Home Blog Page 470

ಶಿಡ್ಲಘಟ್ಟ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ

0

ತಾಲ್ಲೂಕಿನ ಈ.ತಿಮ್ಮಸಂದ್ರ ವ್ಯಾಪ್ತಿಯ ನಲ್ಲಸಾನಿಕೆರೆ, ರಾಜಸಾನಿಕೆರೆ ಹಾಗೂ ರಾಮಸಮುದ್ರ ಕೆರೆಗೆ ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಮನೋರಮಾ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಸಾದಲಿ ಹೋಬಳಿಯ ಸುಮಾರು ೫೦ ಗ್ರಾಮಗಳಿಗೆ ಮತ್ತು ಶಿಡ್ಲಘಟ್ಟಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸ್ಥಳ ಪರಿಶೀಲನೆ ನಡೆಸಿದರು.
ಕಳೆದ ವರ್ಷ ನವೆಂಬರ್ 6 ರಂದು ಎಸ್.ವೆಂಕಟಾಪುರದ ಬಳಿ- ಕೋಡಿ ಹರಿದಿದ್ದ ನಲ್ಲಸಾನಿಕೆರೆಯಲ್ಲಿ ಬಾಗಿಣವನ್ನು ಅರ್ಪಿಸಿದ್ದ ಶಾಸಕ ಎಂ.ರಾಜಣ್ಣ, ಏಳು ಬೆಟ್ಟಗಳ ಸಾಲಿನಿಂದ ಹರಿದು ಬರುವ ನೀರು ಮೂರು ಕೆರೆಗಳನ್ನು ತುಂಬಿಸುತ್ತದೆ. ನಲ್ಲಕೊಂಡಲು ಎಂದು ಕರೆಯುವ ಬೆಟ್ಟಗಳ ಸಾಲಿನಿಂದ ಹರಿದು ಬರುವ ನೀರನ್ನು ಹಿಡಿದಿಡಲು ಹಿಂದಿನವರು ಕೆರೆಗಳನ್ನು ನಿರ್ಮಿಸಿದ್ದಾರೆ. ಈ ಭಾಗದಲ್ಲಿ ನೀರಾವರಿ ತಜ್ಞರೊಂದಿಗೆ ಸ್ಥಳಪರಿಶಿಲನೆ ನಡೆಸಿ ಇನ್ನಷ್ಟು ನೀರನ್ನು ಕ್ರೂಡೀಕರಿಸುವ ಪ್ರಯತ್ನ ನಡೆಯಬೇಕು. ಅಧಿಕಾರಿಗಳಿಗೆ ಈ ಬಗ್ಗೆ ವರದಿ ತಯಾರಿಸಲು ಸೂಚಿಸುತ್ತೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ತಿಳಿಸುತ್ತೇನೆ. ಇಲ್ಲಿ ಶೇಖರಿಸುವ ನೀರಿನಿಂದ ತಾಲ್ಲೂಕಿನ ಒಂದಷ್ಟು ಭಾಗಕ್ಕೆ ಅನುಕೂಲಕರವಾಗುತ್ತದೆ. ನೀರಿನ ತೊಂದರೆ ತಪ್ಪುತ್ತದೆ ಎಂದು ಹೇಳಿದ್ದರು.
ಅದರಂತೆ ಜಿಲ್ಲಾಧಿಕಾರಿಗಳೊಂದಿಗೆ ಎಂಜಿನಿಯರ್ಗಳ ತಂಡದೊಂದಿಗೆ ಆಗಮಿಸಿದ್ದ ಶಾಸಕ ಎಂ.ರಾಜಣ್ಣ ಮುಂದೆ ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಹಲವಾರು ಗ್ರಾಮಗಳ ನೀರಿನ ಬವಣೆಯನ್ನು ನೀಗಿಸಲು ದೂರದೃಷ್ಟಿಯುಳ್ಳ ಯೋಜನೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಈ ಕೆರೆಗಳ ಜಲಾವೃತ ಪ್ರದೇಶ ಮತ್ತು ಕೆರೆಯ ಅಂಗಳವು ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿದ್ದು, ಕೆರೆಗಳಿಗೆ ಯಾವುದೇ ಕಲುಷಿತನೀರು ಹರಿದು ಬರುವ ಸಾದ್ಯತೆ ಇರುವುದಿಲ್ಲ. ಆದುದರಿಂದ ಕುಡಿಯುವ ನೀರನ್ನು ಶೇಖರಣೆ ಮಾಡಲು ಯೋಗ್ಯವಾಗಿರುತ್ತದೆ. ಈ ಕೆರೆಗಳ ಏರಿಯನ್ನು ಎತ್ತರಿಸಿ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿದಲ್ಲಿ ಸಾದಲಿ ಹೋಬಳಿಯ ಸುಮಾರು ೫೦ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಿದೆ. ಅಗತ್ಯ ಅನುವುಗಳೊಂದಿಗೆ ಅಂದಾಜುಪಟ್ಟಿಯನ್ನು ತಯಾರಿಸಿ ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಕೆರೆಗಳ ಅಂಗಳದ ಒತ್ತುವರಿ ತೆರವುಗೊಳಿಸುವುದು ಮತ್ತು ಪೋಷಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರವಾಗಿ ಯೋಜನೆ ಸಿದ್ಧಪಡಿಸಲು ಸೂಚಿಸಿದರು.
ನಂತರ ತಾಲ್ಲೂಕಿನ ರಾಮಸಮುದ್ರ ಕೆರೆಗೆ ಭೇಟಿ ನೀಡಿ, ಪರಿವೀಕ್ಷಿಸಿ, ಈ ಕೆರೆಯು ಕುಡಿಯುವ ನೀರನ್ನು ಶೇಖರಣೆ ಮಾಡಲು ಯೋಗ್ಯವಾಗಿದೆ. ಈ ಕೆರೆಯಲ್ಲಿ ಶೇಖರಣೆಯಾಗುವ ನೀರನ್ನು ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಅನುವುಗಳೊಂದಿಗೆ ಅಂದಾಜುಪಟ್ಟಿಯನ್ನು ತಯಾರಿಸಲು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಹಶೀಲ್ದಾರ್ ಮನೋರಮಾ, ಶಾಸಕ ಎಂ.ರಾಜಣ್ಣ, ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರಸಿಂಹಸ್ವಾಮಿ, ಸಣ್ಣ ನೀರಾವರಿ ಉಪವಿಭಾಗದ ಸಹಾಯಕ ಎಂಜಿನಿಯರ್ ಕೆ.ಎನ್.ಕೀರ್ತಿ, ಕಿರಿಯ ಎಂಜಿನಿಯರ್ ಎಚ್.ಎಸ್.ಲತಾ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಶಿವಾ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸೂಳೆಕೆರೆಗಳು ಮತ್ತು ಪರಂಪರಾಗತ ಮರ: ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರದಿಂದ ಸಾದಲಿಗೆ ಹೋಗುವ ಮಾರ್ಗದಲ್ಲಿ ಸೂಳೆಕೆರೆಗಳೆಂದೇ ಪ್ರಸಿದ್ಧವಾದ ಮೂರು ಕೆರೆಗಳು ಕಾಣಸಿಗುತ್ತವೆ. ಅದರ ಸುತ್ತ ಆವರಿಸಿರುವ ಏಳು ಬೆಟ್ಟಗಳನ್ನು ನಲ್ಲಕೊಂಡಲು ಎಂದು ಕರೆಯುತ್ತಾರೆ. ಕಪ್ಪುಬಣ್ಣದ ಜಡೆಯನ್ನು ಹೆಣೆದಂತೆ ಅಥವಾ ಬೆಂಕಿಯಿಂದ ಸುಟ್ಟು ಕರಕಲಾದಂತೆ ಕಾಣುವ ಕಪ್ಪು ಬಣ್ಣದ ಕಲ್ಲುಗಳು ಈ ಬೆಟ್ಟಗಳ ಮೇಲೆ ಇರುವುದರಿಂದ ಇವಕ್ಕೆ ನಲ್ಲಕೊಂಡಲು ಎಂಬ ಹೆಸರು ಬಂದಿದೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಅವು ಕರೆಯಲ್ಪಡುತ್ತವೆ.
ಮೂವರೂ ವೇಶ್ಯೆಯರು ಅಕ್ಕತಂಗಿಯರಾಗಿದ್ದು ತಾವು ಗಳಿಸಿದ ಹಣ ಜನಸಾಮಾನ್ಯರ ಬದುಕಿಗೆ ಸದ್ವಿನಿಯೋಗ ಆಗಲೆಂದು ಕೆರೆಗಳನ್ನು ನಿರ್ಮಿಸಿದ್ದಾರೆ. ನಲ್ಲಸಾನಿಕೆರೆಗಿಂತ ಕೊಂಚ ಮೇಲ್ಭಾಗದಲ್ಲಿ ರಾಜಸಾನಿ ಕೆರೆಯಿದೆ. ಇದಕ್ಕಿಂತಲೂ ಕೊಂಚ ಮೇಲ್ಭಾಗದಲ್ಲಿ ತಿಪ್ಪಸಾನಿ ಕೆರೆಯಿದೆ. ಈ ಮೂರೂ ಕೆರೆಗಳು ಈಗಲೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಹಲವಾರು ಹಳ್ಳಿಗಳ ಜನರಿಗೆ ವರದಾನವಾಗಿದ್ದು, ಕೃಷಿಗೆ ನೀರನ್ನು ಒದಗಿಸುತ್ತಿವೆ.
ಕರ್ನಾಟಕ ಜೀವ ವೈವಿದ್ಯ ಮಂಡಳಿಯು ‘ಪರಂಪರಾಗತ ಮರಗಳು’(ಹೆರಿಟೇಜ್ ಟ್ರೀಸ್) ಎಂದು ಜೈವಿಕ ವಿಜ್ಞಾನ ವೈವಿದ್ಯ ಕಾಯ್ದೆಯಡಿ ರಾಜ್ಯದ ಹತ್ತು ಮರಗಳನ್ನು ಘೋಷಿಸಿದ್ದು, ಈ ಹತ್ತು ಪರಂಪರಾಗತ ಮರಗಳ ಪೈಕಿ ತಿಪ್ಪಸಾನಿ ಕೆರೆ ಏರಿಯ ಮೇಲಿರುವ ೨೦೦ ವರ್ಷಕ್ಕೂ ಹಳೆಯದಾದ ಬೇವಿನ ಮರವೂ ಸೇರಿದೆ.

ನಿಧನ ವಾರ್ತೆ

0

ನಗರದ ದೇಶದಪೇಟೆ ನಿವಾಸಿ ನಿವೃತ್ತ ಶಿಕ್ಷಕ ಬಿ.ಎನ್.ಚಂದ್ರಪ್ಪ(78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ ವೀರಶೈವ ರುದ್ರಭೂಮಿಯಲ್ಲಿ ನಡೆಸಲಾಯಿತು.
ಬಿ.ಎನ್.ಸಿ ಮೇಸ್ಟ್ರು ಎಂದೇ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಇವರು ಚಿರಪರಿಚಿರು. ಇವರು ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಮೇಲೂರು, ಪಿಯುಸಿ ಬೋರ್ಡ್, ಜ್ಯೂನಿಯರ್ ಕಾಲೇಜು, ಗಂಜಿಗುಂಟೆ ಮತ್ತು ಚೀಮಂಗಲದಲ್ಲಿ ಹೈಸ್ಕೂಲ್ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಇವರ ಶಿಷ್ಯರಲ್ಲಿ ಮೂವರು ಐಎಎಸ್, ೫ ಕೆಎಎಸ್ ಮತ್ತು ಒಬ್ಬರು ಐಪಿಎಸ್ ಆಗಿರುವರು.
೧೯೬೮ರಲ್ಲಿ ಕರ್ನಾಟಕ ಯುವಜನ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಗಣೇಶೋತ್ಸವ ಹಾಗೂ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾಜ್ಯ ಮಟ್ಟದ ಹೆಸರಾಂತ ಕಲಾವಿದರನ್ನು ಕರೆಸಿ ನಗರದಲ್ಲಿ ರಂಗಭೂಮಿ ಕಲೆ ಬೆಳೆಯಲು ಶ್ರಮಿಸಿರುವರು. ತಾಲ್ಲೂಕಿನಾದ್ಯಂತ ಥಿಯೋಸೋಫಿಕಲ್ ಸೊಸೈಟಿಯ ಮೂಲಕ ಮಾನಸಿಕ ಸದೃಢತೆಗಾಗಿ ಹಲವಾರು ಶಿಬಿರಗಳನ್ನು ಆಯೋಜಿಸಿದ್ದಾರೆ. ಬಿ.ಎನ್.ಸಿ ಮೇಸ್ಟ್ರ ಜೀವಮಾನ ಸಾಧನೆಯನ್ನು ಗುರುತಿಸಿ 2011ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ದ್ವಿತೀಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.
ಶಾಸಕ ಎಂ.ರಾಜಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ಮತ್ತಿತರರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಗ್ರಾಮೀಣ ಪ್ರದೇಶದ ಕಡೆ ಸಾಹಿತ್ಯ ಪರಿಷತ್ತನ್ನು ಪರಿಚಯಿಸಿದ್ದರು ಹಾಲಂಬಿ

0

ಕನ್ನಡದ ಸೇವೆಯೊಂದಿಗೆ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದ ಕಡೆ ಸಾಹಿತ್ಯ ಪರಿಷತ್ತನ್ನು ಪರಿಚಯಿಸಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಹಾಗೂ ದೊರೆತ ಅವಧಿಯಲ್ಲಿ ಹಲವಾರು ಸಮ್ಮೇಳನಗಳನ್ನು ಆಯೋಜಿಸಿದ ಕೀರ್ತಿ ಹಾಲಂಬಿಯವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ಗ್ರಾಮ ಪಂಚಾಯತಿ, ಮೇಲೂರು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಹಾಗೂ ತಾಲ್ಲೂಕು ಕ.ಸಾ.ಪ ವತಿಯಿಂದ ಆಯೀಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪುಂಡಲಿಕ ಹಾಲಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡದ ಬಗ್ಗೆ ಅಪಾರ ಚಿಂತನೆವುಳ್ಳ ವ್ಯಕ್ತಿ ವಿಧಿವಶವಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮಾತನಾಡಿ, ನಾಡು ನುಡಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಾಲಂಬಿ ಅವರ ಅಗಲಿಕೆಯಿಂದ ಕನ್ನಡ ನಾಡಿಗೆ ಅಪಾರ ನಷ್ಟವುಂಟಾಗಿದೆ ಎಂದು ವಿಷಾದಿಸಿದರು.
ಶಿಕ್ಷಕ ಎಂ.ಸೀನಪ್ಪ, ಎಸ್.ಆರ್.ಶ್ರೀನಿವಾಸಮೂರ್ತಿ ಪುಂಡಲಿಕ ಹಾಲಂಬಿ ಅವರ ಕುರಿತು ಮಾತನಾಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ, ಧರ್ಮೇಂದ್ರ, ಎಸ್.ಆರ್.ಶ್ರೀನಿವಾಸ್, ಸುದರ್ಶನ್, ಎಸ್.ಪಿ.ಆನಂದ್, ಶಿವಾನಂದ್, ಚರಣ್, ರಾಘವೇಂದ್ರ, ಎಂ.ಶ್ರೀನಿವಾಸ್, ರೂಪೇಶ್, ಸುಧೀರ್, ಎಂ.ಆರ್.ಸುರೇಶ್, ಗಂಗಾಧರಸ್ವಾಮಿ, ಉಮೇಶ್, ಪ್ರಕಾಶ್, ಜನಾರ್ಧನ್, ದ್ಯಾವಪ್ಪ, ಚಂದ್ರೇಗೌಡ, ಶ್ರೀನಿವಾಸ್, ತ್ಯಾಗರಾಜ್, ಸುರೇಶ್ ರಾಜ್, ಗೋಪಾಲ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಲಂಕೃತವಾಗಿದ್ದ ದೀಪಗಳನ್ನು ಹೊತ್ತು ಮಳ್ಳೂರಿನಿಂದ ಮೇಲೂರಿಗೆ ಆಗಮಿಸಿದ ಮಹಿಳೆಯರು

0

ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಗಂಗಾದೇವಿಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ವಾಡಿಕೆಯಂತೆ ಈ ವರ್ಷವೂ ಕೂಡಾ ಜಾತ್ರಾ ಮಹೋತ್ಸವದ ಅಂಗವಾಗಿ ತಯಾರಿಸಲಾಗಿದ್ದ ವಿವಿಧ ಬಗೆಯ ಅಲಂಕೃತವಾಗಿದ್ದ ದೀಪಗಳನ್ನು ಹೊತ್ತು ನಡೆದ, ಮಹಿಳೆಯರು ಹಾಗೂ ಯುವತಿಯರು, ನೆರೆಯ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಬೆಳಗಿದರು.
ಮಳೆ ಬರುವ ನಂಬಿಕೆ: ಪ್ರತಿವರ್ಷವೂ ಗಂಗಾದೇವಿಯ ಜಾತ್ರೆಯ ಅಂಗವಾಗಿ ದೀಪೋತ್ಸವಗಳನ್ನು ಮಾಡಿದಾಗ ಈ ಭಾಗದಲ್ಲಿ ಉತ್ತಮವಾದ ಮಳೆಯಾಗುವುದರ ಜೊತೆಗೆ ಇತಿಹಾಸ ಪ್ರಸಿದ್ದ ಗಂಗಮ್ಮನ ಕುಂಟೆಯು ಸಂಪೂರ್ಣವಾಗಿ ತುಂಬಿ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದರ ಜೊತೆಗೆ ಕಾಲ ಕಾಲಕ್ಕೆ ಮಳೆಯಾಗುವ ನಂಬಿಕೆಯಿದೆ, ಒಂದು ವೇಳೆ ಗ್ರಾಮದಲ್ಲಿ ದೀಪಗಳನ್ನು ಮಾಡಿ, ಮೇಲೂರಿನ ಗಂಗಾದೇವಿ ದೇವಾಲಯಕ್ಕೆ ಹರಕೆ ಸಲ್ಲಿಸದಿದ್ದರೆ, ಅಂತಹ ವರ್ಷದಲ್ಲಿ ಮಳೆಯು ಕಡಿಮೆ, ತೀವ್ರ ಬರಗಾಲವನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಆಚರಣೆಯನ್ನು ಪ್ರತಿವರ್ಷ ಮಾಡಿಕೊಂಡು ಬರುತ್ತಿದ್ದೇವೆ ಎಂದು ಗ್ರಾಮದ ಮುಖಂಡ ಕದಿರಪ್ಪ ತಿಳಿಸಿದರು.
ಮೇಲೂರು ಗ್ರಾಮಕ್ಕೆ ಆಗಮಿಸಿದ ಮಳ್ಳೂರಿನ ದೀಪಗಳನ್ನು ಹೊತ್ತು ತಂದವರನ್ನು ಗ್ರಾಮ ಪಂಚಾಯತಿ ಸದಸ್ಯ ಕೆ.ಮಂಜುನಾಥ್ ನೇತೃತ್ವದಲ್ಲಿ ಮಜ್ಜಿಗೆ, ಪಾನಕ, ತಿಂಡಿ, ತಿನಿಸುಗಳನ್ನು ನೀಡಿ ಸ್ವಾಗತಿಸಲಾಯಿತು.
ತಾಲ್ಲೂಕು ಪಂಚಾಯತಿ ಸದಸ್ಯ ಮುನಿಯಪ್ಪ, ದಲಿತ ಮುಖಂಡರುಗಳಾದ ಸಿ.ಎಂ.ಮುನಿಯಪ್ಪ, ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್, ವೇಣುಗೋಪಾಲ್, ಅಶೋಕ್, ಕೇಶವ ಮುಂತಾದವರು ದೀಪಗಳೊಂದಿಗೆ ಭಾಗವಹಿಸಿದ್ದರು.

ಬರ ಅಧ್ಯಯನ ತಂಡದ ವಿರುದ್ಧ ಪ್ರತಿಭಟನೆ

0

ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮಕ್ಕೆ ಭೇಟಿ ನೀಡದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್ ನೇತೃತ್ವದ ಬರ ಅಧ್ಯಯನ ತಂಡ ಹೊರಟುಹೋಗಿದ್ದನ್ನು ಖಂಡಿಸಿ ರೈತಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಖಾಲಿ ಕೊಡಗಳನ್ನಿಟ್ಟು ರಸ್ತೆ ತಡೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ದೊಡ್ಡದಾಸರಹಳ್ಳಿ ಹಾಗೂ ನಾರಾಯಣದಾಸರಹಳ್ಳಿ ಗ್ರಾಮಗಳಲ್ಲಿ ಬರ ಅಧ್ಯಯನ ತಂಡ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು, ಮಧ್ಯಾಹ್ನ ೧೨ ಗಂಟೆಗೆ ತಾಲ್ಲೂಕಿಗೆ ಆಗಮಿಸಬೇಕಾಗಿದ್ದ ತಂಡಕ್ಕಾಗಿ ರೈತ ಮುಖಂಡರು, ನೂರಾರು ಸಂಖ್ಯೆಯಲ್ಲಿ ನಾಗರಿಕರು ಕಾದಿದ್ದರು. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಮೇವುಗಳ ಸಮಸ್ಯೆ, ಹೇಳಿಕೊಳ್ಳಲು ಕಾಯುತ್ತಿದ್ದರೂ, ಸುಮಾರು ೨ ಗಂಟೆಗೆ ಬಂದ ತಂಡ, ನೇರವಾಗಿ ದೊಡ್ಡದಾಸರಹಳ್ಳಿಗೆ ತೆರಳಿ ಅಲ್ಲಿನ ಜನರಿಂದ ಸಮಸ್ಯೆ ಆಲಿಸಿ, ಅಲ್ಲಿಂದ ನೇರವಾಗಿ ಚಿಂತಾಮಣಿಯ ಕಡೆಗೆ ತೆರಳಿದ್ದರಿಂದ ನೂರಾರು ಮಂದಿ ಜನರು, ರೈತ ಮುಖಂಡರು ನಿರಾಸೆಯಿಂದ ಬೇಸತ್ತು ಪ್ರತಿಭಟನೆ ನಡೆಸಿದರು.
‘ಹೆಂಗಸರು, ಕೂಲಿ ಕಾರ್ಮಿಕರು, ಸುತ್ತಮುತ್ತಲ ಗ್ರಾಮಸ್ಥರು ಹಲವಾರು ಮಂದಿ ಕೂಲಿಗೂ ಹೋಗದೇ, ತಮ್ಮ ಕಾಯಕವನ್ನು ಬಿಟ್ಟು ಜನಪ್ರತಿನಿಧಿಗಳು ದೇವಮಾನವರಂತೆ ಬಂದು ತಮ್ಮ ಸಮಸ್ಯೆಗಳನ್ನು ನಿವಾರಿಸುವರೆಂದು ಕಾದಿದ್ದರು. ನಾರಾಯಣದಾಸರಹಳ್ಳಿಯಲ್ಲಿ ಕುಡಿಯಲು ನೀರಿಲ್ಲ. ಖಾಸಗಿ ಕೊಳವೆ ಬಾವಿಯಿಂದ ಕೊಡುವ ನೀರಷ್ಟೆ ಗ್ರಾಮಸ್ಥರಿಗೆ ಆಧಾರ. ದೊಡ್ಡದಾಸರಹಳ್ಳಿಗೆ ಬಂದು ನೀರು ಚಿಮ್ಮುತ್ತಿರುವ ಕೊಳವೆ ಬಾವಿಯ ನೀರನ್ನು ಕುಡಿದು ಹಿಂದಿರುಗಿದ್ದಾರೆ. ಅಲ್ಲಿಂದ ಕೂಗಳತೆ ದೂರದಲ್ಲಿರುವ ನಾರಾಯಣದಾಸರಹಳ್ಳಿಗೆ ಬಂದಿಲ್ಲ. ಇವರ ಕಾಟಾಚಾರದ ಅಧ್ಯಯನಕ್ಕಾಗಿ ಜನರ ಸಮಯ ಮತ್ತು ಹಣವನ್ನು ಪೋಲು ಮಾಡಿದ್ದಾರೆ. ಈ ರೀತಿಯ ಕಾಟಾಚಾರದ ಬರವೀಕ್ಷಣೆಯ ಬದಲು ಜಿಲ್ಲಾಡಳಿತದಿಂದ ವರದಿ ತರಿಸಿಕೊಳ್ಳಬಹುದಿತ್ತಲ್ಲವೆ’ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದ ಪೊಲೀಸರು ಅವರ ಮನವಿ ಪತ್ರವನ್ನು ನೀಡುವಂತೆ ಮನವೊಲಿಸಿ ಅವರಿಂದ ಮನವಿ ಸ್ವೀಕರಿಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ, ಅಶ್ವತ್ಥ್, ಬೈರಸಂದ್ರ ಶ್ರೀಮೂರ್ತಿ, ಆನೂರು ದೇವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸರ್ಕಾರ ನೀರು ಮತ್ತು ಮೇವಿನ ಬವಣೆಯನ್ನು ನೀಗಿಸಲಿದೆ

0

ಬರಗಾಲ ಪೀಡಿತ ಪ್ರದೇಶಗಳಲ್ಲಿನ ಜನರ ಕುಡಿಯುವ ನೀರು ಹಾಗೂ ಮೇವುಗಳ ಬವಣೆಯನ್ನು ನೀಗಿಸುವ ಸಲುವಾಗಿ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ಬರಗಾಲ ಅಧ್ಯಯನದ ಸಲುವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ಜಿಲ್ಲೆಯ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ತಾಲ್ಲೂಕುಗಳಿಗೆ ಬರಗಾಲದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದು, ಶಿಡ್ಲಘಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ, ಈ ಬಗ್ಗೆ ಅಧಿಕಾರಿಗಳಿಂದ ಅಗತ್ಯವಾಗಿರುವ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ, ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಅಗತ್ಯವಾಗಿರುವ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ, ಇಲ್ಲಿನ ಜನರು ಧೃತಿಗೆಡಬಾರದು ಎಂದರು.

ಗ್ರಾಮಸ್ಥರನ್ನು ಮಾತನಾಡಿ ಸಮಸ್ಯೆಗಳನ್ನು ಆಲಿಸಿದ ಬರಗಾಲ ಅಧ್ಯಯನದ ತಂಡ
ಗ್ರಾಮಸ್ಥರನ್ನು ಮಾತನಾಡಿ ಸಮಸ್ಯೆಗಳನ್ನು ಆಲಿಸಿದ ಬರಗಾಲ ಅಧ್ಯಯನದ ತಂಡ

ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ನಗರಕ್ಕೆ ಆಗಮಿಸುವ ಮಾರ್ಗಮಧ್ಯೆ ಹಂಡಿಗನಾಳ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಆಗಮಿಸಿದ ಸಚಿವರುಗಳ ತಂಡವನ್ನು ಹಾರ ತುರಾಯಿಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು, ಈ ವೇಳೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಂದ ತಾಲ್ಲೂಕಿನ ಚಿತ್ರಣದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಂಕಿಅಂಶಗಳನ್ನು ಪಡೆದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ, ತಾಲ್ಲೂಕಿನಲ್ಲಿನ ಬರಗಾಲವನ್ನು ನೀಗಿಸಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರು.
ನಾರಾಯಣದಾಸರಹಳ್ಳಿಗೆ ಹೋಗದ ಸಚಿವರ ತಂಡ: ತಾಲ್ಲೂಕಿನಲ್ಲಿ ದೊಡ್ಡದಾಸರಹಳ್ಳಿ ಹಾಗೂ ನಾರಾಯಣದಾಸರಹಳ್ಳಿ ಗ್ರಾಮಗಳಲ್ಲಿ ಬರ ಅಧ್ಯಯನ ತಂಡ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು, ಮಧ್ಯಾಹ್ನ ೧೨ ಗಂಟೆಗೆ ತಾಲ್ಲೂಕಿಗೆ ಆಗಮಿಸಬೇಕಾಗಿದ್ದ ತಂಡಕ್ಕಾಗಿ ರೈತ ಮುಖಂಡರು, ನೂರಾರು ಸಂಖ್ಯೆಯಲ್ಲಿ ನಾಗರಿಕರು ಕಾದಿದ್ದರು. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಮೇವುಗಳ ಸಮಸ್ಯೆ, ಹೇಳಿಕೊಳ್ಳಲು ಕಾಯುತ್ತಿದ್ದರಾದರೂ ಸುಮಾರು ೨ ಗಂಟೆಗೆ ಬಂದ ತಂಡ, ನೇರವಾಗಿ ದೊಡ್ಡದಾಸರಹಳ್ಳಿಗೆ ತೆರಳಿ ಅಲ್ಲಿನ ಜನರಿಂದ ಸಮಸ್ಯೆ ಆಲಿಸಿ, ಅಲ್ಲಿಂದ ನೇರವಾಗಿ ಚಿಂತಾಮಣಿಯ ಕಡೆಗೆ ತೆರಳಿದ್ದರಿಂದ ನೂರಾರು ಮಂದಿ ಜನರು, ರೈತ ಮುಖಂಡರು ನಿರಾಸೆಯಿಂದ ಹಿಂತಿರುಗಬೇಕಾಯಿತು.
ಕೆ.ಪಿ.ಸಿ.ಸಿ.ಅಧ್ಯಕ್ಷರಾಗುವಂತೆ ಕಾಂಗ್ರೆಸ್ ಮುಖಂಡರಿಂದ ಜೈಕಾರ: ಬರಗಾಲ ಅಧ್ಯಯನಕ್ಕೆ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಸಚಿವರುಗಳ ತಂಡ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ತಮ್ಮ ನಾಯಕ ವಿ.ಮುನಿಯಪ್ಪ ಸೇರಿದಂತೆ ಸಚಿವರುಗಳಿಗೆ ಜೈಕಾರಗಳನ್ನು ಕೂಗುವುದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಬೇಕು, ಎಂದು ಘೋಷಣೆಗಳನ್ನು ಕೂಗಿದರು.
ಕಂದಾಯ ಸಚಿವ ಶ್ರೀನಿವಾಸಪ್ರಸಾದ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಮಾಜಿ ಶಾಸಕ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯರಾದಸತೀಶ್, ಪಿ.ನಿರ್ಮಲಾಮುನಿರಾಜು, ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ಕೊನೆ ಉಸಿರುವವರೆಗೂ ಕನ್ನಡಪರ ಚಿಂತಕರಾಗಿದ್ದವರು ಹಾಲಂಬಿ

0

ಜಾತ್ಯತೀತ ಹಾಲಂಬಿ ಸದಾ ಸ್ಮರಣೀಯರು. ಕೊನೆ ಉಸಿರುವವರೆಗೂ ಕನ್ನಡಪರ ಚಿಂತಕರಾಗಿ, ಕನ್ನಡಿಗರ ಸೇವೆಯೇ ನಿಜ ಕಾಯಕವೆಂದು ನಂಬಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪುಂಡಲಿಕ ಹಾಲಂಬಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಕ.ಸಾ.ಪ ವತಿಯಿಂದ ಸೋಮವಾರ ಸಂಜೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ‘ನಾನು ಸಾಹಿತಿ ಅಲ್ಲದಿದ್ದರೂ ಸಾಹಿತ್ಯದ ಪರಿಚಾರಕ. ಕವಿ ಜಿ.ಎಸ್.ಎಸ್ ಅವರಿಂದ ಕನ್ನಡ ದೀಕ್ಷೆ ಪಡೆದ ಶಿಷ್ಯ ನಾನು’ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಹಾಲಂಬಿ ಪಾರದರ್ಶಕವಾಗಿ ಆಡಳಿತ ನಡೆಸಿದ ಪ್ರಾಮಾಣಿಕರು. ಜಾತಿಯ ಸೋಂಕು ತಗುಲದಂತೆ ಮೂರು ವರ್ಷ ಕ.ಸಾ.ಪ ಚುಕ್ಕಾಣಿ ಹಿಡಿದು ಅದರ ಅಧ್ಯಕ್ಷರಾಗಿ ಜನಪರ ಕೆಲಸ ಮಾಡಿದ ಮಾದರಿ ವ್ಯಕ್ತಿ. ತಮ್ಮ ಕಿಡ್ನಿಗಳು ನಿಷ್ಕ್ರಿಯವಾಗಿದ್ದರೂ ಡಯಾಲಿಸಿಸ್ ಮಾಡಿಸಿಕೊಂಡೇ ಮೂರೂವರೆ ವರ್ಷ ಕ.ಸಾ.ಪ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದರು. ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲೇ ಆಯ್ಕೆ ಮಾಡಿ ಪ್ರಜಾಪ್ರಭುತ್ವಕ್ಕೆ ತಲೆ ಬಾಗಿದ್ದರು. ಸಾಹಿತ್ಯಾಸಕ್ತರ ಮೆಚ್ಚುಗೆಗೂ ಅವರು ಪಾತ್ರರಾಗಿದ್ದರು ಎಂದು ಹೇಳಿದರು.
ನಮ್ಮ ತಾಲ್ಲೂಕಿನಲ್ಲಿ ಹಾಲಂಬಿಯವರ ಆದರ್ಶಗಳನ್ನು ಪರಿಪಾಲಿಸುತ್, ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಅರ್ಪಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ.ಸಾ.ಪ ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಮಾಜಿ ತಾಲ್ಲೂಕು ಅಧ್ಯಕ್ಷರಾದ ರೂಪಸಿ ರಮೇಶ್, ವಿ.ಕೃಷ್ಣ, ಕೃ.ನಾ.ಶ್ರೀ, ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ನಾರಾಯಣ ಕುಲಕರ್ಣಿ, ಕೆ.ಮಂಜುನಾಥ್ ಪುಂಡಲಿಕ ಹಾಲಂಬಿ ಅವರ ಕುರಿತು ಮಾತನಾಡಿದರು.
ಕ.ಸಾ.ಪ ಸದಸ್ಯರಾದ ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಭಾಸ್ಕರ್, ಜೆ.ಎಸ್.ವೆಂಕಟಸ್ವಾಮಿ, ಭಕ್ತರಹಳ್ಳಿ ಪ್ರತೀಶ್, ಕನ್ನಮಂಗಲ ಚಿಕ್ಕಾಂಜಿನಪ್ಪ, ಚಿಕ್ಕವೆಂಕಟರಾಯಪ್ಪ, ಮಾಧವರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಗರಸಭೆಯ ನಿರ್ಲಕ್ಷ

0

ಆಂಕರ್ ಪಾರ್ಟ್: ಶಿಡ್ಲಘಟ್ಟ ನಗರದ 2ನೇ ವಾರ್ಡಿನ ಮನೆಯೊಂದರ ಕುಡಿಯುವ ನೀರಿನ ಶೇಖರಣೆ ತೊಟ್ಟಿಗೆ ನಗರಸಭೆ ವತಿಯಿಂದ ಅಳವಡಿಸಿರುವ ನೀರಿನ ಕೊಳವೆ ಒಡೆದು ಚರಂಡಿ ನೀರು ಸರಬರಾಜು ಆಗುತ್ತಿದ್ದು ನಗರಸಭೆಯ ನಿರ್ಲಕ್ಷದ ವಿರುದ್ದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈ.ಓ: ನಗರದ 2ನೇ ವಾರ್ಡಿನ ನಿವಾಸಿ ಆಂಜಿನಪ್ಪ ಮನೆಯ ಕುಡಿಯುವ ನೀರಿನ ಶೇಖರಣೆ ತೊಟ್ಟಿಗೆ ಕಲುಷಿತ ಚರಂಡಿ ನೀರು ಸರಬರಾಜು ಆಗುತ್ತಿದ್ದು ಇದರ ಬಗ್ಗೆ ನಗರಸಭೆಗೆ ಮತ್ತು ವಾರ್ಡಿನ ಸದಸ್ಯರಿಗೆ ಮಾಹಿತಿ ಕೊಟ್ಟಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಮನೆಯಲ್ಲಿ ಎಲ್ಲಾ ತುಂಬಾ ಕೆಟ್ಟವಾಸನೆ ಬರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಎಂದು ದೂರಿದ ನಿವಾಸಿ ಆಂಜಿನಪ್ಪ ನಗರಸಭೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದರು.
ಈ ಭಾಗದಲ್ಲಿ ನೀರಿನ ಸಮಸ್ಯೆಯು ಹೆಚ್ಚಾಗಿದ್ದು ನೀರಿನ ಬವಣೆಯನ್ನು ನೀಗಿಸಬೇಕಾದ ನಗರಸಭೆಯು ಇಂತಹ ಘಟನೆಗಳು ನಡೆಯುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವದು ನಗರಸಭೆಯ ನಿರ್ಲಕ್ಷತನವನ್ನು ತೋರಿಸುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಬೈಟ್1: ಆಂಜಿನಪ್ಪ ಮನೆಯ ಮಾಲಿಕ.
ಬೈಟ್2: ಶೈಲಜ ಪಕ್ಕದ ಮನೆಯ ನಿವಾಸಿ.

ಹೂವಿನ ಕರಗ ಮಹೋತ್ಸವ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು, ಗ್ರಾಮಸ್ಥರು ಕರಗಕ್ಕೆ ಪೂಜೆ ಸಲ್ಲಿಸಿದರು.

ಪೊಲೀಸ್ ಠಾಣೆಯ ಮುಂದೆ ಹಕ್ಕಿ ಪಿಕ್ಕಿ ಜನರ ಪ್ರತಿಭಟನೆ

0

ರಸ್ತೆ ಕಾಮಗಾರಿಗೆ ಹೊಡೆದಿದ್ದ ಜಲ್ಲಿ ಕಲ್ಲುಗಳನ್ನು ರಾತ್ರೋ ರಾತ್ರಿ ಸಾಗಾಣಿಕೆ ಮಾಡಲು ಮುಂದಾಗಿದ್ದ ಕ್ಯಾಸಗೆರೆ ಗ್ರಾಮದ ಕೆಲವರನ್ನು ಅಡ್ಡಿಪಡಿಸಿದ್ದರಿಂದ ಮಹಿಳೆಯರು ಸೇರಿದಂತೆ ಹಕ್ಕಿ ಪಿಕ್ಕಿ ಕಾಲೋನಿಯ ಗ್ರಾಮಸ್ಥರ ಮೇಲೆ ಹಲ್ಲೆನಡೆಸಿದ್ದಾರೆ. ಅವರ ಮೇಲೆ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಹಕ್ಕಿ-ಪಿಕ್ಕಿ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ಮೂಲಕ ಕ್ಯಾಸಗೆರೆ ಗ್ರಾಮದಿಂದ ಹಾದು ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಈ ರಸ್ತೆಯನ್ನು ದುರಸ್ಥಿಗೊಳಿಸಲು ಜಲ್ಲಿಕಲ್ಲುಗಳನ್ನು ಹೊಡೆದಿದ್ದರು. ಕ್ಯಾಸಗೆರೆ ಗ್ರಾಮದ ಕೆಲವು ಮಂದಿ ರಾತ್ರಿಯಲ್ಲಿ ಬಂದು ಜಲ್ಲಿಕಲ್ಲುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾಗ, ಯಾವುದೇ ಕಾರಣಕ್ಕೂ ಜಲ್ಲಿಯನ್ನು ಬೇರೆ ಕಡೆಗೆ ಸಾಗಿಸಲು ನಾವು ಅವಕಾಶ ಕೊಡುವುದಿಲ್ಲವೆಂದು ಅಡ್ಡಿಪಡಿಸಿದ್ದರಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ಯಾಸಗೆರೆ ಗ್ರಾಮದ ಮೂಲಕ ಹಾದುಹೋಗಲು ಅವಕಾಶ ನೀಡದೇ ವಿನಾಕಾರಣ, ತೊಂದರೆ ಕೊಡುತ್ತಿದ್ದಾರೆ, ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾದರೂ ಪೊಲೀಸರು ಕಳೆದ ಮೂರು ದಿನಗಳಿಂದ ದೂರುಗಳನ್ನು ಸ್ವೀಕಾರ ಮಾಡುತ್ತಿಲ್ಲ. ಈ ಬಗ್ಗೆ ಸಬ್ಇನ್ಸ್ಪೆಕ್ಟರ್ ಅವರು, ನಾನು ರಜೆಯಲ್ಲಿದ್ದೇನೆ ಬಂದು ಮಾತನಾಡುತ್ತೇನೆ ದೂರು ಸ್ವೀಕಾರ ಮಾಡಬೇಡಿ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ರಾಮ್ಬಾಬು, ಶೋಕ್ಬಾಬು, ಜಯರಾಮ್, ರಾಜಮ್ಮ, ಪ್ರಮೀಳಾ, ಸ್ನೇಹಾ, ನಂದಿನಿ, ಶ್ಯಾಮಲಾ, ಕೋಟೇಶ್, ಶ್ರೀನಿವಾಸ್ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

ನಾಡಿನಾದ್ಯಂತ ಹೆಸರು ಮಾಡಿದ್ದ ದೇವರಮಳ್ಳೂರು ಕಳಸ ನೃತ್ಯದ ಮೆಲುಕುಗಳು

0

‘ಪಂಡರಿ ಭಜನೆಗಳು, ಕೋಲಾಟದ ಪದಗಳು, ಕೋಲಾಟದ ವಿಧಗಳು ಅದರಲ್ಲಿ ಬಳಸುವ ಹಾಡುಗಳು, ಎಲ್ಲವನ್ನೂ ಬರೆದಿಟ್ಟಿದ್ದೇನೆ. ಈಗಲೂ ಕಲಿಯಲು ಆಸಕ್ತರಿಗೆ ಕಲಿಸಲು ಸಿದ್ಧನಿದ್ದೇನೆ. ನನ್ನ ನಂತರವೂ ಕಲೆಯು ಉಳಿಯಬೇಕೆಂಬುದು ನನ್ನ ಅಭಿಲಾಷೆ’ ಎನ್ನುತ್ತಾರೆ 74 ವರ್ಷ ವಯಸ್ಸಿನ ದೇವರಮಳ್ಳೂರು ಎ.ವೆಂಕೋಬರಾವ್.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಪಂಡರಿ ಭಜನೆ ತಂಡ ಎಂಭತ್ತರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿತ್ತು. ಆ ಕಲಾ ತಂಡದೊಂದಿಗೆ ನಾಡಿನ ಮೂಲೆ ಮೂಲೆ ಸುತ್ತಿದವರು ದೇವರಮಳ್ಳೂರು ಎ.ವೆಂಕೋಬರಾವ್.
ವೃತ್ತಿಯಲ್ಲಿ ಸರ್ಕಾರಿ ಶಿಕ್ಷರಾಗಿ 40 ವರ್ಷ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ವೆಂಕೋಬರಾವ್ ಅವರದ್ದು ಕಲಾವಿದ ಮನಸ್ಸು. ಗ್ರಾಮದಲ್ಲಿ ಪಂಡರಿ ಭಜನೆಯನ್ನು ಆಸಕ್ತ ಕಲಾವಿದರು ಹಾಗೂ ಕಲಾ ಪೋಷಕರೊಂದಿಗೆ ಸೇರಿ ಪ್ರಾರಂಭಿಸಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘದ ಕಳಸ ನೃತ್ಯ 1991ರ ದಸರಾ ಟ್ಯಾಬ್ಲೋದೊಡನೆ.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘದ ಕಳಸ ನೃತ್ಯ 1991ರ ದಸರಾ ಟ್ಯಾಬ್ಲೋದೊಡನೆ.

ದೇವರಮಳ್ಳೂರು ಗ್ರಾಮದಲ್ಲಿ 1980 ರಲ್ಲಿ ಈ ಗ್ರಾಮೀಣ ಕಲೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಎಂ.ಬಚ್ಚಪ್ಪನವರು ಅಧ್ಯಕ್ಷರಾಗಿ, ಎ.ವೆಂಕೋಬರಾವ್ ಕಾರ್ಯದರ್ಶಿಯಾಗಿ, ಶೆಟ್ಟಳ್ಳಪ್ಪ ಭಜನೆ ಕಲಿಸುವ ಗುರುಗಳಾಗಿ, ಹಾರ್ಮೋನಿಯಂ ನುಡಿಸುವ ಹನುಮಂತರಾಯಪ್ಪ, ತಬಲಾ ನಾರಾಯಣಾಚಾರಿ, ತಾಳದ ವೆಂಕಟೇಶಪ್ಪ, ಸಹಾಯಕರನ್ನಾಗಿ ವೆಂಕಟೇಶಪ್ಪ ಮತ್ತು ಪಾಪಣ್ಣ ಅವರನ್ನು ಆಯ್ಕೆ ಮಾಡಿಕೊಂಡರು.
ಹಿಂದಿನ ಕಾಲದಲ್ಲಿ ಪಾಂಡುರಂಗನ ಭಕ್ತರು ಪಾಂಡುರಂಗನ ದರ್ಶನಾರ್ಥವಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗುವ ಸ್ಥಳಗಳಲ್ಲಿ ನೃತ್ಯ ರೂಪದಲ್ಲಿ ಪಾಂಡುರಂಗನನ್ನು ಪ್ರಾರ್ಥಿಸುತ್ತಾ ತಮ್ಮ ಆಯಾಸ ಪರಿಹರಿಸಿಕೊಳ್ಳುತ್ತಿದ್ದರು. ಈ ರೀತಿಯಾಗಿ ಹುಟ್ಟಿದ್ದೇ ಪಂಡರಿ ಭಜನೆ.
ಕಾವಿಬಣ್ಣದ ಅಂಗಿ ಬಿಳಿ ದೋತ್ರವನ್ನುಟ್ಟು ತಲೆಗೆ ಟೋಪಿಯನ್ನಿಟ್ಟುಕೊಂಡು ಕೈಯಲ್ಲಿ ಬಾವುಟವನ್ನಿಡಿದು ವೃತ್ತಾಕಾರದಲ್ಲಿ ನೃತ್ಯ ಮಾಡುತ್ತಾ ಪಾಂಡುರಂಗನ ಭಜನೆ ಮಾಡುವುದು ಪಂಡರಿ ಭಜನೆಯ ಮೂಲವಾಗಿತ್ತು. ಆದರೆ ತಾಲ್ಲೂಕಿನ ದೇವರಮಳ್ಳೂರಿನ ಶ್ರೀ ಕೋದಂಡರಾಮಸ್ವಾಮಿ ಮಕ್ಕಳ ಸಾಂಸ್ಕೃತಿಕ ಸಂಘದವರು ಈ ಕಲೆಗೆ ವಿನೂತರ ರೂಪವನ್ನು ಒದಗಿಸಿದ್ದರು. ಸಾಮಾನ್ಯವಾಗಿ ಪಂಡರೀಭಜನೆಯು ತೆಲುಗು ಭಾಷೆಯಲ್ಲಿರುತ್ತದೆ. ಅದನ್ನು ಎ.ವೆಂಕೋಬರಾವ್ ಕನ್ನಡ ಭಾಷೆಗೆ ಸೊಗಸಾಗಿ ಅನುವಾದಿಸಿದ್ದರು.
ಪ್ರಥಮವಾಗಿ ಗಣಪತಿ ಪ್ರಾರ್ಥನೆಯೊಂದಿಗೆ ಭಜನೆ ನೃತ್ಯ ಆರಂಭಿಸುತ್ತಿದ್ದ ತಂಡವು ಗುರು ನಮಸ್ಕಾರ, ಶಾರದಾದೇವಿಗೆ ನಮನ, ನಂತರ ಜಂಡಾ ಕುಣಿತ, ಕೋಲಾಟ, ಸಾಲು ಕಳಸ, ಕಡೆಗೆ ಚಕ್ಕೆ ಕಳಸದೊಂದಿಗೆ ಕೃಷ್ಣಲೀಲೆ ಅಭಿನಯಿಸುತ್ತಿದ್ದರು. ಈ ನೃತ್ಯದ ವೇಳೆಯಲ್ಲಿ ಬಾಲೆಯರು ಹೊರುವ ಕಳಸಗಳು 2 ರಿಂದ 2.5 ಕೆ.ಜಿ ವರೆಗೂ ಇರುತ್ತಿತ್ತು. ಯಾವುದೇ ಆಧಾರವಿಲ್ಲದೆ ತಲೆಯ ಮೇಲೆ ಕಳಸಗಳನ್ನು ಹೊತ್ತು, ಕೈಯಿಂದ ಕೂಡ ಮುಟ್ಟದೇ ಗಂಟೆಗಟ್ಟಲೇ ನೃತ್ಯ ಮಾಡುವ ಹೆಣ್ಣುಮಕ್ಕಳು ವಿವಿಧ ಭಾವ ಭಂಗಿಗಳನ್ನು ನಿರಾತಂಕವಾಗಿ ಪ್ರದರ್ಶಿಸುತ್ತಿದ್ದರು.
ಶಿಡ್ಲಘಟ್ಟದಲ್ಲಿ ಯುವಜನ ಮೇಳದಲ್ಲಿ ಪ್ರಥಮ ಬಾರಿ ಪ್ರದರ್ಶನ ನೀಡಿದ ತಂಡ, ಸ್ವಂತ ಗ್ರಾಮದಲ್ಲಿ ಮಳ್ಳೂರಾಂಭಾ ಉತ್ಸವ, ದಸರಾ ವಸ್ತು ಪ್ರದರ್ಶನಗಳಲ್ಲಿ ಹಲವಾರು ಬಾರಿ ಪ್ರದರ್ಶನ ನೀಡಿ ಮೆಚ್ಚುಗೆಗಳಿಸಿತ್ತು.
ಕಳಸ ಹೊತ್ತ ಬಾಲೆಯರು ಕೃಷ್ಣನನ್ನು ಎತ್ತಿ ನರ್ತಿಸುತ್ತಿರುವುದು.
ಕಳಸ ಹೊತ್ತ ಬಾಲೆಯರು ಕೃಷ್ಣನನ್ನು ಎತ್ತಿ ನರ್ತಿಸುತ್ತಿರುವುದು.

ಈ ಪಂಡರಿ ಭಜನೆ ತಂಡ ಎಲ್ಲಿಗೇ ಹೋಗಲಿ ಕಲಾವಿದರೊಂದಿಗೆ ಕಾರ್ಯದರ್ಶಿ ಎಂ.ವೆಂಕೋಬರಾವ್ ಜೊತೆಯಲ್ಲಿರಲೇಬೇಕು. ದೇವರಮಳ್ಳೂರಿನ ಕೋದಂಡರಾಮಸ್ವಾಮಿ ಸಾಂಸ್ಕೃತಿಕ ತಂಡದ ಮಕ್ಕಳ ಪಂಡರಿ ಭಜನೆಯು ಎಂಥಹವರನ್ನೂ ಮೂಕವಿಸ್ಮಿತರನ್ನಾಗಿಸುತ್ತಿತ್ತು. ಈ ಕಲೆಯನ್ನು ಹಬ್ಬ, ಹರಿದಿನ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಪಡೆದಿತ್ತು. ಮೇಲು ಕೀಳೆಂಬುದಿಲ್ಲದೆ, ಸಹಕಾರ ಮನೋಭಾವದಿಂದ, ಹಬ್ಬ ಹರಿದಿನಂದು ಶಿಸ್ತು ಮತ್ತು ಭಕ್ತಿಯಿಂದ ಜಂಡಾ, ಕೋಲಾಟ, ಸಾಲುಕಳಸ, ಚಕ್ಕೆ ಮೇಲೆ ಕಳಸ ಕುಣಿತದೊಂದಿಗೆ ಸಾರ್ವಜನಿಕರಿಗೆ ಸಂತೋಷ, ಆನಂದ ನೀಡುತ್ತಾ ಭಕ್ತಿಯ ಅಲೆಯಲ್ಲಿ ತೇಲಿಸುತ್ತಿದ್ದರು.
ದೇವರಮಳ್ಳೂರಿನ ಗ್ರಾಮಾಂತರ ಮಕ್ಕಳು ಈ ಕಲೆಯನ್ನು ಮುಖ್ಯವಾಗಿ ಝಂಡಾ, ಕೋಲಾಟ, ಸಾಲು ಕಳಸ ನೃತ್ಯ, ದೀಪ ನೃತ್ಯ, ಅಷ್ಟ ಕಳಸ ನೃತ್ಯವನ್ನು ಸುಮಾರು 2 ರಿಂದ 3 ಕೆ.ಜಿ ಯವರೆಗೆ ಭಾರ ಹೊತ್ತು ಮಂಗಳದ ಹಾಡಿನೊಂದಿಗೆ ಮುಕ್ತಾಯಗೊಳಿಸುತ್ತಿದ್ದರು. ಈ ಕಲೆಯನ್ನು ಸಮಯದ ಅವಕಾಶಕ್ಕೆ ತಕ್ಕಂತೆ 10 ನಿಮಿಷದಿಂದ 3 ಗಂಟೆಯ ಕಾಲದವರೆಗೂ ಪ್ರದರ್ಶಿಸಲಾಗುತ್ತಿತ್ತು. 9 ರಿಂದ 14 ವರ್ಷದ ವಯಸ್ಸಿನ ಸುಮಾರು 25 ಬಾಲಕಿಯರು ಇವರ ತಂಡದಲ್ಲಿರುತ್ತಿದ್ದರು.
ಈ ಕಲೆಯನ್ನು ಕೈವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರಿನ ವಿಶ್ವ ಕನ್ನಡ ಸಮ್ಮೇಳನ, ಅರಮನೆ ಮುಂಭಾಗ, ದಸರಾ ವಸ್ತು ಪ್ರದರ್ಶನ, ರಾಷ್ಟ್ರೀಯ ಬಾವೈಕ್ಯತಾ ಸಮ್ಮೇಳನ, ಅಂತರರಾಜ್ಯ ಯುವಜನ ಮೇಳ, ಸಾಂಸ್ಕೃತಿಕ ಕಲಾ ನೃತ್ಯಮೇಳ, ಕೇರಳ, ಬೆಂಗಳೂರು, ಮುಂಬಯಿ, ಪಾಂಡಿಚೆರಿ, ನಾಗಪುರ, ಹಂಪೆಯಲ್ಲಿ ನಡೆದಿದ್ದ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ಹೆಸರುಗಳಿಸಿದ್ದರು.
‘ಒಂದು ಕಾಲದಲ್ಲಿ ತಲೆಯ ಮೇಲೆ ಯಾವುದೇ ಆಧಾರವಿಲ್ಲದೇ ಸಾಲು ಕಳಸಗಳನ್ನು ಹೊತ್ತು ನಮ್ಮ ಗ್ರಾಮದ ಮಕ್ಕಳು ನಮ್ಮ ದೇವರಮಳ್ಳೂರು, ಶಿಡ್ಲಘಟ್ಟ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಮೆರೆಸಿದ್ದರು. 1992 ರವರೆಗೂ ನಡೆದು ಬಂದು ಈ ಕಲಾ ಪರಂಪರೆ ನಿಂತುಹೋಯಿತು. ನಿರಂತರ ಪರಿಶ್ರಮ, ತಾಲೀಮು, ತರಬೇತಿ, ಆಸಕ್ತಿ, ಕಲಾಪೋಷಣೆ, ಪ್ರೋತ್ಸಾಹ ಇವುಗಳಲ್ಲಿ ಯಾವುದೂ ಕಡಿಮೆಯಾಗದಂತೆ ಹಲವು ವರ್ಷಗಳ ಕಾಲ ನಡೆಸಿದೆವು. ಮುಂದೆ ಈ ಪರಂಪರೆಯನ್ನು ಮುಂದುವರೆಸುವವರು ಬಂದಲ್ಲಿ ಸಂಪೂರ್ಣ ಮಾರ್ಗದರ್ಶನ ಮಾಡುತ್ತೇನೆ’ ಎಂದು ಎ.ವೆಂಕೋಬರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲಿ ಬೋನಿಗೆ ಸ್ನಾನ!!

0

ಮನೆಯಲ್ಲಿ ಇಲಿ ಕಾಟ ಜಾಸ್ತಿಯಾದಾಗ ನೆನಪಾಗುವುದು ಇಲಿ ಬೋನು. ಧಾವಂತದಿಂದ ಮಾರುಕಟ್ಟೆಗೆ ಹೋಗಿ ತಂದದ್ದೂ ಆಯಿತು. ಒಂದು, ಅಬ್ಬಬ್ಬಾ ಎಂದರೆ ಎರಡು ಇಲಿ ಸಿಕ್ಕುಬಿದ್ದಿತು ಕೂಡ. ಆಮೇಲೆ ಮಾತ್ರ ಒಂದೇ ಒಂದು ಬೋನಿಗೆ ಬಿದ್ದರೆ ಕೇಳಿ. ಈಗ ಕೈಲಾಗದೆ ಮೈ ಪರಚಿಕೊಳ್ಳುವಂತ ಸಿಟ್ಟು. “ನೋಡಿ, ಈ ಇಲಿಗಳೂ ಎಷ್ಟು ಚುರುಕು? ಅವಕ್ಕೂ ಬೋನಿನ ಕರಾಮತ್ತು ಗೊತ್ತಾಗಿದೆ” ಎಂದು ಗೊಣಗುತ್ತೇವೆ. ಇದು ಅರ್ಧಸತ್ಯ.
ನಿಜ, ಇಲಿಗೆ ಬೋನು ಅಪಾಯ ಅಂತ ಗೊತ್ತಾಗಿದೆ. ಅದು ಅದರ ಜಾಣ್ಮೆಯಲ್ಲ. ಕೊನೆಯ ಬಾರಿ ಬಿದ್ದ ಇಲಿಯ ಒಳ್ಳೆತನ! ಏನಾಗುತ್ತಪ್ಪಾಂದ್ರೆ, ಬೋನಿಗೆ ಬಿದ್ದ ಇಲಿ ವಿಶಿಷ್ಟ ಹಾರ್ಮೋನ್ ಒಂದನ್ನು ಹೊರಚೆಲ್ಲುತ್ತದೆ. ಅದು ಉಳಿದ ಇಲಿಗಳಿಗೆ `ಇಲ್ಲಿದೆ ಅಪಾಯ’ ಎಂಬ ಸೂಚನೆ ನೀಡುತ್ತದಾದ್ದರಿಂದ ಉಳಿದವು ಬೋಂಡ, ಚಕ್ಕುಲಿ ಇಟ್ಟರೂ ಅತ್ತ ತಲೆ ಹಾಕವು!
ಇದಕ್ಕೊಂದು ಪರಿಹಾರವಿದೆ. ಒಂದು ಚಮಚ ಸುಣ್ಣ, ಅರ್ಧ ಚಮಚ ಅರಿಸಿನದ ಪುಡಿ ತೆಗೆದುಕೊಳ್ಳಿ. ಅವೆರಡನ್ನು ಬಕೆಟ್ ನೀರಿನಲ್ಲಿ ಕದಡಿ. ಕೆಂಪು ನೀರು ಸೃಷ್ಟಿಯಾಗುತ್ತದೆ. ಇದರಲ್ಲಿ ಖಾಲಿ ಇಲಿ ಬೋನನ್ನು ಚೆನ್ನಾಗಿ ತೊಳೆಯಿರಿ. ಮತ್ತೆ ರಾತ್ರಿ ಬೋನು ಹೂಡಿ. ಇಲಿ ಪಿಗ್ಗಿ ಬಿದ್ದು ಬೋನು ಸೇರುತ್ತದೆ! ಸುಣ್ಣ, ಅರಿಸಿನದ ಟ್ರೀಟ್‍ಮೆಂಟ್‍ನಿಂದ ಹಾರ್ಮೋನ್ ವಾಸನೆ ಗಾಯಬ್! ಪ್ರತಿ ಬಾರಿ ಇಲಿ ಬಿದ್ದ ನಂತರವೂ ಬೋನಿಗೆ ಈ ಸ್ನಾನ ಮಾಡಿಸಬೇಕು.
– ಮಾ.ವೆಂ.ಸ. ಪ್ರಸಾದ್

ಭ್ರಷ್ಟಾಚಾರವನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ಜನರಲ್ಲಿ ಮೂಡಲಿ

0

ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಸಮಸ್ಯೆಯನ್ನು ಬಗೆಹರಿಸಲು ಜನರು ಒಗ್ಗೂಡಿ ಹೋರಾಡಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಭಾನುವಾರ ಯಣ್ಣೂರಿನ ಜಾಗೃತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನಾಂಗ ಸಂಘಗಳಿಗೆ ನೋಂದಣಿ ಪತ್ರ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಭಾನುವಾರ ಯಣ್ಣೂರಿನ ಜಾಗೃತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನಾಂಗ ಸಂಘಗಳಿಗೆ ನೋಂದಣಿ ಪತ್ರ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತರಾದ ಎನ್.ಸಂತೋಷ್ ಹೆಗ್ಡೆ, ಶಿಕ್ಷಕಿ ಹಸೀನಾ ಬೇಗಂ, ಯುವಜನ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸಲಹಾ ಸಮಿತಿ ಅಧ್ಯಕ್ಷ ಟಿ.ಎಸ್.ಭಾಸ್ಕರ್ ರೆಡ್ಡಿ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಭಾನುವಾರ ಯಣ್ಣೂರಿನ ಜಾಗೃತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನಾಂಗ ಸಂಘಗಳಿಗೆ ನೋಂದಣಿ ಪತ್ರ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತರಾದ ಎನ್.ಸಂತೋಷ್ ಹೆಗ್ಡೆ, ಶಿಕ್ಷಕಿ ಹಸೀನಾ ಬೇಗಂ, ಯುವಜನ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸಲಹಾ ಸಮಿತಿ ಅಧ್ಯಕ್ಷ ಟಿ.ಎಸ್.ಭಾಸ್ಕರ್ ರೆಡ್ಡಿ ಹಾಜರಿದ್ದರು.

ಸರ್ಕಾರ ಜನರ ಅನುಕೂಲಕ್ಕಾಗಿ ಇರಬೇಕು. ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಸರ್ಕಾರಕ್ಕೆ ಬೆಂಬಲಿಸದಿರಿ. ಆಸೆ, ಆಮಿಷಗಳಿಗೆ ಬಲಿಯಾಗದೇ ಕೇವಲ ಅಭಿವೃದ್ಧಿಯೇ ಮಂತ್ರವಾಗಲಿ. ಬಡ ಬಗ್ಗರಿಗೆ ಅನುಕೂಲ ಕಲ್ಪಿಸುವ, ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕಲ್ಪಿಸುವ ಸರ್ಕಾರ ಮಾತ್ರ ಇರಲಿ ಎಂಬ ಸಾಮಾಜಿಕ ಆಲೋಚನೆ ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.
ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತರಾದ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಜನಪ್ರತಿನಿಧಿಗಳಾದವರು ಲೋಕಸಭೆಯಲ್ಲಾಗಲಿ, ರಾಜ್ಯಸಭೆಗಳಲ್ಲಾಗಲೀ ಜನರ ಸಮಸ್ಯೆಗಳನ್ನು, ನಾಡಿನ ಅಭಿವೃದ್ಧಿ ಸಂಬಂಧಿ ವಿಚಾರಗಳನ್ನು ಚರ್ಚಿಸಬೇಕಾದದ್ದು ಅವರ ಕರ್ತವ್ಯ. ಸಾಕಷ್ಟು ಮಂದಿ ಅವರ ಕರ್ತವ್ಯವವನ್ನು ನಿರ್ವಹಿಸುತ್ತಿಲ್ಲ. ಅಭಿವೃದ್ಧಿ, ಸಮಸ್ಯೆ ನಿವಾರಣೆ, ಭ್ರಷ್ಟಾಚಾರ ತಡೆ ಮುಂತಾದ ವಿಚಾರಗಳ ಬಗ್ಗೆ ಜನರು ಜನಪ್ರತಿನಿಧಿಗಳನ್ನು ಎಚ್ಚರಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡಾಸಾಮಗ್ರಿಗಳನ್ನು ಯುವಕರ ಸಂಘಗಳಿಗೆ ವಿತರಿಸಲಾಯಿತು. ಜಾನಪದ ಹುಂಜ ಜಿ.ಮುನಿರೆಡ್ಡಿ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಿಕ್ಷಕಿ ಹಸೀನಾ ಬೇಗಂ, ಯುವಜನ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸಲಹಾ ಸಮಿತಿ ಅಧ್ಯಕ್ಷ ಟಿ.ಎಸ್.ಭಾಸ್ಕರ್ ರೆಡ್ಡಿ, ಜಾಗೃತಿ ಸಂಸ್ಥೆಯ ಅಧ್ಯಕ್ಷ ಎಂ.ವೆಂಕಟ್, ಕಾರ್ಯದರ್ಶಿ ಆರ್.ರಾಮಕೃಷ್ಣಪ್ಪ, ದೊಣ್ಣಹಳ್ಳಿ ರಾಮಣ್ಣ, ಡಾ. ಎಂ.ಸಿ.ಪ್ರಭುದೇವ್, ಜಿ.ಇ.ನಾರಾಯಣಗೌಡ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶಿಡ್ಲಘಟ್ಟದಲ್ಲಿ ಮೇ 1 ರಂದು ಸಿನಿಮಾ ಹಬ್ಬ

0

ಕನ್ನಡ ಚಲನಚಿತ್ರದ ಪ್ರಮುಖ ನಟರನ್ನು, ರಾಜಕೀಯ ನೇತಾರರನ್ನು ಶಿಡ್ಲಘಟ್ಟಕ್ಕೆ ಕರೆತರಲಿದ್ದು, ಕೌಟುಂಬಿಕ ಪರಿಸರದಲ್ಲಿ ಎಲ್ಲರೂ ಕುಳಿತು ಮೂರು ಗಂಟೆಗಳ ಕಾಲ ರಸಸಂಗೀತವನ್ನು ಆಸ್ವಾದಿಸುವ ‘ಶಿಡ್ಲಘಟ್ಟ ಸಿನಿಮಾ ಹಬ್ಬ’ವನ್ನು ಮೇ 1 ರಂದು ಆಯೋಜಿಸಿರುವುದಾಗಿ ಚಲನಚಿತ್ರ ನಿರ್ದೇಶಕ ಆರ್.ಚಂದ್ರು ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಬಳಿಯ ವಿಜಯಕುಮಾರ್ ಲೇಔಟ್ನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಲಕ್ಷ್ಮಣ ಚಿತ್ರದ ಆಡಿಯೋ ಬಿಡುಗಡೆ ಶಿಡ್ಲಘಟ್ಟದಲ್ಲಿ ಅದ್ದೂರಿಯಾಗಿ ಮಾಡುವ ಉದ್ದೇಶದಿಂದ ಮೇ 1 ರಂದು ಸಂಜೆ 6 ಗಂಟೆಗೆ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಕನ್ನಡ ಚಲನಚಿತ್ರ ರಂಗದ ಪ್ರಮುಖ ನಟರಾದ ಅಂಬರೀಷ್, ರವಿಚಂದ್ರನ್ ಸೇರಿದಂತೆ ವಿವಿಧ ಖ್ಯಾತ ನಟರು ಆಗಮಿಸುವರು. ರಾಜಕೀಯ ನಾಯಕರೂ ಆಗಮಿಸುತ್ತಾರೆ. ಅರ್ಜುನ್ ಜನ್ಯ ಅವರ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸೃಜನ್ ಲೋಕೇಶ್ ಮತ್ತು ಅನುಪಮಾ ಭಟ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ನಾನು ಹುಟ್ಟಿ ಬೆಳೆದ ತಾಲ್ಲೂಕಿನಲ್ಲಿ ಕನ್ನಡ ಚಲನಚಿತ್ರವೊಂದರ ಅದ್ದೂರಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಒಂದೆಡೆ ತಾಲ್ಲೂಕಿನ ಜನರಿಗೆ ಕನ್ನಡ ಚಿತ್ರರಂಗದ ಪ್ರಮುಖರನ್ನು ಕರೆತಂದು ತೋರಿಸುತ್ತಾ, ಮತ್ತೊಂದೆಡೆ ಇಡೀ ಕನ್ನಡ ಚಲನಚಿತ್ರ ರಂಗದವರಿಗೆ ಶಿಡ್ಲಘಟ್ಟವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದೇನೆ. ನಮ್ಮ ಊರಿನ ಭಾಷಾ ಸೊಗಡನ್ನು ನನ್ನ ಚಿತ್ರಗಳಲ್ಲಿ ಬಳಸಿದ್ದೇನೆ. ನಮ್ಮೂರು, ನಮ್ಮ ಜನರೊಂದಿಗೆ ನಾವು ಸಂಭ್ರಮವನ್ನು ಹಂಚಿಕೊಳ್ಳುವ ಆಸೆಯಿದೆ. ನಾನು ಹುಟ್ಟಿ, ಬೆಳೆದು, ಓಡಾಡಿದ, ಕಲಿತ, ಪ್ರೇರಣೆ ಪಡೆದ ಸ್ಥಳಕ್ಕೆ ನಮ್ಮ ಚಿತ್ರರಂಗದ ಪ್ರಮುಖರನ್ನು ಕರೆತರುವ ಅಭಿಲಾಷೆ ನನ್ನದು. ಈ ರೀತಿಯ ಕಾರ್ಯಕ್ರಮಗಳು ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗದಂಥಹ ಪ್ರಮುಖ ನಗರಗಳಲ್ಲಿ ನಡೆಯುವುದು ರೂಢಿ. ಆದರೆ ಗಡಿ ಭಾಗದ ಜನರಲ್ಲೂ ಕನ್ನಡ ಪ್ರೀತಿಯಿದೆ ಎಂಬುದನ್ನು ಚಿತ್ರರಂಗದವರಿಗೆ ತೋರಿಸಿ, ನಮ್ಮೂರಿನ ಯುವಕರು ಹಾಗೂ ಮಕ್ಕಳಿಗೆ ಸಾಧಕರನ್ನು ಪರಿಚಯಿಸಿ ಅವರಿಗೂ ಚಿತ್ರರಂಗದಂಥಹ ಕ್ರಿಯಾಶೀಲ ಕ್ಷೇತ್ರದೆಡೆಗೆ ಆಸಕ್ತ ಉಂಟು ಮಾಡುವ ಉದ್ದೇಶವಿದೆ.
ಕುಟುಂಬ ಸಮೇತರಾಗಿ ತಾಲ್ಲೂಕು ಹಾಗೂ ಜಿಲ್ಲೆಯ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಉತ್ತಮ ಕಾರ್ಯಕ್ರಮವನ್ನು ವೀಕ್ಷಿಸಲು ಸಕಲ ಏರ್ಪಾಡುಗಳನ್ನು ಮಾಡಲಾಗಿದೆ. ಮನರಂಜನೆಯೊಂದಿಗೆ ನಮ್ಮ ತಾಲ್ಲೂಕಿನ ಜನರನ್ನು ಕನ್ನಡ ಸಿನಿಮಾದತ್ತ ಆಕರ್ಷಿಸುವ, ಯುವಕರಿಗೆ ಹೊಸ ಪ್ರೇರಣೆ ನೀಡುವ ಕಾರ್ಯಕ್ರಮ ಇದಾಗಲಿದೆ ಎಂದರು.
ಮೇಲೂರು ವಿಜಯಕುಮಾರ್, ಮುನೀಂದ್ರ, ಚಂದ್ರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಉಚಿತ ಸುನ್ನತಿ

0

ನಗರದ ಗಾರ್ಡನ್ ರಸ್ತೆಯಲ್ಲಿರುವ ಸುಮಾರು ಏಳುನೂರು ವರ್ಷಗಳ ಇತಿಹಾಸವಿರುವ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಶನಿವಾರ ದರ್ಗಾ ಸಮಿತಿಯಿಂದ ಬಡ ಮಕ್ಕಳಿಗೆ ಉಚಿತ ಸುನ್ನತಿ, ವೈದ್ಯಕೀಯ ಚಿಕಿತ್ಸೆ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸುನ್ನತ್–ಎ–ಇಬ್ರಾಹಿಂ(ಕತ್ನಾ)ಎಂಬ ಕಾರ್ಯಕ್ರಮವನ್ನು ದರ್ಗಾ ಸಮಿತಿ ನಡೆಸಿದ್ದು ಸುಮಾರು 20 ಮಕ್ಕಳು ಸುನ್ನತಿಯನ್ನು ಮಾಡಿಸಿಕೊಂಡರು. ಮೈಸೂರಿನಿಂದ ಆಗಮಿಸಿದ್ದ ಡಾ. ರಹಮತ್ತುಲ್ಲಾ ಶರೀಫ್ ಮಕ್ಕಳಿಗೆ ಸುನ್ನತಿಯನ್ನು ನೆರವೇರಿಸಿ, ಪೋಷಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾಗೂ ಗಾಯವನ್ನು ವಾಸಿ ಮಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಔಷಧಿಗಳನ್ನು ಉಪಯೋಗಿಸುವ ಕುರಿತಾಗಿಯೂ ತಿಳಿಸಿದರು. ದರ್ಗಾ ಸಮಿತಿ ವತಿಯಿಂದ ಸುನ್ನತಿ ಮಾಡಿಸಿಕೊಂಡ ಮಕ್ಕಳಿಗೆ ಅಗತ್ಯ ಔಷಧಿಗಳು, ಅಕ್ಕಿ, ತುಪ್ಪ, ಬಟ್ಟೆ, ಗೋದಿ, ಬೆಲ್ಲ, ಕೊಬ್ಬರಿಗಳನ್ನು ಒಳಗೊಂಡ ರೇಷನ್ ಕಿಟ್ ಮತ್ತು ಬಟ್ಟೆಗಳನ್ನು ಉಚಿತವಾಗಿ ವಿತರಿಸಿದರು.
ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾ ಸಮಿತಿ ಮುಖಂಡರಾದ ಹಾಜಿ ಹಫೀಜುಲ್ಲಾ, ಷಫೀಯುಲ್ಲಾ, ಆಜಂಖಾನ್, ಸರ್ದಾರ್ಖಾನ್, ಅಮ್ಜದ್ ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕರಗದಮ್ಮದೇವಿ ನರ್ತನ

0

ಶಿಡ್ಲಘಟ್ಟದ ಗಾರ್ಡನ್ ರಸ್ತೆಯಲ್ಲಿರುವ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಶನಿವಾರ ಬೆಳಿಗ್ಗೆ ಕರಗದಮ್ಮದೇವಿ ಕರಗವು ನರ್ತಿಸಿ ಪೂಜೆಯನ್ನು ಸ್ವೀಕರಿಸಿತು.

ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಪುರಾಣ ಪ್ರಸಿದ್ಧ ಜಂಗಮಕೋಟೆಯ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ತರಾಯಣ ವಸಂತ ಋತು ಚೈತ್ರ ಶುದ್ಧ ಪೌರ್ಣಮಿ ಶುಕ್ರವಾರದಂದು ನೂತನವಾಗಿ ನಿರ್ಮಿಸಿರುವ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ತೇರಿನಲ್ಲಿ ಉತ್ಸವ ಮೂರ್ತಿಗಳನ್ನಿರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದು, ಗ್ರಾಮದಲ್ಲಿ ದೇವರ ರಥ ಸಾಗಿದಾಗಿ ಜನಜಂಗುಳಿ ಏರ್ಪಟ್ಟಿತ್ತು. ಪುರಾತನ ಪ್ರಸನ್ನ ಗಂಗಾಧರೇಶ್ವರ ಸ್ವಾಮಿಯ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದು, ಪೂಜೆಯ ನಂತರ ಪ್ರಸಾದವನ್ನು ವಿತರಿಸಲಾಯಿತು.
ಗ್ರಾಮದಲ್ಲಿ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆಯನ್ನು ವಿತರಿಸಿದರು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಸಮ್ಮೇಳ ಹಾಗೂ ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು. ಗಾರ್ಡಿ ಗೊಂಬೆ, ಕೀಲು ಕುದುರೆ ಮುಂತಾದ ಆಕರ್ಷಕ ಸ್ಥಳೀಯ ಕಲೆಯು ಕೂಡ ಮೆರವಣಿಗೆಯಲ್ಲಿದ್ದವು. ರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರ ತಂಡದಿಂದ ತಮಟೆಗಳ ವಾದನಕ್ಕೆ ಭಕ್ತಾದಿಗಳು ಜಾನಪದ ತಂಡಗಳೊಂದಿಗೆ ಹೆಜ್ಜೆಹಾಕುತ್ತಾ ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದಿದ್ದರು.
ದೇವಾಲಯದ ಆವರಣದಲ್ಲಿ ಹೋಮಕುಂಡವನ್ನು ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರಸನ್ನ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ಬಾಳೇಹಣ್ಣಿಗೆ ದವನವನ್ನಿ ಸಿಕ್ಕಿಸಿ ರಥಕ್ಕೆ ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಕೋಸಂಬರಿ ಪಾನಕಗಳನ್ನು ಭಕ್ತರಿಗೆ ಹಂಚಿಕೆ ಮಾಡಿದರು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಕರಗದಮ್ಮದೇವಿ ಕರಗ ಮಹೋತ್ಸವ

0

ನಗರದ ಮುತ್ತೂರು ಬೀದಿಯಲ್ಲಿರುವ ಕರಗದಮ್ಮದೇವಿ ಕರಗ ಮಹೋತ್ಸವವು ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ ಪ್ರಾಚೀನವಾದದ್ದು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ಇದನ್ನು ಶಕ್ತಿಯ ಆರಾಧನೆ ಎಂದು ಪರಿಗಣಿಸಿರುವುದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ.
ತಮಿಳುನಾಡಿನಿಂದ ೧೪ನೆಯ ಶತಮಾನದಲ್ಲಿ ನಂದಿದುರ್ಗದಲ್ಲಿ ಬಂದ ನೆಲೆಸಿದ ರಣಭೈರೇಗೌಡರ ಮೂಲಕ ಈ ಕರಗದ ಕಲೆ ನಮ್ಮ ನಾಡಿಗೆ ಬಂತೆಂದು ನಂಬಲಾಗಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡ ಈತನ ವಂಶಸ್ಥನೇ. ಇವರು ಪಾಳೆಪಟ್ಟುಗಳನ್ನು ಕಟ್ಟಿ ಆಳ್ವಿಕೆ ಮಾಡಿರುವ ಚಿಕ್ಕಬಳ್ಳಾಪುರ, ದೊಟ್ಟಬಳ್ಳಾಪುರ, ಕೋಲಾರ, ಯಲಹಂಕ, ಬೆಂಗಳೂರು, ಆನೇಕ್ಲಲು, ಮಾಗಡಿ ಮುಂತಾದೆಡೆಯೆಲ್ಲ ಈ ಕರಗ ನಡೆಯುವುದು ಇದಕ್ಕೆ ಪೂರಕವಾಗಿದೆ.
ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.
ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಎಲಾ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿದ್ದರು.
ಮಯೂರ ವೃತ್ತದ ಅಶ್ವತ್ಥಕಟ್ಟೆ ಹತ್ತಿರ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು.

ಕರಗ ಮಹೋತ್ಸವ

0

ಶಿಡ್ಲಘಟ್ಟದ ಮುತ್ತೂರು ಬೀದಿಯ ಕರಗದಮ್ಮ ದೇವಿಯ ಹಸಿ ಕರಗ ಮಹೋತ್ಸವವನ್ನು ಬುಧವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಅಂಗವಿಕಲರಿಗೆ ವ್ಹೀಲ್ಚೇರ್ ಸೇರಿದಂತೆ ಸಾಧನ ಸಲಕರಣೆ ವಿತರಣೆ

0

ಅಂಗವಿಕಲರಿಗೆ ಅನುಕಂಪ, ಸಹಾನುಭೂತಿ ತೋರಿಸುವ ಬದಲಿಗೆ ಅವರಿಗೆ ಸಹಕಾರ ನೀಡಲು ಮುಂದಾದರೆ ಪ್ರತಿಯೊಬ್ಬ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಗುರುವಾರ ೨೦೧೫-–೧೬ ನೇ ಸಾಲಿನ ಶೇ. ೩ ರ ಅನುದಾನದಡಿಯಲ್ಲಿ ಅಂಗವಿಕಲರಿಗೆ ವ್ಹೀಲ್ಚೇರ್ ಸೇರಿದಂತೆ ಸಾಧನ ಸಲಕರಣೆ ಹಾಗೂ ಟ್ರೈಸಿಕಲ್ ವಿತರಣೆ ನೆರವೇರಿಸಿ ಅವರು ಮಾತನಾಡಿದರು.
ಅಂಗವಿಕಲರು ಎಲ್ಲಾ ರಂಗಗಳಲ್ಲೂ ಉತ್ತಮವಾದ ಸಾಧನೆಗಳನ್ನು ಮಾಡಬಲ್ಲರು. ಹಾಗಾಗಿ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವಂತಹ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಯಾವುದೇ ಕಚೇರಿಗಳಿಗೆ ಅಂಗವಿಕಲರು ಭೇಟಿ ನೀಡಿದಾಗ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಅವರನ್ನು ಕಂಡೊಡನೆ ಮೊದಲ ಪ್ರಾಶಸ್ತ್ಯದೊಂದಿಗೆ ಅವರ ಕೆಲಸ ಕಾರ್ಯಗಳನ್ನು ಮುಗಿಸಿಕೊಡಿ. ಯಾವುದೇ ಕಾರಣಕ್ಕೂ ಅಂಗವಿಕಲರು ಪದೇ ಪದೇ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದರು.
ಸುಮಾರು ೫,೮೪,೮೬೦ ರೂಗಳ ವೆಚ್ಚದಲ್ಲಿ ೨೨ ಮಂದಿಗೆ ವ್ಹೀಲ್ಚೇರ್, ೧೨ ಮಂದಿಗೆ ಟ್ರೈಸಿಕಲ್ ಹಾಗೂ ೪೮ ಮಂದಿಗೆ ವಿವಿಧ ಸಾಧನ ಸಲಕರಣೆಗಳನ್ನು ಇದೀಗ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿ ನಗರಸಭೆಗೆ ಬರುವ ಅನುದಾನಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಾಧನೆ ಸಲಕರಣೆಗಳನ್ನು ವಿತರಣೆ ಮಾಡಲು ಅಗತ್ಯವಾದ ಯೋಜನೆಯನ್ನು ತಯಾರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಮುಷ್ಠರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ಕಿಶನ್, ಪೌರಾಯುಕ್ತ ಎಚ್.ಎ.ಹರೀಶ್, ನಗರಸಭೆ ಸದಸ್ಯರಾದ ಅಪ್ಸರ್ಪಾಷ, ಲಕ್ಷ್ಮಯ್ಯ, ಕೇಶವಮೂರ್ತಿ, ವೆಂಕಟಸ್ವಾಮಿ, ಜೆ.ಎಂ.ಬಾಲಕೃಷ್ಣ, ಮುಖಂಡರಾದ ಶ್ರೀನಾಥ್, ಶ್ರೀಧರ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.