ಟ್ರಾನ್ಸ್ ಫಾರ್ಮರ್ನಲ್ಲಿ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಅಸ್ವಸ್ಥಗೊಂಡ ಲೈನ್ಮನ್ನನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ಶುಕ್ರವಾರ ನಡೆದಿದೆ.
ನಗರದ ಹೊರವಲಯದ ಹಂಡಿಗನಾಳ ಬಳಿ ಅಮ್ಮನಕೆರೆ ಅಚ್ಚುಕಟ್ಟಿನ ಜಮೀನಿನಲ್ಲಿ 250 ಕಿಲೋ ವ್ಯಾಟ್ನ ಟ್ರಾನ್ಸ್ಫಾರ್ಮರ್ನಲ್ಲಿ ತಂತಿ ಸರಿಪಡಿಸಲು ಹೋಗಿದ್ದ ಲಕ್ಷ್ಮಣ್(40) ಎಂಬ ಸಹಾಯಕ ಲೈನ್ಮನ್ಗೆ ವಿದ್ಯುತ್ ಶಾಕ್ ತಗುಲಿದೆ. ಜೊತೆಯಲ್ಲಿ ತೆರಳಿದ್ದ ಇತರ ಲೈನ್ಮನ್ಗಳು ತಕ್ಷಣ ಕೋಲಿನಲ್ಲಿ ತಂತಿಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಕರೆ ಮಾಡಿದರೆ ಯಾರೂ ಫೋನ್ ತೆಗೆದುಕೊಳ್ಳದ್ದರಿಂದ ಅಲ್ಲಿಂದ ಬಂದು ಲೈನ್ ಕಡಿತಗೊಳಿಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಲಕ್ಷ್ಮಣ್ ಕಂಬದ ಮೇಲೆಯೇ ನೇತಾಡುತ್ತಿದ್ದರು. ಆ ನಂತರ ಸ್ಥಳಕ್ಕೆ ತೆರಳಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಲೈನ್ಮನ್ಗಳು ಲಕ್ಷ್ಮಣ್ ಅವರನ್ನು ಕೆಳಕ್ಕೆ ಇಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಅವರನ್ನು ಕಳುಹಿಸಲಾಯಿತು.
ಟ್ರಾನ್ಸ್ಫಾರ್ಮರ್ ಕೆಲಸ ಮಾಡುವ ಮುನ್ನವೇ ಲೈನ್ ಆಫ್ ಮಾಡಿಸಲು ತಿಳಿಸಿದ್ದರೂ ಯಾರಿಂದ ಮತ್ತು ಹೇಗೆ ಈ ಅಚಾತುರ್ಯ ನಡೆದಿದೆ ಎಂದು ತಿಳಿದು ಬಂದಿಲ್ಲ.
ಈ ಬಗ್ಗೆ ಎ.ಇ.ಇ ಪರಮೇಶ್ವರ್ ಅವರನ್ನು ಕೇಳಿದಾಗ, ‘ಕಛೇರಿಯಲ್ಲಿ ಲೈನ್ ಕ್ಲಿಯರ್ ತೆಗೆದುಕೊಂಡು ಹೋಗಿದ್ದಾರೆ. ಮನೆಗಳಲ್ಲಿರುವ ಯುಪಿಎಸ್ ನಿಂದ ಬಂದ ವಿದ್ಯುತ್ ನಿಂದ ಅವಘಡ ಸಂಭವಿಸಿರಬಹುದು’ ಎಂದು ತಿಳಿಸಿದ್ದಾರೆ.
ವಿದ್ಯುತ್ ಶಾಕ್ ನಿಂದ ಅಸ್ವಸ್ಥಗೊಂಡ ಲೈನ್ಮನ್
ನೆಹರೂ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಕೋರಿದ ಕ್ರೀಡಾಪಟುಗಳು
ನಗರದ ನೆಹರೂ ಕ್ರೀಡಾಂಗಣದಲ್ಲಿ ಸಾಕಷ್ಟು ಅವ್ಯವಸ್ಥೆಗಳಿದ್ದು ಅವುಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಬೇಕೆಂದು ಕ್ರೀಡಾಪಟುಗಳು ಯುವಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಧಿಕಾರಿ ಜಯಲಕ್ಷ್ಮಿ ಅವರಿಗೆ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣಕ್ಕೆ ಗುರುವಾರ ಭೇಟಿ ನೀಡಿದ್ದ ಅವರಿಗೆ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿನ ಅವ್ಯವಸ್ಥೆ, ಕಳಪೆ ಕಾಮಗಾರಿಯ ಹಾಗೂ ಇಲ್ಲಿನ ಅನೈರ್ಮಲ್ಯದ ಬಗ್ಗೆ ತೋರಿಸಿ ವಿವರಿಸಿದರು.
ಕ್ರೀಡಾಂಗಣವನ್ನು ರಾಜಕೀಯ ಕಾರ್ಯಕ್ರಮಗಳಿಗೆ, ಸಿನೆಮಾ ಕಾರ್ಯಕ್ರಮಗಳಿಗೆ ನೀಡುವಾಗ ಮುಚ್ಚಳಿಕೆಯನ್ನು ಬರೆಸಿಕೊಡಬೇಕು. ಅವರು ಕ್ರೀಡಾಂಗಣದಲ್ಲಿ ಹಾಳು ಮಾಡುವುದನ್ನು ಸರಿಪಡಿಸಲು ಹಣವನ್ನು ಪಡೆಯಬೇಕು. ಒಂದು ಬಾರಿ ಕಾರ್ಯಕ್ರಮ ನಡೆದರೆ ಕ್ರೀಡಾಪಟುಗಳಿ ಕನಿಷ್ಠ ಒಂದು ತಿಂಗಳು ಅತ್ತ ಸುಳಿಯಲು ಕಷ್ಟವಾಗುತ್ತದೆ. ಕ್ರೀಡಾಂಗಣಕ್ಕೆ ಕಾವಲು ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸುತ್ತಲಿನ ಮನೆಗಳವರಿಗೆ ಕಸ ಸುರಿಯುವ ಸ್ಥಳವಾಗಿದೆ. ಸರ್ಕಾರ ಲಕ್ಷಾಂತರ ಹಣ ಬಿಡುಗಡೆ ಮಾಡಿದ್ದರೂ ಅದರ ಸದುಪಯೋಗವಾಗಿಲ್ಲ. ಹೀಗಿದ್ದಾಗ ಕ್ರೀಡಾಪಟುಗಳು ಹೇಗೆ ತಾನೆ ಇಲ್ಲಿ ತರಬೇತಿ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಧಿಕಾರಿ ಜಯಲಕ್ಷ್ಮಿ ಮಾತನಾಡಿ, ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೊದಲ ಕಂತು 25 ಲಕ್ಷ ರೂಗಳು ಬಿಡುಗಡೆಯಾಗಿದೆ. ಈಗ ನಡೆದಿರುವ ಕೆಲಸದ ಗುಣಮಟ್ಟದ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ನಾವು ವರದಿ ಮಾಡಬೇಕಿದೆ. ತಾಲ್ಲೂಕು ಕ್ರೀಡಾಂಗಣ ಸಮಿತಿ ಅಧ್ಯಕ್ಷರನ್ನಾಗಿ ಶಾಸಕರನ್ನೇ ಆಯ್ಕೆ ಮಾಡಿ ಸರ್ಕಾರ ಆದೇಶ ಮಾಡಿದೆ. ಹಾಗಾಗಿ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗುವುದು. ಸಭೆಯ ನಡಾವಳಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಇಲ್ಲಿನ ಪರಿಸ್ಥಿತಿ ಹಾಗೂ ಕ್ರೀಡಾಪಟುಗಳ ಸಮಸ್ಯೆಯನ್ನು ಅವರಿಗೆ ತಿಳಿಸುತ್ತೇನೆ’ ಎಂದು ಹೇಳಿದರು.
ಕ್ರೀಡಾಂಗಣದ ಮೇಲ್ವಿಚಾರಕ ಶ್ರೀನಿವಾಸ್, ಕ್ರೀಡಾಪಟುಗಳಾದ ಟಿ.ಟಿ.ನರಸಿಂಹಪ್ಪ, ಎಸ್.ವಿ.ನಾಗರಾಜರಾವ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ.ಸಾ.ಪ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಉದ್ಘಾಟನೆ ಮತ್ತು ನೂತನ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭವನ್ನು ಮೇ 22 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ನಗರೇಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಂ.ರಾಜಣ್ಣನವರು ನೆರವೇರಿಸಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿಗಳಾದ ಹರೀಶ್ ಆರ್.ಭಟ್ ಆಗಮಿಸಲಿದ್ದು, ‘ಸಾಹಿತ್ಯದಲ್ಲಿ ವಿಜ್ಞಾನ ಮತ್ತು ಪರಿಸರ’ ವಿಷಯವಾಗಿ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎನ್.ಶ್ರೀನಿವಾಸ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ವೈ.ಎಲ್.ಹನುಮಂತರಾವ್, ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ ಭಾಗವಹಿಸುವರು.
ಜೆ ಡಿ ಎಸ್ ನಿಂದ ಬಿಜೆಪಿಗೆ ಸೇರ್ಪಡೆ
ತಾಲ್ಲೂಕಿನ ಜೆಡಿಎಸ್ ಮುಖಂಡರಾದ ತರಬಳ್ಳಿ ಭಾಸ್ಕರರೆಡ್ಡಿ ಮತ್ತು ದೊಣ್ಣಹಳ್ಳಿ ರಾಮಣ್ಣ ಅವರ ನೇತೃತ್ವದಲ್ಲಿ ಸುಮಾರು 18 ಮಂದಿ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿ.ಜೆ.ಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಚೆಗೆ ಬೆಂಗಳೂರಿನ ಬಿ.ಜೆ.ಪಿ ಕಾರ್ಯಾಲಯದಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ಯಡಯೂರಪ್ಪ, ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ ಮತ್ತು ಉಸ್ತುವಾರಿ ರವೀಂದ್ರ ಅವರ ಸಮ್ಮುಖದಲ್ಲಿ ಈ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಿ.ಜೆ.ಪಿ ತಾಲ್ಲೂಕು ಮುಖಂಡರಾದ ಶ್ರೀರಾಮರೆಡ್ಡಿ, ಸುರೇಶ್, ನಂದೀಶ್, ಲೋಕೇಶ್ಗೌಡ, ದಾಮೋದರ್, ಅರಿಕೆರೆ ಮುನಿರಾಜು, ಸುಜಾತಮ್ಮ, ಮಂಜುಳಮ್ಮ, ರತ್ನಮ್ಮ, ಶಿವಕುಮಾರಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು ಎಂದು ತಿಳಿಸಿದ್ದಾರೆ.
ಕ.ಸಾ.ಪ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಿ
ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ತಾಲ್ಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬರನ್ನೂ ತಲುಪುವ ಉದ್ದೇಶವನ್ನು ಹೊಂದಿರುವುದಾಗಿ ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಗುರುವಾರ ತಾಲ್ಲೂಕು ಪಂಚಾಯತಿ ನೂತನ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮತ್ತು ಉಪಾಧ್ಯಕ್ಷ ಎಚ್.ನರಸಿಂಹಯ್ಯ ಅವರಿಗೆ ತಾಲ್ಲೂಕು ಕ.ಸಾ.ಪ ವತಿಯಿಂದ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ಪಕ್ಷಬೇಧವಿಲ್ಲದೆ, ಜಾತಿಬೇಧವಿಲ್ಲದೆ ಪ್ರತಿಯೊಬ್ಬರನ್ನೂ ಕ.ಸಾ.ಪ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಕನ್ನಡ ತಾಯಿಯ ಕೆಲಸ ಶ್ರೇಷ್ಠವಾದದ್ದು. ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದೇ ನಮ್ಮ ಭಾಗ್ಯ. ತಾಲ್ಲೂಕು ಪಂಚಾಯತಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕ.ಸಾ.ಪ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ಕೋರಿದರು.
ಕ.ಸಾ.ಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್.ಎ.ಉಮೇಶ್, ರಾಮ್ಬಾಬು, ನರಸಿಂಹಮೂರ್ತಿ, ಶ್ರೀನಿವಾಸ್, ನಾರಾಯಣಸ್ವಾಮಿ,ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹೊಸ್ತಿಲಲ್ಲಿ ಕಾದಿದೆ ವೀ – ಅಪಾಯ!
ಇತ್ತೀಚೆಗೆ ಪರಿಚಿತ ಬಿಎಸ್‍ಎನ್‍ಎಲ್ ಅಧಿಕಾರಿಯೊಬ್ಬರು ಹೇಳುತ್ತಿದ್ದರು, “ನಮ್ಮ ಗ್ರಾಮೀಣ ಬ್ರಾಡ್‍ಬ್ಯಾಂಡ್ ಯೋಜನೆ ಜಾರಿಗೊಳ್ಳುವವರೆಗೆ ಈ ಪರಿ ಹಳ್ಳಿ ಮನೆಗಳಲ್ಲಿ ಕಂಪ್ಯೂಟರ್‍ಗಳಿವೆ ಎಂಬುದೇ ಗೊತ್ತಿರಲಿಲ್ಲ” ಅವರದ್ದು ಹರ್ಷದ ಉದ್ಘಾರ. ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ವೀ… ಅಪಾಯ ನಮ್ಮ ಬೆನ್ನ ಹಿಂದೆಯೇ ಇದೆ!
ಏನಿದು ವೀ?
ವಿದ್ಯುತ್ ಉಪಕರಣಗಳು ಹಾಗೂ ಎಲೆಕ್ಟ್ರ್ರಾನಿಕ್ ಸಾಧನಗಳ ತ್ಯಾಜ್ಯವನ್ನು ಇ – ವೇಸ್ಟ್ ಎನ್ನುತ್ತೇವೆ. ಇದನ್ನೇ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ವೀ(ಡಬ್ಲ್ಯುಇಇಇ)! ಕಂಪ್ಯೂಟರ್, ಲ್ಯಾಪ್‍ಟಾಪ್, ಟಿವಿ, ರೇಡಿಯೋ, ಫ್ರಿಜ್, ಮೊಬೈಲ್, ಡಿವಿಡಿಗಳೇ ಈ ವೀಗಳಾಗಿ ಪರಿವರ್ತಿತವಾಗುತ್ತವೆ. ಜನ ಬಳಸುವ ಎಲೆಕ್ಟ್ರಾನಿಕ್ ಸಲಕರಣೆಗಳು ಹಾಗೂ ಐಟಿ ಉಪಕರಣಗಳನ್ನು ಇ ವೇಸ್ಟ್ ಎನ್ನುವ ನಾವು ಎಲ್ಲ ಮಾದರಿಯ ಉದ್ಯಮಗಳು ಬಳಸಿ ಬಿಸಾಡಿದ ಎಲೆ-ಕ್ಟ್ರಾನಿಕ್, ಕ್ಟ್ರಿಕ್ ಯಂತ್ರೋಪಕರಣಗಳನ್ನು ವೀ ಎನ್ನಬೇಕಾಗುತ್ತದೆ.
ಈಗಾಗಲೆ ಯುರೋಪಿಯನ್ ಯೂನಿಯನ್ (ಇಯು) ವೀ ವ್ಯಾಪ್ತಿಗೆ ಹತ್ತು ವರ್ಗಗಳನ್ನು ಸೇರಿಸಿದೆ. ಫ್ರಿಜ್, ವಾಶಿಂಗ್ ಮೆಶಿನ್, ಎಸಿ, ಐರನ್ ಬಾಕ್ಸ್, ಟೋಸ್ಟರ್, ಕಾಫಿ ಮೆಶಿನ್, ವ್ಯಾಕ್ಯುಮ್ ಕ್ಲೀನರ್, ಕಂಪ್ಯೂಟರ್ ಸಲಕರಣೆಗಳು, ಫೋನ್, ಮೊಬೈಲ್, ಫ್ಯಾಕ್ಸ್, ಝೆರಾಕ್ಸ್, ಪ್ರಿಂಟರ್, ವಿಸಿಡಿ, ಡಿವಿಡಿ, ಹ್ಯಾಲೋಜನ್ ಬಲ್ಬ್, ವೈದ್ಯಕೀಯ ಉಪಕರಣಗಳು….. ಹೀಗೆ ಪಟ್ಟಿ ಮಾರುದ್ದವಿದೆ. ಅಲ್ಲಿ ಇ ವೇಸ್ಟ್ ನಿರ್ವಹಣೆಗೆ ಸ್ಪಷ್ಟ ಮಾನದಂಡವಿದೆ. ಸದ್ಯ ಭಾರತದಲ್ಲಿ ಆ ವಿಚಾರದಲ್ಲಿ ಕಾನೂನು ಕಣ್ಣು ಮುಚ್ಚಿಕೊಂಡು ಕೂತಿದೆ!
ಸಮಸ್ಯೆ ದೊಡ್ಡದಾಗಿಲ್ಲ ಎನ್ನುವಂತಿಲ್ಲ. ನಮ್ಮ ಸಂವಹನ ಮಾಧ್ಯಮಗಳನ್ನು ನಿದ್ರಿಸಲು ಬಿಟ್ಟು ಕೂತಿದ್ದೇವೆ ಎಂಬುದೇ ಸರಿ. ಭಾರತದ ಮೆಟ್ರೋಗಳಲ್ಲಿ ಇ ವೇಸ್ಟ್ ಸ್ಲಂಗಳಂತೆಯೇ ಬೆಳೆಯುತ್ತಿದೆ. ಒಂದು ಅಧ್ಯಯನದ ಪ್ರಕಾರ, ಶೇ.90ರಷ್ಟು ತ್ಯಾಜ್ಯ `ವೀ’ಯಿಂದ ಎಂಬುದು ಸ್ಪಷ್ಟ. 42.1 ಶೇ. ಪ್ರಮಾಣದ ಇ ವೇಸ್ಟ್ ಮನೆಯ ಉಪಕರಣಗಳಿಂದ, ಐಟಿಯಿಂದ ಶೇ.33.9 ಹಾಗೂ ಎಲೆಕ್ಟ್ರಾನಿಕ್ ಕ್ಷೇತ್ರದಿಂದ 13.7ಶೇ.ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
ಎಂಎಐಟಿ ಎಂಬ ಸಂಸ್ಥೆಯೊಂದಿದೆ. ಐಟಿ ಕ್ಷೇತ್ರದ ತಯಾರಕರ ಸಂಘಟನೆಯಿದು. ಇದು 2007ರಲ್ಲಿ ಭಾರತದಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಟಗೊಂಡಿದೆ. ಇ ವೇಸ್ಟ್ ಒಟ್ಟು 65 ನಗರಗಳಲ್ಲಿ ಹೊರಬೀಳುತ್ತಿದೆ. ಅದರಲ್ಲಿ ಮುಂಬೈಗೆ ಅಗ್ರ ಪಟ್ಟ. 07ರಲ್ಲಿ ದೇಶದಲ್ಲಿ ಒಟ್ಟು 3.80 ಲಕ್ಷ ಟನ್ ಕಂಪ್ಯೂಟರ್, ಮೊಬೈಲ್, ಟಿವಿಗಳ ಕಸ ಸೃಷ್ಟಿಯಾಗಿತ್ತು. ಅದರದೇ ಅಂದಾಜಿನ ಪ್ರಕಾರ 2012ರಲ್ಲಿ ಇದು 8 ಲಕ್ಷ ಟನ್ ದಾಟಿದರೆ ಅಚ್ಚರಿಯಿಲ್ಲ!
ವೀ ಅಪಾಯ ನಮಗಿನ್ನೂ ಅರ್ಥವೇ ಆಗಿಲ್ಲ. ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ, ಪಾದರಸದಂತ ಅಪಾಯಕಾರಿ ಭಾರ ಲೋಹಗಳ ಶಿಲ್ಕು ಮತ್ತು ಪೀಲಿಕ್ಲೋರಿನೇಟೆಡ್ ಟಿಪೆನೆಲ್ಸ್ (ಪಿಸಿಬಿ), ಪ್ರಲೇಟ್ಸ್‍ನಂತ ವಿಷಕಾರಿ ಧಾತುಗಳು ಇ ವೇಸ್ಟ್ ಆಸ್ತಿ! ನೀರು ಹಾಗೂ ಭೂಮಿಯನ್ನು ಸೇರುತ್ತಿರುವ ಇವು ಭವಿಷ್ಯದ ಭಯೋತ್ಪಾದಕರು. ಹೋಗಲಿ, ಇವುಗಳ ಸುರಕ್ಷಿತ ಪುನರ್ಬಳಕೆಯ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಭಾರತದಲ್ಲಿ ಕೇವಲ ಎರಡು ಸಣ್ಣ ಪ್ರಮಾಣದ `ಅಧಿಕೃತ’ ಪುನರ್ಬಳಕೆ ಯೂನಿಟ್‍ಗಳೂ ಪ್ರಸ್ತುತ ಕಾರ್ಯಪ್ರವೃತ್ತವಾಗಿವೆ. ಬೆಂಗಳೂರಿನಲ್ಲಿರುವ `ಇ-ಪರಿಸರ’ ಅಂತದಲ್ಲೊಂದಾದರೆ ಇನ್ನೊಂದು ಯೂನಿಟ್ ಚೆನ್ನೈನಲ್ಲಿದೆ. 3.80 ಲಕ್ಷ ಟನ್‍ಗೆ ಅದು ಸಾಕೆ ಎಂಬ ಪ್ರಶ್ನೆಯೇ ಹಾಸ್ಯಾಸ್ಪದವಾದೀತು.
2003ರಲ್ಲಿ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ನಿಯಮಗಳು ಜಾರಿಗೊಂಡಿದ್ದು ನಿಜ. ಇದರಲ್ಲಿ ಕೂಡ ವೀ ಪುನರ್ಬಳಕೆಗೆ ಸ್ಪಷ್ಟ ಕಾನೂನು ಅಥವಾ ಮಾನದಂಡ, ತಂತ್ರಜ್ಞಾನವನ್ನು ಹೆಸರಿಸಿಲ್ಲ. ಇದು ಅನಧಿಕೃತ – ಅಪಾಯಕಾರಿ ಪುನರ್ಬಳಕೆ ಕಾನೂನುಗಳ ಹುಟ್ಟಿಗೆ ಕಾರಣವಾಗಿದೆ. ಬಹುಷಃ ಹಳ್ಳಿಗಳಲ್ಲೂ ಈ ಪರಿ ಕಂಪ್ಯೂಟರ್, ಎಲೆಕ್ಟ್ರಿಕ್-ಕ್ಟ್ರಾನಿಕ್ ಸಲಕರಣೆಗಳು ಇರುವುದು ಅಪಾಯದ ಗಾಢತೆಯನ್ನಷ್ಟೇ ಹೇಳುತ್ತದೆ.
ಸರ್ಕಾರದ್ದು ನಿಧಾನಗತಿ. 2004ರ ಜುಲೈನಲ್ಲಿ ಒಂದು ಸ್ಪಷ್ಟ ಕಾರ್ಯಯೋಜನೆ ರೂಪಿಸಲು ರಾಷ್ಟ್ರೀಯ ವೀ ಟಾಸ್ಕ್‍ಫೋರ್ಸ್ ಸ್ಥಾಪನೆಯಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ನಿಗಮ (ಸಿಪಿಸಿಬಿ)ಯ ಅಧ್ಯಕ್ಷರದ್ದೇ ಮುಂದಾಳತ್ವ. ಅಂತೂ 05ರ ಮಾರ್ಚ್ ವೇಳೆಗೆ ಪರಿಸರ ಹಾಗೂ ಅರಣ್ಯ ಸಚಿವಾಲಯ ಇ ವೇಸ್ಟ್‍ಗಳ ದಕ್ಷ ನಿರ್ವಹಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ತಾಂತ್ರಿಕ ಅಂಶಗಳಿಗೆ ಪ್ರಾಮುಖ್ಯ ಕೊಟ್ಟುದಲ್ಲದೆ, ತಯಾರಕರೇ ತಮ್ಮ ವಸ್ತುವನ್ನು ಹಿಂಪಡೆಯುವ ಸೂತ್ರವನ್ನು ಅದು ಒತ್ತಿ ಹೇಳಿದೆ. ಇದರಿಂದ ಮಾತ್ರ ಪುನರ್ಬಳಕೆ ನಿರಪಾಯಕಾರಿಯಾಗಿ ಯಶಸ್ವಿಯಾದೀತು ಎಂಬುದು ಹಿನ್ನೆಲೆಯಲ್ಲಿದ್ದ ಅಂಶ. ಕಾನೂನನ್ನೇ ಪಾಲಿಸದಿರುವ ದೇಶದಲ್ಲಿ ಮಾರ್ಗದರ್ಶಿ ಸೂತ್ರಗಳಿಗೆ ಎಲ್ಲಿದೆ ಕಿಮ್ಮತ್ತು?
`ಮುಂದುವರೆದ ತಯಾರಕರ ಜವಾಬ್ದಾರಿ’ಯನ್ನು ತೋರಿದ್ದು ಕೆಲವೇ ಕಂಪನಿ. ವಿಪ್ರೋ, ಹೆಚ್‍ಸಿಎಲ್‍ನಂತವು ಇಂತಹ ಟೇಕ್‍ಬ್ಯಾಕ್ ಕಾರ್ಯಕ್ರಮವನ್ನು ಆರಂಭಿಸಿದ್ದೇನೋ ನಿಜ, ಜನರ ಪ್ರತಿಕ್ರಿಯೆ ನೀರಸವಾಗಿದ್ದುದು ಹೀನಾಯ. ಸೀಸ ಆಧಾರಿತ ಡಿಸಿ ಬ್ಯಾಟರಿಗಳ ವಿಚಾರದಲ್ಲಂತೂ ನಮ್ಮ ನಿರ್ಲಕ್ಷ್ಯ ಅಪಾಯಕಾರಿ. ಟೇಕ್ ಬ್ಯಾಕ್ ವ್ಯವಹಾರ ಅಲ್ಲೂ ಕಟ್ಟುನಿಟ್ಟಾಗಿ ನಡೆಯಬೇಕಿತ್ತು. ಆದರೆ….?
2006ರ ಅಕ್ಟೋಬರ್‍ನಿಂದ ಡಿಸೆಂಬರ್ ಅವಧಿಯಲ್ಲಿ ವಿಶ್ವದ ಒಟ್ಟಾರೆ ಕಂಪ್ಯೂಟರ್ ಮಾರಾಟ 1.39 ಮಿಲಿಯನ್ ದಾಟಿತ್ತು. ಈ ಸಂಖ್ಯೆ ಈಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದಾಖಲಾಗುತ್ತಿದೆ. ಇತ್ತ ಪ್ರಗತಿ ಆಗುವುದೆಂದರೆ ಇ ವೇಸ್ಟ್ ಪ್ರಮಾಣ ಬೃಹದಾಕಾರವಾಗುತ್ತಿದೆ ಎಂತಲೇ ಅರ್ಥ. ಟಾಕ್ಸಿಕ್ ಲಿಂಕ್ ಎಂಬ ಸರ್ಕಾರೇತರ ಸಂಸ್ಥೆಯ ಸಂಶೋಧನೆಯ ಅನ್ವಯ ಭಾರತದಲ್ಲಿ ಎಲೆಕ್ಟ್ರಾನಿಕ್ ತಯಾರಕರು ಮತ್ತು ಜೋಡಿಸುವವರು ಸೃಷ್ಟಿಸುವ ಇ ವೇಸ್ಟ್ ವಾರ್ಷಿಕ 1,050 ಟನ್!
ವೀ ಅಪಾಯ ಭಾರತದಂತ ದೇಶಗಳಲ್ಲಿ ಇನ್ನಷ್ಟು ಹೆಚ್ಚು. ಇಲ್ಲಿನ ಬಡತನ ಇ ವೇಸ್ಟ್‍ನ್ನು ಕಚ್ಚಾ ವಿಧಾನದಲ್ಲಿ ಪುನರ್ಬಳಕೆ ಮಾಡುವುದನ್ನು ಪ್ರೋತ್ಸಾಹಿಸುತ್ತದೆ. ಇಂದು ದೆಹಲಿಯಲ್ಲಿ ತಾಮ್ರದ ತಂತಿಯನ್ನು ಪಡೆಯಲು ವೈರ್‍ಗಳನ್ನು ಸುಡುವ ತಂತ್ರವನ್ನು ಬಳಸಲಾಗುತ್ತಿದೆ. ಸಕ್ರ್ಯೂಟ್ ಬೋರ್ಡ್‍ಗಳನ್ನು ಆ್ಯಸಿಡ್‍ನಲ್ಲಿ ಮುಕ್ತವಾಗಿ ಮಾನವ ಕೂಲಿಗಳೇ ಮುಳುಗಿಸುತ್ತಿದ್ದಾರೆ. ಈ ಆ್ಯಸಿಡ್‍ನ್ನು ನಂತರ ಭೂಮಿಗೆ ಸುರುವಲಾಗುತ್ತದೆ. ಬಂಗಾರ ಹುಡುಕಲು ಪಾದರಸ ಹಾಗೂ ಸೈನೈಡ್ ಅಮಾಲ್ಗಮ್ ಬಳಕೆಯಾಗಿ ಕೊನೆಗೆ ಅಲ್ಲಿನ ಡ್ರೈನೇಜ್‍ಗೆ ಸೇರ್ಪಡೆಯಾಗುತ್ತಿದೆ. ಈ ದೃಶ್ಯ ನಿಮಗೆ ಮುಂಬೈ, ಬೆಂಗಳೂರು, ಹೈದರಾಬಾದ್‍ಗಳಲ್ಲಿ ಕಾಣುತ್ತದೆ. ಎಚ್ಚರಗೊಳ್ಳಬೇಕಾದವರು ಯಾರು?
ಐಟಿ ಉದ್ಯಮದ ಚಮಕ್ ಚಮಕ್, ಎಲೆಕ್ಟ್ರಾನಿಕ್-ಕ್ಟ್ರಿಕ್ ಸಾಧನಗಳ ಮಾರಾಟ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿಯ ಮಂತ್ರ ಹೇಳುವ ಅರ್ಥ ತಜ್ಞರು ವೀ ಅಪಾಯವನ್ನು ಸಮರ್ಥವಾಗಿ ನಿರ್ವಹಿಸುವ ಸೂತ್ರವನ್ನು ಉತ್ತೇಜಿಸದಿದ್ದರೆ ಕೈಗೆ ಬಂದ ನಾಲ್ಕು ಕಾಸು ದೇಶದ ಆರೋಗ್ಯ ಕಾಪಾಡಲು ಸಾಕಾಗದು ಎಂಬುದಂತೂ ಸತ್ಯ.
ಮಾ.ವೆಂ.ಸ. ಪ್ರಸಾದ.
ಶಿಡ್ಲಘಟ್ಟದ ಡಾಲ್ಫಿನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು
1. ಸಿ.ಸುಹಾನಾ (97.44%), 2. ಎಂ.ದೀಕ್ಷಿತಾ (96.96%), 3. ಎನ್.ಲಕ್ಷ್ಮಿ (93.44%), 4. ಎಂ.ಸುಲ್ತಾನಾ ಕೌಸರ್ (92.64%), 5. ಎಲ್.ವಿಂದ್ಯಾ (92%), 6. ಮಹಮ್ಮದ್ ಅರ್ಫಾನ್ (91.04%), 7. ಎನ್.ಸಿಂಧು (90.72%).
ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯ ವಿದ್ಯಾರ್ಥಿಗಳು
1. ಬಿ. ರಾಗಿಣಿ (94.88%), 2. ಎನ್.ಎಲ್.ಸುಪ್ರಿಯ (94.40%), 3. ಎಚ್.ಎಂ.ಚಂದನ (91.84%), 4. ಜೆ.ಆರ್.ರಮ್ಯ (90.56%), 5. ಐ.ಎ.ಶರತ್ (90.40%).
ಶಿಡ್ಲಘಟ್ಟದ ಹನುಮಂತಪುರ ಗೇಟ್ ಬಳಿಯಿರುವ ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು
1. ವಿ.ಕೆ.ಸೌಜನ್ಯ (608 – 97.28%), 2. ಬಿ.ಎಸ್.ಕಾರ್ತಿಕ್ಕುಮಾರ್ (605 – 96.8%), 3. ಬಿ.ಕೆ.ಮಧು (602 – 96.32%), 4. ಡಿ.ನಾಗೇಶ್ (602 – 96.32%), 5. ಬಿ.ಎನ್.ನಾಗೇಂದ್ರ (600 – 96%), 6. ಕೆ.ಮಧುಸೂದನ್ (598 – 95.68%), 7. ಕೆ.ಎನ್.ಸಿರೀಶ (598 – 95.68%), 8. ಕೆ.ಎಸ್. ನವ್ಯಶ್ರೀ (592 – 94.72%), 9. ಎ.ವಿ.ಮಾನಸ (580 – 92.8%), 10. ಡಿ.ಪಿ.ಸುಬ್ರಮಣ್ಯಂ (578 – 92.48%), 11. ಎಸ್.ಡಿ.ಚಾಂದಿನಿ (574 – 91.84%), 12. ಎಸ್.ಭುವನ್ (573 – 91.68%), 13. ರಾಘವೇಂದ್ರಗೌಡ (573 – 91.68%), 14. ಎನ್.ಎಸ್.ನಾಗೇಶ್ (564 – 90.24%), 15. ಎಸ್.ಪ್ರೀತಿ (563 – 90.08%).
ಮಳೆಯಿಂದ ಅಸ್ತವ್ಯಸ್ಥಗೊಂಡ ಶಿಡ್ಲಘಟ್ಟ ನಗರ
ನಗರದಲ್ಲಿ ಬುಧವಾರ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತವಾದ ಮಳೆ ಬಿದ್ದ ಕಾರಣ ಕೆಲವು ಮರಗಳ ರೆಂಬೆಗಳು ಉರುಳಿಬಿದ್ದಿವೆ. ಬಸ್ ನಿಲ್ದಾಣದ ಬಳಿ ಚರಂಡಿ ತುಂಬಿ ತ್ಯಾಜ್ಯವೆಲ್ಲಾ ರಸ್ತೆ ಮೇಲೆ ಕಪ್ಪು ಬಣ್ಣದಿಂದ ಹರಿಯಿತು.
ಚರಂಡಿಗಳು ಹಾಗೂ ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ರಸ್ತೆಯೆಲ್ಲಾ ತ್ಯಾಜ್ಯದಿಂದ ತುಂಬಿ ಹೋಗಿತ್ತು. ರಸ್ತೆ ಬದಿಯ ಅಂಗಡಿಗಳಿಗೂ ತ್ಯಾಜ್ಯದ ನೀರು ಸಿಂಪಡನೆಯಾಯಿತು. ರಸ್ತೆ ಬದಿಯ ವೀಳೆಯದೆಲೆ, ತೆಂಗಿನಕಾಯಿ ಮುಂತಾದ ವ್ಯಾಪಾರಸ್ತರು ಧಿಡೀರನೆ ಬಿದ್ದ ಮಳೆ ಹಾಗೂ ಚರಂಡಿ ನೀರಿನಿಂದಾಗಿ ಪರದಾಡಿದರು. ಶಾಸಕ ಎಂ.ರಾಜಣ್ಣ ಅವರ ಮನೆಯ ಮುಂದಿನ ರಸ್ತೆಯೂ ಚರಂಡಿ ನೀರಿನಿಂದ ಆವೃತವಾಗಿತ್ತು.
ಅಂಚೆ ಕಛೇರಿಯ ರಸ್ತೆಯಲ್ಲಿ ಸಾಲಾಗಿರುವ ಮಳೆ ಮರಗಳ ರೆಂಬೆಗಳು ಮುರಿದುಬಿದ್ದವು. ಮಳೆಯೆಂದು ರಸ್ತೆಯಲ್ಲಿ ಜನಸಂಚಾರವಿರದ ಕಾರಣ ಯಾರಿಗೂ ಅಪಾಯವಾಗಿಲ್ಲ. ಕಾಂಗ್ರೆಸ್ ಭವನದ ಮೇಲೆ ಮಳೆಮರದ ದೊಡ್ಡ ರೆಂಬೆಯು ಮುರಿದುಬಿದ್ದಿದೆ.
ನಗರದ ಹಲವಾರು ಪ್ರದೇಶಗಳಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ತ್ಯಾಜ್ಯದೊಂದಿಗೆ ಬೆರೆತು ಮನೆಗಳಿಗೆ ನುಗ್ಗಿದೆ. ಹನ್ನೆರಡನೇ ವಾರ್ಡ್ನ ಖಾಸಿಂಪಾಳ್ಯದಲ್ಲಿ ನಸೀರ್ ಪಾಷ ಅವರ ಮನೆಯ ಮೇಲೆ ಸಿಲ್ವರ್ ಮರ ಉರುಳಿ ಬಿದ್ದಿದೆ. ಅವರ ರೇಷ್ಮೆ ಬಿಚ್ಚಾಣಿಕಾ ಘಟಕದ ಒಳಗೆ ತ್ಯಾಜ್ಯದ ನೀರೆಲ್ಲಾ ನುಗ್ಗಿ ಅಸ್ತವ್ಯಸ್ತಗೊಂಡಿದೆ.
ಪ್ರತಿ ಬಾರಿಯೂ ಮಳೆ ಬಂದಾಗ ನಡೆಯುವ ಈ ಅವ್ಯವಸ್ಥೆಯನ್ನು ಸರಿಪಡಿಸುತ್ತಿಲ್ಲ. ಕುಡಿಯುವ ನೀರಿನ ಸಂಪಿಗೆ ತ್ಯಾಜ್ಯ ಹರಿದು ಹೋಗಿ ಆಗುವ ಅನಾಹುತಕ್ಕೆ ಯಾರು ಹೊಣೆ. ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡದ ನಗರಸಭೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಜನಗಳು ಹರಿಹಾಯ್ದರು.
ಮುಂಗಾರಿನ ಮುನ್ಸೂಚನೆ
ಶಿಡ್ಲಘಟ್ಟದಲ್ಲಿ ಬುಧವಾರ ಸಂಜೆ ಬಿದ್ದ ಮಳೆಯಲ್ಲಿ ಎತ್ತಿನ ಬಂಡಿಯಲ್ಲಿ ಕುಳಿತು ಗೋಣಿಚೀಲವನ್ನು ಹೊದ್ದು ಮಳೆಯನ್ನು ಲೆಕ್ಕಿಸದೇ ಸಾಗುತ್ತಿದ್ದ ದೃಶ್ಯ ಕಂಡುಬಂದಿತು.
ನಗರದಾದ್ಯಂತ ಮೂಲಭೂತ ಸಮಸ್ಯೆಗಳು:ಆಕ್ರೋಷಗೊಂಡ ಸದಸ್ಯರು
ನಗರಸಭೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡುಗಳ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಕಳೆದ ಒಂಬತ್ತು ತಿಂಗಳ ಹಿಂದೆ ಕೊರೆದ ಕೊಳವೆಬಾವಿಗೆ ಈವರೆಗೂ ಮೋಟರ್, ಪಂಪು ಅಳವಡಿಸಿಲ್ಲದಿರುವುದರಿಂದ ಕೊಳವೆಬಾವಿ ಕೊರೆಸಿದಾಗ ೬,೦೦೦ ಗ್ಯಾಲನ್ ಬರುತ್ತಿದ್ದ ನೀರು ಇದೀಗ ಒಂದು ಸಾವಿರಕ್ಕಿಳಿದಿದೆ. ಸಾಲದೆಂಬಂತೆ ಇತ್ತೀಚೆಗೆ ನಗರದಾದ್ಯಂತ ೧೯ ಕೊಳವೆ ಬಾವಿ ಕೊರೆಸಿದ್ದು ೧೨ ರಲ್ಲಿ ನೀರು ಸಿಕ್ಕಿದೆ. ಇದಕ್ಕೆ ಮೋಟರ್ ಪಂಪು ಅಳವಡಿಸಲು ಯಾವ ಕ್ರಮ ಜರುಗಿಸಿದ್ದೀರಿ ಎಂದು ನಗರಸಭೆ ಸದಸ್ಯ ಜೆ.ಎಂ.ಬಾಲಕೃಷ್ಣ ಕೇಳಿದ ಪ್ರಶ್ನೆಗೆ ೧೨ ಕೊಳವೆಬಾವಿಗಳಿಗೆ ಮೋಟರ್, ಪಂಪು ಅಳವಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು ಆದಷ್ಟು ಬೇಗ ಮೋಟರ್ ಪಂಪು ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಆಯುಕ್ತ ಹರೀಶ್ ಹೇಳಿದರು.
ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೆ ಪ್ರತಿ ತಿಂಗಳೂ ಸಂಬಳ ನೀಡಲು ಕ್ರಮ ಜರುಗಿಸಿ ಎಂದು ಸೂಚಿಸಿದ ಸದಸ್ಯರು ನಗರಸಭೆ ಆಯ-ವ್ಯಯದ ಬಗ್ಗೆ ಚರ್ಚಿಸಲು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಸೂಚಿಸಿದರು.
ಸದಸ್ಯ ಬಾಲಕೃಷ್ಣ ಮಾತನಾಡಿ, ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ. ಸಮರ್ಪಕವಾದ ನೀರಿನ ನಿರ್ವಹಣೆ ಮಾಡಿ. ಜನರಿಂದ ಆಯ್ಕೆಯಾದ ನಾವು ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಗರಸಭೆಯ ಆದಾಯ ಮತ್ತು ಖರ್ಚಿನ ಮಾಹಿತಿಯನ್ನು ನೀಡಿ ಎಂದು ಆಗ್ರಹಿಸಿದರು.
ಸದಸ್ಯೆ ಪ್ರಭಾವತಿ ಸುರೇಶ್, ತಮ್ಮ ವಾರ್ಡಿಗೆ ವಾಟರ್ ಮನ್ ಬಂದು ಒಂದು ತಿಂಗಳಾಯಿತು. ನೀರಿನ ಸಮಸ್ಯೆ ಬಿಗಡಾಯಿಸಿದೆ. ಅಧಿಕಾರಿಗಳು ಈ ಬಗ್ಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಸದಸ್ಯ ವೆಂಕಟಸ್ವಾಮಿ, 13ನೇ ವಾರ್ಡಿನಲ್ಲಿ ವಿದ್ಯುತ್ ದೀಪಗಳು ಅಂಟದೇ ಎರಡು ದಿನಗಳಾಗಿವೆ. ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಸದಸ್ಯ ಲಕ್ಷ್ಮಣ, ನೀರಿನ ಸಮಸ್ಯೆ ಅಷ್ಟೊಂದು ಕಾಡುತ್ತಿದ್ದರೂ ಕೊಳವೆ ಬಾವಿಗಳಿಗೆ ಏಕೆ ಇನ್ನೂ ಪಂಪ್ಸೆಟ್ ಅಳವಡಿಸಿಲ್ಲ, ಎರಡು ತಿಂಗಳಾದರೂ ಹರಾಜು ಹಣವನ್ನೇಕೆ ವಸೂಲು ಮಾಡಿಲ್ಲವೆಂದು ಅಧಿಕಾರಿಗಳನ್ನು ಕೇಳಿದರು.
ಸದಸ್ಯ ರಾಘವೇಂದ್ರ, ನಗರಸಭೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನಗರಸಭೆಯ ಕಟ್ಟಡಗಳಲ್ಲಿ ಆರು ತಿಂಗಳಿನಿಂದಲೂ ಬಾಡಿಗೆ ವಸೂಲಿ ಮಾಡಿಲ್ಲ. ಆದಾಯದ ಬಗ್ಗೆ ನಿರ್ಲಕ್ಷ್ಯ ವಹಿಸಿ, ನೌಕರರಿಗೆ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಸದಸ್ಯರು ಸೂಚಿಸಿದ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಆಯುಕ್ತ ಎಚ್.ಎ.ಹರೀಶ್ ಮಾತನಾಡಿ, ನಗರದಲ್ಲಿ ಇರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವಿಶೇಷ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಪೈಕಿ ೨೦೧೩–-೧೪ ನೇ ಸಾಲಿನ ೧೩ ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ಉಳಿಕೆ ಮೊತ್ತಕ್ಕಾಗಿ ಆಹ್ವಾನಿಸಿದ್ದ ಟೆಂಡರ್ ಅನುಮೋದಿಸುವುದು, ನಗರಸಭೆ ಕಛೇರಿ ಆಡಳಿತಕ್ಕೆ ಸಂಬಂಧಿಸಿದಂತೆ ಲಘು ಮೋಟಾರು ವಾಹನ ಬಾಡಿಗೆ ಆಧಾರದ ಮೇಲೆ ಸರಬರಾಜು ಮಾಡಲು ಆಹ್ವಾನಿಸಿದ್ದ ಟೆಂಡರ್ ದರಕ್ಕೆ ಅನುಮೋದನೆ ನೀಡುವುದು ಹಾಗೂ ಇತರ ನಾಲ್ಕು ವಿಷಯಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಅನುಮೋದಿಸಲಾಯಿತು.
ನಗರಸಭೆ ಅಧ್ಯಕ್ಷೆ ಮುಷ್ಠರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್(ನಂದು), ನಗರಸಭೆ ಸದಸ್ಯರು ಹಾಜರಿದ್ದರು.
ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳು
1. ಎಸ್.ಎನ್.ಚರಣ್ ಅಶ್ವ (590 – 94.4%), 2. ಆರ್.ನವ್ಯ (589 – 94.24%), 3. ಕೆ.ಎಸ್.ಗಿರಿಧರ್ (589 – 94.24%), 4. ಎಂ.ಗೀತಾಂಜಲಿ (588 – 94.08%), 5. ಎನ್.ಸಿಂಧು (585 – 93.6%), 6. ಜಿ.ಎಂ.ಧನಂಜಯ (585 – 93.6%), 7. ಎಂ.ಸಾಕ್ಷಿ (582 – 93.12%), 8. ತಸ್ಮಿಯಾ ಕೌಸರ್ (581 – 92.96%), 9. ಎಲ್.ಸೌಮ್ಯ (578 – 92.48%), 10. ಎನ್.ಗುಣಶ್ರೀ(577 – 92.32%), 11. ಎಸ್.ಹಂಸ (575 – 92%), 12. ವಿ.ಎಂ.ಚೇತನ್ (573 – 91.68%), 13. ವಿ.ಎನ್.ಸಂಧ್ಯಾ (572 – 91.52%), 14. ವಿ.ಎ.ನಂದಿನಿ (572 – 91.52%), 15. ಸೂರಜ್ ಗೌಡ (572 – 91.52%), 16. ಹೇಮಂತ್ ಗೌಡ (569 – 91.04%), 17. ಬಿ.ಆರ್.ನಂದನ್ (569 – 91.04%), 18. ಜಿ.ಎಂ.ಶುಭಾ(566 – 90.56%), 19. ಆಯಿಷಾ ಮುಸ್ಕಾನ್ (566 – 90.56%), 20. ಎ.ಪಿ.ಮೋನಿಕಾ (566 – 90.56%), 21. ಪಿ.ಸಂಧ್ಯಾ (565 – 90.4%).
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು
1. ಜಿ.ಆರ್.ಭರತ್ (594 – 95.04%), 2. ಆರ್.ವರ್ಷಿತ್ (583 – 93.28%), 3. ಎಚ್.ಎಸ್.ರಚಿತಾ (575 – 92%), 4. ಎಂ.ಲಿಖಿತಾ (570 – 91.2%), 5. ವಿ.ಭಾವನಾ (585 – 93.6%)
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು
1. ಎನ್.ರಕ್ಷಿತಾ (570 – 91.2%), 2. ಟಿ.ಎನ್.ನವೀನ್ (586 – 93.76%), 3. ಪಿ.ಮೇಘನಾ (582 – 93.12%), 4. ಎಸ್.ದಿನೇಶ್ಕುಮಾರ್ (599 – 95.84%), 5. ಎಂ.ಜೆ.ಮಹೇಶ್ (573 – 91.68%), 6.ಕೆ.ಎನ್.ನಂದಕುಮಾರ್ (578 – 92.48%), 7. ಎಂ.ಸುಮಂತ್ (576 – 92.16%), 8. ಬಿ.ಎಂ.ಸಂಜನಾ (578 – 92.48%), 9. ಎಂ.ಸಂಧ್ಯಾ (588 – 94.08%)
ಅಂಧ ಮಕ್ಕಳ ಶಾಲೆಗೆ ಶೇ.100 ರಷ್ಟು ಫಲಿತಾಂಶ
ಸತತವಾಗಿ ಏಳನೇ ವರ್ಷವೂ ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದಾರೆ.
ಈ ಬಾರಿ ಏಳು ಅಂಧ ವಿದ್ಯಾರ್ಥಿಗಳು ಬ್ರೈಲ್ ಲಿಪಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬರೆದಿದ್ದರು. 1. ಮೌನಿಕಾ (514 – 82.24%) 2. ನಾಗೇಶ್ (495 – 79.20%), 3. ಎಸ್.ವಾಣಿ (493 – 78.88%), 4. ವೆಂಕಟಾಚಲಪತಿ(472 – 75.52%), 5. ಸಿ.ಆರ್.ನರಸಿಂಹಮೂರ್ತಿ(462 – 73.92%), 6. ಆರ್.ಚರಣ್ರಾಜ್(461 – 73.76%), 7. ಆರ್.ಎಂ.ಮಂಜುನಾಥ್ (428 – 68.48%) ಅಂಕಗಳನ್ನು ಪಡೆದಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಪತ್ತಿನ ಸಂಘದ ಚುನಾವಣೆ
ಶಿಡ್ಲಘಟ್ಟ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಪತ್ತಿನ ಸಂಘದ ನೂತನ ಅಧ್ಯಕ್ಷರಾಗಿ ಬೋದಗೂರು ಚಂದ್ರೇಗೌಡ ಹಾಗೂ ಉಪಾಧ್ಯಕ್ಷರಾಗಿ ಎಸ್.ಗುಂಡ್ಲಹಳ್ಳಿ ರಾಮದಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೋದಗೂರು ಚಂದ್ರೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಗುಂಡ್ಲಹಳ್ಳಿ ರಾಮದಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿ ಎಂ.ವಿ.ವೆಂಕಟೇಶ್ಮೂರ್ತಿ ನಾಮಪತ್ರಗಳನ್ನು ಪರಿಶೀಲಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಹಾಗು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಯಾದಂತೆ ಘೋಷಿಸಿದರು.
ಆಡಳಿತ ಮಂಡಳಿ ನಿರ್ದೇಶಕರಾದ ಎನ್.ಗೋವಿಂದರಾಜು, ಕೆ.ವಿ.ಚೌಡರೆಡ್ಡಿ, ಎಂ.ಮುನಿರೆಡ್ಡಿ, ವಿ.ಕೃಷ್ಣಪ್ಪ, ಜಿ.ಎಂ.ದೇವರಾಜ, ಕೆ.ಎಂ.ರಾಮು, ಬೈರಪ್ಪ, ಆಂಜಿನಪ್ಪ.ಎಂ. ಮುನಿರಾಜು ಮತ್ತು ಮಹಿಳಾ ನಿರ್ದೇಶಕರಾದ ರತ್ನಮ್ಮ ಹಾಗೂ ಟಿ.ವಿ.ಸಾವಿತ್ರಮ್ಮ ಹಾಜರಿದ್ದರು.
ತಾಲ್ಲೂಕಿನ 13 ಶಾಲೆಗಳು ಶೇ.100 ರಷ್ಟು ಫಲಿತಾಂಶವನ್ನು ಪಡೆದಿವೆ
ಶೇ. ೧೦೦ ರಷ್ಟು ಫಲಿತಾಂಶ ಗಳಿಸಿರುವ ಶಾಲೆಗಳು:
ಸರ್ಕಾರಿ: ಸರ್ಕಾರಿ ಪ್ರೌಢ ಶಾಲೆ ಆನೆಮಡುಗು, ಸರ್ಕಾರಿ ಪ್ರೌಢಶಾಲೆ ಪಲಿಚೆರ್ಲು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪುರಬೈರನಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ೧೧ ನೇ ಮೈಲಿ
ಅನುದಾನಿತ ಶಾಲೆ: ನವೋದಯ ಪ್ರೌಢಶಾಲೆ ನಡಿಪಿನಾಯಕನಹಳ್ಳಿ
ಅನುದಾನ ರಹಿತ ಶಾಲೆಗಳು: ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆ ಶಿಡ್ಲಘಟ್ಟ, ಶಾರದಾ ಆಂಗ್ಲ ಪ್ರೌಢಶಾಲೆ ಶಿಡ್ಲಘಟ್ಟ, ಚೇತನ ಆಂಗ್ಲಮಾಧ್ಯಮ ಪ್ರೌಢಶಾಲೆ ತುಮ್ಮನಹಳ್ಳಿ, ಶ್ರೀ ಜ್ಯೋತಿ ಪ್ರೌಢಶಾಲೆ ಜಂಗಮಕೋಟೆ, ಯೂನಿವರ್ಸಲ್ ಪಬ್ಲಿಕ್ ಶಾಲೆ ವರದನಾಯಕನಹಳ್ಳಿ ಗೇಟ್, ಸೀತಾರಾಮಚಂದ್ರ ಪ್ರೌಢಶಾಲೆ ಬಳುವನಹಳ್ಳಿ, ಜ್ಞಾನೋದಯ ಪ್ರೌಢಶಾಲೆ ಗಂಜಿಗುಂಟೆ, ಬಿ.ಜಿ.ಎಸ್ ಹನುಮಂತಪುರ
ತಾಲ್ಲೂಕಿನ ಅತಿ ಹೆಚ್ಚು ಅಂಕ ಗಳಿಸಿದ ೫ ವಿದ್ಯಾರ್ಥಿಗಳು:
ಡಿ.ಜಿ.ಹರೀಶ, ಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆ ತುಮ್ಮನಹಳ್ಳಿ (೬೧೩ – ೯೮.೦೮%), ಸುಹಾನ, ಡಾಲ್ಫಿನ್ಸ್ ಪ್ರೌಢಶಾಲೆ ಶಿಡ್ಲಘಟ್ಟ (೬೦೯ – ೯೭.೪೪%), ವಿ.ಕೆ.ಸೌಜನ್ಯ, ಬಿ.ಜಿ.ಎಸ್ ಹನುಮಂತಪುರ (೬೦೮ – ೯೭.೨೮%), ದೀಕ್ಷಿತ, ಡಾಲ್ಫಿನ್ಸ್ ಪ್ರೌಢಶಾಲೆ ಶಿಡ್ಲಘಟ್ಟ(೬೦೬ – ೯೬.೯೬%), ಬಿ.ಸಿ.ಕಾರ್ತಿಕ್ ಕುಮಾರ್, ಬಿ.ಜಿ.ಎಸ್ ಹನುಮಂತಪುರ (೬೦೫ – ೯೬.೮೦%)
ರೈತನ ಮಗ ತಾಲ್ಲೂಕಿಗೆ ಪ್ರಥಮ: ತಾಲ್ಲೂಕಿನ ತುಮ್ಮನಹಳ್ಳಿಯ ಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಡಿ.ಜಿ.ಹರೀಶ (೬೧೩ – ೯೮.೦೮%) ಅಂಕಗಳನ್ನು ಪಡೆಯುವುದರೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮನಾಗಿದ್ದಾನೆ. ಡಿ.ಜಿ.ಹರೀಶ ಅವರ ತಂದೆ ಜಿ.ಗಂಗಪ್ಪ ದೊಡ್ಡದಾಸರಹಳ್ಳಿಯ ರೈತನಾಗಿದ್ದರೆ, ತಾಯಿ ದೊಡ್ಡದಾಸರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸವನ್ನು ಮಾಡುತ್ತಾರೆ. ‘ರೈತನ ಮಗನಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೊದಲಿಗನಾಗಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳಿಗೆ ಈತ ಸ್ಫೂರ್ತಿಯಾಗಿದ್ದಾನೆ’ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ವೀರಬ್ರಹ್ಮೇಂದ್ರಸ್ವಾಮಿಯವರ ಆರಾಧನೆ
ನಗರದ ಒಂದನೇ ನಗರ್ತಪೇಟೆಯಲ್ಲಿರುವ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶ್ವಕರ್ಮ ಜನಾಂಗದವರಿಂದ ಶ್ರೀಮತ್ ವಿರಾಟ್ ವೀರಬ್ರಹ್ಮೇಂದ್ರಸ್ವಾಮಿಯವರ ಆರಾಧನೆ, ಸಾಮೂಹಿಕ ಉಪನಯನಗಳು ಮತ್ತು ಅನ್ನದಾಸೋಹ ಭವನದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಸಮಿತಿ , ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಳಿ ಸಂಯುಕ್ತವಾಗಿ ವೈಶಾಖ ಸುದ್ಧ ದಶಮಿಯಂದು ನಡೆಸಿದ ಕಾರ್ಯಕ್ರಮಗಳಲ್ಲಿ ಮೂಲ ವಿಗ್ರಹಗಳಿಗೆ ಅಭಿಷೇಕ, ಸಾಮೂಹಿಕ ಉಪನಯನಗಳು, ಶ್ರೀಮತ್ ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಕಳಾಕರ್ಶನದ ಯಜ್ಞ, ಹೋಮ ಮತ್ತು ಕಳಶಸ್ಥಾಪನೆ, ವಿಶ್ವಕರ್ಮ ಯಜ್ಞ, ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್, ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ.ಮುನಿರತ್ನಾಚಾರ್, ದಿಬ್ಬೂರಹಳ್ಳಿಯ ಈಶ್ವರಾಚಾರ್, ಕೆ.ಎನ್.ಜನಾರ್ಧನಮೂರ್ತಿ, ಶ್ರೀನಿವಾಸಾಚಾರಿ, ಸುಂದರಾಚಾರಿ, ಕೃಷ್ಣಾಚಾರ್, ಜಗದೀಶ್ ಕುಮಾರ್ ಮತ್ತಿತರರು ಹಾಜರಿದ್ದರು.
ಅನಧಿಕೃತ ಶಾಲೆಗಳ ಪಟ್ಟಿ
ತಾಲ್ಲೂಕಿನಲ್ಲಿ ಅನಧಿಕೃತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಪ್ರಕಟಣೆಯಲ್ಲಿ ನೀಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ದಾಖಲು ಮಾಡಬಾರದು. ಒಂದು ವೇಳೆ ದಾಖಲು ಮಾಡಿದಲ್ಲಿ ಪೋಷಕರೇ ಜವಾಬ್ದಾರರಾಗಿದ್ದು, ಇಲಾಖೆಯು ಜವಾಬ್ದಾರಿಯಾಗುವುದಿಲ್ಲವೆಂದು ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿವರ:
ಯೂರೋ ಕಿಡ್ಸ್ ನರ್ಸರಿ ಶಾಲೆ, ಶಿಡ್ಲಘಟ್ಟ (ಎಲ್ಕೆಜಿ, ಯುಕೆಜಿ), ಅನಿಕೇತನ ವಿದ್ಯಾಮಂದಿರ, ಎಚ್.ಕ್ರಾಸ್ (1 ರಿಂದ 7ನೇ ತರಗತಿ ಆಂಗ್ಲ ಮಾಧ್ಯಮ), ಸಂತ ಥಾಮಸ್ ಶಾಲೆ, ಮೇಲೂರು (6 ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ), ಸೀತಾರಾಮಚಂದ್ರ ಪ್ರಾಥಮಿಕ ಶಾಲೆ, ಬಳುವನಹಳ್ಳಿ (6 ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ), ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆ, ಶಿಡ್ಲಘಟ್ಟ (6 ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ), ಯೂನಿವರ್ಸಲ್ ಪಬ್ಲಿಕ್ ಸ್ಕೂಲ್, ವರದನಾಯಕನಹಳ್ಳಿ ಗೇಟ್ (6 ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ), ಸಂತ ಥಾಮಸ್ ಶಾಲೆ, ಮೇಲೂರು (9 ಮತ್ತು 10ನೇ ತರಗತಿ ಆಂಗ್ಲ ಮಾಧ್ಯಮ), ಸೀತಾರಾಮಚಂದ್ರ ಪ್ರಾಥಮಿಕ ಶಾಲೆ, ಬಳುವನಹಳ್ಳಿ (9 ಮತ್ತು 10ನೇ ತರಗತಿ ಆಂಗ್ಲ ಮಾಧ್ಯಮ).

