ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಬೆರಸದೇ ಗ್ರಾಮದ ಮುಖಂಡರೂ ಸೇರಿದಂತೆ ನಾಗರೀಕರು ಒಗ್ಗೂಡಿ ಸಹಕರಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗುತ್ತವೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಹಾಗು ಹೊಸಪೇಟೆ ಗ್ರಾಮಗಳಲ್ಲಿ ಬುಧವಾರ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗು ಹೊಸಪೇಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕೇಂದ್ರದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುತ್ತಿದ್ದು ತಾಲ್ಲೂಕಿನಾಧ್ಯಂತ ೧೦೯ ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು ಹಂತ ಹಂತವಾಗಿ ಎಲ್ಲವನ್ನೂ ನಿರ್ಮಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿ, ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗು ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಸರ್ಕಾರ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಹಾಗು ಅಂಗನವಾಡಿ ಕೇಂದ್ರಗಳು ಸಾರ್ವಜನಿಕ ಆಸ್ತಿಯಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಗ್ರಾಮದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ನಾಗರಿಕರು ಗಮನಹರಿಸುವುದರೊಂದಿಗೆ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ತಾಲ್ಲೂಕು ಪಂಚಾಯತಿ ಸದಸ್ಯೆ ಶೋಭ, ಕುಂಬಿಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಂಜಿನಪ್ಪ, ಹೊಸಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್, ದ್ಯಾವಮ್ಮ, ಮೀನಾಕ್ಷಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಪಣ್ಣ, ಬಿ.ಟಿ.ರವಿಕುಮಾರ್, ಶ್ರೀನಿವಾಸಗೌಡ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಆಸ್ತಿ
ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲಾಗುವುದು
ಬಿಜೆಪಿ ಪಕ್ಷವನ್ನು ತಾಲ್ಲೂಕಿನಲ್ಲಿ ಪ್ರಬಲವಾಗಿ ಕಟ್ಟಿ ಬೆಳೆಸಲು ಪಣ ತೊಟ್ಟಿದ್ದೇನೆ, ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತೇನೆ. ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಬಿಜೆಪಿ ಪಕ್ಷದ ನೂತನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ನೂತನ ಪದಾಧಿಕಾರಿಗಳೊಂದಿಗೆ ಹಾಗೂ ಕಾರ್ಯಕರ್ತರೊಡನೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ವಿವಿಧ ಶಿಬಿರಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಸ್ಥಳೀಯ ಕಾರ್ಯಕರ್ತರ ಪಡೆಗೆ ಪ್ರೋತ್ಸಾಹ ಮತ್ತು ಉತ್ಸಾಹವನ್ನು ತುಂಬಲಾಗುವುದು. ಬಿಜೆಪಿ ಪಕ್ಷಕ್ಕೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದು, ಅವರನ್ನು ಗಟ್ಟಿಗೊಳಿಸಲು ಯುವಚೈತನ್ಯ ಎಂಬ ಕಾರ್ಯಕ್ರಮವನ್ನು ನಡೆಸಲಾಗುವುದು. ಬಿಜೆಪಿ ಪಕ್ಷದ ಸಿದ್ಧಾಂತದಂತೆ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೊಸ ಕಾರ್ಯಪಡೆಯನ್ನು ಬೆಳೆಸುವಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ನೂತನ ಸದಸ್ಯರಿಂದ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಲಾಯಿತು.
ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ತರಬಳ್ಳಿ ಭಸ್ಕರ್ ರೆಡ್ಡಿ, ಮುನಿರಾಜು, ನಗರ ಸಭೆಯ ಸದಸ್ಯ ಎಸ್.ರಾಘವೇಂದ್ರ, ದೊಣ್ಣಹಳ್ಳಿ ರಾಮಣ್ಣ, ದಾಮೋದರ್, ಸುರೇಶ್, ಅಷ್ವಕ್, ಸುಜಾತಮ್ಮ, ರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿ.ಎಸ್.ಎನ್.ಎಲ್ ನಿವೃತ್ತ ಸಿಬ್ಬಂದಿಗೆ ಗೌರವ
ಶಿಡ್ಲಘಟ್ಟದ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎನ್.ನರಸಿಂಹಯ್ಯ ಅವರನ್ನು ಕಛೇರಿಯ ಸಿಬ್ಬಂದಿ ಶುಕ್ರವಾರ ಗೌರವಿಸಿದರು.
ಒಕ್ಕೂಟದಿಂದ ಸ್ವ-ಸಹಾಯ ಸಂಘಗಳ ಬಲವರ್ಧನೆ
ಸ್ವ-ಸಹಾಯ ಸಂಘಗಳು ಬಲವರ್ಧನೆಗೊಳ್ಳಲು ಒಕ್ಕೂಟ ಸಹಕಾರಿಯಾಗಲಿದೆ ಎಂದು ತಾಲ್ಲೂಕು ಯೋಜನಾಧಿಕಾರಿ ಡಿ.ಯೋಗೀಶ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಈಚೆಗೆ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೂತನ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವ-ಸಹಾಯ ಸಂಘಗಳ ವಾರದಸಭೆ ದಾಖಲಾತಿ, ನಿರ್ವಹಣೆ, ಸಾಲದ ವ್ಯವಹಾರ, ಇವೆಲ್ಲವೂ ಉತ್ತಮವಾಗಿ ನಿರ್ವಹಿಸಲು ನೂತನವಾಗಿ ರಚಿಸಲಾದ ಒಕ್ಕೂಟಗಳು ಸಹಕಾರಿಯಾಗಲಿದೆ ಎಂದರು.
ಒಟ್ಟು ೪೮ ಜನ ನೂತನ ಪದಾಧಿಕಾರಿಗಳು ತರಬೇತಿಯಲ್ಲಿ ಹಾಜರಾಗಿದ್ದು. ತರಬೇತಿಯಲ್ಲಿ ಹಾಜರಾದ ಪದಾಧಿಕಾರಿಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಿ ಒಕ್ಕೂಟದ ಪದಾಧಿಕಾರಿಗಳ ಜವಬ್ದಾರಿ, ನಾಯಕತ್ವ, ಒಕ್ಕೂಟ ಸಭೆ ನಿರ್ವಹಣೆ, ಸಾಲ ಉಪಸಮಿತಿಯ ಸಭೆ ನಿರ್ವಹಣೆ ಬಗ್ಗೆ ಬಶೆಟ್ಟಹಳ್ಳಿ ವಲಯದ ಮೇಲ್ವಿಚಾರಕರಾದ ಶಶಿಕುಮಾರ್ ಹಾಗು ಜಂಗಮಕೋಟೆ ವಲಯದ ಮೇಲ್ವಿಚಾರಕಿ ಲಕ್ಷ್ಮೀ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಲಯದ ಸೇವಾಪ್ರತಿನಿಧಿಗಳು ಸೇರಿದಂತೆ ವಲಯದ ಮೇಲ್ವಿಚಾರಕಿಯರಾದ ಮಮತಾ ಮತ್ತಿತರರು ಹಾಜರಿದ್ದರು.
ಅಗ್ನಿಶಾಮಕ ದಳದ ಕಛೇರಿ ಉದ್ಘಾಟನೆ
ಮುಂದಿನ ಒಂದು ವರ್ಷದ ಒಳಗೆ ತಾಲ್ಲೂಕಿನಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆ ಸೇರಿದಂತೆ ಸಿಬ್ಬಂದಿಗೆ ಉತ್ತಮ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಿನಿ ವಿಧಾನಸೌಧ ಬಳಿಯಿರುವ ಹಳೆಯ ನ್ಯಾಯಾಲಯ ಕಟ್ಟಡಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಅಗ್ನಿಶಾಮಕ ದಳದ ಕಛೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಿಸಲು ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪನವರ ಕಾಲದಲ್ಲಿ ತಾಲ್ಲೂಕಿನ ಆನೂರು ಗ್ರಾಮದ ಬಳಿ ಒಂದು ಎಕರೆ ಜಾಗ ಮೀಸಲಿಟ್ಟಿತ್ತು. ನಂತರ ಬಂದಂತಹ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವಾದ್ದರಿಂದ ಅಗ್ನಿಶಾಮಕ ಠಾಣೆ ನಿರ್ಮಾಣವಾಗಿರಲಿಲ್ಲ.
ತಾವು ಶಾಸಕರಾದ ನಂತರ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲೇ ಬೇಕು ಎಂಬ ಹಠದಿಂದ ಪ್ರಯತ್ನ ನಡೆಸಿ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕಾರ್ಯ ಪ್ರಾರಂಭಿಸಲಾಗಿದೆ. ಸರ್ಕಾರ ೭ ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರ ಟೆಂಡರ್ ಪ್ರಕ್ರಿಯೆ ಕಾರ್ಯ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ಯಾವುದೇ ಅವಘಡ ಸಂಭವಿಸಿದರೂ ನೆರೆಯ ಚಿಕ್ಕಬಳ್ಳಾಪುರ ಅಥವಾ ಚಿಂತಾಮಣಿಯಿಂದ ಅಗ್ನಿಶಾಮಕ ವಾಹನಗಳು ಬರಬೇಕಾಗಿತ್ತು. ಸ್ಥಳಕ್ಕೆ ವಾಹನ ಬರುವ ಹೊತ್ತಿಗೆ ಬಹುತೇಕ ಆಸ್ತಿ ಪಾಸ್ತಿ ನಷ್ಟವುಂಟಾಗುತ್ತಿತ್ತು. ಇದೀಗ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ಸ್ಥಾಪಿಸಿದ್ದು ಇದು ತೊಂದರೆಗೊಳಗಾದವರಿಗೆ ನೆರವಾಗಲಿದೆ ಎಂದರು.
ಅಗ್ನಿಶಾಮಕ ಹಾಗು ತುರ್ತು ಸೇವೆಗಳ ಸಬ್ ಇನ್ಸ್ಪೆಕ್ಟರ್ ಎಚ್.ಎಸ್.ರೇವಣ್ಣ ಮಾತನಾಡಿ, ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿಯೂ ಅಗ್ನಿಶಾಮಕ ದಳ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಇದುವರೆಗೂ ಶೇ. ೯೮ ರಷ್ಟು ಅಗ್ನಿಶಾಮಕ ಠಾಣೆಗಳು ಪೂರ್ಣಗೊಂಡಿವೆ ಎಂದು ನುಡಿದರು.
ಇದೀಗ ತಾಲ್ಲೂಕಿನಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದ್ದು ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಈಗಾಗಲೇ ಅನುಮೋದನೆ ದೊರೆತಿದ್ದು ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಣ ಮಾಡಲಾಗುವುದು. ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ ಅಗ್ನಿಶಾಮಕ ಠಾಣೆ ರಾಜ್ಯದ ೨೦೨ ನೇ ಅಗ್ನಿಶಾಮಕ ಠಾಣೆಯಾಗಿದ್ದು ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಈ ಕಟ್ಟಡ ಅತಿ ಸುಂದರವಾಗಿ ಮೂಡಿ ಬರಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತನುಜಾರಘು, ಎ.ಎಂ.ಜಯರಾಮರೆಡ್ಡಿ, ಬೆಂಗಳೂರು ಪಶ್ಚಿಮ ಪ್ರಾಂತ್ಯದ ಮುಖ್ಯಅಗ್ನಿಶಾಮಕ ಅಧಿಕಾರಿ ಕೆ.ಶಿವಕುಮಾರ್, ಬೆಂಗಳೂರು ಉತ್ತರ ವಲಯ ಬಿ.ಎನ್.ಮಂಜುನಾಥ್. ತಾಲ್ಲೂಕು ಪಂಚಾಯತಿ ಇಓ ವೆಂಕಟೇಶ್, ನಗರಸಭೆ ಆಯುಕ್ತ ಎಚ್.ಎ.ಹರೀಶ್, ಉಪತಹಶೀಲ್ದಾರ್ ವಾಸುದೇವಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆರಂಭದಲ್ಲೇ ಮುರಿದುಬೀಳುವ ಮದುವೆಗಳು – ಭಾಗ 3
ಮದುವೆಯ ನಂತರ
ಆರಂಭದಲ್ಲೇ ಮುಗ್ಗರಿಸುವ ಮದುವೆಗಳಿಗೆ ಮುಂಚಿನ ತಯಾರಿಯ ಕೊರತೆಯಿರುತ್ತದೆ. ಮದುವೆಯಾದ ಮೇಲೆ ಮಾಡಬಹುದಾದ್ದು ಹೆಚ್ಚೇನಿರುವುದಿಲ್ಲ.
ಸಂಬಂಧವೊಂದು ರೂಪಗೊಳ್ಳಲು ಸಮಯಾವಕಾಶ ಬೇಕು ಅದನ್ನು ನೀಡುವ ಸಹನೆ ದಂಪತಿಗಳು ಮತ್ತು ಪೋಷಕರಲ್ಲಿ ಇರಬೇಕಷ್ಟೇ. ಪೋಷಕರು ಎಲ್ಲಾ ವಿಷಯಗಳಲ್ಲಿ ಮೂಗುತೂರಿಸದೆ ನವದಂಪತಿಗಳನ್ನು ಅವರಷ್ಟಕ್ಕೇ ಬಿಟ್ಟು, ಅವರ ಬೆಂಬಲಕ್ಕೆ ಸದಾ ತಾವಿದ್ದೇವೆ ಎನ್ನುವ ವಿಶ್ವಾಸ ಹುಟ್ಟಿಸಿದರೆ ಸಾಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಮಧ್ಯಸ್ಥಿಕೆ ವಹಿಸದೆ ತಮ್ಮಲ್ಲಿಯೇ ಪರಿಹರಿಸಿಕೊಳ್ಳಬೇಕೆಂದು ತಿಳಿಸಿದರೆ ಅವರಿಗೆ ಜವಾಬ್ದಾರಿಗಳು ಅರಿವು ಮೂಡುತ್ತದೆ. ಸಮಸ್ಯೆಗಳ ಪರಿಹಾರದ ಮೊದಲ ಹಂತ ಅದು ಇರುವುದನ್ನು ಒಪ್ಪಿಕೊಳ್ಳುವುದು. ಇಲ್ಲೂ ಸಹ ಮನೆತನದ ಗೌರವ ಮುಂತಾದ ಹುಸಿ ಭಾವನೆಗಳ ಪರದೆಯ ಹಿಂದೆ ವಾಸ್ತವಿಕತೆಯನ್ನು ಮುಚ್ಚಿ ಹಾಕುವ ಪ್ರಯತ್ನದಿಂದ ತೊಂದರೆಗಳು ಹೆಚ್ಚಾಗಬಹುದು.
ವಿಚ್ಛೇದನಗಳು ಅನಿವಾರ್ಯವಿರಬಹುದು. ಆದರೆ ಮದವೆಯ ಮಂಟಪದಲ್ಲಿಯೇ ಕೊನೆಗೊಳ್ಳುವ ಅಥವಾ ಒಂದೆರೆಡು ತಿಂಗಳಿನಲ್ಲಿಯೇ ಮುರಿದುಬೀಳುವ ಮದುವೆಗಳು ಹೆಚ್ಚಿನ ಸಮಯದಲ್ಲಿ ಸ್ವಯಂಕೃತ ಅಪರಾಧ. ಪೋಷಕರು ಮತ್ತು ವಿವಾಹಾಕಾಂಕ್ಷಿಗಳು ಸ್ವಲ್ಪ ಸಹನೆ ಇಟ್ಟು ಪ್ರೌಢವಾದ ನಿರ್ಧಾರಗಳನ್ನು ತೆಗೆದುಕೊಂಡರೆ ಇಂತಹ ಸಂದರ್ಭಗಳನ್ನು ಎದುರಿಸಬೇಕಾಗಿಲ್ಲ. ಇದರಿಂದ ಸಾಕಷ್ಟು ಹಣ, ಸಮಯ ಮತ್ತು ಅನಗತ್ಯ ಮಾನಸಿಕ ಕಿರಿಕಿರಿಗಳನ್ನು ತಪ್ಪಿಸಬಹುದು.
ಮಾಧ್ಯಮಗಳ ಪ್ರಭಾವ
ಸಂಪರ್ಕ ಕ್ರಾಂತಿಯ ನಂತರ ಪ್ರಪಂಚ ಬಹಳ ಚಿಕ್ಕದಾಗಿದೆ. ಸಿನಿಮಾ, ಟೀವಿ, ಅಂತರ್ಜಾಲದಲ್ಲಿ ಮಕ್ಕಳಿಗೆ ಏನೆಲ್ಲಾ ಸಿಗುತ್ತದೆ ಎಂದು ಹಳೆಯ ತಲೆಮಾರಿನವರಿಗೆ ಊಹಿಸುವುದೂ ಕಷ್ಟ. ಇವುಗಳಲ್ಲಿ ಯಾವುದು ವಾಸ್ತವ ಯಾವುದು ಮನೋರಂಜನೆಗಾಗಿ ಮಾತ್ರ ಸೃಷ್ಟಿಯಾದ ಭ್ರಮಾಲೋಕ ಎಂದು ಆ ಪುಟ್ಟ ಮಿದುಳು ಹೇಗೆ ಗ್ರಹಿಸಬಲ್ಲದು? ಹಾಗಾಗಿ ವಾಸ್ತವಿಕತೆ ಮತ್ತು ಭ್ರಮೆಗಳ ಮಧ್ಯೆ ಅಂತರವನ್ನು ಗುರುತಿಸಿಕೊಳ್ಳಲಾರದ ಮಕ್ಕಳು ಹಾದಿತಪ್ಪಿದರೆ ಅದರಲ್ಲಿ ಅವರನ್ನು ಹೊರತಾಗಿಸಿ ಸಮಾಜದ ಉಳಿದೆಲ್ಲ ಅಂಗಗಳ ಜವಾಬ್ದಾರಿ ಇರುತ್ತದೆ.
ಒಂದೆರೆಡು ವರ್ಷದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಭ್ರಮೆಯ ಲೋಕಕ್ಕೆ ತಳ್ಳಿರುವುದು ಟೀವಿ ಮತ್ತು ಸಿನಿಮಾಗಳು. ಇವುಗಳಿಂದ ಮಕ್ಕಳು ತಪ್ಪುದಾರಿ ಹಿಡಿಯುತ್ತಾರೆ ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಆ ರಂಗದವರು ಮಾತ್ರ, ನಾವು ಸಮಾಜದಲ್ಲಿ ನಡೆಯುವುದನ್ನು ಮಾತ್ರ ತೋರಿಸುತ್ತೇವೆ ಮತ್ತು ದಾರಿ ತಪ್ಪುವವರಿಗೆ ದಾರಿ ದೀಪವಾಗುತ್ತೇವೆ ಎಂದು ವಾದಿಸುತ್ತಾರೆ! ಇದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವ ರೀತಿಯ ಮುಗಿಯದ ಚರ್ಚೆ. ಅದೂ ಅಲ್ಲದೆ ದೃಶ್ಯ ಮಾಧ್ಯಮ ಇವತ್ತು ಒಂದು ವೃತ್ತಿ ಮಾತ್ರ ಆಗಿರುವುದರಿಂದ ಹಣಮಾಡುವುದೇ ಇವರ ಗುರಿ. ಇವರಿಂದ ಮೌಲ್ಯಗಳನ್ನು ಎತ್ತಿಹಿಡಿಯುವ, ಸಮಾಜಕ್ಕೆ ಉಪಕಾರಿಯಾಗುವಂತಹದ್ದನ್ನು ನಿರೀಕ್ಷಿಸುವುದು ಕಷ್ಟ.
ಧಾರವಾಹಿಗಳು ಅಥವಾ ಸಿನಿಮಾಗಳು ಗಂಡು ಹೆಣ್ಣಿನ ನಡುವಿನ ಪ್ರೇಮ, ಪ್ರೀತಿಯಂತಹ ನವಿರಾದ ಭಾವನೆಗಳನ್ನು ಬಹಳ ಒರಟಾಗಿ ಕೆಲವೊಮ್ಮೆ ಕ್ರೂರವಾಗಿ ಚಿತ್ರಿಸುತ್ತಿವೆ. ಹದಿಹರೆಯದವರ ಪ್ರೇಮ, ಅದಕ್ಕಾಗಿ ನಡೆಯುವ ಹಿಂಸೆ, ಮಸಲತ್ತುಗಳು, ಇವೆಲ್ಲಾ ಮುಗ್ಧ ಮಕ್ಕಳ ಮೇಲೆ ಅಗಾಧ ಪರಿಣಾಮಗಳನ್ನು ಬೀರುತ್ತಿವೆ. ಇವತ್ತು ನಗರಗಳಲ್ಲಿ ಹದಿಯರೆಯದ ಮಕ್ಕಳಿಗೆ ತಮಗೊಬ್ಬ ಪ್ರೇಮಿಯೋ, ಭಿನ್ನಲಿಂಗದ ಸ್ನೇಹಿತರೋ ಇಲ್ಲದಿದ್ದರೆ ಅದು ದೊಡ್ಡ ಅವಮಾನದ ವಿಷಯ ಎಂದುಕೊಳ್ಳುವ ಸ್ಥಿತಿ ಇದೆ. ಸಿನಿಮಾಗಳಿಂದ ಪ್ರೇರಿತರಾಗಿ ವಿಚಿತ್ರ ಸಾಹಸಗಳಿಗೆ ಇಳಿದ ಮಕ್ಕಳ ಕಥೆಗಳು ಆಗಾಗ ವರದಿಯಾಗುತ್ತಿರುತ್ತವೆ. ಹೆಚ್ಚಿನ ಪೋಷಕರಿಗೆ ಮಕ್ಕಳ ನಡತೆಯ ಬಗೆಗೆ ಕಿರಿಕಿರಿ, ಅನುಮಾನಗಳಿದ್ದರೂ ಇದನ್ನೆಲ್ಲಾ ನಿಭಾಯಿಸುವ ದಾರಿ ಗೊತ್ತಿಲ್ಲದೆ ಕಸಿವಿಸಿಗೊಳ್ಳುತ್ತಿದ್ದಾರೆ. ಇದಕ್ಕಾಗಿ ಕೆಲವು ಸಲಹೆಗಳು ಹೀಗಿವೆ;
1. ಮಕ್ಕಳಿಗೆ ವಾಸ್ತವಿಕತೆ ಮತ್ತು ಭ್ರಮಾಲೋಕದ ವ್ಯತ್ಯಾಸವನ್ನು ಬಾಲ್ಯದಿಂದಲೇ ಕಲಿಸಬೇಕು. ಧಾರವಾಹಿಗಳು, ಸಿನಿಮಾಗಳನ್ನು ನೋಡಿದ ನಂತರ ಅದು ವಾಸ್ತವ ಅನ್ನುವ ರೀತಿ ಅದರ ಬಗೆಗೆ ಚರ್ಚೆ, ಗಾಸಿಪ್‍ಗಳನ್ನು ಮಾಡಬಾರದು. ಮಕ್ಕಳು ಅದರ ಬಗೆಗೆ ಮಾತನಾಡಲು ಇಚ್ಛಿಸಿದರೆ ಹೆಚ್ಚಿನ ಆಸಕ್ತಿ ತೋರದೆ, ಅವುಗಳನ್ನು ಕಥೆಯಾಗಿ ಆನಂದಿಸಿ ಮರೆತುಬಿಡಬೇಕು ಎನ್ನುವ ತಿಳುವಳಿಕೆ ನೀಡಬೇಕು.
2. ನಮ್ಮ ಸಿನಿಮಾಗಳು ಪ್ರಥಮ ನೋಟದ ಪ್ರೇಮ ಎನ್ನವು ಭ್ರಮೆಯನ್ನು ಹದಿಹರೆಯದವರಲ್ಲಿ ತುಂಬಿವೆ. ಇದರಿಂದ ಭಿನ್ನ ಲಿಂಗದ ಸಮಾನ ವಯಸ್ಸಿನವರು ತಮ್ಮ ಜೊತೆ ಮಾತನಾಡುವುದಿರಲಿ, ಬರೀ ಒಮ್ಮೆ ಕಣ್ಣು ಹೊರಳಿಸಿದರೆ ಸಾಕು, ಇದು ಪ್ರೀತಿಯ ಅಭಿವ್ಯಕ್ತಿ ಎಂದು ತಿಳಿದು ಅವರು ರೋಮಾಂಚನಗೊಳ್ಳುವ ಸಾಧ್ಯತೆಗಳಿವೆ. ಇದನ್ನು ನಮ್ಮಂತವರ ಹದಿಹರೆಯದ ಅನುಭವದಿಂದಲೇ ಹೇಳುತ್ತಿದ್ದೇನೆ! ಪ್ರಥಮ ನೋಟದಲ್ಲಿ ಸಾಧ್ಯವಾಗುವುದು ಬರೀ ಆಕರ್ಷಣೆ, ಹೆಚ್ಚಿನ ಸಮಯದಲ್ಲಿ ದೈಹಿಕ ಆಕರ್ಷಣೆ ಮಾತ್ರ. ಗಂಡು ಹೆಣ್ಣುಗಳ ನಡುವಿನ ಪ್ರೀತಿಯನ್ನು ನಿಜಜೀವನದಲ್ಲಿ ಇಷ್ಟು ಸರಳಿಕರಿಸುವುದು ಸಾಧ್ಯವಿಲ್ಲ. ಇದಕ್ಕೆ ಬಹಳ ಕಾಲದ ಒಡನಾಟದ ಅಗತ್ಯವಿರುತ್ತದೆ. ಇದರ ಅರಿವನ್ನು ಮಕ್ಕಳ ಬೆಳವಣಿಗೆಯ ಹಂತದಲ್ಲೇ ಮೂಡಿಸಬೇಕು.
3. ಪ್ರೇಮ ಗೊತ್ತಿಲ್ಲದಂತೆಯೇ ಆಗಿಬಿಡುತ್ತದೆ ಎಂದು ನಮ್ಮ ಸಿನಿಮಾ ಸಾಹಿತಿಗಳು ಸಾವಿರಾರು ಹಾಡುಗಳನ್ನು ಬರೆದಿದ್ದಾರೆ. ಇದು ಹದಿವಯಸ್ಸಿನವರಿಗೆ ಬಹಳ ಖುಷಿಕೊಟ್ಟು ತಮ್ಮ ಬಾಲೀಷ ಪ್ರೇಮವನ್ನು ಸಮರ್ಥಿಸಿಕೊಳ್ಳಲು ಸಹಾಯಮಾಡುತ್ತದೆ. ನಿದ್ದೆಯಲ್ಲಿ ಮಾತ್ರ ಪ್ರೇಮ ಗೊತ್ತಿಲ್ಲದೆ ಆಗಲು ಸಾಧ್ಯ! ಈ ವಯಸ್ಸಿನವರಿಗೆ ತಮ್ಮ ದೂರಗಾಮೀ ಗುರಿಗಳ ಬಗೆಗೆ ಖಚಿತತೆ, ನಿಷ್ಠೆ, ಅದನ್ನು ಬೆನ್ನುಹತ್ತುವ ಮನಸ್ಥಿತಿ, ಇವೆಲ್ಲಾ ಇಲ್ಲದಿದ್ದಾಗ ಇಂತಹ ತಾತ್ಕಾಲಿಕವಾದ ರೋಮಾಂಚನಗಳನ್ನು ಅರಸುತ್ತಾರೆ. ಹಾಗಾಗಿ ಮಕ್ಕಳಿಗೆ ಒಂದು ದೂರಗಾಮಿ ಗುರಿಯ ಬೆನ್ನು ಹತ್ತುವ ಪರಿಪಾಟ ಬೆಳೆಸಬೇಕು. ಪ್ರೇಮ, ಕಾಮಗಳಿಗೆ ಜೀವನದಲ್ಲಿ ಸಾಕಷ್ಟು ಸಮಯವಿರುವುದರಿಂದ, ಸಧ್ಯಕ್ಕೆ ವಿದ್ಯಾಭ್ಯಾಸದ ಬಗೆಗೆ ಮನಸ್ಸನ್ನು ಏಕಾಗ್ರಗೊಳಿಸಿ ಜೀವನವನ್ನೂ ರೂಪಿಸಿಕೊಳ್ಳಲು ಪ್ರೇರೇಪಿಸಬೇಕು.
4. ವಾಸ್ತವ ಪ್ರಪಂಚದ ಕಠೋರತೆಯಿಂದ ಮಕ್ಕಳನ್ನು ದೂರವಿಟ್ಟು ಸುಖವಾಗಿ ಬೆಳೆಸಿದರೆ ಅವರು ದಾರಿ ತಪ್ಪುವುದಿಲ್ಲ ಎನ್ನುವುದು ತಪ್ಪು ಭಾವನೆ. ನಮ್ಮ ಪರಿಸರದಲ್ಲಿ ನಡೆಯುವ ಎಲ್ಲಾ ಘಟನೆಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಅವರನ್ನು ಮುಂದಿನ ಜೀವನಕ್ಕೆ ಸಿದ್ಧಗೊಳಿಸಬೇಕು. ಇಲ್ಲಿರುವ ಒಳ್ಳೆಯದನ್ನು ಅನುಭವಿಸುವುದರ ಜೊತೆಗೆ ಕೆಟ್ಟದ್ದನ್ನು ನಿಭಾಯಿಸುವ ಶಕ್ತಿ ಇದ್ದರೆ ಮಾತ್ರ ಅವರ ಜೀವನ ಸಮರಸದಲ್ಲಿ ಸಾಗುವುದು ಸಾಧ್ಯ.
5. ಮಕ್ಕಳು ಮನೆಯಲ್ಲಿ ಸಹಜವಾಗಿ ಮಾತನಾಡುವ ಮತ್ತು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ವಾತಾವರಣವಿರಬೇಕು. ಆಗ ಅವರೊಳಗೆ ನಡೆಯುತ್ತಿರುವ ಕಸಿವಿಸಿ, ಧ್ವಂಧ್ವಗಳೆಲ್ಲಾ ಹೊರಬರುತ್ತದೆ. ಹೆಚ್ಚಿನ ಪೋಷಕರು ಅವರ ಮಾತುಗಳನ್ನು ಕಡೆಗಣಿಸಿ, ಇಲ್ಲವೆ ಅವರನ್ನು ದಬಾಯಿಸಿ, ಬುದ್ಧಿಹೇಳಿ ಬಾಯಿ ಮುಚ್ಚಿಸುತ್ತಾರೆ. ಅಥವಾ ಅವರನ್ನು ಯಾವಾಗಲೂ ಅನುಮಾನಿಸುತ್ತಾ, ಚುಚ್ಚು ಮಾತುಗಳನ್ನಾಡುತ್ತಾ, ಹಿಂದಿನಿಂದ ಜಾಸೂಸಿ ಮಾಡುತ್ತಾ, ಅವರಿವರ ಮೂಲಕ ವಿಷಯ ಸಂಗ್ರಹಿಸುತ್ತಾ ಮಕ್ಕಳ ಸಿಟ್ಟನ್ನು ಹೆಚ್ಚು ಮಾಡುತ್ತಾರೆ. ಇದರಿಂದ ಭಾವನೆಗಳನ್ನು ಹೊರಹಾಕಲು ಮಕ್ಕಳು ಮನೆಯಿಂದ ಹೊರಗಡೆ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ. ಪೋಷಕರು ಪರಕೀಯರಾಗುತ್ತಾರೆ.
6. ಹದಿಹರೆಯದ ಮಕ್ಕಳ ವರ್ತನೆಯನ್ನು ಪೋಷಕರು ಗಮನಿಸುತ್ತಿರಬೇಕು. ತಮಗೆ ಸರಿಯೆನಿಸದ ವಿಚಾರಗಳಿದ್ದರೆ ನೇರವಾಗಿ ಮಕ್ಕಳ ಜೊತೆ ಮಾತನಾಡಬೇಕು. ಇದಕ್ಕೆ ಯಾವುದೇ ಅಡ್ಡದಾರಿಗಳನ್ನು ಬಳಸಬಾರದು.
ವೈವಾಹಿಕ ಶಿಕ್ಷಣದ ಅಗತ್ಯ
ವೈವಾಹಿಕ ಶಿಕ್ಷಣ ಎನ್ನುವುದು ಲೈಂಗಿಕ ಶಿಕ್ಷಣದ ಮತ್ತೊಂದು ಹೆಸರಷ್ಟೇ. ಈ ವಿಚಾರದಲ್ಲೂ ಕೂಡ ನಮ್ಮ ಪೋಷಕ ವರ್ಗ ಇವತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗಿಲ್ಲ. “ತಮ್ಮ ಕಾಲದಲ್ಲಿ ಇವೆಲ್ಲಾ ಇರಲಿಲ್ಲ, ಹಾಗಾಗಿ ಈಗಲೂ ಇದು ಅನಗತ್ಯ” ಎನ್ನುವುದು ಹೆಚ್ಚಿನವರ ವಾದ. ಇವತ್ತಿನ ಮಕ್ಕಳಿಗೆ ವಿಕೃತ ಲೈಂಗಿಕ ಮಾಹಿತಿಗಳು ಮತ್ತು ಹದಿವಯಸ್ಸಿನ ಲೈಂಗಿಕ ಸಾಹಸಕ್ಕೆ ಅವಕಾಶಗಳು ವಿಫುಲವಾಗಿ ಸಿಗುತ್ತಿವೆ. ನಮ್ಮ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವಿಲ್ಲ, ಮನೆಯಲ್ಲಿ ಪೋಷಕರು ಇದರ ಬಗೆಗೆ ಮಕ್ಕಳೊಡನೆ ಮಾತನಾಡಲು ಮುಜುಗರಗೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ತಮಗೆ ಸ್ನೇಹಿತರಿಂದ, ಅಂತರ್ಜಾಲದಲ್ಲಿ, ಪುಸ್ತಕಗಳಲ್ಲಿ ದೊರೆಯುವ ತಪ್ಪು ಮಾಹಿತಿಗಳನ್ನು ನಂಬಿಕೊಂಡರೆ ಅದಕ್ಕೆ ಅವರನ್ನು ದೂಷಿಸಲಾಗುವುದಿಲ್ಲ. ಆದರೆ ಮಕ್ಕಳಿಗೆ ಯಾವ ಶಿಕ್ಷಣವನ್ನೂ ಕೊಡದ ಪೋಷಕರು ಮಾತ್ರ ಎಲ್ಲದಕ್ಕೂ ಮಕ್ಕಳನ್ನೇ ಹೊಣೆಗಾರರಾಗಿಸುತ್ತಾರೆ.
ಲೈಂಗಿಕ ಶಿಕ್ಷಣ ಎಂದರೆ ಲೈಂಗಿಕ ಕ್ರಿಯೆಯ ವಿವರಣೆ ನೀಡುವುದು ಮಾತ್ರ ಎನ್ನುವುದು ಹೆಚ್ಚಿನವರ ತಪ್ಪು ತಿಳುವಳಿಕೆ. ಮಾನವನ ಲೈಂಗಿಕತೆಗೆ ಹಲವಾರು ಮುಖಗಳಿವೆ. ಲೈಂಗಿಕ ಅಂಗಾಂಗಳ ರಚನೆ, ಅವು ಕೆಲಸ ಮಾಡುವ ರೀತಿ, ಮಕ್ಕಳ ಬೆಳವಣಿಗೆಯ ಹಂತಗಳು, ಸಂತಾನೋತ್ಪತ್ತಿಯ ಕ್ರಿಯೆ, ಲೈಂಗಿಕ ರೋಗಗಳು ಮತ್ತು ಶುಚಿತ್ವ ಹೀಗೆ ಹತ್ತು ಹಲವು ವಿಚಾರಗಳನ್ನು ಮಕ್ಕಳಿಗೆ ವೈಜ್ಞಾನಿಕ ನೆಲೆಯಲ್ಲಿ ಹೇಳುವ ಅಗತ್ಯವಿರುತ್ತದೆ. ತೀರಾ ಪ್ರಮುಖವಾಗಿ ಮಾನವನ ಲೈಂಗಿಕತೆ ಬರೀ ದೈಹಿಕ ಅಗತ್ಯಗಳಿಗಾಗಿ ಮಾತ್ರ ರೂಪಿತವಾಗಿಲ್ಲ, ಇದು ಅವನ ಮಾನಸಿಕ, ಭಾವನಾತ್ಮಕ ಅಗತ್ಯಗಳನ್ನು ಪೂರೈಸಬೇಕು, ಎನ್ನುವುದನ್ನು ಮಕ್ಕಳಿಗೆ ತಿಳಿಸಬೇಕು. ಹದಿವಯಸ್ಸಿನಲ್ಲಿ ಮೂಡಬಹುದಾದ ಸಹಜ ಆಕರ್ಷಣೆಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದನ್ನು ಕಲಿಸಬೇಕು. ದೀರ್ಘಕಾಲೀನ ಆರೋಗ್ಯಕರ ಮತ್ತು ತೃಪ್ತಿಕರ ಲೈಂಗಿಕ ಜೀವನಕ್ಕೆ ಬೇಕಾದ ಮಾನಸಿಕ ಸಿದ್ಧತೆಯ ಅರಿವು ಮೂಡಿಸಬೇಕು.
ಇವೆಲ್ಲಾ ಸ್ವಲ್ಪ ಕಷ್ಟದ ಕೆಲಸ. ಇವತ್ತಿನ ಪೋಷಕರಿಗೂ ಕೂಡ ಇಂತಹ ಯಾವುದೇ ಶಿಕ್ಷಣ ದೊರೆತಿಲ್ಲ ಎನ್ನವುದು ಅವರ ಕಷ್ಟವನ್ನು ಹೆಚ್ಚುಸುತ್ತದೆ. ಹಾಗಾಗಿ ಅವರೇ ಮೊದಲು ಲೈಂಗಿಕ ಶಿಕ್ಷಣ ಪಡೆದುಕೊಳ್ಳಬೇಕಾಗಬಹುದು. ಇವತ್ತಿನ ಮುಕ್ತ ಮಾಹಿತಿಯ ಯುಗದಲ್ಲಿ ಇದು ಕಷ್ಟವೇನಲ್ಲ. ಒಳ್ಳೆಯ ಪುಸ್ತಕಗಳು ಅಥವಾ ಅಂತರ್ಜಾಲದಲ್ಲಿ ವೈಜ್ಞಾನಿಕ ಮಾಹಿತಿಗಳು ಸಿಗುತ್ತವೆ. ಇವುಗಳನ್ನು ಆಧರಿಸಿ ತಮ್ಮ ಪ್ರಯತ್ನ ಆರಂಭಿಸಬಹುದು. ಕೊನೆಯ ಪಕ್ಷ ಮಕ್ಕಳ ಹದಿನೈದನೆಯ ಹುಟ್ಟುಹಬ್ಬಕ್ಕೆ ವೈಜ್ಞಾನಿಕ ಮಾಹಿತಗಳುಳ್ಳ ಒಂದು ಪುಸ್ತಕವನ್ನು ಉಡುಗರೆಯಾಗಿ ನೀಡಿದರೆ ಅವರ ಭಾವೀ ಜೀವನಕ್ಕೆ ದೊಡ್ಡ ಕೊಡುಗೆಯಾಗುತ್ತದೆ.
ಎಲ್ಲಾ ತಿಳಿದ ಮಕ್ಕಳು ದಾರಿತಪ್ಪುತ್ತಾರೆ ಎಂದುಕೊಳ್ಳಬೇಕಿಲ್ಲ. ಸಮೀಕ್ಷೆಗಳು ಪ್ರಕಾರ ಲೈಂಗಿಕ ಶಿಕ್ಷಣ ಪಡೆದ ಮಕ್ಕಳು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಹದಿಯಸ್ಸಿನ ಆಕರ್ಷಣೆಯನ್ನು ಸಹಜವಾಗಿ ಒಪ್ಪಿಕೊಂಡು ಆನಂದಿಸಿದರೂ, ಅದನ್ನೇ ದೀರ್ಘಕಾಲ ಬಾಳಬಲ್ಲ ಪ್ರೇಮ ಎನ್ನವು ಭ್ರಮೆಗಳಿಂದ ಹೊರಬರುತ್ತಾರೆ. ಇದು ಮುಂದೆ ಬರಬಹುದಾದ ಸಾಕಷ್ಟು ಸಮಸ್ಯೆಗಳನ್ನು ತಪ್ಪಿಸಬಲ್ಲದು.
ಮುಗಿಯಿತು.
ವಸಂತ್ ನಡಹಳ್ಳಿ
ಗ್ರಾಮ ಸ್ವಚ್ಛತೆಗೆ ಆದ್ಯತೆ
ಶೌಚಾಲಯ ನಿರ್ಮಾಣ, ಚರಂಡಿ ಸ್ವಚ್ಛತೆ, ಗ್ರಾಮ ಸ್ವಚ್ಛತೆ ಹಾಗೂ ಇಂಗುಗುಂಡಿ ನಿರ್ಮಾಣ ಕುರಿತಂತೆ ಜಾಗೃತಿಯನ್ನು ಪ್ರತಿ ಹಳ್ಳಿಗಳಲ್ಲೂ ನಡೆಸಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಶಿಲೇಮಾಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಂಡಿಗನಾಳ ಗ್ರಾಮ ಪಂಚಾಯತಿಯ ವತಿಯಿಂದ ನಡೆಸಿದ ‘ರೋಜ್ಗಾರ್ ದಿವಸ್ ಆಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯದೊಂದಿಗೆ ಜಲಮರುಪೂರಣ ಘಟಕದ ಸೌಲಭ್ಯವನ್ನು ಹೊಂದಬಹುದಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಗ್ರಾಮಗಳಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಿಲೇಮಾಕನಹಳ್ಳಿ ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸಲು ಉಳಿದಿರುವ 17 ಶೌಚಾಲಯಗಳನ್ನು ನಿರ್ಮಿಸಲು ಗ್ರಾಮಸ್ಥರನ್ನು ಒಪ್ಪಿಸಲಾಯಿತು.
ಗ್ರಾಮ ಪಂಚಾಯತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಶ್ರೀನಿವಾಸ್, ಮುನಿರಾಜು, ಶಿಕ್ಷಕ ಷಾನವಾಜ್, ಅಂಗನವಾಡಿ ಶಿಕ್ಷಕಿ ಅಂಬುಜಮ್ಮ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿವೇತನ ಪ್ರಕ್ರಿಯೆ ಆನ್ ಲೈನ್ನಲ್ಲಿ
2016–17 ನೇ ಸಾಲಿನ ಶೈಕ್ಷಣಿಕ ಅವಧಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದೆ ಎಂದು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಿ.ಆರ್.ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಅನುಕೂಲ ಲಭ್ಯವಾಗಲಿದೆ. ತಾಲ್ಲೂಕಿನ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ನಿಗದಿತ ದಾಖಲೆಗಳೊಂದಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ನೀಡಲು ಸೂಚಿಸಲಾಗಿದೆ. ಪೋಷಕರು ಸಹಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ದಾಖಲಾತಿ ಸಮಯದಲ್ಲಿ ಮುಖ್ಯಶಿಕ್ಷಕರು ನೀಡಬೇಕೆಂದು ತಿಳಿಸಿದ್ದಾರೆ.
‘ಸಾಧಕರ ಸಾಧನೆ – ವಿದ್ಯಾರ್ಥಿಗಳಿಗೆ ಪ್ರೇರಣೆ’
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಸ್ನೇಕ್ ನಾಗರಾಜ್ ಅವರನ್ನು ಭಾನುವಾರ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕು ಕ.ಸಾಪ, ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್, ಪಿ.ಯು ಕಾಲೇಜ್ ಮತ್ತು ದಿ ಕ್ರೆಸೆಂಟ್ ಸ್ಕೂಲ್ ಸಹಯೋಗದಲ್ಲಿ ನಡೆಸಲಾದ ‘ಸಾಧಕರ ಸಾಧನೆ – ವಿದ್ಯಾರ್ಥಿಗಳಿಗೆ ಪ್ರೇರಣೆ’ ಎಂಬ ಕಾರ್ಯಕ್ರಮದಲ್ಲಿ ಅವರ ಪರಿಸರ ಕಾಳಜಿ ಮತ್ತು ಪ್ರಾಣಿ ಪಕ್ಷಿಗಳ ಸಂರಕ್ಷಣೆಗೆ ಸನ್ಮಾನಿಸಲಾಯಿತು. ವಿಜ್ಞಾನ ಲೇಖಕ ನಾಗೇಶ ಹೆಗಡೆ, ಪರಿಸರ ವಿಜ್ಞಾನಿ ಹರೀಶ ಆರ್ ಭಟ್, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಅನಂತಕೃಷ್ಣ, ಬಿ.ಜಿ.ಎಸ್ ಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ, ಎಸ್.ಸತೀಶ್ ಹಾಜರಿದ್ದರು.
ಹಿಂದು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗುರುಗಳ ಸಮ್ಮುಖದಲ್ಲಿ ಇಫ್ತಿಯಾರ್ ಕೂಟ
ಹಿಂದು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗುರುಗಳ ಸಮ್ಮುಖದಲ್ಲಿ ಭಾನುವಾರ ಸಂಜೆ ನಗರದಲ್ಲಿ ಇಫ್ತಿಯಾರ್ ಕೂಟವನ್ನು ಆಯೋಜಿಸಿ ಧರ್ಮ ಸಮನ್ವಯತೆಯನ್ನು ಸಾರಲಾಯಿತು.
ನಗರದ ಎರಡನೇ ಟಿ.ಎಂ.ಸಿ ಲೇಔಟ್, ಹೊಸ ಕೋರ್ಟ್ ಹಿಂಭಾಗದಲ್ಲಿರುವ ಬಿ.ಎಸ್.ಎಂ. ಶಾದಿಮಹಲ್ನಲ್ಲಿ ಟಿಪ್ಪು ಸುಲ್ತಾನ್ ಟ್ರಸ್ಟ್ ಮತ್ತು ಬಾಮ್ ಸೇಫ್ ಸಂಯುಕ್ತಾಶ್ರಯದಲ್ಲಿ ನಡೆದ ಪವಿತ್ರ ರಂಜಾನ್ ಮಾಸದ ಇಫ್ತಿಯಾರ್ ಭೋಜನ ಕೂಟದಲ್ಲಿ ಮೌಲಾನಾ ಉಮ್ಮರ್ ಫಾರೂಖ್ ಸಾಬ್ ರಷೀದ್, ವಿಜಯಪುರದ ಬಸವ ಮಠದ ಮಹದೇವ ಸ್ವಾಮಿಗಳು ಮತ್ತು ಏಸು ನವಜೀವನ ನಿಲಯದ ಫಾದರ್ ಎಚ್.ಎಸ್.ಪ್ರಕಾಶ್ ಭಾಗವಹಿಸಿ ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದೆ. ಆದರೆ ಆಚರಣೆಯ ರೀತಿ ನೀತಿಗಳು ಬೇರೆಯಷ್ಟೆ. ನಾವೆಲ್ಲರೂ ಮನುಜರು ಎಂಬುದನ್ನು ಮೊದಲು ಮನಗಂಡರೆ ಧ್ವೇಷ, ಅಸೂಯೆ, ಮೇಲು ಕೀಳು ಭಾವನೆಗಳು ಇರುವುದಿಲ್ಲ. ಈಗಿನ ಯುವಕರಲ್ಲಿ ಸಾಮರಸ್ಯದ ಬಗ್ಗೆ ಜಾಗೃತಿ ಮೂಡುತ್ತಿದ್ದು ಅವರು ಈ ರೀತಿಯ ಸರ್ವಧರ್ಮ ಸಮನ್ವಯತೆಯ ಕಾರ್ಯಕ್ರಮವನ್ನು ಆಯೋಜಿಸಿ ಇತರರಿಗೆ ಮಾದರಿಯಾಗಿದ್ದಾರೆ. ಬಡವರಿಗೆ ಆಹಾರ ನೀಡುತ್ತಾ, ಎಲ್ಲಾ ಧರ್ಮಗುರುಗಳಿಂದ ಆಶೀರ್ವಾದ ಪಡೆಯುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ಇದು ನಿಜಕ್ಕೂ ಅನುಕರಣೀಯ ವಿಚಾರ’ ಎಂದು ಶ್ಲಾಘಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಧನಂಜಯರೆಡ್ಡಿ, ನಗರ ಸಭೆ ಸದಸ್ಯ ಅಫ್ಸರ್ಪಾಷ, ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುನಿಕೆಂಪಣ್ಣ, ಪ್ರತೀಶ್, ಯಾಕುಬ್ ಶರೀಫ್, ನಯೀಮ್ಪಾಷ, ಮಹಬೂಬ್ಪಾಷ, ಎಂ.ಡಿ.ಸಾದಿಕ್, ಬಾಬಾ, ಹುಸೇನ್ಪಾಷ, ಅಲ್ಲಾಬಕಾಶ್, ಸಾದಿಕ್ಪಾಷ, ಫಾರುಕ್, ಮೌಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಾದಯಾತ್ರೆ ಹೊರಟವರಿಗೆ ಸಿಗುತ್ತಿರುವ ಮಾನವೀಯ ದರ್ಶನ
ವಾಹನಗಳ ಭರಾಟೆಯಲ್ಲಿ ನಡೆಯುವ ಅಭ್ಯಾಸವನ್ನು ಕಳೆದುಕೊಂಡಿರುವ ಬಹುತೇಕರಲ್ಲಿ ನಡಿಗೆಯು ಬೆಳಗಿನ ವಾಯುವಿಹಾರಕ್ಕೆ ಸೀಮಿತಗೊಂಡಿರುವ ಸಂದರ್ಭದಲ್ಲಿ ನಗರಕ್ಕೆ ಆಂಧ್ರದ ಕಡೆಯಿಂದ ಆಗಮಿಸಿದ್ದ ಇಬ್ಬರು ಪಾದಯಾತ್ರಿಗರು ಅಚ್ಚರಿಯನ್ನುಂಟು ಮಾಡಿದ್ದಾರೆ.
ಸೋಮವಾರ ತಾಲ್ಲೂಕಿನ ದಿಬ್ಬೂರಹಳ್ಳಿ ಕಡೆಯಿಂದ ನಡೆದು ಬಂದ ಇಬ್ಬರು ಪಾದಯಾತ್ರಿಗಳು ಭಾರತದ ದಕ್ಷಿಣ ತುದಿಯಲ್ಲಿರುವ ರಾಮೇಶ್ವರಮ್ಗೆ ನಡೆದು ಹೋಗುತ್ತಿರುವುದನ್ನು ತಿಳಿದು ಕೆಲವರು ಬೆರಗುಗೊಂಡರು.
ಆಂದ್ರದ ಅನಂತಪುರ ಜಿಲ್ಲೆಯ ಗುಂತಕಲ್ನ ಅರ್ಚಕ ಶಿಲಾಮಠ ರಾಜಶೇಖರ ಸ್ವಾಮಿ ಮತ್ತು ವಾಹನ ಚಾಲಕ ವೃತ್ತಿಯ ವೆಂಕಟೇಶ್ ಆರು ದಿನಗಳ ಹಿಂದೆ ಗುಂತಕಲ್ನಿಂದ ಹೊರಟಿದ್ದು, ಸೋಮವಾರ ಶಿಡ್ಲಘಟ್ಟವನ್ನು ಹಾದು ಹೋದರು. ಪ್ರತಿದಿನ ಗರಿಷ್ಠ 45 ಕಿ.ಮೀ ದೂರ ನಡೆದುಕೊಂದು ಹೋಗುವ ಇವರು ಇಪ್ಪತ್ತು ದಿನಗಳಲ್ಲಿ ರಾಮೇಶ್ವರಮ್ ತಲುಪುವ ಗುರಿಯನ್ನು ಹೊಂದಿದ್ದಾರೆ. ಭಾನುವಾರ ರಾತ್ರಿ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ತಂಗಿದ್ದ ಇವರಿಬ್ಬರು ಶಿಡ್ಲಘಟ್ಟದ ಮೂಲಕ ಹಾದು ಜಂಗಮಕೋಟೆಯಲ್ಲಿ ರಾತ್ರಿ ತಂಗಿದ್ದು ನಂತರ ಮಾಲೂರಿನ ಮೂಲಕ ತಮಿಳುನಾಡನ್ನು ಸೇರಿ ನಂತರ ಕಟ್ಟಕಡೆಯದಾಗಿ ರಾಮೇಶ್ವರಮ್ ತಲುಪಲಿದ್ದಾರೆ.
ತಮ್ಮ ಹಾದಿಯಲ್ಲಿ ವಿವಿಧ ರೀತಿಯ ಜನರ ಮಾನವೀಯ ಮುಖಗಳನ್ನು ಅರಿಯುತ್ತಾ ದಕ್ಷಿಣ ಭಾರತಯಾತ್ರೆ ಕೈಗೊಂಡಿರುವ ಇವರು ಈಗಾಗಲೇ ನಡೆಯುತ್ತಾ ಕಾಶಿ ತಲುಪಿ ಬಂದಿದ್ದಾರೆ. 2014 ರ ಜೂನ್ ತಿಂಗಳಿನಲ್ಲಿ ಪಾದಯಾತ್ರೆ ಹೊರಟು ಸುಮಾರು 43 ದಿನಗಳಲ್ಲಿ ಕಾಶಿ ತಲುಪಿದ್ದ ಇವರು, ಅಲ್ಲಿ ತಂದ ಗಂಗಾಜಲವನ್ನು ಈಗ ರಾಮೇಶ್ವರದಲ್ಲಿ ಅಭಿಷೇಕ ಮಾಡುವ ಮೂಲಕ ಯಾತ್ರೆಯ ಸಂಪೂರ್ಣತೆಯನ್ನು ಸಾಧಿಸುವ ಉದ್ದೇಶವನ್ನು ಹೊಂದಿರುವರು.
ತಮ್ಮ ಮಕ್ಕಳ ಸಹಾಯದಿಂದ ಗೂಗಲ್ ಮ್ಯಾಪ್ ಬಳಸಿ ತಾವು ಹೋಗುವ ಮಾರ್ಗದ ಪ್ರತಿಯೊಂದು ಊರು, ಗ್ರಾಮದ ಹೆಸರುಗಳನ್ನು ಬರೆದಿಟ್ಟುಕೊಂಡಿದ್ದಾರೆ. ತಮ್ಮ ಆಧಾರ್ ಗುರುತು ಚೀಟಿ ತೋರಿಸಿ ತಮ್ಮ ಯಾತ್ರೆಯ ಬಗ್ಗೆ ತಿಳಿಸುತ್ತಾ ತಂಗಲು ಅವಕಾಶವನ್ನು ಕೋರಿ, ಏನೂ ಇಲ್ಲದಿದ್ದರೆ ದೇವಸ್ಥಾನಗಳಲ್ಲಿ ತಂಗುತ್ತಾ ಮುಂದುವರೆದಿದ್ದಾರೆ.
‘ನಮ್ಮ ಪಾದಯಾತ್ರೆಯಲ್ಲಿ ಬಗೆಬಗೆಯ ಜನರು ನಮಗೆ ಸಹಾಯ ಹಸ್ತ ನೀಡಿದ್ದಾರೆ. ನಮ್ಮ ಗುರುತು ಪರಿಚಯವಿರದಿದ್ದರೂ ನಮ್ಮ ಉದ್ದೇಶವನ್ನು ತಿಳಿದೊಡನೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ದಿಬ್ಬೂರಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಾಲಯದ ಮುಂದೆ ತಂಗಿದ್ದಾಗ, ಅಲ್ಲೇ ಮುಂದಿನ ಮನೆಯವರು ನಮ್ಮ ಬಗ್ಗೆ ಕೇಳಿ ತಿಳಿದು ಚಳಿಯಲ್ಲಿ ಹೊರಗೆ ಮಲಗಬೇಡಿ ಎಂದು ತಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಬಿಟ್ಟುಕೊಟ್ಟು ಸಹಾಯ ಮಾಡಿದರು. ಒಳ್ಳೆಯ ಉದ್ದೇಶದಿಂದ ಏನೇ ಮಾಡಿದರೂ ಒಳ್ಳೆಯವರೇ ಸಿಗುತ್ತಾರೆ. ಈ ಯಾತ್ರೆಯ ಉದ್ದೇಶ ರಾಮೇಶ್ವರಮ್ ತಲುಪುವುದಾದರೂ ವಿವಿಧ ಭಾಷೆ, ಧರ್ಮ, ಬಣ್ಣ ಹೊಂದಿರುವ ನಮ್ಮ ದೇಶದ ಜನರ ಮಾನವತ್ವವನ್ನು ಕಂಡು ಅನುಭವಿಸುತ್ತಿದ್ದೇವೆ’ ಎಂದು ಶಿಲಾಮಠ ರಾಜಶೇಖರ ಸ್ವಾಮಿ ತಿಳಿಸಿದರು.
ಮನುಷ್ಯನ ತಪ್ಪುಗಳನ್ನು ನಿಸರ್ಗ ಸರಿಪಡಿಸಲು ಸಾಧ್ಯವಿಲ್ಲ
ಮನುಷ್ಯನ ತಪ್ಪುಗಳನ್ನು ನಿಸರ್ಗ ಸರಿಪಡಿಸಲು ಸಾಧ್ಯವಿಲ್ಲ. ನಮ್ಮ ಭೂಮಿಯನ್ನು ಸತ್ವಯುತಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕಾರ್ಯತತ್ಪರರಾಗಬೇಕು. ಕಸಮುಕ್ತ, ಹಸಿರುಕ್ಕುವ ಪರಿಸರವನ್ನು ಸೃಷ್ಟಿಸಲು ಪ್ರಯತ್ನಿಸಬೇಕು ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ತಿಳಿಸಿದರು.
ನಗರದ ಹನುಮಂತಪುರ ಗೇಟ್ ಬಳಿಯಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ಭಾನುವಾರ ತಾಲ್ಲೂಕು ಕ.ಸಾಪ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್, ಪಿ.ಯು ಕಾಲೇಜ್ ಮತ್ತು ದಿ ಕ್ರೆಸೆಂಟ್ ಸ್ಕೂಲ್ ಸಹಯೋಗದಲ್ಲಿ ನಡೆಸಲಾದ ‘ಸಾಧಕರ ಸಾಧನೆ – ವಿದ್ಯಾರ್ಥಿಗಳಿಗೆ ಪ್ರೇರಣೆ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ಒಣ ಪ್ರಳಯ, ಘನ ಪ್ರಳಯ, ಜಲ ಪ್ರಳಯ, ಹೊಗೆ ಪ್ರಳಯ, ಅಗ್ನಿ ಪ್ರಳಯ, ಧೂಳು ಪ್ರಳಯ, ಕಸ ಪ್ರಳಯ ಭೂಮಿಯನ್ನು ಬಾಧಿಸುತ್ತಿದೆ. ಅದನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎಲ್ಲೆಡೆ ಆಲೋಚನೆಗಳು ಬರಬೇಕಿವೆ. ಭವಿಷ್ಯದ ಇಂಧನ ಮೂಲಗಳಾದ ಸೂರ್ಯ, ಗಾಳಿ, ಸಸ್ಯ, ಸಮುದ್ರದ ಅಲೆಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯುತ್ತಿದ್ದು, ಅದರಿಂದ ಭೂಮಿಯನ್ನು ಆದಷ್ಟು ಉಳಿಸಿಕೊಳ್ಳಬೇಕು. ಕಸದ ಬಗ್ಗೆ ನಾವು ಜವಾಬ್ದಾರಿಯುತರಾಗದಿದ್ದಲ್ಲಿ ನಮ್ಮ ಮಣ್ಣು, ಗಾಳಿ ಭವಿಷ್ಯಕ್ಕೆ ಶುದ್ಧ ರೂಪದಲ್ಲಿ ಉಳಿಯದು ಎಂದು ವಿವಿಧ ಚಿತ್ರ ಹಾಗೂ ವೀಡಿಯೋ ಮೂಲಕ ವಿವರಿಸಿದರು.
ಪರಿಸರ ವಿಜ್ಞಾನಿ ಹರೀಶ ಆರ್ ಭಟ್, ‘ಪ್ರಕೃತಿಯ ವಿಸ್ಮಯಗಳು’ ಎಂಬ ವಿಷಯದ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ಮಾತನಾಡಿ, ಇರುವೆಯ ಮಿದುಳಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸೊಳ್ಳೆಯಿಂದ ಸೂಜಿಯನ್ನು, ಮುಳ್ಳುಹಂದಿಯಿಂದ ಶಸ್ತ್ರಚಿಕಿತ್ಸೆಗೆ ಬಳಸುವ ಸೂಜಿಯನ್ನು, ತಾವರೆ ಎಲೆಯಿಂದ ತೆಪ್ಪವನ್ನು, ಜೇನು ಗೂಡಿನಿಂದ ಟೈರ್ ಮತ್ತು ಶೀಥಲೀಕರಣ ಘಟಕ, ಗೂಬೆಯಿಂದ ಶಬ್ಧವಿಲ್ಲದ ಫ್ಯಾನ್, ಜೇಡನಿಂದ ಗುಂಡು ನಿರೋಧಕ ಜಾಕೆಟ್, ಆಕ್ಟೋಪಸ್ ನಿಂದ ಜೆಸಿಬಿ, ಹೀಗೆ ಪ್ರಕೃತಿಯ ವಿಸ್ಮಯಗಳಿಂದ ಮಾನವ ಕಲಿಯುತ್ತಲೇ ಬಂದಿದ್ದಾನೆ. ಸೂಜಿಯ ಮೊನೆಯಷ್ಟು ಚಿಕ್ಕದಾದ ಇರುವೆಯ ಮಿದುಳು ಎಂಟು ಕಂಪ್ಯೂಟರ್ಗಳಿಗೆ ಸಮನಾಗಿದೆ ಎಂದು ವಿವರಿಸಿದರು.
ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕೊತ್ತನೂರು ಸ್ನೇಕ್ ನಾಗರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಾನವಿ ಮತ್ತು ತಂಡದವರು ಪರಿಸರ ಗೀತೆಗಳನ್ನು ಹಾಡಿದರು. ಕೋಲಾರ ರವಿಕುಮಾರ ನೀರಿನ ಬಗ್ಗೆ ಗೀತೆಗಳನ್ನು ಹಾಡಿದರು. ಬಿ.ಜಿ.ಎಸ್ ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ವೈಜ್ಞಾನಿಕ ಚಿತ್ರಣಗಳನ್ನು ಪ್ರದರ್ಶಿಸಿಡಲಾಗಿತ್ತು. ಕ.ಸಾ.ಪ ಗೆ 15 ಸಾವಿರ ರೂಗಳ ದತ್ತಿ ಹಣವನ್ನು ನೀಡಿದ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅನ್ಯಗ್ರಹ ಜೀವಿಗಳು, ಬ್ಯಾಕ್ಟೀರಿಯಾ, ರೋಬೋಟ್, ಪ್ಲಾಸ್ಟಿಕ್ ಬಳಕೆ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಾಗೇಶ ಹೆಗಡೆ ಮತ್ತು ಹರೀಶ ಆರ್ ಭಟ್ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಬಿ.ಜಿ.ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಬಾಟಲ್ಗಳನ್ನು ನೀಡಲಾಯಿತು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಅನಂತಕೃಷ್ಣ, ಬಿ.ಜಿ.ಎಸ್ ಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ, ತಾಲ್ಲೂಕು ಕ.ಸಾ.ಪ ಉಪಾಧ್ಯಕ್ಷ ಸಿ.ಪಿ.ಈ ಕರಗಪ್ಪ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್.ಸತೀಶ್, ಎಸ್.ವಿ.ನಾಗರಾಜರಾವ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಕಲಾಧರ್, ಶಶಿಕುಮಾರ್ , ಬಿ.ಜಿ.ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಲ್ಲೂಕಿನ ವಿವಿದೆಡೆ ವಿದ್ಯುತ್ ಸ್ಥಗಿತ
ಪವರ್ಗ್ರಿಡ್ ಕಾರ್ಪರೇಷನ್ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಸೇಲಂನಿಂದ ಮಧುಗಿರಿಯ ವರೆಗೂ ೭೬೫ ಕೆವಿ ವಿದ್ಯುತ್ ಮಾರ್ಗವನ್ನು ಅಳವಡಿಸುತ್ತಿದ್ದು ತಾಲ್ಲೂಕಿನ ನಾಗಮಂಗಲ, ಕಾಚಹಳ್ಳಿ, ಭಕ್ತರಹಳ್ಳಿ ಮುಖಾಂತರ ಸದರಿ ಮಾರ್ಗವು ಹಾದು ಹೋಗುವದರಿಂದ ಎಫ್-೧ ಯಣ್ಣಂಗೂರು, ಎಫ್-೨ ಹೊಸಪೇಟೆ, ಎಫ್-೪ ನಾಗಮಂಗಲ, ಎಫ್-೪ ಭಕ್ತರಹಳ್ಳಿ, ಎಫ್-೫ ಎನ್ಜೆವೈ ಮಾರ್ಗ ವ್ಯಾಪ್ತಿಯ ಗ್ರಾಮಗಳಿಗೆ ಜೂನ್ ೨6 ರಿಂದ ಜೂನ್ 30 ರವರೆಗೂ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ.ಬೈರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂದಿ ಗಿರಿಧಾಮದಲ್ಲಿ ಮುಂಜಾನೆಯ ಮಂಜು
ನಂದಿ ಗಿರಿಧಾಮದಲ್ಲಿ ಮುಂಜಾನೆಯ ಮಂಜನ್ನು ಆಸ್ವಾದಿಸಲು ಪ್ರವಾಸಿಗರ ದಂಡೇ ಬೆಳಗಿನ ಜಾವದಲ್ಲಿ ಆಗಮಿಸುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವ ಜೋಡಿ ಮಂಜನ್ನು ಕೈಬೀಸಿ ಸ್ವಾಗತಿಸುತ್ತಿರುವಂತಿದೆ.
ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡುವಲ್ಲಿ ಪಿ.ಡಿ.ಓ ಗಳು ಕಾರ್ಯಪ್ರವೃತ್ತರಾಗಿ
ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣ ಮಾಡುವ ಮೂಲಕ ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡುವಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಶನಿವಾರ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಪಿ.ಡಿ.ಓ.ಗಳಿಗೆ ಆಯೋಜನೆ ಮಾಡಲಾಗಿದ್ದ ಸ್ಯಾಟ್ಕಾಂ ತರಬೇತಿಯಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುಧಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವಂತಹ ಹೊಣೆಗಾರಿಕೆ ಪಂಚಾಯತಿಗಳ ಅಧಿಕಾರಿಗಳ ಮೇಲಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಸಿಗುವಂತಹ ಎಲ್ಲಾ ತರಬೇತಿಗಳಲ್ಲಿ ಸಿಗುವಂತಹ ಮಾರ್ಗದರ್ಶನವನ್ನು ಪಡೆದುಕೊಂಡು ತಮ್ಮಲ್ಲಿರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು. ನರೇಗಾ ಯೋಜನೆಯಡಿಯಲ್ಲಿ ಮಾಡುವಂತಹ ಕಾಮಗಾರಿಗಳಿಗೆ ಅನುಸರಿಸಬೇಕಾದಂತಹ ಮಾನದಂಡಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಇಂತಹ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು.
ಸಂಜೀವಿನಿ ಯೋಜನೆಯಡಿಯಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಮೂಲಕ ಸಬಲೀಕರಣಕ್ಕೆ ಆದ್ಯತೆಯನ್ನು ನೀಡುವುದು, ಸುತ್ತುನಿಧಿ ವಿತರಣೆ ಮಾಡುವುದರ ಬಗ್ಗೆ ತರಬೇತಿಯಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದರು.
ನರೇಗಾ ಯೋಜನೆಯ ಯೋಜನಾ ನಿರ್ದೇಶಕ ಶ್ರೀನಾಥ್ಗೌಡ ಮಾತನಾಡಿ, ಇಂತಹ ತರಬೇತಿಗಳು, ಸ್ಥಳೀಯ ಅಧಿಕಾರಿಗಳಲ್ಲಿ ಇರುವಂತಹ ಗೊಂದಲಗಳನ್ನು ನಿವಾರಣೆ ಮಾಡುವುದರ ಜೊತೆಗೆ ಅಭಿವೃದ್ಧಿಗಾಗಿ ಕ್ರೀಯಾಯೋಜನೆಗಳನ್ನು ತಯಾರಿಸಲು, ಸಹಕಾರಿಯಾಗುತ್ತವೆ. ಖಾತೆಗಳಿಗೆ ಸಂಬಂಧಿಸಿದಂತೆ, ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಬರುವಂತಹ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿಯಾಗಲಿದ್ದು, ಅಧಿಕಾರಿಗಳು ಮಾತ್ರವಲ್ಲದೆ, ಜನಪ್ರತಿನಿಧಿಗಳೂ ಕೂಡಾ ತರಬೇತಿಗಳಲ್ಲಿ ಭಾಗವಹಿಸಿ ತಿಳಿದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ಪಿ.ಡಿ.ಓ.ಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು.
ಪಿ.ಡಿ.ಓ.ಗಳಾದ ಪಿ.ವಿ.ಸಿದ್ದಣ್ಣ, ಗೋಪಿನಾಥ್, ಟಿ.ಎಂ.ಅಶ್ವಥ್, ಸಿ.ರಾಜಣ್ಣ, ಗೌಸ್ಪಿರ್, ಶ್ರೀನಿವಾಸ್, ನಾಗರಾಜಯ್ಯ, ತಾಲ್ಲೂಕು ಪಂಚಾಯತಿ ಸಿಬ್ಬಂದಿ ಹಾಜರಿದ್ದರು.
ಆರಂಭದಲ್ಲೇ ಮುರಿದುಬೀಳುವ ಮದುವೆಗಳು – ಭಾಗ 2
ಎಲ್ಲಿದೆ ಪರಿಹಾರ?
ಇದೆಲ್ಲಾ ಬಹಳ ದೊಡ್ಡ ಸಾಮಾಜಿಕ ಸಮಸ್ಯೆ, ಹಾಗಾಗಿ ಇದನ್ನು ನಿಭಾಯಿಸಲು ಚಿಂತಕರು, ಸಮಾಜ ವಿಜ್ಞಾನಿಗಳು, ಸರ್ಕಾರಗಳು ಪ್ರಯತ್ನಪಡಬೇಕು ಎನ್ನುವುದು ಹೆಚ್ಚಿನ ಜನರ ತಿಳುವಳಿಕೆ. ಇದು ಸ್ವಲ್ಪ ಮಟ್ಟಿಗೆ ನಿಜವೇ ಇದ್ದರೂ, ಇದನ್ನೆ ನಂಬಿ ಕುಳಿತರೆ ನಾವೆಲ್ಲಾ ನಮ್ಮ ಜವಾಬ್ದಾರಿಯನ್ನು ಕಳಚಿಕೊಂಡಂತಾಗುತ್ತದೆ. ಹಾಗಾಗಿ ಪೋಷಕರು ಮತ್ತು ಮಕ್ಕಳು ತಮ್ಮ ಮಟ್ಟದಲ್ಲಿ ಮಾಡಬಹುದಾದ್ದೇನು ಎನ್ನುವುದರ ಬಗೆಗೆ ಯೋಚನೆ ಮಾಡಲೇಬೇಕಾಗಿದೆ.
ಮದುವೆಗೆ ಮೊದಲು;
1. ಪೋಷಕರು ಮತ್ತು ಮಕ್ಕಳು ವಿವಾಹದ ವಿಚಾರದಲ್ಲಿ ಮುಕ್ತವಾಗಿ ಮಾತನಾಡುವ, ಚರ್ಚೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಪೋಷಕರು ನೆನಪಿಡಬೇಕಾದ ಅಂಶವೆಂದರೆ ಬೇರೆಲ್ಲಾ ವಿಷಯಗಳಲ್ಲಿ ಅವರು ಗಂಟುಮೋರೆಯನ್ನು ಹಾಕಿಕೊಂಡಿದ್ದಾಗ, ವಿವಾಹ ವಿಚಾರದಲ್ಲಿನ ಮಾತುಕತೆಗಳು ಮಾತ್ರ ಮುಕ್ತವಾಗಿರಲು ಸಾಧ್ಯವಿಲ್ಲ. ಹಾಗಾಗಿ ಮನೆಯಲ್ಲಿ ಎಲ್ಲಾ ವಿಚಾರಗಳಲ್ಲಿನ ಚರ್ಚೆಗೆ ಮುಕ್ತತೆ ಇರಲೇಬೇಕು. ಇಬ್ಬರಿಗೂ ನಿರ್ಧಾರಗಳ ಸ್ವಾತಂತ್ರವಿದ್ದರೂ ಮತ್ತೊಬ್ಬರ ಅಭೀಪ್ರಾಯಗಳನ್ನು ಕೇಳುವ, ಗೌರವಿಸುವ ಮನಸ್ಥಿತಿ ಇರಬೇಕು.
2. ಇವತ್ತಿನ ಆರ್ಥಿಕ ಸ್ವಾತಂತ್ರ, ಮುಕ್ತ ಲೈಂಗಿಕತೆ ಇವುಗಳಿಂದಾಗಿ ಎಷ್ಟೋ ಯುವಕ ಯುವತಿಯರಿಗೆ ಮದುವೆ ಅಗತ್ಯ ಅಂತ ಅನ್ನಿಸದಿದ್ದರೆ ಅದು ತಪ್ಪೇನಲ್ಲ. ಇಂತಹ ಜೀವನ ಶೈಲಿಯ ಒಳಹೊರಗುಗಳನ್ನು ತಿಳಿದುಕೊಂಡು ಅವರು ಮಾಡಿಕೊಂಡ ಆಯ್ಕೆ ಇದಾಗಿರಬೇಕು ಅಷ್ಟೆ. ಅಂತವರು ಮದುವೆಯಾಗಬೇಕಾದರೆ, ಒಂದು ದೀರ್ಘಕಾಲೀನ ಸಂಬಂಧಕ್ಕೆ ತಾವು ಮಾನಸಿಕವಾಗಿ ಸಿದ್ಧರಿದ್ದೇವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಎಲ್ಲರ ದುಗುಡ, ದುರಂತಗಳಿಗೆ ಕಾರಣರಾಗಬಹುದು.
ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ ನನ್ನ ಉತ್ತಮ ಗೆಳೆತಿಯೊಬ್ಬಳು ಮದುವೆಯಾಗಬಾರದೆಂದು ನಿರ್ಧರಿಸಿದ್ದಳು. ನನಗಿರುವ ಸಲಿಗೆಯಿಂದ ಅವಳಿಗೆ ಒಂದು ಸಲಹೆಯನ್ನು ನೀಡಿದ್ದೆ, “ನಿನ್ನ ಆಯ್ಕೆಯನ್ನು ನಾನು ಗೌರವಿಸುತ್ತೇನೆ. ಮುಂದೆಂದಾದರೂ ನೀನು ಮದುವೆಯಾಗಬೇಕಾದ ಸಂದರ್ಭ ಬಂದರೆ ಮೊದಲು ನನ್ನ ಹತ್ತಿರ ಮಾತನಾಡು ಅಥವಾ ಮದುವೆಗೆ ನಿನ್ನ ಮಾನಸಿಕ ಸಿದ್ಧತೆಯ ಬಗೆಗೆ ಆಪ್ತಸಲಹೆ ಪಡೆದುಕೊ”. ಆದರೆ ವರ್ಗಾವಣೆಯಿಂದಾಗಿ ನಾನು ದೂರ ಹೋದಾಗ ಅವಳು ಮದುವೆಯಾದಳೆಂದು ತಿಳಿಯಿತು. ಒಂದೇ ವರ್ಷದಲ್ಲಿ ಅವಳಿಗೆ ಮಗುವೂ ಆಯಿತು. ಆರು ತಿಂಗಳ ನಂತರ ಅವಳು ಆತ್ಮಹತ್ಯೆಯಲ್ಲಿ ಬಿಡುಗಡೆಯನ್ನು ಪಡೆದುಕೊಂಡಿದ್ದಳು.
3. ಪ್ರೇಮ ವಿವಾಹವೇ ಸರ್ವೋತ್ತಮ ಎಂದುಕೊಳ್ಳುವ ಯುವಜನತೆ ಮತ್ತು ಪ್ರೇಮ ವಿವಾಹವೆಂದ ಕೂಡಲೇ ಕನಲುವ ಪೋಷಕರು-ಇಬ್ಬರೂ ವಾಸ್ತವಿಕತೆಯಿಂದ ದೂರವಿರುತ್ತಾರೆ. ಒಂದು ಸುಖದಾಂಪತ್ಯಕ್ಕೆ ಅಗತ್ಯವಿರುವುದು ಮದುವೆಯ ನಂತರದ ದಿನಗಳಲ್ಲಿ ದಂಪತಿಗಳ ಮನೋಭಾವದ ಹೊಂದಾಣಿಕೆ ಎಷ್ಟರ ಮಟ್ಟಿಗೆ ಆಗುತ್ತದೆ ಎನ್ನುವುದು ಮಾತ್ರ. ಇದನ್ನು ಶಬ್ದಗಳಲ್ಲಿ ಹೇಳಿಬಿಡುವುದು ಸುಲುಭ, ಆದರೆ ವಾಸ್ತವದಲ್ಲಿ ಇದನ್ನು ಕಂಡುಹಿಡಿಯುವುದಕ್ಕೆ ಯಾವುದೇ ಸೂತ್ರಗಳಿಲ್ಲ. ಹಾಗಿದ್ದರೂ ಇದರ ಬಗೆಗೆ ಕೆಲವು ಸರಳ ಮಾಹಿತಿಗಳನ್ನು ನೀಡಬಹುದು.
* ಮದುವೆಯಾಗುವವರಿಗಿಬ್ಬರಿಗೂ ತಮ್ಮ ಆದ್ಯತೆಗಳ ಖಚಿತತೆ ಇರಬೇಕು. ಆಯ್ಕೆಯನ್ನು ಮಾಡಿಕೊಳ್ಳುವಾಗ ಜಾತಿ, ಉದ್ಯೋಗ, ಆದಾಯ, ರೂಪ, ಹವ್ಯಾಸಗಳು ಹೀಗೆ ಹಲವಾರು ಮಾನದಂಡಗಳಿರುತ್ತವೆ. ಇವುಗಳಲ್ಲಿ ಎಲ್ಲವೂ ಹೊಂದಾಣಿಕೆಯಾಗುತ್ತದೆ ಎಂದು ನಿರೀಕ್ಷಿಸಬಾರದು. ಅವರವರಿಗೆ ಪ್ರಮುಖವೆನ್ನಿಸುವ ಯಾವುದಾದರೂ ಪ್ರಮುಖವಾದ ಎರಡು ಹೆಚ್ಚೆಂದರೆ ಮೂರು ಅಂಶಗಳಲ್ಲಿ ಮಾತ್ರ ಸಾಮರಸ್ಯ ಹುಡುಕಬೇಕು.
* ಪ್ರೇಮಿಗಳು ಮೇಲಿನ ವಿಚಾರ ತಮಗೆ ಸಂಬಂಧಿಸಿದ್ದಲ್ಲ ಎಂದುಕೊಳ್ಳುವಂತಿಲ್ಲ. ಪ್ರೇಮದ ನಶೆ ಎಲ್ಲ ಭಿನ್ನತೆಯನ್ನೂ ತಾತ್ಕಾಲಿಕವಾಗಿ ಹಿಂದಕ್ಕೆ ತಳ್ಳಿರುತ್ತದೆ. ಹಾಗಾಗಿ ಎಲ್ಲಾ ಪ್ರೇಮಿಗಳಿಗೂ ತಮ್ಮದು ಅಮರಪ್ರೇಮ ಅನ್ನಿಸುತ್ತಿರುತ್ತದೆ. ಒಮ್ಮೆ ದಾಂಪತ್ಯದ ಜವಾಬ್ದಾರಿಗಳನ್ನು ನಿಭಾಯಿಸುವ ಸಮಯ ಬಂದ ತಕ್ಷಣ ಈ ನಶೆ ಸಂಪೂರ್ಣವಾಗಿ ಇಳಿದು, ಕಠೋರ ವಾಸ್ತವ ಕಣ್ಣೆದುರಿಗೆ ಬರುತ್ತದೆ! ಹಾಗಾಗಿ ಮದುವೆಯಾಗಬೇಕೆಂದಿರುವ ಪ್ರೇಮಿಗಳು ತಮ್ಮ ಭಾವೀಜೀವನದ ಆದ್ಯತೆಗಳ ಬಗೆಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
*ಪೋಷಕರು ಹೇಗಾದರೂ ಮಾಡಿ ಪ್ರೇಮವಿವಾಹಗಳನ್ನು ತಪ್ಪಿಸುವ ಪ್ರಯತ್ನವನ್ನು ಮಾತ್ರ ಮಾಡದೆ ತಮ್ಮ ಮಕ್ಕಳ ಆಯ್ಕೆ ಎಷ್ಟು ಸೂಕ್ತ ಅಂತ ಮಕ್ಕಳ ಜೊತೆ ಚರ್ಚೆಮಾಡಬೇಕು. ಇದರಿಂದ ಮಕ್ಕಳನ್ನು ಈ ವಿವಾಹದಿಂದ ದೂರಮಾಡುವುದು ಸಾಧ್ಯವಾಗದಿದ್ದರೂ ಕೊನೆಯ ಪಕ್ಷ ಅವರಿಗೆ ತಮ್ಮ ಜವಾಬ್ದಾರಿಗಳ ಅರಿವನ್ನು ಮೂಡಿಸಬಹುದು.
4. ”ಸಾವಿರ ಸುಳ್ಳನ್ನಾದರೂ ಹೇಳಿ ಒಂದು ಮದುವೆ ಮಾಡಿಸು” ಎನ್ನುವ ಹಳೆಯ ನಾಣ್ಣುಡಿ ಇವತ್ತಿನ ಸಂದರ್ಭದಲ್ಲಿ ಅಪಾಯಕಾರಿಯಾಗಬಹುದು. ಇದನ್ನು “ಸಾವಿರ ನಿಜವನ್ನಾದರೂ ಹೇಳಿ ಒಂದು ಹೊಂದಾಣಿಕೆಯಾಗಲಾರದ ಮದುವೆಯನ್ನು ತಪ್ಪಿಸು” ಎಂದು ಬದಲಾಯಿಸಿದರೆ ಉತ್ತಮ! ಹುಡುಗ, ಹುಡುಗಿಯರಷ್ಟೇ ಅಲ್ಲ ಅವರ ಪೋಷಕರು, ಮನೆಯವರೆಲ್ಲಾ ಸಂಬಂಧಗಳನ್ನು ಮಾಡುವಾಗ ಸುಳ್ಳನ್ನು ಹೇಳಲೇಬಾರದು. ಇದರಿಂದ ಮುಂದೆ ಭಾರೀ ಅನಾಹುತಗಳಾಗಬಹುದು. ಸುಳ್ಳು ಹೇಳುವಷ್ಟೇ ಅಪಾಯಕಾರಿಯಾದ ಇನ್ನೊಂದು ಅಂಶ ವಸ್ತುಸ್ಥಿತಿಯನ್ನು ಮುಚ್ಚಿಡುವುದು ಕೂಡ. ಯಾವುದು ಪ್ರಮುಖ ವಿಚಾರ, ಮತ್ತಾವುದು ಕ್ಷುಲ್ಲಕ ವಿಚಾರ ಎನ್ನುವುದು ಆಯಾ ವ್ಯಕ್ತಿಯ ಮೇಲೆ ಅವಲಂಭಿಸಿರುತ್ತದೆ. ಹಾಗಾಗಿ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಬಿಚ್ಚಿಡಬೇಕು. ಉದಾಹರಣೆಗೆ ಮದುವೆಯಾಗುವ ಹುಡುಗ/ಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದರೂ ಕುಟುಂಬದಲ್ಲಿ ಇತರರಿಗೆ ಮಾನಸಿಕ/ದೈಹಿಕ ಖಾಯಿಲೆ ಇರುವುದು; ಹತ್ತಿರದ ಸಂಬಂಧಿಯೊಬ್ಬರು ನ್ಯಾಯಾಲಯಗಳಿಂದ ಶಿಕ್ಷೆಗೊಳಗಾಗಿರುವುದು; ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸಿರುವುದು- ಮುಂತಾದವು. ಇಂತಹ ವಿಚಾರಗಳು ದಂಪತಿಗಳ ಸೌಹಾರ್ದಯುತ ಬದುಕಿಗೆ ಅಗತ್ಯವಿಲ್ಲ, ನಿಜ. ಆದರೆ ಒಮ್ಮೆ ಭಿನ್ನಾಭಿಪ್ರಾಯಗಳು ಮೂಡಿದಾಗ ಅವುಗಳನ್ನು ಹೆಚ್ಚು ಇವು ಮಾಡಲು ಸಾಕಾಗುತ್ತದೆ! ಇಂತಹದೇ ಕ್ಷುಲ್ಲಕ ವಿಚಾರಗಳಿಗಾಗಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟೆಲೇರಿರುವವರು ಸಾಕಷ್ಟು ಜನರಿದ್ದಾರೆ.
5. ದಾಂಪತ್ಯ ಜೀವನಕ್ಕೆ ತೊಂದರೆಯಾಗಬಹುದಾದ ದೈಹಿಕ/ಮಾನಸಿಕ ಖಾಯಿಲೆಗಳಿದ್ದಾಗ, ಪೋಷಕರು ಮಕ್ಕಳಿಗೆ ಹೇಗಾದರೂ ಮಾಡಿ ಮದುವೆ ಮಾಡಿಸಿಬಿಡುವ ತರಾತುರಿಯಲ್ಲಿರಬಾರದು. “ಮದುವೆಯಾದ ಮೇಲೆ ಎಲ್ಲಾ ತಾನಾಗಿಯೇ ಸರಿಯಾಗುತ್ತದೆ” ಎನ್ನುವ ಹಳೆಯ ಕಾಲದ ಚಿಂತನೆ ಅಪಾಯಕಾರಿಯಾಗಬಹುದು. ಇಂತಹ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಮೊದಲ ಆದ್ಯತೆಯಾಗಬೇಕು.
6. ಜಾತಕ ಮತ್ತಿತರ ಧಾರ್ಮಿಕ ನಂಬಿಕೆಗಳು ಯಾರದ್ದಾದರೂ ಆದ್ಯತೆಯಾಗಿದ್ದರೆ ಅದು ಅವರವರ ಆಯ್ಕೆ. ಹಾಗಿದ್ದರೂ ಅವುಗಳನ್ನು ಮಾತ್ರ ನಂಬಿ ಕಣ್ಣಿಗೆ ಕಾಣುವ ಸತ್ಯಗಳನ್ನು ಕಡೆಗಣಿಸಬಾರದು. ಜಾತಕವನ್ನು ಸಂಪೂರ್ಣ ಹೊಂದಾಣಿಕೆ ಮಾಡಿ ಮದುವೆಯಾದ ನನ್ನ ಪರಿಚಿತರು ಆರೇ ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡರು. ಇಂತಹ ಸಾವಿರಾರು ಘಟನೆಗಳು ನಮ್ಮ ಸುತ್ತಲೂ ಇವೆ.
7. ಸಾಂಪ್ರದಾಯಿಕ ಮದುವೆಗಳಲ್ಲೂ ಹುಡುಗ ಹುಡುಗಿಯರಿಗೆ ಮುಕ್ತವಾಗಿ ಮಾತನಾಡಿಕೊಳ್ಳಲು ಅವಕಾಶವಿರಬೇಕು. ಹೆಣ್ಣು ನೋಡಲು ಹೋದಾಗ ಉಪ್ಪಿಟ್ಟು, ಕೇಸರಿಬಾತುಗಳ ಮಧ್ಯೆ ಹತ್ತು ನಿಮಿಷದ ಖಾಸಗಿಯಾಗಿ ಮಾತನಾಡುವ ರಿವಾಜಿನಿಂದ ಏನೂ ಪ್ರಯೋಜನವಿಲ್ಲ. ಆಗ “ನಿನ್ನ ಹೆಸರೇನು, ಏನು ಓದಿದ್ದೀಯಾ, ಯಾವ ಕಾಲೇಜು, ಯಾವ ವರ್ಷ”, ಎಂದೆಲ್ಲಾ ಕೇಳುವಷ್ಟರಲ್ಲಿ ಪೋಷಕರಿಂದ ಕರೆ ಬಂದಿರುತ್ತದೆ! ಇದಕ್ಕೆ ಬದಲಾಗಿ ಎರಡೂ ಕಡೆÀಯ ಹಿರಿಯರು ಮಕ್ಕಳಿಗೆ, “ನಿಮ್ಮಿಬ್ಬರ ವಿವಾಹ ಮಾಡುವ ಯೋಚನೆಯಿದೆ. ನೀವಿಬ್ಬರೂ ಕುಳಿತು ಮಾತನಾಡಿ ನಿಮ್ಮ ತೀರ್ಮಾನವನ್ನು ಹೇಳಿ” ಎಂದು ಸೂಚಿಸಬಹುದು. ಇಂತಹ ಚರ್ಚೆ, ವಿಚಾರ ವಿನಿಮಯಗಳನ್ನು ಒಂದೆರೆಡು ಘಂಟೆಗಳಲ್ಲಿ ಮುಗಿಸಬೇಕಾಗಿಲ್ಲ. ಇದಕ್ಕಾಗಿ ಹತ್ತಾರು ಬಾರಿ ಭೇಟಿಯಾಗುವ ಅವಕಾಶವಿರಬೇಕು. ಆಗ ಮಾತ್ರ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ. ಇದೊಂದು ರೀತಿಯ ಸಾಂಪ್ರದಾಯಿಕ ಪ್ರೇಮವಿವಾಹವೆಂದು ಆಗ ಹೆಮ್ಮೆಯಿಂದ ಹೇಳಬಹುದು!
ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರಲ್ಲಿ ಇಂತಹದೇ ಘಟನೆ ನಡೆಯಿತು. ಮನೆಯ ಹಿರಿಯರೆಲ್ಲಾ ಸೇರಿ ಹುಡುಗ ಮತ್ತು ಹುಡುಗಿಯ ಒಪ್ಪಿಗೆಯನ್ನು ಪಡೆದು ಮದುವೆಯನ್ನು ನಿಶ್ಚಯಿಸಿದ್ದರು. ಮೊದಲ ಭೇಟಿಯಲ್ಲಿ ಒಪ್ಪಿಗೆ ನೀಡಿದ್ದ ಮಕ್ಕಳು ನಿಶ್ಚಿತಾರ್ತಕ್ಕೆ ಮೊದಲು ಮತ್ತೆ ಕೆಲವು ಬಾರಿ ಭೇಟಿಯಾಗಿ ಚರ್ಚೆ ಮಾಡಿದ ನಂತರ ವಿವಾಹವಾಗದೇ ಇರಲು ನಿರ್ಧರಿಸಿದರು. ಇದರಿಂದ ಮುಂದೆ ಆಗಬಹುದಾದ ಸಾಕಷ್ಟು ಕಿರಿಕಿರಿಗಳನ್ನು ತಪ್ಪಿಸಲು ಸಾಧ್ಯವಾಯಿತು.
ಮುಂದುವರೆಯುವುದು…
ವಸಂತ್ ನಡಹಳ್ಳಿ
ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕಲಿಕೆ
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಚಿಂತಾಮಣಿ ತಾಲ್ಲೂಕಿನ ಪೆದ್ದೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಜಾನಪದ ಸಂಭ್ರಮ’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ.
ತಾಲ್ಲೂಕಿನ ವರದನಾಯಕನಹಳ್ಳಿಯ ಈಧರೆ ತಿರುಮಲ ಪ್ರಕಾಶ್ ಅವರಿಂದ ಡೊಳ್ಳುಕುಣಿತ ಮತ್ತು ಜಾನಪದ ಗಾಯನವನ್ನು ಕಲಿಯುತ್ತಿದ್ದಾರೆ. ವಿಶೇಷವೆಂದರೆ ಕಾಲೇಜು ಹುಡುಗ ಹುಡುಗಿಯರ 25 ಮಂದಿ ತಂಡವು ಡೊಳ್ಳನ್ನು ಲೀಲಾಜಾಲವಾಗಿ ಕಲಿತು, ಬಾರಿಸುತ್ತಾ, ಕಸರತ್ತುಗಳನ್ನು ಮಾಡುತ್ತಾ ಲಯಬದ್ಧವಾಗಿ ಬಾರಿಸುವುದನ್ನು ಕೇವಲ ಹತ್ತೇ ದಿನಗಳಲ್ಲಿ ಕಲಿತಿದ್ದಾರೆ. ಗಂಡುವಾದ್ಯವೆಂದೇ ಹೆಸರಾದ ಡೊಳ್ಳು ಕುಣಿತದ ಈ ತಂಡದಲ್ಲಿ ಹದಿನೈದು ಮಂದಿ ಹೆಣ್ಣುಮಕ್ಕಳೇ ಇದ್ದು, ಡೊಳ್ಳಿನ ನಾದಕ್ಕೆ ತಮ್ಮ ಹೆಜ್ಜೆಯನ್ನು ಹಾಕುತ್ತಾ ತರಬೇತಿ ಪಡೆಯುತ್ತಿದ್ದಾರೆ.
‘ಭರಣಿ ಮಳೆಯೆ ಧರಣಿಗಿಳಿಯಮ್ಮ’ ಎಂಬ ಸ್ವರಚಿತ ಗೀತೆಗೆ ಈಧರೆ ತಿರುಮಲ ಪ್ರಕಾಶ್ ತಾವೇ ಸ್ವರ ಸಂಯೋಜಿಸಿ ವಿದ್ಯಾರ್ಥಿಗಳಿಗೆ ಕಲಿಸುತ್ತಾ ಮಳೆಯು ಧರೆಗಿಳಿಯಬೇಕೆಂಬ ಆಶಾಭಾವನೆಯನ್ನು ಬಿತ್ತುತ್ತಿದ್ದಾರೆ.
ಸುಮಾರು ಹತ್ತು ದಿನಗಳಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಈ ವಿದ್ಯಾರ್ಥಿಗಳೆಲ್ಲಾ ಎನ್.ಎಸ್.ಎಸ್ ನಲ್ಲಿರುವವರು. ಹಾಗಾಗಿ ಶಿಸ್ತು ಮೈಗೂಡಿದೆ. ಕಲಿಸುವುದನ್ನು ಸೂಕ್ಷ್ಮಗ್ರಾಹಿಗಳಾಗಿ ಕಲಿಯುತ್ತಿದ್ದಾರೆ. ಜೂನ್ 25 ಮತ್ತು 26 ರಂದು ಪೆದ್ದೂರು ಗ್ರಾಮದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಜಾನಪದ ಸಂಭ್ರಮ’ ಸ್ಪರ್ಧೆಯಲ್ಲಿ ನಾವು ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದೇವೆ’ ಎಂದು ತರಬೇತುದಾರ ಈಧರೆ ತಿರುಮಲ ಪ್ರಕಾಶ್ ತಿಳಿಸಿದರು.
ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಹರಡಿದ ಜ್ವರಕ್ಕೆ ಆತಂಕಗೊಂಡ ಗ್ರಾಮಸ್ಥರು
ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಮಂದಿಗೆ ಜ್ವರ ಬಂದಿದ್ದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಹೊಸಕೋಟೆ, ಚಿಂತಾಮಣಿ, ದೇವನಹಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ.
ಗ್ರಾಮದ ಚರಂಡಿಗಳು ಸೇರಿದಂತೆ ಗ್ರಾಮದ ಸ್ವಚ್ಚತೆ ಬಗ್ಗೆ ಕಾಳಜಿ ವಹಿಸದ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮದ ಜನತೆ ವಿವಿಧ ರೀತಿಯ ಜ್ವರದಿಂದ ಬಳಲುವಂತಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಿಸ್ಟನ್ ಸೇರಿದಂತೆ ಚರಂಡಿಗಳು ಸ್ವಚ್ಚತೆಗೊಳಿಸುವಂತೆ ಈಗಾಗಲೇ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಸ್ವಚ್ಚತೆ ಮಾಡಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ವಿವಿಧ ರೀತಿಯ ಜ್ವರ ಕಾಣಿಸಿಕೊಂಡು ಗ್ರಾಮದ ಬಹುತೇಕ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಹತ್ತು ದಿನಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಹುಣಸೇನಹಳ್ಳಿ ಆರೋಗ್ಯ ಕೇಂದ್ರದ ವೈದ್ಯರು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ಫಲಕಾರಿಯಾಗಿಲ್ಲ.
ಈ ರೀತಿಯಾಗಿ ಖಾಯಿಲೆಗಳಿಗೆ ಒಳಗಾಗುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದ್ದು ಇದುವರೆಗೂ ಗ್ರಾಮದಲ್ಲಿ ಈ ರೀತಿ ಸಾಮೂಹಿಕವಾಗಿ ಬರುತ್ತಿರುವ ಜ್ವರ ಎಂತಹುದು ಎಂಬುದರ ಮಾಹಿತಿ ಹಾಗು ಗ್ರಾಮದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳದ ಬಗ್ಗೆ ಆರೋಗ್ಯ ಇಲಾಖೆ ಹಾಗು ಗ್ರಾಮ ಪಂಚಾಯತಿ ಅಧಿಕಾರಿಗಳು ಮಾಹಿತಿ ಗೌಪ್ಯವಾಗಿಟ್ಟಿದ್ದಾರೆ.
ಈ ಬಗ್ಗೆ ವೈ ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಕೃಷ್ಣ ಅವರನ್ನು ವಿಚಾರಿಸಿದರೆ ಕಳೆದ ಹದಿನೈದು ದಿನಗಳಿಂದ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿದೆ. ಕೆಲವರಿಗೆ ವೈರಾಣುವಿನಿಂದುಂಟಾಗುವ ಜ್ವರ ಕಾಣಿಸಿದ್ದು ಕೆಲವರಿಗೆ ಶಂಕಿತ ಡೆಂಗ್ಯೂ ಜ್ವರ ಇರಬಹುದು ಎಂಬ ಕಾರಣಕ್ಕೆ ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾ ಸ್ಪತ್ರೆಗೆ ಕಳುಹಿಸಿಕೊಡಲಾಗಿದೆ, ಇನ್ನೂ ವರದಿ ಬಂದಿಲ್ಲ ಎನ್ನುತ್ತಾರೆ.
ಗ್ರಾಮದಲ್ಲಿ ಸ್ವಚ್ಚತೆಯಿಲ್ಲದಿರುವುದು ಸೇರಿದಂತೆ ಎಲ್ಲಂದಿರಲ್ಲಿ ನೀರು ನಿಂತಿರುವುದು, ತೊಟ್ಟಿಗಳಲ್ಲಿ ಲಾರ್ವಾ ಹೆಚ್ಚಾಗಿರುವುದರಿಂದ ಗ್ರಾಮದಲ್ಲಿ ಈ ರೀತಿಯ ಜ್ವರ ಕಾಣಿಸಿದೆ. ಕಳೆದ ಹತ್ತು ದಿನಗಳಿಂದ ವೈದ್ಯರ ತಂಡ ಗ್ರಾಮದಲ್ಲಿಯೇ ಮೊಕ್ಕಾಂ ಹೂಡುವುದರೊಂದಿಗೆ ಮನೆ ಮನೆಗೂ ತೆರಳಿ ಎಲ್ಲಿಯೂ ನೀರು ನಿಲ್ಲದಂತೆ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ.
ಪ್ರತಿನಿತ್ಯ ಗ್ರಾಮದ ೨೦ ರಿಂದ ೨೫ ಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು.ಇದೀಗ ಪರಿಸ್ಥಿತಿ ಸುದಾರಿಸುತ್ತಿದ್ದು ಈಗ ಐದಾರು ಮಂದಿಯಷ್ಟೆ ಹೆಚ್ಚಿನ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ.
‘ಕೊತ್ತನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇರಾವುದೇ ಗ್ರಾಮಗಳಲ್ಲಿಯೂ ಜ್ವರ ಕಾಣಿಸಿಕೊಂಡಿಲ್ಲ, ಬರೀ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಮಾತ್ರ ಕಾಣಿಸಬೇಕು ಎಂದರೆ ಅದಕ್ಕೆ ಮಾವಿನ ಹಣ್ಣಿನ ಕಾಲದಲ್ಲಿ ಗ್ರಾಮಸ್ಥರು ಬೇರೆ ಕಡೆಗೆ ಕೂಲಿಗಾಗಿ ಹೋಗುವುದು ಕಾರಣ. ಹಾಗಾಗಿ ಪ್ರತಿ ವರ್ಷವೂ ಮಾವಿನಹಣ್ಣಿನ ಕಾಲದಲ್ಲಿ ಗ್ರಾಮದಲ್ಲಿ ಜ್ವರ ಬರುವುದು ಸಾಮಾನ್ಯ ಅಷ್ಟೇ ಹೊರತು ಗ್ರಾಮದಲ್ಲಿ ಕುಡಿಯುವ ನೀರಿನ ಸಿಸ್ಟನ್ ಸೇರಿದಂತೆ ಚರಂಡಿ ಸ್ವಚ್ಚತೆ ಕಾರ್ಯ ಮಾಡಲಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಶ್ವತ್ಥಪ್ಪ.
ಪಿಂಡಿಪಾಪನಹಳ್ಳಿ ಗ್ರಾಮದ ಮುನಿಯಪ್ಪ, ಭಾಗ್ಯಮ್ಮ, ಸೌಮ್ಯ, ಮಧು, ರಂಜಿತ್, ಶಿವಕುಮಾರ್, ರಾಜೇಂದ್ರ, ಹರೀಶ್, ಶ್ರಾವಣಿ, ವರುಣ್, ವಿಶ್ವಾಸ್, ಮತ್ತಿತರರು ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಪಡೆದು ಕೆಲವರು ಮನೆಗಳಿಗೆ ವಾಪಸ್ ಬಂದಿದ್ದರೆ ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಯಲು ಶೌಚ ಮುಕ್ತ ಗ್ರಾಮ ಪಂಚಾಯತಿ ಗುರಿಯಾಗಲಿ
ಪ್ರತಿಯೊಬ್ಬ ಗ್ರಾಮ ಪಂಚಾಯತಿ ಸದಸ್ಯರೂ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮಸ್ಥರನ್ನು ಮನವೊಲಿಸುವ ಮೂಲಕ ಬಯಲು ಶೌಚ ಮುಕ್ತ ಗ್ರಾಮ ಪಂಚಾಯತಿಯನ್ನಾಗಿಸಬೇಕೆಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಪಂಚಾಯತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಂಡಿಗನಾಳ ಪಂಚಾಯತಿಯಲ್ಲಿ ಒಟ್ಟು 11 ಗ್ರಾಮಗಳಲ್ಲಿ 451 ಕುಟುಂಬಗಳಿಗೆ ಶೌಚಾಲಯವಿಲ್ಲ. ಸರ್ಕಾರದಿಂದ ಸಿಗುವ ಅನುದಾನದ ಬಗ್ಗೆ ಹಾಗೂ ಶುಚಿತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟು ಎಲ್ಲಾ ಕುಟುಂಬಗಳೂ ಶೌಚಾಲಯ ನಿರ್ಮಿಸಿಕೊಳ್ಳಲು ತಿಳಿಹೇಳಬೇಕು.
ಬದು ನಿರ್ಮಾಣ, ದನದ ಕೊಟ್ಟಿಗೆ ಮತ್ತು ಕೊಳವೆ ಬಾವಿಗಳಿಗೆ ಇಂಗುಗುಂಡಿ ನಿರ್ಮಿಸಿಕೊಳ್ಳಲು ನರೇಗಾದಲ್ಲಿ 65 ಸಾವಿರ ರೂಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳುವಂತೆ ಸದಸ್ಯರು ತಿಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ನೀರಿನ ಕೊರತೆಯಿರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಉಮಾ, ನೇತ್ರಾವತಿ, ಮಹದೇವಯ್ಯ, ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.

