Home Blog Page 456

ಹೋಬಳಿಗಳ ಮಟ್ಟದಲ್ಲಿ ಕಂದಾಯ ಅದಾಲತ್‌ ಮತ್ತು ಪಿಂಚಣಿ ಅದಾಲತ್‌

0

ತಾಲ್ಲೂಕಿನ ಎಲ್ಲಾ ಹೋಬಳಿಗಳ ಮಟ್ಟದಲ್ಲಿ ಕಂದಾಯ ಅದಾಲತ್‌ ಮತ್ತು ಪಿಂಚಣಿ ಅದಾಲತ್‌ ಆಯೋಜಿಸಲಾಗಿದೆ. ಪಹಣಿಗಳ ತಿದ್ದುಪಡಿ, ಪಡಿತರ ಚೀಟಿ ಸಮಸ್ಯೆ, ಪಿಂಚಣಿದಾರರ ಬ್ಯಾಂಕ್‌ ಖಾತೆ ಆಧಾರ್‌ ನಂಬರ್‌ಗಳನ್ನು ತಾಲ್ಲೂಕು ಆಡಳಿತಕ್ಕೆ ನೀಡಿ ಪಿಂಚಣಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಅನುಕೂಲತೆಯನ್ನು ಪಡೆಯಬೇಕೆಂದು ತಹಶೀಲ್ದಾರ್‌ ಮನೋರಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂದಾಯ ಅದಾಲತ್‌ ಮತ್ತು ಪಿಂಚಣಿ ಅದಾಲತ್‌ ವೇಳಾಪಟ್ಟಿ: ಆಗಸ್ಟ್‌ 2 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಬಶೆಟ್ಟಹಳ್ಳಿ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಶೆಟ್ಟಿಗೆರೆ, ಆಗಸ್ಟ್‌ 4 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಬ್ಲೂಡು, ಆಗಸ್ಟ್‌ 6ರ ಶನಿವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಜಂಗನಕೋಟೆ, ಆಗಸ್ಟ್‌ 9 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಗಂಜಿಗುಂಟೆ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಈ ತಿಮ್ಮಸಂದ್ರ, ಆಗಸ್ಟ್‌ 11 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಆನೂರು, ಆಗಸ್ಟ್‌ 12ರ ಶುಕ್ರವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಕುಮಬಿಗಾನಹಳ್ಳಿ, ಆಗಸ್ಟ್‌ 15 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಪ್ಪೇಗೌಡನಹಳ್ಳಿ, ಆಗಸ್ಟ್‌ 16 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ದೊಡ್ಡತೇಕಹಳ್ಳಿ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಎಸ್‌.ದೇವಗಾನಹಳ್ಳಿ, ಆಗಸ್ಟ್‌ 18 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಬೋದಗೂರು, ಆಗಸ್ಟ್‌ 20 ರ ಶನಿವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಹೊಸಪೇಟೆ, ಆಗಸ್ಟ್‌ 23 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಮ್ಮಗಾರಹಳ್ಳಿ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಗಡಿಮಿಂಚೇನಹಳ್ಳಿ, ಆಗಸ್ಟ್‌ 27 ರ ಶನಿವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಭಕ್ತರಹಳ್ಳಿ.

ಗೀಜಗ ಗೂಡುಗಳು – ಉಳಿಸಲು ಮನವಿ

0

ಮಳೆಗಾಲದ ದಿನಗಳು, ಗಣೇಶ ಹಬ್ಬದ ಆಗಮನ ಮತ್ತು ಗೀಜಗ ಹಕ್ಕಿಯ ಗೂಡು ನಿರ್ಮಾಣ ಹೆಚ್ಚೂಕಡಿಮೆ ಒಟ್ಟೊಟ್ಟಿಗೇ ನಡೆಯುತ್ತವೆ. ತಾಲ್ಲೂಕಿನ ಹಲವೆಡೆ ಪಕ್ಷಿ ಪ್ರಪಂಚದಲ್ಲಿ ತನ್ನ ಗೂಡಿನಿಂದ ಗುರುತಿಸಿಕೊಳ್ಳುವ ಏಕೈಕ ಪಕ್ಷಿ ಗೀಜಗ ತನ್ನ ಗೂಡಿನ ನಿರ್ಮಾಣದಲ್ಲಿ ನಿರತವಾಗಿವೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಹೊರವಲಯದ ಹಾಳು ಬಾವಿಯ ಅಂಚಿನಲ್ಲಿ ಬೆಳೆದಿರುವ ಬೇವಿನ ರೆಂಬೆಗಳಿಗೆ ಗೊಂಚಲು ಗೊಂಚಲಾಗಿ ಗೀಜಗ ಹಕ್ಕಿಗಳು ಗೂಡು ನಿರ್ಮಿಸಿವೆ. ಗೀಜಗ ಹಕ್ಕಿ ಇಕ್ಕಳದಂಹ ತನ್ನ ಚಿಕ್ಕ ಚುಂಚಿನಲ್ಲಿ ನೇಯುವ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಸರಿಸಾಟಿಯಾಗಲಾರದು. ಈ ಹಕ್ಕಿಗಳಿಗೆ ಪ್ರಮುಖ ವೈರಿಯೇ ಮಾನವ. ಕಾಲು ಚೀಲದ ಆಕಾರದಲ್ಲಿ ಸುಂದರವಾಗಿ ನಿರ್ಮಾಣವಾಗುವ ಇದರ ಗೂಡುಗಳು ಕೂಡ ಅಲಂಕಾರಿಕ ಸಾಧನವಾಗಿದೆ. ಹಲವಾರು ಕಾಳಜಿಯುಳ್ಳವರು ಈ ಬಗ್ಗೆ ವಿವರಿಸಿ ಗೂಡನ್ನು ಕೀಳದಂತೆ ಮನವಿ ಮಾಡುತ್ತಿದ್ದಾರೆ.

ಗೀಜಗ ಹಕ್ಕಿಗಳ ಗೂಡುಗಳು
ಗೀಜಗ ಹಕ್ಕಿಗಳ ಗೂಡುಗಳು

ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ ಈ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ. ಗೂಡು ಕಟ್ಟುವ ಕಾಯಕದಲ್ಲಿ ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದುಕೊಳ್ಳುತ್ತದೆ. ನೋಡಲಿಕ್ಕೆ ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ತೀರಾ ಹತ್ತಿರ ಕೂಡಾ. ಈ ಹಕ್ಕಿಗಳು ಸಂಘ ಜೀವನ ನಡೆಸುತ್ತವೆ.
ಗಂಡು ಗೀಜಗ ಅತ್ಯಂತ ಚಾಕಚಕ್ಯತೆಯಿಂದ ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಗೂಡು ನೇಯ್ದಾದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ. ನಂತರ ನೂತನ ಗೃಹ ಪ್ರವೇಶ.
‘ಗಣೇಶ ಹಬ್ಬದ ಸಮಯದಲ್ಲಿ ಹಲವರು ಈ ಕಲಾತ್ಮಕವಾದ ಗೂಡನ್ನು ಕಿತ್ತು ಮಾರುವ ರೂಢಿ ಇತ್ತೀಚೆಗೆ ಬೆಳೆಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಈ ಬಾರಿ ಯಾರೂ ಗೀಜಗನ ಗೂಡುಗಳನ್ನು ಅಲಂಕಾರದ ಹೆಸರಿನಲ್ಲಿ ಖರೀದಿಸಬೇಡಿ. ಹಾಗೇನಾದರೂ ಗೂಡನ್ನು ಕೀಳುವುದು ಅಥವಾ ಮಾರುವುದು ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಯವರಿಗೆ ತಿಳಿಸಿ’ ಎಂದು ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್‌ ತಿಳಿಸಿದರು.

ಸುಸ್ಥಿರ ಬೇಸಾಯದ ಕಡೆ ಮಹತ್ವದ ಹೆಜ್ಜೆ

0

ಜೀವಾಮೃತ, ಪಂಚಗವ್ಯ, ಬೇವಿನರಸದ ಸಿಂಪಡನೆಗಳಿಂದ ಬೆಳೆಗೆ ತಗುಲುವ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಎಫ್.ಇ.ಎಸ್ ಸಂಸ್ಥೆಯ ಯೋಜನಾ ಅಧಿಕಾರಿ ಶಿಲ್ಪಾ ಎಸ್. ನಲವಡೆ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಗುರುವಾರ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ವತಿಯಿಂದ ನಡೆದ ರೈತರಿಗೆ ಸುಸ್ಥಿರ ಬೇಸಾಯದ ಕುರಿತು ತರಬೇತಿಯಲ್ಲಿ ಅವರು ಮಾತನಾಡಿದರು.
ರಾಗಿ ಬೆಳೆಗಳಲ್ಲಿ ಕಂಡುಬರುತ್ತಿರುವಂತಹ ಬೀಜದ ಮೋಳಕೆ ಒಡೆಯುವಿಕೆಯಲ್ಲಿನ ಕೋರತೆ, ಮಣ್ಣಿನ ಫಲವತ್ತತೆಯಲ್ಲಿನ ಕೋರತೆಯಿಂದ ರೋಗಗಳ ಹೆಚ್ಚುತ್ತದೆ. ರಾಗಿ ವ್ಯವಸಾಯಕ್ಕೆ ಆಳವಾದ ಬಿತ್ತನೆಯಿಂದಾಗಿ ಬೀಜ ಭೂಮಿಯಲ್ಲಿಯೇ ಸುಟ್ಟು ಹೋಗುವ ಸಂಭವಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ಇವುಗಳ ಮೇಲೆ ಈಗಿನಿಂದಲೇ ಗಮನಹರಿಸಿ ಜೀವಾಮೃತ, ಪಂಚಗವ್ಯ, ಬೇವಿನರಸದ ಸಿಂಪಡನೆಗಳಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಅವರು ವಿವರಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ, ತಿಮ್ಮನಾಯಕನಹಳ್ಳಿ, ಬಶೆಟ್ಟಿಹಳ್ಳಿ, ಎಸ್.ದೇವಗಾನಹಳ್ಳಿ, ದಿಬ್ಬೂರಹಳ್ಳಿ, ಕುಂದಲಗುರ್ಕಿ ಗ್ರಾಮ ಪಂಚಾಯಗಳ ೫೮ ಗ್ರಾಮಗಳಲ್ಲಿ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ವತಿಯಿಂದ ರೈತರಿಗೆ ಸುಸ್ಥಿರ ಬೇಸಾಯದ ಕುರಿತು ತರಬೇತಿಯನ್ನು ಒಂದು ತಿಂಗಳ ಕಾಲ ನೀಡಲಾಗುತ್ತಿದೆ. ಸುಮಾರು 1,100 ರೈತರಿಗೆ ತರಬೇತಿ ನೀಡುತ್ತಿರುವುದಾಗಿ ಹೇಳಿದರು.
ಎಫ್.ಇ.ಎಸ್ ಸಂಸ್ಥೆಯ ಯೋಜನಾಧಿಕಾರಿ ಶಿಲ್ಪಾ ಮಾತನಾಡಿ, ಬೀಜಗಳು ಬಿಡಿ ಬಿಡಿಯಾಗಿ ಹುಟ್ಟಿದರೆ ಮಾತ್ರ ರಾಗಿ ಕವಲು ಒಡೆಯಲು ಅವಕಾಶ ದೊರೆಯುತ್ತದೆ ಹಾಗೂ ತೆನೆಗಳು ಹೆಚ್ಚಾಗುತ್ತದೆ ಮತ್ತು ಇದರಿಂದ ರೈತರಿಗೆ ಇಳುವರಿ ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ ರೈತರು ಬಿತ್ತನೆ ಸ್ಥಳದಲ್ಲಿ ಕೆಲವು ಜಾಗದಲ್ಲಿ ಬೆಳೆಬರದಿದ್ದರೆ, ಅಂತಹ ಜಾಗಗಳಲ್ಲಿ ಹೆಚ್ಚಾಗಿ ಹುಟ್ಟಿರುವ ರಾಗಿ ಪೈರುಗಳನ್ನು ಖಾಲಿ ಇರುವ ಸ್ಥಳಗಳಲ್ಲಿ ನಾಟಿ ಮಾಡುವದರಿಂದ, ಖಾಲಿ ಜಾಗಗಳಲ್ಲಿಯೂ ಬೆಳೆಯನ್ನು ಕಾಣಬಹುದು ಹಾಗೂ ಹೆಚ್ಚು ಇಳುವರಿಯನ್ನು ಪಡೆಯಬಹುದು.
ಈ ಸಂದರ್ಭದಲ್ಲಿ ಎಫ್.ಇ.ಎಸ್ ಸಂಸ್ಥೆಯ ಸಿಬ್ಬಂದಿಗಳಾದ ಲೀಲಾವತಿ, ಸೌಭಾಗ್ಯ, ಗೋಪಿ ಹಾಜರಿದ್ದರು.

ವಿದ್ಯಾಸಿರಿ, ಶುಲ್ಕ ವಿನಾಯಿತಿ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

0

2016–17ನೇ ಸಾಲಿನಲ್ಲಿ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಪ್ರವರ್ಗ–1, 2ಎ, 3ಎ ಮತ್ತು 3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು 2016–17ನೇ ಸಾಲಿಗೆ ‘ಊಟ ಮತ್ತು ವಸತಿ ಸಹಾಯ ಯೋಜನೆ (ವಿದ್ಯಾಸಿರಿ)’, ‘ಮೆಟ್ರಿಕ್ ನಂತರ ವಿದ್ಯಾರ್ಥಿವೇತನ’ ಮತ್ತು ‘ಶುಲ್ಕವಿನಾಯಿತಿ’ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಡಿ.ಆರ್.ಶಂಕರ್ ತಿಳಿಸಿದ್ದಾರೆ.
ಈ ಮೇಲ್ಕಂಡ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾದವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರವರ್ಗ–1 ರ ವಿದ್ಯಾರ್ಥಿಗಳಿಗೆ 2.5 ಲಕ್ಷ ರೂ ಮತ್ತು 2ಎ, 3ಎ ಮತ್ತು 3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಪೋಷಕರಿಗೆ 1 ಲಕ್ಷ ರೂ ವಾರ್ಷಿಕ ಆದಾಯ ಮಿತಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗೆ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯವರನ್ನು ಸಂಪರ್ಕಿಸಬಹುದು. ಇಲಾಖೆಯ ವೆಬ್ಸೈಟ್ www.backwardclasses.kar.nic.in,  ಅಥವಾ karepass.cgg.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಅವಿಭಜಿತ ಕೋಲಾರ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನಕ್ಕೆ ಕಥೆಗಳ ಆಹ್ವಾನ

0

ಬೆಂಗಳೂರಿನ ನಿವೇದಿತ ಪ್ರಕಾಶನದ ಉಮೇಶ್ ಅವಿಭಜಿತ (ಕೋಲಾರ, ಚಿಕ್ಕಬಳ್ಳಾಪುರ) ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನವನ್ನು ಪ್ರಕಟಿಸಲು ಮುಂದಾಗಿದ್ದಾರೆ. ಹಾಗಾಗಿ ಆಯ್ಕೆಗೆ ಅನುಕೂಲವಾಗುವಂತೆ ಎರಡು ಉತ್ತಮ ಕಥೆಗಳನ್ನು ಈ ಕೆಳಗಿನ ಇ-ಮೇಲ್ ವಿಳಾಸಗಳಲ್ಲಿ ಒಂದಕ್ಕೆ ಕಳುಹಿಸಬಹುದು ಎಂದು ಸಾಹಿತಿ ಸ.ರಘುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಿಭಜಿತ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನವನ್ನು ಸಂಪಾಧಿಸುವ ಜವಾಬ್ದಾರಿಯನ್ನು ಸ.ರಘುನಾಥ, ಆರ್.ವಿಜಯರಾಘವನ್ ಹಾಗೂ ಬಂಗಾರಪೇಟೆಯ ಕಾ.ಹು.ಚಾನ್ಪಾಷ ಅವರಿಗೆ ವಹಿಸಲಾಗಿದೆ.
ಈ ಸಂಕಲನ ಅರ್ಥಪೂರ್ಣ ಅನ್ನಿಸಲು ಎಲ್ಲಾ ಲೇಖಕರ ಕಥೆಯೂ ಇರಬೇಕೆಂಬುದು ನಮ್ಮ ಅಭಿಲಾಶೆ. ಹಾಗಾಗಿ ಆಯ್ಕೆಗೆ ಅನುಕೂಲವಾಗುವಂತೆ ಎರಡು ಉತ್ತಮ ಕಥೆಗಳನ್ನು ಕಳುಹಿಸಬಹುದು. ಒಂದು ವೇಳೆ ಇಮೇಲ್ ಅನುಕೂಲವಿಲ್ಲವಾದಲ್ಲಿ ಅದನ್ನೇ ಟೈಪ್ ಮಾಡಿಸಿ ಸಿ.ಡಿ. ಮೂಲಕ ಸಂಪಾದಕರ ವಿಳಾಸಕ್ಕೆ ಕಳುಹಿಸಿಕೊಡಬಹುದು.
ಕಥೆ ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ. ಕಥೆಗಳು ೨೦೦೦ ಪದಗಳ ಮಿತಿಯಲ್ಲಿರಲಿ. ಜೊತೆಗೆ ಕಥೆಗಾರರ ಸಂಕ್ಷಿಪ್ತ ಪರಿಚಯ. ಪ್ರಕಟಿತ ಕಥೆಯಾಗಿದ್ದರೆ ದಯವಿಟ್ಟು ಅದರ ವಿವರವನ್ನು ಕಥೆಯ ಕಡೇ ಪುಟದಲ್ಲಿ ತಿಳಿಸಬೇಕು.
ಕಥೆಗಳ ಆಯ್ಕೆಗಾಗಿ ಇಬ್ಬರು ಓದುಗರು, ಇಬ್ಬರು ಕಥೆಗಾರರು, ವಿಮರ್ಶಕರೊಬ್ಬರನ್ನು ಒಳಗೊಂಡ ಆಯ್ಕೆ ಸಮಿತಿ ಇದ್ದು ಅವರು ಆಯ್ದ ಕಥೆಗಳನ್ನು ಸಂಕಲಿಸಲಾಗುವುದು.
ಈ ಕಾರ್ಯ ಮುಖ್ಯವಾಗಿ ಆಗಬೇಕೆಂಬ ತುಡಿತದಿಂದ ಮಾಡುತ್ತಿರುವುದು. ಗೌರವಧನ ನೀಡುವುದು ಕಷ್ಟವಾದುದು. ಹಾಗಾಗಿ ಇದಕ್ಕೆ ಪರ್ಯಾಯವೆಂದು ಭಾವಿಸಿ ಐದು ಪ್ರತಿಗಳನ್ನು ಗೌರವದಿಂದ ನೀಡಲಾಗುವುದು. ಕಥೆಗಳು ನಮಗೆ ಆಗಸ್ಟ್ 15 ರ ಒಳಗೆ ತಲುಪಬೇಕು ಎಂದು ತಿಳಿಸಿದ್ದಾರೆ.
ಇ-ಮೇಲ್: raghunathamalitata@gmail.com, viji56@gmail.com, kahuchanpasha15@gmail.com
ಸಂಪರ್ಕಕ್ಕೆ: ೯೪೮೩೧೩೭೮೮೫, ೯೯೦೦೨೬೩೧೭೮, ೮೫೫೩೭೦೧೫೮೫.
ವಿಳಾಸ: ಸ.ರಘುನಾಥ, ಕಂಟ್ರಾಕ್ಟರ್ರಾಜಣ್ಣನವರ ಮನೆ, ವೇಣು ವಿದ್ಯಾ ಸಂಸ್ಥೆ ಎದುರು,
ಕುವೆಂಪು ವೃತ್ತ, ಶ್ರೀನಿವಾಸಪುರ, ಕೋಲಾರಜಿಲ್ಲೆ – ೫೬೩ ೧೩೫

ಕಂಬದಿಂದ ಬಿದ್ದ ಲೈನ್ಮನ್

0

ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದಲ್ಲಿ ಗುರುವಾರ ವಿದ್ಯುತ್ ಹರಿದ ಕಾರಣ ಕಂಬದಿಂದ ಲೈನ್ಮನ್ ಕೆಳಗೆ ಬಿದ್ದು ತೀವ್ರವಾಗಿ ಪೆಟ್ಟಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ಹತ್ತಿದ್ದ ಶಂಕರ್(25) ವಿದ್ಯುತ್ ಶಾಕ್ ಹೊಡೆದ ಪರಿಣಾಮ ಕೆಳಗೆ ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಶಂಕರ್ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ವೈ.ಹುಣಸೇನಹಳ್ಳಿ ವಿದ್ಯುತ್ ಸ್ಟೇಷನ್ನಲ್ಲಿ ದೀಪಗಳನ್ನು ಅಳವಡಿಸುವ ವಿಷಯ ತಿಳಿಸಿ ಎಲ್.ಸಿ ಪಡೆದಿದ್ದರೂ ವಿದ್ಯುತ್ ಹರಿದ ಬಗ್ಗೆ ಬೆಸ್ಕಾಂ ಎಇಇ ಪರಮೇಶ್ವರ್ ಅವರನ್ನು ಕೇಳಿದಾಗ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.

ಪೋಡಿ ಮುಕ್ತ ಅಭಿಯಾನ

0

ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿಸಲು ಪೋಡಿಮುಕ್ತ ಗ್ರಾಮ ಅಭಿಯಾನ ಸಹಕಾರಿಯಾಗಲಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಗುರುವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಪೋಡಿ ಮುಕ್ತ ಅಭಿಯಾನದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಪೋಡಿ ಮುಕ್ತ ಅಭಿಯಾನದ ಅಡಿಯಲ್ಲಿ ಭೂಮಾಪಕರು ಗ್ರಾಮದಲ್ಲಿ ಅಳತೆ ಕೆಲಸ ಕೈಗೊಳ್ಳಲು ಬಂದಾಗ ಅಗತ್ಯ ಮಾಹಿತಿ, ಸಹಕಾರ ನೀಡಿ, ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಭೂಮಾಪನ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಳತೆಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಭೂದಾಖಲೆ ಉಪನಿರ್ದೇಶಕ (ಡಿಡಿಎಲ್ಆರ್) ಅಜ್ಜಪ್ಪ ಮಾತನಾಡಿ ನಾಗರಿಕರು ವರ್ಷದುದ್ದಕ್ಕೂ ತಾಲ್ಲೂಕು ಕಚೇರಿಗೆ ಸುತ್ತುವ ಬದಲಿಗೆ ಅಭಿಯಾನದ ಮೂಲಕ ತಮ್ಮ ಗ್ರಾಮಕ್ಕೆ ಭೂಮಾಪನ ತಂಡ ಭೇಟಿ ನೀಡಿದಾಗ ಅಗತ್ಯ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಗತ್ಯ ಮಾಹಿತಿ ನೀಡಿ ಅಳತೆಗೆ ಸಹಕರಿಸಬೇಕು. ಈ ಮೂಲಕ ಭೂ ದಾಖಲೆ ನವೀಕರಿಸಿಕೊಂಡು ಜಮೀನುಗಳ ಹಕ್ಕು ಮತ್ತು ಗಡಿ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ಈಗಾಗಲೇ ಹದಿನಾಲ್ಕು ಗ್ರಾಮಗಳಲ್ಲಿ ಪೋಡಿ ಮುಕ್ತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು ೩೦೦೦ ಏಕ ಮಾಲೀಕತ್ವದ ಫಹಣಿಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ ಎಂದರು.
ಭೂಮಿ ಇಲಾಖೆಯ ಹಿರಿಯ ಅಧಿಕಾರಿ ಸಮರ್ಥರಾವ್ ಮಾತನಾಡಿ ಒಂದು ಹಿಸ್ಸೆಗೆ, ಒಂದು ಆರ್ಟಿಸಿ, ಒಂದು ನಕ್ಷೆ, ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು, ಆರ್.ಟಿ.ಸಿ ಮತ್ತು ಭೂದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು, ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದ್ದು ಎಲ್ಲ ರೈತರು ಸಹಕರಿಸುವಂತೆ ಕೋರಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ಮುನಿಯಪ್ಪ, ತನುಜಾ ರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ತಹಸೀಲ್ದಾರ್ ಕೆ.ಎಂ.ಮನೋರಮಾ, ಎಡಿಎಲ್ಆರ್ ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಮೋಹನ್, ಗ್ರಾಮ ಪಂಚಾಯತಿ ಪಿಡಿಓ ವಲೀಬಾಷ ಮತ್ತಿತರರು ಹಾಜರಿದ್ದರು.

ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡಿದ್ದಾರೆ ಡಾ.ಅಬ್ದುಲ್ ಕಲಾಂ

0

ಕೋಟ್ಯಾಂತರ ಯುವಕರಿಗೆ ಕನಸುಗಳನ್ನು ಕಟ್ಟಿಕೊಟ್ಟ, ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತಿದ್ದ ಮಹಾನ್ ನಾಯಕ, ಭಾರತದ ಮಿಸ್ಸೈಲ್ ಮ್ಯಾನ್ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಎಂದು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಡಾ. ಅಬ್ದುಲ್ ಕಲಾಂ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಮಾಡುತ್ತಾ ಮಾತನಾಡಿದರು.
ಡಾ. ಅಬ್ದುಲ್ ಕಲಾಂ ಅವರು ಕರ್ಮಯೋಗಿ. ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಚಿಕ್ಕ ಮಕ್ಕಳಿಂದ ವಿಶ್ವವಿದ್ಯಾಲಯದ ಮಕ್ಕಳವರಗೆ ಅವರ ಮಟ್ಟಕ್ಕೆ ಅರ್ಥವಾಗುವ ರೀತಿಯಲ್ಲಿ ವೈಜ್ನಾನಿಕ ವಿಷಯಗಳ ಬಗ್ಗೆ, ಅವರ ಭವಿಷ್ಯ ರೂಪಿಸುವುದರ ಬಗ್ಗೆ ಕಲಾಂ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಅವರ ನುಡಿ ಮತ್ತು ಬದುಕು ಪ್ರೇರಣಾದಾಯಕ ಎಂದು ನುಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಅನೂಷ, ಗೌತಮ ಕುಲಕರ್ಣಿ ಮತ್ತು ಸಹನಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಆಲೂರು ವೆಂಕಟರಾಯ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಎಂ.ಆರ್.ಗೋಪಿನಾಥ್ ಹಾಜರಿದ್ದರು.

ಬಂದ್ ಗೆ ಬೆಂಬಲ

0

ಶಿಡ್ಲಘಟ್ಟ ತಾಲ್ಲೂಕು ವಕೀಲರ ಸಂಘದಿಂದ ಗುರುವಾರ ನ್ಯಾಯಾಂಗ ಕಲಾಪದಿಂದ ಹೊರಗುಳಿಯುವ ಮೂಲಕ ಬಂದ್ಗೆ ಬೆಂಬಲ ಸೂಚಿಸಿದರು.

ಕಾಮನಬಿಲ್ಲು

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದ ಮೇಲೆ ಗುರುವಾರ ಮುಂಜಾನೆ ಮೂಡಿದ್ದ ಕಾಮನಬಿಲ್ಲು ದೇವಸ್ಥಾನದ ಮೇಲಿನ ಪ್ರಭಾವಳಿಯಂತೆ ಗೋಚರಿಸಿತ್ತು.

ಬಂದ್ ಬೆಂಬಲಿಸಿದ ತಾಲ್ಲೂಕು ಕ.ಸಾ.ಪ

0

ಮಹದಾಯಿ ಮಧ್ಯಂತರ ಆದೇಶ ಕನ್ನಡಿಗರಿಗೆ ಆಘಾತಕಾರಿಯಾಗಿದ್ದು, ರಾಜ್ಯದ ಕನ್ನಡಿಗರ ಹಿತ ಕಾಯುವ ಕಾಯಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಹ ರಾಜ್ಯ ಕ.ಸಾ.ಪ ದ ಸಲಹೆಯಂತೆ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ತಾಲ್ಲೂಕು ಕ.ಸಾ.ಪ ವತಿಯಿಂದ ಶಿರಸ್ತೆದಾರ್ ನಿರಂಜನಬಾಬು ಅವರಿಗೆ ಮನವಿಯನ್ನು ಸಲ್ಲಿಸಿ ಅವರು ಮಾತನಾಡಿದರು.
ಕಳಸಾ ಬಂಡೂರಿ ಮಹದಾಯಿ ಮಧ್ಯಂತರ ಆದೇಶದಲ್ಲಿ ಕನ್ನಡಿಗರ ಕುಡಿಯುವ ನೀರಿಗೆ ನ್ಯಾಯ ಕಲ್ಪಿಸಲು ಕೋರಿ ಸರ್ವೋಚ್ಚ ನಾಯ್ಯಾಲಯದಲ್ಲಿ ಮೇಲ್ಮನವಿಗಾಗಿ ಒತ್ತಾಯಿಸಿ ಮನವಿ ಸಲ್ಲಿಸುತ್ತಿರುವುದಾಗಿ ಹೇಳಿದರು.
ರೂಪಸಿ ರಮೇಶ್, ನಾಗರಾಜ್, ಸಿ.ಎಂ.ರಾಜಶೇಖರ್, ಜಿ.ಎನ್.ಶ್ಯಾಮಸುಂದರ್, ಸತ್ಯನಾರಾಯಣರಾವ್, ತಮೀಮ್, ರಾಮಚಂದ್ರಪ್ಪ, ಜಗದೀಶ್ಬಾಬು, ವಿ.ಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಂದ್ ಗೆ ಉತ್ತಮ ಪ್ರತಿಕ್ರಿಯೆ

0

ತಾಲ್ಲೂಕಿನಾದ್ಯಂತ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗುರುವಾರ ಜನರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ರಸ್ತೆಯಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಪೆಟ್ರೋಲ್ ಬಂಕ್, ಸಿನಿಮಾ ಮಂದಿರಗಳು, ಬ್ಯಾಂಕ್ಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು.
ಮಹದಾಯಿ ಮಧ್ಯಂತರ ಆದೇಶ ಕನ್ನಡಿಗರಿಗೆ ವಿರುದ್ಧವಾಗಿದೆ. ನೀರಿನ ವಿಷಯದಲ್ಲಿ ಕರ್ನಾಟಕದ ಗಡಿಭಾಗದಲ್ಲಿನ ಜನರಿಗೆ ಸದಾ ನೀರಿನ ವಿಷಯದಲ್ಲಿ ತಾರತಮ್ಯವಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಆರೋಪಿಸಿದರು.
ಬೈಕ್ಗಳಲ್ಲಿ ರ್ಯಾಲಿ ನಡೆಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬಸ್ ನಿಲ್ದಾಣದ ಬಳಿ ಮಾನವ ಸರಪಣಿ ನಿರ್ಮಿಸಿ ತಿಂಡಿ ಸೇವಿಸಿದರು.
ತಾಲ್ಲೂಕು ವಕೀಲರ ಸಂಘದಿಂದ ನ್ಯಾಯಾಂಗ ಕಲಾಪದಿಂದ ಹೊರಗುಳಿಯುವ ಮೂಲಕ ಬಂದ್ಗೆ ಬೆಂಬಲ ಸೂಚಿಸಿದರು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.
ಇದು ಉತ್ತರ ಕರ್ನಾಟಕ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂಥ ಮಾನವೀಯ ವಿಚಾರವಾಗಿದ್ದು, ನ್ಯಾಯಾಧೀಕರಣ ನೀಡಿದ ತೀರ್ಪು ಸರಿಯಿಲ್ಲ. ಲೋಕಸಭೆಯಲ್ಲಿ ಜನರ ಪರ ಧ್ವನಿಯಾದಬೇಕಿರುವ ಜನಪ್ರತಿನಿಧಿಗಳು ತೀರ್ಪಿನ ವಿದುದ್ಧ ಧ್ವನಿ ಎತ್ತುವ ಮೂಲಕ ಜನರ ಹಿತ ಕಾಯಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಆಗ್ರಹಿಸಿದರು.
ಸಂಬಳಕ್ಕಾಗಿ ಪ್ರತಿಭಟನೆ, ಧ್ವನಿ ಎತ್ತುವ ಸಂಸದರು, ಈಗ ಕೇಂದ್ರದ ಮೇಲೆ ಒತ್ತಡ ಹೇರಿ, ಉತ್ತರ ಕರ್ನಾಟಕದ ಜನರ ಬದುಕಿನ ಪ್ರಶ್ನೆಗೆ ಸರಿಯಾದ ಸಮಾಧಾನ ನೀಡಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ನಮಗೆ ನೀರಿನ ತೊಂದರೆಯ ಕಷ್ಟ ತಿಳಿದಿರುವ ಕಾರಣ ಉತ್ತರ ಕರ್ನಾಟಕದವರ ಕಷ್ಟಕ್ಕೆ ಸ್ಪಂದಿಸುತ್ತಿರುವುದಾಗಿ ಹೇಳಿದರು.
ರೈತ ಸಂಘದ ನಾರಾಯಣಸ್ವಾಮಿ, ಮುನಿನಂಜಪ್ಪ, ಆನೂರು ದೇವರಾಜ್, ರಾಮಕೃಷ್ಣಪ್ಪ, ಶ್ರೀನಿವಾಸರೆಡ್ಡಿ, ದೇವರಾಜ್, ವೇಣುಗೋಪಾಲ್, ಹಯಾತ್ಖಾನ್, ಮಳಮಾಚನಹಳ್ಳಿ ದೇವರಾಜ್, ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರಿಂದ ಪ್ರತಿಭಟನೆ

0

ಉತ್ತರ ಭಾರತದಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮನೋರಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದೇಶದಾಧ್ಯಂತ ಬಿಜೆಪಿ ಸರ್ಕಾರವಿರುವ ಬಹುತೇಕ ರಾಜ್ಯಗಳಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ, ಸಾಮಾಜಿಕ ಬಹಿಷ್ಕಾರದಂತಹ ಕೃತ್ಯಗಳು ನಡೆಯುತ್ತಿವೆ. ಮಾಯಾವತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ದಯಾಶಂಕರ್ ಸಿಂಗ್ರನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗುಜರಾತಿನಲ್ಲಿರುವ ಬಿಜೆಪಿಯ ಗೋರಕ್ಷಕದಳವನ್ನು ನಿಷೇಧ ಮಾಡಬೇಕು. ದೇಶದ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ರಾಜ್ಯಗಳನ್ನು ದಲಿತರಿಗೆ ನೀಡಬೇಕು ಎಂದು ಒತ್ತಾಯಿಸಿ ಅವರು ತಹಸೀಲ್ದಾರ್ ಕೆ.ಎಂ.ಮನೋರಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಕೆ.ಎಂ.ಮನೋರಮಾ ಕೂಡಲೇ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕ.ದ.ಸಂ.ಸ ತಾಲ್ಲೂಕು ಸಂಚಾಲಕ ಅರುಣ್ಕುಮಾರ್, ಸಂಘಟನಾ ಸಂಚಾಲಕರಾದ ಮುನಿವೆಂಕಟಪ್ಪ, ಅಶೋಕ್, ಕಿರಣ್ಕುಮಾರ್, ವೇಣುಗೋಪಾಲ್, ದೇವರಾಜ್ ಮತ್ತಿತರರು ಹಾಜರಿದ್ದರು.

ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ

0

ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶಗಳಲ್ಲಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದಾಗಿದೆ ಎಂದು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ೧೯೧೫ರಲ್ಲಿ ಹುಟ್ಟಿಕೊಂಡ ‘ಕನ್ನಡ ಸಾಹಿತ್ಯ ಪರಿಷತ್’ಗೆ ಇದೀಗ ನೂರೊಂದರ ಸಂಭ್ರಮ. ಈ ಸವಿನೆನಪಿಗಾಗಿ ತಾಲ್ಲೂಕಿನ 101 ಶಾಲೆಗಳಲ್ಲಿ ‘ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮವನ್ನು ತಾಲ್ಲೂಕು ಕ.ಸಾ.ಪ ವತಿಯಿಂದ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ಅವರು ವಿವರಿಸಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಆರನೇ ತರಗತಿಯ ಲೋಕೇಶ್, ಏಳನೇ ತರಗತಿಯ ದೀಕ್ಷ ಮತ್ತು ಮಾಧುರ್ಯ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಶಾಮಂತಿ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಶಿಕ್ಷಕರಾದ ಎಲ್.ನಾಗಭೂಷಣ್, ರಾಮಕೃಷ್ಣಪ್ಪ, ಗಂಗಾಧರಪ್ಪ, ವರಲಕ್ಷ್ಮಿ ಹಾಜರಿದ್ದರು.

ಸನ್ಮಾನ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಈಚೆಗೆ ನಿವೃತ್ತ ಶಿಕ್ಷಕ ಸಿ.ಎಚ್.ಶಿವರಾಮ್ ಅವರನ್ನು ದೇವಾಲಯದ ಆಡಳಿತ ಮಂಡಳಿಯವರು ಸನ್ಮಾನಿಸಿದರು.

ಊರ ದೇವತೆಗಳ ಜಾತ್ರಾ ಮಹೋತ್ಸವ

0

ನಗರದ ವಿವಿಧ ಬಡಾವಣೆಗಳಲ್ಲಿ ದೇವತೆಗಳ ಜಾತ್ರಾ ಮಹೋತ್ಸವವನ್ನು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಸಿದ್ದಾರ್ಥನಗರ, ಕುರುಬರಪೇಟೆ, ಕಾಮಟಿಗರಪೇಟೆ, ನೆಲ್ಲೀಮರದಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಪೂಜಮ್ಮ, ಮಾರಮ್ಮ ಮತ್ತು ಗಂಗಮ್ಮ ದೇವತೆಗಳಿಗೆ ಜಾತ್ರೆಯ ಅಂಗವಾಗಿ ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಪೂಜೆ ಸಲ್ಲಿಸಿದರು.
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಗಳು, ಜನತೆಯಲ್ಲಿ ಸಾಮರಸ್ಯ ಮೂಡಿಸಲು ಸಹಕಾರಿಯಾಗುತ್ತದೆ. ಎಲ್ಲಾ ಜನರು ಒಟ್ಟಿಗೆ ಕೂಡಿ ಬಾಳಲು ಅನುಕೂಲ ಕಲ್ಪಿಸುವುದರ ಜೊತೆಗೆ, ಎಲ್ಲಾ ಜನರು ಸಂಭ್ರಮ ಸಡಗರಗಳಿಂದ ಧಾರ್ಮಿಕ ಆಚರಣೆ ಮಾಡಲು ಸಾಧ್ಯವಾಗುತ್ತದೆ, ಆದ್ದರಿಂದ ಎಲ್ಲಾ ಸಮುದಾಯಗಳು ಸಂಘಟಿತರಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ವರ್ಷದಲ್ಲಿ ಉತ್ತಮವಾದ ಮಳೆ, ಬೆಳೆಗಳು, ಸಮೃದ್ಧಿಯಾಗಿ ಆಗಲಿ ಎಂದು ಬೇಡಿಕೊಳ್ಳುತ್ತಿರುವುದಾಗಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದವರು ತಿಳಿಸಿದರು.
ಮೋಡಮುಸುಕಿದ ವಾತಾವರಣದ ನಡುವೆಯೆ ನಗರದ ವಿವಿಧ ಬಡಾವಣೆಗಳ ಮನೆ ಮನೆಯಲ್ಲೂ ಜಾತ್ರೆಯ ಸಡಗರ, ಮನೆ ಮಾಡಿತ್ತು, ದೂರದ ಊರುಗಳಿಂದ ಬಂದಿದ್ದ ಬಂಧುಗಳು, ಸ್ನೇಹಿತರಿಂದ ಮನೆಗಳಲ್ಲಿ ಸಂಭ್ರಮ ಏರ್ಪಟ್ಟಿತ್ತು, ಜಾತ್ರೆಯ ಅಂಗವಾಗಿ ನಗರದ ದೇವಾಲಯಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು, ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು, ಜನರು ಪ್ರತಿ ವರ್ಷದಂತೆ ಉತ್ತಮ ಮಳೆ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ಹರಕೆ ಸಲ್ಲಿಸಲು ಹಿರಿಯ ಮುಖಂಡರುಗಳು ಜನತೆಗೆ ನೆರವಾಗಿದ್ದರು.
ಜಾತ್ರೆಯ ವಿಶೇಷವಾಗಿ ನಗರದ ಬೀದಿಗಳನ್ನು ಸ್ವಚ್ಚಗೊಳಿಸಲಾಗಿತ್ತು, ಪ್ರತಿಯೊಂದು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡುವುದರ ಜೊತೆಗೆ, ದೇವಾಲಯಗಳಿಗೆ ಬರುತ್ತಿದ್ದ ಭಕ್ತಾಧಿಗಳಿಗೆ ಪ್ರಸಾದಗಳನ್ನು ವಿತರಣೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿದ್ದ ದೀಪಗಳನ್ನು ತಮ್ಮ ತಲೆಗಳ ಮೇಲೆ ಹೊತ್ತಿದ್ದ ಹೆಣ್ಣು ಮಕ್ಕಳು ಶ್ರಧ್ದಾಭಕ್ತಿಯಿಂದ ಮೆರವಣಿಗೆಯ ಮೂಲಕ ತೆರಳಿ, ಗಂಗಾದೇವಿ, ಪೂಜಮ್ಮ, ಸಲ್ಲಾಪುರಮ್ಮ, ಯಲ್ಲಮ್ಮ, ನಾಗಲಮುದ್ದಮ್ಮ ಮುಂತಾದ ದೇವರುಗಳಿಗೆ ಹರಕೆ ತೀರಿಸಿದರು.

ಬಿಜೆಪಿ ಪಕ್ಷದಿಂದ ಉಚಿತ ಪ್ರಯಾಣಕ್ಕೆ ಬಸ್‌ ವ್ಯವಸ್ಥೆ

0

ಕೆಎಸ್‌ಆರ್‌ಟಿಸಿ ನೌಕರರು ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಒತ್ತಾಯಿಸಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ಎರಡು ಖಾಸಗಿ ಬಸ್‌ಗಳನ್ನು ಸೋಮವಾರ ನಿಯೋಜಿಸುವ ಮೂಲಕ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಯಿತು.
ರಾಜಾದ್ಯಾಂತ ಕೆಎಸ್‌ಆರ್‌ಟಿಸಿ ನೌಕರರು ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಒತ್ತಾಯಿಸಿ ಬಂದ್‌ಗೆ ಕರೆ ನೀಡಿರುವುದರಿಂದ ಸರ್ಕಾರಿ ಬಸ್ ನಿಲ್ದಾಣ ಬಸ್ಸುಗಳಿರದ ಕಾರಣ ಬಿಕೋ ಎನ್ನುತ್ತಿತ್ತು.
ಮುನ್ನೆಚ್ಚರಿಕ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗಳತ್ತ ಸುಳಿಯಲಿಲ್ಲ, ಎಂದಿನಂತೆಯೇ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.
ಸರ್ಕಾರಿ ಬಸ್‌ಗಳ ಸೌಲಭ್ಯಗಳು ಇಲ್ಲದ ಕಾರಣ ಸಾರ್ವಜನಿಕರು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಿದರು. ಬಂದ್ ಇರುವದರದ ಮಾಹಿತಿ ಇಲ್ಲದ ಕಾರಣ ಕೆಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಕುಳಿತಿದ್ದರು. ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಹೋಗಿ ಬರಲು ಅನುಕೂಲವಾಗಲೆಂದು ಬಿಜೆಪಿ ಪಕ್ಷದ ವತಿಯಿಂದ ನಿಯೋಜಿಸಿದ್ದ ಬಸ್ಸು ಕೆಲವರಿಗೆ ಅನುಕೂಲವಾಗಿ ಪರಿಣಮಿಸಿತ್ತು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್, ಪ್ರಧಾನ ಕಾರ್ಯದರ್ಶಿ ತರಬಳ್ಳಿ ಭಾಸ್ಕರರೆಡ್ಡಿ, ಪುರುಷೋತ್ತಮ್‌, ಖಂಡೇರಾವ್‌, ಮಧು, ಲೋಕೇಶ್‌, ಮಂಜುಳಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಾವೆಷ್ಟು ಕೊಳ್ಳುಬಾಕರು? – ಭಾಗ 1

0

ಇತ್ತೀಚೆಗೆ ಹೇರ್ ಟ್ರಿಮ್ಮರ್ ಒಂದನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಹುಕಾಡಿದೆ. ಹತ್ತಾರು ಬ್ರಾಂಡ್‍ನ ನೂರಾರು ಮಾದರಿಗಳು ಕಂಡುಬಂದವು. ಸ್ವಲ್ಪ ಗೊಂದಲವಾಯಿತು. ಆನ್‍ಲೈನ್‍ನಲ್ಲಿ ತರಿಸೋಣ ಎಂದು ಮಗ ಹೇಳಿದಾಗ ಹಲವಾರು ಜಾಲತಾಣಗಳಲ್ಲಿ ಕೈಯಾಡಿಸಿದೆವು. ನೂರಾರು ಬ್ರಾಂಡ್‍ನ ಸಾವಿರಾರು ಮಾದರಿಗಳು ಕಣ್ಣಿಗೆ ಬಿತ್ತು! ನನ್ನ ಗೊಂದಲ ಇನ್ನೂ ಹೆಚ್ಚಾಯಿತು!!
ಈ ತರಹದ ಅನುಭವ ನಿಮಗೆಲ್ಲರಿಗೂ ಆಗಿರಲು ಸಾಧ್ಯ. ಇವತ್ತು ಏನನ್ನಾದರೂ ಕೊಳ್ಳಲು ನಮಗೆಲ್ಲಾ ಸಾಕಷ್ಟು ಆಯ್ಕೆಗಳಿವೆ. ವಿಪರ್ಯಾಸವೆಂದರೆ ಈ ಆಯ್ಕೆಗಳು ನಮ್ಮ ಗೊಂದಲವನ್ನು ಹೆಚ್ಚಿಸಿವೆ. ಗುಣಮಟ್ಟ, ವೈವಿಧ್ಯತೆ, ಸೌಲಭ್ಯಗಳು, ಬೆಲೆ ಇವೆಲ್ಲವನ್ನೂ ಅಳೆದು ಸುರಿದು ಯಾವುದನ್ನು ಖರೀದಿಸಿದರೂ ಒಂದಂತೂ ಖಾತ್ರಿಯಾಗಿ ದೊರಕುತ್ತದೆ. ಅದೇನು ಗೊತ್ತೇ? ವಸ್ತು ಮನೆಗೆ ಬಂದ ಮೇಲೆ ನಾವು ಬೇರೆಯದನ್ನು ಕೊಳ್ಳಬೇಕಾಗಿತ್ತು ಎನ್ನುವ ಅತೃಪ್ತಿ! ಆರ್ಥಿಕ ವ್ಯವಸ್ಥೆ ಜಾಗತೀಕರಣವಾಗಿ ಮಾರುಕಟ್ಟೆ ಮುಕ್ತವಾದ ಮೇಲೆ ಗ್ರಾಹಕ ಎಂದೂ ತೃಪ್ತನಾಗಿ ಉಳಿಯುವುದು ಸಾಧ್ಯವೇ ಆಗುತ್ತಿಲ್ಲ. ನಮ್ಮೆಲ್ಲರ ಇಂತಹ ನಿರಂತರ ಅತೃಪ್ತಿಯೇ ಕೊಳ್ಳಬಾಕತನದ ಮೂಲಸೆಲೆ.
ಕಳೆದ ಇಪ್ಪತ್ತು ವರ್ಷಗಳಲ್ಲಿ ನಾವೆಲ್ಲಾ ಜಾಗತೀಕರಣದ ಬಗೆಗೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದೇವೆ. ಈ ಜಾಗತೀಕರಣದ ನೇರ ಪರಿಣಾಮವೆಂದರೆ ಇದು ನಮ್ಮ ಮಿದುಳಿನಲ್ಲಿ ಕೊಳ್ಳುಬಾಕತನವನ್ನು ವ್ಯವಸ್ಥಿತವಾಗಿ ಮತ್ತು ಆಳವಾಗಿ ಬೇರೂರಿಸಿದೆ ಹೀಗೆ ನಮ್ಮ ಮಿದುಳುಗಳಲ್ಲಿ ಕೊಳ್ಳುಬಾಕತನದ ನಶೆಯನ್ನು ಬಿತ್ತಲು ಮತ್ತು ಅದನ್ನು ನಿರಂತರವಾಗಿ ಪೋಷಿಸಿಕೊಂಡು ಹೋಗಲು ದೊಡ್ಡದೊಡ್ಡ ಕಾರ್ಪೋರೇಟ್‍ಗಳು ಉಪಯೋಗಿಸುವ ತಂತ್ರ ಪ್ರತಿತಂತ್ರ ಕುತಂತ್ರಗಳ ನವಿರು ನಾಜೂಕುಗಳನ್ನು ಒಳಹೊಕ್ಕು ನೋಡಿದಾಗ ಎಂತವರೂ ದಂಗಾಗಿ ಬಿಡುತ್ತಾರೆ. ಆದರೆ ಇವೆಲ್ಲವನ್ನು ಎಷ್ಟು ಸಹಜವಾಗಿ ಮತ್ತು ಸೂಕ್ಷ್ಮವಾಗಿ ಮಾಡಲಾಗುತ್ತಿದೆಯೆಂದರೆ ನಾವೆಲ್ಲಾ ನಾಗರಿಕ ಸಮಾಜದಲ್ಲಿ ಬದುಕಬೇಕಾದ ರೀತಿಯೇ ಇದು ಎಂದು ನಂಬಿಕೊಂಡುಬಿಟ್ಟಿದ್ದೇವೆ.
ಇವತ್ತಿನ ಕೊಳ್ಳುಬಾಕ ಸಂಸ್ಕøತಿಯ ಹಿಂದಿರುವ ಮುಖಗಳ ಬಗೆಗೆ ಬರೆಯುತ್ತಾ ಹೋದರೆ ಹತ್ತಾರು ಸಂಪುಟಗಳ ಗ್ರಂಥವನ್ನು ರಚಿಸಬಹುದು. ನಮ್ಮ ದಿನನಿತ್ಯದ ಬದುಕಿನಲ್ಲಿ ಇದರ ಪ್ರಭಾವವದ ಬಗೆಗೆ ಮಾತ್ರ ಸ್ಥೂಲವಾಗಿ ನೋಡೋಣ.
ಎಲ್ಲವನ್ನೂ ಮಾರಾಟ ಮಾಡಿ ಹಣ ಗಳಿಸಿ
ಇವತ್ತಿನ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲವನ್ನೂ ಮಾರಾಟ ಮಾಡಬಲ್ಲ ವಸ್ತುಗಳನ್ನಾಗಿ ಪರಿವರ್ತಿಸಲಾಗಿದೆ. ಮೇಲುನೋಟಕ್ಕೆ ಇದು ಅಂತಹ ವಿಶೇಷವಾದ ಅಂಶದಂತೆ ಕಾಣಿಸುವುದಿಲ್ಲ. ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಯಾಗುವುದು, ಅದರಿಂದ ಹಣದ ಕೈಬದಲಾವಣೆಯಾಗುತ್ತಾ, ಜನ ಸಮುದಾಯಕ್ಕೆ ಜೀವನೋಪಾಯವನ್ನು ಕಲ್ಪಿಸುವುದು ಲಾಗಾಯ್ತಿನಿಂದಲೂ ನಡೆದುಬಂದ ಪ್ರಕ್ರಿಯೆ. ಆದರೆ ಇದು ವಸ್ತುಗಳಿಗೆ ಮಾತ್ರ ಅನ್ವಯವಾಗುವ ಕಾಲವೊಂದಿತ್ತು. ಶಿಕ್ಷಣ ಸಾರ್ವಜನಿಕ ಆರೋಗ್ಯ, ಸಾಹಿತ್ಯ, ಕಲೆ, ಸಂಶೋಧನೆಗಳಂತಹ ದೂರಗಾಮೀ ಪರಿಣಾಮಗಳುಳ್ಳ ಮತ್ತು ಹಣ ಹೂಡುವಿಕೆ/ಗಳಿಸುವಿಕೆಗಿಂತ ಮಿಗಿಲಾದ ಉದ್ದೇಶಗಳುಳ್ಳ ಕ್ಷೇತ್ರಗಳನ್ನೂ ಕೂಡ ಈಗ ಬರೀ ಲಾಭದ ಮಾನದಂಡಗಳ ಮೇಲೆ ತೂಗಲಾಗುತ್ತದೆ. ಇದು ಹೋಗಲಿ ವ್ಯಕ್ತಿಯೊಬ್ಬನ ಪ್ರೇಮ, ಮಮತೆಯಂತಹ ಮೃದು ಭಾವನೆಗಳು ಮತ್ತು ತೀರಾ ಆಪ್ತವಾದ ಕಾಮವೂ ಕೂಡ ಇವತ್ತು ಮಾರುಕಟ್ಟೆ ವಸ್ತುಗಳಾಗಿವೆ. ಇಂತಿಂತಹ ಉಡುಗೊರೆಗಳನ್ನೂ ಕೊಟ್ಟರೆ ನಿಮ್ಮವರನ್ನು ಹೆಚ್ಚು ಪ್ರೇಮಿಸಬಹುದು; ಇಂತಿಂತಹ ಸೋಪು, ನ್ಯಾಪಿಗಳಿಂದ ತಾಯಂದಿರು ಮಕ್ಕಳನ್ನು ಹೆಚ್ಚು ಪ್ರೀತಿಸಬಹುದು; ಇಂತಿಂತಹ ಕಾಮವರ್ಧಕಗಳನ್ನು ಬಳಸಿ ದೀರ್ಘವಾಗಿ ಸಂಭೋಗಿಸಿ ನಿಮ್ಮ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳಬಹುದು(!)-ಇವೆಲ್ಲಾ ಇವತ್ತಿನ ಜಾಹಿರಾತಿನ ವಸ್ತುಗಳು ಮತ್ತು ಇದರಲ್ಲಿ ನಮಗೆ ವಿಶೇಷವೇನೂ ಕಾಣುವುದಿಲ್ಲ.
ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಇವತ್ತು ಧರ್ಮ, ಆಧ್ಯಾತ್ಮಿಕತೆಗಳೂ ಕೂಡ ವ್ಯಾಪಾರೀಕರಣಗೊಂಡಿರುವುದು ಜಾಗತೀಕರಣದ ಇನ್ನೊಂದು ಮುಖ ಮಾತ್ರ ಎನ್ನುವುದು ಗೋಚರವಾಗುತ್ತದೆ. ಇಲ್ಲೂ ಕೂಡ ಹಣವನ್ನು ಹೂಡಿ, ಪ್ರಚಾರ ಮುಂತಾದ ಮಾರುಕಟ್ಟೆ ತಂತ್ರಗಳಿಂದ ಭಾರೀ ಲಾಭಗಳಿಸಬಹುದು ಎನ್ನುವುದಕ್ಕೆ ನಮ್ಮ ಸುತ್ತಲೂ ಸಾಕಷ್ಟು ನಿದರ್ಶನಗಳು ಸಿಗುತ್ತವೆ.
ಮಾರಾಟ ಮಾಡಲು ಹೊಸ ಹೊಸ ಉತ್ಪಾದನೆಗಳನ್ನು ಹುಡುಕುವುದೇ ಒಂದು ದೊಡ್ಡ ಸಂಶೋಧನಾ ವಿಷಯವಾಗಿದೆ. ಹೀಗೆ ಸೃಷ್ಟಿಯಾದ ಹೊಸ ಹೊಸ ವಸ್ತುಗಳ ಮೂಲಕ ಬಹಳ ನವಿರಾಗಿ ಮತ್ತು ನಾಜೂಕಿನಿಂದ ಹೆಚ್ಚಿನವರ ಅರಿವಿಗೇ ಬಾರದಂತೆ ಜೇಬುಗಳನ್ನು ಕತ್ತರಿಸಲಾಗುತ್ತದೆ. ಈಗ ಇಪ್ಪತ್ತು ವರ್ಷಗಳ ಹಿಂದೆ ಪ್ರೇಮಿಗಳ ದಿನಾಚರಣೆಯನ್ನು ಯಾರೂ ಗಮನಿಸುತ್ತಲೇ ಇರಲಿಲ್ಲ. ಈಗ ಅದನ್ನು ದೊಡ್ಡ ಉತ್ಸವ ಎನ್ನುವಂತೆ ಪ್ರಚಾರ ಮಾಡಲಾಗುತ್ತದೆ. ಇದಕ್ಕಾಗಿಯೇ ಸಾಕಷ್ಟು ವಸ್ತುಗಳು, ಸೇವೆಗಳು ತಯಾರಾಗಿ ಕಂಪನಿಗಳ ಬೊಕ್ಕಸವನ್ನು ತುಂಬುತ್ತವೆ. ಇದೇ ರೀತಿ ಇತ್ತೀಚೆಗೆ ಅಮ್ಮನ ದಿನ, ಅಪ್ಪನ ದಿನ ಮುಂತಾದ ದಿನಗಳನ್ನು ಹುಟ್ಟು ಹಾಕಲಾಗುತ್ತಿದೆ. ಇದರ ಭಾರತೀಯ ರೂಪಾಂತರಗಳೂ ಬರುತ್ತಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ರಕ್ಷಾಬಂಧನ್, ವರಮಹಾಲಕ್ಷ್ಮಿ, ಹೋಳಿ, ಕೃಷ್ಣಜನ್ಮಾಷ್ಟಮಿ ಮುಂತಾದ ಹಬ್ಬಗಳ ಸಂದರ್ಭಗಳಲ್ಲಿ ಮಾರಾಟವಾಗಿ, ಒಂದೇ ದಿನದಲ್ಲಿ ತಿಪ್ಪೆ ಸೇರುವ ವಸ್ತುಗಳನ್ನು ನೋಡಿದರೆ ನಮಗೆ ಇದರ ಅರಿವಾಗುತ್ತದೆ. ಇವೆಲ್ಲಾ ಮನುಷ್ಯನ ನಂಬಿಕೆ ಭಕ್ತಿ, ಭಾವನೆಗಳನ್ನೂ ಕೂಡ ಮಾರಾಟದ ವಸ್ತುವನ್ನಾಗಿಸುವ ಹುನ್ನಾರಿನ ಒಂದು ಭಾಗ ಮಾತ್ರ.
ಜಾಹಿರಾತುಗಳ ಮಾಯಾಜಾಲ
ಇತ್ತೀಚೆಗೆ ನೀವು “ಸುಧಾ”ದಲ್ಲಿ ಜಾಹಿರಾತು ಜಗತ್ತಿನ ಬಗೆಗೆ ಒಳ್ಳೆಯ ಬರಹವೊಂದನ್ನು ಓದಿದ್ದೀರಿ. ಈ ಜಾಹಿರಾತುಗಳ ಮಾಯಾಜಾಲ ಮನೆಮನೆಗಳಲ್ಲಿ ಟೀವಿಗಳು ಬಂದಮೇಲೆ ಅಪಾಯಕಾರಿ ಮಟ್ಟದಲ್ಲಿ ಹರಡಿಕೊಳ್ಳುತ್ತಿದೆ. ಯಾವುದೇ ನೈತಿಕ ಅಥವಾ ಕಾನೂನಿನ ಹಿಡಿತಕ್ಕೆ ಒಳಪಡದಿರುವ ಈ ಜಾಹಿರಾತುಗಳು ನಮ್ಮನ್ನು ದಾರಿತಪ್ಪಿಸುತ್ತಿರುವುದಕ್ಕೆ ಕೆಲವು ಸರಳ ಉದಾಹರಣೆಗಳನ್ನು ನೋಡಿ.
* ಮಾಡೆಲ್ ಒಬ್ಬನಿಗೆ ಬಿಳಿಯ ಕೋಟನ್ನು ತೊಡಿಸಿ, ವೈದ್ಯರು ಹೇಳುತ್ತಿದ್ದಾರೆ ಎಂದು ಟೂತ್‍ಪೇಸ್ಟ್, ಹೆಲ್ತ್ ಡ್ರಿಂಕ್ ಮುಂತಾದವುಗಳನ್ನು ಪ್ರಚಾರಮಾಡಲಾಗುತ್ತದೆ. ಇಂಡಿಯನ್ ಮೆಡಿಕಲ್ ಅಕಾಡಮಿ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಮುಂತಾದವುಗಳಿಂದ ಪ್ರಮಾಣೀಕೃತ ಎಂದು ತೋರಿಸಲಾಗುತ್ತದೆ. ಈ ಅಕಾಡಮಿ, ಅಸೋಸಿಯೇಶನ್‍ಗಳೆಲ್ಲಾ ಎಷ್ಟು ನಂಬಿಕೆಗೆ ಅರ್ಹವಾದದ್ದು ಎಂದು ಯಾರೂ ಹೇಳುತ್ತಿಲ್ಲ ಮತ್ತು ಯಾರೂ ಕೇಳುತ್ತಲೂ ಇಲ್ಲ.
* ವೈದ್ಯವಿಜ್ಞಾನ ಸಂಪೂರ್ಣ ನಿಷ್ಪ್ರಯೋಜಕ ಎಂದು ಖಡಾಖಂಡಿತವಾಗಿ ಹೇಳಿದ್ದರೂ ಇವತ್ತು ಕಾಮವರ್ಧಕಗಳ ಜಾಹಿರಾತುಗಳು ಲಂಗುಲಗಾಮಿಲ್ಲದೆ ಎಲ್ಲಾ ಕಡೆ ರಾರಾಜಿಸುತ್ತಿವೆ.
* ಹಳೆಯ ಮಾಲಿಗೆ ಹೊಸ ಬಣ್ಣ ಬ್ಯಾಗಡಿ ಬಳಿದು, ನ್ಯೂ, ಅಡ್ವಾನ್ಸ್‍ಡ್, ಎನ್ರಿಚ್ಡ್, ಎಕ್ಸ್ಟ್ರಾ, ಪ್ಲಸ್, ಮೋರ್ ಮುಂತಾದ ಹೆಸರಿನೊಂದಿಗೆ ನಮಗೆ ಮಂಕುಬೂದಿ ಎರಚಲಾಗುತ್ತದೆ.
ಇಲ್ಲಿ ಗಮನಿಸಬೇಕಾದದ್ದು ದೊಡ್ಡ ಕಾರ್ಪೋರೇಟ್ ಹೌಸ್‍ಗಳು ವಸ್ತುಗಳ ಅವಿಷ್ಕಾರಕ್ಕೆ ಭೌತ, ರಾಸಾಯನಿಕ ಮತ್ತು ಜೀವವಿಜ್ಞಾನಗಳ ಸಂಶೋಧನೆಗಳನ್ನು ಬಳಸಿಕೊಂಡರೆ, ಅದನ್ನು ಮಾರಾಟ ಮಾಡಲು ಪ್ರಚಾರಕ್ಕಾಗಿ ಮನೋವಿಜ್ಞಾನದ ಸಂಶೋಧನೆಗಳನ್ನು ಉಪಯೋಗಿಸುತ್ತಾರೆ. ಅಂದರೆ ವಿಜ್ಞಾನ ಕೂಡ ನಮ್ಮಲ್ಲಿ ಕೊಳ್ಳುಬಾಕತವನ್ನು ಹುಟ್ಟುಹಾಕಿಸಲು ಹಿಂಬಾಗಿಲಿನಿಂದ ಸಹಾಯ ಮಾಡುತ್ತದೆ. ಇವತ್ತಿನ ಹೆಚ್ಚಿನ ಗ್ರಾಹಕ ವಸ್ತುಗಳ ಬೆಲೆಯ ಸುಮಾರು ಶೇ 20-30 ಅಂಶ ಕೇವಲ ಪ್ರಚಾರಕ್ಕಾಗಿ ವೆಚ್ಚವಾಗುತ್ತದೆ. ವರ್ತಮಾನ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ಜಾಹಿರಾತನ್ನು ಒಮ್ಮೆಯೂ ನೋಡದೇ ಇರುವವರೂ ಕೂಡ ಅದಕ್ಕಾಗಿ ವೆಚ್ಚವಾದ ಹಣದ ಒಂದು ಭಾಗವನ್ನು ಭರಿಸಿರುತ್ತಾರೆ. ಐಪಿಲ್ ಕ್ರಿಕೆಟ್‍ನ ಬಗೆಗೆ ಗಂಧಗಾಳಿ ಇಲ್ಲದ ವ್ಯಕ್ತಿಯೊಬ್ಬ ಕಂಪನಿಗಳು ಅದಕ್ಕೆ ಹಣ ಚಲ್ಲಿದರೆ ನನ್ನದೇನು ಹೋಗುತ್ತದೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಆ ಕಂಪನಿಯ ವಸ್ತುವಿಗಾಗಿ ಅವನು ಕೊಡುವ ಬೆಲೆಯ ಒಂದು ಭಾಗ ಐಪಿಲ್‍ನಲ್ಲಿ ಲೀನವಾಗಿರುತ್ತದೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ.

ನಿಧನ ವಾರ್ತೆ

0

ನಿವೃತ್ತ ಶಿಕ್ಷಣ ವ್ಯವಸ್ಥಾಪಕ ಸಿದ್ದಪ್ಪ(68) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಗರದ ಹೌಸಿಂಗ್ ಬೋರ್ಡ್ ನಿವಾಸಿಯಾದ ಇವರು ಶಿಕ್ಷಕ ವೃತ್ತಿಯಿಂದ ಪ್ರಾರಂಭಿಸಿ ಪರೀಕ್ಷಾ ಮಂಡಳಿಯಲ್ಲಿ ಮತ್ತು ಚಿಕ್ಕಬಳ್ಳಾಪುರ ಶಿಡ್ಲಘಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಪತ್ನಿ, ನಾಲ್ವರು ಪುತ್ರರು ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಪೂಜಮ್ಮ ದೇವಾಲಯದ ಪಕ್ಕದಲ್ಲಿರುವ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿಸಲಾಯಿತು.

ವಿಮಾನದಲ್ಲಿ ಅಧ್ಯಯನ ಪ್ರವಾಸಕ್ಕೆ ತೆರಳುತ್ತಿರುವ ರೈತಮಹಿಳೆಯರು

0

ಹೈದರಾಬಾದಿನ ಬಳಿಯಿರುವ ಆಂಧ್ರಪ್ರದೇಶ ಅಂತಾರಾಷ್ಟ್ರೀಯ ಬೆಳೆ ಅಧ್ಯಯನ ಸಂಸ್ಥೆಯ ಕೃಷಿ ತಂತ್ರಜ್ಞಾನ ಮತ್ತು ವಿಸ್ತರಣಾ ಕೇಂದ್ರದಲ್ಲಿ ತಾಲ್ಲೂಕಿನ ಮಹಿಳಾ ರೈತಕೂಟದ ರೈತಮಹಿಳೆಯರಿಗೆ ಅಧ್ಯಯನಕ್ಕಾಗಿ ಅನುಮತಿ ದೊರೆತಿದೆ ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಭಾರತಾಂಬೆ ರೈತಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನೀರಿಲ್ಲದ ಈ ಸಂದರ್ಭದಲ್ಲಿ ಒಣ ಬೇಸಾಯದಲ್ಲಿ ನೀರಿನ ಸದ್ಭಳಕೆ ಹಾಗೂ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವ ಸಲುವಾಗಿ ತೆಲಂಗಾಣ ರಾಜ್ಯಕ್ಕೆ ತೆರಳಲು 38 ಮಂದಿ ರೈತ ಮಹಿಳೆಯರು ಹಾಗೂ 12 ಮಂದಿ ಪ್ರಗತಿಪರ ರೈತರಿಗೆ ಅಧ್ಯಯನಕ್ಕಾಗಿ ಅನುಮತಿ ದೊರೆತಿದೆ ಎಂದು ಹೇಳಿದರು.
ವಿಶೇಷವೆಂದರೆ ಎಂದೂ ವಿಮಾನ ಮತ್ತು ರೈಲಿನಲ್ಲಿ ಪ್ರಯಾಣ ಮಾಡದ 38 ಮಂದಿ ರೈತ ಮಹಿಳೆಯರು ಜುಲೈ 27 ರಂದು ವಿಮಾನದಲ್ಲಿ ಹೈದರಾಬಾದಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಧ್ಯಯನ ಪ್ರವಾಸವನ್ನು ಮುಗಿಸಿಕೊಂಡು ಜುಲೈ 30ರಂದು ರೈಲಿನಲ್ಲಿ ವಾಪಸಾಗಲಿದ್ದಾರೆ ಎಂದು ತಿಳಿಸಿದರು.
ಭಾರತಾಂಬೆ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಮಳ್ಳೂರು ವನಿತಾ, ಲಲಿತಮ್ಮ, ನಳಿನ, ಸುಜಾತ, ಸಂಪಂಗಮ್ಮ, ಸರೋಜಮ್ಮ, ಶ್ಯಾಮಲಾ, ನಿರ್ಮಲಮ್ಮ, ಅಮೃತ, ರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.