ತಾಲ್ಲೂಕಿನ ಸಾದಲಿ ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿರುವ ಇರುಗಪ್ಪನಹಳ್ಳಿ ಗ್ರಾಮದ ಕೆರೆಗೆ ಆಗಮಿಸಿರುವ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳನ್ನು ಸ್ಥಳೀಯರು ಕೊಲ್ಲುತ್ತಿರುವುದನ್ನು ಕೂಡಲೇ ತಡೆಗಟ್ಟಬೇಕು. ಈ ಅಪರೂಪದ ಹಕ್ಕಿಗಳನ್ನು ಕೊಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕಿನ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರುಗಪ್ಪನಹಳ್ಳಿ ಗ್ರಾಮದ ಕೆರೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮೀನು ಬಿಟ್ಟು ಅದನ್ನು ಹರಾಜಿನ ಮೂಲಕ ಮಾರಲಾಗಿದೆ. ಮೀನನ್ನು ತಿನ್ನಲು ಬರುತ್ತವೆಂಬ ಕಾರಣವೊಡ್ಡಿ ಸ್ಥಳೀಯರು ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳನ್ನು ಕೊಲ್ಲುತ್ತಿದ್ದಾರೆ.
ದೇಶೀಯ ವಲಸೆ ಹಕ್ಕಿಗಳಾದ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು ಸಾಕಷ್ಟು ದೊಡ್ಡ ಹಕ್ಕಿಗಳು. ಭಾರತದಾದ್ಯಂತ ವಲಸೆ ಹೋಗುವ ಇವು ಆಗ್ನೇಯ ಏಷಿಯಾ ದೇಶಗಳಲ್ಲೂ ಕಂಡುಬರುತ್ತವೆ. ಕಿತ್ತಳೆ ಬಣ್ಣದ ಕೊಕ್ಕು, ತಲೆ ಮತ್ತು ಗುಲಾಬಿ ಬಣ್ಣದ ಪುಕ್ಕಗಳನ್ನು ಹೊಂದಿರುವ ಇವು ಸಾಮಾನ್ಯವಾಗಿ ಕೆರೆ, ಕುಂಟೆ ಮತ್ತು ಜೌಗು ಪ್ರದೇಶಗಳನ್ನರಸಿ ಗುಂಪುಗುಂಪಾಗಿ ಆಗಮಿಸುತ್ತವೆ. ಬಾಗೇಪಲ್ಲಿ ಬಳಿಯ ವೀರಾಪುರ ಗ್ರಾಮವನ್ನು ಈ ಹಕ್ಕಿಗಳ ಸಂರಕ್ಷಿತ ತಾಣವನ್ನಾಗಿ ರೂಪಿಸಲಾಗಿದೆ. ರಾಜ್ಯದ ಕೊಕ್ಕರೆಬೆಳ್ಳೂರಿನಲ್ಲೂ ಅಲ್ಲಿನ ಗ್ರಾಮಸ್ಥರ ನೆರವಿನಿಂದ ಈ ಹಕ್ಕಿಗಳ ವಾಸಸ್ಥಾನ ಹೆಸರುವಾಸಿಯಾಗಿದೆ. ಗ್ರಾಮಗಳಲ್ಲಿನ ಮರಗಳ ಮೇಲೆ ಈ ಹಕ್ಕಿಗಳು ಚಳಿಗಾಲದಲ್ಲಿ ಗೂಡು ಕಟ್ಟಿ ಮರಿಗಳನ್ನು ಸಾಕುತ್ತವೆ. ಗುಂಪು ಗುಂಪಾಗಿ ಎತ್ತರದ ಮರಗಳ ಮೇಲೆ ಕಡ್ಡಿಗಳನ್ನು ಒಟ್ಟು ಮಾಡಿ ಗೂಡು ಕಟ್ಟುವ ಈ ಹಕ್ಕಿಗಳು ಗುಂಪಲ್ಲೇ ಆಹಾರಕ್ಕಾಗಿ ಕೆರೆಗಳ ಅಂಚಿನಲ್ಲಿ ಕಾಣಿಸುತ್ತವೆ.
ಈ ರೀತಿಯ ಹಕ್ಕಿಗಳನ್ನು ಕೊಲ್ಲುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಇವುಗಳ ಕುರಿತಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು. ತಪ್ಪೆಸಗಿದವರಿಗೆ ಶಿಕ್ಷೆ ಆಗಬೇಕು. 100 ಸೆ.ಮೀ ಎತ್ತರದ ಇವು 3 ಕೆ.ಜಿ ತೂಕವಿರುತ್ತವೆ. ಹಾಗಾಗಿ ಮಾಂಸದ ಆಸೆಯಿಂದ ಹಕ್ಕಿಗಳ ಬೇಟೆ ನಡೆದರೆ ಅವುಗಳ ಸಂತತಿಯೇ ನಶಿಸುತ್ತವೆ. ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕೆರೆಯು ಮನುಷ್ಯರೊಬ್ಬರ ಆಸ್ತಿಯಲ್ಲ, ಸಕಲ ಜೀವಿಗಳೂ ಇದ್ದರೆ ಮಾತ್ರ ಮಾನವ ಬದುಕುಳಿಯಲು ಸಾಧ್ಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳ ಬೇಟೆ
ಗ್ರಾಮೀಣ ಭಾಗದ ಮಕ್ಕಳಿಗೆ ಸೌಲಭ್ಯಗಳನ್ನು ನೀಡಬೇಕು
ಶಿಡ್ಲಘಟ್ಟ ಗ್ರಾಮದ ಮಕ್ಕಳಿಗೂ ಲಭಿಸಿದಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಅವಿರತ ಟ್ರಸ್ಟ್ನ ಸದಸ್ಯ ಶಿವಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡದಾಸೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶನಿವಾರ ಅವಿರತ ಟ್ರಸ್ಟ್ ವತಿಯಿಂದ ಶಾಲೆಗೆ ಉಚಿತ ಕಂಪ್ಯೂಟರ್ ಮತ್ತು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದರೂ ಪೋಷಕರು ಖಾಸಗಿ ಶಾಲೆಗಳ ಪರ ಒಲವು ತೋರಿಸುತ್ತಿರುವುದು ವಿಷಾದನೀಯ. ಗ್ರಾಮೀಣ ಭಾಗದ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಸೇರಿದಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಪೋಷಕರು ಒಳಗಾಗದೇ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಲು ಮುಂದಾಗಬೇಕು ಎಂದರು.
ಅವಿರತ ಟ್ರಸ್ಟ್ನ ರಾಜೇಶ್, ಮೃತ್ಯುಂಜಯ, ಗ್ರಾಮ ಪಂಚಾಯತಿ ಸದಸ್ಯ ಆಂಜನೇಯರೆಡ್ಡಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ಎಂ.ಪಿ.ಸಿ.ಎಸ್. ಅಧ್ಯಕ್ಷ ದ್ಯಾವರೆಡ್ಡಿ, ಶಿಕ್ಷಕರಾದ ಶ್ರೀಕಾಂತ್, ಹರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಸತಿರಹಿತ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಲಿ
ನಗರದ ವಸತಿರಹಿತ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ರಾಜಕೀಯ ಬೆರೆಸದೇ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ನಗರಸಭೆ ಸದಸ್ಯರೂ ಸೇರಿದಂತೆ ಅಧಿಕಾರಿಗಳು ಸಹಕರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ವಾಜಪೇಯಿ ನಗರ ವಸತಿ ಯೋಜನೆಯಡಿ ನಿಗಧಿಪಡಿಸಿರುವ ೨೦೦ ಮನೆಗಳ ಗುರಿಗೆ ಅನುಗುಣವಾಗಿ ಕಾರ್ಯಾದೇಶ ವಿತರಿಸುವ ಹಾಗು ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಸುಸಜ್ಜಿತ ನಗರಸಭೆ ಕಾರ್ಯಾಲಯ ಕಟ್ಟಡ ಕಟ್ಟಲು ಈಗಾಗಲೇ ಸಿದ್ಧತೆಗಳು ನಡೆದಿದೆ. ನಗರದಲ್ಲಿ ಸುಮಾರು ೫೫ ಸಾವಿರ ಜನಸಂಖ್ಯೆಯಿದ್ದು ಎಲ್ಲರಿಗೂ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಹೆಚ್ಚಿನ ಅನುಧಾನದ ಅಗತ್ಯತೆಯಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ನಗರಸಭೆಯಿಂದ ಜನರಿಗೆ ಉತ್ತಮ ಸೇವೆ ಸಿಗುವಂತಾಗಬೇಕಾದರೆ ನಗರಸಭೆಗೆ ಆದಾಯವೂ ಹೆಚ್ಚಾಗಬೇಕು ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ತಮ್ಮ ತಮ್ಮ ವಾರ್ಡುಗಳ ಜನರಿಗೆ ಕಂದಾಯ, ನೀರಿನ ಬಿಲ್ ಹಾಗು ವಾಣಿಜ್ಯ ಮಳಿಗೆಗಳ ಬಾಡಿಗೆ ಹಣವನ್ನು ಕಟ್ಟುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ವಾಜಪೇಯಿ ನಗರ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ೬೦, ಪರಿಶಿಷ್ಟ ಪಂಗಡ ೨೦, ಅಲ್ಪಸಂಖ್ಯಾತರಿಗೆ ೨೦, ಸಾಮಾನ್ಯ ೧೦೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆರ್.ಜಿ.ಆರ್.ಎಚ್.ಸಿ,ಎಲ್ ಮುಖಾಂತರ ತೆರೆಯಲಾಗಿದೆ. ಸದರಿ ಮನೆ ನಿರ್ಮಾಣ ಕಾಮಗಾರಿಗೆ ೪ ಹಂತಗಳಲ್ಲಿ, ತಳಪಾಯ ನಿರ್ಮಾಣಕ್ಕೆ ೩೦,೦೦೦, ಗೋಡೆಹಂತದಲ್ಲಿ ೩೦,೦೦೦, ಮೇಲ್ಚಾವಣಿ ಹಂತದಲ್ಲಿ ೩೦,೦೦೦ ಹಾಗೂ ಮನೆ ಪೂರ್ಣಗೊಂಡಲ್ಲಿ ೩೦,೦೦೦ ರೂಗಳನ್ನು ಫಲಾನುಭವಿಗಳ ಖಾತೆಗೆ ಜಿ.ಪಿ.ಎಸ್ ಛಾಯಾ ಚಿತ್ರವನ್ನು ತೆಗೆದ ನಂತರ ಬಿಡುಗಡೆ ಮಾಡಲಾಗುವುದೆಂದು ನಗರಸಭೆ ಆಯುಕ್ತ ಎಚ್.ಎ.ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿನಿತ್ಯ ನಗರವನ್ನು ಸುಂದರವನ್ನಾಗಿಸುವ ಸಲುವಾಗಿ ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತರಾಗುವ ಪೌರಕಾರ್ಮಿಕರು ಬೆಳಗ್ಗೆ ಬೇಗ ಬಂದು ಕರ್ತವ್ಯ ನಿರ್ವಹಿಸುವುದರಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅದ್ಯಕ್ಷೆ ಮುಷ್ಟರಿ ತನ್ವೀರ್, ಉಪಾದ್ಯಕ್ಷೆ ಸುಮಿತ್ರಾ ರಮೇಶ್, ಪೌರಾಯುಕ್ತ ಎಚ್.ಎ.ಹರೀಶ್, ನಗರಸಭಾ ಸದಸ್ಯರಾದ ಪ್ರಭಾವತಿ ಸುರೇಶ್, ಅಫ್ಸರ್ಪಾಷ, ಲಕ್ಷ್ಮಯ್ಯ, ವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.
ತಾಲ್ಲೂಕು ಕಛೇರಿಗೆ ವಿನಾಕಾರಣ ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು
ವಿನಾಕಾರಣ ರೈತರು ಸೇರಿದಂತೆ ನಾಗರಿಕರನ್ನು ತಾಲ್ಲೂಕು ಕಛೇರಿಗೆ ಅಲೆಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತ್ವರಿತವಾಗಿ ಅವರ ಕೆಲಸ ಕಾರ್ಯಗಳನ್ನು ಮುಗಿಸಿ ಕೊಡುವಲ್ಲಿ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ವಿವಿಧ ನಾಗರಿಕರ ಕುಂದುಕೊರತೆ ವಿಚಾರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ರೈತರು ಮತ್ತು ಸಾರ್ವಜನಿಕರು ತಮ್ಮ ಜಮೀನಿನ ಫಹಣಿ, ದಾಖಲೆಗಳಲ್ಲಿ ಸಣ್ಣಪುಟ್ಟ ತಿದ್ದುಪಡಿಗಳಿದ್ದಲ್ಲಿ ಗ್ರಾಮ ಸಹಾಯಕರು ಸೇರಿದಂತೆ ರಾಜಸ್ವ ನಿರೀಕ್ಷಕರು ತಕ್ಷಣ ಮಾಡಿಕೊಡಬೇಕು ಎಂದರು.
ತಾಲ್ಲೂಕಿನಾದ್ಯಂತ ಕೆರೆಗಳು, ಕುಂಟೆಗಳು ಹಾಗು ಕಲ್ಯಾಣಿಗಳ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು ಆದ್ಯತೆಯ ಮೇರೆಗೆ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.
ನಾಗರಿಕರು ಎಲ್ಲೆಲ್ಲಿ ಅಕ್ರಮವಾಗಿ ಮನೆಗಳು ಕಟ್ಟಿಕೊಂಡಿದ್ದಾರೋ ಅಂತಹವರಿಗೆ ೯೪ ಸಿ ಯಲ್ಲಿ ಅರ್ಜಿ ಹಾಕುವಂತೆ ಗ್ರಾಮ ಲೆಕ್ಕಾಧಿಕಾರಿ ಹಾಗು ರಾಜಸ್ವ ನಿರೀಕ್ಷಕರು ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಲ್ಲಿಯೂ ಗ್ರಾಮ ಚಾವಡಿ ಗುರುತಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ಆಯಾ ಗ್ರಾಮ ಚಾವಡಿಗಳಲ್ಲಿ ನಡೆಯುವುದರಿಂದ ಗ್ರಾಮ ಚಾವಡಿಗಳನ್ನು ಸದೃಡಗೊಳಿಸಬೇಕು ಎಂದರು.
ಗ್ರಾಮ ಲೆಕ್ಕಾಧಿಕಾರಿಗಳು ವಾರಕ್ಕೆ ಕನಿಷ್ಠ ಎರಡು ಭಾರಿಯಾದರೂ ಗ್ರಾಮ ಚಾವಡಿಗೆ ಭೇಟಿ ನೀಡಬೇಕು. ರಾಜಸ್ವ ನಿರೀಕ್ಷಕರು ವಾರಕ್ಕೆ ಒಂದು ಭಾರಿ ಭೇಟಿ ನೀಡಬೇಕು. ಗ್ರಾಮ ಲೆಕ್ಕಾಧಿಕಾರಿ ಹಾಗು ರಾಜಸ್ವ ನಿರೀಕ್ಷಕರು ಗ್ರಾಮ ಚಾವಡಿಗೆ ಯಾವ ದಿನ ಭೇಟಿ ನೀಡಿದ್ದರು ಎಂಬುದಕ್ಕೆ ಒಂದು ಪಟ್ಟಿ ಸಿದ್ದ ಪಡಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ, ತಹಸೀಲ್ದಾರ್ ಕೆ.ಎಂ.ಮನೋರಮಾ, ತಾಲ್ಲೂಕು ಪಂಚಾಯಿತಿ ಇ ಓ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬ್ಲಾಕ್ ಬೆಲ್ಟ್ ಪಡೆದ ತಾಲ್ಲೂಕಿನ ವಿದ್ಯಾರ್ಥಿಗಳು
ಈಚೆಗೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದ ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಶನ್ ಶೈಲಿಯಲ್ಲಿ ನಡೆದ ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ತಾಲ್ಲೂಕಿನ ಕೆಲವು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಡಾನ್ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ರಾಮ್ಕುಮಾರ್, ಮೇಘನಾ, ನವೋದಯ ನಡಿಪಿನಾಯಕನಹಳ್ಳಿಯ ಪ್ರಮೋದ್, ಗಿರೀಶ್, ಮೋಹಿತ್, ದಾಮಿನಿ, ಕ್ರೆಸೆಂಟ್ ಶಾಲೆಯ ಜಾನ್ಸನ್ ರೆಡ್ಡಿ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿ ಕರಾಟೆ ಶಿಕ್ಷಕ ಮಹಮ್ಮದ್ ತಿಳಿಸಿದ್ದಾರೆ.
ಕ.ಸಾ.ಪ ವತಿಯಿಂದ ಚಾಂದಿನಿಗೆ ಸನ್ಮಾನ
ಸಾಧಕರನ್ನು ಗೌರವಿಸುವ ಉದ್ದೇಶ ಅವರ ಸಾಧನೆ ಇತತರಿಗೆ ಪ್ರೇರಣೆಯಾಗಲಿ ಎಂಬುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಹಿರಿಯ ವಕೀಲ ಹಾಗೂ ನೋಟರಿ ಬಿ.ನೌಷಾದ್ ಅಲೀ ಮತ್ತು ನಿವೃತ್ತ ಎ.ಸಿ.ಡಿ.ಪಿ.ಒ ಎಸ್.ಕೆ.ತಾಜುನ್ನಿಸಾ ದಂಪತಿಯ ಪುತ್ರಿ ಎನ್.ಚಾಂದಿನಿ ಅವರು ಮಾಸ್ಟರ್ ಆಫ್ ಲಾ ನಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿರುವುದಕ್ಕೆ ಅವರನ್ನು ಶನಿವಾರ ಕ.ಸಾ.ಪ ವತಿಯಿಂದ ಗೌರವಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ರೀತಿಯ ಸಾಧಕರು ಇನ್ನಷ್ಟು ಮಂದಿ ಹೊರಬರಬೇಕು. ಈ ರೀತಿಯ ಸಾಧಕರ ಜ್ಞಾನ ನಮ್ಮ ತಾಲ್ಲೂಕಿಗೆ ಉಪಯುಕ್ತವಾಗಲಿ, ಪ್ರೇರಣಾದಾಯಕವಾಗಲಿ ಎಂದು ಹೇಳಿದರು.
ಕ.ಸಾ.ಪ ವತಿಯಿಂದ ಅಭಿನಂದನಾ ಪತ್ರ ಮತ್ತು ಪುಸ್ತಕವನ್ನು ನೀಡಿ ಎನ್.ಚಾಂದಿನಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ವ್ಯಾಸಂಗ ಮತ್ತು ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದ ವಿವಿಧ ವೆಬ್ಸೈಟ್ಗಳ ವಿವರವನ್ನು ನೀಡಲಾಯಿತು.
ತಾಲ್ಲೂಕು ಕ.ಸಾ.ಪ ಉಪಾಧ್ಯಕ್ಷ ಸಯ್ಯದ್ ತಮೀಮ್ ಅನ್ಸಾರಿ, ಖಜಾಂಚಿ ಸತೀಶ್, ಪತ್ರಿಕಾ ಪ್ರತಿನಿಧಿ ರಮೇಶ್, ವಕೀಲೆ ಬಿ.ನೌತಾಜ್ ಹಾಜರಿದ್ದರು.
ಕೃಷಿಯಲ್ಲೂ ತಂತ್ರಜ್ಞಾನ ಬಳಸಿಕೊಳ್ಳಿ
ಸರ್ಕಾರದ ಸೌಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿ ಗುರುವಾರ ೩೮ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಹೋಬಳಿ ಮಟ್ಟದ ೨೦೧೬ ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರೈತರು ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ನೂತನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವುದರ ಕಡೆಗೆ ಗಮನಹರಿಸಬೇಕು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ರೈತರ ಭೂಮಿಗೆ ಬೇಟಿ ನೀಡಿ ರೈತರಿಗೆ ಅಗತ್ಯವಾಗಿರುವ ಮಾಹಿತಿಗಳನ್ನು ತಲುಪಿಸುವಂತಹ ಪ್ರಾಮಾಣಿಕ ಸೇವೆ ಮಾಡಬೇಕು. ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವಂತಹ ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳನ್ನು ಬೆಳೆಯುವುದು ರೂಢಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬೇಟಿ ನೀಡಿ ಕಾಲ ಕಾಲಕ್ಕೆ ಮಾಹಿತಿಯನ್ನು ಪಡೆಯಬೇಕು. ಇಲಾಖಾಧಿಕಾರಿಗಳು, ಅರ್ಹ ಫಲಾನುಭವಿಗಳಿಗೆ ಸೌಲತ್ತುಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳಿಂದ ರೈತರಿಗೆ ಸಿಗಬೇಕಾಗಿರುವ ಅಗತ್ಯವಾದ ಮಾಹಿತಿಗಳು ಲಭ್ಯವಾಗುತ್ತಿಲ್ಲ, ಹೊಸ ಹೊಸ ಮಾದರಿಯ ತಂತ್ರಜ್ಞಾನದ ಬಗ್ಗೆ ಅರಿವು ಮೂಡುತ್ತಿಲ್ಲ. ಈ ಭಾಗದ ಜನರು ಹೈನುಗಾರಿಕೆ ಹಾಗೂ ರೇಷ್ಮೆಯಿಂದಲೇ ಜೀವನ ಮಾಡುತ್ತಿದ್ದು, ಈ ಎರಡೂ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಕೃಷಿ ಹೊಂಡಗಳ ನಿರ್ಮಾಣದಲ್ಲಿ ಅಕ್ರಮಗಳಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕು. ರೈತರು ಕಚೇರಿಗಳಿಗೆ ಬಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಅವರಿಗೆ ಸೂಕ್ತವಾದ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಚೀಮಂಗಲ ಕ್ಷೇತ್ರದ ಸದಸ್ಯೆ ತನುಜಾ ರಘು ಮಾತನಾಡಿ, ಪ್ರತಿಯೊಬ್ಬ ರೈತರು ದ್ರಾಕ್ಷಿ ಮತ್ತು ಮಾವಿನ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವುದರಿಂದ ಪ್ರಕೃತಿ ವಿಕೋಪದಂತಹ ಸನ್ನಿವೇಶಗಳಲ್ಲಿ ಕನಿಷ್ಟ ಬೆಳೆಗಳಿಗೆ ಹೂಡಿಕೆ ಮಾಡಿರುವ ಬಂಡವಾಳವನ್ನಾದರೂ ವಿಮೆಯಿಂದ ಪಡೆಯಲು ಸಹಕಾರಿಯಾಗಲಿದೆ ಎಂದರು.
ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ, ಇಲಾಖೆಗಳಿಂದ ಸ್ತಬ್ಧ ಚಿತ್ರಗಳ ಮೂಲಕ ರೈತರಿಗೆ ಮಾಹಿತಿಗಳನ್ನು ನೀಡಲಾಯಿತು. ಚಿಂತಾಮಣಿಯ ವಿಜ್ಞಾನಿ ಡಾ.ಆನಂದ ಅವರಿಂದ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯರಾದ ಚಂದ್ರಕಲಾ, ಶೋಭಾಶಶಿಕುಮಾರ್, ಮುನಿಯಪ್ಪ, ಗ್ರಾಮಪಂಚಾಯತಿ ಅಧ್ಯಕ್ಷೆ ಉಮಾಶಿವಕುಮಾರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಎ.ಎಚ್.ಆನಂದ್, ಕೃಷಿ ಇಲಾಖೆಯ ದೇವೆಗೌಡ, ರೇಷ್ಮೆ ಇಲಾಖೆಯ ಚಂದ್ರಪ್ಪ, ಗೋಪಾಲರಾವ್. ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುಂಟೆ ಅಭಿವೃದ್ಧಿ ಕಾಮಗಾರಿ
ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತುಗದಹಳ್ಳಿ ಬಳಿ ಸುಮಾರು 50 ಲಕ್ಷ ರೂಗಳ ಕುಂಟೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ರಾಜಣ್ಣ ಗುರುವಾರ ಗುದ್ದಲಿಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಾಗರಾಜು, ವಿಜಯಮ್ಮ, ಕೃಷ್ಣಪ್ಪ, ರಮೇಶ್, ಅಂಬರೀಷ್, ಕೇಶವ ಹಾಜರಿದ್ದರು.
ಮಾದರಿ ಕುದುಪಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘ
ಪ್ರತಿದಿನ ಕೇವಲ 60 ಲೀಟರ್ ಹಾಲು ಸಂಗ್ರಹಣೆಯಿಂದ ಪ್ರಾರಂಭವಾಗಿ ಈಗ 300 ಲೀಟರ್ ಹಾಲು ಸಂಗ್ರಹಿಸುತ್ತಾ ತನ್ನದೇ ಸ್ವಂತವಾದ ಕಟ್ಟಡವನ್ನು ಹೊಂದುತ್ತಿರುವ ಕುದುಪಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘ ಇತರರಿಗೆ ಮಾದರಿಯಾಗಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿನಂದಿಸಿದರು.
ತಾಲ್ಲೂಕಿನ ಕುದುಪಕುಂಟೆ ಗ್ರಾಮದಲ್ಲಿ ಗುರುವಾರ ವೀರಮಾರಮ್ಮದೇವಿ ನೂತನ ದೇವಸ್ಥಾನ ಪ್ರತಿಷ್ಠಾಪನೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೈನುಗಾರಿಕೆಯು ನಮ್ಮ ಭಾಗದಲ್ಲಿ ಹಲವರ ಸಂಸಾರ ನಿರ್ವಹಣೆಗೆ ಸಹಕಾರಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಸರಿಯಾಗಿ ನಿರ್ವಹಿಸುತ್ತಿರುವುದಕ್ಕೆ ಅವುಗಳ ಪ್ರಗತಿಯು ಧ್ಯೋತಕವಾಗಿದೆ. ಇದು ಗ್ರಾಮದ ಆರ್ಥಿಕತೆಯನ್ನೂ ಬೆಳೆಸಲು ಸಹಕಾರಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ವಿವಿಧ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ನೀಡುವ ಮೂಲಕ ಇನ್ನಷ್ಟು ಪ್ರಗತಿಯನ್ನು ಸಾಧಿಸಬೇಕೆಂದು ಹಾರೈಸಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ ಮತ್ತು ಡೈರಿ ಕಟ್ಟಡದ ನಿರ್ಮಾಣ ಒಂದೇ ದಿನ ಆಗುತ್ತಿರುವುದು ಶುಭಸೂಚಕ. ದೇವರ ಆಶೀರ್ವಾದವಿದ್ದಲ್ಲಿ ಹಾಲೆಂಬ ಅಮೃತವು ಹೆಚ್ಚಾಗಿ ಗ್ರಾಮದವರಿಗೆ ಸಂಪತ್ತನ್ನು ತರಲಿ. ಈ ಭಾಗದ ಜನರು ಹಿಂದೆ ಮಠಕ್ಕೆ ದವಸ ಧಾನ್ಯಗಳಿಗಾಗಿ ಬಂದಾಗ ದಾನ ನೀಡಿರುವ ಕೊಡುಗೈಯವರು. ಮನಸ್ಸಿದ್ದಂತೆ ಮಾದೇವ ಎಂಬ ಮಾತಿನಂತೆ ಇತರರಿಗೆ ಕೊಟ್ಟಷ್ಟೂ ನಿಮ್ಮ ಸಂಪತ್ತು ಹೆಚ್ಚುತ್ತದೆ ಎಂದು ಹೇಳಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಯಪ್ಪ, ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ, ಕೆ.ಎನ್.ಆಂಜನೇಯರೆಡ್ಡಿ, ವಿ.ಶ್ರೀನಿವಾಸ್, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭವ್ಯಮಂಜುನಾಥ್, ಡಿ.ಎಸ್.ಎನ್.ರಾಜು, ಕೆ.ಆನಂದ್, ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಅಶ್ವತ್ಥನಾರಾಯಣರೆಡ್ಡಿ, ಶ್ರೀನಿವಾಸರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ
ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒಕ್ಕಲಿಗರ ಯುವ ಸೇನೆ ಮಾದರಿಯಾಗಬೇಕೆಂದು ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯತಿಯಲ್ಲಿ 11ನೇ ಮೈಲಿ ಕ್ರಾಸ್‌ನಲ್ಲಿ ಗುರುವಾರ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಒಕ್ಕಲಿಗರ ಯುವಸೇನೆ ಸಂಘದ ಘಟಕ, ನಾಮಫಲಕ ಉದ್ಘಾಟನೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಯುವಕರು ಸಂಘಟಿತರಾಗಿ ತೊಡಗಿಸಿಕೊಳ್ಳಬೇಕು. ಸಂಘದ ಉದ್ಘಾಟನೆಯ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಅಶ್ವತ್ಥನಾರಾಯಣರೆಡ್ಡಿ, ಶ್ರೀನಿವಾಸರೆಡ್ಡಿ, ನಾಗೇಶ್, ಹರೀಶ್, ನಗರ ಘಟಕದ ಅಧ್ಯಕ್ಷ ಪುರುಷೋತ್ತಮ್, ಮುರಳಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೋತನ ಭಾಗವತ ಸಪ್ತಾಹ
ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರಾದ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಪ್ರವಚನ ಸಪ್ತಾಹವನ್ನು ಜೂನ್ ೧೮ ಶನಿವಾರದಿಂದ ೭ ದಿನಗಳ ಕಾಲ ನಗರದ ಅಶೋಕರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪವಿತ್ರಗ್ರಂಥದ ಪ್ರವಚನ ಕಾರ್ಯಕ್ರಮವನ್ನು ಬೆಂಗಳೂರಿನ ಖ್ಯಾತ ವಿದ್ವಾಂಸ ಮಂಕಾಲ ಶ್ರೀಹರಿಶರ್ಮ ನಡೆಸಿಕೊಡಲಿದ್ದಾರೆ. ಜೂನ್ ೧೮ ಶನಿವಾರದಿಂದ ಆರಂಭವಾಗಿ ಜೂನ್ ೨೪ರವರೆಗೂ ಸಪ್ತಾಹ ಕಾರ್ಯಕ್ರಮವಿರುತ್ತದೆ. ಪ್ರತಿನಿತ್ಯ ಸಂಜೆ ೫ ಗಂಟೆಗೆ ಖ್ಯಾತ ಸಂಗೀತ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಂಜೆ ೬.೩೦ ಗಂಟೆಗೆ ಪೋತನ ಭಾಗವತ ಪ್ರವಚನ ಆರಂಭವಾಗುತ್ತದೆ. ಶನಿವಾರ ಜೂನ್ ೧೮ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನೆರೆವೇರಲಿದೆ. ಭಕ್ತ ಮಹಾಶಯರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಸ್ಟರ್ ಆಫ್ ಲಾ ನಲ್ಲಿ ಪ್ರಥಮ ರ್ಯಾಂ ಕ್ ಶಿಡ್ಲಘಟ್ಟದ ಚಾಂದಿನಿ
ನಗರದ ಹಿರಿಯ ವಕೀಲ ಹಾಗೂ ನೋಟರಿ ಬಿ.ನೌಷಾದ್ ಅಲೀ ಮತ್ತು ನಿವೃತ್ತ ಎ.ಸಿ.ಡಿ.ಪಿ.ಒ ಎಸ್.ಕೆ.ತಾಜುನ್ನಿಸಾ ದಂಪತಿಯ ಪುತ್ರಿ ಎನ್.ಚಾಂದಿನಿ ಅವರು ಮಾಸ್ಟರ್ ಆಫ್ ಲಾ ನಲ್ಲಿ ಪ್ರಥಮ ರ್ಯಾಂ ಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಎಲ್.ಎಲ್.ಎಮ್‌ನ ಕಾಸ್ಟಿಟ್ಯೂಷನ್ ಲೀಗಲ್ ಆರ್ಡರ್ ವಿಭಾಗದ ಕಾನೂನು ಪರೀಕ್ಷೆಯಲ್ಲಿ ಪ್ರಥಮ ರ್ಯಾಂಶಕ್ ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರು ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ, ಉಪಕುಲಪತಿ ಪ್ರೊ.ಬಿ.ತಿಮ್ಮೇಗೌಡ ಈ ಸಂದರ್ಭದಲ್ಲಿ ಹಾಜರಿದ್ದರು.
‘ಎಲ್.ಎಲ್.ಎಮ್ ನ ಕಾಸ್ಟಿಟ್ಯೂಷನ್ ಲೀಗಲ್ ಆರ್ಡರ್ ಕೋರ್ಸ್ ಬಹಳ ಕಠಿಣವಾದದ್ದು. ನನ್ನ ತಂದೆ, ತಾಯಿ ಮತ್ತು ಅಕ್ಕ ಬಿ.ನೌತಾಜ್ ಮಾರ್ಗದರ್ಶನದಲ್ಲಿ ಶ್ರಮವಹಿಸಿ ಓದಿದ್ದಕ್ಕೆ ಚಿನ್ನದ ಪದಕ ಲಭಿಸಿರುವುದು ಸಂತಸ ತಂದಿದೆ’ ಎಂದು ಎನ್.ಚಾಂದಿನಿ ತಿಳಿಸಿದ್ದಾರೆ.
ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಮನವಿ
ಶಿಡ್ಲಘಟ್ಟ ತಾಲ್ಲೂಕಿನ ರೈತಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಮಂಗಳವಾರ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಹನುಮಂತಪ್ಪ ಅವರಿಗೆ ರೇಷ್ಮೆ ಗೂಡಿಗೆ, ಯಂತ್ರೋಪಕರಣಗಳಿಗೆ ಹಾಗೂ ಹುಳು ಸಾಕಾಣಿಕಾ ಮನೆಗಳಿಗೆ ನೀಡುವ ಸಹಾಯಧನವನ್ನು ವಿಳಂಬ ಮಾಡದೆ ಪಾವತಿಸಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು. ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಬ್ಯಾಂಕಿನ ಸೌಲಭ್ಯ ಬಳಸಿಕೊಳ್ಳಿ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ನಾಂದಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಸಹಾಯಕ ಮಹಾ ಪ್ರಬಂಧಕ ಜೀತೇಂದ್ರರಾವ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಕೆನರಾ ಬ್ಯಾಂಕ್ ಮೇಲೂರು ಹಾಗೂ ನಬಾರ್ಡ್ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪ್ರತಿಯೊಂದು ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ನಾಗರಿಕರು, ಬ್ಯಾಂಕುಗಳೊಂದಿಗೆ ನಿರಂತರವಾದ ಸಂಪರ್ಕವಿಟ್ಟುಕೊಂಡು, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಕೇಂದ್ರ ಸರ್ಕಾರದ ಮಹತ್ತರವಾದ ಯೋಜನೆಯಾದ ಜನಧನ ಯೋಜನೆಯ ಮೂಲಕ ತಮ್ಮ ಉಳಿತಾಯವನ್ನು ಹೂಡಿಕೆ ಮಾಡುವ ಮೂಲಕ ಸ್ಥಳೀಯ ಬ್ಯಾಂಕುಗಳನ್ನು ರಕ್ಷಣೆ ಮಾಡುವುದರ ಜೊತೆಗೆ ನಾಗರೀಕರು ತಮ್ಮ ಜೀವನದ ಮಟ್ಟವನ್ನು ಏರಿಕೆ ಮಾಡಿಕೊಳ್ಳಬೇಕು, ಬ್ಯಾಂಕುಗಳಿಂದ ಪಡೆದುಕೊಂಡಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕುಗಳ ಉಳಿವಿಗಾಗಿ ಶ್ರಮಿಸಬೇಕು ಎಂದರು.
ಜಿಲ್ಲಾ ಆರ್ಥಿಕ ಸಾಕ್ಷರತಾ ಸಲಹೆಗಾರ ಬೆಳಂಕರ್ ಮಾತನಾಡಿ, ಸ್ಥಳೀಯವಾಗಿರುವ ಬ್ಯಾಂಕು ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಉತ್ತಮವಾದ ಸಂಪರ್ಕವನ್ನು ಇಟ್ಟುಕೊಂಡು, ಸಿಗುವಂತಹ ಸೌಲಭ್ಯಗಳ ಉಪಯೋಗ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವೂ ಸೇರಿದಂತೆ ಕೃಷಿ, ತೋಟಗಾರಿಕೆ, ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಾಲ, ಸೇರಿದಂತೆ ಅನೇಕ ಉದ್ದೇಶಗಳಿಗೆ ಸಾಲಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ್, ಮೇಲೂರು ಕೆನರಾ ಬ್ಯಾಂಕಿನ ವ್ಯವಸ್ಥಾಪಕಿ ಇಂದು ಎಚ್.ಪಾಟೀಲ್, ಕ್ಷೇತ್ರಾಭಿವೃದ್ಧಿ ಅಧಿಕಾರಿ ಯುವರಾಜ್‌ಕುಮಾರ್, ಡಿಂಕು ಖ್ಯಾತಿಯ ಇಂದುಶ್ರೀ, ಮೇಲೂರು ಕೆನರಾ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.
ವಿಶ್ವಕರ್ಮ ಸಮಾಜದ ವಧು ವರರ ಅನ್ವೇಷಣಾ ಕಾರ್ಯಕ್ರಮ
ವಿಶ್ವಕರ್ಮ ಸಮಾಜದ ವಧು ವರರ ಅನ್ವೇಷಣಾ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವಕರ್ಮ ಸಮಾಜದಲ್ಲಿರುವ 41 ಉಪಜಾತಿಗಳಲ್ಲಿರುವ ಪಂಚಕಸುಬುಗಳಿಗೆ ಸಂಬಂದಿಸಿದ್ದಾಗಿದೆ. ಬಡವರು, ಮಧ್ಯಮ ವರ್ಗದವರು, ಹಳ್ಳಿಗಳಲ್ಲಿರುವ ವಿಶ್ವಕರ್ಮ ಸಮಾಜದವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಜುಲೈ 1 ರಿಂದ 3 ರವರೆಗೂ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳದಲ್ಲೇ ಪುರೋಹಿತರು ಲಭ್ಯವಿರುತ್ತಾರೆ. ಅವರ ಸಹಾಯವನ್ನು ಪಡೆದು ಜಾತಕಗಳನ್ನು ಹೊಂದಿಸಿಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರುವಾಗ ವಧೂ ವರರ ಫೋಟೋಗಳು, ಜಾತಕ ಮತ್ತು ಸ್ವವಿರವನ್ನು ತರಬೇಕು. ಸಂಬಂಧಪಟ್ಟ ತಾಲ್ಲೂಕು ಅಥವಾ ಜಿಲ್ಲಾಧ್ಯಕ್ಷರಿಂದ ಪಾಸುಗಳನ್ನು ಪಡೆದು ತರಬೇಕು. ವಧೂ ವರರೊಂದಿಗೆ ಇಬ್ಬರು ಪೋಷಕರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಶಿಡ್ಲಘಟ್ಟ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರಿ 9379976591, 7676555580 ಸಂಪರ್ಕಿಸಲು ಕೋರಿದೆ.
ಕುರುಬ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ 2015–16ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90 ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಕುರುಬ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಅರ್ಹ ವಿದ್ಯಾರ್ಥಿಗಳು ಸ್ವವಿವರ, 2 ಭಾವಚಿತ್ರ, ಅಂಕಪಟ್ಟಿ ನಕಲು, ಜಾತಿ ಪ್ರಮಾಣ ಪತ್ರ ನಕಲುಗಳನ್ನು ಜೂನ್ 20 ರೊಳಗೆ ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು 080-22264293, ಶಿಡ್ಲಘಟ್ಟ ತಾಲ್ಲೂಕು ಕುರುಬರ ಸಂಘ 9448310783, 9448310784, 9880857814, 944971917 ಸಂಪರ್ಕಿಸಲು ಕೋರಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜೂನ್ 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಲಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಿ
ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನೇ ಮೂಲ ಉದ್ದೇಶವನ್ನಿರಿಸಿಕೊಂಡ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲಗಳನ್ನು ನೀಡುತ್ತಿದ್ದು ಅದರ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 32 ಮಂದಿ ಫಲಾನುಭವಿಗಳಿಗೆ ತಲಾ 40 ಸಾವಿರ ರೂಗಳಂತೆ ಒಟ್ಟು 12,80,000 ರೂಗಳ ಚೆಕ್ ವಿತರಿಸಿ ಅವರು ಮಾತನಾಡಿದರು.
ಸಾಲ ಪಡೆದ ಪಲಾನುಭವಿಗಳು ಸರಿಯಾಗಿ ರೀತಿಯಲ್ಲಿ ಸಾಲವನ್ನು ಮರು ಪಾವತಿ ಮಾಡುವ ಮೂಲಕ ಇನ್ನಷ್ಟು ಹೆಚ್ಚಿನ ಆರ್ಥಿಕ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ. ಹಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಪ್ರಗತಿ ಕಾಣಬೇಕೆಂದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜು, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಸೂರ್ಯನಾರಾಯಣಗೌಡ, ಮುಗಿಲಡಿಪಿ ನಂಜಪ್ಪ, ಶ್ರೀಧರ್, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ಅಪ್ಸರ್‌ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಾಮಣ್ಣ ಬಾವಿಯನ್ನು ಶುಚಿಗೊಳಿಸಿದ ಯುವ ಬ್ರಿಗೇಡ್ ಸದಸ್ಯರು
ನಗರದ ಅಗ್ರಹಾರ ಬೀದಿಯಲ್ಲಿರುವ ಅತ್ಯಂತ ಪುರಾತನ ಕಲ್ಯಾಣಿಯಾದ ಶಾಮಣ್ಣಬಾವಿಯನ್ನು ಯುವ ಬ್ರಿಗೇಡ್ ಸದಸ್ಯರು ಶ್ರಮದಾನ ಮಾಡುವ ಮೂಲಕ ಶನಿವಾರ ಮತ್ತು ಭಾನುವಾರ ಶುಚಿಗೊಳಿಸಿದ್ದಾರೆ.
ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವವರು ಸುಮಾರು ೩೫೦ ವರ್ಷಕ್ಕೂ ಹಿಂದೆ ಇಲ್ಲಿನ ದೇವಾಲಯದ ಬಳಿ ಚತುಷ್ಕೋನಾಕಾರದ ಕಲ್ಯಾಣಿ ನಿರ್ಮಿಸಿದ್ದರು. ಅದರಿಂದಲೇ ಜನರ ಬಾಯಿಯಲ್ಲಿ ಇದು ಶಾಮಣ್ಣಬಾವಿಯೆಂದೇ ಪ್ರಚಲಿತವಾಗಿದೆ. ಇಲ್ಲಿ ಸದಾ ಶುದ್ಧವಾದ ನೀರಿರುತ್ತಿತ್ತು. ಒಂದೆಡೆ ವಿಶಾಲ ಅರಳಿಮರವಿರುವ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ. ವಿಷ್ಣು ಮತ್ತು ಶಿವ ಒಂದೆಡೆ ಎಲ್ಲೂ ಕಣಸಿಗರು. ಆದರೆ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಒಂದೆಡೆಯಿದ್ದಾರೆ. ಇದರೊಂದಿಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿವೆ. ಶಾಮಣ್ಣ ಬಾವಿಯ ಸುತ್ತ ಅರಳಿ ಮರಗಳು, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು ಅತ್ಯಂತ ಪ್ರಶಾಂತವಾದ ಸುಂದರ ತಾಣವಾಗಿದೆ.
ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಎಲ್ಲಾ ಯುವಕರಿಗೆ ಈಜು ಕಲಿಯುವ ತಾಣವಾಗಿತ್ತು. ಆದರೆ ನೀರಿನ ಬವಣೆ ಪ್ರಾರಂಭವಾದಂತೆ ಶಾಮಣ್ಣಬಾವಿಯಲ್ಲಿ ಕೇವಲ ಮಳೆಗಾಲದಲ್ಲಿ ಮಾತ್ರ ನೀರು ನಿಲ್ಲುವಂತಾಯಿತು. ಗೌಡನ ಕೆರೆಯಲ್ಲಿ ಕಳೆ ಗಿಡ ತುಂಬಿಕೊಂಡು ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ನಿಲ್ಲುವಂತಾದ ಮೇಲೆ ಅಲ್ಲಿಂದ ಶಾಮಣ್ಣಬಾವಿಗೆ ನೀರು ಬರದೆ ಸೊರಗತೊಡಗಿತು. ಕಲ್ಲುಚಪ್ಪಡಿಗಳ ನಡುವೆ ಕಳೆಗಿಡಗಳು ಬೆಳೆಯತೊಡಗಿದವು. ಕಸ ತ್ಯಾಜ್ಯ ತುಂಬಿಕೊಂಡು ಬಾವಿಯು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳತೊಡಗಿತು.
ಶಾಮಣ್ಣ ಬಾವಿಯಲ್ಲಿ ನೀರು ನಿಂತರೆ ಅಂತರ್ಜಲ ಹೆಚ್ಚುವ ಮೂಲಕ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತದೆ. ಮಳೆಗಾಲಕ್ಕೆ ಮುನ್ನ ನಮ್ಮ ಹಿರಿಯರು ನಿರ್ಮಿಸಿರುವ ಈ ಅಮೂಲ್ಯವಾದ ಆಸ್ತಿಯನ್ನು ಶುಚಿಯಾಗಿರಿಸಿಕೊಳ್ಳುವ ಉದ್ದೇಶದಿಂದ ಶ್ರಮದಾನದ ಮೂಲಕ ಕಳೆಗಿಡಗಳನ್ನು ತೆಗೆದಿದ್ದೇವೆ. ತ್ಯಾಜ್ಯವನ್ನು ಹೊರಕ್ಕೆ ಹಾಕಿದ್ದೇವೆ ಎಂದು ಯುವ ಬ್ರಿಗೇಡ್ ಸದಸ್ಯರು ತಿಳಿಸಿದ್ದಾರೆ.
ಚಿರಾಗ್ಗೌಡ, ಮುರಳಿ, ಶ್ರೀನಿವಾಸ್, ಸುದಾಕರ್, ಸೂರಿ, ಯಶ್ವಂತ್, ನವೀನ್, ವೆಂಕಟೇಶ್, ಅಭಿ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರು ಸಂಘಟಿತರಾಗಬೇಕು
ಮಹಿಳೆಯರು ಸಂಘಟಿತರಾದಾಗ ಮಾತ್ರ, ಸಮಾಜದಲ್ಲಿ ಉತ್ತಮವಾದ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಮೇಲೂರು ಗ್ರಾಮ ಪಂಚಾಯತಿ ಸದಸ್ಯ ಆರ್.ಎ.ಉಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಒಕ್ಕೂಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿವೆ. ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪಗಳು, ಹೀಗೆ ಹತ್ತು ಹಲವಾರು ರೀತಿಯಲ್ಲಿ ಹಣವನ್ನು ಬಿಡುಗಡೆ ಮಾಡುತ್ತಿದ್ದು, ನರೇಗಾ ಯೋಜನೆಯಡಿಯಲ್ಲಿಯೂ ಅನುದಾನವನ್ನು ಮೀಸಲಿಟ್ಟಿದೆ. ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಮಾದರಿಯಲ್ಲೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು, ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಬಿಡುಗಡೆ ಮಾಡುತ್ತಿರುವಂತಹ ಸಹಾಯಧನವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ೨೫ ಸಂಘಗಳ ಮೇಲೆ ಉಸ್ತುವಾರಿ ವಹಿಸಿಕೊಳ್ಳುವಂತಹ ಒಕ್ಕೂಟಗಳೂ ಕೂಡಾ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಈ ಭಾಗದ ಅಭಿವೃಧ್ದಿಗೆ ಸಹಕರಿಸಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕಿ ನಿರ್ಮಲ ಮಾತನಾಡಿ, ಯೋಜನೆಯಿಂದ ನೀಡುತ್ತಿರುವ ಎಲ್ಲಾ ಸೌಲತ್ತುಗಳ ಬಗ್ಗೆ ಒಕ್ಕೂಟದ ಪದಾಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಬೇಕು, ನಿಷ್ಟೆ, ಪ್ರಾಮಾಣಿಕತೆ, ಹಾಗೂ ಶ್ರದ್ದೆಯಿಂದ ಸೇವೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವೃದ್ಧರಿಗೆ ಪಿಂಚಣಿ ಸೌಲಭ್ಯವನ್ನು ಕಲ್ಪಿಸಿಕೊಡಲಾಯಿತು. ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಹಂಡಿಗನಾಳ ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್, ಶಾಂತಶೆಟ್ಟಿ ಮತ್ತಿತರರು ಹಾಜರಿದ್ದರು.
ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕದ ಸುತ್ತ ಬೆಳೆ ಹಾನಿ
ತಾಲ್ಲೂಕಿನ ಹಿತ್ತಲಹಳ್ಳಿಯ ಗೇಟ್ ಬಳಿಯಿರುವ ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕವನ್ನು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ್ದು ಅದು ಕೇವಲ ಕಸವನ್ನು ಸುರಿಯುವ ತಾಣವಾಗಿ ಬದಲಾಗಿದೆ. ಈ ಕಸದ ರಾಶಿಯು ಕೊಳೆತು ನಾರುತ್ತಾ, ಗಾಳಿಗೆ ಹಾರುವ ಪೇಪರ್ ಮತ್ತು ಪ್ಲಾಸ್ಟಿಕ್ ಹಾಳೆಗಳು ಅಕ್ಕಪಕ್ಕದ ತೋಟಗಳ ಹಿಪ್ಪುನೇರಳೆ ಸೊಪ್ಪಿಗೆ ಮಾರಕವಾಗಿ ಪರಿಣಮಿಸಿವೆ ಎಂದು ರೈತರು ದೂರಿದ್ದಾರೆ.
ನಗರದಿಂದ ಎರಡು ಕಿ.ಮೀ ದೂರದಲ್ಲಿರುವ ಘನತ್ಯಾಜ್ಯ ವಸ್ತು ವಿವೇವಾರಿ ನಿರ್ವಹಣ ಘಟಕಕ್ಕೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ಕಾಂಪೌಂಡ್, ಸಂಸ್ಕರಣ ಘಟಕಗಳು, ಡಾಂಬರು ರಸ್ತೆ, ವಿದ್ಯುತ್ ದೀಪಗಳು, ಸಂಸ್ಕರಣ ಘಟಕದ ಕಾವಲು ನೌಕರನಿಗೆ ಪ್ರತ್ಯೇಕ ಕೊಠಡಿ ಹೀಗೆ ಹಲವಾರು ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತೇವೆ. ಈ ಸ್ಥಳವನ್ನು ನಂದನವನವನ್ನಾಗಿಸುತ್ತೇವೆಂದು ಸ್ಥಳೀಯರಿಗೆ ಮತ್ತು ಸುತ್ತಮುತ್ತಲಿನ ರೈತರಿಗೆ ಆಶ್ವಾಸನೆಯನ್ನು ನೀಡಿದ್ದರು. ಆದರೆ ಈಗ ಸುತ್ತಮುತ್ತಲಿನ ರೈತರು ಹಿಪ್ಪುನೇರಳೆ ಸೊಪ್ಪನ್ನು ಸರಿಯಾಗಿ ಬೆಳೆಯದಂತಾಗಿದೆ. ಮಳೆ ಬಿದ್ದರಂತೂ ಈ ಪ್ರದೇಶದಲ್ಲಿ ಮೂಗು ಮುಚ್ಚಿ ಓಡಾಡಬೇಕು. ಮಳೆ ಬಂದರೆ ಕಸವು ಮಳೆ ನೀರಿನಿಂದಿಗೆ ಕೊಚ್ಚಿಕೊಂಡು ರಸ್ತೆಗೆ ಬರುತ್ತದೆ. ಇವರ ಕಾಟದಿಂದ ಕೆರೆಗೆ ನೀರು ಹರಿಯುವ ಕಾಲುವೆಯೂ ಮುಚ್ಚಿಹೋಗಿದ್ದು, ಮಳೆ ನೀರು ಕೆರೆಗೆ ಹರಿಯದೆ ರಸ್ತೆ ಮೇಲೆ ಬರುತ್ತದೆ ಎಂದು ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ದೂರಿದರು.
ವೈಜ್ಞಾನಿಕವಾಗಿ ಘನತ್ಯಾಜ್ಯಗಳನ್ನು ಎರಡು ರೀತಿಯಾಗಿ ವರ್ಗೀಕರಿಸಬೇಕು. ಕ್ರಮೇಣ ಮಣ್ಣಿನಲ್ಲಿ ಸೇರಿಹೋಗುವ ಸಾವಯವ ತ್ಯಾಜ್ಯಗಳು ಮತ್ತು ಮಣ್ಣಿನಲ್ಲಿ ಸೇರದಿರುವ ಪ್ಲಾಸ್ಟಿಕ್, ಕಬ್ಬಿಣ, ತಗಡು, ಬ್ಯಾಟರಿ ಸೆಲ್ ಮುಂತಾದ ತ್ಯಾಜ್ಯಗಳು. ಇವನ್ನು ಪ್ರತ್ಯೇಕಿಸಬೇಕು. ಸಿಎಫ್ಎಲ್ ನಂಥ ಕೆಲವೊಂದು ಅಪಾಯಕಾರಿ ತ್ಯಾಜ್ಯಗಳೂ ಇರುತ್ತವೆ. ಅವು ಒಡೆದರೆ ಅದರಿಂದ ಪಾದರಸದ ಆವಿ ಹೊರಸೂಸುತ್ತದೆ. ಅದು ವಿಷ ಪದಾರ್ಥ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟರೂ ವಿಷಗಾಳಿ ಹೊರಹೊಮ್ಮುತ್ತದೆ. ಆದರೆ ನಗರಸಭೆಯವರು ಯಾವ ವರ್ಗೀಕರಣವನ್ನೂ ಮಾಡದೆ ಕೆವೊಮ್ಮೆ ಕಸಕ್ಕೆ ಬೆಂಕಿ ಹಚ್ಚಿಬಿಡುತ್ತಾರೆ. ಆಗಂತೂ ಹೊಗೆ, ಬೂದಿ ನಮ್ಮ ಬೆಳೆಯನ್ನೆಲ್ಲಾ ಹಾಳು ಮಾಡುತ್ತದೆ. ಇನ್ನು ಮಳೆಗಾಲ ಪ್ರಾರಂಭವಾಗಿದೆ. ರೋಗಗಳು ಹರಡಿ ಅನಾಹುತಗಳಾಗುವ ಮುನ್ನ ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಈ ಬಾರಿ ಬೀಳುವ ಮಳೆಗೆ ತ್ಯಾಜ್ಯವೇನಾದರೂ ಹರಿಯುತ್ತಾ ಬಂದಲ್ಲಿ ರೈತರೆಲ್ಲಾ ನಗರಸಭೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಅವರು ತಿಳಿಸಿದರು.

