Home Blog Page 455

ತಾಲ್ಲೂಕು ಮಟ್ಟಕ್ಕೆ ಆಯ್ಕೆ

0

ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಶಿಡ್ಲಘಟ್ಟ ನಗರ ಕ್ಲಸ್ಟರ್ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ: ಅಲಿಷಾ ಅಂಜುಮ್ – ೧೦೦ ಮೀ. ಓಟ, ಷಟಲ್ ಬ್ಯಾಡ್ಮಿಂಟನ್
ಅರ್ಚನ, ಆರ್ಷಿಯಾ ಭಾನು – ಷಟಲ್ ಬ್ಯಾಡ್ಮಿಂಟನ್
ಕನ್ನಡ ಹಿರಿಯ ಪ್ರಾಥಮಿಕ ಶಾಲೆ:
ಬಾಲಕರ ವಿಭಾಗ: ೪೦೦ ಮೀ. ಓಟ, ಶಾಟ್ಪುಟ್, ವಾಲೀಬಾಲ್, ಫುಟ್ಬಾಲ್, ಯೋಗಾಸನ, ಬಾಲ್ ಬ್ಯಾಡ್ಮಿಂಟನ್.
ಬಾಲಕಿಯರ ವಿಭಾಗ: ೪೦೦ ಮೀ. ಓಟ, ವಾಲೀಬಾಲ್, ಯೋಗಾಸನ, ಬಾಲ್ ಬ್ಯಾಡ್ಮಿಂಟನ್.
ಪ್ರೌಢಶಾಲೆ:
ಬಾಲಕರ ವಿಭಾಗ:
೧೦೦ ಮೀ. ಓಟ: ನವೀನ ಡಿ.
೨೦೦ ಮೀ. ಓಟ: ವೇಣು ಎಸ್.
ಡಿಸ್ಕಸ್ ಥ್ರೋ: ವೇಣು ಎಸ್., ರೋಶನ್ ಪಾಷಾ
ಜಾವೆಲಿನ್ ಥ್ರೋ: ವೇಣು ಎಸ್.
೪*೧೦೦ ರಿಲೇ: ವೇಣು ಎಸ್., ರೋಶನ್ ಪಾಷಾ, ನವೀನ ಬಿ.
ಷಟಲ್ ಬ್ಯಾಡ್ಮಿಂಟನ್ – ಪ್ರಥಮ ಸ್ಥಾನ
ಬಾಲ್ ಬ್ಯಾಡ್ಮಿಂಟನ್ – ಪ್ರಥಮ ಸ್ಥಾನ
ಫುಟ್ಬಾಲ್ – ಪ್ರಥಮ ಸ್ಥಾನ
ಬಾಲಕಿಯರ ವಿಭಾಗ: ೧೫೦೦ ಮೀ. ಓಟ: ಅಸ್ಫಿಯಾ ಸುಲ್ತಾನಾ
ಜಾವೆಲಿನ್ ಥ್ರೋ: ಮೌನಿಕ ಕೆ. ಸಿ., ಅಕ್ಷಯಾ
೩೦೦೦ ಮೀ. ನಡಿಗೆ: ಅಕ್ಷಯಾ

ಹಾಲನ್ನು ಸುರಿದು ಪೋಲು ಮಾಡಬೇಡಿ

0

ಮೂಢನಂಬಿಕೆಗಳಿಗೆ ಬಲಿಯಾಗದಿರಿ, ಮನುಷ್ಯತ್ವಕ್ಕೆ ಬೆಲೆ ಕೊಡಿ. ಹಾಲನ್ನು ಕುಡಿಯದ ನಾಗರಹಾವಿನ ಹೆಸರಿನಲ್ಲಿ ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡದಿರಿ. ಅಪೌಷ್ಠಿಕತೆಯಿಂದ ಬಳಲುವ ಕಂದಮ್ಮಗಳಿಗೆ ಅದೇ ಹಾಲನ್ನು ನೀಡುವ ಮೂಲಕ ಮಾನವತೆಗೆ ಅರ್ಥಕೊಡೋಣ ಎಂದು ಬಹುಜನ ವಿದ್ಯಾರ್ಥಿ ಸಂಘದ ಸದಸ್ಯರು ಕರೆ ನೀಡಿದರು.
ನಗರದ ಸಿದ್ಧಾರ್ಥ ಕಾಲೋನಿಯಲ್ಲಿ ಸೋಮವಾರ ಅಂಗನವಾಡಿ ಮಕ್ಕಳಿಗೆ ಹಾಲನ್ನು ನೀಡಿ ಅವರು ನಾಗರಪಂಚಮಿಯಂದು ವಿಗ್ರಹಕ್ಕೆ ಮತ್ತು ಹುತ್ತಕ್ಕೆ ಅವೈಜ್ಞಾನಿಕವಾಗಿ ಹಾಲನ್ನು ಸುರಿದು ಪೋಲು ಮಾಡಿರುವ ಬಗ್ಗೆ ವಿಷಾಧಿಸಿದರು.
ನಮ್ಮ ಸಮಾಜದಲ್ಲಿ ಎಷ್ಟೋ ಮಕ್ಕಳು, ಕುಟುಂಬಗಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಂತಹ ಬಡ ಮಕ್ಕಳಿಗೆ ಹಾಲನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯೋಣ. ಮೂಢ ಕಂದಾಚಾರಗಳಿಗೆ ಬಲಿಯಾಗುವುದು ಬೇಡ ಎಂದು ಪ್ರತಿಪಾದಿಸಿದರು.
ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ದಿಲೀಪ್, ಕೋಆರ್ಡಿನೇಟರ್ ಮೂರ್ತಿ, ಸದಸ್ಯರಾದ ದೇವರಾಜ್, ಗಂಗಾಧರ್, ನರೇಶ್ಬಾಬು, ಸುಂದರರಾಜ್, ಕೆ.ರವಿ, ರಾಮು, ವೆಂಕಟರಾಜು, ಉಸ್ಮಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಕ್ರಮ ಒತ್ತುವರಿ ತೆರವುಗೊಳಿಸಲು ಮನವಿ

0

ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮಕ್ಕೆ ಸೇರಿರುವ 86 ಎಕರೆಯಷ್ಟು ಜಮೀನನ್ನು ಬೇರೆ ತಾಲ್ಲೂಕಿನವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ತಕ್ಷಣ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಶಿಡ್ಲಘಟ್ಟದ ಗಡಿಭಾಗವನ್ನು ಗುರುತಿಸಿಕೊಡಬೇಕೆಂದು ರೈತ ಸಂಘದ ಸದಸ್ಯರು ತಹಶೀಲ್ದಾರರಿಗೆ ಸೋಮವಾರ ಮನವಿಯನ್ನು ಸಲ್ಲಿಸಿದರು.
ಶೆಟ್ಟಹಳ್ಳಿ ಗ್ರಾಮದ ಸರ್ವೆ ನಂ.78 ರ 86 ಎಕರೆ ಜಮೀನು ಶೆಟ್ಟಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿದೆ. ಈ ಗ್ರಾಮದ ಜನಸಂಖ್ಯೆ 3000 ಇದ್ದು, ತೀರಾ ಬಡ ಕುಟುಂಬದವರಿದ್ದಾರೆ. ಕೆಲವರಿಗಂತೂ ಕೃಷಿ ಜಮೀನೇ ಇಲ್ಲವಾಗಿದೆ. ಈ ಜಮೀನನ್ನು ಬೇರೆ ತಾಲ್ಲೂಕಿನವರು ಅಕ್ರಮವಾಗಿ ಪ್ರವೇಶಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಸರ್ಕಾರಿ ಗೋಮಾಳದ ಜಮೀನನ್ನು ಸರ್ವೆ ಮಾಡಿ ಗಡಿಭಾಗವನ್ನು ಗುರುತಿಸಿ, ಶೆಟ್ಟಹಳ್ಳಿ ಗ್ರಾಮದ ರೈತರಿಗೆ ಮೀಸಲಿಡಬೇಕು. ಶೆಟ್ಟಹಳ್ಳಿ ಗ್ರಾಮದ ರೈತ ಕುಟುಂಬಗಳಿಗೆ ಸಾಗುವಳಿ ಮಾಡಿಕೊಳ್ಳಲು ಕೊಡುವ ಮೂಲಕ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ನಾಗರಾಜ, ಎಸ್.ಎನ್.ಮಾರಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ದ್ಯಾವಪ್ಪ, ಬಾಲಕೃಷ್ಣ, ಶಂಕರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಾವೆಷ್ಟು ಕೊಳ್ಳುಬಾಕರು? – ಭಾಗ 3

0

ಸದಾ ಎಚ್ಚರದಲ್ಲಿರಬೇಕಾದ ಗ್ರಾಹಕ
ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಗಾರ ತನ್ನ ವಸ್ತುಗಳನ್ನು ಮಾರಾಟಮಾಡಲು ಏನೆಲ್ಲಾ ತಂತ್ರಗಳನ್ನು ಬಳಸುವುದು ಸಹಜವೂ ಕಾನೂನುಬದ್ಧವೂ ಆಗಿದೆ. ಆದರೆ ಗ್ರಾಹಕ ಮಾತ್ರ ಸದಾ ಎಚ್ಚರದಲ್ಲಿರಬೇಕಾಗುತ್ತದೆ. ಸೂಕ್ತವಾದ ಕಾನೂನುಗಳಿಲ್ಲದ ಮತ್ತು ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿರುವ ಭಾರತದಂತಹ ದೇಶದಲ್ಲಿ ಗ್ರಾಹಕ ಸ್ವಲ್ಪವೇ ಎಚ್ಚರ ತಪ್ಪಿದರೂ ಮೋಸಹೋಗುವ ಸಾಧ್ಯತೆ ಇರುತ್ತದೆ.
ನಾವೆಲ್ಲಾ ಏನನ್ನಾದರೂ ಕೊಳ್ಳುವ ಮೊದಲು ನಮ್ಮ ಅಗತ್ಯಗಳು, ಆದ್ಯತೆಗಳು ಮತ್ತು ಆರ್ಥಿಕ ಪರಿಸ್ಥಿತಿಯ ಬಗೆಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರಬೇಕು, ಕೊಳ್ಳುವ ಉದ್ದೇಶವಿಲ್ಲದೆ ಅಥವಾ ಸ್ನೇಹಿತರೊಡನೆ ಮಾರುಕಟ್ಟೆಗೆ ಹೋದಾಗ ಸುಮ್ಮನೆ ಕಣ್ಣಾಡಿಸಿ ಎಲ್ಲಾ ವಸ್ತುಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಆದರೆ ಯಾವುದೋ ಮಾರಾಟದ ತಂತ್ರದ ಬಲೆಗೆ ಬಿದ್ದು ಏನನ್ನೂ ಕೊಳ್ಳಬಾರದು. ನಿಜವಾದ ಅಗತ್ಯವಿದ್ದಾಗ ಮಾರುಕಟ್ಟೆಯಲ್ಲು ಹುಡುಕಿದರೆ ಅದೇ ವಸ್ತು ಅಥವಾ ಅದಕ್ಕಿಂತ ಉತ್ತಮ ವಸ್ತು ಇನ್ನೂ ಕಡಿಮೆ ಬೆಲೆಗೆ ಸಿಗುವ ಸಂಭವವೇ ಹೆಚ್ಚಾಗಿರುತ್ತದೆ!
ಅನಗತ್ಯವಾದದ್ದನ್ನು ಕೊಳ್ಳುತ್ತಾ ಹೋಗುವುದು ಎಂದರೆ ನಮ್ಮ ಜೇಬುಗಳಿಗಷ್ಟೇ ಅಲ್ಲ ಪರಿಸರಕ್ಕೂ ಭಾರೀ ಹಾನಿಕರ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು.
ಸ್ಟಾಂಡರ್ಡೈಸೇಷನ್
ಕೊಳ್ಳುಬಾಕತನವನ್ನು ನಿರಂತರವಾಗಿ ಗ್ರಾಹಕರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಲು ಉಪಯೋಗಿಸುವ ಇನ್ನೊಂದು ತಂತ್ರವೆಂದರೆ ಎಲ್ಲವನ್ನೂ ಸ್ಟಾಂಡರ್ಡೈಸ್ ಮಾಡುವುದು. ವಸ್ತುಗಳನ್ನು ದೊಡ್ಡಮಟ್ಟದಲ್ಲಿ ತಯಾರಿಸುವ ಮತ್ತು ಮಾರಾಟಮಾಡುವ ಅನುಕೂಲಕ್ಕಾಗಿ ಬಿಡಿಭಾಗಗಳನ್ನು ಸ್ಟಾಂಡರ್ಡೈಸ್ ಮಾಡಲಾಗುತ್ತದೆ. ಇವತ್ತು ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು, ವಾಹನ ಬಿಡಿಭಾಗಗಳು ಹೀಗೆ ಬಹುರಾಷ್ಟ್ರೀಯ ಕಂಪನಿಗಳು ಮಾರಾಟಮಾಡುವ ಎಲ್ಲಾ ವಸ್ತುಗಳನ್ನು ಸ್ಟಾಂಡರ್ಡೈಸ್ ಮಾಡಲಾಗಿದೆ. ಅಂದರೆ ಇವುಗಳ ಬಿಡಿಭಾಗಗಳ ಅಳತೆಗಳು, ತಂತ್ರಜ್ಞಾನಗಳೆಲ್ಲಾ ಇಡೀ ಪ್ರಪಂಚದಲ್ಲೆಡೆ ಒಂದೇ ಆಗಿರುತ್ತದೆ. ಇದರಿಂದ ಸಾಕಷ್ಟು ಅನುಕೂಲಗಳಿವೆ ಎನ್ನುವುದು ನಿಜ.
ದುರಂತವೆಂದರೆ ಹೀಗೆ ಸ್ಟಾಂಡರ್ಡೈಸ್ ಮಾಡುವ ಪ್ರಕ್ರಿಯೆ ಬರಿಯ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮೆಲ್ಲರ ಡಿಎನ್‍ಎಗಳಲ್ಲಿ ಸೇರಿಕೊಂಡು ನಮ್ಮ ಜೀವನ ಶೈಲಿಯೇ ಆಗಿಬಿಟ್ಟಿದೆ. ಒಂದು ತಮಾಷೆಯ ಉದಾಹರಣೆ ನೋಡಿ. ಹಿಂದೆಲ್ಲಾ ಹೆಣ್ಣುಮಕ್ಕಳು ಹುಬ್ಬುಗಳನ್ನು ಕತ್ತರಿಸುತ್ತಿರಲಿಲ್ಲ. ಆಗ ಎಂತಹ ವೈವಿಧ್ಯಮಯವಾದ ಹುಬ್ಬುಗಳನ್ನು ನೋಡುವುದು ಸಾಧ್ಯವಿತ್ತು. ಪ್ರತಿಯೊಬ್ಬ ಮಹಿಳೆಯ ಹುಬ್ಬು ಅವಳದೇ ಮುಖದ ವೈಶಿಷ್ಟ್ಯವಾಗಿತ್ತು. ಈಗ ಎಲ್ಲರದ್ದೂ ಸ್ಟಾಂಡರ್ಡೈಸ್ ಆದ ಕಮಾನಿನಂತಹ ಹುಬ್ಬು! ಸ್ತ್ರೀಪುರುಷರ ಇತರ ಅಂಗದ ಸೌಂದರ್ಯದ ಕಲ್ಪನೆಯನ್ನೂ ಹೀಗೇ ಸ್ಟಾಂಡರ್ಡೈಸ್ ಮಾಡಲಾಗಿದೆ. ಇದಿಷ್ಟೇ ಅಲ್ಲ ನಮ್ಮ ಜೀವನ ಮಟ್ಟದ ಮಾನದಂಡಗಳು, ವಿದ್ಯಾಭ್ಯಾಸದ ರೀತಿ, ಮನೆಕಟ್ಟುವ ಮಾದರಿಗಳು, ಸುಖ ದುಃಖದ ಕಲ್ಪನೆ, ಹೀಗೆ ಎಲ್ಲವನ್ನೂ ಸ್ಟಾಂಡರ್ಡೈಸ್ ಮಾಡಲಾಗಿದೆ. ಈ ರೀತಿ ಒಂದು ಆದರ್ಶ ಸುಸಜ್ಜಿತ ಬದುಕಿನ ಕಲ್ಪನೆಯನ್ನು ಜನರ ತಲೆಯಲ್ಲಿ ತುಂಬಿದರೆ ಈ ಕಾರ್ಪೋರೇಟ್‍ಗಳಿಗೆ ವಿಶ್ವಮಟ್ಟದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಸಾಧ್ಯವಾಗುತ್ತದೆ. ಪ್ರಾದೇಶಿಕ ವೈಶಿಷ್ಟ್ಯಗಳನ್ನು ಮತ್ತು ಸಣ್ಣ ಉದ್ಯಮಿಗಳನ್ನು ನಾಶಮಾಡಲು ಸಾಧ್ಯವಾದಾಗ ಮಾತ್ರ ಜಾಗತೀಕರಣ ಯಶಸ್ವಿಯಾಗುತ್ತದೆ ಎಂದು ಇವರಿಗೆಲ್ಲಾ ಬಹಳ ಹಿಂದಯೇ ಗೊತ್ತಿತ್ತು. ಹಾಗಾಗಿ ಈ ನಿಟ್ಟಿನಲ್ಲಿ ಕಳೆದೆರೆಡು ಶತಮಾನಗಳಿಂದ ಅವರೆಲ್ಲಾ ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ.
ಸಾಲವೆಂಬ ಶೂಲ
ಕೊಳ್ಳುಬಾಕತನಕ್ಕೆ ಇಂಬುಕೊಡಲು ಸೃಷ್ಟಿಸಿರುವ ಇನ್ನೊಂದು ವ್ಯವಸ್ಥಿತ ಜಾಲವೆಂದರೆ ಸುಲುಭ ಸಾಲವನ್ನು ನೀಡುವುದು. ಇತ್ತೀಚೆಗೆ ವಾಹನಗಳು, ಟೀವಿ ಮುಂತಾದವುಗಳನ್ನು ನೀವು ಖರೀದಿಸಲು ಹೋದರೆ ಮಾರಾಟಗಾರನ ಸ್ಥಳದಲ್ಲಿಯೇ ಸಾಲ ಪಡೆಯಲು ಸಾಧ್ಯವಾಗುತ್ತದೆ. ಹಳೆಯ ತಲೆಮಾರಿನವರಲ್ಲಿ ಹೆಚ್ಚಿನವರು ಉಳಿತಾಯದಿಂದ ಮಾತ್ರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇವತ್ತಿನ ಯವಕರು ಕೆಲಸ ಸಿಕ್ಕೊಡನೆ ಮೊಬೈಲು, ಟೀವಿ, ಬೈಕ್ ಕೊಳ್ಳಲು ಸಾಲದ ಮೊರೆ ಹೊಗುತ್ತಾರೆ. ಈ ರೀತಿಯ ಸಾಲದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎನ್ನುವುದು ಪಾಶ್ಚಿಮಾತ್ಯ ಆರ್ಥಶಾಸ್ತ್ರಜ್ಞರ ತಿಳಿವಳಿಕೆ. ಹೀಗೆ ಸಾಲ ಕೊಡುವುದರಿಂದ ದೇಶ ಉದ್ಧಾರವಾಗುತ್ತದೆಯೋ ಇಲ್ಲವೋ ಅನ್ನುವುದು ಚರ್ಚಾಸ್ಪದ. ಆದರೆ ಸಾಲ ತೆಗೆದುಕೊಳ್ಳುವವರು ಮಾತ್ರ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ತಿಂಗಳು ತಿಂಗಳು ಸಾಲದ ಕಂತುಗಳಿಗಾಗಿ ಮೀಸಲಿಡಬೇಕಾಗುತ್ತದೆ ಎನ್ನುವುದಂತೂ ಖಾತ್ರಿ. ಹೀಗಿದ್ದರೂ ಒಂದು ಸಾಲ ತೀರಿದ ನಂತರ ಮತ್ತೊಂದು, ನಂತರ ಇನ್ನೊಂದು… ಹೀಗೆ ಮುಂದುವರೆಸುತ್ತಲೇ ಇರುತ್ತಾರೆ. ಇವರೆಲ್ಲಾ ಬಿಳಿ ಕಾಲರಿನ ಜೀತದಾಳುಗಳಲ್ಲದೇ ಮತ್ತೇನು?
ಸಾಲ ಕೊಳ್ಳುವುದು ಅವಮಾನಕರ ಎಂದುಕೊಳ್ಳುವ ಕಾಲವೊಂದಿತ್ತು. ಇವತ್ತಿನ ಯುವಕರನ್ನು ಕೇಳಿದರೆ, “ಟಾಟಾ, ಬಿರ್ಲಾ, ಅಂಬಾನಿಗಳೆ ಸಾಲ ತೊಗೊಳ್ತಾರೆ. ಅಷ್ಟೇ ಏನು ಭಾರತ ಸರ್ಕಾರವೇ ಸಾಲದಲ್ಲಿ ನಡೆಯುತ್ತಾ ಇದೆ. ಇನ್ನು ನಮ್ಮದೆಲ್ಲಾ ಯಾವ ಲೆಕ್ಕ” ಎನ್ನುವ ಉಡಾಫೆಯ ಮಾತು ಕೇಳಿಬರುತ್ತದೆ. ಉದ್ಯಮಿಗಳು ಅಥವಾ ಸರ್ಕಾರ ತೆಗೆದುಕೊಳ್ಳುವ ಸಾಲ ಬಂಡವಾಳ ಹೂಡಿಕೆಯ ರೂಪದಲ್ಲಿರುತ್ತದೆ. ಆದರೆ ವ್ಯಕ್ತಿಯೊಬ್ಬ ವ್ಯಾಪಾರ ವ್ಯವಹಾರಗಳ ಉದ್ದೇಶದ ಹೊರತಾಗಿ ಸಾಲ ಕೊಳ್ಳುವುದು ಅಂದರೆ ನಾವು ನಮ್ಮ ನಾಳೆಯ ಆದಾಯವನ್ನು ಇವತ್ತೇ ಖರ್ಚು ಮಾಡುತ್ತಿದ್ದೇವೆ ಎಂದರ್ಥ. ಇದು ಸಾಲಪಡೆದವನನ್ನು ಹೊರತಾಗಿಸಿ ಇನ್ನೆಲ್ಲರನ್ನೂ, ಕೊನೆಗೆ ದೇಶವನ್ನೂ ಉದ್ಧಾರ ಮಾಡುತ್ತದೆ! ಇದರಿಂದಾಗಿ ನಾವು ನಮ್ಮ ಮುಂದಿನ ತಲೆಮಾರಿಗೆ ಆಸ್ತಿಯನ್ನು ಬಿಟ್ಟುಹೋಗುವ ಬದಲು ಸಾಲದ ಹೊರೆಹೊರಿಸಿ ಹೋಗುವ ಅಪಾಯವೇ ಹೆಚ್ಚಿರುತ್ತದೆ. ಅಪ್ಪ ಅಮ್ಮ ಮಾಡಿದ ಸಾಲ ತೀರಿಸಲು ಮಕ್ಕಳನ್ನು ಜೀತದಾಳುಗಳನ್ನಾಗಿಸುವ ಪದ್ದತಿ ಈಗ ಬೇರೆ ರೂಪದಲ್ಲಿ ಮುಂದುವರೆಯುತ್ತಿದೆ ಅಷ್ಟೆ!
ಬಗೆಬಗೆಯ ತಂತ್ರಗಳು
ಗ್ರಾಹಕನಿಗೆ ಅನಗತ್ಯವಾದದ್ದನ್ನು ಕೊಳ್ಳಲು ಪ್ರೇರಿಪಿಸಲು ಇವತ್ತು ಹಲವಾರು ಆಮಿಷಗಳನ್ನು ಒಡ್ಡಲಾಗುತ್ತದೆ. ಒಂದಕ್ಕೆ ಒಂದು ಉಚಿತ, ಭಾರೀ ರಿಯಾಯಿತಿ, ತೀರುವಳಿ ಮಾರಾಟ, ವಷರ್Àದ ಕೊನೆಯ ಮಾರಾಟ, ಹಬ್ಬದ ಮಾರಾಟ, ಎಕ್ಸ್‍ಪೋರ್ಟ್ ಸಪ್ರ್ಲ್‍ಸ್, ಕಾಂಬೋ ಆಫರ್- ಹೀಗೆ ನಿಘಂಟಿನಿಂದ ಹೊಸಹೊಸ ಶಬ್ದಗಳನ್ನು ಹೆಕ್ಕಲಾಗುತ್ತದೆ. ಕೊನೆಗೆ ಗ್ರಾಹಕನಿಗೆ ತಾನು ಕೊಳ್ಳುತ್ತಿರುವುದು ನಿಜವಾದ ತನ್ನ ಅಗತ್ಯವೇ, ಅದಕ್ಕೆ ಕೊಡುವ ಬೆಲೆ ಸೂಕ್ತವಾದದ್ದೇ ಎನ್ನವುದನ್ನೂ ತಿಳಿಯಲಾಗದ ಗೊಂದಲದಿಂದ ಅತೃಪ್ತನಾಗಿಯೇ ಉಳಿಯುತ್ತಾನೆ.
ಮುಗಿಯಿತು.
ವಸಂತ್ ನಡಹಳ್ಳಿ

‘ಕವಿಯ ನೆನೆದು – ಕವಿತೆ ಕೇಳಿ’

0

ಶಿಶುನಾಳ ಶರೀಫರ ‘ನಾನಾರಿಗಲ್ಲಾದವಳು, ಬಿದಿರು ನಾನಾರಿಗಲ್ಲಾದವಳು’ ಹಾಡಿಗೆ ವಿದ್ಯಾರ್ಥಿಗಳು ದನಿಯಾದರು. ತಮ್ಮ ಪಾಠದಲ್ಲಿರುವ ಪದ್ಯ ರಾಗವಾಗಿ, ಇಂಪಾಗಿ ಕೇಳಿದಾಗ ಅವರೂ ರಾಗವಾಗಿ ದನಿಗೂಡಿಸಿದರು.
ನಗರದ ದಿ ಕ್ರೆಸೆಂಟ್ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಕವಿಯ ನೆನೆದು – ಕವಿತೆ ಕೇಳಿ’ ಎಂಬ ಕನ್ನಡದ ಹೆಸರಾಂತ ಕವಿಗಳ ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಜಾನಪದ ಸಂಶೋಧಕ ಡಾ.ಕೆ.ರವಿಕುಮಾರ್ ಹಾಡುತ್ತಿದ್ದರೆ ವಿದ್ಯಾರ್ಥಿಗಳು ಜೊತೆಯಲ್ಲಿ ಹಾಡಿ ಆನಂದಿಸಿದರು.
ರಾಷ್ಟ್ರಕವಿ ಕುವೆಂಪು ರಚಿಸಿರುವ ‘ಬಾರಿಸು ಕನ್ನಡ ಡಿಂಡಿಮವ’, ‘ಓ ನನ್ನ ಚೇತನಾ’; ವರಕವಿ ಬೇಂದ್ರೆ ರಚನೆಯ ‘ಶ್ರಾವಣ ಬಂದು ನಾಡಿಗೆ’, ‘ಕುರುಡು ಕಾಂಚಾಣ’; ರಾಷ್ಟ್ರಕವಿ ಜಿ.ಎಸ್.ಎಸ್ ರಚನೆಯ ‘ಎಲ್ಲೋ ಹುಡುಕಿದೆ’, ‘ಆಕಾಶದ ನೀಲಿಯಲ್ಲಿ’; ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ರಚಿಸಿರುವ ‘ಬಳೆಗಾರ ಚನ್ನಯ್ಯ’, ‘ಕಿಟಕಿಯ ಬಾಗಿಲು’; ನಿತ್ಯೋತ್ಸವ ಕವಿ ಪ್ರೋ.ಕೆ.ಎಸ್.ನಿಸಾರ್ ಅಹಮದ್ ಅವರು ರಚಿಸಿರುವ ‘ನಿತ್ಯೋತ್ಸವ’, ‘ಕುರಿಗಳು ಸರ್ ಕುರಿಗಳು’ ಸೇರಿದಂತೆ ಹಲವು ಜಾನಪದ ಗೀತೆಗಳನ್ನು ಹಾಡಲಾಯಿತು. ತಬಲಾ ಕಲಾವಿದ ಮುನಿವೆಂಕಟಪ್ಪ, ಹಾರ್ಮೋನಿಯಂ ಕಲಾವಿದ ಕೇಶವಪ್ಪ ಸಾಥ್ ನೀಡಿದರು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕವಿಗಳ ಪರಿಚಯವನ್ನು ಮಾಡಿಕೊಟ್ಟರು.
ದಿ ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಯೂಸುಫ್, ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ, ಕ.ಸಾ.ಪ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಮೃತಕುಮಾರ್, ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ಜಾನಪದ ಗಾಯಕ ದೇವರಮಳ್ಳೂರು ಮಹೇಶ್, ಮಂಜುನಾಥ್, ದೇವರಾಜ್, ಆರ್.ಕೃಷ್ಣಪ್ಪ, ಶಾಲಾ ಶಿಕ್ಷಕರು ಹಾಜರಿದ್ದರು.

ಡಿ.ಸಿ.ಸಿ. ಬ್ಯಾಂಕಿನಿಂದ ನಗದು ರೂಪದಲ್ಲಿ ಸಾಲ ವಿತರಣೆ

0

ಬ್ಯಾಂಕುಗಳಿಂದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದರಲ್ಲಿ ಮಹಿಳೆಯರು ಶೇ. ೯೮ ರಷ್ಟು ಯಶಸ್ವಿಯಾಗಿದ್ದಾರೆ. ಡಿ.ಸಿ.ಸಿ.ಬ್ಯಾಂಕಿನಿಂದ ನೀಡುತ್ತಿರುವ ಸಾಲವು ದುರ್ಬಳಕೆಯಾಗುವುದನ್ನು ತಪ್ಪಿಸಲು ನಗದು ರೂಪದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಕೆ.ವಿ.ಭವನದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಸ್ವಸಹಾಯ ಗುಂಪುಗಳಿಗೆ ೨ ಕೋಟಿ ೩ ಲಕ್ಷ ೮೧ ಸಾವಿರ ರೂಪಾಯಿಗಳ ಸಾಲ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಅವರ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ವಿತರಿಸುವ ವಿಶೇಷ ಯೋಜನೆಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅನುಷ್ಠಾನಗೊಳಿಸಿದ್ದು, ಮಹಿಳೆಯರು ತಾವು ಪಡೆದುಕೊಂಡಂತಹ ಸಾಲಗಳನ್ನು ಸದ್ಭಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು.
ಮಹಿಳೆಯರ ಅಭಿವೃದ್ಧಿಗಾಗಿ ಶೇ. ೩೩ ಪೈಸೆ ಬಡ್ಡಿಧರದಲ್ಲಿ ೫ ಲಕ್ಷದವರೆಗೂ ಸಾಲಗಳನ್ನು ನೀಡಲಾಗುತ್ತಿದೆ, ರೈತರಿಗೆ ೩ ಲಕ್ಷ ರೂಪಾಯಿಗಳವರೆಗೂ ಬಡ್ಡಿರಹಿತ ಸಾಲವನ್ನೂ ಬ್ಯಾಂಕಿನ ಮುಖಾಂತರ ವಿತರಣೆ ಮಾಡಲಾಗುತ್ತಿದ್ದು, ರೈತರೂ ಕೂಡಾ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಈ ಭಾಗದ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಕೆ.ಸಿ.ವ್ಯಾಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ನರಸಾಪುರ ಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಿ, ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ. ಕೋಲಾರ ಭಾಗದ ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ, ಹೆಬ್ಬಾಳ-ನಾಗವಾರ ಕೆರೆಯಲ್ಲಿನ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಕೆರೆ, ಹೊಸಹುಡ್ಯ ಕೆರೆ, ಕೇಶವಾರ ಕೆರೆ, ಅಮ್ಮನಕೆರೆ ನಂತರ ಬದ್ದನಕೆರೆಯನ್ನು ತುಂಬಿಸಲಾಗುತ್ತದೆ. ಇದರಿಂದ ಈ ಭಾಗದಲ್ಲಿನ ರೈತರಿಗೂ ಅನುಕೂಲವಾಗಲಿದ್ದು, ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಪಕ್ಷಗಳ ಶಾಸಕರುಗಳ ಸಹಕಾರವಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಡಿ.ಸಿ.ಸಿ ಬ್ಯಾಂಕ್ ತಮ್ಮ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ನೀಡುತ್ತಿದ್ದು ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೀರೋ ಅದಕ್ಕಾಗಿಯೇ ಹಣ ಬಳಸಿ ಸಕಾಲದಲ್ಲಿ ಸಾಲ ಮರು ಪಾವತಿಸುವುದರಿಂದ ಬ್ಯಾಂಕುಗಳು ಅಭಿವೃದ್ಧಿಯಾಗುತ್ತದೆ ಹಾಗು ಮತ್ತೊಬ್ಬರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಎಲ್ಲರೂ ಸಕಾಲದಲ್ಲಿ ಸಾಲ ಮರು ಪಾವತಿಸಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತುಕೊಟ್ಟಿದ್ದು, ದಿವಾಳಿಯ ಅಂಚಿನಲ್ಲಿದ್ದ ಡಿ.ಸಿ.ಸಿ. ಬ್ಯಾಂಕುಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರ ಆರ್ಥಿಕ ಸಬಲತೆಗೆ ನಾಂದಿ ಹಾಡಿದೆ. ಆದ್ದರಿಂದ ಮಹಿಳೆಯರು, ಸಾಮಾಜಿಕವಾಗಿ, ಆರ್ಥಿಕವಾಗಿ, ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಕಡೆಗೆ ಗಮನ ನೀಡಬೇಕು, ಮಕ್ಕಳನ್ನು ಶೈಕ್ಷಣಿಕವಾಗಿ ಬೆಳವಣಿಗೆ ಮಾಡುವ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು, ಎಂದರು.
ಡಿ.ಸಿ.ಸಿ.ಬ್ಯಾಂಕಿನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಮಾತನಾಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ಚಿಂತಾಮಣಿ ತಾಲ್ಲೂಕಿನ ವೆಂಕಟರಮಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮಳ್ಳೂರು ಎಸ್.ಎಫ್.ಸಿ.ಎಸ್ ನ ಅಧ್ಯಕ್ಷ ವೆಂಕಟರೆಡ್ಡಿ, ಉಪಾಧ್ಯಕ್ಷ ನಾರಾಯಣಸ್ವಾಮಿ, ಭಕ್ತರಹಳ್ಳಿ ಮುನೇಗೌಡ, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಎನ್.ಆನಂದ್, ಮೇಲ್ವಿಚಾರಕ ಲಿಂಗರಾಜು, ಉಷಾರಾಣಿ, ಎಸ್.ನಾಗರಾಜ್, ಮಂಜುನಾಥ.ಎಂ.ಎಸ್, ಕೆ.ದೇವಿಕ, ಅಕ್ಕಲಪ್ಪ, ಭೀಮಪ್ಪ, ಸದಾಶಿವರೆಡ್ಡಿ ಮುಂತಾದವರು ಹಾಜರಿದ್ದರು.

ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಘಟಕದ ನೂತನ ಕಾರ್ಯಾಲಯ

0

ಸೌಲಭ್ಯ ವಂಚಿತ ಹಾಗೂ ನೊಂದ ರೈತರ ಪರ ಧ್ವನಿಯಾಗಿ ಹೋರಾಡಲು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪದಾಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ತಾಲ್ಲೂಕು ಘಟಕದ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲುಸೀಮೆ ಭಾಗದಲ್ಲಿನ ರೈತರು, ಸುಮಾರು ೧,೩೦೦ ಅಡಿಗಳ ಆಳದಿಂದ ಕೊಳವೆಬಾವಿ ಮೂಲಕ ತೆಗೆದು ಬೆಳೆಯುವ ಬೆಳೆಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುತ್ತಿದ್ದಾರೆ.
ಇದಲ್ಲದೇ ರೈತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ತಡೆಗಟ್ಟಬೇಕಾದರೆ ರೈತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಈ ನಿಟ್ಟಿನಲ್ಲಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ಪದಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಸಿಗುವಂತೆ ಮಾಡಲು ನಿರಂತರ ಹೋರಾಟಗಳನ್ನು ನಡೆಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ವೇಣುಗೋಪಾಲ್, ಅಂಬರೀಷ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಶ್ರೀಚನ್ನಕೇಶವಸ್ವಾಮಿ ಪ್ರಾಣ ಪ್ರತಿಷ್ಠಾಪನೆ

0

ಆಗಸ್ಟ್ ೬ ಮತ್ತು ೭ ರಂದು ತಾಲ್ಲೂಕಿನ ಕೊತ್ತನೂರು ಗ್ರಾಮದ ಶ್ರೀದೇವಿ ಭೂದೇವಿ ಸಹಿತ ಶ್ರೀಚನ್ನಕೇಶವಸ್ವಾಮಿ ದೇವಾಲಯದ ನೂತನ ಚಿರಬಿಂಬ ಪ್ರಾಣ ಪ್ರತಿಷ್ಠಾಪನೆ ಮತ್ತು ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಆಗಸ್ಟ್ ೬ ರ ಸಂಜೆ ೫ ಗಂಟೆಗೆ ಮಂಗಳವಾದ್ಯ, ವೇದಘೋಷ ಸಹಿತ ಯಾಗಶಾಲ ಪ್ರವೇಶ, ಪುಣ್ಯಾಹ ವಾಚನ, ರಕ್ಷಾಬಂಧನ, ಕಳಸಾರಾಧನೆ, ಮಹಾಮಂಗಳಾರತಿ ಏರ್ಪಡಿಸಲಾಗಿದೆ.
ಆಗಸ್ಟ್ ೭ ರ ಬೆಳಗ್ಗೆ ೬ ಗಂಟೆಗೆ ಸುಪ್ರಭಾತ ಸೇವೆ, ವೇದಸ್ತೂತ್ರ ದಿವ್ಯಪ್ರಬಂಧ ಪಾರಾಯಣ, ಕಳಸಾರಾಧನೆ, ಪ್ರಧಾನಹೋಮ, ಪ್ರಾಣಪ್ರತಿಷ್ಠೆ ಹೋಮ, ವಿಶೇಷ ಶ್ರೀ ಸುದರ್ಶನ ನಾರಸಿಂಹ ಹೋಮ, ತಿರುಕಲ್ಯಾಣ ಮಹೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಪ್ರಧಾನ ಅರ್ಚಕ ಚನ್ನಕೇಶವಾಚಾರ್ ಕೋರಿದ್ದಾರೆ.

ಎರಡು ಗುಂಪುಗಳ ನಡುವೆ ಘರ್ಷಣೆ

0

ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ೮ ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಯ್ಯಪ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಗ್ರಾಮದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಬೈಯಪ್ಪನಹಳ್ಳಿಯ ಅನಿಲ್, ಸುಹಾಸ್, ನಾರಾಯಣಸ್ವಾಮಿ, ಬೈರಾರೆಡ್ಡಿ, ಚಂದ್ರಶೇಖರ್ರೆಡ್ಡಿ, ಮಂಜುನಾಥ್ ಮತ್ತಿತರರು ಗಾಯಗೊಂಡಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ನಡೆದ ಘರ್ಷಣೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಹುತೇಕ ಮಂದಿ ಯುವಕರು ಮನೆಗಳನ್ನು ತೊರೆದಿದ್ದು ಗ್ರಾಮದಲ್ಲಿ ನೀರವಮೌನದ ವಾತಾವರಣ ಆವರಿಸಿದೆ. ಪೊಲೀಸರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.
ಘಟನೆಯ ಹಿನ್ನೆಲೆ: ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ಬಯ್ಯಪ್ಪನಹಳ್ಳಿಯ ಕೆಲ ಯುವಕರು ತಮ್ಮ ಮೋಜಿಗಾಗಿ ದ್ವಿಚಕ್ರ ವಾಹನಗಳನ್ನು ಕದ್ದು ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು ಚಿಂತಾಮಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು ಎನ್ನಲಾಗಿದೆ.
ಕದ್ದ ಬೈಕ್ ಗಳನ್ನು ಎಲ್ಲೆಲ್ಲಿ ಮಾರಾಟ ಮಾಡಿದ್ದೀರಿ ತೋರಿಸಿ ಎಂದಾಗ ತಮಗೆ ಹಳೆಯ ದ್ವೇಷ ಇದ್ದ ಬಯ್ಯಪ್ಪನಹಳ್ಳಿಯ ಕೆಲ ಯುವಕರ ಮೇಲೆ ಮಾಹಿತಿ ನೀಡಿದ್ದಾರೆ, ಚಿಂತಾಮಣಿಯ ಪೊಲೀಸರು, ಬಯ್ಯಪ್ಪನಹಳ್ಳಿಯ ಯುವಕರನ್ನು ಕರೆದು ವಿಚಾರಣೆ ನಡೆಸಿ ವಿಚಾರಣೆಯಲ್ಲಿ ಬಂಧಿತ ಯುವಕರು ನೀಡಿರುವ ಮಾಹಿತಿ ಸುಳ್ಳೆಂದು ಪ್ರಾಥಮಿಕ ತನಿಖೆಯಿಂದ ಖಾತ್ರಿ ಮಾಡಿಕೊಂಡು ಯುವಕರನ್ನು ಬಿಟ್ಟು ಕಳುಹಿಸಿದ್ದಾರೆ.
ಇದಾದ ನಂತರ ದಂಡ ಕಟ್ಟಿ ಬಿಡುಗಡೆಯಾದ ಆರೋಪಿಗಳು ಗ್ರಾಮಕ್ಕೆ ಬಂದಾಗ ಗ್ರಾಮದ ಕೆಲ ಯುವಕರು ಹಿರಿಯರಿಗೆ ಮನವಿ ಮಾಡಿ ನಮ್ಮ ಮೇಲೆ ವಿನಾಕಾರಣ ಪೋಲೀಸರಿಗೆ ಮಾಹಿತಿ ನೀಡಿದ್ದ ಆರೋಪಿಗಳನ್ನು ಕರೆಸಿ ಬುದ್ದಿ ಹೇಳುವಂತೆ ಸೂಚಿದ್ದಾರೆ.
ಯುವಕರ ಮನವಿಯಂತೆ ಗ್ರಾಮದ ಕೆಲವು ಮುಖಂಡರು ಸೇರಿ ಪಂಚಾಯಿತಿ ಸೇರಿಸಿ ಗ್ರಾಮದ ಕೃಷ್ಣ, ಗಜೇಂದ್ರ, ಶ್ರೀನಿವಾಸ್, ಪವನ್, ಅಶೋಕ, ವಿನೋದ್ ಮತ್ತಿತರನ್ನು ಈ ಬಗ್ಗೆ ಪ್ರಶ್ನಿಸಿದಾಗ ಇದರಿಂದ ಕುಪಿತಗೊಂಡ ಶ್ರೀನಿವಾಸ್, ಗಜೇಂದ್ರ ಹಾಗೂ ಅವರ ಸಹಚರರು ಮಾರಕಾಯುಧಗಳಿಂದ ಸ್ಥಳದಲ್ಲಿದ್ದ ಅನಿಲ್, ಸುಹಾಸ್ ಮತ್ತಿತರರ ಮೇಲೆ ಏಕಾ ಏಕಿ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಹಿನ್ನಲೆಯಲ್ಲಿ ಬೈಯ್ಯಪ್ಪನಹಳ್ಳಿ ಗ್ರಾಮದ ಗಜೇಂದ್ರ, ಶ್ರೀನಿವಾಸ್, ನಾಗರಾಜ್ ಹಾಗೂ ಇತರೆ ಒಂಬತ್ತು ಮಂದಿ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ದಿಬ್ಬೂರಹಳ್ಳಿ ಪೊಲೀಸರು ನಾಗರಾಜ್ ಎಂಬಾತನನ್ನು ಬಂಧಿಸಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್ ಮತ್ತಿತರರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಚೀಮಂಗಲ ಶಾಲೆಯಲ್ಲಿ ಒಲಂಪಿಕ್ ಹಬ್ಬ

0

ನಮ್ಮ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದಿಂದ ಮುಂದಿನ ದಿನಗಳಲ್ಲಿ ಒಲಂಪಿಕ್‌ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಳುಗಳು ಹೊರಹೊಮ್ಮಲಿ. ಒಲಂಪಿಕ್‌ ಕ್ರೀಡಾಕೂಟ ನಡೆಯುತ್ತಿರುವ ಈ ಸಂದರ್ಭದಲ್ಲಿ ಹಳೆಯ ಒಲಂಪಿಕ್‌ ಕ್ರೀಡೆಗಳ ಮೆಲುಕು ಹಾಕುವ ಮೂಲಕ ಕ್ರೀಡಾ ವಾತಾವರಣವನ್ನು ಪ್ರತಿಯೊಂದು ಶಾಲೆಯಲ್ಲೂ ಸೃಷ್ಟಿಸಬೇಕು ಎಂದು ಸರ್ಕಾರಿ ಉರ್ದು ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರಂಗನಾಥ್‌ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಒಲಂಪಿಕ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಿಂದ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಷಯವನ್ನು ಕೋರೋಣ. ಕ್ರೀಡೆಯನ್ನು ಗ್ರಹಿಸುವ, ಕಲಿಯುವ, ಉತ್ಸಾಹ ಮೂಡಿಸುವ ಮತ್ತು ಆಸಕ್ತಿ ಹುಟ್ಟಿಸುವ ಕ್ರೀಡಾಜ್ಯೋತಿ ಎಲ್ಲಡೆ ಬೆಳಗಲಿ ಎಂದು ಹಾರೈಸಿದರು.
ಒಲಂಪಿಕ್‌ಗೆ ಸಂಬಂಧಪಟ್ಟ ಭಿತ್ತಿಚಿತ್ರಗಳ ಪ್ರದರ್ಶವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಾದ ವಿಠ್ಠಲ್, ಶಿವಕುಮಾರ್, ನವೀನ್ ಕುಮಾರ್,ದೊಡ್ಡ ನಾಯ್ಕ, ಭವ್ಯ, ಸವಿತ . ಶಿವಶಂಕರ್, ಸೈಯದ್ ಷರ್ಫುದ್ದೀನ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮುನಿರಾಜು, ಗ್ರಾಮದ ಮೋಹನ್, ಪೋತಲ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿಂಗಾಪೂರಿನ ದುಡಿದ ಹಣದಲ್ಲಿ ಗ್ರಾಮೀಣ ಮಕ್ಕಳಿಗೆ ಸಮವಸ್ತ್ರ

0

ಸಿಂಗಾಪೂರಿನಲ್ಲಿ ವಾಸಿಸುವ ಭಾರತೀಯ ಮೂಲದ ಹದಿನಾರು ವರ್ಷದ ಬಾಲಕಿ ನಂದಿನಿ ಐಯರ್ ಬೇಸಿಗೆ ರಜೆಯಲ್ಲಿ ದುಡಿದ ಹಣದಲ್ಲಿ ಶಾಲಾ ಮಕ್ಕಳಿಗೆ ಬಟ್ಟೆಗಳನ್ನು ನೀಡಲು ತಿಳಿಸಿದ್ದು ‘ನಮ್ಮ ಮುತ್ತೂರು’ ಸಂಸ್ಥೆ ಆಕೆಯ ಅಭಿಲಾಷೆಯನ್ನು ಪೂರೈಸುತ್ತಿದೆ ಎಂದು ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ. ಖದೀಜಾ ಗುಪ್ತ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಸಂಜೀವ್ ದಾಸ್‌ಗುಪ್ತ ಅವರ ನೆನೆಪಿಗಾಗಿ ‘ನಮ್ಮ ಮುತ್ತೂರು’ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದೇವೆ. ನಮ್ಮ ಪರಿಚಿತ ಹಾಗೂ ಸ್ನೇಹಿತರಿಗೂ ಈ ರೀತಿಯ ಸಾಮಾಜಿಕ ಕೆಲಸಗಳಲ್ಲಿ ಕರೆತರುತ್ತಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ತ್ಯಾಗರಾಜು ಮಾತನಾಡಿ, ಸಮಾಜದಲ್ಲಿ ತುಂಬಾ ಶ್ರೀಮಂತರಿದ್ದೂ ಎಲ್ಲರೂ ಸಮಾಜ ಕಾರ್ಯಗಳನ್ನು ಮಾಡುವುದಿಲ್ಲ. ಕೆಲ ಮಂದಿ ಹೃದಯವಂತರು ಮಾತ್ರ ತಾವು ಸಂಪಾದಿಸಿದ ಹಣದಲ್ಲಿ ಸೇವೆಯನ್ನು ಮಾಡುತ್ತಾರೆ. ಹದಿನಾರು ವರ್ಷದ ಬಾಲಕಿ ವಿದೇಶದಲ್ಲಿ ವಾಸವಾಗಿದ್ದರೂ ನಮ್ಮ ಗ್ರಾಮೀಣ ಭಾಗದ ಮಕ್ಕಳ ಬಗ್ಗೆ ತುಡಿತ ಹೊಂದಿರುವುದುನಿಜಕ್ಕೂ ಶ್ಲಾಘನೀಯ. ಅಂಥಹವರ ಸಂಖ್ಯೆ ಹೆಚ್ಚಲಿ ಎಂದು ಆಶಿಸಿದರು.
ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿ ದೊಡ್ಡಮರಳಿ, ಕೊಂಡೇನಹಳ್ಳಿ, ಶೆಟ್ಟಹಳ್ಳಿ, ಅಪ್ಪೇಗೌಡನಹಳ್ಳಿ ಸೇರಿದಂತೆ 8 ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರವನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈ ಸಂದರ್ಭದಲ್ಲಿ ನೀಡಲಾಯಿತು.
‘ನಮ್ಮ ಮುತ್ತೂರು ಸಂಸ್ಥೆ’ಯ ಉಷಾಶೆಟ್ಟಿ , ಶಿಕ್ಷಣ ಇಲಾಖೆಯ ಜಿಲ್ಲಾ ಪರಿವೀಕ್ಷಕಿ ನಾಗರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾಚನ್ನೇಗೌಡ, ನೇತ್ರಾವತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪರಾಮಚಂದ್ರ, ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೈದರಾಬಾದಿನ ಇಕ್ರಿಸ್ಯಾಟ್‌ನಲ್ಲಿ ತರಬೇತಿ ಪಡೆದ ತಾಲ್ಲೂಕಿನ ಮಹಿಳಾ ರೈತರು

0

ಒಣ ಬೇಸಾಯದಲ್ಲಿ ಕೃಷಿ ಹಾಗೂ ಪಶುಪಾಲನಾ ಬೆಳೆಗಳನ್ನು ಬೆಳೆಯುವ ಬಗ್ಗೆ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯನ್ನು ಪಡೆದೆವು ಎಂದು ಭಾರತಾಂಬೆ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ತಿಳಿಸಿದರು.
ಹೈದರಾಬಾದಿನ ಬಳಿಯಿರುವ ಆಂಧ್ರಪ್ರದೇಶ ಅಂತಾರಾಷ್ಟ್ರೀಯ ಬೆಳೆ ಅಧ್ಯಯನ ಸಂಸ್ಥೆ(ಇಕ್ರಿಸ್ಯಾಟ್‌)ಯ ಕೃಷಿ ತಂತ್ರಜ್ಞಾನ ಮತ್ತು ವಿಸ್ತರಣಾ ಕೇಂದ್ರದಲ್ಲಿ ಎರಡು ದಿನಗಳ ಕಾಲ ಅಧ್ಯಯನ ಪ್ರವಾಸವನ್ನು ರೈತಕೂಟದ ಮಹಿಳೆಯರು ಮುಗಿಸಿ ಬಂದು ತಮ್ಮ ಅನುಭವವನ್ನು ಅವರು ವಿವರಿಸಿದರು.
ವೈವಿಧ್ಯಮಯ ಜೋಳದ ತಳಿಗಳು, ಎಣ್ಣೆ ಕಾಳು ಬೆಳೆಗಳು, ತೊಗರಿ, ಸೋಯಾಬೀನ್ಸ್‌, ಅವರೆ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಒಣ ಬೇಸಾಯದಲ್ಲಿ ಬೆಳೆಯುವ ಬಗ್ಗೆ ನೀರಿನ ಸದ್ಭಳಕೆಯ ಕುರಿತು ಇಕ್ರಿಸ್ಯಾಟ್‌ ಮುಖ್ಯಸ್ಥ ಡಾ.ಎಂ.ಎಂ.ಶರ್ಮ ಮತ್ತು ಪ್ರಕಾಶ್‌ ರಾವ್‌ ತಿಳಿಸಿಕೊಟ್ಟರು.
ಇಕ್ರಿಸ್ಯಾಟ್‌ನಲ್ಲಿ ಕೆರೆಗಳನ್ನು ನಿರ್ಮಿಸಿದ್ದು, ನಮಗೂ ಜಮೀನುಗಳಲ್ಲಿ ಸಣ್ಣ ಕೆರೆ, ಕುಂಟೆ, ಕೃಷಿ ಹೊಂಡಗಳನ್ನು ನಿರ್ಮಿಸಲು ಸಲಹೆ ನೀಡಿದರು. ಅಲ್ಲಿ ಪ್ರತಿಯೊಂದು ಬೀಜ ಬೆಳೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅವರು ಅಭಿವೃದ್ಧಿ ಪಡಿಸಿರುವ ಕಡಲೆ ಬೀಡ ನಮ್ಮಲ್ಲಿ ಬೆಳೆಯುವುದಕ್ಕಿಂತ ಎರಡೂವರೆ ಪಟ್ಟು ದೊಡ್ಡದಿದೆ. ವಿವಿಧ ಬೆಳೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆವು ಎಂದು ವಿವರಿಸಿದರು.
ಇಕ್ರಿಸ್ಯಾಟ್‌ನಲ್ಲಿ ಅಧ್ಯಯನಕ್ಕಾಗಿ ಭಾರತಾಂಬೆ ರೈತಕೂಟದಿಂದ 38 ಮಂದಿ ರೈತ ಮಹಿಳೆಯರು ಹಾಗೂ 12 ಮಂದಿ ಪ್ರಗತಿಪರ ರೈತರು ಹೈದರಾಬಾದಿಗೆ ಹೋಗಿದ್ದೆವು. ನಮ್ಮ ತಂಡದ ನೇತೃತ್ವವನ್ನು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ. ಗೋಪಾಲಗೌಡ ನಿರ್ವಹಿಸಿದ್ದರು. ವಿಶೇಷವೆಂದರೆ ಎಂದೂ ವಿಮಾನ ಮತ್ತು ರೈಲಿನಲ್ಲಿ ಪ್ರಯಾಣ ಮಾಡದ ನಾವು ಮಹಿಳೆಯರು ಹೋಗುವಾಗ ವಿಮಾನದಲ್ಲಿ ಹೋಗಿ ಬರುವಾಗ ರೈಲಿನಲ್ಲಿ ವಾಪಸಾದೆವು. ಇದು ನಮ್ಮ ಜೀವಮಾನದಲ್ಲಿ ಮರೆಯದ ಪ್ರವಾಸ ಎಂದು ಹೇಳಿದರು.
ಭಾರತಾಂಬೆ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಮಳ್ಳೂರು ವನಿತಾ, ಲಲಿತಮ್ಮ, ನಳಿನ, ಸುಜಾತ, ಸಂಪಂಗಮ್ಮ, ಸರೋಜಮ್ಮ, ಶ್ಯಾಮಲಾ, ನಿರ್ಮಲಮ್ಮ, ಅಮೃತ, ರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಸುವಿನ ಕೊಟ್ಟಿಗೆಯಲ್ಲಿ ನೆಲಹಾಸಾಗಿ ರಬ್ಬರ್‌ಮ್ಯಾಟ್‌

0

ಆಧುನಿಕತೆಯನ್ನು ಮೈಗೂಡಿಸಿಕೊಂಡ ಹೈನುಗಾರಿಕೆ ಲಾಭದಾಯಕ
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಹತ್ತು ಸೀಮೆ ಹಸುಗಳನ್ನು ಸಾಕಿರುವ ಕೆ.ಆನಂದಮೂರ್ತಿ ಆಧುನಿಕತೆಯನ್ನು ಹೈನುಗಾರಿಕೆಗೆ ಅಳವಡಿಸಿಕೊಳ್ಳುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಆಶಾಭಾವನೆಯನ್ನು ಮತ್ತು ಉತ್ಸಾಹವನ್ನು ಮೂಡಿಸಿದ್ದಾರೆ.
ನೂತನವಾಗಿ ಪರಿಚಯಿಸಲ್ಪಟ್ಟ ರಬ್ಬರ್‌ ಮ್ಯಾಟುಗಳನ್ನು ತಮ್ಮ ಹಸುಕಟ್ಟುವ ಕೊಟ್ಟಿಗೆಯಲ್ಲಿ ಹಾಸಿಕೊಳ್ಳುವ ಮೂಲಕ ಕೊಟ್ಟಿಗೆಯಲ್ಲಿ ಜಾರಿಕೆಯಿಂದ ಹಸುಗಳಿಗೆ ಮತ್ತು ನಿರ್ವಹಣೆ ಮಾಡುವವರಿಗೆ ಆಗಬಹುದಾದ ತೊಂದರೆಗಳನ್ನು ನಿವಾರಿಸಿಕೊಂಡಿದ್ದಾರೆ. ಇದರಿಂದಾಗಿ ಕೊಟ್ಟಿಗೆಯನ್ನು ಶುಚಿಗೊಳಿಸಲು ಅನುಕೂಲವಾಗಿದೆ. ಸಮತಟ್ಟಾದ ನೆಲಹಾಸಿಲ್ಲದೆ ಗಂಜಲ ಸಗಣಿ ನಿಂತು ಹಸುಗಳಿಗೆ ಕೆಚ್ಚಲು ಬಾವು ಆಗುತ್ತಿದ್ದುದೂ ಈಗ ನಿಂತಿದೆ.
ಪ್ರತಿದಿನ ಸರಾಸರಿ 140 ಲೀಟರ್‌ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಾರುವ ಇವರ ಹೈನುಗಾರಿಕೆಯ ಪ್ರಗತಿಯನ್ನು ಗುರುತಿಸಿ ಕೋಚಿಮುಲ್‌ ರಾಷ್ಟ್ರೀಯ ಕೃಷಿ ವಿಕಾಸದ ಯೋಜನೆಯ ಮೂಲಕ ಸುಮಾರು 68 ಸಾವಿರ ರೂಗಳ ಬೆಲೆಯ ಹಾಲು ಕರೆಯುವ ಯಂತ್ರ ಮತ್ತು ಹಸು ತೊಳೆಯುವ ಯಂತ್ರವನ್ನು ಉಚಿತವಾಗಿ ನೀಡಿದೆ.
‘ರಬ್ಬರ್‌ ಮ್ಯಾಟುಗಳು ಪರಿಚಯಿಸಿದಾಗ ಇದರ ಉಪಯೋಗ ಯಾವ ರೀತಿ ಆಗಬಹುದೆಂಬ ಅನುಮಾನದಿಂದ ನಮ್ಮ ಗ್ರಾಮದ ಕೆ. ಆನಂದಮೂರ್ತಿ ಅವರಿಗೆ ನೀಡಿದೆವು. ಅವರು ತಮ್ಮ ಕೊಟ್ಟಿಗೆಯಲ್ಲಿ ಹಾಸಿದ್ದನ್ನು ನೋಡಿ ಅದು ನಿಜಕ್ಕೂ ಉಪಯುಕ್ತವೆಂದು ತಿಳಿಸಿದ ನಂತರ ಹಾಲು ಉತ್ಪಾದಕರ ಸಹಕಾರ ಸಂಘದಿಂದ 120 ರಬ್ಬರ್‌ ಮ್ಯಾಟುಗಳನ್ನು ತರಿಸಿ ಹಸು ಸಾಕುವವರಿಗೆ ವಿತರಿಸುತ್ತಿದ್ದೇವೆ. 50 ಕೆ.ಜಿ ತೂಗುವ ಈ ರಬ್ಬರ್‌ ಮ್ಯಾಟ್ 6 ಅಡಿ ಉದ್ದ ಮತ್ತು 4 ಅಡಿ ಅಗಲವಿದ್ದು, ಒಂದರೊಂದಿಗೆ ಮತ್ತೊಂದು ಹೆಣೆದುಕೊಳ್ಳುವ ರೀತಿಯಲ್ಲಿ ರೂಪಿಸಲಾಗಿದೆ. ಎರಡು ವರ್ಷಗಳ ವ್ಯಾರಂಟಿ ಕೂಡ ಇದಕ್ಕಿದೆ. ತಲಾ 2,700 ರೂಗಳ ಈ ಮ್ಯಾಟ್‌ಗೆ ಸರ್ಕಾರದಿಂದ 1,200 ರೂಗಳ ಸಹಾಯಧನ ಕೂಡ ಸಿಗುತ್ತದೆ’ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಗೋವಿಂದರಾಜು ತಿಳಿಸಿದರು.
ಹೆಚ್ಚು ಹಾಲು ಉತ್ಪಾದಕರೆಂದು ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿರುವ ಕೆ. ಆನಂದಮೂರ್ತಿ ಹದಿನೈದು ದಿನಕ್ಕೊಮ್ಮೆ ಕಡಿಮೆಯೆಂದರೆ 30 ಸಾವಿರ ರೂಗಳಷ್ಟು ಸಹಕಾರ ಸಂಘದಿಂದ ಹಾಲಿನ ಹಣ ಪಡೆಯುತ್ತಾರೆ. ಅದರಲ್ಲಿ ಅರ್ಧದಷ್ಟು ಮೇವು, ಬೂಸಾ ಖರ್ಚಾಗುತ್ತದೆ. ಸರ್ಕಾರದಿಂದ ಸಿಗುವ ಸಹಾಯ ಧನ, ಕೊಟ್ಟಿಗೆ ಗೊಬ್ಬರದಿಂದ ಸಿಗುವ ಹಣ ಇವರ ಶ್ರಮಕ್ಕೆ ಪ್ರತಿಫಲವಾಗಿ ಸಿಗುತ್ತಿದೆ.
‘ಹತ್ತು ಹಸುಗಳನ್ನು ನಿರ್ವಹಣೆ ಮಾಡಲು ಸಾಕಷ್ಟು ಸಮಯ ಹಾಗೂ ಶ್ರಮದಾಯಕ ಕೆಲಸ. ಆದರೆ ಈಗೀಗ ಲಭಿಸುತ್ತಿರುವ ವಿವಿಧ ಸಾಧನ ಸಲಕರಣೆಗಳನ್ನು ಬಳಸಿಕೊಳ್ಳುವ ಮೂಲಕ ಶ್ರಮ ಕಡಿಮೆಯಾಗಿ ಉತ್ಪಾದನೆ ಹೆಚ್ಚಳ ಕಂಡಿದೆ. ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ತರಿಸಿದ ರಬ್ಬರ್‌ ಮ್ಯಾಟ್‌ಗಳು ಅನುಕೂಲಕರವಾಗಿದೆ. ಹಸುಗಳಿಗೆ ಆಗುತ್ತಿದ್ದ ಗಾಯ, ಕೆಚ್ಚಲುಬಾವಿನ ಸಮಸ್ಯೆ ನಿವಾರಣೆಯಾಗಿದೆ. ಹಾಲು ಕರೆಯುವ ಯಂತ್ರದಿಂದ ಸಾಕಷ್ಟು ಸಮಯ ಉಳಿತಾಯವಾಗಿದೆ. ಹಸು ತೊಳೆಯುವ ಯಂತ್ರದಿಂದ ನೀರು ಮತ್ತು ಸಮಯವೂ ಉಳಿತಾಯವಾಗಿದೆ. ಆಧುನಿಕತೆಯ ಜ್ಞಾನವು ಹೈನುಗಾರಿಕೆಗೆ ಇನ್ನಷ್ಟು ಸಹಾಯ ಮಾಡಿದಲ್ಲಿ ಉಪಯುಕ್ತವಾಗುತ್ತದೆ’ ಎನ್ನುತ್ತಾರೆ ಕೆ. ಆನಂದಮೂರ್ತಿ.

ದ್ವಿಚಕ್ರವಾಹನದಿಂದ ಬಿದ್ದು ವ್ಯಕ್ತಿ ಸಾವು

0

ದ್ವಿಚಕ್ರವಾಹನದಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಕೋಟಹಳ್ಳಿಯ ಬಳಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಟಿ.ಪೆದ್ದನಹಳ್ಳಿ ಗ್ರಾಮದ ನಿವಾಸಿ ಸೀತಪ್ಪ (೬೦) ಮೃತ ದುರ್ದೈವಿಯಾಗಿದ್ದಾನೆ. ಕೋಟಹಳ್ಳಿಯ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದಿರುವ ಪರಿಣಾಮವಾಗಿ ಸಾವನ್ನಪ್ಪಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಹಲವು ಮಂದಿ ಸಾಧಕರು ಜನಿಸಿದ್ದಾರೆ

0

ಜಿಲ್ಲೆಯಲ್ಲಿ ಹಲವು ಮಂದಿ ಸಾಧಕರು ಜನಿಸಿದ್ದಾರೆ. ಅವರಿಂದ ನಾವು ಪ್ರೇರಣೆ ಹೊಂದಬೇಕು. ಸಾಧನೆ ಮಾಡಲು ಪ್ರತಿಯೊಬ್ಬರೂ ಪಣ ತೊಡೋಣ ಎಂದು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯಿರುವ ಯೂನಿವರ್ಸಲ್ ಪಬ್ಲಿಕ್ ಸ್ಕೂಲ್ನಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್, ಎಚ್.ನರಸಿಂಹಯ್ಯ, ನಾರಾಯಣಮೂರ್ತಿ ಮುಂತಾದ ದಿಗ್ಗಜರು ಜನಿಸಿದ ಮಣ್ಣಿದು. ಇಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ಸಾಧಿಸಿ ತೋರಿಸಿದ್ದಾರೆ. ಸಾಧಕರ ಸಾಧನೆಗಳನ್ನು ಅವರ ಕುರಿತ ಪುಸ್ತಕಗಳನ್ನು ಓದುವ ಮೂಲಕ ತಿಳಿಯಬೇಕು. ಅವರಿಂದ ಪ್ರೇರಣೆ ಪಡೆಯುವ ಮೂಲಕ ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಹೇಳಿದರು.
ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ಅವರು ಈ ಸಂದರ್ಭದಲ್ಲಿ ವಿವರಿಸಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಜಾನಕಿ, ಎಸ್.ಎನ್. ಗೀತಾ ಮತ್ತು ಎ.ವರ್ಷಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಎ.ಪಿ.ಜೆ ಅಬ್ದುಲ್ ಕಲಾಂ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಮುಖ್ಯ ಶಿಕ್ಷಕ ಶಾಂತರಾಜು, ಶಿಕ್ಷಕರಾದ ಮಧುಸೂದನ್, ಮೂರ್ತಿ, ಕಲ್ಯಾಣಿ, ಸುಮಿತ್ರಾ, ವಾಣಿ, ಶೋಭಾ ಹಾಜರಿದ್ದರು.

ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ

0

ತಾಲ್ಲೂಕು ಆಡಳಿತದಿಂದ ಈ ಭಾರಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದ್ದು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಸೀಲ್ದಾರ್ ಕೆ.ಎಂ.ಮನೋರಮಾ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲವು ಜವಾಬ್ದಾರಿಗಳನ್ನು ವಹಿಸಿದ ಅವರು ಅಕ್ಟೋಬರ್೧೪ ರ ರಾತ್ರಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವುದರೊಂದಿಗೆ ಬೆಳಗ್ಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣ ನೆರವೇರಿಸಿ ನಂತರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ನಗರದ ನೆಹರೂ ಕ್ರೀಡಾಂಗಣಕ್ಕೆ ಎಲ್ಲರೂ ಹಾಜರಾಗುವಂತೆ ಮನವಿ ಮಾಡಿದರು.
ಆಗಸ್ಟ್ ೧೫ ರಂದು ಬೆಳಗ್ಗೆ 9 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲು ನಿರ್ಧರಿಸಲಾಯಿತು.
ಎಂದಿನಂತೆ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ನೆರವೇರಿಸಲಿದ್ದು ಈ ಭಾರಿ ತಾಲ್ಲೂಕಿನ ಮಾಜಿ ಯೋಧರೊಬ್ಬರನ್ನು ಗುರುತಿಸಿ ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಪುರುಷೋತ್ತಮ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ, ತೋಟಗಾರಿಕೆ ಇಲಾಖೆಯ ಆನಂದ್, ಶಿಕ್ಷಣ ಇಲಾಖೆಯ ಶ್ರೀನಿವಾಸ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ರಾಜಸ್ವ ನಿರೀಕ್ಷಕ ಸುಬ್ರಮಣಿ, ಲಾರೆನ್ಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಕ್ಷಕರು ವಿದ್ಯೆ ಧಾರೆಯೆರೆಯಬೇಕು

0

ಪ್ರತಿಯೊಬ್ಬ ಶಿಕ್ಷಕರು, ತಮ್ಮ ಬಳಿಯಲ್ಲಿ ವಿದ್ಯೆ ಕಲಿಯುವಂತಹ ಮಕ್ಕಳಿಗೆ ಸರ್ವಸ್ವವನ್ನೂ ಧಾರೆಯೆರೆಯಬೇಕು ಎಂದು ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಶ್ಯಾಂಸುಂದರ್ ಹೇಳಿದರು.
ನಗರದ ಸರಸ್ವತಿ ಕಾನ್ವೆಂಟ್ ಅನುದಾನಿತ ಶಾಲೆಯಲ್ಲಿ ಕಳೆದ ೩೦ ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿ ಹೊಂದಿದ ಕಾರಣ, ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆಯಾಗಿದ್ದು, ನಿವೃತ್ತಿ ಹೊಂದುವವರೆಗೂ ಮಾಡಿರುವ ಸೇವೆಯು ಜೀವನ ಪೂರ್ತಿ ಉತ್ತಮವಾದ ಅನುಭವಗಳನ್ನು ಕೊಡುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಜೀವನದಲ್ಲಿ ಸಾರ್ಥಕತೆಯನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಬಹಳಷ್ಟು ಜಾಗ್ರತೆಯಿಂದ ಕೆಲಸ ಮಾಡಬೇಕು, ಒಬ್ಬ ಶಿಕ್ಷಕ ಮೈ ಮರೆತರೆ ಇಡೀ ಸಮಾಜವೇ ತಪ್ಪುದಾರಿ ಹಿಡಿಯುತ್ತದೆ. ಆದ್ದರಿಂದ ಉತ್ತಮವಾದ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆ ನೀಡುವಂತಹ ಹೊಣೆಗಾರಿಕೆ ಇದೆ. ಪ್ರಜ್ಞಾವಂತ ನಾಗರಿಕರನ್ನಾಗಿ ಮಕ್ಕಳನ್ನು ತಯಾರು ಮಾಡಬೇಕು, ಆಗ ಮಾತ್ರ ವೃತ್ತಿ ಜೀವನ ಸಾರ್ಥಕವಾಗುತ್ತದೆ ಎಂದರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ, ಗುರುಗಳು ಸಮಾಜಕ್ಕೆ ಮರ್ಗದರ್ಶಕರಾಗಿದ್ದು, ಅವರ ಮಾರ್ಗದರ್ಶನವನ್ನು ಪಡೆದು ಮಕ್ಕಳು ಉತ್ತಮವಾದ ಪ್ರಜೆಗಳಾಗಬೇಕು. ಪಿಟೀಲು ವಿದ್ವಾಂಸರಾದ ಶಿಕ್ಷಕ ಶ್ಯಾಂಸುಂದರ್ ಅವರು ನಿವೃತ್ತಿ ಜೀವನವನ್ನು ಪಿಟೀಲು ಕಲಿಸಲು ಹಾಗೂ ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇನ್ನಷ್ಟು ಶಿಷ್ಯರನ್ನು ತಾಲ್ಲೂಕಿಗೆ ಕೊಡುಗೆಯಾಗಿ ನೀಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ನಿವೃತ್ತ ಶಿಕ್ಷಕ ಶ್ಯಾಂಸುಂದರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ನಿವೃತ್ತ ಶಿಕ್ಷಕರ ಕುಟುಂಬ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

ರೈತ ಸಂಘದಿಂದ ಪ್ರತಿಭಟನೆ

0

ಮಹದಾಯಿ ತೀರ್ಪು ವಿರೋಧಿಸಿ, ನೀರಿಗಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗೂಂಡಾಗಿರಿ ನಡೆಸಿದ್ದಲ್ಲದೆ, ರೈತರ ಮನೆಗಳಿಗೆ ನುಗ್ಗಿ ವೃದ್ದರು, ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಸೋಮವಾರ ಪ್ರತಿಭಟಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ರೈತರು, ನೀರಾವರಿ ಹೋರಾಟದಲ್ಲಿ ನ್ಯಾಯವನ್ನು ಒದಗಿಸಲು ವಿಫಲವಾಗಿರುವ ಸರ್ಕಾರ, ಮಹದಾಯಿ ಯೋಜನೆಯಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲು ವಿಳಂಬ ಮಾಡಿದೆ. ನ್ಯಾಯಯುತವಾಗಿ ಹೋರಾಟ ನಡೆಸಲು ಮುಂದಾಗಿರುವ ರೈತರನ್ನು ಹಿಗ್ಗಾಮುಗ್ಗಾ ಥಳಿಸಲು ಪೊಲೀಸರಿಗೆ ಬೆಂಬಲ ನೀಡುವ ಮೂಲಕ ರೈತರ ಮೇಲಿನ ನಿರ್ಲಕ್ಷ್ಯವನ್ನು ತೋರಿಸಿದೆ. ರಾಜ್ಯದ ಗೃಹ ಸಚಿವರು, ಕೇವಲ ಕ್ಷಮೆ ಯಾಚನೆ ಮಾಡುವುದರಿಂದ ರೈತರಿಗೆ ಆಗಿರುವ ಮಾನಸಿಕ ಆಘಾತವನ್ನು ಸರಿಪಡಿಸಲು ಸಾಧ್ಯವಿಲ್ಲ. ವೃದ್ದರು, ಮಕ್ಕಳು, ಮಹಿಳೆಯರಲ್ಲಿನ ಆತಂಕವನ್ನು ದೂರಮಾಡಲು ಸಾಧ್ಯವಿಲ್ಲ, ಅವರ ಮೇಲೆ ದೌರ್ಜನ್ಯವನ್ನು ಎಸಗಲು ಪ್ರಚೋದನೆ ನೀಡಿರುವ ಅಧಿಕಾರಿ ಹಾಗೂ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು. ಅವರ ಮೇಲೆ ಗೂಂಡಾ ಕಾಯ್ದೆಯಲ್ಲಿನ ದೂರು ದಾಖಲಿಸಬೇಕು, ಗಾಯಗೊಂಡಿರುವ ರೈತರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಬೇಕು, ಎಂದು ಅವರು ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ, ವೇಣುಗೋಪಾಲ್, ಮುನಿನಂಜಪ್ಪ, ಆಂಜನೇಯರೆಡ್ಡಿ, ಟಿ.ಕೃಷ್ಣಪ್ಪ, ಎಂ.ದೇವರಾಜು, ಎಸ್.ಆನಂದ, ಎನ್.ಶಂಕರ್ ಮತ್ತಿತರರು ಹಾಜರಿದ್ದರು.

ಮನೆಯಿಲ್ಲದವರಿಗೆ ವಸತಿ ಸೌಲಭ್ಯ

0

ಹೌಸಿಂಗ್ ಫಾರ್ ಆಲ್ ಯೋಜನೆಯಡಿಯಲ್ಲಿ ನಿವೇಶನ ಹಾಗೂ ಮನೆ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ನಗರಸಭೆಯ ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿಗಳ ಹೌಸಿಂಗ್ ಪಾರ್ ಆಲ್ ಯೋಜನೆಯಡಿಯಲ್ಲಿ ಸುಮಾರು ೩.೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಜಿ+೧ ಕ್ಯಾಟಗರಿಯಲ್ಲಿ ೧೫೦೦ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಅವಕಾಶವಿದ್ದು, ಸಾಮಾನ್ಯ ವರ್ಗದ ಫಲಾನುಭವಿಗಳು ೮೦ ಸಾವಿರ ಠೇವಣಿ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳು ೨೫ ಸಾವಿರ ರೂಪಾಯಿಗಳ ಠೇವಣಿಯನ್ನು ಇಡಬೇಕಾಗುತ್ತದೆ. ಈ ಬಗ್ಗೆ ನಾಗರಿಕರಲ್ಲಿ ಗೊಂದಲ ಮೂಡಿಸಲಾಗುತ್ತಿದ್ದು, ಸಾರ್ವಜನಿಕರು ಮನೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಮಧ್ಯವರ್ತಿಗಳ ವಂಚನೆಯ ಮಾತುಗಳಿಗೆ ಒಳಗಾಗಬಾರದು. ನಗರದಲ್ಲಿ ವಾಸವಾಗಿರುವ ನಿವೇಶನ ರಹಿತರಿಗೆ ಮಾತ್ರ ಈ ಸೌಲಭ್ಯವನ್ನು ಕೊಡಲಾಗುತ್ತದೆ. ನೆರೆಯ ಹಳ್ಳಿಗಳಿಂದ ಬಂದವರು ಹಾಗೂ ವಸತಿ ಸೌಲಭ್ಯ ಹೊಂದಿರುವವರಿಗೆ ಇಲ್ಲ. ಈ ಬಗ್ಗೆ ಈಗಾಗಲೇ ಎನ್.ಜಿ.ಓ. ಸಂಸ್ಥೆಗಳಿಂದ ಸರ್ವೆ ನಡೆಸಲಾಗಿದ್ದು, ಸ್ಥಳೀಯ ವಾರ್ಡುಗಳ ಸದಸ್ಯರುಗಳ ಸಮ್ಮುಖದಲ್ಲಿ ಪುನಃ ಸರ್ವೆ ನಡೆಸಿ ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಸರ್ಕಾರ ನೀಡಿರುವ ನಿರ್ದೇಶನಗಳಂತೆ ಎಲ್ಲಾ ಯೋಜನೆಗಳಿಗೆ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುಮೋದನೆಗೆ ಕಳುಹಿಸಬೇಕು. ಸದಸ್ಯರುಗಳು ಸ್ವತಃ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡವೆಂದು ಸಲಹೆ ನೀಡಿದರು.
ನೆರೆಯ ಹಂಡಿಗನಾಳ ಗ್ರಾಮ ಪಂಚಾಯತಿಯಿಂದ ನಗರಸಭೆಗೆ ಹಸ್ತಾಂತರಿಸಿರುವ ಹೌಸ್ ಲಿಸ್ಟ್ನಲ್ಲಿ ೪೦೦ ರಿಂದ ೭೦೦ ರವೆರೆಗೆ ಸಮರ್ಪಕವಾದ ದಾಖಲೆಗಳು ಇಲ್ಲ. ಆದ್ದರಿಂದ ನಗರಸಭೆಯವರೆ ನೇರವಾಗಿ ಅನುಭವದ ಆಧಾರದ ಮೇಲೆ ದಾಖಲೆಗಳನ್ನು ನಿರ್ಮಾಣ ಮಾಡಲು ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು.
ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ತಾಲ್ಲೂಕಿನ ರಾಮಸಮುದ್ರ ಕೆರೆಯಿಂದ ನೀರು ತರಲು ಸುಮಾರು ೪೪ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಲು ಸದಸ್ಯರ ಸಹಕಾರ ನೀಡಬೇಕು ಎಂದು ಹೇಳಿದರು.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳು ಹಾಗೂ ಹೊಟೇಲುಗಳಿಗೆ ನೋಟಿಸ್ ಜಾರಿ ಮಾಡಿ ಲೈಸೆನ್ಸ್ ರದ್ದುಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನಗರದ ರಾಜೀವ್ಗಾಂಧಿ ಬಡಾವಣೆಯಲ್ಲಿ ಸ್ಲಂ ಬೋರ್ಡ್ ನಿಂದ ನಿರ್ಮಾಣ ಮಾಡಲಾಗಿರುವ ಗುಂಪು ಮನೆಗಳನ್ನು ನಗರಸಭೆಗೆ ವರ್ಗಾವಣೆ ಮಾಡಿಲ್ಲ, ಆಶ್ರಯ ಕಮಿಟಿಗೆ ತಂದಿಲ್ಲ, ಈ ಬಗ್ಗೆ ಸ್ಲಂ ಬೋರ್ಡ್ ನವರಿಗೂ ದೂರು ನೀಡಿದ್ದು, ರಾಜಕೀಯವಾದ ಒತ್ತಡಗಳಿಂದ ಅವರು ಬಂದು ಪರಿಶೀಲನೆ ಮಾಡಿ, ತೆರವುಗೊಳಿಸಿಲ್ಲ, ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ರಾಜಣ್ಣ ಎಚ್ಚರಿಸಿದರು.
ನಗರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಂದು ಕಿಶನ್, ಆಯುಕ್ತ ಎಚ್.ಎ.ಹರೀಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಅಪ್ಸರ್ಪಾಷ, ಜೆ.ಎಂ.ಬಾಲಕೃಷ್ಣ, ರಾಘವೇಂದ್ರ, ಪ್ರಭಾವತಿ ಸುರೇಶ್, ಲಕ್ಷ್ಮಯ್ಯ ಮತ್ತಿತರರು ಹಾಜರಿದ್ದರು.

ನಾವೆಷ್ಟು ಕೊಳ್ಳುಬಾಕರು – ಭಾಗ 2

0

ಮಾರಾಟದ ಬೆಲೆ ನೂರಾರು ಪಟ್ಟು
ಇಡೀ ದೇಶದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪಾದನೆಯಾಗುವ ಹೆಚ್ಚಿನ ವಸ್ತುಗಳ ಬೆಲೆ ಉತ್ಪಾದನ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಾಗಿರುತ್ತದೆ. ಉತ್ಪಾದನೆಯ ವೆಚ್ಚ ಮತ್ತು ಮಾರಾಟದ ಬೆಲೆಯ ಅಂತರದ ಹಣ ಮಾರಾಟ ಜಾಲ, ಸಾಗಾಣಿಕೆ, ಪ್ರಚಾರ ಮತ್ತು ಕಂಪನಿಗಳ ದೊಡ್ಡ ಮೊತ್ತದ ಲಾಭಾಂಶಕ್ಕೆ ಹೋಗುತ್ತದೆ.
ಆಧುನಿಕ ಅರ್ಥಶಾಸ್ತ್ರಜ್ಞರ ಪ್ರಕಾರ ವಸ್ತುಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸುವುದರಿಂದ ಅವುಗಳ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ. ಇದು ಸತ್ಯವೇ ಇದ್ದರೂ ಇಂತಹ ದೊಡ್ಡ ಮಟ್ಟದ ಉತ್ಪಾದನೆಯನ್ನು ಪ್ರಪಂಚಾದಾದ್ಯಂತ ಗ್ರಾಹಕರಿಗೆ ತಲುಪಿಸಲು ಪ್ರಚಾರ, ಮಾರಾಟ ಜಾಲ, ಸಾಗಾಣಿಕೆ-ಮುಂತಾದ ವೆಚ್ಚಗಳಿರುತ್ತವೆ. ಹಾಗಾಗಿ ವಸ್ತುಗಳು ಗ್ರಾಹಕರಿಗೆ ತಲುಪುವಷ್ಟರಲ್ಲಿ ಅವುಗಳ ಬೆಲೆ ನೂರಾರು ಪಟ್ಟು ಹೆಚ್ಚಾಗಿರುತ್ತದೆ ಎನ್ನುವ ಸತ್ಯವನ್ನು ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಮರೆಮಾಚಲಾಗತ್ತದೆ.
ಅವರ ಉತ್ಪಾದನೆಯೇ ನಮ್ಮ ಅಗತ್ಯಗಳು “ಅಗತ್ಯಗಳು ಅವಿಷ್ಕಾರದ ಮೂಲ” ಎನ್ನುವುದು ಹಳೆಯ ಮಾತಾಯಿತು. ಇವತ್ತು ಕಾರ್ಪೋರೇಟ್‍ಗಳು ತಾವು ಉತ್ಪಾದಿಸಿದ್ದನ್ನು ಜನರ ಅಗತ್ಯ ಎಂದು ಭಾರೀ ಪ್ರಚಾರದ ಮೂಲಕ ಬಿಂಬಿಸುತ್ತಾರೆ ಇದಕ್ಕೆ ಒಂದು ಸಣ್ಣ ಉದಾಹರಣೆ ನೋಡೋಣ. ನಮ್ಮ ಹಳ್ಳಿಗಳಲ್ಲಿ ಹಿಂದಿನಿಂದಲೂ ಹಲ್ಲನ್ನು ಉಜ್ಜಲು ಕಹಿಬೇವಿನ ಕಡ್ಡಿ, ಇದ್ದಿಲು ಮತ್ತು ಉಪ್ಪು ಅಥವಾ ಭತ್ತದ ಹೊಟ್ಟನ್ನು ಸುಟ್ಟನಂತರ ಬರುವ ಉಮಿ (ಕಪ್ಪುಬೂದಿ) ಮುಂತಾದವುಗಳನ್ನು ಉಪಯೋಗಿಸಲಾಗುತ್ತಿತ್ತು. ಟೂತ್ ಬ್ರಷ್ ಮತ್ತು ಪೇಸ್ಟ್‍ಗಳನ್ನು ಕಂಡುಹಿಡಿದ ಮೇಲೆ ಇವುಗಳನ್ನು ಅನಿವಾರ್ಯವೆಂದು ತೋರಿಸಲಾಯಿತು. ಎಲ್ಲರನ್ನೂ ಸಮಾಧಾನ ಪಡಿಸಲು ನೀಮ್‍ಯುಕ್ತ ಪೇಸ್ಟ್‍ಗಳೂ ಬಂದವು. ಇದೇ ರೀತಿ ಸೀಗೆಪುಡಿಗೆ ಬದಲಾಗಿ ಶಿಕಾಕಾಯಿ ಶಾಂಪೂಗಳೂ, ಜಿಡ್ಡಿನ ಅಂಶವನ್ನು ಚರ್ಮದಲ್ಲೇ ಉಳಿಸುವ ಕಡಲೆಹಿಟ್ಟಿಗೆ ಬದಲಾಗಿ ಗ್ಲಿಸರೀನ್ ಇರುವ ಸೋಪುಗಳೂ ಬಂದಿವೆ. ಇವುಗಳ ಬಣ,್ಣ ಸುವಾಸನೆ, ಉಪಯೋಗಿಸುವ ಅನುಕೂಲ, ಇವುಗಳಿಂದಾಗಿ ನಾವೆಲ್ಲಾ ಇವುಗಳಿಗೆ ಮುಗಿಬಿದ್ದು ಹಣ ತೆರುತ್ತೇವೆ. ಇಂತಹ ವಸ್ತುಗಳು ನಿಜವಾಗಿ ನಮ್ಮ ಸುತ್ತಲೂ ಪುಕ್ಕಟೆ ಸಿಗುವ ವಸ್ತುಗಳಿಗಿಂತ ಹೇಗೆ ಭಿನ್ನ ಎಂದು ನಾವು ಯೋಚಿಸುವುದಕ್ಕೆ ಅವಕಾಶವಿರದಷ್ಟು ಪ್ರಚಾರದ ಭರಾಟೆ ಇರುತ್ತದೆ.
ಸಂಶೋಧನೆಗಳ ವಿಶ್ವಸಾರ್ಹತೆ
ಪ್ರಪಂಚದ ಎಲ್ಲಾ ಕ್ಷೇತ್ರಗಳಲ್ಲಿನ ಹೆಚ್ಚಿನ ಸಂಶೋಧನೆಗೆ ಹಣ ಕಾರ್ಪೋರೇಟ್‍ಗಳಿಂದಲೇ ಬರುತ್ತದೆ. ಹಾಗಾಗಿ ಸಂಶೋಧನೆಗಳ ವಿಷಯವನ್ನು, ದಿಕ್ಕನ್ನು ಮತ್ತು ಅದರ ಫಲಿತಾಂಶಗಳನ್ನೂ ಕೂಡ ಇವರು ತಮಗೆ ಬೇಕಾದಂತೆ ತಿರುಚಿರುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಮನುಷ್ಯನ ರಕ್ತದೊತ್ತಡ 120/80 ಇರಬೇಕು ಎಂದು ಶತಮಾನಗಳ ಹಿಂದಿನಿಂದಲೇ ವೈದ್ಯಕೀಯ ಸಂಶೋಧನೆಗಳು ಹೇಳಿವೆ. ಇದನ್ನು 110/70ಕ್ಕೆ ಇಳಿಸುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕಾಗಿ ಹಲವು ಸಂಶೋಧನೆಗಳ ಪ್ರಹಸನ ನಡೆಸುವುದು ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಕಷ್ಟವೇನಲ್ಲ. ಹೀಗೆ ಇವರ ಸಂಶೋಧನೆಗೆ ಮಾನ್ಯತೆ ಸಿಕ್ಕ ತಕ್ಷಣ ಇವರ ಉತ್ಪನ್ನಗಳಿಗೆ ಕಡಿಮೆ ಎಂದರೆ 50 ಕೋಟಿ ಜನ ಹೊಸ ಗ್ರಾಹಕರು ಸಿಗಬಹುದು ಎಂಬುದು ಒಂದು ಆಂದಾಜು. ನಮ್ಮ ತಾತ ಮುತ್ತಾತಂದಿರು 120/80 ಕ್ಕಿಂತ ಹೆಚ್ಚಿನ ರಕ್ತದೊತ್ತಡ ಇದ್ದಾಗ್ಯೂ ವೈದ್ಯರ ಹತ್ತಿರ ಹೋಗದೇ ಆರೋಗ್ಯವಾಗಿ ತುಂಬು ಜೀವನವನ್ನು ಕಳೆದಿರುವ ಸಾಧ್ಯತೆಗಳನ್ನು ಇಂತಹ ಸಂಶೋಧನೆಗಳ ಪರಿಧಿಯಿಂದ ಹೊರಗಿಟ್ಟಿರುತ್ತಾರೆ.
ಜೀವನ ಮಟ್ಟದ ಭ್ರಮಾಲೋಕ
ವಾಹನಗಳು, ಮನೆಯಲ್ಲಿ ಬಳಸುವ ಯಂತ್ರಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‍ಗಳನ್ನು ಮಾರಾಟ ಮಾಡಲು, ಇವುಗಳನ್ನು ಹೊಂದಿರುವವರು “ಸುಧಾರಿತ ಜೀವನ ಮಟ್ಟ” ಉಳ್ಳವರು ಎಂದು ಬಿಂಬಿಸಲಾಯಿತು. ಸರ್ಕಾರಗಳು ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ರೀತಿಯ “ಜೀವನ ಮಟ್ಟ”ವನ್ನೇ ಮಾನದಂಡಗಳನ್ನಾಗಿ ಉಪಯೋಗಿಸಲು ಆರಂಭಿಸಿದ ಮೇಲೆ ಕಾರ್ಪೋರೇಟ್‍ಗಳ ಖಜಾನೆ ಉಕ್ಕಿ ಹರಿಯತೊಡಗಿತು. ಜನತೆ ಇವುಗಳನ್ನು ಹೊಂದಲು ಸಾಲಸೂಲಗಳನ್ನು ಮೈಮೇಲೆ ಎಳೆದುಕೊಳ್ಳತೊಡಗಿತು. ಈ ಗ್ಯಾಡ್ಜೆಟ್‍ಗಳನ್ನು ಹೊಂದಲಾಗದ ಏಷ್ಯಾ, ಆಫ್ರಿಕಾ, ದಕ್ಷಿಣಾ ಅಮೇರಿಕಾದ ದರಿದ್ರರು ಬಡತನದ ಜೊತೆಗೆ ಕೀಳರಿಮೆ, ಹತಾಷೆಗಳಿಂದ ಇದ್ದೂ ಸತ್ತಂತಾದರು.
ಬಳಸಿ ಮತು ಬಿಸಾಕಿ
“ಯೂಸ್ ಅಂಡ್ ಥ್ರೋ” ಸಂಸ್ಕøತಿಯನ್ನು ಹುಟ್ಟುಹಾಕಿರುವ ಅಮೇರಿಕಾದಲ್ಲಿ ಪ್ರತಿವರ್ಷ ಸುಮಾರು 4000 ಕೋಟಿ ತಂಪುಪಾನೀಯಗಳ ಬಾಟಲಿ ಮತ್ತು ಕ್ಯಾನ್‍ಗಳನ್ನು ಉಪಯೋಗಿಸಿ ಎಸೆಯುತ್ತಾರೆ. ಇವುಗಳನ್ನು ಸಾಲಾಗಿ ಜೋಡಿಸಿದರೆ 20ಸಾರಿ ಚಂದ್ರನವರೆಗೆ ಹೋಗಿ ಹಿಂತಿರುಗಬಹುದು!! ಪ್ಲಾಸ್ಟಿಕ್ ಮತ್ತು ಇಂತಹ ಇತರ ಅಪಾಯಕಾರೀ ತ್ಯಾಜ್ಯವನ್ನೆಲ್ಲಾ ಅವರು ಉತ್ತರ ಶಾಂತಸಾಗರದ ಮಧ್ಯೆ ಸುರಿದು ಅಲ್ಲಿ ಟೆಕ್ಸಾಸ್ ರಾಜ್ಯದ ಅಳತೆಯ “ಗ್ರೇಟ್ ಪ್ಯಾಸಿಫಿಕ್ ಗಾರ್ಬೇಜ್ ಪ್ಯಾಚ್”ನ್ನು ಸೃಷ್ಟಿಸಿದ್ದಾರೆ. ನಮ್ಮ ಮನೆಯ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಕುವುದಕ್ಕೂ ಇದಕ್ಕೂ ವ್ಯತ್ಯಾಸವೇನಿದೆ ಹೇಳಿ? ಆದರೆ ದೊಡ್ಡಣ್ಣನನ್ನು ಪ್ರಶ್ನಿಸುವ ಎದೆಗಾರಿಕೆ ಯಾರಿಗೂ ಇಲ್ಲ.
ಇದು ಒಂದು ಉದಾಹರಣೆ ಮಾತ್ರ. ಇಂತಹ “ಬಳಸಿ ಮತ್ತು ಬಿಸಾಕಿ” ಸಂಸ್ಕøತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಬಹಳ ವ್ಯವಸ್ಥಿತವಾಗಿಯೇ ರೂಪಿಸಿದ್ದಾರೆ. ಇದರಿಂದ ಅವರ ಉತ್ಪನ್ನಗಳಿಗೆ ನಿರಂತರವಾಗಿ ಬೇಡಿಕೆ ಇರುತ್ತದೆ. ನಮ್ಮ ಅಪ್ಪ ಮೂವತ್ತು ವರ್ಷ ಉಪಯೋಗಿಸಿದ್ದ ಗಟ್ಟಿಮುಟ್ಟಾದ ಸ್ಟೀಲ್ ರೇಜರ್ ಒಂದನ್ನು ನಾನು ಮೂವತ್ತು ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಆದರೆ ನನ್ನ ಮಗನಿಗೆ ಬಳಸಿ ಬಿಸಾಕುವ ರೇಜರ್‍ಗಳು ಬೇಕು. ಜಾಹಿರಾತುಗಳಿಂದ ನಮ್ಮನ್ನು ನಿರಂತರ ಗ್ರಾಹಕರನ್ನಾಗಿಸುವ ಪರಿ ಇದು. ಇದರಲ್ಲಿ ಏನೂ ವಿಶೇಷವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಇದನ್ನು ಒಪ್ಪಿಕೊಂಡಿದ್ದೇವೆ.
ಕಡಿಮೆ ಗುಣ ಮಟ್ಟದ ವಸ್ತುಗಳನ್ನು ಉಪಯೋಗಿಸಿದರೂ ವಸ್ತುಗಳನ್ನು ಅತಿ ಆಕರ್ಷಕವಾಗಿ ಮಾಡುವುದು ಮತ್ತು ನಿರಂತರ ಬದಲಾಗುತ್ತಿರುವ ತಾಂತ್ರಿಕತೆಯ ಭ್ರಮೆ ಹುಟ್ಟಿಸುವುದು- ಇವುಗಳಿಂದಾಗಿ ಈ ಸಂಸ್ಕøತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್‍ನ ಅವಿಷ್ಕಾರ ವಸ್ತುಗಳ ಬೆಲೆಯನ್ನು ಗಮನಾರ್ಹವಾಗಿ ಇಳಿಸಲು ಸಹಾಯಮಾಡಿದೆ. ಈ ಪ್ಲಾಸ್ಟಿಕ್ ಎಂಬ ರಕ್ತಬೀಜಾಸುರನ ದೂರಗಾಮೀ ಪರಿಣಾಮಗಳೇನು ಎನ್ನುವ ಬಗೆಗೆ ಜನತೆ ಮತ್ತು ಸರ್ಕಾರಗಳೇ ತಲೆಕೆಡಿಸಿಕೊಳ್ಳದಿರುವಾಗ, ಹಣದ ಥೈಲಿಗಳಿಗಾಗಿ ಮಾತ್ರ ಬದುಕುತ್ತಿರುವ ಉದ್ಯಮಿಗಳು ಇದರ ಲಾಭ ಪಡೆಯದೆ ಹೇಗಿದ್ದಾರು?
ಈ ‘ಬಳಸಿ ಮತ್ತು ಬಿಸಾಕಿ’ ಸಂಸ್ಕøತಿಯಲ್ಲೂ ಸಾಕಷ್ಟು ಅವಿಷ್ಕಾರಗಳಾಗಿವೆ! ಕಂಪನಿಗಳು ತಮ್ಮ ಉತ್ಪನ್ನದ ವಿಷಯದಲ್ಲಿ ತಾವು ಅಭಿವೃದ್ಧಿಪಡಿಸಿದ ಎಲ್ಲಾ ಫೀಚರ್‍ಗಳನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡುಗಡೆ ಮಾಡದೇ ಹಂತಹಂತವಾಗಿ ಮಾಡುವುದು ಇತ್ತೀಚಿನ ಹುನ್ನಾರ ಎಂದು ಹಲವರಿಂದ ಕೇಳಿದ್ದೇನೆ. ಉದಾಹರಣೆಗೆ ಟೀವಿ, ಕ್ಯಾಮರಾ, ಮೊಬೈಲ್ ಫೋನ್ ಮುಂತಾದವುಗಳಿಗೆ ಪ್ರತಿ ಮೂರು ತಿಂಗಳಿಗೆ ಒಂದೆರೆಡು ಹೊಸ ಫೀಚರ್‍ಗಳನ್ನು ಹಾಕಿ ಮಾರುಕಟ್ಟೆಗೆ ಬಿಡುಗಡೆಮಾಡುತ್ತಾರೆ. ಅದೇ ರೀತಿ ಮೈಕ್ರೋಸಾಫ್ಟ್‍ನವರ ಬಳಿ ಈಗಾಗಲೇ 2020 ಕ್ಕೆ ಬಿಡುಗಡೆ ಮಾಡಲು ಯೋಜಿಸಿರುವ ವಿಂಡೋಸ್‍ನ ರೂಪರೇಷೆ ಇರುವ ಸಾಧ್ಯತೆ ಇದೆ. ಹಾಗಿದ್ದರೂ 2015 ರಲ್ಲಿ ಬಿಡುಗಡೆ ಮಾಡಬಹುದಾದ ವಿಂಡೋಸ್ 9ನಲ್ಲಿ ಅದನ್ನು ಅಳವಡಿಸುವುದಿಲ್ಲ. ಪ್ರತಿ ವಿಂಡೋಸ್‍ನಲ್ಲೂ ಈಗಾಗಲೇ ಸಂಶೋಧಿಸಿ ಇಟ್ಟುಕೊಂಡಿರುವ ಕೆಲವೇ ಫೀಚರ್‍ಗಳನ್ನು ಸೇರಿಸಿ ಮಾರಕಟ್ಟೆಗೆ ಧಾಳಿ ಇಡುತ್ತಾ ಹೋಗುತ್ತಾರೆ. ಇದು ನಮ್ಮನ್ನು ನಿರಂತರವಾಗಿ “ಲೇಟೆಸ್ಟ್ ಮಾಡೆಲ್”ನ ಹಪಹಪಿಕೆ ಸಿಕ್ಕಿಸಿ, ಗ್ರಾಹಕ ವಸ್ತುಗಳ ಜೀವನಪರ್ಯಂತದ ಗುಲಾಮಗಿರಿಯಲ್ಲೇ ಇಡುವುದಕ್ಕೆ ಸಹಾಯ ಮಾಡುತ್ತದೆ. ನಮ್ಮೆಲ್ಲರ ಮನೆಗಳಲ್ಲಿ ಇವತ್ತು ಎಷ್ಟು ಹಳೆಯ ಮಾಡೆಲ್‍ನ ವಸ್ತುಗಳು ನಿರುಪಯುಕ್ತವಾಗಿ ಬಿದ್ದಿವೆ ಎಂದು ನೋಡಿದರೆ ಇದರ ತೀವ್ರತೆಯ ಅರಿವಾಗುತ್ತದೆ.
ನಮ್ಮೆಲ್ಲರ ಹಣಕಾಸಿನ ಪರಿಸ್ಥಿತಿ ಮತ್ತು ಪರಿಸರದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಜೊತೆಗೆ ಈ ಸಂಸ್ಕøತಿ, “ಸರ್ವೀಸ್ ಇಂಡಸ್ಟ್ರಿ” ಎಂದು ಕರೆಸಿಕೊಳ್ಳುವ ವಸ್ತುಗಳನ್ನು ದುರಸ್ತಿ ಮಾಡುವ ಸ್ವಯಂ ಉದ್ಯೋಗಿಗಳನ್ನು ನಿರುದ್ಯೋಗಿಗಳನ್ನಾಗಿಸಿದೆ. ಉತ್ಪನ್ನಗಳನ್ನು ಆಯಾ ಕಂಪನಿಗಳೇ ಸರ್ವೀಸ್ ಕೂಡ ಮಾಡುವುದರಿಂದ ಇದರಿಂದ ಬರುವ ಹಣವೂ ಅವರಿಗೇ ಸೇರುತ್ತದೆ. ಜೊತೆಗೆ ವಸ್ತುವಿನ ಬೆಲೆಯನ್ನು ಸ್ವಲ್ಪ ಹೆಚ್ಚು ಮಾಡಿ ಒಂದು ವರ್ಷ ಉಚಿತ ಸರ್ವೀಸ್ ಕೊಡುವ ಆಮಿಷಗಳನ್ನೊಡ್ಡುವುದು ಈಗ ಸರ್ವೇಸಾಮಾನ್ಯ.
ಈ ‘ಬಳಸಿ ಮತ್ತು ಬಿಸಾಕಿ’ ಸಂಸ್ಕøತಿಗೆ ಇನ್ನೂ ಆಳವಾದ ಮುಖಗಳಿವೆ. ಇದರ ಮೂಲ ಉದ್ದೇಶ ಯಾವುದನ್ನೂ ಮರುಬಳಕೆ ಮಾಡಲು ಆಗದಂತೆ ಮಾಡುವುದು. ಈಗ ಕೃಷಿಕ ಕೂಡ ಇದರ ಸುಳಿಗೆ ಸಿಕ್ಕಿದ್ದಾನೆ. ಸುಧಾರಿತ ತಳಿಗಳ ಧವಸಧಾನ್ಯಗಳನ್ನು ಬೆಳೆಯಲು ಆರಂಭಿಸಿದ ಮೇಲೆ ಅವನಿಗೆ ಬಿತ್ತನೆ ಬೀಜಗಳನ್ನು ತನ್ನದೇ ಫಸಲಿನಿಂದ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಪ್ರತಿಬಾರಿಯೂ ಕಂಪನಿಗಳ ಕೊಡುವ ಬಿತ್ತನೆ ಬೀಜವನ್ನೇ ಕೊಳ್ಳಬೇಕಾಗುತ್ತದೆ. ಇಷ್ಟಾದ ಮೇಲೂ ಕಂಪನಿಗಳು ಸುಧಾರಿತ ತಳಿಯ ಸುಳಿಯಲ್ಲಿ ರೈತನನ್ನು ಸಿಕ್ಕಿಸಿದ್ದು ಜನಸಾಗರದ ಹಸಿವನ್ನು ಹಿಂಗಿಸಲು ಎಂದು ಸರ್ಕಾರಗಳು ಹೇಳುವುದನ್ನು ನಾವು ನಂಬಬೇಕಿದೆ. ಸುಧಾರಿತ ತಳಿ, ರಸಗೊಬ್ಬರ, ಕ್ರಿಮಿನಾಶಕಗಳ ವಿಷವರ್ತುಲ ಇವತ್ತು ರೈತನನ್ನು ಮತ್ತು ನಮ್ಮ ಭೂಮಿ, ಪರಿಸರಗಳನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಈಗ ನೋಡುತ್ತಿದ್ದೇವೆ. ಹಾಗಿದ್ದರೂ ಈಗಲೂ ಸುಧಾರಿತ ತಳಿಗಳಷ್ಟೇ ಅಲ್ಲ, ಕುಲಾಂತರೀ ತಳಿಗಳ ಪ್ರಚಾರದ ಭರಾಟೆಯೇನೂ ಕಡಿಮೆಯಾಗಿಲ್ಲ.
ಮುಂದುವರೆಯುವುದು…
ವಸಂತ್ ನಡಹಳ್ಳಿ.