ರೈತರು ಖಾಸಗಿ ಸಾಲದ ಬಲೆಗೆ ಸಿಕ್ಕಿ ಬಸವಳಿಯುತ್ತಿದ್ದಾರೆ ಎಂಬುದು ಕೂಡ ಸತ್ಯವೇ. ಬೆಳೆ ನಾಶ, ಬೆಲೆ ಕುಸಿತಗಳದ್ದು ನೇರ ಪರಿಣಾಮವಾಗಿ ಆತ್ಮಹತ್ಯೆಗಳು ಸಂಭವಿಸುತ್ತವೆ. ಖಾಸಗಿ ಸಾಲದ ವಿಪರೀತ ಬಡ್ಡಿ ದರ, ಬಡ್ಡಿ ಮಾರ್ವಾಡಿಗಳ ಗೂಂಡಾಗಿರಿಯೂ ತನ್ನ ಪಾಲನ್ನು ನೀಡಿದೆ. ಕೊನೆ ಪಕ್ಷ ರಾಜ್ಯ ಸರ್ಕಾರ ಇದೀಗ ರೈತರಿಗೆ ಕೃಷಿ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಶೇ.3ರ ಬಡ್ಡಿದರದಲ್ಲಿ ಸಾಲ ಒದಗಿಸಲು ಮುಂದಾಗಿದೆ.
ಹಾಗೆಂದು ರೈತರು ಟವೆಲ್ ಕೊಡವಿ ಬ್ಯಾಂಕ್ ಮುಂದೆ ನಿಂತರೆ ಸಾಲ ಮಂಜೂರಾಗುವುದಿಲ್ಲ. ಅಲ್ಲೂ ದಾಖಲೆಗಳನ್ನು ಒದಗಿಸುವ ಗೋಟಾಳಿ. ಗ್ರಾಮೀಣ ಬ್ಯಾಂಕ್‍ಗಳಲ್ಲಿ ಒದಗಿಸಬೇಕಾದ ದಾಖಲೆಗಳ ಸಂಖ್ಯೆಯನ್ನು ಸೀಮಿತಗೊಳಿಸಲೂ ಸರ್ಕಾರ ಯೋಚಿಸಬೇಕು. ಅದಕ್ಕೂ ಮುನ್ನ ರೈತರಿಗೆ ಯಾವ್ಯಾವ ದಾಖಲೆಗಳು ಬೇಕು ಎಂಬ ವಿವರ ತಿಳಿದಿದ್ದಾದರೆ ಅಷ್ಟರಮಟ್ಟಿಗೆ ತಿರುಗಾಟಗಳ ಸುಸ್ತು ಕಡಿಮೆಯಾದೀತು. ಆ ನಿಟ್ಟಿನಲ್ಲಿ ಅಧ್ಯಯನ ಆಧರಿಸಿದ ತಿಳುವಳಿಕೆ ಇದು.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗೆ ತೆರಳುವ ಮುನ್ನವೇ ರೈತರ ಕೈಯಲ್ಲಿ ಕೆಲವು ದಾಖಲೆಗಳು ಸಿದ್ಧವಿದ್ದರೆ ಕ್ಷೇಮ. ಮುಖ್ಯವಾಗಿ, ಜಮೀನಿನ ಮೂಲದಾಖಲೆ ಬೇಕು. ಆಸ್ತಿಯ ಖರೀದಿ ಪತ್ರ ಅಥವಾ ಹಿಸ್ಸಾ ಪತ್ರಗಳೇ ಅವು. ಹಿಸ್ಸಾ ಪತ್ರದ ಸಂಬಂಧವಾಗಿಯೇ ಕೆಲವೊಮ್ಮೆ ಗೊಂದಲಗಳಾಗುತ್ತವೆ. ಹಿಸ್ಸಾದ ಅಧಿಕೃತ ಪತ್ರ ಒಂದೇ ಇದ್ದು, ಅದು ಒಬ್ಬ ಫಲಾನುಭವಿಯಲ್ಲಿ ಮಾತ್ರ ಇರುತ್ತದೆ. ಹಿಸ್ಸಾ ಸಮಯದಲ್ಲೇ ಪ್ರಪ್ರತ್ಯೇಕ ಹಿಸ್ಸಾ ಪತ್ರ ಮಾಡಿಸಿ ನೊಂದಾಯಿಸಿಕೊಳ್ಳುವುದು ಅನುಕೂಲ.
ಮೊತ್ತಮೊದಲಾಗಿ, ಸಂಬಂಧಿಸಿದ ಗ್ರಾಮಲೆಕ್ಕಿಗರಿಂದ ಹಲವು ದಾಖಲೆಗಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ವಂಶವೃಕ್ಷ ಅಂತಹ ಒಂದು ದಾಖಲೆ. ಸಾಲ ಮಾಡುವವರ ಅಜ್ಜ, ಅಜ್ಜಿಯ ಹೆಸರಿನಿಂದ ಆರಂಭಿಸಿ ಮನೆತನದ ಎಲ್ಲ ಗಂಡು-ಹೆಣ್ಣು ಮಕ್ಕಳ ವಿವರ ಇರಿಸಿಕೊಂಡು ಹೋದರೆ ಕೆಲಸ ಸುಗಮ. ಸಾಲ ಮಾಡುವಾತ ತನ್ನ ಪತ್ನಿ, ಮಕ್ಕಳ ವಯಸ್ಸನ್ನೂ ಒದಗಿಸಬೇಕು. ವಂಶವೃಕ್ಷಕ್ಕೆ ಊರಿನ ಕನಿಷ್ಠ ಇಬ್ಬರಿಂದ ಸಾಕ್ಷ್ಯ ಹಾಕಿಸಿಕೊಳ್ಳಬೇಕು. ಇದನ್ನು ಗ್ರಾಮಲೆಕ್ಕಿಗರೇ ಹಾಕಿಸಬೇಕೆಂಬ ನಿಯಮ ಇದ್ದರೂ ಪದ್ಧತಿಯ ಪ್ರಕಾರ ಅದು ರೈತನ ಜವಾಬ್ದಾರಿ!
ಕಂದಾಯ ತೀರುವಳಿಯ ಪತ್ರವೂ ಅವಶ್ಯಕ. ಬಾಕಿ ಇದ್ದ ಕಂದಾಯವನ್ನು ಮಾತ್ರ ಈಗ ಕಟ್ಟಲೇಬೇಕಾಗುತ್ತದೆ! ಗ್ರಾಮಲೆಕ್ಕಿಗರೇ ಜಮೀನಿನ ಚಕ್‍ಬಂದಿಯ ವಿವರಗಳನ್ನು ಲಿಖಿತವಾಗಿ ನೀಡುತ್ತಾರೆ. ಈ ದಾಖಲೆ ಒದಗಿಸಲು ತಮ್ಮ ಜಮೀನಿನ ಗಡಿಯ ನಾಲ್ಕೂ ದಿಕ್ಕುಗಳಲ್ಲಿ ಇರುವ ಚಿರಾಸ್ತಿ ವಿವರವನ್ನು ರೈತನೇ ಒದಗಿಸಿದರೆ ತಕ್ಷಣ ಕೆಲಸ ಆಗುವುದು ಖಚಿತ.
ಈ ಜಮೀನುಗಳ ಅಂದಾಜು ನಕಾಶೆ, ಹಿಡುವಳಿ ದೃಢೀಕರಣದ ವರದಿಯನ್ನು ಗ್ರಾಮಲೆಕ್ಕಿಗರೇ ತಯಾರಿಸಿಕೊಡುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗ್ರಾಮಲೆಕ್ಕಿಗರಿಂದ
1. ಜಮೀನಿನ ಅಂದಾಜು ನಕಾಶೆ
2. ಹಿಡುವಳಿ ದೃಢೀಕರಣ ಪತ್ರ
3. ಜಮೀನಿನ ಚಕ್‍ಬಂದಿ ದಾಖಲೆ
4. ವಂಶವೃಕ್ಷ
5. ಕಂದಾಯ ತೀರುವಳಿ ಪತ್ರ, ಈ ಐದನ್ನು ಬ್ಯಾಂಕ್‍ಗೆ ಹೋಗುವ ಮುನ್ನವೇ ಪಡೆದುಕೊಂಡಿದ್ದರೆ ಸಲೀಸು.
ಜಮೀನಿನ ಮ್ಯುಟೇಶನ್ ಬೇಕಾದ ಇನ್ನೊಂದು ದಾಖಲೆ. ಅದಾಗಲೇ ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಸೇರಿದ್ದರೆ ಕೇವಲ 15 ರೂ. ಶುಲ್ಕ ನೀಡಿ ತಾಲ್ಲೂಕು ಕಛೇರಿ ಅಥವಾ ನೆಮ್ಮದಿ ಕೇಂದ್ರಗಳಲ್ಲಿ ಪಡೆಯಬಹುದು. ಜಮೀನಿನ ಹೋಬಳಿ, ಗ್ರಾಮ ಮತ್ತು ಸರ್ವೆ ನಂ.ಗಳನ್ನು ತಿಳಿಸಿದರೆ ಸಾಕು. ಇದೇ ರೀತಿ ಜಮೀನಿನ ಪಹಣಿ ಪತ್ರವನ್ನು ತೆಗೆದುಕೊಳ್ಳಬೇಕು. ಬ್ಯಾಂಕ್‍ನಲ್ಲಿ ಒಂದಕ್ಕಿಂತ ಹೆಚ್ಚು ಮಾದರಿಯ ಸಾಲ ಪಡೆದರೂ ಒಂದು ಸೆಟ್ ಅಸಲು ಪ್ರತಿ ಸಾಕಾಗುತ್ತದೆ. ಉಳಿದಂತೆ ನಕಲುಗಳನ್ನು ಇರಿಸಿಕೊಳ್ಳಬೇಕು.
ಒಂದೊಮ್ಮೆ ಮ್ಯುಟೇಶನ್ ತಾಲ್ಲೂಕು ಕಛೇರಿಯಲ್ಲಿ ಕಂಪ್ಯೂಟರೀಕೃತ ಆಗಿರÀದಿದ್ದಲ್ಲಿ ಸ್ವಲ್ಪ ಗೋಳಿದೆ. ಸಾಮಾನ್ಯವಾಗಿ, ಈ ಹಳೆಯ ದಾಖಲೆಗಳು ನಾಡ ಕಛೇರಿ ಎಂಬ ವ್ಯವಸ್ಥೆಯಡಿ ಇರುತ್ತವೆ. ಇಲ್ಲಿ ಮ್ಯುಟೇಶನ್‍ನ್ನು ಕೈಯಿಂದ ಬರೆದುಕೊಡಲಾಗುತ್ತದೆ. ನಾವಿರುವ ಸ್ಥಳದಿಂದ ಈ ಕಛೇರಿ ದೂರವಿದ್ದಲ್ಲಿ ಮ್ಯುಟೇಶನ್‍ನ ಖಾಲಿ ಫಾರಂಗಳನ್ನು ಹಿಡಿದುಕೊಂಡೇ ಹೋದರೆ ಕ್ಷೇಮ. ಸಾಧಾರಣವಾಗಿ ಗ್ರಾಮಲೆಕ್ಕಿಗರಲ್ಲಿ ಈ ಕುರಿತಂತೆ ಮಾಹಿತಿ, ಸದರಿ ಕಛೇರಿಯವರ ದೂರವಾಣಿ ಸಂಖ್ಯೆ ಇದ್ದಿರುತ್ತವೆ. ಅದರ ಉಪಯೋಗ ಪಡೆದುಕೊಳ್ಳಬಹುದು. ಗ್ರಾಮಲೆಕ್ಕಿಗರಲ್ಲಿ ಹಾಗೂ ನಾಡ ಕಛೇರಿಗಳಲ್ಲಿ ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳುವುದು ನಿಮ್ಮ ಸಾಮಥ್ರ್ಯಕ್ಕೆ ಬಿಟ್ಟ ವಿಚಾರ!
ಮುಂದಿನದೇ ಬ್ಯಾಂಕ್ ಭೇಟಿ. ಯಾವುದೇ ಪ್ರಾಥಮಿಕ ಸರಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಲ್ಲಿನ ಸಾಲ ಪಡೆಯುವ ಮುನ್ನ ಆ ಬ್ಯಾಂಕ್‍ನ ಸದಸ್ಯರಾಗಬೇಕಾಗುತ್ತದೆ. ಪ್ರತಿ ವಲಯಕ್ಕೆ ಯಾವುದೋ ಒಂದು ಪಿಎಲ್‍ಡಿ ಬ್ಯಾಂಕ್ ನಿರ್ವಾಹಕವಾಗಿರುತ್ತದೆ. ಅಲ್ಲಿ ಮಾತ್ರ ರೈತ ಸಾಲ ಮಾಡಬಹುದು. ಸಾಲ ಪಡೆಯಬೇಕಾದ ಯೋಜನೆಯನ್ನು ಗುರ್ತಿಸಿ ಅವರಿಗೆ ತಿಳಿಸಬೇಕು. ಸಾಮಾನ್ಯವಾಗಿ ಎಲ್ಲ ಸಾಲದ ಯೋಜನೆಗಲಿಗೆ ತಾಂತ್ರಿಕ ವರದಿ ಅಗತ್ಯ. ಈಗೀಗ ಬ್ಯಾಂಕ್‍ಗಳಲ್ಲಿಯೇ ನಿಗದಿಯಾದ ಒಬ್ಬ ಇಂಜಿನೀಯರ್‍ರಿಂದ ವರದಿ ಸಿದ್ಧಪಡಿಸಿಕೊಡುವ ವ್ಯವಸ್ಥೆಯಾಗಿರುತ್ತದೆ. ಸರಿಸುಮಾರು ಅದಕ್ಕೆ 200 ರೂ. ಶುಲ್ಕವಿದೆ. ಅದಕ್ಕೆ ರಸೀದಿ ಮಾತ್ರ ಸಿಕ್ಕುವುದಿಲ್ಲ! ಸಾಲ ಅಪೇಕ್ಷಿಸುವವರಿಗೆ ಸದರಿ ಗ್ರಾಮೀಣ ಬ್ಯಾಂಕ್ ಇತರ ಸ್ಥಳೀಯ ಸಹಕಾರ ಸಂಘ ಹಾಗೂ ಷೆಡ್ಯೂಲ್ ಬ್ಯಾಂಕ್‍ನಿಂದ ಸುಸ್ತಿ ಆಗದಿರುವ ಬಗ್ಗೆ ದೃಢೀಕರಣ ಪತ್ರ ತರಲು ತಿಳಿಸುತ್ತಾರೆ. ಅದಕ್ಕೆಂದೇ ಸಿದ್ಧಪಡಿಸಿದ ಮುದ್ರಿತ ಪತ್ರವನ್ನು ಗ್ರಾಮೀಣ ಬ್ಯಾಂಕ್ ಖುದ್ದು ನೀಡುತ್ತದೆ. ಅದಕ್ಕೆ ಸಹಿ ಮಾಡಿ ಮರಳಿ ನೀಡಬೇಕಾಗುತ್ತದೆ.
ಪ್ರತಿ ಸಾಲ ಯೋಜನೆಗೆ ಒಂದರಂತೆ ಪಾಸ್‍ಪೋರ್ಟ್ ಫೋಟೋ ಬೇಕು. ಇಂತಹ ಸಂದರ್ಭದಲ್ಲಿ ಹೆಚ್ಚು ಫೋಟೋಗಳನ್ನು ಒಯ್ದುಬಿಟ್ಟಿರಬೇಕು. ಈ ದಿನಗಳಲ್ಲಿ 30-35 ಫೋಟೋಗಳನ್ನು 25 ರೂ.ಗಳಿಗೆ ಒದಗಿಸುವ ಕೊಡುಗೆಯನ್ನು ಫೋಟೋ ಸ್ಟುಡಿಯೋಗಳು ಘೋಷಿಸುತ್ತವೆ. ಅದನ್ನು ಬಳಸಿ ಫೋಟೋ ಹೊಡೆಸಿ ಇರಿಸಿಕೊಳ್ಳುವುದು ಜೇಬಿಗೆ ನಿರಾಳ!
ಬ್ಯಾಂಕ್‍ಗಳವರು ಪ್ರತಿ ಫೈಲ್ ಸಿದ್ಧಪಡಿಸಲು ನಿಗದಿತ ಶುಲ್ಕ ಪಡೆಯುತ್ತವೆ. ಇದು ಸಾಕಷ್ಟು ಜಾಸ್ತಿಯೂ ಇರುತ್ತದೆ. ಹಾಗಾಗಿ ಸಾಲ ಮಾಡುವವರು 30-50 ಸಾವಿರದ ಮೊತ್ತದ ಯೋಜನೆಗಳನ್ನು ಆಯ್ದುಕೊಂಡರೆ ಈ ಶುಲ್ಕವನ್ನು ಭರಿಸಬಹುದು. ಇಲ್ಲದಿದ್ದರೆ ನಷ್ಟದ ಬಾಬತ್ತು. ಸಾಲದ ಯೋಜನೆ ಎಷ್ಟೇ ಚಿಕ್ಕದಿದ್ದರೂ ಫೈಲ್‍ನ ನಿಗದಿತ ಫೀ ಬದಲಾಗುವುದಿಲ್ಲ ಎಂಬುದು ನೆನಪಿನಲ್ಲಿರಬೇಕು.
ಬ್ಯಾಂಕ್‍ನಲ್ಲೂ ಕೂಡ ಸರಿಯಾಗಿ ಮಾಹಿತಿ ಕೊಡದೆ ಅಲೆದಾಡಿಸುವುದು ಸಂಪ್ರದಾಯ. `ಸಾಲ ಬೇಕೆಂದರೆ ರೈತ ಓಡಾಡಬೇಕು’ ಎಂಬುದು ಅವರ ನೀತಿ. ಸಾಲ ಯೋಜನೆಗೆ ಬೇಕಾಗುವ ದಾಖಲೆಗಳನ್ನು ಒಂದಲ್ಲ ಎರಡು ಬಾರಿ ಕೇಳಿ ಖಚಿತಪಡಿಸಿಕೊಳ್ಳಬೇಕು. ರೈತ ತನ್ನ ಜಮೀನಿನ ಕೆಲಸ ಬಿಟ್ಟು ಬ್ಯಾಂಕ್‍ಗೆ ಓಡಾಡಲಿ ಎಂದು ಬಯಸುವ ಸ್ಯಾಡಿಸ್ಟ್ ಗುಣಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಬಿಡಿ.
ಪ್ರತಿ ಸಾಲಕ್ಕೆ ಗ್ರಾಮಲೆಕ್ಕಿಗರು ಕೊಟ್ಟ ದಾಖಲೆಗಳು, ಆರ್‍ಟಿಸಿ, ಮ್ಯುಟೇಶನ್‍ಗಳ ಝೆರಾಕ್ಸ್ ಪ್ರತಿಗಳು ಬೇಕೇ ಬೇಕಾಗುತ್ತವೆ. ಕೆಲವೊಂದು ಸಾಲಕ್ಕೆ ಗ್ರಾಮೀಣ ಬ್ಯಾಂಕ್ ಸ್ವತಃ ದಾಖಲೆ ತರಿಸಿಕೊಳ್ಳಬೇಕು. ಉದಾ.ಗೆ ಕಾಳುಮೆಣಸು ಅಭಿವೃದ್ಧಿಗೆ, ಭೂಮಿ ಸದರಿ ಬೆಳೆಗೆ ಯೋಗ್ಯವೇ ಎಂಬ ಬಗ್ಗೆ ತಾಂತ್ರಿಕ ವರದಿಯನ್ನು ಖುದ್ದು ಬ್ಯಾಂಕ್ ತೋಟಗಾರಿಕೆ ಇಲಾಖೆ ಅಥವಾ ಸಾಂಬಾರ ಮಂಡಳಿಯಿಂದ ತರಿಸಿಕೊಳ್ಳಬೆಕು. ಇತ್ತ ಬ್ಯಾಂಕ್ ಈ ದಾಖಲೆ ಬೇಕು ಎಂದು ರೈತನಲ್ಲಿ ಹೇಳಿ ಅಲೆದಾಡಿಸಿಬಿಡುತ್ತವೆ. ಅತ್ತ ಹಾಗೆಲ್ಲ ನಾವು ಕೊಡೆವು, ಬ್ಯಾಂಕ್ ಪತ್ರ ಬೇಕು ಎಂದು ತೋಟಗಾರಿಕೆ ಇಲಾಖೆ ಕೈಯಾಡಿಸಿಬಿಡುವುದುಂಟು. ರೈತ ಸುಸ್ತು! ಇವ ಪಡೆಯಬೇಕಾದ ದಾಖಲೆ, ಅದಕ್ಕಿರುವ ಮಾಹಿತಿಗಳನ್ನು ಸ್ವಲ್ಪ ಸಮಯ ವೆಚ್ಚ ಮಾಡಿಯಾದರೂ ಅರಿತುಕೊಳ್ಳಬೇಕು. ಬ್ಯಾಂಕ್‍ನಲ್ಲಿ ತುಸು `ದಡ್ಡ’ ಎಂದುಕೊಳ್ಳುವಂತೆ ವರ್ತಿಸಿದರೂ ಚಿಂತೆಯಿಲ್ಲ. ಸಾಧ್ಯವಾದರೆ ಇಂತಹ ಸಾಲ ಕೋರಿದ ಇತರೆ ರೈತರ ದಾಖಲೆಗಳ ಫೈಲ್ ಗಮನಿಸಿದರಂತೂ ಅಷ್ಟರಮಟ್ಟಿಗೆ ಒಳ್ಳೆಯದು.
ಸಾಲವನ್ನು ಸಾಮಾನ್ಯವಾಗಿ ಕೇಂದ್ರ ಬ್ಯಾಂಕ್ ಚೆಕ್ ಮೂಲಕ ಒದಗಿಸುತ್ತಾರೆ. ಮತ್ತೆ ಅದಕ್ಕೆ ಅನುಗುಣವಾಗಿ ಶೇರು ಹಣ ಪಡೆಯುತ್ತಾರೆ. ಸ್ಟಾಂಪ್ ಪೇಪರ್ ಶುಲ್ಕ, ಈಸಿ ಫೀ, ಇತರೆ ಎಂಬಿತ್ಯಾದಿ ಶೀರ್ಷಿಕೆಯಡಿ ವಸೂಲಿಸಲಾಗುತ್ತದೆ. ಇದರಲ್ಲಿ ಶೇರು ಹಣ ಮಾತ್ರ ಮರುಪಾವತಿಗೆ ಲಭ್ಯವಿರುತ್ತದೆ.
ಒಂದರ್ಥದಲ್ಲಿ, ಇಲ್ಲಿನ ಮಾಹಿತಿ ಒಂದು ಪಕ್ಷಿನೋಟ ಮಾತ್ರ. ಕಿರಿಕ್ ಮಾಡುವ ಬ್ಯಾಂಕ್‍ನವರಿಗೆ ಗೋಳು ಹೊಯ್ದುಕೊಳ್ಳಲು ಸಾವಿರ ಮಾರ್ಗಗಳಿವೆ. ರೈತ ನಿರಾಶನಾಗಬೇಕಾಗಿದ್ದಿಲ್ಲ. ಅಷ್ಟಕ್ಕೂ ನಿರಾಶೆಗಳ ತಳಹದಿಯ ಮೇಲೆಯೇ ರೈತನ ಬದುಕು ಕಟ್ಟಲಾಗಿರುವುದು ತಾನೇ?
– ಮಾ.ವೆಂ.ಸ.ಪ್ರಸಾದ್
ಕೃಷಿ ಸಾಲ, ದಾಖಲೆ, ಸುಸ್ತು ಇತ್ಯಾದಿ!
ರಾಮಾನುಜಾಚಾರ್ಯರ ಆರಾಧನೆ
ವಿಶಿಷ್ಠಾದ್ವೈತ ತತ್ವದ ಮುಖಾಂತರ ಸಮಾಜದಲ್ಲಿನ ಸಾಮಾನ್ಯ ವರ್ಗದ ಜನರಿಗೆ ಆಧ್ಯಾತ್ಮಿಕ ಮಾರ್ಗವನ್ನು ತೋರಿಸಿ, ಮಾನವರು ಸನ್ಮಾರ್ಗದಲ್ಲಿ ನಡೆಯುವಂತೆ ಭೋದನೆ ಮಾಡಿದ ರಾಮಾನುಜಾಚಾರ್ಯರು ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶ್ರೀ ವೈಷ್ಣವ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಕೋದಂಡಪ್ಪ ಹೇಳಿದರು.
ತಾಲ್ಲೂಕಿನ ಆನೆಮಡಗು ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶ್ರೀ ವೈಷ್ಣವ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ರಾಮಾನುಜಾಚಾರ್ಯರ ೯೯೯ ನೇ ತಿರುನಕ್ಷತ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಮಾತನಾಡಿದರು.
ರಾಮಾನುಜಾಚಾರ್ಯರು ಎಲ್ಲಾ ಪಂಥದವರು, ಪಂಗಡಗಳವರು ಒಪ್ಪುವಂತಹ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ, ಭಕ್ತಿಯ ಆಂದೋಲನವನ್ನು ಪ್ರಚುರ ಪಡಿಸುವಲ್ಲಿ ಚೈತನ್ಯಪ್ರಭು, ವಲ್ಲಭಾಚಾರ್ಯರು, ಕಬೀರ, ರಮಾನಂದರ ಪಂಥಗಳು, ಪ್ರಮುಖ ಪಾತ್ರವನ್ನು ವಹಿಸಿದ್ದವು, ರಾಮಾನುಜರನ್ನು ರಾಷ್ಟ್ರಕವಿ ಕುವೆಂಪು ಅವರು ರಚನೆ ಮಾಡಿರುವ ನಾಡಗೀತೆಯಲ್ಲಿ ಪ್ರಚುರ ಪಡಿಸಿರುವುದನ್ನು ಕಂಡಾಗ ಅವರು, ಮುಖ್ಯವಾಗಿ ಅವರು ಮಾನವ ಧರ್ಮಕ್ಕೆ ಸೇರಿದವರು ಎನ್ನುವುದು ಸತ್ಯಸಂಗತಿಯಾಗಿದೆ. ಮಾನವ ಕುಲವನ್ನು ಸನ್ಮಾರ್ಗದ ಕಡೆಗೆ ನಡೆಸುವ ನಿಟ್ಟಿನಲ್ಲಿ ಅವರು ಅನೇಕ ಬೋದನೆಗಳನ್ನು ಮಾಡಿದ್ದಾರೆ. ದೀನದಲಿತರ ಉದ್ದಾರ, ಮೇಲುಕೀಳು ಎಂಬ ಭಾವನೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಅವರ ವಿಶಿಷ್ಟವಾದ ಕಾರ್ಯವೈಖರಿಯು ಮಾನವ ಕುಲಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಹೋಮಗಳನ್ನು ಮಾಡಲಾಗಿತ್ತು, ಪಂಚಲೋಹದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯದರ್ಶಿ ಶ್ರೀನಿವಾಸಾಚಾರ್ಯ, ಬಾಬು, ಜಿ.ಎಸ್.ತ್ಯಾಗರಾಜ್, ಜಿ.ಟಿ. ಚಕ್ರಪಾಣಿ, ಹರಿಪ್ರಸಾದ್, ಜಿ.ಟಿ. ಕಾವ್ಯ, ಲಕ್ಷ್ಮಮ್ಮ, ಜಿಲ್ಲಾ ಪಂಚಾಯತಿ ಸದಸ್ಯ ಡಾ.ಜಯರಾಮರೆಡ್ಡಿ ಮತ್ತಿತರರು ಪೂಜಾಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.
ಸದಾಶಿವ ಆಯೋಗದ ವರದಿಗೆ ಒತ್ತಾಯ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಆಂಧ್ರ ಮತ್ತು ತೆಲಂಗಾಣದ ಮಾದರಿಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಿದ್ದರೆ, ಮುಂದಿನ ದಿನದಲ್ಲಿ ರಾಜ್ಯದಲ್ಲಿರುವ ಸುಮಾರು ೩೬ ಲಕ್ಷ ಮಾದಿಗ ಜನಾಂಗದವರು, ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಲಿದ್ದಾರೆ ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೧೯೭೬ ರಲ್ಲಿ ಹಾವನೂರ ಅವರ ಸಲ್ಲಿಸಿರುವ ವರದಿಯನ್ನು ಸರ್ಕಾರ ಪರಿಗಣಿಸಿಲ್ಲ. ನಂತರ ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗಲೂ ವರದಿಯನ್ನು ಸಲ್ಲಿಸಲಾಗಿತ್ತಾದರೂ ವರದಿಯನ್ನು ತಯಾರಿಸಲು ಅನುದಾನ ಬಿಡುಗಡೆ ಮಾಡಿದ್ದನ್ನು ಬಿಟ್ಟರೆ, ಇದುವರೆಗೂ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತಹ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿಲ್ಲ. ಜಾತಿಜನಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ಒಂದು ಕೋಟಿ ಎಂಟು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಹಾವನೂರ ವರದಿಯಂತೆ ಹೆಚ್ಚಾಗಿರುವ ಮಾದಿಗ ಜನಾಂಗಕ್ಕೆ ಶೇ. ೮ ರಷ್ಟು ಮೀಸಲಾತಿ ಸಿಗಬೇಕಾಗಿತ್ತು, ಆದರೆ ನಮಗೆ ಇದುವರೆಗೂ ಸಿಕ್ಕಿದ್ದು ಮಾತ್ರ, ಕೇವಲ ಶೇ. ೧.೫ ರಷ್ಟು ಮೀಸಲಾತಿ ಮಾತ್ರ.
ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ನಮಗೆ ಸಿಗಬೇಕಾಗಿದ್ದ ಮೀಸಲಾತಿ ಇದುವರೆಗೂ ಸಿಕ್ಕಿಲ್ಲ, ಆದ್ದರಿಂದ ಮೇ 22 ರಂದು ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾಜ್ಯಾದ್ಯಂತ ಇರುವ ಮಾದಿಗ ಸಮುದಾಯದ ಜನಪ್ರತಿನಿಧಿಗಳನ್ನು ಸೇರಿಸಿ, ಅಭಿನಂದನಾ ಕಾರ್ಯಕ್ರಮವನ್ನು ಮಾಡುವ ಮೂಲಕ, ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕೆಲಸವನ್ನು ಮಾಡಲು ಯೋಜನೆ ರೂಪಿಸಲಾಗಿದ್ದು, ಜಿಲ್ಲೆಯಿಂದ ೨೩೫ ಮಂದಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎನ್.ನರಸಿಂಹಮೂರ್ತಿ ಮಾತನಾಡಿ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಅನುಷ್ಟಾನಗೊಳಿಸಲು, ರಾಜ್ಯ ಸಚಿವ ಸಂಪುಟದ ಕೆಲವು ಮಂದಿ ಸಚಿವರೆ ಅಡ್ಡಗಾಲಾಗಿದ್ದಾರೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ, ವರದಿಗಳನ್ನು ತಯಾರು ಮಾಡಿಸುತ್ತಾರೆ, ನಂತರ ಮೂಲೆಗುಂಪು ಮಾಡುತ್ತಾರೆ ಎಂದರು.
ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ಉಪಾಧ್ಯಕ್ಷ ಸಿ.ಎನ್.ರಾಮಪ್ಪ, ಯಾ.ಮ.ನಾರಾಯಣಸ್ವಾಮಿ, ಸಿ.ಎನ್.ನಾರಾಯಣಸ್ವಾಮಿ, ದೊಡ್ಡತೇಕಹಳ್ಳಿ ಕದಿರಪ್ಪ, ಡಿ.ವಿ.ಮೂರ್ತಿ, ಎಂ.ಸಿ.ನಾರಾಯಣಸ್ವಾಮಿ, ಚಿಕ್ಕವೆಂಕಟೇಶ್, ಅಲಸೂರುದಿನ್ನೆ ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಸಮಾನತೆಯ ವಿರುದ್ಧ ಸಮರ ಸಾರಿದವರು ಬಸವೇಶ್ವರರು
ವಚನಗಳ ಮೂಲಕ ಅಸಮಾನತೆಯ ವಿರುದ್ಧ ಸಮರ ಸಾರಿದ ಜಗಜ್ಯೋತಿ ಬಸವೇಶ್ವರರು ಈ ನಾಡು ಕಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮಿ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಸಂಜೆ ಬಸವೇಶ್ವರ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ನಡೆದ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿ ಅವರು ಮಾತನಾಡಿದರು.
ನಾವಾಡುವ ಸರಳ ಕನ್ನಡ ಭಾಷೆಯಲ್ಲಿ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ, ನಿರ್ದಯಿ ಹೃದಯದವರೂ ತಮ್ಮನ್ನೊಮ್ಮೆ ಪರಿಶೀಲಿಸಿಕೊಳ್ಳುವಂತೆ, ತಮ್ಮ ವಚನಗಳ ಮೂಲಕ ಜನರ ಮನಃಪರಿವರ್ತನೆ ಮಾಡಿದ ಮಹಾನ್ ಮಾನವತಾವಾದಿ, ವಿಶ್ವಮಾನವ ಜಗಜ್ಯೋತಿ ಬಸವೇಶ್ವರರು ಪ್ರಪಂಚಕ್ಕೆ ಆದರ್ಶಪ್ರಾಯರಾಗಿದ್ದಾರೆ. ಕಾಯಕಕ್ಕೆ ದೈವಿಕತ್ವ ನೀಡಿದ ಬಸವೇಶ್ವರರು ‘ಕಾಯಕವೇ ಕೈಲಾಸ’ ಎಂದರು. ಬಸವಣ್ಣನವರ ಕಾಯಕ ತತ್ವವು ದಾಸೋಹ ಕಲ್ಪನೆಯನ್ನು ಹೊಂದಿದ್ದು ತ್ಯಾಗ, ದಾನ, ಸಮಾನ ಹಂಚಿಕೆ, ಅಹಂಕಾರ ತ್ಯಜಿಸುವುದು, ಶರಣಾಗತಿಯಂತಹ ಪ್ರಮುಖ ಲಕ್ಷಣಗಳನ್ನು ಹೊಂದಿದೆ.
ಬಸವಣ್ಣನವರ ಪ್ರಕಾರ ಕಾಯಕ ಮಾಡುವುದು ಒಂದು ನೈತಿಕ ಬದ್ಧತೆ, ಪ್ರತಿಯೊಬ್ಬರೂ ತನ್ನ ಅನ್ನವನ್ನು ದುಡಿದು ತಿನ್ನಬೇಕು. ‘ರಟ್ಟೆ ಮುರಿದು ದುಡಿದು ತಿನ್ನುವಂತಹ ರೊಟ್ಟಿಯು ಅಮೃತಕ್ಕಿಂತ ಶ್ರೇಷ್ಠವಾದದ್ದು’. ಕಾಯಕ ತತ್ವದ ಮೂಲಕ ಬಸವೇಶ್ವರರು ಪ್ರತಿಯೊಬ್ಬರಿಗೂ ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಬದುಕಲು ಕರೆ ನೀಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ಮೂರು ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು. ಜಾನಪದ ಕಲಾವಿದ ಗಾ.ನ.ಅಶ್ವತ್ಥ್ ತಂಡದವರಿಂದ ವಚನಗಾಯನವನ್ನು ಆಯೋಜಿಸಲಾಗಿತ್ತು.
ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್, ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುರುಷೋತ್ತಮ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಆಲಿಕಲ್ಲಿನ ಮಳೆಯಿಂದಾಗಿ ಕೋಟಿಗೂ ಅಧಿಕ ದ್ರಾಕ್ಷಿ ನಾಶ
ತಾಲ್ಲೂಕಿನ ಮೇಲೂರು ಮಳ್ಳೂರು ವ್ಯಾಪ್ತಿಯಲ್ಲಿ ಮಂಗಳವಾರ ಬಿದ್ದ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಸುಮಾರು ಒಂದು ಕೋಟಿ ರೂಗಳಿಗೂ ಅಧಿಕ ದ್ರಾಕ್ಷಿ ಬೆಳೆ ನಷ್ಟವುಂಟಾಗಿದೆ.
ಉತ್ತಮ ದ್ರಾಕ್ಷಿ ಫಸಲು ಬಿಟ್ಟಿದ್ದು, ಮಾರಾಟ ಮಾಡಬೇಕಾದ ಸಮಯದಲ್ಲಿ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಗೊಂಚಲು ಗೊಂಚಲು ದ್ರಾಕ್ಷಿ ನೆಲಕ್ಕೆ ಉದುರಿದೆ. ಕಳೆದ ಎರಡು ವರ್ಷಗಳಿಂದಲೂ ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಬೀಳುವ ಆಲಿಕಲ್ಲಿನ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಾರೆ.
ಮೇಲೂರು ಬಿ.ಎನ್.ರವಿಕುಮಾರ್ ಅವರ 11 ಎಕರೆ ಕಪ್ಪು ದಿಲ್ಖುಷ್ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿ ಸುಮಾರು 50 ಲಕ್ಷ ರೂಗಳಷ್ಟು ನಷ್ಟವಾಗಿದೆ. ಕೆ.ಎಸ್.ನಂಜೇಗೌಡರ ಒಂದೂವರೆ ಎಕರೆ ತೋಟದಲ್ಲಿ ಫಸಲಿಗೆ ಬಂದಿದ್ದ ದಿಲ್ಖುಷ್ ದ್ರಾಕ್ಷಿ ನಾಶವಾಗಿ ಸುಮಾರು 12 ಲಕ್ಷ ರೂಗಳಷ್ಟು ನಷ್ಟವನ್ನು ಅನುಭವಿಸುವಂತಾಗಿದೆ. ಇನ್ನೂ ಹಲವಾರು ಮಂದಿ ರೈತರ ಬೆಳೆಗಳು ನಾಶವಾಗಿದ್ದು, ನಷ್ಟವಾಗಿರುವ ಹಣ ಕೋಟಿಗೂ ಅಧಿಕವಾಗಲಿದೆ.
ಮೈನಾ ಹಕ್ಕಿ
ಶಿಡ್ಲಘಟ್ಟ ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಬಳಿ ಬೇಸಿಗೆಯ ಬಿಸಿಯನ್ನು ತಾಳಲಾರದೆ ನೀರನ್ನು ಕುಡಿಯುತ್ತಿರುವ ಮೈನಾ ಹಕ್ಕಿ.
ಹೈನುಗಾರಿಕೆಯಿಂದ ರೈತರ ಜೀವನಮಟ್ಟ ಸುಧಾರಿಸಿದೆ
ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಜೀವನಮಟ್ಟ ಸುಧಾರಿಸಲು ಈ ಭಾಗದ ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆಯೇ ಮುಖ್ಯ ಕಾರಣ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಿಕೆರೆ ಗ್ರಾಮದಲ್ಲಿ ಸೋಮವಾರ ಸುಮಾರು ೮ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು, ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಹಾಲು ಉತ್ಪಾದಿಸಿ ಜೀವನ ನಡೆಸುವಂತಾಗಿದೆ ಎಂದರು.
ಕೋಚಿಮುಲ್ ಅಧ್ಯಕ್ಷ ಜೆ.ಕಾಂತರಾಜ್ ಮಾತನಾಡಿ, ಒಕ್ಕೂಟದಿಂದ ಪ್ರತಿನಿತ್ಯ ೮.೫ ಲಕ್ಷ ಲೀನಷ್ಟು ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಯಾವುದೇ ಒಂದು ಸಂಘ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಸಂಘದ ಎಲ್ಲಾ ಸದಸ್ಯರೂ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಅತ್ಯಗತ್ಯ. ಹಾಲಿನ ಗುಣಮಟ್ಟ ಹಾಗೂ ಉತ್ಪಾದನೆಯ ಕಡೆ ಹೆಚ್ಚಿನ ಗಮನಹರಿಸಬೇಕು. ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ರಘು ಹಾಗೂ ಬಾಗೇಪಲ್ಲಿಯ ಕೋಚಿಮುಲ್ ನಿರ್ದೇಶಕ ಅಶ್ವತ್ಥರೆಡ್ಡಿ ಮಾತನಾಡಿದರು.
ಅರಿಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಿ.ನಾಗರಾಜಪ್ಪ, ಶಿಡ್ಲಘಟ್ಟ ಶಿಬಿರ ಘಟಕದ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್, ಚೀಮಂಗಲ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಅರಿಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎನ್.ದೇವರಾಜ್, ಮುಖಂಡರಾದ ವೆಂಕಟೇಶಪ್ಪ, ಎನ್.ಶ್ರೀನಿವಾಸ್, ಸಂಘದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
ಸಾಂಸ್ಕೃತಿಕ ನೃತ್ಯೋತ್ಸವ
ಶಿಡ್ಲಘಟ್ಟದ ಶ್ರೀಕೃಷ್ಣ ಕಲಾಕುಂಜ ಈಚೆಗೆ ಚಿಕ್ಕಬಳ್ಳಾಪುರದ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ನಡೆಸಿದ ಸಾಂಸ್ಕೃತಿಕ ನೃತ್ಯೋತ್ಸವದಲ್ಲಿ ಶಿಡ್ಲಘಟ್ಟದ ಎಸ್.ನಿಹಾರಿಕಾ ಭರತನಾಟ್ಯ ಪ್ರದರ್ಶಿಸಿದರು.
ಬಸವ ಜಯಂತ್ಯುತ್ಸವ
ಶಿಡ್ಲಘಟ್ಟದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಬಸವ ಜಯಂತ್ಯುತ್ಸವದ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ ಭಾಗವಹಿಸಿದ್ದರು. ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ಹಾಜರಿದ್ದರು.
ವಿಶ್ವಗುರು ಬಸವಣ್ಣನವರ ತತ್ವಗಳು ಸಾರ್ವಕಾಲಿಕ
ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರು ಸಾರಿದ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಜನಾಂಗ ಬಸವಣ್ಣನವರ ತತ್ವ, ಆದರ್ಶಗಳನ್ನು ಅರಿತುಕೊಳ್ಳುವ ಮೂಲಕ ನಾಡಿನ ಏಳ್ಗೆಗೆ ಶ್ರಮಿಸುವಂತೆ ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೋಮವಾರ ನಡೆದ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಳಬೇಡ ಕೊಲಬೇಡ, ಹುಸಿಯ ನುಡಿಯಬೇಡ’, ‘ಕಾಯಕವೇ ಕೈಲಾಸ’ ವೆಂದು ಸಾರಿದ ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ವಿಶ್ವ ಗುರು ಬಸವಣ್ಣ ಸಮಾಜದಲ್ಲಿ ಮೇಲು ಜಾತಿ, ಕೆಳಜಾತಿ ಎಂಬ ಭೇದ ಖಂಡಿಸಿ, ಸರ್ವ ಧರ್ಮದ ಶರಣರನ್ನು ಕೂಡಿಸಿ ಯಾವ ಧರ್ಮವೂ ಮೇಲಲ್ಲ, ಯಾವ ಧರ್ಮವೂ ಕೀಳಲ್ಲ ಎಂಬ ಮನೋಭಾವವನ್ನು ಜನರ ಮನಸ್ಸಿನಲ್ಲಿ ಬಿತ್ತುವಲ್ಲಿ ಶ್ರಮಿಸಿದರು. ಅಂತಹ ಮಹಾನ್ ಶರಣರ ಜೀವನಾದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದು, ಎಲ್ಲ ವರ್ಗದ ಜನರು ಸಮಾನರು ಎಂಬ ಅಂಶವನ್ನು ಅರಿತು ಈ ನಾಡಿನಲ್ಲಿ ಜೀವಿಸುವಂತಾಗಬೇಕು ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ಮಾತನಾಡಿ, ಬಸವಣ್ಣನವರ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಡಲಾಗುತ್ತಿತ್ತು. ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗೆ ಬಸವಣ್ಣನ ವಚನ ಸಾಹಿತ್ಯ, ತತ್ವ ಆದರ್ಶಗಳು ದಾರಿದೀಪ. ಅವರ ವಿಚಾರಧಾರೆ ತತ್ವ ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಂಡು, ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲರೂ ನಡೆದು ಅವರ ಕನಸನ್ನು ನನಸು ಮಾಡಬೇಕೆಂದು ಹೇಳಿದರು.
ತಹಶೀಲ್ದಾರ್ ಮನೋರಮಾ, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅಬ್ಲೂಡು ಗ್ರಾಮದಲ್ಲಿ ವಿಶಿಷ್ಟ ಜನಪದ ಕಲಾಪ್ರಕಾರ ‘ಕೇಳಿಕೆ’
ತಾಲ್ಲೂಕಿನ ಅಬ್ಲೂಡು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಶನಿವಾರ ರಾತ್ರಿ ಜಿಲ್ಲೆಯ ವಿಶಿಷ್ಟ ಜನಪದ ಕಲಾಪ್ರಕಾರ ‘ಕೇಳಿಕೆ’ಯನ್ನು ಅಭಯ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಲಾಗಿತ್ತು.
‘ದ್ರೌಪದಿ ವಸ್ತ್ರಾಪಹರಣ ಮತ್ತು ದುಶ್ಯಾಸನ ವಧೆ’ ಪ್ರಸಂಗವನ್ನು ‘ಕೇಳಿಕೆ’ ರಂಗಪ್ರಕಾರದಲ್ಲಿ ಕನ್ನಡದಲ್ಲಿ ಅಭಿನಯಿಸಿ ಪ್ರದರ್ಶಿಸಲಾಯಿತು. ಹಳಗನ್ನಡ, ಹೊಸಗನ್ನಡ, ಗ್ರಾಮೀಣ ಕನ್ನಡ ಮುಂತಾದ ವಿವಿಧ ಕನ್ನಡ ಭಾಷೆ ಮಿಳಿತವಾದ ಈ ಪ್ರದರ್ಶನದಲ್ಲಿನ ಹಾಡುಗಳು, ಪ್ರಸಂಗಗಳು, ನುಡಿಗಟ್ಟುಗಳು, ವೀರರಸ ಪ್ರಧಾನವಾದ ಸಂಭಾಷಣೆಗಳು, ಗ್ರಾಮೀಣ ಗಾದೆ ಮಾತುಗಳು, ಬೈಗುಳಗಳು ಪ್ರೇಕ್ಷಕನ್ನು ರಂಜಿಸಿದ್ದು ವಿಶೇಷವಾಗಿತ್ತು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಾಗೂ ಸುತ್ತ ಮುತ್ತ ‘ಕೇಳಿಕೆ’ ಎಂಬ ರಂಗಪ್ರಕಾರ ಕಂಡುಬರುತ್ತದೆ. ಕೇಳಿಕೆ ಯಕ್ಷಗಾನದ ಒಂದು ಪ್ರಕಾರವೇ ಆಗಿದೆ. ತೆಲುಗಿನ ವೀದಿ ನಾಟಕ ಮತ್ತು ವೀದಿ ಭಾಗವತದ ಲಕ್ಷಣಗಳನ್ನು ಹಾಗೂ ಕೆಲಮಟ್ಟಿಗೆ ಕನ್ನಡ ಮೂಡಲಪಾಯದ ಲಕ್ಷಣಗಳನ್ನು ಈ ಕೇಳಿಕೆ ಹೊಂದಿದೆ. ಆದರೆ ಇದು ಸಂಪೂರ್ಣ ರಂಗವಲ್ಲ, ನೃತ್ಯ, ಅಭಿನಯ ಮತ್ತು ಹಾಡುಗಾರಿಕೆಯ ತುಣುಕುಗಳು ಇದರಲ್ಲಿರುತ್ತವೆ. ಚೌಡಮ್ಮ, ಮಾರಮ್ಮ, ಗಂಗಮ್ಮ ಮುಂತಾದ ದೇವತೆಯರ ಹಬ್ಬ ಮತ್ತು ಜಾತ್ರೆಗಳ ಸಂದರ್ಭದಲ್ಲಿ ಈ ‘ಕೇಳಿಕೆ’ ಹೆಚ್ಚು ನಡೆಯುತ್ತದೆ. ಹಿನ್ನೆಲೆ ವಾದ್ಯಗಳಾಗಿ ಮದ್ದಲೆ, ತಾಳ ಮತ್ತು ಮುಖವೀಣೆಗಳಿರುತ್ತವೆ. ಜಿಲ್ಲೆಯ ಕೇಳಿಕೆಗಳು ಹೆಚ್ಚಿಗೆ ತೆಲುಗು ಭಾಷೆಯಲ್ಲಿದ್ದರೂ ಕನ್ನಡ ಕೇಳಿಕೆಗಳೂ ಆಗಾಗ್ಗೆ ಪ್ರದರ್ಶಿತವಾಗುತ್ತವೆ.
ಕೇಳಿಕೆ ಇಡೀ ರಾತ್ರಿ ನಡೆಯುವ ಸಾಂಪ್ರದಾಯಿಕ ಜಾನಪದ ಕಲೆ. ವೃತ್ತಿ ರಂಗಭೂಮಿಯ ಶಿಷ್ಟತೆಯನ್ನು ಗಳಿಸಿಕೊಳ್ಳದೆ ಇನ್ನೂ ಜನಪದ ಮಟ್ಟದಲ್ಲೇ ಇದು ಉಳಿದಿದೆ. ಕಲಾವಿದರು ಕಿರೀಟ, ಎದೆಹಾರ, ಭುಜಕೀರ್ತಿಗಳನ್ನು ಧರಿಸುತ್ತಾರೆ. ಪಾತ್ರಗಳಿಗೆ ತಕ್ಕಂತೆ ಕಿರೀಟಗಳನ್ನು, ಬೇರೆ ಬೇರೆ ಆಭರಣಗಳನ್ನು ವೈವಿಧ್ಯಪೂರ್ಣವಾಗಿ ಕಂಗೊಳಿಸುವಂತೆ ಮಾಡುತ್ತಾರೆ. ಲವಕುಶ, ಕುರುಕ್ಷೇತ್ರ, ವಿರಾಟಪರ್ವ, ಲಂಕಾದಹನ, ಬಾಲನಾಗಮ್ಮ, ಶಶಿರೇಖಾಪಹರಣ, ದ್ರೌಪದಿ ವಸ್ತ್ರಾಪಹರಣ ಮುಂತಾದ ಪ್ರಸಂಗಗಳ ರಸವತ್ತಾದ ಘಟನೆಗಳನ್ನು ಇವರು ಆಯ್ಕೆಮಾಡಿಕೊಂಡು ಕೇಳಿಕೆ ನಡೆಸಿಕೊಡುತ್ತಾರೆ. ತಂಡದ ಪ್ರಧಾನ ಹಾಡುಗಾರನೇ ಭಾಗವತನಾಗಿರುತ್ತಾನೆ.
‘ ಅಬ್ಲೂಡು ಗ್ರಾಮಕ್ಕೆ 1819 ರಲ್ಲಿ ಬಳ್ಳಾರಿಯ ನರಹರಿಶಾಸ್ತ್ರಿಯವರ ಮೂಲಕ ‘ಕೇಳಿಕೆ’ ಕಲಾ ಪ್ರಕಾರ ಪ್ರವೇಶಿಸಿತು. ಅವರಿಂದ ಕಲಿತ ತಿಮ್ಮಪ್ಪ, ಮುನಿಯಪ್ಪ, ನಡುವಲಪ್ಪ, ಅಪ್ಪಾಲಪ್ಪ, ಚಿಕ್ಕಹುಚ್ಚಪ್ಪ ಮುಂತಾದವರು ಗುರುಗಳಾಗಿ ಹಲವಾರು ಮಂದಿ ಕಲಾವಿದರ ಸೃಷ್ಟಿಗೆ ಕಾರಣರಾದರು. ನಂತರದ ಕಾಲದ ಗುರುಗಳಾದ ಚಿಕ್ಕಮುನಿಶಾಮಪ್ಪ, ಮಾಳಿಗೆ ಮುನಿಯಪ್ಪ, ಎ.ನರಸಿಂಹಯ್ಯ ಅವರ ಮೂಲಕ ಈ ಕಲೆ ಬೆಳೆಯಿತು. 1957 ರಲ್ಲಿ ಪಂಜುಗಳನ್ನು ಕಟ್ಟಿ ‘ಕೇಳಿಕೆ’ಯನ್ನು ಪ್ರದರ್ಶಿಸುತ್ತಿದ್ದರು. ಆಮೇಲೆ ಪೆಟ್ರೋಮಾಕ್ಸ್ ಬಂತು. ಈಗ ವಿದ್ಯುದ್ದೀಪಗಳಿವೆ. ಸೀನರಿಗಳು, ವೇಷಭೂಷಣಗಳು ಈಗ ಮಳಮಾಚನಹಳ್ಳಿಯಿಂದ ಬಾಡಿಗೆಗೆ ತರುತ್ತೇವೆ. ಮುಂದಿನ ತಲೆಮಾರಿನವರೂ ಉತ್ಸಾಹ ತೋರುತ್ತಿರುವುದರಿಂದ ಕಲಿಸುತ್ತಿದ್ದೇನೆ’ ಎಂದು ‘ಕೇಳಿಕೆ’ ನಿರ್ದೇಶಕ ಬಿ.ಸಿ.ಚನ್ನಕೃಷ್ಣಪ್ಪ ತಿಳಿಸಿದರು.
‘ಕೇಳಿಕೆ’ಯ ನಿರ್ದೇಶಕ ಬಿ.ಸಿ.ಚನ್ನಕೃಷ್ಣಪ್ಪ, ಭಾಗವತ ಎ.ಎನ್. ವೀರಪ್ಪ, ಸಾರಥಿ ಎ.ಎನ್.ನರಸಿಂಹಯ್ಯ, ಹಿನ್ನೆಲೆ ಗಾಯಕರಾದ ಡಿ.ವೆಂಕಟರಾಯಪ್ಪ, ಆರ್.ವಿ.ವೆಂಕಟರಾಯಪ್ಪ, ಸಾಧು ನಾರಾಯಣಪ್ಪ, ಮುನಯ್ಯಪ್ಪ, ಜಿ.ನರಸಿಂಹಯ್ಯ, ಹಾರ್ಮೋನಿಯಂ ಶ್ರೀನಿವಾಸ್, ತಬಲ ನಾಗರಾಜ್, ಮುಖವೀಣೆ ಮುಳವಾಗಿಲಪ್ಪ, ಪಾತ್ರವರ್ಗದಲ್ಲಿ ಎ.ಎಲ್.ನರಸಿಂಹಮೂರ್ತಿ(ಧರ್ಮರಾಯ), ನಾಗೇಶ್(ದ್ರೌಪದಿ), ವಿ.ವೆಂಕಟೇಶ್(ಧುರ್ಯೋಧನ), ಕೆ.ಚನ್ನಕೃಷ್ಣಪ್ಪ(ದುಶ್ಯಾಸನ), ಬಿ.ಶ್ರೀನಿವಾಸ್(ಹಿಡಂಬಿ), ಎ.ಆರ್ .ರಾಮಚಂದ್ರ(ಭೀಮಸೇನ), ಎ.ಪಿ.ನವೀನ್ಕುಮಾರ್(ಅರ್ಜುನ), ಮುರಳಿ ಮತ್ತು ಶೇಷಾದ್ರಿ(ಕೃಷ್ಣ), ಟಿ.ವೆಂಕಟೇಶ್(ಪ್ರಾತಿಕಾಮಿಕ), ಡಿ.ರಾಮಾಂಜಿ(ಕರ್ಣಗಾಂಧಾರಿ), ಪ್ರಸಾದನ ಮಳಮಾಚನಹಳ್ಳಿ ನಾರಾಯಣಸ್ವಾಮಿ, ಅತಿಥಿಗಳಾಗಿದ್ದ ಈಧರೆ ತಿರುಮಲ ಪ್ರಕಾಶ್, ಕ.ಸಾ.ಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್, ಅಬ್ಲೂಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಜೆಸಿಬಿ ಮಂಜುನಾಥ್ ಮತ್ತಿತರರು ಹಾಜರಿದ್ದರು.
ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಸಿಗಬೇಕು
ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಶಾಲೆ ಕಡೆ ನನ್ನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವು ಉಚಿತ, ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕನ್ನು ಮೂಲ ಭೂತ ಹಕ್ಕನ್ನಾಗಿ ದೇಶದ ಸರ್ವೋಚ್ಛ ನ್ಯಾಯಾಲಯ ೧೯೯೩ ರಲ್ಲಿ ನೀಡಿರುವ ಐತಿಹಾಸಿಕ ತೀರ್ಪಿನ ಹಿನ್ನಲೆಯಲ್ಲಿ ಪ್ರತಿಯೊಂದು ಮಗುವಿಗೂ ಉತ್ತಮ ಮತ್ತು ಉಚಿತ ಶಿಕ್ಷಣ ನೀಡುವುದು ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ೨೦೦೯ ರಂತೆ ೦೬ ರಿಂದ ೧೪ ವರ್ಷದೊಳಗಿನ ಎಲ್ಲಾ ಮಕ್ಕಳು ತಮ್ಮ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವಂತೆ ಮಾಡಲು ಶಿಕ್ಷಕರೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪೋಷಕರ ಮನವೊಲಿಸುವ ಕೆಲಸ ಮಾಡುವ ಅಗತ್ಯತೆ ಇದೆ ಎಂದರು.
ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ಈಗಾಗಲೇ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸ ವಿನೂತನ ಜನಾಂದೋಲನವನ್ನು ರೂಪಿಸಿದೆ ಎಂದರು.
ರಾಜ್ಯದಲ್ಲಿನ ಎಲ್ಲಾ ಮಕ್ಕಳು ಶಾಲೆಗೆ ಬಂದು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಶಿಕ್ಷಣ ಎಂಬುದು ಮಗುವಿನ ಮೂಲಭೂತ ಹಕ್ಕು ಎಂಬುದಕ್ಕೆ ಹೊಸ ಅರ್ಥ ಬರುತ್ತದೆ. ಹಾಗಾಗಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಸಾರ್ವಜನಿಕರಿಗೇನಾದರೂ ಮಾಹಿತಿಯಿದ್ದಲ್ಲಿ ಕೂಡಲೇ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದಲ್ಲಿ ಅಂತಹ ಮಕ್ಕಳ ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಕೆಲಸವನ್ನು ಅಧಿಕಾರಿಗಳು ಮತ್ತು ಶಿಕ್ಷಕರು ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯಿಂದ ಹೊರಗುಳಿದಿದ್ದು ಪುನಃ ಶಾಲೆಗೆ ಸೇರಿರುವ ನಾಲ್ವರು ಮಕ್ಕಳಿಗೆ ಶಾಲಾ ಬ್ಯಾಗ್ಗಳನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮಿದೇವಮ್ಮ, ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಸಂಪನ್ಮೂಲ ವ್ಯಕ್ತಿ ಸುಧಾಕರ್, ಡಾ.ವಿಜಯಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೃಷಿಹೊಂಡಕ್ಕೆ ಬೈಕ್ ಬಿದ್ದು ಸವಾರ ಸಾವು
ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಕೃಷಿಹೊಂಡಕ್ಕೆ ಬೈಕ್ ಸಮೇತ ಬಿದ್ದು ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಶನಿವಾರ ರಾತ್ರಿ ಘಟನೆ ನಡೆದಿದೆ.
ತಾಲ್ಲೂಕಿನ ನಾಗಮಂಗಲ ಗ್ರಾಮದ ಸುಕುಮಾರ್(೨೫) ಮೃತ ದುರ್ದೈವಿಯಾಗಿದ್ದಾನೆ.
ಶನಿವಾರ ರಾತ್ರಿ ತಾಲ್ಲೂಕಿನ ಜಂಗಮಕೋಟೆಯಲ್ಲಿರುವ ತಮ್ಮ ಸಂಬಂಧಿಕರ ಮದುವೆಗೆ ಹೋಗಿ ಗ್ರಾಮಕ್ಕೆ ವಾಪಸ್ ಬರುವಾಗ ಹೊಸಪೇಟೆ ಬಳಿಯ ರಸ್ತೆಯ ಅಂಚಿನಲ್ಲಿ ನಿರ್ಮಿಸಲಾಗುತ್ತಿರುವ ಕೃಷಿಹೊಂಡವನ್ನು ಗಮನಿಸದೇ ಕೃಷಿಹೊಂಡಕ್ಕೆ ವಾಹನ ಸಮೇತ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಚಿತ ಕಣ್ಣಿನ ತಪಾಸಣೆ ಹಾಗೂ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರ
ದೈಹಿಕ ಬೆಳೆವಣಿಗೆಯಲ್ಲಿ ಮನುಷ್ಯನಿಗೆ ಅತ್ಯಗತ್ಯವಾಗಿರುವ ಅಂಗಗಳಾದ ಕಣ್ಣು ಮತ್ತು ಶ್ರವಣಗಳ ಬಗ್ಗೆ ನಾಗರಿಕರು ಹೆಚ್ಚಿನ ಕಾಳಜಿವಹಿಸಬೇಕು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಶ್ರೀ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ನಿರಂತರ ದುಡಿಮೆ, ಕಲುಷಿತ ನೀರಿನ ಸೇವನೆ, ಬದಲಾಗುತ್ತಿರುವ ಆಹಾರ ಪದ್ಧತಿಗಳಿಂದಾಗಿ ದೈಹಿಕವಾಗಿ ಬಳಲಿಕೆಯೊಂದಿಗೆ ಪ್ರಮುಖವಾದ ಅಂಗಗಳಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳಿಂದ ಜನರು ದುಬಾರಿ ವೆಚ್ಚವನ್ನು ಭರಿಸಿ ಬೆಂಗಳೂರಿನಂತಹ ಮಹಾನಗರಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ ಎಂದರು.
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲವಾದ್ದರಿಂದ ಅಂತಹವರಿಗಾಗಿ ತಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡು ತಪಾಸಣೆ ಸೇರಿದಂತೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ನಗರದ ನಾಗರಿಕರು ಭಾಗವಹಿಸಿ ಕಣ್ಣಿನ ತಪಾಸಣೆ, ಕಣ್ಣಿನಪೊರೆ ತಪಾಸಣೆ, ಕಿವಿಸೋರುವಿಕೆ, ಧ್ವನಿತೊಂದರೆ ಮತ್ತಿತರ ತಪಾಸಣೆ ಮಾಡಿಸಿಕೊಂಡರು.
ದೃಷ್ಟಿ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಮತ್ತು ಕನ್ನಡಕಗಳನ್ನು ಉಚಿತವಾಗಿ ನೀಡಿದರು.
ಇತ್ತೀಚೆಗೆ ತಾಲ್ಲೂಕಿನ ದಡಂಘಟ್ಟ ಗ್ರಾಮದ ನಾಲ್ವರು ಹೆಣ್ಣು ಮಕ್ಕಳು ಬಟ್ಟೆ ತೊಳೆಯಲೆಂದು ಕೆರೆಗೆ ಹೋಗಿ ಮೃತಪಟ್ಟಿದ್ದರ ಹಿನ್ನಲೆಯಲ್ಲಿ ಅವರ ಕುಟುಂಬಗಳಿಗೆ ತಲಾ ಒಂದರಂತೆ ನಾಲ್ಕು ಹೊಲಿಗೆ ಯಂತ್ರಗಳನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಉಚಿತವಾಗಿ ಈ ಸಂದರ್ಭದಲ್ಲಿ ವಿತರಿಸಲಾಯಿತು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಉಪಾಧ್ಯಕ್ಷ ನಂಜಪ್ಪ, ರೈತಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀಕಾಂತ್, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮುಖಂಡರಾದ ನಾರಾಯಣಪ್ಪ, ಆನೂರು ದೇವರಾಜ್, ಬೆಳ್ಳೂಟಿ ಸಂತೋಷ್ ಮತ್ತಿತರರು ಹಾಜರಿದ್ದರು.
ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ಇಲ್ಲ
ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬರುವಂತಹ ಯಾವುದೇ ಉದ್ದೇಶವನ್ನು ಇಟ್ಟುಕೊಂಡು ಲಕ್ಷ್ಮಣ ಚಿತ್ರ ಹಾಡುಗಳ ಬಿಡುಗಡೆಯ ಕಾರ್ಯಕ್ರಮವನ್ನು ಮಾಡಿಲ್ಲವೆಂದು ನಿರ್ದೇಶಕ ಆರ್.ಚಂದ್ರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದು, ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ, ರಾಜ್ಯದ ಜನತೆಯ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ. ಗಾಂಧಿನಗರದಲ್ಲಿ ಶಿಡ್ಲಘಟ್ಟ ಎಂದಾಕ್ಷಣ ಉತ್ತರ ಕರ್ನಾಟಕದ ಭಾಗವೆಂಬ, ಯಾವುದೋ ಕುಗ್ರಾಮವೆಂಬ ಭಾವನೆಯಿತ್ತು, ಈ ಭಾವನೆಯನ್ನು ತೊಲಗಿಸಿ, ಶಿಡ್ಲಘಟ್ಟದ ವಾತಾವರಣವನ್ನು ಕನ್ನಡ ಚಲನಚಿತ್ರ ರಂಗಕ್ಕೆ ಪರಿಚಯಿಸಬೇಕು, ಶಿಡ್ಲಘಟ್ಟವನ್ನು ರಾಜ್ಯದ ಜನತೆಗೆ ತಿಳಿಸಬೇಕೆನ್ನುವ ಹಂಬಲ, ಹಾಗೂ ಕನ್ನಡ ಚಿತ್ರರಂಗದ ಕೆಲವು ಮಂದಿ ಸಾಧಕರನ್ನು ಇಲ್ಲಿನ ಜನತೆಗೆ ಪರಿಚಯಿಸುವಂತಹ ಅಭಿಲಾಶೆಯಿಂದ ಲಕ್ಷಣ ಚಿತ್ರ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮ ರಾಜಕೀಯಕ್ಕಾಗಿ ಮಾಡಿದ್ದಲ್ಲ, ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗಡಿಭಾಗದಲ್ಲಿಯೂ ಕನ್ನಡ ಭಾಷೆಯ ಬಗ್ಗೆ ಇರುವಂತಹ ಅಪಾರವಾದ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದಂತಹ ಪ್ರತಿಯೊಬ್ಬ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ, ಎಂದ ಅವರು, ಕಾರ್ಯಕ್ರಮಕ್ಕೆ ಬಂದಂತಹ ಅನೇಕ ಮಂದಿ ಗಣ್ಯರನ್ನು ನೇರವಾಗಿ ಸಂಪರ್ಕ ಮಾಡಿ, ಅವರನ್ನು ಉಪಚರಿಸಲು ಸಾಧ್ಯವಾಗಿಲ್ಲ, ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸ್ವಯಂ ಸೇವಕರುಗಳು, ಅಥವಾ ಭದ್ರತಾ ಸಿಬ್ಬಂದಿಯಿಂದ ಯಾರಿಗಾದರೂ ಮುಜುಗರ ಉಂಟಾಗಿದ್ದರೆ, ಕ್ಷಮೆಯಿರಲಿ ಎಂದರು.
ಜೂನ್ ತಿಂಗಳ ಒಳಗೆ ಲಕ್ಷ್ಮಣ ಚಲನಚಿತ್ರವನ್ನು ಬಿಡುಗಡೆಗೊಳಿಸಲಾಗುತ್ತದೆ. ರಾಜ್ಯದಲ್ಲಿ ಚಲನಚಿತ್ರ ಮಂದಿರಗಳನ್ನು ಗುರ್ತಿಸಲಾಗುತ್ತಿದೆ, ಶಿಡ್ಲಘಟ್ಟದಲ್ಲಿಯೂ ಕೂಡಾ ಸಿನಿಮಾ ನೋಡುವಂತಹ ಅವಕಾಶವನ್ನು ಇಲ್ಲಿನ ಜನರಿಗೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಶತದಿನೋತ್ಸವವನ್ನು ಶಿಡ್ಲಘಟ್ಟದಲ್ಲೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಚಲನಚಿತ್ರ ನಿರ್ಮಾಪಕ ಆರ್.ವಿಜಯಕುಮಾರ್, ಚಂದ್ರು, ಮಧು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಅಪಘಾತಕ್ಕೆ ಗುರಿಯಾದವರು ಹಾಗೂ ಪ್ರಸವ ವೇದನೆಯ ಸಮಯದಲ್ಲಿರುವ ಗರ್ಭೀಣಿ ಮಹಿಳೆಯರ ಜೀವವುಳಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಎಂ.ರಾಜಣ್ಣ ಅಭಿಮಾನಿಗಳ ಸಂಘದಿಂದ ಶುಕ್ರವಾರ ಶಾಸಕ ಎಂ.ರಾಜಣ್ಣ ಅವರ ೫೪ ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೆ ಮುಂದುವರೆದರೂ ಪ್ರಕೃತಿದತ್ತವಾಗಿ ಮಾನವನ ಶರೀರದಲ್ಲಿ ಉತ್ಪತ್ತಿಯಾಗುವಂತಹ ರಕ್ತವನ್ನು ವೈಜ್ಞಾನಿಕವಾಗಿ ತಯಾರಿಸಲು ಸಾಧ್ಯವಾಗುವುದಿಲ್ಲ, ಅದರಲ್ಲೂ ಮಾನವನ ರಕ್ತವನ್ನು ಹೊರತು ಬೇರೆ ಯಾವುದೇ ಜೀವಿಗಳ ರಕ್ತವನ್ನು ಒಬ್ಬರಿಂದ ಮತ್ತೊಬ್ಬರಿಗೆ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶ್ರೇಷ್ಠವಾಗಿರುವ ಮಾನವನ ರಕ್ತವನ್ನು ಒಬ್ಬರಿಂದ ಮತ್ತೊಬ್ಬರಿಗೆ ದಾನವಾಗಿ ನೀಡಿದಾಗ, ಮತ್ತೊಬ್ಬರ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ, ಈ ಹಿನ್ನೆಲೆಯಲ್ಲಿ ಆರೋಗ್ಯವಂತ ವ್ಯಕ್ತಿಗಳು, ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿಯೂ ಉತ್ತಮವಾದ ರಕ್ತ ಉತ್ಪತ್ತಿಯಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ಮೂರ್ತಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ರಕ್ತವನ್ನು ದಾನ ಮಾಡುವುದರಿಂದ ಸಮಾಜದಲ್ಲಿನ ಮುಂದಿನ ಪೀಳಿಗೆಗೆ ಉತ್ತಮವಾದ ಸಂದೇಶವನ್ನು ರವಾನಿಸಲು ಸಹಕಾರಿಯಾತ್ತದೆ. ಯಾವುದೇ ನಾಯಕರುಗಳು, ಅಥವಾ ಸಮಾಜದಲ್ಲಿನ ಗಣ್ಯವ್ಯಕ್ತಿಗಳ ಹುಟ್ಟುಹಬ್ಬಗಳ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಉಪಯುಕ್ತವಾಗಲಿದೆ ಎಂದರು.
ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಸರ್ಕಾರಿ ಅಧಿಕಾರಿಗಳು ಶಾಸಕ ರಾಜಣ್ಣ ಅವರನ್ನು ಅಭಿನಂದಿಸಿದರು. ರಕ್ತದಾನ ಶಿಬಿರದಲ್ಲಿ 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಮೈಸೂರು ಪೇಟವನ್ನಿಟ್ಟು ಶಾಲು ಹೊದಿಸಿ ಶಾಸಕ ಎಂ.ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭಾ ಸದಸ್ಯರಾದ ಅಪ್ಸರ್ಪಾಷಾ, ವೆಂಕಟಸ್ವಾಮಿ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ತಾಲ್ಲೂಕು ಪಂಚಾಯತಿ ಸದಸ್ಯ ಮಳ್ಳೂರು ಮುನಿಯಪ್ಪ, ಯೂಸುಫ್, ನರಸಿಂಹಮೂರ್ತಿ, ಎಸ್.ಎಂ.ರಮೇಶ್, ಕನಕಪ್ರಸಾದ್, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಅನಂತಕೃಷ್ಣ, ರಾಜಸ್ವನಿರೀಕ್ಷಕ ಸುಭ್ರಮಣಿ ಮತ್ತಿತರರು ಹಾಜರಿದ್ದರು.
ಸರ್ಕಾರದಿಂದ ಬಿಡುಗಡೆಯಾಗುವ ಹಣ ಬಳಕೆಯಾಗುತ್ತಿಲ್ಲ
ರಾಷ್ಟ್ರೀಯ ಹಬ್ಬದ ಆಚರಣಾ ಸಮಿತಿ ವತಿಯಿಂದ ಬಸವಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದ ಬಿಡುಗಡೆಯಾಗುವ ಹಣ ಇದುವರೆಗೂ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಬಸವ ಜಯಂತಿ ಮತ್ತು ಭಗೀರಥ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಲವು ದಶಕಗಳಿಂದ ನಗರದ ಅರಳೇಪೇಟೆಯಲ್ಲಿರುವ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಸವ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕೆಲವು ವರ್ಷಗಳಿಂದ ರಾಷ್ಟ್ರೀಯ ಹಬ್ಬದ ಆಚರಣಾ ಸಮಿತಿಯ ಜೊತೆಗೂಡಿ ಬಸವ ಜಯಂತಿಯನ್ನು ಆಚರಿಸುತ್ತಿದ್ದರೂ ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ನೀಡುತ್ತಿಲ್ಲ. ನಮ್ಮಿಂದ ರಸೀದಿಗಳನ್ನು ಪಡೆಯುವ ಅಧಿಕಾರಿಗಳು ಹಣವನ್ನು ಯಾವುದಕ್ಕೆ ಖರ್ಚು ಮಾಡಿರುವಿರಿ ಎಂದಾದರೂ ತಿಳಿಸಬೇಕೆಂದು ಕೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುರುಷೋತ್ತಮ್ ಮಾತನಾಡಿ, ಕಳೆದ ವರ್ಷ ಹಣ ಖರ್ಚು ಮಾಡಿಲ್ಲ. ತಹಶಿಲ್ದಾರರಿಗೆ ವಿಷಯ ತಿಳಿಸಿ ಹಣವನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದರು.
ಈ ಬಾರಿಯ ಬಸವ ಜಯಂತ್ಯುತ್ಸವವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬಸವೇಶ್ವರ ಸೇವಾ ಟ್ರಸ್ಟ್ ಜೊತೆಗೂಡಿ ಮೇ 9 ಮತ್ತು 10, ಎರಡು ದಿನಗಳ ಕಾಲ ಆಚರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಗೀರಥ ಜಯಂತಿಯನ್ನು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿಯೇ ಮೇ 13 ರಂದು ಆಚರಿಸುವುದು. ಸರ್ಕಾರದಿಂದ ಬರುವ 25 ಸಾವಿರ ರೂಗಳ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಜಯಂತ್ಯುತ್ಸವವನ್ನು ಯಶಸ್ವಿಯಾಗಿ ಆಚರಿಸಬೇಕೆಂದು ತೀರ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಉಪ ತಹಶೀಲ್ದಾರ್ ಮುನಿಕೃಷ್ಣಪ್ಪ, ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಶಿರಸ್ತೇದಾರರಾದ ಲಕ್ಷ್ಮೀಕಾಂತಮ್ಮ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ವಾಕ್ ಮತ್ತು ಶ್ರವಣ (ಕಿವಿ) ತಪಾಸಣೆ ಶಿಬಿರ
ನಗರದ ಬಸ್ ನಿಲ್ದಾಣದ ಎದುರಿನಲ್ಲಿರುವ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಮೇ ೮ ರ ಭಾನುವಾರದಂದು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೆ ಉಚಿತ ಕಣ್ಣಿನ ತಪಾಸಣೆ ಶಸ್ತ್ರಚಿಕಿತ್ಸೆ ಹಾಗೂ ವಾಕ್ ಮತ್ತು ಶ್ರವಣ (ಕಿವಿ) ತಪಾಸಣೆ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಶಿಬಿರಕ್ಕೆ ಆಗಮಿಸುವವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ರೇಷ್ಮೆ ಗೂಡಿನ ಪ್ರಮಾಣ ಇಳಿಕೆ – ಬಣಗುಡುತ್ತಿದೆ ಮಾರುಕಟ್ಟೆ
ರಾಷ್ಟ್ರದ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎಂಬ ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣದಲ್ಲಿ ತೀವ್ರವಾಗಿ ಇಳಿಮುಖವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವಂತಹ ಗೂಡಿನ ಪ್ರಮಾಣ ಇನ್ನಷ್ಟು ಕಡಿಮೆಯಾಗುವಂತಹ ಆತಂಕ ಎದುರಾಗಿದೆ.
ನಗರದಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಗೆ ನೆರೆಯ ರಾಜ್ಯಗಳು ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಸುಮಾರು ೧,೦೦೦ ಕ್ಕಿಂತಲೂ ಹೆಚ್ಚಿನ ಲಾಟುಗಳು (ಸುಮಾರು 45 ಟನ್) ಪ್ರಮಾಣದಲ್ಲಿ ರೇಷ್ಮೆಗೂಡು ಬರುತ್ತಿತ್ತು, ಆದರೆ, ತೀವ್ರವಾದ ನೀರಿನ ಅಭಾವ ಹಾಗೂ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆಗೂಡಿನ ಉತ್ಪಾದನೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣ ಅರ್ಧದಷ್ಟು ಕುಸಿತ ಕಂಡಿದೆ. ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋಡನ್ಗಳಲ್ಲಿನ ಜಾಲರಿಗಳು, ಬಣಗುಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಆತಂಕ ಎದುರಾಗಿದ್ದು, ಪ್ರತಿ ಕೆ.ಜಿ. ರೇಷ್ಮೆಗೂಡಿನ ಬೆಲೆ ಸುಮಾರು ೪೪೦ ರೂಪಾಯಿಗಳವರೆಗೂ ಏರಿಕೆಯಾಗುತ್ತಿದೆ. ಒಂದು ಕಡೆ ಉತ್ತಮ ಬೆಲೆಗಳು ಸಿಗುವಾಗ ಬೇಸಿಗೆಯಲ್ಲಿ ಬೆಳೆಗಳಾಗದೇ ರೈತರು ಸಂಕಷ್ಟಕ್ಕೆ ಸಿಲುಕಿರುವುದರ ಜೊತೆಗೆ ರೀಲರುಗಳೂ ಕೂಡಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಹಲವೆಡೆ ರೈತರು ನೀರಿನ ಕೊರತೆಯಿಂದಾಗಿ ಹಿಪ್ಪುನೇರಳೆ ತೋಟಗಳನ್ನು ಕಿತ್ತುಹಾಕುತ್ತಿದ್ದು, ಸರ್ಕಾರ ರೇಷ್ಮೆಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕ.ಸಾ.ಪ ಕಾರ್ಯಕ್ರಮಗಳು ಗ್ರಾಮಗಳಲ್ಲಿ ನಡೆಯಲಿ
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ನಡೆಸುವ ಮೂಲಕ ಕನ್ನಡ ಸಾಹಿತ್ಯಾಭಿರುಚಿಯನ್ನು ಯುವಕರಲ್ಲಿ ಬೆಳೆಸಲು ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜನೆ ಮಾಡಲಾಗಿದ್ದ ಕ.ಸಾ.ಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರ ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ, ಎಲ್ಲಾ ಸಮುದಾಯಗಳ ಸಮ್ಮಿಲನದಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಹಿತ್ಯವನ್ನು ಹಳ್ಳಿ ಹಳ್ಳಿಗೂ ತಲುಪಿಸುವಂತಹ ಕೆಲಸದ ಜೊತೆ, ಸ್ಥಳೀಯ ಸಮಸ್ಯೆಗಳ ನಿವಾರಣೆಗಾಗಿ ಧ್ವನಿಯೆತ್ತುವಂತಹ ಸಂಘಟನೆಯಾಗಬೇಕು ಎಂದರು.
ಜಿಲ್ಲಾ ಕ.ಸಾ.ಪ ನಿಕಟಪೂರ್ವ ಕಾರ್ಯದರ್ಶಿ ಅಮೃತ್ಕುಮಾರ್ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಪ್ರಪಂಚದ ಯಾವುದೇ ಭಾಷೆಗೂ ಕಲೆ, ಭಾಷೆ, ಸಂಸ್ಕೃತಿಯ ಬೆಳವಣಿಗೆಗಾಗಿ ನಮ್ಮಲ್ಲಿರುವಂತೆ ಕ.ಸಾ.ಪ ರೀತಿಯ ಪ್ರಾತಿನಿಧಿಕ ಸಂಸ್ಥೆ ಇಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಪ್ರಾಚೀನ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹರಡಿಕೊಂಡಿದೆ. ಜಾತಿ, ಬುಡಕಟ್ಟು, ಮತ, ಧರ್ಮಗಳ ಹಿನ್ನೆಲೆಯಿಂದ ಕೂಡ ಕನ್ನಡ ಭಾಷಾರೂಪ ಭಿನ್ನತೆ ಪಡೆದಿದೆ. ಈ ವಿವಿಧತೆಗಳೇ ಕನ್ನಡದ ಶಕ್ತಿಯಾಗಿದೆ, ಕನ್ನಡ ಭಾಷಾ ಸಮೃದ್ಧಿಗೂ ಕಾರಣವಾಗಿದೆ ಎಂದ ಅವರು, ಕನ್ನಡ ಭಾಷೆಯ ಸೊಗಸು, ಬೆಳವಣಿಗೆ, ಸಾಹಿತ್ಯ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ, ಉದ್ದೇಶಗಳ ಕುರಿತಂತೆ ವಿವರಿಸಿದರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಕ.ಸಾ.ಪ ಹೋಬಳಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಶಾಲೆಗೊಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ದತ್ತಿಗಳನ್ನು ಪ್ರಕಟಿಸಲಾಗುವುದು. ತಾಲ್ಲೂಕು ಕ.ಸಾ.ಪ ದಿಂದ ಗ್ರಾಮೀಣ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಕ.ಸಾ.ಪ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಆರಂಭದಲ್ಲಿ ಕ.ಸಾ.ಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಪೂಜೆ ಮಾಡಲಾಯಿತು. ಕಾರ್ಯಕ್ರಮದ ನಂತರ ಸಿಹಿ ವಿತರಿಸಲಾಯಿತು. ಅಂಧಮಕ್ಕಳ ಶಾಲೆಯಲ್ಲಿಯೂ ತಾಲ್ಲೂಕು ಕ.ಸಾ.ಪ ವತಿಯಿಂದ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳಿಗೆ ಕ.ಸಾ.ಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಕುರಿತ ಪುಸ್ತಕಗಳನ್ನು ತಾಲ್ಲೂಕು ಕ.ಸಾ.ಪ ಘಟಕದ ವತಿಯಿಂದ ನೀಡಲಾಯಿತು.
ಕ.ಸಾ.ಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ನಗರ್ತ ಮಂಡಳಿಯ ಮುಖಂಡ ಎಸ್.ಎಸ್.ನಾಗರಾಜ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ದೈಹಿಕ ಶಿಕ್ಷಣ ಸಂಯೋಜಕ ಶ್ರೀನಿವಾಸ್, ಕ.ಸಾ.ಪ ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ತಾಲ್ಲೂಕು ಕಾರ್ಯದರ್ಶಿಗಳಾದ ತ್ಯಾಗರಾಜ್, ವೆಂಕಟೇಶಪ್ಪ, ದಾಶರಥಿ, ನಂದೀಶ್, ಕ್ರೀಡಾಪಟು ನಾರಾಯಣಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ದಾಮೋದರ್, ಸುಜಾತಮ್ಮ, ದೇವರಮಳ್ಳೂರು ಎ.ವೆಂಕೋಬರಾವ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಬೆಳ್ಳೂಟಿ ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

