Home Blog Page 452

ಹಳೆಯ ನೆನಪುಗಳನ್ನು ಹೊತ್ತು ತಂದ ಕುರುಟಿಹಣ್ಣುಗಳು

0

ತಾಲ್ಲೂಕಿನ ಕುರುಚಲು ಕಾಡುಗಳಲ್ಲಿ ಬೆಳೆಯುವ ಕುರುಟಿಹಣ್ಣುಗಳು ನಗರಕ್ಕೆ ಗ್ರಾಮೀಣರು ಮಕ್ಕರಿಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ.
ಕಾಡುಹಣ್ಣುಗಳು ಒಂದೊಂದು ಒಂದು ಋತುವಿನಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಅವು ಕಡಿಮೆಯೂ ಆಗಿವೆ. ಅವುಗಳನ್ನು ತಂದು ಮಾರುವವರೂ ವಿರಳವಾಗಿದ್ದಾರೆ. ಆದರೂ ಆಗಾಗ ಕೆಲ ಶಾಲೆಗಳ ಬಳಿ ಈ ಹಣ್ಣಿನ ಮಾರಾಟ ಕಂಡುಬರುತ್ತವೆ.
ಕುರುಟಿಹಣ್ಣು ಅನೇಕರಿಗೆ ಹಳೆಯ ನೆನಪುಗಳನ್ನು ಮರುಕಳಿಸುವ ಹಣ್ಣುಗಳಲ್ಲಿ ಒಂದು. ಸಂಶೋಧಿತವಾಗಿ ಇದರ ಗುಣಾವಗುಣಗಳನ್ನು ಯಾರೂ ಮಾಡಿಲ್ಲ. ಆದರೆ ಇದು ತನ್ನ ಬಣ್ಣ ಮತ್ತು ರುಚಿಯಿಂದ ಜನಪ್ರಿಯವಾಗಿದೆ. ಮಕ್ಕರಿಗಳಲ್ಲಿ ಇಟ್ಟುಕೊಂಡು ಮಾರುವವರು ಬಿಸಿಲಿಗೆ ಹಣ್ಣು ಬಾಡದಂತೆ ಹಳೆಯ ಬಟ್ಟೆ ತುಂಡನ್ನು ಮುಚ್ಚಿರುತ್ತಾರೆ. ಬಟ್ಟೆ ಮತ್ತು ಮಕ್ಕರಿಯನ್ನು ನೋಡಿದ ಕೂಡಲೇ ಅದು ಕುರುಟಿಹಣ್ಣಿನದೆಂದು ತಟ್ಟನೆ ಹೊಳೆದುಬಿಡುತ್ತದೆ. ಇದನ್ನು ಮಾರಲು ಬೇರೆ ವಸ್ತುಗಳನ್ನು ಕೂಗಿದಂತೆ ‘ಕುರುಟಿಹಣ್ಣು, ಕುರುಟಿಹಣ್ಣು’ ಎಂದು ಕೂಗಬೇಕಿಲ್ಲ.
ಕುರುಟಿಹಣ್ಣು ಕಾಡು ಮತ್ತು ಬೇಲಿಗಳ ಆಶ್ರಯದಲ್ಲಿ ಬೆಳೆಯುತ್ತದೆ. ಆಸರೆಯಿಲ್ಲದಿದ್ದರೆ ಪೊದೆ ಕಟ್ಟಿಕೊಳ್ಳುತ್ತದೆ. ಯಾವುದಾದರೂ ಮರದ ಆಸರೆ ಸಿಕ್ಕಿದರೆ ಮಲ್ಲಿಗೆಯ ಬಳ್ಳಿಯಂತೆ ಹಬ್ಬಿ ಸುಮಾರು 20 ಅಡಿಯವರೆಗೂ ಬೆಳೆಯುತ್ತದೆ.
ಇದರ ಮುಳ್ಳುಗಳು ಅತ್ಯಂತ ಗಟ್ಟಿಯಾಗಿದ್ದು, ತುದಿ ಚೂಪಾಗಿ ಬಾಗಿರುತ್ತದೆ. ಹಣ್ಣು ಬಿಡಿಸುವಾಗಲಿ ಅಥವಾ ಎಚ್ಚರಿಕೆಯಿಲ್ಲದೆ ಪೊದೆಯನ್ನು ದಾಟಿಹೋದಾಗ ಅದು ತೊಟ್ಟ ಬಟ್ಟೆ ಮತ್ತು ಮೈಚರ್ಮವನ್ನು ಸೀಳುವಷ್ಟು ಮೊನಚಾಗಿರುತ್ತದೆ. ಇದರ ರಕ್ಷಣೆಯೇ ಮುಳ್ಳು. ಇದರ ಎಲೆಗಳನ್ನು ಮೇಕೆ ಮಾತ್ರ ಅತಿ ಎಚ್ಚರಿಕೆಯಿಂದ ತಿನ್ನುತ್ತದೆ. ಮತ್ತಾವ ಪ್ರಾಣಿಯೂ ಈ ಗಿಡಕ್ಕೆ ಮೂತಿ ಇಕ್ಕುವುದಿಲ್ಲ. ಹಾಗಾಗಿ ಇದು ಸ್ವಯಂ ರಕ್ಷಕ ಸಸ್ಯ. ಇದು ಸೀಗೆ ಪೊದೆಗಿಂತ ಅಪಾಯಕಾರಿ. ಕತ್ತಾಳೆ, ನಾಗದಾಳಿ ಮುಂತಾದ ಸಸ್ಯಗಳಂತೆ ಇದು ನೀರಿರದೆಯೂ ಬೆಳೆಯುತ್ತದೆ. ಬೇಸಿಗೆಯಲ್ಲಿ ಒಣಗುವುದಿಲ್ಲ. ಎಲೆಗಳನ್ನು ಉದುರಿಸಿಕೊಳ್ಳುತ್ತದೆ.
ಸಣ್ಣ ಅಕ್ಕಿನುಚ್ಚಿನಂತೆ ಹೂಬಿಟ್ಟುಕೊಳ್ಳುವ ಇದರ ಹೀಚು ಮತ್ತು ಕಾಯಿ ಹಸಿರಾಗಿದ್ದು ದೋರೆಯು ಕಂದು ಮಿಶ್ರಿತ ಕೆಂಪಗಿರುತ್ತದೆ. ಪಕ್ವವಾದ ಹಣ್ಣು ನೇರಳೆಯಷ್ಟೆ ಕಡುಕಪ್ಪು. ಒಳಗಿನ ಬೀಜ ಎರಡು ಹೋಳುಗಳನ್ನು ಕೂಡಿಸಿದಂತೆ ಇರುತ್ತದೆ. ಹಣ್ಣು ಹೆಚ್ಚು ಒಗರು ಮತ್ತು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ.
ಹಳ್ಳಿ ಮಕ್ಕಳಿಗೆ ಕುರುಟಿಹಣ್ಣು ಸಂಗ್ರಹಿಸುವುದೆಂದರೆ ಸವಾಲು ಮತ್ತು ಮೋಜು. ಹೆಣ್ಣು ಮಕ್ಕಳಿಗೆ ಇದು ಹುಣಿಸೆಕಾಯಿಯಷ್ಟೆ ಪ್ರಿಯ. ಹಲವರು ಅದರಲ್ಲೂ ವಯಸ್ಸಾಗಿ ಕೂಲಿ ಕೆಲಸ ಮಾಡುವ ಹೆಂಗಸರು ಇದನ್ನು ಸಂಗ್ರಹಿಸಿ ಶಾಲೆಗಳ ಮುಂಭಾಗದಲ್ಲಿ ಮತ್ತಿತರೆ ಜನಸಂಚಾರವಿರುವ ಜಾಗಗಳಲ್ಲಿ ಮಕ್ಕರಿಯೊಂದಿಗೆ ಕುಳಿತಿರುತ್ತಾರೆ. ಕೆಲವರ ಅನುಭವದಂತೆ ಇದರಲ್ಲಿ ಕಬ್ಬಿಣದ ಅಂಶ ಇದೆ. ಹಾಗೆಯೇ ಇದು ಹಿತಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇವತ್ತಿಗೂ ಇದು ತನ್ನದೇ ಆದ ಗ್ರಾಹಕವರ್ಗವನ್ನು ಉಳಿಸಿಕೊಂಡಿರುವುದು ವಿಶೇಷ.

ಗುಲಾಬಿ ಬೆಳೆದವರ ಮೊಗದಲ್ಲಿ ನಗುವಿಲ್ಲ

0

‘ನಗುವಾ ಗುಲಾಬಿ ಹೂವೆ’ ಎಂಬುದು ಗುಲಾಬಿಗಷ್ಟೇ ಸೀಮಿತವಾಗಿದೆ. ಎಲ್ಲರಲ್ಲೂ ಆಹ್ಲಾದ ಭಾವವನ್ನು ಉಂಟು ಮಾಡುವ ಗುಲಾಬಿಯನ್ನು ಬೆಳೆಯುವ ರೈತನ ಮೊಗದಲ್ಲಿ ಮಾತ್ರ ನಗುವಿಲ್ಲದಂತಾಗಿದೆ.
ಸಾಕಷ್ಟು ಶ್ರಮವಹಿಸಿ ಬೆಳೆ ಬೆಳೆದ ರೈತರು ಬೆಲೆ ಕುಸಿತದಿಂದಾಗಿ ಕಂಗಾಲಾಗುವ ಪರಿಸ್ಥಿತಿ ಉಂಟಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ಒಂದು ಕೆಜಿಗೆ 110 ರೂಗಳಿಗೆ ಬಟನ್ಸ್ ಗುಲಾಬಿಯನ್ನು ಮಾರಿದ್ದವರು ಈಗ 15 ರೂಗಳಿಗೆ ಮಾರಿ ಬರುವ ಸ್ಥಿತಿ ಒದಗಿದೆ. ಅದರ ಸಾಗಾಣಿಕಾ ವೆಚ್ಚವೂ ಸಿಗದಿದ್ದಾಗ ರೈತರಿಗೆ ಅವರ ಶ್ರಮ ಜೀವನದ ಬಗ್ಗೆ ಅಪನಂಬಿಕೆ ಮೂಡುತ್ತಿದೆ.

ಚರಿಷ್ಮಾ ಅಥವಾ ಬಟನ್ಸ್ ಎಂದು ಕರೆಯುವ ಕಡುಕೇಸರಿ ಬಣ್ಣದ ಗುಲಾಬಿ ಹೂ
ಚರಿಷ್ಮಾ ಅಥವಾ ಬಟನ್ಸ್ ಎಂದು ಕರೆಯುವ ಕಡುಕೇಸರಿ ಬಣ್ಣದ ಗುಲಾಬಿ ಹೂ

ನಗರದ ಬೈಪಾಸ್ ರಸ್ತೆಯಲ್ಲಿ 24 ಗುಂಟೆ ಜಮೀನಿನಲ್ಲಿ ಚರಿಷ್ಮಾ ಅಥವಾ ಬಟನ್ಸ್ ಎಂದು ಕರೆಯುವ ಕಡುಕೇಸರಿ ಬಣ್ಣದ ಗುಲಾಬಿ ಹೂಗಳನ್ನು ಬೆಳೆದಿರುವ ವಿ. ಶ್ರೀಧರ್ ತಮ್ಮ ಬೆಳೆಯ ಬೆಲೆಯು ಕುಸಿತ ಕಾಣುತ್ತಿರುವುದರ ಬಗ್ಗೆ ವಿಷಾಧದಿಂದ ತಿಳಿಸುತ್ತಾರೆ.
ಎಲೆ ಉದುರುವ ರೋಗ, ಚುಕ್ಕೆ ರೋಗ, ಬೂದಿ ರೋಗ, ರೆಡ್ ಮೈಟ್ಸ್, ಮೊಗ್ಗಿ ರೋಗ ಮುಂತಾದ ಹತ್ತು ಹಲವು ರೋಗಗಳಿಂದ ಗುಲಾಬಿ ಗಿಡಗಳನ್ನು ಜೋಪಾನ ಮಾಡಬೇಕು. ವಾರಕ್ಕೊಮ್ಮೆ ಔಷಧಿ ಸಿಂಪಡಿಸಬೇಕು. ನೀರು ಸಮರ್ಪಕವಾಗಿ ಹಾಯಿಸಬೇಕು. ಕೊಟ್ಟಿಗೆ ಗೊಬ್ಬರ, ಹೊಂಗೆ ಇಂಡಿ, ಬೇವಿನ ಇಂಡಿ ನೀಡಿ ಭೂಮಿಯನ್ನು ಫಲವತ್ತತೆಗೊಳಿಸಬೇಕು. ಡಿ.ಎ.ಪಿ ಸಹ ನೀಡಬೇಕು. ಕಳೆ ತೆಗೆಯಬೇಕು. ಇಷ್ಟೆಲ್ಲಾ ಮಾಡಿದರೂ ಮಾರುಕಟ್ಟೆ ಸೂತ್ರ ಸರಳವಾಗಿಲ್ಲ. ಕಷ್ಟಪಟ್ಟು ಬೆಳೆಯುವ ಬೆಳೆಯು ಮಾರುಕಟ್ಟೆಯ ಇಳಿತದಿಂದ ಬೆಲೆಯಿಲ್ಲದಂತಾಗುತ್ತದೆ ಎನ್ನುತ್ತಾರೆ ಶ್ರೀಧರ್.
ಗುಲಾಬಿಯನ್ನು ಬೆಳೆಯುವವರು ಹೆಚ್ಚಾಗಿರುವುದು ಬೆಲೆ ಕುಸಿತಕ್ಕೆ ಒಂದು ಕಾರಣವಾದರೆ, ಹಬ್ಬದ ನಂತರದ ದಿನಗಳಲ್ಲಿ ದಿಢೀರ್ ಕುಸಿತ ಕಾಣುವುದು ಮತ್ತೊಂದು ಕಾರಣವಾಗಿದೆ. ಒಟ್ಟಾರೆ ನಷ್ಟ ಹೊಂದುವುದು ಮಾತ್ರ ರೈತನೇ. ಗುಲಾಬಿಯಿಂದ ಗುಲ್ಕನ್ ಮೊದಲಾದ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದಲ್ಲಿ ಬೆಳೆಯುವ ರೈತರಿಗೆ ನಷ್ಟವಾಗುವುದಿಲ್ಲ ಎಂದು ಅವರು ಸಲಹೆ ನೀಡಿದರು.

ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಬೌದ್ಧಿಕ ವಿಕಸನ

0

ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ವೇದಿಕೆ ಬಹಳ ಉಪಯುಕ್ತವಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪ ತಿಳಿಸಿದರು.
ತಾಲ್ಲೂಕಿನ ರಾಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಬಶೆಟ್ಟಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಬೌದ್ಧಿಕ ವಿಕಸನವಾಗುತ್ತಿದ್ದು ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಶೈಕ್ಷಣಿಕ ವಿಚಾರಗಳನ್ನು ಹೊರತು ಪಡಿಸಿ ಕೂಡ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಇತರೆ ಪ್ರತಿಭೆ ಅಡಗಿರುತ್ತದೆ. ಅಂಕಗಳ ಕಡಿಮೆ ಬಂದಾಗ ಪೋಷಕರು ಮಕ್ಕಳನ್ನು ದಂಡಿಸುತ್ತಾರೆ, ಇದು ಸರಿಯಲ್ಲ. ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಪ್ರತಿಭಾ ಕಾರಂಜಿಯಂತಹ ವೇದಿಕೆಯಲ್ಲಿ ಪ್ರದರ್ಶಿಸಲು ಪೋಷಕರು ಸಹಕರಿಸಬೇಕು ಮತ್ತು ಗ್ರಾಮೀಣ ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಬೆಳಕಿಗೆ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳೊಂದಿಗೆ, ಹಲವಾರು ಗೀತ ಗಾಯನಗಳೊಂದಿಗೆ, ಜಾನಪದ ನೃತ್ಯ ರೂಪಕಗಳೊಂದಿಗೆ ಹಬ್ಬದ ವಾತವರಣವನ್ನು ಸೃಷ್ಟಿಸಿದ್ದರು. ಸುಮಾರು 500 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಪ್ರಶಸ್ತಿಪತ್ರವನ್ನು ನೀಡಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚನ್ನರಾಯಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ ಸಿ.ಆರ್.ಭಾರತಿ, ಶಿಕ್ಷಕರಾದ ರಮೇಶ್ಬಾಬು, ಮಮತಾ, ರಾಧಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಆಹಾರ ಇಲಾಖೆಯ ಅಧಿಕಾರಿ ವಿರುದ್ಧ ರೈತರ ಪ್ರತಿಭಟನೆ

0

ತಾಲ್ಲೂಕಿನ ಆಹಾರ ಇಲಾಖೆಯ ಅಧಿಕಾರಿ ರೈತನೊಂದಿಗೆ ಅವಾಚ್ಯ ಶಬ್ಧ ಬಳಸಿ ಮಾತನಾಡಿರುವುದರಿಂದ ಅವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ರೈತಸಂಘದ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ತಾಲ್ಲೂಕಿನ ಆನೆಮಡುಗು ಗ್ರಾಮದಲ್ಲಿನ ಸೀಮೆಎಣ್ಣೆ ವಿತರಣೆಯಲ್ಲಿ ಲೋಪದೋಷದ ಬಗ್ಗೆ ತಿಳಿಸಲು ಹೋದಾಗ ಆಹಾರ ನಿರೀಕ್ಷಕರು ಕೆಟ್ಟ ಶಬ್ಧಗಳಲ್ಲಿ ಬೈದಿದ್ದಾರೆ. ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕರು ನಿಮ್ಮನ್ನು ಭೇಟಿ ಮಾಡಲು ತಿಳಿಸಿದರು ಎಂದರೂ ಅವರನ್ನೂ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಈ ಅಧಿಕಾರಿಯ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.
ಆನೆಮಡುಗು ರೈತ ಆರ್. ಶಿವಣ್ಣ ಕಪ್ಪುಪಟ್ಟಿಯನ್ನು ಬಾಯಿಗೆ ಕಟ್ಟಿಕೊಂಡು ಬೈದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಧರಣಿ ಕುಳಿತಿದ್ದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮನೋರಮಾ ಪ್ರತಿಭಟನಾ ನಿರತರನ್ನು ಮನವೊಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತ ಸಂಘದ ಸದಸ್ಯರು ಈ ಬಗ್ಗೆ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕರಿಗೂ ದೂರನ್ನು ನೀಡಿದರು.
ರವಿಪ್ರಕಾಶ್, ಪ್ರತೀಶ್, ಆನೆಮಡುಗು ಚಂದ್ರಶೇಖರ್, ಬೆಳ್ಳೂಟಿ ಹರೀಶ್, ಚಿಕ್ಕದಾಸರಹಳ್ಳಿ ಮುನೇಗೌಡ, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಾಲಕನ ಮೇಲೆ ಬೀದಿ ನಾಯಿಗಳ ಆಕ್ರಮಣ

0

ನಗರದ ಟಿ.ಎಂ.ಸಿ ಲೇಔಟ್ ನಲ್ಲಿ ಮಂಗಳವಾರ ಬೆಳಿಗ್ಗೆ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಮುಗಿಬಿದ್ದಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಟಿ.ಎಂ.ಸಿ ಲೇಔಟ್ ನ ಷಾದಿಮಹಲ್ ಬಳಿ ನಾಯಿಗಳ ಹಿಂಡು ಸಾಕಷ್ಟು ಸಂಖ್ಯೆಯಲ್ಲಿವೆ. ಅಂಗಡಿಗೆ ಹೋಗುತ್ತಿದ್ದ ಸಯ್ಯದ್ ಆಫು ಎಂಬ ನಾಲ್ಕು ವರ್ಷದ ಬಾಲಕನ ಮೇಲೆ ನಾಯಿಗಳ ಹಿಂಡು ಧಾಳಿ ನಡೆಸಿವೆ. ಕೂಗಿಕೊಂಡ ಮಗುವನ್ನು ಕಂಡು ಸ್ಥಳೀಯರು ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಭಾಗದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಯಾರಿಗೂ ಅವು ಹೆದರುವುದಿಲ್ಲ. ನೋಡಿಕೊಳ್ಳದಿದ್ದರೆ ಈ ದಿನ ಮಗುವನ್ನು ನಾಯಿಗಳು ಉಳಿಸುತ್ತಿರಲಿಲ್ಲ. ಈ ಬಗ್ಗೆ ನಗರಸಭೆಯವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಣೇಶ ಚತುರ್ಥಿಯ ಅಂಗವಾಗಿ ಶಾಂತಿಸಭೆ

0

ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು ನಾಗರಿಕರು ಸಹಕರಿಸಬೇಕು ಎಂದು ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ಹೇಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣಪತಿ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲು ಇಚ್ಚಿಸುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ನಾಗರಿಕರು ಕಡ್ಡಾಯವಾಗಿ ನಗರಸಭೆ ಸೇರಿದಂತೆ ಬೆಸ್ಕಾಂ ಹಾಗು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳುವುದರೊಂದಿಗೆ ಆಯಾ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಅನುಮತಿ ಪಡೆಯದೆ ಗಣೇಶನ ಪ್ರತಿಷ್ಠಾಪನೆಗೆ ಯಾರಾದರೂ ಮುಂದಾದಲ್ಲಿ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಣೇಶನ ಪ್ರತಿಷ್ಠಾಪನೆಯ ದಿನಾಂಕ ಸೇರಿದಂತೆ ಸ್ಥಳ, ವಿಸರ್ಜನೆ ಮಾಡುವ ದಿನಾಂಕ, ಮೆರವಣಿಗೆ ಹೋಗುವ ಮಾರ್ಗ, ವಿಸರ್ಜನೆ ಮಾಡುವ ಸ್ಥಳ ಮುಂತಾದ ಅಗತ್ಯವಾದ ಮಾಹಿತಿಯನ್ನು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು. ವಿಸರ್ಜನೆಯ ದಿನಾಂಕದಂದು ಗಣೇಶನ ಮೂರ್ತಿಯನ್ನು ಸಂಜೆ ೬ ಗಂಟೆಯ ಒಳಗೆ ವಿಸರ್ಜಿಸಬೇಕು ಎಂದರು.
ಹಬ್ಬಗಳನ್ನು ಆಚರಿಸುವುದು ಸಂತೋಷ ಪಡಲಿಕ್ಕಾಗಿಯೇ ಹೊರತು ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಿಕ್ಕಲ್ಲ. ಹಬ್ಬದ ಹೆಸರಿನಲ್ಲಿ ನಾಗರಿಕರ ಭಾವನೆಗಳಿಗೆ ಧಕ್ಕೆಯುಂಟಾಗದಂತೆ ಹಬ್ಬಗಳನ್ನು ಆಚರಿಸಲು ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ವ್ಯವಸ್ಥಾಪನಾ ಸಮಿತಿ ರಚಿಸಿಕೊಳ್ಳಬೇಕು ಹಾಗೂ ಸಮಿತಿಯ ಎಲ್ಲಾ ಸದಸ್ಯರ ವಿಳಾಸ ಸೇರಿದಂತೆ ದೂರವಾಣಿ ಸಂಖ್ಯೆಗಳನ್ನು ಇಲಾಖೆಗೆ ನೀಡುವುದರೊಂದಿಗೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ಗಣೇಶನ ಮೂರ್ತಿಯ ವಿಸರ್ಜನೆ ವೇಳೆಯಲ್ಲಿ ನಾಗರಿಕರು ಅದರಲ್ಲಿಯೂ ಮುಖ್ಯವಾಗಿ ಯುವಕರು ಸಂಯಮದಿಂದ ವರ್ತಿಸಬೇಕು. ವಿನಾಕಾರಣ ಪಟಾಕಿಗಳನ್ನು ಸಿಡಿಸುವುದು ಹಾಗೂ ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಅನುಚಿತವಾಗಿ ವರ್ತಿಸುವಂತಹವರನ್ನು ಆಯಾ ಸಂಘ ಸಂಸ್ಥೆಗಳವರೇ ನಿಯಂತ್ರಿಸಬೇಕು. ಇಲಾಖೆ ಸೂಚಿಸುವಂತಹ ಸ್ಥಳದಲ್ಲಿಯೇ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಬೇಕು ಎಂದರು.
ತಹಸೀಲ್ದಾರ್ ಕೆ.ಎಂ. ಮನೋರಮಾ ಮಾತನಾಡಿ ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಾ ವ್ಯವಸ್ಥಾಪನಾ ಸಮಿತಿ ಸದಸ್ಯರು ನೋಡಿಕೊಳ್ಳಬೇಕು. ಹಬ್ಬದ ಆಚರಣೆಯ ಹೆಸರಲ್ಲಿ ರಾತ್ರಿಯಿಡೀ ಧ್ವನಿವರ್ಧಕಗಳನ್ನು ಬಳಸುವುದರಿಂದ ವೃದ್ದರೂ ಹಾಗು ಮಕ್ಕಳಿಗೆ ತೊಂದರೆಯಾಗುತ್ತದೆ ಹಾಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದರು.
ಶಿಡ್ಲಘಟ್ಟ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್, ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್, ಗ್ರಾಮಾಂತರ ಠಾಣೆಯ ಸಬ್ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಜಯ್, ಬೆಸ್ಕಾಂ ಇಲಾಖೆಯ ಎಇಇ ಪರಮೇಶಪ್ಪ, ನಗರಸಭೆ ಆಯುಕ್ತ ಎಚ್.ಎ. ಹರೀಶ್, ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಮಧ್ಯಸ್ತಿಕೆಯಲ್ಲಿ ರೇಷ್ಮೆ ವ್ಯವಹಾರ

0

ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಮಧ್ಯಸ್ತಿಕೆಯಲ್ಲಿ ರೀಲರುಗಳು ರೇಷ್ಮೆಯನ್ನು ಮಾರುವ ಅವಕಾಶವಿದೆ. ಮಗ್ಗಗಳಲ್ಲಿ ಬಳಸುವ ಹತ್ತಿ ಮೊದಲಾದ ಕಚ್ಛಾ ಪದಾರ್ಥಗಳ ಸಾಲಿಗೆ ಈಗ ರೇಷ್ಮೆಯೂ ಸೇರಲಿದ್ದು, ರೇಷ್ಮೆ ನೂಲು ಬಿಚ್ಚಾಣಿಕೆದಾರರು ಅದರ ಪ್ರಯೋಜನವನ್ನು ಪಡೆಯಬೇಕೆಂದು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಉಪವ್ಯವಸ್ಥಾಪಕ ಆರ್ಮುಗಮ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕೇಂದ್ರ ರೇಷ್ಮೆ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮವು ರೀಲರುಗಳು, ಟ್ವಿಸ್ಟರುಗಳು ಮತ್ತು ಮಗ್ಗಹೊಂದಿದವರ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ. ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ರೀಲರುಗಳು ಮತ್ತು ಟ್ವಿಸ್ಟರುಗಳು ವ್ಯವಹಾರ ನಡೆಸಬಹುದು. ರೀಲರುಗಳು ರೇಷ್ಮೆಯ ಗುಣಮಟ್ಟ, ಪ್ರಮಾಣ ಮತ್ತು ಬೆಲೆಯನ್ನು ಟ್ವಿಸ್ಟರೊಡನೆ ಒಪ್ಪಂದ ಮಾಡಿಕೊಂಡು ನಿಗದಿತ ಸಮಯದೊಳಗೆ ಕಳುಹಿಸಬೇಕು. ತಲುಪಿದ ನಂತರ ಟ್ವಿಸ್ಟರು ಸ್ವೀಕರಿಸಿದ್ದನ್ನು ನೋಂದಣಿ ಮಾಡಿದ ಮೇಲೆ ರೇಷ್ಮೆ ಕಳುಹಿಸಿದ ರೀಲರಿನ ಖಾತೆಗೆ ಹಣ ಜಮೆಯಾಗುತ್ತದೆ. ರೇಷ್ಮೆ ಗುಣಮಟ್ಟಕ್ಕೆ ಕೇಂದ್ರ ರೇಷ್ಮೆ ಮಂಡಳಿಯಿಂದ ಪ್ರಮಾಣಪತ್ರ ಪಡೆಯಬೇಕು ಎಂದು ವಿವರಿಸಿದರು.
ಆನ್ಲೈನ್ ವ್ಯವಸ್ಥೆಯಲ್ಲಿ ಜಠಿಲತೆಯು ಕಂಡುಬಂದರೂ ಅದರಿಂದ ಮೂಲ ಉತ್ಪಾದಕರಿಗೆ ನ್ಯಾಯವಾದ ಬೆಲೆ ಮತ್ತು ಲಾಭ ದೊರೆಯಲಿದೆ. ಮಧ್ಯವರ್ತಿ ವ್ಯಾಪಾರಿಗಳಿಂದ ಸೋರಿಹೋಗುವ ಲಾಭ ಉತ್ಪಾದಕರಿಗೆ ನೇರವಾಗಿ ದೊರೆಯಲಿದೆ ಎಂದು ಹೇಳಿದರು.
ರೀಲರ್ ಮಹಮ್ಮದ್ ಅನ್ವರ್ ಮಾತನಾಡಿ, ಕಡಿಮೆ ಬಂಡವಾಳ ಹಾಗೂ ಸಣ್ಣ ಪ್ರಮಾಣದಲ್ಲಿ ರೇಷ್ಮೆ ಉತ್ಪಾದಿಸುವವರೇ ಹೆಚ್ಚಾಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಯನ್ನು ಪೂರೈಕೆ ಮಾಡಲು ಅವರಿಗೆ ಸಾಧ್ಯವಾಗದು. ಸ್ವಸಹಾಯ ಸಂಘಗಳಿಂದ ಉತ್ಪಾದಿಸುವ ಸಾಮಗ್ರಿಗಳಿಗೆ ಆರ್ಥಿಕವಾಗಿ ನಬಾರ್ಡ್ ನೆರವು ಒದಗಿಸುವ ರೀತಿಯಲ್ಲಿ ರೇಷ್ಮೆ ಉತ್ಪಾದಿಸುವವರ ಸಂಘಗಳಿಗೂ ಬೆಂಬಲಿಸಬೇಕು. ಆಗ ಸಾಂಘಿಕವಾಗಿ ಹೆಚ್ಚು ಪ್ರಮಾಣದ ರೇಷ್ಮೆಯನ್ನು ಮಾರಲು ಮತ್ತು ಒಟ್ಟಾಗಿ ಲಾಭ ಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಆಯುಕ್ತರ ಕಛೇರಿಯಲ್ಲಿ ಚರ್ಚೆ ನಡೆಸಬೇಕೆಂದು ಅಧಿಕಾರಿಗಳು ಸಲಹೆ ನೀಡಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ರುದ್ರಣ್ಣಗೌಡ, ಕೆ.ಎನ್. ಮಹೇಶ್, ರೇಷ್ಮೆ ಉಪನಿರ್ದೇಶಕ ಎಂ.ಎನ್. ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ. ನರಸಿಂಹಮೂರ್ತಿ, ವಿಸ್ತರಣಾಧಿಕಾರಿ ರಾಮ್ಕುಮಾರ್ ಹಾಜರಿದ್ದರು.

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆಯ ತಾಲ್ಲೂಕು ಪಂಚಾಯತಿ ಸದಸ್ಯೆ ಶೋಭಾ ಶಶಿಕುಮಾರ್ ಅವರ ಹಿರಿಯ ಪುತ್ರಿ ಎಸ್. ವಿಸ್ಮಯ ಚಿಕ್ಕಜಾಲ ಸಮೀಪದ ಡೆಕತ್ಲಾನ್ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಪೌರಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ

0

ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಿಎಮ್ಸಿಎ ಸಂಸ್ಥೆಯ ಜೀವನ ಕೌಶಲ್ಯಧಾರಿತ ಸಕ್ರಿಯ ನಾಗರಿಕತ್ವ ರೂಪಿಸುವ ಪೌರಕ್ಲಬ್ಗಳ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುತ್ತೂರು, ಮಳ್ಳೂರು ಹಾಗೂ ಜಂಗಮನಕೋಟೆಯ ಮೂರೂ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸಿಎಮ್ ಸಿಎ ಸಂಸ್ಥೆಯ ಪೌರಕ್ಲಬ್ಗಳ ಉದ್ಘಾಟನೆಯನ್ನು ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಸಿಎಮ್ಸಿಎ ಪೌರಕ್ಲಬ್ ಸದಸ್ಯರಿಗೆ ಬ್ಯಾಡ್ಜ್ನ್ನು ಹಾಕುವುದರ ಮುಖಾಂತರ ಚಾಲನೆ ನೀಡಲಾಯಿತು.
ಸಿಎಮ್ಸಿಎ ಸಂಸ್ಥೆಯ ರೀಜಿನಲ್ ಮುಖ್ಯಸ್ಥ ಪಿ.ಆರ್. ಮರುಳಪ್ಪ ಮಾತನಾಡಿ, ಸಿಎಮ್ಸಿಎ ಸಂಸ್ಥೆಯು ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ೬ ವರ್ಷಗಳ ಹಿಂದೆ ತನ್ನ ಪ್ರಥಮ ಗ್ರಾಮೀಣ ಪೌರಕ್ಲಬ್ನ್ನು ಆರಂಭಮಾಡಿತ್ತು . ಈಗ ಐದು ಶಾಲೆಗಳಲ್ಲಿ ಸಂಸ್ಥೆಯ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಕಾರ್ಯಕ್ರಮದ ಮುಖಾಂತರ ವಾರದ ತರಗತಿಗಳಲ್ಲಿ ಜೀವನ ಕೌಶಲ್ಯಗಳು, ಪೌರ ಹಾಗೂ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತಾಗಿ ಮಕ್ಕಳನ್ನು ಸಂವೇದನಾಶೀಲರನ್ನಾಗಿಸಿ, ತನ್ಮೂಲಕ ಸಮಾನತೆ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಸಿಎಮ್ಸಿಎ ತೊಡಗಿದೆ ಎಂದರು.
ವಾರದ ತರಗತಿಗಳಲ್ಲಿ ಫ್ಲಾಶ್ ಕಾರ್ಡ್ಸ್, ಬ್ಯಾನರ್ಸ್, ವೀಡಿಯೋ ಪ್ರದರ್ಶನ, ಚರ್ಚೆಗಳು ಇನ್ನಿತರ ಬೋಧನಾ ಸಾಧನಗಳನ್ನು ಬಳಸಲಾಗುವುದು. ಅಲ್ಲದೇ ಪ್ರೇರೇಪಣೆ ಮೂಡಿಸುವ ಪರಿಣಾಮಕಾರಿ ಕಥೆಗಳನ್ನು ಸಹ ಮಕ್ಕಳಿಗೆ ಹೇಳಲಾಗುವುದು. ಆ ಮುಖಾಂತರ ಕಲಿಕೆಯ ಪ್ರಕ್ರಿಯೆಯನ್ನು ಆಸಕ್ತಿಗೊಳಿಸಿ ಮಕ್ಕಳು ಭಾಗವಹಿಸಿ, ಕಲಿಯುವಂತೆ ಮಾರ್ಗದರ್ಶನ ಮಾಡಲಾಗುತ್ತದೆ. ನವಂಬರ್ ತಿಂಗಳಿನಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಿ ಮಕ್ಕಳು ಮತ್ತು ಜನಪ್ರತಿನಿಧಿಗಳ ಜೊತೆ ಸಂವಾದ ಏರ್ಪಡಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಳ್ಳೂರು ಮತ್ತು ಜಂಗಮಕೋಟೆ ಶಾಲೆಗಳ ವಿದ್ಯಾರ್ಥಿಗಳು ಸಮಾಜದ ಕುರಿತಂತೆ ಕಾಳಜಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿದರು. ಕಳೆದ ವರ್ಷದಲ್ಲಿ ಸಿಎಮ್ಸಿಎ ವಾರದ ತರಗತಿಗಳಿಂದ ಪ್ರೇರೇಪಿತರಾಗಿ ಹಳ್ಳಿಯ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯತಿಗೆ ಪತ್ರ ಬರೆದ ಒಂಭತ್ತು ಮಕ್ಕಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಶೈಕ್ಷಣಿಕ ಅಧಿಕಾರಿ ನಾಗರತ್ನ, ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಕುಂತಲಮ್ಮ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.

ಅಭಿಮಾನಿಗಳಿಂದ ಚಿರಂಜೀವಿ ಜನ್ಮದಿನಾಚರಣೆ

0

ಮೆಗಾಸ್ಟಾರ್ ಚಿರಂಜೀವಿ ಅವರ 61ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಬಸ್ ನಿಲ್ದಾಣದ ಬಳಿಯಿರುವ ಸಲ್ಲಾಪುರಮ್ಮ ದೇವಾಲಯದ ಬಳಿ ಸೋಮವಾರ ಆಚರಿಸಿದರು.
ತೆಲುಗಿನ ಖ್ಯಾತ ನಟ ಹಾಗೂ ಮಾಜಿ ಕೇಂದ್ರ ಸಚಿವ ಚಿರಂಜೀವಿ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳೊಂದಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ದಿನೇಶ್ಬಾಬು,‘ಪ್ರತಿವರ್ಷವೂ ನಾವು ನಮ್ಮ ನೆಚ್ಚಿನ ನಾಯಕನಟನ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸುತ್ತಿದ್ದೇವೆ. ಅಂಧ ಮಕ್ಕಳೊಂದಿಗೆ ಈ ದಿನ ಸಿಹಿ ಹಂಚಿಕೊಂಡು ಆಚರಣೆ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನೂ ನಡೆಸುತ್ತಿದ್ದೇವೆ. ಈ ದಿನ ನಮ್ಮೊಂದಿಗೆ ಈ ಆಚರಣೆಯಲ್ಲಿ ನಮ್ಮ ತಾಲ್ಲೂಕಿನ ಬಚ್ಚಹಳ್ಳಿಯ ‘ಕ್ರಾಕ್ಜಾಕ್’ ಚಲನಚಿತ್ರದ ನಟ ಅಭಿರಾಮ್ ಹಾಜರಿದ್ದು ಹುರಿದುಂಬಿಸಿದ್ದಾರೆ’ ಎಂದು ಹೇಳಿದರು.
ನಾಗೇಶ್ಗೌಡ, ಮಂಜುನಾಥ್, ಶ್ರೀನಿವಾಸ್, ಪ್ರಕಾಶ್, ದೇವರಾಜು, ಮಾಮಯ್ಯ, ಮಹೇಶ್, ರಾಮು, ಸಿ.ಎಂ.ಶ್ರೀನಿವಾಸ್, ಪಿ.ದೇವರಾಜ್, ಸಾದಿಕ್, ರಾಧಾಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಕೀಲರ ಸಂಘದಿಂದ ಮನವಿ ಸಲ್ಲಿಕೆ

0

ರಾಜ್ಯದ ಉಚ್ಛನ್ಯಾಯಾಲಯದಲ್ಲಿ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಲ್ಲೂಕು ವಕೀಲರ ಸಂಘದ ಸದಸ್ಯರು ಸೋಮವಾರ ಒತ್ತಾಯಿಸಿದರು.
ನ್ಯಾಯಾಲಯ ಕಲಾಪದಿಂದ ಹೊರಗುಳಿದ ತಾಲ್ಲೂಕು ವಕೀಲರ ಸಂಘದ ಸದಸ್ಯರು ಕೆಂಪು ಪಟ್ಟಿಯನ್ನು ಧರಿಸಿ ಪ್ರಧಾನ ಮಂತ್ರಿಗಳಿಗೆ ತಲುಪಿಸುವಂತೆ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ‘ರಾಜ್ಯದ ಉಚ್ಛನ್ಯಾಯಾಲಯದಲ್ಲಿ 62 ಮಂದಿ ನ್ಯಾಯಾಧೀಶರಿರಬೇಕು. ಆದರೆ 27 ಮಂದಿ ನ್ಯಾಯಾಧೀಶರಿದ್ದಾರೆ. ಹೀಗಾಗಿ ಸುಮಾರು 2 ಲಕ್ಷ ಮೊಕದ್ದಮೆಗಳು ಇತ್ಯರ್ಥವಾಗದೇ ಉಳಿದಿವೆ. ಇದು ಇನ್ನಷ್ಟು ಬೆಳೆಯುತ್ತದೆ. ಆದ್ದರಿಂದ ಆದಷ್ಟು ಬೇಗ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಮಂಜುನಾಥ್, ಲೋಕೇಶ್, ವಿಶ್ವನಾಥ್, ಭಾಸ್ಕರ, ನಾಗೇಂದ್ರಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಯಿ ಸ್ಮರಣಾ ಭಜನಾ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಭಾನುವಾರ ವಿಶೇಷ ಸಾಯಿ ಸ್ಮರಣಾ ಭಜನಾ ಕಾರ್ಯಕ್ರಮವನ್ನು ಬೆಂಗಳೂರಿನ ಸಾಯಿ ಸ್ಮರಣಾ ವೃಂದದ ವಂದನಾ ಕಾಮತ್ ನೇತೃತ್ವದ ತಂಡ ನಡೆಸಿಕೊಟ್ಟರು. ಕಲಾವಿದರಾದ ನಾಗರಾಜ್, ಕಾರ್ತಿಕ್, ಜಗನ್ ಅವರ ವಾದ್ಯಗೋಷ್ಠಿ ಜೊತೆಯಾಗಿತ್ತು. ಸಾಯಿನಾಥ ಜ್ಞಾನ ಮಂದಿರದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಅಮರ ಸಾಯಿ, ಬಾಬು, ಮಂಜುನಾಥ, ದೇವರಾಜ್ ಹಾಜರಿದ್ದರು.

ಸಾರ್ವಜನಿಕರ ನೆರವಿಗಾಗಿ ಕಛೇರಿ ಸ್ಥಾಪನೆ

0

ತಾಲ್ಲೂಕಿನ ಎಲ್ಲಾ ನಾಗರಿಕರಿಗೆ ಅನುಕೂಲವಾಗುವ ಉದ್ದೇಶದಿಂದ ವಿವಿಧ ಸರ್ಕಾರಿ ಯೋಜನೆಗಳು ಸಿಗಲು ಬೇಕಾದ ದಾಖಲೆಗಳನ್ನು ಒಟ್ಟುಗೂಡಿಸಿಕೊಳ್ಳಲು ನೆರವು ನೀಡಲೆಂದು ಎಸ್.ಎನ್.ಕ್ರಿಯಾ ಟ್ರಸ್ಟ್ನ ಕಛೇರಿಯನ್ನು ನಗರದ ಬಸ್ ನಿಲ್ದಾಣದ ಬಳಿ ಆರಂಭ ಮಾಡುತ್ತಿರುವುದಾಗಿ ಎಸ್.ಎನ್. ಕ್ರಿಯಾ ಟ್ರಸ್ಟ್ನ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ನ ಕಛೇರಿಯ ಪೂಜೆ ಸಲ್ಲಿಸಿ, ಅಂಧ ಮಕ್ಕಳ ಶಾಲೆಯಲ್ಲಿ ಸಿಹಿ ವಿತರಿಸಿ, ಅಂಗವಿಕಲ ಮಕ್ಕಳಿಗೆ ವೀಲ್ ಚೇರನ್ನು ಸಂಸ್ಥೆಯಿಂದ ನೀಡಿ ಅವರು ಮಾತನಾಡಿದರು.
ನಮ್ಮ ಟ್ರಸ್ಟ್ ವತಿಯಿಂದ ಹಲವು ತಿಂಗಳುಗಳಿಂದ ಸಾಮಾಜಿಕ ಸೇವೆ ಸಲ್ಲಿಸುದ್ದೇವೆ. ಆರೋಗ್ಯದ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುವೆವು. ಈ ಸೇವೆ ಜನರಿಗೆ ಸಮರ್ಪಕವಾಗಿ ತಲುಪಬೇಕೆಂಬ ಉದ್ದೇಶದಿಂದ ಈಗ ಕಛೇರಿಯನ್ನು ಪ್ರಾರಂಭ ಮಾಡಿದ್ದೇವೆ. ತಾಲ್ಲೂಕಿನ ಜನರು ವೃದ್ಧಾಪ್ಯವೇತನ, ವಿಧವಾ ವೇತನ ಮುಂತಾದ ಹಲವು ಯೋಜನೆಗಳಿಗೆ ಬೇಕಾದ ದಾಖಲೆಗಳ ವಿವರ ಹಾಗೂ ನೆರವನ್ನು ಪಡೆದುಕೊಳ್ಳಬೇಕೆಂದು ಕೋರಿದರು.

ಆಲಸ್ಯವೇ ಮರಣ, ಜಾಗೃತಿಯೇ ಜೀವನ

0

ಶಿಡ್ಲಘಟ್ಟದಲ್ಲಿ ಜನಿಸಿದ ಎನ್.ಆರ್. ನಾರಾಯಣಮೂರ್ತಿಯವರು ವಿಶ್ವವೇ ಬೆರಗಾಗುವಂತ ಸಾಧನೆ ಮಾಡಿದ್ದಾರೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ನಂತರ ನಮ್ಮ ರಾಜ್ಯದ ಹೆಸರು ಜಗತ್ತಿನಾದ್ಯಂತ ಮೆರೆಯುವಂತೆ ಮಾಡಿದ ಮಹಾನ್ ತಾಂತ್ರಿಕ ತಜ್ಞರಾದ ಅವರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ತಾಲ್ಲೂಕು ಕ ಸಾ ಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಲಸ್ಯವೇ ಮರಣ, ಜಾಗೃತಿಯೇ ಜೀವನ’ ಎಂಬುದು ನಾರಾಯಣಮೂರ್ತಿಯವರ ಸಿದ್ಧಾಂತ. ನ್ಯಾಯಬದ್ಧ ಮಾರ್ಗದಲ್ಲಿ ಹಣದ ರಾಶಿಯನ್ನೇ ಕೂಡಿಹಾಕಿದ ಸಾಫ್ಟ್ವೇರ್ ಸಂತರೆಂದೇ ಪ್ರಸಿದ್ಧರು. ಶಾಲಾ ಮಾಸ್ತರರ ಮಗನೊಬ್ಬ ಇಂದು ಪ್ರಪಂಚದ ಗಮನಾರ್ಹ ಉದ್ಯಮಿಯಾಗಿ ಬೆಳೆದು ನಿಂತ ಯಶೋಗಾಥೆ ಅದರಲ್ಲೂ ನಮ್ಮ ತಾಲ್ಲೂಕಿನವರೇ ಈ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಎಂದು ನುಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಹತ್ತನೇ ತರಗತಿಯ ದಿವ್ಯಾ, ರಕ್ಷಿತಾ ಮತ್ತು ರಘು ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ನಯನಾ, ಹರ್ಷಿಯಾ ಮತ್ತು ಪ್ರದೀಪ್ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಕೃಷ್ಣದೇವರಾಯ’, ‘ಅಬ್ದುಲ್ ಕಲಾಂ’, ‘ಶುಶೃತಾ’, ‘ಸ್ವಾಮಿ ವಿವೇಕಾನಂದ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ. ತ್ಯಾಗರಾಜ್, ಸದಸ್ಯರಾದ ಮುನಿರಾಜು, ರಮೇಶ್, ಜಗದೀಶ್ ಬಾಬು, ನಾಗರಾಜ್, ದೇವರಾಜ್, ಮಂಜುನಾಥ್, ಪವನ್ ಕುಮಾರ್, ಚಂದ್ರಶೇಖರ್ ಹಡಪತ್, ಗುರುನಂಜಪ್ಪ, ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್, ಉಪನ್ಯಾಸಕರಾದ ಉಪೇಂದ್ರಕುಮಾರ್, ಮುನಿಯಪ್ಪ, ನಾಗೇಶ್, ಪ್ರಜ್ವಲ್, ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಿಜೆಪಿ ಪಕ್ಷದಿಂದ ಪರಿಸರ ಕಾಳಜಿ

0

‘ಗಿಡ ನೆಡಿ ಪರಿಸರ ಉಳಿಸಿ’ ಎಂಬ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುತ್ತಿದ್ದೇವೆ. ಈಗ ನೆಟ್ಟ ಗಿಡಗಳು ಬ್ಯಾಂಕಿನಲ್ಲಿಟ್ಟ ಠೇವಣಿಯಿದ್ದಂತೆ. ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ, ಹಸಿರು ಪರಿಸರ, ಮಳೆ ಮುಂತಾದ ಹಲವು ಉಪಯುಕ್ತತೆಗಳು ಅವುಗಳಿಂದ ಲಭ್ಯವಾಗುತ್ತವೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ. ನಂದೀಶ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಭಾನುವಾರ ಸುಮಾರು 70 ಗಿಡಗಳನ್ನು ಬಿಜೆಪಿ ಪಕ್ಷದ ವತಿಯಿಂದ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಿಡಗಳನ್ನು ನೆಡುವುದರೊಂದಿಗೆ ಅವುಗಳ ಪಾಲನೆಯೂ ಅಗತ್ಯವಿದೆ. ಶಾಲೆಯ ಮಕ್ಕಳು ನಿರ್ವಹಣೆ ಮಾಡಲು ಅನುಕೂಲವಾಗುವ ರೀತಿಯಲ್ಲಿ ಹನಿನೀರಾವರಿ ಕೊಳವೆಗಳನ್ನು ಅಳವಡಿಸಿಕೊಡಲಾಗುವುದು. ಇದರಿಂದ ನೀರು ಪೋಲಾಗುವುದು ತಪ್ಪುತ್ತದೆ. ಗಿಡಗಳನ್ನು ಅರಣ್ಯ ಇಲಾಖೆಯವರು ಉಚಿತವಾಗಿ ನೀಡಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಗುಣಿಗಳನ್ನು ತೋಡಿಸಿ, ಕೊಟ್ಟಿಗೆ ಗೊಬ್ಬರ ಮತ್ತು ನೀರು ಹಾಕಿಸಿ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರರೆಡ್ಡಿ, ಮುನಿರಾಜು, ಸದಸ್ಯರಾದ ಸುರೇಶ್, ದಾಮೋದರ್, ಮಂಜುಳಮ್ಮ, ಬೈರರೆಡ್ಡಿ, ಪ್ರತಾಪ್, ಪುರುಷೋತ್ತಮ್, ಗಂಗಾಧರ್, ಗಾಯತ್ರಮ್ಮ, ಅಶ್ವಕ್ ಅಹಮದ್, ಕೃಷ್ಣಾರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ನರಸಿಂಹಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಾಲೆಯ ವಿದ್ಯಾರ್ಥಿಗಳಿಗೆ ಕಾಡಿನ ಪರಿಚಯ

0

ತಾಲ್ಲೂಕಿನ ಗಾಂಡ್ಲಚಿಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶನಿವಾರ ತಮ್ಮ ಗ್ರಾಮದ ಹತ್ತಿರವಿರುವ ಬಚ್ಚನಹಳ್ಳಿ ಕಾಡಿನಲ್ಲಿ ಹೊರಸಂಚಾರ ಕೈಗೊಂಡಿದ್ದರು.
ವಿವಿಧ ರೀತಿಯ ಮರಗಿಡಗಳು, ಚಿಟ್ಟೆ, ಹಕ್ಕಿಗಳು, ಕಾಡು ಹಣ್ಣುಗಳ ಪರಿಚಯವನ್ನು ಶಿಕ್ಷಕರ ಸಹಾಯದಿಂದ ಮಾಡಿಕೊಂಡು ಆಡಿ ನಲಿದರು.
‘ತಾಲ್ಲೂಕಿನ ಬಚ್ಚನಹಳ್ಳಿ ಕಾಡಿನಲ್ಲಿ ಸುಮಾರು 700 ವರ್ಷಗಳ ಹಿಂದಿನ ಗೋಪಮ್ಮ ದೇವಾಲಯವಿದೆ. ದನಕರುಗಳು, ಕುರಿ ಮೇಕೆಗಳಿಗೆ ಅನಾರೋಗ್ಯವಾದಾಗ ಇಲ್ಲಿ ಬಂದು ಹರಕೆ ಮಾಡಿಕೊಂಡರೆ ಗುಣಮುಖವಾಗುತ್ತದೆ ಎಂಬ ನಂಬಿಕೆ ಗ್ರಾಮೀಣರದ್ದು. ಈ ದೇವಾಲಯದ ಬಳಿ ಮಕ್ಕಳಿಗೆ ಶ್ಲೋಕ, ಬೌದ್ಧ, ಜೈನ, ಕುರಾನ್, ಬೈಬಲ್ ಪ್ರಾರ್ಥನೆಯನ್ನು ಪಠಣೆ ಮಾಡಿಸಿದೆವು. ವಿವಿಧ ಆಟಗಳನ್ನು ಆಡಿಸಿದೆವು. ಹುಲಿಎಲೆಕಾಯಿ, ನೇರಳೆ ಹಣ್ಣು ಮುಂತಾದವುಗಳನ್ನು ತಿಂದು ಮಕ್ಕಳು ಸಂಭ್ರಮಿಸಿದರು. ನಿಸರ್ಗದ ನಡುವೆ ಮಕ್ಕಳೊಂದಿಗೆ ಶಿಕ್ಷಕರೂ ಮಕ್ಕಳಂತಾಗಿದ್ದೆವು’ ಎಂದು ಶಿಕ್ಷಕ ವೆಂಕಟರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗಂಗಲಪ್ಪ ಮತ್ತು ಮುರಳಿ ಶಾಲಾ ಮಕ್ಕಳಿಗೆ ಉಪಹಾರ ವಿತರಿಸಿದರು. ಶಾಲಾ ಮುಖ್ಯಶಿಕ್ಷಕ ಎಸ್.ಎಂ. ಆದಿನಾರಾಯಣ, ಶಿಕ್ಷಕರಾದ ರಾಮರೆಡ್ಡಿ, ಮಂಜುನಾಥ, ಗಜೇಂದ್ರ, ಲಲಿತಾ ಹಾಜರಿದ್ದರು.

‘ಸಹಸ್ರ ದೀಪಗಳ ಉಡುಗೊರೆ’ ಜಂಗಮಕೋಟೆ ವಿದ್ಯಾರ್ಥಿಗಳಿಗೆ ಸೋಲಾರ್ ದೀಪಗಳ ಉಡುಗೊರೆ

0

‘ಸಹಸ್ರ ದೀಪಗಳ ಉಡುಗೊರೆ’ ಎಂಬ ಕಾರ್ಯಯೋಜನೆಯ ಮೂಲಕ ಸರ್ಕಾರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲು ಸೋಲಾರ್ ದೀಪಗಳನ್ನು ಉಚಿತವಾಗಿ ನೀಡುತ್ತಿರುವುದಾಗಿ ಒನ್ ಗುಡ್ ಸ್ಟೆಪ್ ಸಂಸ್ಥೆಯ ಅಮಿತಾ ಪೈ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ನೂರು ವಿದ್ಯಾರ್ಥಿಗಳಿಗೆ ಶುಕ್ರವಾರ ಸೋಲಾರ್ ದೀಪಗಳನ್ನು ವಿತರಿಸಿ ಅವರು ಮಾತನಾಡಿದರು.
ಶಾಲೆಯವರ ಮೇಲ್ವಿಚಾರಣೆಯಲ್ಲಿ ಸೋಲಾರ್ ದೀಪಗಳನ್ನು ವಿತರಿಸಲಾಗುತ್ತಿದೆ. ಸೋಲಾರ್ ದೀಪ ಪಡೆದ ವಿದ್ಯಾರ್ಥಿಗಳು ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೂ ಅಭ್ಯಾಸಕ್ಕೆ ತೊಂದರೆ ಪಡಬಾರದು ಎಂಬುದು ನಮ್ಮ ಉದ್ದೇಶ. ಮಕ್ಕಳು ಶಾಲೆಗೆ ತಂದು ದೀಪಗಳನ್ನು ಚಾರ್ಜ್ ಮಾಡಿಕೊಂಡು ಹೋಗಬೇಕು. ಇದರಿಂದ ಶಿಕ್ಷಕರಿಗೆ ಅದರ ಉಪಯೋಗದ ಬಗ್ಗೆ ಖಾತ್ರಿಯೂ ಸಿಗುತ್ತದೆ. ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ 10 ಶಾಲೆಗಳಲ್ಲಿ ಸೋಲಾರ್ ದೀಪಗಳನ್ನು ವಿತರಿಸಿದ್ದೇವೆ. ಜಿಲ್ಲೆಯಲ್ಲಿ ಸೋಲಾರ್ ದೀಪಗಳನ್ನು ಪಡೆಯುತ್ತಿರುವ 25 ನೇ ಶಾಲೆಯಿದು ಎಂದು ಹೇಳಿದರು.
‘ಕಲಿಕೆಗಾಗಿ ಬೆಳಕು’ ಎಂಬ ಕಾರ್ಯಕ್ರಮದ ಮೂಲಕ ‘ನಮ್ಮ ಮುತ್ತೂರು’ ಸಂಸ್ಥೆ 2011 ರಲ್ಲಿ ಸೆಲ್ಕೋ ಸೋಲಾರ್ ಮತ್ತು ಖಾಸಗಿ ದಾನಿಗಳ ಸಹಾಯದಿಂದ ಮುತ್ತೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಮಕ್ಕಳಿಗೆ ಸೋಲಾರ್ ದೀಪಗಳನ್ನು ನೀಡಿದ್ದರು. ಇದರಿಂದ ಕಲಿಕೆಯಲ್ಲಿ ಪ್ರಗತಿ ಕಂಡುಬಂದಿತು. ಅವರಿಂದ ಪ್ರೇರಣೆ ಹೊಂದಿದ ನಾವು ಒಂದು ಸಾವಿರ ಮಕ್ಕಳಿಗೆ ಸೋಲಾರ್ ದೀಪಗಳನ್ನು ಉಡುಗೊರೆಯಾಗಿ ನೀಡುವ ಗುರಿಯನ್ನು ಹೊಂದಿದ್ದೇವೆ. ಹತ್ತನೇ ತರಗತಿಯ ಮಕ್ಕಳು ಉತ್ತೀರ್ಣಗೊಂಡು ಶಾಲೆ ಬಿಟ್ಟ ನಂತರ ಅವರು ಬಳಸುತ್ತಿದ್ದ ಸೋಲಾರ್ ದೀಪಗಳು 9 ರಿಂದ 10ಕ್ಕೆ ಬಂದ ಮಕ್ಕಳಿಗೆ ಸಿಗುತ್ತವೆ. ಒನ್ ಗುಡ್ ಸ್ಟೆಪ್, ಪವರ್ಸ್ ಆಫ್ 10 ಮತ್ತು ನಮ್ಮ ಮುತ್ತೂರು ಸಂಸ್ಥೆಗಳು ಜೊತೆಗೂಡಿ ಮಕ್ಕಳಿಗೆ ಸೋಲಾರ್ ದೀಪಗಳ ಉಡುಗೊರೆ ನೀಡುತ್ತಿದ್ದೇವೆ. ಈ ದಿನದ ಕಾರ್ಯಕ್ರಮದಲ್ಲಿ ಮೆಂಡಾ ಫೌಂಡೇಷನ್ ಮತ್ತು ವಿಜಯಪುರದ ಭಾಸ್ಕರ್ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು, ಉತ್ತಮ ಅಂಕಗಳನ್ನು ಗಳಿಸಬೇಕು, ಪ್ರಕೃತಿ ಸಹಜವಾಸ ಸೂರ್ಯನ ಬೆಳಕನ್ನು ಬಳಕೆ ಮಾಡುವುದನ್ನು ಪ್ರಚುರಪಡಿಸಬೇಕು ಎಂಬುದು ಸೋಲಾರ್ ದೀಪಗಳ ನೀಡುವಿಕೆಯ ಹಿಂದಿನ ಉದ್ದೇಶ ಎಂದು ನುಡಿದರು.
ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಚತ್ರು ಮೆಂಡಾ, ಪವರ್ಸ್ ಆಫ್ 10 ಸಂಸ್ಥೆಯ ಸ್ಮಿತಾ ಷಾ, ವಿಜಯಪುರದ ಸಿ.ಎನ್.ಭಾಸ್ಕರ್, ಡಿ.ವೈ.ಪಿ.ಸಿ ಜಯರಾಮರೆಡ್ಡಿ, ಶಿಕ್ಷಣ ಇಲಾಖೆಯ ವೆಂಕಟೇಶ್, ನಾಗರತ್ನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕು ಮಟ್ಟ ಕ್ರೀಡಾಕೂಟ

0

ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯ 23 ಮಂದಿ ವಿದ್ಯಾರ್ಥಿಗಳು ನೆಹರೂ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್ಸ್ ತರಬೇತುದಾರ ಜಯಂತಿಗ್ರಾಮದ ನಾರಾಯಣಸ್ವಾಮಿ, ದೈಹಿಕ ಶಿಕ್ಷಕಿ ಸಿ.ಕೆ.ಮಂಜುಳಾ ಹಾಜರಿದ್ದಾರೆ.

೧.೫ ಕೋಟಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿ

0

ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೇ ಕಾಮಗಾರಿಗಳನ್ನು ಉಪೇಕ್ಷಿಸದೆ ಸಾರ್ವಜನಿಕ ಆಸ್ತಿ ಎನ್ನುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಾತಹಳ್ಳಿ ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯಿಂದ ೧.೫ ಕೋಟಿ ವೆಚ್ಚದ ಶಿಡ್ಲಘಟ್ಟ- ಪಲಿಚೇರ್ಲು ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಕಾರವಿದ್ದಾಗ ಮಾತ್ರವೇ ಸರ್ಕಾರದ ಯಾವುದೆ ಯೋಜನೆ ಯಶಸ್ವಿಯಾಗಲು ಸಾಧ್ಯ. ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಗುಣಮಟ್ಟದಲ್ಲಿ ನಾಗರೀಕರು ರಾಜಿಯಾಗದೇ ಉತ್ತಮ ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಲ್ಲಿ ತಾವೇ ಬಗೆಹರಿಸಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ಆರ್. ಲೋಕೇಶ್, ದೇವರಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಮಳ್ಳೂರಯ್ಯ, ವೀರಾಪುರ ಮುನಿರೆಡ್ಡಿ, ನಗರಸಭೆ ಸದಸ್ಯರಾದ ಅಪ್ಸರ್ಪಾಷ, ಲಕ್ಷ್ಮಯ್ಯ, ಮುಖಂಡರಾದ ಶ್ರೀಧರ, ಲಕ್ಷ್ಮಿನಾರಾಯಣ, ಸೋಮಶೇಖರ್, ಗಣೇಶ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಡಿ.ದೇವರಾಜ ಅರಸು ಅವರು ಅತ್ಯುತ್ತಮ ಕೆಲಸಗಳ ಮೂಲಕ ಜನರ ಮನದಲ್ಲಿ ಚಿರಾಯುವಾಗಿದ್ದಾರೆ

0

ಡಿ.ದೇವರಾಜ ಅರಸು ಅವರು ಒಬ್ಬ ದೂರದೃಷ್ಠಿಯುಳ್ಳ ರಾಜಕಾರಣಿಯಾಗಿದ್ದರು. ಉಳುವವರಿಗೆ ಭೂಮಿ, ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿ ನಿಷೇಧ, ಮತ್ತಿತರ ಅತ್ಯುತ್ತಮ ಕೆಲಸಗಳ ಮೂಲಕ ಕನ್ನಡ ನಾಡಿನ ಜನರ ಮನದಲ್ಲಿ ಚಿರಾಯುವಾಗಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ದಿವಂಗತ ಡಿ.ದೇವರಾಜ ಅರಸು ಅವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವರಾಜ ಅರಸುರವರ ಜೀವನ ಆದರ್ಶಗಳು ಅನುಕರಣೀಯ. ಅವರು ಬಡವರು, ಹಿಂದುಳಿದ ವರ್ಗದವರು, ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ. ಭೂ ಸುಧಾರಣಾ ಕಾಯ್ದೆ ಮೂಲಕ ಲಕ್ಷಾಂತರ ಕುಟುಂಬಗಳ ಭವಿಷ್ಯ ಬೆಳಗಿದವರು ಎಂದು ಬಣ್ಣಿಸಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಎಂ. ವೆಂಕಟೇಶ್ ಮಾತನಾಡಿ, ಅರಸು ಅವರು ಈ ದೇಶ ಕಂಡ ಧೀಮಂತ ನಾಯಕರಲ್ಲಿ ಒಬ್ಬರು. ಉಳುವವನೆ ಭೂಮಿಯ ಒಡೆಯನಾಗುವಂತೆ ಮಾಡುವ ಮಹತ್ವದ ಭೂ-ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಬಡವರ ಪಾಲಿಗೆ ಆಶಾಕಿರಣವಾದವರು ಎಂದು ಹೇಳಿದರು.
ಅವರ ವ್ಯಕ್ತಿತ್ವದಿಂದಾಗಿ ಅವರು ಅಸ್ತಂಗತರಾದ ಅನೇಕ ವರ್ಷಗಳ ನಂತರವೂ ಅರಸು ಅವರನ್ನು ಇಷ್ಟೊಂದು ಗೌರವಪೂರ್ವಕವಾಗಿ ನೆನಪಿಸಿಕೊಳ್ಳಲಾಗುತ್ತಿದೆ. ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು, ಹಾವನೂರು ಆಯೋಗ ರಚನೆ ಮೂಲಕ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸೌಕರ್ಯ ಕಲ್ಪಿಸಿದ್ದು. ಜೀತ ವಿಮುಕ್ತಿ, ಮಲ ಹೊರುವ ನಿಷೇಧದ ಮೂಲಕ ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಕಾರಣರಾಗಿದ್ದು, ವಿಧವಾ ವೇತನ, ವೃದ್ಧಾಪ್ಯ ವೇತನ ಜಾರಿ, ಸಾವಿರಾರು ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ,ಅನುದಾನಿತ ಶಾಲಾ ಶಿಕ್ಷಕರಿಗೂ ಸಮಾನ ವೇತನ ಸೌಲಭ್ಯ ಮತ್ತ್ತಿತರ ಅತ್ಯುತ್ತಮ ಕೆಲಸಗಳನ್ನು ಅರಸು ಅವರು ಮಾಡಿಹೋಗಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬಿ.ಸಿ.ಎಂ ವಸತಿನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕಾರ ಮಾಡಲಾಯಿತು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಗ್ರೇಡ್ ೨ ತಹಶೀಲ್ದಾರ್ ವಾಸುದೇವಮೂರ್ತಿ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್,ನರಸಿಂಹಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಬಿ.ಸಿ.ಎಂ.ಇಲಾಖಾಧಿಕಾರಿ ಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್ ಮತ್ತಿತರರು ಹಾಜರಿದ್ದರು.