Sorakayalahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ಮಹಬೂಬ್ ಪಾಷ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 11 ಸಂಖ್ಯಾ ಬಲವಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಎಂ.ಮಂಜುನಾಥ್ ಕಾರ್ಯನಿರ್ವಹಿಸಿದರು.
ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಂ ರವಿಚಂದ್ರ, ಎಸ್.ವಿ.ಕೃಷ್ಣಪ್ಪ, ನರಸಿಂಹಯ್ಯ, ಸುಧಾಕರ, ಬಲರಾಮ, ಕೃಷ್ಣಪ್ಪ, ರಾಮಕೃಷ್ಣಪ್ಪ, ಸುಗುಣಮ್ಮ, ಪಿಳ್ಳಮ್ಮ, ಗ್ರಾ.ಪಂ ಮಾಜಿ ಅಧ್ಯಕ್ಷ ದೊಡ್ಡದಾಸರಹಳ್ಳಿ ಆರ್.ನಂಜಪ್ಪ, ಗ್ರಾ.ಪಂ ಸದಸ್ಯರಾದ ಮದ್ದೂರಮ್ಮ ಮುನಿರಾಜು, ದೊಡ್ಡದಾಸರಹಳ್ಳಿ ಲಕ್ಷ್ಮೀದೇವಮ್ಮ ದೇವರಾಜ್, ಮಾಜಿ ಗ್ರಾ.ಪಂ ಸದಸ್ಯರಾದ ಎಸ್.ಎಂ.ದಾಸ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವಿ.ನಾಗಚಂದ್ರ, ಹಾಲು ಪರೀಕ್ಷಕರಾದ ಮುನಿರಾಜು, ಹಾಜರಿದ್ದರು.
Sidlaghatta : ಶಿಡ್ಲಘಟ್ಟ : ನಗರದಲ್ಲಿನ ಶೆಟ್ಟಿಗುಣಿಯ ರಾಜಕಾಲುವೆ(ಟೋಲ್ ಗೇಟ್ ಬಳಿ ಹಾದು ಹೋಗುವ)ಗೆ ಸಿಮೆಂಟ್ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆಯಿಂದ ತೆಗೆಯುತ್ತಿರುವ ತ್ಯಾಜ್ಯ ಮಣ್ಣು ಕಸ ಕಡ್ಡಿಯನ್ನು ಗೌಡನ ಕೆರೆಗೆ ತುಂಬಿಸಲಾಗುತ್ತಿದೆ.
ನಗರದಿಂದ ಟೋಲ್ ಗೇಟ್ ಮೂಲಕ ಗೌಡನೆಕೆರೆಗೆ ಸಂಪರ್ಕಿಸುವ ರಾಜಕಾಲುವೆಗೆ ನಗರೋತ್ಥಾನ ಹಂತ-4 ರ ಅನುದಾನದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆಯಲ್ಲಿ ವರ್ಷಗಳಿಂದಲೂ ತುಂಬಿದ್ದ ತ್ಯಾಜ್ಯ, ಮಣ್ಣು ಕಸ ಕಡ್ಡಿಯನ್ನು ತೆಗೆದು ಗೌಡನಕೆರೆಗೆ ಸುರಿಯಲಾಗುತ್ತಿದೆ.
ರಾಜಕಾಲುವೆಯಿಂದ ತೆಗೆದ ತ್ಯಾಜ್ಯ ಮಣ್ಣನ್ನು ಸೂಕ್ತ ವಿಲೇವಾರಿ ಮಾಡಬೇಕಾದ ಗುತ್ತಿಗೆದಾರರು ಸಾಗಣೆ ವೆಚ್ಚ ಉಳಿಸಿಕೊಳ್ಳಲು ಸಮೀಪದಲ್ಲೆ ಇರುವ ಗೌಡನಕೆರೆಗೆ ತುಂಬಿಸಿ ಕೆರೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಲೋಡುಗಟ್ಟಲೆ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದರೂ ತಾಲ್ಲೂಕು ಆಡಳಿತವೂ ನನಗೇನೂ ಸಂಬಂಧ ಇಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದೆ. ನಗರಸಭೆಯ ಹಣದಲ್ಲಿ ರಾಜಕಾಲುವೆಯ ಹೂಳು ತೆಗೆದು ಕೃಷಿ ಮತ್ತು ಕುಡಿಯುವ ನೀರಿನ ಜೀವ ನಾಡಿ ಕೆರೆಗೆ ತುಂಬಿಸಲಾಗುತ್ತಿದೆ.
ಕೆರೆಗೆ ಕಟ್ಟಡಗಳ ಅವಶೇಷ ತ್ಯಾಜ್ಯ ಮತ್ತು ರಾಜಕಾಲುವೆಯಿಂದ ತೆಗೆದ ಮಣ್ಣು ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದನ್ನು ಕಂಡು ಸ್ಥಳದಲ್ಲಿದ್ದ ರೈತ ಸಂಘದ ಹಯ್ಯಾತ್ ಖಾನ್ ಟ್ರಾಕ್ಟರ್ ತಡೆದು ಗಲಾಟೆ ಮಾಡಿದ್ದಾರೆ. ಕೆರೆಗೆ ಮಣ್ಣನ್ನು ಸುರಿಯುವುದನ್ನು ವಿರೋಧಿಸಿದ್ದಾರೆ.
ಆಗ ರಾಜಕಾಲುವೆಯಲ್ಲಿ ಹೂಳು ಮಣ್ಣು ತೆಗೆದು ಕೆರೆಗೆ ತುಂಬಿಸುತ್ತಿದ್ದ ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಸ್ಥಳಕ್ಕೆ ಬಂದು, ಶಾಸಕ ರವಿಕುಮಾರ್ ಅವರೆ ಇಲ್ಲಿ ಮಣ್ಣು ಹಾಕಿ ರಸ್ತೆ ಅಗಲ ಮಾಡು ಎಂದು ಹೇಳಿದ್ದು, ಹಾಗಾಗಿ ಅಗಲ ಮಾಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ನಂತರ ನಗರಸಭೆ ಆಯುಕ್ತೆ ಅಮೃತ ಅವರು ಕೂಡ ಸ್ಥಳಕ್ಕೆ ಆಗಮಿಸಿ ಕೆರೆಯಂಚಿನಲ್ಲಿ ಮಣ್ಣು ಸುರಿಯುತ್ತಿರುವುದು ಏಕೆ, ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ.
ಆಗ ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಇಲ್ಲಿ ಯಾರೋ ಕಟ್ಟಡಗಳ ಅವಶೇಷವನ್ನು ತಂದುಗುಡ್ಡೆ ಹಾಕಿದ್ದರು. ಶಾಸಕರು ಹೇಳಿದ್ದಕ್ಕೆ ಹಸನು ಮಾಡುತ್ತಿದ್ದೇನೆ ಎಂದು ಪೌರಾಯುಕ್ತರನ್ನು ದಿಕ್ಕು ತಪ್ಪಿಸಿದ್ದಾರೆ. ಪೌರಾಯುಕ್ತರು ಕೂಡ ಇಲ್ಲಿ ಹಾಕಬೇಡಿ ಎಂದಷ್ಟೆ ಹೇಳಿ ಏನೂ ಕ್ರಮ ತೆಗೆದುಕೊಳ್ಳದೆ ಅಲ್ಲಿಂದ ಹೊರಟು ಹೋದರು.
ಸ್ಥಳಕ್ಕೆ ಮಾಧ್ಯಮದವರು ಬಂದು ಕೆರೆಗೆ ಮಣ್ಣನ್ನು ಸುರಿಯುತ್ತಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಕೆರೆ ಅಂಚಿನಲ್ಲಿ ಗುಡ್ಡೆಹಾಕಿದ್ದ ಕಸ ಕಡ್ಡಿ ಮಣ್ಣಿನ ರಾಶಿಯನ್ನು ಮತ್ತೆ ಟ್ರ್ಯಾಕ್ಟರ್ ಗಳಿಗೆ ತುಂಬಿಸಿ ವಾಪಸ್ ಕಳುಹಿಸಿದರು.
ಮಾಧ್ಯಮದವರು, ಅಧಿಕಾರಿಗಳು ಅಲ್ಲಿಂದ ಹೊರಟ ಮೇಲೆ ಇದೀಗ ಮಣ್ಣನ್ನು ಕೆರೆ ಅಂಚಿನ ಬದಲಿಗೆ ಕೆರೆಯ ಒಳಗೆ ಹಾಕಲಾಗುತ್ತಿದೆ. ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆರೆಯ ಹೂಳೆತ್ತುವುದು ಒಂದು ಕಡೆಯಾದರೆ ಅದೇ ಸರ್ಕಾರದ ಭಾಗವಾದ ನಗರಸಭೆಯಿಂದ ಕೈಗೊಂಡ ರಾಜಕಾಲುವೆ ತಡೆಗೋಡೆ ನಿರ್ಮಾಣದ ವೇಳೆ ತ್ಯಾಜ್ಯ ಮಣ್ಣನ್ನು ಕೆರೆಗೆ ತುಂಬಿಸಲಾಗುತ್ತಿದೆ.
ಇದು ಪರಿಸರವಾದಿ ಮತ್ತು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೆರೆಯ ಒಡಲಿಗೆ ರಾಜಕಾಲುವೆಯ ತ್ಯಾಜ್ಯ ಮಣ್ಣನ್ನು ತುಂಬಿಸುವುದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಿದೆ.
ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಗುತ್ತಿಗೆದಾರ
ಶಾಸಕ ಬಿ.ಎನ್.ರವಿಕುಮಾರ್ ಅವರು ಶಾಸಕರಾಗಿ ಅಧಿಕಾರವಹಿಸಿಕೊಳ್ಳುತ್ತಿದ್ದಂತೆ ಸ್ವಂತ ಹಣ ಖರ್ಚು ಮಾಡಿ ನಗರದ ಹೊರವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-234ರ ಅಕ್ಕ ಪಕ್ಕದಲ್ಲಿ ರಾಶಿ ರಾಶಿ ಗುಡ್ಡೆಬಿದ್ದಿದ್ದ ಕಟ್ಟಡಗಳ ಅವಶೇಷ ತ್ಯಾಜ್ಯವನ್ನು ವಿಲೇವಾರಿ ಮಾಡಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೀಗ ಮತ್ತೆ ಹೆದ್ದಾರಿ ಅಂಚಿನ ಗೌಡನಕೆರೆಗೆ ಹೂಳು ತ್ಯಾಜ್ಯದ ಮಣ್ಣನ್ನು ತುಂಬಿಸಲಾಗುತ್ತಿದೆ. ಲಕ್ಷ ಲಕ್ಷ ಸ್ವಂತ ಹಣ ಖರ್ಚು ಮಾಡಿ ರಸ್ತೆಯಂಚಿನಲ್ಲಿ ಮಣ್ಣನ್ನು ತೆಗೆಸಿದ ಶಾಸಕರ ಹೆಸರನ್ನು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡರೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.
ಈಗಾಗಲೇ ಗೌಡನಕೆರೆಯನ್ನು ಹಲವಾರು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಲಿ ಗಿಡಗಳು ಸಾಕಷ್ಟು ಕೆರೆಯನ್ನು ಆಕ್ರಮಿಸಿಕೊಂಡಿದೆ. ಉಳಿದಿರುವ ಕೆರೆಯನ್ನು ತ್ಯಾಜ್ಯ ಸುರಿಯುತ್ತಾ ಹಾಳುಮಾಡುತ್ತಿದ್ದಾರೆ. ಕೆರೆಯನ್ನು ಮುಚ್ಚಿ ರಸ್ತೆ ಅಗಲ ಮಾಡಲು ಗುತ್ತಿಗೆದಾರನಿಗೆ ಅನುಮತಿ ಕೊಟ್ಟವರು ಯಾರು. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಹಾಕಬೇಕು. ಕಣ್ಣ ಮುಂದೆ ತ್ಯಾಜ್ಯ ತುಂಬುವ ವಾಹನಗಳು ಸಕ್ಷಿ ನುಡಿಯುತ್ತಿದ್ದರೂ ಅವುಗಳನ್ನು ವಶಪಡಿಸಿಕೊಳ್ಳದ ಪೌರಾಯುಕ್ತೆಯ ಮೇಲೆ ಕ್ರಮ ಕೈಗೊಳ್ಳಬೇಕು
Sidlaghatta : ಶಿಡ್ಲಘಟ್ಟ: ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ನೃತ್ಯ ಮಾಡುತ್ತಲೇ ಗ್ರಾಮದ ಲಕ್ಷ್ಮಿಪತಿ ಅವರು (40) ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸ್ನೇಹಿತರ ಜೊತೆ ಆಪ್ತರಕ್ಷಕ ಸಿನಿಮಾದ ‘ಸುಂದರ ವದನ…’ ಹಾಡಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ಹೃದಯಾಘಾತವಾಗಿದೆ. ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Sidlaghatta : ನಮ್ಮ ಹಿಂದೂ ಧರ್ಮದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಚ್ಯುತಿ ಬಂದಾಗ ಹಿಂದೂಗಳಾದ ನಾವೆಲ್ಲರೂ ಜಾತಿ ಪಕ್ಷ ಬಿಟ್ಟು ಒಂದಾಗಿ ಧರ್ಮ ರಕ್ಷಣೆಗಾಗಿ ನಿಲ್ಲಬೇಕು. ನಮ್ಮ ಸನಾತನ ಧರ್ಮವನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಯು ನೆಮ್ಮದಿಯಾಗಿ ಬದುಕುವ ವಾತಾವರಣವನ್ನು ನಿರ್ಮಿಸಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ಶಿಡ್ಲಘಟ್ಟದಿಂದ ಧರ್ಮಸ್ಥಳಕ್ಕೆ ಹೊರಟ ಧರ್ಮಯಾತ್ರೆಗೆ ಭಾನುವಾರ ನಗರದ ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲಾ ಒಂದು ಕೋಮಿನವರನ್ನು ಸಂತೃಪ್ತಿ ಪಡಿಸಲು, ಅವರ ಮತಗಳಿಗಾಗಿ ಹಿಂದೂ ಧರ್ಮವನ್ನು ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿ ಮಾಡಿ, ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಇದೀಗ ಧರ್ಮಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಚ್ಯುತಿ ತರುವ ಕೆಲಸ ಮತ್ತು ಧರ್ಮಸ್ಥಳ ಮಂಜುನಾಥನ ಸನ್ನಿಧಿ ಬಗ್ಗೆ ಅಪಪ್ರಚಾರ ಮಾಡುವವರಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು. ಧರ್ಮಸ್ಥಳದ ಪವಿತ್ರತೆ ಬಗ್ಗೆ ಕುತಂತ್ರ ಮಾಡಿ ಷಡ್ಯಂತ್ರ ಮಾಡಿದವರ ಬೇರುಗಳು ನೆರೆ ರಾಜ್ಯ ನೆರೆ ದೇಶಗಳಿಗೂ ಹಬ್ಬಿದೆ. ಅವರೆಲ್ಲರನ್ನೂ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು, ಧರ್ಮಸ್ಥಳದ ಬಗ್ಗೆ ಹಬ್ಬಿರುವ ಅಪಖ್ಯಾತಿ ಹೋಗಲಾಡಿಸಿ ಭಕ್ತರಲ್ಲಿ ಮತ್ತೆ ನಂಬಿಕೆ ಬರುವಂತೆ ಮಾಡಲು ಎನ್.ಐ.ಎಗೆ ತನಿಖೆಯ ಹೊಣೆ ಕೊಡಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳ ಧಾರ್ಮಿಕ ಕೇಂದ್ರದ ವಿರುದ್ದ ನಡೆದಿರುವ ಷಡ್ಯಂತ್ರವನ್ನು ವಿರೋಧಿಸಿ, ಷಡ್ಯಂತ್ರವನ್ನು ನಡೆಸಿರುವವರನ್ನು ಬಂಧಿಸಿ, ಎನ್.ಐ.ಎಗೆ ತನಿಖೆಗೆ ವಹಿಸುವಂತೆ ಆಗ್ರಹಿಸಿ ಶಿಡ್ಲಘಟ್ಟದಿಂದ ನೂರಾರು ಮಂದಿ ಧರ್ಮಸ್ಥಳಕ್ಕೆ ಧರ್ಮ ಯಾತ್ರೆ ಕೈಗೊಂಡಿದ್ದೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಧರ್ಮಯಾತ್ರೆಗೆ ಹೊರಟಿದ್ದು ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ನರೇಶ್, ಮುಖಂಡರಾದ ಕೊತ್ತನೂರು ಜಗದೀಶ್, ರಾಮಕೃಷ್ಣಪ್ಪ, ಬಾಲಕೃಷ್ಣ, ಚೆಲುವರಾಜು, ನಾರಾಯಣಸ್ವಾಮಿ, ಪ್ರಕಾಶ್ ಹಾಜರಿದ್ದರು.
Sidlaghatta : ರೈತ ದೇಶದ ಬೆನ್ನೆಲುಬು ಎಂದು ಭಾಷಣ ಮಾಡುವ ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತನ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವನಹಳ್ಳಿ ಸಿ.ವಿ.ಲೋಕೇಶ್ ಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಅವರು, ಅವಿಬಾಜಿತ ಕೋಲಾರ ಜಿಲ್ಲೆ ಈ ಹಿಂದೆ ಗೋಲ್ಡ್, ಸಿಲ್ಕ್ ಮತ್ತು ಮಿಲ್ಕ್ ಗೆ ಹೆಸರುವಾಸಿಯಾಗಿತ್ತು. ಈಗಾಗಲೇ ಇಲ್ಲಿನ ಗೋಲ್ಡ್ ಎಲ್ಲಾ ಖಾಲಿಯಾಗಿದೆ. ಇನ್ನುಳಿದ ಸಿಲ್ಕ್ ಮತ್ತು ಮಿಲ್ಕಿನ ವಿಚಾರಕ್ಕೆ ಬಂದರೆ ಈ ಭಾಗದ ರೇಷ್ಮೆ ಬೆಳೆಗಾರರಿಗೆ ಈ ಹಿಂದೆ ಸರ್ಕಾರದಿಂದ ಸಿಗುತ್ತಿದ್ದ ಬಹುತೇಕ ಯೋಜನೆಗಳನ್ನು ಇಂದಿನ ಸರ್ಕಾರ ನಿಲ್ಲಿಸಿದೆ. ಕೃಷಿ ಉಪ ಕಸಬುಗಳಾದ ಹೈನುಗಾರಿಕೆ ಸೇರಿದಂತೆ ಕುರಿ ಸಾಕಾಣಿಕೆಗೆ ಈ ಹಿಂದೆ ನೀಡುತ್ತಿದ್ದ ಸಾಲ ಬಂದ್ ಮಾಡಿದೆ. ಹೀಗೆ ಒಂದೊಂದು ಯೋಜನೆಯನ್ನು ನಿಲ್ಲಿಸುತ್ತಾ ಹೋದರೆ ರೈತ ಕೃಷಿ ಮಾಡುವುದಾದರೂ ಹೇಗೆ? ಕೃಷಿಯ ಉಪಕಸುಬುಗಳು ಉಳಿಯುವುದಾದರೂ ಹೇಗೆ ಎಂದರು.
ಪ್ರತಿಯೊಬ್ಬರೂ ರೈತನನ್ನು ಗೌರವಿಸುವ ಕೆಲಸ ಆಗಬೇಕು. ಜೊತೆಗೆ ರೈತನಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕಾದರೆ ರಾಜ್ಯಾಧ್ಯಂತ ಇರುವ ಎಲ್ಲಾ ರೈತಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಮಹಾಮಾರಿ ಕರೋನ ಸಂಕಷ್ಟದ ಸಮಯದಲ್ಲಿ ದೇಶ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದ ಬಹುತೇಕರು ಉದ್ಯೋಗ ಕಳೆದುಕೊಂಡು ವಾಪಸ್ ಬಂದಾಗ ಅವರನ್ನು ಕೃಷಿಯೊಂದೇ ಕೈ ಹಿಡಿದಿದ್ದು, ಹಾಗಾಗಿ ಕೃಷಿ ಹಾಗು ರೈತರ ಉಳಿವಿಗಾಗಿ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ರೈತಪರ ಸಂಘಟನೆಗಳ ಮುಖಂಡರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರನ್ನು ಜೊತೆಯಲ್ಲಿಟ್ಟುಕೊಂಡು ರೈತಪರ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಣ್ಣ, ಶೆಟ್ಟಹಳ್ಳಿ ನರಸಿಂಹಗೌಡ, ನರಸಿಂಹಪ್ಪ, ವೆಂಕಟಸ್ವಾಮಪ್ಪ, ರಘು ಹಾಜರಿದ್ದರು.