ಶಿಡ್ಲಘಟ್ಟದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾಘವೇಂದ್ರಸ್ವಾಮಿಯವರ 345ನೇ ಆರಾಧನಾ ಮಹೋತ್ಸವದ ಅಂಗವಾಗಿ ಗಾಯತ್ರಿ ಮಹಿಳಾ ಮಂಡಳಿಯವರಿಂದ ಸ್ತೋತ್ರಗಳ ಗಾಯನ ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ಮುಖಂಡರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಸೈನಿಕರ ವಿರುದ್ದ ಅವಹೇಳನಕಾರಿ ಹಾಗೂ ದೇಶ ವಿರೋಧಿ ಘೋಷಣೆಗಳನ್ನು ಕೂಗಿರುವ ಕಿಡಿಗೇಡಿಗಳ ಮತ್ತು ಕಾರ್ಯಕ್ರಮ ಆಯೋಜನೆ ಮಾಡಿದ್ದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆಯ ಪರ ಕಾಂಗ್ರೆಸ್ನ ದಿಗ್ವಿಜಯ್ಸಿಂಗ್ ಹಾಗು ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಕಾಶ್ಮೀರಿ ವಿದ್ಯಾರ್ಥಿಗಳು ಭಾರತೀಯ ಸೇನೆಯ ವಿರುದ್ಧ ಘೋಷಣೆಗಳನ್ನು ಕೂಗುವುರೊಂದಿಗೆ ದೇಶದ ಹಿತಾಸಕ್ತಿಗೆ ಧಕ್ಕೆ ತಂದಿದ್ದಾರೆ. ದೇಶದ ರಕ್ಷಣೆಗಾಗಿ ಹಗಲು ರಾತ್ರಿಯೆನ್ನದೇ ಗಡಿ ಕಾಯುವ ಸೈನಿಕರ ವಿರುದ್ಧ ಘೋಷಣೆ ಕೂಗಿರುವುದು ಖಂಡನೀಯ.
ಇಂತಹ ಸಂಸ್ಥೆಯ ಪರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ಸಿಂಗ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿರುವುದು ದೇಶಕ್ಕೆ ಮಾಡಿರುವ ಅಪಮಾನವಾಗಿದೆ. ಇದನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುವ ಮೂಲಕ ಈ ಇಬ್ಬರು ಕಾಂಗ್ರೆಸ್ ನಾಯಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರಗೌಡ, ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ಸುರೇಶ್, ಮುನಿರಾಜು, ದಾಮೋದರ್, ಸುಜಾತಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ವಿಶ್ವ ಛಾಯಾಗ್ರಹಣ ದಿನ
ವಿಶ್ವ ಛಾಯಾಗ್ರಹಣ ದಿನವಾದ ಶುಕ್ರವಾರದಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟದಲ್ಲಿ ಮುಂಜಾನೆಯ ಮಂಜಿನ ಹಾದಿಯಲ್ಲಿ ನಡೆಯುತ್ತಿರುವ ಜೋಡಿಯು ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ಮಕ್ಕಳು ತಿಳಿಯಬೇಕು
ಬಾಲಗಂಗಾದರ ತಿಲಕ್ ಸ್ವಾತಂತ್ರ್ಯ ಚಳುವಳಿಯಲ್ಲಿ ಅಗ್ರಗಣ್ಯ ನಾಯಕರಾಗಿದ್ದವರು. ಅವರ ‘ಸ್ವರಾಜ್ಯ ನನ್ನ. ಜನ್ಮ ಸಿದ್ದ ಹಕ್ಕು, ಅದನ್ನು ಪಡೆದೇ ತೀರುತ್ತೆನೆ’ ಎಂಬ ಅವರ ಘರ್ಜನೆ ಇಂದಿಗೂ ಜನಸಾಮಾನ್ಯರ ನೆನಪಿನಲ್ಲಿ ಹಸಿರಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಾನ್ ವ್ಯಕ್ತಿಗಳ ಬಗ್ಗೆ ಈಗಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ –- ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲಗಂಗಾದರ್ ತಿಲಕ್ ಅವರು ಭಾರತದ ಶ್ರೇಷ್ಠತೆಯ ತಿಲಕವಿದ್ದಂತೆ. ತಮ್ಮ ಕಾರ್ಯ, ಬರವಣಿಗೆ ಸುಜ್ಞಾನಗಳಿಂದ ದೇಶದ ಬಹಳಷ್ಟು ಜನರನ್ನು ಉತ್ತೇಜಿಸಿ ಸ್ವಾತಂತ್ರ್ಯ ಹೋರಾಟದ ಆವರಣಕ್ಕೆ ತಂದರು. ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ವಿವಾಹಕ್ಕೆ ಸೂಕ್ತ ವಯಸ್ಸು, ಮದ್ಯಪಾನ ನಿಷೇಧದಂತಹ ಸಾಮಾಜಿಕ ಕಳಕಳಿ ಹೊಂದಿದ್ದ ಅವರನ್ನು ರಾಷ್ಟ್ರಿಪಿತ ಮಹಾತ್ಮ ಗಾಂಧೀಜಿಯವರು ಆಧುನಿಕ ಭಾರತದ ಜನಕ ಎಂದೇ ಬಣ್ಣಿಸಿದ್ದರು ಎಂದು ಹೇಳಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಆರನೆಯ ತರಗತಿಯ ಗಗನಶ್ರೀ, ೭ ನೇ ತರಗತಿಯ ಮಲ್ಲಿಕಾ ಮತ್ತು ೮ ನೇ ತರಗತಿಯ ಮುನಿರಾಜು ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಆವರಣದಲ್ಲಿ ಸಸಿಯನ್ನು ನೆಡಲಾಯಿತು ಹಾಗೂ ಶಾಲೆಯ ಗ್ರಂಥಾಲಯಕ್ಕೆ ‘ಕನ್ನಡ ರತ್ನಕೋಶ’ ಮತ್ತು ‘ನೇತಾಜಿ ಸುಬಾಷ್ ಚಂದ್ರ ಬೋಸ್’ ಪುಸ್ತಕವನ್ನು ನೀಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ದೇವರಾಜ್, ನಾಗರಾಜ, ತ್ರಿವೇಣಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಬಾಲಸುಬ್ರಮಣ್ಯ, ,ಕಸಾಪ ಸದಸ್ಯರಾದ ರಮೇಶ, ಮುನಿರಾಜು ಮತ್ತಿತರರು ಹಾಜರಿದ್ದರು.
ಶ್ರೀ ಕೃಷ್ಣಜಯಂತಿ ಆಚರಣೆಯ ಸಲುವಾಗಿ ಪೂರ್ವಭಾವಿ ಸಭೆ
ಶ್ರೀ ಕೃಷ್ಣಜಯಂತಿಯನ್ನು ಎಂದಿನಂತೆ ಈ ವರ್ಷವೂ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲು ಎಲ್ಲರೂ ಸಹಕರಿಸುವಂತೆ ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ ಮನವಿ ಮಾಡಿದರು.
ಆಗಸ್ಟ್ ೨೫ ರಂದು ನಗರದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಿಸುವ ಸಲುವಾಗಿ ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಸರ್ಕಾರಿ ಹಬ್ಬವನ್ನಾಗಿ ಆಚರಿಸುತ್ತಿರುವ ಶ್ರೀ ಕೃಷ್ಣ ಜಯಂತಿಯನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರು ಸಹಕರಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುತ್ತಿದ್ದು ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗಬೇಕಾದರೆ ತಾಲ್ಲೂಕಿನಾಧ್ಯಂತ ಇರುವ ಜನಾಂಗದವರನ್ನು ಕಾರ್ಯಕ್ರಮಕ್ಕೆ ಕರೆತರಲು ಜನಾಂಗದ ಮುಖಂಡರು ಇನ್ನಷ್ಟು ಶ್ರಮಿಸಬೇಕು ಎಂದರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೇರಿದಂತೆ ಯಾದವ ಜನಾಂಗದ ಮುಖಂಡರು ಪಾಲ್ಗೊಂಡಿದ್ದರು.
ಬೆಳಗ್ಗೆ ೧೧ ಗಂಟೆಗೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಸರ್ಕಾರಿ ಕಾರ್ಯಕ್ರಮ ಶುರುವಾಗಲಿದ್ದು ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿದೆಡೆಗಳಿಂದ ಬರುವ ಜನಾಂಗದವರಿಗೆ ಕುಳಿತು ಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ವೇದಿಕೆಯನ್ನು ನಿರ್ಮಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ, ಬಿಸಿಎಂ ಇಲಾಖೆಯ ಶಂಕರ್, ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ, ಸಮುದಾಯದ ಮುಖಂಡರಾದ ಕೇಶವಮೂರ್ತಿ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿದ್ಯುತ್ ಶಾಕ್ ನಿಂದಾಗಿ ವ್ಯಕ್ತಿಯ ಸಾವು
ನಗರದ ಅಮೀರ್ ಬಾಬಾ ದರ್ಗಾ ಬಳಿ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಅಮೀರ್ ಬಾಬಾ ದರ್ಗಾ ಬಳಿಯ ಮೆಹಬೂಬ್ ಪಾಷ ಅವರ ಮನೆಯ ಮೇಲೆ ಗಾರೆ ಕೆಲಸ ಮಾಡಲು ಹತ್ತಿದ್ದ ಚಿಂತಾಮಣಿ ತಾಲ್ಲೂಕಿನ ಹುಸೇನ್ಪುರ ಮೂಲದ ಮುರಳಿ(25) ವಿದ್ಯುತ್ ತಂತಿ ತಗುಲಿ ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಆನಂದ್ ಎಂಬ ವ್ಯಕ್ತಿಯೂ ಮೃತಪಟ್ಟ ಮುರಳಿಯ ಜೊತೆಯಿದ್ದು, ತೀರ್ವವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಾಲೆ ಅಭಿವೃದ್ಧಿಯ ಕಂಕಣ ತೊಟ್ಟ ‘ಸ್ಫೂರ್ತಿ ಯುವಕರ ಬಳಗ’
ಗ್ರಾಮದ ಯುವಕರು ಸರ್ಕಾರಿ ಶಾಲೆ ಅಭಿವೃದ್ಧಿಯ ಧ್ಯೇಯದೊಂದಿಗೆ ಸಂಘವನ್ನು ಕಟ್ಟಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಮುನಿನರಸಿಂಹಯ್ಯ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಗ್ರಾಮದ ಯುವಕರ ‘ಸ್ಫೂರ್ತಿ ಯುವಕರ ಬಳಗ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಅಗತ್ಯತೆಗಳನ್ನು ಪೂರೈಸುತ್ತಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗುವ ಅವಶ್ಯಕತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭವಾಗಿರುವ ಯುವಕರ ಬಳಗ ಯಶಸ್ವಿಯಾಗಿ ಮುಂದುವರೆಯಲಿ. ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ನಡೆಸಿ ಅವರ ಪ್ರತಿಭೆಯನ್ನು ಹೊರಹೊಮ್ಮಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂತರಶಾಲಾ ಸ್ಪರ್ಧೆಗಳನ್ನು ನಡೆಸುವ ಮೂಲಕ ಶಾಲೆಯ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ನೂತನ ಗೇಟ್ ಮತ್ತು ಆರ್ಚ್ ಉದ್ಘಾಟಿಸಲಾಯಿತು. ಗ್ರಾಮಸ್ಥರು ಶಾಲೆಗೆ ಧ್ವನಿವರ್ಧಕವನ್ನು ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಸಿ.ಕೃಷ್ಣಪ್ಪ, ಬಾಲಸುಬ್ರಮಣ್ಯಂ, ಶಾಮಣ್ಣ, ಚನ್ನಪ್ಪ, ನಾಗಪ್ಪ, ಹನುಮಂತಪ್ಪ, ರಾಜಣ್ಣ, ನಾರಾಯಣಸ್ವಾಮಿ, ಚಿಕ್ಕನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಎಚ್.ಎಂ.ಸರಸ್ವತಮ್ಮ, ಸಹಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಎಚ್.ಮಂಜುನಾಥ್, ಎ.ತ್ರಿವೇಣಿ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಲಿತರ ಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಹಭೋಜನ
ಜಾತಿ, ಧರ್ಮದ ಚೌಕಟ್ಟಿನಿಂದ ಹೊರಗೆ ಬಂದು ನಾವು ಬೆಳೆಯಬೇಕಾಗಿದೆ. ಯಾರಿಗೆ ವಿಚಾರ ಶಕ್ತಿ ಕಡಿಮೆ ಇರುತ್ತದೆ ಆ ವ್ಯಕ್ತಿಗಳು ಜಾತಿ, ಅಸ್ಪಶೃತೆಯನ್ನು ಆಚರಿಸಿಕೊಂಡು ಬರುತ್ತಾರೆ. ವಿಚಾರ ಶಕ್ತಿಯನ್ನು ದೊಡ್ಡದಾಗಿ ಬೆಳೆಸಿಕೊಂಡವರು, ಜಾತಿ ಚೌಕಟ್ಟನ್ನು ಮೀರಿ ಬೆಳೆಯುತ್ತಾರೆ. ಪ್ರತಿಭೆಗೆ ಯಾವುದೇ ಜಾತಿ, ಅಂತಸ್ತು, ಅಸ್ಪಶೃತೆ ಅಡ್ಡ ಬರುವುದಿಲ್ಲ. ಈ ವ್ಯವಸ್ಥೆಯನ್ನು ಮೀರಿ ಬೆಳೆದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಗುರುವಾರ ಬಿಜೆಪಿ ಪಕ್ಷದಿಂದ ನಡೆದ ಡಾ. ಬಿ.ಆರ್.ಅಂಬೇಡ್ಕರ್ 125ನೇ ಜನ್ಮ ವರ್ಷಾಚರಣೆ ಹಾಗೂ ಸಾಮರಸ್ಯ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪಶೃತೆಯನ್ನು ಮೆಟ್ಟಿ ನಿಂತು, ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರು ರಚಿಸಿದ ಸಂವಿಧಾನ ದೇಶಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಇಂತಹ ಮಹಾನುಭಾವರ ವಿಚಾರಗಳನ್ನು ಅಳವಡಿಸಿಕೊಂಡು ನಾವು ನಡೆಯಬೇಕೆಂದು ಹೇಳಿದರು.
ಚೀಮಂಗಲ ಗ್ರಾಮದ ದಲಿತರ ಕೇರಿಯಲ್ಲಿ ಆಂಜಿನಪ್ಪ ಎಂಬುವರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಹಭೋಜನವನ್ನು ನಡೆಸಿದರು. ಈ ಸಂದರ್ಭದಲ್ಲಿ ದಲಿತರ ಕೇರಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಸುರೇಶ್, ಶ್ರೀರಾಮರೆಡ್ಡಿ, ಮುನಿವೆಂಕಟಪ್ಪ, ಭಾಸ್ಕರ್, ದಾಮೋದರ್, ಅಶ್ವಕ್ ಅಹ್ಮದ್, ರವಿಕುಮಾರ್, ಪುರುಷೋತ್ತಮ್, ರಾಜಣ್ಣ, ಮಂಜುಳಮ್ಮ, ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಜೆಪಿ ತಾಲ್ಲೂಕು ಘಟಕದಿಂದ ರಕ್ಷಾಬಂಧನ
ರಕ್ಷಾಬಂಧನದ ಮೂಲಕ ವಸುಧೈವ ಕುಟುಂಬಕಂ, ನಾವೆಲ್ಲ ಸಹೋದರರು ಎಂಬ ಭಾವನೆ ಬೆಳಗಬೇಕಿದೆ. ರಕ್ಷಾ ಬಂಧನ ಸೋದರ ಸಂಬಂಧ, ಪ್ರೀತಿ ಮಮತೆಯ ಪ್ರತೀಕ. ಹೆಣ್ಣನ್ನು ಗೌರವ ಭಾವನೆಯಿಂದ ನೋಡುವ ಮನೋಭಾವ ಮೂಡಿಸುವಲ್ಲಿ ಸಮಾಜ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ಬಿಜೆಪಿ ತಾಲ್ಲೂಕು ಘಟಕದಿಂದ ಆಚರಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹೋದರತ್ವದ ಮಹತ್ವ ಸಾರುವ ರಕ್ಷಾಬಂಧನವು ವಿಶ್ವ ಭ್ರಾತೃತ್ವ ಸಾರುವ ಮಹತ್ವದ ಹಬ್ಬವಾಗಿದೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮಲ್ಲಿನ ದುರ್ಗುಣ, ದುಶ್ಚಟ, ದುರ್ಬಲತೆಗಳನ್ನು ದೂರ ಮಾಡುವ ಮೂಲಕ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆರ್ ಎಸ್ ಎಸ್ ವಿಭಾಗೀಯ ಶಾರೀರಿಕ್ ಪ್ರಮುಖ್ ಮು. ವೆಂಕಟೇಶ್ ಮಾತನಾಡಿ, ರಾಖಿ ಹಬ್ಬವು ಕೇವಲ ಸಹೋದರ ಮತ್ತು ಸಹೋದರಿಯರಿಗೆ ಸೀಮಿತವಾದುದಲ್ಲ. ಭಾರತ ಮಾತೆಯನ್ನು ರಕ್ಷಿಸಲು ಸಂಕಲ್ಪ ತೊಡುವ ಹಬ್ಬವೂ ಹೌದು. ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿರುವ ಎಲ್ಲರೂ ದೇಶೋದ್ಧಾರದ ಕುರಿತಂತೆ ಆಲೋಚಿಸುವ ಒಗ್ಗೂಡುವ ಹಬ್ಬವೂ ಆಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಕ್ಷಾಬಂಧನವನ್ನು ಪರಸ್ಪರ ಕಟ್ಟಿಕೊಂಡು ಇತರರಿಗೂ ಕಟ್ಟಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ದಾಮೋದರ್, ಅಶ್ವಕ್ ಅಹ್ಮದ್, ಕೆಂಪರೆಡ್ಡಿ, ರವಿಕುಮಾರ್, ಪುರುಷೋತ್ತಮ್, ಮುನಿರಾಜು, ಮಂಜುಳಮ್ಮ, ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಪ್ರೇರಕರಾಗಲಿ
‘ವಿಜ್ಞಾನವೇ ನನ್ನ ಮತ’ ಎಂದು ನಂಬಿ ಸಾಧನೆ ಮಾಡಿದ ಡಾ.ಸರ್.ಸಿ.ವಿ. ರಾಮನ್ ಪ್ರೇರಣೆಯಾಗಲಿ. ಅವರಿಂದ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ವಿಜ್ಞಾನ ರಂಗದತ್ತ ಆಕರ್ಷಿತರಾಗುವಂತಾಗಲಿ ಎಂದು ತಾಲ್ಲೂಕು ಕ ಸಾ ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ನಗರದ ದ ಕ್ರೆಸೆಂಟ್ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಮುನ್ನೂರು ರೂಗಳಿಗೂ ಕಡಿಮೆ ಬೆಲೆ ಬಾಳುವ ಉಪಕರಣಗಳನ್ನು ಉಪಯೋಗಿಸಿ ಬೆಳಕಿನ ಚದುರಿಕೆ ಮತ್ತು ಧ್ವನಿ ಕುರಿತು ಸರ್.ಸಿ.ವಿ. ರಾಮನ್ ಕೆಲವೊಂದು ಮೂಲಭೂತ ಸಂಶೋಧನೆ ನಡೆಸಿ ಪಾಶ್ಚಿಮಾತ್ಯರನ್ನು ಬೆರಗುಗೊಳಿಸಿದ್ದರು. ತಮ್ಮ ಸಾಧನೆ, ಬುದ್ಧಿಶಕ್ತಿ ಮತ್ತು ಪರಿಶ್ರಮಗಳಿಂದ ನೋಬೆಲ್ ಪಾರಿತೋಷಕ ಪಡೆದ ಭಾರತದ ಏಕೈಕ ವಿಜ್ಞಾನಿ ಅವರು. ಭಾರತರತ್ನ ಸೇರಿದಂತೆ ಒಂಭತ್ತು ದೇಶದ ಗೌರವ ಡಾಕಟರೇಟ್ ಪಡೆದಿದ್ದ ಅವರು ನಮ್ಮ ದೇಶದಲ್ಲಿ ವಿಜ್ಞಾನಿಗಳ ಪರಂಪರೆ ಮುಂದುವರಿಯಬೇಕೆಂಬ ಮಹದಾಸೆಯಿಂದ ಬೆಂಗಳೂರಿನ ಹೆಬ್ಬಾಳದ ಬಳಿ ರಾಮನ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜ್ಞಾನಿಗಳ ಮೇರಿಕ್ಯೂರಿ, ಮೈಕೆಲ್ ಫ್ಯಾರಡೆ ಜೀವನದ ಘಟನೆಗಳನ್ನು ವಿವರಿಸಿ ವಿದ್ಯಾರ್ಥಿಗಳು ಇಂಥಹವರ ಜೀವನ ಚರಿತ್ರೆಗಳನ್ನು ಓದುವ ಮೂಲಕ ಪ್ರೇರಣೆ ಹೊಂದಬೇಕು ಎಂದು ನುಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಹತ್ತನೇ ತರಗತಿಯ ಯಶಸ್ವಿನಿ, ಅರುಣ್ ಕೊಠಾರಿ ಮತ್ತು ಮೋನಿಕಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ದ.ರಾ.ಬೇಂದ್ರೆ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ದ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ, ಶಿಕ್ಷಕರಾದ ಎನ್. ನರಸಿಂಹಮೂರ್ತಿ, ಕೆ.ಎನ್. ರಾಮಚಂದ್ರ, ಡಿ.ವಿ. ಭಾಸ್ಕರ್, ಕ.ಸಾ.ಪ ಸದಸ್ಯ ಗುರುನಂಜಪ್ಪ ಹಾಜರಿದ್ದರು.
ದೇಶದ್ರೋಹ ಚಟುವಟಿಕೆಗಳನ್ನು ನಡೆಸಿದವರನ್ನು ತಕ್ಷಣ ಬಂಧಿಸಿ
ಯುನೈಟೆಡ್ ಥಿಯೋಲಾಜಿಕಲ್ ಕಾಲೇಜು ಹಾಗೂ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆಗಳಿಂದ ದೇಶದ್ರೋಹ ಚಟುವಟಿಕೆಗಳನ್ನು ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಆಗಸ್ಟ್ ೧೩ ರಂದು ಬೆಂಗಳೂರಿನ ಜೆ.ಪಿ.ನಗರದ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಎಂಬ ಎನ್.ಜೊ.ಓ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ವಿರುದ್ಧ ಘೋಷಣೆ ಕೂಗಲಾಗಿದೆ. ಸೇನೆಯು ಅಲ್ಲಿಯ ಮುಗ್ದರನ್ನು ಬಲಿತೆಗೆದುಕೊಳ್ಳುತ್ತಿದೆ, ಅಲ್ಲಿನ ಜನರ ಸ್ವಾತಂತ್ರ್ಯವನ್ನು ಕಿತ್ತುಗೊಳ್ಳಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿರುವುದನ್ನು ಅಭಾವಿಪ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ನಮ್ಮ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅಲ್ಲಿನ ಜನರ ರಕ್ಷಣೆಗೆ ಸದಾ ಬದ್ಧವಾಗಿದೆ. ಪ್ರವಾಹ, ಭೂಕಂಪ ಸಂದರ್ಭಗಳಲ್ಲಿ ಸೇನೆಯ ಕಾರ್ಯ ಜನಮೆಚ್ಚುಗೆಗಳಿಸಿದೆ. ಕಳೆದ ಎರಡು ವರ್ಷಗಳಿಂದ ಕಣಿವೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇದು ಭಯೋತ್ಪಾದಕರಿಗೆ ಹಾಗೂ ಪ್ರತ್ಯೇಕತಾವಾದಿಗಳಿಗೆ ನುಂಗಲಾಗದ ತುತ್ತಾಗಿದೆ. ಹೇಗಾದರು ಮಾಡಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಈ ರೀತಿಯ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸಲಾಗುತ್ತಿದೆ. ಆ ಮೂಲಕ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡಿ ಸೈನಿಕ ವ್ಯವಸ್ಥೆಯ ವಿರುದ್ಧ ಭಾವನೆ ನಿರ್ಮಾಣ ಮಾಡುವುದು ಪ್ರತ್ಯೇಕತಾವಾದಿಗಳ ತಂತ್ರವಾಗಿದೆ ಎಂದು ಆರೋಪಿಸಿದರು.
ಸೈನ್ಯವನ್ನು ನಿಂದಿಸಿದ ದೇಶದ್ರೋಹಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಸಂಸ್ಥೆ, ಕಾರ್ಯಕ್ರಮ ಆಯೋಜಕರು ಮತ್ತು ದೇಶ ವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸುವಂತೆ ಅಭಾವಿಪ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದಾದ್ಯಂತ ತೀವ್ರವಾದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಭಾವಿಪ ತಾಲ್ಲೂಕು ಸಂಚಾಲಕ ನರೇಶ್, ಸಂಪತ್, ಅಶ್ವತ್ಥ್, ಯೋಗಾನಂದ, ಬೈರಾರೆಡ್ಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿ ಗ್ರೇಡ್ ೨ ತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ತೊಗರಿ ಮತ್ತು ಅಲಸಂಧಿ ಬೆಳೆ ನಾಶ
ಕೃಷಿ ಇಲಾಖೆಯ ಅಧಿಕಾರಿಗಳೇ ತಂದುಕೊಟ್ಟ ತೊಗರಿ ಮತ್ತು ಅಲಸಂಧಿ ಬಿತ್ತನೆ ಬೀಜಗಳನ್ನು ನಾಟಿ ಮಾಡಿದ್ದು, ಬೆಳೆ ಬರುವ ಸಮಯದಲ್ಲಿ ಬೆಳೆನಾಶವಾಗುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡಾ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲವೆಂದು ರೈತರು ದೂರಿದ್ದಾರೆ.
ತಾಲ್ಲೂಕಿನ ಮಿತ್ತನಹಳ್ಳಿ, ಮತ್ತು ಸುಗಟೂರು ಗ್ರಾಮದ ಕೆಲ ರೈತರ ತೋಟಗಳಿಗೆ ಜಂಗಮಕೋಟೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬೆಂಗಳೂರಿನ ಜಿ.ಕೆ.ವಿ.ಕೆ.ಯಿಂದ ಬಿತ್ತನೆ ಬೀಜಗಳನ್ನು ತಂದುಕೊಟ್ಟಿದ್ದಾರೆ. ಬೀಜಗಳನ್ನು ಬಿತ್ತನೆ ಮಾಡಿ, ನೀರಿನ ಅಭಾವದಲ್ಲಿಯೂ ಟ್ಯಾಂಕರುಗಳ ಮೂಲಕ ನೀರು ಹಾಯಿಸಿ ಸಸಿಗಳನ್ನು ಕಾಪಾಡಿಕೊಂಡಿದ್ದೆವು, ಆದರೆ ಸಸಿಗಳು ಫಸಲು ಕೊಡುವ ಸಮಯದಲ್ಲಿ ಕಾಂಡಕ್ಕೆ ವಿಚಿತ್ರವಾದ ರೋಗ ಬಿದ್ದಿದೆ, ಇದರಿಂದ ತೊಗರಿಗಿಡಗಳು ಇದ್ದಕಿದ್ದಂತೆ ಮುರಿದು ಬೀಳುತ್ತಿವೆ, ಇದರ ಜೊತೆಗೆ ಅಲಸಂದಿ ಗಿಡಗಳು ಕೂಡಾ ರೋಗಕ್ಕೆ ಒಳಗಾಗಿದ್ದು, ಕಾಯಿಗಳನ್ನು ಬಿಡುತ್ತಿಲ್ಲ. ಇದರಿಂದ ಸಾವಿರಾರು ರೂಪಾಯಿಗಳು ನಷ್ಟವಾಗುತ್ತಿದೆ, ಸಂಬಂಧಪಟ್ಟ ಕೃಷಿ ಅಧಿಕಾರಿಯ ಗಮನಕ್ಕೆ ತಂದಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಟಿ.ದೇವೇಗೌಡ, ಪರಿಶೀಲನೆ ನಡೆಸಿ, ರೋಗಕ್ಕೆ ತುತ್ತಾಗಿರುವ ಸಸಿಗಳ ಮಾದರಿಗಳನ್ನು ಸಂಗ್ರಹಿಸಿಕೊಂಡು ಪರೀಕ್ಷೆಗೆ ಒಳಪಡಿಸಲು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ರಾಸಾಯನಿಕ ಔಷಧಿಗಳ ಸಿಂಪಡಣೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ಜಂಗಮಕೋಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗೋಪಾಲರಾವ್, ರೈತರಾದ ಬಸವರಾಜ್, ಮುನಿಕೃಷ್ಣಪ್ಪ, ಮಿತ್ತನಹಳ್ಳಿ ಹರೀಶ್, ಹಿತ್ತಲಹಳ್ಳಿ ಸುರೇಶ್ ಹಾಜರಿದ್ದರು.
ಪುರಾತನ ಬೂದಾಳದ ದೇಗುಲದ ಜೀರ್ಣೋದ್ಧಾರ
ಸುಮಾರು ೮೫೭ ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬೂದಾಳ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಜೀಣೋದ್ಧಾರ ಕಾರ್ಯಕ್ರಮ ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.
ತಾಲ್ಲೂಕಿನ ಚಿಂತಾಮಣಿ ರಸ್ತೆಯಲ್ಲಿರುವ ಬೂದಾಳ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದ ದೇವಾಲಯವಾಗಿದ್ದರೂ ಕೂಡಾ ಇದುವರೆಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಗಮನಹರಿಸದೇ ಇದ್ದುದ್ದರಿಂದ ದೇವಾಲಯ ಪಾಳುಬಿದ್ದಿತ್ತು, ಇದನ್ನು ಗಮನಿಸಿದ ಬೂದಾಳ ಹಾಗೂ ವೀರಾಪುರ ಗ್ರಾಮಸ್ಥರು, ದೇವಾಲಯವನ್ನು ಜೀಣೋದ್ದಾರಗೊಳಿಸಿ, ಪುನರ್ ಪ್ರತಿಷ್ಟಾಪನೆ ಮಾಡಿ, ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇತಿಹಾಸ ಪ್ರಸಿದ್ದ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಗ್ರಾಮದ ಮುಖಂಡ ಕೃಷ್ಣಪ್ಪ ತಿಳಿಸಿದರು.
ಕಳೆದ ಮೂರು ದಿನಗಳಿಂದ ನಡೆದಂತಹ ವಿಶೇಷ ಪೂಜೆ, ಹೋಮಗಳ ಮೂಲಕ ದೇವಾಲಯದ ಪ್ರತಿಷ್ಟಾಪನೆ ಮಾಡಲಾಗಿದ್ದು, ದೇವಾಲಯಕ್ಕೆ ಬಂದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಗಿತ್ತು.
ದೇವಾಲಯಕ್ಕೆ ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ತಹಶೀಲ್ದಾರ್ ಕೆ.ಎಂ. ಮನೋರಮಾ, ಸೇರಿದಂತೆ ಇತರೆ ಗಣ್ಯರು ಬೇಟಿ ನೀಡಿ ದೇವರ ದರ್ಶನ ಪಡೆದರು. ಗ್ರಾಮಸ್ಥರಾದ ಕೃಷ್ಣಪ್ಪ, ಮುನಿರೆಡ್ಡಿ, ಗಣೇಶ್ ಮತ್ತಿತರರು ಹಾಜರಿದ್ದರು.
ಬೆಳೆಗಳಿಗೆ ವಿಮೆ ಮಾಡಿಸಲು ಅವಧಿ ವಿಸ್ತರಣೆ ಮಾಡಲು ಮನವಿ
ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆಯಡಿಯಲ್ಲಿ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ ೧೦ ಕ್ಕೆ ಕೊನೆಯ ದಿನವಾಗಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಸಹಾಯಕ ನಿರ್ದೇಶಕ ದೇವೇಗೌಡ ಅವರಿಗೆ ರೈತರು ಮನವಿ ಸಲ್ಲಿಸಿದರು.
ನಗರದ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರ ಕಚೇರಿಯಲ್ಲಿ ಮಂಗಳವಾರ ಮನವಿ ಸಲ್ಲಿಸಿದ ಅವರು, ಸಾದಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ತೀರಾ ಹಿಂದುಳಿದಿದ್ದು, ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಲು ರೈತರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು, ಆದರೆ ಬಹಳಷ್ಟು ಮಂದಿ ರೈತರಿಗೆ ಮಾಹಿತಿಯ ಕೊರತೆ ಹಾಗೂ ಆರ್ಥಿಕ ತೊಂದರೆಯಿಂದಾಗಿ ಇದುವರೆಗೂ ವಿಮೆ ಮಾಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ವಿಮೆ ಮಾಡಿಸಲು ಅವಧಿಯನ್ನು ವಿಸ್ತರಣೆ ಮಾಡಿಕೊಡಬೇಕು ಎಂದು ಸಾದಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋವಿಂದರಾಜು ಒತ್ತಾಯ ಮಾಡಿದರು.
ಎಸ್.ಕೆ.ನಾರಾಯಣಪ್ಪ, ವೆಂಕಟರಮಣಪ್ಪ, ನರಸಿಂಹಪ್ಪ ಕೋಟಗಲ್ ನಂಜಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಮಸ್ಯೆಗಳ ಆಗರವಾದ ರೇಷ್ಮೆ ಗೂಡು ಮಾರುಕಟ್ಟೆ
ನಗರದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ರೇಷ್ಮೆ ಗೂಡು ಮಾರುಕಟ್ಟೆಯ ರೇಷ್ಮೆನೂಲು ಬಹಳಷ್ಟು ಹೆಸರುವಾಸಿಯಾಗಿದೆ. ಇಲ್ಲಿನ ಜನರ ಜೀವನಾಡಿ ರೇಷ್ಮೆ. ಇದನ್ನು ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲದ ಜನತೆ, ರೇಷ್ಮೆಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರೂ ಕೂಡಾ ಇಲ್ಲಿನ ಮಾರುಕಟ್ಟೆಯ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆ, ಯಾವ ಸಂಧರ್ಭದಲ್ಲಿ ಕಾಯಿಲೆ ಬರುತ್ತದೊ ಎನ್ನುವಂತಹ ಭಯ ಆವರಿಸುತ್ತದೆ. ಯಾಕೆಂದರೆ ಈ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳು ಅಷ್ಟರಮಟ್ಟಿಗೆ ಭಯಬೀತಿಗೊಳಿಸುತ್ತವೆ.
ಪ್ರತಿನಿತ್ಯ ಕೋಟ್ಯಾಂತರ ರೂಪಾಯಿಗಳ ಹಣದ ವಹಿವಾಟು ನಡೆಯುತ್ತದೆ, ಸಾವಿರಾರು ಮಂದಿ ರೈತರು, ರೀಲರುಗಳು ಮಾರುಕಟ್ಟೆಗೆ ಬರುತ್ತಿದ್ದಾರೆ, ಸ್ಥಳೀಯ ರೈತರು ಮಾತ್ರವಲ್ಲದೆ, ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲೂ ರೈತರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬರುತ್ತಾರೆ, ಆದರೆ ಇಲ್ಲಿಗೆ ಬರುವಂತಹ ರೈತರಿಗೆ ಬೇಕಾಗಿರುವ ಯಾವುದೇ ಮೂಲಸೌಕರ್ಯಗಳಿಲ್ಲದೆ ಪರದಾಡಬೇಕಾಗಿದೆ, ಕಿತ್ತುಹೋಗಿರುವ ಶೌಚಾಲಯಗಳು, ಕೆಟ್ಟು ನಿಂತಿರುವ ಶುದ್ದಕುಡಿಯುವ ನೀರಿನ ಘಟಕ, ಕುಡಿಯಲು ಯೋಗ್ಯವಿಲ್ಲದೆ ಕೊಳಾಯಿಗಳಿಂದ ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರು, ಮಾರುಕಟ್ಟೆಯ ಆವರಣದಲ್ಲೆಲ್ಲಾ ವಿಲೇವಾರಿಯಾಗದ ಕಸದ ರಾಶಿಗಳು, ರಾತ್ರಿಯ ವೇಳೆಯಲ್ಲಿ ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು, ಕಸದ ರಾಶಿಗಳಿಗೆ ಬೆಂಕಿಹಚ್ಚಿರುವ ಕುರುಹುಗಳು ಕಾಣಸಿಗುತ್ತವೆ.
ಇದಷ್ಟೆ ಅಲ್ಲದೆ, ಉಪಯೋಗವಾಗುತ್ತಿರುವ ಒಂದು ಶೌಚಾಲಯದ ನಿರ್ವಹಣೆಯನ್ನು ಬೆಂಗಳೂರಿನ ಸಂಸ್ಥೆಯವರಿಗೆ ಗುತ್ತಿಗೆ ನೀಡಿದ್ದಾರೆ, ಆದರೆ ಮಾರುಕಟ್ಟೆಯ ಆವರಣದಲ್ಲಿನ ಮತ್ತೊಂದು ಶೌಚಾಲಯದ ಮುಂಭಾಗದಲ್ಲಿ ತುಂಬಿ ಹೋಗಿರುವ ಯುಜಿಡಿಯನ್ನು ಸ್ವಚ್ಚಗೊಳಿಸದೆ ಇರುವುದರಿಂದ ಯುಜಿಡಿಯ ನೀರು, ಸಮೀಪದ ಚರಂಡಿಗೆ ಹರಿಯುತ್ತಿರುವುದರಿಂದ ಸುತ್ತಮುತ್ತಲಿನ ವಾಸಿಗಳು ದುರ್ವಾಸನೆಯಿಂದ ಪರದಾಡುವಂತಾಗಿದೆ. ಜನರು ಕಾಯಿಲೆಗಳಿಗೆ ತುತ್ತಾಗುವಂತಾಗಿದೆ, ಮಾರುಕಟ್ಟೆಯ ಆವರಣದಲ್ಲಿಯೂ ಕೂಡಾ ಯುಜಿಡಿಯ ನೀರು ನಿಂತು ದುರ್ವಾಸನೆ ಬೀರುತ್ತಿದೆ, ಆದರೂ ಇಲ್ಲಿನ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಅಷ್ಟೆ ಅಲ್ಲದೆ, ಇಲ್ಲಿಗೆ ಬರುವಂತಹ ರೈತರಿಗೆ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಲು ಕ್ಯಾಂಟಿನ್ ಇಲ್ಲ. ವಿಶ್ರಾಂತಿ ಗೃಹವಿಲ್ಲ. ಮಹಿಳಾ ರೈತರೂ ಬರುತ್ತಾರೆ. ಆದರೆ ಅವರಿಗೆ ಶೌಚಾಲಯದ ವ್ಯವಸ್ಥೆಯಿಲ್ಲದೆ ಪರದಾಡುತ್ತಾರೆ.
ಕೋಟ್ಯಾಂತರ ರೂಗಳ ವ್ಯವಹಾರ ನಡೆದು ಸರ್ಕಾರಕ್ಕೆ ಸಾಕಷ್ಟು ಆದಾಯ ಬರುವ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು. ಈಗಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ವ್ಯವಸ್ಥೆಯನ್ನು ಪರಿಸಪಡಿಸಲು ಮುಂದಾಗಬೇಕು ಎಂದು ರೈತರು ಮತ್ತು ರೀಲರುಗಳು ಒತ್ತಾಯಿಸಿದ್ದಾರೆ.
ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಕಳಕಳಿ ಅಗತ್ಯ
ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಕಳಕಳಿ ಎರಡನ್ನೂ ಯುವಜನತೆಯಲ್ಲಿ ತುಂಬುವ ಉದ್ದೇಶದಿಂದ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ನೆನಪಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ತಿಳಿಸಿದರು.
ನಗರದ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದಲ್ಲಿ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನಾಚರಣೆಯ ಅಂಗವಾಗಿ ನಡೆಸಿದ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಕ್ತದ ಕೊರತೆಯಿಂದಾಗಿ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ, ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಯುವಜನತೆ ಒಟ್ಟುಗೂಡಬೇಕು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಅಂತಹವರ ಪ್ರಾಣಗಳನ್ನು ಉಳಿಸುವುದರ ಜೊತೆಗೆ, ಆರೋಗ್ಯವಂತರಾಗಿ ಜೀವಿಸುವ ಕಡೆಗೆ ಚಿಂತನೆ ನಡೆಸಬೇಕು. ಪ್ರಧಾನ ಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಳೆದ ೧೩ ದಿನಗಳಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಜನತೆಯ ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದರು.
ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಮಾತನಾಡಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪಕ್ಷದಿಂದ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದು, ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಯುವಜನತೆಯಿಂದ ಉತ್ತಮವಾದ ಬೆಂಬಲ ವ್ಯಕ್ತವಾಗುತ್ತಿದೆ. ಶಿಬಿರದೊಂದಿಗೆ ಯುವಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮುಂದಿನ ಆಗಸ್ಟ್ ೨೩ ರ ವರೆಗೂ ಖಾದಿಯನ್ನು ಪ್ರಚುರಪಡಿಸುವುದು, ತಿರಂಗಾ ಯಾತ್ರೆ, ಪಂಜಿನ ಮೆರವಣಿಗೆ ಮುಂತಾದ ವಿವಿಧ ಕಾರ್ಯಕ್ರಮಗಳು ಪಕ್ಷದಿಂದ ನಡೆಯಲಿವೆ ಎಂದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಟಪರ್ತಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ೨೦ ಕ್ಕೂ ಹೆಚ್ಚು ಮಂದಿ ಯುವಕರು ಶಿಬಿರದಲ್ಲಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಸುರೇಂದ್ರಗೌಡ, ಜಿಲ್ಲಾ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಸುರೇಶ್, ಅರಿಕೆರೆ ಮುನಿರಾಜು, ತ್ಯಾಗರಾಜ್, ಸುಜಾತಮ್ಮ, ಮಂಜುಳಮ್ಮ, ಮುನಿರತ್ನಮ್ಮ, ಗಾಯಿತ್ರಮ್ಮ, ಎಬಿವಿಪಿ ನರೇಶ್, ಚಂದ್ರು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯ ಹೋರಾಟಗಾರರ ಕುರಿತ ನೆನಪುಗಳು
ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹಾಗೂ ಹಲವಾರು ಹೋರಾಟಗಾರರನ್ನು ಹೊಂದಿದ್ದ ಗ್ರಾಮ ಭಕ್ತರಹಳ್ಳಿ ಅಂದು ದೇಶಭಕ್ತರಹಳ್ಳಿ ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಸ್ವಾತಂತ್ರ್ಯ ಬಂದು ಒಂದು ತಲೆಮಾರೇ ಕಳೆದಿರುವ ಹೊತ್ತಿನಲ್ಲಿ ಅವರ ಕುರಿತ ನೆನಪುಗಳು ತಾಲ್ಲೂಕಿನ ಬಗ್ಗೆ ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ.
ಭಕ್ತರಹಳ್ಳಿ ಗ್ರಾಮದ ಹಿರಿಯರಾದ ಬಂಡಿ ನಾರಾಯಣಪ್ಪನವರ ಮನೆಯು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವಾಗಿತ್ತು. ೧೯೪೭ರಲ್ಲಿ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಗೋಲೀಬಾರಿನಲ್ಲಿ ಭಕ್ತರಹಳ್ಳಿಯ ನಾರಾಯಣಪ್ಪನವರ ವೆಂಕಟರವಣಪ್ಪ ಮತ್ತು ಕುಂಬಾರು ದೊಡ್ಡ ನಾರಾಯಣಪ್ಪ ಎಂಬ ಇಬ್ಬರು ದೇಶಭಕ್ತರು ವೀರಮರಣವನ್ನಪ್ಪಿದರು. ಹಲವಾರು ಮಂದಿ ಜೈಲು ಪಾಲಾದರು. ಇದರಿಂದಾಗಿ ಭಕ್ತರಹಳ್ಳಿಯು ‘ದೇಶಭಕ್ತರಹಳ್ಳಿ’ ಎಂದೇ ಖ್ಯಾತಿಯಾಯಿತು.
‘ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯ ಕೇವಲ ೧೩ ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಹಲವಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಬಂಡಿ ನಾರಾಯಣಪ್ಪ, ನಾಗಮಂಗಲದ ವೆಂಕಟರಾಯಪ್ಪ, ಪಟೇಲ್ ಮುನಿಶಾಮಿಗೌಡ, ಬಿ.ವೆಂಕಟರಾಯಪ್ಪ, ಬಿ.ಆರ್.ಕೆ.ಆರಾಧ್ಯ, ನಾರಾಯಣಸ್ವಾಮಿ ಗೌಡ, ಎಚ್.ಕಾಳಪ್ಪ, ಬಿ.ಆಂಜನೇಯಗೌಡ, ಬಂಡಿ ಕ್ಯಾತಣ್ಣ, ತೋಟಿ ರಂಗಪ್ಪ, ಬಿ.ಎನ್.ಪುಟ್ಟಣ್ಣ, ಬಿ.ಎಸ್.ಬಚ್ಚೇಗೌಡ, ಡಿ.ಮಾರಪ್ಪ, ತಳವಾರ ನಾರಾಯಣಪ್ಪ, ನಾಯಕರ ಮುನಿಯಪ್ಪ ಮತ್ತಿತರರು ಭಕ್ತರಹಳ್ಳಿಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನೂ ಪಡೆಯುತ್ತಿರಲಿಲ್ಲ. ಇವರನ್ನೆಲ್ಲ ಗೌರವಿಸುವ ಸಲುವಾಗಿ ನಾನು ಗ್ರಾಮ ಪಂಚಾಯತಿ ಉಪಾಧ್ಯಕ್ಷನಾದಾಗ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಿಸಿದೆ’ ಎಂದು ಗ್ರಾಮದ ಧೀಮಂತ ವ್ಯಕ್ತಿಗಳನ್ನು ನೆನೆಯುತ್ತಾರೆ ಹಿರಿಯರಾದ ವೆಂಕಟಮೂರ್ತಿಯವರು.
ಭಕ್ತರಹಳ್ಳಿಯ ಹಿರಿಯ ಮುತ್ಸದ್ಧಿ ಬಂಡಿ ನಾರಾಯಣಪ್ಪನವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಿಗೆ ಹಣಕಾಸಿನ ನೆರವು, ಗುಪ್ತ ಪತ್ರ ರವಾನೆ, ಕಾರ್ಯಾಚರಣೆಗಳ ಯೋಜನೆ ಎಲ್ಲವನ್ನೂ ತಮ್ಮ ಮನೆಯಿಂದಲೇ ನಡೆಸುತ್ತಿದ್ದರು. ಬಂಡಿನಾರಾಯಣಪ್ಪ ಆಗಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪರೋಕ್ಷವಾಗಿ ಮಹಾಪೋಷಕರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಜನರ ಮನದಲ್ಲಿ ಹಚ್ಚಿದವರಲ್ಲಿ ಇವರು ಪ್ರಮುಖರು. ಆಗ ಸ್ವಾತಂತ್ರ್ಯ ಹೋರಾಟಗಾರರಿಗೆ ಪೋಷಕರ ಅತ್ಯಗತ್ಯವಿತ್ತು. ಆ ಸ್ಥಾನವನ್ನು ಇವರು ತುಂಬಿದ್ದಲ್ಲದೇ ತಮ್ಮ ಮಕ್ಕಳಾದ ಬಿ.ಎನ್.ಕ್ಯಾತಣ್ಣ ಮತ್ತು ಬಿ.ಎನ್.ಪುಟ್ಟಣ್ಣ ಅವರನ್ನೂ ಈ ರಾಷ್ಟ್ರೀಯ ಚಳವಳಿಗೆ ತಂದರು. ಬ್ರಿಟಿಷರ ವಿರುದ್ಧದ ಚಳುವಳಿಯಲ್ಲಿ ಬಂಡಿ ನಾರಾಯಣಪ್ಪನವರ ಮಕ್ಕಳು ಸೆರೆಮನೆ ಸೇರಿದರು.
ಭಕ್ತರಹಳ್ಳಿಯ ಗ್ರಾಮ ಪಂಚಾಯತಿ ಕಚೇರಿಯ ಆವರಣದಲ್ಲಿರುವ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಗಾಂಧಿ ಪ್ರತಿಮೆ ಮತ್ತು ಹೋರಾಟಗಾರರ ಹೆಸರಿನ ಫಲಕದ ಮುಂದೆ ನಿಂತಾಗ ನಮ್ಮ ಹಿರಿಯರ ನಿಸ್ವಾರ್ಥ ಸೇವೆ, ದೇಶಪ್ರೇಮ, ಸ್ವಾತಂತ್ರ್ಯದ ಕಿಚ್ಚು ರೋಮಾಂಚನವನ್ನು ಉಂಟುಮಾಡುತ್ತದೆ.
ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಸಂಘಕ್ಕೆ ಶ್ಲಾಘನೆ
ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ನೆರವಾಗಲು ಸ್ಥಾಪಿಸಿರುವ ಸಂಸ್ಥೆಯ ಉದ್ದೇಶ ಶ್ಲಾಘನೀಯ. ಈ ಬೆಳವಣಿಗೆಗಳು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತವೆ ಎಂದು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಹಲವಾರು ಮಂದಿ ಸಾಧಕರು ನಮಗೆ ಪ್ರೇರಣೆ ಒದಗಿಸಿದ್ದಾರೆ. ಆದರೆ ಎಳೆಯರಲ್ಲಿ ಅಡಗಿರುವ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ ಪ್ರತಿಭೆಯನ್ನು ಬೆಂಬಲಿಸುವ ಸಂಘದ ಕೊರತೆಯಿತ್ತು. ಅದು ಈಗ ಯುವ ಆಸಕ್ತರಿಂದ ಪೂರೈಸಿದೆ. ವಾಲೀಬಾಲ್ ಕ್ರೀಡಾಪಟು ಮುನಿರಾಜು ಹಲವು ವರ್ಷಗಳಿಂದ ಸ್ವಯಂ ಆಸಕ್ತಿಯಿಂದ ಎಳೆಯ ಕ್ರೀಡಪಟುಗಳಿಗೆ ತರಬೇತಿ ನೀಡುತ್ತಾ ಅವರನ್ನು ವಿವಿಧ ಕ್ರೀಡಾ ಶಾಲೆಗಳಿಗೆ ಸೇರಲು ಸಹಾಯ ಮಾಡಿದ್ದಾರೆ. ಈ ಸೇವೆ ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿರುವುದು ಉತ್ತಮ ಕೆಲಸವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕೂಡ ಈ ಸಂಘದ ಕಾರ್ಯಗಳಿಗೆ ಬೆಂಬಲಿಸುತ್ತಾ ಮುಂದಿನ ದಿನಗಳಲ್ಲಿ ಇವರೊಂದಿಗೆ ಕೈಜೋಡಿಸಿ ಶಿಬಿರಗಳನ್ನು ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹಿಸುವುದಾಗಿ ಹೇಳಿದರು.
ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ ಮಾತನಾಡಿ, ಕ್ರೀಡಾ ಮನೋಭಾವ ಎಳೆಯರಲ್ಲಿ ಮೂಡಿಸಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ, ಒಳ್ಳೆಯದನ್ನು ಕಲಿಯುತ್ತಾ, ತಮ್ಮನ್ನು ತಾವು ವಿಮರ್ಶಿಸಿಕೊಳ್ಳುತ್ತಾ, ತಿದ್ದಿಕೊಳ್ಳುತ್ತಾ ಬೆಳೆಯುವ ಲಕ್ಷಣವದು. ಅದು ಮುಂದಿನ ಜೀವನಕ್ಕೆ ಸಹಾಯಕ ಎಂದು ಅಭಿಪ್ರಾಯಪಟ್ಟರು.
ಲಿಟಲ್ ಸ್ಟಾರ್ ಜ್ಯೂನಿಯರ್ ತಂಡದಿಂದ ದೇಶಭಕ್ತಿ ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸಲಾಯಿತು. ವರ್ಷಿನಿ ಮತ್ತು ಭುವನ ಯೋಗಾಸನಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಮುನಿಕೃಷ್ಣ, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಯೋಗಗುರು ಶ್ರೀಕಾಂತ್, ಕುಸ್ತಿಪಟು ಹುಮಾಯುನ್ಖಾನ್, ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಗೌರವಾಧ್ಯಕ್ಷ ಮುನಿರಾಜು, ಟಿ.ಟಿ.ನರಸಿಂಹಪ್ಪ, ಆರ್.ಸುರೇಶ್, ರಾಜಶೇಖರ್, ನವಾಜ್, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನ ಏಳಿಗೆಗಾಗಿ ಶ್ರಮಿಸಿದ್ದ ಹಿರಿಯರು ಪ್ರೇರಣೆ
ವಿದ್ಯೆ, ಆರೋಗ್ಯ ಮತ್ತು ಆಹಾರದ ಕೊರತೆಯಿದ್ದ ಕಾಲದಲ್ಲಿ ತಾಲ್ಲೂಕಿನ ಏಳಿಗೆಗಾಗಿ ಶ್ರಮಿಸಿದ್ದ ಬಿ.ವಿರೂಪಾಕ್ಷಪ್ಪ ನೆನಪಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಬಿ.ವಿರೂಪಾಕ್ಷಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆ.ಸಂದೀಪ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ವಿದ್ಯಾರ್ಥಿಗಳಿಗೆ ಕನ್ನಡ ರತ್ನಕೋಶವನ್ನು ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.
ನಗರದ ಪ್ರಥಮ ಪುರಸಭಾ ಅಧ್ಯಕ್ಷ ಹಾಗೂ ಮೊಟ್ಟಮೊದಲ ಪ್ರೌಢಶಾಲೆ ಸ್ಥಳ ಮತ್ತು ಕಟ್ಟಡದ ದಾನಿಗಳಾದ ಬಿ.ವಿರೂಪಾಕ್ಷಪ್ಪ ಅವರ ನೆನಪಿನಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದೆ. ವಿದ್ಯೆಗೆ ಅವರು ನೀಡಿದ ಕೊಡುಗೆ ಹಾಗೂ ಮೂಲ ಆಶಯಕ್ಕೆ ಬದ್ಧರಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿಘಂಟುಗಳನ್ನು ನೀಡುವ ಮೂಲಕ ಟ್ರಸ್ಟ್ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದಾಗಿ ಹೇಳಿದರು.
ಕನ್ನಡ ರತ್ನಕೋಶದಲ್ಲಿ ಪ್ರತಿದಿನ ಕನಿಷ್ಠ ಐದು ಪದಗಳನ್ನಾದರೂ ಕಲಿತರೆ ಮಕ್ಕಳ ಶಬ್ಧಬಂಡಾರ ಹೆಚ್ಚುತ್ತದೆ. ಕನ್ನಡ ಭಾಷೆಯ ಸೊಗಸು, ಲಾವಣ್ಯ, ಸೌಂದರ್ಯ ಅರಿಯುತ್ತಾ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಕೊಳ್ಳಬೇಕೆಂದು ನುಡಿದರು.
ಶಾಲೆಯ ಶಿಕ್ಷಕ ಎಲ್.ನಾಗಭೂಷಣ್ ಮಾತನಾಡಿ, ಸ್ವಾತಂತ್ರ್ಯ ಬರಲು ಎರಡು ತಿಂಗಳ ಮೊದಲು ಶಿಡ್ಲಘಟ್ಟದಲ್ಲಿ ಮೊದಲ ಪ್ರೌಢಶಾಲೆ ಪ್ರಾರಂಭವಾಯಿತು. ಪ್ರೌಢಶಾಲೆ ನಡೆಸಲು ಬಿ.ವಿರೂಪಾಕ್ಷಪ್ಪ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ೧೩ ಎಕರೆ ಒಂದು ಗುಂಟೆ ಜಮೀನನ್ನು ಖರೀದಿಸಿ ಅದನ್ನು ದಾನ ಮಾಡಿದ ಬಿ.ವಿರೂಪಾಕ್ಷಪ್ಪ ಅವರು ಮೈಸೂರು ಮಹಾರಾಜರಿಂದ ಕಟ್ಟಡದ ಶಂಕುಸ್ಥಾಪನೆ ಮಾಡಿಸಿದ್ದರು. ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ಆಗ ಗೌರವಿಸಿದ್ದರು. ಆಗಿನ ಮುಖ್ಯಮಂತ್ರಿ ಕೆ.ಹನುಮಂತಯ್ಯ ಜೂನ್ ೫, ೧೯೫೪ರಂದು ನಗರದಲ್ಲಿ ವಿರೂಪಾಕ್ಷಪ್ಪ ಹೈಸ್ಕೂಲ್ ಕಟ್ಟಡವನ್ನು ಉದ್ಘಾಟಿಸಿದ್ದರು ಎಂದು ವಿವರಿಸಿದರು.
ಬಿ.ವಿರೂಪಾಕ್ಷಪ್ಪ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆ. ಸಂದೀಪ್, ಖಜಾಂಚಿ ಸೌಮ್ಯ ಈ ಸಂದರ್ಭದಲ್ಲಿ ಹಾಜರಿದ್ದರು.
ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ
ಶಿಡ್ಲಘಟ್ಟದ ವಿ ಕೇರ್ಸ್ ಯು ಫೌಂಡೇಷನ್ ಸದಸ್ಯರು ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಿಬ್ಬೂರಹಳ್ಳಿ ರಸ್ತೆಯ ಮಧ್ಯದಲ್ಲಿರುವ ಸ್ಥಳದಲ್ಲಿ ಸಸಿಗಳನ್ನು ನೆಟ್ಟರು. ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಾಕ್ಷರತಾ ಅಧಿಕಾರಿ ಶ್ರೀನಿವಾಸ್ ಹಾಜರಿದ್ದರು
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕಿ ಫೈಜೂನ್ ಅವರನ್ನು ಗೌರವಿಸಿದರು. ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್ ಹಾಜರಿದ್ದರು
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಆಂಜನೇಯರೆಡ್ಡಿ, ನಿತ್ಯಾನಂದಶೆಟ್ಟಿ ಹಾಜರಿದ್ದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ತಂಡಗಳಿಗೆ ತಾಲ್ಲೂಕು ಕ.ಸಾ.ಪ ವತಿಯಿಂದ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಶಾಸಕ ಎಂ.ರಾಜಣ್ಣ, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸ್ಫೂರ್ತಿ ಯುಕರ ಬಳಗದ ಸ್ಥಾಪನೆಯಾಯಿತು. ಗ್ರಾಮಸ್ಥರು ಶಾಲೆಗೆ ಧ್ವನಿವರ್ಧಕವನ್ನು ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗೆಳೆಯರ ಬಳಗ, ಆಟೋ ಮತ್ತು ಟಾಟಾ ಮ್ಯಾಜಿಕ್ ಚಾಲಕರು ಹಾಗೂ ಮಾಲೀಕರು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಸಾದಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದರಾಜು, ಸದಸ್ಯರಾದ ಎಸ್.ಆರ್.ನಾರಾಯಣಪ್ಪ, ಎಸ್.ಎಂ.ನಾರಾಯಣಪ್ಪ, ದೊಡ್ಡನರಸಿಂಹಪ್ಪ, ನರಸಿಂಹಪ್ಪ, ಶಿವಪ್ಪ ಹಾಜರಿದ್ದರು
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇವರಿಗೆ ತ್ರಿವರ್ಣದ ಅಲಂಕಾರವನ್ನು ಮಾಡಿದ್ದು ವಿಶೇಷವಾಗಿತ್ತು.

