರ ಕಿಞ್ಞಣ್ಣ ರೈ ಅವರ ಜನಪ್ರಿಯ ಶಿಶು ಪದ್ಯ “ಸಂತೆಗೆ ಹೋದನು ಭೀಮಣ್ಣ ಹಿಂಡಿಯ ಕೊಂಡನು ಹತ್ತು ಮಣ; ಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ…” ನೆನಪಾಗುತ್ತದೆ.
“ನೀನು ನನ್ನನ್ನು ಚೆನ್ನಾಗಿ ಸಾಕಿಕೊಂಡರೆ, ನಾನು ನಿನ್ನ ಹೊರೆಯನ್ನು ಹೊರುತ್ತೇನೆ” ಅನ್ನುವ ನೀತಿ ಕೂಡ ನಾವು ಈ ರೂಪದಲ್ಲಿ ಕಾಣಲು ಸಾಧ್ಯವಿದೆ. ಅಲೆಮಾರಿಗಳು ಸಾಮಗ್ರಿಗಳನ್ನಷ್ಟೇ ಅಲ್ಲ, ನಡೆಯಲಿಕ್ಕಾಗದ ಮಕ್ಕಳನ್ನು ಕೂಡ ಕತ್ತೆಗಳ ಬೆನ್ನಿನ ಮೇಲೆ ಕೂರಿಸಿ ಕರೆದೊಯ್ಯುತ್ತಾರೆ.
“ವಸ್ತು ಸಾಗಾಣಿಕೆಯಲ್ಲಿ ಜಾನಪದೀಯವಾಗಿಯೂ ಕತ್ತೆಗಳು ಬಳಕೆಗೊಂಡಿದ್ದಾವೆ. ಕತ್ತೆಯ ಬಳಕೆ ವಿಶೇಷವಾಗಿ ಮಡಿವಾಳರ ಮೂಲಕವೇ ಬೆಳಕಿಗೆ ಬಂದದ್ದು. ಕತ್ತೆಯು ಹಿಂದಿನಿಂದಲೂ ಸಾರಿಗೆಯ ವ್ಯವಸ್ಥೆಯಾಗಿ ರೂಪುಗೊಂಡಿವೆ. ಪ್ರಮುಖವಾಗಿ ವಸ್ತು ವಾಹಕವಾಗಿ ಕತ್ತೆಯ ಬಳಕೆಯನ್ನು ಅಗಸರು ಬಟ್ಟೆಯ ಮೂಟೆಗಳನ್ನು ಸಾಗಿಸಲು ಬಳಸಿದರೆ, ಉಪ್ಪು ಮಾರುವವರು ಕತ್ತೆಗಳ ಮೇಲೆ ಉಪ್ಪು ಮೂಟೆಗಳನ್ನು ಹೇರಿ ಊರೂರು ತಿರುಗಿ ಮಾರಲು ಬಳಸುತ್ತಿದ್ದರು. ಇದರ ಇನ್ನೊಂದು ರೂಪವಾಗಿ ಅಲೆಮಾರಿ ಜನಾಂಗ ಇಂತಹ ಕೆಲಸಗಳಿಗೆ ಕತ್ತೆಯನ್ನು ಬಳಸಿಕೊಳ್ಳುತ್ತಾರೆ.
ಸಿನಿಮಾಗಳಲ್ಲಿ ಹಾಸ್ಯದ ದೃಶ್ಯಗಳಲ್ಲಿ ಸಹ ಕತ್ತೆಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಕತ್ತೆಗಳು ಮನರಂಜನೆಗೆ, ಸಾಮಾನು ಸರಂಜಾಮುಗಳನ್ನು ಹೊರುವ ಬಿಟ್ಟಿ ಚಾಕರಿಯ ಉಪಕಾರಿ ಜೀವಿಯೂ ಹೌದು. ಕತ್ತೆ ವಿರಳವಾದರೂ ಕೂಡ ಇಂದಿಗೂ ಅನೇಕ ರೂಪದಲ್ಲಿ ಬಳಕೆಯಾಗುತ್ತಿದೆ” ಎನ್ನುತ್ತಾರೆ ಸಾಹಿತಿ ಸ.ರಘುನಾಥ.
“ಕತ್ತೆಯ ಮುಖ ದರ್ಶನ ಶುಭ ಎಂಬ ಪರಿಕಲ್ಪನೆ ಕೊಟ್ಟು ಬೀದಿಬದಿಯಲ್ಲಿ ಕತ್ತೆಗಳ ಫೋಟೋ ಮಾರಿ ಹೊಟ್ಟೆಹೊರೆಯುವವರನ್ನು ಹಲವೆಡೆ ಕಾಣಬಹುದಾಗಿದೆ. ಅವಲಕ್ಷಣವೆನಿಸಿಕೊಂಡಿದ್ದ ಪ್ರಾಣಿ ಈಗ ಸಲ್ಲಕ್ಷಣದ ಪ್ರಾಣಿಯಾಗಿ ಮಾನವನ ಜೀವನದಲ್ಲಿ ಪ್ರವೇಶ ಪಡೆದಿರುವುದು ನಿಜಕ್ಕೂ ಪ್ರಾಣಿಪ್ರಿಯರು ಸಂತೋಷಿಸಬೇಕಾದ ವಿಚಾರ.
ಕತ್ತೆಯ ಹಾಲು ಆಯುರ್ವೇದದಲ್ಲಿ ಔಷಧ ರೂಪದಲ್ಲಿ ಬಳಕೆಯಾಗುತ್ತಿದೆ. ಮುಖ್ಯವಾಗಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಕತ್ತೆಯ ಹಾಲನ್ನು ಹಿಂದಿನಿಂದಲೂ ಬಳಸುತ್ತಿದ್ದಾರೆ. ಈಗ ಕೆಲವರು ಹಾಲು ಕೊಡುವ ಕತ್ತೆಗಳನ್ನು ಹಳ್ಳಿಹಳ್ಳಿಗೂ ಕರೆದುಕೊಂಡು ಹೋಗಿ ಹಾಲನ್ನು ಮಾರುವುದನ್ನು ಉಪಕಸುಬಾಗಿ ಮಾಡಿಕೊಂಡಿರುತ್ತಾರೆ” ಎಂದು ಅವರು ವಿವರಿಸಿದರು.
ಅಲೆಮಾರಿ ಜನಾಂಗದವರನ್ನು ಈ ಬಗ್ಗೆ ಕೇಳಿದಾಗ, “ಕುದುರೆಗಳ ಬದಲು ಕತ್ತೆಗಳನ್ನ ಬಳಸಿಕೊಳ್ಳುವುದರಿಂದ ಆಗುವ ಅನುಕೂಲವೇನೆಂದರೆ ನಿರ್ವಹಣೆ ವೆಚ್ಚ. ಕುದುರೆಗಾದರೆ ಹಸಿ ಹುಲ್ಲು, ಹುರುಳಿ ಬೇಕಾಗುತ್ತದೆ. ಕತ್ತೆಗಳು ಹಾಗಲ್ಲ, ತಮ್ಮ ಟೆಂಕಿಗಳಿಗೆ ಕರೆದೊಯ್ಯುವ ದಾರಿ ಮಧ್ಯದಲ್ಲಿ ಹುಲ್ಲು ಕಂಡಲ್ಲಿ ಮೇಯುತ್ತಾ ಸಾಗುತ್ತವೆ” ಎಂದು ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿದಂತೆ ಅಧಿಕಾರಿಗಳ ಸಭೆ ನಡೆಸಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನ ನಿರ್ಮಾಣ ಮಾಡಲು ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್ ರಾಜೀವ್ ಅವರಿಗೆ ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರುವ ನಾಯಕರಲ್ಲ. ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿಯ ಹೆಸರಲ್ಲಿ ಭವನ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ನಗರದ ಹೊರವಲಯದಲ್ಲಿ ಗುರುತಿಸಿರುವ ಜಾಗ ಸರಿಯಿಲ್ಲ ಎಂಬ ಮುಖಂಡರ ಮನವಿಯನ್ನು ಆಲಿಸಿದ ಸಂಸದ ಎಸ್.ಮುನಿಸ್ವಾಮಿ, ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿಯೇ ಭವನ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಈ ಬಗ್ಗೆ ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಸ್ಥಳ ಮಂಜೂರು ಮಾಡಿಸಲು ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು.
ಅಗತ್ಯ ಬಿದ್ದಲ್ಲಿ ತೋಟಗಾರಿಕೆ ಇಲಾಖೆಗೆ ಇಲ್ಲಿರುವ ಜಾಗಕ್ಕಿಂತ ದುಪ್ಪಟ್ಟು ಜಾಗವನ್ನು ಬೇರೆಡೆ ನೀಡಲು ಕ್ರಮವಹಿಸಲಾಗುವುದು. ಕಳೆದ 30 ವರ್ಷಗಳಿಂದ ನಗರದ ಹೃದಯಭಾಗದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಂ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿರುವ ಎಲ್ಲಾ ದಲಿತ ಸಂಘಟನೆಗಳ ಒಕ್ಕೊರಲ ಅಭಿಪ್ರಾಯದಂತೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿಯೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನ ನಿರ್ಮಾಣ ಮಾಡುವ ಭರವಸೆಯನ್ನು ಅವರು ನೀಡಿದರು. ಮುಂಬರುವ ದಿನಗಳಲ್ಲಿ ಸ್ಥಳೀಯ ಶಾಸಕರನ್ನೊಳಗೊಂಡಂತೆ ಸಮುದಾಯದ ಮುಖಂಡರ ಸಭೆ ನಡೆಸಿ ಸ್ಥಳ ಮಂಜೂರಾದ ಕೂಡಲೇ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಗುರುವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ರಥೋತ್ಸವಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, “ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದೇ ಪ್ರಸಿದ್ಧವಾಗಿದೆ. ಇದು ಪವಿತ್ರವಾದ ಕ್ಷೇತ್ರ” ಎಂದು ಹೇಳಿದರು.
ಬ್ರಹ್ಮರಥೋತ್ಸವಕ್ಕೆ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ. ಭಕ್ತರು ಅವುಗಳಿಂದ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಳ್ಳುತ್ತಿದ್ದರು.
ದೇವಾಲಯ ಸಂಚಾಲಕಿ ಎಂ.ಸುನೀತ ಶ್ರೀನಿವಾಸರೆಡ್ಡಿ, ರಾಜಸ್ವ ನಿರೀಕ್ಷಕರಾದ ಪ್ರಶಾಂತ್, ವೇಣುಗೋಪಾಲ್, ನವೀನ್ ಹಾಜರಿದ್ದರು.
ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲೆ ಹಾಗೂ ಶಿಡ್ಲಘಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಿಸರ್ಗ ಇಕೋ ಕ್ಲಬ್ ಮಕ್ಕಳ ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಸಂಯೋಜಕ ಜಯರಾಂ ಸತೀಶ್ ಮಾತನಾಡಿದರು.
ಮಕ್ಕಳ ಕಲಿಕೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಪರಿಣಾಮಕಾರಿಯಾಗಿವೆ ಎಂದು ಅವರು ತಿಳಿಸಿದರು.
ಶಾಲಾ ಹಂತದಲ್ಲಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲು ಮಕ್ಕಳ ಪರಿಸರ ಸಂರಕ್ಷಣೆ ಸಂಘ, ಮಕ್ಕಳ ಹಕ್ಕುಗಳ ರಕ್ಷಣೆಗೆ ಮಕ್ಕಳ ಹಕ್ಕುಗಳ ಸಂಘ, ಹೆಣ್ಣು ಮಕ್ಕಳ ಕುಂದುಕೊರತೆಗಳ ಪರಿಹಾರಕ್ಕಾಗಿ ಮೀನಾ ಸಂಘ, ಇತ್ಯಾದಿಗಳಲ್ಲಿ ಮಕ್ಕಳು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಿಗೆ ಸಾಮಾಜಿಕ ರೀತಿ ನೀತಿಗಳು ಮತ್ತು ಜೀವನ ಕೌಶಲ್ಯಗಳು ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ದೇವರಾಜ್ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ನಾಲ್ಕು ಗೋಡೆಗಳ ನಡುವೆ ಪಾಠಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ. ಬದಲಾಗಿ ಅನುಭವಾತ್ಮಕ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಸಲುವಾಗಿ ಸತತವಾಗಿ ಇಂತಹ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಈ ಚಟುವಟಿಕೆಗಳು ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಇನ್ನೂ ಈ ತರಹದ ಹಲವು ಕಾರ್ಯಕ್ರಮಗಳನ್ನು ನಡೆಸಲು ಸಮುದಾಯದ ಸಹಕಾರ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಜವಾಬ್ದಾರಿ ಬಗ್ಗೆ ಭಾಷಣ ಸ್ಪರ್ಧೆ ಮತ್ತು ರಾಸಾಯನಿಕ ಕೃಷಿ ದುಷ್ಪರಿಣಾಮಗಳ ಬಗ್ಗೆ ಚಿತ್ರಕಲೆ, ಪರಿಸರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಷ್ಮಿತಾ, ಮೌನಿಕಾ, ನಿಖಿಲ್, ಪುಷ್ಪ, ರಮೇಶ್, ಸಂಜನಾ, ವಿನಯ್ ಮತ್ತಿತರ ಮಕ್ಕಳಿಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ಬಹುಮಾನ ವಿತರಿಸಲಾಯಿತು.
ಚೈಲ್ಡ್ ರೈಟ್ಸ್ ಟ್ರಸ್ಟ್ ರಿಮ್ ಯೋಜನೆ ಕಾರ್ಯಕರ್ತೆ ಸ್ವಪ್ನಾ ಶಿಕ್ಷಕರಾದ ವಿ.ಎಂ.ಮಂಜುನಾಥ್, ಎಚ್.ಬಿ.ಕೃಪಾ, ಪಿ.ಸುದರ್ಶನ್, ಎಸ್.ಎ.ನಳಿನಾಕ್ಷಿ, ಗ್ರಾಮದ ಪಿಳ್ಳಮುನಿಯಪ್ಪ ಹಾಜರಿದ್ದರು.