Sidlaghatta : ಶಿಡ್ಲಘಟ್ಟ ನಗರದ ವಾರದ ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಶಾಸಕ ಬಿ.ಎನ್. ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಅಧಿಕಾರಿಗಳೊಂದಿಗೆ ಸಂತೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದಿನಪೂರ್ತಿ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳಿಗೆ ಬಿಸಿಲು-ಮಳೆಯಿಂದ ರಕ್ಷಣೆ ಒದಗಿಸಲು ಮೇಲ್ಚಾವಣಿ ನಿರ್ಮಾಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಶೌಚಾಲಯ, ಊಟದ ಕ್ಯಾಂಟೀನ್, ವಾಹನ ನಿಲುಗಡೆ ಸ್ಥಳ ಹಾಗೂ ಸ್ವಚ್ಛತಾ ವ್ಯವಸ್ಥೆಗಳನ್ನು ತುರ್ತಾಗಿ ಕಲ್ಪಿಸಬೇಕೆಂದರು. ಮಳೆಗಾಲದಲ್ಲಿ ನೀರು ನಿಂತುಕೊಳ್ಳದಂತೆ ಸಮರ್ಪಕ ನೀರು ಹರಿವಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸಂತೆಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಿ ಗೇಟ್ ಅಳವಡಿಸಲು ಹಾಗೂ ಈ ಸಂಬಂಧಿತ ಕ್ರಿಯಾ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ 4.65 ಕೋಟಿ ರೂ.ಗಳನ್ನು ಈ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿಡಲಾಗಿದ್ದು, ಬೆಳಗಾವಿಯಲ್ಲಿ ನಿರ್ಮಿಸಿರುವ ಸಂತೆ ಮೈದಾನದ ಮಾದರಿಯಲ್ಲಿ ಶಿಡ್ಲಘಟ್ಟ ಸಂತೆ ಮೈದಾನವನ್ನು ರೂಪಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಪೌರಾಯುಕ್ತೆ ಜಿ. ಅಮೃತ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರೆ ಮಾಧವಿ, ಎಇಇ ರಘುನಾಥ್, ಮುಖಂಡ ತಾದೂರು ರಘು, ಜಿಲ್ಲಾ ಸಹಕಾರಿ ಸಂಘದ ಮುರಳಿ ಹಾಗೂ ನವೀನ್ ಉಪಸ್ಥಿತರಿದ್ದರು.
Sidlaghatta : ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಹಾಗೂ ಸದಸ್ಯರ ತಂಡ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ ಮತ್ತು ಆಶ್ರಯ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ಬಂದ ಅಹವಾಲುಗಳ ಹಿನ್ನೆಲೆಯಲ್ಲಿ ನಡೆದ ಈ ಪರಿಶೀಲನೆಯಲ್ಲಿ, ಆಸ್ಪತ್ರೆ ಮತ್ತು ಅಂಗನವಾಡಿಗಳ ಕಾರ್ಯವಿಧಾನದಲ್ಲಿ ಕಂಡು ಬಂದ ಅವ್ಯವಸ್ಥೆಗಳ ಬಗ್ಗೆ ಆಯೋಗ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.
100 ಹಾಸಿಗೆಗಳ ಆಸ್ಪತ್ರೆಯಾದರೂ ಕೇವಲ 42 ಮಂದಿ ಮಾತ್ರ ದಾಖಲಾಗಿರುವುದನ್ನು ಗಮನಿಸಿದ ಅಧ್ಯಕ್ಷರು, “ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದು, ಸಣ್ಣ ವಿಷಯಕ್ಕೂ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸುವುದು ಈ ಸ್ಥಿತಿಗೆ ಕಾರಣವಾಗಿದೆ. ಜನರಿಗೆ ಆಸ್ಪತ್ರೆಯ ಮೇಲಿನ ನಂಬಿಕೆ ಕುಸಿದಿದೆ” ಎಂದು ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳಲ್ಲಿ ಕೇವಲ 17 ಹೆರಿಗೆ ಪ್ರಕರಣಗಳು ಮಾತ್ರ ದಾಖಲಾಗಿರುವ ಬಗ್ಗೆ ಪ್ರಶ್ನಿಸಿದ ಅವರು, “ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ ಈಷ್ಟು ಕಡಿಮೆ ದಾಖಲೆ ಎಂದರೆ ಏನು ಅರ್ಥ” ಎಂದರು.
“ಬಡ ರೋಗಿಗಳು ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ ಇಲ್ಲಿನ ನಿರ್ವಹಣೆ ಸರಿಯಾಗಿ ನಡೆಯದಿರುವುದರಿಂದ ಜನರು ದೂರ ಉಳಿಯುತ್ತಿದ್ದಾರೆ. ಬಾಣಂತಿ ಮಹಿಳೆಯರಿಗೆ ಅನುದಾನ ಇಲ್ಲವೆಂದು ತಿಂಡಿ-ಊಟ ನೀಡದಿರುವುದು ಅಸಹ್ಯಕರ. ಜನಪ್ರತಿನಿಧಿಗಳು ಮತ್ತು ದಾನಿಗಳನ್ನು ಸಂಪರ್ಕಿಸಿ ಆಹಾರ ವ್ಯವಸ್ಥೆ ಮಾಡಬೇಕು” ಎಂದು ಸೂಚಿಸಿದರು. ಸಿಬ್ಬಂದಿಯ ಮಾನವೀಯತೆ ಕೊರತೆಯನ್ನು ಟೀಕಿಸಿದ ಅವರು, “ಸಂಬಳಕ್ಕೆ ಮಾತ್ರ ಕೆಲಸ ಮಾಡದೇ, ಸೇವಾಭಾವನೆಯೂ ಇರಲಿ” ಎಂದು ಪಾಠ ನೀಡಿದರು.
ಇದಕ್ಕೂ ಮೊದಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ, ಮೊಟ್ಟೆ ವಿತರಣೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದರು. ಕೆಲವರಿಗೆ ಕಡಿಮೆ ಸಂಖ್ಯೆಯಲ್ಲಿ ಮೊಟ್ಟೆಗಳು ವಿತರಿಸಿರುವುದು ಬೆಳಕಿಗೆ ಬಂತು.
ಆಹಾರ ಆಯೋಗದ ಸದಸ್ಯರು ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣನವರ್, ರೋಹಿಣಿ ಪ್ರಿಯಾ, ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ವೆಂಕಟೇಶ್‌ರೆಡ್ಡಿ, ಆಹಾರ ಇಲಾಖೆ ಪ್ರಕಾಶ್, ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್‌ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಉಪಸ್ಥಿತರಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಎನ್. ರೇಖಾರಾಣಿ ಅವರು ರಾಜ್ಯಮಟ್ಟದ “ಶಿಕ್ಷಕ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಕಲಾಸಂಕುಲ ಸಂಸ್ಥೆಯು ನೀಡಿದ ಈ ಪ್ರಶಸ್ತಿಯನ್ನು ಇತ್ತೀಚೆಗೆ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸರ್ಕಾರಿ ನೌಕರರ ಜಾನಪದ ನೃತ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಶಿಕ್ಷಕಿ ಎನ್. ಶೈಲಜಾ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನಂದೀಶ್ ಅವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್, ಕಾರ್ಯದರ್ಶಿ ಮಾರುತಿ ಬಡಿಗೇರ್, ಮುಖ್ಯ ಶಿಕ್ಷಕಿ ಜಿ.ಎನ್. ನೇತ್ರಾವತಿ ಹಾಗೂ ಶಿಕ್ಷಕಿ ಪದ್ಮಜಾ ಉಪಸ್ಥಿತರಿದ್ದರು.
Sidlaghatta : ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ನಗರದ ಬಿಜೆಪಿ ಸೇವಾ ಸೌಧ ಆವರಣದಲ್ಲಿ ಬುಧವಾರ ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಶಿಬಿರ ಹಾಗೂ ಪ್ರಧಾನಿಯವರ ಜೀವನ ಆಧಾರಿತ ಕಿರುಚಿತ್ರ ಪ್ರದರ್ಶನವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು, “75 ವರ್ಷಗಳನ್ನು ಪೂರೈಸಿದ ಪ್ರಧಾನಮಂತ್ರಿ ಮೋದಿ ಅವರು ಇಂದಿಗೂ ದೇಶ-ವಿದೇಶದ ಮೂಲೆಮೂಲೆಗೂ ಸಂಚರಿಸುತ್ತಿರುವುದು ಅವರ ಕರ್ತವ್ಯನಿಷ್ಠೆ ಹಾಗೂ ಕಾರ್ಯಶೀಲತೆಗೆ ಉದಾಹರಣೆ. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ ಗಟ್ಟಿಯಾಗಿ ಪ್ರತಿಧ್ವನಿಸುವಂತೆ ಮಾಡಿದ ಪ್ರಧಾನಿ ಮೋದಿಯವರ ನಾಯಕತ್ವವನ್ನು ವಿಶ್ವದ ನಾಯಕರು ಮೆಚ್ಚುತ್ತಿದ್ದಾರೆ” ಎಂದು ಹೇಳಿದರು.
ಅವರು ಮುಂದುವರಿದು, “ರಕ್ತದಾನವು ಮಹತ್ತರ ದಾನ. ಇದು ಒಬ್ಬರ ಜೀವವನ್ನು ಉಳಿಸುವುದಲ್ಲದೆ ಆರೋಗ್ಯಕರ ಮತ್ತು ಮಾನವೀಯ ಸಮಾಜ ನಿರ್ಮಾಣಕ್ಕೆ ಸಹಕಾರಿ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾಜು, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಮಾಜಿ ಶಾಸಕ ಎಂ. ರಾಜಣ್ಣ, ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರಗೌಡ, ಬಿ.ಸಿ. ನಂದೀಶ್, ಡಾ. ಸತ್ಯನಾರಾಯಣರಾವ್, ನಗರ ಮಂಡಲ ಅಧ್ಯಕ್ಷ ಕೆ. ನರೇಶ್, ನಗರಸಭೆ ಸದಸ್ಯ ಎಸ್.ಎ. ನಾರಾಯಣಸ್ವಾಮಿ, ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಕನಕ ಪ್ರಸಾದ್, ಅರಿಕೆರೆ ಮುನಿರಾಜು ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
Sidlaghatta : ವಿಶ್ವಕರ್ಮರನ್ನು ದೇವತ್ವ ಪಡೆದ ದೈವಿಕ ವಾಸ್ತುಶಿಲ್ಪಿ ಹಾಗೂ ಸೃಷ್ಟಿಕರ್ತರೆಂದು ಪೂಜಿಸಲಾಗುತ್ತಿದ್ದು, ಇಡೀ ಮನುಕುಲಕ್ಕೆ ನೀಡಿರುವ ಅವರ ಕೊಡುಗೆಯಿಂದಾಗಿ ಎಲ್ಲ ಸಮುದಾಯಗಳಿಗೂ ದೈವ ಸಮಾನರು ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಋಗ್ವೇದ ಹಾಗೂ ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವಶಕ್ತಿಶಾಲಿ ಕರ್ತೃ ಹಾಗೂ ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ. ಲಂಕಾ, ದ್ವಾರಕಾ, ಇಂದ್ರಪ್ರಸ್ಥದಂತಹ ಮಹಾನಗರಗಳನ್ನು ನಿರ್ಮಿಸಿದವರು ವಿಶ್ವಕರ್ಮ. ಮನೆ-ಮಂದಿರಗಳ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಅಪ್ರತಿಮ ಕೊಡುಗೆಯಿದೆ” ಎಂದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, “ಲೋಕವನ್ನು ವೈಭವೀಕರಿಸಿದ ಸಾಂಸ್ಕೃತಿಕ ಪರಂಪರೆ, ಕಲೆ ಹಾಗೂ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ” ಎಂದು ಶ್ಲಾಘಿಸಿದರು. ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು, ಪ್ರತಿದಿನ ಜನರು ಬಳಸುವ ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟ, ಗೃಹೋಪಯೋಗಿ ವಸ್ತುಗಳು ಹಾಗೂ ಸ್ಮಾರಕಗಳಲ್ಲಿಯೂ ವಿಶ್ವಕರ್ಮರ ಕಲೆಯ ಅಸ್ತಿತ್ವ ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಚಾರಿ, “ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ. ವಿಶ್ವಕರ್ಮ ಜಯಂತಿಯನ್ನು ಶುದ್ಧತೆ, ಪ್ರತಿಭೆ ಮತ್ತು ಕಲಾ-ವೈಜ್ಞಾನಿಕ ಸಾಧನೆಗಳ ಮಾದರಿ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಐದು ಪ್ರಮುಖ ಕಸುಬುಗಳ ಸಾಧಕರಾದ ಆಂಜನೇಯಾಚಾರಿ (ಚಿನ್ನ-ಬೆಳ್ಳಿ), ನಂಜುಂಡಾಚಾರಿ (ಕಬ್ಬಿಣ), ಸುಬ್ರಮಣ್ಯಾಚಾರಿ (ಶಿಲ್ಪ), ಮಂಜುನಾಥ್ (ಲೋಹ ಬೆಸುಗೆ) ಮತ್ತು ವೆಂಕಟಾಚಾರಿ (ಬಡಗಿ) ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಮೆಚ್ಚುಗೆ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್. ಸುಬ್ಬಾರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣರಾಜು, ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
Sidlaghatta : ರಾಜ್ಯ ಸರ್ಕಾರ ಪ್ರಸ್ತುತ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಧರ್ಮದ ಮುಂದೆ ಉಪಜಾತಿಗಳನ್ನು ನಮೂದು ಮಾಡಿರುವುದನ್ನು ತಕ್ಷಣ ಕೈ ಬಿಡಬೇಕೆಂದು ಮುಖಂಡ ಹುಜಗೂರು ಬಚ್ಚೇಗೌಡ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಯಲಿದೆ. ಆದರೆ ಸಮೀಕ್ಷಾ ಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಮುಂದೆ ಹಿಂದೂ ಧರ್ಮದ ಕೆಲ ಜಾತಿಗಳನ್ನು ಉಪಜಾತಿಗಳಾಗಿ ಸೇರಿಸಿರುವುದು ಅಸಮರ್ಪಕ. ಇದು ನಾಗರಿಕರಲ್ಲಿ ಗೊಂದಲ ಉಂಟುಮಾಡುವ ಜೊತೆಗೆ ಮತಾಂತರಕ್ಕೆ ಸರ್ಕಾರವೇ ಪ್ರೇರಣೆ ನೀಡಿದಂತಾಗುತ್ತದೆ” ಎಂದು ಹೇಳಿದರು.
ಅವರು ಮುಂದುವರಿದು, “ಉಪಜಾತಿ ನಮೂದು ಮಾಡಿದರೆ ನಾಗರಿಕರಿಗೆ ಯಾವುದೇ ಪ್ರಯೋಜನವಿಲ್ಲ. ಈ ಕುರಿತಂತೆ ಕುಲ ಶಾಸ್ತ್ರೀಯ ಅಧ್ಯಯನವೂ ನಡೆದಿಲ್ಲ. ಕೇಂದ್ರ ಸರ್ಕಾರದಿಂದ ಮಾನ್ಯತೆ ಸಿಕ್ಕಿಲ್ಲದ ಉಪಜಾತಿಗಳನ್ನು ಕೂಡಲೇ ಕೈಬಿಡಬೇಕು” ಎಂದು ಆಗ್ರಹಿಸಿದರು.
Sidlaghatta : ಶಿಡ್ಲಘಟ್ಟ ನಗರದ ಪ್ಯಾರಗಾನ್ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆ, ಅಕ್ರಮ ಸಾಗಾಣಿಕೆ, ಮನೆ ಮನೆಗೆ ಪೊಲೀಸ್ ಸೇವೆ ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವೇಣುಗೋಪಾಲ್ ಮಾತನಾಡಿ, “ಇಂದಿನ ಯುವಜನತೆಯು ಮೋಜು-ಮಸ್ತಿ, ತಡರಾತ್ರಿ ಪಾರ್ಟಿ ಸಂಸ್ಕೃತಿಗೆ ಒಳಗಾಗಿ ಹಾದಿ ತಪ್ಪುತ್ತಿದ್ದಾರೆ. ಹದಿಹರೆಯದಲ್ಲೇ ಮಾದಕ ವಸ್ತುಗಳಿಗೆ ಅಂಟಿಕೊಳ್ಳುತ್ತಿರುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತಿದೆ” ಎಂದು ಹೇಳಿದರು.
ಅವರು ಮುಂದುವರಿದು, “ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಕಾನೂನು ಬಾಹಿರ. ಇದರಿಂದ ಸಮಾಜಕ್ಕೆ ಅಪಾರ ಹಾನಿ ಉಂಟಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಕರು ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತ್ಯಜಿಸಿ ವ್ಯಸನಮುಕ್ತ ದೇಶ ನಿರ್ಮಾಣಕ್ಕೆ ಸಹಕರಿಸಬೇಕು” ಎಂದು ಕೋರಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅಶ್ವಥ್, ಸುನೀಲ್, ಸಂಪತ್, ಕೆಂಪರಾಜು ಹಾಗೂ ಪ್ಯಾರಗಾನ್ ಶಾಲೆಯ ಶಿಕ್ಷಕ ವರ್ಗ ಹಾಜರಿದ್ದರು.
Y Hunasenahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ “ಕಾನೂನು ಅರಿವು, ನೆರವು ಹಾಗೂ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಕ್ರಮ”ದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಮಾತನಾಡಿದರು.
“ಮನೆಯ ಅಡುಗೆ, ಹಣ್ಣು, ಹಸಿ ತರಕಾರಿ ಸೇವನೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಗತ್ಯ. ಬೀದಿ ಬದಿ ತಯಾರಾಗುವ ಜಂಕ್ ಫುಡ್ ಸೇವನೆಯನ್ನು ದೂರವಿರಿಸಿ, ಉತ್ತಮ ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ ಕಟ್ಟಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜೊತೆಗೆ, ಮೊಬೈಲ್ ಬಳಕೆಯನ್ನು ಮಿತವಾಗಿ, ಅಧ್ಯಯನ ಮತ್ತು ಜ್ಞಾನಾರ್ಜನೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿದ್ಯಾ ವಸ್ತ್ರದ್ ಅವರು, “ಪೌಷ್ಟಿಕ ಆಹಾರ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಶಕ್ತಿ ನೀಡುತ್ತದೆ. ಈಗ ಸರ್ಕಾರ ತಾಯಂದಿರಷ್ಟೇ ಅಲ್ಲ, ತಂದೆಯ ಪಾತ್ರಕ್ಕೂ ಒತ್ತು ನೀಡುತ್ತಿದ್ದು, ಪುರುಷರಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ತಯಾರಿಸಿದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ, ಭಾಗವಹಿಸಿದ್ದವರಿಗೆ ವಿತರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಲೇಖನಿ ಸಾಮಗ್ರಿಗಳನ್ನು ಹಂಚಿದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ವಿದ್ಯಾ ವಸ್ತ್ರದ್, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಸ್ಥಳೀಯ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.