ಒಂದು ಸಣ್ಣ ತಲೆನೋವು ಅಥವಾ ಜ್ವರ ಬಂದ ತಕ್ಷಣ ನಾವೆಲ್ಲಾ ವೈದ್ಯರಲ್ಲಿಗೆ ದೌಡಾಯಿಸುತ್ತೇವೆ. ಆದರೆ ನಿಭಾಯಿಸಲಾರದ ಒತ್ತಡಗಳು, ಖಿನ್ನತೆ, ಆತ್ಮಹತ್ಯೆಯ ಪ್ರಯತ್ನದಂತಹ ತೀವ್ರವಾದ ಮಾನಸಿಕ ತೊಂದರೆಗಳಿದ್ದಾಗಲೂ ಸೂಕ್ತವಾದ ಮನೋಚಿಕಿತ್ಸೆಗಳನ್ನು ಪಡೆಯಲು ಹಿಂಜರಿಯುತ್ತೇವೆ. ಇದೇಕೆ ಹೀಗೆ?
ಮೊದಲನೆಯದಾಗಿ ದೈಹಿಕ ಖಾಯಿಲೆಗಳೆಂದರೆ ಮನುಷ್ಯ ಸಹಜ, ಹಾಗಾಗಿ ಅದರ ಬಗೆಗೆ ಎಲ್ಲರೆದುರು ಹೇಳಿಕೊಳ್ಳುವುದರಲ್ಲಿ ಅಪಮಾನವೇನೂ ಇಲ್ಲ ಎಂದುಕೊಳ್ಳುತ್ತೇವೆ. ಆದರೆ ಮಾನಸಿಕ ಖಾಯಿಲೆಯೆಂದರೆ ಒಂದು ರೀತಿಯ “ಹುಚ್ಚು”, ಆದ್ದರಿಂದ ಅಂತವರೆಲ್ಲಾ ಸಮಾಜದಲ್ಲಿ ಎಲ್ಲರ ಜೊತೆ ಬಾಳಲು ಯೋಗ್ಯರಲ್ಲದವರು ಎನ್ನುವುದು ಸಾಮಾನ್ಯ ನಂಬಿಕೆ. ವಿಪರ್ಯಾಸವೆಂದರೆ ಮಾನಸಿಕ ರೋಗಿಗಳಿಗಿಂತ ತಮ್ಮ ಕೆಟ್ಟ ಅಥವಾ ಅನೈತಿಕ ಜೀವನ ಶೈಲಿಯಿಂದ ಕ್ಯಾನ್ಸರ್ ಅಥವಾ ಲೈಂಗಿಕ ರೋಗಗಳನ್ನು ಅಂಟಿಸಿಕೊಂಡವರೂ ಕೂಡ ಸಾಮಾಜಿಕವಾಗಿ ಹೆಚ್ಚಿನ ಸ್ಥರದಲ್ಲಿರುತ್ತಾರೆ.
ಎರಡನೆಯದು ದೈಹಿಕ ರೋಗಗಳಿಗೆ ಕೊಡುವ ಔಷಧಿಗಳು ತಕ್ಷಣ ಪರಿಣಾಮ ನೀಡುತ್ತವೆ ಮತ್ತು ಅಂತಹ ಪರಿಣಾಮಗಳು ಎಲ್ಲರಿಗೂ ಒಂದೇ ರೀತಿಯಾಗಿರುತ್ತವೆ. ಆದರೆ ಮಾನಸಿಕ ಖಾಯಿಲೆಗಳಿಗೆ ದೀರ್ಘಕಾಲೀನ ಚಿಕಿತ್ಸೆಯ ಅಗತ್ಯವಿರುತ್ತದೆ. ಅದೂ ಅಲ್ಲದೆ ರೋಗಿ ಮುಕ್ತಮನಸ್ಸಿನಿಂದ ಚಿಕಿತ್ಸೆಯಲ್ಲಿ ಪಾಲುಗೊಳ್ಳಬೇಕಾಗುತ್ತದೆ. ಔಷಧಿಗಳ ಪರಿಣಾಮಗಳು ಎಲ್ಲರ ಮೇಲೂ ಒಂದೇ ರೀತಿಯಾಗಿರುವುದಿಲ್ಲ.
ಮೂರನೆಯದಾಗಿ “ಮನೋರೋಗಕ್ಕೆ ಮದ್ದಿಲ್ಲ” ಎನ್ನುವ ಗಾದೆ ಮಾತನ್ನು ನಾವು ಈಗಲೂ ನಂಬುತ್ತೇವೆ. ತೀವ್ರತರವಾದ ಮಾನಸಿಕ ರೋಗಿಗಳನ್ನು (ಹೆಚ್ಚಿನ ಸಂದರ್ಭಗಳಲ್ಲಿ ಸುತ್ತಲಿನ ಪರಿಸರದ ಅರಿವೇ ಇಲ್ಲದವರಿಗೆ ಮತ್ತು ದೈಹಿಕ ಹಿಂಸೆಯಂತಹ ಘಾತುಕ ಕೃತ್ಯಗಳಲ್ಲಿ ತೊಡಗಿರುವವರಿಗೆ) ಔಷಧಗಳ ಮೂಲಕ ಹಿಡಿತದಲ್ಲಿಡಲು ಮನೋವೈದ್ಯರು ಸಹಾಯ ಮಾಡುತ್ತಾರೆ. ಇಂತಹವರಿಗೆ ಒಮ್ಮೆ ಸುತ್ತಲಿನ ಪ್ರಪಂಚದ ಅರಿವು ಬರತೊಡಗಿದೊಡನೆ ಸೂಕ್ತ ಆಪ್ತಸಲಹೆ ಮತ್ತು ಮನೋಚಿಕಿತ್ಸೆಯ ಮೂಲಕ ಎಲ್ಲರಂತೆ ಸಮಾಜದಲ್ಲಿ ಬದುಕಲು ಕಲಿಸಬಹುದು. ಇನ್ನು ಸುತ್ತಲಿನ ಪ್ರಪಂಚದ ಅರಿವನ್ನು ಕಳೆದುಕೊಳ್ಳದಿದ್ದರೂ ನಿತ್ಯ ಜೀವನಕ್ಕೆ ತೊಂದರೆಯಾಗುವಂತಹ ಮಾನಸಿಕ ಕಿರಿಕಿರಿಗಳನ್ನು ಅನುಭವಿಸುವವರು ತಜ್ಞರಿಂದ ಮನೋಚಿಕಿತ್ಸೆ ಪಡೆದಲ್ಲಿ ಔಷಧಿಗಳಿಲ್ಲದೆ ತಮ್ಮ ಬದುಕನ್ನು ಸುಖಮಯವಾಗಿಸಿಕೊಳ್ಳಬಹುದು.
ಇವತ್ತು ಎಲ್ಲಾ ವಿಜ್ಞಾನದ ಶಾಖೆಗಳಂತೆ ಮನೋವಿಜ್ಞಾನ ಕೂಡ ಹೊಸಹೊಸ ಒಳನೋಟಗಳನ್ನು ಪಡೆದುಕೊಳ್ಳುತ್ತಿದೆ. ಔಷಧಗಳಿಲ್ಲದೆ ಮಾನಸಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹೊಸ ಮನೋಚಿಕಿತ್ಸಾ ವಿಧಾನಗಳು ರೂಪಗೊಂಡಿವೆ. ಆಪ್ತಸಲಹೆ ಮತ್ತು ಮನೋಚಿಕಿತ್ಸೆ (Counseling & Psychotherapy) ಹೆಚ್ಚು ಪ್ರಚಲಿತವಾಗುತ್ತಿವೆ.
ನಮಗೆಲ್ಲರಿಗೂ (ಸಾದುಸಂತರು, ಮನೋವೈದ್ಯರು ಮತ್ತು ಮನಶ್ಯಾಸ್ತ್ರಜ್ಞರನ್ನೂ ಒಳಗೊಂಡು) ಬೇಕಾದಷ್ಟು ಮಾನಸಿಕ ಕಿರಿಕಿರಿಗಳಿರುತ್ತವೆ. ಎಲ್ಲ ವಿಷಯಕ್ಕೂ ತಜ್ಞರ ಸಹಾಯದ ಅಗತ್ಯವಿರುವುದಿಲ್ಲ. ಮಾನಸಿಕ ತೊಂದರೆಗಳು ನಮ್ಮ ಹಸಿವು ನಿದ್ದೆಗಳನ್ನು ಹಾಳುಮಾಡುವ ಅಥವಾ ಕುಟುಂಬದಲ್ಲಿ ಮತ್ತು ಸ್ನೇಹಿತರೊಡನೆ ನಮ್ಮ ಸಂಬಂಧಗಳನ್ನು ಕೆಡಿಸುವ ಮತ್ತು ನಮ್ಮ ಭವಿಷ್ಯಕ್ಕೆ ಮಾರಕವಾಗುವ ಹಂತ ತಲುಪಿದಾಗ ತಜ್ಞರ ಸಹಾಯದ ಅಗತ್ಯವಿದೆ ಎಂದು ತಿಳಿಯಬೇಕು. ಮಾನಸಿಕ ಸಮಸ್ಯೆಗಳನ್ನು ಹೇಳಿಕೊಂಡರೆ ನಾವೆಲ್ಲಾ ಜನರೆದುರು ನಗೆಪಾಟಲಾಗಬಹುದು ಎಂದು ಹಿಂಜರಿಯಬೇಕಿಲ್ಲ. ಹೊಸಹೊಸ ಮನೋಚಿಕಿತ್ಸೆಗಳನ್ನು ರೂಪಿಸಿದ ಎಷ್ಟೋ ಮನೋವಿಜ್ಞಾನಿಗಳು ತಮಗೆ ಚಿಕಿತ್ಸೆಯ ಅಗತ್ಯವುಂಟಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಹಾಗಿದ್ದಾಗ ಜನಸಾಮಾನ್ಯರಾದ ನಾವೆಲ್ಲ ಏಕೆ ಸಂಕೋಚಪಟ್ಟುಕೊಳ್ಳಬೇಕು?
ಸಮಸ್ಯೆಗಳನ್ನು ಹೇಳಿಕೊಳ್ಳದವರೆಲ್ಲಾ ಸಮಸ್ಯೆಯಿಂದ ಮುಕ್ತರು ಎಂದೆನೂ ತಿಳಿಯಬೇಕಿಲ್ಲ. ಹೆಚ್ಚಿನ ಜನ ಸಾಮಾಜಿಕ ಕಳಂಕದ ದೃಷ್ಟಿಯಿಂದ ಸಮಸ್ಯೆಗಳನ್ನು ಮುಚ್ಚಿಟ್ಟಿರುತ್ತಾರೆ. ಸಮಸ್ಯೆಗಳ ಪರಿಹಾರದ ಮೊದಲ ಹಂತ ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುವುದು ಎನ್ನವುದನ್ನು ನಾವೆಲ್ಲಾ ಮರೆಯಬಾರದು.
ಮನಸ್ಸು ತೀವ್ರವಾಗಿ ಗೊಂದಲದಲ್ಲಿದ್ದಾಗ ಕುಟುಂಬ ವೈದ್ಯರಲ್ಲಿ ಸಲಹೆಪಡೆದು ತಜ್ಞರನ್ನು ಸಪರ್ಕಿಸಿದರೆ ಪರಿಹಾರಗಳು ಸುಲುಭವಾಗಿ ಸಾಧ್ಯವಾಗುತ್ತವೆ.
ವಸಂತ್ ನಡಹಳ್ಳಿ
ಮಾನಸಿಕ ಸಮಸ್ಯೆಗಳಿಗೇಕೆ ಹಿಂಜರಿಕೆ?
ಇ–ಹರಾಜು ಮೇ 9 ರಿಂದ
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಿಂತು ಹೋಗಿದ್ದ ಇ–ಹರಾಜು ಮೇ 9 ರಿಂದ ಪುನರಾರಂಭಿಸಲಾಗುವುದು ಎಂದು ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಎಸ್.ಆರ್.ಪ್ರಭಾಕರ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಅವರು ಪುನರ್ ಪ್ರಾರಂಭಿಸಲಾಗುತ್ತಿರುವ ಇ–ಹರಾಜಿನ ಸಿದ್ಧತೆಗಳ ಬಗ್ಗೆ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು.
ಕೆಲವಾರು ತಾಂತ್ರಿಕ ದೋಷಗಳಿಂದ ಈ ಮೊದಲು ಪ್ರಾರಂಭಿಸಿದ್ದ ಇ–ಹರಾಜು ನಿಲ್ಲಿಸಬೇಕಾಗಿ ಬಂದಿತ್ತು. ಆದರೆ ಈಗ ತಾಂತ್ರಿಕತೆಯನ್ನು ಉನ್ನತೀಕರಿಸಲಾಗಿದೆ. ಮೇ 9 ರಿಂದ ಮರು ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಹರಾಜು ನಡೆಸಲು ತಮ್ಮ ಮೊಬೈಲ್ಗಳಲ್ಲಿ ಅಪ್ಲಿಕೇಷನ್ ಹಾಕಿಕೊಂಡಿರುವ ರೀಲರುಗಳು ಅಪ್ಡೇಟ್ ಮಾಡಿಕೊಳ್ಳಬೇಕು. ಹೊಸದಾಗಿ ಹಾಕಿಸಿಕೊಳ್ಳುವವರಿಗೂ ಮೊಬೈಲ್ನಲ್ಲಿ ಅಪ್ಲಿಕೇಷನ್ ಹಾಕಿಕೊಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ಇ–ಹರಾಜು ನಿಲ್ಲಿಸುವುದಿಲ್ಲ. ಇದರಿಂದ ಸಾಕಷ್ಟು ಹಣ ದುರುಪಯೋಗ ತಪ್ಪುತ್ತದೆ. ರೈತರು ಮತ್ತು ರೀಲರುಗಳಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ರೇಷ್ಮೆ ಮಾರುಕಟ್ಟೆ ವಿಭಾಗದ ಕೇಂದ್ರ ಕಚೇರಿಯ ಉಪನಿರ್ದೇಶಕ ಮೊಯ್ನುದ್ದೀನ್, ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮುಖ್ಯಮಂತ್ರಿಗಳ ರದ್ದಾದ ಪ್ರವಾಸ : ರೈತರ ಆಕ್ರೋಷ
ಬರ ಅಧ್ಯಯನ ಎಂಬುದು ಕೇವಲ ಬೂಟಾಟಿಕೆಯಾಗಿದೆ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಹಸಿರು ಸೇನೆ ಮತ್ತು ರೈತ ಸಂಘದ ಸದಸ್ಯರು ಆರೋಪಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ ಬಳಿ ಬರ ಅಧ್ಯಯನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ರದ್ದಾದ ಹಿನ್ನೆಲೆಯಲ್ಲಿ ಮಂಗಳವಾರ ಕೆಲ ಕಾಲ ರಸ್ತೆ ತಡೆ ನಡೆಸಿದ ರೈತ ಸಂಘದ ಸದಸ್ಯರು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮಕ್ಕೆ ಭೇಟಿ ನೀಡದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್ ನೇತೃತ್ವದ ಬರ ಅಧ್ಯಯನ ತಂಡ ಕಾಟಾಚಾರಕ್ಕೆ ಬರ ಅಧ್ಯಯನ ನಡೆಸಿದ್ದರು. ಈ ದಿನ ಮುಖ್ಯಮಂತ್ರಿಗಳು ಕೇವಲ ಕೋಲಾರಕ್ಕೆ ಭೇಟಿ ನೀಡಿ ಅಲ್ಲಿಂದ ಹಾಗೆಯೇ ಹೋಗುವ ಮೂಲಕ ಈ ಭಾಗದ ಜನರನ್ನು ಕಡೆಗಣಿಸಿದ್ದಾರೆ.
ರೈತರು, ಹೆಂಗಸರು, ಕೂಲಿ ಕಾರ್ಮಿಕರು, ಸುತ್ತಮುತ್ತಲ ಗ್ರಾಮಸ್ಥರು ಹಲವಾರು ಮಂದಿ ಕೂಲಿಗೂ ಹೋಗದೇ, ತಮ್ಮ ಕಾಯಕವನ್ನು ಬಿಟ್ಟು ಮುಖ್ಯಮಂತ್ರಿಗಳಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲೆಂದು ಕಾದಿದ್ದರು. ಈ ಭಾಗದ ಜನರಿಗೆ ಕುಡಿಯಲು ನೀರಿಲ್ಲ. ಶಾಶ್ವತ ನೀರಾವರಿಗೆ ಸಂಬಂಧಿಸಿದಂತೆ ಹೋರಾಟ ನಡೆಸಿದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳದೆ, ಕಾಟಾಚಾರದ ಅಧ್ಯಯನಕ್ಕಾಗಿ ಜನರ ಸಮಯ ಮತ್ತು ಹಣವನ್ನು ಪೋಲು ಮಾಡುತ್ತಿದ್ದಾರೆ. ಮೇ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳ ಆಪ್ತ ಅಧಿಕಾರಿಗಳಿಂದ ತಿಳಿದುಬಂದಿದೆ. ಆ ದಿನವೂ ಕಾಟಾಚಾರಕ್ಕೆ ಬಂದು ಹೋದಲ್ಲಿ ರೈತ ಸಂಘದಿಂದ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುನಿಕೆಂಪಣ್ಣ, ಬಾಲಮುರಳಿಕೃಷ್ಣ, ಪ್ರತೀಶ್, ರಮೇಶ್, ಹುಸೇನ್ಸಾಬ್, ವೆಂಕಟರೆಡ್ಡಿ, ಆಂಜಿನಪ್ಪ, ಎಸ್.ಎನ್.ಮಾರಪ್ಪ, ಡಿ.ವಿ.ನಾರಾಯಣಸ್ವಾಮಿ, ಮಂಜುನಾಥ್, ವೀರಪ್ಪರೆಡ್ಡಿ, ಅಮರನಾಥ್, ಕೃಷ್ಣರೆಡ್ಡಿ, ವೆಂಕಟರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮೇ 5 ರ ಗುರುವಾರ ಬೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ತಾಲ್ಲೂಕು ಕ.ಸಾ.ಪ ವತಿಯಿಂದ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಂ.ರಾಜಣ್ಣ ನೆರವೇರಿಸಲಿದ್ದು, ಜಿಲ್ಲಾ ಕ.ಸಾ.ಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಅಮೃತ್ಕುಮಾರ್ ಪ್ರಧಾನ ಭಾಷಣಕಾರರಾಗಿ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು, ಬೆಳವಣಿಗೆ, ಧ್ಯೇಯೋದ್ದೇಶಗಳ ಬಗ್ಗೆ ತಿಳಿಸುವರು ಎಂದು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದ್ದಾರೆ.
ಸಾಕ್ಷರ ಭಾರತ್ ಕಾರ್ಯಕ್ರಮವು ಹೃದಯವಂತರ ಕಾರ್ಯಕ್ರಮ
ಅನಕ್ಷರಸ್ಥರಿಗೆ ಕ್ರಿಯಾತ್ಮಕ ಸಾಕ್ಷರತೆಯೊಂದಿಗೆ ಸಮಾನಶಿಕ್ಷಣ, ವೃತ್ತಿಕೌಶಲ ಒದಗಿಸುವುದು ಸಾಕ್ಷರಭಾರತ್ ಯೋಜನೆಯ ಉದ್ದೇಶವಾಗಿದ್ದು, ಬುದ್ಧಿವಂತರಿಗಿಂತ ಹೃದಯವಂತರ ಕಾರ್ಯಕ್ರಮವಾಗಿದೆ ಎಂದು ಗಂಭೀರನಹಳ್ಳಿ ಕ್ಲಸ್ಟರ್ ಸಿಆರ್ಪಿ ರಮೇಶ್ ಅಭಿಪ್ರಯಪಟ್ಟರು.
ಲೋಕಶಿಕ್ಷಣ ನಿರ್ದೇಶನಾಲಯ ಹಾಗೂ ಕುಂಬಿಗಾನಹಳ್ಳಿ ಗ್ರಾಮಪಂಚಾಯತಿ ಲೋಕಶಿಕ್ಷಣಸಮಿತಿ ಆಶ್ರಯದಲ್ಲಿ ಸಾಕ್ಷರ ಭಾರತ್ ಯೋಜನೆಯಡಿ ಸ್ವಯಂಸೇವಕರಿಗಾಗಿ ಹಾರಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೩ ದಿನಗಳ ೨ ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಳಿಗೆ ಬೆಳಕು ಪ್ರಾಥಮಿಕೆಯು ಲಿಂಗಸಮಾನತೆ, ಮಹಿಳಾಸಬಲೀಕರಣ ಮತ್ತು ಮನೋವೈಜ್ಞಾನಿಕ ಅಂಶಗಳನ್ನು ಆಧರಿಸಿ ತಯಾರಿಸಿರುವುದರಿಂದ ಅದರ ಕಲಿಕೆಯು ನವಸಾಕ್ಷರರಿಗೆ ಅನುಕೂಲವಾಗಲಿದೆ ಮತ್ತು ಕಲಿಕಾಸಕ್ತಿಯನ್ನು ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ತರಬೇತುದಾರ ಎಚ್.ಎಸ್.ರುದ್ರೇಶಮೂರ್ತಿ ಅವರು ಮಾತನಾಡಿ, ಸ್ವಯಂಸೇವಕರು ಈಗಾಗಲೇ ಕಲಿತಿರುವುದಕ್ಕಿಂತ ಅನಕ್ಷರಸ್ಥರಿಗೆ ಕಲಿಸುವಾಗ ಕಲಿಯುವುದು ಬಹಳಷ್ಟಿದೆ. ಜ್ಞಾನವು ಬಳಸುವುದರಿಂದ ವೃದ್ಧಿಸುತ್ತದೆ. ಐಪಿಸಿಎಲ್ ವಿಧಾನ ಮತ್ತು ಹಂತಗಳನ್ನು ಬಳಸಿ ಕ್ರಿಯಾಶೀಲತೆಯಿಂದ ವೈಜ್ಞಾನಿಕ ಮತ್ತು ಕಲಾತ್ಮಕವಾಗಿ ಕಲಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಮಧ್ಯದಲ್ಲಿ ಕಲಿಕಾಕೇಂದ್ರ ತೊರೆಯುವ ನವಸಾಕ್ಷರರ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ವಿವರಿಸಿದರು.
ಕುಂಬಿಗಾನಹಳ್ಳಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಭಾಗ್ಯಮ್ಮ ನಾರಾಯಣಸ್ವಾಮಿ, ಸದಸ್ಯೆ ಆನಂದಮ್ಮ, ರೂಪ, ಮುಖ್ಯ ತರಬೇತುದಾರ ಜೆ.ಬಿ.ಅಶೋಕ್, ಮುಖ್ಯಶಿಕ್ಷಕ ಬಿ.ಎನ್.ಬಸವರಾಜು, ಎಸ್ಡಿಎಂಸಿ ಸದಸ್ಯರು, ಪ್ರೇರಕಿ ಅನುಷಾ, ಬೇಬಿ, ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಡಿಯುವ ನೀರಿಗೆ ಚರಂಡಿಯ ನೀರಿನ ಸೋರಿಕೆ
ನಗರದ ಒಂಭತ್ತನೇ ವಾರ್ಡಿನಲ್ಲಿ ಕುಡಿಯುವ ನೀರಿದ್ದರೂ ಜನರು ಕುಡಿಯಲು ಅಸಾಧ್ಯವಾಗಿದೆ. ಏಕೆಂದರೆ ಚರಂಡಿ ತುಂಬಿ ತುಳುಕುತ್ತಿದ್ದು, ಕುಡಿಯುವ ನೀರಿಗೆ ಚರಂಡಿಯ ತ್ಯಾಜ್ಯದ ನೀರೆಲ್ಲಾ ಸೋರಿಕೆಯಾಗುತ್ತಿದೆ ಎಂದು ಈ ಭಾಗದ ಜನರು ದೂರಿದ್ದಾರೆ.
ಸುಮಾರು ನಾಲ್ಕು ಅಡಿ ಆಳದ ಚರಂಡಿಯು ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ನೀರು ಹೊರಗೆ ಹೋಗದೆ ಅಲ್ಲಿಯೇ ನಿಂತ ಕಾರಣ ಕಲುಷಿತ ವಾತಾವರಣವನ್ನು ಸೃಷ್ಟಿಸಿದೆ. ಸೊಳ್ಳೆಗಳ ಆವಾಸಸ್ಥಾನವಾಗಿದೆ. ಕೇವಲ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಫಲೇಚರ್ ಕ್ವಾಟರ್ಸಿನಲ್ಲಿ ಅನೈರ್ಮಲ್ಯದ ಕಾರಣ ಖಾಯಿಲೆ ಪೀಡಿತರು ಹೆಚ್ಚಾಗುತ್ತಿದ್ದಾರೆ.
ಚರಂಡಿಯು ಸಂಪೂರ್ಣವಾಗಿ ತ್ಯಾಜ್ಯದಿಂದ ತುಂಬಿ ಹೋಗಿ ಕುಡಿಯುವ ನೀರು ಹರಿಯುವ ಕೊಳಾಯಿಯಲ್ಲಿಯೂ ಸಂಪೂರ್ಣ ತ್ಯಾಜ್ಯದ ನೀರು ತುಂಬಿದೆ. ಹೀಗಾಗಿ ತ್ಯಾಜ್ಯದ ಕೆಟ್ಟ ವಾಸನೆಯಿರುವ ನೀರನ್ನು ಕುಡಿಯುವ ಪರಿಸ್ಥಿತಿ ಈ ಭಾಗದ ಜನರದ್ದು.
ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಊರಿನ ಬೇರೆಲ್ಲಾ ಕಡೆ ಒಳಚರಂಡಿ ವ್ಯವಸ್ಥೆಯಿದ್ದರೂ, ಈ ಭಾಗದಲ್ಲಿ ಮಾತ್ರವಿಲ್ಲ. ಸ್ವಚ್ಛಭಾರತ್ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ನಗರಸಭೆಯವರು ಖರ್ಚು ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಮಾತ್ರ ಚರಂಡಿಯನ್ನೂ ಶುಚಿಗೊಳಿಸದೆ, ತ್ಯಾಜ್ಯವನ್ನು ತೆಗೆಯುತ್ತಿಲ್ಲ. ಕೂಲಿ ಮಾಡಿ ಜೀವಿಸುವ ಜನರು ಆಸ್ಪತ್ರೆ ಖರ್ಚಿಗೆ ಹಣ ವ್ಯಯಿಸಲಾಗದೆ ಕಷ್ಟಪಡುವಂತಾಗಿದೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಜನರು ದೂರಿದ್ದಾರೆ.
ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆಗೆ ಪೂರಕವಾಗಿವೆ
ಮಕ್ಕಳಲ್ಲಿ ಅಡಗಿರುವ ನೈಜ ಪ್ರತಿಭೆಯನ್ನು ಹೊರತೆಗೆಯುವ ಕೆಲಸವನ್ನು ಮಾಡಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ೨೦೧೬-–೧೭ ನೇ ಸಾಲಿನ ೦೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಬೆಂಗಳೂರಿನ ಬಾಲಭವನ ಸೊಸೈಟಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರಗಳು ಮಕ್ಕಳನ್ನು ಶಾರೀರಕವಾಗಿ ಹಾಗು ಮಾನಸಿಕವಾಗಿ ಸದೃಡರನ್ನಾಗಿಸುವುದರ ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ದಿನ ಪೂರ್ತಿ ಟಿವಿಯ ಮುಂದೆ ಕೂತು ಸಮಯ ಕಳೆಯುವ ಬದಲಿಗೆ ತಮ್ಮ ಮಕ್ಕಳನ್ನು ಹತ್ತು ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರಕ್ಕೆ ಕಳುಹಿಸುವುದರಿಂದ ಇತರ ಮಕ್ಕಳ ಜೊತೆ ಬೆರೆತು ಆಡಿ ನಲಿಯುವುದರೊಂದಿಗೆ ಸಂವಹನ ಕೌಶಲ್ಯವನ್ನು ಕಲಿಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಉಲ್ಲೂರುಪೇಟೆ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ತಾಲ್ಲೂಕು ದೈಹಿಕ ಅಧಿಕಾರಿ ಶ್ರೀನಿವಾಸ್, ಜಂಗಮಕೋಟೆ ಸಿಆರ್ಪಿ ಸುಂದರಾಚಾರಿ, ಸಿಬ್ಬಂದಿ ಗಿರಿಜಾಂಬಿಕೆ, ಶಾಂತ, ರಾಧಮ್ಮ, ಸಂದೀಪ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾಂಸ್ಕೃತಿಕ ನೃತ್ಯೋತ್ಸವ
ನಗರದ ವಾಸವಿ ರಸ್ತೆಯಲ್ಲಿರುವ ಶ್ರೀಕೃಷ್ಣ ಕಲಾಕುಂಜದ ವತಿಯಿಂದ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರವನ್ನು ಚಿಕ್ಕಬಳ್ಳಾಪುರದ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ಮೇ 5 ರ ಸಂಜೆ 4.30ಕ್ಕೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ಸುಧಾಕರ್ ವಹಿಸಲಿದ್ದು, ಮುಖದಯ ಅತಿಥಿಗಳಾಗಿ ಪ್ರೊ.ಡಾ.ಎ.ಆರ್.ಮಂಜುನಾಥ್, ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ನಿರ್ದೇಶಕ ಡಾ.ಸುವರ್ಣ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಭಾಗವಹಿಸುವರೆಂದು ಶ್ರೀಕೃಷ್ಣ ಕಲಾಕುಂಜದ ನಿರ್ದೇಶಕ ಜಿ.ಪವನ್ಕುಮಾರ್ ತಿಳಿಸಿದ್ದಾರೆ.
ನೀಲಕಂಠ ಹಕ್ಕಿ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಹೊರವಲಯದಲ್ಲಿ ತೆಂಗಿನಮರದಲ್ಲಿನ ಪೊಟರೆಯಲ್ಲಿದ್ದ ರಾಜ್ಯಪಕ್ಷಿ ನೀಲಕಂಠ ಹಕ್ಕಿಯ ಮರಿಯು ತನ್ನ ತಾಯಿ ತರುವ ಆಹಾರಕ್ಕಾಗಿ ಬಾಯಿತೆರೆದು ಕಾದಿದೆ.
‘ಶಿಡ್ಲಘಟ್ಟ ಸಿನಿಮಾ ಹಬ್ಬ’ – ಶಿಡ್ಲಘಟ್ಟದಲ್ಲಿ ಸಿನೆಮಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ
ಬೆಳಕಿನ ಬಾಣ ಬಿರುಸುಗಳ ನಡುವೆ ತೂರಿ ಬಂದ ಕಲಾವಿದರು ನೃತ್ಯ ಮಾಡುತ್ತಿದ್ದರೆ, ನೆರೆದಿದ್ದ ಅಪಾರ ಜನಸ್ತೋಮ ಮಾಂತ್ರಿಕ ಲೋಕವನ್ನು ನೋಡಿದಂತೆ ಬೆರಗಾಗಿದ್ದರು. ‘ನೂರಕ್ಕೆ ನೂರು ಕನ್ನಡದವನು…’ ಎಂಬ ಹಾಡಿಗೆ ನವನಟ ಅನೂಪ್ ಹೆಜ್ಜೆ ಹಾಕಿದಾಗ ಸಾವಿರಾರು ಜನರ ಚಪ್ಪಾಳೆ, ಶಿಳ್ಳೆ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ, ಸುಧಾರಾಣಿ ಮುಂತಾದ ಚಲನಚಿತ್ರ ತಾರೆಯರನ್ನು ಕಂಡು ಶಿಡ್ಲಘಟ್ಟದ ಜನರು ಸಂತಸ ವ್ಯಕ್ತಪಡಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ‘ಶಿಡ್ಲಘಟ್ಟ ಸಿನಿಮಾ ಹಬ್ಬ’ ಶೀರ್ಷಿಕೆಯಡಿ ಲಕ್ಷ್ಮಣ ಸಿನೆಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಾಗಿ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಮೇಲೆಲ್ಲಾ ಜನರು ಹತ್ತಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿದರು.
‘ಮಾಜಿ ಸಚಿವ ಎಚ್. ಎಂ.ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಸಿನಿಮಾ ‘ಲಕ್ಷ್ಮಣ’
ಚಿತ್ರದ ಹಾಡುಗಳನ್ನು ನನ್ನ ಹುಟ್ಟೂರಿನಲ್ಲಿ, ಅದರಲ್ಲೂ ನಾನು ಆಡಿ ಬೆಳೆದ ಕ್ರೀಡಾಂಗಣದಲ್ಲೇ ಅದ್ದೂರಿಯಾಗಿ ಲೊಕಾರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ. ನನ್ನ ಜನರಿಗಾಗಿ ಚಿತ್ರರಂಗದ ತಾರೆಯರನ್ನು ಕರೆತಂದಿದ್ದೇನೆ. ನಾನು ಈದಿನ ಈ ಸ್ಥಿತಿಗೆ ಏರಲು ನನ್ನ ಊರಿನ ಜನರ ಹಾರೈಕೆಯೇ ಕಾರಣ’ ಎಂದು ನಿರ್ದೇಶಕ ಆರ್.ಚಂದ್ರು ಭಾವುಕರಾಗಿ ನುಡಿದರು.
ಅರ್ಜುನ್ ಜನ್ಯ ಮ್ಯೂಸಿಕಲ್ ಲೈಟ್ಸ್ ತಂಡದಿಂದ ಏರ್ಪಡಿಸಿದ್ದ ರಸಸಂಜೆ ಕಾರ್ಯಕ್ರಮ, ನಟಿ ಸಂಜನಾ ಅವರ ನೃತ್ಯ, ಮಿಮಿಕ್ರಿ ದಯಾನಂದ್ ಅವರ ಹಾಸ್ಯ, ನಿರೂಪಕಿ ಅನೂಶ್ರೀ ಹಾಸ್ಯಮಿಶ್ರಿತ ನಿರೂಪಣೆ, ಲೇಸರ್ ಶೋ, ರೋಬೋ ನೃತ್ಯ ಮುಂತಾದ ಮನರಂಜನೆಗಳು ರಾತ್ರಿ 11 ಗಂಟೆಯಾದರೂ ಸಾವಿರಾರು ಜನರನ್ನು ಸೆರೆಹಿಡಿಯಲು ಸಫಲವಾಗಿತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದ ನಿರ್ಮಾಪಕಿ ವತ್ಸಲಾ ರೇವಣ್ಣ, ಶಾಸಕರಾದ ಡಾ.ಸುಧಾಕರ್, ಎಂ.ರಾಜಣ್ಣ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ‘ಲಕ್ಷ್ಮಣ’
ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ‘ಲಕ್ಷ್ಮಣ’ ಚಿತ್ರದ ನಿರ್ದೇಶಕ ಆರ್.ಚಂದ್ರು ಅವರನ್ನು ಅವರು ವಿದ್ಯಾಭ್ಯಾಸ ಮಾಡಿದ್ದ ಸರಸ್ವತಿ ಕಾನ್ವೆಂಟ್ ಶಾಲೆಗಳ ವತಿಯಿಂದ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಸೀತಾಲಕ್ಷ್ಮಿ ಮತ್ತು ಕಾರ್ಯದರ್ಶಿ ಶ್ರೀಕಾಂತ್ ‘ಶಿಡ್ಲಘಟ್ಟ ರತ್ನ’ ಎಂಬ ಬಿರುದನ್ನು ನೀಡಿ ಗೌರವಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ, ಸಚಿವ ರೇವಣಸಿದ್ದಯ್ಯ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್, ಫಿಲಂ ಚೇಂಬರ್ ಅಧ್ಯಕ್ಷ ಚಂದ್ರಶೇಖರ್, ಕೆ.ಎಂ.ನಾಗರಾಜು, ಕಾಂಗ್ರೆಸ್ ಮುಖಂಡ ಉಗ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಾನಸಿಕವಾಗಿ ಅಸ್ವಸ್ಥರಿಗೆ ನೆರವಾಗುವುದು ಸಮಾಜಿಕ ಕಳಕಳಿ
ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡುವುದರೊಂದಿಗೆ ಅವರಿಗೆ ಪುನರ್ವಸತಿ ಮತ್ತು ತರಬೇತಿಯನ್ನು ನೀಡುವ ಉದಾತ್ತ ಮನೋಭಾವದಿಂದ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿರುವುದು ಮಾನವೀಯತೆಯ ದ್ಯೋತಕವಾಗಿದೆ. ತನ್ನದಲ್ಲದ ತಪ್ಪಿಗೆ ಮಾನಸಿಕವಾಗಿ ಅಸ್ವಸ್ಥರಾದವರಿಗೆ ನೆರವಾಗುವುದು ಸಮಾಜಿಕ ಕಳಕಳಿಯಾಗಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟಿನ ಬಳಿ ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ‘ಪ್ರಗತಿ’ ಗ್ರಾಮೀಣ ಶಾಖೆಯ ವತಿಯಿಂದ ನಿರ್ಮಿಸಲಾಗಿರುವ ಸಮುದಾಯ ಮಾನಸಿಕ ಅಸ್ವಸ್ಥರ ಚಿಕಿತ್ಸೆ, ಪುನರ್ವಸತಿ ಮತ್ತು ಉದ್ಯೋಗ ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ರೀತಿಯ ಸಮುದಾಯಿಕ ಸೇವೆಯಿಂದಾಗಿ ಜಿಲ್ಲೆಯ ಮಾನಸಿಕ ಅಸ್ವಸ್ಥರಿಗೆ ಸಾಕಷ್ಟು ಸಹಾಯವಾಗಲಿದೆ. ಬಡವರು, ಕಷ್ಟದಲ್ಲಿರುವವರಿಗೆ ಸಹಕಾರಿಯಾಗುತ್ತದೆ. ಹಲವು ವರ್ಷಗಳಿಂದ ಸುಮಾರು 400 ಮಂದಿ ಮಾನಸಿಕ ಅಸ್ವಸ್ಥರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡುತ್ತಿರುವ ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ‘ಪ್ರಗತಿ’ ಗ್ರಾಮೀಣ ಶಾಖೆಯ ಸದಸ್ಯರು ಇನ್ನು ಮುಂದೆ ತಮ್ಮ ಕಾರ್ಯವ್ಯಾಪ್ತಿಯನ್ನು ಹಿರಿದಾಗಿಸಿಕೊಳ್ಳಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂದಾನಿಗಳಾದ ಬೆಳ್ಳೂಟಿ ಬಿ.ಕೆ.ನಾರಾಯಣಸ್ವಾಮಿ ಮತ್ತು ಕಟ್ಟಡದ ದಾನಿಗಳಾದ ಎ.ಆರ್.ಚಂದ್ರಶೇಖರರೆಡ್ಡಿ ಅವರನ್ನು ಗೌರವಿಸಲಾಯಿತು.
ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಹಾಗೂ ಆರ್.ಎಫ್.ಎಸ್ ಸಂಸ್ಥಾಪಕ ಜಿ.ಆರ್.ನಾರಾಯಣರೆಡ್ಡಿ, ಶಾಸಕ ಎಂ.ರಾಜಣ್ಣ, ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ‘ಪ್ರಗತಿ’ ಗ್ರಾಮೀಣ ಶಾಖೆಯ ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ಅನಂತಪದ್ಮನಾಭ್, ಲಕ್ಷ್ಮಣಾಚಾರ್, ಕೆ.ವಿ.ಸತ್ಯನಾರಾಯಣಾಚಾರ್, ಡಾ.ವಿ.ವೆಂಕಟರಾಮಯ್ಯ, ಡಾ.ಅನಿಲ್ಕುಮಾರ್, ಡಾ.ಸತ್ಯನಾರಾಯಣರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಮಿಕರು ಐಕ್ಯತೆಯಿಂದ ಬದುಕನ್ನು ಹಸನುಮಾಡಿಕೊಳ್ಳಿ
ನಮ್ಮ ನಾಡಿನ ಆರ್ಥಿಕ ಅಭಿವೃದ್ಧಿಯು ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ನಾಡು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುತ್ತದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಮೂಟೆ ಹೊರುವ ಹಮಾಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಚರಿಸಿದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೈಹಿಕ ಇಲ್ಲವೇ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಿ ಕಾರ್ಮಿಕ ಆದಾಯವನ್ನು ಗಳಿಸಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಿರುತ್ತಾರೆ. ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಗೂಡಿನ ಮೂಟೆ ಹೊರುವ ಹಿರಿಯ ಹತ್ತು ಮಂದಿ ಹಮಾಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ನಗರದ ಮುಖ್ಯ ರಸ್ತೆಯಲ್ಲಿ ಹಮಾಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮಟೆ ನಾದದೊಂದಿಗೆ ಮೆರವಣಿಗೆ ನಡೆಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಬಿ.ಆರ್.ಸುಧಾಕರ್, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ವಕೀಲ ಯೋಗಾನಂದ್, ಡಾ.ಅನಿಲ್ಕುಮಾರ್, ಕಾರ್ಮಿಕ ಇಲಾಖೆಯ ಅಧಿಕಾರಿ ವಿಶ್ವನಾಥ್, ಮಹಮ್ಮದ್ ಅನ್ವರ್, ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷ ಆಂಜನೇಯರೆಡ್ಡಿ, ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಸುದರ್ಶನ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ಅಬ್ದುಲ್ ಅಜೀಜ್, ಗುರುವಯ್ಯ ಯಾದವ್, ಹಮಾಲಿ ಕಾರ್ಮಿಕ ಸಂಘದ ಅಧ್ಯಕ್ಷ ಬಾಬಾಜಾನ್, ವೆಂಕಟರಾಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ ರೈತಕೂಟದಿಂದ ಗೌರವ
ರೈತಕೂಟಗಳನ್ನು ಸ್ಥಾಪಿಸುವಲ್ಲಿ ಹಾಗೂ ಆ ಮೂಲಕ ರೈತರ ಬೆಳವಣಿಗೆಗೆ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ಸಹಕಾರಿಯಾಗಿದ್ದರು ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.
ನಗರದ ಕೆನರಾ ಬ್ಯಾಂಕಿನ ಶಾಖೆಯಲ್ಲಿ ಶನಿವಾರ ಮುಂಬಡ್ತಿ ಪಡೆದು ಪ್ರಧಾನ ಕಛೇರಿಗೆ ವರ್ಗಾವಣೆಗೊಂಡ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸಿರಿ ಸಮೃದ್ಧಿ ರೈತ ಕೂಟದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಮಹಿಳಾ ರೈತಕೂಟವನ್ನೂ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ರೈತಕೂಟಗಳನ್ನು ಸ್ಥಾಪಿಸಿ ರೈತರನ್ನು ಅಧ್ಯಯನ ಪ್ರವಾಸದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಪ್ರಗತಿಯಾಗುವಂತೆ ಮಾಡಲು ಬ್ಯಾಂಕ್ ವ್ಯವಸ್ಥಾಪಕರು ನೆರವಾಗಿದ್ದಾರೆ. ಬ್ಯಾಂಕಿನ ವಹಿವಾಟು ದ್ವಿಗುಣಗೊಳಿಸಿ ಸಾಕಷ್ಟು ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಡಾ.ಸತ್ಯನಾರಾಯಣರಾವ್, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಕಾರ್ಯದರ್ಶಿ ಬಿ.ಎಂ.ಪ್ರಕಾಶ್, ರಾಮಮೂರ್ತಿ, ಎಸ್.ಎಂ.ಮಾರೇಗೌಡ, ಬೂದಾಳ ರಾಮಾಂಜಿನಪ್ಪ, ಬ್ಯಾಂಕಿನ ಸಿಬ್ಬಂಧಿಗಳಾದ ಮುನಿಲಕ್ಷ್ಮಮ್ಮ, ಅಭಿಷೇಕ್, ಸಂಧ್ಯಾ, ವಿನುತಾ ಪೂಜಾರಿ, ನಮಿತಾ, ನೇತ್ರಾ, ಶ್ರೀನಿವಾಸ್, ಮುನಿರಾಜು, ವೀರಭದ್ರಪ್ಪ, ಬಂಗಾರು ಶ್ರೀನಿವಾಸ್, ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೆಲಸದಲ್ಲಿ ನಿರತನಾದ ಕಾರ್ಮಿಕ
ಶಿಡ್ಲಘಟ್ಟದಲ್ಲಿ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಬಿಸಿಲಿನಲ್ಲೂ ಕಾದ ಕಬ್ಬಿಣದ ಕೆಲಸದಲ್ಲಿ ನಿರತನಾದ ಕಾರ್ಮಿಕನಿಗೆ ದೈನಂದಿನ ಕಾಯಕ ಮತ್ತು ಕೂಲಿಯದ್ದೇ ಚಿಂತೆ.
ರಕ್ತಕ್ಕೆ ಬೇಡಿಕೆ ಹೆಚ್ಚಿದೆ
ಬೇಸಿಗೆ ಕಾಲದಲ್ಲಿ ರಕ್ತ ದಾನ ಮಾಡುವವರು ವಿರಳವಾಗಿರುವುದರಿಂದ ರಕ್ತಕ್ಕೆ ಬೇಡಿಕೆ ಹೆಚ್ಚಿದೆ. ಇಂಥಹ ಸಮಯದಲ್ಲಿ ರಕ್ತದಾನ ಶಿಬಿರಗಳ ಮೂಲಕ ಗ್ರಾಮಸ್ಥರು ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಡಾ.ಜಯರಾಮರೆಡ್ಡಿ ತಿಳಿಸಿದರು.
ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯತಿಯ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಭಾರತೀಯ ರೆಡ್ಕ್ರಾಸ್ ಸೊಸೈಟಿ, ಪಲಿಚೇರ್ಲು ಗ್ರಾಮ ಪಂಚಾಯತಿ, ಗ್ಲೋಬಲ್ ಐ ಫೌಂಡೇಷನ್, ರೋಟರಿ ಕ್ಲಬ್, ಸೋಮನಹಳ್ಳಿ, ಕುಂದಲಗುರ್ಕಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಸಂಪೂರ್ಣ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯವರು ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಮಾಡುತ್ತಿರುವ ಈ ಸಾಮಾಜಿಕ ಚಟುವಟಿಕೆಗಳು ಶ್ಲಾಘನೀಯ ಎಂದರು.
ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಗಣ್ಯರು ಚಾಲನೆಯನ್ನು ನೀಡಿದರು. ಶಿಡ್ಲಘಟ್ಟದಿಂದ ಯೂನಿಟಿ ಸಿಲ್ಸಿಲಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಒಟ್ಟಾರೆ 66 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ರೆಡ್ಕ್ರಾಸ್ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಡಾ.ಲೋಕೇಶ್, ವಕೀಲ ಪ್ರಕಾಶ್, ಗ್ರಾಮ ಪಂಚಾಯತಿ ಸದಸ್ಯ ವೆಂಕಟಶಿವಾರೆಡ್ಡಿ, ಆರೋಗ್ಯ ಇಲಾಖೆಯ ಸತೀಶ್, ಪಿ.ಡಿ.ಒ ವಜ್ರೇಶ್, ರೈತಸಂಘದ ಮುನಿಕೆಂಪಣ್ಣ, ಪ್ರತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬೇಸಿಗೆಯ ಬಿಸಿಗೆ ಕಂಗಾಲಾದ ದ್ರಾಕ್ಷಿ ಬೆಳೆಗಾರರು
ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವ ಬಿಸಿಲಿನ ತಾಪಮಾನದಿಂದಾಗಿ ದ್ರಾಕ್ಷಿ ಬೆಳೆಗಾರರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ತಾಲ್ಲೂಕಿನೆಲ್ಲೆಡೆ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿರುವ ದ್ರಾಕ್ಷಿ ಬೆಳೆಯು, ಬಿರುಬೇಸಿಗೆಯಿಂದಾಗಿ ಬಾಡುತ್ತಿದ್ದು, ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿರುವ ರೈತರ ಪರಿಸ್ಥಿತಿ ದಿಕ್ಕು ಕಾಣದಂತಾಗಿದೆ.
ಬೆಂಗಳೂರು ಬ್ಲೂ ದ್ರಾಕ್ಷಿ ಪ್ರತಿ ಕೆ.ಜಿ.ಗೆ ೬೦ ರೂಪಾಯಿಗಳ ದಾಖಲೆ ಬೆಲೆಯನ್ನು ಹೊಂದಿದ್ದರೂ ಕೂಡಾ ರೈತರು ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿ, ಕೊರೆಯಿಸಿರುವ ಕೊಳವೆಬಾವಿಗಳಿಂದ ದ್ರಾಕ್ಷಿಯ ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ನೀರಿನ ಅಭಾವವಾದರೆ, ಮತ್ತೊಂದು ಇರುವ ನೀರನ್ನು ಸದ್ಬಳಕೆ ಮಾಡಿಕೊಂಡು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಂತಹ ವಿದ್ಯುತ್ತಿನ ಕೊರತೆ ರೈತರನ್ನು ಕಾಡತೊಡಗಿದೆ. ಕೆಲವು ಮಂದಿ ರೈತರು, ಕೈಗೆ ಬಂದ ಬೆಳೆಗಳನ್ನು ನಷ್ಟಮಾಡಿಕೊಳ್ಳಲು ಇಷ್ಟವಿಲ್ಲದೆ, ಕೊಳವೆಬಾವಿಗಳ ಮೂಲಕ ನೀರು ಹೊರತೆಗೆಯಲು ವಿದ್ಯುತ್ತಿಗೆ ಕಾಯುವ ಬದಲಾಗಿ ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಕಿ ಜನರೇಟರ್ಗಳನ್ನು ಇಟ್ಟುಕೊಂಡು ನೀರು ಹೊರತೆಗೆಯುತ್ತಿರುವ ಪ್ರಯತ್ನಗಳೂ ನಡೆಯುತ್ತಿವೆ. ದಿನವೊಂದಕ್ಕೆ ೧,೦೦೦ ರೂಪಾಯಿಗಳಂತೆ ಜನರೇಟರ್ಗಳಿಗೆ ಡಿಸೇಲ್ ಹಾಕಬೇಕಾಗಿದೆ.
ಕೆಲವು ರೈತರು, ಜನರೇಟರ್ಗಳಿಗೆ ಬಂಡವಾಳ ಹಾಕಲು ಶಕ್ತಿಯಿಲ್ಲದವರು, ಟ್ಯಾಂಕರುಗಳ ಮೂಲಕ ದ್ರಾಕ್ಷಿಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ, ಆದರೆ ಸುಮಾರು ದಾಖಲೆಯ ಪ್ರಮಾಣದಲ್ಲಿ ೩೯ ರಿಂದ ೪೦ ಡಿಗ್ರಿಯವರೆಗೂ ದಾಖಲಾಗುತ್ತಿರುವ ತಾಪಮಾನದಿಂದಾಗಿ ದ್ರಾಕ್ಷಿಯ ಗೊಂಚಲುಗಳಲ್ಲಿನ ಕಾಯಿಗಳು ನೀರಿನ ಅಂಶವನ್ನು ಕಳೆದುಕೊಂಡು ಒಣಗಲಾರಂಭಿಸಿವೆ.
ದ್ರಾಕ್ಷಿಯನ್ನು ಬೆಳೆಯಲು ಬೇಸಿಗೆಕಾಲ ಉತ್ತಮವಾದ ವಾತಾವರಣವಾಗಿದ್ದರೂ ಕೂಡಾ ಇತ್ತಿಚೆಗೆ ದಾಖಲಾಗುತ್ತಿರುವ ತಾಪಮಾನ ದ್ರಾಕ್ಷಿ ಬೆಳೆಗಳಲ್ಲಿ ಗುಣಮಟ್ಟವನ್ನು ಕಾಪಾಡಲು ಸಹಕಾರಿಯಾಗುತ್ತಿಲ್ಲ, ಶೀತದ ವಾತಾವರಣದಲ್ಲಿ ಹಣ್ಣಿಗೆ ರೋಗ ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಿಮ ಮತ್ತು ಚಳಿಗಾಲದಲ್ಲಿಯೂ ದ್ರಾಕ್ಷಿಗೆ ರೋಗಗಳು ಹರಡುವಂತಹ ಮಳೆಗಾಲ ಯೋಗ್ಯವಲ್ಲ. ಆದ್ದರಿಂದ ಯಾವ ಕಾಲದಲ್ಲಿಯೂ ಬೆಳೆಗಳನ್ನು ಉಳಿಸಿಕೊಂಡು ಹಾಕಿರುವ ಬಂಡವಾಳ ತೆಗೆಯಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೊಳವೆಬಾವಿ ಕೊರೆಯಿಸಲು ಸುಮಾರು ೭ ಲಕ್ಷ ರೂಪಾಯಿಗಳು ಬಂಡವಾಳ ಹಾಕಿದ್ದೇವೆ, ದ್ರಾಕ್ಷಿಗೆ ಸುಮಾರು ೩ ಲಕ್ಷದ ವರೆಗೂ ಬಂಡವಾಳ ಹಾಕಿದ್ದೇವೆ, ಇಷ್ಟೆಲ್ಲಾ ಹಾಕಿ ಬೆಳೆ ಬೆಳೆಯಲು ಕರೆಂಟುಗಳಿಲ್ಲ, ದ್ರಾಕ್ಷಿಯ ಕಾಯಿಗಳಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದ್ದು, ಇಳುವರಿ ಬರುತ್ತಿಲ್ಲ, ಕಾಯಿ ಹಣ್ಣಾಗುತ್ತಿಲ್ಲ ಎಂದು ತಮ್ಮ ತೊಂದೆಗಳನ್ನು ವಿವರಿಸುತ್ತಾರೆ ದ್ರಾಕ್ಷಿ ಬೆಳೆಗಾರ ಜಿ.ಡಿ.ವೆಂಕಟೇಶ್.
ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ರೇಷ್ಮೆ ಹುಳು ಸಾಕಾಣಿಕಾ ಮನೆಗಳ ಮೇಲ್ಛಾವಣಿಯಲ್ಲಿ ತೆಂಗಿನ ಗರಿ, ಒಣ ಹುಲ್ಲು ಅಥವಾ ಸೋಗೆಯನ್ನು ಹಾಕಿ ನೀರು ಹಾಯಿಸುವುದರಿಂದ ಉಷ್ಣತೆಯನ್ನು ಕಡಿಮೆಗೊಳಿಸಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ತಿಳಿಸಿದರು.
ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ರೈತರಿಗೆ ಕರಪತ್ರಗಳನ್ನು ಹಂಚಿ ಅರಿವು ಮೂಡಿಸುತ್ತಾ ಅವರು ಮಾತನಾಡಿದರು.
ಹಿಪ್ಪುನೇರಳೆ ತೋಟಕ್ಕೆ ಬೆಳಗಿನ ಜಾವ ನೀರನ್ನು ಹಾಯಿಸಿದ ಸೊಪ್ಪನ್ನು ರಾತ್ರಿ ಹುಳುಗಳಿಗೆ ಬಳಸುವುದು ಹಾಗೂ ಸಾಯಂಕಾಲ ನೀರನ್ನು ಹಾಯಿಸಿದ ತೋಟದ ಸೊಪ್ಪನ್ನು ಬೆಳಿಗ್ಗೆ ನೀಡುವುದರಿಂದ ಹುಳುಗಳಿಗೆ ತಾಜಾ ಸೊಪ್ಪನ್ನು ನೀಡಬಹುದು. ಸೊಪ್ಪನ್ನು ಒದ್ದೆ ಗೋಣಿ ತಾಟಿನಿಂದ ಮುಚ್ಚಬೇಕು. ಕಿಟಕಿ ಬಾಗಿಲುಗಳನ್ನು ತೆರೆದಿರಿಸಿ ಅವುಗಳಿಗೆ ಗೋಣಿ ತಾಟು ಹಾಕಿ ನೀರು ಸಿಂಪಡಿಸಬೇಕು. ಎದುರು ಬಿಸಿಲು ತಡೆಯುವಂತೆ ಹುಳು ಸಾಕಾಣಿಕೆ ಮನೆಯ ಮುಂದೆ ಚಪ್ಪರ ಅವಶ್ಯವಾಗಿ ಹಾಕಬೇಕು. ಹುಳು ಸಾಕಾಣಿಕೆ ಮನೆಯಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಸಿ ಇಡುವುದರಿಂದ ಉಷ್ಣಾಂಶವನ್ನು ನಿಯಂತ್ರಿಸಬಹುದು. ಬೇಸಿಗೆಯಲ್ಲಿ ಹುಳು ಸಾಕಾಣಿಕಾ ಮನೆಯನ್ನು ಸುಣ್ಣದಿಂದ ಬಳಿಯುವುದರಿಂದ ಬ್ಯಾಕ್ಟೀರಿಯ ಹಾಗೂ ವೈರಾಣುಗಳಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ವಿವರಿಸಿದರು.
ರೇಷ್ಮೆ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ, ರೀಲಿಂಗ್ ವಿಭಾಗದ ಸಹಾಯಕ ನಿರ್ದೇಶಕ ಎಂ.ನರಸಿಂಹಮೂರ್ತಿ, ವಿಸ್ತರಣಾಧಿಕಾರಿಗಳಾದ ತಿಮ್ಮರಾಜು, ಅರಸು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಎರಡು ಅಂಗಡಿಗಳು ಭಸ್ಮ
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗಮಕೋಟೆ ಕ್ರಾಸ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಎರಡು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಶನಿವಾರ ಬೆಳಗಿನ ಜಾವ 4 ಗಂಟೆಯಲ್ಲಿ ನಡೆದಿದೆ.
ಜಂಗಮಕೋಟೆ ಕ್ರಾಸ್ಗೆ ಬೆಳಗಿನ ಜಾವ ಎರಡು ಭಾರಿ ಗಾತ್ರದ ಟ್ರಕ್ಕುಗಳು ಬೆಳಗಿನ ಜಾವ ಬಂದಿದ್ದು, 11 ಕೆ.ವಿ ವಿದ್ಯುತ್ ತಂತಿಗಳು ಟ್ರಕ್ಕುಗಳಿಗೆ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಅದರಡಿಯಿದ್ದ ತರಕಾರಿ ಮತ್ತು ಚಿಲ್ಲರೆ ಅಂಗಡಿಯು ಇದರಿಂದಾಗಿ ಸುಟ್ಟುಹೋಗಿವೆ. ಯಣಂಗೂರಿನ ನಾರಾಯಣಮ್ಮ ಎಂಬುವರಿಗೆ ಸೇರಿದ ತರಕಾರಿ ಅಂಗಡಿ ಸುಟ್ಟು ಸುಮಾರು 25 ಸಾವಿರ ರೂಗಳಷ್ಟು ನಷ್ಟವಾಗಿದೆ. ದೊಡ್ಡಚೊಕ್ಕಂಡಹಳ್ಳಿಯ ಪ್ರಭಾಕರ್ ಎಂಬುವರಿಗೆ ಸೇರಿದ ಚಿಲ್ಲರೆ ಅಂಗಡಿ ನಾಶವಾಗಿದ್ದು, ಎರಡು ಲಕ್ಷ ರೂಗಳಷ್ಟು ನಷ್ಟವಾಗಿದೆ. ಅಂಗಡಿಯನ್ನು ಕಳೆದುಕೊಂಡವರು ಅದನ್ನೇ ನಂಬಿ ಜೀವನ ನಡೆಸುತ್ತಿದ್ದು, ಬೀದಿಗೆ ಬೀಳುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಷ್ಟ ಪರಿಹಾರವನ್ನು ನೀಡಿದಲ್ಲಿ ಜೀವನ ಮುಂದುವರೆಸಬಹುದೆಂದು ಅವರು ಹೇಳಿದ್ದಾರೆ.
ಪೊಲೀಸರು ಎರಡು ಟ್ರಕ್ಕುಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಜಂಗಮಕೋಟೆ ಹೊರವಲಯದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ತದಾನ ಹಾಗೂ ಉಚಿತ ಸಂಪೂರ್ಣ ಕಣ್ಣಿನ ತಪಾಸಣೆ ಶಿಬಿರ
ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯತಿಯ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ 30 ರ ಶನಿವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಸಂಪೂರ್ಣ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಭಾರತೀಯ ರೆಡ್ಕ್ರಾಸ್ ಸೊಸೈಟಿ, ಪಲಿಚೇರ್ಲು ಗ್ರಾಮ ಪಂಚಾಯತಿ, ಗ್ಲೋಬಲ್ ಐ ಫೌಂಡೇಷನ್, ರೋಟರಿ ಕ್ಲಬ್, ಸೋಮನಹಳ್ಳಿ, ಕುಂದಲಗುರ್ಕಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾಟಾಚಾರಕ್ಕೆ ನಡೆಸಿದ ಬರ ಅಧ್ಯಯನ
ಸ್ಥಳೀಯ ಶಾಸಕರಿಗೆ ಕನಿಷ್ಠ ಮಾಹಿತಿಯೂ ನೀಡದೇ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಬರ ಅಧ್ಯಯನ ಹೆಸರಲ್ಲಿ ಪ್ರವಾಸ ಮಾಡಿರುವ ರಾಜ್ಯ ಸಚಿವ ಸಂಪುಟ ಉಪಸಮಿತಿ ಸದಸ್ಯರ ತಂಡದ ಕಾರ್ಯವೈಖರಿ ಖಂಡನೀಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಘೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳೆದ ಮಂಗಳವಾರ ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ರಾಜ್ಯ ಸಚಿವ ಸಂಪುಟ ಉಪಸಮಿತಿ ಸದಸ್ಯರ ತಂಡ ಭೇಟಿ ನೀಡುವ ಬಗ್ಗೆ ಕನಿಷ್ಠ ವಾರದ ಮೊದಲು ಮಾಹಿತಿ ನೀಡಬೇಕು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಂಗಳವಾರ ಭೇಟಿ ನೀಡುವ ಬಗ್ಗೆ ಸೋಮವಾರ ಸಂಜೆಯವರೆಗೂ ಜಿಲ್ಲಾಡಳಿತಕ್ಕಾಗಲೀ ಯಾವುದೇ ತಾಲ್ಲೂಕು ಆಡಳಿತಕ್ಕಾಗಲೀ ಮಾಹಿತಿಯೇ ನೀಡದೇ ಬರ ಅಧ್ಯಯನ ನಡೆಸುವ ಅಗತ್ಯತೆಯಾದರೂ ಏನಿತ್ತು ಎಂದರು.
ಇನ್ನು ಬರ ಅಧ್ಯಯನದ ಹೆಸರಲ್ಲಿ ನಿಗಧಿಪಡಿಸಿದ್ದ ಗ್ರಾಮಗಳಿಗಾದರೂ ಅವರು ಸರಿಯಾಗಿ ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜಾನುವಾರುಗಳ ಮೇವಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿಲ್ಲ. ತಾಲ್ಲೂಕಿನ ದೊಡ್ಡದಾಸರಹಳ್ಳಿಗೆ ಭೇಟಿ ನೀಡಿ ಕೇವಲ ಎರಡೇ ನಿಮಷದಲ್ಲಿ ಅಲ್ಲಿಂದ ಚಿಂತಾಮಣಿ ಕಡೆ ಹೊರಟು ಹೋಗಿದ್ದು ಪಕ್ಕದ ನಾರಾಯಣದಾಸರಹಳ್ಳಿಯ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಅವರ ಬರುವಿಕೆಗಾಗಿ ಬೆಳಗ್ಗೆಯಿಂದ ಕಾದು ಕುಳಿತು ಕೊನೆಗೆ ಪ್ರತಿಭಟಿಸುವಂತಾಗಿದ್ದು ದುರದೃಷ್ಟಕರ.
ಬರಪರಿಹಾರ ವೀಕ್ಷಣೆ ಹೆಸರಲ್ಲಿ ಪ್ರವಾಸ ಮಾಡುವ ಬದಲಿಗೆ ಜಿಲ್ಲಾಧಿಕಾರಿಯಿಂದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳಬಹುದಿತ್ತು. ಆದರೆ ತಾವು ಬರ ಅಧ್ಯಯನದ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ, ತಮ್ಮ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಓಲೈಸುವ ಕೆಲಸಕ್ಕೆ ಮುಂದಾಗುವುದರೊಂದಿಗೆ ಕೀಳು ಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಕೇವಲ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿಯಾಗಲು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆಯೇ ಹೊರತು ಅವರಿಗೆ ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡು ಕೊಳ್ಳುವ ಇಚ್ಚಾಶಕ್ತಿಯಿಲ್ಲ. ಇನ್ನು ಸರ್ಕಾರದ ಸಚಿವರು ಸಾರ್ವಜನಿಕರಲ್ಲಿ ನಡೆದುಕೊಳ್ಳುವ ರೀತಿ ನೀತಿ ಅಸಹ್ಯ ಮೂಡಿಸುತ್ತದೆ. ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದರೆ ಅವರ ಸಮಸ್ಯೆ ಕೇಳುವ ಬದಲಿಗೆ ಜನರನ್ನು ಬೆದರಿಸುವುದು ನೋಡಿದರೆ ಇವರು ಜನಪರ ಸರ್ಕಾರದ ಸಚಿವರು ಎಂದೆನಿಸುವುದಿಲ್ಲ ಬದಲಿಗೆ ಜನವಿರೋಧಿಗಳು ಎಂಬುದು ರುಜುವಾತಾಗುತ್ತದೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ನಗರಸಭೆ ಸದಸ್ಯರಾದ ಅಫ್ಸರ್ಪಾಷ, ಲಕ್ಷ್ಮಯ್ಯ, ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರಾದ ಡಿ.ಬಿ.ವೆಂಕಟೇಶ್, ತಾದೂರು ರಘು, ಶ್ರೀಧರ್, ಶ್ರೀನಾಥ, ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

