ಯಾವುದೇ ಕಾರಣಕ್ಕೂ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸಬಾರದು ಒಂದು ವೇಳೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ರಸ್ತೆ ನಿರ್ಮಿಸಲು ಮುಂದಾದಲ್ಲಿ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ನೇರ ಕಾರಣ ಎಂದು ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೇ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸಲು ಮುಂದಾದ ಅಧಿಕಾರಿಗಳನ್ನು ಶನಿವಾರ ಗ್ರಾಮಸ್ಥರು ತಡೆದು ವಾಪಸ್ ಕಳುಹಿಸಿದ ಹಿನ್ನಲೆಯಲ್ಲಿ ಸೋಮವಾರ ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಎಂ.ಮನೋರಮಾ ಹಾಗು ಅಧಿಕಾರಿಗಳ ತಂಡಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿ ಮಾತನಾಡಿದರು.
ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸುಮಾರು ೪೯ ಎಕರೆ ಗೋಮಾಳವಿದ್ದು ಈ ಪೈಕಿ ೧೦ ಎಕರೆ ಜಾಗವನ್ನು ಗ್ರಾಮದ ಸರ್ಕಾರಿ ಶಾಲೆಗಾಗಿ ಹಾಗು ೧೦ ಎಕರೆಯನ್ನು ಮೊರಾರ್ಜಿ ದೇಸಾಯಿ ವಸತಿ ನಿಲಯದ ನಿರ್ಮಾಣಕ್ಕೆ ಈಗಾಗಲೇ ಮೀಸಲಿಡಲಾಗಿದೆ. ಇನ್ನುಳಿದ ಸ್ವಲ್ಪ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಗ್ರಾಮದ ಗೋಮಾಳವನ್ನು ಮೊದಲು ಸರ್ವೇ ಮಾಡುವ ಮೂಲಕ ತಾಲ್ಲೂಕು ಆಡಳಿತ ಗುರುತಿಸಿ. ನಂತರ ಬೇಕಾದರೆ ಸಾರ್ವಜನಿಕ ಸೌಕರ್ಯಕ್ಕಾಗಿ ಅದನ್ನು ಬಳಸಲಿ, ಅದು ಬಿಟ್ಟು ಕೇವಲ ಪ್ರಭಾವಿಗಳ ಮಾತಿಗೆ ಬೆಲೆ ಕೊಟ್ಟು ಗೋಮಾಳದಲ್ಲಿ ರಸ್ತೆ ನಿರ್ಮಿಸುವ ಮೂಲಕ ಸರ್ಕಾರಿ ಗೋಮಾಳವನ್ನು ಖಾಸಗಿಯವರ ಅನುಕೂಲಕ್ಕಾಗಿ ಬಳಸಲು ಯಾವುದೇ ಕಾರಣಕ್ಕೂ ಗ್ರಾಮಸ್ಥರು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸ್ಥಳಕ್ಕೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿ ಗ್ರಾಮದ ಒಟ್ಟು ೪೯ ಎಕರೆ ಗೋಮಾಳ ಜಾಗದ ಸರ್ವೇ ಕಾರ್ಯ ನಡೆಸಿ ಕಲ್ಲುಗಳನ್ನು ನೆಡುವಂತೆ ಸೂಚಿಸಿದರು. ಒಂದು ವೇಳೆ ಸರ್ವೇ ಕಾರ್ಯ ಮಾಡದೆಯೇ ಗ್ರಾಮಸ್ಥರ ಗಮನಕ್ಕೆ ಬಾರದಂತೆ ತಾವು ರಸ್ತೆ ಕಾಮಗಾರಿ ಮಾಡಲು ಮುಂದಾದರೆ ಇಲ್ಲಿ ಆಗುವ ಅನಾಹುತಗಳಿಗೆ ನೀವೇ ಕಾರಣಕರ್ತರು ಎಂದು ಎಚ್ಚರಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ.ಎಂ.ಮನೋರಮಾ ನಾಲ್ಕೈದು ದಿನಗಳ ಒಳಗೆ ಗೋಮಾಳದ ಸರ್ವೇ ಕಾರ್ಯ ಮಾಡಿಸಿ ನಂತರ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿಪ್ರಕಾಶ್, ಗ್ರಾಮಸ್ಥರಾದ ಆನಂದಮೂರ್ತಿ, ಅಂಬರೀಶ್, ಸಂಪತ್, ಮಧು, ರಾಜಪಟೇಲಪ್ಪ, ಕಾಮೇಶ್, ಉಮೇಶ್, ಮುನಿರಾಜು, ಪಾಪಣ್ಣ, ಗಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗೋಮಾಳದಲ್ಲಿ ರಸ್ತೆ ನಿರ್ಮಿಸಬಾರದು
ಭೂಮಿಯಿಲ್ಲದವರಿಗೆ ಭೂಮಿ ನೀಡಿ, ಮನೆಯಿಲ್ಲದವರಿಗೆ ಸೂರು ನೀಡಿ
ಭೂ ಅಕ್ರಮ ಸಕ್ರಮ ಸಮಿತಿಗೆ ಶಾಸಕರ ಅಧ್ಯಕ್ಷತೆಯ ಬದಲು ಉಪ ವಿಭಾಗಾಧಿಕಾರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಮತ್ತು ವಸತಿ ರಹಿತ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಜುಲೈ 20 ರ ಬುಧವಾರದಂದು ತಾಲ್ಲೂಕು ಕಚೇರಿಯ ಆವರಣದಲ್ಲಿ ಧರಣಿಯನ್ನು ನಡೆಸುತ್ತೇವೆ. ಅವಕಾಶ ವಂಚಿತರಿಗೆ, ಮಹಿಳೆಯರಿಗೆ ಜಮೀನೇ ಅಧಿಕಾರ. ಇದರಿಂದ ಅವರ ಜೀವನದಲ್ಲಿ ಗುಣಮಟ್ಟ ಸುಧಾರಿಸಲು ಸಾಧ್ಯ. ನೂರಾರು ಎಕರೆ ಭೂಮಿಯನ್ನು ಭೂ ಕಬಳಿಕೆದಾರರು ಕಾನೂನು ಭಯವಿಲ್ಲದೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ಭೂಗಳ್ಳರ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಬೇಕೆಂದು ಆಗ್ರಹಿಸಿದರು.
ಇದುವರೆಗೂ ಸರಿಯಾದ ರೀತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿಲ್ಲ. ಈ ಬಗ್ಗೆ ಶಾಸಕರು ಮುತುವರ್ಜಿ ತೋರಿಸುತ್ತಿಲ್ಲ. ನಮೂನೆ 50/53 ರಂತೆ ಅರ್ಜಿ ಸಲ್ಲಿಸಿರುವ ಎಲ್ಲಾ ಭೂಹೀನ ಬಗರ್ ಹುಕುಂ ಸಾಗುವಳಿದಾರರಿಗೆ ಕಾಲಮಿತಿ ಇಲ್ಲದೇ ಸಾಗುವಳಿ ಚೀಟಿಯನ್ನು ನೀಡಬೇಕು. ನಿವೇಶನ ರಹಿತರಿಗೆ ವಸತಿ ಸೌಕರ್ಯ ನೀಡಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ನಂಜಪ್ಪ, ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಸ್ಪಯಾ ಅನ್ವರಿ, ಕಾರ್ಯದರ್ಶಿ ಶಶಿಕಲಾ, ಗೌರಮ್ಮ, ನಾರಾಯಣಮ್ಮ, ಮಂಜುಳಮ್ಮ ದೊಡ್ಡ ತಿರುಮಲಯ್ಯ, ಹುಜಗೂರು ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗುರುಪೂರ್ಣಿಮೆ
ಶಿಡ್ಲಘಟ್ಟದಲ್ಲಿ ಭಾನುವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಲಿಜ ಸಂಘದ ಸದಸ್ಯರು ನಾದ ಬ್ರಹ್ಮ ಸದ್ಗುರು ಶ್ರೀ ಯೋಗಿನಾರಾಯಣ ಗುರುಪೂಜೆಯ ಅಂಗವಾಗಿ ರೋಗಿಗಳಿಗೆ ಬ್ರೆಡ್ಡು, ಹಣ್ಣು, ಹಾಲನ್ನು ವಿತರಿಸಿದರು. ನಗರಸಭಾ ಸದಸ್ಯರಾದ ನಂದಕಿಶನ್, ರಾಘವೇಂದ್ರ, ವೆಂಕಟಸ್ವಾಮಿ, ಮುಖಂಡರಾದ ವೆಂಕಟರಮಣಪ್ಪ, ಕೆ.ವಿ.ಅನಂತಪದ್ಮನಾಭ, ವೇಣುಗೋಪಾಲ್, ನಾರಾಯಣಸ್ವಾಮಿ ಹಾಜರಿದ್ದರು.
ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವುದು ಹಾಗೂ ಅಗತ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ನೆರವಾಗುವುದಾಗಿ ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಪಿಂಚಣಿ ಶಿಬಿರ, ಹಿರಿಯ ನಾಗರಿಕರ ಗುರುತಿನ ಚೀಟಿ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳ ಜನರಿಗೆ ವಿವಿಧ ಸರ್ಕಾರಿ ಯೋಜನೆಗಳಲ್ಲಿ ಫಲಾನುಭವಿಗಳಾಗಲು ಬೇಕಾದ ದಾಖಲೆ, ಅಫಿಡವಿಟ್ಟುಗಳನ್ನು ಮಾಡಿಸಲು ನೆರವಾಗುತ್ತೇವೆ. ಆರೋಗ್ಯ ಸಂಬಂಧಿ ತೊಂದರೆಗಳನ್ನು ನಿವಾರಿಸಿಕೊಳ್ಳಲು ನೆರವಾಗುತ್ತೇವೆ. ಹಿರಿಯ ನಾಗರಿಕರಿಗೆ ಮಾಸಾಶನ, ವಿಧವಾ ವೇತನ, ಅಂಗವಿಕಲರ ಮಾಸಾಶನ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ಕಾರ್ಮಿಕರ ವಿಮಾ ಯೋಜನೆ, ಚಾಲಕರ ವಿಮಾ ಯೋಜನೆ, ಮನಸ್ವಿನಿ ಮಾಸಾಶನವನ್ನು ಪಡೆಯಲು ಸೂಕ್ತ ದಾಖಲೆಗಳನ್ನು ಒಟ್ಟುಮಾಡಿಕೊಳ್ಳಲು ನಮ್ಮ ಎಸ್ಎನ್ ಕ್ರಿಯಾ ಟ್ರಸ್ಟ್ ಸದಸ್ಯರು ಸಹಕರಿಸಲಿದ್ದಾರೆ ಎಂದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ದೃಷ್ಟಿ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಮತ್ತು ಕನ್ನಡಕಗಳನ್ನು ಉಚಿತವಾಗಿ ನೀಡಿದರು. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತವಾಗಿ ಕರೆದೊಯ್ದು ದೃಷ್ಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದರು.
ಗಂಜಿಗುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷ ಪಿ.ಆನಂದರೆಡ್ಡಿ, ಸದಸ್ಯರಾದ ಜಿ.ನರಸಿಂಹಮೂರ್ತಿ, ವೆಂಕಟಮ್ಮ, ಎನ್.ನರಸಿಂಹಮೂರ್ತಿ, ಎಂಪಿಸಿಎಸ್ ನಿರ್ದೇಶಕ ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗೋಮಾಳದಲ್ಲಿ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ತಡೆ
ನಿರ್ದಿಷ್ಟ ಉದ್ದೇಶವಿಲ್ಲದೇ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ರಸ್ತೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ ಅಧಿಕಾರಿಗಳು ಹಾಗು ಗುತ್ತಿಗೆದಾರರು ಬರಿಗೈಲಿ ವಾಪಸ್ಸಾದ ಘಟನೆ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ವೇ ನಂ ೧ ರ ಗೋಮಾಳ ಜಮೀನಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವ ಗುಂಪೊಂದು ಯಾವುದೇ ಯೋಜನೆಯ ಆದೇಶವಿಲ್ಲದೇ ಏಕಾಏಕಿ ಜೆ.ಸಿ.ಬಿ ಯೊಂದಿಗೆ ಬಂದು ಗೋಮಾಳದಲ್ಲಿ ರಸ್ತೆ ನಿರ್ಮಿಸಲು ಸಿದ್ದತೆ ನಡೆಸಿದ್ದರು.
ಇದನ್ನು ಕಂಡ ಗ್ರಾಮಸ್ಥರು ಯಾವ ಇಲಾಖೆಯಿಂದ, ಯಾವ ಯೋಜನೆಯಡಿ ರಸ್ತೆ ನಿರ್ಮಿಸುತ್ತಿದ್ದೀರಿ. ಯಾವ ಉದ್ದೇಶಕ್ಕೆ ಗೋಮಾಳದಲ್ಲಿ ರಸ್ತೆ ನಿರ್ಮಿಸುತ್ತಿದ್ದೀರಿ. ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ, ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾಗಿದ್ದಾರೆ.
ಇದರಿಂದ ಕುಪಿತಗೊಂಡ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಜೆ.ಸಿ.ಬಿ ಯ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ರಸ್ತೆ ಮಾಡಲು ಇಲ್ಲಿಗೆ ಕಳುಹಿಸಿದವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು. ರಸ್ತೆ ನಿರ್ಮಿಸಲು ಬಂದವರ ಮೊಬೈಲ್ ಕರೆಯ ಮೇರೆಗೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಲೋಕೋಪಯೋಗಿ ಇಲಾಖೆಯ ಎ.ಇ.ಇ ಗಣಪತಿಸಾಕರೆ, ತಹಶೀಲ್ದಾರ್ ಕೆ.ಎಂ.ಮನೋರಮಾ, ಕಂದಾಯ ನಿರೀಕ್ಷಕ ಸುಬ್ರಮಣಿ, ಅಪ್ಪೇಗೌಡನಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಆನಂದ್ ಮತ್ತಿತರ ಅಧಿಕಾರಿಗಳು ಪೋಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ನಮ್ಮ ಗ್ರಾಮದ ಗೋಮಾಳದಲ್ಲಿ ರಸ್ತೆ ನಿರ್ಮಿಸುವ ಉದ್ದೇಶ, ಕ್ರಿಯಾಯೋಜನೆ, ಅಂದಾಜುಪಟ್ಟಿ, ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ಯಾರು. ಎಲ್ಲದಕ್ಕೂ ಮಿಗಿಲಾಗಿ ಇಲ್ಲಿ ರಸ್ತೆ ನಿರ್ಮಿಸುವುದರಿಂದ ಯಾರಿಗೆ ಏನು ಲಾಭ ಎಂದು ಪ್ರಶ್ನಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರವಾದರೂ ನೀಡಿ. ಇಲ್ಲವೇ, ಕಾಮಗಾರಿ ಸ್ಥಗಿತಗೊಳಿಸಿ ಹೊರಡಿ ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಕಾಮಗಾರಿ ನಿಲ್ಲಿಸಿ ಸೋಮವಾರ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ ನಂತರ ಕಾಮಗಾರಿ ಶುರು ಮಾಡಲಾಗುವುದು. ಅದುವರೆಗೂ ಯಥಾ ಸ್ಥಿತಿ ಕಾಪಾಡುವಂತೆ ಸೂಚಿಸಿ ಅಲ್ಲಿಂದ ಹೊರಟಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿಪ್ರಕಾಶ್, ಗ್ರಾಮಸ್ಥರಾದ ಆನಂದಮೂರ್ತಿ, ಸಂಪತ್, ಮಧು, ರಾಜಪಟೇಲಪ್ಪ, ಕಾಮೇಶ್, ಉಮೇಶ್, ಮುನಿರಾಜು, ಪಾಪಣ್ಣ, ಗಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತಸಂಘದ ಸದಸ್ಯರಿಂದ ಮನವಿ
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಸಂಘದ ಕಛೇರಿಗೆ ಸರ್ಕಾರದ ವಿವಿಧ ಇಲಾಖೆಯಿಂದ ರೈತರಿಗೆ ಅಭ್ಯವಿರುವ ಸರ್ಕಾರಿ ಸವಲತ್ತುಗಳ ಬಗ್ಗೆ ಆಗಿಂದ್ಹಾಗ್ಗೆ ಮಾಹಿತಿಯನ್ನು ಪತ್ರ ಮುಖೇನ ನೀಡಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಶುಕ್ರವಾರ ಮನವಿಪತ್ರವನ್ನು ರೈತರು ನೀಡಿದರು.
ನಗರದ ರೇಷ್ಮೆ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಭೂ ಅಭಿವೃದ್ಧಿ ಬ್ಯಾಂಕ್, ರೇಷ್ಮೆ ಗೂಡಿನ ಮಾರುಕಟ್ಟೆ, ತಾಲ್ಲೂಕು ಪಂಚಾಯತಿ ಮತ್ತು ತಹಶೀಲ್ದಾರ್ ಕಛೇರಿಯಲ್ಲಿ ಮನವಿಯನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಸಂಘದ ಕಛೇರಿಗೆ ಸರ್ಕಾರದ ಸವಲತ್ತುಗಳು ತಿಳಿಸಿದಲ್ಲಿ ಸಂಘದ ಮೂಲಕ ರೈತರು ಅದರ ಬಗ್ಗೆ ಮಾಹಿತಿ ಪಡೆದು ಸರ್ಕಾರಿ ಸವಲತ್ತುಗಳ ಉಪಯೋಗ ಮಾಡಿಕೊಳ್ಳುತ್ತಾರೆ. ಅದರ ಮುಖೇನ ಆರ್ಥಿಕವಾಗಿ ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ವೈ.ರಾಮಕೃಷ್ಣಪ್ಪ, ಪಿ.ವಿ.ದೇವರಾಜ್, ವೇಣುಗೋಪಾಲ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಜೆಪಿ ಪಕ್ಷದಿಂದ ದಲಿತರ ಮನೆಯಲ್ಲಿ ಊಟ
ಸಮಾಜದಲ್ಲಿ ಸಾಮರಸ್ಯ ಸಹಭಾಳ್ವೆಯನ್ನು ವ್ಯಕ್ತಿಗತವಾಗಿ ಪಾಲಿಸುವ ಮೂಲಕ ಇತರರಿಗೆ ಪ್ರೇರಣೆ ನೀಡೋಣ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಸಿದ್ಧಾರ್ಥನಗರದ ತಾಲ್ಲೂಕು ಎಸ್ಸಿ ಮೋರ್ಚಾ ಅಧ್ಯಕ್ಷೆ ಮುನಿರತ್ನಮ್ಮ ಅವರ ಮನೆಯಲ್ಲಿ ಗುರುವಾರ ರಾತ್ರಿ ಬಿಜೆಪಿ ಪಕ್ಷದ ವತಿಯಿಂದ ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯ ಪ್ರಯುಕ್ತ ನಡೆಸಿದ ‘ಸಾಮಾಜಿಕ ಸಾಮರಸ್ಯ’ ಎಂಬ ಸಹಬೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಶೋಷಿತ ವರ್ಗಗಳ ಪರವಾಗಿ ಬಸವಣ್ಣನವರು ನಿಂತು, ಯಾವುದೇ ಜಾತಿ, ಧರ್ಮ ಎಂಬುದಿಲ್ಲ, ಎಲ್ಲರೂ ಸಮಾನರು ಎಂದು ಸಾರಿದ್ದರು. ಬಸವಣ್ಣ ಬುದ್ಧ ಅಂಬೇಡ್ಕರ್ ಅವರ ಜೀವನಾದರ್ಶಗಳು ನಮಗೆ ಪ್ರೇರಣೆಯಾಗಬೇಕು. ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯನ್ನು ಅವರ ಆದರ್ಶ ಪಾಲಿಸುವುದರೊಂದಿಗೆ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ತಾಲ್ಲೂಕು ಘಟಕದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಸಿದ್ದಾರ್ಥನಗರದಲ್ಲಿಯೇ ಉಚಿತ ಆರೋಗ್ಯ ಶಿಬಿರವನ್ನು ಮುಂದಿನ ದಿನಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಲೋಕೇಶ್ಗೌಡ, ಪುರುಷೋತ್ತಮ್, ಮಂಜುಳಮ್ಮ, ಎಸ್.ರಾಘವೇಂದ್ರ, ದಾಮೋದರ್, ಅಶ್ವಕ್ ಅಹ್ಮದ್, ಸುಜಾತಮ್ಮ, ಸಾವಿತ್ರಮ್ಮ, ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಧಿಸಬೇಕು
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಧಿಸಬೇಕು. ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ, ಕೋಚಿಮುಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಹಂಡಿಗನಾಳ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ನಡೆದ ಸರ್ಕಾರಿ ಸೌಲಭ್ಯಗಳ ಅರಿವು ಶಿಬಿರ ಹಾಗೂ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳಿಂದ ಗ್ರಾಮಸ್ಥರಿಗೆ ಮುಖ್ಯವಾಗಿ ಮಹಿಳೆಯರಿಗೆ ಸಿಗುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳನ್ನು ವಿವರಿಸಲೆಂದು ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದು ಸ್ವಾವಲಂಬಿ ಜೀವನ ನಡೆಸಿದಾಗ ಮಾತ್ರ ಸಂಸಾರದಲ್ಲಿ ಸುಖ ಜೀವನ ನಡೆಸಲು ಸಾಧ್ಯ. ಅದು ಗ್ರಾಮದ ಅಭಿವೃದ್ಧಿ ಕೂಡ. ಸ್ತ್ರೀಶಕ್ತಿ ಸಂಘಗಳ ಬಗ್ಗೆ ಬ್ಯಾಂಕ್ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲೂ ಉತ್ತಮ ಅಭಿಪ್ರಾಯವಿದೆ. ಶಿಸ್ತು ಸಂಸ್ಕಾರ ನೈತಿಕತೆಯನ್ನು ಹೊಂದಿರುವುದು ಮಹಿಳಾ ಸಂಘಗಳ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಕೆ.ರಾ.ಶಿ ಮಂಡಳಿ ಎಚ್.ಎಂ.ಶಿವಬೋರಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಮಾಂಜಿ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ವಿವರಿಸಿದರು.
ಜಾನಪದ ಸಂಶೋಧಕ ಡಾ.ಕೆ. ರವಿಕುಮಾರ್ ಸ್ತ್ರೀಯರ ಸಬಲೀಕರಣ ಕುರಿತ ಗೀತೆಗಳನ್ನು ಹಾಡಿದರು. ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಭಜನೆ ಗೀತೆಗಳನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವನ್ನು ತಿಳಿಸುವ ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಅಪ್ಪೇಗೌಡನಹಳ್ಳಿ ಮಹಿಳೆಯರು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಮಾಂಜಿ ಅವರಿಗೆ ಮನವಿಯನ್ನು ಸಲ್ಲಿಸಿ ಈ ಹಿಂದೆ ಗ್ರಾಮದ ವಿದ್ಯಾರ್ಥಿಗಳು, ಮಹಿಳಾ ಸಂಘಗಳು ಮೇಲೂರಿನ ಕೆನರಾಬ್ಯಾಂಕಿನಲ್ಲಿ ವಹಿವಾಟನ್ನು ನಡೆಸುತ್ತಿದ್ದು, ಅದನ್ನು ಇನ್ನು ಮುಂದೆ ಶಿಡ್ಲಘಟ್ಟದ ಎಸ್.ಬಿ.ಎಂ ಬ್ಯಾಂಕಿನಲ್ಲಿ ನಡೆಸಬೇಕೆನ್ನುತ್ತಿದ್ದಾರೆ. ಈ ತೊಂದರೆಯನ್ನು ಸರಿಪಡಿಸಬೇಕು ಎಂದು ಕೋರಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ನರಸಿಂಹಯ್ಯ, ಸಿ.ಬಿ.ಆರ್.ಎಸ್.ಇ.ಟಿ.ಐ ನಿರ್ದೇಶಕ ಡಿ.ನಾರಾಯಣಸ್ವಾಮಿ, ಕೆ.ಎಂ.ಎಫ್ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ಹಂಡಿಗನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಉಮಾ ಚನ್ನೇಗೌಡ, ನೇತ್ರಾವತಿ ಸಂಪತ್, ಎಂ.ಪಿ.ಸಿ.ಎಸ್ ಅಧರ್ಯಕ್ಷ ರವಿಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಮುಖ್ಯ ಶಿಕ್ಷಕಿ ಬಿ.ಎಂ.ವೆಂಕಟರತ್ನಮ್ಮ, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಎನ್.ಗೋವಿಂದರಾಜು, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಮ್ಮ, ನಳಿನಾಕ್ಷಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಲಿಯುವ ಕೈಗೆ ಓದುವ ಪುಸ್ತಕ
ಸಾಹಿತ್ಯವು ಜೀವನಾನುಭವದ ಕಲಾತ್ಮಕ ಅಭಿವ್ಯಕ್ತಿಯಾಗಿದೆ. ಸಾಹಿತ್ಯದಿಂದ ಸಮಾಜದ ಬದಲಾವಣೆ ಸಾಧ್ಯವಿದೆ. ಕನ್ನಡ ಭಾಷೆಯ ಪದಬಳಕೆಯು ಹೆಚ್ಚಾದಷ್ಟೂ ಭಾಷೆ ಬೆಳೆಯುತ್ತದೆ ಉಳಿಯುತ್ತದೆ ಎಂದು ಕನ್ನಡ ಉಪನ್ಯಾಸಕ ಎನ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೇಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ವಿವಿಧ ಜಾತಿ ಮತ್ತು ಧರ್ಮ ಆಧಾರಿತ ಸಮಾಜವಿರುವ ನಮ್ಮ ರಾಜ್ಯದಲ್ಲಿ ಜನರನ್ನು ಒಗ್ಗೂಡಿಸಿರುವುದು ನಮ್ಮ ಕನ್ನಡ ಭಾಷೆ. ಮಾತೃಭಾಷೆಯಿಂದ ಮಾತ್ರ ನೋವು, ನಲಿವು, ಕಷ್ಟ, ಸುಖ ಮುಂತಾದ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯ. ಇಪ್ಪತ್ತು ಶತಮಾನಗಳ ಹಿಂದಿನ ಸಂಪತ್ಭರಿತ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಹೇಳಿದರು.
ಭಾಷೆಯನ್ನು ಗೌರವಿಸಬೇಕು, ಪ್ರೀತಿಸಬೇಕು. ಬದುಕಿನ ಭಾಷೆಯಾದ ಕನ್ನಡವನ್ನು ಪ್ರೀತಿಸುತ್ತಲೇ ವ್ಯವಹಾರಕ್ಕಾಗಿ ಇತರ ಭಾಷೆಗಳನ್ನೂ ಕಲಿಯಬಹುದು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮತ್ತು ತಮ್ಮ ಭಾವನೆಗಳನ್ನು, ಅನುಭವವನ್ನು ಬರೆದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ತಾಲ್ಲೂಕಿನ 101 ಶಾಲೆಗಳಲ್ಲಿ ‘ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಆವರಣದಲ್ಲಿ 20 ಸಸಿಗಳನ್ನು ನೆಡುವ ಮೂಲಕ ಮಾಡಲಾಯಿತು. ‘ಕನ್ನಡ ಭಾಷೆ ಮತ್ತು ವ್ಯಕ್ತಿ ಪರಿಚಯ’ ವಿಷಯದ ಬಗ್ಗೆ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಲ್ಪ, ಎಂ.ಭಾವನಾ ಮತ್ತು ಕೆ.ಎಸ್.ಭಾವನಾ ಅವರಿಗೆ ಹಾಗೂ ‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಕಲ್ಯಾಣ್, ಶಿಲ್ಪ ಮತ್ತು ಸಹನಾ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಕ.ಸಾ.ಪ ಕಾರ್ಯಕ್ರಮಗಳಿಗೆ ಪ್ರಮಾಣ ಪತ್ರಗಳು ಮತ್ತು ಪುಸ್ತಕ ದಾನಿ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮತ್ತು ಸಂಪನ್ಮೂಲ ವ್ಯಕ್ತಿ ಎನ್.ಚಂದ್ರಶೇಖರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಮುಖ್ಯ ಶಿಕ್ಷಕಿ ಮಂಗಳಗೌರಮ್ಮ, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಉಪಾಧ್ಯಕ್ಷ ನಂದೀಶ್, ಸಂಚಾಲಕರಾದ ಸುಧೀರ್, ಸುದರ್ಶನ್, ಎಚ್.ಎಂ.ರಾಘವೇಂದ್ರ, ಎಸ್.ಡಿ.ಎಂ.ಸಿ ಸದಸ್ಯರಾದ ಮಂಜುಳ, ಬಿ.ಎನ್.ಗಂಗಾಧರಪ್ಪ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಧರ್ಮೇಂದ್ರ, ವಿ.ರಾಮಾಂಜನೇಯ, ಪ್ರಸಾದ್, ಸಹಶಿಕ್ಷಕರಾದ ಶಿವಕುಮಾರ್, ಪೊನ್ನಮ್ಮ, ವಿದ್ಯಾ, ಸವಿತಾ, ಸುಜಾತ, ಗಾಯತ್ರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ
ವರ್ಷಗಳು ಕಳೆದರೂ ಕಾಮಗಾರಿ ಪ್ರಾರಂಭಿಸದ ಹಾಗೂ ಶೇ. ೧೦–-೨೦ ರಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ಕರೆಯುವ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿ ನೀಡಬಾರದು ಮತ್ತು ಅಂತಹವರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಸುಮಾರು ನಾಲ್ಕು ಕಾಮಗಾರಿಗಳಿಗೆ ಟೆಂಡರ್ ಕಾರ್ಯ ಮುಗಿದಿದ್ದು ಈವರೆಗೂ ಗುತ್ತಿಗೆದಾರ ಕೆಲಸ ಶುರುಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಜಮೀರ್ ಮಾಹಿತಿ ನೀಡಿದಾಗ ಇಂತಹವರಿಗೆಲ್ಲಾ ಕಾಮಗಾರಿಗಳನ್ನು ಯಾಕೆ ನೀಡುತ್ತೀರಿ. ಕೂಡಲೇ ಕಾಮಗಾರಿಯ ಟೆಂಡರ್ನ್ನು ರದ್ದುಗೊಳಿಸಿ ಮರುಟೆಂಡರ್ ಮಾಡುವ ಮೂಲಕ ಕಾಮಗಾರಿ ಪ್ರಾರಂಭ ಮಾಡಿ ಮತ್ತು ಗುತ್ತಿಗೆದಾರನನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಎಂದರು.
ತಾಲ್ಲೂಕಿನಾಧ್ಯಂತ ಇರುವ ೩೩೯ ಅಂಗನವಾಡಿ ಕೇಂದ್ರಗಳ ಪೈಕಿ ಸುಮಾರು ೨೦೦ ಕ್ಕೂ ಹೆಚ್ಚು ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅನುದಾನಗಳಿಗಾಗಿಯೇ ಕಾದು ಕುಳಿತರೆ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಷ್ಟವಾಗುತ್ತದೆ. ಹಾಗಾಗಿ ತಾಲ್ಲೂಕು ಪಂಚಾಯತಿಯ ನರೇಗಾ ಯೋಜನೆಯಡಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲೂ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿಕೊಳ್ಳುವಂತೆ ಸೂಚಿಸಿದರು.
ಅಂಗನವಾಡಿ ಮಕ್ಕಳಿಗೆ ಉತ್ತಮ ಆಹಾರ, ಮಲಗಲು ಜಮಖಾನಾ ಅಥವ ಕಂಬಳಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರ ಅನುದಾನಗಳಲ್ಲಿ ಕಾಮಗಾರಿ ಮಾಡಿ ಕಾಮಗಾರಿ ಪೂರ್ಣಗೊಂಡ ಮೇಲೆ ಅಲ್ಲೊಂದು ನಾಮಫಲಕ ಅಳಿವಡಿಸದೇ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತ ಪಡಿಸಿದರು. ಲಕ್ಷಾಂತರ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿ ಒಂದೆರಡು ಸಾವಿರ ಖರ್ಚು ಮಾಡಿ ಬೋರ್ಡ್ ಅಳವಡಿಸಲಾಗುವುದಿಲ್ಲ. ಹಾಗಾದರೇ ನೀವು ಅಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಾ ಎಂದರು.
ಗುತ್ತಿಗೆದಾರರು ಕಡಿಮೆಗೆ ಟೆಂಡರ್ ಹಾಕುವುದರಿಂದ ಕಾಮಗಾರಿಗಳ ಗುಣಮಟ್ಟ ಯಾವ ಮಾತ್ರ ಇರುತ್ತದೆ. ಕಾಮಗಾರಿ ನಡೆಯುವ ವೇಳೆ ಆ ಭಾಗದ ತಾಲ್ಲೂಕು ಪಂಚಾಯತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರ ಗಮನಕ್ಕೆ ತರಬೇಕು ಮತ್ತು ಕಾಮಗಾರಿ ವೀಕ್ಷಣೆಗೆ ಕರೆದುಕೊಂಡು ಹೋಗಬೇಕು ಎಂದರು.
ತಾಲ್ಲೂಕಿನಾದ್ಯಂತ ಇರುವ ಆರೋಗ್ಯ ಕೇಂದ್ರಗಳಲ್ಲಿ ಮಹಿಳಾ ವೈದ್ಯರ ಕೊರತೆಯಿದ್ದು, ಇರುವ ವೈದ್ಯರನ್ನೇ ವಾರಕ್ಕೊಮ್ಮೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಗೆ ಕೂಡಲೇ ಕೊಳವೆಬಾವಿಯೊಂದನ್ನು ಕೊರೆಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚಿಸಿದ ಅವರು ಈ ಬಗ್ಗೆ ಶಾಸಕರೊಂದಿಗೆ ನಾನು ಮಾತನಾಡುತ್ತೇನೆ. ಆಸ್ಪತ್ರೆ ಆವರಣದಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿಕೊಡಿ ಎಂದರು.
ತಾಲ್ಲೂಕಿನಾದ್ಯಂತ ಇರುವ ನೀಲಗಿರಿ ಮರಗಳು ಹಾಗೂ ಕೆರೆಗಳಲ್ಲಿರುವ ಜಾಲಿ ಮರಗಳು ಕೂಡಲೇ ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ಬೇರೆ ಬೇರೆ ಸಸಿಗಳನ್ನು ನೆಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಪಿ.ನಿರ್ಮಲಾಮುನಿರಾಜು, ಸದಸ್ಯರಾದ ಸತೀಶ್, ತನುಜಾರಘು, ಎ.ಎಂ.ಜಯರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ನರಸಿಂಹಯ್ಯ, ಇಓ ವೆಂಕಟೇಶ್, ತಹಸೀಲ್ದಾರ್ ಕೆ.ಎಂ.ಮನೋರಮಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ.ಸಾ.ಪದಿಂದ ಶಾಲೆಗೊಂದು ಕನ್ನಡ ಕಾರ್ಯಕ್ರಮ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಎಂಬ ಕಾರ್ಯಕ್ರಮವನ್ನು ತಾಲ್ಲೂಕಿನ ಮೇಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವನ್ನು ನೀಡಿದ್ದು, ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು.
ಸಂಪನ್ಮೂಲ ವ್ಯಕ್ತಿಯೊಬ್ಬರು ಭಾಷಣಕಾರರಾಗಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವಹಿಸುವರು ಎಂದು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿದ್ದಾರೆ.
ಇರಗಪ್ಪನಹಳ್ಳಿ ಶಾಲೆಯಲ್ಲಿ ‘ವಿದ್ಯಾರ್ಥಿಗೊಂದು ಸಸಿ’
ಅರಣ್ಯ ನಾಶ, ಪರಿಸರ ಮಾಲಿನ್ಯದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ. ಕಾಲಕಾಲಕ್ಕೆ ಮಳೆ–ಬೆಳೆಯಾಗದೆ, ಹೆಚ್ಚುತ್ತಿರುವ ಸೂರ್ಯನ ತಾಪ ಹಾಗೂ ಬಿಸಿ ಗಾಳಿ. ನೀರಿಲ್ಲದೆ ಪರಿತಪಿಸುವ ಪ್ರಾಣಿ ಪಕ್ಷಿಗಳು. ಈ ಪರಿಸ್ಥಿತಿಯನ್ನು ಸರಿಪಡಿಸಲು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸಿ ಎಂದು ಉಪವಲಯ ಅರಣ್ಯಾಧಿಕಾರಿ ರಾಮಾಂಜನೇಯುಲು ತಿಳಿಸಿದರು.
ತಾಲ್ಲೂಕಿನ ಇರಗಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅರಣ್ಯ ಇಲಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ‘ವಿದ್ಯಾರ್ಥಿಗೊಂದು ಸಸಿ’ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ತೀರದ ಆಸೆಗಳ ಫಲವೇ ಈಗಿನ ಪರಿಸ್ಥಿತಿಗೆ ಕಾರಣ. ಆದರೂ ಪರಿಸ್ಥಿತಿ ಇನ್ನೂ ಕೈಮೀರಿಲ್ಲ. ಮನುಷ್ಯ ಈಗ ಎಚ್ಚೆತ್ತುಕೊಂಡರೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಡಬಹುದು. ಅದಕ್ಕಾಗಿ ಈಗಿನಿಂದಲೇ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಡುವ ಅಗತ್ಯ ಇದೆ. ‘ಒಬ್ಬ ವ್ಯಕ್ತಿಗೆ ಒಂದು ಮರ’ ಆಂದೋಲನಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೈಜೋಡಿಸಬೇಕು ಎಂದರು.
ಗಸಗಸೆ ಗಿಡಗಳು ತುಂಬಾ ಬೇಗ ಹಾಗೂ ಚಿಕ್ಕದಾಗಿ ಬೆಳೆಯುತ್ತವೆ. ಇದರಿಂದ ನೆರಳು, ಹಕ್ಕಿ ಮತ್ತು ಮನುಷ್ಯರಿಗೆ ಸಿಹಿಯಾದ ಹಣ್ಣು ಸಹ ದೊರೆಯುತ್ತದೆ. ಅರಳಿ ನರದಿಂದ ಹೆಚ್ಚು ಆಮ್ಲಜನಕ ಉತ್ಪತ್ತಿಯಾಗುತ್ತದೆ ಎಂದು ಮರಗಳ ಕುರಿತು ಮಾಹಿತಿ ನೀಡಿದರು.
ಮಹಾಗನಿ, ಅರಳಿ, ಸಂಪಿಗೆ, ಜಂಬುನೇರಳೆ, ಗಸಗಸೆ, ನುಗ್ಗೆಕಾಯಿ ಮುಂತಾದ 80 ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಟ್ಟು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಗಿಡದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರಮೇಶ್, ಕೃಷಿ ಮೇಲ್ವಿಚಾರಕ ಜನಾರ್ಧನ್, ಮುಖ್ಯ ಶಿಕ್ಷಕ ಎಸ್.ರವಿ, ಸಹಶಿಕ್ಷಕರಾದ ವೈ.ವನಿತಾ, ವಿಜಯಮಣಿ, ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯರಾದ ಗಾಯತ್ರಿ ನರಸಿಂಹಮೂರ್ತಿ, ಮುನಿರತ್ನಮ್ಮ, ಗ್ರಾಮದ ಮುಖಂಡ ಅಶ್ವತ್ಥರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ಚಾಂದ್ಪಾಷ, ಸದಸ್ಯರಾದ ನವಾಬ್, ಸುಧಾಕರ್, ಇಮಾಮ್ಸಾಬಿ, ಬಾಬಾಜಾನ್, ವಿಷ್ಣುಕುಮಾರ್, ಅನಿಲ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚೀಮನಹಳ್ಳಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
‘ವರ್ಗಾವಣೆ ಮಾಡಿರುವ ನಮ್ಮ ಶಾಲೆಯ ಶಿಕ್ಷಕಿ ಎಂ.ಎಸ್.ಪ್ರಭಾವತಿಯವರನ್ನು ಉಳಿಸಿಕೊಡಿ. ಇಲ್ಲದಿದ್ದಲ್ಲಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ಸೇರಿಸುತ್ತೇವೆ’ ಎಂದು ತಾಲ್ಲೂಕಿನ ಚೀಮನಹಳ್ಳಿಯ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಮುತ್ತಿಗೆ ಹಾಕಿದ ತಾಲ್ಲೂಕಿನ ಚೀಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕಿ ಎಂ.ಎಸ್.ಪ್ರಭಾವತಿಯವರ ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಘೋಷಣೆಗಳನ್ನು ಕೂಗಿದರು.
ಸುಮಾರು 5 ವರ್ಷಗಳಿಂದ ಶಿಕ್ಷಕಿ ಎಂ.ಎಸ್.ಪ್ರಭಾವತಿಯವರು ನಮ್ಮೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಹೆಚ್ಚುವರಿ ಶಿಕ್ಷಕಿಯೆಂದು ಗುರುತಿಸಿ ಬೇರೆಡೆಗೆ ವರ್ಗಾವಣೆ ಮಾಡುತ್ತಿದ್ದಾರೆ. ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಎಂ.ಎಸ್.ಪ್ರಭಾವತಿಯವರು ಉತ್ತಮ ಪಾಠ ಪ್ರವಚನ ಹಾಗೂ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಎಲ್ಲರ ಹೃದಯವನ್ನು ಗೆದ್ದು ಶಾಲೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಸಾರ್ವಜನಿಕರಿಂದ ಶಾಲೆಗೆ ಕೊಡುಗೆಗಳನ್ನು ಸಂಗ್ರಹಿಸಿ, ಪುಸ್ತಕ, ಸಮವಸ್ತ್ರಗಳನ್ನು ಮುಂತಾದವುಗಳನ್ನು ಕೊಡಿಸುತ್ತಿದ್ದಾರೆ. ಶಾಲೆಯ ಪ್ರಗತಿಯ ಹಿತದೃಷ್ಟಿಯಿಂದ ಅವರನ್ನು ವರ್ಗಾವಣೆ ಮಾಡಬಾರದು. ಒಂದು ವೇಳೆ ವರ್ಗಾವಣೆ ಮಾಡಿದ್ದಲ್ಲಿ ನಾವೆಲ್ಲಾ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಪೋಷಕರು ತಿಳಿಸಿದರು.
ಚೀಮನಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಮನವಿಯನ್ನು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಗ್ರಾಮಸ್ಥರು ಹಾಗೂ ಮಕ್ಕಳ ಮನವಿಯನ್ನು ಸ್ವೀಕರಿಸಿದ್ದು, ಅವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ
ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಸೋಮವಾರ ನಗರದ ಅರಳೆಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ಯಾಂ ಪ್ರಕಾಶ್ ಮುಖರ್ಜಿ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
೧೯೫೨ ರಲ್ಲಿ ಪ್ರಥಮವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಭಾರತೀಯ ಜನಸಂಘ ಪಕ್ಷವನ್ನು ಹುಟ್ಟುಹಾಕಿದ ಶ್ಯಾಂ ಪ್ರಸಾದ್ ಮುಖರ್ಜಿಯವರ ಅಧ್ಯಕ್ಷತೆಯಲ್ಲಿ ೧೯೮೦ ರ ಏಪ್ರಿಲ್ ೬ ರಂದು ಅಟಲ್ಬಿಹಾರಿ ವಾಜಪೇಯಿ ಹಾಗು ಲಾಲ್ ಕೃಷ್ಣ ಅಡ್ವಾಣಿಯವರನ್ನೊಳಗೊಂಡ ಬಿಜೆಪಿ ಪಕ್ಷ ಉದಯವಾದರೂ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ೨೫ ವರ್ಷಗಳ ಕಾಲ ಸಮಯ ಬೇಕಾಯಿತು ಎಂದರು.
ರಾಷ್ಟ್ರದ ಅಭಿವೃದ್ಧಿಯಾಗಬೇಕಾದರೆ ಅದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ರಾಷ್ಟ್ರದಲ್ಲಿ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಜನವಿರೋಧಿ ನೀತಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡುವುದರೊಂದಿಗೆ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರಗೌಡ, ಪ್ರಧಾನ ಕಾರ್ಯದರ್ಶಿಗಳಾದ ಮುನಿರಾಜು, ತರಬಳ್ಳಿ ಬಾಸ್ಕರ್ರೆಡ್ಡಿ, ಮುಖಂಡರಾದ ದೊಣ್ಣಹಳ್ಳಿರಾಮಣ್ಣ, ಸುರೇಶ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಸುಜಾತಮ್ಮ, ಮಂಜುಳಮ್ಮ ಮತ್ತಿತರರು ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೆರೀಸಬೇಕೆಂದು ಒತ್ತಾಯಿಸಿ ಸಿ.ಐ.ಟಿ.ಯು ವತಿಯಿಂದ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹಲವು ವರ್ಷಗಳಿಂದಲೂ ಅಂಗನವಾಡಿ ಕಾರ್ಯರ್ತೆಯರ ಬೇಡಿಕೆಗಳ ಈಡೆರಿಕೆ ಒತ್ತಾಯಿಸುತ್ತಿದ್ದರೂ ಸಹ ಸರ್ಕಾರಗಳು ಸಕಾರತ್ಮಕವಾಗಿ ಸ್ವಂದಿಸುತ್ತಿಲ್ಲ. ಅಂಗನವಾಡಿ ಕಾರ್ಯಕರ್ತರ ಪ್ರಮುಖ ಬೇಡಿಕೆಗಳಾದ, ಅಂಗನವಾಡಿ ಕೇಂದ್ರಗಳನ್ನು ಶಿಶು ಪಾಲನ ಕೇಂದ್ರಗಳನ್ನಾಗಿ ಪರಿರ್ವತಿಸಬೇಕು. ಐಸಿಡಿಎಸ್ನ್ನು ಪ್ರತ್ಯೇಕ ನಿರ್ದೇಶನಾಲಯವನ್ನಾಗಿ ಮಾಡಬೇಕು. ಕನಿಷ್ಠ ಮಾಸಿಕ ವೇತನ, ಸರ್ಕಾರಿ ಪಿಂಚಣಿ, ಪರಿಹಾರ ಮೊತ್ತವನ್ನು ಪರಿಷ್ಕರಿಸಬೇಕು, ದಿನಭತ್ಯೆ ಹೆಚ್ಚಳ ಮೊದಲಾದ ಬೇಡಿಕೆಗಳನ್ನು ಈಡೆರಿಸಬೇಕೆಂದು ಒತ್ತಾಯಿಸಿದರು.
ಬೇರೆ ರಾಜ್ಯಗಳಲ್ಲಿ ಈ ಬೇಡಿಕೆಗಳನ್ನು ಈಡೇರಿಸಿದ್ದಾರೆ, ಆದರೆ ನಮ್ಮ ರಾಜ್ಯದಲ್ಲಿ ಮಿಷನ್ ಮೋಡನ್ನು ಸರ್ಕಾರ ಜಾರಿ ಮಾಡಲು ಹೊರಟಿದೆ. ಈ ಕ್ರಮವನ್ನು ಖಂಡಿಸಿ ಅಂಗನವಾಡಿ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಸಿ.ಐ.ಟಿ.ಯು ಕಾರ್ಯಕರ್ತೆಯರು ನಗರದ ಪ್ರಮಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿದರು. ಕೇಂದ್ರ ಸಚಿವೆ ಮೇನಕಾಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೆರಿಸಲು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯರ್ತೆಯರು, ಬಿಸಿಯೂಟ ನೌಕರರು, ಅಕ್ಷರ ದಾಸೋಹ ಕಾರ್ಯರ್ತೆಯರು ಪಾಲ್ಗೊಂಡಿದ್ದರು.
ಬಿಜೆಪಿ ತಾಲ್ಲೂಕು ಘಟಕದಿಂದ ಪ್ರತಿಭಟನೆ
ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂ.ಕೆ.ಗಣಪತಿಯವರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಯಲ್ಲಿ ನೈತಿಕ ಹೊಣೆ ಹೊತ್ತು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಡಿವೈಎಸ್ಪಿ ಎಂ.ಕೆ.ಗಣಪತಿಯವರ ಆತ್ಮಹತ್ಯೆಯನ್ನು ಖಂಡಿಸಿ ಬಿಜೆಪಿ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕೂಡ ಸರ್ಕಾರ ತಪ್ಪಿದಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಇದೀಗ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು,ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಶೀಘ್ರವೇ ರಾಜೀನಾಮೆ ನೀಡಬೇಕು ಹಾಗೂ ಗಣಪತಿಯವರು ಆತ್ಮಹತ್ಯೆಗೆ ಮೊದಲು ಹೆಸರಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಕಾನೂನು ಬಾಹಿರ ಕೆಲಸದ ಒತ್ತಡವನ್ನು ತಂದಿದ್ದರಿಂದ, ಇಬ್ಬರು ಹಿರಿಯ ಐ.ಪಿ.ಎಸ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ರಾಜ್ಯದ ಜನತೆಗೆ ಸತ್ಯ ತಿಳಿಯಬೇಕು. ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಗರದ ಪ್ರಮುಖ ಬೀದಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು. ಗ್ರೇಡ್2 ತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ರಾಜ್ಯಪಾಲರಿಗೆ ತಲುಪಿಸಲು ಮನವಿಯನ್ನು ಸಲ್ಲಿಸಿದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ರಾಘವೇಂದ್ರ, ತರಬಳ್ಳಿ ಭಾಸ್ಕರರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಪುರುಷೋತ್ತಮ್, ಕುಟ್ಟಿ ಮುನಿರಾಜು, ಸುರೇಶ್, ಮುನಿರಾಜು, ಕೆಂಪರೆಡ್ಡಿ, ಸುಜಾತಮ್ಮ, ಮಂಜುಳಮ್ಮ, ಮುನಿರತ್ನಮ್ಮ, ರಮೇಶ್ಬಾಯಿರಿ, ಮಧುಸೂದನ್, ರಾಮಕೃಷ್ಣಪ್ಪ, ನಾಗರಾಜ್, ಕೃಷ್ಣಾರೆಡ್ಡಿ, ನರಸಿಂಹಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜನತೆಯಲ್ಲಿ ಅರಿವು ಮೂಡಿಸುವ ಅಗತ್ಯವಿದೆ
ಜನಸಂಖ್ಯೆ ಹೆಚ್ಚಳದ ದುಶ್ಪರಿಣಾಮಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲರಿಗೂ ಶಿಕ್ಷಣ ದೊರೆತಾಗ ಮಾತ್ರ ಜನಸಂಖ್ಯೆ ಹೆಚ್ಚಳದ ದುಶ್ಪರಿಣಾಮಗಳ ಕುರಿತು ಅರಿವು ಮೂಡಲು ಸಾಧ್ಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಳದಿಂದ ದೇಶದ ಸಾಮಾಜಿಕ, ಆರ್ಥಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆಗಳು, ಬಾಲ್ಯ ವಿವಾಹ ಹಾಗೂ ಕಡಿಮೆ ಸಾಕ್ಷರತೆಯಿಂದಾಗಿ ಜನಸಂಖ್ಯೆ ಹೆಚ್ಚುತ್ತಿದ್ದು ಜನತೆ ತಮ್ಮ ವೈಯಕ್ತಿಕವಾದ ಹಾಗೂ ದೇಶದ ಅಭಿವೃದ್ಧಿಗಾಗಿ ಜನಸಂಖ್ಯೆ ಸ್ಫೋಟದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಸಮಾಜದಲ್ಲಿ ಹದಿಹರೆಯದ ಗರ್ಭದಾರಣೆ ವಿಷಯದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿದಾಗ ಜನಸಂಖ್ಯೆ ಸ್ಫೋಟವನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಪುರುಷ ಮತ್ತು ಮಹಿಳೆಯ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಪ್ರಕೃತಿದತ್ತವಾದ ಪೌಷ್ಟಿಕಾಂಶಗಳು ತಾಯಿ ಮತ್ತು ಮಕ್ಕಳಿಗೆ ಇಂದು ಬೇರೆ ಬೇರೆ ಕಾರಣಗಳಿಂದ ಸಿಗದೆ ಇರುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣುವಂತಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ಸಾಮಾನ್ಯವಾಗಿ ಜನಸಂಖ್ಯೆ ಸ್ಪೇಟದಿಂದ ರೋಗಗಳು ಉಲ್ಬಣಗೊಳ್ಳುವ ಜೊತೆಗೆ ಪ್ರಗತಿಗೆ ಮಾರಕವಾಗಲಿದೆ. ಜನಸಂಖ್ಯೆ ಸ್ಪೋಟಕ್ಕೆ ಬಾಲ್ಯವಿವಾಹ-, ಮೂಢನಂಬಿಕೆ ಪ್ರಮುಖ ಕಾರಣವಾಗಿದ್ದು ಸಾಮಾಜಿಕ ಪಿಡುಗು ನಿವಾರಣೆಗೆ ಸಮಾಜ ಧೃಡಸಂಕಲ್ಪ ಮಾಡಬೇಕಾಗಿದೆ. ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿ ಜನಸಂಖ್ಯೆ ನಿಯಂತ್ರಣ ಮಾಡಲು ಪ್ರೇರಿಪಿಸಬೇಕಾಗಿದೆ ಎಂದರು.
ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮಹಿಳೆಯರು ಆಸಕ್ತಿ ತೋರಿಸುತ್ತಾರೆ. ಆದರೆ ಪುರುಷರು ಮಾತ್ರ ಜನಸಂಖ್ಯೆ ನಿಯಂತ್ರಣಕ್ಕೆ ಮಾತ್ರ ಸಹಕಾರ ನೀಡುತ್ತಿಲ್ಲವೆಂಬ ಅಂಶ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ಧೃಡವಾಗಿದೆ. ಈ ಬಗ್ಗೆ ಜನಜಾಗೃತಿ ಮೂಡಬೇಕಿದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ರಘು, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ, ಆರೋಗ್ಯ ಇಲಾಖೆಯ ಸಲಹಾ ಸಮಿತಿ ಸದಸ್ಯ ಶ್ರೀನಿವಾಸ್, ಸುನಂದಮ್ಮ, ಜಬೀವುಲ್ಲಾ, ದಾದಾಪೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜಾನುವಾರು ವಿಮೆಯ ಸುತ್ತಮುತ್ತ……
ವಾಸ್ತವ ಇದು. ಇಂದು ಜಾನುವಾರು ವಿಮೆ ಎನ್ನುವುದು ಸಾಲ ಪಡೆಯುವ ಮುನ್ನ ರೈತ ಕೈಗೊಳ್ಳಲೇಬೇಕಾದ ಒಂದು ಕಾನೂನು ಕ್ರಮ. ಒಂದರ್ಥದಲ್ಲಿ, ಸಾಲ ಕೊಟ್ಟ ಬ್ಯಾಂಕ್ ತನ್ನ ಹಣದ ಮರು ಪಾವತಿಗೆ ಅಳವಡಿಸಿಕೊಂಡಿರುವ ಸುರಕ್ಷತೆಯಿದು. `ಕೃಷಿಗೆ ಪೂರಕವಾದುದು ಹೈನುಗಾರಿಕೆ. ಗ್ರಾಮೀಣ ರೈತನ ಆರ್ಥಿಕ ಸಬಲತೆಗೆ ಕಾರಣವಾಗಿದ್ದು ಇದೇ. ಹೆಚ್ಚು ಬೆಲೆ ನೀಡಿ ಖರೀದಿಸಿದ ಉತ್ತಮ ಮಿಶ್ರತಳಿ ಹಸು ಎಮ್ಮೆ, ಎತ್ತು ಅಕಸ್ಮಾತ್ ಮರಣಹೊಂದಿದಲ್ಲಿ ನೊಂದ ರೈತನಿಗೆ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆಯೇ ಜಾನುವಾರು ಜೀವವಿಮೆ’ ಎನ್ನುವ ಮಾತನ್ನು ನಾವೂ ಮತ್ತೊಮ್ಮೆ ಹೇಳಬಹುದಾದರೂ ಅದು ಅರೆಬರೆ ಸತ್ಯ.
ಸಾಮಾನ್ಯ ವಿಮಾ ಕಂಪನಿಗಳಾದ ಯುನೈಟೆಡ್ ಇಂಡಿಯಾ, ಓರಿಯಂಟಲ್, ನ್ಯಾಷನಲ್ ಮುಂತಾದುವುಗಳು ಜಾನುವಾರುಗಳಲ್ಲಿ ಜೀವವಿಮೆ ಕೈಗೊಳ್ಳುತ್ತಿವೆ. ಜಾನುವಾರು ಮೌಲ್ಯದ ಶೇ.4.5 – 5 ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಾಗುತ್ತದೆ. ಮೂರರಿಂದ 12 ವರ್ಷದ ರಾಸುಗಳನ್ನು ವಿಮೆಯ ವ್ಯಾಪ್ತಿಗೊಳಪಡಿಸಬಹುದು. ವಿಮಾ ಅವಧಿಯಲ್ಲಿ ರಾಸು ಮರಣ ಹೊಂದಿದರೆ ಮಾತ್ರ ಮಾರುಕಟ್ಟೆ ಬೆಲೆಯನ್ನು ಮರುಪಾವತಿಸಲಾಗುತ್ತದೆ. ಒಂದು ವೇಳೆ ರಾಸು ಕಾರಣಾಂತರಗಳಿಂದ ನಿಷ್ಪ್ರಯೋಜಕವಾದರೆ (ಕಾಲು ಮುರಿದುಕೊಳ್ಳುವುದು, ಕೆಚ್ಚಲುಬಾವಿನಿಂದ ಹಾಲು ಬಾರದಿರುವುದು, ಗರ್ಭ ಧರಿಸದೇ ಜೀವನ ಪೂರ್ತಿ ಬರಡಾಗುವುದು ಇತ್ಯಾದಿ) ವಿಮೆ ಪಾವತಿಸಲಾಗುವುದಿಲ್ಲ.
ಒಂದಂತೂ ನಿಜ. ಮನೆಯಲ್ಲಿ `ಹಾಗೇ ಸುಮ್ಮನೆ’ ತಮ್ಮ ಹಾಲು ಬಳಕೆಗೆ, ಗೊಬ್ಬರ ತಯಾರಿಕೆಗೆಂದು ಎಮ್ಮೆ ದನ ಸಾಕುವವರು ತಮ್ಮ ರಾಸುಗಳಿಗೆ ಜೀವವಿಮೆ ಮಾಡಿಸುವ ಸಂಪ್ರದಾಯ, ವ್ಯವಸ್ಥೆ ನಮ್ಮಲ್ಲಂತೂ ಇಲ್ಲ. ಅಂತಹ ಮನಸ್ಥಿತಿ ನಮಗಾಗಲಿ ವಿಮಾ ಕಂಪನಿಗಾಗಲಿ ಇಲ್ಲ ಎನ್ನುವುದಕ್ಕೆ `ಖಾಸಗಿ ವಿಮೆ’ಗಿರುವ ಕಟ್ಟುಪಾಡುಗಳೇ ಸಾಕ್ಷಿ. ಖಾಸಗಿಯಾಗಿ ರೈತ ತನ್ನ ಬಿಡಿ ಎಮ್ಮೆಗೆ, ದನಕ್ಕೆ ವಿಮೆ ಮಾಡಿಸಲು ಅವಕಾಶವೇ ಇಲ್ಲ. ಮಾಡಿಸಲೇಬೇಕೆಂದಿದ್ದರೆ, ತನ್ನಲ್ಲಿರುವ ಎಲ್ಲ ಜಾನುವಾರುಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಬೇಕು!
ಸಾಧಕ ಬಾಧಕಗಳ ಮಾತು ಕೊನೆಗಿರಲಿ. ಕೊನೆಪಕ್ಷ ಪಶು ಸಾಲ ನಿರೀಕ್ಷಿಸುವ ರೈತ ಏನೆಲ್ಲ ಹರ್ಡಲ್ಸ್ ದಾಟಬೇಕಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ವಿಮೆ ಮಾಡಿಸುವುದು ಹೇಗೆ?
ಮೊದಲಾಗಿ ನೊಂದಾಯಿತ (I.V.C) ಸರ್ಕಾರಿ ಅಥವಾ ಖಾಸಗಿ ಪಶುವೈದ್ಯರಿಂದ ರಾಸುವಿನ ಆರೋಗ್ಯ ದೃಢೀಕರಣ ಮಾಡಿಸಿ, ಕಿವಿಗೆ ಗುರುತಿನ ಸಂಖ್ಯೆಯುಳ್ಳ ಓಲೆಯನ್ನು ಹಾಕಿಸಬೇಕು. ರೈತನೊಂದಿಗೆ ಓಲೆ ಸಹಿತದ ರಾಸುವಿನ ಛಾಯಾಚಿತ್ರ ವಿಮೆ ಮಾಡಿಸುವ ವೇಳೆ ಕಡ್ಡಾಯ. ವಿಮೆಯನ್ನು ವರ್ಷಕ್ಕೊಮ್ಮೆ ನವೀಕರಿಸಬೇಕಾಗುತ್ತದೆ. ವಿಮೆ ಮಾಡಿಸಿದ 15 ದಿನಗಳ ನಂತರವೇ ರಾಸು ವಿಮೆಗೊಳಪಡುತ್ತದೆ. ರಾಸುವನ್ನು ಮಾರಿದರೆ ವಿಮೆಯೂ ವರ್ಗಾವಣೆಯಾಗುತ್ತದೆ. ಗುರುತಿನ ಸಂಖ್ಯೆಯ ಓಲೆ ಕಡ್ಡಾಯವಾಗಿದ್ದು ಅಕಸ್ಮಾತ್ ಬಿದ್ದುಹೋದಲ್ಲಿ ವಿಳಂಬ ಮಾಡದೆ ಪುನಃ ಹಾಕಿಸಿ ವಿಮಾ ಕಂಪನಿಗೆ ತಪ್ಪದೆ ತಿಳಿಸಬೇಕಾಗುತ್ತದೆ. ಅದರಲ್ಲಿರುವ ವಿಶಿಷ್ಟ ನಂಬರ್ ರಾಸುವಿನ ಗುರುತಾಗಿರುವುದೇ ಈ ನಿಯಮಕ್ಕೆ ಕಾರಣ. ಸಾಂಕ್ರಾಮಿಕ ರೋಗಗಳಿಗೆ ಕಾಲಕಾಲಕ್ಕೆ ಮುಂಜಾಗ್ರತಾ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವುದು ಕ್ಷೇಮ.
ಒಂದೊಮ್ಮೆ ವಿಮೆ ಮಾಡಿಸಿದ ರಾಸು ಮರಣ ಹೊಂದಿದರೆ ವಿಳಂಬಮಾಡದೆ ಸಂಬಂಧಿಸಿದ ವಿಮಾಕಂಪನಿ ಮತ್ತು ಬ್ಯಾಂಕಿಗೆ ಲಿಖಿತವಾಗಿ ತಿಳಿಸಬೇಕು. ವಿಮಾ ಅಧಿಕಾರಿಗಳು ಮೃತ ರಾಸಿನ ಪರಿಶೀಲನೆ ಮಾಡಬೇಕಾಗಿರುವುದರಿಂದ ರಜಾದಿನವಾದರೂ ತಪ್ಪದೇ ಈ ಕೆಲಸ ನಿರ್ವಹಿಸಬೇಕಾಗುತ್ತದೆ. ಮೃತ ರಾಸುವಿನ ಫೋಟೋ, ಗುರುತಿನ ಓಲೆ ಹಾಗೂ ಚಿಕಿತ್ಸೆ ನೀಡಿದ್ದರೆ ಚಿಕಿತ್ಸಾ ಪ್ರಮಾಣಪತ್ರವನ್ನು ಕ್ಲೇಮು ಫಾರಂನೊಂದಿಗೆ ಸಲ್ಲಿಸಬೇಕು. ನೋಂದಾಯಿತ (I.V.C) ಸರ್ಕಾರಿ ಪಶುವೈದ್ಯರಿಂದ ಶವಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎನ್ನುವುದನ್ನು ಮರೆಯುವಂತಿಲ್ಲ.
ವಿಮೆ ತಿರಸ್ಕರಿಸಲ್ಪಡುತ್ತದೆ!
ಊಹ್ಞೂ, ಜಾನುವಾರಿಗೆ ವಿಮೆ ಇದೆ ಎಂದರೂ ಅದನ್ನು ವಿಪರೀತ ಜಾಗ್ರತೆಯಿಂದ ಸಾಕುವುದನ್ನು ತಪ್ಪಿಸುವಂತಿಲ್ಲ. ವಿಮಾ ಕಂಪನಿ ರೈತ ಪಾಲನೆಯಲ್ಲಿಯೇ ತಪ್ಪೆಸಗಿದ್ದಾನೆಂಬ ಕಾರಣ ಹೂಡಿ ವಿಮೆ ನಿರಾಕರಿಸುವ ಸಂಭವವಿದ್ದೇ ಇದೆ. ಅಷ್ಟಲ್ಲದೆ ರಾಸುಗಳು ಕಾಲುಬಾಯಿ ರೋಗ, ಗಳಲೆರೋಗ, ಚಪ್ಪೆರೋಗದಂತ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಲ್ಲಿ ವಿಮೆಯನ್ನು ನೀಡುವುದಿಲ್ಲ. ಅಷ್ಟೇಕೆ, ವಿಮೆ ಹೊಂದಿದ ಪಶುಗೆ ರೈತ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂಬ ಅಂಶವನ್ನು ಮುಂದಿಟ್ಟೂ ವಿಮೆ ನಿರಾಕರಿಸಬಹುದು.
ಆ ಮಟ್ಟಿಗೆ ಜಾನುವಾರು ವಿಮೆಯ ವ್ಯಾಖ್ಯೆ, ನಿಯಮಗಳು ಬದಲಾಗಲೇಬೇಕು. ರಾಸುವಿನ ಮೌಲ್ಯದ ಶೇ.ಐದರ ಮೊತ್ತ ವಾರ್ಷಿಕ ವಿಮಾ ಕಂತಾಗಿರುವುದು ದುಬಾರಿಯೇ. ಬಹುಷಃ ವಿಮಾ ಕಂಪನಿಗಳು ಇದರಿಂದ ಗಳಿಸುವ ಆದಾಯ, ವಿನಿಯೋಗಿಸುವ ಪರಿಹಾರಗಳನ್ನು ಬಹಿರಂಗಪಡಿಸಿದರೆ ಅವು ಪಡೆಯುತ್ತಿರುವ ಲಾಭದ ಪ್ರಮಾಣ ಅರ್ಥವಾಗುತ್ತದೆ. ಈ ವಿಮೆಯನ್ನು ಬರೀ ಸಾವಿಗೆ ಅನ್ವಯಿಸುವುದರಿಂದ ರೈತನಿಗೆ ಯಾವ ಲಾಭವೂ ಇಲ್ಲ.
ಗಗನ ಮುಟ್ಟಿದ ಔಷಧ ಬೆಲೆಯ ಇಂದಿನ ಬಿಸಿಯಲ್ಲಿ, ರಾಸುವಿಗೆ ಬಂದ ಯಾವುದೇ ಕಾಯಿಲೆಯನ್ನು ಗುಣಪಡಿಸಲು ಮೂರು – ನಾಲ್ಕು ದಿನದ ಚಿಕಿತ್ಸೆಗೆ ಕಡಿಮೆಯೆಂದರೂ ಸಾವಿರ ರೂಪಾಯಿ ಬೇಕು. ಕಾಯಿಲೆಯ ಲಕ್ಷಣಗಳನ್ನು ಸ್ಪಷ್ಟವಾಗಿ ಓದಲಾಗದಿರುವುದರಿಂದ ಪಶುವೈದ್ಯ ಮೂರ್ನಾಲ್ಕು ಸಂಭಾವ್ಯ ರೋಗಗಳ ನಿವಾರಣೆಗೆಂದು ತರೇವಾರಿ ಔಷಧ, ಇಂಜಕ್ಷನ್ ಕೊಟ್ಟಿರುತ್ತಾನೆ. ವಿಮೆಯಲ್ಲಿ ರೈತನ ಈ ಖರ್ಚು ಭರಿಸಲಾಗುವುದಿಲ್ಲ. ನಿಜಕ್ಕಾದರೆ, ಕಾಲು ಮುರಿದುಕೊಳ್ಳುವ, ಗರ್ಭ ಧರಿಸದಿರುವ ಸಂದರ್ಭಗಳಲ್ಲಾದರೂ ಪರಿಹಾರ ಲಭ್ಯವಾಗಬೇಕಿತ್ತು. ಬರೀ `ಜೀವಕ್ಕೆ’ ವಿಮೆ ಎಂದಾಗಿರುವುದರಿಂದ ಇದ್ದಕ್ಕಿದ್ದಂತೆ ರಾಸು ಸತ್ತರೆ ಸಾಲ ಕೊಟ್ಟ ಹಣಕಾಸು ಸಂಸ್ಥೆ ವಿಮೆಯ ಲಾಭ ಪಡೆಯುತ್ತದೆ. ಅಕ್ಷರಶಃ ಇದು ವಿಪರ್ಯಾಸ. ರೈತ ಮತ್ತೊಂದು ಹಾಲು ಕರೆವ ರಾಸು ಕೊಳ್ಳಲು ಸಾಲ ಮಾಡಬೇಕು, ಮತ್ತದಕ್ಕೆ ಜೀವವಿಮೆ ಕಂತು ತೆರಬೇಕು!
ವಿಮೆಗೊಳಪಡದ ರಾಸುಗಳಿಗೆ ಕೂಡ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ಬಹುಪಾಲು ರೈತರಿಗೆ ಈ ಮಾಹಿತಿ ಇರುವುದೇ ಇಲ್ಲ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಸುವು ಮರಣ ಹೊಂದಿದಾಗ ರೈತನು ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ವಾಹನ ಅಥವಾ ಇತರೆ ಅಫಘಾತದಿಂದ ಮರಣ ಹೊಂದಿದಾಗ ಪೋಲಿಸ್ ಇಲಾಖೆಯಲ್ಲಿ ಮತ್ತು ಹಾವಿನ ಕಡಿತದಿಂದ ಮರಣ ಹೊಂದಿದಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎ.ಪಿ.ಎಮ್.ಸಿ)ಯ ಮೂಲಕ ಪರಿಹಾರ ಪಡೆಯಲು ಸಾಧ್ಯವಿದೆ. ಇಲ್ಲೆಲ್ಲ ಸಂಬಂಧಿಸಿದ ಇಲಾಖೆಯಲ್ಲಿ ಲಿಖಿತ ದೂರನ್ನು ನೀಡಿ ಪರಿಹಾರ ಪಡೆಯಬಹುದಾಗಿದೆ. ವಿದ್ಯುತ್ ಅವಘಡದಿಂದ ಮರಣ ಹೊಂದಿದರೆ, ದುರುದ್ದೇಶದಿಂದ ವಿಷಪ್ರಾಶನ ಮಾಡಿ ಅಥವಾ ಹೊಡೆದು ದೈಹಿಕ ಕಿರುಕುಳ ನೀಡಿದ್ದರಿಂದ ರಾಸು ಮರಣ ಹೊಂದಿದರೆ ಅನುಕ್ರಮವಾಗಿ ವಿದ್ಯುತ್ ವಿತರಣ ಕಂಪನಿ(ಎಸ್ಕಾಂ), ಪೋಲಿಸ್ ಹಾಗೂ ಕಂದಾಯ ಇಲಾಖೆಗಳು ಪರಿಹಾರ ಕೊಡಿಸಲು ಜವಾಬ್ದಾರರು. ಈ ಪ್ರಕರಣಗಳಲ್ಲಿ ಜಾನುವಾರಿಗೆ ವಿಮೆ ಪ್ರಶ್ನೆ ಬರುವುದಿಲ್ಲ.
-ಮಾ.ವೆಂ.ಸ.ಪ್ರಸಾದ್
ವಯೋವೃದ್ದರನ್ನು ಗೌರವಿಸಿ
ಯುವ ಜನಾಂಗ ತಂದೆ ತಾಯಿ ಮತ್ತು ವಯೋವೃದ್ದರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ದಲಿತ ಸೇನೆಯ ಎನ್. ದ್ಯಾವಪ್ಪ ತಿಳಿಸಿದರು.
ರಾಮ್ ವಿಲಾಸ್ ಪಾಸ್ವಾನ್ ಅವರ ೭೦ ನೇ ವರ್ಷದ ಜನ್ಮ ದಿನದ ಅಂಗವಾಗಿ ಈಚೆಗೆ ತಾಲ್ಲೂಕು ದಲಿತ ಸೇನೆ ವತಿಯಿಂದ ತಾಲ್ಲೂಕಿನ ಬೈಯಪ್ಪನಹಳ್ಳಿ ನಿವೇದಿತ ವೃದ್ದಾಶ್ರಮದ ವೃದ್ದರಿಗೆ ಹಣ್ಣು ಹಂಪಲು ಮತ್ತು ದವಸ ದಾನ್ಯ ನೀಡಿ ಅವರು ಮಾತನಾಡಿದರು. ದೇವರ ದರ್ಶನ, ತೀರ್ಥಯಾತ್ರೆಗಳಿಗೆಂದು ಸಾವಿರಾರು ರೂಪಾಯಿಗಳು ಖರ್ಚು ಮಾಡುತ್ತೇವೆ. ಅನುಭವದ ಮಾತುಗಳಾಡುವ ಹಿರಿಯರೆ ದೇವರ ಸಮಾನರೆಂದು ಭಾವಿಸಿ ಅವರ ಸೇವೆ ಮಾಡಬೇಕು. ನಾವೂ ಮುಂದಿನ ದಿನಗಳಲ್ಲಿ ವೃದ್ಧರಾಗಿ ಅಶಕ್ತ ಸ್ಥಿತಿ ತಲುಪುತ್ತೇವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ದಲಿತ ಸೇನೆಯ ಕಲಾವಿಭಾಗದ ಜಿಲ್ಲಾಧ್ಯಕ್ಷ ಈಧರೆ ತಿರುಮಲ ಪ್ರಕಾಶ್, ತಾಲ್ಲೂಕು ಅದ್ಯಕ್ಷ ಕೆ. ವೆಂಕಟೇಶ್, ಜಂಟಿ ಕಾರ್ಯದರ್ಶಿ ವೆಂಕಟರೋಣಪ್ಪ, ರಾಮಾಂಜಿನಪ್ಪ, ಸುಭ್ರಮಣಿ, ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಗಂಗಾದರ್, ಕಾರ್ಯದರ್ಶಿ ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಿಪ್ಪುನೇರಳೆ ರೇಷ್ಮೆ ಬೆಳೆಗಾರನ ಮನೆಯ ಬಳಿ ಬಂದ ಟಸ್ಸಾರ್ ರೇಷ್ಮೆ ಪತಂಗ
ತಾಲ್ಲೂಕಿನ ಕೊತ್ತನೂರು ಗ್ರಾಮದ ರೇಷ್ಮೆ ಬೆಳೆಗಾರ ವೆಂಕಟಶಿವಾರೆಡ್ಡಿ ಅವರ ಮನೆಗೆ ಟಸ್ಸಾರ್ ರೇಷ್ಮೆ ಪತಂಗ ಭೇಟಿ ನೀಡಿರುವ ಸೋಜಿಗದ ಘಟನೆ ಶುಕ್ರವಾರ ನಡೆದಿದೆ.
ಎಂದಿನಂತೆ ವೆಂಕಟಶಿವಾರೆಡ್ಡಿ ಅವರು ಶುಕ್ರವಾರ ಬೆಳಿಗ್ಗೆ ಮನೆ ಮುಂದಿನ ರೇಷ್ಮೆ ಸಾಕಾಣಿಕಾ ಮನೆಗೆ ಹೋಗುವಾದ ಪಕ್ಕದಲ್ಲೇ ಬೆಳೆದಿದ್ದ ತೊಗರಿ ಗಿಡದ ಮೇಲೆ ಏನೋ ಹೊಸ ಬಣ್ಣ ಕಂಡಂತಾಗಿದೆ. ತಕ್ಷಣ ಹತ್ತಿರ ಹೋಗಿ ನೋಡಿದಾಗ ದೊಡ್ಡ ಗಾತ್ರದ ಪತಂಗ ಕಾಣಿಸಿದೆ. ಕಂದು ಬಣ್ಣದ ಸುಂದರವಾದ ಪತಂಗದ ರೆಕ್ಕೆಗಳ ಮೇಲೆ ಕಪ್ಪು, ಕೆಂಪು ಗುರುತುಗಳಿದ್ದು ಆಕರ್ಷಕವಾಗಿತ್ತು. ಅಗಲವಾದ ಅದರ ರೆಕ್ಕೆಗಳ ಮೇಲೆ ದೊಡ್ಡ ಕಣ್ಣುಗಳ ರೀತಿಯ ಗುರುತುಗಳಿದ್ದವು. ಪಾರದರ್ಶಕವಾಗಿ ಕನ್ನಡಿಯಂತೆ ಹೊಳ್ಳೆಯುತ್ತಿದ್ದ ಕಣ್ಣಿನಂಥ ಆಕೃತಿಯಲ್ಲಿ ಪ್ರತಿಬಿಂಬವನ್ನು ಕಾಣಬಹುದಿತ್ತು. ಅಚ್ಚರಿಗೊಂಡ ಅವರು ಮನೆಯವರನ್ನೆಲ್ಲಾ ಕರೆದು ತೋರಿಸಿದ್ದಾರೆ.
ಅದೇ ಗ್ರಾಮದ ಸ್ನೇಕ್ ನಾಗರಾಜ್ ಅವರನ್ನು ಕರೆದು ವಿಚಿತ್ರವಾದ, ಅಪರೂಪದ ಚಿಟ್ಟೆ ಬಂದಿದೆ ಎಂದು ತೋರಿಸಿದ್ದಾರೆ. ಅದನ್ನು ಕಂಡ ಸ್ನೇಕ್ ನಾಗರಾಜ್, ಅದನ್ನು ಟಸ್ಸಾರ್ ಪತಂಗವೆಂದು ಗುರುತಿಸಿದ್ದಾರೆ. ಟಸ್ಸಾರ್ ರೇಷ್ಮೆ ಹೆಚ್ಚಾಗಿ ಕಂಡು ಬರುವುದು ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ. ಅಷ್ಟು ದೂರದ ರಾಜ್ಯಗಳಲ್ಲಿ ಕಂಡುಬರುವ ಈ ಟಸ್ಸಾರ್ ರೇಷ್ಮೆ ಪತಂಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅದರಲ್ಲೂ ರೇಷ್ಮೆ ಬೆಳೆಗಾರರ ಮನೆಯ ಮುಂದಿನ ಸಸ್ಯದ ಮೇಲೆ ಕಂಡು ಬಂದುದು ಅಚ್ಚರಿಯ ಸಂಗತಿಯಾಗಿದೆ.
ಬಾಂಬಿಕ್ಸ್ ತಳಿಯ ಹಿಪ್ಪುನೇರಳೆಗಿಡದ ಸೊಪ್ಪನ್ನು ತಿಂದು ಬೆಳೆಯುವ ರೇಷ್ಮೆ ಹುಳುಗಳನ್ನು ಸಾಕುವುದು ನಮ್ಮಲ್ಲಿ ರೂಢಿಯಲ್ಲಿದೆ. ಇಲ್ಲಿನ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಠಿಸಿ, ಅಧಿಕ ಲಾಭ ತರುವ ಜನಪ್ರಿಯ ಕೃಷಿಯಾಗಿದೆ. ಅದೇ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಟಸ್ಸಾರ್ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ. ಆದರೆ ಅದರಿಂದ ರೇಷ್ಮೆ ತಗೆಯುವ ರೀತಿ ಮಾತ್ರ ವಿಭಿನ್ನವಾದುದು.
ನಮ್ಮಲ್ಲಿಯ ರೇಷ್ಮೆಯಲ್ಲಾದರೆ ಕುದಿಯುವ ನೀರಿಗೆ ರೇಷ್ಮೆಹುಳುಗಳ ಸಮೇತ ಗೂಡನ್ನು ಹಾಕಿ ನೂಲನ್ನು ತೆಗೆಯುತ್ತಾರೆ. ಟಸ್ಸಾರ್ನಲ್ಲಿ ಹಾಗಲ್ಲ. ರೇಷ್ಮೆಹುಳು ಗೂಡುಕಟ್ಟಿ ಅದರಿಂದ ಪತಂಗ ಹೊರಹೋದ ಮೇಲೆ ಆ ಗೂಡುಗಳನ್ನು ಸಂಸ್ಕರಿಸಿ ನೂಲು ತಯಾರಿಸಿ ರೇಷ್ಮೆ ಸೀರೆ ತಯಾರಿಸುತ್ತಾರೆ. ಟಸ್ಸರ್ ರೇಷ್ಮೆಯನ್ನು ವನ್ಯ ರೇಷ್ಮೆ ಎನ್ನುವರು. ಈಶಾನ್ಯ ರಾಜ್ಯಗಳ ಬುಡಕಟ್ಟು ಜನರು ದಟ್ಟ ಕಾಡುಗಳಲ್ಲಿ ಈ ರೇಷ್ಮೆಗೂಡುಗಳನ್ನು ಹುಡುಕಿ ತರುತ್ತಾರೆ. ಮೊದಲೆಲ್ಲ ಟಸ್ಸರ್ ರೇಷ್ಮೆ ನುಣುಪಿರುವುದಿಲ್ಲವೆಂದು ಹೆಣ್ಣುಮಕ್ಕಳಿಗೆ ಅಂಥ ಇಷ್ಟ ಆಗುತ್ತಿರಲಿಲ್ಲ. ಆದರೆ ವಿಭಿನ್ನತೆಯ ನೆವದಲ್ಲಿ ಮತ್ತು ಅಹಿಂಸಾ ರೇಷ್ಮೆ ಎಂಬ ಕಾರಣಕ್ಕೆ ಟಸ್ಸರ್ ರೇಷ್ಮೆಯನ್ನು ಈಗ ಇಷ್ಟಪಡುತ್ತಿದ್ದಾರೆ.
ಕೊತ್ತನೂರಿಗೆ ಬಂದಿದ್ದ ಟಸ್ಸಾರ್ ರೇಷ್ಮೆ ಪತಂಗ ಸೂರ್ಯನ ಬೆಳಕಿಗೆ ಮತ್ತು ಬೀಸುತ್ತಿದ್ದ ಆಷಾಢ ಮಾಸ ಗಾಳಿಗೆ ಕದಲಿ ರೆಕ್ಕೆ ಬಿಚ್ಚಿ ಗಗನಕ್ಕೆ ಹಾರಿತು. ತಾನೆಲ್ಲಿಂದ ಬಂದೆ ಎಂಬ ನಿಗೂಢತೆಯನ್ನು ತನ್ನೊಡಲಿನಲ್ಲಿಯೇ ಬಚ್ಚಿಚ್ಚುಕೊಂಡು ದೂರದಲ್ಲಿನ ಎತ್ತರದ ಮರಗಳ ಎಲೆಗಳ ಮಧ್ಯೆ ಕಣ್ಮರೆಯಾಯಿತು.

