ದಲಿತ ವಿರೋಧಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳ ವೈಪಲ್ಯತೆ ಮತ್ತು ಭ್ರಷ್ಟಾಚಾರ ಖಂಡಿಸಿ ೭೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಲಿತರ ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಸುಮಾರು ೩೦೦ ವರ್ಷಗಳ ಬ್ರಿಟೀಷರ ದುರಾಡಳಿತದಿಂದ ರೋಸಿಹೋದ ಭಾರತೀಯರ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿ ೭೦ ವರ್ಷವಾದರೂ ಇಂದಿಗೂ ದೇಶದ ದಲಿತದ ಬದುಕು ಮಾತ್ರ ಇಂದಿಗೂ ಡೋಲಾಯಮಾನವಾಗಿದೆ.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೇಶದಲ್ಲಿರುವ ಅಸ್ಪೃಷ್ಯತೆ ಹಾಗು ಅಸಮಾನತೆಯನ್ನು ತಮ್ಮ ಜೀವನದಲ್ಲಿ ಅನುಭವಿಸಿ ಶೋಷಿತ ವರ್ಗದವರಿಗಾಗಿ ಲಿಖಿತ ಸಂವಿಧಾನ ರಚಿಸಿ ದೇಶಕ್ಕೆ ಅರ್ಪಿಸಿ ೬೭ ವರ್ಷಗಳೇ ಆಗಿವೆ. ದೇಶದ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿವೆ. ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗವನ್ನು ತಮ್ಮ ವ್ಯಾಪ್ತಿಯಲ್ಲಿಟ್ಟುಕೊಂಡು ಎಲ್ಲರಿಗೂ ಸಿಗಬೇಕಾದ ಶಿಕ್ಷಣ, ಅಧಿಕಾರ ಹಾಗು ಆರ್ಥಿಕ ಸಂಪನ್ಮೂಲಗಳನ್ನು ಸಂವಿಧಾನದ ಆಶಯದಂತೆ ಜಾರಿಗೊಳಿಸದೇ ೬೯ ವರ್ಷಗಳ ಕಾಲ ತಮ್ಮ ಸ್ವಾರ್ಥಕ್ಕಾಗಿ ಕಾಲ ಕಳೆದಿರುವುದು ಇತಿಹಾಸವಾಗಿದೆ ಎಂದರು.
ಅಂಬೇಡ್ಕರ್ರ ಆಶಯದಂತೆ ಸಂವಿಧಾನದ ಅನುಚ್ಚೇದ ೩೮, ೩೯ ರಂತೆ ಕಾನೂನು ಜಾರಿ ಮಾಡಿದರೆ ಈ ದೇಶವು ಪ್ರಭುದ್ದ ಭಾರತವಾಗುತ್ತಿತ್ತು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ರ ಕನಸು ನನಸಾಗುತ್ತಿತ್ತು. ಆದರೆ ಇಂದಿಗೂ ದೇಶಾಧ್ಯಂತ ಬಡತನ, ಹಸಿವು, ದಾರಿದ್ರ್ಯ, ನಿರುದ್ಯೋಗ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ ಎಂದರು.
ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿ, ತಾಲ್ಲೂಕಿನಾದ್ಯಂತ ಶೇ. ೩೦ ರಷ್ಟು ಎಸ್ಸಿ, ಎಸ್ಟಿ ಜನಾಂಗದವರಿದ್ದು ಇದರಲ್ಲಿ ಬಹುತೇಕರು ಕೂಲಿ ನಾಲಿ ನಡೆಸಿ ಜೀವನ ನಡೆಸುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದೇ ಮಳೆಯನ್ನೇ ಅವಲಂಬಿಸಿ ಕೃಷಿ ನಡೆಸುವುದು ಸೇರಿದಂತೆ ವಲಸೆ ಜೀವನ ನಡೆಸುವ ದಲಿತರಿಗೆ ಸರ್ಕಾರದಿಂದ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗದೇ ಮೇಲ್ಜಾತಿಯ ಗುಲಾಮರಾಗಿ ಜೀವಿಸುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ಅಧಿಕಾರಿಗಳು ಜಾತಿವಾದಿಗಳಾಗಿದ್ದು ಭ್ರಷ್ಟಾಚಾರ, ಲಂಚಗುಂಡಿತನ, ಸ್ವಜನ ಪಕ್ಷಪಾತ, ಮೀಸಲಾತಿ ಹಣ ದುರುಪಯೋಗ ಸೇರಿದಂತೆ ಮದ್ಯವರ್ತಿಗಳ ಹಾವಳಿ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ದಲಿತ ಕಾಲೋನಿಗಳಲ್ಲಿ ನಕಲಿ ಮದ್ಯ ಮಾರಾಟ ಯಥೇಚ್ಚವಾಗಿ ನಡೆಯುತ್ತಿದ್ದು ತಡೆಗಟ್ಟುವಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಒತ್ತಾಯಗಳು: ತಾಲ್ಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನಕ್ಕೆ ಭೂಮಿ ನೀಡುವುದು ಮತ್ತು ಈಗಾಗಲೇ ಇರುವ ಸ್ಮಶಾನಗಳ ಒತ್ತುವರಿ ತೆರವುಗೊಳಿಸಿ ಬೇಲಿ ಹಾಗು ರಸ್ತೆ ನಿರ್ಮಿಸಿಕೊಡುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ದಲಿತ ಕಾಲೋನಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡುವುದು. ಮಾರಾಟ ಹಾಗು ಸರಬರಾಜು ಮಾಡುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರವಾನಿಗೆ ರದ್ದು ಮಾಡಬೇಕು.
ನಗರ ಹಾಗು ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ದಲಿತರಿಗೆ ನಿವೇಶನ ಮಂಜೂರು ಮಾಡುವುದು ಹಾಗೂ ವಸತಿ ನಿರ್ಮಿಸಿ ಕೊಡಬೇಕು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ದಲಿತರ ಮೀಸಲಾತಿ ಹಣ ದುರ್ಭಳಕೆಯಾಗಿರುವ ಬಗ್ಗೆ ಆರೋಪಗಳಿದ್ದು ದಾಖಲೆಗಳ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
ತಾಲ್ಲೂಕಿನ ದಲಿತ ಸ್ತ್ರೀ ಶಕ್ತಿ ಸಂಘಗಳಿಗೆ ಸಹಾಯ ಧನ ನೀಡಿ ಬ್ಯಾಂಕುಗಳಲ್ಲಿ ಸಾಲ ಮಂಜೂರು ಮಾಡಬೇಕು.
ಎಂದು ಒತ್ತಾಯಿಸಿ ತಹಸೀಲ್ದಾರ್ ಕೆ.ಎಂ.ಮನೋರಮಾ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂಘಟನಾ ಸಂಚಾಲಕರಾದ ಬೈರಸಂದ್ರ ದೇವರಾಜ್, ದಿಬ್ಬೂರಹಳ್ಳಿ ಮಂಜುನಾಥ್, ಯಣ್ಣಂಗೂರು ಸುಬ್ರಮಣಿ, ಹಿತ್ತಲಹಳ್ಳಿ ದೇವರಾಜ್, ಎಲ್.ಎನ್.ಮುನಿಕೃಷ್ಣಪ್ಪ, ಮಾರಪ್ಪ ಮತ್ತಿತರರು ಹಾಜರಿದ್ದರು.
ದಲಿತ ಸಂಘರ್ಷ ಸಮಿತಿಯಿಂದ ಕರಾಳ ದಿನಾಚರಣೆ
ಬಿಜೆಪಿ ತಾಲ್ಲೂಕು ಘಟಕದಿಂದ ಮಧ್ಯರಾತ್ರಿ ಧ್ವಜಾರೋಹಣ
ದೇಶಭಕ್ತಿಯೆಂದರೆ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು, ಸ್ವಚ್ಛ, ಸುಭದ್ರ, ಸಹ್ಯ ವಾತಾವರಣವನ್ನು ಸೃಷ್ಟಿಸುವುದಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದಲ್ಲಿ ಭಾನುವಾರ ರಾತ್ರಿ ಸ್ವಾತಂತ್ರ್ಯ ದಿನಾಚರಣೆಯ ಸವಿನೆನಪಿಗೆ ಬಿಜೆಪಿ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕವಾಗಿ ಮತ್ತು ಸಾಮಾಜಿಕವಾಗಿ ದೇಶಕ್ಕಾಗಿ ಒಳಿತನ್ನು ಮಾಡುವ ಪ್ರಯತ್ನವೇ ನಿಜವಾದ ದೇಶಭಕ್ತಿ. ನಿಜವಾದ ದೇಶಭಕ್ತನಾದರೆ ಆತ ನನ್ನ ದೇಶ ನನಗೇನು ಕೊಟ್ಟಿದೆ ಎಂದು ಎಂದೂ ಕೇಳುವುದಿಲ್ಲ. ಬದಲಿಗೆ ನನ್ನ ದೇಶಕ್ಕೆ ನಾನೇನು ಕೊಟ್ಟೆ ಎಂದೇ ಕೇಳಕೊಳ್ಳುತ್ತಿರುತ್ತಾನೆ. ನಾವು ಕೇಳದಿದ್ದರೂ ದೇಶ ನಮಗೆ ಸಕಲವನ್ನೂ ಕೊಟ್ಟಿರುತ್ತದೆ. ನಿಲ್ಲಲು ನೆಲೆಯನ್ನು, ವಿದ್ಯೆಯನ್ನು. ವೃತಿಯನ್ನು, ಸೇವೆಮಾಡಲು ಅವಕಾಶವನ್ನು, ಗೌರವವನ್ನು , ಸರ್ವವನ್ನೂ ಆದರೆ ಕೇಲವೊಮ್ಮೆ ಅವುಗಳನ್ನೆಲ್ಲಾ ಸಮರ್ಥವಾಗಿ ಉಪಯೋಗಿಸುವಲ್ಲಿ ನಾವೇ ಎಡವಿ ಬಿದ್ದಿರುತ್ತೇವೆ. ಭಾರತ ಅಮೇರಿಕ ಆಗಲಿ ಎಂದು ಆಶಿಸುವ ಬದಲು, ಭಾರತ ನಿಜವಾದ ಅರ್ಥದಲ್ಲಿ ಭಾರತವಾಗಿ ಉಳಿಯಲಿ ಎಂದು ಬಯಸೋಣ ಎಂದು ಹೇಳಿದರು.
ನಗರದ ಅರಳೇ ಪೇಟೆಯ ಬಸವೇಶ್ವರ ದೇವಾಲಯದ ಆವರಣದಿಂದ ಪಂಜಿನ ಮೆರವಣಿಗೆಯಲ್ಲಿ ಪ್ರಾರಂಭಿಸಿ ಅಶೋಕ ರಸ್ತೆ, ವಾಸವಿ ರಸ್ತೆ, ಸಂತೆ ಬೀದಿ, ಟಿ.ಬಿ.ರಸ್ತೆ, ದಿಬ್ಬೂರಹಳ್ಳಿ ರಸ್ತೆ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯನ್ನು ನಡೆಸಿದರು. ಮಧ್ಯರಾತ್ರಿ 12 ಗಂಟೆಗೆ ಹೂವಿನ ವೃತ್ತದಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀರಾಮರೆಡ್ಡಿ, ಸುರೇಂದ್ರಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರರೆಡ್ಡಿ, ಮುನಿರಾಜು, ಪುರಸಭಾ ಸದಸ್ಯ ರಾಘವೇಂದ್ರ, ಸುಜಾತಮ್ಮ, ಮಂಜುಳಮ್ಮ, ಪುರುಷೋತ್ತಮ್, ಅಶ್ವಕ್ ಅಹ್ಮದ್, ನರೇಶ್, ದಾಮೋದರ್, ಮುನಿವೆಂಕಟಪ್ಪ, ರವಿ ಮತ್ತಿತರರು ಹಾಜರಿದ್ದರು.
ಗುರುಮಠಗಳು ರಾಜಕೀಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು
ಆಧುನಿಕ ವಿಕಾರಗಳ ದಿನಗಳಲ್ಲಿ ಕ್ರಿಯಾಶೀಲ ಶಿಕ್ಷಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಹಾನುಭಾವನಾಗುತ್ತಾನೆ. ಈ ಅವಕಾಶ ಶಿಕ್ಷಕನಿಗೆ ಮಾತ್ರ ಇದೆ ಎಂದು ಸಾಹಿತಿ ಸ.ರಘುನಾಥ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 70ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಹಿಂಸೆ ಅನ್ನಿಸದ ರೀತಿಯಲ್ಲಿ ಅತ್ಯಲ್ಪ ಪ್ರಮಾಣದ ದಂಡನೆ ಇರಬೇಕು. ಅದು ಶಿಸ್ತಿಗೆ ಪೂರಕವಾಗಿರಬೇಕು. ಅನೇಕ ಪೋಷಕರು ಮಕ್ಕಳ ಬೇಡಿಕೆಗಳನ್ನು ಪೂರೈಸುವುದಕ್ಕಷ್ಟೆ ಸೀಮಿತರಾಗಿದ್ದಾರೆ. ಹಾಗಾಗಿ ಶಿಕ್ಷಕರು ಅಂತಹ ಪೋಷಕರ ಮಕ್ಕಳ ತಂದೆತಾಯಿ ಪಾತ್ರವನ್ನು ವಹಿಸಬೇಕಾಗಿದೆ.
ನಮಗೆ ಇರುವ ರಾಜಕೀಯ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಆರ್ಥಿಕ ಸ್ವಾತಂತ್ರ್ಯದಲ್ಲಿ ಕರಗಿಹೋಗುತ್ತಿದೆ. ಈ ಎರಡೂ ಉಳಿಯಬೇಕಾದರೆ ಸ್ವದೇಶಿ ಬಂಡವಾಳ ಅಭಿವೃದ್ಧಿಗೊಳ್ಳಬೇಕು. ಇಲ್ಲವಾದಲ್ಲಿ ದೇಶ ಮತ್ತು ದೇಶಪ್ರಜೆ ನಾಶವಾಗುತ್ತಾರೆ. ಇಂದಿನ ಒಳ್ಳೆಯ ಓದುಗ ನಾಳೆಯ ಒಳ್ಳೆಯ ನಾಯಕನಾಗುತ್ತಾನೆ. ಈ ಕೊರತೆಯನ್ನು ವಿದ್ಯಾರ್ಥಿಗಳು ನೀಗಬೇಕಿದೆ. ಗುರುಮಠಗಳು ರಾಜಕೀಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಒಂದು ದಿನದ ಘೋಷಣೆ ಮತ್ತು ಬಾವುಟ ಹಾರಿಸುವುದರಿಂದ ದೇಶ ಸುಭದ್ರಗೊಳ್ಳುವುದಿಲ್ಲ. ಈ ಕ್ರಿಯೆಯು ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧನೆಯ ಹಾದಿಯತ್ತ ಸಾಗಿದಾಗ ಮಾತ್ರ ಈ ದಿನದ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ತಮ್ಮ ನೆಚ್ಚಿನ ರಂಗಗಳಲ್ಲಿ ವಿದ್ಯಾರ್ಥಿಗಳು ಕೃಷಿ ಮಾಡುವ ಮೂಲಕ ಶಾಲೆಗೆ ಕೀರ್ತಿತರಬೇಕೆಂದು ಹೇಳಿದರು.
ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ದೇಶ ಭಕ್ತಿಯನ್ನು ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ದೇಶಭಕ್ತಿ ಗೀತೆಗಳಿಗೆ ನೃತ್ಯವನ್ನು ಮಾಡಿ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾದರು.
ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ, ಮುಖಂಡರಾದ ಕೆಂಪರೆಡ್ಡಿ, ಮುರಳಿ ಮತ್ತಿತರರು ಹಾಜರಿದ್ದರು.
ನಮ್ಮ ನಾಡು ಎಂಬ ವಿಶಾಲ ಮನೋಭಾವ ಬೆಳೆಸಿಕೊಳ್ಳಿ
ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರತಿಯೊಬ್ಬ ನಾಗರಿಕರೂ ಕಂಕಣಬದ್ಧರಾಗಬೇಕು. ನಮ್ಮ ಕುಟುಂಬ, ನಮ್ಮ ಮನೆ ಎಂದು ಸಂಕುಚಿತಗೊಳ್ಳದೆ ನಮ್ಮ ನಾಡು ಎಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಶಾಸಕ ಎಂ.ರಾಜಣ್ಣ ಕರೆನೀಡಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 70ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ನಾಡಿನ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಅದನ್ನು ಪರಿಹರಿಸಲು ಆತ್ಮಾವಲೋಕನ ಮಾಡಿಕೊಳ್ಳುವ ವಿಶೇಷ ದಿನವಿದು. ಹಲವಾರು ಬಲಿದಾನಗಳಿಂದ ಸಿಕ್ಕ ಸ್ವಾತಂತ್ರ್ಯವನ್ನು ದೇಶದ ಅಭ್ಯುದಯಕ್ಕಾಗಿ ಶ್ರಮಿಸುವ ಮೂಲಕ ಆಚರಿಸಬೇಕು. ಸ್ವತಂತ್ರ್ಯ ಚಳುವಳಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡ ಸರ್ವ ಮಹಾನುಭಾವರನ್ನು ನಾವು ದಿನ ನಿತ್ಯ ನೆನಯಬೇಕು ಎಂದರು.
ತಹಶೀಲ್ದಾರ್ ಕೆ.ಎಂ.ಮನೋರಮಾ ಮಾತನಾಡಿ, ವ್ಯಾಪರಕ್ಕಾಗಿ ಬಂದ ಬ್ರೀಟಿಷರು ನಮ್ಮಲ್ಲಿರುವ ಅರಾಜಕತೆ, ಏಕತೆಯ ಕೊರತೆಯನ್ನು ಮನಗೊಂಡು ಸುಮಾರು ೩೦೦ ವರ್ಷಗಳ ಕಾಲ ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳಿದರು. ಬ್ರೀಟಿಷರನ್ನು ನಮ್ಮ ದೇಶದಿಂದ ಹೊರಗಟ್ಟಲು ಲಕ್ಷಾಂತರ ಜನ ಪ್ರಾಣಾರ್ಪಣೆ ಮಾಡಬೇಕಾಯಿತು. ನಾವೆಲ್ಲರೂ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದುಕೊಂಡಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಇನ್ನೂ ಪಡೆಯಬೇಕಾಗಿದೆ ಎಂದು ನುಡಿದರು.
ಪೊಲೀಸ್ ಹಾಗೂ ವಿವಿಧ ಶಾಲೆಗಳ ವಾದ್ಯವೃಂದದ ಪಥ ಸಂಚಲನ ನಡೆಯಿತು. ನಗರಸಭೆಯಿಂದ ತಂದಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ತೇರಿಗೆ ಪೂಜೆ ಸಲ್ಲಿಸಲಾಯಿತು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ತಂಡಗಳಿಗೆ ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.ಯೂನಿಟಿ ಸಿಲ್ಸಿಲಾ ಫೌಂಡೇಶನ್ ವತಿಯಿಂದ ಪಥಸಂಚಲನದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಬಿಸ್ಕತ್ತನ್ನು ವಿತರಿಸಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಆಯುಕ್ತ ಎಚ್.ಎ.ಹರೀಶ್, ಅಧ್ಯಕ್ಷ ಮುಷ್ಟರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯ ಅಫ್ಸರ್ಪಾಷ, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ತಾಲ್ಲೂಕು ವ.ಸಾ.ಪ ಅಧ್ಯಕ್ಷ ನಾರಾಯಣಸ್ವಾಮಿ, ಸರ್ಕಾರಿ ನೌರಕರರ ಸಂಘದ ಅಧ್ಯಕ್ಷ ಗುರುರಾಜರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶತಕ ಪೂರೈಸಿರುವ ಆಚೆಪಲ್ಲಿ ಲಕ್ಷ್ಮಮ್ಮ
ಯಾವುದೇ ಖಾಯಿಲೆಯಿಲ್ಲ, ಇದುವರೆಗೂ ಆಸ್ಪತ್ರೆ ಮುಖ ನೋಡಿಲ್ಲ, ತಿನ್ನುವ ಆಹಾರ ಕೇವಲ ರಾಗಿಮುದ್ದೆ ಸಾರು ಅಷ್ಟೆ. ಶತಕವನ್ನು ಪೂರೈಸಿರುವ ಈ ಅಜ್ಜಿಯನ್ನು ಕಂಡರೆ ಜೀವನೋತ್ಸಾಹ ಚಿಮ್ಮುತ್ತದೆ.
ತಾಲ್ಲೂಕಿನ ಸಾದಲಿ ಗ್ರಾಮದ ಆಚೆಪಲ್ಲಿ ಲಕ್ಷ್ಮಮ್ಮ ಆಗಸ್ಟ್ 7 ರಂದು ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸುಮಾರು 142 ಮಂದಿ ಕುಟುಂಬದ ಸದಸ್ಯರು ಸಾದಲಮ್ಮ ಸಮುದಾಯ ಭವನದಲ್ಲಿ ಆಕೆಯ ನೂರು ವರ್ಷದ ಸಂಭ್ರಮಾಚರಣೆಯನ್ನು ನಡೆಸಿದರು.
ಆಚೆಪಲ್ಲಿ ಲಕ್ಷ್ಮಮ್ಮ ಅವರ ತವರೂರು ಚಿಕ್ಕಬಳ್ಳಾಪುರ ಬಳಿಯ ಕೇತೇನಹಳ್ಳಿ. ಆಕೆ ವಿವಾಹವಾಗಿದ್ದು ಆಚೆಪಲ್ಲಿ ಪಾಪಣ್ಣ ಎಂಬುರನ್ನು. ಬಾಗೇಪಲ್ಲಿ ತಾಲ್ಲೂಕಿನ ಆಚೆಪಲ್ಲಿಯ ಮೂಲದ ಪಾಪಣ್ಣ ಸಾಂಕ್ರಾಮಿಕ ರೋಗದ ಭಯದಿಂದ ಗ್ರಾಮವನ್ನು ತೊರೆದು ಚಿಕ್ಕಂದಿನಲ್ಲೇ ಸಾದಲಿಗೆ ಬಂದು ನೆಲೆಸಿದ್ದರಂತೆ. ವ್ಯವಸಾಯ ಇವರ ಕಸುಬು. ಇಬ್ಬರಿಗೂ 9 ಮಂದಿ ಮಕ್ಕಳು. ಅವರಲ್ಲಿ 6 ಗಂಡು 3 ಹೆಣ್ಣುಮಕ್ಕಳು. ಮೊಮ್ಮಕ್ಕಳೆಲ್ಲ ಸೇರಿದರೆ 142 ಮಂದಿ ಇದ್ದಾರೆ.
ಅವಿಭಕ್ತ ಕುಟುಂಬವಾಗಿದ್ದ ಇವರು ನಾಲ್ವರು ಗಂಡು ಮಕ್ಕಳು ನಿಧನರಾದ ಮೇಲೆ 2000ರಲ್ಲಿ ವಿಭಕ್ತ ಕುಟುಂಬಗಳಾಗಿ ಬೇರೆ ಬೇರೆಡೆ ನೆಲೆಸಿದರು. 2009 ರಲ್ಲಿ ಪಾಪಣ್ಣ ಸತ್ತಾಗ ಆತನಿಗೂ ನೂರು ವರ್ಷಗಳಾಗಿತ್ತಂತೆ.
‘ಶತಾಯುಷಿಗಳು ಈಗ ಅಪರೂಪ. ನಮಗೆಲ್ಲಾ ನಮ್ಮಮ್ಮ ಶತಾಯುಷಿಯಾಗಿದ್ದು ಸಂತಸ ತಂದಿದೆ. ನನ್ನ ತಾಯಿಗೆ ಬೆನ್ನು ಬಾಗಿದೆ. ಆದರೆ ಆರೋಗ್ಯವಾಗಿದ್ದಾಳೆ. ಸದಾ ಚಟುವಟಿಕೆಯಿಂದಿರುತ್ತಾಳೆ. ಹಲ್ಲುಗಳಿಲ್ಲದ ಕಾರಣ ಮುದ್ದೆ ಸೊಪ್ಪಿನ ಸಾರು ಆಕೆಯ ಇಷ್ಟದ ಆಹಾರ. ಕೆಲವೊಮ್ಮೆ ಎಲೆ ಅಡಿಕೆ ಸುಣ್ಣವನ್ನು ಕುಟ್ಟಾಣಿಯಲ್ಲಿ ಕುಟ್ಟಿಕೊಂಡು ಮೆಲುಮುತ್ತಾಳೆ. ಆಕೆಯ ಜೀವನಪ್ರೀತಿ ಮಾದರಿಯಾಗಿದೆ’ ಎನ್ನುತ್ತಾರೆ ಲಕ್ಷ್ಮಮ್ಮ ಅವರ ಮಗ ಮುನಿರಾಜು.
ದೇಶಕ್ಕೆ ಸ್ವಾತಂತ್ರ್ಯ ಬಂದರೂ ದಲಿತರಿಗೆ ಇನ್ನೂ ಸಿಕ್ಕಿಲ್ಲ
ದೇಶಕ್ಕೆ ಸ್ವಾತಂತ್ರ್ಯ ಬಂದರೂ ದಲಿತರಿಗೆ ಇನ್ನೂ ಸಿಕ್ಕಿಲ್ಲ ಎಂದು ಭಾರತ ಜನಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ವಿರೋಧಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ನಡೆಯುತ್ತಿರುವ ಆಡಳಿತ ವಿರುದ್ಧ ಕರಾಳ ದಿನವನ್ನಾಗಿ ಈ ಬಾರಿಯ ಆಗಸ್ಟ್ 15 ರಂದು ಆಚರಿಸಲಾಗುವುದು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗುತ್ತಿದ್ದರೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಆಶಯಗಳು ಈಡೇರಿಲ್ಲ. ದಲಿತ ಪರ ಇರುವ ಕಾನೂನುಗಳನ್ನು ಜಾರಿಗೊಳಿಸಲು ಅಧಿಕಾರಿ ವರ್ಗಕ್ಕೆ ಇಷ್ಟವಿಲ್ಲ. ಜನಪ್ರತಿನಿಧಿಗಳು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಇಟ್ಟುಕೊಂಡು ದಲಿತರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. ದಿನಕಳೆದಂತೆ ದಲಿತರ ಮೇಲಿನ ದಬ್ಬಾಳಿಕೆಗಳು, ಭೂಕಬಳಿಕೆ, ಸಂವಿಧಾನದ ತಿದ್ದುಪಡಿಗಳು ನಿರಂತರವಾಗಿ ಮಡೆಯುತ್ತಿದ್ದು, ದೇಶದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ದೂರಿದ್ದಾರೆ.
ರೈತರಿಂದ ರೈತರಿಗೆ ಮಾಹಿತಿ ವಿನಿಮಯ
ರೈತರಿಂದ ರೈತರಿಗೆ ಮಾಹಿತಿ ವಿನಿಮಯವಾಗುವ ಉದ್ದೇಶದಿಂದ ಕ್ಷೇತ್ರ ದರ್ಶನವನ್ನು ನಡೆಸಿರುವುದಾಗಿ ತಲಗಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ. ಪ್ರಭಾಕರರಾವ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಸುರೇಶ್ ಅವರ ರೇಷ್ಮೆ ಕೃಷಿಯ ಕುರಿತು ಮಾಹಿತಿ ವಿನಿಮಯಕ್ಕಾಗಿ ವಿವಿಧ ಜಿಲ್ಲೆಗಳ 40 ಮಂದಿ ರೈತರ ತಂಡದೊಡನೆ ಆಗಮಿಸಿದ್ದ ಅವರು ಮಾತನಾಡಿದರು.
ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ರೈತರಿಗೆ ರೇಷ್ಮೆ ಬೆಳೆ, ಹಿಪ್ಪುನೇರಳೆ ಬೇಸಾಯ, ಹುಳು ಸಾಕಾಣಿಕೆ ಕುರಿತಂತೆ ನಾಲ್ಕು ದಿನಗಳ ಕಾಲ ಶಿಬಿರವನ್ನು ನಡೆಸಿದ್ದು, ಎರಡು ದಿನಗಳ ಕಾಲ ಸಂಸ್ಥೆಯಲ್ಲಿ ವಿಷಯ ತಜ್ಞರಿಂದ ತರಬೇತಿ ಕೊಡಲಾಗುತ್ತದೆ. ಎರಡು ದಿನಗಳ ಕಾಲ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿ ವಿನಿಮಯ, ಸಂದೇಹ ಪರಿಹಾರ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಸುರೇಶ್ ಮಾತನಾಡಿ, ಕಡಿಮೆ ನೀರಿನಲ್ಲಿ ಉತ್ತಮ ರೇಷ್ಮೆ ಬೆಳೆಯನ್ನು ಬೆಳೆಯುತ್ತಿರುವ ತಮ್ಮ ಅನುಭವ ಮತ್ತು ಬಳಸಿಕೊಂಡ ಪದ್ಧತಿಗಳನ್ನು ರೈತರೊಂದಿಗೆ ಹಂಚಿಕೊಂಡಿರುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ರೈತರು ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ ಮತ್ತು ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಭೇಟಿ ನೀಡಿದರು.
ಹಿಂದುಳಿದ ವರ್ಗದವರಿಗೆ ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ
ಹಿಂದುಳಿದ ವರ್ಗದ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡಲು 20 ಲಕ್ಷ ರೂವರೆಗೂ ಇಲಾಖೆಯ ವತಿಯಿಂದ ಸಿಗುತ್ತಿದ್ದು ಅದರ ಸದ್ಭಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಮನೋರಮಾ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ದಿವಂಗತ ದೇವರಾಜ ಅರಸು ಅವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಹಲವಾರು ಯೋಜನೆಗಳಿದ್ದು, ಈ ಯೋಜನೆಗಳು ಜನರಿಗೆ ತಿಳಿಸುವ ಮೂಲಕ ಅರ್ಥಪೂರ್ಣವಾಗಿ ದಿವಂಗತ ದೇವರಾಜ ಅರಸು ಅವರ 101ನೇ ಜನ್ಮ ದಿನಾಚರಣೆ ನಡೆಸುವಂತೆ ಹೇಳಿದರು.
ಅಕ್ಟೋಬರ್ 20 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಲಯಗಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಸರಳವಾಗಿ ಕಾರ್ಯಕ್ರಮವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶಂಕರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಾಣಿಜ್ಯ ಮಳಿಗೆಗಳ ಸಂಕೀರ್ಣ ಉದ್ಘಾಟನೆ
ನಗರದ ಪ್ರವೇಶದ್ವಾರದಲ್ಲಿರುವ ಕಾಲುವೆಯಲ್ಲಿನ ಕೊಳಚೆಯನ್ನು ನಿರ್ಮೂಲನೆ ಮಾಡಲು ಒಂದು ಕೋಟಿ ರೂಗಳ ವೆಚ್ಚದಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಯ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಐ.ಡಿ.ಎಸ್.ಎಂ.ಟಿ ಯೋಜನೆಯಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಸಂಕೀರ್ಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಪ್ರವೇಶದಲ್ಲಿ ಅಮ್ಮನಕೆರೆ ಮತ್ತು ಗೌಡನಕೆರೆಯನ್ನು ಸಂಪರ್ಕಿಸುವ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ಧಿ ಪಡಿಸಲು 75 ಲಕ್ಷ ರೂಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆಶ್ರಯ ಯೋಜನೆಯಡಿ ಮನೆಯಿಲ್ಲದವರಿಗಾಗಿ 1500 ಮನೆಗಳನ್ನು ನಿರ್ಮಿಸಿಕೊಡಲು ಪ್ರಕ್ರಿಯೆ ಪ್ರಾರಂಭವಾಗಿದೆ. ನಗರೋತ್ಥಾನ ಅಭಿವೃದ್ಧಿಗಾಗಿ 15 ಕೋಟಿ ಹಣ ಬರಲಿದ್ದು ನಗರಸಭೆಯ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.
2010–11ನೇ ಸಾಲಿನ ಐ.ಡಿ.ಎಸ್.ಎಂ.ಟಿ ಯೋಜನೆಯಡಿಯಲ್ಲಿ ಮಂದಗತಿಯಲ್ಲಿ ನಿರ್ಮಣವಾದ 49 ಲಕ್ಷ ರೂಗಳ 29 ಮಳಿಗೆಗಳ ವಾಣಿಜ್ಯ ಸಂಕೀರ್ಣವನ್ನು ಐದು ವರ್ಷಗಳ ನಂತರ ಉದ್ಘಾಟನೆಯನ್ನು ನೆರವೇರಿಸಿ ಮುಂದಿನ ತಿಂಗಳಿನಿಂದ ಅಂಗಡಿ ಮಳಿಗೆಗಳ ಹರಾಜು ನಡೆಸುವುದಾಗಿ ನುಡಿದರು.
ನಗರಸಭಾ ಆಯುಕ್ತ ಎಚ್.ವಿ.ಹರೀಶ್, ಯೋಜನಾ ನಿರ್ದೇಶಕಿ ಎಂ.ರೇಣುಕಾ, ನಗರಸಭೆ ಅಧ್ಯಕ್ಷೆ ಮುಷ್ಟರಿ ತನ್ವೀರ್ ಪಾಷ, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್, ನಗರಸಭಾ ಸದಸ್ಯರಾದ ವೆಂಕಟಸ್ವಾಮಿ, ಅಫ್ಸರ್ ಪಾಷ, ಜಬೀವುಲ್ಲ, ಗಫೂರ್, ಸಮೀರ್ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚನ್ನಕೇಶವಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ
ತಾಲ್ಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ಚನ್ನಕೇಶವಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವವನ್ನು ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸೋಮವಾರದಿಂದ ಪ್ರಾರಂಭವಾದ ಪೂಜಾ ಮಹೋತ್ಸವವು ಬುಧವಾರ ಬೆಳಿಗ್ಗೆಯಿಂದ ವಿಶ್ವಕ್ಸೇನಾರಾಧನೆ, ಪುಣ್ಯಾಹವಾಚನ, ಅಗ್ನಿಪ್ರಣಯ, ಕುಂಭಾರಾಧನೆ, ಉಕ್ತಹೋಮ, ಪೂರ್ಣಾಹುತಿ, ಕುಂಭ ಉದ್ವಾಸನೆ, ಆಲಯ ಪ್ರದಕ್ಷಿಣೆ, ಪೂರ್ವಕ ದೇವಾಲಯ ಪ್ರವೇಶ, ಗೋದರ್ಶನ, ಕನ್ಯಾದರ್ಶನ, ಅಕ್ಷತಾರೋಹಣ, ಅಷ್ಠಾವಧಾನಸೇವೆ ನಂತರ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು.
ಸಂಜೆ ಗ್ರಾಮದಲ್ಲಿ ಚನ್ನಕೇಶವಸ್ವಾಮಿ ಉತ್ಸವ ಹಾಗೂ ಗ್ರಾಮದ ಮಕ್ಕಳಿಂದ ಪಂಡರಿಭಜನೆ ಆಯೋಜಿಸಲಾಗಿತ್ತು.
ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಶನ್ ಪುನರ್ ಸ್ಥಾಪನೆ
ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಶನ್ ನ್ನು ಪುನರ್ ಸ್ಥಾಪಿಸಿ ನೋಂದಣಿ ಮಾಡಿಸಿ, ನೂತನ ನಿರ್ದೇಶಕರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಅಕ್ಮಲ್ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಶನ್ ವತಿಯಿಂದ ಸಭೆಯನ್ನು ನಡೆಸಿದ್ದು, ರೀಲರುಗಳಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು, ಪ್ರೋತ್ಸಾಹ ಧನವನ್ನು ಮುಂದುವರೆಸಲು ಕೋರಿ ಮನವಿಯನ್ನು ಆಯುಕ್ತರು, ಸಚಿವರು ಮತ್ತು ಶಾಸಕರಿಗೆ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ಮಹಿಳೆಯ ಅನುಮಾನಾಸ್ಪದ ಸಾವು
ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕನ್ನಮಂಗಲದ ನಿವಾಸಿಯಾದ ಮುನಿತಾಯಮ್ಮ (೬೯) ಎಂಬುವವರು ಮೃತಪಟ್ಟ ಮಹಿಳೆ.
ಈಕೆಗೆ ೫ ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದು ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗಿದೆ. ಆ ಹೆಣ್ಣು ಮಕ್ಕಳಲ್ಲಿ ಒಬ್ಬ ಹೆಣ್ಣು ಮಗಳಿಗೆ ಗಂಡ ಸಾವನ್ನಪ್ಪಿದ್ದು ಆಕೆ ತಾಯಿಯ ಜೊತೆ ಕನ್ನಮಂಗಲದಲ್ಲಿ ವಾಸಿಸುತ್ತಿದ್ದರು. ಗಂಡು ಮಗನಾದ ದೇವರಾಜು ತನ್ನ ಹೆಂಡತಿಯೊಡನೆ ಪ್ರತ್ಯೇಕವಾಗಿ ವಾಸಿಸುತ್ತಿದ್ದನು.
ಕಳೆದ ಸುಮಾರು ೩ವರ್ಷಗಳಿಂದ ಗಂಡು ಮಗನಾದ ದೇವರಾಜು ತನ್ನ ತಾಯಿ ಮತ್ತು ಸಹೋದರಿಯರ ನಡುವೆ ಆಸ್ತಿ ವಿಚಾರಕ್ಕೆ ಜಗಳ ಉಂಟಾಗಿ ಈ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ ಸುಮಾರು ೬ ಗಂಟೆಯ ಸಮಯದಲ್ಲಿ ಮುನಿತಾಯಮ್ಮ ಅಡುಗೆ ಮನೆಯಲ್ಲಿ ಸಾವನ್ನಪ್ಪಿದ್ದು ಅವರ ಪಕ್ಕ ವಿಷದ ಮಾತ್ರೆಗಳು ಇರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆಗಸ್ಟ್ ೧೫ ರಂದು ದಲಿತರ ಕರಾಳ ದಿನಾಚರಣೆ
ದಲಿತ ವಿರೋಧಿ ಧೋರಣೆ ಸೇರಿದಂತೆ ಸ್ವಜನ ಪಕ್ಷಪಾತ, ತಾಲ್ಲೂಕು ಆಡಳಿತದ ವೈಪಲ್ಯದ ವಿರುದ್ದ ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ದಲಿತರ ಕರಾಳ ದಿನಾಚರಣೆ ಆಚರಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಫುರ ಜಿಲ್ಲೆಯ ಗಡಿಭಾಗದಲ್ಲಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ. ೩೦ ರಷ್ಟು ಪರಿಶಿಷ್ಟ ಜಾತಿ ಹಾಗು ಪಂಗಡದ ಜನಸಂಖ್ಯೆಯಿದ್ದು ಕೂಲಿನಾಲಿಯಿಂದ ಜೀವನ ನಡೆಸುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದ ತಾಲ್ಲೂಕಿನಲ್ಲಿ ಮಳೆಯನ್ನೇ ಆಶ್ರಯಿಸಿ ಜೀವನ ನಡೆಸುವ ದಲಿತರು ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ತಲುಪಿದ್ದಾರೆ. ಸರ್ಕಾರಿ ಸವಲತ್ತು ಸಿಗದೇ ಮೇಲ್ಜಾತಿಯ ಗುಲಾಮರಾಗಿ ಬದುಕುವುದನ್ನು ರೂಡಿಸಿಕೊಂಡಿರುವ ದಲಿತರ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿರುವದನ್ನು ಕಂಡು ರೋಸಿಹೋಗಿದ್ದು ಸ್ವಾತಂತ್ರ್ಯ ದಿನಾಚರಣೆಯನ್ನು ದಲಿತರ ಕರಾಳ ದಿನವನ್ನಾಗಿ ಆಚರಿಸಲು ಕ.ದ.ಸಂ.ಸ ವತಿಯಿಂದ ತೀರ್ಮಾನಿಸಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷವಾದರೂ ಸಂವಿಧಾನದ ಆಶಯ ಹಾಗು ದಲಿತರ ಪರ ಕಾನೂನು ತರಲು ಈವರೆಗೂ ಆಡಳಿತ ನಡೆಸಿದ ಯಾವುದೇ ಸರ್ಕಾರದಿಂದ ಆಗಿಲ್ಲ. ಬದಲಿಗೆ ಇಂದಿಗೂ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ, ಕೊಲೆ ಸುಲಿಗೆ, ಅತ್ಯಾಚಾರ, ಭೂಕಬಳಿಕೆಯಂತಹವು ನಿರಂತರವಾಗಿ ನಡೆಯುತ್ತಿದೆ.
ದೇಶದ ಭೂಮಿ, ವಿದ್ಯೆ, ಅಧಿಕಾರ ಆರ್ಥಿಕ ಸಂಪನ್ಮೂಲಗಳನ್ನು ಸಮಾನವಾಗಿ ತಳ ಮಟ್ಟದ ಶೋಷಿತ ಸಮುದಾಯಗಳಿಗೆ ಹಂಚುವಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರ ವರ್ಗ ವಿಫಲವಾಗಿರುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಾ ಮಾನವ ಹಕ್ಕುಗಳನ್ನು ದಮನ ಮಾಡಲು ಮುಂದಾಗಿರುವ ಸರ್ಕಾರಗಳು ಒಂದೆಡೆಡಯಾದರೆ ಇನ್ನೊಂದೆಡೆ ಜಾತಿವಾದಿ ಅಧಿಕಾರಿಗಳಿಂದ ಭ್ರಷ್ಟಾಚಾರ, ಲಂಚಗುಂಡಿತನ, ಸ್ವಜನ ಪಕ್ಷಪಾತ, ಮೀಸಲಾತಿ ಹಣ ದುರುಪಯೋಗ, ಮದ್ಯವರ್ತಿಗಳ ಹಾವಳಿಯಿಂದ ದೇಶದ ಮೂಲ ನಿವಾಸಿಗಳಾದ ದಲಿತರು ದಿಕ್ಕಿಲ್ಲದ ತಬ್ಬಲಿಗಳಾಗುತ್ತಿದ್ದಾರೆ.
ಹಾಗಾಗಿ ದಲಿತ ವಿರೋಧಿ ಧೋರಣೆಯಿಂದ ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನಾಚರಣೆಯನ್ನು ದಲಿತರ ಕರಾಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಹಾಗು ತಾಲ್ಲೂಕು ಘಟಕ ಸೇರಿದಂತೆ ಮಹಿಳಾ ಘಟಕ ಸಂಘಟನೆ ಪಾಲ್ಗೊಳ್ಳುತ್ತಿದ್ದು ಸಮಾನ ಮನಸ್ಕರು, ಚಿಂತಕರು, ವಿಚಾರವಂತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹೇಳಿಕೆಯಲ್ಲಿ ಕೋರಿದ್ದಾರೆ.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ
ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಧಿಕ ಇಳುವರಿ ಪಡೆಯುವ ಮೂಲಕ ಆರ್ಥಿಕವಾಗಿ ಸದೃಡರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸಾದಲಮ್ಮ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಯಲುಸೀಮೆ ಭಾಗದ ರೈತರು ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿ ಅಧಿಕ ಇಳುವರಿ ಪಡೆಯುವ ಮೂಲಕ ಹೆಚ್ಚು ಲಾಭ ಪಡೆದುಕೊಳ್ಳಬಹುದು.
ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ಪಾದಕರಿಗಿಂತಲೂ ಮದ್ಯವರ್ತಿಗಳು ಹಾಗೂ ದಲ್ಲಾಳಿಗಳೇ ಹೆಚ್ಚಿನ ಲಾಭ ಪಡೆಯುವುದನ್ನು ರೈತ ಉತ್ಪಾದಕರ ಕಂಪನಿ ದೂರವಾಗಿಸಬೇಕು. ಇಲ್ಲಿ ಯಾವುದೇ ರಾಜಕೀಯ ನುಸುಳದಂತೆ ಕಾರ್ಯ ನಿರ್ವಹಿಸುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ರಘು ಮಾತನಾಡಿ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ರೈತ ಉತ್ಪಾದಕರ ಕಂಪನಿ ಇದಾಗಿದ್ದು ತೋಟಗಾರಿಕೆ ಅಗತ್ಯವಾದ ಎಲ್ಲಾ ಪರಿಕರಿಗಳು ಕಂಪನಿಯಿಂದ ರೈತನಿಗೆ ನೇರವಾಗಿ ಸಿಗಲಿದೆ ಎಂದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಪಿ.ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಸಾದಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದರಾಜು, ಸಾದಲಮ್ಮ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಅಶ್ವತ್ಥಮ್ಮ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮತ್ತಿತರರು ಹಾಜರಿದ್ದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಸ್ಮರಣೀಯ
ಸ್ವಾತಂತ್ರ್ಯ ಹೋರಾಟದಲ್ಲಿ ಎಲೆಮರೆಯ ಕಾಯಿಗಳಂತೆ ಜೀವತೇಯ್ದ ಸಾವಿರಾರು ಮಹಿಳೆಯರಿದ್ದಾರೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುವಳೆಂಬ ಹೇಳಿಕೆಯಂತೆ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಹೋರಾಟಗಾರ್ತಿಯರ ಪಾತ್ರವು ಸ್ಮರಣೀಯ ಎಂದು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇಗಂ ಹಜರತ್ಮಹಲ್, ಲಕ್ಷ್ಮೀಸ್ವಾಮಿನಾಥನ್, ವಿಜಯಲಕ್ಷ್ಮಿ ಪಂಡಿತ್, ಅಕ್ಕಮ್ಮ ಚರಿಯನ್, ಅರುಣಾ ಅಸಫ್ ಅಲಿ, ಕೇರಳದ ಕುಟ್ಟಮ್ಮಾಳ್ ಅಮ್ಮ, ದುರ್ಗಾಬಾಯಿ ಮುಂತಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರನ್ನು ನಾವು ಮರೆಯಬಾರದು. ‘ನನಗೆ ಉಪವಾಸದ ಮೂಲಕ ಪ್ರತಿಭಟಿಸುವುದು ಹೇಳಿಕೊಟ್ಟಿರುವುದು ನನ್ನ ಅಮ್ಮ’ ಎಂದು ಗಾಂಧೀಜಿ ಹೇಳುತ್ತಿದ್ದರು.
ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಅರುಣಾ ಅಸಫ್ಅಲಿ ಹಾಗೂ ಸುಚೇತ ಕೃಪಲಾನಿಯವರು ಚಳವಳಿಯ ಮುಂದಾಳತ್ವವನ್ನು ವಹಿಸಿಕೊಳ್ಳುವ ಮೂಲಕ ಯುವಕರಿಗೆ ಪ್ರೇರಣೆಯಾದರು. ಗೋಮಾಲಿಯಾ ಟ್ಯಾಂಕ್ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರಿಂದಲೇ ಅರುಣಾ ಅಸಫ್ ಅಲಿ ಅವರನ್ನು ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ ಎಂದು ಕರೆದರು.
ಆಗಸ್ಟ್ 9 ರಂದು ಬ್ರಿಟೀಷರ ವಿರುದ್ಧ ಭಾರತ ಬಿಟ್ಟು ಚಳುವಳಿ ಪ್ರಾರಂಭಿಸಿದ ದಿನವಷ್ಟೇ ಅಲ್ಲದೆ ವಿ.ಕೃ.ಗೋಕಾಕ್ ಅವರ ಜನ್ಮದಿನ ಕೂಡ. ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರು. ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯು ರಾಜ್ಯ ಸರ್ಕಾರಕ್ಕೆ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿದಾಗ ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ‘ಗೋಕಾಕ್ ವರದಿ’ ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು ಎಂದು ವಿವರಿಸಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ 10ನೇ ತರಗತಿಯ ನರಸಿಂಹಮೂರ್ತಿ, ಕೆ.ಎಲ್.ಭವಾನಿ ಮತ್ತು 9 ನೇ ತರಗತಿಯ ವಿ.ಕೆ.ರಾಕೇಶ್ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಎ.ಪಿ.ಜೆ ಅಬ್ದುಲ್ ಕಲಾಂ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಕ.ಸಾ.ಪ ಹೋಬಳಿ ಪದಾಧಿಕಾರಿ ಕೆಂಪೇಗೌಡ, ರಮೇಶ್, ಮುಖ್ಯ ಶಿಕ್ಷಕಿ ಮಮತಾ, ಶಿಕ್ಷಕರಾದ ಹೇಮಾವತಿ, ಅನಿತಾ, ಮಾಲತಿ, ರವಿ, ಶ್ರೀಧರ್, ಗಣೇಶ್, ವಿಜಯಶ್ರೀ ಹಾಜರಿದ್ದರು.
ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಪ್ರಭಾತ್ ಭೇರಿ
ತ್ರಿವರ್ಣ ಪತಾಕೆಯಡಿ ಎಲ್ಲಾ ಚಳವಳಿಕಾರರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಹೊರದೂಡಲು ಸಿದ್ಧರಾದ ಮಹತ್ವದ ದಿನವಿದು. ಜಾತಿ, ಧರ್ಮ, ಮೇಲು, ಕೀಳು ಎಂಬುದನ್ನು ಬದಿಗೊತ್ತಿ ಒಗ್ಗೂಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಬಿ.ಜೆ.ಪಿ ತಾಲ್ಲೂಕು ಘಟಕ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪ್ರಭಾತ್ಭೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳಿವೆ. ಮೊದಲನೆಯದು 1857ರ ಸಿಪಾಯಿ ದಂಗೆ. ಎರಡನೆಯದು 1942ರ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಆಂದೋಲನ. ದೇಶದ ಸ್ವಾತಂತ್ರ್ಯ ವೀರರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಎಂಬುದಾಗಿ ಅಂತಿಮ ತಾಕೀತು ನೀಡಿದ ಐತಿಹಾಸಿಕ ದಿನ 1942ರ ಆಗಸ್ಟ್ 9. ಮುಂಬೈಯ ಗೊವಾಲಿಯ ಮೈದಾನದಲ್ಲಿ ಅಂದು ಚಾಲನೆ ನೀಡಿದ ಈ ಹೋರಾಟಕ್ಕೆ ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣಾ ವಾಕ್ಯವನ್ನು ನೀಡಿದರು.
ಚಳುವಳಿಯ ತೀಕ್ಷ್ಣತೆಯನ್ನು ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಸೆರೆಮನೆಗೆ ಹಾಕಿದ್ದರಿಂದಾಗಿ ನಾಯಕರಿಲ್ಲದೆಯೇ ಚಳುವಳಿ ಉಗ್ರ ಸ್ವರೂಪವನ್ನು ಕಂಡದ್ದು ಈ ಚಳುವಳಿಯ ಹೆಗ್ಗಳಿಕೆ. ಕ್ವಿಟ್ ಇಂಡಿಯ ಚಳುವಳಿಗೆ ಭಾರಿ ಸಂಖ್ಯೆಯ ಬೆಂಬಲ ವ್ಯಕ್ತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆಯಲಾರಂಭಿಸಿ ಹೊಸ ತಿರುವನ್ನು ಕಂಡಿತು. ದೇಶದ ಮೂಲೆ ಮೂಲೆಯಲ್ಲೂ ಈ ಘೋಷಣೆಯು ಜನರನ್ನುಬಡಿದೆಬ್ಬಿಸಿತು. ಕೃಷಿಕರು ಬಹು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಈ ಚಳವಳಿಯ ಬಹು ಮುಖ್ಯ ಅಂಶವಾಗಿತ್ತು. ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು ಎಂಬುದಕ್ಕೆ ಸಾಕ್ಷಿಯಾದ ಘಟನೆ ಕ್ವಿಟ್ ಇಂಡಿಯಾ ಆಂದೋಲನ. ಅದರ ಕಾವಿನ ಪರಿಣಾಮವೇ ಐದು ವರ್ಷದ ಬಳಿಕ ನಾವು 1947ರ ಆಗಸ್ಟ್ 15ರಂದು ಗಳಿಸಿದ ಸ್ವಾತಂತ್ರ್ಯ.
ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಮೂಲವಾದ ಕ್ವಿಟ್ ಇಂಡಿಯಾ ಆಂದೋಲನದ ದಿನವನ್ನು ತ್ರಿವರ್ಣಧ್ವಜದ ಅಡಿಯಲ್ಲಿ ಹೆಮ್ಮೆಯಿಂದ ಆಚರಿಸುವ ಮೂಲಕ ಈಗಲೂ ಎಲ್ಲರೂ ದೇಶದ ಧ್ವಜದ ಅಡಿಯಲ್ಲಿ ಒಗ್ಗಟ್ಟನ್ನು ಪ್ರದರ್ಶಿಸೋಣ ಎಂದು ಹೇಳಿದರು.
ವಾದ್ಯವೃಂದದೊಡನೆ ರಾಷ್ಟ್ರಧ್ವಜವನ್ನು ಹಿಡಿದ ಬಿ.ಜೆ.ಪಿ ಕಾರ್ಯಕರ್ತರು ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಿಂದ ವಾಸವಿ ರಸ್ತೆ, ಬಸ್ನಿಲ್ದಾಣ, ಕೋಟೆ ವೃತ್ತ, ಓ.ಟಿ.ವೃತ್ತ ಮತ್ತು ಅಶೋಕ ರಸ್ತೆಯಲ್ಲಿ ಹಾದುಬಂದರು.
ಬಿ.ಜೆ.ಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಸುರೇಂದ್ರಗೌಡ, ಸುರೇಶ್, ದೊಣ್ಣಹಳ್ಳಿ ರಾಮಣ್ಣ, ದಾಮೋದರ್, ಸುಜಾತಮ್ಮ, ಮಂಜುಳಮ್ಮ, ಶಿವಮ್ಮ, ರತ್ನಮ್ಮ, ಮುನಿವೆಂಕಟಪ್ಪ, ಕೆಂಪರೆಡ್ಡಿ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
‘ಪ್ರತಿಭಾ ಪುರಸ್ಕಾರ’
ನಗರದ ಕುರುಬರಪೇಟೆ ವಾಸಿ ಡಿ.ಆರ್.ನರಸಿಂಹರಾಜು ಅವರ ಪುತ್ರಿ ಎನ್.ಲಕ್ಷ್ಮೀಯಾದವ್ ಅವರ ಸಂಗೀತ, ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಾದವ ಕಲ್ಚರಲ್ ಫೌಂಡೇಷನ್ ಟ್ರಸ್ಟ್ ವತಿಯಿಂದ ‘ಪ್ರತಿಭಾ ಪುರಸ್ಕಾರ’ ಮಾಡಿ ಗೌರವಿಸಲಾಯಿತು.
ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಎನ್.ಲಕ್ಷ್ಮೀಯಾದವ್ ತನ್ನ ಹತ್ತನೇ ವಯಸ್ಸಿನಲ್ಲೇ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಸಂಗೀತದೊಡನೆ ಚಿತ್ರಕಲೆ, ಹಿಂದಿ ರತ್ನ, ಕಂಪ್ಯೂಟರ್ ಶಿಕ್ಷಣ ಪಡೆದು ಜಿಲ್ಲಾಡಳಿತದಿಂದ ಅಸಾಧಾರಣ ಬಾಲ ಪ್ರತಿಭೆ ಪುರಸ್ಕಾರ ಪಡೆದಿದ್ದರು. ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಹಲವು ಬಹುಮಾನ ಪಡೆದು, ಆಂಧ್ರದ ತಿರುಪತಿ ತಿರುಮಲ ವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ. ಹಲವು ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳನ್ನು ಬರೆಯುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಕಲಾ ಪ್ರತಿಭೋತ್ಸವದಲ್ಲೂ ಪ್ರಶಸ್ತಿ ಪಡೆದಿದ್ದಾರೆ.
ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಾಧನೆಗಾಗಿ ನೀಡಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕೃಷ್ಣಯಾದವಾನಂದ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಯಾದವ ಕಲ್ಚರಲ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ದೇವರಾಜ್ ಹಾಜರಿದ್ದರು.
ಪಿಡಿಓ ಮೇಲೆ ಹಲ್ಲೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಹಂಚುವ ವಿಚಾರವಾಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಾಗೂ ಪಿಡಿಓ ನಡುವೆ ಮಾತಿಗೆ ಮಾತು ಬೆಳೆದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಂದ್ರ ಪಿಡಿಓ ಅಂಜನ್ಕುಮಾರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ. ಸುರೇಂದ್ರ ರಸ್ತೆಯಲ್ಲಿ ಹೋಗುತ್ತಿದ್ದ ಪಿಡಿಓ ಅಂಜನ್ಕುಮಾರ್ ಅವರನ್ನು ತಡೆದು ತುಮ್ಮನಹಳ್ಳಿ ಗ್ರಾಮದ ರತ್ನಮ್ಮ ಕೋಂ ಮುನಿಕೃಷ್ಣಪ್ಪ ಎಂಬುವವರು ಗ್ರಾಮ ಪಂಚಾಯತಿಗೆ ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ಅರ್ಜಿದಾರರ ಪರವಾಗಿ ನಾನು ಹೇಳಿದ ಹಾಗೆ ಕೆಲಸ ಮಾಡಿಕೊಡಬೇಕು ಇಲ್ಲವಾದಲ್ಲಿ ಗಮ ಪಂಚಾಯತಿಗೆ ಬರಲು ಬಿಡುವುದಿಲ್ಲ ಎಂದು ಬೆದರಿಸುವುದರೊಂದಿಗೆ ಪಿಡಿಓ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪಿಡಿಓ ಅಂಜನ್ಕುಮಾರ್ ನನ್ನ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಪ್ರಾಣಬೆದರಿಕೆ ಹಾಕುವ ಮೂಲಕ ದೈಹಿಕ ಹಲ್ಲೆ ನಡೆಸಿರುವ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ.ಸುರೇಂದ್ರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕ್ರೀಡಾಕೂಟ ಉದ್ಘಾಟನೆ
ಶಿಡ್ಲಘಟ್ಟ ತಾಲ್ಲೂಕಿನ ಈ. ತಿಮ್ಮಸಂದ್ರ ಮತ್ತು ದಿಬ್ಬೂರಹಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಸೋಮೇಶ್ವರಸ್ವಾಮಿ ದೇವಾಲಯದ ಹತ್ತಿರ ಮೈದಾನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟವನ್ನು ತಾಲ್ಲೂಕು ದೈಹಿಕ ಪರಿವೀಕ್ಷಕ ಶ್ರೀನಿವಾಸ್ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ, ಮುಖ್ಯ ಶಿಕ್ಷಕಿ ಡಿ.ಸಿ. ಉಮಾ, ಸಿ.ಆರ್.ಪಿ. ಜನಾರ್ಧನ್, ಸುಬ್ಬರಾಮು, ಶೇಷಾದ್ರಿ, ರಮೇಶ್, ಮುಜಾಫಿರ್, ಆಂಜಿನಪ್ಪ ಹಾಜರಿದ್ದರು.
ಕಂದಾಯ ಹಾಗೂ ಪಿಂಚಣಿ ಅದಾಲತ್
ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿ ಮಟ್ಟದ ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ ಕಂದಾಯ ಹಾಗು ಪಿಂಚಣಿ ಅದಾಲತ್ ಆಯೋಜಿಸಲಾಗಿದ್ದು ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಂಗಮಕೋಟೆ ನಾಡಕಚೇರಿಯ ಉಪತಹಸೀಲ್ದಾರ್ ಮುನಿಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ ಹಾಗು ಪಿಂಚಣಿ ಅದಾಲತ್ನಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಇರುವ ನಾಲ್ಕು ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಒಂದು ತಿಂಗಳ ಕಾಲ ಅದಾಲತ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಆಯಾ ಹೋಬಳಿಗೆ ಅಧಿಕಾರಿಗಳು ಬಂದಾಗ ಸಾರ್ವಜನಿಕರು ಸೂಕ್ತ ದಾಖಲೆಗಳ ಸಮೇತ ಹಾಜರಾದಲ್ಲಿ ಸ್ಥಳದಲ್ಲಿಯೇ ಅವರ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ. ಇದರಿಂದ ಸಾರ್ವಜನಿಕರು ವಿನಾಕಾರಣ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.
ಸಂದ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಸೌಲಭ್ಯ ಪಡೆಯಲು ೭ ಅರ್ಜಿ, ವಿಧವಾ ವೇತನಕ್ಕಾಗಿ ೬ ಅರ್ಜಿ, ಅಂಗವಿಕಲ ಮಾಸಾಶನಕ್ಕಾಗಿ ೧ ಅರ್ಜಿ ಹಾಗು ಆರ್.ಆರ್.ಟಿ ೩ ಮತ್ತು ೯ ರ ಕಾಲಂ ತಿದ್ದುಪಡಿಗಾಗಿ ೮ ಅರ್ಜಿ, ಅಮಶಾನ ಒತ್ತುವರಿಗೆ ಸಂಬಂದಿಸಿದಂತೆ ೧ ಅರ್ಜಿ ಸಲ್ಲಿಕೆಯಾಗಿವೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೆಹಮತ್ಜಾನ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಸೈಯ್ಯದ್ ಅನ್ವರ್ಪಾಷ, ಅಶ್ವತ್ಥಪ್ಪ, ಜಂಗಮಕೋಟೆ ರಾಜಸ್ವ ನಿರೀಕ್ಷಕ ಮೋಹನ್ಕುಮಾರ್, ಗ್ರಾಮ ಲೆಕ್ಕಿಗ ಅಮರೇಂದ್ರ, ಮುಖಂಡರಾದ ಮುನಿರೆಡ್ಡಿ ಮತ್ತಿತರರು ಹಾಜರಿದ್ದರು.

