Home Blog Page 465

ಶಿಡ್ಲಘಟ್ಟಕ್ಕೆ ಬರುವವರನ್ನು ಸ್ವಾಗತಿಸುವ ತ್ಯಾಜ್ಯದ ರಾಶಿ

0

ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿಯ ರಸ್ತೆಯ ಪಕ್ಕದ ಕಾಲುವೆಗಳಲ್ಲಿ ಕಸದ ರಾಶಿ ತುಂಬಿಹೋಗಿದ್ದು, ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಅಲ್ಲೆ ನಿಂತು ಗಬ್ಬು ನಾರುತ್ತಿದೆ. ಇಂತಹ ಅವ್ಯವಸ್ಥೆ ಸೃಷ್ಟಿಯಾಗಲು ಸ್ಥಳೀಯ ನಗರಸಭೆಯ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ಬಸ್ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಬಡಾವಣಿಗಳಲ್ಲಿನ ನೀರು ಇದೇ ಕಾಲುವೆ ಮೂಲಕ ಹರಿದು ಹೋಗಬೇಕಾಗಿದೆ. ಆದರೆ ಈ ಕಾಲುವೆಗಳನ್ನು ನಗರಸಭೆಯವರು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಗರದ ವಿವಿಧ ಅಂಗಡಿಗಳವರು, ಹೋಟಲ್ಗಳವರು ಪ್ಲಾಸ್ಟಿಕ್ ಕಸವನ್ನು ಹಾಗೂ ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿ ಹಂದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಂಕ್ರಾಮಿಕ ರೋಗಗಳ ಭೀತಿ: ನಗರದ ವಿವಿಧ ಭಾಗದಲ್ಲಿ ದೊಡ್ಡ ಚರಂಡಿಗಳಲ್ಲಿ ಈ ರೀತಿಯಾಗಿ ಕಸ ಸಂಗ್ರಹಣೆಯಾಗಿ ಗಬ್ಬು ನಾರುತ್ತಿರುವುದರಿಂದ ನಗರ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸೊಳ್ಳೆ ನೋಣಗಳ ಕಾಟ ಜಾಸ್ತಿಯಾಗಿದೆ, ಅದರಲ್ಲೂ ಮಳೆಗಾಲದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಣ್ಣುಮುಚ್ಚಿ ಕುಳಿತ ನಗರಸಭೆ: ನಗರದ ಪ್ರವೇಶದಲ್ಲೇ ಮುಖ್ಯ ರಸ್ತೆಗಳ ಪಕ್ಕದಲ್ಲಿ ಹಾದು ಹೋಗಿರುವ ಚರಂಡಿಗಳಲ್ಲಿ ಕಸ ತುಂಬಿ ತುಳುಕುತ್ತಿದ್ದರೂ ಕಂಡು ಕಾಣದಂತೆ ನಗರಸಭೆ ವರ್ತಿಸುತ್ತಿದೆ. ಮಳೆ ಬಂದರೆ ಚರಂಡಿಯಲ್ಲಿನ ತ್ಯಾಜ್ಯ ಸಮೇತ ಮಳೆ ನೀರು ಮನೆಗೆ ನುಗ್ಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ಬಗ್ಗೆ ನಗರಸಭೆಗೆ ಹಲವು ಭಾರಿ ಮನವಿ ಮಾಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಈ ಭಾಗದ ನಿವಾಸಿಗರು ತಮ್ಮ ಆಳಲು ತೋಡಿಕೊಂಡಿದ್ದಾರೆ.ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಚರಂಡಿಗಳಲ್ಲಿನ ಕಸವನ್ನು ವಿಲೇವಾರಿ ಮಾಡಿ ಸೂಕ್ತ ನಿರ್ವಹಣೆ ಮಾಡಬೇಕಾಗಿದೆ.

ನೀರಿಗಾಗಿ ಪರದಾಟ

0

ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ನೀರನ್ನು ಹಿಡಿದುಕೊಳ್ಳಲು ಮಹಿಳೆಯರು ಬಿಂದಿಗೆಗಳೊಂದಿಗೆ ಸಾಲಾಗಿ ನಿಂತಿರುವ ದೃಶ್ಯ ಸಮಸ್ಯೆಯ ಚಿತ್ರಣದಂತಿದೆ.

ಎಸ್.ಎಸ್.ಎಲ್.ಸಿ ಫಲಿತಾಂಶ

0

ಶಿಡ್ಲಘಟ್ಟದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ ಎಸ್.ಕೆ.ಸುರಭಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 569 (91.04%) ಅಂಕಗಳನ್ನು ಗಳಿಸಿದ್ದಾಳೆ.

ರೇಷ್ಮೆ ಗೂಡಿನ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಭೇಟಿ

0

ಇ–ಹರಾಜು ಪದ್ಧತಿಯಲ್ಲಿ ಸಾಕಷ್ಟು ಅನುಕೂಲಗಳಿದ್ದು ಅದನ್ನೇ ಮುಂದುವರಿಸಲಾಗುತ್ತದೆ. ಕೆಲವು ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಸರಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪದ್ಧತಿಯಲ್ಲಿ ಕೆಲವು ತಾಂತ್ರಿಕ ದೋಷದಿಂದಾಗಿ ಸೋಮವಾರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೆಲವರು ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಎಂ.ರಾಜಣ್ಣ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ರೈತರು, ರೀಲರುಗಳು ಮತ್ತು ಅಧಿಕಾರಿಗಳೊಂದಿಗೆ ಇ–ಹರಾಜು ಪದ್ಧತಿಯ ಕುರಿತಂತೆ ಚರ್ಚಿಸಿ ಮಾಹಿತಿಯನ್ನು ಪಡೆದಿರುವೆ. ರೈತರು ಈ ಹಿಂದೆ ರೇಷ್ಮೆ ಗೂಡನ್ನು ತುಂಬಿಸಲು ಜಾಲರಿಗಳನ್ನು ಮುಂಚಿತವಾಗಿಯೇ ಹಣ ನೀಡಿ ಹಿಡಿದಿಡಬೇಕಿತ್ತು. ಈಗ ಆ ಕಷ್ಟ ತಪ್ಪಿದೆ. ಉತ್ತಮ ಗುಣಮಟ್ಟದ ರೇಷ್ಮೆ ಗೂಡಿಗೆ ಸೂಕ್ತವಾದ ಬೆಲೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ನಿಜವಾದ ರೀಲರುಗಳು ಮಾತ್ರ ಇ–ಹರಾಜಿನಲ್ಲಿ ಭಾಗವಹಿಸಬಹುದಾಗಿದ್ದು, ಸರ್ಕಾರದ ಸಹಾಯಧನ ಪೋಲಾಗುವುದಿಲ್ಲವೆಂದು ರೀಲರುಗಳು ಹೇಳಿದ್ದಾರೆ. ಅಧಿಕಾರಿಗಳಿಗೆ ತಾಂತ್ರಿಕ ಲೋಪದೋಷಗಳು ಸರಿಪಡಿಸಿಕೊಂಡು ಕಾರ್ಯನಿರ್ವಹಿಸಲು ಸೂಚಿಸಿದ್ದೇವೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಏಷ್ಯಾದಲ್ಲೇ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎಂಬ ಖ್ಯಾತಿಯನ್ನು ಪಡೆದಿರುವ ನಮ್ಮ ರೇಷ್ಮೆ ಗೂಡಿನ ಮಾರುಕಟ್ಟೆಯೂ ತಾಂತ್ರಿಕ ಯುಗದಲ್ಲಿ ಇ–ಹರಾಜನ್ನು ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದರಿಂದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ಭ್ರಷ್ಟಾಚಾರ ತಡೆಯಬಹುದು. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದರು.
ರೈತರಾದ ಅಬ್ಲೂಡು ಆರ್.ದೇವರಾಜ್, ರೀಲರುಗಳಾದ ಎ.ಆರ್.ಅಬ್ದುಲ್ ಅಜೀಜ್, ರಾಮಕೃಷ್ಣಪ್ಪ, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮತ್ತಿತರರು ಹಾಜರಿದ್ದರು.

ನಗುವ ಗೊಂಬೆ ಮಾರುವ ಬಾಲಕನ ಮೊಗದಲ್ಲಿ ನಗುವಿಲ್ಲ

0

ಶಿಡ್ಲಘಟ್ಟದ ಟಿ.ಬಿ.ರಸ್ತೆಯಲ್ಲಿ ಸೋಮವಾರ ನಗುವ ಗೊಂಬೆಗಳನ್ನು ಕೋಲಿಗೆ ಕಟ್ಟಿಕೊಂಡು ತಳ್ಳುವ ಪುಟ್ಟ ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಾಲಕ ಕ್ಯಾಮೆರಾ ಕಣ್ಣಿಗೆ ಸಿಕ್ಕ.

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

0

ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದದ್ದು ಹಿರಿಯರ ಕರ್ತವ್ಯವಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ದೇಶದಪೇಟೆಯ ವಾಸಿ ಎಂಟನೇ ತರಗತಿಯ ಮನೋಜ್ ಕುಮಾರ್ ಬಡಾವಣೆಯ ಆಸಕ್ತ ಮಕ್ಕಳಿಗೆ ಉಚಿತವಾಗಿ ನೃತ್ಯ ಶಿಕ್ಷಣವನ್ನು ನೀಡಿದ್ದು, ಆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲಿಟಲ್ ಸ್ಟಾರ್ಸ್ ಜ್ಯೂನಿಯರ್ ಡ್ಯಾನ್ಸ್ ಶಾಲೆಯ ಮಕ್ಕಳ ನೃತ್ಯ
ಲಿಟಲ್ ಸ್ಟಾರ್ಸ್ ಜ್ಯೂನಿಯರ್ ಡ್ಯಾನ್ಸ್ ಶಾಲೆಯ ಮಕ್ಕಳ ನೃತ್ಯ

ಪೋಷಕರು ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು. ಅವರ ಆಸಕ್ತಿ ಕ್ಷೇತ್ರಗಳನ್ನು ಗುರುತಿಸಿ ಅದರಲ್ಲಿ ಮುಂದುವರಿಯಲು ಸಹಕಾರಿಯಾಗಬೇಕು. ತನಗೆ ನೃತ್ಯದ ಆಸಕ್ತಿಯಿದ್ದು, ಇತರೇ ಮಕ್ಕಳಿಗೂ ಕಲಿಸುವ ಮನೋಜ್ ಕುಮಾರ್ ಅಭಿನಂದನೀಯ ಎಂದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಿಟಲ್ ಸ್ಟಾರ್ಸ್ ಜ್ಯೂನಿಯರ್ ಡ್ಯಾನ್ಸ್ ಶಾಲೆಯ ಮಕ್ಕಳು ಜಾನಪದ, ದೇಶಭಕ್ತಿ, ಸಿನೆಮಾ ಮತ್ತು ದೇವರ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಯೋಗದ ನೃತ್ಯ ಎಲ್ಲರ ಮನಸೆಳೆಯಿತು.
ಕ್ರೀಡಾಪಟು ಮುನಿರಾಜು, ಎಂ.ಶ್ರೀನಿವಾಸ್, ಆರ್.ಆರ್.ಸುರೇಶ್, ನಗರಸಭೆ ಸದಸ್ಯ ಕೇಶವಮೂರ್ತಿ, ಬಂಗಾರುಸ್ವಾಮಿ, ನಗರ್ತ ಮಂಡಳಿಯ ಅಧ್ಯಕ್ಷ ಕೆ.ಆರ್.ಶಿವಶಂಕರ್, ವಿನಾಯಕ, ರಾಜಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ

0

ಫ್ಲೋರೈಡ್ ಯುಕ್ತ ನೀರು ಇರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿ, ಜನರಿಗೆ ಶುದ್ಧಕುಡಿಯುವ ನೀರು ಒದಗಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಸೋಮವಾರ ಭೂ ಸೇನಾ ನಿಗಮದಿಂದ ಸುಮಾರು ೭.೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಈಗಾಗಲೇ ತಾಲ್ಲೂಕಿನಲ್ಲಿ ಸುಮಾರು ೧೬೩ ಹಳ್ಳಿಗಳಲ್ಲಿನ ನೀರು ಜನರಿಗೆ ಕುಡಿಯಲು ಯೋಗ್ಯವಾಗಿಲ್ಲದ ಕಾರಣದಿಂದಾಗಿ ಪ್ರಾರಂಭಿಕ ಹಂತದಲ್ಲಿ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿತ್ತು, ಈಗ ಯಾವ ಹಳ್ಳಿಯಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲವೋ ಅಂತಹ ಗ್ರಾಮಕ್ಕೆ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿಕೊಡಲಾಗುತ್ತದೆ. ಜನರೂ ಕೂಡಾ ಒಂದೊಂದು ಹನಿ ನೀರನ್ನು ಮಿತವಾಗಿ ಸದ್ಬಳಕೆ ಮಾಡಿಕೊಂಡು ನೀರು ಪೋಲಾಗುವುದನ್ನು ತಪ್ಪಿಸಬೇಕು. ಹಳ್ಳಿಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಜಂಗಮಕೋಟೆಯಿಂದ ಶಿಡ್ಲಘಟ್ಟದ ವರೆಗೆ ಸಂಚಾರ ಮಾಡುವಂತಹ ಮುಖ್ಯ ರಸ್ತೆಯನ್ನು ಸುಮಾರು ೫.೫.ಮೀಟರ್ ನಷ್ಟು ಅಗಲ ಮಾಡಿ, ಡಾಂಬರೀಕರಣ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ನೀರಿನ ಮಿತಬಳಕೆಯ ಬಗ್ಗೆ ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಬೇಕು. ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳೊಂದಿಗೆ ಸಹಕಾರ ನೀಡಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯರಾದ ರಾಜಶೇಖರ್, ಚಂದ್ರಕಲಾಬೈರೇಗೌಡ, ನಾಗಮಂಗಲ ಗ್ರಾಮಪಂಚಾಯತಿ ಅಧ್ಯಕ್ಷೆ ರೂಪಾಶಿವಕುಮಾರ್, ತಾದೂರುರಮೇಶ್, ಪಿ.ಡಿ.ಓ.ಗೋಪಾಲಕೃಷ್ಣ ಗೋಪಿನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಇ–ಹರಾಜಿನ ಲೋಪದೋಷಕ್ಕೆ ಕುಪಿತರಾದ ರೀಲರುಗಳು

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ಇ–ಹರಾಜಿನ ಸಮಯದಲ್ಲಿ ವೈಫೈ ಆನ್ ಮತ್ತು ಆಫ್ ಮಾಡುವ ಸಮಯದ ವ್ಯತ್ಯಯದಿಂದ ಕುಪಿತಗೊಂಡ ಕೆಲವು ರೀಲರುಗಳು ಮತ್ತು ರೈತರು ಸರ್ವರ್ ಕೋಣೆಯ ಬಳಿ ಜಮಾಯಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ರೇಷ್ಮೆ ಮಾರುಕಟ್ಟೆಯಲ್ಲಿ ಮೊದಲ ಹರಾಜು 10.30ಕ್ಕೆ ಪ್ರಾರಂಭಿಸಿ 11 ಗಂಟೆಯವರೆಗೂ ನಡೆಯುತ್ತದೆ. ಮೊದಲ ಹರಾಜಿನಲ್ಲಿ ಬೆಲೆಯು ರೈತರಿಗೆ ಒಪ್ಪಿಗೆ ಆಗದಿದ್ದಲ್ಲಿ ಎರಡನೇ ಹರಾಜು 11.30 ರಿಂದ 11.50 ರವರೆಗೂ ನಡೆಯುತ್ತದೆ. ಸೋಮವಾರ ಕೆಲವರ ಮೊಬೈಲ್ಗಳಲ್ಲಿ ನೆಟ್ವರ್ಕ್ ಮಂದಗತಿಯಲ್ಲಿದ್ದುದರಿಂದ ಕೆಲ ರೀಲರುಗಳು ಕುಪಿತಗೊಂಡು ಸರ್ವರ್ ಕೋಣೆಯ ಬಳಿ ತೆರಳಿ ಗಲಾಟೆ ಪ್ರಾರಂಭಿಸಿದರು. ರೈತರು ತಮ್ಮ ರೇಷ್ಮೆ ಗೂಡಿಗೆ ಇದರಿಂದ ಬೆಲೆ ಕಡಿಮೆಯಾಗಬಹುದೆಂಬ ಆತಂಕದಿಂದ ಅವರಲ್ಲೂ ಕೆಲವರು ಜೊತೆಗೂಡಿದರು. ಉಪನಿರ್ದೇಶಕ ರತ್ನಯ್ಯಶೆಟ್ಟಿ ರೈತರು ಮತ್ತು ರೀಲರುಗಳಿಗೆ ತೊಂದರೆಯಾಯಿತೆಂದು ಹರಾಜಿನ ಸಮಯವನ್ನು ಹತ್ತು ನಿಮಿಷಗಳ ಕಾಲ ಮುಂದುವರೆಸಿದರು.
ಹರಾಜಿನ ಸಮಯವನ್ನು ಹತ್ತು ನಿಮಿಷ ಹೆಚ್ಚಿಗೆ ಮಾಡಿದ್ದಕ್ಕೆ ಕೆಲ ರೀಲರುಗಳು ಬಂದು ನಮಗೆ ಇದರಿಂದ ತೊಂದರೆಯಾಗುತ್ತದೆ. ಈಗಾಗಲೇ ರೇಷ್ಮೆ ಗೂಡಿನ ಬೆಲೆ ಏರಿ ನಮಗೆ ಕಚ್ಛಾ ರೇಷ್ಮೆಯ ಉತ್ಪಾದನಾ ಬೆಲೆ ಹೆಚ್ಚಿದೆ. ನೀವು ಏಕಾಏಕಿ ನಿರ್ಧಾರ ತೆಗೆದುಕೊಂಡು ನಮಗೆ ಅನ್ಯಾಯ ಮಾಡುತ್ತಿರುವಿರಿ. ಹಳೆಯ ಹರಾಜು ಪದ್ಧತಿಯಲ್ಲೇ ಗೂಡಿನ ಹರಾಜು ಮಾಡಿ ಎಂದರು.
ರೇಷ್ಮೆ ಗೂಡಿನ ಮಾರುಕಟ್ಟೆಗೆ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ಮೊಯ್ನುದ್ದೀನ್, ಲಕ್ಷ್ಮೀಪತಿರೆಡ್ಡಿ, ಪ್ರಭಾಕರ್ ಆಗಮಿಸಿ, ಇ–ಹರಾಜನ್ನು ನಡೆಸಲು ಆಗುವ ತೊಂದರೆಗಳನ್ನು ನಿವಾರಿಸಲಾಗುವುದು. ರೈತರು ಬೆಲೆ ಕಡಿಮೆ ಅನಿಸಿದರೆ ಹರಾಜಿಗೆ ಒಪ್ಪಿಗೆ ಸೂಚಿಸಬೇಡಿ. ರೀಲರುಗಳೇ ಹರಾಜನ್ನು ಕೂಗುವುದರಿಂದ ಗೂಡಿನ ಬೆಲೆ ಹೆಚ್ಚಳ ಎನ್ನುವುದು ಸರಿಯಲ್ಲ. ನಿಮಗೆ ಗಿಟ್ಟುವ ಬೆಲೆಗೆ ನೀವು ಹರಾಜಿನಲ್ಲಿ ಬೀಟ್ ಕೊಡಿ. ಈ ದಿನ ಮಾರುಕಟ್ಟೆಯಲ್ಲಿ 850 ಲಾಟ್ ಬಂದ ಕಾರಣ ಹಾಗೂ ರೀಲರುಗಳು ಸರ್ವರ್ ಕೋಣೆಯ ಬಳಿ ಹರಾಜಿನ ಸಮಯದಲ್ಲಿ ಸೇರಿದ್ದರಿಂದ ಬೆಲೆ ಕಡಿಮೆಯಾಗಿರಬಹುದು. ಹೊಸ ಪದ್ಧತಿಗೆ ಎಲ್ಲರೂ ಒಗ್ಗಿಕೊಳ್ಳಬೇಕು. ಇ–ಹರಾಜಿನಲ್ಲಿ ನಿಜವಾದ ಲೈಸೆನ್ಸ್ ಹೊಂದಿರುವ ರೀಲರುಗಳು ಮಾತ್ರ ಭಾಗವಹಿಸಲು ಸಾಧ್ಯ ಮತ್ತು ಅವರುಗಳು ಮಾತ್ರವೇ ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ ಪಡೆಯಲು ಸಾಧ್ಯ. ಸಾಕಷ್ಟು ಹಣದ ದುರುಪಯೋಗ ಇದರಿಂದ ತಡೆಯಲು ಸಾಧ್ಯ ಎಂದು ರೀಲರುಗಳು ಮತ್ತು ರೈತರಿಗೆ ಮನವರಿಕೆ ಮಾಡಿಕೊಟ್ಟು ಕಳುಹಿಸಿದರು.

ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ

0

ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೆಲವು ಪ್ರಭಾವಿಗಳು ಕಂಟಕಪ್ರಾಯರಾಗಿದ್ದು, ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡಿರುವ ಪಂಚಾಯತಿಯಲ್ಲಿ ಜಲಗಾರನ್ನು ತೆಗೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಕುಂದಲಗುರ್ಕಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎನ್.ಆಂಜಿನಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಂಚಾಯತಿ ಕೊಳವೆ ಬಾವಿಯ ಪೈಪ್ ಲೈನ್ಗೆ ಸಂಪರ್ಕ ಹಾಕಿಕೊಂಡಿರುವ ಸೊಣ್ಣೇಗೌಡ ಎಂಬುವರ ವಿಚಾರದಲ್ಲಿ ಗ್ರಾಮ ಪಂಚಾಯತಿಯ ಸಭೆಯಲ್ಲಿ ಚರ್ಚಿಸಿ 5 ಸಾವಿರ ರೂಗಳ ದಂಡ ವಿಧಿಸಲಾಗಿತ್ತು. ಜಲಗಾರ ಪ್ರಕಾಶ್ ಅವರಿಗೆ ಈ ರೀತಿಯ ಘಟನೆ ಮರುಕಳಿಸದಂತೆ ತಾಕೀತು ಮಾಡಲಾಗಿತ್ತು. ಆದರೆ ವೈಯಕ್ತಿಯ ಕಾರಣಗಳನ್ನಿಟ್ಟುಕೊಂಡು ಕೆಲವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ದಿಗ್ಭಂದನೆ ಹಾಕಿ ಜಲಗಾರನನ್ನು ಅಮಾನತ್ತು ಗೊಳಿಸಲು ಒತ್ತಡ ಹೇರಿದ್ದಾರೆ. ಜಲಗಾರ ಕೆಲಸ ನಿರ್ವಹಿಸದಂತೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ನಾವು ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದ್ದೇವೆ.
ಕಳೆದ ಅವಧಿಯಲ್ಲಿ ಕಳಪೆ ಗುಣಮಟ್ಟದ ಮೋಟರ್ ಪಂಪ್ ಅಳವಡಿಸುವ ಮೂಲಕ ಪಂಚಾಯತಿಯಲ್ಲಿ ನೀರು ಸರಬರಾಜು ಸ್ಥಗಿತಗೊಂಡಿತ್ತು. ಸುಮಾರು 8 ರಿಂದ 10 ಲಕ್ಷ ರೂಗಳಷ್ಟು ಟ್ಯಾಂಕರ್ ನೀರಿಗೆಂದು ಖರ್ಚು ತೋರಿಸಿ ಅವ್ಯವಹಾರ ನಡೆಸಿದ್ದಾರೆ. ನಮ್ಮ ಅವಧಿಯಲ್ಲಿ ಗುಣಮಟ್ಟದ ಮೋಟರ್ ಪಂಪ್ ಅಳವಡಿಸಿದೆವು. ಈಗ ನಮ್ಮಲ್ಲಿ ನೀರಿನ ಸಮಸ್ಯೆಯೇ ಇಲ್ಲ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡುವ ಮೂಲಕ ಕೆಲ ಮುಖಂಡರು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಕೆ.ಎಂ.ಅಂಬರೀಷ, ಮಾಜಿ ಸದಸ್ಯರಾದ ಮುನಿರಾಜು, ಜಿ.ಟಿ.ನಾರಾಯಣಸ್ವಾಮಿ, ಕೆ.ಮುನಿಯಪ್ಪ, ಪ್ರಸನ್ನ, ಗಂಗಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.

ಕೃಷಿಕ ಸಂಬಂಧಗಳಿಗೆ ಹೊಸ ಪರಿಭಾಷೆಯ ಅಗತ್ಯ

0

ಸಾಗರಕ್ಕೆ ಹತ್ತಿರದ ಹಳ್ಳಿಯೊಂದರಿಂದ ಯುವಕನೊಬ್ಬ ಪ್ರತಿದಿನ ಪೇಟೆಗೆ ಬರುತ್ತಾನೆ. ಆದರೆ ಆತನ ಸಂಬಳ ಊಟ ಓಡಾಟಕ್ಕೆ, ಖರ್ಚಿಗೆ ಸಾಲುತ್ತಿಲ್ಲ. ಮನೆಯಲ್ಲಿ ಇರುವವ ಅವನೊಬ್ಬನೇ. ಅವರಿಗೆ ವಿಸ್ತಾರವಾದ ಹುಲ್ಲು ಬೆಳೆವ ಭೂಮಿ ಇದೆ. ಆದರೆ ಜಾನುವಾರನ್ನು ಬ್ಯಾಣಕ್ಕೆ ಒಯ್ಯುವವರಿಲ್ಲದೆ ಬೇರೆಯವರಿಂದ ಹುಲ್ಲು ಕೊಳ್ಳುತ್ತಾರೆ. ಸಾಕಷ್ಟು ಅಡಿಕೆ ತೋಟವಿದೆ. ಅದಕ್ಕೂ ಮುಖ್ಯವಾಗಿ ಈ ಯುವಕನಿಗೆ ಕೃಷಿಯಲ್ಲಿ ಅಪರಿಮಿತ ಆಸಕ್ತಿ ಇದೆ. ಹೊಸ ಹೊಸ ಯೋಜನೆ ಯೋಚನೆಗಳು ಕಾರ್ಯಗತವಾಗಲು ಕಾಯುತ್ತಿವೆ. ಈ ಕನಸುಗಳು ಮತ್ತು ಯುವಕನ ಮಧ್ಯೆ ವಾಸ್ತವವಿದೆ. ವಾಸ್ತವದಿಂದಾಗಿಯೇ ಆತ ದಿನಾ ಪೇಟೆಗೆ ಬರುವುದು, ಅವನು ಮತ್ತು ಕನಸುಗಳ ಮಧ್ಯದಲ್ಲಿರುವ ವಾಸ್ತವ ಬೇರ್ಯಾರೂ ಇಲ್ಲ. ನಂಬಿ, ಇರುವುದು ಅವನಪ್ಪ!
ಮಗ ತಮ್ಮ ಮನೆಯ ಕೃಷಿ ಕಾರ್ಯಗಳನ್ನು ನೋಡಿಕೊಳ್ಳಬೇಕೆಂಬ ಬಯಕೆಯೇನೋ ತಂದೆಗಿದೆ. ಜೊತೆಗೆ ಮಗನಿಗೆ ಪೂರ್ಣ ಜವಾಬ್ದಾರಿ ವಹಿಸಿದರೆ ಇಲ್ಲಸಲ್ಲದು ಮಾಡಿ ಅನಾಹುತ ಸೃಷ್ಟಿಸಿಯಾನೆಂಬ ಭಯ ಈ ಸಂಪ್ರದಾಯವಾದಿಗೆ. ಹುಡುಗು ಮುಂಡೇದು ಎಂಬ ಉದ್ಗಾರ ಅವನ ರಾಮಜಪ. ಹಿನ್ನೆಲೆ ಹೀಗಿರುವಾಗ ಮಗ ಕೃಷಿಯಲ್ಲಿ ಪೂರ್ಣ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಅಪ್ಪ ತನ್ನನ್ನು ಸಗಣಿ ತೆಗೆಯುವ, ಅಡಿಕೆ ಆರಿಸುವ ಆಳಾಗಷ್ಟೇ ಉಪಯೋಗಿಸುತ್ತಿದ್ದಾನೆಂದುಕೊಂಡ. ಅವನ ಎಷ್ಟೋ ಸಲಹೆಗಳು ಅಳವಡಿಸಲು ಯೋಗ್ಯವಾಗಿದ್ದರೂ ಅಪ್ಪಯ್ಯ ನಿರ್ಲಕ್ಷಿಸಿದ. ಸ್ವಾಭಿಮಾನ ಹತೋಟಿಯ ಮಿತಿ ದಾಟಿದಾಗ ಸಣ್ಣದೋ ದೊಡ್ಡದೋ ಉದ್ಯೋಗ ಹಿಡಿದ. ತುಲನೆ ಮಾಡಿದಾಗ ಕೃಷಿಯಲ್ಲಿ ಮಹತ್ವದ್ದನ್ನು ಸಾಧಿಸಬೇಕೆಂದಿದ್ದ ಮಗ, ಮಗನನ್ನು ತನ್ನ ಜವಾಬ್ದಾರಿಗಳ ಉತ್ತರಾಧಿಕಾರಿಯೆಂದುಕೊಂಡಿದ್ದ ತಂದೆ ಇಬ್ಬರೂ ಸೋತಿದ್ದುದು ಕಾಣುತ್ತದೆ. ಕ್ಷಣಿಕ ಲಾಭ ಬೇರೆಯವರಿಗೆ, ದೂರಗಾಮಿ ಪರಿಣಾಮ ಸಂಬಂಧದ ಮೇಲಾಗುತ್ತದೆ. ಸಂಬಂಧ ಈ ಹಂತದಲ್ಲಿ ಹದಗೆಡುವುದರಿಂದ ಮುಂದೆ ಎಂದೋ ಬೆಸುಗೆ ಹಾಕಬಹುದಾದರೂ ಅದು ಪರಿಪೂರ್ಣ ಅಲ್ಲ. ಮೊದಲಿನ ಸ್ಥಿತಿಗೆ ಮರುಳುವುದಿಲ್ಲ. ಇದು ಉದಾಹರಣೆಯಲ್ಲ. ನಮ್ಮ ಸುತ್ತಲಿನ ಕೃಷಿ ಕುಟುಂಬಗಳಲ್ಲಿ ವ್ಯಾಪಿಸಿರುವ ವ್ಯಾಧಿ ಪರಿಹರಿಸಬೇಕಾದ ಜವಾಬ್ದಾರಿ, ಸಾಮಥ್ರ್ಯಗಳೆರಡು ಇರುವುದು ಪೋಷಕರಲ್ಲಿ. ಅವರದನ್ನು ಅರಿಯುವರೇ?
ಯಜಮಾನ ವರ್ಗದವರಲ್ಲಿ ಇನ್ನೊಂದು ಭಾವನೆಯಿದೆ. ತಮ್ಮಷ್ಟು ಉತ್ತಮವಾಗಿ ಮುಂದಿನ ಪೀಳಿಗೆಯವರು ಕಸುಬನ್ನು ಮುಂದುವರಿಸಲಾರರು. ತಾವು ಗಟ್ಟಿಯಾಗಿರುವವರೆಗೆ ಅವರು ತಮ್ಮನ್ನು ಗಮನಿಸುವುದರಿಂದ ಕಲಿತುಕೊಳ್ಳಲಿ ಎಂದುಕೊಳ್ಳುತ್ತಾರೆ. ಗಮನಿಸುವಾಗ ತಮ್ಮ ತಪ್ಪನ್ನು ಎತ್ತಿ ತೋರಿಸಿದರೆ ಸಿಟ್ಟುಕೊಳ್ಳುತ್ತಾರೆ. ಕೃಷಿಯಲ್ಲಿ ಕಲಿತು ಮುಗಿಯಿತೆನ್ನುವ ಸಮಾರೋಪ ಇಲ್ಲ. ಹೊಸ ಸಮಸ್ಯೆಗಳು, ಪರ್ಯಾಯ ಪರಿಹಾರಗಳು ತುಂಬಿ ತುಳುಕುವ ಕೃಷಿ ಕ್ಷೇತ್ರ ಕೃಷಿಕನಿಗೆ ಪ್ರತಿದಿನ ಸವಾಲು. ತಮಗಿಂತ ಸಣ್ಣವರ ಮಾತು ಸ್ವೀಕರಾರ್ಹ ಆಗಿರಬಹುದು. ಈ ಸ್ವೀಕರಿಸುವಿಕೆ ಕಿರಿಯರಲ್ಲೂ ಆತ್ಮವಿಶ್ವಾಸ ಬೆಳೆಸಬಲ್ಲದು.
ಸಂಸಾರ ನಿರ್ವಹಿಸುವವರಿಗೆ ದುಡ್ಡಿನ ಮಹತ್ವ ತಿಳಿದಿರುತ್ತದೆ. ಅದರ ಸದ್ವಿನಿಯೋಗದ ದಾರಿಗಳ ಪರಿಚಯವಿರುತ್ತದೆ. ಅದರಲ್ಲಿ ಮಗ ಹಣ ನಿಯೋಜಿಸಲು ಹೊಸ ದಾರಿಯೊಂದನ್ನು ಸೂಚಿಸಿದಾಗ ಕೃಷಿಗೆ ಅದು ಬೇಕಿದ್ದರೂ-ತಿರಸ್ಕರಿಸುವ ಮನೋಧರ್ಮ ಕಾಣಿಸುತ್ತದೆ. ಒಂದು ವೇಳೆ ಚಿಕ್ಕ ಪ್ರಮಾಣದ ಹಣ ಅಪಮೌಲ್ಯಗೊಳ್ಳುವ ಸಂದರ್ಭ ಇದ್ದರೂ ಹಿರಿಯರು ಅದನ್ನು ಸಹಿಸಿ ಕಿರಿಯರನ್ನು ಪ್ರೋತ್ಸಾಹಿಸಬೇಕು. ಆ ಸಂದರ್ಭದ ವಿಫಲತೆ ಕಿರಿಯರಿಗೆ ಮುಂದಿನ ಯೋಜನೆಗಳಿಗೆ ಇನ್ನಷ್ಟು ಯೋಚಿಸಿ ಮುಂದಿಡುವ ಎಚ್ಚರಿಕೆ ನೀಡುತ್ತದೆ. ಅವರು ಮುಂದೆಂದೂ ತಮ್ಮ ಯೋಜನೆ ಸೋಲದಂತೆ ಕಟ್ಟುನಿಟ್ಟಾಗಿ ನಿರ್ವಹಿಸುತ್ತಾರೆ. ಕೃಷಿ ಸರಿಯಾದ ಹಾದಿಯಲ್ಲಿ ಸಾಗುತ್ತದೆ.
ಸಮಸ್ಯೆಗೆ ಇದೊಂದೇ ಪಾಶ್ರ್ವವಲ್ಲ. ಉಳಿದ ಮಜಲುಗಳನ್ನು ತಿಳಿಯಲು ಈ ಸಂಸಾರವನ್ನು ಗಮನಿಸಿ. ಮಗ ಕೃಷಿಯಲ್ಲೇ ತನ್ನ ಅಭಿವೃದ್ಧಿ ಅದೇ ಪರಮಧ್ಯೇಯವೆಂದು ಓದನ್ನು ಅರ್ಧಕ್ಕೇ ಕೊನೆಗಾಣಿಸಿ ಬಂದ. ಸಾಮಾನ್ಯವಾಗಿ ಓದಿನಲ್ಲಿ ಹಿಂದುಳಿದವರು ಕೃಷಿಯಲ್ಲಿ ಮುಂದಾಳುಗಳಾಗುತ್ತಾರೆ. ಈ ಯುವಕ ಹಾಗಲ್ಲ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ತನ್ನ ವಿದ್ಯಾಭ್ಯಾಸವನ್ನು ಒತ್ತೆಯಿಟ್ಟ. ಹಾಳಾದ ಅಡಿಕೆ ತೋಟವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಇವನ ಬೆವರು ಆ ತೋಟದಲ್ಲಿ ಬಿದ್ದಿದೆ. ಸಾಧನೆ ತೋರಲು ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕದ ಪಾತ್ರ ಬೇಕು, ಅನಿವಾರ್ಯ ಅಲ್ಲ. ಸಾಧಿಸುವ ಛಲವೇ ಮೂಲವಸ್ತು. ಆ ಛಲದ ಬಂಡವಾಳ ಯುವಕನಲ್ಲಿತ್ತು. ತಂದೆ ಎಲ್ಲಕ್ಕೂ ಮಂಜೂರಾತಿ ನೀಡದೆ ಕೆಲವಕ್ಕೆ ಅಡ್ಡಗಾಲಿಕ್ಕಿದರೂ ಜೀವನವೆಂಬ ರನ್ನಿಂಗ್‍ರೇಸ್‍ನಲ್ಲಿ ಇಂತಹ ಹರ್ಡಲ್ಸ್ ದಾಟಬೇಕೆಂಬ ಅರಿವು ಯುವಕನಿಗಿದೆ. ಆದರೆ ಕಾಲ, ಒಂದೇ ತರ ಇರಲಾರದು.
ತಂದೆ ಹೊಸ ಹೊಸ ಮಾರ್ಪಾಡುಗಳನ್ನು ಬಯಸುತ್ತಿಲ್ಲ. ಲೋಪದೋಷಗಳು ಇರುವ ಕ್ರಮ ಜಾರಿಯಲ್ಲಿದ್ದರೂ, ಚಲ್ತಾ ಹೈ ಸ್ವಭಾವ. ಎರಡು ವರ್ಷಗಳ ಹಿಂದೆ ಅವರ ತೆಂಗಿನ ತೋಟಕ್ಕೆ ಡ್ರಿಪ್ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಗಿಡಗಳು ಚಿಕ್ಕದಾಗಿದ್ದಾಗ ಸಮಸ್ಯೆಗಳು ಕಾಣಲಿಲ್ಲ. ಈಗ ತೆಂಗು ಮರವಾಗಿರುವುದರಿಂದ ಡ್ರಿಪ್ ಪದ್ಧತಿಯಿಂದ ನೀರಿನ ಕೆಲ ಅಂಶ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸುವ ಇರಾದೆ ಯುವಕನದ್ದು. ಮಗ ಸೂಚಿಸಿದ ಯೋಗ್ಯ ಪರಿಹಾರವನ್ನು ಜಾರಿಗೆ ಮಾತ್ರ ತರುತ್ತಿಲ್ಲ. ಹಣಕಾಸು ತಂದೆಯದ್ದು, ಕೃಷಿ ನಿರ್ವಹಣೆ ಮಗನದ್ದು. ಕೆಂಪುಪಟ್ಟಿಯ ತೊಂದರೆ ಮನೆಯಂಗಳಕ್ಕೂ ಕಾಲಿಕ್ಕಿದೆ. ಈ ರೀತಿಯ ಅನೇಕ ಅನುಭವಗಳಿಂದ ಮಗ ನಿರಾಶೆ ಹೊಂದಿದ್ದಾನೆ. ಪೇಟೆ ಉದ್ಯೋಗದತ್ತ ಗಮನ ಹರಿಸುವ ಸಾಧ್ಯತೆಗಳೂ ಇವೆ.
ಕೃಷಿಕರಲ್ಲಿ ಲೆಕ್ಕಾಚಾರ ಹಾಕುವ ಪದ್ದತಿಯಿಲ್ಲ. ಕೃಷಿಯಲ್ಲಿ ಲೆಕ್ಕಾಚಾರ ಕಷ್ಟಸಾಧ್ಯ ಕೂಡ. ಕೃಷಿ ಯೋಜನೆಗಳಿಗೆ ಹಣ ಪಾಲು ಮಾಡಿ ಇಡಲಾಗುವುದಿಲ್ಲ. ಆದರೆ ಅಂದಾಜು ಮಾಡಲಿಕ್ಕೆ ಅವಕಾಶವಿದೆ. ಈ ರೀತಿ ಅಂದಾಜು ಮಾಡಿ ಕೆಲವು ಯೋಜನೆಗಳನ್ನು ಕಿರಿಯರಿಗೆ ವಹಿಸಬೇಕು. ಅದಕ್ಕೆ ತಕ್ಕ ಹಣಕಾಸನ್ನು ಒದಗಿಸಬೇಕು. ಹೀಗೆ ಮಾಡುವುದರಿಂದ ಒಮ್ಮೆಗೇ ಜವಾಬ್ದಾರಿ ವಹಿಸಿಕೊಳ್ಳುವ ಒತ್ತಡ ಕಿರಿಯರಿಗಾಗಲಿ, ಯಜಮಾನರಿಗೆ ಮನೆ ವಹಿಸಿಕೊಡುವುದರಿಂದ ಉಂಟಾಗುವ ಪದವಿ ನಷ್ಟದ ಸಂಕಟವಾಗಲಿ ಇರುವುದಿಲ್ಲ. ಜಾಣ ಮಾರ್ಗವನ್ನು ಆರಿಸಿಕೊಳ್ಳಿರೆಂದು ಸರ್ವಜ್ಞರು ತಿಳಿಸಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತಾಲ್ಲೂಕು ಕಛೇರಿಯಲ್ಲಿ, ಮಂಡಿ, ಪಂಚಾಯ್ತಿಗಳಲ್ಲಿ ಹೇಗೆ ವ್ಯವಹರಿಸಿಬೇಕೆನ್ನುವ ಅಥವಾ ನಮಗೆ ಬೇಕಾದ ದಾಖಲೆಗಳು ಯಾವುದು, ಎಲ್ಲಿ ಸಿಗುತ್ತವೆಯೆಂಬ ತಿಳುವಳಿಕೆ ನೀಡುವ ಪಠ್ಯಕ್ರಮವೇನಿಲ್ಲ. ಇಂದಿನ ಪಠ್ಯದಲ್ಲಿ ಹಿಂದಿನವರು ಹುಟ್ಟಿದ ಮತ್ತು ಸತ್ತ ದಿನಾಂಕಗಳ ಗೋರಿಯಷ್ಟೇ ಕಾಣುತ್ತದೆ. ವಿದ್ಯಾವಂತ ಎನ್ನಿಸಿಕೊಳ್ಳಲು ಎಷ್ಟೇ ದೊಡ್ಡ ಡಿಗ್ರಿ ಪಡೆಯಲಿ ಅವರು ಜೀವನಕ್ಕಿಳಿದ ನಂತರ ಕೃಷಿ ದಾಖಲೆಗಳನ್ನು ಪರಿಚಯಿಸಿಕೊಳ್ಳಲು ಹೋರಾಡಬೇಕಾಗುತ್ತದೆ. ಆದುದರಿಂದ ಬಾಲ್ಯದಿಂದಲೇ ಈ ಬಗ್ಗೆ ಅನುಭವ ನೀಡುವುದು ಹೆಚ್ಚು ಸೂಕ್ತ. ಶಿಕ್ಷಣ ವ್ಯವಸ್ಥೆಯಲ್ಲಿಯೂ ಈ ಕ್ರಮ ಅಳವಡಿಸುವಿಕೆಯಂತೂ ತುಂಬು ಸ್ವಾಗತಾರ್ಹ. ಅವಿಭಕ್ತ ಕುಟುಂಬದಲ್ಲಿ ಸಂಸಾರ ನಿರ್ವಹಿಸುವ ಅಣ್ಣ ತಮ್ಮಂದಿರು ಸಗಣಿ ಹೊರುವುದಕ್ಕಷ್ಟೇ ಮೀಸಲು, ಇಂತಹ ಕುಟುಂಬ ಪಾಲು (ಹಿಸ್ಸೆ)ಗೊಂಡಾಗ ತಮ್ಮಂದಿರು ಅನುಭವಿಸುವ ಬವಣೆ ಅಸಹನೀಯ. ಅಣ್ಣ ವ್ಯವಹಾರದಲ್ಲಿ ತಮ್ಮಂದಿರನ್ನು ಬಳಸಿದ್ದರೆ ಈ ಸಮಸ್ಯೆ ನಿರ್ಮಾಣವಾಗುತ್ತಿರಲಿಲ್ಲ. ಅದೆಲ್ಲಾ ಸರಿ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ನಿಜ, ಸಮಾಜದ ಒಂದು ಕೋನವನ್ನು ಮಾತ್ರ ಪ್ರಸ್ತಾವದಲ್ಲಿ ಬಳಸಲಾಗಿದೆ. ಡಿಗ್ರಿ ಓದಿ, ಬಸ್‍ಸ್ಟಾಂಡ್ ಪಕ್ಕದ ಬೀಡಾ ಅಂಗಡಿಯಲ್ಲಿ ಸಿಗರೇಟ್, ಗುಟ್ಕಾ ಮತ್ತಿನಲ್ಲಿ ತಮ್ಮ ತೋಟವನ್ನು ಮರೆಯುವ ಯುವಕರ ಬಗ್ಗೆ ಏನೂ ಹೇಳದಿರುವುದೇ ಕ್ಷೇಮ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಈ ಅಮಲುಗಳ ಜೊತೆಗೆ ಹುಡುಗಿಯರನ್ನು ಚುಡಾಯಿಸುತ್ತ ಫುಲ್‍ಟೈಂ ಡ್ಯೂಟಿಯಲ್ಲಿರುವವರನ್ನು ಕಂಡಾಗ ಖೇದವಾಗುತ್ತದೆ. ಮಕ್ಕಳಿಗೆ ಜವಾಬ್ದಾರಿ ನೀಡದ ತಂದೆತಾಯಿಗಳು ಕಾರಣವಿರಬಹುದೇ? ಆದರೆ ಇಂತಹವರನ್ನು ನೆಪವಾಗಿಟ್ಟುಕೊಂಡು ಒಳ್ಳೆಯ ಕೃಷಿ ಅಭಿಲಾಷೆಯುಳ್ಳವರಿಗೆ ಅಡ್ಡಗಾಲಿಕ್ಕುವುದು ಸಮಾಜದ ದುರಂತ. ಖಂಡಿತವಾಗಿಯೂ ಕೃಷಿಕ ಸಂಬಂಧಗಳಿಗೆ ಹೊಸ ವ್ಯಾಖ್ಯೆಯ ಅಗತ್ಯವಿದೆ.
– ಮಾ.ವೆಂ.ಸ.ಪ್ರಸಾದ್

ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಪಟ್ಟಿ

0

ಕ.ಸಾ.ಪ ತಾಲ್ಲೂಕು ಘಟಕ: ಅಧ್ಯಕ್ಷರು ಬಿ.ಆರ್.ಅನಂತಕೃಷ್ಣ, ಉಪಾಧ್ಯಕ್ಷರು ಸಿ.ಪಿ.ಈ. ಕರಗಪ್ಪ, ಬಿ.ಸಿ.ನಂದೀಶ್, ಸಯ್ಯದ್ ತಮೀಮ್ ಅನ್ಸಾರಿ, ಎನ್.ಅಶೋಕ್, ಗೌರವ ಕಾರ್ಯದರ್ಶಿಗಳು ಎ.ಎಂ.ತ್ಯಾಗರಾಜ್, ಎನ್.ವೆಂಕಟೇಶಪ್ಪ, ಕೋಶಾಧ್ಯಕ್ಷ ಎಸ್.ಸತೀಶ್, ಪ್ರಧಾನ ಸಂಚಾಲಕರು ಮೇಲೂರು ಸುದರ್ಶನ್, ಎನ್.ಲಕ್ಷ್ಮೀನಾರಾಯಣ್ (ಲಚ್ಚಿ), ಕಾಶಿನಾಥ್, ಎನ್.ಇ.ಜಗದೀಶ್ ಬಾಬು, ಸಹಸಂಚಾಲಕರು ಎಸ್.ಡಿ.ಮಂಜುನಾಥ್, ಮೇಲೂರು ಸುಧೀರ್, ಡಿ.ವಿ.ಭಾಸ್ಕರ್, ರಾಜಶೇಖರ್, ಪರಿಶಿಷ್ಠ ಜಾತಿ ಪ್ರತಿನಿಧಿ ಎಂ.ಮುನಿಯಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಎಸ್.ನಾಗರಾಜ್, ಪತ್ರಿಕಾ ಪ್ರತಿನಿಧಿಗಳು ಎ.ಶಶಿಕುಮಾರ್,ರಮೇಶ್, ಸಾಂಸ್ಕೃತಿಕ ಪ್ರತಿನಿಧಿಗಳು ರವಿಕುಮಾರ್, ಎಸ್.ವಿ.ಮಾಲತಿ.
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ ಜಂಗಮಕೋಟೆ ಹೋಬಳಿ: ಅಧ್ಯಕ್ಷರು ಮೇಲೂರು ಆರ್.ಎ.ಉಮೇಶ್, ಉಪಾಧ್ಯಕ್ಷರು ಎನ್.ಕೆ.ಸುದರ್ಶನ್, ಮೋಹನ್, ಗೌರವ ಕಾರ್ಯದರ್ಶಿಗಳು ಮಂಜುನಾಥ್, ತಾದೂರು ಮಂಜುನಾಥ್, ಕೋಶಾಧ್ಯಕ್ಷರು ಶಿವಗುರುಶರ್ಮ, ಮಹಿಳಾ ಪ್ರತಿನಿಧಿ ರೂಪ, ಪರಿಶಿಷ್ಟ ಜಾತಿ ಪ್ರತಿನಿಧಿ ಎನ್.ಆರ್.ವೆಂಕಟೇಶ್, ಪ್ರಧಾನ ಸಂಚಾಲಕರು ಎಚ್.ಎಂ.ರಾಘವೇಂದ್ರ, ಕನಕರಾಜು, ಸಹಸಂಚಾಲಕರು ರಮೇಶ್, ಡಿ.ಸಿ.ಮುನಿರಾಜು, ಸಂಘ ಸಂಸ್ಥೆಗಳ ಪ್ರತಿನಿಧಿ ಮುನಿರಾಜು (ಕುಟ್ಟಿ), ಸಾಂಸ್ಕೃತಿಕ ಪ್ರತಿನಿಧಿ ಗಂಗನಹಳ್ಳಿ ಮುನಿನಾರಾಯಣಪ್ಪ, ಪತ್ರಿಕಾ ಪ್ರತಿನಿಧಿ ಎಚ್.ಎಂ.ಮುರಳಿ, ಶಿಕ್ಷಣ ಸಂಯೋಜಕರು ಜ್ಞಾನಮೂರ್ತಿ, ಪಂಚಾಯತಿ ಪ್ರತಿನಿಧಿಗಳು ನಾಗರಾಜ್, ಬಳುವನಹಳ್ಳಿ (ವೆಂಕಟಾಪುರ ಪಂಚಾಯತಿ), ವೆಂಕಟೇಶಮೂರ್ತಿ, ಮುತ್ತೂರು (ಮಳ್ಳೂರು ಪಂಚಾಯತಿ), ಡಿ.ಸಿ.ರಮೇಶ್, ತೊಟ್ಲಗಾನಹಳ್ಳಿ (ಭಕ್ತರಹಳ್ಳಿ ಪಂಚಾಯತಿ), ಚನ್ನಯ್ಯ, ಮಳಮಾಚನಹಳ್ಳಿ (ಮಳಮಾಚನಹಳ್ಳಿ ಪಂಚಾಯತಿ).
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ, ಬಶೆಟ್ಟಹಳ್ಳಿ ಹೋಬಳಿ: ಅಧ್ಯಕ್ಷರು ಎನ್.ನಾಗರಾಜ್, ಗೌರವ ಕಾರ್ಯದರ್ಶಿಗಳು ಎ.ವಿ.ವೆಂಕಟನರಸಪ್ಪ, ಮುರಳಿ, ಉಪಾಧ್ಯಕ್ಷರು ರಾಮಸ್ವಾಮಿ, ಬಿ.ಎಸ್.ನಾಗೇಶ್, ಕೋಶಾಧ್ಯಕ್ಷರು ಟಿ.ಎಸ್.ನಾರಾಯಣಸ್ವಾಮಿ, ಮಹಿಳಾ ಪ್ರತಿನಿಧಿ ಸರಸ್ವತಮ್ಮ, ಪರಿಶಿಷ್ಟ ಜಾತಿ ಪ್ರತಿನಿಧಿ ಟಿ.ವಿ.ಮುನಿಯಪ್ಪ, ಪ್ರಧಾನ ಸಂಚಾಲಕರು ಶಿವಕುಮಾರ್, ಆರ್.ನರಸಿಂಹಪ್ಪ, ಸಹಸಂಚಾಲಕರು ಪ್ರವೀಣ್ಸಿಂಹ, ಮಲ್ಲೇಶ್, ಸಾಂಸ್ಕೃತಿಕ ಪ್ರತಿನಿಧಿ ಎಂ.ವೆಂಕಟೇಶಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಅಂಬರೀಷ್, ಪತ್ರಿಕಾ ಪ್ರತಿನಿಧಿ ಟಿ.ಎಂ.ವೆಂಕಟಾಚಲಪತಿ, ಶಿಕ್ಷಣ ಸಂಯೋಜಕರು ವಿ.ಕೋನಪ್ಪ, ಪಂಚಾಯತಿ ಪ್ರತಿನಿಧಿಗಳು ಬಿ.ವಿ.ನಾಗರಾಜ್, ಬಶೆಟ್ಟಹಳ್ಳಿ (ಬಶೆಟ್ಟಹಳ್ಳಿ ಪಂಚಾಯತಿ), ಜಯಚಂದ್ರ, ಆನೆಮಡುಗು(ದೊಡ್ಡತೇಕಹಳ್ಳಿ ಪಂಚಾಯತಿ), ಟಿ.ವಿ.ಮುನಿಯಪ್ಪ, ತಿಮ್ಮನಾಯಕನಹಳ್ಳಿ (ತಿಮ್ಮನಾಯಕನಹಳ್ಳಿ ಪಂಚಾಯತಿ), ಬೈರರೆಡ್ಡಿ, ಗಂಜಿಗುಂಟೆ (ಗಂಜಿಗುಂಟೆ ಪಂಚಾಯತಿ).
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪರಿಷತ್ತು, ಕಸಬಾ ಹೋಬಳಿ: ಅಧ್ಯಕ್ಷರು ದಾಮೋದರ್, ಉಪಾಧ್ಯಕ್ಷರು ರಮೇಶ್, ಚಿಕ್ಕ ಆಂಜಿನಪ್ಪ, ಗೌರವ ಕಾರ್ಯದರ್ಶಿಗಳು ನಾರಾಯಣಸ್ವಾಮಿ, ಪ್ರತಾಪ್, ಕೋಶಾಧ್ಯಕ್ಷರು ಕೆ.ವಿ.ವಸಂತ ವಲ್ಲಭ ಕುಮಾರ್, ಪ್ರಧಾನ ಸಂಚಾಲಕರು ಮಂಜುನಾಥ್, ಶಿವರಾಜ್, ಸಹ ಸಂಚಾಲಕರು ನಾಗೇಶ್, ರಾಮಾಂಜಿ, ಸಂಘ ಸಂಸ್ಥೆಗಳ ಪ್ರತಿನಿಧಿ ಮುನಿಆಂಜಿನಪ್ಪ, ಪರಿಶಿಷ್ಟ ಜಾತಿ ಪ್ರತಿನಿಧಿ ತ್ಯಾಗರಾಜ್, ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ಮಹಿಳಾ ಪ್ರತಿನಿಧಿ ಸುಜಾತಮ್ಮ, ಸಾಂಸ್ಕೃತಿಕ ಪ್ರತಿನಿಧಿ ಶ್ರೀನಿವಾಸ್, ಶಿಕ್ಷಣ ಸಂಯೋಜಕರು ಪಿ.ಆರ್.ರವಿ, ಪಂಚಾಯತಿ ಪ್ರತಿನಿಧಿಗಳು ಮುನಿರಾಜು, ಬೋದಗೂರು (ಆನೂರು ಪಂಚಾಯತಿ), ಕೆಂಪೇಗೌಡ, ಹುಜಗೂರು (ತುಮ್ಮನಹಳ್ಳಿ ಪಂಚಾಯತಿ), ವಿಶ್ವನಾಥ್, ಬೂದಾಳ (ದೇವರಮಳ್ಳೂರು ಪಂಚಾಯತಿ), ಬಿ.ಜೆ.ವೆಂಕಟೇಶ್, ಬಚ್ಚಹಳ್ಳಿ (ಕೊತ್ತನೂರು ಪಂಚಾಯತಿ).
ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ, ಸಾದಲಿ ಹೋಬಳಿ: ಅಧ್ಯಕ್ಷರು ಎನ್.ಜಗದೀಶ್ಬಾಬು, ಉಪಾಧ್ಯಕ್ಷರು ಜಿ.ಆರ್.ಮುರಳಿ, ಬಿ.ವಿ.ಜಯರಾಮರೆಡ್ಡಿ, ಗೌರವ ಕಾರ್ಯದರ್ಶಿಗಳು ಬಿ.ಜಿ.ರಾಘವೇಂದ್ರರಾವ್, ಎನ್.ವಿ.ಶೇಖರ್, ಕೋಶಾಧ್ಯಕ್ಷರು ಬಿ.ಎನ್.ನರಸಿಂಹರಾಜು, ಮಹಿಳಾ ಪ್ರತಿನಿಧಿ ಲಕ್ಷ್ಮಮ್ಮ, ಪರಿಶಿಷ್ಟ ಜಾತಿ ಪ್ರತಿನಿಧಿ ಡಿ.ವಿ.ಪ್ರಸಾದ್, ಸಂಚಾಲಕರು ಕೆ.ವಿ.ನಾಗಿರೆಡ್ಡಿ, ಜಿ.ಎನ್.ಮುನಿರೆಡ್ಡಿ, ಸಹ ಸಂಚಾಲಕರು ಎಸ್.ಮಂಜುನಾಥ್, ಕೆ.ದೇವರಾಜ್, ಸಾಂಸ್ಕೃತಿಕ ಪ್ರತಿನಿಧಿ ಎಸ್.ನಾಗೇಶ್, ಪತ್ರಿಕಾ ಪ್ರತಿನಿಧಿ ಆದಿನಾರಾಯಣಶೆಟ್ಟಿ, ಶಿಕ್ಷಣ ಸಂಯೋಜಕರು ಎಸ್.ಎನ್.ನಾರಾಯಣರಾವ್, ಪಂಚಾಯತಿ ಪ್ರತಿನಿಧಿಗಳು ಹರೀಶ್, ದಿಬ್ಬೂರಹಳ್ಳಿ (ದಿಬ್ಬೂರಹಳ್ಳಿ ಪಂಚಾಯತಿ), ಎಸ್.ಎಂ.ನಾರಾಯಣಪ್ಪ, ಸಾದಲಿ (ಸಾದಲಿ ಪಂಚಾಯತಿ), ಸೋಮಶೇಖರ್, ನೇರಳೇಮರದಹಳ್ಳಿ (ಎಸ್.ದೇವಗಾನಹಳ್ಳಿ ಪಂಚಾಯತಿ), ಲಕ್ಷ್ಮೀಪತಿ (ಈ.ತಿಮ್ಮಸಂದ್ರ ಪಂಚಾಯತಿ), ನಾಗೇಶ್ (ತಲಕಾಯಲಬೆಟ್ಟ ಪಂಚಾಯತಿ)

ರಾಜ್ಯ ಸರ್ಕಾರ ನೀರಿನ ವಿಚಾರದಲ್ಲಿ ನಾಟಕವಾಡುತ್ತಿದೆ

0

ಬಯಲುಸೀಮೆ ಭಾಗಕ್ಕೆ ಕೃಷಿ ಹಾಗೂ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಜಾರಿಗೊಳಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಭಾಗದ ಜನತೆಯನ್ನು ಎತ್ತಿನಹೊಳೆ ಯೋಜನೆ ವಿರೋಧಿಸುವಂತೆ ಎತ್ತಿಕಟ್ಟಿ ನಾಟಕವಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲು ಬಳಿ ಭಾನುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ನಗರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಯಲುಸೀಮೆ ಭಾಗದ ಕಾಂಗ್ರೆಸ್ ಪಕ್ಷದವರು ಎತ್ತಿನಹೊಳೆಗೆ ಬೆಂಬಲ ನೀಡುವ ನಾಟಕವಾಡಿದರೆ ದಕ್ಷಿಣ ಕನ್ನಡ ಭಾಗದ ಕಾಂಗ್ರೆಸ್ನವರು ಎತ್ತಿನಹೊಳೆ ಯೋಜನೆಗೆ ವಿರೋಧ ಮಾಡುತ್ತಾರೆ. ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನೀರನ್ನು ಎತ್ತುವ ಬಾವಿಯ ಕೆಲಸ ಮಾತ್ರ ನಡೆಯುತ್ತಿದೆ, ತಡೆಗೋಡೆಯ ಕೆಲಸ ಒಂದು ಮುಕ್ತಾಯದ ಹಂತಕ್ಕೆ ಬಂದಿದೆ, ಮತ್ತೊಂದು ಕೆಲಸ ಪ್ರಾರಂಭವಾಗಿದೆ. ಇದೇ ರೀತಿ ಕಾಮಗಾರಿ ನಡೆದಿದ್ದೇ ಆದಲ್ಲಿ ಮುಂದಿನ ೨೫ ವರ್ಷಗಳಾದರೂ ಈ ಭಾಗಕ್ಕೆ ನೀರು ಕೊಡಲು ಸರ್ಕಾರದಿಂದ ಸಾಧ್ಯವಾಗುವುದಿಲ್ಲ ಎಂದರು.
ಬಯಲುಸೀಮೆ ಭಾಗಕ್ಕೆ ನೀರು ನೀಡುವ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಇದೇ ಮೇ ೨೭ ರವರೆಗೂ ನೋಡಿ ನಂತರ ಬೆಂಗಳೂರಿನಲ್ಲಿ ನಡೆಯುವಂತಹ ಸಮಾವೇಶದಲ್ಲಿ ಮುಂದಿನ ಹೋರಾಟಗಳ ಬಗ್ಗೆ ನಿರ್ಧರಿಸಲಾಗುತ್ತದೆ ಎಂದರು.

ಶಿಡ್ಲಘಟ್ಟದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲು ಬಳಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರೈತರನ್ನು ಹಾಗೂ ನೀರಾವರಿ ಹೋರಾಟಕ್ಕೆ ಬೆಂಬಲಿಸಿದ ನಗರ ವ್ಯಾಪ್ತಿಯ ಟ್ರ್ಯಾಕ್ಟರ್ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಡ್ಲಘಟ್ಟದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲು ಬಳಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರೈತರನ್ನು ಹಾಗೂ ನೀರಾವರಿ ಹೋರಾಟಕ್ಕೆ ಬೆಂಬಲಿಸಿದ ನಗರ ವ್ಯಾಪ್ತಿಯ ಟ್ರ್ಯಾಕ್ಟರ್ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ೬.೧೧ ಲಕ್ಷ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಾಲ ಮನ್ನಾ ಮಾಡುವ ಯಾವುದೇ ಚಿಂತನೆ ನಡೆಸಿಲ್ಲ. ದೇಶದ ರೈತರು ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿ ಸಿಲುಕಿದ್ದರೂ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬದಲಿಗೆ ರೈತರು ಹೋರಾಟ ಮಾಡಿದರೆ ಅವರನ್ನು ಲಾಠಿಗಳಲ್ಲಿ ಹೊಡೆಸುವ ರಾಜ್ಯ ಸರ್ಕಾರ ರೈತರನ್ನು ಕೇವಲ ಚುನಾವಣೆ ಅಸ್ತ್ರದಂತೆ ಬಳಸುತ್ತಿರುವುದು ಖಂಡನೀಯ ಎಂದರು.
ರಾಜ್ಯದ ರೈತ ಮುಖಂಡರು ಹಾಗು ಈ ಭಾಗದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಕೊಟ್ಟಂತಹ ಮಾತಿನ ಪ್ರಕಾರ ನಡೆದುಕೊಳ್ಳಲಿಲ್ಲ. ಈ ಭಾಗದ ಸಂಸದರು, ಶಾಸಕರು ಸಹ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸಕ್ಕೆ ಮುಂದಾಗಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳನ್ನು ಕಟ್ಟಿಹಾಕಿ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಲಿದೆ ಎಂದರು.
ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಬಯಲುಸೀಮೆ ಭಾಗದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದ್ದರೂ ಪ್ರತಿನಿತ್ಯ ಸುಮಾರು ೯ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿರುವ ಈ ಭಾಗದ ರೈತರಿಗೆ ಹಾಲಿನ ಮೇಲೆ ಬೆಂಬಲ ಬೆಲೆ ನೀಡಲು ರಾಜ್ಯಾಧ್ಯಕ್ಷರು ಗಮನಹರಿಸುವುದರೊಂದಿಗೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಬಸ್ ನಿಲ್ದಾಣದಿಂದ ರಾಜ್ಯಾಧ್ಯಕ್ಷರನ್ನು ಬೈಕ್ ರ್ಯಾಲಿ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಸಮಾರಂಭದಲ್ಲಿ ಹಿರಿಯ ರೈತ ಯೋಗಿಗಳಿಗೆ ಹಾಗು ನೀರಾವರಿ ಹೋರಾಟಕ್ಕೆ ಬೆಂಬಲಿಸಿದ ನಗರ ವ್ಯಾಪ್ತಿಯ ಟ್ರ್ಯಾಕ್ಟರ್ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಕೆ.ವಿ.ವೇಣುಗೋಪಾಲ್, ಹಿತ್ತಲಹಳ್ಳಿ ಗೋಪಾಲಗೌಡ ಮತ್ತಿತರರು ಹಾಜರಿದ್ದರು.

ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮ

0

ಪ್ರತಿಯೊಂದು ಗ್ರಾಮದಲ್ಲೂ ಗ್ರಂಥಾಲಯ ಓದುವ ಅಭಿರುಚಿಯನ್ನು ಬೆಳೆಸುವ ಕೇಂದ್ರವಾಗಲಿ. ಈ ನಿಟ್ಟಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೋಬಳಿ ಘಟಕಗಳನ್ನು ಸ್ಥಾಪಿಸುವ ಮೂಲಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಗ್ರಾಮೀಣ ಜನರನ್ನು ಮುಟ್ಟುವ ಉದ್ದೇಶವನ್ನಿರಿಸಿಕೊಂಡಿರುವುದು ಅಭಿನಂದನೀಯ. ಗ್ರಾಮಗಳಲ್ಲಿ ಯುವಜನರಿಗೆ, ವಿದ್ಯಾರ್ಥಿಗಳಿಗೆ ಓದುವ ಅಭಿರುಚಿಯನ್ನು ಬೆಳೆಸುವ, ಆ ಮೂಲಕ ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡಿ. ಕನ್ನಡವನ್ನು ಕಟ್ಟುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಹರೀಶ್.ಆರ್.ಭಟ್ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಬೇಕು. ವಿಜ್ಞಾನ ಎಲ್ಲರಲ್ಲಿಯೂ ಶಿಸ್ತನ್ನು ರೂಢಿಸುತ್ತದೆ. ಅದು ಅಡುಗೆ ಮನೆಯಿರಬಹುದು, ವಿಜ್ಞಾನ ಪ್ರಯೋಗ ಶಾಲೆಯಿರಬಹುದು ಅಥವಾ ವಿವಿಧ ಕಾರ್ಯಕ್ಷೇತ್ರವಿರಬಹುದು. ಪ್ರತಿಯೊಬ್ಬರೂ ಕನಸನ್ನು ಕಾಣುವುದು, ಮನಸ್ಸಿನಲ್ಲಿ ಲೆಕ್ಕ ಮಾಡುವುದು ತಮ್ಮ ಮಾತೃ ಭಾಷೆಯಲ್ಲಿಯೇ. ಯಾವತ್ತೂ ಭಾಷೆಯನ್ನು ಅಪಭ್ರಂಶ ಮಾಡಬಾರದು. ಕನ್ನಡದಲ್ಲಿನ ವಿಜ್ಞಾನ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದಲ್ಲಿ ಅವರು ವಿಜ್ಞಾನವನ್ನು ಪ್ರೀತಿಸುತ್ತಾರೆ. ಕವಿಗಳಾದ ಕುವೆಂಪು, ಬೇಂದ್ರೆ, ವೀ.ಸೀತಾರಾಮಯ್ಯ, ಚನ್ನವೀರ ಕಣವಿ, ಪ್ರೊ.ನಿಸಾರ್ ಅಹಮದ್ ಮುಂತಾದವರು ಪರಿಸರ, ಪಕ್ಷಿ, ಚಿಟ್ಟೆ, ಸಸ್ಯಗಳ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ತೇಜಸ್ವಿಯವರ ಕರ್ವಾಲೋ ಮುಂತಾದ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಪರಿಸರ ಪ್ರೇಮವನ್ನು ಗಟ್ಟಿಗೊಳಿಸಬಹುದು ಎಂದರು.

ಶಿಡ್ಲಘಟ್ಟದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಮತ್ತು ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿಡ್ಲಘಟ್ಟದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಕ.ಸಾ.ಪ ತಾಲ್ಲೂಕು, ಹೋಬಳಿ ಘಟಕಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಮತ್ತು ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್ ಅವರು ಕನ್ನಡ ಬಾವುಟವನ್ನು ನೀಡುವ ಮೂಲಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕ.ಸಾ.ಪ ಘಟಕದ ಕಾರ್ಯಸೂಚಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಡಿ.ಜಿ.ಹರೀಶ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಾದ ವಿ.ಕೆ. ಸೌಜನ್ಯ, ಡಿ.ಎನ್. ಶ್ವೇತ ಮತ್ತು ಆರ್.ಎ. ದರ್ಶಿನಿ ಅವರನ್ನು ಕ.ಸಾ.ಪ ವತಿಯಿಂದ ಸನ್ಮಾನಿಸಿ ಪುಸ್ತಕಗಳನ್ನು ನೀಡಲಾಯಿತು. ಕ.ಸಾ.ಪ ತಾಲ್ಲೂಕು ಮತ್ತು ಹೋಬಳಿ ಪದಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ದತ್ತಿ ನಿಧಿಗೆ 15 ಸಾವಿರ ರೂಗಳನ್ನು ನೀಡಿದರು. ತರಬಳ್ಳಿ ಭಾಸ್ಕರರೆಡ್ಡಿ ಕ.ಸಾ.ಪ ತಾಲ್ಲೂಕು ಘಟಕಕ್ಕೆ ಶಾಲೆಗಳಲ್ಲಿ ಪುಸ್ತಕ ವಿತರಿಸಲು ಹಣ ನೀಡಿದರು.
ಜಾನಪದ ಕಲಾವಿದರಾದ ದೇವರಮಳ್ಳೂರಿನ ಮಹೇಶ್ ಮತ್ತು ಹರೀಶ್ ವಿವಿಧ ಕವಿಗಳ ಗೀತೆಗಳನ್ನು ಹಾಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ವೈ.ಎಲ್.ಹನುಮಂತರಾವ್, ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಸಾಹಿತಿಗಳಾದ ಗೋಪಾಲಗೌಡ ಕಲ್ವಮಂಜರಿ, ಕಾಗತಿ ವೆಂಕಟರತ್ನಂ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ಅಮೃತ್ಕುಮಾರ್, ಭಾಸ್ಕರರೆಡ್ಡಿ, ವೆಂಕಟಸ್ವಾಮಿ, ಕ.ಸಾ.ಪ ತಾಲ್ಲೂಕು ಕಾರ್ಯದರ್ಶಿಗಳಾದ ಎ.ಎಂ.ತ್ಯಾಗರಾಜ್, ಎನ್.ವೆಂಕಟೇಶಪ್ಪ, ಸತೀಶ್, ಟಿ.ಸಾವಿತ್ರಮ್ಮ, ಕ.ಸಾ.ಪ ಹೋಬಳಿ ಅಧ್ಯಕ್ಷರಾದ ಆರ್.ಎ.ಉಮೇಶ್, ಎನ್.ಜಗದೀಶ್ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಿಧನ ವಾರ್ತೆ

0

ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಶತಾಯುಷಿ ಸುಬ್ಬಮ್ಮ(102) ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರ ಪತಿ ದಿವಂಗತ ಮುನಿಯಪ್ಪ ಗಂಡ ಸ್ವತಂತ್ರ ಹೋರಾಟಗಾರರಾಗಿದ್ದರು. ಮಗ ಮಗ ಎಂ.ಪುಟ್ಟಮೂರ್ತಿ ಬಿ.ಎಂ.ವಿ ವಿದ್ಯಾಸಂಸ್ಥೆಯ ದತ್ತಿಗಳಾಗಿದ್ದಾರೆ. ಮೃತರು ಆರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಅವರ ತೋಟದಲ್ಲಿ ಸಂಜೆ ನೆರವೇರಿಸಲಾಯಿತು.

ಸ್ಯಾಟ್ ಕಾಂ ತರಬೇತಿ ಕಾರ್ಯಾಗಾರ

0

ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮತ್ತು ಪ್ರತಿಯೊಬ್ಬರಿಗೂ ಅದನ್ನು ತಲುಪಿಸುವಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹಾಗು ಕಾರ್ಯದರ್ಶಿಗಳ ಪಾತ್ರ ಮಹತ್ತರವಾದದ್ದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸ್ಯಾಟ್ಕಾಂ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಅಧಿಕಾರಿಗಳು ನರೇಗಾ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ತರಬೇತಿ ಕಾರ್ಯಾಗಾರಗಳಲ್ಲಿ ನೀಡುವಂತಹ ಅಗತ್ಯವಾಗಿರುವ ಎಲ್ಲಾ ಮಾಹಿತಿಗಳನ್ನು ಆಧರಿಸಿ, ಜನತೆಗೆ ಯೋಜನೆಗಳ ಪರಿಚಯ ಮಾಡಿಸುವುದರ ಜೊತೆಗೆ, ಸದ್ಬಳಕೆಯ ಬಗ್ಗೆಯೂ ಜನರನ್ನು ಪ್ರೇರಣೆಗೊಳಿಸಬೇಕು. ಪ್ರತಿಯೊಂದು ಕುಟುಂಬಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಉಳಿದವರೆಲ್ಲರಿಗೂ ಉದ್ಯೋಗ ಖಾತ್ರಿ ಚೀಟಿಗಳನ್ನು ವಿತರಣೆ ಮಾಡುವ ಮೂಲಕ ನರೇಗಾ ಯೋಜನೆಯಡಿಯಲ್ಲಿ ತೊಡಗಿಸಿಕೊಳ್ಳುವಂತೆ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಮಾತನಾಡಿ ಗ್ರಾಮ ಪಂಚಾಯತಿಗಳ ಅಧಿಕಾರಿಗಳಿಗೆ ನೀಡುವಂತಹ ಈ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶಗಳಿರುವುದರಿಂದ ಪ್ರತಿಯೊಬ್ಬ ಅಧಿಕಾರಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರೈತರು, ಕೃಷಿ ಕೂಲಿಕಾರ್ಮಿಕರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ನರೇಗಾ ಯೋಜನೆಯ ಕಡೆಗೆ ಜನರು ಒಲವು ತೋರಿಸುವಂತೆ ನೋಡಿಕೊಂಡು ಮೂಲಸೌಕರ್ಯಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವನ್ನು ಪಡೆದುಕೊಂಡು ಉತ್ತಮ ಕೆಲಸ ನಿರ್ವಹಣೆ ಮಾಡುವಂತೆ ಹೇಳಿದರು.
ನರೇಗಾ ಯೋಜನೆ ಯೋಜನಾಧಿಕಾರಿ ಶ್ರೀನಾಥ್ ಗೌಡ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪಿ.ವಿ.ಸಿದ್ದಣ್ಣ, ಗೋಪಾಲಕೃಷ್ಣಯ್ಯ, ಗೋಪಿನಾಥ್, ಸಿ.ರಾಜಣ್ಣ, ಶ್ರೀನಿವಾಸ್, ಕಾತ್ಯಾಯಿನಿ ಮತ್ತಿತರರು ಹಾಜರಿದ್ದರು.

ಮಕ್ಕಳ ವಿಶೇಷ ದಾಖಲಾತಿ ಆಂದೋಳನ

0

೨೦೧೬-೧೭ ನೇ ಶೈಕ್ಷಣಿಕ ಸಾಲಿಗೆ ಮೇ 28 ರ ಶನಿವಾರದಿಂದ ಶಾಲೆಗಳು ಪ್ರಾರಂಭವಾಗುವ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮೇ 16 ರಿಂದ ಮೇ ೩೧ರ ಅವಧಿಯಲ್ಲಿ ವಿಶೇಷ ದಾಖಲಾತಿ ಆಂದೋಳನ ಕಾರ್ಯಕ್ರಮವನ್ನು ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ ಜೂನ್ 1 ರಿಂದ ಜೂನ್ ೩೦ರವರೆಗೆ ಸಾಮಾನ್ಯ ದಾಖಲಾತಿ ಕಾರ್ಯ ಚಾಲ್ತಿಯಲ್ಲಿರುತ್ತದೆ. ಈ ಕಾರ್ಯಕ್ರಮದಲ್ಲಿ ಶಾಲೆಗೆ ಸೇರಬಹುದಾದ ಮತ್ತು ಶಾಲೆಯನ್ನು ಮಧ್ಯದಲ್ಲಿ ತೊರೆದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಯಾಗಿರುತ್ತದೆ.
ಆಯಾ ಗ್ರಾಮದ ಹಾಗೂ ವಾರ್ಡುಗಳಿಗೆ ಸ್ಥಳೀಯ ಶಾಲಾ ಸಿಬ್ಬಂದಿ ಹಾಗೂ ಕ್ಷೇತ್ರ ಸಿಬ್ಬಂದಿ ಭೇಟಿ ನೀಡುತ್ತಾರೆ. ಈ ಬಗ್ಗೆ ಸ್ಥಳಿಯವಾಗಿ ಶಾಲಾ ಮುಖ್ಯಶಿಕ್ಷಕರು ಕರಪತ್ರಗಳ ಹಾಗೂ ಬ್ಯಾನರ್ಗಳ ಮೂಲಕ ಪ್ರಚಾರ ಮಾಡಲು ತೀಳಿಸಲಾಗಿದೆ. ಈ ಬಗ್ಗೆ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ೬ ರಿಂದ ೧೪ ವಯೋಮಾನದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕ್ರಮವಹಿಸಲು ಸೂಚಿಸಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ, ಕ್ಷೀರಭಾಗ್ಯ ಯೋಜನೆಯಲ್ಲಿ ಉತ್ತಮ ಕುಡಿಯುವ ಹಾಲು, ಮದ್ಯಾಹ್ನ ಉಪಹಾರ ನೀಡುವುದರ ಜೊತೆಗೆ ಅನೇಕ ಶೈಕ್ಷಣಿಕ ಪೂರಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಗುಣಮಟ್ಟದ ಶಿಕ್ಷಣವನ್ನು ವ್ಯವಸ್ಥಿತವಾಗಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಪೋಷಕರ ಮನವೊಲಿಸಿ ಪ್ರತಿಯೊಂದು ಮಗು ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಪಡೆಯಲು ನೆರವಾಗಲು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಕೆ ಸುಮ ಅವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.

ನರಸಿಂಹಸ್ವಾಮಿ ಜಯಂತಿ

0

ತಾಲ್ಲೂಕಿನ ಗಂಜಿಗುಂಟೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನರಸಿಂಹಸ್ವಾಮಿ ಜಯಂತಿಯ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗಂಜಿಗುಂಟೆಯ ಮೂರ್ತಿರಾಯರ ಕುಟುಂಬದವರಿಂದ ನಡೆದ ವಿಶೇಷ ಪೂಜೆಯಲ್ಲಿ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ನರಸಿಂಹ ಮತ್ತು ಪವಮಾನ ಹೋಮ ಹಾಗೂ ಉತ್ಸವವನ್ನು ಏರ್ಪಡಿಸಲಾಗಿತ್ತು. ಪಾನಕ, ಚಿತ್ರಾನ್ನ ಮತ್ತು ಆರ್ಯವೈಶ್ಯ ಮಂಡಳಿಯವರಿಂದ ಪೊಂಗಲ್ ಪ್ರಸಾದ ವಿತರಿಸಲಾಯಿತು.
ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವರಿಗೆ ಸಂಗೀತ ಸೇವೆಯೂ ನೆರವೇರಿತು.
ವೆಂಕಟೇಶಮೂರ್ತಿ, ಲಕ್ಷ್ಮೀನರಸಿಂಹಪ್ರಸಾದ್, ಶ್ಯಾಮಸುಂದರ್, ಆನಂದ, ಗುರುರಾಜ್, ನಂದಕುಮಾರ್, ರಾಮಮೂರ್ತಿ, ಕಾರ್ತಿಕ್, ಪದ್ಮಾವತಮ್ಮ, ಸುಬ್ರಹ್ಮಣ್ಯಾಚಾರಿ, ರಾಮಸ್ವಾಮಿ, ವೆಂಕಟರೆಡ್ಡಿ ಮತ್ತಿತರರು ಹಾಜರಿದ್ದರು.

ಹಾರಡಿ ಗ್ರಾಮದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಜಯಂತಿ ಮಹೋತ್ಸವ

0

ತಾಲ್ಲೂಕಿನ ಹಾರಡಿ ಗ್ರಾಮದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ 15ನೇ ವರ್ಷದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಪ್ರಾರಂಭವಾದ ಪೂಜೆಗಳಲ್ಲಿ ಸುಪ್ರಭಾತ ಸೇವೆ, ವೇದ ಪಾರಾಯಣ ಸೇವೆ, ವಿಷ್ಣು ಸಹಸ್ರನಾಮ ಪಾರಾಯಣ ಸೇವೆ, ಅಗ್ನಿ ಪ್ರತಿಷ್ಠೆ, ಪ್ರಧಾನ ಮಹಾ ಸುದರ್ಶನ ಹಾಗೂ ನಾರಸಿಂಹ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಮಹಾ ಪೂರ್ಣಾಹುತಿ, ಪಂಚಾಮೃತಾಭಿಷೇಕ, ಕಳಶಗಳನ್ನು ಹೊತ್ತು ಗ್ರಾಮ ಪ್ರದಕ್ಷಿಣೆ ಮಾಡಿದ ನಂತರ ಕುಂಭಾಭಿಷೇಕ, ಅಷ್ಠೋತ್ತರಪೂರ್ವಕ ಅಷ್ಠಾವಧಾನ ಸೇವೆ, ಮಹಾ ನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೀರಗಾಸೆ ಕುಣಿತವನ್ನು ಏರ್ಪಡಿಸಲಾಗಿತ್ತು. ಜ್ಯೂನಿಯರ್ ಘಂಟಸಾಲ ಡಿ.ಎನ್.ಲಕ್ಷ್ಮೀಪತಿ ಅವರ ಗಾನ ಕಲಾವೃಂದದಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಚ್.ಎನ್.ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣಪ್ಪ, ನಾಗೇಶ್, ನಾರಾಯಣರೆಡ್ಡಿ, ಮುನೇಗೌಡ, ರಾಮಕೃಷ್ಣ, ನಾಗರಾಜು, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಬತ್ತಲೇಗೌಡ ಮತ್ತಿತರರು ಹಾಜರಿದ್ದರು.

ಬೇಸಿಗೆ ಕ್ರೀಡಾ ಶಿಬಿರದ ಮುಕ್ತಾಯ ಸಮಾರಂಭ

0

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯ ನೆರವಿನಿಂದ ನಡೆದ ಬೇಸಿಗೆ ಕ್ರೀಡಾ ಶಿಬಿರದ ಮುಕ್ತಾಯ ಸಮಾರಂಭವನ್ನು ಈಚೆಗೆ ಹಮ್ಮಿಕೊಂಡಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಮುಷ್ಟಾಕ್, ಕ್ರೀಡಾಪಟುಗಳ ತರಬೇತುದಾರರಾದ ಮುನಿರಾಜು, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.

ಕನ್ನಡದಲ್ಲಿ ಶೇಕಡಾ 100ರಷ್ಟು ಅಂಕ

0

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಗೆ ೧೨೫ ಅಂಕಗಳನ್ನು ತಾಲ್ಲೂಕಿನಲ್ಲಿ ಮೂವರು ವಿದ್ಯಾರ್ಥಿಗಳು ಪಡೆದಿದ್ದಾರೆ.
ವಿ.ಕೆ. ಸೌಜನ್ಯ, ಬಿ.ಜಿ.ಎಸ್ ಪ್ರೌಢಶಾಲೆ ಹನುಮಂತಪುರ ಗೇಟ್, ಡಿ.ಎನ್. ಶ್ವೇತ, ಎಸ್.ಎಮ್.ಇ ಪ್ರೌಢಶಾಲೆ ದಿಬ್ಬೂರಹಳ್ಳಿ ಮತ್ತು ಆರ್.ಎ. ದರ್ಶಿನಿ, ದಿ ಕ್ರೆಸೆಂಟ್ ಪ್ರೌಢಶಾಲೆ ಶಿಡ್ಲಘಟ್ಟ ಕನ್ನಡದಲ್ಲಿ ಶೇಕಡಾ 100ರಷ್ಟು ಅಂಕಗಳನ್ನು ಗಳಿಸಿದ್ದಾರೆ.