Home Blog Page 460

ಉಪಯೋಗವಾಗದಿರುವ ಸಂತೆ ಮಳಿಗೆಗಳು

0

ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಸರ್ಕಾರದ ಲಕ್ಷಾಂತರ ಅನುದಾನದ ಹಣದಲ್ಲಿ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ಗ್ರಾಮೀಣ ಸಂತೆ ಮಳಿಗೆಗಳು ಉಪಯೋಗವಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ತಾಲ್ಲೂಕಿನ ಜಂಗಮಕೋಟೆ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಈ ಗ್ರಾಮದಲ್ಲಿ ವಾರದ ಸಂತೆಯು ಈ ಹಿಂದೆ ಪ್ರತಿ ಗುರುವಾರ ನಡೆಯುತ್ತಿತ್ತು. ಕಳೆದ ಕೆಲವು ವರ್ಷದಿಂದ ಪ್ರತಿ ಶನಿವಾರ ಸಂತೆ ನಡೆಯುತ್ತಿದ್ದು ಈ ಸಂತೆಯು ಜಂಗಮಕೋಟೆ ಮತ್ತು ಶಿಡ್ಲಘಟ್ಟದ ಮುಖ್ಯ ರಸ್ತೆಯಲ್ಲಿ ನಡೆಯುತ್ತಿದ್ದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿತ್ತು.
ಆದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಚಿಕ್ಕಬಳ್ಳಾಪುರ ಆರ್.ಡಿ. ಎಪ್. ೧೩ ರ ಯೋಜನೆ ಅಡಿಯಲ್ಲಿ ೨೦೧೦ ರಲ್ಲಿ ಗ್ರಾಮೀಣ ಸಂತೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಜಂಗಮಕೋಟೆ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮೀಣ ಸಂತೆ ಮಳಿಗೆಗಳನ್ನು ನಿರ್ಮಿಸಲಾಯಿತು. ಈ ಮಳಿಗೆಗಳನ್ನು ಆಗಿನ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಉದ್ಘಾಟನೆ ಮಾಡಿದ್ದರು.
ಆದರೆ ಈ ಮಳಿಗೆಗಳು ಇಲ್ಲಿಯವರೆಗೂ ಸಾರ್ವಜನಿಕರಿಗೆ ಉಪಯೋಗವಾಗಿಲ್ಲ. ಪುಂಡ ಪೋಕರಿಗಳಿಗೆ ಜೂಜಾಟ ಮತ್ತು ಮದ್ಯಪಾನದ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ.
ಗ್ರಾಮೀಣ ಜನರು ತಾವು ಬೆಳೆದ ಬೆಳೆಗಳನ್ನು ವಾರದ ಸಂತೆಗೆ ತಂದು ಮಾರಾಟ ಮಾಡಲು ಅನುಕೂಲವಾಗಲೆಂದು ನಿರ್ಮಿಸಿರುವ ಮಳಿಗೆಗಳು ಅಧಿಕಾರಿಗಳ ನಿರ್ಲಕ್ಷದಿಂದ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಮಳಿಗೆಳನ್ನು ಸಂತೆಗೆ ಉಪಯೋಗವಾಗುವ ರೀತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ

0

ಭೂ ಮಂಜೂರಾತಿಯಾಗಿ ಅರ್ಜಿಗಳನ್ನು ಸಲ್ಲಿಸಿರುವಂತಹ ರೈತ ಸಮುದಾಯಕ್ಕೆ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕಿ ಚಿತ್ರಾವತಿ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಂಗಳವಾರ ಭೂ ಹಕ್ಕುದಾರರ ವೇದಿಕೆಯಿಂದ ಆಯೋಜನೆ ಮಾಡಲಾಗಿದ್ದ ರೈತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ಕೂಡಾ ಭೂಮಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿಗಳು ಬದಲಾವಣೆಯಾಗಿಲ್ಲ, ಸಾವಿರಾರು ಮಂದಿ ರೈತರು ೫೩ ರ ನಮೂನೆಗಳಲ್ಲಿ ಅರ್ಜಿಗಳನ್ನು ಹಾಕಿಕೊಂಡಿದ್ದರೂ ಕೂಡಾ ಪರಿಶೀಲನೆ ನಡೆಸಿ ಭೂ ಮಂಜೂರಾತಿಯನ್ನು ನೀಡಬೇಕಾಗಿದ್ದ ಶಾಸಕರ ನೇತೃತ್ವದ ಸಮಿತಿಗಳು ವಿಫಲವಾಗಿವೆ, ಇದರಿಂದ ಸರ್ಕಾರಿ ಭೂಮಿಗಳನ್ನು ಕಬಳಿಕೆ ಮಾಡುವಂತಹವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಅನೇಕ ಹಳ್ಳಿಗಳಲ್ಲಿ ಪ್ರಭಾವಿಗಳು, ಬಡವರು ಸ್ವಾಧೀನಾನುಭವದಲ್ಲಿರುವ ಭೂಮಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಅವರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಇದರಿಂದ ಅನೇಕ ಕುಟುಂಬಗಳ ಬೀದಿಪಾಲಾಗುತ್ತಿವೆ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಬೇಕಾದರೆ, ಅರ್ಜಿಗಳನ್ನು ಸಲ್ಲಿಸಿರುವ ರೈತರೆಲ್ಲರೂ ಸಂಘಟಿತರಾಗಿ ಸರ್ಕಾರದ ಕಣ್ಣು ತೆರೆಸುವಂತಹ ಕೆಲಸವಾಗಬೇಕು, ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಗೋಮಾಳ, ಗುಂಡುತೋಪುಗಳು, ಸಾರ್ವಜನಿಕ ಜಾಗಗಳನ್ನು ಪ್ರಭಾವಿಗಳಿಂದ ಉಳಿಸುವಂತಹ ಕೆಲಸವನ್ನು ಮಾಡಬೇಕಾಗಿದೆ. ಸರ್ಕಾರಿ ಭೂಮಿಗಳನ್ನು ಅಕ್ರಮವಾಗಿ ಕಬಳಿಕೆ ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.
ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ತಾಲ್ಲೂಕು ಸಂಚಾಲಕಿ ಸೌಮ್ಯ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬೆಳ್ಳೂಟಿ ಮಾರಪ್ಪ, ಸಂತೋಷ್, ಹಾಗೂ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.

ಮಳೆ ನೀರನ್ನು ಬಳಸಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಸಲು ಯೋಜನೆ

0

ಮಳೆಯಾಶ್ರಯದಲ್ಲಿ ಮರಗಳ ರೂಪದಲ್ಲಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲು ರೇಷ್ಮೆ ಇಲಾಖೆಯಿಂದ ಯೋಜನೆಯನ್ನು ರೂಪಿಸಿದೆ. 300 ಎಕರೆಯಲ್ಲಿ ನಾಟಿ ಮಾಡಲು ವರದನಾಯಕನಹಳ್ಳಿ ಗೇಟ್ ಬಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಒಂದು ಲಕ್ಷ ಮೂವತ್ತೈದು ಸಾವಿರ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿಕೊಡುತ್ತಿದ್ದಾರೆ.
ಮುಂದಿನ ತಿಂಗಳಿನಲ್ಲಿ ಅವುಗಳನ್ನು ಇಲಾಖೆಯಿಂದ ವಿತರಿಸಲಾಗುತ್ತದೆ. 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ನಾಟಿ ಮಾಡಬಹುದಾಗಿದೆ. ಇದಕ್ಕೂ ನರೇಗಾದಿಂದ 161 ಮಾನವ ದಿನಗಳ ಕೂಲಿಯನ್ನೂ ನೀಡಲಾಗುವುದು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನಲ್ಲಿ ಸುಮಾರು 5,935 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಕೈಗೊಂಡಿದ್ದು, ಸುಮಾರು 6,039 ಕುಟುಂಬಗಳು ಹಿಪ್ಪುನೇರಳೆ ಬೇಸಾಯವನ್ನು ಅವಲಂಬಿಸಿದ್ದಾರೆ. ರೇಷ್ಮೆ ಗೂಡಿನ ಬೆಲೆ ಹೆಚ್ಚಳದಿಂದಾಗಿ ಇನ್ನಷ್ಟು ರೈತರು ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿತರಾಗುತ್ತಿದ್ದಾರೆ.
ಪ್ರತಿದಿನ ಸರಾಸರಿ 40 ಟನ್ ಗೂಡು ಆವಕವಾಗುತ್ತಿದ್ದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಗ 28 ಟನ್ ಗೂಡಿನ ಆವಕವಾಗುತ್ತಿದೆ. ಕಳೆದ ವರ್ಷಕ್ಕಿಂತ ಶೇಕಡಾ 10 ರಷ್ಟು ಕುಂಠಿತವಾಗಲು ಕಾರಣ ಉಷ್ಣಾಂಶ ಏರಿಕೆ ಹಾಗೂ ನೀರಿನ ಅಭಾವವಾಗಿದೆ. ಈಗ ಮಳೆ ಬೀಳುತ್ತಿರುವುದರಿಂದ ಇನ್ನು 15 ದಿನಗಳೊಳಗೆ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಲಿದೆ.
ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿಸಲು ರೇಷ್ಮೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನರೇಗಾದಲ್ಲಿ ಹೊಸ ಪದ್ಧತಿಯಾದ ಇಂಡೋ ಜಪಾನೀಸ್ ವಿಧಾನವಾದ ಜೋಡಿ ಸಾಲು ಪದ್ಧತಿಯಲ್ಲಿ ಹಿಪ್ಪುನೇರಳೆ ನಾಟಿ ಮಾಡಲು 221 ಮಾನವ ದಿನಗಳ ಕೂಲಿವೆಚ್ಚ ಮತ್ತು ಸಾಮಗ್ರಿ ವೆಚ್ಚ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಹಿಪ್ಪುನೇರಳೆ ನರ್ಸರಿ ಮಾಡಲು ಹಾಗೂ 2 ಮತ್ತು 3ನೇ ವರ್ಷದ ಹಿಪ್ಪುನೇರಳೆ ತೋಟ ನಿರ್ವಹಣೆಗೂ ಸರ್ಕಾರ ಸಹಾಯಹಸ್ತ ಚಾಚಿದೆ. ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಮಳೆ ನೀರಿನಲ್ಲೂ ಮುಂದಿನ ದಿನಗಳಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಬಹುದಾಗಿದೆ ಎನ್ನುತ್ತಾರೆ ಚಂದ್ರಪ್ಪ.

ಮಳ್ಳೂರು ವಿದ್ಯಾರ್ಥಿಗಳಿಗೆ ಅಮೇರಿಕೆಯ ಆತ್ಮ ರಕ್ಷಣಾ ಪಾಠ

0

ತಾಲ್ಲೂಕಿನ ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಟೇಕ್ವಾಂಡೋ ಆತ್ಮ ರಕ್ಷಣಾ ಕಲೆಯನ್ನು ಕಲಿಯುತ್ತಿದ್ದಾರೆ.
ಭಾರತೀಯ ಮೂಲದ ರೋಹಿತ್ ಕೃಷ್ಣಮೂರ್ತಿ ಮತ್ತು ಸಂಜಿತ್ ಕೃಷ್ಣಮೂರ್ತಿ ತಮ್ಮ ತಾಯಿ ಜಯಭಾರತಿ ಅವರೊಂದಿಗೆ ಅಮೆರಿಕೆಯಿಂದ ಒಂದು ತಿಂಗಳ ಕಾಲಾವಧಿಗೆ ಭಾರತಕ್ಕೆ ಬಂದಿದ್ದು, ಮಳ್ಳೂರು ಮತ್ತು ಮುತ್ತೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣಾ ಕಲೆಯನ್ನು ಕಲಿಸುತ್ತಿದ್ದಾರೆ.
ಅಮೆರಿಕೆಯಲ್ಲಿ ಹನ್ನೆರಡನೇ ತರಗತಿ ಮತ್ತು ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಸಹೋದರರು ಟೇಕ್ವಾಂಡೋ ಕಲೆಯಲ್ಲಿ ಮೂರು ಡಿಗ್ರಿ ಪೂರೈಸಿದ್ದಾರೆ. ಇದರಿಂದಾಗಿ ಇತರರಿಗೆ ತರಬೇತಿಯನ್ನು ನೀಡುವ ಅರ್ಹತೆಯನ್ನು ಪಡೆದಿದ್ದು. ಭಾರತದಲ್ಲಿನ ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಮಳ್ಳೂರಿಗೆ ಬಂದಿದ್ದಾರೆ.
‘ನಾವು ಬೆಂಗಳೂರು ಮೂಲದವರು. ಅಮೆರಿಕೆಯ ಅರಿಜೋನಾ ಪ್ರಾಂತ್ಯದಲ್ಲಿ ನೆಲೆಸಿದ್ದೇವೆ. ನಮ್ಮ ಹುಡುಗರು ಅಲ್ಲಿ ವ್ಯಾಸಂಗ ಮಾಡುತ್ತಾ ಟೇಕ್ವಾಂಡೋ ಕೂಡ ಕಲಿಯುತ್ತಿದ್ದಾರೆ. ತಾವು ಕಲಿತ ವಿದ್ಯೆಯನ್ನು ಭಾರತೀಯ ಹೆಣ್ಣು ಮಕ್ಕಳಿಗೆ ಕಲಿಸಿ ಆತ್ಮ ರಕ್ಷಣೆ ಮತ್ತು ಆತ್ಮಾಭಿಮಾನ ಬೆಳೆಸುವ ಉದ್ದೇಶ ಹೊಂದಿದ್ದಾರೆ. ನಮಗೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ಪರಿಚಿತರಾಗಿ, ಮುತ್ತೂರಿನ ಶಾಲಾ ಮಕ್ಕಳಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸಲು ಕಳೆದ ವರ್ಷ ಕೋರಿದರು. ಹಾಗಾಗಿ ನಾವು ಕಳೆದ ವರ್ಷ ಮುತ್ತೂರಿಗೆ ಬಂದಿದ್ದೆವು. ಈ ಬಾರಿ ಮಳ್ಳೂರು ಮತ್ತು ಮುತ್ತೂರು ಎರಡೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಂಗಳೂರಿನಿಂದ ಬಂದು ಕಲಿಸುತ್ತಿದ್ದಾರೆ. ಅಮೆರಿಕೆಯಲ್ಲಿ ಜೂನ್ ಮತ್ತು ಜುಲೈ ತಿಂಗಳು ರಜೆ ಇರುವ ಕಾರಣ ಇಲ್ಲಿಗೆ ಬರುತ್ತೇವೆ. ಮುಂದಿನ ದಿನಗಳಲ್ಲಿ ಅವನ ಇನ್ನಷ್ಟು ಅಮೆರಿಕೆಯ ಸ್ನೇಹಿತರೊಂದಿಗೆ ಬಂದು ಭಾರತೀಯ ಗ್ರಾಮೀಣ ಮಕ್ಕಳಿಗೆ ಅವರುಗಳು ಕಲಿತ ವಿದ್ಯೆಯನ್ನು ಕಲಿಸುವ ಉದ್ದೇಶ ಹೊಂದಿದ್ದಾರೆ’ ಎಂದು ಟೇಕ್ವಾಂಡೋ ಕಲಿಸುತ್ತಿರುವ ರೋಹಿತ್ ಮತ್ತು ಸಂಜಿತ್ ಅವರ ತಾಯಿ ಜಯಭಾರತಿ ತಿಳಿಸಿದರು.
‘ಭಾರತೀಯತೆಯ ಬೇರನ್ನು ಮರೆಯದೆ ತಾವು ಕಲಿತ ಆತ್ಮರಕ್ಷಣಾ ವಿದ್ಯೆಯನ್ನು ನಮ್ಮ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸಲು ಅಮೆರಿಕೆಯಿಂದ ಬಂದ ಈ ಕುಟುಂಬದವರು ಮಾದರಿಯಾಗಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಸ್ವತಂತ್ರ್ಯ ಮನೋಭಾವ ಮತ್ತು ಆತ್ಮ ರಕ್ಷಣೆಯ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ’ ಎಂದು ಮಳ್ಳೂರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಶಕುಂತಲಮ್ಮ ತಿಳಿಸಿದರು.
‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಮುಖ್ಯ ಶಿಕ್ಷಕಿ ಶಕುಂತಲಮ್ಮ, ದೈಹಿಕ ಶಿಕ್ಷಕ ಅಶ್ವತ್ಥನಾರಾಯಣ, ಸಹಶೀಕ್ಷಕರಾದ ಗಿರಿಜಮ್ಮ, ಅರುಣ, ಸೀನಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ವೀರಗಾಸೆ ಕಲಾವಿದ ಗಂಗಾಧರ್ ಅವರಿಗೆ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಹೈದರಾಬಾದ್ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರವು ‘ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.

ತಾಲ್ಲೂಕಿನ ವಿವಿದೆಡೆ ವಿದ್ಯುತ್ ಸ್ಥಗಿತ

0

ಪವರ್ಗ್ರಿಡ್ ಕಾರ್ಪರೇಷನ್ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಸೇಲಂನಿಂದ ಮಧುಗಿರಿಯ ವರೆಗೂ ೭೬೫ ಕೆವಿ ವಿದ್ಯುತ್ ಮಾರ್ಗವನ್ನು ಅಳವಡಿಸುತ್ತಿದ್ದು ತಾಲ್ಲೂಕಿನ ನಾಗಮಂಗಲ, ಕಾಚಹಳ್ಳಿ, ಭಕ್ತರಹಳ್ಳಿ ಮುಖಾಂತರ ಸದರಿ ಮಾರ್ಗವು ಹಾದು ಹೋಗುವದರಿಂದ ಎಫ್-೧ ಯಣ್ಣಂಗೂರು, ಎಫ್-೨ ಹೊಸಪೇಟೆ, ಎಫ್-೪ ನಾಗಮಂಗಲ, ಎಫ್-೪ ಭಕ್ತರಹಳ್ಳಿ, ಎಫ್-೫ ಎನ್ ಜೆವೈ ಮಾರ್ಗ ವ್ಯಾಪ್ತಿಯ ಗ್ರಾಮಗಳಿಗೆ ಜೂನ್ ೨೨ ರಿಂದ ಜೂನ್ ೨೫ ರವರೆಗೂ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ.ಬೈರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣ, ಆಸ್ತಿಗಿಂತ ಆರೋಗ್ಯ ಮುಖ್ಯ

0

ದೈಹಿಕ ಮತ್ತು ಮಾನಸಿಕ ಸಮನ್ವಯತೆಗಾಗಿ ಯೋಗ ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತುಮಕೂರು ವಿಭಾಗದ ಶಾರೀರಕ್ ಪ್ರಮುಖ್ ಮು.ವೆಂಕಟೇಶ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಷ್ಟಗಳಿಗಿಂತ ಹೆಚ್ಚಾಗಿ ಸುಖವನ್ನೆ ಬಯಸುತ್ತಾರೆ. ಈ ನಿಟ್ಟಿನಲ್ಲಿ ಸುಖವಾಗಿರಬೇಕಾದರೆ ಹಣ, ಆಸ್ತಿ, ಅಂತಸ್ತುಗಳ ಮೇಲೆ ಹೆಚ್ಚು ವ್ಯಾಮೋಹ ಬೆಳೆಸಿಕೊಂಡು ಹಣ ಆಸ್ತಿಯನ್ನು ಸಂಪಾದಿಸುತ್ತಾರೆ. ಉತ್ತಮ ಆರೋಗ್ಯ ಹಾಗು ನೆಮ್ಮದಿಯ ಜೀವನ ನಡೆಸಲು ತಾವು ಗಳಿಸಿದ ಅಷ್ಟೂ ಹಣ, ಆಸ್ತಿ ಖರ್ಚು ಮಾಡುತ್ತಾರೆ. ಇದರಿಂದ ಶಾರೀರಕ ಹಾಗು ಮಾನಸಿಕ ನೆಮ್ಮದಿ ಸಿಗದೇ ಪರಿತಪಿಸುತ್ತಾರೆ.
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದಾಗಿ ಈಚೆಗೆ ವಿವಿಧ ರೀತಿಯ ಖಾಯಿಲೆಗಳು ಬರುತ್ತಿದ್ದು ಇವುಗಳನ್ನು ತಡೆಗಟ್ಟಲು ಯೋಗ ಸಹಕಾರಿಯಾಗಲಿದೆ ಎಂದರು.
ಯೋಗ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದದ್ದು ಇದೀಗ ಇಡೀ ವಿಶ್ವವೆಲ್ಲಾ ಅದನ್ನೊಪ್ಪಿಕೊಂಡು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿದೆ. ಇಡೀ ವಿಶ್ವಕ್ಕೆ ನೆಮ್ಮದಿ ಬೇಕು ಎನಿಸುತ್ತದೆ. ಹಾಗಾಗಿ ಯುವಪೀಳಿಗೆ ಮುಂದಿನ ದಿನಗಳಲ್ಲಿ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯೋಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗವನ್ನು ಮಾಡುವುದರಿಂದ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ, ಕ್ರೀಯಾಶೀಲತೆ ಹಾಗೂ ದಿನನಿತ್ಯ ಚಟುವಟಿಕೆಯಿಂದ ಇರಲು ಯೋಗ ಸಹಕಾರಿಯಾಗಿರುತ್ತದೆ, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಯೋಗವನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಯೋಗ ಕಾರ್ಯಕ್ರಮದಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ತಾರಾಸನ, ಅರ್ಧಚಂದ್ರಾಸನ, ಪದ್ಮಾಸನ, ಅರ್ಧಕಟಿ ಚಕ್ರಾಸನ, ಸೇರಿದಂತೆ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮು.ವೆಂಕಟೇಶ್ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಸಿ.ವೆಂಕಟಶಿವಾರೆಡ್ಡಿ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳಾ, ಒಕ್ಕಲಿಗ ಯುವಸೇನೆ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಒಕ್ಕಲಿಗ ಯುವಸೇನೆ ನಗರಾಧ್ಯಕ್ಷ ಪುರುಷೋತ್ತಮ್ಬಾಬು, ಪ್ರಾಧ್ಯಾಪಕರಾದ ಎಚ್.ಸಿ.ಮುನಿರಾಜು, ಲೋಕೇಶ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಯೋಗೀಶ್, ಅಬ್ದುಲ್ ಅಲೀಂ, ಶಿವಾರೆಡ್ಡಿ, ಲಕ್ಷ್ಮಯ್ಯ, ಕೆ.ಅಶ್ವಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಿರಂತರ ಯೋಗಿಗಳಾಗಿ, ನಿರೋಗಿಗಳಾಗಿ

0

ಯೋಗದ ಮೂಲಕ ಆರೋಗ್ಯ, ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು, ನಿರಂತರ ಯೋಗಿಗಳಾಗಿ, ನಿರೋಗಿಗಳಾಗಿ ಎಂದು ಮುಖ್ಯ ಶಿಕ್ಷಕರಾದ ಎಸ್.ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿಶ್ವ ಯೋಗ ದಿನಾಚರಣೆಯನ್ನು ಸಾಮೂಹಿಕವಾಗಿ ಯೋಗ ಮಾಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಯೋಗ ಗುರು ಎಚ್.ಎಸ್. ವಿಠ್ಠಲ್ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನವನ್ನು ಮಾಡಿಸುವುದರ ಮುಖೇನ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳ ಜೊತೆಯಲ್ಲಿ ಶಿಕ್ಷಕರು ಸಹ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.
ಶಿಕ್ಷಕರಾದ ಶಿವಕುಮಾರ್, ನವೀನ್ ಕುಮಾರ್, ಡಿ.ಭವ್ಯ, ದೊಡ್ಡ ನಾಯ್ಕ, ಸವಿತ, ಶಿವಶಂಕರ್, ಸೈಯದ್ ಷರ್ಫುದ್ದೀನ್ ಪಾಷ ಹಾಜರಿದ್ದರು.

ವಿಶ್ವ ಯೋಗದಿನಕ್ಕಾಗಿ ಅಂಚೆ ಇಲಾಖೆಯ ವಿಶಿಷ್ಠ ಮೊಹರು

0

ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳ ವತಿಯಿಂದ ಯೋಗ ದಿನಾಚರಣೆಯನ್ನು ಯೋಗಾಸನಗಳನ್ನು ಮಾಡುವ ಮೂಲಕ ಮತ್ತು ಯೋಗದ ಉಪಯುಕ್ತತೆಯನ್ನು ವಿವರಿಸುವ ಮೂಲಕ ಆಚರಿಸಲಾಗುತ್ತಿದೆ.
ಇವರೊಂದಿಗೆ ಅಂಚೆ ಕಚೇರಿಯವರೂ ತಮ್ಮದೇ ಆದ ರೀತಿಯಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ನಗರದ ಅಂಚೆ ಕಚೇರಿಯಲ್ಲಿ ವಿಶ್ವ ಯೋಗದಿನಕ್ಕಾಗಿಯೇ ವಿಶಿಷ್ಠವಾದ ರದ್ದುಪಡಿಸುವ ಮೊಹರನ್ನು ಮಾಡಿಸಿದ್ದಾರೆ.
ಪ್ರತಿಯೊಂದು ಪತ್ರವನ್ನೂ ರವಾನೆ ಮತ್ತು ಸ್ವೀಕಾರ ಮಾಡುವ ಅಂಚೆ ಕಚೇರಿಯವರು ಊರಿನ ಹೆಸರು ಮತ್ತು ದಿನಾಂಕದ ಮೊಹರನ್ನು ಹಾಕುವುದು ಪದ್ಧತಿ. ಆದರೆ ಮಂಗಳವಾರ ವಿಶ್ವ ಯೋಗದಿನದ ಪ್ರಯುಕ್ತ ಪದ್ಮ ಪರ್ವತಾಸನದ ಚಿತ್ರ, ಜೂನ್ 21 ತಾರೀಖನ್ನು ನಮೂದಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಎಂದು ಬರೆದಿದ್ದು, ಜೊತೆಯಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಎಂದು ಬರೆಯಲಾಗಿದೆ.
‘ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಅಂಚೆ ಮೊಹರನ್ನು ರೂಪಿಸಬೇಕೆಂದು ನಮಗೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಈ ರೀತಿಯ ಮೊಹರನ್ನು ಮಾಡಿಸಿದ್ದೇವೆ. ಅಂಚೆ ಚೀಟಿ ಸಂಗ್ರಹಕಾರರು ರಾಜ್ಯದ ವಿವಿದೆಡೆ ಇರುವ ವಿಭಿನ್ನ ರೀತಿಯ ಮೊಹರು ಬಿದ್ದ ಲಕೋಟೆಗಳನ್ನೂ ಸಂಗ್ರಹಿಸುತ್ತಾರೆ. ಇದು ಕೇವಲ ಈ ದಿನ ಅಂದರೆ ಜೂನ್ 21 ರಂದು ಮಾತ್ರ ಬಳಸುವುದರಿಂದ ಸಂಗ್ರಹಕಾರರೂ ಬಂದು ಕಾರ್ಡುಗಳಲ್ಲಿ ಮೊಹರನ್ನು ಹಾಕಿಸಿಕೊಂಡು ತಮ್ಮ ಆಪ್ತರಿಗೆ ಕಳುಹಿಸಿದರು ಮತ್ತು ತಮಗೂ ತೆಗೆದಿರಿಸಿಕೊಂಡರು’ ಎಂದು ಉಪ ಅಂಚೆ ಪಾಲಕರಾದ ಪ್ರಭಾವತಿ ತಿಳಿಸಿದರು.

ವಿಶ್ವವೇ ಒಂದು ಕುಟುಂಬ

0

ಇಡೀ ವಿಶ್ವವೇ ಒಂದು ಕುಟುಂಬದಂತೆ ಒಮ್ಮತದಿಂದ ದೇಹ, ಮನಸ್ಸು, ಬುದ್ಧಿಯನ್ನು ಶುದ್ಧಗೊಳಿಸಲು, ಶಾಂತಿಯುತ ಮತ್ತು ಆರೋಗ್ಯಕರ ಜೀವನಕ್ಕೆ ಯೋಗದ ದಿನಾಚರಣೆ ನಡೆಸುತ್ತಿರುವುದಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ‘ವಿಶ್ವ ಯೋಗ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಯೋಗಾಸನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಇಂದು ‘ವಿಶ್ವ ಯೋಗ ದಿನಾಚರಣೆ’ ನಡೆಸಲಾಗುತ್ತಿರುವುದು ಯೋಗದ ಹಿರಿಮೆಯನ್ನು ತಿಳಿಸುತ್ತದೆ. ಭಾರತೀಯ ಯೋಗ ಪದ್ಧತಿಗೆ ವಿಶ್ವಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿ. ಒತ್ತಡ ಬದುಕಿನಿಂದ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ನಾನಾ ಖಾಯಿಲೆಗಳಿಂದ ಜನರು ಬಳಲುತ್ತಿದ್ದು, ಇದಕ್ಕೆ ಯೋಗ ಪರಿಹಾರವಾಗಲಿದೆ ಎಂದು ಹೇಳಿದರು.
ನಗರದ ರೈಲ್ವೆ ನಿಲ್ದಾಣ, ಮಾರಮ್ಮ ವೃತ್ತ, ಉಲ್ಲೂರುಪೇಟೆ, ಕೋಟೆ ವೃತ್ತ, ಬಸ್ ನಿಲ್ದಾಣ, ಹೂ ವೃತ್ತಗಳ ಬಳಿ ಶಾಲಾ ವಿದ್ಯಾರ್ಥಿಗಳು ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ನಿಂತು ಮಾಡುವ ಆಸನಗಳಾದ ತಾಡಾಸನ, ಪಾದ ಹಸ್ತಾಸನ, ಚಕ್ರಾಸನ, ವೀರಭದ್ರಾಸನ, ವೃಕ್ಷಾಸನ, ತ್ರಿಕೋಣಾಸನ ಮುಂತಾದವುಗಳನ್ನು ಪ್ರದರ್ಶಿಸಿದರು. ಪ್ರತಿಯೊಂದು ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸುವಾಗ ಅವುಗಳಿಂದಾಗುವ ಉಪಯೋಗಗಳ ಬಗ್ಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ವಿವರಿಸಿದರು.
‘ಯೋಗದಿಂದ ರೋಗ ಮುಕ್ತ ಜೀವನ’, ‘ನಮ್ಮ ನಡಿಗೆ ಯೋಗದ ಕಡೆಗೆ’ ಎಂದು ಘೋಷಣೆಗಳನ್ನು ಕೂಗುತ್ತಾ ಶೋಭಾಯಾತ್ರೆಯನ್ನು ವಿವಿಧ ಶಾಲೆಯ ವಿದ್ಯಾರ್ಥಿಗಳು ಮತ್ತು ಯೋಗ ಬಂಧುಗಳು ನಡೆಸಿದರು.

ವಿಶ್ವ ಯೋಗ ದಿನಾಚರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಯೋಗ ದಿನಾಚರಣೆಗಾಗಿ ಯೋಗಾಭ್ಯಾಸದ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು.

ಗ್ರಾಮೀಣ ಹೆಣ್ಣುಮಕ್ಕಳು ಕನಿಷ್ಠ ಪದವಿಯವರೆಗಾದರೂ ವಿದ್ಯಾಭ್ಯಾಸ ಮಾಡಬೇಕು

0

ಸರ್ಕಾರ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಅವನ್ನು ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹೆಣ್ಣುಮಕ್ಕಳು ಕನಿಷ್ಠ ಪದವಿಯವರೆಗಾದರೂ ವಿದ್ಯಾಭ್ಯಾಸ ಮಾಡಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ದುಡಿದು ಆರ್ಥಿಕವಾಗಿ ಭದ್ರತೆಯನ್ನು ಪಡೆದುಕೊಳ್ಳಬೇಕು. ಆಗ ಸಮಾಜ ಬದಲಾಗಲು ಸಾಧ್ಯ. ಎಷ್ಟೇ ಕೊರತೆಗಳಿದ್ದರೂ ಅವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡಬೇಕು. ಈಗ ಕಷ್ಟಪಟ್ಟು ಓದಿದರೆ ಮುಂದೆ ಅದರ ಫಲ ಸಿಕ್ಕೇಸಿಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಶಿಸ್ತು, ಸಮಯಪ್ರಜ್ಞೆ ಇರದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಬಾಲ್ಯದಲ್ಲಿ ಕಲಿತದ್ದು ಕೊನೆಯವರೆಗೂ ಉಳಿಯುತ್ತದೆ. ಹಾಗಾಗಿ ಉತ್ತಮ ನಡತೆಯನ್ನು ಬೆಳೆಸಿಕೊಂಡು ತಂದೆ ತಾಯಿ ಮತ್ತು ಹುಟ್ಟಿದೂರಿಗೆ ಕೀರ್ತಿ ತರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ ಶಾಲೆಗೆ ಕಾಂಪೌಂಡ್, ಹೆಚ್ಚುವರಿ ಕೊಠಡಿ, ವಿಜ್ಞಾನ ಪ್ರಯೋಗಾಲಯ ಮತ್ತು ರಂಗಮಂದಿರ ಪೂರ್ನಗೊಳಿಸಿಕೊಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್, ಮಾಜಿ ಸದಸ್ಯ ಮಾಸ್ತಿ, ದೇವರಾಜ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಮುದಾಯದ ಸಹಕಾರ ಸರ್ಕಾರಿ ಶಾಲೆಗೆ ಅಗತ್ಯ

0

ಸರ್ಕಾರಿ ಶಾಲೆಗಳಲ್ಲಿ ಸಮುದಾಯದ ಸಹಕಾರದೊಂದಿಗೆ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯ ಬೆಳವಣಿಗೆಗೆ ಶಿಕ್ಷಕರು ನೆರವಾಗಬೇಕು ಎಂದು ಕೋಡಿಯಾಕ್ ಇನ್ಫೋಟೆಕ್ ಸಂಸ್ಥೆಯ ಸಂತೋಷ್ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ಫೋಟೆಕ್ ಸಂಸ್ಥೆಯ ವತಿಯಿಂದ ವಿವಿಧ ರೀತಿಯ ಪುಸ್ತಕಗಳು, ಲೇಖನ ಸಾಮಗ್ರಿ, ಕೈಚೀಲ ಮುಂತಾದವುಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಕ್ರಿಯಾಶೀಲರು ಮತ್ತು ಪ್ರತಿಭಾನ್ವಿವಿತರು ಆಗಿರುತ್ತಾರೆ. ಆದರೆ ಅವರನ್ನು ನೈಪುಣ್ಯತೆ ಮತ್ತು ಕುಶಲತೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಬೆಳೆಸಿದರೆ ಉನ್ನತ ಸಾಧನೆಗಳನ್ನು ಮಾಡುವರು. ತಾಲ್ಲೂಕಿಗೆ ಹೆಸರನ್ನು ತರುವರು ಎಂದರು.
ಮುಖ್ಯ ಶಿಕ್ಷಕ ವೆಂಕಟರೆಡ್ಡಿ, ಶಿಕ್ಷಕರಾದ ಎಂ.ಮಂಜುನಾಥ, ಪಿ.ವಿ.ರಾಮರೆಡ್ಡಿ, ಲಲಿತ, ಮಂಜುಳ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಳೆ ನೀರನ್ನು ಬಳಸಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಸಲು ಯೋಜನೆ

0

ತಾಲ್ಲೂಕಿನಲ್ಲಿ ಸುಮಾರು 5,935 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಕೈಗೊಂಡಿದ್ದು, ಸುಮಾರು 6,039 ಕುಟುಂಬಗಳು ಹಿಪ್ಪುನೇರಳೆ ಬೇಸಾಯವನ್ನು ಅವಲಂಬಿಸಿದ್ದಾರೆ. ರೇಷ್ಮೆ ಗೂಡಿನ ಬೆಲೆ ಹೆಚ್ಚಳದಿಂದಾಗಿ ಇನ್ನಷ್ಟು ರೈತರು ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿತರಾಗುತ್ತಿದ್ದಾರೆ.
ಪ್ರತಿದಿನ ಸರಾಸರಿ 40 ಟನ್ ಗೂಡು ಆವಕವಾಗುತ್ತಿದ್ದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಗ 28 ಟನ್ ಗೂಡಿನ ಆವಕವಾಗುತ್ತಿದೆ. ಕಳೆದ ವರ್ಷಕ್ಕಿಂತ ಶೇಕಡಾ 10 ರಷ್ಟು ಕುಂಠಿತವಾಗಲು ಕಾರಣ ಉಷ್ಣಾಂಶ ಏರಿಕೆ ಹಾಗೂ ನೀರಿನ ಅಭಾವವಾಗಿದೆ. ಈಗ ಮಳೆ ಬೀಳುತ್ತಿರುವುದರಿಂದ ಇನ್ನು 15 ದಿನಗಳೊಳಗೆ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಲಿದೆ.
ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿಸಲು ರೇಷ್ಮೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನರೇಗಾದಲ್ಲಿ ಹೊಸ ಪದ್ಧತಿಯಾದ ಇಂಡೋ ಜಪಾನೀಸ್ ವಿಧಾನವಾದ ಜೋಡಿ ಸಾಲು ಪದ್ಧತಿಯಲ್ಲಿ ಹಿಪ್ಪುನೇರಳೆ ನಾಟಿ ಮಾಡಲು 221 ಮಾನವ ದಿನಗಳ ಕೂಲಿವೆಚ್ಚ ಮತ್ತು ಸಾಮಗ್ರಿ ವೆಚ್ಚ ಕೊಡಲಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ.
ಮಳೆಯಾಶ್ರಯದಲ್ಲಿ ಮರಗಳ ರೂಪದಲ್ಲಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲು ರೇಷ್ಮೆ ಇಲಾಖೆಯಿಂದ ಯೋಜನೆಯನ್ನು ರೂಪಿಸಿದೆ. 300 ಎಕರೆಯಲ್ಲಿ ನಾಟಿ ಮಾಡಲು ವರದನಾಯಕನಹಳ್ಳಿ ಗೇಟ್ ಬಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಒಂದು ಲಕ್ಷ ಮೂವತ್ತೈದು ಸಾವಿರ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿಕೊಡುತ್ತಿದ್ದಾರೆ. ಮುಂದಿನ ತಿಂಗಳಿನಲ್ಲಿ ಅವುಗಳನ್ನು ಇಲಾಖೆಯಿಂದ ವಿತರಿಸಲಾಗುತ್ತದೆ. 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ನಾಟಿ ಮಾಡಬಹುದಾಗಿದೆ. ಇದಕ್ಕೂ ನರೇಗಾದಿಂದ 161 ಮಾನವ ದಿನಗಳ ಕೂಲಿಯನ್ನೂ ನೀಡಲಾಗುವುದು ಎಂದು ಅವರು ತಿಳಿಸಿದರು.
ಹಿಪ್ಪುನೇರಳೆ ನರ್ಸರಿ ಮಾಡಲು ಹಾಗೂ 2 ಮತ್ತು 3ನೇ ವರ್ಷದ ಹಿಪ್ಪುನೇರಳೆ ತೋಟ ನಿರ್ವಹಣೆಗೂ ಸರ್ಕಾರ ಸಹಾಯಹಸ್ತ ಚಾಚಿದೆ. ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಮಳೆ ನೀರಿನಲ್ಲೂ ಮುಂದಿನ ದಿನಗಳಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಬಹುದಾಗಿದೆ ಎಂದರು.

ವಿಶ್ವ ಯೋಗ ದಿನಾಚರಣೆ

0

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿಡ್ಲಘಟ್ಟ ಶಾಖೆಯ ವತಿಯಿಂದ ಜೂನ್ 21ರ ಮಂಗಳವಾರದಂದು 2ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ನಗರದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ತಾಲ್ಲೂಕಿನ ಯೋಗ ಬಂಧು ಭಗಿನಿಯರು ಹಾಗೂ ಸಾರ್ವಜನಿಕರೊಂದಿಗೆ ಈ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ, ಯೋಗಾಸನ ಪ್ರದರ್ಶನ ಮತ್ತು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಶೋಭಾಯಾತ್ರೆಯ ಉದ್ಘಾಟನೆಯನ್ನು ಬೆಳಿಗ್ಗೆ 6.30 ಗಂಟೆಗೆ ನಗರದ ರೈಲ್ವೆ ನಿಲ್ದಾಣದ ಬಳಿ ಸರ್ಕಲ್ ಇನ್ಸ್ಪೆಕ್ಟರ್ ಟಿ.ಸಿ.ವೆಂಕಟೇಶ್, ಸಬ್ಇನ್ಸ್ಪೆಕ್ಟರ್ ವಿಜಯರೆಡ್ಡಿ ಮಾಡುವರು.
ಸಮಾರೋಪ ಸಮಾರಂಭವನ್ನು ನಗರೇಶ್ವರ ಕಲ್ಯಾಣಮಂಟಪದಲ್ಲಿ ಬೆಳಿಗ್ಗೆ 9.30 ಗಂಟೆಗೆ ಆಯೋಜಿಸಿದ್ದು, ಅಧ್ಯಕ್ಷತೆಯನ್ನು ಶಾಸಕ ಎಂ.ರಾಜಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಯುಶ್ ಇಲಾಖೆಯ ವೈದ್ಯಾಧಿಕಾರಿ ಕೆ.ವಿಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಜನಾ ಪ್ರಮುಖ್ ಯು.ವೈ.ಮಂಜುನಾಥ್, ಸಂಚಾಲಕ ಎಸ್.ಶಂಕರ್ ವಹಿಸಲಿದ್ದಾರೆ.

ವಿಶ್ವ ಯೋಗ ದಿನಾಚರಣೆ

0

ಧೂಳು ಕಣಗಳನ್ನು ಕಂಡರೆ ಈ ವ್ಯಕ್ತಿಗೆ ಭೀತಿ. ಆಸ್ತಮಾ ಕಾಯಿಲೆ ಇವರನ್ನು ಕಂಗೆಡಿಸಿತ್ತು. ಅದಕ್ಕೆಂದು ತೆಗೆದುಕೊಳ್ಳುತ್ತಿದ್ದ ಔಷಧಿಗಳ ಅಡ್ಡಪರಿಣಾಮಗಳು ಇವರನ್ನು ಜರ್ಜರಿತಗೊಳಿಸಿತ್ತು. ಆದರೆ ಈಗವರು ಅತ್ಯುತ್ತಮ ಯೋಗಪಟು. ನಗರದಲ್ಲೀಗ ನೂರಾರು ಜನರಿಗೆ ಯೋಗಾಭ್ಯಾಸ ಕಲಿಸುವ ಗುರುವಾಗಿದ್ದಾರೆ ಪಿ.ಶ್ರೀಕಾಂತ್. ನಿರಂತರವಾಗಿ ಯೋಗಾಭ್ಯಾಸ ಮಾಡುವುದಲ್ಲದೆ ಪ್ರತಿ ರಥಸಪ್ತಮಿಯಂದು ೧೦೦೮ ಸೂರ್ಯನಮಸ್ಕಾರಗಳನ್ನು ಇವರು ಮಾಡುತ್ತಾರೆ.
೧೯೯೮ರಲ್ಲಿ ಮೊಟ್ಟಮೊದಲು ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಉಚಿತ ಯೋಗ ಶಿಕ್ಷಣದ ತರಗತಿಗೆ ಸೇರಿದ ಶ್ರೀಕಾಂತ್ ಪ್ರತಿ ದಿನ ತಪ್ಪದೆ ಯೋಗಾಭ್ಯಾಸ ಮಾಡತೊಡಗಿದರು. ಔಷಧಿಯಿಲ್ಲದೆ ಬದುಕಲು ಕಲಿತು ಈಗ ಇತರರಿಗೆ ನಿರೋಗಿಗಳಾಗಲು ಯೋಗ, ಪ್ರಾಣಾಯಾಮ, ಭಜನೆ ಹಾಗೂ ಧ್ಯಾನದ ಬಗ್ಗೆ ಮಾಹಿತಿ ನೀಡುವವರಾಗಿದ್ದಾರೆ.
ಪತಂಜಲಿ ಯೋಗ ಶಿಕ್ಷಣದಲ್ಲಿ ಜಿಲ್ಲಾ ಪ್ರಶಿಕ್ಷಣ ಶಿಬಿರ, ಪ್ರಾಂತ್ಯ ಮಟ್ಟದ ಪ್ರಶಿಕ್ಷಣ ಶಿಬಿರ, ಆತ್ಮಾನುಸಂಧಾನ ಶಿಬಿರ ಹಾಗೂ ಹಲವಾರು ರಾಜ್ಯ ಮಟ್ಟದ ಯೋಗ ಶಿಬಿರಗಳಲ್ಲಿ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ ಹಲವಾರು ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಯೋಗ ಬಂಧುಗಳನ್ನೊಳಗೊಂಡ ಭಜನಾ ಮಂಡಳಿಯ ನೇತೃತ್ವ ವಹಿಸಿ ನಗರದಲ್ಲಿ ನಡೆಯುವ ಎಲ್ಲಾ ಧರ್ಮಗಳ ಶುಭ ಕಾರ್ಯಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಹರಿಜನರ ಕಾಲೋನಿಯಲ್ಲೂ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
‘ನನ್ನನ್ನು ಕಾಡುತ್ತಿದ್ದ ಆಸ್ತಮಾವನ್ನು ದೂರ ಮಾಡಲು, ಆರೋಗ್ಯ ಗಟ್ಟಿ ಮಾಡಿಕೊಳ್ಳಲೆಂದು ಯೋಗ ಶಿಕ್ಷಣಕ್ಕೆ ಸೇರಿದೆ. ಆರೋಗ್ಯ ಸುಧಾರಿಸಿದಂತೆ ಯೋಗವೆಂದರೆ ಕೇವಲ ಆಸನಗಳಲ್ಲ ಎಂಬುದು ಅರಿವಾಯಿತು. ಆಧ್ಯಾತ್ಮ, ಸಾಮಾಜಿಕ ನಡವಳಿಕೆ, ಶಿಸ್ತುಬದ್ಧ ಜೀವನಕ್ರಮ, ಸಮಾಜ ಸೇವೆ, ಆತ್ಮಾವಲೋಕನ ಹಾಗೂ ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ ಎಂಬ ದೃಷ್ಟಿಕೋನ ಲಭ್ಯವಾಯಿತು. ವಿದ್ಯೆ ಮತ್ತು ಅನ್ನವನ್ನು ಹಣ ಪಡೆಯದೆ ನೀಡಬೇಕೆನ್ನುತ್ತದೆ ನಮ್ಮ ಸಂಸ್ಕೃತಿ. ಅದರಂತೆಯೇ ನಾನು ಕಲಿತು ಅನುಕೂಲ ಪಡೆದಂತಹ ಯೋಗ ವಿದ್ಯೆಯನ್ನು ಇತರರಿಗೂ ಕಲಿಸಲು ಪ್ರಾರಂಭಿಸಿದೆ. ಸಕ್ಕರೆ ಕಾಯಿಲೆ, ಬಿಪಿ ಹಾಗೂ ಆಸ್ತಮಾದಂತಹ ರೋಗಗಳನ್ನು ಅಲೋಪತಿ ವೈದ್ಯದ ಔಷಧಿಗಳಿಂದ ನಿಯಂತ್ರಿಸಬಹುದಷ್ಟೇ. ಆದರೆ ನಿರಂತರ ಯೋಗಾಭ್ಯಾಸದಿಂದ ಇವನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ. ಜೊತೆಯಲ್ಲಿ ನಮ್ಮ ಜೀವನ ಪದ್ಧತಿಯನ್ನೂ ಉತ್ತಮಗೊಳಿಸಿಕೊಳ್ಳಬಹುದು. ಈಗ ಶಿಡ್ಲಘಟ್ಟ ಮತ್ತು ಗ್ರಾಮಂತರ ಪ್ರದೇಶದಲ್ಲಿ ಯೋಗ ಶಿಕ್ಷಣವನ್ನು ಕಲಿಸುತ್ತಿರುವ ತಂಡವೇ ತಯಾರಾಗಿದೆ. ಪ್ರತಿದಿನ ಅಭ್ಯಾಸ ಮಾಡುವ ಜನರ ಸಂಖ್ಯೆಯು ಸಾಕಷ್ಟು ಹೆಚ್ಚಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಶ್ರೀಕಾಂತ್ ಯೋಗಾನುಭವವನ್ನು ಹೇಳುವರು.

ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ

0

ಹಾಲು ಉತ್ಪಾದಕರ ಸಹಕಾರ ಸಂಘಗಳು, ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಆರ್ಥಿಕವಾಗಿ ಬೆಳವಣಿಗೆಯನ್ನು ಕಾಣಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಮರಿಹಳ್ಳಿ ಗ್ರಾಮದಲ್ಲಿ ಭಾನುವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿನ ೧೯೨ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ತಾಲ್ಲೂಕಿನಿಂದ ಪ್ರತಿನಿತ್ಯ ೧.೨೦ ಲಕ್ಷ ಲೀಟರ್ ಹಾಲನ್ನು ಉತ್ಪಾದನೆ ಮಾಡುವ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಾಲ್ಲೂಕು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನೂತನ ಸಂಘಗಳ ಸ್ಥಾಪನೆಯ ಮೂಲಕ ಮೊದಲ ಸ್ಥಾನಕ್ಕೇರಬೇಕು ಎಂದರು.
ದತ್ತಿಯ ಮೂಲಕ ಉತ್ಪಾದಕರು ಹಾಗೂ ಅವರ ಮಕ್ಕಳ ಕ್ಷೇಮಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ, ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ರಾಜಕೀಯ ರಹಿತವಾಗಿ ಸಹಕಾರ ಸಂಘಗಳನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು, ಡಿ.ಸಿ.ಸಿ.ಬ್ಯಾಂಕ್ ಹಾಗೂ ಎಸ್.ಎಫ್.ಸಿ.ಎಸ್.ಬ್ಯಾಂಕುಗಳು ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಲಭ್ಯವಾಗುವಂತಹ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಹಾಲಿನ ಉತ್ಪಾದನೆಯಲ್ಲಿ ತೊಡಗಿಸಿಕೊಂಡು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದರ ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಮಾಜಿ ಅಧ್ಯಕ್ಷ ಯರ್ರಬಚ್ಚಪ್ಪ, ಮುರಳಿ, ಶ್ರೀನಿವಾಸ್, ಗೋವಿಂದಪ್ಪ, ಮುನಿಯಪ್ಪ, ಸೋಮು, ಶಿಡ್ಲಘಟ್ಟ ಉಪಕಚೇರಿ ಉಪವ್ಯವಸ್ಥಾಪಕ ಹನುಮಂತರಾವ್, ನಾರಾಯಣಸ್ವಾಮಿ, ಮುನಿರೆಡ್ಡಿ, ಅಂಬರೀಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಗತಿಪರ ರೈತರ ತೋಟದಲ್ಲಿ ಕೃಷಿ ಅಧ್ಯಯನ

0

ಸಾಗುವಳಿ ಮಾಡದೇ ಕೃಷಿ ಕಾಯಕ ಕೈಗೊಳ್ಳುವುದು. ರಸಗೊಬ್ಬರಗಳ ಬಳಕೆ ಮಾಡದಿರುವುದು. ಕಳೆ ತೆಗೆಯದಿರುವುದು ಹಾಗೂ ಕೀಟನಾಶಕ ಸಿಂಪಡಿಸದೇ ಇರುವುದು ಸಹಜ ಕೃಷಿಯ ಮೂಲ ಪಾಠ ಎಂದು ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಈಚೆಗೆ ಮಧುಗಿರಿ ತಾಲ್ಲೂಕಿನಿಂದ ಆಗಮಿಸಿದ್ದ ೫೫ ಮಂದಿ ರೈತರು ಹಾಗೂ ರೈತ ಮಹಿಳೆಯರಿಗೆ ತಾವು ಕೈಗೊಂಡಿರುವ ಸಾಯವಯ ಹಾಗೂ ಸಹಜ ಕೃಷಿಯ ಬಗ್ಗೆ ತಮ್ಮ ತೋಟದಲ್ಲಿ ವಿವರಿಸಿ ಅವರು ಮಾತನಾಡಿದರು.
ಜೇನುಸಾಕಣೆ, ಸೀಮೆಹಸುಗಳು, ಕುರಿಗಳು, ಕೋಳಿಗಳನ್ನೂ ಸಾಕುತ್ತಾ ಕೃಷಿ ತ್ಯಾಜ್ಯಗಳಿಂದ ಗೋಬರ್ ಗ್ಯಾಸ್ ಅನಿಲ, ರಸಸಾರ ತೊಟ್ಟಿ ಹಾಗೂ ಕಾಂಪೋಸ್ಟ್ಗಳನ್ನು ರೂಪಿಸಿಕೊಂಡಲ್ಲಿ ಮಾತ್ರ ಸಮಗ್ರ ಕೃಷಿ ಸಾಧ್ಯ. ಇದರಿಂದ ರೈತರ ಆರ್ಥಿಕ ಮೂಲಗಳು ಹೆಚ್ಚಾಗುತ್ತವೆ. ರೈತರ ಉತ್ಪನ್ನಗಳು ವಿಷರಹಿತವಾಗಿರಬೇಕು. ಅದಕ್ಕಾಗಿ ಆದಷ್ಟೂ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಎಂದರು.
ಕೃಷಿಯ ಅಂತಿಮ ಉದ್ದೇಶ ಬೆಳೆ ಬೆಳೆಯುವುದಲ್ಲ. ಬದಲಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ಹಾಕುವುದು ಎಂದು ಹೇಳಿದ ಫುಕುವೊಕ ಅವರ ಮಾತುಗಳು ಎಲ್ಲ ರೈತರಿಗೂ ಪ್ರೇರಣೆಯಾಗಬೇಕು. ಪ್ರಕೃತಿಯ ಭಾಗವಾದ ಕಲ್ಲು, ಮಣ್ಣು, ನೀರು ಗಾಳಿ, ಅಗ್ನಿ, ಆಕಾಶ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯಾ, ಎರೆಹುಳು ಎಲ್ಲವೂ ಅವಯವಗಳೇ ಆಗಿವೆ. ಈ ಅವಯವಗಳನ್ನು ಬಳಸುವ ಹಾಗೂ ಹೆಚ್ಚಿಸುವ ಕೃಷಿ ವಿಧಾನವೇ ಸಾವಯವ ಎಂದು ಅವರು ತಿಳಿಸಿದರು.
ಅರಿಶಿನ, ಈರುಳ್ಳಿ, ಬೆಳ್ಳುಳ್ಳಿ, ಧನಿಯಾ, ಅರಿವೆ ಸೊಪ್ಪು, ದಂಟಿನಸೊಪ್ಪು, ಕೊತ್ತಂಬರಿಸೊಪ್ಪು, ಪಾಲಕ್, ಸಬಾಕ್ಷಿಸೊಪ್ಪು, ಕರಿಬೇವು, ರಾಗಿ, ಮುಸುಕಿನ ಜೋಳ, ಸಾಸಿವೆ, ಅವರೆ, ಬದನೇಕಾಯಿ, ಬೆಂಡೇಕಾಯಿ, ನಿಂಬೆಹಣ್ಣು, ಹುಣಸೆಹಣ್ಣು, ಅರಳು, ಹೊಂಗೆಬೀಜ, ಬೇವು, ಮೆಣಸಿನಕಾಯಿ, ನುಗ್ಗೇಕಾಯಿ, ಸಪೋಟಾ, ತೆಂಗು, ಮಾವು, ಗೋಡಂಬಿ, ಸಿಹಿಗುಂಬಳ, ಸೋರೇಕಾಯಿ, ಜೇನು, ಹಿಪ್ಪುನೇರಳೆ, ಹಾಲು, ಹಲಸು, ಗೆಣಸು, ಚಪ್ಪರದವರೆ, ಕಾಕಿಜೋಳ, ಪುದೀನ, ಶುಂಠಿ, ಅಂಟವಾಳ, ವೆಲ್ವೆಟ್ ಬೀನ್ಸ್, ಅಗಸೆ ಮುಂತಾದ ಬೆಳೆಗಳನ್ನು ಅವರು ರಾಸಾಯನಿಕಗೊಬ್ಬರ ಬಳಸದೇ ಬೆಳೆದಿರುವ ಬಗ್ಗೆ ವಿವರಿಸಿದರು.
ತಾಲ್ಲೂಕಿನ ಕೃಷಿ ಅಧಿಕಾರಿ ಜನಾರ್ಧನ ಉಪಸ್ಥಿತರಿದ್ದರು

ಶಾಶ್ವತ ನೀರಾವರಿ ಹೋರಾಟ ಸಮಿತಿಯವರು ಪೊಲೀಸರೊಂದಿಗೆ ಸಹಕರಿಸಿ

0

ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕಿರುವುದರಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಯವರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದ ಬಗ್ಗೆ ರೂಪುರೇಷೆಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಡಿ.ವೈ.ಎಸ್.ಪಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾನುವಾರ, ಜೂನ್ 21ರಂದು ಮುಖ್ಯಮಂತ್ರಿಗಳ ಮನೆಯ ಮುಂದೆ ನಡೆಸಲು ಉದ್ದೇಶಿಸಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿಯವರ ಧರಣಿಯ ಕುರಿತಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿ ನಡೆದ ನೀರಾವರಿ ಹೋರಾಟದಲ್ಲಿ ಬೆಂಗಳುರಿನ ಮೇಕ್ರಿ ಸರ್ಕಲ್ ಬಳಿ ಕೆಲ ಬಸ್ಗಳು ಜಖಂಗೊಂಡು, ಸಂಚಾರ ಅಸ್ತವ್ಯಸ್ತಗೊಂಡು ನಾಗರಿಕರಿಗೆ ಅಪಾರ ತೊಂದರೆಯುಂಟಾಗಿತ್ತು. ಇದು ಮರುಕಳಿಸಬಾರದು. ಪೊಲೀಸ್ ಇಲಾಖೆ ರೈತವಿರೋಧಿಯಲ್ಲ. ಆದರೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿರುವುದರಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಯವರು ಸಹಕರಿಸಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರ ಶಾಶ್ವತ ನೀರಾವರಿ ಯೋಜನೆ ಕುರಿತಂತೆ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದು, ಆ ಬಗ್ಗೆ ಸಾಕಷ್ಟು ಅಸಮಧಾನಗಳಿವೆ. ಸ್ಥಳೀಯ ತಜ್ಞರು ಹಾಗೂ ಎಂಜಿನಿಯರುಗಳನ್ನು ಸಮಿತಿಯಲ್ಲಿ ಸೇರಿಸಿಕೊಂಡಿಲ್ಲ. ಈ ಬಗ್ಗೆ ನಾಳೆ ವಿಕಾಸಸೌಧದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಿದ್ದು, ಆ ಸಭೆಯ ನಂತರ ಧರಣಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರಾಮಕೃಷ್ಣಪ್ಪ, ನಂಜಪ್ಪ, ನಾರಾಯಣಸ್ವಾಮಿ, ರವಿಕುಮಾರ್, ಪುರುಷೋತ್ತಮ್, ಪ್ರತೀಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಪೋತನ ಭಾಗವತ ಭಕ್ತಿಯ ಪ್ರತೀಕ

0

ಸನಾತನ ಧರ್ಮದ ಸಾರಂಶ ಭಾಗವತದಲ್ಲಿದೆ. ಭಾಗವನ್ ವ್ಯಾಸರು ಈ ಭಾಗವತವನ್ನು ಮನುಕುಲಕ್ಕೆ ನೀಡಿದ ಗುರುಪಿತಾಮಹರು. ಇದನ್ನು ತೆಲುಗಿನಲ್ಲಿ ಸಮರ್ಪಿಸಿದವರು ಪೋತನಾಮಾತ್ಯರು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ನಗರದ ಅಶೋಕ ರಸ್ತೆಯಲ್ಲಿರುವ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಶ್ರೀರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೋತನ ಭಾಗವತ ಪ್ರವಚನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವುಗಳು ಪ್ರಾಪಂಚಿಕ ಆಸೆಗಳಲ್ಲೇ ಮುಳುಗಿದ್ದೇವೆ. ಇದರಿಂದ ನಮ್ಮ ಮಾನವ ಜನ್ಮದ ಗುರಿ ಏನು ಎನ್ನುವುದನ್ನು ಮರೆತಿದ್ದೇವೆ. ಈ ಮರೆತಿರುವ ಗುರಿಯನ್ನು ಎಚ್ಚರಿಸಲು ಮತ್ತು ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪೋತನ ಭಾಗವತ ಸಪ್ತಾಹ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಪೋತನ ಭಾಗವತವು ಗುರುವಾಕ್ಯಗಳಿಂದ ಕೂಡಿರುತ್ತದೆ. ಪೋತನ ಭಾಗವತವು ಭಕ್ತಿಯ ಪ್ರತೀಕ ಎಂದರು.
ಶ್ರೀರಾಮಾನುಜಾಚಾರ್ಯರ ಸಿದ್ದಾಂತ ಎಂದರೆ ಭಕ್ತಿಯ ಪಂಥ. ಭಕ್ತಿಯ ಮೂಲಕ ಪರಮಾತ್ಮನಿಗೆ ಶರಣಾಗತಿಯಾಗುವುದೇ ಈ ಸಿದ್ದಾಂತದ ಮೂಲ ಉದ್ದೇಶ. ಇದು ಕೇವಲ ತತ್ವವಲ್ಲ, ಸಾಧನೆಯ ಮಾರ್ಗ. ಇದನ್ನು ಸಾಮಾನ್ಯರು ಸಹ ಪಾಲಿಸಬಹುದು. ಇದಕ್ಕಾಗಿ ಹೆಚ್ಚು ಶ್ರಮಪಡಬೇಕಾಗಿಲ್ಲ. ರಾಮಾನುಜಾಚಾರ್ಯರ ತತ್ವ ಸಿದ್ದಾಂತ ಅನುಸರಿಸುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಧರ್ಮದ ಮೇಲೆ ಸಮಾಜ ನಿಂತಿದೆ. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ. ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಸತ್ಯನಾರಾಯಣರಾವ್ ಮಾತನಾಡಿ ದೈವ ಚಿಂತನೆಗಳಿಂದ ಶರೀರದಲ್ಲಿರುವ ಜೀವಕೋಶಗಳು ಚೈತನ್ಯಭರಿತವಾಗುತ್ತದೆ. ಇದರಿಂದ ಖಾಯಿಲೆಗಳು ದೂರವಾಗುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್ ರವರು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಭಾಗವತ ಪ್ರವಚನಕಾರರಾದ ಮಂಕಾಲ ಶ್ರೀಹರಿಶರ್ಮ ಅವರು ಪೋತನ ಭಾಗವತದ ಪ್ರವಚನವನ್ನು ನೀಡಿದರು. ಪ್ರವಚನದಲ್ಲಿ ಪೋತನ ಭಾಗವತದ ಹಲವಾರು ಘಟ್ಟಗಳನ್ನು ವಿವರಿಸಿ ವ್ಯಾಖ್ಯಾನಿಸಿದರು. ಏಳು ದಿನಗಳ ಕಾಲ ಸಂಜೆ ೬.೩೦ ರಿಂದ ೮ ಗಂಟೆಯವರೆಗೂ ಈ ಭಾಗವತ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಯೋಗಿನಾರೇಯಣ ಮಠ ಟ್ರಸ್ಟ್ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಸದಸ್ಯರಾದ ಕೆ.ನರಸಿಂಹಪ್ಪ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ವಾನರಾಶಿ ಬಾಲಕೃಷ್ಣ ಭಾಗವತರ್ , ಪೊಲೀಸ್ ಗುಪ್ತಚರ ಇಲಾಖೆಯ ರಮೇಶ್, ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಳೇ ರಘು, ಹನುಮಂತರಾಯಪ್ಪ, ದಾಸ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಯರಮರೆಡ್ಡಿ ವೆಂಕಟರಮಣಪ್ಪ, ತಾಲ್ಲೂಕು ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಡಿ.ಮಂಜುನಾಥ್, ಶ್ರೀನಾಥ್, ರಾಮಚಂದ್ರಪ್ಪ, ವಿಜಯಕುಮಾರ್, ಎಸ್.ಸೋಮಶೇಖರ್ ಮುಂತಾದವರು ಹಾಜರಿದ್ದರು.