Home Blog Page 462

ಪಕ್ಷದ ಸಂಘಟನೆ ಬಲಪಡಿಸಬೇಕು

0

ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪಕ್ಷದ ಪದಾಧಿಕಾರಿಗಳ ನೇಮಕ ಹಾಗೂ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಗುರುವ ಯಾದವ್ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಹನುಮಾನ್ ವ್ಯಾಯಾಮ ಶಾಲೆಯ ಬಳಿ ಮಯೂರ ವೃತ್ತದ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಯುವಕರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೇಳಿದರು.
ಬಿಜೆಪಿ ಮುಖಂಡರಾದ ತರಬಳ್ಳಿ ಭಾಸ್ಕರರೆಡ್ಡಿ, ಕೃಷ್ಣಪ್ಪ, ರಾಮಕೃಷ್ಣಪ್ಪ, ಹೇಮಾರ್ಲಹಳ್ಳಿ ನಾಗರಾಜ್, ಬೈರರೆಡ್ಡಿ, ರಂಜಿತ್, ವೇಣು ಮತ್ತಿತರರು ಹಾಜರಿದ್ದರು.

ಗುರುಗಳು, ತಂದೆ ತಾಯಿಯರ ಋಣ ತೀರಿಸಲಾಗದು

0

ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣ ಎಂದಿಗೂ ಮರೆಯಬಾರದು ಎಂದು ಎಸ್.ಎನ್. ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್.ಎನ್ ಕ್ರಿಯಾ ಟ್ರಸ್ಟ್ನ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಎಷ್ಟೇ ಉನ್ನತ ಮಟ್ಟಕ್ಕೆ ಹೋದರೂ ತಾವು ನಡೆದ ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಾವು ಋಣಿಗಳಾಗಿರಬೇಕು. ಸಾಧ್ಯವಾದಷ್ಟೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹುಟ್ಟಿದ ಊರು, ತಂದೆ ತಾಯಿ ಮತ್ತು ಗುರುಗಳಿಗೆ ಗೌರವ ತರುವ ಕೆಲಸ ಮಾಡಬೇಕೆಂದು ಹೇಳಿದರು.
ರೈತ ಹಿತರಕ್ಷಣಾ ವೇದಿಕೆಯ ಜಿಲ್ಲಾದ್ಯಕ್ಷ ಮಳ್ಳೂರು ಶಿವಣ್ಣ ಮಾತನಾಡಿ, ಪೋಷಕರು ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಮುಪ್ಪಿನ ವಯಸ್ಸಿನಲ್ಲಿ ತಮಗೆ ಆಶ್ರಯ ನೀಡಬೇಕು ಎಂಬ ಆಶಾಭಾವನೆಯನ್ನು ಹೊಂದಿರುತ್ತಾರೆ. ತಮ್ಮ ವ್ಯಕ್ತತ್ವವನ್ನು ರೂಪಿಸಿದ ಗುರುಗಳಿಗೆ ಗೌರವ ಸರ್ಮಪಣೆಯನ್ನು ಮಾಡುವುದು ನಿಜಕ್ಕೂ ಶ್ಞಾಘನೀಯ ಎಂದು ತಿಳಿಸಿದರು.
ಸರಸ್ವತಿ ವಿದ್ಯಾಸಂಸ್ಥೆಯಲ್ಲಿ 19೯೦ ರಿಂದ 19೯೫ ರಲ್ಲಿ ಶಿಕ್ಷಕರಾಗಿದ್ದವರಿಗೆ ಸನ್ಮಾನವನ್ನು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ತಾಲ್ಲೂಕಿನ ೫೦೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಮುಗಲಡಪಿ ಗ್ರಾಮದ ಅಂಗವಿಕಲೆ ವಿದ್ಯಾರ್ಥಿ ಗೌತಮಿಗೆ ವೀಲ್ ಚೇರ್ ನೀಡಲಾಯಿತು.
ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷರಾದ ಬೈರೇಗೌಡ, ಎಸ್.ಎನ್. ಕ್ರಿಯಾ ಟ್ರಸ್ಟ್ನ ಅಧ್ಯಕ್ಷ ಆಂಜಿನಪ್ಪ, ಸುರೇಶ್, ಬೆಳ್ಳೂಟಿ ಸಂತೋಷ್, ಸರ್ಕಾರಿ ನೌಕರರ ತಾಲ್ಲೂಕು ಅಧ್ಯಕ್ಷ ಗುರುರಾಜ್ರಾವ್, ಬೆಳ್ಳೂಟಿ ರಮೇಶ್, ತಾದೂರು ಮಂಜುನಾಥ್, ವಕೀಲರಾದ ಯೋಗನಾಂದ, ನಾರಾಯಣಸ್ವಾಮಿ, ಸುರೇಶ್, ರಮೇಶ್, ರವಿಪ್ರಕಾಶ್, ಶ್ರೀನಿವಾಸ್, ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ನಟರಾಜ್, ಮುನಿಕೃಷ್ಣ ಮತ್ತಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜನರಲ್ಲಿ ಜಾಗೃತಿ ಮೂಡಿಸಬೇಕು

0

ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಪಿಡುಗಿನ ನಿರ್ಮೂಲನೆ ಸಾಧ್ಯ ಎಂದು ಜೆಎಂಎಫ್ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಕಾರ್ಮಿಕ ಇಲಾಖೆ ಮತ್ತು ತಾಲ್ಲೂಕು ವಕೀಲರ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯ’ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ದಿನಾಚರಣೆ ಆಚರಿಸಿ ಜಾಗೃತಿ ಮೂಡಿಸಿದರಷ್ಟೇ ಈ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದರ ಬದಲು ಮಕ್ಕಳು ದೇಶದ ಆಸ್ತಿ ಅವರ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡಬೇಕೆಂಬ ಮನಸ್ಥಿತಿ ಎಲ್ಲರಲ್ಲಿ ಬರಬೇಕಿದೆ. ಭಾರತದ ಸಂವಿಧಾನ ಸಹ 6 ರಿಂದ 14ನೇ ವಯಸ್ಸಿನವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ನಿಬಂಧನೆ ವಿಧಿಸಿದೆ. ಅದರಂತೆ ಸರ್ಕಾರ ಶಾಲೆಗಳಲ್ಲಿ ಬಿಸಿಯೂಟ ಮತ್ತಿತರ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿದೆ. ಬಾಲಕಾರ್ಮಿಕ ಪದ್ಧತಿ ತಡೆಗೆ ಸರ್ಕಾರ ಹಲವಿಧ ಸೌಲಭ್ಯ ಒದಗಿಸುವುದರ ಜತೆಗೆ ನೂರಾರು ಕಾನೂನುಗಳನ್ನು ಮಾಡಬಹುದು. ಆದರೆ, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಹೊಣೆಯಿಂದ ಪಾಲಕರು ತಪ್ಪಿಸಿಕೊಂಡರೆ ಸರ್ಕಾರದ ಆಶಯ ಈಡೇರಲಾರದು ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ನಿರೀಕ್ಷಕ ಎಸ್.ವಿಶ್ವನಾಥ, ‘ಸಾಮಾಜಿಕ ಭದ್ರತಾ ಯೋಜನೆಯಡಿ ಬಾಲಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು’ ಎಂಬ ವಿಷಯವಾಗಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ವಕೀಲರಾದ ನಾಗೇಂದ್ರಬಾಬು, ಮುನಿರಾಜು, ಸ್ವಯಂಸೇವಕಿ ಸೌಮ್ಯ ಮತ್ತಿತರರು ಈ ಸಂದರ್ಭಲ್ಲಿ ಹಾಜರಿದ್ದರು.

‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’

0

ಪ್ರತಿಯೊಂದು ಮನೆಯಲ್ಲೂ ಪುಟ್ಟ ಗ್ರಂಥಾಲಯವಿರಬೇಕು. ಇದರಿಂದ ಜ್ಞಾನಸಂಪಾದನೆ ಹಾಗೂ ನಮ್ಮ ಕ್ರಿಯಾಶೀಲತೆ ಹೆಚ್ಚಿಸಲು ನೆರವಾಗುತ್ತದೆ. ಸಾಹಿತ್ಯ ಓದುವ ಮೂಲಕ ಕನ್ನಡವನ್ನು ಬೆಳೆಸಬೇಕು ಎಂದು ಸಾಹಿತಿ ಕಾಗತಿ ವೆಂಕಟರತ್ನಂ ತಿಳಿಸಿದರು.
ನಗರದ ಗಂಗಮ್ಮ ದೇವಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಪ್ರತಿಯೊಂದು ವಾರ್ಡ್ ನಲ್ಲೂ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾದ ಕನ್ನಡದ ಓದನ್ನು ಪ್ರೇರೇಪಿಸುವ ‘ಕವಿ ನಮನ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕ.ಸಾ.ಪ ತಾಲ್ಲೂಕು ಘಟಕ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿಯ ಕವಿನಮನವನ್ನು ‘ಆಧುನಿಕ ಕನ್ನಡ ಸಣ್ಣಕತೆಗಳ ಜನಕ’ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಸಮರ್ಪಿಸಲಾಗಿದೆ. ಜನಸಾಮಾನ್ಯರ ಮತ್ತು ಅಸಾಮಾನ್ಯರ ಬದುಕಿನ ನೋವು-ನಲಿವುಗಳನ್ನು ಅವರು ತಮ್ಮ ಬರಹದಲ್ಲಿ ಸರಳ ಭಾಷೆಯಲ್ಲಿ ಚಿತ್ರಿಸಿದ್ದು ಪ್ರತಿಯೊಬ್ಬರೂ ಅವರ ಕಥೆಗಳನ್ನು ಓದುವ ಮೂಲಕ ಜೀವನೋತ್ಸಾಹವನ್ನು ಪಡೆದುಕೊಳ್ಳಬಹುದಾಗಿದೆ. ಮಾಸ್ತಿರವರ ೧೨೫ನೇ ಜಯಂತಿಯ ಸಂದರ್ಭದಲ್ಲಿ ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಅವರನ್ನು ನೆನೆಯುವುದು ಸೂಕ್ತವಾಗಿದೆ. ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವವರನ್ನು ಸಮಾಜ ಯಾವಾಗಲೂ ನೆನೆಯುತ್ತದೆ, ಅಂತಹ ವ್ಯಕ್ತಿತ್ವ ಹೊಂದಿದ್ದ ಮಾಸ್ತಿಯವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.
ಎಸ್.ವಿ.ನಾಗರಾಜರಾವ್ ಹೆಣ್ಣಿನಬಗ್ಗೆ, ಚಂದ್ರಶೇಖರ್ ಹಡಪದ್ ಕಾವೇರಿ ಮತ್ತು ಗೂಳಿ ಕುರಿತು, ಗೋಳುಚಿನ್ನಪ್ಪನಹಳ್ಳಿ ವೆಂಕಟೇಶ್ ಹೆಣ್ಣಿನ ಶೋಷಣೆ ಬಗ್ಗೆ, ಕಾಶೀನಾಥ್ ಸ್ನೇಹದ ಕುರಿತಂತೆ ಕವನಗಳನ್ನು ವಾಚಿಸಿದರು. ಶ್ರೀಕಾಂತ್ ಮತ್ತು ಸಾವಿತ್ರಮ್ಮ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಶ್ರೀಕಾಂತ್ ಅವರನ್ನು ಕ.ಸಾ.ಪ ತಾಲ್ಲೂಕು ಘಟಕದಿಂದ ಗೌರವಿಸಲಾಯಿತು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭಾ ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ್, ಕ.ಸಾ.ಪ ತಾಲ್ಲೂಕು ಘಟಕದ ಮಹಿಳಾ ಪ್ರತಿನಿಧಿ ಸಾವಿತ್ರಮ್ಮ, ಉಪಾಧ್ಯಕ್ಷ ಸಿ.ಪಿ.ಈ ಕರಗಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಎಂ.ಮುನಿಯಪ್ಪ, ಸಹ ಸಂಚಾಲಕ ಕಾಶೀನಾಥ್, ನಗರಸಭಾ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್, ಎಸ್.ವಿ.ನಾಗರಾಜರಾವ್, ಶಾಲಿನಿ, ಎ.ಎಸ್. ರವಿ, ಗುರು, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆರಂಭದಲ್ಲೇ ಮುರಿದುಬೀಳುವ ಮದುವೆಗಳು – ಭಾಗ 1

0

ಏಕಿಷ್ಟು ಕೋಲಾಹಲ?
ನಮ್ಮ ಸುತ್ತಲೇ ಇಂತಹ ಘಟನೆಗಳು ಹೆಚ್ಚುಹೆಚ್ಚಾಗಿ ಕಂಡುಬರುತ್ತಿದೆ.
1. ನನ್ನ ಸಂಬಂಧಿಯೊಬ್ಬರು ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ನಂತರ ಒಂದೇ ತಿಂಗಳಿನಲ್ಲಿ ಮದುವೆ ಮುರಿದು ಬಿತ್ತು. ಕಾರಣ ಹುಡುಗನಲ್ಲಿ ಕೌಟುಂಬಿಕ ಜೀವನಕ್ಕೆ ತೊಂದರೆಯಾಗುವ ಲೈಂಗಿಕ ಸಮಸ್ಯೆಗಳಿದ್ದವು. ಆಮೇಲೆ ನನಗೆ ತಿಳಿದು ಬಂದ ವಿಷಯವೆಂದರೆ, ಅದು ಪೋಷಕರಿಗೆ ಮೊದಲೇ ತಿಳಿದಿತ್ತು. ಆದರೂ ಅವರು ಯಾವುದೇ ತಜ್ಞರ ಸಲಹೆ ಪಡೆಯುವುದು ಸಾಮಾಜಿಕ ಕಳಂಕವೆಂದು ತಿಳಿದು ಮದುವೆ ಮಾಡಿದ್ದರು.
2. ಮತ್ತೊಬ್ಬ ಸ್ನೇಹಿತನ ಮಗಳ ಮದುವೆಯಾಯಿತು. ಒಂದೇ ತಿಂಗಳಿನಲ್ಲಿ ಕಣ್ಣೀರನ್ನು ಸುರಿಸುತ್ತಾ ಮಗಳು ಮನೆಗೆ ಬಂದಳು. ಅವಳಿಂದ ತಿಳಿದ ವಿಚಾರ ಕಂಗೆಡಿಸುವಂತಿತ್ತು. ನವದಂಪತಿಗಳ ಜೊತೆ ಮನೆಯಲ್ಲಿರುತ್ತಿದ್ದ ವಿದುರನಾದ ಮಾವ ಸೊಸೆಯ ಮೇಲೆ ಲೈಂಗಿಕ ಆಸೆ ವ್ಯಕ್ತಪಡಿಸುತ್ತಿದ್ದ. ಇದನ್ನು ಪತಿಗೆ ಹೇಳಿದಾಗ ಅವನಿಂದ “ನೀನು ಹೊಂದಿಕೊಂಡು ಹೋಗಬೇಕು” ಎಂಬ ಸಲಹೆ ಬಂದಿತು. ಈ “ಹೊಂದಿಕೊಳ್ಳುವುದು” ಎಂದರೆ ಏನೆಂದು ಕೇಳುವ ಮುಜುಗರ ತಪ್ಪಿಸಿಕೊಂಡು ತೌರುಮನೆಗೆ ಹಿಂತಿರುಗಿದ್ದಳು ಆ ನವವಧು.
3. ಮೇಲೆ ಹೇಳಿರುವುದು ಸಾಂಪ್ರದಾಯಿಕ ಮದುವೆಗಳಿಂದ ಆಗುವ ತೊಂದರೆಗಳು ಎಂದು ಯುವಜನಾಂಗ ಮೂಗುಮುರಿಯಬಹುದು. ಆದರೆ ಪ್ರೇಮವಿವಾಹಗಳಲ್ಲಿಯೂ ಇಂತಹ ಸಂದರ್ಭಗಳಿವೆ. ಐದಾರು ವರ್ಷಗಳಿಂದ ಪ್ರೇಮಿಸುತ್ತಿದ್ದ ಜೋಡಿಗಳು ಮದುವೆಯಾಗಿ ಮೂರು ತಿಂಗಳಲ್ಲೇ ಹೊಂದಾಣಿಕೆಯಾಗದಿರುವುದು, ದೈಹಿಕ ನ್ಯೂನತೆ, ಲೈಂಗಿಕ ಅಸಾಮಥ್ರ್ಯ ಮುಂತಾದ ಕಾರಣಗಳಿಗಾಗಿ ವಿಚ್ಛೇದನಕ್ಕೆ ಮೊರೆಹೋಗಿದ್ದನ್ನು ನಾನು ನೋಡಿದ್ದೇನೆ.
4. ನನ್ನ ಸ್ನೇಹಿತರೊಬ್ಬರು ಹೇಳಿದ ಪ್ರಕಾರ ಇತ್ತೀಚೆಗೆ ಬೆಂಗಳೂರಿನಲ್ಲಿ ಮದುವೆಗಳು ತಾಳಿಕಟ್ಟುವ ಹಂತದಲ್ಲೇ ಮುರಿದುಬೀಳುತ್ತಿರುವ ಘಟನೆಗಳು ಸಾಕಷ್ಟು ವರದಿಯಾಗಿವೆ. ಹುಡುಗ ಅಥವಾ ಹುಡುಗಿಗೆ ಮೊದಲೇ ಇರಬಹುದಾದ ಪ್ರೇಮಿಗಳು ಅಥವಾ ಅಲ್ಲಿಯವರೆಗೆ ಮುಚ್ಚಿಡಲಾಗಿದ್ದ ಇತರ ವಿಚಾರಗಳು ಹೊರಬರುವುದು, ಮುಂತಾದವು ಇದಕ್ಕೆ ಕಾರಣಗಳು.
5. ಇದೆಲ್ಲದರ ಅತಿರೇಕವೆಂದರೆ ಕಳೆದ ವರ್ಷ ಬೆಂಗಳೂರಿನಿಂದ ವರದಿಯಾದ ಘಟನೆ. ಯಾರನ್ನೋ ಪ್ರೇಮಿಸುತ್ತಿದ್ದರೂ ಪೋಷಕರ ಒತ್ತಾಯಕ್ಕೆ ಮತ್ತೊಬ್ಬನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಒಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಆ ಹುಡುಗಿ, ತನ್ನ ಪ್ರೇಮಿ ಮತ್ತು ಬಾಡಿಗೆ ಬಂಟರಿಂದ ಭಾವೀ ಪತಿಯನ್ನೇ ಕೊಲ್ಲಿಸಿದ್ದಳು.
ಇವೆಲ್ಲಾ ನಗರ ಕೇಂದ್ರಿತವಾದ್ದು, ಹಳ್ಳಿಗಳಲ್ಲಿ ಎಲ್ಲಾ ಸರಳಿತವಾಗಿ ನಡೆಯುತ್ತಿದೆ ಎನ್ನುವಂತಿಲ್ಲ. ಇಂತಹ ಘಟನೆಗಳು ಹಳ್ಳಿಗಳಲ್ಲೂ ನಡೆಯುತ್ತಿವೆ ಮಾತ್ರವಲ್ಲ, ದಿನೇದಿನೇ ಹೆಚ್ಚಾಗುತ್ತಿವೆ ಕೂಡ. ಭಾರತೀಯ ವೈವಾಹಿಕ ವ್ಯವಸ್ಥೆಯಲ್ಲಿ ಏಕಿಷ್ಟು ಅಲ್ಲೋಲ ಕಲ್ಲೋಲವಾಗುತ್ತಿದೆ? ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆ, ಬದಲಾಗುತ್ತಿರುವ ಸಮಾಜ, ಮಾಧ್ಯಮಗಳ ಪ್ರಭಾವ, ಸ್ತ್ರೀಯರ ಆರ್ಥಿಕ ಸ್ವಾವಲಂಬನೆ, ಪೋಷಕರ ತಪ್ಪುಗಳು-ಹೀಗೆ ಎಲ್ಲರೂ ಅವರವರ ನಂಬಿಕೆಗಳಿಗೆ ಅನುಸಾರವಾಗಿ ಕಾರಣಗಳನ್ನು ಕೊಡಬಹುದು. ಇದಾವುದೂ ಸುಳ್ಳಾಗಿರಲಾರದು, ಆದರೆ ಇದಿಷ್ಟೇ ಸಂಪೂರ್ಣ ಸತ್ಯವೂ ಅಲ್ಲ! ಕಾರಣಗಳನ್ನು ಹುಡುಕಿಕೊಂಡ ಮೇಲೂ ಪರಿಹಾರ ತನ್ನಿಂದ ತಾನೇ ಸಿಗುವುದಿಲ್ಲವಲ್ಲ. ಹಾಗಾಗಿ ಅದಕ್ಕಾಗಿ ನಾವೇನು ಮಾಡಬಹುದು?
ವಿಚ್ಛೇದನಗಳು ಇವತ್ತಿನ ಅನಿವಾರ್ಯತೆ!
“ಅಯ್ಯೋ ಕಾಲ ಕೆಟ್ಟುಹೋಗಿದೆ” ಎಂದು ಎಲ್ಲ ಕಾಲದಲ್ಲೂ ವೃದ್ಧರು ಹೇಳುತ್ತಲೇ ಬರುತ್ತಾರೆ. ಹೀಗೆ ಹೇಳಿದ ತಕ್ಷಣ ಇವತ್ತಿನದು ಎಲ್ಲವೂ ಕೆಟ್ಟದ್ದು ಎಂದು ಅರ್ಥ ಬರುತ್ತದೆ. ಹಾಗಾಗಿ ನಾವು ಕಾಲ ಬದಲಾಗುತ್ತಿದೆ ಅಂದುಕೊಳ್ಳೋಣ! ನೂರಾರು ವರ್ಷಗಳ ಹಿಂದೆ ವಿಚ್ಛೇದನ ಸಾಮಾಜಿಕ ಕಳಂಕವಾಗಿತ್ತು, ಅದಕ್ಕಿಂತ ಹೆಚ್ಚಾಗಿ ಕಾನೂನುಬಾಹಿರವಾಗಿತ್ತು. ಇವತ್ತು ಸಮಾಜ ಮತ್ತು ಕಾನೂನು ಎರಡೂ ಇದಕ್ಕೆ ಅವಕಾಶ ಮಾಡಿಕೊಟ್ಟಿವೆ. ಹಾಗಾಗಿ ಇವತ್ತು ಮದುವೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಒತ್ತಾಸೆಗಳೇನಿಲ್ಲ. ಆದ್ದರಿಂದ ವಿಚ್ಛೇದನ ಇವತ್ತಿನ ಅನಿವಾರ್ಯತೆ! ಹಾಗಿದ್ದರೆ ಎಷ್ಟರ ಮಟ್ಟಿನ ಅನಿವಾರ್ಯತೆ ಎಂದು ಯೋಚಿಸಬೇಕಲ್ಲವೇ?
ಮದುವೆಗಳು ಸಾಂಪ್ರದಾಯಿಕವಾಗಿ ವ್ಯವಸ್ಥೆ ಮಾಡಿದ್ದಿರಲಿ, ಪ್ರೇಮಿಸಿ ಆದದ್ದಿರಲಿ, ತನ್ನ ಸಂಗಾತಿಯೊಡನೆ ಸೌಹಾರ್ದಯುತವಾಗಿ ಬಾಳಲು ಸಾಧ್ಯವೇ ಇಲ್ಲವೇ ಎಂದು ನಿರ್ಧರಿಸಲು ಸಮಯ ಬೇಕಾಗುತ್ತದೆ. ಇಂತಹ ಸಮಯ ಒಂದೆರೆಡು ವರ್ಷಗಳಿಂದ ಹಲವಾರು ವರ್ಷಗಳಾಗಬಹುದು. (ಮರಣಶಯ್ಯೆಯಲ್ಲಿರುವವರೂ ವಿಚ್ಛೇದನ ಕೇಳಿದ ಪ್ರಕರಣಗಳಿವೆ, ಬಿಡಿ! ಅದಕ್ಕೆ ಆಸ್ತಿ, ಹಣ ಮುಂತಾದ ಕಾರಣಗಳಿರಬಹುದು.) ಹಾಗಾಗಿ ಅದಕ್ಕಿಂತ ಮೊದಲೇ ವಿಚ್ಛೇದನದ ಪರಿಸ್ಥಿತಿಗಳು ಉದ್ಭವಿಸುತ್ತಿವೆ ಎಂದರೆ ನಾವೆಲ್ಲಾ ಯೋಚಿಸಬೇಕಾಗುತ್ತದೆ. ಇದರ ಕಾರಣಗಳಾದ ನಮ್ಮ ವೈವಾಹಿಕ ವ್ಯವಸ್ಥೆ, ಮಕ್ಕಳಿಗೆ ನಾವು ನೀಡುತ್ತಿರುವ (ಅದಕ್ಕಿಂತ ಹೆಚ್ಚಾಗಿ ನೀಡದೇ ಇರುವ!) ಶಿಕ್ಷಣ, ನಮ್ಮ ಸಾಮಾಜಿಕ ಸ್ಥಿತಿಗತಿಗಳು, ಇವೆಲ್ಲವುದರ ಬಗೆಗೆ ಪುನರಾವಲೋಕಿಸಬೇಕಾಗುತ್ತದೆ.
ಸ್ಫೋಟಗೊಂಡ ಬದಲಾವಣೆಗಳು
ಸ್ವಾತಂತ್ರಾನಂತರದ ಮೊದಲ ಮೂರು ದಶಕಗಳಲ್ಲಿ ಭಾರತ ಹೊರ ಜಗತ್ತಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ಆಗ ಕೂಡ ಎಲ್ಲ ರಂಗಗಳಲ್ಲಿಯೂ ಬದಲಾವಣೆಗಳಾಗುತ್ತಿದ್ದವು. ಆದರೆ ಈ ಬದಲಾವಣೆ ಮಾಮೂಲಿನ ವೇಗದಲ್ಲಿತ್ತು. ಹಾಗಾಗಿ ಜನರಿಗೆ ಅದನ್ನು ತಡೆದುಕೊಳ್ಳುವ ಮತ್ತು ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಕಾಲಾವಕಾಶವಿರುತ್ತಿತ್ತು. ಎಪ್ಪತ್ತರ ದಶಕದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಶುರುವಾದ ಸಂಪರ್ಕ ಕ್ರಾಂತಿ ಎಂಬತ್ತರ ದಶಕದಲ್ಲಿ ಭಾರತಕ್ಕೂ ಕಾಲಿಟ್ಟಿತು. ತೊಂಭತ್ತರ ದಶಕದಲ್ಲಿ ಮುಕ್ತ ಆರ್ಥಿಕ ನೀತಿ ಮತ್ತು ಜಾಗತೀಕರಣವನ್ನು ಅಪ್ಪಿಕೊಂಡ ಭಾರತ ಒಮ್ಮೆಲೆ ಇಡೀ ಪ್ರಪಂಚಕ್ಕೆ ತೆರೆದುಕೊಂಡಿತು. ಅಲ್ಲಿಯವರೆಗೆ ಪತ್ರಿಕೆಗಳಲ್ಲಿ ಓದುತ್ತಿದ್ದ ಮತ್ತು ಅವರಿವರಿಂದ ಕೇಳುತ್ತಿದ್ದ ಪಾಶ್ಚಿಮಾತ್ಯ ಜೀವನ ಶೈಲಿ ಈಗ ಕಣ್ಣೆದುರೇ ಕಾಣತೊಡಗಿತ್ತು. ಕಂಪ್ಯೂಟರ್‍ಗಳು, ಅಂತರ್ಜಾಲ, ಮೊಬೈಲ್, ಟೀವಿ, ಸಿನಿಮಾಗಳು ಮುಂತಾದವು ಭಾರತೀಯ ಯುವಕರನ್ನು ಮಂತ್ರಮುಗ್ಧರನ್ನಾಗಿಸಿ, ಪಾಶ್ಚಿಮಾತ್ಯ ಜೀವನ ಶೈಲಿಯತ್ತ ಎಳೆಯಿತು. ತೊಂಭತ್ತರ ನಂತರ ಜನಿಸಿದ ಮಕ್ಕಳು ಇವೆಲ್ಲವನ್ನೂ ಹುಟ್ಟುತ್ತಲೇ ನೋಡುತ್ತಿದ್ದುದರಿಂದ ಇವೆಲ್ಲಾ ಸಹಜವೆಂಬಂತಹ ವಾತಾವರಣದಲ್ಲಿ ಬೆಳೆದರು. ಆದರೆ ಅವರ ಅಪ್ಪಅಮ್ಮಂದಿರು ಮಾತ್ರ ತಮ್ಮ ಬಾಲ್ಯದಿಂದ ಬೆಳೆಸಿಕೊಂಡ ನಂಬಿಕೆಗಳ ಉರುಳಿನಲ್ಲೇ ಸಿಕ್ಕಿಕೊಂಡು ತ್ರಿಶಂಕುಗಳಾಗಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಇರುವ ತಲೆಮಾರುಗಳ ಅಂತರ ಒಮ್ಮೆಲೆ ಭಾರೀ ದೊಡ್ಡದಾದಂತೆ ಕಂಡುಬರತೊಡಗಿತು.
ಏನಿದರ ಪರಿಣಾಮಗಳು?
ನಮ್ಮ ಮಾರುಕಟ್ಟೆಗಳು ಪಾಶ್ಚಿಮಾತ್ಯ ದೇಶಗಳಿಗೆ ತೆರೆದುಕೊಂಡಷ್ಟು ವೇಗದಲ್ಲಿ, ನಮ್ಮ ಮನಸ್ಸುಗಳು, ಚಿಂತನೆಗಳು, ಜೀವನಶೈಲಿ ಮುಂತಾದವು ಬದಲಾಗಲಿಲ್ಲ. ಹಾಗಾಗಿ ಅವರದನ್ನೂ ಬಯಸುವ, ನಮ್ಮದನ್ನು ಬಿಡಲಾಗದ ಎಡಬಿಂಡಂಗಿತನದಲ್ಲಿ ಇವತ್ತಿನ ಪೋಷಕರು ಇದ್ದಾರೆ. ಇವತ್ತಿನ ಮಕ್ಕಳ ಪರಿಸ್ಥಿತಿ ಕೂಡ ಬಹಳ ಭಿನ್ನವಾಗೇನೂ ಇಲ್ಲ. ಇದರ ಕೆಲವು ಪರಿಣಾಮಗಳು ಹೀಗಿವೆ;
1. ವಿವಾಹ ಪೂರ್ವದಲ್ಲಿ ಪ್ರೇಮಿಸುವ ಅಥವಾ ಲೈಂಗಿಕ ಸಂಬಂಧಗಳನ್ನು ಹೊಂದುವ ಅಥವಾ ಹೊಂದಲು ಬಯಸುವ ಯುವಜನತೆ ಅದನ್ನು ಸಮಾಜದೆದುರು, ಅದರಲ್ಲೂ ಹೆಚ್ಚಾಗಿ ಪೋಷಕರೆದುರು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಂಡಿಲ್ಲ. ಹೆಚ್ಚಿನವರು ಇದೋ ಅದೋ ಅನ್ನುವ ಗೊಂದಲದಲ್ಲಿ ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದಾರೆ.
2. ಪಾಶ್ಚಿಮಾತ್ಯರ ಲಿಂಗಸಮಾನತೆಯ ಚಿಂತನೆಗಳು ನಮಗೆ ಒಪ್ಪಿಗೆಯಾಗುವುದಿಲ್ಲ. ಹೆಚ್ಚಿನ ಯುವಕರು ತಮಗೆ ವಿವಾಹಪೂರ್ವ ಲೈಂಗಿಕ ಅನುಭವವಿದ್ದರೂ ತಮ್ಮ ಸಂಗಾತಿಯಾಗುವವಳು, “ಪವಿತ್ರ”ವಾಗಿಯೇ ಇರಬೇಕೆಂದು ಬಯಸುತ್ತಾರೆ. ಪೋಷಕರೂ ಕೂಡ ನಮ್ಮ ಯುವಕರಂತೆಯೂ ಯೋಚಿಸುತ್ತಾರೆ. ಆದರೆ ವಿದ್ಯೆ ಮತ್ತು ಆರ್ಥಿಕ ಸ್ವಾತಂತ್ರ ಹೊಂದಿರುವ ಯುವತಿಯರಿಗೆ ಈ ತರ್ಕವನ್ನು ಒಪ್ಪಲಾಗುತ್ತಿಲ್ಲ.
3. ಹೆಚ್ಚಿನ ಪೋಷಕರು ಬದಲಾಗುತ್ತಿರುವ ಪರಿಸ್ಥಿತಿಗಳನ್ನು ನೋಡುತ್ತಿದ್ದರೂ ‘ನಮ್ಮ ಮಕ್ಕಳು ಮಾತ್ರ ಹಾಗಲ್ಲ’ ಎಂಬ ಭ್ರಮೆಯಲ್ಲಿದ್ದಾರೆ. ಇಂತವರು, ಮುಕ್ತ ಮಾರುಕಟ್ಟೆಯಿಂದ ಸಿಗುವ ಆರ್ಥಿಕ ಲಾಭಗಳು ಬೇಕು, ಪಾಶ್ಚಿಮಾತ್ಯರು ಉಪಯೋಗಿಸುವ ಗ್ಯಾಡ್ಜೆಟ್‍ಗಳೆಲ್ಲಾ ಬೇಕು, ಆದರೆ ಅವರ ಜೀವನ ಶೈಲಿ ಮಾತ್ರ ಬೇಡ ಎನ್ನುವ ಅವಾಸ್ತವಿಕ ಚಿಂತನೆಯಲ್ಲಿದ್ದಾರೆ. ಉದಾಹರಣೆಗೆ ತೀರಾ ಸಂಪ್ರದಾಯಿಕ ಮನೋಭಾವದ ಪೋಷಕರೂ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ವಿದೇಶಗಳಿಗೆ ಕಳಿಸಲು ಸಿದ್ಧರಿದ್ದಾರೆ. ಆದರೆ ಆ ಮಕ್ಕಳು ಅಲ್ಲಿನ ಯಾವ ಆಕರ್ಷಣೆಗೂ ಒಳಗಾಗದೇ ತಮ್ಮದೇ ಜಾತಿಯ ವರ/ವಧುವನ್ನು ವರಿಸಿ ಸಾಂಪ್ರದಾಯಿಕವಾಗಿಯೇ ಬದುಕಬೇಕೆಂದು ಬಯಸುತ್ತಾರೆ. ಇದು ಸರಿ ತಪ್ಪುಗಳ ಪ್ರಶ್ನೆಯಲ್ಲ, ಎಲ್ಲಾ ಜೀವನ ಶೈಲಿಯಲ್ಲಿಯೂ ಸಾಧಕ ಬಾಧಕಗಳಿರುತ್ತವೆ. ಆದರೆ ನಮಗೇನು ಬೇಕು ಎಂದು ಖಚಿತತೆ ಇಲ್ಲದೆ ಎರಡೂ ದೋಣಿಗಳ ಮೇಲೆ ಕಾಲಿಟ್ಟು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಗದ ಗೊಂದಲದ ಪ್ರಶ್ನೆ.
4. ಒತ್ತಾಯದ ಮದುವೆಗಳನ್ನು ಹೇರುವ ಪೋಷಕರು ಮತ್ತು ಅದನ್ನು ವಿರೋಧಿಸಿ ತಮ್ಮ ಆಯ್ಕೆಗಳನ್ನು ಉಳಿಸಿಕೊಳ್ಳ ಬಯಸುವ ಯುವಕರು, ಇವರ ನಡುವೆ ಮಹಾಯುದ್ಧಗಳು ನಡೆಯುತ್ತಲೇ ಇರುತ್ತವೆ. ಇವು ಸಾವಿರಾರು ಭಾರತೀಯ ಸಿನಿಮಾಗಳಿಗೆ, ಧಾರವಾಹಿಗಳಿಗೆ ವಸ್ತುಗಳನ್ನು ಒದಗಿಸುತ್ತಲೇ ಇದೆ! ಕೆಲವು ಮನೆಗಳಲ್ಲಿ ಪೋಷಕರು ಮತ್ತೆ ಕೆಲವೆಡೆ ಮಕ್ಕಳು ಇದರಲ್ಲಿ ಜಯಗಳಿಸುತ್ತಾರೆ. ಆದರೆ ಒಮ್ಮತದ ತೀರ್ಮಾನವಾಗದಿರುವುದರಿಂದ ಮದುವೆಗಳು ಮುರಿದುಬೀಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಅಥವಾ ಮಕ್ಕಳ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ.
5. ಎಲ್ಲಾ ಸಾಂಪ್ರದಾಯಿಕ ವಿಧಿಗಳೊಂದಿಗೆ ಮದುವೆಯಾದ ಮೇಲೂ ಇವತ್ತಿನ ಯವಕರು ಇದೊಂದು ಜನ್ಮಜನ್ಮಾಂತರದ ಸಂಬಂಧ ಎಂದುಕೊಳ್ಳಲು ಸಿದ್ಧರಿಲ್ಲ. ಅವರಿಗೆ ಇದು ಇವತ್ತಿನ ಅಗತ್ಯ ಮಾತ್ರ. ಅಗತ್ಯಗಳು, ಆದ್ಯತೆಗಳು ಬದಲಾದಾಗ ಎಲ್ಲಾ ವ್ಯಾವಹಾರಿಕ ಒಪ್ಪಂದದಂತೆ ಮದುವೆಯನ್ನೂ ಮುಗಿಸಬಹುದಾದ ಸಾಧ್ಯತೆಗಳು ಅವರ ಮನಸಿನಾಳದಲ್ಲಿ ಇರುತ್ತದೆ.
6. ಬದಲಾದ ಅಗತ್ಯಗಳನ್ನು ನಿಭಾಯಿಸಲು ಮಕ್ಕಳಿಗೆ ಯಾರೂ ಶಿಕ್ಷಣ ನೀಡುತ್ತಿಲ್ಲ. ಪೋಷಕರಿಗೆ ಈ ನಿಟ್ಟಿನ ಚಿಂತನೆಗಳೇ ಬರುತ್ತಿಲ್ಲ ಏಕೆಂದರೆ ಅವರಿನ್ನೂ ಬದಲಾವಣೆಯನ್ನೇ ಒಪ್ಪಿಕೊಂಡಿಲ್ಲ ಮತ್ತು ಅವರಿಗೆ ಅಂತಹ ಶಿಕ್ಷಣವನ್ನು ಯಾರೂ ನೀಡಿರಲಿಲ್ಲ! ಹಾಗಾಗಿ ವೈವಾಹಿಕ ಶಿಕ್ಷಣ ಅಥವಾ ಲೈಂಗಿಕ ಶಿಕ್ಷಣ ಎಂದ ಕೂಡಲೇ ಎಗರಾಡುವ ಹೆಚ್ಚಿನ ಪೋಷಕರು, ಮಕ್ಕಳು ತಮ್ಮ ಕಣ್ಣೆದುರೇ ಅಸುಖಿಗಳಾಗುತ್ತಿದ್ದರೂ, ಸರ್ಕಾರ, ಸಮಾಜ, ಹೀಗೆ ತಮ್ಮನ್ನು ಬಿಟ್ಟು ಎಲ್ಲರನ್ನೂ ಹಳಿಯುತ್ತಾ ಮನೆಯನ್ನು, ಮನಸ್ಸುಗಳನ್ನೂ ರಣರಂಗವನ್ನಾಗಿಸಿಕೊಳ್ಳುತ್ತಿದ್ದಾರೆ.
ಮುಂದುವರೆಯುವುದು…
ವಸಂತ್ ನಡಹಳ್ಳಿ.

ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಜೆ.ಎನ್.ಕುಮಾರ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಅನ್ ಎಕಾನಮಿಕ್ ಅನಾಲಿಸಿಸ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಇನ್ಕಮ್ ಜನರೇಷನ್ ಇನ್ ಸೆರಿಕಲ್ಚರ್ ಇನ್ ಕರ್ನಾಟಕ – ಅನ್ ಎಂಪಿರಿಕಲ್ ಸ್ಟಡಿ ಆಫ್ ಚಿಕ್ಕಬಳ್ಳಾಪುರ ಡಿಸ್ಟ್ರಿಕ್ಟ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ.

ಹಲಸಿನ ಫಲ

0

ಶಿಡ್ಲಘಟ್ಟ ತಾಲ್ಲೂಕಿನ ಶಿಲೇಮಾಕನಹಳ್ಳಿಯ ವೆಂಕಟೇಶಪ್ಪ ಅವರ ಮನೆಯ ಮುಂದಿನ ಹಲಸಿನ ಮರದಲ್ಲಿ ಹಲಸಿನ ಹಣ್ಣುಗಳು ಮರದತುಂಬಾ ಜೋಲಾಡುತ್ತಿವೆ.

ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆ

0

ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯನ್ನು ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಿಂದ ರಾಮಲಿಂಗೇಶ್ವರ ಬೆಟ್ಟದ ದೇವಾಲಯದವರೆಗೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ೬ ಗಂಟೆಗೆ ತಲಕಾಯಲಬೆಟ್ಟದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಆರಂಭಿಸಲಾಯಿತು. ಸಾವಿರಾರು ಭಕ್ತರು ನಾರೇಯಣ ಧ್ವಜವನ್ನು ಹಿಡಿದು ಭಜನೆಯನ್ನು ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತಾಲ್ಲೂಕಿನ ವಡ್ಡಹಳ್ಳಿ, ದಿಬ್ಬೂರಹಳ್ಳಿ, ಕುದುಪಕುಂಟೆ, ಯರ್ರಹಳ್ಳಿ, ನಾಚಗಾನಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಅನೆಮಡುಗು ಕ್ರಾಸ್, ಕಾಚನಾಯಕನಹಳ್ಳಿ, ಬಶೆಟ್ಟಿಹಳ್ಳಿ, ವಲಸೇನಹಳ್ಳಿ ಮಾರ್ಗವಾಗಿ ಶ್ರೀ ರಾಮಲಿಂಗೇಶ್ವರ ಬೆಟ್ಟದ ದೇವಾಲಯದಲ್ಲಿ ಪಾದಯಾತ್ರೆಯ ಸಮರ್ಪಣೆ ಮಾಡಲಾಯಿತು.
ಶ್ರೀರಾಮದಂಡು ಪಾದಯಾತ್ರೆಗೆ ಗ್ರಾಮಗಳನ್ನು ಸಿಂಗರಿಸಲಾಗಿತ್ತು. ಗ್ರಾಮಸ್ಥರು ದಾರಿಯುದ್ದಕ್ಕೂ ರಸ್ತೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿದ್ದರು. ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ರಸ್ತೆಗಳನ್ನು ರಂಗೋಲಿಗಳಿಂದ ಅಲಂಕರಿಸಿದ್ದರು. ಪ್ರತಿಹಳ್ಳಿಯಲ್ಲಿಯೂ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾದಯಾತ್ರಿಗಳಿಗೆ ನೀರು, ಹಾಲು, ಮಜ್ಜಿಗೆ, ಪಾನಕಗಳನ್ನು ವಿತರಿಸಿ ಸತ್ಕರಿಸಿದರು. ದಿಬ್ಬೂರಹಳ್ಳಿಯಲ್ಲಿ ಗ್ರಾಮಸ್ಥರು ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿಗಳಾದ ಡಾ. ಎಂ.ಆರ್.ಜಯರಾಮ್ ಅವರು ಮಾತನಾಡಿ, ‘ಭಕ್ತಿಯನ್ನು ಎಲ್ಲ ವರ್ಗಗಳಿಗೂ ಹಂಚಿದ ಶ್ರೀರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ಮತ್ತು ಸಮಾಜದಲ್ಲಿ ಈಗ ನಡೆಯುತ್ತಿರುವ ಕ್ರೌರ್ಯ, ಈರ್ಷ್ಯೆ, ದ್ವೇಷ, ಅಸೂಯೆ ಮುಂತಾದ ದೃಷ್ಕೃತ್ಯಗಳಿಗೆ ಪರಿಹಾರವಾಗಿ ಶಾಂತಿ ಮತ್ತು ನೆಮ್ಮದಿಯನ್ನು ಪ್ರತಿ ಕುಟುಂಬದಲ್ಲೂ, ಗ್ರಾಮದಲ್ಲೂ ನೆಲಸುವಂತೆ ಮಾಡಲು , ಮಳೆ-ಬೆಳೆಗಳು ಸಂತುಷ್ಟವಾಗಿ – ಪ್ರಕೃತಿ ವಿಕೋಪಕ್ಕೊಳಗಾಗದಿರಲು, ಪಶು ಪಕ್ಷಿಗಳು, ಮೂಕಪ್ರಾಣಿಗಳು, ವೃಕ್ಷಗಳು ಮತ್ತು ಸಕಲ ಜೀವರಾಶಿಗಳಿಗೂ ಸುಭಿಕ್ಷೆ ಉಂಟು ಮಾಡುವ ಸಲುವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಈ ಪಾದಯಾತ್ರೆಯ ಭಜನೆ ಸಂಕೀರ್ತನೆಯ ಉಸ್ತುವಾರಿಯನ್ನು ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆ ನಾದಸುಧಾರಸದ ಸಂಚಾಲಕರಾದ ಶ್ರೀ ಬಾಲಕೃಷ್ಣ ಭಾಗವತರ್ ಅವರು ವಹಿಸಿದ್ದು, ನಿರಂತರವಾಗಿ ಭಜನೆಯವರನ್ನು ಎಲ್ಲಿಯೂ ನಿಲ್ಲದೇ ನಡೆಸಿಕೊಂಡು, ಭಕ್ತರಿಗೆ ಉತ್ಸಾಹ ತುಂಬುತ್ತಾ ಮುನ್ನಡೆದರು.
ಸದ್ಗುರು ತಾತಯ್ಯನವರ ಭಾವಚಿತ್ರವನ್ನು ಕಲ್ಲಹಳ್ಳಿ ಲಕ್ಷ್ಮೀನಾರಾಯಣಪ್ಪ, ಶ್ರೀರಾಮನುಜಾಚಾರ್ಯರ ಚಿತ್ರವನ್ನು ಕೇಶವಚಾರ್ ಹಿಡಿದಿದ್ದರು. ಏಕನಾದವನ್ನು ನಾಯಿಂದ್ರಹಳ್ಳಿ ಕಾಲೋನಿ ನಾರಾಯಣಸ್ವಾಮಿ ನುಡಿಸಿದರು. ಪಾದಯಾತ್ರೆಯಲ್ಲಿ ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯರಮರೆಡ್ಡಿಹಳ್ಳಿ ವೆಂಕಟರಮಣಪ್ಪ, ಜಗದೀಶ್ ಕುಮಾರ್, ಕುಂಟಗಡ್ಡ ಲಕ್ಷ್ಮಣ್, ಮುಂತಾದವರು ಭಜನಾ ತಂಡಗಳನ್ನು ಮುನ್ನಡೆಸುವಲ್ಲಿ ಸಹಕರಿಸಿದರು. ಪಾದಯಾತ್ರೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಮೀರಿ ಭಕ್ತರು ಭಾಗವಹಿಸಿದ್ದರು.
ಜಯಕುಮಾರಿಜಯರಾಮ್, ಯೋಗಿನಾರೇಯಣ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಟ್ರಸ್ಟ್ ನ ಸದಸ್ಯರಾದ ಬಾಗೇಪಲ್ಲಿ ಕೆ. ನರಸಿಂಹಪ್ಪ , ಆರ್.ಪಿ.ಎಂ.ಸತ್ಯನಾರಾಯಣ್, ಪೊಲೀಸ್ ಗುಪ್ತಚರ ಇಲಾಖೆಯ ರಮೇಶ್, ಡಾ. ಡಿ.ಟಿ. ಸತ್ಯನಾರಾಯಣರಾವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಳೇ ರಘು, ಹನುಮಂತರಾಯಪ್ಪ, ನಾಮದೇವರು ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ನಟ ಬಾಲಕೃಷ್ಣ ಅವರ ಹುಟ್ಟುಹಬ್ಬ ಆಚರಣೆ

0

ಶಿಡ್ಲಘಟ್ಟದ ನಂದಮೂರಿ ಬಾಲಕೃಷ್ಣ ಅಭಿಮಾನಿಗಳ ಸಂಘದ ವತಿಯಿಂದ ಶುಕ್ರವಾರ ನಟ ಬಾಲಕೃಷ್ಣ ಅವರ 56 ನೇ ಹುಟ್ಟುಹಬ್ಬವನ್ನು ಬಸ್ ನಿಲ್ದಾಣದ ಬಳಿಯ ಸಲ್ಲಾಪುರಮ್ಮ ದೇವಾಲಯದ ಮುಂದೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ, ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ಮಾಡಿದರು. ಶ್ರೀರಾಮಪ್ಪ, ಶ್ರೀನಿವಾಸ್, ಕೃಷ್ಣ, ನಾಗ, ಮುನಿಕೃಷ್ಣ, ನಾರಾಯಣಸ್ವಾಮಿ, ಮೂರ್ತಿ, ಸುನಿಲ್, ಗೋಪಾಲ್, ರಾಮಾಂಜಿ, ಛಲಪತಿ ಹಾಜರಿದ್ದರು.

ಸಲಹಾ ಸಮಿತಿಯ ನಾಮನಿರ್ದೇಶಕರ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯ ಎಂ.ಶ್ರೀಧರ್ ಕೇಂದ್ರ ಸರ್ಕಾರದ ಬಿ.ಎಸ್.ಎನ್.ಎಲ್ನ ಕೋಲಾರ ವಿಭಾಗದ ಸಲಹಾ ಸಮಿತಿಯ ನಾಮನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

101 ಸಸಿಗಳನ್ನು ನಡುವ ಕಾರ್ಯಕ್ರಮ

0

ಪರಿಸರ ಉಳಿದಿದ್ದರೆ ಮಾತ್ರ ಮಾನವ ಇರಲು ಸಾಧ್ಯ. ಹಸಿರೇ ಉಸಿರು. ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಕಾರ್ಯದರ್ಶಿ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆ ಆವರನದಲ್ಲಿ ಶುಕ್ರವಾರ ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ 101 ಸಸಿಗಳನ್ನು ನಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಾಲಿನಲ್ಲಿ ನಮ್ಮ ಸಂಘದ ವತಿಯಿಂದ ಪರಿಸರ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆ, ಪ್ರತಿಭಾ ಅನಾವರಣ ಹಾಗೂ ಶಾಲಾಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು.
ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ದೇವರಾಜ್, ಗೌರವಾಧ್ಯಕ್ಷ ಸುಧಾಕರರೆಡ್ಡಿ, ಶಾಲಾ ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ, ಸಹ ಶಿಕ್ಷಕರಾದ ಶಿವಕುಮಾರಸ್ವಾಮಿ, ರಾಧಾಕೃಷ್ಣ, ಮಹಂತೇಶ್ ಅಳ್ಳೇರ್, ಸಿ.ಕೆ.ಮಂಜುಳಾ, ಕಲ್ಪನಾ, ಸುಮಲತಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’

0

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ‘ಕವಿ ನಮನ’ – ‘ನಮ್ಮ ಊರು, ನಮ್ಮ ಕೇರಿ, ನಮ್ಮ ಓದು’ ಎಂಬ ಕಾರ್ಯಕ್ರಮವನ್ನು ಜೂನ್ 12 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ವಾಸವಿ ಕಲ್ಯಾಣ ಮಂಟಪದ ಬಳಿಯಿರುವ ಗಂಗಮ್ಮನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನಗರದ ಪ್ರತಿಯೊಂದು ವಾರ್ಡ್ನಲ್ಲೂ ಕ.ಸಾ.ಪ ವತಿಯಿಂದ ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದ್ದು, ಕವಿ ಪರಿಚಯ, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಪ್ರತಿಭೆಗಳ ಅನಾವರಣ ಈ ಕಾರ್ಯಕ್ರಮದ ಉದ್ದೇಶ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಕಾಗತಿ ವೆಂಕಟರತ್ನಂ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ 21ನೇ ವಾರ್ಡ್ ನ ನಗರಸಭಾ ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ್ ಹಾಗೂ ಅಧ್ಯಕ್ಷತೆಯನ್ನು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ವಹಿಸಲಿದ್ದಾರೆ.

ಕೇವಲ ಸಹಿ ಮಾಡಲು ಕಲಿತರೆ ಅಕ್ಷರಸ್ಥರಾಗುವುದಿಲ್ಲ

0

ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಪ್ರೇರಕರ ಪಾತ್ರ ಬಹು ಮುಖ್ಯ ಎಂದು ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ತುಕಾರಾಮ್ ತಿಳಿಸಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಾಕ್ಷರ ಭಾರತ್ ಕಾರ್ಯಕ್ರಮದಡಿ ಮುಖ್ಯ ತರಬೇತುದಾರರ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಬ್ಬರು ಪ್ರೇರಕರಲ್ಲಿ ಒಬ್ಬರು ಅಕ್ಷರ ಕಲಿಸಿದರೆ ಮತ್ತೊಬ್ಬರು ಕಲಿಕೆಯ ಅಭಿವೃದ್ಧಿಯತ್ತ ಗಮನವಹಿಸಬೇಕು. ಕೆಲಸವನ್ನು ಹಂಚಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದಲ್ಲಿ ಕಾರ್ಯಕ್ರಮದ ಉದ್ದೇಶ ಸಫಲವಾಗುತ್ತದೆ. ಕೇವಲ ಸಹಿ ಮಾಡಿದರಷ್ಟೆ ಕಲಿತರೆ ಅಕ್ಷರಸ್ಥರಾಗುವುದಿಲ್ಲ. ವ್ಯವಹಾರಕ್ಕೆ ಬೇಕಾಗುವಷ್ಟು ಅಕ್ಷರಜ್ಞಾನ ಸಿಕ್ಕಾಗ ಮಾತ್ರ ಅಕ್ಷರಸ್ಥರಾಗುತ್ತಾರೆ. ಸ್ವತಂತ್ರವಾಗಿ ಪತ್ರಿಕೆ, ಪುಸ್ತಕಗಳನ್ನು ಓದುವಂತೆ ಪ್ರೇರಕರು ತಯಾರು ಮಾಡಬೇಕು ಎಂದು ಹೇಳಿದರು.
ಪ್ರೊ.ಕೋಡಿರಂಗಪ್ಪ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮುಖ್ಯತರಬೇತುದಾರರಿಗೆ ಮತ್ತು ಪ್ರೇರಕರಿಗೆ ಸಾಕ್ಷರತೆಯಲ್ಲಿನ ಅವರ ಪಾತ್ರದ ಕುರಿತಂತೆ ಸವಿವರವಾಗಿ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ದಾವೂದ್ಪಾಷ, ಶಿವಪ್ಪ, ಕ್ಯಾತಪ್ಪ, ಶೈಲಜ, ತಾಲ್ಲೂಕು ಸಾಕ್ಷರತಾ ಸಂಯೋಜಕ ಟಿ.ವಿ.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ದಾಖಲೆ ಸೃಷ್ಟಿಸಿದ ರೇಷ್ಮೆ ಗೂಡಿನ ಸರಾಸರಿ ಬೆಲೆ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ಸರಾಸರಿ ರೇಷ್ಮೆ ಗೂಡಿನ ಬೆಲೆಯು 410 ರೂಗಳಾಗುವುದರೊಂದಿಗೆ ದಾಖಲೆಯನ್ನು ಸೃಷ್ಟಿಸಿದೆ. ಇದುವರೆಗೂ ರೇಷ್ಮೆ ಗೂಡಿನ ಸರಾಸರಿ ಬೆಲೆ ಈ ಮಟ್ಟವನ್ನು ಮುಟ್ಟಿಯೇ ಇಲ್ಲವೆಂದು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ತಿಳಿಸಿದ್ದಾರೆ.
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯು ರಾಜ್ಯದಲ್ಲಿಯೇ ಅತಿ ದೊಡ್ಡದಿದ್ದು, ಹೆಚ್ಚಿನ ಬೆಲೆ ಸಿಗುವ ಕಾರಣ ದೂರದ ಆಂಧ್ರ ಹಾಗೂ ರಾಜ್ಯದ ಗಡಿ ಭಾಗಗಳಿಂದಲೂ ಇಲ್ಲಿ ಮಾರಲು ತಾವು ಬೆಳೆದ ರೇಷ್ಮೆ ಗೂಡುಗಳನ್ನು ರೈತರು ತರುತ್ತಾರೆ. ಆದರೆ ಈಚೆಗೆ ಮಾರುಕಟ್ಟೆಗೆ ಆಗಮಿಸುತ್ತಿರುವ ಗೂಡಿನ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗೂಡಿನ ಬೆಲೆಯು ಏರುತ್ತಾ ಸಾಗಿದೆ.
ಬುಧವಾರ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಗರಿಷ್ಠ ಧಾರಣೆ 430, ಕನಿಷ್ಠ ಧಾರಣೆ 300 ಹಾಗೂ ಸರಾಸರಿ 410 ದಾಖಲಾಗಿದೆ. ಸಾಮಾನ್ಯವಾಗಿ 800 ರಿಂದ 1000 ಲಾಟ್ ಗೂಡು ಮಾರುಕಟ್ಟೆಗೆ ಸರಾಸರಿಯಾಗಿ ಬರುತ್ತದೆ. ಆದರೆ ಉಷ್ಣಾಂಶ ಏರಿಕೆ ಹಾಗೂ ನೀರಿನ ಅಭಾವದಿಂದಾಗಿ ಎಲ್ಲೆಡೆ ರೇಷ್ಮೆ ಬೆಳೆ ಸರಿಯಾಗಿ ಆಗಿಲ್ಲವಾದ್ದರಿಂದ ಮಾರುಕಟ್ಟೆಗೆ ಆಗಮಿಸುವ ಗೂಡಿನ ಪ್ರಮಾಣ 500 ಲಾಟ್ಗಳಿಗೆ ಇಳಿದಿದೆ. ಹಾಗಾಗಿ ಬೆಲೆ ಏರಿಕೆಯಾಗಿದೆ. ಈಗ ಮಳೆಯಾಗುತ್ತಿರುವುದರಿಂದ ಇನ್ನು ಹದಿನೈದು ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೂಡು ಆಗಮಿಸುತ್ತದೆ. ಸರಾಸರಿ ಧಾರಣೆ ಕಡಿಮೆಯಾಗುತ್ತದೆ. ರೇಷ್ಮೆ ಬಿಚ್ಚಾಣಿಕೆದಾರರು ಕೆಲಸಗಾರರು ಬಿಟ್ಟು ಹೋದರೆ ಎಂಬ ಭಯದಿಂದ ಹಾಗೂ ತಮ್ಮ ಅಸಲು ಸಿಕ್ಕರೆ ಸಾಕು ಎಂಬ ಉದ್ದೇಶದಿಂದ ಲಾಭ ಬರದಿದ್ದರೂ ಹೆಚ್ಚಿನ ಬೆಲೆಗೆ ಗೂಡು ಕೊಳ್ಳುತ್ತಿದ್ದಾರೆ. ಇದು ತಾತ್ಕಾಲಿಕ ಸ್ಥಿತಿಯಷ್ಟೆ ಎಂದು ಅವರು ಹೇಳಿದರು.

ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘಗಳ ನೂತನ ಒಕ್ಕೂಟ

0

ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಣ ಉಳಿತಾಯ ಮಾಡಿ ಸಂಸಾರವನ್ನು ಪ್ರಗತಿಪಥದತ್ತ ಕೊಂಡೊಯ್ಯಿರಿ ಎಂದು ಹಂಡಿಗನಾಳ ಗ್ರಾಮ ಪಂಚಾಯತಿ ಸದಸ್ಯ ಜಯರಾಮ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಪಟಾಲಮ್ಮ ದೇವಸ್ಥಾನದ ಬಳಿ ಸಮುದಾಯ ಭವನದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘಗಳ ನೂತನ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ದುಂದು ವೆಚ್ಚಗಾರರಲ್ಲ. ಕೂಡಿಟ್ಟ ಹಣದಲ್ಲಿ ಸಂಸಾರ ನಡೆಸುವುದರ ಜತೆ ಮಕ್ಕಳಿಗೆ ಶಿಕ್ಷಣ ನೀಡಿರಿ. ಮನೆಯಲ್ಲೊಂದು ಕಡ್ಡಾಯವಾಗಿ ಶೌಚಾಲಯವಿರಲಿ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಮಹಿಳೆಯರು ಮನಗಾಣ ಬೇಕು. ಬ್ಯಾಂಕುಗಳು ನಿಡಿದಂತಹ ಸಾಲದ ಹಣವನ್ನು ಉತ್ತಮ ಕೆಲಸಗಳಿಗೆ ಉಪಯೋಗಿಸಿರಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಮಹಿಳೆಯರು ಕೇವಲ ಹಣ ಕೂಡಿಡುವುದನ್ನೇ ಧ್ಯೇಯವನ್ನಾಗಿ ಮಾಡಿಕೊಳ್ಳದೇ ಸಾಮಾಜಿಕ ನಾಯಕತ್ವ ಗುಣ ಬೆಳೆಸಿಕೊಳ್ಳಿರಿ. ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಬೆಳೆಸುವ ಮೂಲಕ ಮುಂದಿನ ಜನಾಂಗಕ್ಕೆ ಹಸಿರನ್ನು ಉಡುಗೊರೆಯಾಗಿ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತಪುರ ಹಾಲು ಉತ್ಪಾದಕರ ಸಂಘಕ್ಕೆ 50 ಸಾವಿರ ರೂಗಳ ಪ್ರೋತ್ಸಾಹ ಧನವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನೀಡಲಾಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗೇಶ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ದ್ಯಾವಪ್ಪ, ನಾಗರಾಜು, ಮುಖ್ಯಶಿಕ್ಷಕ ನಾಗಭೂಷಣ್, ಆಶಾರಾಣಿ, ನರಸಿಂಹಮೂರ್ತಿ, ನಿಖಿಲ್ಕುಮಾರ್, ಶಾಂತಾಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿದ್ಯುತ್ ತಂತಿಯನ್ನು ಜಮೀನಿನಲ್ಲಿ ಎಳೆಯಲು ರೈತರ ವಿರೋಧ

0

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಯಣ್ಣಂಗೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರೀಡ್ ಕಾರ್ಪೊರೇಷನ್ ವತಿಯಿಂದ ಅಳವಡಿಸುತ್ತಿರುವ ಪವರ್ ಲೈನ್ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರ ಜಮೀನಿನಲ್ಲಿ ದೊಡ್ಡ ಗಾತ್ರದ ಕಂಬಗಳನ್ನು ನಿರ್ಮಿಸಿ ವಿದ್ಯುತ್ ತಂತಿಯನ್ನು ಎಳೆಯಲು ಮುಂದಾದಾಗ ರೈತರು ಅಡ್ಡಿಪಡಿಸಿದ ಘಟನೆ ಬುಧವಾರ ನಡೆದಿದೆ.
ಈ ಭಾಗದಲ್ಲಿ ನೀರಿನ ಸಮಸ್ಯೆಯು ಹೆಚ್ಚಾಗಿದ್ದು ಕಷ್ಟ ಪಟ್ಟು ಬೋರ್ ವೆಲ್ಗಳನ್ನು ಕೊರೆಸಿ ಬೆಳೆಗಳನ್ನು ಬೆಳೆಯುತ್ತಿದ್ದರೆ, ರೈತರಿಗೆ ಯಾವುದೇ ಮಾಹಿತಿ ನೀಡದೇ ಮತ್ತು ನೋಟಿಸ್ ನೀಡದೆ ಏಕಾಏಕಿ ಯಂತ್ರಗಳನ್ನು ತಂದು ತಮ್ಮ ಜಮೀನಿನಲ್ಲಿ ಬೆಳೆಗಳು ಇದ್ದರೂ ಸಹ ವಿದ್ಯುತ್ ತಂತಿಯನ್ನು ಎಳೆಯುತ್ತಿರುವುದು ಸರಿಯಲ್ಲ. ಇದರಿಂದ ತಾವು ಬೆಳೆದ ಬೆಳೆಗಳು ಹಾಳಾಗುತ್ತಿದ್ದು ಈ ಬೆಳೆಗಳನ್ನೇ ನಂಬಿ ಬದುಕು ನಡೆಸುತ್ತಿರುವ ನಾವು ಜೀವನ ನಡೆಸುವುದಾದರು ಹೇಗೆ ಎಂದು ರೈತರು ತಮ್ಮ ಅಳನ್ನು ತೋಡಿಕೊಂಡರು.

ರೈತರು ತಮ್ಮ ಜಮೀನಿನಲ್ಲಿಯೇ ಕೀಟ ನಾಶಕ ಔಷದಿಗಳನ್ನು ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಔಷದಿ ಬಾಟಲುಗಳನ್ನು ಹಿಡಿದು ಪ್ರತಿಭಟಿಸಿದರು.
ರೈತರು ತಮ್ಮ ಜಮೀನಿನಲ್ಲಿಯೇ ಕೀಟ ನಾಶಕ ಔಷದಿಗಳನ್ನು ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಔಷದಿ ಬಾಟಲುಗಳನ್ನು ಹಿಡಿದು ಪ್ರತಿಭಟಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮನೋರಮ ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ತಹಶಿಲ್ದಾರ್ ಮಾತನಾಡಿ, ಪವರ್ ಲೈನ್ ನಿರ್ಮಾಣದಿಂದ ರೈತರ ಬೆಳೆಗಳಿಗೆ ಹಾನಿಯಾದರೆ ಬೆಳೆ ಪರಿಹಾರ ಕೊಡುತ್ತೇವೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪವರ್ ಲೈನ್ ಅಳವಡಿಸುತ್ತಿರುವುದಾಗಿ ತಿಳಿಸಿದರೂ ಸಹ ಸುಮ್ಮನಾಗದ ರೈತರು ತಮ್ಮ ಜಮೀನಿನಲ್ಲಿಯೇ ಕೀಟ ನಾಶಕ ಔಷದಿಗಳನ್ನು ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಔಷದಿ ಬಾಟಲುಗಳನ್ನು ಹಿಡಿದು ಪ್ರತಿಭಟಿಸಿದರು.
ಸ್ಥಳಕ್ಕೆ ಬಾರಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ನಂತರ ತಹಶಿಲ್ದಾರ್ ಮತ್ತು ಪೋಲಿಸ್ರ ಸಮ್ಮುಖದಲ್ಲಿ ಪವರ್ ಲೈನ್ ಅಳವಡಿಸಲು ವಿದ್ಯುತ್ ತಂತಿಗಳನ್ನು ಪವರ್ ಗ್ರೀಡ್ ಸಿಬ್ಬಂದಿ ಎಳೆದರು.
ದೇಶದ ಬೆನ್ನೆಲುಬು ರೈತನಾಗಿದ್ದು ಅಂತಹ ರೈತನಿಗೆ ಅನ್ಯಾಯವಾಗುತ್ತಿದೆ. ಸರ್ಕಾರಗಳು ರೈತರ ಪರವಾಗಿ ಇದ್ದೇವೆ ಎಂದು ಹೇಳಿಕೊಂಡು ರೈತರನ್ನು ಕೇವಲ ಮತಕ್ಕಾಗಿ ಬಳಸುಕೊಳ್ಳುತ್ತಿದ್ದಾರೆ ಎಂದು ರೈತರಾದ ಚಿಕ್ಕಣ್ಣ, ಮುನಿನಾರಾಯಣ ಆಕ್ರೋಷ ವ್ಯಕ್ತಪಡಿಸಿದರು.

`ಖಾತ್ರಿ' ಅವ್ಯವಹಾರಕ್ಕೆ ರೈತ `ಕತ್ತರಿ' ಹಾಕಬಹುದೇ?

0

ದೇಶದ ಬಡತನವನ್ನು ತೊಡೆಯುವ ಮಹತ್ವಾಕಾಂಕ್ಷೆಯ ಯೋಜನೆಯೇ ಕೇಂದ್ರಸರ್ಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಉತ್ತರ ಕರ್ನಾಟಕದಂತಹ ತೀರಾ ಹಿಂದುಳಿದ ಪ್ರದೇಶದ ಜನತೆ ಉದ್ಯೋಗಕ್ಕಾಗಿ ವಲಸೆ ಹೋಗಿ ಸಂಕಷ್ಟಕ್ಕೊಳಗಾಗುವುದನ್ನು ತಡೆಯುವುದು ಕೇಂದ್ರಸರ್ಕಾರದ ಅಭಿಲಾಷೆಯಾಗಿತ್ತು. ಕೊನೆಪಕ್ಷ ಅದು ಹಾಗೆಂದುಕೊಂಡಿತ್ತು. ಇವತ್ತು, ಉದ್ಯೋಗ ಖಾತ್ರಿ ಯೋಜನೆಯಿಂದ ಇನ್ನಷ್ಟು ರೈತರು ಆತ್ಮಹತ್ಯೆಯ ಕಡೆಗೆ ನಡೆಯುವಂತಾದರೆ ಅಚ್ಚರಿಯಿಲ್ಲ.
ಖಾತ್ರಿ ಯೋಜನೆ ಕೃಷಿ ಕಾರ್ಮಿಕರ ಸಮಸ್ಯೆಯಲ್ಲಿರುವ ರೈತ ಹಿಡುವಳಿದಾರರನ್ನು ಬಾಣಲೆಯಿಂದ ಬೆಂಕಿಗೆ ದಬ್ಬಿದೆ. ಗ್ರಾಮ ಪಂಚಾಯತ್‍ಗಳ ಕಪಿಮುಷ್ಟಿಯಲ್ಲಿರುವ ಈ ಯೋಜನೆಯ ನಿರ್ಧಾರಕ ಶಕ್ತಿ ಅಪಾಯದ ಕಂದಕವನ್ನೇ ತೆರೆದಿದೆ. ಮೊದಲ ವರ್ಷ ಯೋಜನೆಯ ನಿಯಮಗಳು ಕಠಿಣವಾಗಿದ್ದುದರಿಂದ ಯಾವುದೇ ಅವ್ಯವಹಾರ ನಡೆಯಲಿಲ್ಲ. ಹಾಗೆಂದುಕೊಂಡೆವು ನಾವು. ಕಳೆದ ವರ್ಷದಿಂದ ಅದೂ ಸುಳ್ಳಾಗಿದೆ. ಅಧಿಕಾರಿ ವರ್ಗಕ್ಕೆ ಈ ಯೋಜನೆಯಲ್ಲಿ ಹಣ ಕೊಳ್ಳೆಹೊಡೆಯುವ ನೂರು ದಾರಿಗಳು ಪತ್ತೆಯಾದವು. ಕೃಷಿ ಕಾರ್ಮಿಕರಿಗೆ ವಂಚಿಸುತ್ತಿರುವ ಪ್ರಕರಣಗಳ ಜೊತೆಜೊತೆಗೆ ಕೃಷಿ ಚಟುವಟಿಕೆಗಳನ್ನಷ್ಟೂ ನಮ್ಮ ದೇಶದ ರೈತ ನಿಲ್ಲಿಸುವ ಪರಿಸ್ಥಿತಿ ಬಂದರೆ ಅದು ಅತಿಶಯೋಕ್ತಿಯ ಸಂಗತಿಯಲ್ಲ.
ಬದುಕು ಸಾಗಲೇಬೇಕು. ಇದ್ದಕ್ಕಿದ್ದಂತೆ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನೇ ನಿಲ್ಲಿಸಿಬಿಡುತ್ತದೆ ಎಂದುಕೊಳ್ಳುವಂತಿಲ್ಲ. ಇಲ್ಲಿ ರೈತರು ಸವಾಲನ್ನು ಸ್ವೀಕರಿಸಲೇಬೇಕು. ಬಿಡಿ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲವುದು ನಮಗೆ ಹೊಸ ವಿಷಯವೇನಲ್ಲ. ಮೊತ್ತಮೊದಲಾಗಿ, ಖಾತ್ರಿ ಯೋಜನೆಯಡಿ ನಡೆಯುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವುದರಿಂದ ನೇರ ಲಾಭ ಹಳ್ಳಿಗರಿಗೇ ಗಿಟ್ಟುತ್ತದೆ. ಉದಾ.ಗೆ ಹಸುರೀಕರಣ ಯೋಜನೆ ಅಥವಾ ಕೆರೆ ಹೂಳು ತೆಗೆಯುವ ಕಾಮಗಾರಿ ಸಮರ್ಪಕವಾದರೆ ಕೃಷಿ ಬದುಕಿಗೆ ಪೂರಕ ಅನುಕೂಲ ಸಿಗುತ್ತದಲ್ಲವೇ?
ಖಾತ್ರಿ ಭ್ರಷ್ಟಾಚಾರ ತಡೆಗೆ ಇರುವ ಪರಿಣಾಮಕಾರಿ ಮಾರ್ಗವೆಂದರೆ ಅಂತರ್ಜಾಲದಲ್ಲಿ ನೇರವಾಗಿ ಉದ್ಯೋಗ ಖಾತ್ರಿ ವೆಬ್‍ಸೈಟ್‍ನ ಮೂಲಕ ದೂರು ದಾಖಲಿಸುವುದು. ಗ್ರಾಮ ಪಂಚಾಯ್ತಿ ಅಥವಾ ತಾಲ್ಲೂಕು ಪಂಚಾಯ್ತಿ ಹಂತದಲ್ಲಿ ದೂರು ದಾಖಲಿಸಲು ಹೊರಟಾಗ ವೈಯುಕ್ತಿಕ ಮುಜುಗರಗಳು ಬೇರೆ. ಜೊತೆಗೆ ದೂರು ಅರ್ಜಿ ಯಾರಿಗೆ ಕೊಡಬೇಕು ಎಂದು ಎಡತಾಕುವುದರಲ್ಲೇ ಸುಸ್ತಾಗುವ ನಾವು ಕೊನೆಗೆ ನಮ್ಮ ದೂರಿನ ಗತಿಯೂ ತಿಳಿಯದೆ ಸುಮ್ಮನಾಗಬೇಕಾಗುತ್ತದೆ. ಆದರೆ ಆನ್‍ಲೈನ್‍ನಲ್ಲಿ ದೂರಿನ ಪ್ರಗತಿಯನ್ನು ಕೂಡ ಇಂಟರ್‍ನೆಟ್‍ನಲ್ಲಿ ಪರಿಶೀಲಿಸುತ್ತಿರಬಹುದು.
http://nrega.nic.in ಎಂಬ ಅಂಕಿತವಿರುವ ವೆಬ್‍ಸೈಟ್‍ನೊಳಗೆ ಪ್ರವೇಶಿಸಬೇಕು. ಅಲ್ಲಿ http://164.100.12.7/statepage.asp?check=pgr&lvl=citizen ಎಂಬ ಶೀರ್ಷಿಕೆಗೆ ಕ್ಲಿಕ್ ಮಾಡಿದರೆ ದೇಶದ ಎಲ್ಲ ರಾಜ್ಯಗಳ ಪಟ್ಟಿ ಪ್ರಕಟಗೊಳ್ಳುತ್ತದೆ. ಇಲ್ಲಿ ಕರ್ನಾಟಕ ಎಂಬಲ್ಲಿಗೆ ಪ್ರವೇಶಿಸಿದರೆ ದೂರು ದಾಖಲೆಗೆ ನಿಗದಿತ ಅರ್ಜಿ ನಮೂನೆ ಕಂಡುಬರುತ್ತದೆ. ತುಂಬಾ ಸರಳವಾಗಿರುವ ದೂರು ಪತ್ರವನ್ನು ಪರಿಪೂರ್ಣವಾಗಿ ತುಂಬಬೇಕು. ನಕ್ಷತ್ರದ ಗುರುತಿರುವ ಕಾಲಂಗೆ ಉತ್ತರಿಸುವುದು ಕಡ್ಡಾಯ. ದೂರುದಾರರ ವಿವರ, ದೂರಿನ ಮಾದರಿ, ದೂರುವ ಗ್ರಾಮ ಪಂಚಾಯ್ತಿ, ಅವ್ಯವಹಾರದ ವಿವರ ಮೊದಲಾದ ವಿವರಗಳನ್ನು ಕೊಟ್ಟು save compaint ಕೊಟ್ಟರೆ ದೂರು ದಾಖಲಾಗಿ ನಮಗೊಂದು ದೂರು ದಾಖಲಾತಿ ಸಂಖ್ಯೆ ಲಭ್ಯವಾಗುತ್ತದೆ. ದೂರು ದಾಖಲಿಸಿದ ಒಂದು ವಾರದ ಬಳಿಕ ಇದೇ ವೆಬ್‍ಸೈಟ್‍ನ http://164.100.12.7/netnrega/citizen_html/compdetail.aspx?state_code=15 ಗುರುತಿನ ಮೇಲೆ ಕ್ಲಿಕ್ ಮಾಡಿ ದೂರು ಸಂಖ್ಯೆಯನ್ನು ಹಾಕಿ ಮುಂದುವರೆದರೆ ಅಹವಾಲಿನ ಸ್ಥಿತಿಗತಿಯ ಇತ್ತೀಚಿನ ಮಾಹಿತಿ ಸಿಗುತ್ತದೆ. ದೂರು ನೇರವಾಗಿ ಯೋಜನೆಯ ಪ್ರಮುಖರನ್ನೇ ತಲುಪುವುದರಿಂದ ಪರಿಣಾಮಕಾರಿ ತನಿಖೆಯನ್ನು ನಿರೀಕ್ಷಿಸಲು ಸಾಧ್ಯ. ಇ-ದೂರಿನ ಕಾರಣವೇ ಅವ್ಯವಹಾರ ನಡೆಸಿದ ಅಧಿಕಾರಿಗಳು ಕರ್ನಾಟಕದಲ್ಲೂ ಅಮಾನತ್ತುಗೊಂಡ ವಿವರಗಳನ್ನು ನಾವಿಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಗ್ರಾಮ ಪಂಚಾಯ್ತಿಗೆ ಹೋಗಿ ಕಷ್ಟಪಟ್ಟು ತಿಳಿಯಬಹುದಾದ ಮಾಹಿತಿಗಳೆಲ್ಲ ಇಲ್ಲಿ ಸುಲಭ ಲಭ್ಯ. ನಮ್ಮ ಜಾಬ್ ಕಾರ್ಡ್ ನೊಂದಾಯಿತವಾಗಿದೆಯೇ, ನಾವು ಕೊಟ್ಟ ಕ್ರಿಯಾಯೋಜನೆ ಮಂಜೂರಾಗಿದೆಯೇ, ಕಾಮಗಾರಿಗೆ ಬರಬೇಕಾದ ಹಣವನ್ನು ದಾಖಲೆಯಲ್ಲಿ ಏನು ಮಾಡಲಾಗಿದೆ ಎಂಬ ಮೂಡಬಹುದಾದ ಎಲ್ಲ ಪ್ರಶ್ನೆಗಳಿಗೆ ಮಾಹಿತಿಯನ್ನು ಇಲ್ಲಿ ಅಳವಡಿಸಲಾಗಿದೆ.
ತೀರಾ ಸರಳವಾದ ಇಂಗ್ಲೀಷ್ ಬರುವವರಿಗೂ ದೂರು ದಾಖಲಿಸುವುದು ಕಷ್ಟವಲ್ಲ. ಮಾಹಿತಿ ಪಡೆಯಲಂತೂ ನಾವು `ಕನ್ನಡ’ವನ್ನೆ ಆಯ್ಕೆ ಮಾಡಿಕೊಳ್ಳಬಹುದು. ವಿವರಗಳು ಆಗ ಬೇಕಾದ ಪ್ರಾದೇಶಿಕ ಭಾಷೆಯಲ್ಲಿ ಕಂಡುಬರುತ್ತದೆ. ಪ್ರತಿದಿನ ವೆಬ್‍ಸೈಟ್ ನವೀಕರಣಗೊಳ್ಳುತ್ತಲೇ ಇರುವುದರಿಂದ ಮಾಹಿತಿ ತಾಜಾ ಆಗಿಯೂ ಇರುತ್ತದೆ.
ಪ್ರಶ್ನೆ ಅದಲ್ಲ. ರೈತನನ್ನು ವೆಬ್‍ಸೈಟ್ ಪರಿಹಾರಕ್ಕೆ ಸೂಚಿಸಿದರೆ ಅದು ಕಾರ್ಯಸಾಧುವೇ? ಇದಕ್ಕೆ ಖಂಡಿತ ಎಂಬ ಉತ್ತರವನ್ನೆ ಕೊಡಬೇಕಾಗುತ್ತದೆ. ಖುದ್ದು ರೈತನಿಗೆ ಆ ಜ್ಞಾನ ಇಲ್ಲವೆಂದಾದಲ್ಲಿ ಸಹ ಗೊಂದಲ ಬೇಕಾಗಿಲ್ಲ. ಈ ದಿನಗಳಲ್ಲಿ ಆತನ ಮಕ್ಕಳು, ಮೊಮ್ಮಕ್ಕಳು ಅಕ್ಷರಸ್ಥರಾಗಿರುವುದು ಅಥವಾ ಉದ್ಯೋಗಸ್ಥರಾಗಿರುವುದು ಖಚಿತ. ಅವರನ್ನು ಈ ಕೆಲಸಕ್ಕೆ ನಿರ್ದೇಶಿಸಬಹುದು. ಕೊನೆಪಕ್ಷ ಸೈಬರ್ ಕೆಫೆಯ ನಿರ್ವಾಹಕನ ಬೆಂಬಲದಿಂದ ಕೂಡ ರೈತ ದೂರು ದಾಖಲೆ, ಮಾಹಿತಿ ಪಡೆಯುವ ಕೆಲಸ ಮಾಡಬಹುದು. ಕಾಲದ ಓಟದಲ್ಲಿ ಅದರೊಂದಿಗೆ ನಾವೂ ಹೆಜ್ಜೆ ಹಾಕಲೇಬೇಕಲ್ಲವೇ?
ವಾಸ್ತವವಾಗಿ, ರೈತ ಸಂಘಟನೆಗಳು ಈ ನಿಟ್ಟಿನಲ್ಲಿಯೇ ಸಂಪೂರ್ಣವಾಗಿ ವಿಫಲವಾಗಿವೆ. ಇನ್ನೂ ಕರ ನಿರಾಕರಣೆ, ಪಂಪ್ ಮೀಟರ್ ಕಿತ್ತು ಎಸೆಯುವ ಚಳುವಳಿಯನ್ನೇ ಮಾಡುತ್ತ ಕುಳಿತರೆ ಅಥವಾ ಅದೊಂದನ್ನೇ ನೆಚ್ಚಿಕೊಂಡರೆ ರೈತಪರ ಇದ್ದಂತಾಗುವುದಿಲ್ಲ. ಖಾತ್ರಿ ಭ್ರಷ್ಟಾಚಾರ ತಡೆಗೆ ಓರ್ವ ಕಂಪ್ಯೂಟರ್ ಅಕ್ಷರಸ್ಥನನ್ನು ಆಯ್ಕೆ ಮಾಡಿಕೊಂಡು ರೈತಸಂಘಟನೆಗಳು ಈ ನಿಟ್ಟಿನಲ್ಲಿ ಹೋರಾಟ ಮಾಡಬಹುದಿತ್ತು.
ಸರ್ಕಾರ ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪ್ರಾಮಾಣಿಕ ಜಾರಿಗೆ ಈ ಸಂಘಟನೆಗಳು ಕಟಿಬದ್ಧರಾಗಬಹುದಿತ್ತು. ಸುಜಲಾ, ಜಲಸಂವರ್ಧನ ಮೊದಲಾದ ಯೋಜನೆಗಳಲ್ಲಿ ಇಲಾಖೆಯವರು ಮೇಯುವುದನ್ನು ತಪ್ಪಿಸಿದ್ದರೂ ಸಾಕಿತ್ತು, ಗ್ರಾಮ ಅಭಿವೃದ್ಧಿ ಸಾಧ್ಯವಿತ್ತು. ರೈತರಿಗೆ ಬರಬೇಕಾದ ಸಹಾಯಧನ, ಬೆಂಬಲ ಬೆಲೆ ಪೂರ್ಣವಾಗಿ ಸಿಕ್ಕುವಂತೆ ಮಾಡಿದ್ದರೆ ಭೇಷಿತ್ತು. ಯಶಸ್ವಿ ಕಾರ್ಯಾಚರಣೆ ಮಾಡಬಹುದಾದ ಇಂತಹ ಹತ್ತಾರು ದೃಷ್ಟಾಂತಗಳನ್ನು ಕೊಡಬಹುದು.
ಅವೂ ಕೈ ಚೆಲ್ಲಿವೆ, ಭ್ರಷ್ಟಗೊಂಡಿವೆ ಎಂಬ ಹಿನ್ನೆಲೆಯಲ್ಲಿ ಇ-ದೂರು ದಾಖಲಿಸುವ ಕ್ರಮ ರೈತನಿಗೊಂದು ಸುವರ್ಣಾವಕಾಶ. ಆ ಪ್ರಯತ್ನ ಉದ್ಯೋಗ ಖಾತ್ರಿ ಕುರಿತ ಅಂತರ್ಜಾಲ ದೂರಿನ ಕ್ಷೇತ್ರದಿಂದಲೇ ಆರಂಭಿಸಿ.
– ಮಾ.ವೆಂ.ಸ.ಪ್ರಸಾದ್

ಜಂಗಮಕೋಟೆ- ಶಿಡ್ಲಘಟ್ಟ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ

0

ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುಮಾರು ೪.೫ ಕೋಟಿ ರೂ ವೆಚ್ಚದ ಜಂಗಮಕೋಟೆ- ಶಿಡ್ಲಘಟ್ಟ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಕೂಡದು. ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಒಳಿತಿಗೆ ಸಹಕರಿಸಬೇಕು ಎಂದರು.
ತಾವು ಶಾಸಕರಾಗಿ ಮೂರು ವರ್ಷ ಕಳೆದಿದ್ದು ಕ್ಷೇತ್ರದ ಶೇ. ೬೫ ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸೇರಿದಂತೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಇನ್ನುಳಿದ ೩೫ ರಷ್ಟು ಭಾಗದ ಕೆಲಸಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮಾಡಲಾಗುವುದು ಎಂದರು.
ಈಗಾಗಲೇ ಬಸ್ ಡಿಪೋ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಇನ್ನು ಅಗ್ನಿಶಾಮಕ ದಳದ ಕಚೇರಿಗೆ ಮುಂದಿನ ಹತ್ತು ದಿನಗಳೊಳಗೆ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ಜಂಗಮಕೋಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಜೀರ್ಸಾಬ್, ತಾಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಸದಸ್ಯರಾದ ರಾಜಶೇಖರ್, ಚಂದ್ರಕಲಾ ಬೈರೇಗೌಡ, ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಂಜಿನಪ್ಪ, ಮುಖಂಡರಾದ ಎಚ್ಕ್ರಾಸ್ ರವಿ, ನಂಜೇಗೌಡ, ಜಂಗಮಕೋಟೆ ಮಂಜುನಾಥ್ ಮತ್ತಿತರರು ಹಾಜರಿದ್ದರು.

ಒಡವೆಯನ್ನು ಮಾಹಿತಿ ಇಲ್ಲದೆ ಹರಾಜು ಮಾಡಿದ ಖಾಸಗಿ ಬ್ಯಾಂಕ್

0

ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬ್ಯಾಂಕುಗಳ ಮೇಲೆ ವಿಶ್ವಾಸವಿಟ್ಟು ಗಿರವಿ ಇಟ್ಟ ಒಡವೆಯನ್ನು ಗ್ರಾಹಕರಿಗೆ ಯಾವುದೇ ಮಾಹಿತಿ ಇಲ್ಲದೆ ಹರಾಜು ಮಾಡಿದ ಖಾಸಗಿ ಬ್ಯಾಂಕಿನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ದೊಣ್ಣಹಳ್ಳಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿ ಐ.ಐ.ಎಫ್.ಎಲ್ ಬ್ಯಾಂಕಿನಲ್ಲಿ ತನ್ನ ಬಳಿ ಇದ್ದ ೧೧.7 ಗ್ರಾಂ ಬಂಗಾರವನ್ನು 2015ರ ಅಕ್ಟೋಬರ್ 26 ರಂದು ಗಿರವಿ ಇಟ್ಟು ಹಣವನ್ನು ಪಡೆದಿದ್ದರು. ಗಿರವಿ ಇಟ್ಟ ಒಡವೆಯನ್ನು ಹಿಂಪಡೆಯಲು ಹಣವನ್ನು ಹೊಂದಿಸಿಕೊಂಡು ಬ್ಯಾಂಕಿನ ಬಳಿ ಹೋದಾಗ ಬ್ಯಾಂಕಿನ ಸಿಬ್ಬಂದಿ ಒಂದೂವರೆ ತಿಂಗಳಿಂದ ಅಲೆದಾಡಿಸಿ ನಂತರ ನಿಮ್ಮ ಒಡವೆಯನ್ನು ಹರಾಜು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.
ಒಡವೆಗಳ ಹರಾಜಿಗೆ ನಿಗದಿತ ಸಮಯವು ಇದ್ದರೂ ನೀವು ನಿಮ್ಮ ಬ್ಯಾಂಕಿನಿಂದ ಯಾವುದೇ ರೀತಿಯ ನೋಟಿಸ್ ನೀಡದೆ ಮತ್ತು ನನಗೆ ಮಾಹಿತಿ ನೀಡದೇ ಒಡವೆಯನ್ನು ಹಾರಾಜು ಹಾಕಿದ್ದೀರಿ ಎಂದು ಪ್ರಶ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರೈತ ಸಂಘಟನೆಯವರು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ ಸಿಬ್ಬಂದಿಯವರಿಂದ ಸರ್ಮಪಕ ಉತ್ತರ ಸಿಗಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ನಾರಾಯಣಸ್ವಾಮಿ, ಆನಂದ ,ರಮೇಶ್, ಮಾರಪ್ಪ, ಲಕ್ಷೀಪತಿ ಮತ್ತಿತರರು ಹಾಜರಿದ್ದರು.

ಶನೈಶ್ಚರ ಜಯಂತಿ

0

ನಗರದ ಗಾಯತ್ರಿನಗರದ ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಸೋಮವಾರ 18ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಮತ್ತು ಕಲ್ಯಾಣ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿತ್ತು.
ಭಾನುವಾರದಿಂದ ಪ್ರಾರಂಭಗೊಂಡ ಪೂಜಾ ಮಹೋತ್ಸವವು ಎರಡು ದಿನಗಳ ಕಾಲ ನಡೆಯಿತು. ಸಾಮೂಹಿಕ ಎಳ್ಳು ದೀಪೋತ್ಸವ, ತೈಲಾಭಿಷೇಕ, 108 ಲೀಟರ್ ಕ್ಷೀರಾಭಿಷೇಕ,ಅಂಕುರಾರ್ಪಣೆ, ಧ್ವಜಾರೋಹಣ, ಬಲಿಹರಣ, ಶನೈಶ್ಚರಸ್ವಾಮಿಯ ತಿಲಹೋಮ, ಶಾಲ್ಯನ್ನ ಅಭಿಷೇಕ, ಮಹಾಸ್ನಪನೆ, ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವವನ್ನು, ಉಯ್ಯಾಲೋತ್ಸವ, ಶಯನೋತ್ಸವ ನಡೆಸಲಾಯಿತು. ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಗಾಯತ್ರಿ ದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು, ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.