ಮೂರು ದಶಕಗಳ ನಂತರ ಶಿಡ್ಲಘಟ್ಟ ತಾಲ್ಲೂಕು ಪಂಚಾಯತಿ ಆಡಳಿತ ಜೆಡಿಎಸ್ ತೆಕ್ಕೆಗೆ ಮರಳಿದೆ. ನೂತನ ಅಧ್ಯಕ್ಷರಾಗಿ ಹಂಡಿಗನಾಳ ಕ್ಷೇತ್ರದ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷರಾಗಿ ತುಮ್ಮನಹಳ್ಳಿ ಕ್ಷೇತ್ರದ ಸದಸ್ಯ ಎಚ್.ನರಸಿಂಹಯ್ಯ ಚುನಾಯಿತರಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಒಟ್ಟು ೧೭ ತಾಲ್ಲೂಕು ಪಂಚಾಯತಿ ಸದಸ್ಯರ ಪೈಕಿ ೯ ಮಂದಿ ಜೆಡಿಎಸ್ ಪಕ್ಷದ ಸದಸ್ಯರು ಜಯಗಳಿಸಿದ್ದು, ೮ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಒಂದು ಸದಸ್ಯ ಬಲ ಮಾತ್ರ ಜೆಡಿಎಸ್ಗೆ ಹೆಚ್ಚಿಗೆ ಇದ್ದಿದ್ದರಿಂದ ಅಧ್ಯಕ್ಷ ಗಾದಿ ಯಾರಿಗೆ ಒಲಿಯುವುದು ಎಂದು ತೀವ್ರ ಕುತೂಹಲ ಮೂಡಿಸಿತ್ತು. ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಒಮ್ಮತದ ಅಭ್ಯರ್ಥಿಯಾಗಿ ಹಂಡಿಗನಾಳ ಕ್ಷೇತ್ರದ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮೀಸಲಾಗಿದ್ದರಿಂದ ತುಮ್ಮನಹಳ್ಳಿ ಕ್ಷೇತ್ರದ ಸದಸ್ಯ ಎಚ್.ನರಸಿಂಹಯ್ಯ ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ದೇವರಮಳ್ಳೂರು ಕ್ಷೇತ್ರದ ಸದಸ್ಯೆ ಪಂಕಜ ನಿರಂಜನ್, ಉಪಾಧ್ಯಕ್ಷ ಸ್ಥಾನಕ್ಕೆ ದಿಬ್ಬೂರಹಳ್ಳಿ ಕ್ಷೇತ್ರದ ಸದಸ್ಯೆ ಶಂಕರಮ್ಮ ನಾಮಪತ್ರ ಸಲ್ಲಿಸಿದ್ದರು. ಎರಡು ಕಡೆಗಳಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು, ಕೈ ಎತ್ತುವ ಮೂಲಕ ಸದಸ್ಯರುಗಳು ತಮ್ಮ ಬೆಂಬಲ ಸೂಚಿಸಿದರು, ಜೆಡಿಎಸ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಕ್ಷ್ಮೀನಾರಾಯಣ ಅವರಿಗೆ ೯ ಮತಗಳು, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್.ನರಸಿಂಹಯ್ಯ ಅವರಿಗೆ ೯ ಮತಗಳು ಬರುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಸದಸ್ಯರುಗಳು ಆಯ್ಕೆಯಾದರು.
ಸಂಭ್ರಮಾಚರಣೆ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಂದಿ ಜೆಡಿಎಸ್ ಕಾರ್ಯಕರ್ತರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಚುನಾವಣೆಯ ನಿಮಿತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಚಿಕ್ಕಬಳ್ಳಾಪುರ ಜಿಲ್ಲಾ ಉಪವಿಭಾಗಾಧಿಕಾರಿ ಅಮರೇಶ್, ತಹಶೀಲ್ದಾರ್ ಕೆ.ಎಂ.ಮನೋರಮಾ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಕೋಚಿಮುಲ್ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮೇಲೂರು ಆರ್.ಎ.ಉಮೇಶ್ ಮುಂತಾದವರು ಅಭಿನಂದಿಸಿದರು.
೧೯೭೮ ರಿಂದ ೧೯೮೩ ರವರೆಗೆ ತಾಲ್ಲೂಕು ಬೋರ್ಡ್ನಲ್ಲಿ ಜನತಾದಳ ಪಕ್ಷದ ಅಧ್ಯಕ್ಷರಾಗಿ ಆನೂರು ಪಿ.ವೀರಪ್ಪ ಹಾಗೂ ಉಪಾಧ್ಯಕ್ಷರಾಗಿ ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರ ನಡೆಸಿದ್ದರು. ನಂತರ ಅನೇಕ ವರ್ಷಗಳು ಕಾಂಗ್ರೆಸ್ ತನ್ನ ಆಡಳಿತವನ್ನು ಮುಂದುವರೆಸಿಕೊಂಡು ಬಂದಿತ್ತು. ತಾಲ್ಲೂಕು ಪಂಚಾಯತಿ ಆದ ನಂತರ ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕು ಪಂಚಾಯತಿ ಆಡಳಿತ ಜೆಡಿಎಸ್ ತೆಕ್ಕೆಗೆ
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳು
2. ಸಿ. ಸುಹಾನಾ (609 – 97.44%), ಡಾಲ್ಫಿನ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
3. ವಿ.ಕೆ.ಸೌಜನ್ಯ(608 – 97.28%), ಬಿ.ಜಿ.ಎಸ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
4. ಎಂ.ದೀಕ್ಷಿತಾ(606 – 96.96%), ಡಾಲ್ಫಿನ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
5. ಬಿ.ಎಸ್.ಕಾರ್ತಿಕ್ ಕುಮಾರ್(605 – 96.8%), ಬಿ.ಜಿ.ಎಸ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
6. ಬಿ.ಕೆ.ಮಧು(602 – 96.32%),ಬಿ.ಜಿ.ಎಸ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
7. ಡಿ.ನಾಗೇಶ್(602 – 96.32%),ಬಿ.ಜಿ.ಎಸ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
8. ಎನ್.ನಾಗೇಂದ್ರ(600 – 96%), ಬಿ.ಜಿ.ಎಸ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
9. ಆರ್.ಎ.ದರ್ಶಿನಿ(600 – 96%), ಕ್ರೆಸೆಂಟ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
10. ಆರ್.ಕಾವ್ಯಶ್ರೀ(598 – 95.68%), ಕ್ರೆಸೆಂಟ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
11. ಎ.ಎಸ್.ಚಾಂದಿನಿ(598 – 95.68%), ಕ್ರೆಸೆಂಟ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
12. ಎನ್.ಸುಷ್ಮಾ(597 – 95.52%), ಕ್ರೆಸೆಂಟ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
13. ಎಸ್.ಎಂ.ದೀಕ್ಷಾ(594 – 95.04%), ಕ್ರೆಸೆಂಟ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ
ಕುತೂಹಲ ಕೆರಳಿಸಿರುವ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನದ ಚುನಾವಣೆ
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದೆ. ಇದೇ ಮೊದಲ ಭಾರಿಗೆ ೯ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಜೆಡಿಎಸ್ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಅಧ್ಯಕ್ಷ ಹಾಗು ಉಪಾಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಯಾರಿಗೆ ಒಲಿಯುತ್ತದೆ ಎಂಬ ಕುತೂಹಲ ಇಡೀ ತಾಲ್ಲೂಕಿನ ಜನರಲ್ಲಿದೆ.
ತಾಲ್ಲೂಕು ಪಂಚಾಯತಿಯಲ್ಲಿ ಒಟ್ಟು ೧೭ ಸ್ಥಾನಗಳಿದ್ದು ೯ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ ಇನ್ನುಳಿದ ೮ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.
ಅಧಿಕಾರ ಹಿಡಿಯಲು ಬೇಕಿರುವ ೯ ಸದಸ್ಯರ ಸಂಖ್ಯೆ ಜೆಡಿಎಸ್ ಹೊಂದಿದೆಯಾದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಲಾಭಿ ಮಾತ್ರ ಜೋರಾಗಿ ನಡೆಯುತ್ತಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಿರಿಸಲಾಗಿದೆ. ಮೀಸಲಾತಿ ಪ್ರಕಟವಾಗಿದ್ದೇ ತಡ ತಮ್ಮ ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆಯಾದರೂ, ಪಕ್ಷದ ಹಿರಿಯ ಮುಖಂಡರು ಹಾಗೂ ಶಾಸಕರ ತೀರ್ಮಾನವೇ ಅಂತಿಮವಾಗಿದೆ.
ಪ್ರವಾಸ ಹೊರಟಿರುವ ಜೆಡಿಎಸ್ ಸದಸ್ಯರು :
ಜೆಡಿಎಸ್ ಪಕ್ಷದಿಂದ ಗೆಲುವು ಸಾದಿಸಿರುವ ೯ ಮಂದಿ ಸದಸ್ಯರೂ ಒಗ್ಗಟ್ಟಾಗಿದ್ದು, ಸದಸ್ಯರಲ್ಲಿ ಒಡಕು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಬಹುದೆಂಬ ಶಂಕೆಯಿಂದ ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ೯ ಮಂದಿ ಸದಸ್ಯರನ್ನು ಪ್ರವಾಸ ಕಳುಹಿಸಲಾಗಿದೆ.
ಮಾಜಿ ಸಚಿವ ವಿ.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರ ಸಭೆ :
ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದ ತಾಲ್ಲೂಕು ಪಂಚಾಯತಿ ಇದೇ ಮೊದಲ ಭಾರಿಗೆ ಜೆಡಿಎಸ್ ವಶವಾಗಿರುವುದು ಕಾಂಗ್ರೆಸ್ನ ಹಿರಿಯ ಮುಖಂಡರೂ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಶುಕ್ರವಾರ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಮ್ಮ ಪಕ್ಷದ ೮ ಸದಸ್ಯರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ ರಾಜಕೀಯ ತಂತ್ರ, ಪ್ರತಿತಂತ್ರಗಳನ್ನು ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಧಿಕಾರ ಹಿಡಿಯಲು ಕೇವಲ ಒಂದು ಸ್ಥಾನದ ಕೊರತೆಯಿದ್ದು ಮೇ ೧೬ ರ ಸೋಮವಾರದಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ನ ಯಾವುದೇ ಒಬ್ಬ ಸದಸ್ಯ ಗೈರು ಹಾಜರಾದರೆ ಅಥವಾ ವಿರೋಧಿಗಳು ಒಡ್ಡುವ ಆಮಿಷಗಳಿಗೆ ಒಳಗಾಗಿ ಪಕ್ಷ ವಿರೋಧಿಯಾಗಿ ಮತ ಚಲಾಯಿಸಿದ್ದೇ ಆದಲ್ಲಿ ತಮ್ಮದೇ ಅಭ್ಯರ್ಥಿ ಅಧ್ಯಕ್ಷನಾಗುತ್ತಾನೆ ಎಂಬ ಲೆಕ್ಕಾಚಾರದಲ್ಲಿ ಈಗಾಗಲೇ ಕೆಲ ಸದಸ್ಯರು ಗೌಪ್ಯ ಕಾರ್ಯತಂತ್ರಗಳನ್ನು ಮಾಡುತ್ತಿರುವುದು ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಬಳಿ ಚರ್ಚಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅಧ್ಯಕ್ಷ ಹಾಗು ಉಪಾಧ್ಯಕ್ಷ ಆಕಾಂಕ್ಷಿಗಳು :
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ವಿ.ಮುನಿಯಪ್ಪರ ಸ್ವಗ್ರಾಮ ಹಂಡಿಗನಾಳ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ವಿಜೇತರಾಗಿರುವ ಜೆ.ಡಿ.ಎಸ್ ಪಕ್ಷದ ಕೆ.ಲಕ್ಷ್ಮಿನಾರಾಯಣ, ಬಶೆಟ್ಟಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದ ಬಿ.ವಿ.ನಾರಾಯಣಸ್ವಾಮಿ, ಚೀಮಂಗಲ ಕ್ಷೇತ್ರದ ರಾಜಶೇಖರ್ ಮತ್ತು ಭಕ್ತರಹಳ್ಳಿ ಕ್ಷೇತ್ರದಿಂದ ಜಯಗಳಿಸಿರುವ ಚಂದ್ರಕಲಾ ಬೈರೇಗೌಡ ಅವರು ಸಾಮಾನ್ಯ ಸ್ಥಾನದಿಂದ ಜಯಗಳಿಸಿದ್ದಾರೆ. ಈ ನಾಲ್ವರ ಪೈಕಿ ಯಾರು ಮೊದಲ ಅವಧಿಗೆ ಅಧ್ಯಕ್ಷರಾಗುತ್ತಾರೆ ಎನ್ನುವುದು ಮಾತ್ರ ಸೋಮವಾರ ತಿಳಿಯಲಿದೆ.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿದ್ದು ಈ ಪೈಕಿ ತುಮ್ಮನಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಜಯಗಳಿಸಿರುವ ಎಚ್.ನರಸಿಂಹಯ್ಯ, ಮೇಲೂರು ಕ್ಷೇತ್ರದಿಂದ ಜಯಗಳಿಸಿರುವ ಮುನಿಯಪ್ಪ, ಹಾಗೂ ಕುಂಬಿಗಾನಹಳ್ಳಿ ಕ್ಷೇತ್ರದಿಂದ ಜಯಗಳಿಸಿರುವ ಮುನಿನರಸಮ್ಮ ಪ್ರಮುಖರಾಗಿದ್ದಾರೆ.
ದಲಿತರಿಗೆ ಸೂಕ್ತ ರಕ್ಷಣೆ ಸಿಗುತ್ತದೆ
ದಲಿತರ ವ್ಯಾಜ್ಯಗಳನ್ನು ಬಗೆಹರಿಸಿ ಮತ್ತು ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವುದಾಗಿ ಡಿ.ವೈ.ಎಸ್.ಪಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. ದಲಿತರ ಸಮಸ್ಯೆಗಳನ್ನು ನೇರವಾಗಿ ಈ ಸಭೆಯಲ್ಲಿ ಹೇಳಿದರೆ ಅದನ್ನು ಬಗೆಹರಿಸಿ ಮುಂದಿನ ಕುಂದು ಕೊರತೆ ಸಭೆಯಲ್ಲಿ ನಿಮಗೆ ಲಿಖಿತ ರೂಪದಲ್ಲಿ ಯಾವ ಕ್ರಮ ಕೈಗೊಂಡಿದ್ದೇವೆ ಎಂಬ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರು.
ದಲಿತ ಮುಖಂಡ ಮೇಲೂರು ಮಂಜುನಾಥ್ ಮಾತನಾಡಿ, ರಾಜಕೀಯ ಪಕ್ಷಗಳು ದಲಿತರನ್ನು ಓಟ್ಗಾಗಿ ದುರ್ಬಳಕೆ ಮಾಡುಕೊಳ್ಳುತ್ತಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಶೇಕಡ ೯೦ ರಷ್ಟು ದಲಿತರು ಕೂಲಿ ಮಾಡಿ ಜೀವನ ಮಾಡುತ್ತಿದ್ದು, ದಲಿತರಿಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಪೋಲಿಸ್ ಠಾಣೆಗೆ ಬಂದಾಗ ಅವರನ್ನು ಗೌರವದಿಂದ ಕಾಣಬೇಕು. ಅಟ್ರಾಸಿಟಿ ಪ್ರಕರಣ ದಾಖಲು ಮಾಡುವಾಗ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಪ್ರತಿ ಹಳ್ಳಿಗಳಲ್ಲೂ ಮದ್ಯ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ದಲಿತರು ಕುಡಿತದ ಚಟಕ್ಕೆ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಬೀದಿಪಾಲಾಗಿದೆ. ಹೆಣ್ಣು ಮಕ್ಕಳು ಕೂಡ ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಕೆಲವು ಕಡೆ ದಲಿತ ಕುಟುಂಬಗಳು ಮದ್ಯ ಮಾರಾಟ ಕೂಡ ಮಾಡುತ್ತಿದ್ದಾರೆ. ದಯವಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಭೆಯಲ್ಲಿ ದಲಿತ ಮುಂಖಡರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್, ಸಬ್ಇನ್ಸ್ಪೆಕ್ಟರ್ಗಳಾದ ಪ್ರದೀಪ್ ಪೂಜಾರಿ, ವಿಜಯ್, ರಾಘವೇಂದ್ರ, ದಲಿತ ಮುಖಂಡರಾದ ದ್ಯಾವಪ್ಪ, ನಾಗನರಸಿಂಹ, ಅರುಣ್ ಕುಮಾರ್, ಲಕ್ಷ್ಮಿನಾರಾಯಣ, ತಿರುಮಲೇಶ್ ಮತ್ತಿತರು ಸಭೆಯಲ್ಲಿ ಭಾಗವಹಿಸಿದ್ದರು.
ನೀರಿನ ಅಭಾವವಿರುವ ವಾರ್ಡುಗಳಿಗೆ ಉಚಿತ ನೀರು ಸರಬರಾಜು
ನಗರದಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಯುವ ಸಂಘಟನೆಗಳು ಈ ಸಮಸ್ಯೆಗೆ ಸ್ಪಂದಿಸಿ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವ ಸಂಗತಿ ಶ್ಲಾಘನೀಯ ಎಂದು ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಖಾಸಿಂ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಭಾನುವಾರ ವಿ ಕೇರ್ಸ್ ಯು ಫೌಂಡೇಷನ್ ವತಿಯಿಂದ ನೀರಿನ ತೊಂದರೆಯಿರುವ ವಾರ್ಡುಗಳಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅಗಾಧವಾಗಿದೆ. ಶಿಡ್ಲಘಟ್ಟ ನಗರವೂ ಈ ಸಮಸ್ಯೆಯಿಂದ ಬಳಲುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿರುವುದರಿಂದ ಯುವ ಸಂಘಟನೆಗಳು ಉಚಿತ ಸೇವೆ ನೀಡುವ ಮೂಲಕ ಮಾದರಿಯಾಗಿವೆ. ಪ್ರತಿ ದಿನ 25 ಟ್ಯಾಂಕರುಗಳ ಮೂಲಕ ನೀರಿನ ತೊಂದರೆಯಿರುವೆಡೆ ಸರದಿಯಂತೆ ನೀರನ್ನು ಉಚಿತವಾಗಿ ಹಂಚಲಾಗುತ್ತಿದೆ. ವಿ ಕೇರ್ಸ್ ಯು ಪೌಂಡೇಶನ್ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ವಿ ಕೇರ್ಸ್ ಯು ಫೌಂಡೇಷನ್ ಅಧ್ಯಕ್ಷ ಮುಜಾಮಿಲ್, ಸದಸ್ಯರಾದ ಎಸ್.ಎ.ಸಾದಿಕ್, ನೂರುಲ್ಲಾ, ಸಾದಿಕ್, ರೆಹಮಾನ್, ಸೈಫ್ ಮಹಮದ್, ಸಯ್ಯದ್, ಖಾಸಿಂ, ಇಮ್ರಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
50 ವರ್ಷಗಳಿಗೂ ಹೆಚ್ಚು ಕಾಲ ಔಷಧ ವ್ಯಾಪಾರದ ಸೇವೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಸನ್ಮಾನ
ಶಿಡ್ಲಘಟ್ಟದಲ್ಲಿ ಸತತ 50 ವರ್ಷಗಳಿಗೂ ಹೆಚ್ಚು ಕಾಲ ಔಷಧ ವ್ಯಾಪಾರದ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿ.ಎಸ್.ವಿ. ಗುಪ್ತ, ಜಗದೀಶ್ ಮತ್ತು ರಮೇಶ್ಬಾಬು ಅವರಿಗೆ ಶನಿವಾರ ‘ಸಾರ್ಥಕ 50’ : ಔಷಧ ವಿಜ್ಞಾನ ಕ್ಷೇತ್ರದ ಗುಣಮಟ್ಟ ಸುಧಾರಣಾ ಪರ್ವ ಎಂಬುದಾಗಿ ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯ ಆವರಣದಲ್ಲಿ ನಡೆಸಿದ ರಾಜ್ಯ ಔಷಧ ನಿಯಂತ್ರಣ ಇಲಾಖೆ ಸುವರ್ಣ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸೋಮವಾರದಿಂದ ಇ–ಹರಾಜು ಪ್ರಾರಂಭ
ಹೊಸ ಬದಲಾವಣೆಗಳು ಬರುವಾಗ ಅಡಚಣೆಗಳು ಸಹಜ. ಇ–ಹರಾಜಿನ ಪ್ರಕ್ರಿಯೆಯಲ್ಲೂ ಕೆಲವು ಅಡೆತಡೆಗಳು ಬರುತ್ತವೆ. ರೀಲರುಗಳು ಸಹಕರಿಸಬೇಕು ಎಂದು ರೇಷ್ಮೆ ಇಲಾಖೆಯ ಆಯುಕ್ತ ಸತೀಶ್ ಕೋರಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ನಡೆದ ರೀಲರುಗಳ ಸಭೆಯಲ್ಲಿ ಅವರು ಮಾತನಾಡಿ. ಕಳೆದ ಕೆಲವು ದಿನಗಳಿಂದ ಇ–ಹರಾಜು ಪ್ರಾರಂಭಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಅದಕ್ಕೆ ತೊಡಕುಗಳು ತಾಂತ್ರಿಕ ಪರಿಣತರಿಂದ ಅರಿಪಡಿಸಿದ್ದೇವೆ. ಸ್ಯಾಮ್ಸಂಗ್ ಕಂಪೆನಿಯ ಕೆಲವು ಮೊಬೈಲ್ಗಳಿಗೆ ಮೊಬೈಲ್ಗಳಿಗೆ ಸ್ಟಾಟಿಕ್ ಐಪಿ ಅಳವಡಿಸುವ ಮೂಲಕ ಆ ತೊಂದರೆಯೂ ನಿವಾರಿಸಲಾಗಿದೆ. ತಾಂತ್ರಿಕ ಯುಗದಲ್ಲಿ ಎಲ್ಲೆಡೆಯೂ ಬದಲಾವಣೆ ಆಗುವಾಗ ರೇಷ್ಮೆ ಗೂಡಿನ ಮಾರುಕಟ್ಟೆಯೂ ಇದಕ್ಕೆ ಹೊರತಾಗಿಲ್ಲ. ಇ–ಹರಾಜಿನಿಂದ ಹಲವಾರು ಲಾಭಗಳಿವೆ. ಆದರೆ ರೀಲರುಗಳು ಬದಲಾವಣೆಗೆ ಒಗ್ಗಿಕೊಳ್ಳಬೇಕು. ತಿಳಿಯದ್ದನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡು ಹೊಸ ಪದ್ಧತಿಗೆ ತಮ್ಮನ್ನು ಒಗ್ಗಿಸಿಕೊಳ್ಳಬೇಕು ಎಂದು ಹೇಳಿದರು.
ಸೋಮವಾರದಿಂದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭಿಸುತ್ತಿದ್ದೇವೆ. ರೀಲರುಗಳು ಅಧಿಕಾರಿಗಳೊಂದಿಗೆ ಸಹಕಾರ ನೀಡುವ ಮೂಲಕ ಇದು ಮುಂದುವರಿಯಲು ಕಾರಣರಾಗಬೇಕೆಂದು ಹೇಳಿದರು.
ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರಭಾಕರ್, ರೇಷ್ಮೆ ಉಪನಿರ್ದೇಶಕರಾದ ಮೊಯ್ನುದ್ದೀನ್, ಎಂ.ಎನ್.ರತ್ನಯ್ಯಶೆಟ್ಟಿ, ರೇಷ್ಮೆ ಕೋ ಆರ್ಡಿನೇಷನ್ ಸಮಿತಿ ಸದಸ್ಯ ಮಹಮ್ಮದ್ ಅನ್ವರ್, ರೀಲರುಗಳಾದ ಎ.ಆರ್. ಅಬ್ದುಲ್ ಅಜೀಜ್, ಡಿ.ಎಂ.ಜಗದೀಶ್ವರ್, ಜಿ.ರೆಹಮಾನ್, ಸಾಧಿಕ್ಪಾಷ, ಎ.ರಹಮತ್ತುಲ್ಲ, ರಿಜ್ವಾನ್, ಅಕ್ಮಲ್ ಪಾಷ, ವೈ.ರಾಮಕೃಷ್ಣಪ್ಪ, ಎಂ.ರಾಮಕೃಷ್ಣಪ್ಪ, ನಾಗನರಸಿಂಹ, ವಿಜಯಕುಮಾರ್, ಸನಾವುಲ್ಲ, ಡಿ.ಆರ್.ಯೂಸುಫ್, ರಿಯಾಜ್ಪಾಷ, ಇಮ್ತಿಯಾಜ್ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೇಷ್ಮೆ ಮಾರುಕಟ್ಟೆಯಲ್ಲಿ ಸ್ವಘೋಷಿತ ಅಧ್ಯಕ್ಷ : ರೀಲರುಗಳ ಮಾತಿನ ಚಕಮಕಿ
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ರೇಷ್ಮೆ ಇಲಾಖೆಯ ಆಯುಕ್ತ ಸತೀಶ್ ನೇತೃತ್ವದಲ್ಲಿ ನಡೆದ ರೀಲರುಗಳ ಸಭೆಯಲ್ಲಿ ರೀಲರುಗಳ ನಡುವೆ ಮಾತಿನ ಚಕಮಕಿ ನಡೆಯಿತು.
ರೇಷ್ಮೆ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ ಸಭೆಗೆ ಔಪಚಾರಿಕವಾಗಿ ಸ್ವಾಗತ ಕೋರುತ್ತಿದ್ದಂತೆ, ರೀಲರ್ ಅಕ್ಮಲ್ ಪಾಷ, ‘ನಾನು ರೀಲರುಗಳ ಸಂಘದ ಅಧ್ಯಕ್ಷ. ನಿಮಗೆ ಜ್ಞಾನ ಇದೆಯಾ. ಸಭೆಯಲ್ಲಿ ಸ್ವಾಗತ ಕೋರುವಾಗ ನನಗೂ ಸ್ವಾಗತ ಕೋರಬೇಕು. ಇಲ್ಲದಿದ್ದರೆ ರೀಲರುಗಳು ನಿಮ್ಮ ಮುಖಕ್ಕೆ ಉಗಿಯುತ್ತಾರೆ’ ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಂತೆ ಉಳಿದ ರೀಲರುಗಳು ಅಕ್ಮಲ್ ಪಾಷ ವಿರುದ್ಧ ತಿರುಗಿ ಬಿದ್ದರು.
‘ಮಾರುಕಟ್ಟೆಯಲ್ಲಿ ರೀಲರುಗಳ ಸಂಘವೇ ಇಲ್ಲ. ನೀನು ಅಧ್ಯಕ್ಷ ಹೇಗಾದೆ. ಸ್ವಘೋಷಿತ ಅಧ್ಯಕ್ಷ ಎನ್ನುತ್ತಾ ಅಧಿಕಾರಿಗಳನ್ನು ಕೆಟ್ಟದಾಗಿ ಮಾತನಾಡಿ ರೀಲರುಗಳಿಗೆ ಕೆಟ್ಟ ಹೆಸರು ತರುವುದು ಸರಿಯಲ್ಲ. ನಾವು ಬಂದಿರುವುದು ಇ–ಹರಾಜು ಸಂಬಂಧಿಸಿದಂತೆ ಮಾತನಾಡಲು. ಹೊಗಳಿಸಿಕೊಳ್ಳಲು ಅಲ್ಲ’ ಎಂದು ರೀಲರುಗಳಾದ ಎ.ಆರ್. ಅಬ್ದುಲ್ ಅಜೀಜ್, ಡಿ.ಎಂ.ಜಗದೀಶ್ವರ್, ಜಿ.ರೆಹಮಾನ್, ಸಾಧಿಕ್ಪಾಷ, ಎ.ರಹಮತ್ತುಲ್ಲ, ರಿಜ್ವಾನ್ ಮುಂತಾದವರು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಾಗ, ಸಭೆ ನಡೆಯಲು ಸಹಕರಿಸುವಂತೆ ಅಧಿಕಾರಿಗಳು ರೀಲರುಗಳನ್ನು ಸಮಾಧಾನ ಪಡಿಸಿದ ನಂತರ ಸಭೆ ನಡೆಸಲಾಯಿತು.
ಮಕ್ಕಳನ್ನು ಉತ್ತಮ ಮಾರ್ಗದರ್ಶನ ಅಗತ್ಯ
ಬಲಿಷ್ಠ ಹಾಗು ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಅಗತ್ಯ ಇದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿಯಿರುವ ಮಾರ್ತೊಮ ಕ್ಯಾಂಪ್ ಸೆಂಟರ್ನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಶುಕ್ರವಾರ ತಾಲ್ಲೂಕಿನಿಂದ ಹೊರಟ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳಲ್ಲಿ ಶ್ರೀಮಂತರ ಮಕ್ಕಳು ಸಾವಿರಾರು ರೂಗಳು ಹಣ ನೀಡಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅದರ ಉಪಯೋಗ ಸಿಗುವುದಿಲ್ಲ ಹಾಗಾಗಿ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ಉಚಿತ ಬೇಸಿಗ ಶಿಬಿರ ಆಯೋಜಿಸಲಾಗಿದ್ದು ತಾಲ್ಲೂಕಿನಿಂದ ಒಟ್ಟು ೧೧೦ ಮಂದಿ ಮಕ್ಕಳು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಊಟ, ವಸತಿ ಸೇರಿದಂತೆ ಶಿಬಿರ ನಡೆಯುವ ಸ್ಥಳ ತಲುಪಲು ವಾಹನ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ ಎಂದ ಅವರು ಶಿಬಿರದಲ್ಲಿ ಮಕ್ಕಳಿಗೆ ನುರಿತ ತಜ್ಞ ತರಬೇತುದಾರರಿಂದ ಸಾಹಸ, ಕ್ರೀಡಾ ಚಟುವಟಿಕೆ, ನಾಯಕತ್ವ ಗುಣ, ಗುರಿಮುಟ್ಟುವ ಮನೋಭಾವ, ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವುದು, ಸೇರಿದಂತೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ಎ.ನಾಗರಾಜ್, ಕಸಾಪ ತಾಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಅಧ್ಯಕ್ಷ ವಿ.ಕೃಷ್ಣ, ಕ್ರೀಡಾಪಟು ಮುನಿರಾಜು, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು
ಭಗೀರಥ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ವರ್ಷಕ್ಕೊಮ್ಮೆ ಆಚರಿಸಿದರೆ ಸಾಲದು ಬದಲಿಗೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಲಾಗಿದ್ದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಮುದಾಯದ ಸಂಘಟನೆ ಮಾಡುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮುಖಂಡರು ಮಾಡಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜಿ.ದ್ಯಾವಪ್ಪ ಮಾತನಾಡಿ, ಅಸಾಧ್ಯವಾದುದನ್ನು ತನ್ನ ಹಠದಿಂದ ಸಾಧಿಸಿ ಗಂಗೆಯನ್ನು ಭೂಮಿಗೆ ಕರೆತಂದ ಭಗೀರಥ ಮಹರ್ಷಿಯ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದರು.
ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಉಪ್ಪಾರರು ಭಗೀರಥರಂತೆ ಎಲ್ಲವನ್ನು ಸಾಧಿಸಿ ತೋರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಜನಾಂಗದ ಮುಖಂಡರೂ ಸೇರಿದಂತೆ ತಾಲ್ಲೂಕು ಆಡಳಿತದ ವತಿಯಿಂದ ಪೂಜೆ ಸಲ್ಲಿಸಲಾಯಿತು.
ತಹಶೀಲ್ದಾರ್ ಕೆ.ಎಂ.ಮನೋರಮಾ, ಗ್ರೇಡ್೨ ತಹಸೀಲ್ದಾರ್ ವಾಸುದೇವಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೆ.ಗುರುರಾಜರಾವ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ಭಗೀರಥ ಉಪ್ಪಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ.ಗಂಗಪ್ಪ, ಖಜಾಂಚಿ ನರಸಿಂಹಪ್ಪ, ಸಮುದಾಯದ ಮುಖಂಡ ಕುಮಾರ ಮತ್ತಿತರರು ಹಾಜರಿದ್ದರು.
ಮೊಬೈಲ್ಗಳಿಗೆ ಸ್ಟಾಟಿಕ್ ಐಪಿ ಅಳವಡಿಕೆ
ಸ್ಯಾಮ್ಸಂಗ್ ಕಂಪೆನಿಯ ಕೆಲವು ಮೊಬೈಲ್ಗಳಿಗೆ ಮೊಬೈಲ್ಗಳಿಗೆ ಸ್ಟಾಟಿಕ್ ಐಪಿ ಅಳವಡಿಸುವ ಮೂಲಕ ಇ–ಹರಾಜಿಗೆ ತೊಂದರೆಯಾಗದಂತೆ ಮಾಡಿಕೊಡುವುದಾಗಿ ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರಭಾಕರ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಇ–ಹರಾಜು ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಯಾಮ್ಸಂಗ್ ಕಂಪೆನಿಯ ಎ, ಇ, ಜೆ ಮತ್ತು ಜಡ್ ಸೀರೀಸ್ಗಳ ಮೊಬೈಲ್ ಫೋನ್ಗಳು ಮಾರುಕಟ್ಟೆಯಲ್ಲಿ ಅಳವಡಿಸಿರುವ ವೈಫೈಗೆ ಸ್ಪಂದಿಸುತ್ತಿಲ್ಲವೆಂದು ರೀಲರುಗಳು ದೂರಿದ್ದರು. ಈ ತಾಂತ್ರಿಕ ತೊಂದರೆಯನ್ನು ಸರಿಪಡಿಸಲು ಅಧಿಕಾರಿಗಳು ಸ್ಯಾಮ್ಸಂಗ್ ಕಂಪೆನಿಯವರೊಂದಿಗೆ ಚರ್ಚಿಸಿದ್ದು, ಕೆಲವೊಂದು ಸೀರೀಸ್ ಮೊಬೈಲ್ಗಳ ಹಾರ್ಡ್ವೇರ್ಗಳು ಸ್ಪಂದಿಸುವುದಿಲ್ಲವೆಂದು ಕಂಪೆನಿಯವರು ತಿಳಿಸಿರುವರು. ಅದಕ್ಕಾಗಿ ಅಂಥಹ ಮೊಬೈಲ್ಗಳಿಗೆ ಸ್ಟಾಟಿಕ್ ಐಪಿ ಅಳವಡಿಸಿಕೊಳ್ಳಲು ಹೇಳಿರುವರು. ಈ ಕಾರ್ಯ ಮುಗಿಯುತ್ತಿದ್ದಂತೆ ಇ–ಹರಾಜು ಪ್ರಾರಂಭಿಸಲಾಗುವುದು ಎಂದರು.
ಇದುವರೆಗೂ 82 ರೀಲರುಗಳ ಮೊಬೈಲ್ಗಳಲ್ಲಿ ಸಮಸ್ಯೆಯಿದ್ದು ಅವುಗಳಿಗೆ ಸ್ಟಾಟಿಕ್ ಐಪಿ ಅಳವಡಿಕೆ ಮಾಡಿಸುವುದಾಗಿ ನುಡಿದರು.
ರೇಷ್ಮೆ ಉಪನಿರ್ದೇಶಕರಾದ ಮೊಯ್ನುದ್ದೀನ್, ಎಂ.ಎನ್.ರತ್ನಯ್ಯಶೆಟ್ಟಿ, ರೀಲರುಗಳಾದ ಎ.ಆರ್. ಅಬ್ದುಲ್ ಅಜೀಜ್, ಜಿ.ರಹಮಾನ್, ಅಕ್ಮಲ್ ಪಾಷ, ಜೋಹರ್ಪಾಷ, ಅಸದ್ದುಲ್ಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ಲಾಸ್ಟಿಕ್ ತ್ಯಾಜ್ಯದ ರಾಶಿ
ಶಿಡ್ಲಘಟ್ಟದ ಹಳೆಯ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ನಗರಸಭೆ ಸ್ಥಳವು ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯಿಂದ ಹಾಗೂ ತ್ಯಾಜ್ಯದಿಂದ ತುಂಬಿ ತುಳುಕುತ್ತಾ ನಗರಸಭೆಯ ಕಸ ವಿಲೇವಾರಿ ಮತ್ತು ಪ್ಲಾಸ್ಟಿಕ್ ಮುಕ್ತ ಘೋಷಣೆಯನ್ನು ಅಣಕಿಸುತ್ತಿದೆ.
ಸರ್ಕಾರದ ಸವಲತ್ತುಗಳ ಬಳಕೆಯಾಗಬೇಕು
ತಾಲ್ಲೂಕಿನಾದ್ಯಂತ ಇರುವ ಅಲೆಮಾರಿ ಹಾಗು ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರದಿಂದ ಸಿಗಬೇಕಾದ ಮೂಲಭೂತ ಸವಲತ್ತುಗಳನ್ನು ಒದಗಿಸಲು ಮೊದಲ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ಕೆ.ಎಂ.ಮನೋರಮಾ ಹೇಳಿದರು.
ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅಲೆಮಾರಿ ಜನಾಂಗದವರು ಸರ್ಕಾರದಿಂದ ಸಿಗುವ ಮೂಲಭೂತ ಸವಲತ್ತುಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದರು.
ಅಲೆಮಾರಿಗಳಿಗೆ ವಸತಿ ಸೌಲಭ್ಯ ಒದಗಿಸಲು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಾಲ್ಲೂಕಿನಾಧ್ಯಂತ ಇರುವ ಅಲೆಮಾರಿ ಹಾಗೂ ಅರೆ ಅಲೆಮಾರಿಗಳನ್ನು ಗುರುತಿಸಿ ಅವರಿಗೆ ಸೂಕ್ತ ನಿವೇಶನ ಮತ್ತು ವಸತಿ ಸವಲತ್ತು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕಂದಾಯ ಇಲಾಖೆಯಿಂದ ಭೂಮಿ ಮಂಜೂರು ಮಾಡುತ್ತೇವೆ ಆದರೆ ಅದನ್ನು ನಿವೇಶನಗಳನ್ನಾಗಿಸಿ ಅಲೆಮಾರಿಗಳಿಗೆ ವಸತಿ ಸವಲತ್ತು ಮಾಡಿಸುವ ಕೆಲಸವನ್ನು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಬೇಕೆಂದರು.
ಅಲೆಮಾರಿ ಜನಾಂಗದ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ವಸತಿನಿಲಯಗಳಲ್ಲಿ ಉಚಿತ ಪ್ರವೇಶ ನೀಡಬೇಕು ಎಂಬ ಜನಾಂಗದ ಮುಖಂಡರ ಮನವಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಉತ್ತರಿಸುತ್ತಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅಲೆಮಾರಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿನಿಲಯಗಳಲ್ಲಿ ಪ್ರವೇಶ ಬೇಕಾದಲ್ಲಿ ಪ್ರತಿಯೊಂದು ಮಗುವೂ ಲಿಖಿತ ಪರೀಕ್ಷೆ ಬರೆಯಲೇ ಬೇಕು. ಪ್ರವೇಶ ಮೆರಿಟ್ ಮೇಲೆ ನಿರ್ಧಾರವಾಗುತ್ತದೆ ಎಂದರು.
ಇನ್ನುಳಿದಂತೆ ಕೃಷಿ ಹಾಗು ರೇಷ್ಮೆ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ಅರ್ಜಿ ಹಾಕಿದಲ್ಲಿ ಜೇಷ್ಠತೆ ಆಧಾರದ ಮೇಲೆ ಸಾಮಾನ್ಯರಿಗೆ ನೀಡುವಂತೆ ನೀಡಲಾಗುವುದು. ಇದರಲ್ಲಿ ಯಾವುದೇ ನಿರ್ದಿಷ್ಠ ಗುರಿಯಿರುವುದಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ ಸಭೆಗೆ ತಿಳಿಸಿದರು.
ತಾಲ್ಲೂಕು ಪಂಚಾಯತಿ ಇ.ಓ ವೆಂಕಟೇಶ್ ಮಾತನಾಡಿ ತಾಲ್ಲೂಕಿನಾಧ್ಯಂತ ಇರುವ ಅಲೆಮಾರಿ ಹಾಗೂ ಅರೆ ಅಲೆಮಾರಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ತಾಲ್ಲೂಕು ಅಧ್ಯಕ್ಷ ಸುಬ್ರಮಣಿ, ಬಿಸಿಎಂ ಇಲಾಖೆಯ ನಾರಾಯಣಸ್ವಾಮಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಬೆಳೆ ವಿಮೆಗಳನ್ನು ಖಡ್ಡಾಯವಾಗಿ ಮಾಡಿಸಿ
ಬೆಳೆ ವಿಮೆಗಳನ್ನು ಮಾಡಿಸುವ ಮೂಲಕ ಪ್ರಕೃತಿ ವೈಪರೀತ್ಯದಿಂದ ಆಗುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮೇಲೂರು, ಮಳ್ಳೂರು, ಚೌಡಸಂದ್ರ ಸುತ್ತ ಮುತ್ತ ಕಳೆದೆರಡು ದಿನಗಳ ಹಿಂದೆ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಆದ ಬೆಳೆ ನಷ್ಟವನ್ನು ವೀಕ್ಷಿಸಲು ರೈತರ ತೋಟಗಳಿಗೆ ಗುರುವಾರ ಭೇಟಿ ನೀಡಿದ ಅವರು ಮಾತನಾಡಿದರು.
ದ್ರಾಕ್ಷಿ ಬೆಳೆಗಾರರ ರೈತ ಕೂಟವಿದ್ದರೂ ದ್ರಾಕ್ಷಿ ಬೆಳೆಗಾರರಿಗೆ ವಿಮೆ ಮಾಡಿಸದಿರುವುದು ದುರದೃಷ್ಟಕರ. ಪರಿಹಾರದ ಮೊತ್ತ ಕಡಿಮೆ, ವಿಮೆ ಮಾಡಿಸಿದ್ದಿದ್ದರೆ ಹೆಚ್ಚು ಹಣ ಸಿಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಸತತವಾಗಿ ಈ ಭಾಗದಲ್ಲಿ ಆಲಿಕಲ್ಲಿನ ಮಳೆಯಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ವಿಮೆ ಮಾಡಿಸಲು ರೈತಕೂಟದ ಪದಾಧಿಕಾರಿಗಳು ರೈತರಲ್ಲಿ ಅರಿವನ್ನು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ನಷ್ಟದ ಮಾಹಿತಿಯನ್ನು ಪಡೆದರು. ಈ ಭಾಗದಲ್ಲಿ ಆಲಿಕಲ್ಲಿನ ಮಳೆಯಾಗಿದ್ದು ದಾಕ್ಷಿ, ಗೊಡಂಬಿ, ಹಿಪ್ಪು ನೇರಳೆ ಬೆಳೆಯು ನಷ್ಟವಾಗಿದೆ. ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ನೀಡಲಾಗುತ್ತದೆ. ಎಲ್ಲಾ ರೈತರು ಬೆಳೆ ವಿಮೆ ಮಾಡಿಸಲು ಅಧಿಕಾರಿಗಳು ಕೂಡ ರೈತರಿಗೆ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸಿ.ಇ.ಓ ಕಾವೇರಿ, ತಹಶೀಲ್ದಾರ್ ಮನೋರಮ, ಕಂದಾಯ ನಿರೀಕ್ಷಕ ಸುಬ್ರಮಣಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು,ರೈತ ಮುಖಂಡ ಗೋಪಾಲಗೌಡ. ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಇ–ಹರಾಜು ಮುಂದೂಡಿಕೆ
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ಇ–ಹರಾಜು ಪ್ರಾರಂಭವಾಗಬೇಕಿದ್ದುದು ಕೆಲವು ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಸ್ಯಾಮ್ಸಂಗ್ ಕಂಪೆನಿಯ ಎ, ಇ, ಜೆ ಮತ್ತು ಜಡ್ ಸೀರೀಸ್ಗಳ ಮೊಬೈಲ್ ಫೋನ್ಗಳು ಮಾರುಕಟ್ಟೆಯಲ್ಲಿ ಅಳವಡಿಸಿರುವ ವೈಫೈಗೆ ಸ್ಪಂದಿಸದ ಕಾರಣ ರೀಲರುಗಳು ಈ ತಾಂತ್ರಿಕ ತೊಂದರೆಯನ್ನು ಸರಿಪಡಿಸುವಂತೆ ತಿಳಿಸಿದರು. ಮಾರುಕಟ್ಟೆಯ ಅಧಿಕಾರಿಗಳು ಫೋನುಗಳದ್ದೇ ಸಮಸ್ಯೆಯಿರಬಹುದೆಂದಾಗ ರೀಲರುಗಳು, ‘ಸಾವಿರಾರು ರೂಗಳನ್ನು ತೆತ್ತು ಮೊಬೈಲ್ ಫೋನ್ಗಳನ್ನು ಕೊಂಡಿದ್ದೇವೆ. ಈಗಾಗಲೇ ಬಹಳಷ್ಟು ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ಅದಲ್ಲದೆ ಕಂಪೆನಿಯವರು ಲಕ್ಷಾಂತರ ಫೋನುಗಳನ್ನು ಯಾವ ಸಮಸ್ಯೆಯೂ ಇಲ್ಲದೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಳವಡಿಸಿರುವ ವೈಫೈ ಮುಂತಾದವುಗಳ ತಾಂತ್ರಿಕ ತೊಂದರೆಗಳನ್ನು ಮೊದಲು ಸರಿಪಡಿಸಿ. ಆದಷ್ಟು ಬೇಗ ಇ–ಹರಾಜು ಪ್ರಾರಂಭ ಮಾಡಿ’ ಎಂದು ಒತ್ತಾಯಿಸಿದರು.
ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರಭಾಕರ್ ಮಾತನಾಡಿ, ಸುಮಾರು ಒಂದು ತಿಂಗಳ ಹಿಂದೆ ಇ–ಹರಾಜು ಪ್ರಾರಂಭವಾಗಬೇಕಿತ್ತು. ಈಗಲೂ ತಾಂತ್ರಿಕ ತೊಂದರೆಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸಿ ಇ–ಹರಾಜು ಪ್ರಾರಂಭ ಮಾಡುವುದಾಗಿ ಹೇಳಿದರು.
ರೇಷ್ಮೆ ಉಪನಿರ್ದೇಶಕರಾದ ಮೊಯ್ನುದ್ದೀನ್, ಎಂ.ಎನ್.ರತ್ನಯ್ಯಶೆಟ್ಟಿ, ರೀಲರುಗಳಾದ ಡಿ.ಎಂ.ಜಗದೀಶ್ವರ್, ಅಬ್ದುಲ್ ಅಜೀಜ್,ಯೂಸುಫ್, ಎ.ಆರ್. ಅಬ್ದುಲ್ ಅಜೀಜ್, ಜಿ.ರಹಮಾನ್, ಅಕ್ಮಲ್ ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪರಿಹಾರ ಧನ ನೀಡಲು ಸರ್ಕಾರದ ಮೇಲೆ ಒತ್ತಡ
ಆಲೀಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ನಷ್ಟವಾಗಿದ್ದು ರೈತರಿಗೆ ಹೆಚ್ಚಿನ ಪರಿಹಾರ ಧನ ನೀಡಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮೇಲೂರು ಸೇರಿದಂತೆ ಚೌಡಸಂದ್ರ ಗ್ರಾಮದ ದ್ರಾಕ್ಷಿ ತೋಟಗಳಿಗೆ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಂಗಳವಾರ ಸಂಜೆ ಸುರಿದ ಆಲೀಕಲ್ಲು ಮಳೆಯಿಂದ ಮೇಲೂರು, ಭಕ್ತರಹಳ್ಳಿ, ಚೌಡಸಂದ್ರ, ಅಪ್ಪೇಗೌಡನಹಳ್ಳಿ, ಮಳ್ಳೂರು, ಬೆಳ್ಳೂಟಿ, ಕಾಕಚೊಕ್ಕಂಡಹಳ್ಳಿ ಗ್ರಾಮದ ಬಹುತೇಕ ದ್ರಾಕ್ಷಿ ತೋಟ ಹಾಗೂ ರೇಷ್ಮೆ, ದಾಳಿಂಬೆ ಹಾಗು ಗೋಡಂಬಿ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ ಎಂದರು.
ಪೃಕೃತಿ ವಿಕೋಪದಡಿ ಬೆಳೆಹಾನಿಯಾಗಿ ರೈತ ಕಂಗಾಲಾಗುವ ಸ್ಥಿತಿ ತಲುಪಿದ್ದು ಎಲ್ಲರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ತಾಲ್ಲೂಕಿನಾಧ್ಯಂತ ಬೆಳೆ ಹಾನಿಯಾಗಿರುವ ತೋಟಗಳಿಗೆ ಅಧಿಕಾರಿಗಳ ತಂಡ ಬೇಟಿ ನೀಡಿ ರೈತರಿಗಾಗಿರುವ ನಷ್ಟದ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಅವರು ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರಧನ ಸಿಗುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರದ ರಾಮೇಗೌಡ, ಶ್ರಿರಾಮರೆಡ್ಡಿ ಹಾಗೂ ರಾಮಚಂದ್ರಪ್ಪ ತೋಟಗಳು ಸೇರಿದಂತೆ ಮೇಲೂರಿನ ಕೆ.ಎಸ್.ನಂಜೇಗೌಡ, ಬಿ.ಎನ್.ರವಿಕುಮಾರ್, ಕೆ.ಬಿ.ನಾರಾಯಣಸ್ವಾಮಿ ಅವರ ದ್ರಾಕ್ಷಿ ತೋಟಗಳಿಗೆ ಅವರು ಭೇಟಿ ನೀಡಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ರೇಷ್ಮೆ ಕೃಷಿ ಉಪನಿರ್ದೇಶಕ ನಾಗಭೂಷಣ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ, ತೋಟಗಾರಿಕೆ ಇಲಾಖೆಯ ಆನಂದ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್ ಮತ್ತಿತರರು ಹಾಜರಿದ್ದರು.
ಪರಿಶೀಲನೆ ನೆಪದಲ್ಲಿ ರಾಜಕೀಯ: ಮಂಗಳವಾರ ರಾತ್ರಿ ಸುರಿದ ಆಲೀಕಲ್ಲು ಮಳೆಯಿಂದ ನಷ್ಟವುಂಟಾದ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಾದ ಶಾಸಕ ಎಂ.ರಾಜಣ್ಣ ಕೇವಲ ಜೆಡಿಎಸ್ ಮುಖಂಡರ ಹಾಗೂ ಪಕ್ಷದ ರೈತರ ತೋಟಗಳಿಗೆ ಮಾತ್ರ ಭೇಟಿ ನೀಡಿದರೆ ಮಾಜಿ ಸಚಿವ ವಿ.ಮುನಿಯಪ್ಪ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ರೈತರ ತೋಟಗಳಿಗೆ ಮಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿಶೇಷವಾಗಿತ್ತು.
ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ರೈತರ ತೋಟಗಳಿಗೆ ಭೇಟಿ ನೀಡಿದ್ದು ಒಂದೇ ಸಮಯದಲ್ಲಾಗಿದ್ದರಿಂದ ಅಧಿಕಾರಿಗಳು ಹಾಲಿ ಶಾಸಕರೊಟ್ಟಿಗಿರಬೇಕೋ ಅಥವ ಮಾಜಿ ಸಚಿವರ ಜೊತೆ ಹೋಗಬೇಕೊ ಎನ್ನುವುದು ಅರ್ಥವಾಗದೇ ಪೇಚಾಡುತ್ತಿದ್ದರು.
ಸನ್ಮಾನ
ಶಿಡ್ಲಘಟ್ಟದ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯದಲ್ಲಿ ಹಾಗೂ ಶಂಕರ ಮಠದಲ್ಲಿ ಬುಧವಾರ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿ.ಕೃಷ್ಣ, ಎಸ್.ವಿ.ನಾಗರಾಜರಾವ್ ಹಾಜರಿದ್ದರು.
ಸಾಮಾಜಿಕ ಕಾರ್ಯಗಳನ್ನು ನಡೆಸಿ
ಸಮಾಜದ ಬಡವರಿಗೆ ಸಹಕಾರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಶಂಕರರರಂಥಹ ಮಹಾನುಭಾವರ ಜಯಂತ್ಯುತ್ಸವ ಅರ್ಥಪೂರ್ಣವಾಗಿರುತ್ತದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಶಂಕರ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ನಡೆದ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ ಮಾತನಾಡಿ, ಕಳೆದ ಮೂವತ್ತಮೂರು ವರ್ಷಗಳಿಂದ ವಟುಗಳಿಗೆ ಧರ್ಮೋಪನಯನಗಳನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಡೆಸುಕೊಂಡು ಬರುತ್ತಿದ್ದು, ಉಪನಯನ ದೀಕ್ಷೆ ನೀಡಿ, ಧರ್ಮದ ಏಳಿಗೆಗೆ ಮತ್ತು ಸಾಮಾಜಿಕ ಪ್ರಗತಿಗೆ ವಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಶಂಕರರ ಜನ್ಮದಿನವನ್ನು ವಿಶ್ವದಾರ್ಶನಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ನಾಲ್ಕು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗಾಯತ್ರಿ ಮಹಿಳಾ ಮಂಡಳಿಯವರಿಂದ ದೇವತಾ ಸ್ತೋತ್ರಗಳು, ಡಾ.ಡಿ.ಟಿ.ಸತ್ಯನಾರಾಯಣರಾವ್ ಹಾಗೂ ಸ್ಥಳೀಯ ಕಲಾವಿದರ ವೃಂದದವರಿಂದ ದೇವರ ನಾಮಗಳ ಗಾಯನ, ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ವಕೀಲ ಟಿ.ಎಸ್.ವಿಜಯಶಂಕರ್ ಅವರಿಂದ ‘ಶಂಕರ ವಿಜಯ’ ಉಪನ್ಯಾಸವನ್ನು ನಡೆಸಲಾಯಿತು.
ಗುರುವಾರ ಹತ್ತು ಮಂದಿ ವಟುಗಳಿಗೆ ಸಾಮೂಹಿಕ ಉಪನಯನಗಳನ್ನು ಮತ್ತು ಬ್ರಹ್ಮೋಪದೇಶವನ್ನು ನೀಡಲಾಯಿತು. ದೇವಾಲಯದಲ್ಲಿ ಪಾನಕ ಪೂಜೆ, ಋತ್ವಿಕ್ ಸಮಾರಾಧನೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನಡೆಸಲಾಯಿತು. ವಟುಗಳನ್ನು ಸತ್ಕರಿಸಲಾಯಿತು.
ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿ.ಕೃಷ್ಣ, ಬಿ.ಆರ್.ಅನಂತಕೃಷ್ಣ, ಬಿ.ಕೃಷ್ಣಮೂರ್ತಿ, ಶ್ರೀನಿವಾಸಮೂರ್ತಿ, ಶ್ರೀನಾಥ್, ಎಸ್.ವಿ.ನಾಗರಾಜರಾವ್, ಮಂಜುನಾಥ್, ಬಿ.ಆರ್.ನಟರಾಜ್, ಭಾಸ್ಕರ್, ಎಸ್.ಆರ್.ಸಕಲೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಿಂದೂ ಧರ್ಮದ ಜಾಗೃತಿಗಾಗಿ ಶಂಕರರ ಸೇವೆ ಅನನ್ಯ
ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶಂಕರಾಚಾರ್ಯರು ಎಂದು ಹಿರಿಯ ವಕೀಲ ಟಿ.ಎಸ್.ವಿಜಯಶಂಕರ್ ತಿಳಿಸಿದರು.
ನಗರದ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯದಲ್ಲಿ ಹಾಗೂ ಶಂಕರ ಮಠದಲ್ಲಿ ಮಂಗಳವಾರ ರಾತ್ರಿ ‘ಶ್ರೀ ಶಂಕರ ವಿಜಯ’ ವಿಷಯದ ಕುರಿತಂತೆ ಉಪನ್ಯಾಸ ನೀಡಿ ಅವರು ಶಂಕರಾಚಾರ್ಯರ ಬಗ್ಗೆ ವಿವರಿಸಿದರು.
ಶಂಕರಾಚಾರ್ಯರ ಜೀವನ ಸಾಧನೆ ಹಿಮಾಲಯದಂತೆ ಮಹೋನ್ನತವಾದುವು. ನಶಿಸಿ ಹೋಗುತ್ತಿದ್ದ ಹಿಂದೂ ಧರ್ಮದ ಜಾಗೃತಿಗಾಗಿ ಅವರ ಸೇವೆ ಅನನ್ಯ. ಕಡಿಮೆ ವಯಸ್ಸಿನಲ್ಲಿ ಅವರು ಮನುಕುಲಕ್ಕೆ ಬೋಧಿಸಿದ ಉಪದೇಶಗಳು ಮತ್ತು ಚಿಂತನೆಗಳು ಹೃದಯ- ಮನಸ್ಸು ತಣಿಸಿ, ಭಾವಬುದ್ಧಿಗಳಿಗೆ ಪ್ರಚೋದನೆ ನೀಡುವಂತಹವು.
ಹಿಂದೂ ಧರ್ಮೀಯರಲ್ಲಿ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದು ಹೇಳಿದರು.
ಹಿರಿಯ ವಕೀಲ ಟಿ.ಎಸ್.ವಿಜಯಶಂಕರ್ ಅವರನ್ನು ಶಿಡ್ಲಘಟ್ಟ ಬ್ರಾಹ್ಮಣ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್. ರವಿ, ಯುವಕ ಸಂಘದ ಅಧ್ಯಕ್ಷ ವಿ.ಕೃಷ್ಣ, ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಎಸ್.ವಿ. ನಾಗರಾಜ ರಾವ್, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆರು ತಿಂಗಳಿಂದ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ
ಕಳೆದ ಆರು ತಿಂಗಳಿಂದ ನಮಗೆ ವೇತನ ನೀಡಿಲ್ಲವೆಂದು ಆರೋಪಿಸಿ ಬುಧವಾರ ಪೌರಕಾರ್ಮಿಕರು ನಗರಸಭೆ ಕಛೇರಿಗೆ ಬೀಗ ಜಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.
ನಗರದಾದ್ಯಂತ ಸ್ವಚ್ಚತೆ ಕಾರ್ಯ ಸೇರಿದಂತೆ ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಈವರೆಗೂ ಸಂಬಳ ನೀಡಲು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.
ನಗರದ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ೪೦ ಮಂದಿ ಖಾಯಂ ನೌಕರರು ಸೇರಿದಂತೆ ೬೦ ಮಂದಿ ಗುತ್ತಿಗೆ ನೌಕರರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲವೆಂದು ಆರೋಪಿಸಿದ ಪೌರಕಾರ್ಮಿಕರು ಆರು ತಿಂಗಳು ಸಂಬಳ ನೀಡದೇ ಇದ್ದರೆ ನಾವು ಹೊಟ್ಟೆಗೆ ಏನು ತಿನ್ನುವುದು, ಮಕ್ಕಳ ಶಾಲಾ ಶುಲ್ಕ ಕಟ್ಟುವುದಾದರೂ ಹೇಗೆ. ಕೂಡಲೇ ನಮಗೆ ಬಾಕಿ ಇರುವ ಸಂಬಳ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ಬಾಗಿಲು ಹಾಕಿ ಮುಂಭಾಗದಲ್ಲಿ ಧರಣಿ ನಡೆಸಿದರು.
ನಟರಾಜು, ಮುನಿಕೃಷ್ಣ, ವೆಂಕಟೇಶ್, ಕುಮಾರ, ಭೀಮಾ, ಸುರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

