ಉತ್ತರ ಭಾರತದಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗು ಹಲ್ಲೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಶನಿವಾರ ತಹಸೀಲ್ದಾರಿಗೆ ಮನವಿ ಪತ್ರ ಸಲ್ಲಿಸಿದರು.
ದೇಶದಾದ್ಯಂತ ಬಿಜೆಪಿ ಸರ್ಕಾರವಿರುವ ಬಹುತೇಕ ರಾಜ್ಯಗಳಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ, ಸಾಮಾಜಿಕ ಬಹಿಷ್ಕಾರದಂತಹ ಕೃತ್ಯಗಳು ನಡೆಯುತ್ತಿವೆ. ಮಾಯಾವತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ದಯಾಶಂಕರ್ ಸಿಂಗ್ರನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು, ಗುಜರಾತಿನಲ್ಲಿರುವ ಬಿಜೆಪಿಯ ಗೋರಕ್ಷಕದಳವನ್ನು ನಿಷೇಧ ಮಾಡಬೇಕು ಹಾಗೂ ದೇಶದ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ರಾಜ್ಯಗಳನ್ನು ದಲಿತರಿಗೆ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕೆ.ಎಂ.ಮನೋರಮಾ ರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ.ದ.ಸಂ.ಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್, ಸಂಘಟನಾ ಸಂಚಾಲಕ ಹಿತ್ತಲಹಳ್ಳಿ ದೇವರಾಜ್, ಯಣ್ಣಂಗೂರು ಸುಬ್ರಮಣಿ, ಬೈರಸಂದ್ರ ದೇವರಾಜ್, ದಿಬ್ಬೂರಹಳ್ಳಿ ಮಂಜುನಾಥ್, ಎಲ್.ಎನ್.ಮುನಿಕೃಷ್ಣ, ದಿಬ್ಬೂರಹಳ್ಳಿ ಚಿಕ್ಕನರಸಿಂಹಯ್ಯ ಮತ್ತಿತರರು ಹಾಜರಿದ್ದರು.
ಉತ್ತರ ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡನೆ
ಬಡ ಹಾಗೂ ಮಧ್ಯಮ ವರ್ಗದವರಿಗೆ ಆರೋಗ್ಯ ಶಿಬಿರ ಉಪಯುಕ್ತ
ನಿರಂತರ ದುಡಿಮೆ, ಕಲುಷಿತ ನೀರಿನ ಸೇವನೆ, ಬದಲಾಗುತ್ತಿರುವ ಆಹಾರ ಪದ್ದತಿಗಳಿಂದಾಗಿ ವಿವಿಧ ಖಾಯಿಲೆಗಳಿಂದ ಜನರು ಪರಿತಪಿಸುವಂತಾಗಿದೆ ಎಂದು ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಎಸ್.ಎನ್ ಕ್ರಿಯಾ ಟ್ರಸ್ಟ್ ಹಾಗು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ಪ್ರದೇಶದ ಜನರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾದ್ಯವಿಲ್ಲ. ಅಂತಹವರಿಗಾಗಿ ತಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡು ಆರೋಗ್ಯ ತಪಾಸಣೆ ಸೇರಿದಂತೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ನಗರದ ಸುಮಾರು ೪೦೦೦ ಕ್ಕೂ ಅಧಿಕ ನಾಗರಿಕರು ಭಾಗವಹಿಸಿ ಮಂಡಿನೋವು, ಜಾಯಿಂಟ್ ರಿಪ್ಲೇಸ್ಮೆಂಟ್, ಮಕ್ಕಳ ಪೌಷ್ಠಿಕತೆ, ಬೆಳವಣಿಗೆ, ಗರ್ಭಕೋಶ ಹಾಗು ಸ್ತ್ರೀ ಸಂಬಂದಿತ ತೊಂದರೆ, ಕಿವಿ, ಮೂಗು ಗಂಟಲು ಸಮಸ್ಯೆ, ಪಿತ್ತಕೋಶದ ತೊಂದರೆ, ಸಕ್ಕರೆ ಖಾಯಿಲೆ ಹಾಗು ರಕ್ತದೊತ್ತಡ, ಹಲ್ಲಿನ ತೊಂದರೆಗೆ, ಕಣ್ಣಿನ ಪೊರೆ ಮತ್ತು ರೆಟಿನಾ ಸಮಸ್ಯೆ, ತಲೆನೋವು, ಪಾರ್ಶ್ವವಾಯು ಹಾಗು ನರದೌರ್ಬಲ್ಯ ತೊಂದರೆ ಸೇರಿದಂತೆ ಸೀಳು ತುಟಿ, ಸೀಳು ಅಂಗಳ ಹಾಗು ಮುಖ ದವಡೆಯ ಶಸ್ತ್ರ ಚಿಕಿತ್ಸೆಗೆ ತಪಾಸಣೆ ಮಾಡಿಸಿಕೊಂಡರು.
ಬೆಳಗ್ಗೆ ೮ ಗಂಟೆಗೆ ಶಿಬಿರ ಆರಂಭವಾಗುತ್ತಿದ್ದಂತೆ ಸಾಲುಗಟ್ಟಿ ನಿಂತಿದ್ದ ಜನರರ ಆರೋಗ್ಯ ತಪಾಸಣೆ ನಡೆಸಲು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ೨೦ ಕ್ಕೂ ಹೆಚ್ಚು ವೈದ್ಯರು, ಸಿಬ್ಬಂದಿ ಹಾಗು ಎಸ್.ಎನ್.ಕ್ರಿಯಾ ಟ್ರಸ್ಟ್ನ ೨೦೦ ಕ್ಕೂ ಹೆಚ್ಚು ಸ್ವಯಂ ಸೇವಕರು ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಿದರು.
ಪೀಪಲ್ ಟ್ರೀ ಆಸ್ಪತ್ರೆಯ ವೈದ್ಯರು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಿದರು.
ಈ ಸಂದರ್ಭದಲ್ಲಿ ನಗರದ ವೃದ್ದೆಯೊಬ್ಬರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ವ್ಹೀಲ್ಚೇರ್ ಉಚಿತವಾಗಿ ನೀಡಲಾಯಿತು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೈತಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬೆಳ್ಳೂಟಿ ಸಂತೋಷ್, ಪೀಪಲ್ ಟ್ರೀ ಆಸ್ಪತ್ರೆಯ ವೈದ್ಯರಾದ ಡಾ.ಚಂದ್ರಶೇಖರ್, ಡಾ.ಸತೀಶ್ವಸಿಷ್ಠ, ವ್ಯವಸ್ಥಾಪಕ ಬಾಲಕೃಷ್ಣ, ಶಿಬಿರದ ಆಯೋಜಕ ಧನಂಜಯ ಮತ್ತಿತರರು ಹಾಜರಿದ್ದರು.
‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’
‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ. ಭಯ- ಸಂಶಯ- ತಲ್ಲಣಗಳ ಕಂದರಗಳು ತೆರೆದಿವೆ’ ಎಂದು ಬರೆದ ಶಿವರುದ್ರಪ್ಪನವರ ಕವಿ ನುಡಿಗಳನ್ನು ಅಳವಡಿಸಿಕೊಂಡಲ್ಲಿ ಎಲ್ಲರೂ ಒಗ್ಗೂಡಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಉಲ್ಲೂರುಪೇಟೆಯ ಶ್ರೀವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕುರಿತಂತೆ ಮಾತನಾಡಿದರು.
ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು. ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ. ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ ಎಂದು ಅರ್ಥಪೂರ್ಣವಾಗಿ ಬರೆದ ಜಿ.ಎಸ್.ಎಸ್ ಕವಿಯಾಗಿ ಪ್ರಸಿದ್ಧರು. ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತಗಾರರಾಗಿದ್ದರು. ಕುವೆಂಪು ಅವರ ಮೆಚ್ಚಿನ ಶಿಷ್ಯರಾಗಿ ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು ಎಂದು ವಿವರಿಸಿದರು.
ನಗರದ ಪ್ರತಿಯೊಂದು ವಾರ್ಡ್ನಲ್ಲೂ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾದ ಕನ್ನಡದ ಓದನ್ನು ಪ್ರೇರೇಪಿಸುವ ‘ಕವಿ ನಮನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯ ಕವಿನಮನವನ್ನು ಈ ಬಾರಿ 11ನೇ ವಾರ್ಡ್ನಲ್ಲಿ ನಡೆಸುತ್ತಿರುವುದಾಗಿ ಹೇಳಿದರು.
ಭಜನೆ ಕಲಾವಿದ ನಾಮದೇವ್ ಮಾತನಾಡಿ, ತಬಲಾ ಮತ್ತು ಹಾರ್ಮೋನಿಯಮ್ ಕಲಾವಿದರು ಮೊದಲು ಪ್ರತಿಯೊಂದು ಗ್ರಾಮಗಳಲ್ಲೂ ಇದ್ದರು. ಆದರೆ ಈಗವರು ವಿರಳವಾಗುತ್ತಿದ್ದಾರೆ. ಈ ಕಲೆಯನ್ನು ಉತ್ತೇಜಿಸುವ ಕೆಲಸ ಕ.ಸಾ.ಪ ಮಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಅನಂತರಾಮಯ್ಯ ಅವರನ್ನು ಕ.ಸಾ.ಪ ತಾಲ್ಲೂಕು ಘಟಕದಿಂದ ಗೌರವಿಸಲಾಯಿತು. ಅನಿಲ್ ಪದ್ಮಶಾಲಿ ಅವರು ಕ.ಸಾ.ಪ ತಾಲ್ಲೂಕು ಘಟಕಕ್ಕೆ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ನೀಡಲು ಮೂರು ಸಾವಿರ ರೂಗಳನ್ನು ನೀಡಿದರು.
ನಗರಸಭಾ ಸದಸ್ಯೆ ಸಂಧ್ಯಾ ಮಂಜುನಾಥ್, ಶಿಕ್ಷಕರಾದ ಅಮರನಾಥ್, ವಿ.ಕೃಷ್ಣ, ಕಲಾವಿದ ಲಕ್ಷ್ಮೀನಾರಾಯಣ, ಎಲ್.ಮಂಜುನಾಥ್ ಕವನ ವಾಚಿಸಿದರು.
ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ್, ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕೋಶಾಧ್ಯಕ್ಷ ಎಸ್.ಸತೀಶ್, ಲವಕುಮಾರ್, ಮಂಜುನಾಥ್, ಮನೋಜ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗುಡ್ಡಗಾಡು ಓಟದ ಸ್ಪರ್ಧೆ
ಗ್ರಾಮೀಣ ಭಾಗದಲ್ಲಿ ಕ್ರೀಡಾಭ್ಯಾಸ ಮಾಡಲು ಕ್ರೀಡಾಂಗಣಗಳು ಇಲ್ಲದಿರುವುದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಮ್ಮಿಕೊಂಡಿರುವ ಗುಡ್ಡಗಾಡು ಕ್ರೀಡಾಕೂಟ ಇತರರಿಗೆ ಮಾದರಿಯಾಗಿದೆ ಎಂದು ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಎಂ.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶನಿವಾರ ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ನಮ್ಮ ಗ್ರಾಮೀಣ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ತಾಲ್ಲೂಕಿಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
ಆರು ಕಿ.ಮೀ ದೂರದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ 150ಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಜೇತರಾದ 10 ಮಂದಿ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.
ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎಂ.ದೇವರಾಜು, ಕಾರ್ಯದರ್ಶಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಸುಧಾಕರರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ಎಲ್.ಚಂದ್ರಶೇಖರ್, ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ, ಟಿ.ಟಿ.ನರಸಿಂಹಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ರವಿಪ್ರಕಾಶ್, ಶಿಕ್ಷಕಿ ಸಿ.ಕೆ.ಮಂಜುಳ, ಸಹಶಿಕ್ಷಕರಾದ ಜೀವಿಂದರ್ ಕುಮಾರ್, ಶಿವಕುಮಾರಸ್ವಾಮಿ, ಕಲ್ಪನಾ, ರಾಧಾಕೃಷ್ಣ, ಸುಮಲತಾ, ಮಾಲತೇಶ್ ಹಳ್ಳೇರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಚನ ಸಾಹಿತ್ಯವನ್ನು ಗ್ರಾಮೀಣ ಭಾಗದಲ್ಲಿ ಪಸರಿಸಿ
ವಚನ ಸಾಹಿತ್ಯವನ್ನು ಮತ್ತು ಅದರ ಸಾರಸಂಗ್ರಹವನ್ನು ಗ್ರಾಮೀಣ ಭಾಗದಲ್ಲಿ ಪಸರಿಸುವ ಹೊಣೆಗಾರಿಕೆ ವಚನ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ್ದಾಗಿದೆ ಎಂದು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ ಹೇಳಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ತೊಲಗಿಸುವ ನಿಟ್ಟಿನಲ್ಲಿ ಈ ಸಮಾಜದಲ್ಲಿನ ಭ್ರಷ್ಟಾಚಾರ ಅಸ್ಪ್ರೂಶ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದ ಅನುಭವ ಮಂಟಪದ ಸಾರ್ವಕಾಲಿಕವಾದದ್ದು. ತಮ್ಮ ಜೀವನದ ಅನುಭವಗಳನ್ನು ವಚನಗಳ ಮುಖಾಂತರ ವ್ಯಕ್ತಪಡಿಸಿರುವ ಎಲ್ಲಾ ವಚನಕಾರರ ಭಾವನೆಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ, ಈ ನಿಟ್ಟಿನಲ್ಲಿ ವಚನ ಸಾಹಿತ್ಯ ಪರಿಷತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಜೀವನದಲ್ಲಿ ಸ್ವಾರ್ಥವನ್ನು ಬದಿಗೊತ್ತಿ ಸನ್ಮಾರ್ಗವನ್ನು ಅರಿಯಬೇಕು, ದಾಸರು, ಶರಣರ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದರು.
ವಿವೇಕಾನಂದ ರಾಮಕೃಷ್ಣಾಶ್ರಮ ಮಠದ ಪೂರ್ಣಾನಂದಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಪರಿಷತ್ತಿನ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಸಾಹಿತ್ಯಾಭಿರುಚಿಯನ್ನು ಯುವಜನತೆಯಲ್ಲಿ ಮೂಡಿಸಬೇಕು. ವಚನ ಸಾಹಿತ್ಯ ಜೀವನ ಮಾರ್ಗವನ್ನು ಬೋದಿಸುವುದರಿಂದ ಸನ್ಮಾರ್ಗವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ವಚನ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ತ್ಯಾಗರಾಜ್ ಮಾತನಾಡಿ ೧೨ ನೇ ಶತಮಾನದಿಂದಲೂ ವಚನ ಸಾಹಿತ್ಯದ ಮೇಲೆ ನಿರಂತರವಾಗಿ ದಬ್ಬಾಳಿಕೆಗಳು ನಡೆಯುತ್ತಲೇ ಇದ್ದು, ಅವುಗಳನ್ನು ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ತಲುಪಿಸಿ, ಸಾಹಿತ್ಯವನ್ನು ಜೀವಂತವಾಗಿ ಉಳಿಸುವಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ಎಲ್ಲರೂ ಮಾಡಬೇಕಾಗಿದೆ ಎಂದರು.
ಇದೇ ವೇಳೆ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿದ್ದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಬಸ್ ನಿಲ್ದಾಣದಿಂದ ಸಾಗಿ ಬಂದ ಮೆರವಣಿಗೆಗೆ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಚಾಲನೆ ನೀಡಿದರು.
ಶಾಸಕ ಎಂ.ರಾಜಣ್ಣ, ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ, ಮಹಿಳಾ ಜಿಲ್ಲಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ಚಲಪತಿ ಅಗಲಗುರ್ಕಿ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ನಿವೃತ್ತ ಪ್ರಾಂಶುಪಾಲ ಸಿ.ಅಶ್ವಥ್ಥಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್, ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ರವಿಪ್ರಕಾಶ್, ಈಧರೆಪ್ರಕಾಶ್ ಮುಂತಾದವರು ಹಾಜರಿದ್ದರು.
ಬೆಳೆ ವಿಮೆ ಮಾಡಿಸಲು ರೈತರು ಮುಂದಾಗಬೇಕು
ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯ ಮುಂಗಾರು- ೨೦೧೬ ರ ವಿಮೆಯನ್ನು ಮಾಡಿಸಲು ಜುಲೈ ೩೦ ರಂದು ಕೊನೆಯ ದಿನವಾಗಿದ್ದು ನಿಗದಿತ ಅವಧಿಯೊಳಗೆ ವಿಮೆ ಮಾಡಿಸಲು ರೈತರು ಮುಂದಾಗಬೇಕು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ಮನವಿ ಮಾಡಿದರು.
ನಗರದದಲ್ಲಿ ಶನಿವಾರ ಈ ಬಗ್ಗೆ ಸುದ್ದಿಘೋಷ್ಠಿ ನಡೆಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ೨೦೧೬ ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅನುಷ್ಟಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದೆ. ರಾಜ್ಯದಲ್ಲಿ ಈ ಯೋಜನೆಯು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಎಂಬ ಹೆಸರಿನಲ್ಲಿ ಅನುಷ್ಟಾನಕ್ಕೆ ಬಂದಿದೆ ಎಂದರು.
ಜಿಲ್ಲೆಯಲ್ಲಿ ಅಧಿಸೂಚಿತ ಬೆಳೆಗಳಾದ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಭತ್ತ, (ನೀರಾವರಿ) ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ) ತೊಗರಿ (ಮಳೆಯಾಶ್ರಿತ ಮತ್ತು ನೀರಾವರಿ) ಹುರುಳಿ (ಮಳೆಯಾಶ್ರಿತ) ನೆಲೆಗಡಲೆ (ಮಳೆಯಾಶ್ರಿತ) ಅವರೆ (ಮಳೆಯಾಶ್ರಿತ) ಬೆಳೆಗಳನ್ನು ಬೆಳೆಯುವ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಆಯ್ಕೆಯ ಅವಕಾಶವಿದೆ, ಆದರೆ ಅಧಿಸೂಚಿತ ಬೆಳೆಗಳಿಗೆ ಬೆಳೆಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು.
ಯೋಜನೆಯ ಉದ್ದೇಶ: ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಸಂಧರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ಆರ್ಥಿಕ ಭದ್ರತೆಯನ್ನು ನೀಡುವುದು. ಕಟಾವಿನ ನಂತರ ವಾರದೊಳಗಾಗಿ (೧೪ ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದಲ್ಲಿ ನಷ್ಟ ಪರಿಹಾರವನ್ನು ನೀಡುವುದು ಮುಖ್ಯ ಉದ್ದೇಶವಾಗಿದೆ, ಬೆಳೆ ಸಾಲ ಪಡೆಯದ ರೈತರು ಪ್ರತಿ ಎಕರೆ ರಾಗಿ ಬೆಳೆಗೆ ರೂ ೨೭೨ ರೂಗಳನ್ನು ಮತ್ತು ಮುಸುಕಿನ ಜೋಳ ಬೆಳೆಗೆ ೩೮೪ ರೂಗಳ ವಿಮೆಯ ಕಂತನ್ನು ಭರಿಸಬೇಕಾಗುತ್ತದೆ. ಬ್ಯಾಂಕುಗಳಿಂದ ಸಾಲ ಪಡೆಯದ ರೈತರು ಹಾಗೂ ಸಾಲ ಪಡೆದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಜುಲೈ ೩೦ ಕೊನೆಯ ದಿನವಾಗಿರುತ್ತದೆ.
ಈಗಾಗಲೇ ಯೋಜನೆಯ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದ್ದಾರಾದರೂ ಪ್ರತಿ ಸಣ್ಣ ರೈತರಿಗೂ ಇದರ ಮಾಹಿತಿ ಮುಟ್ಟಲಿ ಹಾಗು ಇದರ ಸದುಪಯೋಗವನ್ನು ಪ್ರತಿ ರೈತರು ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೆ.ಆರ್.ಸುರೇಂದ್ರಗೌಡ, ರಮೇಶ್ಬಾಯಿರಿ, ರೈತ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ದೊಣ್ಣಹಳ್ಳಿ ರಾಮಣ್ಣ, ಮುಖಂಡರಾದ ಕೃಷ್ಣಮೂರ್ತಿ, ಇರಗಪ್ಪನಹಳ್ಳಿ ನಾರಾಯಣಸ್ವಾಮಿ, ದಾಮೋದರ್, ಮಂಜುಳಮ್ಮ ಹಾಜರಿದ್ದರು.
ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಮತ್ತು ನಾಗರಿಕರು ಸಹಕರಿಸಿದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿ ಆವರಣದಲ್ಲಿ ಶನಿವಾರ ನೂತನವಾಗಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿವಿಧ ಮಂತ್ರಿಗಳು ಸೇರಿದಂತೆ ಅಧಿಕಾರಿಗಳ ಬಳಿ ಓಡಾಡಿ ಕ್ಷೇತ್ರಕ್ಕೆ ಅಗತ್ಯವಿರುವ ಅನುದಾನಗಳನ್ನು ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ತಮ್ಮ ಅವಧಿಯಲ್ಲಿ ಮಾಡಲಾಗುತ್ತಿದೆ. ಇನ್ನೂ ಸಾಕಷ್ಟು ಕಾಮಗಾರಿಗಳು ಮಾಡುವುದಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಮಾಡಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ಮುಖಂಡ ಬಿ.ಟಿ.ರವಿಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಜನರ ಏಳಿಗೆಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟುವಂತಹ ಕೆಲಸವನ್ನು ಗ್ರಾಮ ಪಂಚಾಯ ಅಧಿಕಾರಿಗಳು ಹಾಗು ಚುನಾಯಿತ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ತಾಲ್ಲೂಕು ಪಂಚಾಯತಿ ಸದಸ್ಯರಾದ ಶೋಭ ಶಶಿಕುಮಾರ್, ಮುನಿಯಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾರವಿಕುಮಾರ್, ಉಪಾದ್ಯಕ್ಷೆ ಶಾಂತಮ್ಮವೆಂಕಟಪ್ಪ, ತಾಲ್ಲೂಕು ಪಂಚಾಯತಿ ಇಓ ವೆಂಕಟೇಶ್, ಜಿಲ್ಲಾ ಪಂಚಾಯತ್ ಎಇಇ ಶಿವಾನಂದ, ಗ್ರಾಮ ಪಂಚಾಯತಿ ಪಿ.ಡಿ.ಓ ಎಂ.ಕೆ.ಕಾತ್ಯಾಯಿನಿ, ಸದಸ್ಯರು ಹಾಜರಿದ್ದರು.
ಗಿಡ ನೆಡುವ ಅಭಿಯಾನ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಹಂಡಿಗನಾಳ ಗ್ರಾಮ ಪಂಚಾಯತಿ ವತಿಯಿಂದ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿ ವೆಂಕಟೇಶ್, ಅಧಿಕಾರಿ ಸರಳಾ, ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಶ್ರೀನಿವಾಸ್ ಹಾಜರಿದ್ದರು.
ಆತ್ಮಸ್ಥೈರ್ಯ ವೃದ್ಧಿಸುವ ಶಿಬಿರ
ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಾಹಸ ಮನೋಭಾವ, ಆತ್ಮಸ್ಥೈರ್ಯ ಮತ್ತು ಜೀವನ ಕೌಶಲ್ಯಗಳನ್ನು ಕಲಿಸವ ಉತ್ಸಾಹ ತುಂಬುವ ಶಿಬಿರವನ್ನು ಆಯೋಜಿಸಿದ್ದಾಗಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ನಡೆಸಿದ ಜೀವನ ಕೌಶಲ್ಯ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಿಗೆ ಹೋದಾಗ ಹಾಗೂ ಜೀವನೋತ್ಸಾಹಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ಸಾಹಸ ತರಬೇತಿ ಶಿಬಿರವನ್ನು ಎರಡು ದಿನಗಳ ಕಾಲ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಉದ್ದೀಪನಗೊಳಿಸುವುದು, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದು ಈ ಶಿಬಿರದ ಉದ್ದೇಶ ಎಂದು ಹೇಳಿದರು.
ಪ್ರಾಂಶುಪಾಲ ಡಿ.ಲಕ್ಷ್ಮೀನಾರಾಯಣ, ಪ್ರಾಧ್ಯಾಪಕರಾದ ಮುನಿರಾಜು, ಮಂಗಳಗೌರಿ, ಎಸ್.ಎನ್.ಕ್ರಿಯಾ ಟ್ರಸ್ಟ್ನ ದೇವರಾಜ್, ರಾಜಶೇಖರ್, ದೀಪಕ್, ಅಬ್ಲೂಡು ದೇವರಾಜ್, ಸುಂದರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಂಗೀತ ಕಛೇರಿ
ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಯೋಗಿದ್ಯಾವಪ್ಪನವರ ಭಕ್ತ ಮಂಡಳಿಯು ನಾದಸ್ವರ ವಿದ್ವಾನ್ ವೈ.ವಿ.ನಂದೀಶ್ವರಪ್ಪ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಾದಸ್ವರ ಕಛೇರಿಯನ್ನು ಮಂಗಳವಾರ ರಾತ್ರಿ ಆಯೋಜಿಸಲಾಗಿತ್ತು.
ದಲಿತ ಸಂಘರ್ಷ ಸಮಿತಿಯಿಂದ ಧರಣಿ
ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಮತ್ತು ವಸತಿ ರಹಿತ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಬುಧವಾರ ದಲಿತ ಸಂಘರ್ಷ ಸಮಿತಿಯಿಂದ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಲಾಯಿತು.
ಭೂ ಅಕ್ರಮ ಸಕ್ರಮ ಸಮಿತಿಗೆ ಶಾಸಕರ ಅಧ್ಯಕ್ಷತೆಯ ಬದಲು ಉಪ ವಿಭಾಗಾಧಿಕಾರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಅವಕಾಶ ವಂಚಿತರಿಗೆ, ಮಹಿಳೆಯರಿಗೆ ಜಮೀನೇ ಅಧಿಕಾರ. ಇದರಿಂದ ಅವರ ಜೀವನದಲ್ಲಿ ಗುಣಮಟ್ಟ ಸುಧಾರಿಸಲು ಸಾಧ್ಯ. ನೂರಾರು ಎಕರೆ ಭೂಮಿಯನ್ನು ಭೂ ಕಬಳಿಕೆದಾರರು ಕಾನೂನು ಭಯವಿಲ್ಲದೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ಭೂಗಳ್ಳರ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಬೇಕೆಂದು ಆಗ್ರಹಿಸಿದರು.
ಇದುವರೆಗೂ ಸರಿಯಾದ ರೀತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿಲ್ಲ. ಈ ಬಗ್ಗೆ ಶಾಸಕರು ಮುತುವರ್ಜಿ ತೋರಿಸುತ್ತಿಲ್ಲ. ನಮೂನೆ 50/53 ರಂತೆ ಅರ್ಜಿ ಸಲ್ಲಿಸಿರುವ ಎಲ್ಲಾ ಭೂಹೀನ ಬಗರ್ ಹುಕುಂ ಸಾಗುವಳಿದಾರರಿಗೆ ಕಾಲಮಿತಿ ಇಲ್ಲದೇ ಸಾಗುವಳಿ ಚೀಟಿಯನ್ನು ನೀಡಬೇಕು. ನಿವೇಶನ ರಹಿತರಿಗೆ ವಸತಿ ಸೌಕರ್ಯ ನೀಡಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ಡಿ.ಎಂ.ವೆಂಕಟೇಶ್, ಮಟ್ಟಿ ನಾರಾಯಣಸ್ವಾಮಿ, ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಸ್ಪಯಾ ಅನ್ವರಿ, ಕಾರ್ಯದರ್ಶಿ ಶಶಿಕಲಾ, ಗೌರಮ್ಮ, ನಾರಾಯಣಮ್ಮ, ಮಂಜುಳಮ್ಮ ದೊಡ್ಡ ತಿರುಮಲಯ್ಯ, ಹುಜಗೂರು ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಿಳಿಯದೇ ಮಾಡುವ ಘೋರ ತಪ್ಪು!
ಈ ಜಗತ್ತಿನ ಯಾರೂ ಪರಿಪೂರ್ಣರಲ್ಲ. ಆ ಪಂಕ್ತಿಯಲ್ಲಿ ರೈತರೂ ಇದ್ದಾರೆ. ಆ ಮಟ್ಟಿಗೆ ರೈತನ ಕೃಷಿ ಕಲಿಕೆಗೆ ಅಂತ್ಯ ಎಂಬುದೇ ಇಲ್ಲ. ಧಾರವಾಡದ ಹಳ್ಳಿಯಲ್ಲಿ ಸಮರ್ಪಕ ಎನ್ನಿಸಿದ ನೀರಾವರಿ ಯೋಜನೆ ಮಲೆನಾಡಿಗೆ ಅಕ್ಷಮ್ಯ ಅಪರಾಧ ಎನ್ನುವಂತಾಗಿಬಿಡಬಹುದು. ಕೆಲ ವರ್ಷಗಳ ಹಿಂದೆ ಸಾಗರದ ಹತ್ತಿರದ ಹಳ್ಳಿಯಲ್ಲಿ ನೀರಿಂಗಿಸುವ ಪದ್ಧತಿಯನ್ನು ಅಳವಡಿಸಿಕೊಂಡಾಗ ಭೂಮಿಯ ಜಲಮಟ್ಟ ಏರಿ ಅಡಿಕೆಗೆ ಬೇರು ಹುಳದ ಸಮಸ್ಯೆ ಕಾಣಿಸಿತ್ತು. ಏಕೆಂದರೆ ಅಲ್ಲಿಗೆ ಹೆಚ್ಚುವರಿ ನೀರು ಇಂಗುವ ಅಗತ್ಯವೇ ಇರಲಿಲ್ಲ! ಹಾಗೆಯೇ ಕೃಷಿಕ ಕೈಗೊಳ್ಳುವ ದೊಡ್ಡ ದೊಡ್ಡ ಯೋಜನೆಗಳ ಅತಿ ಚಿಕ್ಕ ತಪ್ಪು ಕೂಡ ಫಲಿತಾಂಶದಲ್ಲಿ ಏರಿಳಿತವನ್ನು ದಾಖಲಿಸಿಬಿಡಬಹುದು. ಸ್ವಾರಸ್ಯವೆಂದರೆ ನಮಗೆ ಕಾಣದ ನಮ್ಮ ದೋಷ ಇನ್ನೊಬ್ಬರಿಗೆ ಸರಳವಾಗಿ ಗೋಚರಿಸಿಬಿಡುತ್ತದೆ! ಈ ಹಂತದಲ್ಲಿ ತಿದ್ದಿಕೊಳ್ಳುವುದು ಜಾಣತನ. ಈ ಲೇಖನದಲ್ಲಿ ನಿಮ್ಮ ತೋಟ, ಕೃಷಿ ಭೂಮಿಯೊಳಗೆ ಇಳಿಯದೆ ಸಾಮಾನ್ಯವಾಗಿ ಜಾರಿಯಲ್ಲಿರುವ ತಪ್ಪುಗಳತ್ತ ನೋಟ ಹರಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತದೆಂದಾದರೂ ಸ್ವಾಗತ.
ತೆಂಗಿನ ಉಪಬೆಳೆ ಯಾವುದು?
ತೆಂಗಿನಿಂದ ತೆಂಗಿಗೆ 20 ರಿಂದ 25 ಅಡಿಗಳವರೆಗೆ ಅಂತರ ಬಿಡಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಇದು ವೈಜ್ಞಾನಿಕವಲ್ಲವಾದರೂ ಮಣ್ಣು ಲಕ್ಷಣ ಹಾಗೂ ಸಾಂದ್ರ ಬೇಸಾಯದಿಂದಾಗಿ ಇದು ಸಮ್ಮತವೆನಿಸಿದೆ. ಜೊತೆಗೆ ಇಂದಿನ ಆಧುನಿಕ ಕೃಷಿ ಚಿಂತಕರು ತೆಂಗಿನ ಎಡೆಯಲ್ಲಿ ಉಪಬೆಳೆ ಬೆಳೆಯಲು ಯೋಚಿಸುತ್ತಾರೆ. ಅಂತವರು ಲಾಭದಾಯಕ ಅಡಿಕೆ ಬೆಳೆ ಹಾಕಲು ಹೆಚ್ಚು ಆಸಕ್ತರಾಗಿರುತ್ತಾರೆ. ಆ ನಿಲುವಿಗೆ ಅವರು ಕಾರಣವನ್ನೂ ನೀಡುತ್ತಾರೆ. ತೆಂಗುಗಳೆರಡರ ನಡುವಣ ಅಂತರ 20 ಅಡಿ. ಹತ್ತಡಿಗೊಂದು ಅಡಿಕೆಮರ ನೆಡುವುದು ಸಂಪ್ರದಾಯ. ನಾವು ಅಡಿಕೆಗೆ ಪ್ರತ್ಯೇಕ ಗೊಬ್ಬರ ನೀರು ಕೊಡುವುದರಿಂದ ಮುಖ್ಯ ಬೆಳೆಗೆ ತೊಂದರೆಯಾಗದು ಎನ್ನುತ್ತಾರೆ ಆ ಸಿನಿಕರು. ಗಮನಿಸಿ, ತೆಂಗುಗಳೆರಡರ ಅಂತರ ಇಪ್ಪತ್ತಡಿಯಿರುವಾಗ 2 ತೆಂಗಿನ ಗಿಡಗಳಿಗೆ ನಡುವಣ ಜಾಗದಲ್ಲಿನ ಭೂಸಾರದ ಪೂರ್ಣ ಅಗತ್ಯವಿರುತ್ತದೆ. ಯಾವುದೇ ದೀರ್ಘಾವಧಿಯ ಉಪಬೆಳೆಯನ್ನು ಹಾಕುವುದರಿಂದ ಮುಖ್ಯಬೆಳೆಯ (ತೆಂಗಿನ) ಫಸಲಿನಲ್ಲಿ ಕಡಿಮೆಯಾಗುತ್ತದೆ. ಸಾರಾಂಶ ಇಷ್ಟೇ, ಮುಖ್ಯ ಬೆಳೆಯ ಎಡೆಯಲ್ಲಿ ಉಪಬೆಳೆಯಾಗಿ ಇನ್ನೊಂದು ಬಹುವಾರ್ಷಿಕ ಬೆಳೆಗೆ ಪ್ರಯತ್ನಿಸುವುದು ತಪ್ಪು.
ನೀರಿನ ಪೂರೈಕೆ ಯಾವಾಗ?
ಪ್ರತಿಯೊಂದು ಗಿಡಕ್ಕೆ ದಿನಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ಕೃಷಿ ತಜ್ಞರು ಕಂಡುಹಿಡಿದಿದ್ದಾರೆ. ಇದೇ ತೆಂಗಿನ ಗಿಡವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅದಕ್ಕೆ ದಿನಕ್ಕೆ 120 ಲೀಟರ್ ನೀರಿನ ಅವಶ್ಯಕತೆ ಇದೆ ಎನ್ನುತ್ತಾರವರು. ನಾವು ಲೆಕ್ಕ ಮಾಡಿ 120 ಲೀ. ನೀರನ್ನು ತೆಂಗಿನ ಮರದ ಬುಡಕ್ಕೆ ಸುರುವುತ್ತೇವೆ. ಅಷ್ಟೂ ನೀರು ಆ ತೆಂಗಿಗೆ ಸಿಗುತ್ತದೆಯೇ? ಅನುಮಾನ. ಸದರಿ ಭೂಮಿಯ ಮಣ್ಣು ಎಷ್ಟು ಕಾಲ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು ಎಂಬುದು ಕೂಡ ಮುಖ್ಯ ಅಂಶ. ಹಾಗಾಗಿ ವಿಜ್ಞಾನಿಗಳು ಸೂಚಿಸಿದ ನೀರಿನ ಪ್ರಮಾಣವನ್ನು ನಮ್ಮ ಸಂದರ್ಭಕ್ಕೆ ಹೊಂದಿಸಿಕೊಳ್ಳಬೇಕು. ಮುಖ್ಯವಾಗಿ, ಯಾವುದೇ ಬೆಳೆಗೆ ಘೋರ ಬೇಸಿಗೆಗಿಂತ ಈಗಿನ ಚಳಿಗಾಲದಲ್ಲಿ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಚಳಿಗೆ ಮಣ್ಣು ಬಿರುಸಾಗಿ ಗಿಡಗಳ ಬೇರು ಘಾಸಿಗೊಳ್ಳುವುದನ್ನು ತಪ್ಪಿಸಲು ಅಕ್ಟೋಬರ್‍ನಿಂದ ಡಿಸೆಂಬರ್ ವೇಳೆ ನೀರು ಮುದ್ದಾಂ ಕೊಡಬೇಕು. ಬಹುಪಾಲು ರೈತರು ಇದನ್ನು ನಿರ್ಲಕ್ಷಿಸುತ್ತಾರೆ.
ಹುಟ್ಟಿದಾಕ್ಷಣ ಟಾನಿಕ್?
ಮಗು ಹುಟ್ಟಿದ ನಿಮಿಷಗಳಲ್ಲಿಯೇ ಅದಕ್ಕೆ ಟಾನಿಕ್ ನೀಡುವುದು ಸೂಕ್ತವಾಗದು ಎಂಬುದು ನಿಮಗೂ ಗೊತ್ತು. ಮತ್ತೆ ನಾವು ಗುಂಡಿ ತೋಡಿ ಗೊಬ್ಬರ ಹಾಕಿ ಗಿಡ ನೆಡುವುದು ಸರಿಯೇ? ಆ ಸಮಯದಲ್ಲಿ ಗಿಡಕ್ಕೆ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂಲಭೂತವಾಗಿ ಮಣ್ಣು, ನೀರಿನ ಅಗತ್ಯತೆ ಇರುತ್ತದೆಯೇ ವಿನಃ ಕಾಂಪೋಸ್ಟ್‍ನದಲ್ಲ. ಬೇರುಗಳು ಭೂಮಿಯಲ್ಲಿ ಹೊಂದಿಕೊಂಡ ನಂತರವೇ ಕಾಂಪೋಸ್ಟ್ ಗೊಬ್ಬರವನ್ನು ನೀಡಿದರೆ ಸಾಕು. ಮೊದಮೊದಲು ದ್ರವರೂಪದಲ್ಲಿ ಗೊಬ್ಬರ ನೀಡುವಿಕೆ ಸುರಕ್ಷಿತ. ಗೊಬ್ಬರ ಹಾಕಿ ಗಿಡ ನೆಡುವುದರಿಂದ ಗಿಡಕ್ಕೆ ಯಾವುದೇ ಪ್ರಯೋಜನವಿಲ್ಲ. ನಿಜಕ್ಕಾದರೆ ಬೇರುಗಳು ಹಾನಿಗೊಳಗಾಗುವ ಅಪಾಯವೇ ಹೆಚ್ಚು.
ಕಳೆನಾಶಕ ಬೇಡ
ಇಂದು ಕಳೆಯ ನಿರ್ಮೂಲನೆಗೆ ರಾಸಾಯನಿಕ ಕಳೆ ನಾಶಕಗಳು ಬಂದಿವೆ. ಕಳೆ ಕೀಳುವ, ಸವರುವ ಶ್ರಮಕ್ಕಿಂತ ಸಲೀಸು ಪದ್ಧತಿಯಾದುದರಿಂದ ರೈತರ ಗಮನ ಸೆಳೆದಿದೆ. ಇದರ ಪ್ರಯೋಗದಿಂದ ಹತ್ತಿರದಲ್ಲಿ ಯಾವ ಪ್ರತಿಕೂಲ ಪರಿಣಾಮಗಳು ಕಾಣಿಸಿಕೊಳ್ಳದಿದ್ದರೂ ದೀರ್ಘಕಾಲೀನ ಅನಾಹುತಗಳು ಅನೇಕ. ವಾಸ್ತವವಾಗಿ ಕಳೆನಾಶಕದಿಂದ ಕಳೆಯೇನು ಸಾಯುವುದಿಲ್ಲ. ಬೇರಿನಲ್ಲಿ ಜೀವವಿದ್ದು ತುಸು ಇಬ್ಬನಿ, ತುಂತುರು ಮಳೆ ಬಿದ್ದರೂ ಕಳೆ ಮತ್ತೆ ಪ್ರತ್ಯಕ್ಷವಾಗುತ್ತದೆ! ಇದೇ ವೇಳೆ ಕಳೆನಾಶಕದ ರಸಾಯನಿಕದ ತೀಕ್ಷ್ಣತೆಗೆ ಸೂಕ್ಷ್ಮ ಬ್ಯಾಕ್ಟೀರಿಯಾಗಳು, ಎರೆಹುಳುಗಳು ನಾಶವಾಗುತ್ತವೆ. ಭೂಮಿ ಬರಡು, ಇಳುವರಿ ಕಡಿಮೆ, ವಿಚಿತ್ರ ರೋಗಗಳು ಮುಂದಿನ ಹತ್ತಾರು ವರ್ಷಗಳ ನಂತರವಷ್ಟೇ ಕಾಣಿಸಿಕೊಳ್ಳುವುದು ಖಚಿತ. ನಾವೇ ನಮ್ಮ ಬೆಳೆಗೆ ವಿಷವಿಕ್ಕುವುದೇ…. ಯೋಚಿಸಿ.
ಸಗಣಿಯೆಲ್ಲ ಸ್ಲರಿ, ಸರಿಯೇ?
ಈಗ ಬಹುಪಾಲು ಕೃಷಿಕರ ಮನೆಯಲ್ಲಿ ಗೋಬರ್ ಅನಿಲ ಸ್ಥಾವರ ನಿರ್ಮಾಣವಾಗಿದೆ. ಆದರೆ ಹೆಚ್ಚಿನ ಗೋಪಾಲಕರು ಆಯಾದಿನದ ಎಲ್ಲಾ ಸಗಣಿಯನ್ನು ಸ್ಲರಿ ಮಾಡಿ ಸ್ಥಾವರಕ್ಕೆ ಉಣಿಸುತ್ತಿದ್ದಾರೆ. ಒಂದು ಬುಟ್ಟಿ ಅರ್ಥಾತ್ 15 ಕೆ.ಜಿ. ಸಗಣಿಯಿಂದ 4-5 ಜನರ ಕುಟುಂಬಕ್ಕೆ ಸಾಕೆನಿಸುವಷ್ಟು ಅನಿಲ ಉತ್ಪತ್ತಿಯಾಗುತ್ತದೆ. ಇದಕ್ಕಿಂತ ಜಾಸ್ತಿ ಸಗಣಿಯನ್ನು ಹಾಕುವುದು ವ್ಯರ್ಥ, ನಷ್ಟದ ಬಾಬತ್ತು. ಹೆಚ್ಚು ಸಗಣಿಯನ್ನು ಬಳಸುವುದರಿಂದ ಹೆಚ್ಚಿನ ಅನಿಲ ಬಿಡುಗಡೆಯಾಗುತ್ತದೆನ್ನುವುದು ಭ್ರಮೆ. ಊಡಿಸಿದ ಸಗಣಿ ತನ್ನಲ್ಲಿರುವ ಪೂರ್ಣ ಅನಿಲವನ್ನು ಹೊರಹಾಕಲು 54 ದಿನ ತೆಗೆದುಕೊಳ್ಳುತ್ತದಂತೆ. ಅಂದರೆ ವಿಪರೀತ ಸಗಣಿ ಕದಡುವುದರಿಂದ ಸ್ಥಾವರದೊಳಗಿನ ಸ್ಲರಿ ತನ್ನಲ್ಲಿರುವ ಅನಿಲವಷ್ಟನ್ನು ಬಿಡದೆಯೇ ಹೊರದಬ್ಬಲ್ಪಡುತ್ತದೆ. ಹೀಗಾಗುವುದು ಬೇಕಿತ್ತೇ?
ಸುಣ್ಣ – ಸುಬ್ಬಣ್ಣ!
ಇದು ತೋಟಗಳಿಗೆ ಸುಣ್ಣ ಹಾಕುವ ಕಾಲ. ಇವತ್ತಿಗೂ ಹಲವು ರೈತರು ಗೊಬ್ಬರ ಹಾಕಲು ಬುಡ ಬಿಡಿಸಿ ಸುಣ್ಣ ಹಾಕಿ ಅದರ ಮೇಲೆ ಗೊಬ್ಬರ ಹಾಕುತ್ತಾರೆ. ಇದಂತೂ ತಪ್ಪು ತಪ್ಪು. ಯಾವುದೇ ಬೆಳೆಯ ಬುಡದ ಸಮೀಪ ಸುಣ್ಣ ಹಾಕದೆ ಉಳಿದ ಕೃಷಿ ಪ್ರದೇಶದಲ್ಲಿ ಸುಣ್ಣ ಬೀರಬೇಕು. ಮಣ್ಣಿನಲ್ಲಿರುವ ಕ್ಷಾರೀಯ ಅಂಶವನ್ನು ತೆಗೆದುಹಾಕಿ ಭೂಮಿಯ ಪಿಚ್‍ನ್ನು ತಟಸ್ಥ ಏಳಕ್ಕೆ ತರಲು ಪ್ರಯತ್ನಿಸುವುದು ಸುಣ್ಣದ ಮುಖ್ಯ ಕೆಲಸ. ಅದು ಗೊಬ್ಬರವಲ್ಲ. ಒಂದೊಮ್ಮೆ ಗೊಬ್ಬರದೊಂದಿಗೆ ಬೆರೆತರೆ ಗೊಬ್ಬರದ ಸಾರ ನಷ್ಟಗೊಳ್ಳುವ ರಾಸಾಯನಿಕ ಕ್ರಿಯೆ ನಡೆದುಬಿಡುತ್ತದೆ. ಅದೇ ತೋಟದ ಮಣ್ಣು ಸಮಸ್ಥಿತಿಗೆ ಬಂದರೆ ನಾವು ಉಣಿಸುವ ಗೊಬ್ಬರದ ಅಷ್ಟೂ ಭಾಗವನ್ನು ಹೀರಿಕೊಳ್ಳಲು ಬೇರಿಗೆ ಸಾಧ್ಯವಾಗುತ್ತದೆ.
ಇವು ಕೆಲವು ಪ್ರಾತಿನಿಧಿಕ ಮಾಹಿತಿಗಳು. ಇಂತಹ ಸತ್ಯಗಳು ಇತರರಲ್ಲಿಯೂ ಬಹಳಷ್ಟಿರಬಹುದು. ಅಂತಹ ಸಂವಾದ ನಡೆಯುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಬಹುದು. ಅಂತಹ ಸರಣಿಗೆ ಈ ಲೇಖನ ನಾಂದಿ ಹಾಡಿದೆ ಎಂದುಕೊಳ್ಳೋಣವೇ?
-ಮಾ.ವೆಂ.ಸ.ಪ್ರಸಾದ್
ಒಡಕುಗಳನ್ನು ಬದಿಗೊತ್ತಿ ಸಂಘಟಿತರಾಗಿ
ಯಾವುದೇ ಸಮುದಾಯಗಳು ಸಮಾಜದಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಒಡಕುಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಈರಣ್ಣಸ್ವಾಮಿ, ಕೆಂಪಣ್ಣಸ್ವಾಮಿ ದೇವಾಲಯದ ಭವನದಲ್ಲಿ ಒಕ್ಕಲಿಗ ಸಮುದಾಯದ ಈರಣ್ಣದೇವರ ದೇವಾಲಯದ ಟ್ರಸ್ಟ್ನ ವತಿಯಿಂದ ಮಂಗಳವಾರ ಆಯೋಜನೆ ಮಾಡಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಒಕ್ಕಲುತನವನ್ನೆ ನಂಬಿಕೊಂಡು ಬೇರೆ ಎಲ್ಲಾ ಸಮುದಾಯಗಳನ್ನು ತನ್ನ ಜೊತೆ ಜೊತೆಯಲ್ಲೆ ಕರೆದೊಯ್ಯುತ್ತಾ ಸಮಾಜದ ಏಳಿಗೆಗೆ ಸಹಕಾರವನ್ನು ನೀಡುತ್ತಿರುವ ಸಮುದಾಯವು ಮುಂದಿನ ದಿನಗಳಲ್ಲಿ ಏಳಿಗೆಯ ದೃಷ್ಟಿಯಿಂದ ತನ್ನಲ್ಲಿರುವ ಒಡಕುಗಳನ್ನು ಬದಿಗೊತ್ತಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸಮುದಾಯದ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಸಂಘಟಿತರಾಗಬೇಕು, ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಬೇಕು, ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆ ಮಾಡುತ್ತಿರುವ ಮಕ್ಕಳನ್ನು ಗುರ್ತಿಸಿ ಅವರನ್ನು ಪುರಸ್ಕರಿಸುವಂತಹ ಕಾರ್ಯವನ್ನು ಒಗ್ಗಟ್ಟಿನಿಂದ ಮಾಡಬೇಕು ಎಂದರು.
ನಿವೃತ್ತಿ ಪೊಲೀಸ್ ವರಿಷ್ಟಾಧಿಕಾರಿ ನಾಗರಾಜ್ ಮಾತನಾಡಿ, ಸಮಾಜದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ, ಇಂತಹ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದಾಗ ಮಾತ್ರ ಸಮುದಾಯದ ಮಕ್ಕಳು ಎಲ್ಲಾ ರಂಗಗಳಲ್ಲೂ ಉತ್ತಮವಾದ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಅನೇಕ ಕುಟುಂಬಗಳಲ್ಲಿನ ಮಕ್ಕಳಲ್ಲಿ ಅಪಾರವಾದ ಜ್ಞಾನವಿದ್ದರೂ ಕೂಡಾ ಆರ್ಥಿಕವಾದ ಬಿಕ್ಕಟ್ಟುಗಳಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರ್ತಿಸಿ ಪ್ರೋತ್ಸಾಹ ಮಾಡುವಂತಹ ಕಾರ್ಯವನ್ನು ಕಳೆದ ಎರಡು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಉದ್ದೇಶಿಸಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮುಂತಾದ ಜಿಲ್ಲೆಗಳಲ್ಲಿನ ಸಮುದಾಯದ ಹೆಣ್ಣು ಮಕ್ಕಳ ಮಕ್ಕಳಿಗೆ ಪೋಷಕರೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿವೃತ್ತ ಡಿ.ಡಿ.ಪಿ.ಐ. ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ರವಿ, ವೆಂಕಟಗಿರಿಕೋಟೆ ಕ್ಷೇತ್ರದ ತಾಲ್ಲೂಕು ಪಂಚಾಯತಿ ಸದಸ್ಯ ಭೀಮರಾಜ್, ಪಿ.ವಿ.ನಾಗರಾಜ್, ಕೆಂಪಣ್ಣ ಮತ್ತಿತರರು ಹಾಜರಿದ್ದರು.
ರೈಲ್ವೆ ಅಂಡರ್ ಪಾಸ್
ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯಿಂದ ಹೊರ ಬರುವ ರೈಲ್ವೆ ಅಂಡರ್ ಪಾಸ್ ಕಲುಷಿತ ನೀರು ಹಾಗೂ ಕೆಸರಿನಿಂದ ಆವೃತವಾಗಿದ್ದು, ಸುಮಾರು 50 ಕೆಜಿ ರೇಷ್ಮೆ ಗೂಡನ್ನು ಹೊತ್ತು ಬರುವ ಹಮಾಲಿ ಕಾರ್ಮಿಕರು ತಲೆ ಮೇಲಿನ ಮೂಟೆ ಕೆಳಗೆ ಬೀಳದಂತೆ ತರಲು ಹೆಣಗಬೇಕಾದ ಪರಿಸ್ಥಿತಿ ಮೂಡಿದೆ.
ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಮನವಿ
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಕೃಷಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಒತ್ತಾಯಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಅರ್ಕಾವತಿ ಗೋಡನ್ನಲ್ಲಿ ತೂಕದ ಸ್ಕೇಲ್ ಇಲ್ಲದಿರುವುದರಿಂದ ರೈತರು ತಮ್ಮ ರೇಷ್ಮೆ ಗೂಡನ್ನು ಬೇರೆ ಗೋಡನ್ಗೆ ತೂಕ ಹಾಕಿಸಲು ಹೋಗುವ ಸಮಯದಲ್ಲಿ ಗೂಡು ಕಳ್ಳತನವಾಗುತ್ತಿದೆ. ಆದ್ದರಿಂದ ಅರ್ಕಾವತಿ ಗೋಡನ್ನಲ್ಲಿ ತೂಕದ ಸ್ಕೇಲ್ ಅಳವಡಿಸಬೇಕು.
ಮಾರುಕಟ್ಟೆಯಲ್ಲಿ ಹಲವು ಬಾರಿ ರೇಷ್ಮೆ ಗೂಡಿನ ಕಳ್ಳರು ಸಿಕ್ಕುಬಿದ್ದು ಪೊಲೀಸರಿಗೆ ಒಪ್ಪಿಸಲಾಗಿದೆ. ಕಳ್ಳತನವನ್ನು ತಪ್ಪಿಸಲು ಮತ್ತು ಕಳ್ಳರನ್ನು ಪತ್ತೆಹಚ್ಚಲು ಮಾರುಕಟ್ಟೆ ಕಾಂಪೌಂಡ್ ಸುತ್ತಲೂ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು.
ರೇಷ್ಮೆ ಗೂಡಿನ ಮಾರುಕಟ್ಟೆಗೆ ಒಂದೇ ಗೇಟ್ ಇರುವುದು ಸರಿಯಾಗಿದೆ. ಎರಡು ಅಥವಾ ಮೂರು ಗೇಟ್ ಅಳವಡಿಸಿದಲ್ಲಿ ಕಳ್ಳತನಗಳು ಹಾಗೂ ಅಕ್ರಮ ಚಟುವಟಿಕೆಗಳಿಗೆ ದಾರಿಯಾಗುತ್ತದೆ. ರೈತರಿಗೆ ತಂಗಲು ವಿಶ್ರಾಂತಿ ಗೃಹ ಹಾಗೂ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಬೇಕು ಮುಂತಾದ ಬೇಡಿಕೆಗಳಿರುವ ಮನವಿ ಪತ್ರವನ್ನು ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಅವರಿಗೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಕೋಟೆ ಚನ್ನೇಗೌಡ, ಪುರುಷೋತ್ತಮ್, ಮುರಳಿ, ನಾಗರಾಜ್, ಗೋವಿಂದಪ್ಪ, ಲಕ್ಷ್ಮೀಪತಿರೆಡ್ಡಿ, ಬಾಲಮುರಳಿಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆತ್ಮಹತ್ಯೆ ತನಿಖೆಯನ್ನು ಸಿ.ಬಿ.ಐ ಗೆ ವಹಿಸಲು ಒತ್ತಾಯ
ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ತನಿಖೆಯನ್ನು ಸಿ.ಬಿ.ಐ ಗೆ ವಹಿಸಬೇಕೆಂದು ಮಂಗಳವಾರ ಬಿ.ಜೆ.ಪಿ ತಾಲ್ಲೂಕು ಘಟಕದ ಸದಸ್ಯರು ಒತ್ತಾಯಿಸಿದರು.
ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ನಗರದ ಬಸ್ನಿಲ್ದಾಣದ ಬಳಿ ಬಿ.ಜೆ.ಪಿ ತಾಲ್ಲೂಕು ಘಟಕದ ಸದಸ್ಯರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ನಂತರ ಮೆರವಣಿಗೆಯಲ್ಲಿ ಸಾಗಿ ಮಾಜಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಹಿರಿಯ ಇನ್ನರು ಐ.ಎ.ಎಸ್ ಅಧಿಕಾರಿಗಳನ್ನು ಸಿ.ಬಿ.ಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಗೃಹಮಂತ್ರಿಯ ವಿಶೇಷ ಅಧಿಕಾರಿ ಕೆಂಪಯ್ಯ ಅವರನ್ನು ಕೂಡ ಈ ಸಂದರ್ಭದಲ್ಲಿ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ಕಛೇರಿಯ ಮುಂದೆ ಧರಣಿ ನಡೆಸಿದ ಬಿ.ಜೆ.ಪಿ ಕಾರ್ಯಕರ್ತರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಕಾರ್ಯದರ್ಶಿಗಳಾದ ತರಬಳ್ಳಿ ಭಾಸ್ಕರರೆಡ್ಡಿ, ಮುನಿರಾಜು, ಸದಸ್ಯರಾದ ಪುರುಷೋತ್ತಮ್, ಸುರೇಂದ್ರಗೌಡ, ಮಂಜುಳಮ್ಮ, ದೊಣ್ಣಹಳ್ಳಿ ರಾಮಣ್ಣ, ಸುಜಾತಮ್ಮ, ಸಾವಿತ್ರಮ್ಮ, ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗುರುಪೂರ್ಣಿಮಾ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನಮಂದಿರದಲ್ಲಿ ಮಂಗಳವಾರ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುಪೂರ್ಣಿಮಾ ಪ್ರಯುಕ್ತ ಮೂರು ದಿನಗಳಿಂದ ರಾಮಕೋಟಿ ಅಖಂಡ ಭಜನೆಯನ್ನು ಏರ್ಪಡಿಸಲಾಗಿತ್ತು. ಮಳ್ಳೂರು, ಅಪ್ಪೇಗೌಡನಹಳ್ಳಿ, ಯಲೆಯೂರು, ಚೌಡಸಂದ್ರ, ವಿಜಯಪುರ, ಬೆಳ್ಳೂಟಿ, ಬಳುವನಹಳ್ಳಿ, ಬೋದಗೂರು, ಮೇಲೂರು, ಕೊಮ್ಮಸಂದ್ರ, ತಿಪ್ಪೇನಹಳ್ಳಿ, ಭಕ್ತರಹಳ್ಳಿ ಗ್ರಾಮದ ಭಕ್ತರಿಂದ ಸರದಿಯಂತೆ ಹಗಲೂ ರಾತ್ರಿ ರಾಮಕೋಟಿ ಭಜನೆ ನಡೆಯಿತು. ಒಂಬತ್ತು ದಿನಗಳ ಕಾಲ ದಿನಕ್ಕೊಂದು ಗ್ರಾಮದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಮಂಗಳವಾರ ಗುರುಪೂರ್ಣಿಮಾ ಅಂಗವಾಗಿ ಕಾಕಡಾರತಿ, ಪಂಚಾಮೃತಾಭಿಷೇಕ, ಸತ್ಯನಾರಾಯಣಸ್ವಾಮಿ ಪೂಜೆ, ಸಾಯಿ ಹೋಮ, ದತ್ತಾತ್ರೇಯ ಹೋಮ, ಶ್ರೀರಾಮ ತಾರಕ ಹೋಮ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಸಂಜೆ ದೇವಾಲಯದಲ್ಲಿ ಘಂಟಸಾಲ ಗಾನ ಕಲಾ ವೃಂದದವರಿಂದ ಭಕ್ತಿಗೀತೆಗಳು ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
‘ಸಾಯಿನಾಥ ಜ್ಞಾನ ಮಂದಿರದಲ್ಲಿ ಹಲವಾರು ವರ್ಷಗಳಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ. ಈ ವಿಶಿಷ್ಠ ದಿನ ಹೋಮ ಹವನಗಳನ್ನು ನಡೆಸಿ ವಿಶೇಷ ಪೂಜೆ ನಡೆಸುವುದರಿಂದ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಾರೆ. ಎಲ್ಲರಿಗೂ ಪ್ರಸಾದವನ್ನು ವಿನಿಯೋಗಿಸುತ್ತಿದ್ದೇವೆ’ ಎಂದು ದೇವಾಲಯದ ಸಂಚಾಲಕ ನಾರಾಯಣಸ್ವಾಮಿ ತಿಳಿಸಿದರು.
ಕಳಶಸ್ಥಾಪನೆ, ಅಷ್ಟದಿಗ್ಭಂದನ
ಶಿಡ್ಲಘಟ್ಟದ ಮುತ್ತೂರು ಬೀದಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ರಾಯಚೂರು ಜಿಲ್ಲೆಯ ಅನುಮಂತ್ರಾಲಯದ ಸುವಿದ್ಯೇಂದ್ರತೀರ್ಥ ಸ್ವಾಮಿಗಳು 12 ವರ್ಷಕ್ಕೊಮ್ಮೆ ನಡೆಯುವ ಕಳಶಸ್ಥಾಪನೆ, ಅಷ್ಟದಿಗ್ಭಂದನೆ ಹಾಗೂ ಕುಂಭಾಭಿಷೇಕವನ್ನು ನಡೆಸಿಕೊಟ್ಟರು. ಎಸ್.ವಿ.ನಾಗರಾಜರಾವ್, ಶ್ರೀಕಾಂತ್, ಎಂ.ವಾಸುದೇವರಾವ್, ಎ.ಎಸ್.ರವಿ, ಎ.ಶಂಕರರಾವ್, ಗುರುರಾಜರಾವ್, ಶೇಷಭಟ್ ಹಾಜರಿದ್ದರು.
ಗ್ರಾಮ ಪಂಚಾಯತಿ ಪಿ.ಡಿ.ಓ. ವಿರುದ್ಧ ಧರಣಿ
ದಲಿತರು ಎಂಬ ಕಾರಣದಿಂದ ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಮನೆಯ ಖಾತೆಯನ್ನು ಮಾಡಿಕೊಡದೆ ಇರುವ ಗ್ರಾಮ ಪಂಚಾಯತಿ ಪಿ.ಡಿ.ಓ. ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಧರಣಿ ನಡೆಸಿದ ಘಟನೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿ ವ್ಯಾಪಿಗೆ ಬರುವ ತಲದುಮ್ಮನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನಿವೃತ್ತ ಶಿಕ್ಷಕ ವೆಂಕಟಪ್ಪ ಅವರಿಗೆ ಸೇರಿದ ಮನೆಯ ಜಾಗಕ್ಕೆ ೧೯೮೦ ರಲ್ಲಿ ನಿವೇಶನದ ಹಕ್ಕು ಪತ್ರವನ್ನು ಪಡೆದಿದ್ದು ಅಂದಿನಿಂದಲೂ ವೆಂಕಟಪ್ಪನವರು ಗ್ರಾಮ ಪಂಚಾಯತಿಗೆ ಕಂದಾಯ ಪಾವತಿವನ್ನು ಮಾಡಿ, ಜಾಗಕ್ಕೆ ಸಂಬಂದಿಸಿದ ದಾಖಲೆಗಳನ್ನು ಪಡೆದಿರುತ್ತಾರೆ.
ಕಳೆದ ೨ ವರ್ಷಗಳ ಹಿಂದೆ ಪಂಚಾಯತಿ ವಿಂಗಡನೆ ಸಂದರ್ಭದಲ್ಲಿ ಈ ಗ್ರಾಮವು ದೇವರಮಳ್ಳೂರು ಪಂಚಾಯತಿ ವ್ಯಾಪ್ತಿಗೆ ಬಂದಿದ್ದು, ಮನೆಯ ಜಾಗದ ಖಾತೆಯನ್ನು ಬದಲಾವಣೆ ಮಾಡಿಕೊಡಬೇಕೆಂದು ಅರ್ಜಿಯೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದರೂ ಸಹ ಗ್ರಾಮ ಪಂಚಾಯತಿ ಪಿ.ಡಿ.ಓ ವೆಂಕಟಪ್ಪನವರಿಗೆ ಖಾತೆಯನ್ನು ಮಾಡಿಕೊಟ್ಟಿಲ್ಲ, ಜಾಗದ ವಿಚಾರವು ನ್ಯಾಯಾಲಯದ ಮೇಟ್ಟಿಲೇರಿದಾಗ ನ್ಯಾಯಾಲಯ ವೆಂಕಟಪ್ಪನವರ ಪರವಾಗಿ ತೀರ್ಪು ನೀಡಿದ್ದರೂ ಈ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ, ಈ ಬಗ್ಗೆ ವಿಚಾರಿಸಿದರೆ ನಿಮ್ಮ ಜಾಗವು ಸರ್ಕಾರಿ ಜಾಗವಾಗಿದೆ, ಅಲ್ಲಿ ಅಂಗನವಾಡಿ ಕೇಂದ್ರವನ್ನು ನಿರ್ಮಿಸುತ್ತೇವೆ. ಆದ್ದರಿಂದ ಖಾತೆಯನ್ನು ಮಾಡಿಕೊಡಲು ಆಗುವುದಿಲ್ಲ ಎಂದು ಪಿ.ಡಿ.ಓ ಹೇಳುತ್ತಾರೆ ಎಂದು ವೆಂಕಟಪ್ಪ ತಮ್ಮ ಅಳಲನ್ನು ತೋಡಿಕೊಂಡರು.
ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅರ್ಜಿಗಳನ್ನೂ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲವಾದ್ದರಿಂದ ಆಮ್ ಆದ್ಮಿ ಪಕ್ಷ ಸಹಯೋಗದಲ್ಲಿ ಪಂಚಾಯತಿ ಮುಂದೆ ಧರಣಿಯನ್ನು ಹಮ್ಮಿಕೊಂಡಿದ್ದು ನ್ಯಾಯ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ನರಸಿಂಹಪ್ಪ, ವಿಜಯ್ಕುಮಾರ್, ಸರಸ್ವತಮ್ಮ, ಪೂಜಮ್ಮ, ಅಭಿಷೇಕ್, ಪವನ್, ಪಾರ್ವತಮ್ಮ ಮತ್ತಿತರರು ಹಾಜರಿದ್ದರು.
ಎಲ್ಲಿಂದಲೋ ಬಂದವರು
‘ನಾವು ಬಂದಿರುವುದು ರಾಜಾಸ್ಥಾನದಿಂದ ಪಾಕಿಸ್ತಾನದಿಂದಲ್ಲ. ನಿಮ್ಮ ಊರಿನ ಹೆಂಗಸರು ಮತ್ತು ಮಕ್ಕಳನ್ನು ಬೀದಿಯಲ್ಲಿ ಉಳಿಯಲು ಬಿಡುತ್ತೀರಾ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ಏನಾದರೂ ತೊಂದರೆಯಾದರೆ ಯಾರು ಹೊಣೆ. ನಾವೇನು ಕಳ್ಳತನ ಮಾಡಲು ಬಂದಿಲ್ಲವಲ್ಲ’ ಎಂದು ರಾಧಾಬಾಯಿ ಒಂದೇ ಸಮನೆ ಪ್ರಶ್ನಿಸುತ್ತಿದ್ದರೆ ಅವರ ಪೂರ್ವಾಪರ ತಿಳಿಯಲು ಬಂದಿದ್ದ ಸಾರ್ವಜನಿಕರು ನುರುತ್ತರರಾದರು.
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ರಸ್ತೆ ಬಂದಿಯಲ್ಲಿ ಸುಮಾರು 50 ಮಂದಿ ರಾಜಾಸ್ತಾನಿ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಬೀಡು ಬಿಟ್ಟಿದ್ದರು. ಹಾದಿಯಲ್ಲಿ ಸಾಗುತ್ತಿರುವ ಸಾರ್ವಜನಿಕರಿಗೆ ಇಷ್ಟೊಂದು ಜನ ಹೇಗೆ ಇಲ್ಲಿಗೆ ಬಂದರೆಂಬ ಕುತೂಹಲ. ಅವರೊಂದಿಗೆ ಗಂಡಸರೇ ಇಲ್ಲವಲ್ಲ ಎಂಬ ಅಚ್ಚರಿ ಕೂಡ.
‘ಚಿಂತಾಮಣಿಯಿಂದ ರೈಲಿನಲ್ಲಿ ನಾವು ಬಂದೆವು. ಮಕ್ಕಳು ಸೇರಿದಂತೆ ನಾವೆಲ್ಲಾ ಹಸಿದಿದ್ದೆವು. ಶಿಡ್ಲಘಟ್ಟದ ರೈಲ್ವೆ ನಿಲ್ದಾಣದಲ್ಲಿ ನಾವು ಅಡುಗೆ ಮಾಡಿಕೊಂಡು ಬೆಂಗಳೂರಿಗೆ ಹೋಗುತ್ತೇವೆಂದು ಹೇಳಿದರೂ ಕೇಳದೆ ಪೊಲೀಸರು ಇಲ್ಲಿಗೆ ತಂದು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಎಳೆ ಮಕ್ಕಳಿದ್ದಾರೆ. ಹೆಂಗಸರನ್ನು ಹೀಗೆಯೇ ನಡೆಸಿಕೊಳ್ಳುವುದು. ಮಳೆ ಬರುವ ಹಾಗಿದೆ. ನಾವೇನು ಮಾಡುವುದು’ ಎಂದು ರಾಧಾಬಾಯಿ ಅಳಲನ್ನು ತೋಡಿಕೊಂಡರು.
‘ನಾವು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಬಂದಿದ್ದೇವೆ. ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತೇವೆ. ನಾವು ಕಸೂತಿ ಕೆಲಸ ಮಾಡುತ್ತೇವೆ’ ಎನ್ನುತ್ತಾ ಅವರು ಕಸೂತಿ ಮಾಡಿದ ಬಟ್ಟೆಯನ್ನು ಪ್ರದರ್ಶಿಸಿದರು.
ನಿನ್ನೆಯ ದಿನವಷ್ಟೇ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹಲವಾರು ಮಂದಿ ರಾಜಸ್ಥಾನಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಭಿಕ್ಷೆ ಬೇಡುತ್ತಿದ್ದುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿ ಅವರನ್ನು ಸಾಗಹಾಕಿದ ಘಟನೆ ಹಚ್ಚಹಸಿರಾಗಿರುವಾಗಲೇ ಶಿಡ್ಲಘಟ್ಟದಲ್ಲಿ ರಾಜಸ್ತಾನಿ ಮಹಿಳೆಯರು ಮತ್ತು ಮಕ್ಕಳು ಕಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ಇವರ ಬಗ್ಗೆ ಕುತೂಹಲ ಉಂಟಾಗಿತ್ತು. ಇವರು ಮೈಸೂರಿಗೆ ಹೋಗಲು ಈ ಮಾರ್ಗವಾಗಿ ಹೇಗೆ ಬಂದರು. ಇವರೊಂದಿಗೆ ಒಬ್ಬರೂ ಗಂಡಸರೇಕೆ ಬಂದಿಲ್ಲ. ಇವರ ಜೀವನ ನಿರ್ವಹಣೆ ಹೇಗೆ ಎಂಬುದಾಗಿ ಪ್ರಶ್ನೆ ಮೂಡಿತ್ತು.
ಅಷ್ಟರಲ್ಲಿ ಅವರ ತೊಂದರೆಯನ್ನು ಗಮನಿಸಿದ ಸಾರ್ವಜನಿಕರು ಬೆಂಗಳೂರಿಗೆ ಹೋಗುವ ಖಾಸಗಿ ಬಸ್ಸಿನವರಿಗೆ ವಿಷಯ ತಿಳಿಸಿ ಬಸ್ಸನ್ನು ಸ್ಥಳಕ್ಕೆ ಕರೆಸಿ ಅವರನ್ನೆಲ್ಲಾ ಬೆಂಗಳೂರಿಗೆ ಕಳುಹಿಸಿದರು. ಅಷ್ಟರಲ್ಲಿ ಮಳೆ ಪ್ರಾರಂಭವಾಗಿದ್ದರಿಂದ ತಮ್ಮ ಗಂಟು ಮೂಟೆ, ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು, ‘ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ’ ಎಂದು ಹರಸುತ್ತಾ ಬಸ್ಸಿನತ್ತ ದೌಡಾಯಿಸಿದರು.
ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ, ‘ಚಿಂತಾಮಣಿಯಿಂದ ಈ ಮಹಿಳೆಯರು ಮತ್ತು ಮಕ್ಕಳ ಗುಂಪು ಟಿಕೇಟ್ ಪಡೆಯದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆ ಅಧಿಕಾರಿ ಟಿಕೇಟ್ ಕೇಳಿದಾಗ ರೈಲ್ವೆ ನಿಲ್ದಾಣದಿಂದ ಹೊರಕ್ಕೆ ಅವರು ದೌಡಾಯಿಸಿದ್ದಾರೆ. ಆಗ ರೈಲ್ವೆ ಅಧಿಕಾರಿ ನಮಗೆ ತಿಳಿಸಿದರು. ಹೋಗಿ ನೋಡುವಷ್ಟರಲ್ಲಿ ಅವರು ಅಲ್ಲಿರಲಿಲ್ಲ. ಸಾರ್ವಜನಿಕರು ಕಳಿಸಿದ ಬಸ್ಸಿನಲ್ಲೂ ಟಿಕೇಟ್ ಪಡೆಯದಿದ್ದಲ್ಲಿ ಬಸ್ಸಿನವರು ನಡುದಾರಿಯಲ್ಲಿಯೇ ಇಳಿಸಿಬಿಡುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಉತ್ತರ ನೀಡುವ ಇವರು ಏತಕ್ಕಾಗಿ ಬಂದಿರುವರೋ ತಿಳಿಯದು’ ಎಂದು ತಿಳಿಸಿದರು.

