Home Blog Page 463

ವೃದ್ಧರ ಮೇಲೆ ಹಲ್ಲೆ ಮಾಡಿ ದರೋಡೆ

0

ತಾಲ್ಲೂಕಿನ ಗುಡಿಹಳ್ಳಿ ಗ್ರಾಮದ ಡಿ.ಎಸ್.ರಾಮರಾವ್ ಎಂಬುವರ ಮನೆಗೆ ಭಾನುವಾರ ಸಂಜೆ ದರೋಡೆಕೋರರಿಬ್ಬರು ನುಗ್ಗಿ ಮಚ್ಚಿನಲ್ಲಿ ಹಲ್ಲೆ ನಡೆಸಿ ಒಡವೆ ಹಾಗೂ ಹಣವನ್ನು ದೋಚಿರುವ ಘಟನೆ ನಡೆದಿದೆ.

ವೃದ್ಧರ ಮೇಲೆ ಹಲ್ಲೆ ಮಾಡಿ ದರೋಡೆ, ಹಲ್ಲೆಗೊಳಗಾದ ಗುಡಿಹಳ್ಳಿಯ ಕಮಲಮ್ಮ
ವೃದ್ಧರ ಮೇಲೆ ಹಲ್ಲೆ ಮಾಡಿ ದರೋಡೆ, ಹಲ್ಲೆಗೊಳಗಾದ ಗುಡಿಹಳ್ಳಿಯ ಕಮಲಮ್ಮ

ಮನೆಯಲ್ಲಿ ವೃದ್ಧರಾದ ಡಿ.ಎಸ್.ರಾಮರಾವ್ ಮತ್ತು ಅವರ ಪತ್ನಿ ಕಮಲಮ್ಮ ಇಬ್ಬರೇ ಇದ್ದ ವೇಳೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದಿದ್ದಾರೆ. ಬೈಕ್ ಮೇಲೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಕುಳಿತಿದ್ದು ಹಿಂಬದಿಯಲ್ಲಿ ಕುಳಿತಿದ್ದ ಯುವಕ ಬಂದು ಕಮಲಮ್ಮ ಅವರಿಗೆ ಕುಡಿಯಲು ನೀರು ಕೇಳಿದ್ದಾನೆ. ಮೂರು ಬಾರಿ ನೀರು ಕೇಳಿ ಕುಡಿದ ಯುವಕ ಸುಸ್ತಾಗುತ್ತಿದೆ ಸಕ್ಕರೆ ಕೊಡಿ ಅಂದಿದ್ದಾನೆ. ಒಳಗೆ ಹೋದ ಕಮಲಮ್ಮ ಅವರನ್ನು ಹಿಂಬಾಲಿಸಿ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಲ್ಲಿ ಹಲ್ಲೆ ನಡೆಸಿ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯದ ಸರ, ಓಲೆಯನ್ನು ಕಿತ್ತಕೊಂಡಿದ್ದಾನೆ. ಅಷ್ಟರಲ್ಲಿ ತಡೆಯಲು ಬಂದ ಡಿ.ಎಸ್.ರಾಮರಾವ್ ಅವರನ್ನು ತಳ್ಳಿ ಮಚ್ಚಿನಲ್ಲಿ ಹಲ್ಲೆ ಮಾಡಿದ್ದಾನೆ. ಹಿಂದಿನ ದಿನವಷ್ಟೆ ಡಿ.ಎಸ್.ರಾಮರಾವ್ ಅವರ ಮಗ ಶ್ರೀನಿಧಿ ಬೆಂಗಳೂರಿನಿಂದ ಬಂದು 50 ಸಾವಿರ ಹಣ ಮತ್ತು ಚಿನ್ನದ ಸರವನ್ನು ಕೊಟ್ಟು ಹೋಗಿದ್ದರಂತೆ. ಅದನ್ನೂ ದರೋಡೆಕೋರರು ಕೊಂಡೊಯ್ದಿದ್ದಾರೆ.
ಹಲ್ಲೆಗೊಳಗಾದ ಡಿ.ಎಸ್.ರಾಮರಾವ್ ಮತ್ತು ಅವರ ಪತ್ನಿ ಕಮಲಮ್ಮ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದು ತನಿಖೆ ನಡೆಸಿದ್ದಾರೆ.

ಕ.ಸಾ.ಪ ದಿಂದ ೧೦೧ ಸಸಿ ನೆಡುವ ಕಾರ್ಯಕ್ರಮ

0

ಪ್ರತಿಯೊಬ್ಬರೂ ಕನಿಷ್ಟ ಕೆಲವೊಂದು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿದರೂ ಸಾಕು. ಅದು ಮುಂದಿನ ಜನಾಂಗಕ್ಕೆ ನಾವು ನೀಡುವ ಬೆಲೆ ಕಟ್ಟಲಾಗದ ಕೊಡುಗೆಯಾಗಲಿದೆ ಎಂದು ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಜಯರಾಂ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಲೇಮಾಕಲಹಳ್ಳಿ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಕಸಾಪದ ೧೦೧ ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ೧೦೧ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗ ನಾವು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಸರ ನಾಶವೇ ಮುಖ್ಯ ಕಾರಣವಾಗಿದೆ. ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದಲೂ, ಎಲ್ಲಾ ಸಮಯದಲ್ಲೂ ಆಗಬೇಕಿದೆ. ಕೇವಲ ಮನೆ ಮನೆ ಕವಿಗೋಷ್ಠಿ, ವರ್ಷಕ್ಕೊಮ್ಮೆ ತಾಲ್ಲೂಕು ಸಾಹಿತ್ಯ ಸಮ್ಮೇಳನ ಹಾಗೂ ಮುಖ್ಯವಾಗಿ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಇದೀಗ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮೀಣ ಪ್ರದೇಶದಲ್ಲಿ ೧೦೧ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಷಯ ಎಂದರು.

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಲೇಮಾಕಲಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ೧೦೧ ಸಸಿ ನೆಡುವ ಕಾರ್ಯಕ್ರಮದಲ್ಲಿ ಶಿಲೇಮಾಕಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಲೇಮಾಕಲಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ೧೦೧ ಸಸಿ ನೆಡುವ ಕಾರ್ಯಕ್ರಮದಲ್ಲಿ ಶಿಲೇಮಾಕಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗುವುದಷ್ಟೇ ಅಲ್ಲದೇ ಜನರ ಆರೋಗ್ಯವೂ ಸುಧಾರಿಸುತ್ತದೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆ ನೀಡಿದಂತಾಗುತ್ತದೆ ಎಂದರು.
ಮನೆಗೊಂದು ಸಸಿ ನೆಟ್ಟು ಅದನ್ನು ತಮ್ಮ ಮಕ್ಕಳಂತೆ ಪೋಷಿಸದೇ ಹೋದಲ್ಲಿ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸಸಿ ನೆಟ್ಟು ಪೋಷಿಸಲು ಮುಂದಾಗಬೇಕು. ಎಂದರು. ಶಿಲೇಮಾಕಲಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಗ್ರಾಮದ ಪ್ರತಿಯೊಂದು ಮನೆಗೂ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರಿಗೆ ಕ.ಸಾ.ಪ ವತಿಯಿಂದ ಡಾ.ಎಲ್.ನಾರಾಯಣರೆಡ್ಡಿ ಕೃಷಿ ವಿಚಾರಗಳ ಬಗ್ಗೆ ರಚಿಸಲಾಗಿರುವ ‘ಈ ಭೂಮಿ ಈ ಸಸ್ಯ’ ಎಂಬ ಪುಸ್ತಕ ಸೇರಿದಂತೆ ಒಂದೊಂದು ಸಸಿಯನ್ನು ನೀಡಲಾಯಿತು.
ಹಂಡಿಗನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಗಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜು, ಕಾರ್ಯದರ್ಶಿ ಶ್ರೀನಿವಾಸ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಅಧಿಕಾರಿ ಶಾಂತ, ಕ.ಸಾ.ಪ ಕಾರ್ಯದರ್ಶಿ ವೆಂಕಟೇಶಪ್ಪ, ಮುನಿಯಪ್ಪ, ಗ್ರಾಮದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಮುನಿರಾಜು, ಕೃಷ್ಣಾರೆಡ್ಡಿ, ಮೋಹನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮನೆಗೊಂದು ಗಿಡ ನೆಡಿ

0

ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎಂದು ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಭಾನುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೀರು ಹಾಗೂ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳಬೇಕಾದರೆ ಪರಿಸರ ಸಂರಕ್ಷಣೆ ಮಾಡಬೇಕಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಒಂದು ಗಿಡ ನೆಟ್ಟು ಬೆಳೆಸಿದರೆ ಶುದ್ಧ ಗಾಳಿ ಸಿಗುವ ಜೊತೆಗೆ ಪರಿಸರ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ವಕೀಲರಾದ ಆರ್.ವಿ.ವೀಣಾ, ಕೆ.ಮಂಜುನಾಥ್, ಶಿರಸ್ತೆದಾರ ಎ.ದೇವರಾಜ್, ಅರಣ್ಯ ಇಲಾಖೆಯ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

ಶಿಡ್ಲಘಟ ಕ.ಸಾ.ಪ ದಿಂದ ‘ಕಸದಿಂದ ರಸ’ ಕಲಾಶಿಬಿರ

0

ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಮತ್ತು ಕರಕುಶಲ ಕಲೆಯನ್ನು ಹೊಂದಿರುವ ಗೃಹಿಣಿಯರನ್ನು ಬೆಳಕಿಗೆ ತರುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ ತಿಳಿಸಿದರು.
ನಗರದ ಗೌಡರ ಬೀದಿಯ ದಾಸಪ್ಪನವರ ಪಾರ್ಥಸಾರಥಿ ಮನೆಯಲ್ಲಿ ಶನಿವಾರ ಸಂಜೆ ಕ.ಸಾ.ಪ ತಾಲ್ಲೂಕು ಘಟಕದಿಂದ ನಡೆದ ‘ಕಸದಿಂದ ರಸ’ ಎಂಬ ವಿವಿಧ ಪ್ರಕಾರಗಳ ಕರಕುಶಲ ಕಲೆಯನ್ನು ಉಚಿತವಾಗಿ ಕಲಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಜ್ಯ ಎಂದು ಬಿಸಾಡುವ ತೆಂಗಿನ ಚಿಪ್ಪು, ರದ್ದಿ ಕಾಗದ, ಐಸ್ಕ್ರೀಮ್ ಚಮಚ, ಹತ್ತಿ ಮುಂತಾದ ಹಲವು ವಸ್ತುಗಳಿಂದ ಬೆರಗಾಗುವಂಥಹ ಕಲಾಕೃತಿಗಳನ್ನು ಲತಾ ಮಂಜುನಾಥ್ ಮಾಡಬಲ್ಲರು. ಈ ಕಲೆಯನ್ನು ಅವರು ಆಸಕ್ತ ಮಕ್ಕಳಿಗೆ ಉಚಿತವಾಗಿ ಕಲಿಸಲಿರುವುದರಿಂದ ಮಕ್ಕಳು ಆಸಕ್ತಿಯಿಂದ ಕಲಿಯಬೇಕು. ಈ ರೀತಿಯ ಕಲಿಕೆಯಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ ಮತ್ತು ಜೀವನೋತ್ಸಾಹ ಮೂಡುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ‘ಕಸದಿಂದ ರಸ’ ಕಲಾ ಶಿಬಿರವು ಹನ್ನೆರಡು ವಾರಗಳ ಕಾಲ ನಡೆಯಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ರಿಂದ 6 ಗಂಟೆಯವರೆಗೂ ನಡೆಯುತ್ತದೆ. ಶಿಬಿರದ ಮುಕ್ತಾಯದಲ್ಲಿ ಕಲಿತ ಮಕ್ಕಳಿಂದ ಅವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕ.ಸಾ.ಪ ತಾಲ್ಲೂಕು ಘಟಕದ ವತಿಯಿಂದ ಪ್ರದರ್ಶನವನ್ನು ಏರ್ಪಡಿಸಲಾಗುವುದು ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಉತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದರು.
ಕ.ಸಾ.ಪ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್ ಕಲೆಯ ಶಿಬಿರದ ಅನುಕೂಲಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶಿವಲೀಲಾ ರಾಜಣ್ಣ ಮತ್ತು ಸಂಪನ್ಮೂಲ ವ್ಯಕ್ತಿ ಲತಾ ಮಂಜುನಾಥ್ ಅವರಿಗೆ ಕ.ಸಾ.ಪ ತಾಲ್ಲೂಕು ಘಟಕದ ವತಿಯಿಂದ ಸಸಿ ಮತ್ತು ಪುಸ್ತಕವನ್ನು ನೀಡಲಾಯಿತು.
ಕ.ಸಾ.ಪ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಮಹಿಳಾ ಪ್ರತಿನಿಧಿ ಟಿ.ಸಾವಿತ್ರಮ್ಮ, ಸಾಂಸ್ಕೃತಿಕ ಪ್ರತಿನಿಧಿ ಮಾಲತಿ, ಸಂಚಾಲಕ ಭಾಸ್ಕರ್, ಮಾಜಿ ಅಧ್ಯಕ್ಷ ವಿ.ಕೃಷ್ಣ, ರೂಪ ಪಾರ್ಥಸಾರಥಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಾಹನಗಳ ಮಾರಾಟಕ್ಕೆ ಸಂಬಂದಿಸಿದಂತೆ ಘರ್ಷಣೆ

0

ಹೋಂಡಾ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಸಂಬಂದಿಸಿದಂತೆ ನಡೆದ ಘರ್ಷಣೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎಚ್. ಕ್ರಾಸ್‌ನಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ನಗರದ ಎಸ್.ಎಲ್.ಎನ್. ಹೋಂಡಾ ಶೋ ರೂಂ ಮಾಲೀಕರ ಪುತ್ರ ಎಂ.ದಿನೇಶ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಎಚ್. ಕ್ರಾಸ್‌ನ ಜೈ ಮಾರುತಿ ಮೋಟರ್‌್ಡ ನ ಮಾಲೀಕ ಬಿ.ವಿ.ಲಕ್ಷ್ಮಣ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಹಿನ್ನಲೆ: ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಎಸ್.ಎಲ್.ಎನ್ ಹೋಂಡಾ ಶೋ ರೂಂ ಹೋಂಡಾ ಕಂಪೆನಿಯ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾಗಿದ್ದು, ತಾಲ್ಲೂಕಿನಾದ್ಯಂತ ಇವರ ಮುಖಾಂತರವೇ ವಾಹನ ಸರಬರಾಜು ಆಗುತ್ತಿತ್ತು. ಆದರೆ ಈಚೆಗೆ ಹೋಂಡಾ ದ್ವಿಚಕ್ರ ವಾಹನಗಳನ್ನು ಬೇರೆಡೆಯಿಂದ ತಂದು ತಾಲ್ಲೂಕಿನ ಹಲವು ಶೋರೂಂಗಳವರು ಮಾರುತ್ತಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಶುಕ್ರವಾರ ಬೆಳಗ್ಗೆ ಶೋ ರೂಂನ ಮಾಲೀಕರ ಪುತ್ರ ದಿನೇಶ್ ಎಚ್. ಕ್ರಾಸ್ ಕಡೆಗೆ ಹೋದಾಗ ಎಚ್. ಕ್ರಾಸ್‌ನ ಜೈ ಮಾರುತಿ ಮೋಟರ್‍ ಶೋ ರೂಂ ನಲ್ಲಿ ಹೋಂಡಾ ದ್ವಿಚಕ್ರ ವಾಹನಗಳಿದ್ದುದನ್ನು ಗಮನಿಸಿ ತನ್ನ ಮೊಬೈಲ್‌ನಿಂದ ಫೋಟೊ ತೆಗೆದಿದ್ದಾರೆ. ಇದನ್ನು ಕಂಡ ಎಚ್. ಕ್ರಾಸ್ ಶೋ ರೂಂ ನ ಮಾಲೀಕ ಲಕ್ಷ್ಮಣ್ ನಮ್ಮ ಶೋ ರೂಂ ಫೋಟೊ ತೆಗೆಯಲು ನೀನ್ಯಾರು ಎಂದು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಪರಸ್ಪರ ಘರ್ಷಣೆಯಾಗಿದೆ ಎನ್ನಲಾಗಿದೆ.
ಘರ್ಷಣೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿದ್ದು ಎಚ್. ಕ್ರಾಸ್‌ನ ಜೈ ಮಾರುತಿ ಮೋಟರ್ಸ್ ಶೋ ರೂಂಗೆ ಅಳವಡಿಸಿದ್ದ ಗಾಜೊಂದು ಪುಡಿಯಾದರೆ ಶಿಡ್ಲಘಟ್ಟದ ಎಸ್.ಎಲ್.ಎನ್ ಶೋರೂಂ ಮಾಲೀಕರ ಕಾರಿನ ಮುಂಭಾಗದ ಗಾಜು ಹೊಡೆದುಹೋಗಿದೆ.ಘಟನಾ ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ, ಶಿಡ್ಲಘಟ್ಟ ಸರ್ಕಲ್‌ ಇನ್ ಸ್ಪೆಕ್ಟರ್‌ ವೆಂಕಟೇಶ್, ಗ್ರಾಮಾಂತರ ಪೋಲೀಸ್ ಠಾಣೆಯ ಪಿಎಸ್ಸೈ ಪ್ರದೀಪ್‌ಪೂಜಾರಿ ಭೇಟಿ ನೀಡಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿವಿಧ ಸಂಘಟನೆಗಳ ಸದಸ್ಯರು ಪೊಲೀಸ್‌ ಸಿಬ್ಬಂದಿಯ ಬೆಂಬಲಕ್ಕೆ

0

ನಗರದ ತಾಲ್ಲೂಕು ಕಛೇರಿಯ ಮುಂದೆ ಶನಿವಾರ ವಿವಿಧ ಸಂಘಟನೆಗಳ ಸದಸ್ಯರು ಪೊಲೀಸ್‌ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿಯನ್ನು ನಡೆಸಿ ಮನವಿ ಪತ್ರವನ್ನು ಗ್ರೇಡ್‌ 2 ತಹಶೀಲ್ದಾರ್‌ ವಾಸುದೇವಮೂರ್ತಿ ಅವರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್‌, ಟಿಪ್ಪು ಸೆಕ್ಯುಲರ್‌ ಸೇನಾ, ಸಮಾನ ಮನಸ್ಕರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಸಿ.ಐ.ಟಿ.ಯು ಮತ್ತು ಯೂತ್‌ ಕಾಂಗ್ರೆಸ್‌ ಸಂಘಟನೆಗಳ ಸದಸ್ಯರು ಪೊಲೀಸರನ್ನು ಬೆಂಬಲಿಸಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಶಿಡ್ಲಘಟ್ಟದ ತಾಲ್ಲೂಕು ಕಛೇರಿಯ ಮುಂದೆ ಶನಿವಾರ ಸಿ.ಐ.ಟಿ.ಯು ಸಂಘಟನೆಗಳ ಸದಸ್ಯರು ಪೊಲೀಸ್‌ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿಯನ್ನು ನಡೆಸಿ ಮನವಿ ಪತ್ರವನ್ನು ಗ್ರೇಡ್‌ 2 ತಹಶೀಲ್ದಾರ್‌ ವಾಸುದೇವಮೂರ್ತಿ ಅವರಿಗೆ ಸಲ್ಲಿಸಿದರು.
ಶಿಡ್ಲಘಟ್ಟದ ತಾಲ್ಲೂಕು ಕಛೇರಿಯ ಮುಂದೆ ಶನಿವಾರ ಸಿ.ಐ.ಟಿ.ಯು ಸಂಘಟನೆಗಳ ಸದಸ್ಯರು ಪೊಲೀಸ್‌ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿಯನ್ನು ನಡೆಸಿ ಮನವಿ ಪತ್ರವನ್ನು ಗ್ರೇಡ್‌ 2 ತಹಶೀಲ್ದಾರ್‌ ವಾಸುದೇವಮೂರ್ತಿ ಅವರಿಗೆ ಸಲ್ಲಿಸಿದರು.

ಪೊಲೀಸರು ಸಮಯದ ಹಂಗಿಲ್ಲದೆ ನಾಗರಿಕರ ಪ್ರಾಣ, ಆಸ್ತಿ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಕರ್ತವ್ಯದ ನಿರ್ವಹಣೆಯಲ್ಲಿ ಹಲವು ಪೊಲೀಸ್‌ ಸಿಬ್ಬಂದಿ ಪ್ರಾಣವನ್ನೂ ತ್ಯಜಿಸಿದ್ದಾರೆ. ಈಚಿನ ದಿನಗಳಲ್ಲಿ ರಾಜ್ಯದ ಪೊಲೀಸ್‌ ಇಲಾಖೆ ವೇತನ ತಾರತಮ್ಯ, ಸತತ ದುಡಿಮೆ, ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ, ಕೆಲಸದ ಒತ್ತಡ ಮುಂತಾದ ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಎಷ್ಟೋ ಬಾರಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತು, ಪೊಲೀಸ್‌ ಸಿಬ್ಬಂದಿಯ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಬಗೆಹರಿಸಬೇಕೆಂದು ಮನವಿಯಲ್ಲಿ ಕೋರಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರವಿಪ್ರಕಾಶ್‌, ಪ್ರತೀಶ್‌, ಮುನಿಕೆಂಪಣ್ಣ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್‌ ಅಧ್ಯಕ್ಷ ಮಹಮ್ಮದ್‌ ಅಸದ್‌, ಅಕ್ರಮ್‌ ಪಾಷ, ವಸೀಮ್‌ಪಾಷ, ಇಮ್ತಿಯಾಜ್‌ ಪಾಷ, ಟಿಪ್ಪು ಸೆಕ್ಯುಲರ್‌ ಸೇನಾ ಅಧ್ಯಕ್ಷ ಎಂ.ಮೌಲಾ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಜು ಕುಟ್ಟಿ, ಸಿ.ಐ.ಟಿ.ಯು ಸಂಘಟನೆಯ ಲಕ್ಷ್ಮೀದೇವಮ್ಮ, ಸುದರ್ಶನ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಸಾದಿಕ್‌, ಪ್ರದೀಪ್‌, ನಾಗನರಸಿಂಹ, ರವಿ, ನರಸಿಂಹ, ಗಂಗರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಜಪಯಜ್ಞ

0

ಕಲಿಯುಗದಲ್ಲಿ ಪರಮಾತ್ಮನ ನಾಮಸ್ಮರಣೆಯ ಜಪವು ಶ್ರೇಷ್ಠವಾದುದು. ಜಪವನ್ನು ಮಾಡುವುದು ನಮ್ಮ ನಮ್ಮ ಮನಸ್ಸಿನ ಉದ್ಧಾರಕ್ಕಾಗಿ ಮತ್ತು ಮಾನಸಿಕ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದಕ್ಕಾಗಿ ಜಪವನ್ನು ಮಾಡಬೇಕಾಗಿದೆ. ಜಪಯಜ್ಞವೆಂದರೆ ಅದು ಭಕ್ತರಿಗೆ ರಕ್ಷಾ ಕವಚವಿದ್ದಂತೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ನಡೆದ ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ಆಚರಿಸಲಾದ ಅಷ್ಟಾಕ್ಷರೀ ಜಪಯಜ್ಞದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮಾಡುವ ಕರ್ಮವನ್ನು ಗುರುಗಳಿಗೆ ಅರ್ಪಿಸಬೇಕು. ನಿಷ್ಕಾಮ ಕರ್ಮವನ್ನು ಮಾಡಬೇಕು. ಸ್ವಾರ್ಥದಿಂದ ಏನನ್ನು ಸಾಧಿಸಲು ಆಗುವುದಿಲ್ಲ. ಪ್ರಾಪಂಚದಲ್ಲಿ ಅಂಟು ಅಂಟದ ಹಾಗೆ ಇರಬೇಕು. ಮನಸ್ಸನ್ನು ಧರ್ಮದ ಕಡೆಗೆ ತಿರುಗಿಸಬೇಕು. ಇದನ್ನು ಅಭ್ಯಾಸ ಮಾಡಲು ಧಾರ್ಮಿಕ ಆಚರಣೆಗಳಿಂದ ಸಾಧ್ಯ. ಸಾವಿರ ವರ್ಷಗಳ ಹಿಂದೆ ಜನಿಸಿದ ಶ್ರೀರಾಮಾನುಜಾಚಾರ್ಯರು ಧಾರ್ಮಿಕ ಕ್ರಾಂತಿಯನ್ನು ಮಾಡಿದ ಮಹಾಪುರುಷರು. ಶ್ರೀ ರಾಮಾನುಜರು ಧರ್ಮಕ್ಕೆ ವಿಶಿಷ್ಟಾದ್ವೈತದ ಸುಧಾರಿತ ರೂಪ ನೀಡಿ ಎಲ್ಲರಿಗೂ ಭಗವದಾರಾಧನೆಯ ಸುಲಭ ಮಾರ್ಗ ತೋರಿಸಿಕೊಟ್ಟರು. ಅದನ್ನು ಭಕ್ತಿ ಮಾರ್ಗವೆಂದರು. ಭಕ್ತಿಮಾರ್ಗವೆಂದರೆ ಭಗವಂತನಿಗೆ ಸಂಪೂರ್ಣ ಶರಣಾಗತಿ ಎಂದರು.
ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ದಾಂತವನ್ನು ಪ್ರಚುರಪಡಿಸಿ ಸರ್ವರನ್ನೂ ತಮ್ಮೊಂದಿಗೆ ಕರೆದೊಯ್ದಂತೆ ಶ್ರೀ ಯೋಗಿ ನಾರೇಯಣರು ಜಾತಿ, ಮತ, ಕುಲ, ವರ್ಣಗಳ ಭೇದವೆಣಿಸದೆ ಎಲ್ಲರನ್ನೂ ತಮ್ಮೊಂದಿಗೆ ಮೋಕ್ಷ ಮಾರ್ಗದಲ್ಲಿ ಕರೆದೊಯ್ದರು. ಶ್ರೀ ಯೋಗಿನಾರೇಯಣ ತಾತಯ್ಯನವರು ವಿಶಿಷ್ಟಾದ್ವೈತ ಸಿದ್ದಾಂತವನ್ನು ಪಾಲಿಸಿದವರು. ಇವರ ಕೀರ್ತನೆಗಳಲ್ಲಿ ಶ್ರೀರಾಮಾನುಜರನ್ನು ಹಾಡಿ ಕೊಂಡಾಡಿದ್ದಾರೆ. ಆದ್ದರಿಂದ ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಿ ಭಕ್ತಿ, ತತ್ವಗಳನ್ನು ಎಲ್ಲೆಡೆ ಪಸರಿಸಬೇಕೆಂದು ಶ್ರೀ ಯೋಗಿ ನಾರೇಯಣ ಮಠವು ನಿರ್ಣಯ ಕೈಗೊಂಡು ಮುಂದಿನ ಒಂದು ವರ್ಷಗಳ ಕಾಲ ಈ ಕಾರ್ಯಕ್ರಮಗಳು ಅವಿರತವಾಗಿ ನಡೆಯಲಿದೆ ಎಂದರು.
ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಾರ್ಥನೆಯೊಂದಿಗೆ ಪ್ರಸ್ತಾವಿಕ ನುಡಿಗಳನ್ನು ನುಡಿದರು. ದೇವಾಲಯದ ಧರ್ಮದರ್ಶಿ ಬ್ಯಾಟರಾಯಶೆಟ್ಟಿರವರು ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮೊದಲು ದೇವಾಲಯದಲ್ಲಿ ಅರ್ಚಕ ವೃಂದ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯರಮರೆಡ್ಡಿಹಳ್ಳಿ ವೆಂಕಟರಮಣಪ್ಪ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೈರೇಗೌಡ, ಆನೂರು ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ವೆಂಕಟೇಶ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಬೆಳ್ಳೂಟಿ ಸತ್ಯಪ್ಪ, ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಳೇ ರಘು, ಹನುಮಂತರಾಯಪ್ಪ, ನಾಮದೇವರು, ಶ್ರೀ ಯೋಗಿನಾರೇಯಣ ಮಠದ ಸದಸ್ಯರುಗಳು ಮುಂತಾದವರು ಹಾಜರಿದ್ದರು.

ಅಷ್ಟಾಕ್ಷರಿ ಜಪಯಜ್ಞ

0

ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಶ್ರೀಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದಿಂದ ಅಷ್ಟಾಕ್ಷರಿ ಜಪಯಜ್ಞವನ್ನು ಜೂನ್ 3 ರ ಶುಕ್ರವಾರ ಆಯೋಜಿಸಿದೆ. ಇದನ್ನು ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಉದ್ಘಾಟಿಸುವರು.
ಜೂನ್ 11 ರ ಶನಿವಾರ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯನ್ನು ತಲಕಾಯಲಬೆಟ್ಟ ಟಿ.ವೆಂಕಟಾಪುರ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಿಂದ ರಾಮಲಿಂಗೇಶ್ವರ ಬೆಟ್ಟದ ದೇವಾಲಯದವರೆಗೆ 12 ಗ್ರಾಮಗಳ ಮೂಲಕ ಹಮ್ಮಿಕೊಳ್ಳಲಾಗಿದೆ.
ಜೂನ್ 18 ರ ಶನಿವಾರದಿಂದ ಜೂನ್ 24 ರ ಶುಕ್ರವಾರದವರೆಗೆ ನಗರದ ಅಶೋಕ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ತೆಲುಗು ಪೋತನ ಭಾಗವತದ ಪ್ರವಚನವನ್ನು ಮಂಕಾಲ ಶ್ರೀಹರಿಶರ್ಮ ನಡೆಸಿಕೊಡಲಿದ್ದಾರೆ.

ಪೊಲೀಸ್ ಸಿಬ್ಬಂದಿಯ ಬೆಂಬಲಕ್ಕೆ ಸಿ.ಐ.ಟಿ.ಯು ಸಂಘಟನೆ

0

ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಹಾಗೂ ಅವರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆಯೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿ.ಐ.ಟಿ.ಯು) ತಾಲ್ಲೂಕು ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಯೂ ಸಮಯದ ಹಂಗಿಲ್ಲದೆ ಮಳೆ, ಗಾಳಿ, ಚಳಿ, ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕರ ಪ್ರಾಣ, ಆಸ್ತಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಣೆಯಲ್ಲಿ ಜೀವದ ಹಂಗು ಲೆಕ್ಕಿಸದೆ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ಪ್ರಸ್ತುತ ಪೊಲೀಸ್ ಸಿಬ್ಬಂದಿ ದ್ವಿತೀಯ ದರ್ಜೆಯ ಗುಮಾಸ್ತನ ವೇತನ ಶ್ರೇಣಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಇದರಿಂದ ಅವರ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ಅವರ ಹಲವು ಬೇಡಿಕೆಗಳು ನ್ಯಾಯಯುತವಾಗಿದ್ದು ಅವನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಸಿ.ಐ.ಟಿ.ಯು ಸಂಘಟನೆಯು ಪೊಲೀಸ್ ಸಿಬ್ಬಂದಿಯ ಪರವಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ನೌಕರರ ಪ್ರತಿಭಟನೆ

0

ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಏಳನೇ ವೇತನ ಆಯೋಗ ತಕ್ಷಣದಿಂದ ಜಾರಿಯಾಗಲಿ, ಕೇಂದ್ರ ಸರ್ಕಾರದ ನೌಕರರಿಗೆ ಸಮನಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು. ಎನ್.ಪಿ.ಎಸ್ ವಾಪಸ್ ಪಡೆಯಬೇಕು ಮತ್ತು ಹಳೆಯ ಪೆನ್ಶನ್ ಪದ್ಧತಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಕಚೇರಿ, ರೇಷ್ಮೆ ಗೂಡಿನ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ಸರ್ಕಾರಿ ನೌಕರರ ಮುಷ್ಕರದಿಂದಾಗಿ ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರು ಪರದಾಡುವಂತಾಗಿತ್ತು.

ಶಿಡ್ಲಘಟ್ಟದಲ್ಲಿ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬಸ್ ನಿಲ್ದಾಣದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟಿಸಿದರು.
ಶಿಡ್ಲಘಟ್ಟದಲ್ಲಿ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬಸ್ ನಿಲ್ದಾಣದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟಿಸಿದರು.

ನಗರದ ಬಸ್ ನಿಲ್ದಾಣದ ಬಳಿಯ ರೇಷ್ಮೆ ಬಿತ್ತನೆ ಕೋಠಿ ಬಳಿಯಿಂದ ಸರ್ಕಾರಿ ನೌಕರರು ಮೆರವಣಿಗೆಯಲ್ಲಿ ಸಾಗಿದರು. ಬಸ್ ನಿಲ್ದಾಣದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟಿಸಿದರು. ಟಿ.ಬಿ.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗಿ ತಾಲ್ಲೂಕು ಕಚೇರಿಯ ಮುಂದೆ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸರ್ದಾರ್ ಚಾಂದ್ಪಾಷ, ಅಕ್ಕಲರೆಡ್ಡಿ, ಶ್ರೀರಾಮಯ್ಯ, ಬೈರಾರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಸಮೀವುಲ್ಲ, ಕೇಶವರೆಡ್ಡಿ, ವಿಜಯಕುಮಾರ್, ಎಚ್.ಸಿ.ಮೋಹನ್, ಸೋಮಶೇಖರ್, ಟಿ.ಟಿ.ನರಸಿಂಹಪ್ಪ, ನಾರಾಯಣಸ್ವಾಮಿ, ರಾಜಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೋಚಿಮುಲ್ ನಿಂದ ವಿಶ್ವ ಹಾಲು ದಿನಾಚರಣೆ

0

ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗಾಗಿ ಸಹಕರಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಬುಧವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ಗುಡ್ಲೈಫ್ ಹಾಲನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯಿಂದ ಪ್ರತಿನಿತ್ಯ ಸುಮಾರು ೯.೫ ಲಕ್ಷ ಲೀ ಹಾಲು ಉತ್ಪಾದನೆಯಾಗುತ್ತಿದ್ದು, ಈ ಪೈಕಿ ೫ ಲಕ್ಷ ಲೀಟರ್ ಹಾಲು ಮಾತ್ರ ನೇರವಾಗಿ ಹಾಲಿನ ರೂಪದಲ್ಲಿಯೇ ಜನರಿಗೆ ತಲುಪುತ್ತಿದೆ. ಉಳಿದ ಹಾಲು, ಹಾಲಿನಪುಡಿ, ಗುಡ್ಲೈಫ್ ಹಾಲು ಹಾಗು ಹಾಲಿನ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂದರು.
ಶಿಡ್ಲಘಟ್ಟ ಶಿಬಿರ ಘಟಕದ ಉಪವ್ಯವಸ್ಥಾಪಕ ಹನುಮಂತರಾವ್ ಮಾತನಾಡಿ ಹಾಲು ವಿಶ್ವದಾದ್ಯಂತ ಎಲ್ಲರಿಗೂ ಬೇಕಾಗಿರುವ ವಸ್ತುವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದ್ದರೂ ಸಹ ಹಾಲು ಮಾತ್ರ ಒಂದೇ ಆಗಿರುತ್ತದೆ. ಪ್ರತಿಯೊಬ್ಬ ಮನುಷ್ಯ ದಿನವೊಂದಕ್ಕೆ ೫೦೦ ಮಿ.ಲೀ ಹಾಲು ಬಳಸಬೇಕು. ಆದರೆ ನಮ್ಮಲ್ಲಿ ಇಂದಿಗೂ ೬೦ ರಿಂದ -೭೦ ಮಿ.ಲೀ ಹಾಲು ಮಾತ್ರ ಬಳಕೆಯಾಗುತ್ತಿದೆ. ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಎಲ್ಲರೂ ಬಳಸುವಂತಾಗಬೇಕು. ನಂದಿನಿ ಹಾಳಿನ ಖರೀದಿಯಿಂದ ಬರುವಂತಹ ಹಣವು ನೇರವಾಗಿ ಉತ್ಪಾದಕರಿಗೆ ತಲುಪುತ್ತದೆ ಹಾಗೂ ಸಹಕಾರ ಸಂಘಗಳೂ ಕೂಡಾ ಹೆಚ್ಚು ಬಲವರ್ಧನೆಯಾಗುತ್ತವೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಉಮೇಶ್ರೆಡ್ಡಿ, ಶ್ರೀನಿವಾಸ್, ಅಂಬರೀಶ್, ನಾರಾಯಣರೆಡ್ಡಿ, ಮುನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪೊಲೀಸರ ಸಮಸ್ಯೆ ಬಗೆ ಹರಿಸಲು ಆಮ್ ಆದ್ಮಿ ಮನವಿ

0

ಸರ್ಕಾರ ಪೊಲೀಸರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಪರಿಶೀಲಿಸಬೇಕು. ಆ ಮೂಲಕ ಕಾನೂನು ಸುವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿಯ ತಾಲ್ಲೂಕು ಘಟಕದ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದರು.
ಸಮಾಜದ ಆಧಾರ ಸ್ತಂಭವಾದ ಪೊಲೀಸರು ತಮ್ಮ ಹಲವು ದಶಕಗಳ ಬೇಡಿಕೆ ಮತ್ತು ಹಕ್ಕುಗಳ ಈಡೇರಿಕೆಗಾಗಿ ಜೂನ್ 4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಗೈರು ಹಾಜರಾಗಿ ತಮ್ಮ ಪ್ರತಿಭಟನೆಯ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ. ತಕ್ಷಣವೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಪೊಲೀಸರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿಯನ್ನು ಸಲ್ಲಿಸಿದರು.
ಆಮ್ ಆದ್ಮಿ ಪಾರ್ಟಿಯ ತಾಲ್ಲೂಕು ಘಟಕದ ಸಂಚಾಲಕ ವಿಸ್ಡಮ್ ನಾಗರಾಜ್, ಸಹಸಂಚಾಲಕ ನರಸಿಂಹಪ್ಪ, ರಾಮಚಂದ್ರ, ಮೌಲಾ ಅಲಿ, ನವೀದ್, ಆರ್. ನಾಗರಾಜಪ್ಪ, ಬಾಬಾಜಾನ್, ಆನಂದರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ಪೊಲೀಸ್ ಸಿಬ್ಬಂದಿಗೆ ಶ್ರೀರಾಮ ಸೇನಾ ಸಂಘಟನೆಯ ಬೆಂಬಲ

0

ಪೊಲೀಸ್ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನಾ ಸಂಘಟನೆಯ ಸದಸ್ಯರು ಬುಧವಾರ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪೊಲೀಸ್ ವ್ಯವಸ್ಥೆಯಿಲ್ಲದೆ ಸಮಾಜಕ್ಕೆ ಉಳಿಗಾಲವಿಲ್ಲ. ಅಸಂಘಟಿತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಸಮಸ್ಯೆಗಳನ್ನು ಸರ್ಕಾರ ಕಡೆಗಣಿಸಬಾರದು. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜಾ ಚಳುವಳಿಯನ್ನು ಜೂನ್ 4 ರಂದು ಹಮ್ಮಿಕೊಂಡಿದ್ದಾರೆ. ಈ ಚಳುವಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಶ್ರೀರಾಮಸೇನೆ ಮತ್ತು ಕರ್ನಾಟಕ ಸಂಘಟನೆಯು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಪೊಲೀಸರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಮನವಿಯನ್ನು ಸಲ್ಲಿಸಿದರು.
ಶ್ರೀರಾಮಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಎನ್.ಜಿ.ಮಂಜುನಾಥ, ನಿಶಾಂತ್, ನಾಗರಾಜು, ಜಗದೀಶ್, ಮಧುಸೂದನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸತತ ಅಧ್ಯಯನದಿಂದ ಸಾಧನೆ ಮಾಡಿದ ಕನ್ನಡದ ಕಟ್ಟಾಳು ದೇ.ಜವರೇಗೌಡ

0

ತಂದೆ ತಾಯಿಗಳು ಅನಕ್ಷರಸ್ಥರಾದರೂ ಸತತ ಅಧ್ಯಯನದಿಂದ ಸಾಧನೆ ಮಾಡಿದ ಕನ್ನಡದ ಕಟ್ಟಾಳು ದೇ.ಜವರೇಗೌಡರು ಒಬ್ಬ ಮೇರು ಸಾಹಿತಿಯಾಗಿ ಸುಮಾರು 400 ಗ್ರಂಥಗಳನ್ನು ರಚಿಸಿದ್ದಾರೆ. ಬದುಕು ಮತ್ತು ಬರಹ ಒಂದೇ ಆಗಿದ್ದಂಥಹ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್.ಎ.ಉಮೇಶ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯ ಕಛೇರಿಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಂಗಮಕೋಟೆ ಹೋಬಳಿ ಘಟಕದ ವತಿಯಿಂದ ನಡೆದ ದೇ. ಜವರೇಗೌಡ ಮತ್ತು ಎಚ್.ವಿ.ರಾಮಚಂದ್ರರಾವ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ದೇ.ಜವರೇಗೌಡರ ಆತ್ಮಚರಿತ್ರೆ ‘ಹೋರಾಟದ ಬದುಕು’ ಪ್ರತಿಯೊಬ್ಬರೂ ಓದಬೇಕು. ವಿದ್ಯೆಗಾಗಿ ಅವರು ಪಟ್ಟ ಕಷ್ಟ, ತಪನೆ, ಆಸಕ್ತಿ, ಅಧ್ಯಯನ, ಶ್ರಮಜೀವನ, ಒಟ್ಟಾರೆ ಅವರ ಸಾಧನೆ ಪ್ರೇರಣದಾಯಕ. ಅವರ ಸಾಮರ್ಥ್ಯಕ್ಕೆ ಎಲ್ಲೆಗಳಿರಲಿಲ್ಲ. ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಹೋರಾಡಿದರು. ಇಳಿವಯಸ್ಸಿನಲ್ಲಿ ಕ್ಷೀಣಿಸುವ ಆರೋಗ್ಯವನ್ನು ಲೆಕ್ಕಿಸದೇ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡಲು ಉಪವಾಸ ಸತ್ಯಾಗ್ರಹ ನಡೆಸಿದರು ಎಂದು ಹೇಳಿದರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಈಚೆಗೆ ನಿಧನರಾದ ಶಿಡ್ಲಘಟ್ಟ ಮೂಲದ ಸಾಹಿತಿ ಎಚ್.ವಿ.ರಾಮಚಂದ್ರರಾವ್ ಅವರ ಹಿಂದಿ ಮತ್ತು ಕನ್ನಡ ಅನುವಾದಗಳು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ರಚಿಸಿರುವ ಕೃತಿಗಳು, ತುಳಸಿ ರಾಮಾಯಣದ ಮೇಲೆ ಬರೆದ ‘ರಾಮಚರಿತ ಮಾನಸ ಒಂದು ರಸಯಾತ್ರೆ’, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರ ಕಥೆಗಳು, ಕಬೀರ ವಚನಾವಳಿ, ಹರಿಕಥಾಮೃತಸಾರ ಮುಂತಾದ ಸಾಹಿತ್ಯ ರಚನೆಗಳ ಬಗ್ಗೆ ತಿಳಿಸಿದರು. ಅಗಲಿದ ಹಿರಿಯ ಚೇತನರ ಆತ್ಮಕ್ಕೆ ಶಾಂತಿಸಿಗಲಿ, ದುಃಖ ಭರಿಸುವ ಶಕ್ತಿ ಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಹೇಳಿದರು.
ಸಾಹಿತಿಗಳಾದ ದೇ. ಜವರೇಗೌಡ ಮತ್ತು ಎಚ್.ವಿ.ರಾಮಚಂದ್ರರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕ.ಸಾ.ಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಪ್ರಧಾನ ಸಂಚಾಲಕ ಸುದರ್ಶನ್, ಸಹ ಸಂಚಾಲಕ ಸುಧೀರ್, ಗ್ರಾಮ ಪಂಚಾಯತಿ ಸದಸ್ಯ ರೂಪೇಶ್, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಧರ್ಮೇಂದ್ರ, ಕುಮಾರ್, ಆನಂದ್, ಎಸ್.ಆರ್.ವೆಂಕಟೇಶ್, ಶಿವಾನಂದ, ಚರಣ್, ಸುರೇಶ್, ಕೇಶವಮೂರ್ತಿ, ಪ್ರಭಾಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದ ಮಹಾನ್ ಚೇತನ

0

ಬಡತನವಿದ್ದರೂ ವಿದ್ಯೆಯ ಹಂಬಲದಿಂದ ಕಷ್ಟಪಟ್ಟು ಸಾಧನೆ ಮಾಡಿ ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದ ಮಹಾನ್ ಚೇತನ ದೇ. ಜವರೇಗೌಡ ಅವರದ್ದು ಪ್ರೇರಣದಾಯಕ ವ್ಯಕ್ತಿತ್ವ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ದೇ. ಜವರೇಗೌಡ ಮತ್ತು ಎಚ್.ವಿ.ರಾಮಚಂದ್ರರಾವ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿದ್ದ ದೇ.ಜವರೇಗೌಡ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸರಿಸುಮಾರು ಏಳು ದಶಕಗಳಿಂದ ವಿದ್ವತ್ತು, ಆಡಳಿತ ಮತ್ತು ಚಳುವಳಿಗಳೆಂಬ ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ಅವರ ಕೊಡುಗೆಯ ಸ್ವರೂಪವನ್ನು ನಿರ್ಧರಿಸಿವೆ. ಜಾನಪದ, ಗ್ರಂಥಸಂಪಾದನೆ, ಸಾಹಿತ್ಯವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ರೂಪಿಸಿದ, ಸಂಪನ್ಮೂಲಗಳನ್ನು ಸೃಷ್ಟಿಸಿ, ಅವನ್ನು ಯಶಸ್ವಿಯಾಗಿ ನಿರ್ವಹಿಸಿದ ದೇಜಗೌರ ಸಾಧನೆ ಅನುಪಮವಾದುದು ಎಂದು ಹೇಳಿದರು.
ಶಿಡ್ಲಘಟ್ಟದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ವಿ.ರಾಮಚಂದ್ರರಾವ್ ಅವರು ಮೇ 23 ರಂದು ನಿಧನರಾದರು. ಎಚ್.ವಿ.ಆರ್ ಅವರು ಹಲವಾರು ಹಿಂದಿ ಮತ್ತು ಕನ್ನಡ ಅನುವಾದಗಳನ್ನು ಮಾಡಿದ್ದು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತುಳಸಿ ರಾಮಾಯಣದ ಮೇಲೆ ಬರೆದ ‘ರಾಮಚರಿತ ಮಾನಸ ಒಂದು ರಸಯಾತ್ರೆ’, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರ ಕಥೆಗಳು, ಕಬೀರ ವಚನಾವಳಿ, ಹರಿಕಥಾಮೃತಸಾರ ಮುಂತಾದ 16 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಗಲಿದ ಹಿರಿಯ ಚೇತನರ ಆತ್ಮಕ್ಕೆ ಶಾಂತಿಸಿಗಲಿ, ದುಃಖ ಭರಿಸುವ ಶಕ್ತಿ ಅವರ ಮನೆಯವರಿಗೆ ಭಗವಂತ ನೀಡಲಿ ಎಂದು ನುಡಿದರು.
ಕ.ಸಾ.ಪ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜರಾವ್ ಶ್ರದ್ಧಾಂಜಲಿ ಸಭೆಯ ಉದ್ದೇಶ ಹಾಗೂ ನಿಧನರಾದ ಸಾಹಿತಿಗಳ ಕುರಿತಂತೆ ಮಾತನಾಡಿದರು.
ಕ.ಸಾ.ಪ ತಾಲ್ಲೂಕು ಉಪಾಧ್ಯಕ್ಷರಾದ ಸಯ್ಯದ್ ತಮೀಮ್ ಅನ್ಸಾರಿ, ಎನ್.ಅಶೋಕ್, ಗೌರವ ಕಾರ್ಯದರ್ಶಿಗಳಾದ ಎ.ಎಂ. ತ್ಯಾಗರಾಜ್ ಎನ್.ವೆಂಕಟೇಶಪ್ಪ, ಶಿಕ್ಷಕರಾದ ವಿ.ಕೃಷ್ಣ, ಭಾಸ್ಕರ್, ಪ್ರಕಾಶ್, ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಣ್ಣು ಮಾದರಿ ಸಂಗ್ರಹಣಾ ಪ್ರಾತ್ಯಕ್ಷಿಕೆ

0

ಮಣ್ಣು ನಿರ್ಜೀವ ವಸ್ತುವಲ್ಲ ಬದಲಿಗೆ ಅನೇಕ ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಅಮೂಲ್ಯ ಹಾಗೂ ಸಜೀವ ವಸ್ತು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಬಳಿ ತೋಟವೊಂದರಲ್ಲಿ ಮಂಗಳವಾರ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿ ಏರ್ಪಡಿಸಲಾಗಿದ್ದ ಮಣ್ಣು ಮಾದರಿ ಸಂಗ್ರಹಣಾ ಪ್ರಾತ್ಯಕ್ಷಿಕೆ ಹಾಗು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣು ನೈಸರ್ಗಿಕ ಪರಿಸರದ ಒಂದು ಪ್ರಮುಖ ಅಂಶವಾಗಿದ್ದು ಮಣ್ಣಿನ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಬೆಳೆಗಳು ಚೆನ್ನಾಗಿ ಆಗುತ್ತವೆ. ಹಾಗಾಗಿ ಪ್ರತಿಯೊಬ್ಬ ರೈತರೂ ಕನಿಷ್ಠ ಮೂರು ವರ್ಷಕ್ಕೆ ಒಮ್ಮೆಯದಾರೂ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು.
ಮಣ್ಣಿನಲ್ಲಿ ಫಲವತ್ತತೆ ಕಾಪಾಡಿಕೊಂಡಲ್ಲಿ ಬೆಳೆ ಚೆನ್ನಾಗಿ ಆಗುವುದರೊಂದಿಗೆ ಇಳುವರಿ ಹೆಚ್ಚಾಗುತ್ತದೆ. ಈ ಬಗ್ಗೆ ಇಲಾಖೆಯಿಂದ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದರೂ ಶೇ. ೧೦ ರಷ್ಟು ರೈತರು ಮಾತ್ರ ಮಣ್ಣಿನ ಪರೀಕ್ಷೆ ಮಾಡಸುವುದರೊಂದಿಗೆ ಮಣ್ಣಿನ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ. ಇನ್ನುಳಿದ ಶೇ. ೯೦ ರಷ್ಟು ಮಂದಿ ರೈತರು ಮಣ್ಣಿನ ಪರೀಕ್ಷೆ ಮಾಡಿಸದೇ ಕೆಲವೇ ಕೆಲ ಗೊಬ್ಬರಗಳನ್ನು ಬಳಸುವುದರಿಂದ ರೈತರಿಗೆ ಖರ್ಚು ಜಾಸ್ತಿಯಾಗುತ್ತದೆ ಹಾಗು ರೈತರು ನಿರೀಕ್ಷಿಸಿದಷ್ಟು ಉತ್ತಮ ಬೆಳೆಯೂ ಆಗುವುದಿಲ್ಲ.
ಇದನ್ನು ಮನಗಂಡ ಸರ್ಕಾರ ಇದೀಗ ಮಣ್ಣು ಆರೋಗ್ಯ ಅಭಿಯಾನದ ಹೆಸರಿನಲ್ಲಿ ರೈತರ ಜಮೀನಿನಿಂದ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ಪ್ರತಿಯೊಬ್ಬ ರೈತರಿಗೂ ಮಣ್ಣಿನ ಆರೋಗ್ಯದ ಕಾರ್ಡ್ ನ್ನು ತಲುಪಿಸುವ ಕೆಲಸವನ್ನು ಆರಂಬಿಸಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು ೬ ಲಕ್ಷ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಅಭಿಯಾನ ಎರಡು ವರ್ಷಗಳ ಕಾಲ ನಡೆಯುತ್ತಿದ್ದು ಪ್ರತಿಯೊಬ್ಬರಿಗೂ ಮಣ್ಣಿನ ಆರೋಗ್ಯದ ಕಾರ್ಡ್ ತಲುಪಿಸಲು ಸುಮಾರು ೩೦೦ ರಿಂದ ೪೦೦ ರೂಗಳ ಖರ್ಚು ಬರುತ್ತದೆ ಇದನ್ನೆಲ್ಲಾ ಸರ್ಕಾರವೇ ಭರಿಸುತ್ತದೆ. ಪ್ರತಿಯೊಬ್ಬ ರೈತರು ಸರ್ಕಾರ ನೀಡುವ ಮಣ್ಣಿನ ಆರೋಗ್ಯ ಕಾರ್ಡ್ ಬಳಸಿಕೊಂಡು ತಮ್ಮ ಭೂಮಿಯಲ್ಲಿ ಯಾವ ಅಂಶ ಜಾಸಿಯಿದೆ, ಯಾವುದರ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಜಮೀನಿಗೆ ಅಗತ್ಯವಿರುವ ಲಘು ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸಿಇಓ ಬಿ.ಬಿ.ಕಾವೇರಿ, ತಹಶೀಲ್ದಾರ್ ಮನೋರಮಾ, ಶಾಸಕ ಎಂ.ರಾಜಣ್ಣ, ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾಮುನಿರಾಜು, ಸದಸ್ಯ ಬಂಕ್ಮುನಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಮೀನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಮತ್ತಿತರರು ಹಾಜರಿದ್ದರು.

ಹೆತ್ತವಳನ್ನೆ ಕೊಂದ ಮಗ

0

ಸರಿಯಾದ ಸಮಯಕ್ಕೆ ಅಡುಗೆ ಮಾಡಿಲ್ಲವೆಂದು ಕುಡಿದ ಅಮಲಿನಲ್ಲಿದ್ದ ಮಗ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ದಾರುಣ ಘಟನೆ ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಮಗ ದೇವರಾಜ್(28) ನಿಂದಲೇ ಹತ್ಯೆಯಾದ ನತದೃಷ್ಟ ತಾಯಿ ಮುನಿರತ್ನಮ್ಮ(45). ಜೀವನೋಪಾಯಕ್ಕೆ ಮುನಿರತ್ನಮ್ಮ ಇತ್ತೀಚೆಗೆ ಹಸುವನ್ನು ಮಾರಿ ಬಂದ ಹಣದಿಂದ ಸಂಸಾರದ ದೋಣಿ ಸಾಗಿಸುತ್ತಿದ್ದಳು. ಆದರೆ ಕುಡಿತ ಚಟಕ್ಕೆ ದಾಸನಾಗಿದ್ದ ಮಗ ದೇವರಾಜ್ ಹಸು ಮಾರಿದ ಹಣವನ್ನು ನೀಡುವಂತೆ ಜಗಳ ಮಾಡಿದ್ದಾನೆನ್ನಲಾಗಿದೆ. ಭಾನುವಾರ ರಾತ್ರಿ ಕಂಠ ಫೂರ್ತಿ ಕುಡಿದು ಮನೆಗೆ ಬಂದ ದೇವರಾಜ್ ಊಟ ಬಡಿಸುವಂತೆ ತಾಯಿಗೆ ಹೇಳಿದಾಗ, ಅಡುಗೆ ಮಾಡಿಲ್ಲವೆಂದು ತಾಯಿ ಹೇಳಿದ್ದೇ ತಡ ಜಗಳಕ್ಕಿಳಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರಣಾಂತಿಕ ಹಲ್ಲೆಯಿಂದ ಗಂಭೀರ ಸ್ಥಿತಿಗೆ ಜಾರಿದ ಮುನಿರತ್ನಮ್ಮ ಇಹಲೋಕ ತ್ಯಜಿಸಿದ್ದಾಳೆಂದು ತಿಳಿದು ಬಂದಿದೆ. ಇನ್ನು ತಾಯಿ ಸತ್ತು ಎರಡು ದಿನ ಕಳೆದ್ರೂ ಯಾರಿಗೂ ವಿಷಯ ತಿಳಿಸದ ಮಗ ಹಾಗೂ ಕುಟುಂಬಸ್ಥರು ಮಂಗಳವಾರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು.
ಈ ವೇಳೆ ಮೃತ ಮುನಿರತ್ನಮ್ಮ ಅವರ ತವರು ಮನೆಯವರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಕ್ಕೆ ಭೇಟಿ ನೀಡಿದ ಪಿ.ಎಸ್.ಐ. ಪ್ರದೀಪ್ ಪೂಜಾರಿ ಆರೋಪಿಯನ್ನ ಬಂಧಿಸಿದ್ದಾರೆ. ಸಂಬಂಧಿಕರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾಡಿಗೆ ಆಧಾರಿತ ಕೃಷಿ ಉಪಕರಣಗಳ ಸೇವಾ ಕೇಂದ್ರ

0

ರೈತರನ್ನು ಬಹಳಷ್ಟು ಕಾಡುತ್ತಿರುವ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುವ ಸಲುವಾಗಿ ಸರ್ಕಾರ ಬಾಡಿಗೆ ಆಧಾರಿತ ಕೃಷಿ ಉಪಕರಣಗಳ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಹೋಬಳಿಗೊಂದರಂತೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದಲ್ಲಿ ಮಂಗಳವಾರ ಕೃಷಿ ಯಂತ್ರಧಾರೆ ಯೋಜನೆಯಡಿ ಸ್ಥಾಪಿಸಿರುವ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ದಿನೇ ದಿನೇ ರೈತರ ಖರ್ಚುಗಳು ಜಾಸ್ತಿಯಾಗಿ ಉಳಿತಾಯ ಕಡಿಮೆಯಾಗಿ ವ್ಯವಸಾಯ ಲಾಭದಾಯಕವಲ್ಲ ಎಂಬ ಉದ್ದೇಶದಿಂದ ವ್ಯವಸಾಯ ಮಾಡಲು ಬಹಳಷ್ಟು ಮಂದಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ರೈತರ ತಮ್ಮ ಖರ್ಚುಗಳನ್ನು ಕಡಿಮೆ ಮಾಡಿ ಇಳುವರಿ ಜಾಸ್ತಿ ಮಾಡಿದಾಗ ವ್ಯವಸಾಯ ಲಾಭದಾಯಕವಾಗಿ ಪರಿಣಮಿಸುತ್ತದೆ ಎಂದರು.
ಸಣ್ಣ, ಅತಿ ಸಣ್ಣ ರೈತರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವುದು ಕಷ್ಟ ಸಾಧ್ಯ ಹಾಗಾಗಿ ಆಯಾ ಪ್ರದೇಶಕ್ಕೆ ತಕ್ಕಂತೆ ಕೃಷಿ ಯಂತ್ರೋಪಕರಣಗಳನ್ನು ಸರಕಾರವೇ ಖರೀದಿಸಿ ಸೇವಾ ಕೇಂದ್ರಗಳ ಮೂಲಕ ರೈತರಿಗೆ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದೆ.
ವ್ಯವಸಾಯಕ್ಕೆ ಕೃಷಿ ಕಾರ್ಮಿಕರು ಸಕಾಲಕ್ಕೆ ಲಭ್ಯವಾಗದ ಕಾರಣ ಕೃಷಿಕರ ಕೊರತೆ ನೀಗಿಸುವ ಉದ್ದೇಶದಿಂದ ಸರ್ಕಾರ ಚಿಂತನೆ ನಡೆಸಿ ಕೃಷಿ ಉಪಕರಣಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸೇವಾ ಕೇಂದ್ರ ಸ್ಥಾಪಿಸಿದೆ. ಸೇವಾ ಕೇಂದ್ರಗಳಲ್ಲಿರುವ ಯಂತ್ರೋಪಕರಣಗಳನ್ನು ನ್ಯಾಯಯುತ ಬಾಡಿಗೆಯ ಮೂಲಕ ಪಡೆಯುವುದರೊಂದಿಗೆ ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಮುಂದುವೆರಯಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸಿಇಓ ಬಿ.ಬಿ.ಕಾವೇರಿ, ತಹಶೀಲ್ದಾರ್ ಮನೋರಮಾ, ಶಾಸಕ ಎಂ.ರಾಜಣ್ಣ, ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾಮುನಿರಾಜು, ಸದಸ್ಯ ಬಂಕ್ಮುನಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಮೀನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಮತ್ತಿತರರು ಹಾಜರಿದ್ದರು.

ಸಿ.ಬಿ.ಎಸ್‌.ಇ ಫಲಿತಾಂಶ

0

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10 ನೇ ತರಗತಿಯ ಫಲಿತಾಂಶ ಶನಿವಾರ ಪ್ರಕಟವಾಗಿದೆ. ನಗರದ ಡಾಲ್ಫಿನ್‌ ವಿದ್ಯಾಸಂಸ್ಥೆ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿದೆ. 16 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 4 ವಿದ್ಯಾರ್ಥಿಗಳು ಗ್ರೇಡ್ ಪಾಯಿಂಟ್ 10 ಪಡೆದಿದ್ದಾರೆ. 6 ವಿದ್ಯಾರ್ಥಿಗಳು 9 ರಿಂದ 9.8ರ ಗ್ರೇಡ್ ಪಾಯಿಂಟ್ ಪಡೆದಿದ್ದಾರೆ ಮತ್ತು 6 ವಿದ್ಯಾರ್ಥಿಗಳು 8 ರಿಂದ 8.8ರ ಗ್ರೇಡ್‌ ಪಾಯಿಂಟ್‌ ಪಡೆದಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ತಿಳಿಸಿದ್ದಾರೆ.
1. ಎಂ.ಸಂಪದ (10), 2. ಎ.ಅಶ್ವಿನಿ (10), 3. ಬಿ.ಎನ್‌.ಹರಿಣಿ (10), 4. ಎಂ.ದರ್ಶನ್‌ (10) 5. ಬಿ.ಎಂ.ಶರಣ್ಯ (9.8), 6. ಡಿ.ಜಯಂತ್‌ (9.8), 7. ಸಿ.ರೋಹನ್‌ರಾಜು (9.6), 8. ವಿ.ಶ್ರೀಹರಿ (9.4), 9. ಆರ್‌.ಉದಯ್‌ಸೂರ್ಯ (9.2), 10. ಕೆ.ವಿನಯ್‌ (9.2).

ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಲಭಿಸುತ್ತಿದೆ

0

ಪ್ರತಿಯೊಬ್ಬ ವಿದ್ಯಾರ್ಥಿಗೂ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸುವುದರೊಂದಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜು ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ೨೦೧೬-–೧೭ ನೇ ಶೈಕ್ಷಣಿಕ ಸಾಲಿನ ಶಾಲೆ ಪ್ರಾರಂಭೊತ್ಸವ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮದ ಸರ್ಕಾರಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರೂ ಶ್ರಮಿಸಬೇಕು ಎಂದರು.
ಸರ್ಕಾರ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ನೀಡಬೇಕೆಂಬ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಕಾನ್ವೆಂಟ್‌ಗಳ ಮೊರೆ ಹೋಗುವುದನ್ನು ಪೋಷಕರು ಬಿಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೇ ಸಾಲದು ಬದಲಿಗೆ ಮಗುವಿನ ಶಿಕ್ಷಣದ ಬಗ್ಗೆ ಪೋಷಕರು ನಿಗಾವಹಿಸಿ ಆಗಾಗ ಶಾಲೆಗೆ ಭೇಟಿ ನೀಡಿ ತಮ್ಮ ಮಗುವಿನ ಬಗ್ಗೆ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರೆ ಮಗು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ದಾಸಪ್ಪ, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕ ಚಾಂದ್‌ಪಾಷ, ಶಿಕ್ಷಕಿ ಭಾರತಿ, ಗ್ರಾಮಸ್ಥ ಹನುಮಂತರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.