ತಾಲ್ಲೂಕಿನ ಮೇಲೂರು ಗ್ರಾಮದ ಒಂದನೇ ಡಿವಿಶನ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಎಂ.ಕೆ.ರವಿಪ್ರಸಾದ್ ಮತದಾರರಲ್ಲಿ ಮಳೆನೀರು ಕೊಯ್ಲಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
“ನಿಮ್ಮ ಮನೆಯ ಬಳಿ ಮೋರಿ ಸ್ವಚ್ಛವಾಗಿದೆಯಾ? ನಿಮ್ಮ ನಲ್ಲಿಯಲ್ಲಿ ನೀರು ಸಮರ್ಪಕವಾಗಿ ಬರುತ್ತಿದೆಯಾ? ಬೆಳಗಿನ ಜಾವ ನೀರು ಹಿಡಿಯುವುದು ತಪ್ಪಿದೆಯಾ? ಇಲ್ಲಾ ಎಂದಾದರೆ, ಅದನ್ನು ಸರಿಪಡಿಸುವುದು ಮುಖ್ಯವಲ್ಲವೇ” ಎಂದು ಅವರು ಮತದಾರರನ್ನೇ ಪ್ರಶ್ನಿಸುತ್ತಿದ್ದಾರೆ.
“ನೀರು ನಮ್ಮೆಲ್ಲರಿಗೂ ಅತೀ ಅವಶ್ಯ ಅದರಲ್ಲೂ ದನ ಕರು ಕುರಿ ಸಾಕಿ ಜೀವಿಸುತ್ತಿರುವವರಿಗೆ ಅತೀ ಅವಶ್ಯ, ಇದಕ್ಕೆ ಅಹರ್ನಿಶಿ ದುಡಿಯುತ್ತಿರುವ ಮೇಲೂರಿನ ಶ್ರೀನಿವಾಸ್ ಮೂರ್ತಿ(ಪುಲಿ) ಹಾಗೂ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ಬೋರ್‌ವೆಲ್‌ಗಳನ್ನ ಚಾಲೂ ಮಾಡಿ ಟ್ಯಾಂಕ್‌ಗಳಿಗೆ ತುಂಬಿ ಗ್ರಾಮಕ್ಕೆ ನೀರು ಹರಿಸುತ್ತಿರುವುದು ಕಷ್ಟಕರವಾದ ಕೆಲಸ. ಗ್ರಾಮದ ಕೊಳವೆಬಾವಿಗಳಲ್ಲಿ ನೀರಿಲ್ಲದೇ ಎಲ್ಲಾ ಜನರಿಗೆ ನೀರು ತಲುದದೇ ಜನರ ಬೈಗುಳ ತಪ್ಪಿಲ್ಲ. ಇದಕ್ಕೆ ಇರುವುದೊಂದೇ ಪರಿಹಾರ, ಅದೇ “ಮಳೆಕೊಯ್ಲು”. ನನ್ನ ಮನೆಗೆ ನಾನೇ ಅಳವಡಿಸಿ ಕೊಂಡಿರುವ ಮಳೆಕೊಯ್ಲಿನಿಂದ ಐದರಿಂದ ಆರು ತಿಂಗಳು ನನಗೆ ಬೇರೆ ನೀರಿನ ಅವಶ್ಯಕತೆ ಇಲ್ಲ. ಈ ಪರ್ಯಾಯ ವ್ಯವಸ್ಥೆ ನಮಗೆ ಅತೀ ಜರೂರು ಬೇಕಿದೆ, ನಾನು ಈಗಾಗಲೇ 36ಕ್ಕೂ ಹೆಚ್ಚು ಕಡೆ ಈ ಮಳೆಕೊಯ್ಲು ಅಳವಡಿಸಿ ಯಶಸ್ವಿಯಾಗಿರುವೆ.
ಇನ್ನು ಮನೆಗಳಿಗೆ ಮಳೆ ಕೊಯ್ಲು ಮಾಡಿಸಿ ಕೊಂಡಿರುವವರ ಖುಷಿಯಂತೂ ಹೇಳತೀರದು. ಇದಕ್ಕೆ ಪರಿಕರಗಳನ್ನ ಮನೆಯ ಮಾಲೀಕರೇ ತಂದು ಕೊಡುತ್ತಾರೆ. ಅದರ ಅಂದಾಜು ವೆಚ್ಪ ಸುಮಾರು 6 ರಿಂದ 8 ಸಾವಿರ(ಇದಕ್ಕೂ ಪಂಚಾಯತಿಯಿಂದ ಸಹಾಯ ಧನ ಪಡೆಯಬಹುದು). ಇನ್ನು ಅಳವಡಿಕೆಗೆ ನಾನು ಪಡೆದ ಹಣವು ಮಾತ್ರ ಆ ಕೆಲಸದ ಸಮಯದಲ್ಲಿ ಅವರು ನೀಡುವ ತಿಂಡಿ ಕಾಫಿ ಅಷ್ಟೇ. ಈ ಕಾರ್ಯ ನಮ್ಮ ಊರಿನಲ್ಲೂ ನಡೆದು ನಿಮ್ಮಗಳ ಮನೆ ಬಾಗಿಲಿಗೆ ತಾಯಿ ಗಂಗಮ್ಮನ ಹರಿಸುವುದೇ ನನ್ನ ಮೊದಲ ಗುರಿ. ಅದೂ ನಿಮ್ಮ ಮನೆಯಂಗಳಕ್ಕೆ. ನೀವು ನೀರಿಗಾಗಿ ಸರದಿ ನಿಲ್ಲದೇ ರಾತ್ರಿ ಹಗಲು ಕಾಯದೇ, ನೀರನ್ನ ಸಂಗ್ರಹಿಸುವುದೇ ಒಂದು ಕೆಲಸವೆನ್ನದೇ, ನಿಮ್ಮ ಅಮೂಲ್ಯ ಸಮಯವನ್ನ ಉಳಿಸುವುದೇ ನನ್ನ ಗುರಿ. ಇದು ಸಾದ್ಯವಾಗದ ಕೆಲಸ ಸುಮ್ಮನೆ ಹೇಳುತ್ತಾನೆ ಎಂದಾದರೆ ನನ್ನ ದೂರವಾಣಿಗೆ ಕರೆ ಮಾಡಿ ಎಲ್ಲಾ ಮಳೆಕೊಯ್ಲು ಗ್ರಾಹಕರ ದೂರವಾಣಿ ಸಂಖ್ಯೆ ನೀಡುತ್ತೇನೆ ನೀವೇ ಕರೆ ಮಾಡಿ ತಿಳಿದುಕೊಳ್ಳಿ” ಎಂದು ತಿಳಿಹೇಳುತ್ತಿದ್ದಾರೆ ಎಂ.ಕೆ.ರವಿಪ್ರಸಾದ್.
“ನಿಮಗೇ ಯಾಕೆ ಮತ ನೀಡ ಬೇಕು ನಿಮ್ಮ ಅಭಿವೃದ್ಧಿ ರೂಪರೇಷಗಳೇನು?” ಎಂದು ಪ್ರತಿಯೊಬ್ಬ ಮತದಾರರೂ ಕೇಳಬೇಕು. ನನ್ನ ಮೊದಲ ಆದ್ಯತೆ ನೀರು ಅದನ್ನು ನಾನು ಕಾರ್ಯ ರೂಪಕ್ಕೆ ತರಲು ನಮಗೆ ಒಂದು ಅವಕಾಶ ನೀಡಿ ಎಂದು ಮತದಾರರನ್ನು ಕೇಳುತ್ತಿದ್ದೇನೆ ಎಂದು ಅವರು ಹೇಳಿದರು.
ನಮ್ಮ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ಚುನಾವಣೆಗೆ ಹೆಚ್ಚಾಗಿ ಪ್ರಜ್ಞಾವಂತರು, ಯುವ ಮನಸ್ಸುಳ್ಳವರು ಸ್ಪರ್ಧಿಸಿದ್ದಾರೆ. ಅನುಭವಿಗಳ ಸಲಹೆಗಳೊಂದಿಗೆ ಸಾರ್ವಜನಿಕರಿಗೆ ಅಗತ್ಯವುಳ್ಳ ಹಲವು ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದೇವೆ. ಹಂತಹಂತವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನುಡಿದರು.
ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನೇ ದಿನೇ ಏರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಈ ಬಾರಿಯ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇಬೇಕು ಎಂಬ ಧಾವಂತದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಹಿಂಬಾಲಕರು ಮಾಟ, ಮಂತ್ರ, ವಾಮಾಚಾರದ ಮೊರೆಹೋಗಿರುವುದು ಮತದಾರರಲ್ಲಿ ಆತಂಕ ಮೂಡಿಸಿದೆ.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಾಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮತಗಟ್ಟೆಯ ಸುತ್ತ ಆರಿಶಿನ, ಕುಂಕುಮ ಹಚ್ಚಿರುವ ನಿಂಬೆಹಣ್ಣುಗಳನ್ನು ಹೂತಿಟ್ಟು ಪೂಜೆ ಸಲ್ಲಿಸಿರುವುದು ಭಾನುವಾರ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯ ಕಣದಲ್ಲಿರುವ ದಾಸಮ್ಮನ ಪತಿ ವೆಂಕಟಪ್ಪ ಹಾಗೂ ಮಗ ರಾಮಾಂಜಿ ಈ ಕೃತ್ಯವೆಸಗಿದ್ದಾರೆ ಎಂದು ಗ್ರಾಮಸ್ಥರು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಂಬಾಲಹಳ್ಳಿ ಸೇರಿದಂತೆ ಅಕ್ಕಪಕ್ಕದ ಮೂರು ಗ್ರಾಮಗಳ ಒಟ್ಟು 450 ಮಂದಿ ಮತದಾರರು ಈ ಮತಗಟ್ಟೆಯಲ್ಲಿ ಮತದಾನ ಮಾಡಲಿದ್ದು ಮತಗಟ್ಟೆಯ ಸುತ್ತ ನಿಂಬೆಹಣ್ಣುಗಳನ್ನು ಇಟ್ಟು ಪೂಜೆ ಮಾಡಿರುವ ಘಟನೆಯಿಂದ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಹಿಂದೇಟು ಹಾಕುವ ಆತಂಕದಲ್ಲಿದ್ದಾರೆ.
ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು ಎಂದು ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಸೇವಾ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಯೋಜನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಹಳ್ಳಿಗಳ ದೇಶವಾಗಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಹಳ್ಳಿಗಳ ಪಾತ್ರ ಮುಖ್ಯವಾಗಿದೆ. ಗ್ರಾಮಗಳ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರು ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಹಲವು ಕೈಗಾರಿಕೆಗಳಲ್ಲಿ ಮತ್ತು ಹೈನುಗಾರಿಕೆ ಹಾಗೂ ಕೃಷಿ ಆಧಾರಿತ ಕಸುಬುಗಳಲ್ಲಿ ಮಹಿಳೆ ಪ್ರಧಾನ ವ್ಯಕ್ತಿ. ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ. ಮಹಿಳಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ಮುಖ್ಯವಾಗಿದೆ. ನಾಲ್ಕು ಗೋಡೆಗಳ ಮಧ್ಯ ಬದುಕುತ್ತಿದ್ದ ಮಹಿಳೆ ಇಂದು ನಿಧಾನವಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾಳೆ. ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮಗಳಿಂದ ಆರೋಗ್ಯ, ಶಿಕ್ಷಣ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಂಬಂಧಗಳು, ಆರ್ಥಿಕ ಚಟುವಟಿಕೆಗಳ ನಿರ್ವಹಣೆ, ಕೋವಿಡ್ ನಿರ್ವಹಣೆ ಇನ್ನಿತರ ವಿಚಾರಗಳನ್ನು ತಿಳಿಸಲಾಗುತ್ತಿದೆ. ಈ ಮುಖೇನ ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದರು.
ಸರಸ್ವತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರ್ನಾಟಕದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿದೆ. ರಾಜ್ಯದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಾಗರಾಜರಾವ್ ಮಾತನಾಡಿ, ಹೆಣ್ಣೊಂದು ಕಲಿತರ ಶಾಲೆಯೊಂದು ತೆರೆದಂತೆ. ಸಮಾಜದಲ್ಲಿನ ಶಾಂತಿಗೆ, ಸಂಸ್ಕಾರ, ತ್ಯಾಗ ಮತ್ತು ಸಹನೆಯ ಪ್ರತಿರೂಪವೆ ಮಹಿಳೆ. ಆರೋಗ್ಯವಂತ ಮಹಿಳೆಯಿಂದ ಆರೋಗ್ಯವಂತ ಸಮಾಜ ನಿರ‍್ಮಾಣ ಸಾಧ್ಯ. ಪರಂಪರಾಗತವಾಗಿ ಬಂದಂತಹ ಮೌಲ್ಯಗಳನ್ನು ಮತ್ತು ಸಂಸ್ಕಾರಗಳನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾಗಿದೆಯೆಂದರು.
ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಸಂತ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜ್ಞಾನ ವಿಕಾಸದ ತಾಲ್ಲೂಕು ಸಮನ್ವಯಧಿಕಾರಿ ಲಕ್ಷ್ಮೀ, ಆಡಳಿತ ಪ್ರಬಂಧಕಿ ಚೈತ್ರಾ ಮತ್ತು ಜ್ಞಾನ ವಿಕಾಸ ಸಂಯೋಜಕಿಯರು ಹಾಜರಿದ್ದರು.
ಶಿಡ್ಲಘಟ್ಟದ ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕರಾದ ಎನ್ ಶ್ರೀನಿವಾಸ್ (66) ರವರು 19 ಡಿಸೆಂಬರ್ 2020 ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಪತ್ನಿ, ಮಗ, ಇಬ್ಬರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಿಡ್ಲಘಟ್ಟದ ವೆಂಕಟೇಶ್ವರ ಚಿತ್ರಮಂದಿರ ಸಮೀಪದ ನಿವೇಶನದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ನೆರವೇರಿಸುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ತಾಲ್ಲೂಕಿನ ಹಂಡಿಗನಾಳದ ಶ್ರೀ ವೀರಣ್ಣ ಕೆಂಪಣ್ಣ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಆರೋಗ್ಯ ಹಾಗು ಜಿಲ್ಲಾ ಉಸುವಾರಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಹಗರಣಗಳಿಂದ ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚುವಂತಾಯಿತು. ನರೇಂದ್ರಮೋದಿ ದೇಶದ ಪ್ರಧಾನಿಯಾದ ನಂತರ ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷ ಸ್ಥಾನ ಮಾನ ದೊರೆತಿದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿಕ್ಕೆ ಬಂದು ಸುಮಾರು ಆರು ವರ್ಷಗಳು ಕಳೆದಿವೆಯಾದರೂ ಒಂದೇ ಒಂದು ಹಗರಣ, ಅಥವ ಭ್ರಷ್ಟಾಚಾರ ಆರೋಪ ಕೇಳಿಬಂದಿಲ್ಲ ಎಂದರು.
ಇತ್ತೀಚಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನವರು ನಡೆದುಕೊಂಡ ರೀತಿಯನ್ನು ಇಡೀ ದೇಶದ ಜನತೆ ಕಂಡಿದ್ದು ಕನ್ನಡಿಗರ ತಲೆ ತಗ್ಗಿಸುವಂತಹ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷವನ್ನು ನಾವು ಏನು ಮಾಡಬೇಕಾಗಿಲ್ಲ ಬದಲಿಗೆ ದೇಶದ ಜನರೇ ಈಗಾಗಲೇ ಕಾಂಗ್ರೆಸ್‌ನ್ನು ನಿರ್ಲಕ್ಷಿಸಿದ್ದಾರೆ ಎಂದರು.
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಯಶೀಲರನ್ನಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದುಡಿಯಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದರೆ ಅದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ಕ್ಷೇತ್ರದ ಯಾರೂ ಕುಗ್ಗುವ ಅಗತ್ಯವಿಲ್ಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾತ್ರ ಅಲ್ಲ ಬದಲಿಗೆ ಮುಂಬರುವ ಚುನಾವಣೆಯವರೆಗೂ ಈ ಕ್ಷೇತ್ರಕ್ಕೂ ನಾನೇ ಶಾಸಕನಾಗಿ ನಿಮ್ಮೊಂದಿಗಿರುತ್ತೇನೆ ಎಂದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ರೇಷ್ಮೆ, ಹಾಲು ಹಾಗೂ ಬಂಗಾರಕ್ಕೆ ಹೆಸರುವಾಸಿಯಾಗಿದೆ. ಕೋಲಾರ ಲೋಕಸಭೆ ಕ್ಷೇತ್ರದಿಂದ ಸಾವಿರಾರು ಜನ ಪ್ರತಿನಿತ್ಯ ಬೇರೆಡೆಗೆ ಕೆಲಸ ಅರಸಿಕೊಂಡು ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೈಗಾರಿಕೆ ವಲಯಗಳನ್ನು ಸ್ಥಾಪಿಸಲು ಈಗಾಘಲೇ ಮುಂದಾಗಿದ್ದು ಮುಂಬರುವ ದಿನಗಳಲ್ಲಿ ಶಿಡ್ಲಘಟ್ಟದಲ್ಲಿಯೂ ಒಂದು ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರ, ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಂ.ಜಯರಾಮರೆಡ್ಡಿ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ರಮೇಶ್‌ಬಾಯಿರಿ, ಕೃಷ್ಣಮೂರ್ತಿ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನೀಲಿ ದ್ರಾಕ್ಷಿ, ಸೀಮೆ ಬದನೆ, ಸೀಬೆ ಮೊದಲಾದ ವಾಣಿಜ್ಯ ಬೆಳೆಗಳನ್ನು ರೈತರು ಉತೃಷ್ಟ ಗುಣಮಟ್ಟದಲ್ಲಿ ಬೆಳೆಯುತ್ತಾರೆ. ವಾಣಿಜ್ಯ ಬೆಳೆಗಳನ್ನು ಜಿಲ್ಲೆಯಲ್ಲಿ ರೈತರು ಬೆಳೆಯಲು ಮುಖ್ಯ ಕಾರಣಕರ್ತರು ಜರ್ಮನಿಯ ಮೂಲದ ಗುಸ್ಟಾವ್ ಹರ್ಮನ್ ಕೃಂಬಿಗಲ್.
“ಡಿಸೆಂಬರ್ 18 ಗುಸ್ಟಾವ್ ಹರ್ಮನ್ ಕೃಂಬಿಗಲ್ ಅವರ ಜನ್ಮದಿನ. ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಿಸುವವ ಮತ್ತು ಸಸ್ಯ ಸಂರಕ್ಷಕರಾಗಿ ಕೃಂಬಿಗಲ್ ನಮ್ಮ ನಾಡಿಗೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ನಮ್ಮ ರೈತರು ಹಾಗೂ ಪರಿಸರ ಪ್ರೇಮಿಗಳು ನೆನೆಯಬೇಕು. ಅವರ ಕೊಡುಗೆಗಳನ್ನು ಸ್ಮರಿಸಬೇಕು” ಎನ್ನುತ್ತಾರೆ ತೋಟಗಾರಿಕಾ ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ.
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಬೆಳ್ಳಿ ವರ್ಷಾಚರಣೆಯ ಸಂದರ್ಭದಲ್ಲಿ ನಿರ್ಮಿಸಿದ್ದ ಸ್ತಂಭ
ಜರ್ಮನಿಯವರಾದ ಗುಸ್ಟಾವ್ ಹರ್ಮನ್ ಕೃಂಬಿಗಲ್ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಲಂಡನ್ನಿನ ಕ್ಯೂಗಾರ್ಡನ್ನಿನಲ್ಲಿ ತರಬೇತಿ ಪಡೆದು ಬರೋಡ ಸಂಸ್ಥಾನದಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದರು. ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಕೃಂಬಿಗಲ್ ರ ಕೆಲಸವನ್ನು ಮೆಚ್ಚಿ ಮೈಸೂರಿಗೆ ಆಹ್ವಾನಿಸಿದರು. ಲಾಲ್ ಬಾಗ್, ಸರ್ಕಾರಿ ತೋಟಗಳು, ರಾಜರ ಅರಮನೆ ತೋಟಗಳ ಅಧೀಕ್ಷಕರಾಗಿ 1908 ರಲ್ಲಿ ಸೇವೆಯನ್ನು ಪ್ರಾರಂಭಿಸಿ 1932 ರಲ್ಲಿ ತೋಟಗಾರಿಕೆ ನಿರ್ದೇಶಕರಾಗಿ ನಿವೃತ್ತರಾದರು. 67 ವರ್ಷ ವಯಸ್ಸಾದ ಅವರನ್ನು ಮಹಾರಾಜರು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡರು. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಆಮಂತ್ರಣದ ಮೇರೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಕನ್ನಂಬಾಡಿ ಕಟ್ಟೆಯ ಕೆಳಗಿನ “ಬೃಂದಾವನ ಉದ್ಯಾನವನ” ಕೂಡ ಇವರ ಕೊಡುಗೆಯೇ. ನಮ್ಮಲ್ಲಿದ್ದು ನಮ್ಮವಾರೇ ಆಗಿ ಹೋದ ಕೃಂಬಿಗಲ್ ಬೆಂಗಳೂರಿನಲ್ಲಿಯೇ ನಿಧನರಾದರು. ಬೆಂಗಳೂರಿನಲ್ಲಿ “ಕೃಂಬಿಗಲ್ ರಸ್ತೆ” ಅವರ ಹೆಸರನ್ನು ಅಜರಾಮರಗೊಳಿಸಿದೆ.
“ಸಸ್ಯ ವಿಜ್ಞಾನಿ ಹಾಗೂ ತೋಟ ವಿನ್ಯಾಸ ತಜ್ಞರಾಗಿದ್ದ ಕೃಂಬಿಗಲ್, ಮೈಸೂರು ಸಂಸ್ಥಾನದ ಮುಖ್ಯ ವಾಸ್ತುಶಿಲ್ಪಿಯೂ ಆಗಿದ್ದರು. 1927 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 25 ವರ್ಷದ ಆಡಳಿತದ ಬೆಳ್ಳಿ ವರ್ಷಾಚರಣೆ ಸಂದರ್ಭದಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಆಯ್ದ ನೂರು ಹಳ್ಳಿಗಳಲ್ಲಿ ಎಂಟು ಸ್ತಂಭಗಳಿಂದ ಕೂಡಿದ ವೃತ್ತ ಮತ್ತು ಭಜನೆ ಮನೆಗಳನ್ನು ನಿರ್ಮಾಣ ಮಾಡಿಸಿದ್ದರು. ಇದನ್ನು ವಿನ್ಯಾಸ ಮಾಡಿದ್ದು ಕೃಂಬಿಗಲ್. ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಈಗಲೂ ಆ ಸ್ತಂಭಗಳನ್ನು ನೋಡಬಹುದಾಗಿದೆ” ಎಂದು ನಾರಾಯಣಸ್ವಾಮಿ ತಿಳಿಸಿದರು.
2017 ರಲ್ಲಿ ಕೃಂಬಿಗಲ್ ಅವರ ಮೊಮ್ಮಗಳು ಆಲಿಯಾ ಭಕ್ತರಹಳ್ಳಿ ಬಿಎಂವಿ ಶಾಲೆಗೆ ಭೇಟಿ ನೀಡಿದ್ದಾಗಿನ ಚಿತ್ರ
“2016 ರಲ್ಲಿ, ಭಾರತ ಮತ್ತು ಜರ್ಮನಿಯ ಜಂಟಿ ಸಹಭಾಗಿತ್ವದಲ್ಲಿ, ಕೃಂಬಿಗಲ್ ಅವರ ಜನ್ಮಸ್ಥಳ ಜರ್ಮನಿಯ ಡ್ರೆಸ್ಡೆನ್ ನಗರದಲ್ಲಿ ಕೃಂಬಿಗಲ್ ಅವರ 150 ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾನು ತೋಟಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದರೂ ಅಂದಿನ ತೋಟಗಾರಿಕಾ ನಿರ್ದೇಶಕ ಡಾ.ಮಹೇಶ್ವರ್ ಅವರು ಆ ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿದರು. ನನ್ನ ಸ್ನೇಹಿತ ಹಾಸನದ ಮೋಹನ್ ಜೊತೆಗೆ ಜರ್ಮನಿಗೆ ಹೋದ ನಾನು ಕೃಂಬಿಗಲ್ ಅವರು ನಮ್ಮ ರಾಜ್ಯ ಮತ್ತು ಬೆಂಗಳೂರಿಗೆ ನೀಡಿರುವ ಅನುಪಮ ಸೇವೆಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದೆ. 2017 ರಲ್ಲಿ ಕೃಂಬಿಗಲ್ ಅವರ ಮೊಮ್ಮಗಳು ಆಲಿಯಾ ಸಹ ಭಕ್ತರಹಳ್ಳಿಗೆ ಭೇಟಿ ನೀಡಿದ್ದರು. ಈಗಲೂ ಅವರೊಂದಿಗೆ ನಮ್ಮ ಹಳ್ಳಿಯ ಬಾಂಧವ್ಯ ಮುಂದುವರೆದಿದೆ” ಎಂದು ಅವರು ವಿವರಿಸಿದರು.
“1952ರಲ್ಲಿ ನಮ್ಮ ಜಿಲ್ಲೆಯ, ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರ ಸಮ್ಮುಖದಲ್ಲಿ ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನದಲ್ಲಿ ನಲ್ಲಿ ಕೃಂಬಿಗಲ್ ಭಾಗಿಯಾಗಿದ್ದರು. ಸೀತಿಬೆಟ್ಟದ ಕಾಲಬೈರವೇಶ್ವರ ದೇವಸ್ಥಾನವನ್ನು ಸಂರಕ್ಷಣೆ ಮಾಡಲು ನಿಯಮಗಳನ್ನು ರೂಪಿಸಿ ಸರ್ಕಾರದ ಮುಕಾಂತರ ಅನುಷ್ಠಾನಕ್ಕೆ ಕೂಡ ಅವರು ತಂದಿದ್ದರು. ಈಗಲೂ ಅವರು ಸಹಿ ಮಾಡಿರುವ ಫಲಕ ಅಲ್ಲಿದೆ” ಎಂದು ಮಾಹಿತಿ ನೀಡಿದರು.
ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನೂತನ ರೋವರ್ ರೇಂಜರ್ಸ್ ಘಟಕಗಳನ್ನು ಉದ್ಘಾಟಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ಮಾತನಾಡಿದರು.
ಸ್ವಯಂ ಶಿಸ್ತು, ಸಾಮಾಜಿಕ ಅರಿವು, ದೇಶಪ್ರೇಮ ಹಾಗೂ ಕೌಶಲ್ಯಭರಿತ ಜ್ಞಾನಕ್ಕಾಗಿ ಇಂದಿನ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ಉತ್ತಮ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್ ಮಾತನಾಡಿ, ಉತ್ತಮ ಭವಿಷ್ಯ ಕ್ಕಾಗಿ ಸ್ಕೌಟ್ಸ್ , ಗೈಡ್ಸ್ ಸಂಸ್ಥೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸೇರಬೇಕೆಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಚುನಾವಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಜಾಥಾ ವನ್ನು ಮೇಲೂರು, ಮಳ್ಳೂರು ಗ್ರಾಮದ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ರೋವರ್ ಲೀಡರ್ ಪ್ರಸನ್ನಕುಮಾರ್, ರೇಂಜರ್ ಲೀಡರ್ ಸೌಮ್ಯ, ತಾಲ್ಲೂಕು ಸಂಸ್ಥೆಯ ಸಹ ಕಾರ್ಯದರ್ಶಿ ಮುನಿರಾಜು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, 50 ರೋವರ್ ರೇಂಜರ್ಸ್ ವಿದ್ಯಾರ್ಥಿಗಳು, ಮಳ್ಳೂರು ಗ್ರಾಮ ಪಂಚಾಯಿತಿ ಪಿ.ಡಿ.ಒ ಮಮತ ಹಾಜರಿದ್ದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ಹಕ್ಕುಗಳ ಮಾಸಾಚರಣೆಯ ಅಂಗವಾಗಿ ತಾಲ್ಲೂಕು ಮಟ್ಟದ ಮಕ್ಕಳ ಅಭಿವೃದ್ಧಿ ವಿಷಯದ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್ ಯರಗಟ್ಟಿ ಮಾತನಾಡಿದರು.
ಮಕ್ಕಳ ಅಭಿವೃದ್ಧಿ ವಿಷಯದ ಬಗ್ಗೆ ತಾಲ್ಲೂಕು ಮಟ್ಟದ ಮಕ್ಕಳ ಯೋಜನೆಗಳು ಮತ್ತು ಸಮಸ್ಯೆಗಳ ಅಂಕಿಅಂಶಗಳು ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ಹೊಂದಿರಬೇಕು. ಎಲ್ಲಾ ಹಂತಗಳಲ್ಲಿ ಈ ಅಂಕಿ ಅಂಶಗಳ ವಿಶ್ಲೇಷಣೆ ಅತ್ಯಂತ ಪ್ರಮುಖವಾಗಿ ನಡೆಯುವಂತೆ ಆಗಲೇಬೇಕು ಎಂದು ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಸಮನ್ವಯದಿಂದ ಮಕ್ಕಳ ಹಕ್ಕುಗಳ ಸ್ಥಿತಿಗತಿ ಮತ್ತು ಕಾರ್ಯಕ್ರಮಗಳ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅವರು ನಿರ್ದೇಶನ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಅನಾಥರು ಮತ್ತು ಎಚ್‌ಐವಿ ಹೊಂದಿರುವ ಮಕ್ಕಳಿಗೆ ನೇರವಾಗಿ ಅವರ ಖಾತೆಗೆ ಸಾವಿರ ರೂ ನೀಡಲಾಗುತ್ತಿದೆ. ಇದರ ಪಲಾನುಭವಿಗಳು 72 ಇದ್ದಾರೆ. ದತ್ತು ಕಾರ್ಯಕ್ರಮದ ಅಡಿಯಲ್ಲಿ 14 ಮಕ್ಕಳು ದಾಖಲಾಗಿದ್ದಾರೆ.ಅದರಲ್ಲಿ 6 ಮಕ್ಕಳನ್ನು ದತ್ತು ನೀಡಲಾಗಿದೆ. ಪ್ರಸ್ತುತ ಸಂಸ್ಥೆಯಲ್ಲಿ 8 ಮಕ್ಕಳು ಇದ್ದಾರೆ. 2020-21 ನೇ ಸಾಲಿನಲ್ಲಿ ಬಾಲ್ಯ ವಿವಾಹಗಳು 110 ದಾಖಲಾಗಿದ್ದು ಅದರಲ್ಲಿ 103 ನ್ನು ತಡೆಗಟ್ಟಲಾಗಿದೆ. ಶಿಡ್ಲಘಟ್ಟದಲ್ಲಿ 23 ದಾಖಲಾಗಿದೆ ಎಂದು ಬಾಲ್ಯವಿವಾಹ, ಬಾಲಕಾರ್ಮಿಕತೆ, ಶಾಲೆ ಬಿಟ್ಟ ಮಕ್ಕಳು, ವಲಸೆ ಹೋಗಿರುವಂತಹ ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರು ಮಕ್ಕಳ ವಸತಿ ನಿಲಯಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕರು ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಗಳ ಬಗ್ಗೆ ಮಾತನಾಡಿದರು. ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶಮೂರ್ತಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಮ್ಮದ್ ಉಸ್ಮಾನ್, ರಾಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಪ್ರತಿನಿಧಿಗಳು, ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ಸಂಯೋಜಕ ಸತೀಶ್ ಜಯರಾಂ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು.