Home Blog Page 471

ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

0

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೈ.ಹುಣಸೇನಹಳ್ಳಿ ಹಾಗೂ ಶೀಗೆಹಳ್ಳಿ ಗ್ರಾಮಗಳಲ್ಲಿ ಗುರುವಾರ ಶಾಸಕರ ಅನುಧಾನದಲ್ಲಿ ಸುಮಾರು ೧೦ ಲಕ್ಷ ರೂಪಾಯಿಗಳ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಇರುವ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ಹಳ್ಳಿಗಳಲ್ಲಿ ಉತ್ತಮ ರಸ್ತೆ ಸೇರಿದಂತೆ ಚರಂಡಿ, ವಿದ್ಯುತ್ ಮತ್ತು ವಸತಿ ಸವಲತ್ತುಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ತಾಲ್ಲೂಕಿನ ಎಲ್ಲಾ ಕಡೆ ಶುದ್ಧ ನೀರಿನ ಘಟಕ ನಿರ್ಮಸಿ ನಾಗರಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸಲೆಂದು ಈಗಾಗಲೇ ಹಲವೆಡೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಲ್ಲಿ ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಬೇಕಾದರೆ ಅದು ಕೇವಲ ಚುನಾಯಿತ ಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ ಬದಲಿಗೆ ಗ್ರಾಮದಲ್ಲಿನ ಮುಖಂಡರ ಹಾಗೂ ನಾಗರಿಕರ ಸಹಕಾರವೂ ಅಗತ್ಯವಿದೆ ಎಂದರು.
ವೈ ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹರಿಪ್ರಸಾದ್, ಉಪಾಧ್ಯಕ್ಷ ದೇವರಾಜ್, ಸದಸ್ಯರಾದ ಮಂಜುನಾಥ್, ಕಲ್ಪನಾರಾಜಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗ್ರಾಮದೇವತೆ ಗಂಗಾದೇವಿ ಜಾತ್ರಾ ಮಹೋತ್ಸವ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಗ್ರಾಮದೇವತೆ ಗಂಗಾದೇವಿ ಜಾತ್ರಾ ಮಹೋತ್ಸವವು ಮಂಗಳವಾರ ರಾತ್ರಿ ವಿವಿಧ ಪೂಜೆ ಹಾಗೂ ಆಚರಣೆಗಳಿಂದ ಪ್ರಾರಂಭವಾಯಿತು.
ಶ್ರೀ ಗಂಗಾದೇವಿ ಮೇಲೂರಿನಲ್ಲಿ ಬಂದು ನೆಲೆಸಿದ ಮೇಲೆ ಗ್ರಾಮ ಶಾಂತಿಯಿಂದ ಇದ್ದು, ರೋಗ ರುಜಿನಗಳು, ದುಷ್ಟ ಶಕ್ತಿಗಳಿಂದ ಗ್ರಾಮ ರಕ್ಷಕಿಯಾಗಿದ್ದಾಳೆ. ತಾಯಿ ಗಂಗಾದೇವಿ ಅಮ್ಮನವರು ಮೇಲೂರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ರಕ್ಷಣೆ ಹಾಗೂ ಆರಾಧನೆಯ ದೈವವಾಗಿದ್ದಾಳೆ.
ಪ್ರತಿ ವರ್ಷ ನಡೆಯುವ ಶ್ರೀ ಗಂಗಾದೇವಿ ಜಾತ್ರಾ ಮಹೋತ್ಸವದಲ್ಲಿ ಸೊಪ್ಪಿನ ರಥ, ಬಾಯಿ ಬೀಗಗಳು, ದೀಪೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಗ್ರಾಮದ ಹೆಣ್ಣು ಮಕ್ಕಳು ತವರಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ.

ವಾಲ್ಮೀಕಿ ಮತಸ್ಥರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥವನ್ನು ದೇವಿಗೆ ಅರ್ಪಿಸಲಾಯಿತು.
ವಾಲ್ಮೀಕಿ ಮತಸ್ಥರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥವನ್ನು ದೇವಿಗೆ ಅರ್ಪಿಸಲಾಯಿತು.
ಮಂಗಳವಾರ ವಾಲ್ಮೀಕಿ ಮತಸ್ಥರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥ ಹಾಗೂ ಪೂಜೆಯನ್ನು ಆಯೋಜಿಸಲಾಗಿತ್ತು. ನಾಯಕ ಜನಾಂಗದವರು ಬೆಳಿಗ್ಗೆಯಿಂದ ಉಪವಾಸವಿದ್ದು, ಮಡಿಯಿಂದ ಮರ ಕಡಿದು ಹಸಿ ಮರದಿಂದ ರಥ ತಯಾರಿಸಿ ಹೂ ಮತ್ತು ದೀಪಾಲಂಕಾರಗಳೊಂದಿಗೆ ತಾಯಿಯ ಕೀರ್ತನೆ ಮತ್ತು ಹಾಡುಗಳನ್ನು ಹಾಡುತ್ತಾ ಹುಳಿಸೊಪ್ಪಿನ ಸಾರು ಮತ್ತು ಮುದ್ದೆಯನ್ನು ಉತ್ಸವದಲ್ಲಿ ತಂದು ಪೂಜೆ ಸಲ್ಲಿಸಿದರು. ಹರಕೆಯನ್ನು ಹೊತ್ತವರಿಗೆ ಬಾಯಿ ಬೀಗ ಹಾಕಿಸಲಾಯಿತು. ನಂತರ ದೇವಾಲಯದಲ್ಲಿ ತಾಯಿ ಗಂಗಾದೇವಿಗೆ ಬಾಯಿ ಬೀಗಗಳನ್ನು ಅರ್ಪಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.

ಕರಗದಮ್ಮ ದೇವಾಲಯದ ವಿಮಾನ ಗೋಪುರ ಪ್ರತಿಷ್ಠಾಪನೆ

0

ನಗರದ ಮುತ್ತೂರು ಬೀದಿಯಲ್ಲಿರುವ ಕರಗದಮ್ಮ ದೇವಾಲಯದ ವಿಮಾನ ಗೋಪುರ ಪ್ರತಿಷ್ಠಾಪನೆ ಮತ್ತು ಕಳಸ ಸ್ಥಾಪನೆಯನ್ನು ಬುಧವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು,
ನಗರದ ಅತ್ಯಂತ ಹಳೆಯದಾದ ಕರಗದಮ್ಮ ದೇವಿಯ ದೇವಾಲಯದಲ್ಲಿ ದೇವರ ಪುನರ್ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ ಮತ್ತು ವಿಮಾನ ಗೋಪುರವನ್ನು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ವಿಶೇಷ ಹೋಮಗಳನ್ನು ನಡೆಸಲಾಯಿತು. ಸ್ವಸ್ತಿವಾಚನ, ಕಲಶಾರಾಧನೆ, ಸುದರ್ಶನಹೋಮ, ಮಹಾಕುಂಭಾಭಿಷೇಕ, ಮಹಾನಿರೀಕ್ಷಣೆ, ಮಹಾಮಂಗಳಾರತಿಯನ್ನು ಆಯೋಜಿಸಲಾಗಿತ್ತು. ಅನ್ನಸಂತರ್ಪಣೆಯನ್ನೂ ನಡೆಸಲಾಯಿತು.
ಶುಕ್ರವಾರ ನಡೆಯಲಿರುವ ಶ್ರೀ ಕರಗದಮ್ಮ ಕರಗ ಮಹೋತ್ಸವ ಅಂಗವಾಗಿ ದೇವಾಲಯದ ಎಲ್ಲಾ ಭಕ್ತರ ಸಹಕಾರದೊಂದಿಗೆ ವಿಮಾನ ಗೋಪುರ ಪ್ರತಿಷ್ಠಾಪನೆ ನೇರವೇರಿಸಲಾಯಿತು. ನಗರ ಹಾಗೂ ಸುತ್ತ ಮತ್ತಲಿನ ಗ್ರಾಮಗಳ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಿಸಿಲಿನ ತಾಪಕ್ಕೆ ಸಾರ್ವಜನಿಕರಿಗೆ ಉಚಿತವಾಗಿ ನಿಂಬೆಹಣ್ಣಿನ ರಸ

0

ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ಕಳೆದ ಕೆಲವು ದಿನಗಳಿಂದ ವಿ ಕೇರ್ಸ್ ಯು ಫೌಂಡೇಷನ್ ವತಿಯಿಂದ ಬಿಸಿಲಿನ ತಾಪಕ್ಕೆ ಉಪಶಮನವೆಂಬಂತೆ ಮಡಿಕೆ ನೀರಿಗೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಮಣ್ಣಿನ ಲೋಟದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ.

ಸರ್ಕಾರದ ನೀತಿ ಬದಲಾದಾಗ ಮಾತ್ರ ಕಾರ್ಮಿಕರ ಹಾಗೂ ದುಡಿಯುವ ವರ್ಗಕ್ಕೆ ನ್ಯಾಯ ಸಿಗುತ್ತದೆ

0

ಸರ್ಕಾರಗಳು ಬದಲಾದರೆ ಸಾಲದು ಬದಲಿಗೆ ಸರ್ಕಾರದ ನೀತಿ, ಧೋರಣೆಗಳು ಬದಲಾದರೆ ಮಾತ್ರ ಕಾರ್ಮಿಕರ ಹಾಗೂ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವಂತಾಗುತ್ತದೆ ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯತಿ ನೌಕರರ ೨ ನೇ ತಾಲ್ಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಾದ್ಯಂತ ಶೇ. ೯೫ ರಷ್ಟು ಮಂದಿ ನೌಕರರು ಅಸಂಘಟಿತರಾಗಿದ್ದು ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸಿದ ಮತ್ತು ನಡೆಸುತ್ತಿರುವ ಯಾವುದೇ ಸರ್ಕಾರಕ್ಕೂ ಕಾರ್ಮಿಕರ ಪರ ಕಾಳಜಿಯಿಲ್ಲ. ಈವರೆಗೂ ಕಾರ್ಮಿಕ ವರ್ಗದವರಿಗೆ ಏನಾದರೂ ಅಲ್ಪ ಸ್ವಲ್ಪ ಪ್ರಯೋಜನವಾಗಿದೆ ಎಂದರೆ ಅದು ಕೇವಲ ಕಾರ್ಮಿಕರ ಹೋರಾಟದ ಫಲದಿಂದ ಲಭಿಸಿದ್ದೇ ಹೊರತು ಯಾವುದೇ ರಾಜಕೀಯ ಪಕ್ಷದ ತೀರ್ಮಾನದಿಂದಲ್ಲ ಎಂದರು.
ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿಯಾಗಿದೆ. ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂರು ವರ್ಷ ಕಳೆಯಿತಾದರೂ ಅಸಂಘಟಿತ ಕಾರ್ಮಿಕ ವಲಯದ ಯಾವುದೇ ಬೇಡಿಕೆ ಈಡೇರಿಸಲಿಲ್ಲ ಎಂದರು.
ಚುನಾವಣೆ ಸಮಯದಲ್ಲಿ ನಾನು ಅಹಿಂದ ವರ್ಗದ ಪ್ರತಿನಿಧಿ ಎಂದೇ ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಅಹಿಂದ ವರ್ಗದ ಜನತೆಗೆ ಯಾವ ಕೊಡುಗೆ ಕೊಟ್ಟಿದ್ದಾರೆ. ದಲಿತ ಮುಖ್ಯಮಂತ್ರಿ ಕೂಗೆಬ್ಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿರುವ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಅಧಿಕಾರಾವಧಿಯಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ಸೇರಿದಂತೆ ಅನ್ಯಾಯದ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜಕೀಯ ತೀರ್ಮಾನವೇ ಅಂತಿಮವಾಗಿರುವುದರಿಂದ ಕಾರ್ಮಿಕರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಕಾರ್ಮಿಕರ ಪರ ತೀರ್ಮಾನ ಕೈಗೊಳ್ಳಬೇಕಾದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರ ಹಾಗು ದುಡಿಯುವ ವರ್ಗದ ಕಲ್ಯಾಣ ಸಾಧ್ಯವಿಲ್ಲ, ಹಾಗಾಗಿ ದುಡಿಯುವ ವರ್ಗದಿಂದ ಒಂದಷ್ಟು ಜನರನ್ನು ಚುನಾಯಿತರನ್ನಾಗಿ ಆಯ್ಕೆ ಮಾಡಿ ಕಳುಹಿಸಿದಾಗ ಮಾತ್ರ ಅಸಂಘಟಿತ ಕಾರ್ಮಿಕರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿದೇವಮ್ಮ ಮಾತನಾಡಿ, ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯಿಂದ ಈವರೆಗೂ ಗಮ ಪಂಚಾಯತಿ ನೌಕರರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ನಿಗಧಿತ ಕೂಲಿ, ಸಮಯ ಸೇರಿದಂತೆ ಭದ್ರತೆಯಿಲ್ಲವಾಗಿದೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದುಡಿಯುವ ವರ್ಗದ ಪರ ಕೆಲಸ ಮಾಡುವುದನ್ನು ಬಿಟ್ಟು ಆರ್ಥಿಕವಾಗಿ ಬಲಾಢ್ಯರಾಗಿರುವ ಶ್ರೀಮಂತರ ಪರ ಕೆಲಸ ಮಾಡುತ್ತಿದೆ. ಯಾವುದೇ ದಯೆ, ದಾಕ್ಷಿಣ್ಯದಿಂದ ಕೂಲಿ ಕಾರ್ಮಿಕರ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗಾಗಿ ಹೋರಾಟದ ಮೂಲಕವೇ ನಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ನೌಕರರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರೂ ಒಗ್ಗಟ್ಟಾಗಿ ಹೋರಾಟಕ್ಕಿಳಿಯಬೇಕು ಎಂದರು.
ಹಮಾಲಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಜಿಲ್ಲಾ ಖಜಾಂಚಿ ಮುಸ್ತಾಫ್, ಸಿಐಟಿಯು ತಾಲ್ಲೂಕು ಅಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ಪಾಪಣ್ಣ, ಮುಖಂಡರಾದ ಜನಾರ್ಧನ್, ಶಂಕರಪ್ಪ, ಮುನೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

0

ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟಾಲಮ್ಮ ಮತ್ತು ಶ್ರೀ ವೀರಸೊಣ್ಣಮ್ಮ ದೇವಿಯವರ 20ನೇ ವರ್ಷದ ರಥೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಭಾನುವಾರ ರಾತ್ರಿ ಆಯೋಜಿಸಲಾಗಿತ್ತು.
ವರದನಾಯಕನಹಳ್ಳಿಯ ಶಾಲೆಯ ಆವರಣದಲ್ಲಿ ನಡೆದ ಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾದ್ಯಂತ ಸುಮಾರು 30 ತಂಡಗಳು ಭಾಗವಹಿಸಿದ್ದು, ಮಹಿಳೆಯರು, ಮಕ್ಕಳು, ಹಿರಿಯರು, ಕಿರಿಯರು ಬೇಧವಿಲ್ಲದೆ ಗ್ರಾಮಸ್ಥರೆಲ್ಲಾ ಪಂದ್ಯಾವಳಿಯನ್ನು ರಾತ್ರಿಯಿಡೀ ನೋಡಿ ಆನಂದಿಸಿದರು. ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ಗ್ರಾಮದಲ್ಲಿ ರಥೋತ್ಸವದ ಪ್ರಯುಕ್ತ ಸಾಸುಲ ಚಿನ್ನಮ್ಮ ನಾಟಕ ಪ್ರದರ್ಶನವಿದ್ದರೂ, ಜನರೆಲ್ಲಾ ಕ್ರೀಡೆಯತ್ತಲೇ ಆಕರ್ಷಿತರಾಗಿದ್ದುದು ವಿಶೇಷವಾಗಿತ್ತು.
ಪ್ರಥಮ ಬಹುಮಾನ 12 ಸಾವಿರ ರೂಗಳನ್ನು ತಾಲ್ಲೂಕು ಪಂಚಾಯತಿ ಸದಸ್ಯ ಲಕ್ಷ್ಮೀನಾರಾಯಣ ಪ್ರಾಯೋಜಿಸಿದ್ದು, ದೊಡ್ಡತೇಕಹಳ್ಳಿಯ ಸಿ.ವಿ.ವಿ ತಂಡದವರ ಪಾಲಾಯಿತು. ದ್ವಿತೀಯ ಬಹುಮಾನ 8 ಸಾವಿರ ರೂಗಳನ್ನು ವರದನಾಯಕನಹಳ್ಳಿಯ ವರದರಾಜ್ ಪ್ರಾಯೋಜಿಸಿದ್ದು, ವರದನಾಯಕನಹಳ್ಳಿಯ ಬಿ ತಂಡದವರ ಪಾಲಾಯಿತು. ತೃತೀಯ ಬಹುಮಾನ 4 ಸಾವಿರ ರೂಗಳನ್ನು ವರದನಾಯಕನಹಳ್ಳಿ ವಿ.ಎಚ್.ಬೈಯಣ್ಣ ಪ್ರಾಯೋಜಿಸಿದ್ದು, ದೊಡ್ಡತೇಕಹಳ್ಳಿಯ ತಂಡದವರ ಪಾಲಾಯಿತು. ನಾಲ್ಕನೇ ಬಹುಮಾನ 2 ಸಾವಿರ ರೂಗಳನ್ನು ವರದನಾಯಕನಹಳ್ಳಿ ಎನ್.ವೆಂಕಟಸ್ವಾಮಿ ಪ್ರಾಯೋಜಿಸಿದ್ದು, ವರದನಾಯಕನಹಳ್ಳಿಯ ಯಂಗ್ ಬುಲ್ಸ್ ತಂಡದವರ ಪಾಲಾಯಿತು.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಎ.ಟಿ.ಎಂ.ಕೇಂದ್ರ ಉದ್ಘಾಟನೆ

0

ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಎ.ಟಿ.ಎಂ.ಕೇಂದ್ರವನ್ನು ತೆರೆದಿದ್ದು, ಗ್ರಾಹಕರು ಹಣದ ವ್ಯವಹಾರವನ್ನು ಮಾಡಲು ಅನುಕೂಲವಾಗಲಿದೆ ಎಂದು ವ್ಯವಸ್ಥಾಪಕ ಕೆ.ಎಂ.ಬಸವರಾಜ್ ಹೇಳಿದರು.
ನಗರದ ಟಿ.ಬಿ.ರಸ್ತೆಯಲ್ಲಿ ಸೋಮವಾರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಎ.ಟಿ.ಎಂ.ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹುತೇಕ ಯೋಜನೆಗಳನ್ನು ರೈತರಿಗೆ ಬ್ಯಾಂಕುಗಳ ಮೂಲಕವೇ ವಿತರಣೆ ಮಾಡುತ್ತಿರುವುದರಿಂದ ಬ್ಯಾಂಕುಗಳಲ್ಲಿ ಬೇರೆ ಗ್ರಾಹಕರಿಗೆ ಹಣಕಾಸಿನ ವ್ಯವಹಾರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎ.ಟಿ.ಎಂ. ಕೇಂದ್ರವನ್ನು ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿ.ಸಿ.ಕ್ಯಾಮಾರಾ ಅಳವಡಿಸಲಾಗಿದೆ. ಗ್ರಾಹಕರಿಗೆ ಯಾವುದೇ ರೀತಿಯ ತಾಂತ್ರಿಕದೋಷಗಳು ಕಂಡುಬಂದರೂ ಕೂಡಾ ತಕ್ಷಣ ಅಂತಹ ಸಮಸ್ಯೆಯನ್ನು ಬಗೆಹರಿಸುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಗ್ರಾಹಕರು ಹೆಚ್ಚಿನ ಸಹಕಾರ ನೀಡಿ, ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು, ಎ.ಟಿ.ಎಂ.ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದರೆ, ವಿತರಣೆ ಮಾಡಲಾಗುತ್ತದೆ. ಗ್ರಾಹಕರು ಎ.ಟಿ.ಎಂ.ಕೇಂದ್ರದಲ್ಲಿ ವ್ಯವಹರಿಸುವಾಗ ತಮಗೆ ನೀಡಿರುವ ಪಿನ್ ನಂಬರ್ಗಳನ್ನು ಗೌಪ್ಯವಾಗಿಟ್ಟುಕೊಂಡು ವ್ಯವಹರಿಸಬೇಕಾಗುತ್ತದೆ. ಅಪರಿಚಿತ ವ್ಯಕ್ತಿಗಳು ಎ.ಟಿ.ಎಂ.ಗಳ ಸಮೀಪದಲ್ಲಿ ಕಾಣಿಸಿಕೊಳ್ಳುವಾಗ ಮುಂಜಾಗ್ರತೆ ವಹಿಸಬೇಕು ಎಂದರು.
ಬ್ಯಾಂಕ್ ಸಿಬ್ಬಂದಿ ಬಿ.ಆರ್.ನಟರಾಜ್, ಪ್ರಸನ್ನಕುಮಾರ್, ನಾರಾಯಣಸ್ವಾಮಿ, ಬೀರಯ್ಯ, ಲಕ್ಷ್ಮೀದೇವಿ, ನಾಗಭೂಷಣರಾವ್, ಕಲಾವತಿ, ವಕೀಲ ಯೋಗಾನಂದ್, ದಡಂಘಟ್ಟ ತಿರುಮಲೇಶ್, ಶಿವಶಂಕರ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಗ್ರಾಮ ಉದಯ್ ಸೇ ಭಾರತ್ ಉದಯ್’ ಅಭಿಯಾನದ ರಥಕ್ಕೆ ಚಾಲನೆ

0

ಹೊಸ ತಾಂತ್ರಿಕತೆಗಳನ್ನು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಮುಖಾಂತರ ಗ್ರಾಮಗಳಲ್ಲಿ ಸಮಗ್ರವಾಗಿ ಅನುಷ್ಟಾನಗೊಳಿಸುವಂತಹ ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಅಭಿಯಾನದ ಮೂಲಕ ರೈತರು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ಗೌಡ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿಯ ಆವರಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಕೇಂದ್ರ ಸರ್ಕಾರದ ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಅಭಿಯಾನದ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳ ಮುಖಾಂತರ ರೈತರಿಗೆ ಸಿಗುತ್ತಿರುವ ಸೌಲಭ್ಯಗಳು ಹಾಗೂ ಉಚಿತವಾದ ತರಬೇತಿಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ವೈಜ್ಞಾನಿಕ, ಮತ್ತು ತಂತ್ರಜ್ಞಾನವನ್ನು ಕೃಷಿ ಹಾಗೂ ಕೃಷಿ ಸಂಬಂಧಿತವಾದ ಬೆಳೆಗಳಲ್ಲಿ ಪ್ರಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ಇಳುವರಿಯನ್ನು ಪಡೆದುಕೊಳ್ಳುವತ್ತ ರೈತರು ಚಿಂತನೆ ನಡೆಸಬೇಕು. ಇಲಾಖೆಗಳಿಂದ ಸಿಗುವಂತಹ ಲಘು ಪೋಷಕಾಂಶಗಳನ್ನು ಪಡೆದುಕೊಂಡು ಭೂಮಿಗೆ ಹಾಕಿ ಫಲವತ್ತತೆಯನ್ನು ಕಾಪಾಡಬೇಕು. ಇಲಾಖೆಗಳ ಅಧಿಕಾರಿಗಳೂ ಕೂಡಾ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ರೈತರನ್ನು ಒಟ್ಟುಗೂಡಿಸಿ ಯೋಜನೆಗಳ ಬಗ್ಗೆ ಸ್ವಷ್ಟವಾಗಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಟಿ.ದೇವೇಗೌಡ ಮಾತನಾಡಿ, ಇಲಾಖೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ. ಪ್ರತಿಯೊಂದು ಗ್ರಾಮ ಪಂಚಾಯತಿವಾರು, ಕರಪತ್ರಗಳನ್ನು ಹಂಚಿಕೆ ಮಾಡುವ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಅನೇಕ ಮಾಹಿತಿಯುಳ್ಳ ರಥವನ್ನು ಪಂಚಾಯತಿಯ ಕೇಂದ್ರಸ್ಥಾನಗಳಿಗೆ ಕಳುಹಿಸಿಕೊಡುವುದರ ಜೊತೆಗೆ ರೈತರಿಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸಿಕೊಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದನ್ನು ಬಿಟ್ಟು ಲಘುಪೋಷಕಾಂಶಗಳ ಜೊತೆಗೆ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುವಂತೆ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಜಂಗಮಕೋಟೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೋಪಾಲರಾವ್, ಮಧು, ಕನಕಮ್ಮ, ಶ್ರೀನಿವಾಸ್, ಪಿಳ್ಳಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ ಉಟ್ಲು ಮಹೋತ್ಸವ

0

ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ ರಥೋತ್ಸವ ಮತ್ತು ಉಟ್ಲು ಮಹೋತ್ಸವ ಶುಕ್ರವಾರ ನಡೆಯಿತು.
ಮಂಗಳ ವಾದ್ಯಗಳು, ವಿವಿಧ ವೇಷಧಾರಿಗಳು, ವೀರಗಾಸೆ ನೃತ್ಯದೊಂದಿಗೆ ರಥವನ್ನು ಗ್ರಾಮಸ್ಥರು ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೆ ಎಳೆದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ರಥವು ದೇವಾಲಯದ ಬಳಿಗೆ ಸಾಗಿತು. ದೇವಾಲಯದ ಬಳಿ ಬತ್ತಾಸು, ಬುರುಗು, ಖಾರ, ಬಳೆ, ಪಾತ್ರೆ, ಆಟದ ಸಾಮಾನುಗಳು, ತಿಂಡಿ ತಿನಿಸುಗಳು, ಎಳೆನೀರು, ಹಣ್ಣಿನ ಅಂಗಡಿಗಳು, ಪಾನೀಯಗಳು ಇತ್ಯಾದಿ ಮಾರುವ ವಿವಿಧ ಅಂಗಡಿಗಳು ಜನರನ್ನು ಆಕರ್ಷಿಸುತ್ತಿದ್ದವು. ದೇವಾಲಯದಲ್ಲಿ ಪ್ರಸಾದ ವಿನಿಯೋಗ ಹಾಗೂ ದೇವಾಲಯದ ಆವರಣದಲ್ಲಿ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿದ್ದರು. ಸುತ್ತಲಿನ ಗ್ರಾಮಸ್ಥರು ಪಾನಕ ಬಂಡಿಗಳನ್ನು ತಂದು ಬಿಸಿಲಲ್ಲಿ ಸುಸ್ತಾದವರಿಗೆಲ್ಲ ಪಾನಕ ಮತ್ತು ಹೆಸರುಬೇಳೆ ಉಚಿತವಾಗಿ ವಿತರಿಸುತ್ತಿದ್ದರು.
ಸಂಜೆ ಅಮ್ಮನವರ ಕ್ಷೀರ ಉಟ್ಲು ಮತ್ತು ಕಾಯಿ ಉಟ್ಲು ಮಹೋತ್ಸವ ನಡೆಯಿತು. ಡೊಳ್ಳು ಕುಣಿತ ಮತ್ತು ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ನೋಡಲು ಸುತ್ತ ಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸಿದ್ದರು. ರಾತ್ರಿ ‘ಸಾಸುಲು ಚಿನ್ನಮ್ಮ’ ನಾಟಕವನ್ನು ಪ್ರದರ್ಶಿಸಲಾಯಿತು.
ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.

ಪಿಂಚಣಿ ಶಿಬಿರ, ಗುರುತಿನ ಚೀಟಿ, ವಿಮಾ ಯೋಜನೆ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ

0

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವುದು ಹಾಗೂ ಅಗತ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ನೆರವಾಗುತ್ತಿರುವುದಾಗಿ ಎಸ್‍ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಎಸ್‍ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಪಿಂಚಣಿ ಶಿಬಿರ, ಹಿರಿಯ ನಾಗರಿಕರ ಗುರುತಿನ ಚೀಟಿ, ಕಾರ್ಮಿಕರ ಮತ್ತು ಚಾಲಕರ ವಿಮಾ ಯೋಜನೆ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆನೂರು ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳು ಹಾಗೂ ವೀರಾಪುರ, ಬೂದಾಳ, ತಲದುಮ್ಮನಹಳ್ಳಿ ಗ್ರಾಮಗಳ ಜನರಿಗೆ ವಿವಿಧ ಸರ್ಕಾರಿ ಯೋಜನೆಗಳಲ್ಲಿ ಫಲಾನುಭವಿಗಳಾಗಲು ಬೇಕಾದ ದಾಖಲೆ, ಅಫಿಡವಿಟ್ಟುಗಳನ್ನು ಮಾಡಿಸಲು ನೆರವಾಗುತ್ತೇವೆ. ಆರೋಗ್ಯ ಸಂಬಂಧಿ ತೊಂದರೆಗಳನ್ನು ನಿವಾರಿಸಿಕೊಳ್ಳಲು ನೆರವಾಗುತ್ತೇವೆ. ಹಿರಿಯ ನಾಗರಿಕರಿಗೆ ಮಾಸಾಶನ, ವಿಧವಾ ವೇತನ, ಅಂಗವಿಕಲರ ಮಾಸಾಶನ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ಕಾರ್ಮಿಕರ ವಿಮಾ ಯೋಜನೆ, ಚಾಲಕರ ವಿಮಾ ಯೋಜನೆ, ಮನಸ್ವಿನಿ ಮಾಸಾಶನವನ್ನು ಪಡೆಯಲು ಸೂಕ್ತ ದಾಖಲೆಗಳನ್ನು ಒಟ್ಟುಮಾಡಿಕೊಳ್ಳಲು ನಮ್ಮ ಎಸ್‍ಎನ್ ಕ್ರಿಯಾ ಟ್ರಸ್ಟ್ ಸದಸ್ಯರು ಗ್ರಾಮಸ್ಥರಿಗೆ ಸಹಕರಿಸಲಿದ್ದಾರೆ ಎಂದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ದೃಷ್ಟಿ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಮತ್ತು ಕನ್ನಡಕಗಳನ್ನು ಉಚಿತವಾಗಿ ನೀಡಿದರು. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತವಾಗಿ ಕರೆದೊಯ್ದು ದೃಷ್ಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಆರ್.ಶ್ರೀನಿವಾಸ್, ತಾದೂರು ಮಂಜುನಾಥ್, ಬೆಳ್ಳೂಟಿ ಸಂತೋಷ್, ರಮೇಶ್, ಎಸ್.ಎಂ.ನಾರಾಯಣಸ್ವಾಮಿ, ಆಂಜಿನಪ್ಪ, ಮುನಿರಾಜು, ಎ.ಎಂ.ದೇವರಾಜು, ಅಶ್ವತ್ಥನಾರಾಯಣಗೌಡ, ಸುರೇಶ್, ನಿರಂಜನ್, ಚಂದ್ರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶ್ರೀರಾಮ ನವಮಿ ಅಂಗವಾಗಿ ಉಟ್ಲು

0

ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎ. ಹುಣಸೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಂಜನೇಯ ಸ್ವಾಮಿ ದೇವಾಲಯದ ಬಳಿ ಶ್ರೀರಾಮ ನವಮಿ ಅಂಗವಾಗಿ ಉಟ್ಲು ನೆರವೇರಿಸಲಾಯಿತು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ನಿರ್ದೇಶಕರಾಗಿ ನೇಮಕ

0

ಶಿಡ್ಲಘಟ್ಟದ ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಗರಾಜ್ ಅವರನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ಕಾರ್ಯದರ್ಶಿ ನೇಮಿಸಿದ್ದಾರೆ.

ಜಿಲ್ಲೆಗೇ ಪ್ರಥಮವಾಗಿ ಜೆ.ವೆಂಕಟಾಪುರ ಸರ್ಕಾರಿ ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ

0

ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲ ಎಂಬುದನ್ನು ಪೋಷಕರಲ್ಲಿ ಮನಗಾಣಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಿ.ಸಿ.ಕ್ಯಾಮರ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಗೇ ಪ್ರಥಮವಾಗಿ ಜೆ.ವೆಂಕಟಾಪುರ ಸರ್ಕಾರಿ ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವಿವಿಧ ದಾನಿಗಳು ನೀಡುವ ಹಣವನ್ನು ಶಾಲೆಯ ಶಿಕ್ಷಕರು ಮತ್ತು ಅಭಿವೃದ್ಧಿ ಸಮಿತಿ ಸದಸ್ಯರು ಸದುಪಯೋಗಪಡಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಶಿಕ್ಷಕರು ಗುಣಾತ್ಮಕವಾಗಿ ಭೋದಿಸುವುದರ ಜೊತೆಗೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಆಕರ್ಷಿತಗೊಳಿಸಬೇಕೆಂದು ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಪರಾಜು ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ವಿಷಾಧನೀಯ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಬೋದನೆ ಉತ್ತಮವಾಗಿರುತ್ತದೆ. ಮಕ್ಕಳನ್ನು ಶಾಲೆಗೆ ದಾಖಲಿಸಿದ ನಂತರ ಪೋಷಕರು ಶಾಲೆಗಳತ್ತ ಹೋಗುವುದಿಲ್ಲ, ಪೋಷಕರು ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ಆಗಾಗ್ಗೆ ವಿಚಾರಿಸುತ್ತಿರಬೇಕು, ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮುನಿಯಪ್ಪ, ತನುಜ ರಘು, ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯತಿ ಸದಸ್ಯೆ ಶೋಭ, ವೆಂಕಟಾಪುರ ಪಂಚಾಯತಿ ಅಧ್ಯಕ್ಷ ರಘುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ನಿವೃತ್ತ ಶಿಕ್ಷಣಾಧಿಕಾರಿ ಹನುಮಂತಪ್ಪ, ಶಾಲಾ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಂಬೇಡ್ಕರ್ ಅವರ ತತ್ವ ಸಿದ್ದಾಂತ ಬಹು ಮುಖ್ಯ

0

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಯುವಪೀಳಿಗೆ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಪಾಡಲು ಸಾದ್ಯವಾಗುತ್ತದೆ ಎಂದು ಮೇಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಗುರುವಾರ ದಲಿತ ಸಂಘಟನೆಗಳಿಂದ ಆಯೋಜನೆ ಮಾಡಲಾಗಿದ್ದ ಅಂಬೇಡ್ಕರ್ ಅವರ ೧೨೫ ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಶಿಕ್ಷಣ ಸಿಗಬೇಕೆಂಬ ಕಲ್ಪನೆಯನ್ನು ಹೊಂದಿದ್ದ ಅಂಬೇಡ್ಕರ್ ಅವರು, ತಮ್ಮ ಜೀವಿತವನ್ನು ಸಮಾಜದಲ್ಲಿ ತುಡಿತಕ್ಕೆ ಒಳಗಾಗಿರುವವರಿಗಾಗಿ ಸಮರ್ಪಣೆ ಮಾಡಿದ್ದರು, ಸಮಾಜದಲ್ಲಿ ಬದಲಾವಣೆಗಳನ್ನು ಕಾಣಬೇಕಾದರೆ, ಎಲ್ಲಾ ವರ್ಗದ ಜನತೆಗೆ ಸಮಾನತೆ ದೊರೆಯಬೇಕಾದರೆ, ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಸಜ್ಜಾಗಬೇಕು, ಯುವಜನತೆ ಪುಸ್ತಕಗಳನ್ನು ಓದುವಂತಹ ಅಭ್ಯಾಸಗಳನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲೂ ಅಂಬೇಡ್ಕರ್ ಭಾವಚಿತ್ರಕ್ಕ ಪೂಜೆ ಸಲ್ಲಿಸಿ ಸಿಹಿ ಹಂಚಿಕೆ ಮಾಡಲಾಯಿತು.
ಇದೇ ವೇಳೆ ದಲಿತ ಸಂಘಟನೆ ಮುಖಂಡರಾದ ಲಕ್ಷ್ಮೀನಾರಾಯಣ, ಹಾಗೂ ಚಲಪತಿ ತಂಡದಿಂದ ಕ್ರಾಂತಿಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ವಿ.ಸಿದ್ದಣ್ಣ, ಸದಸ್ಯರಾದ ಕೆ.ಮಂಜುನಾಥ್, ಸಂದ್ಯಾ, ಎಚ್.ಎನ್.ರೂಪೇಶ್, ಜಿ.ಸಿ.ಶ್ರೀನಿವಾಸಮೂರ್ತಿ, ವಿಮಲಮ್ಮ, ಕೆ.ಜಯರಾಮರೆಡ್ಡಿ, ಸಿ.ಎಂ.ಶ್ರೀನಿವಾಸ್, ಪಾರ್ವತಮ್ಮ, ಮುನಿಕೃಷ್ಣಪ್ಪ, ಮಯೂರ, ಅಣ್ಣಪ್ಪ, ಸಿಬ್ಬಂದಿ ಜಿ.ಎಂ.ಜನಾರ್ಧನ, ಮುಂತಾದವರು ಹಾಜರಿದ್ದರು.

ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು

0

ದೇಶದ ಪ್ರತಿಯೊಂದು ಮಗುವಿಗೂ ಉತ್ತಮವಾದ ಶಿಕ್ಷಣ ಸಿಕ್ಕಿದಾಗ ಮಾತ್ರ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಹೋರಾಟಕ್ಕೆ ಅರ್ಥ ಬರುತ್ತದೆ ಎಂದು ಉಪನ್ಯಾಸಕ ಕೆ.ಮೂರ್ತಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಗುರುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಮತ್ತು ವಿವಿಧ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೫ ನೇ ವರ್ಷದ ಜನ್ಮದಿನಾಚರಣೆ ಹಾಗೂ ಡಾ. ಬಾಬುಜಗಜೀವನರಾಂ ಅವರ ೧೦೯ ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯ ದಬ್ಬಾಳಿಕೆಗಳು, ಶೋಷಣೆಯಿಂದಾಗಿ ನಿರಂತರವಾದ ಚಿಂತನೆಗಳನ್ನು ನಡೆಸಿದ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ತ ಜನರಿಗೂ ನಿಜವಾದ ಸ್ವಾತಂತ್ರ್ಯ ಮತ್ತು ಉತ್ತಮ ಶಿಕ್ಷಣವನ್ನು ಕೊಡಿಸುವುದನ್ನು ಗುರಿಯನ್ನಾಗಿಸಿಕೊಂಡು ಸಂವಿಧಾನ ರಚಿಸಿದರು. ಆದರೆ ಅವರು ರಚಿಸಿದ ಸಂವಿಧಾನ ಹಾಗು ಮೀಸಲಾತಿಯ ಲಾಭ ಪಡೆದುಕೊಂಡು ಬೆಳೆದ ಜನರಿಂದಲೇ ವರ ಆಶಯಗಳಿಗೆ ಧಕ್ಕೆಯಾಗುತ್ತಿದೆ ಎಂದು ವಿಷಾಧಿಸಿದರು.
ಜೀವನವಿಡೀ ದಲಿತರ ಏಳಿಗೆಗಾಗಿ ಶ್ರಮಿಸಿದ ಅವರ ಕನಸನ್ನು ನನಸು ಮಾಡುವಂತಹ ಮಹತ್ತರವಾದ ಜವಾಬ್ದಾರಿ ಇಂದಿನ ಸಂಘಟನೆಗಳ ಮೇಲೆ ನಿಂತಿದೆ ಎಂದ ಅವರು ಅಂಬೇಡ್ಕರ್ ಕೇವಲ ದಲಿತರ ನಾಯಕರಲ್ಲ ಬದಲಿಗೆ ಅವರು ರಾಷ್ಟ್ರನಾಯಕರು, ವಿಶ್ವನಾಯಕರಾಗಿದ್ದಾರೆ ಎಂದರು.
ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಏಳಿಗೆಯಾಗಬೇಕಾದರೆ ರಾಜಕೀಯ ರಂಗದಲ್ಲಿರುವ ಹಾಗೂ ರಾಜಕೀಯ ಮಾಡಲು ಇಚ್ಚಿಸುವ ಜನಪ್ರತಿನಿಧಿಗಳು ಮೊದಲು ಇತಿಹಾಸ ಓದಬೇಕು ಮತ್ತು ಸಂವಿಧಾನದಲ್ಲಿರುವ ಎಲ್ಲಾ ಅಂಶಗಳನ್ನು ಜಾರಿಗೊಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ ಪ್ರತಿಯೊಬ್ಬರೂ ಅಂಬೇಡ್ಕರರ ಜೀವನದ ಉದ್ದೇಶಗಳನ್ನು ಅರ್ಥಮಾಡಿಕೊಂಡು ಅವರ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಹೋಗಬೇಕು, ಅವರ ಹೋರಾಟದ ಹಾದಿಗಳನ್ನು ನೆನಪುಮಾಡಿಕೊಂಡು ಆದರ್ಶ ಜೀವನ ನಡೆಸುವಂತವರಾಗಬೇಕು ಎಂದರು.
ಸಂಘಟನೆಗಳು ಒಗ್ಗೂಡುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟಗಳನ್ನು ಮಾಡಬೇಕು. ದೀನದಲಿತರ ಉದ್ದಾರಕ್ಕಾಗಿ ಚಿಂತನೆ ನಡೆಸುವುದರೊಂದಿಗೆ ಸಮಾಜದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು ಎಂದರು.
ಬೇರೆ ಬೇರೆ ದೇಶಗಳಿಂದ ಆಹಾರ ಧಾನ್ಯಗಳನ್ನು ರಪ್ತು ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯನ್ನುಹುಟ್ಟುಹಾಕಿದ ಮಾಜಿ ಉಪಪ್ರದಾನಿ ಡಾ.ಬಾಬುಜಗಜೀವನರಾಂ ಅವರ ದೂರದೃಷ್ಟಿಯಿಂದ ದೇಶದ ಎಲ್ಲಾ ವರ್ಗದ ಜನರು ಇಂದು ನೆಮ್ಮದಿಯಿಂದ ಊಟ ಮಾಡುವಂತಾಗಿದೆ ಎಂದರು.

ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಗುರುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನರಾಂ ರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಮುಖಂಡರನ್ನು ಸನ್ಮಾನಿಸಲಾಯಿತು.
ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಗುರುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನರಾಂ ರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಮುಖಂಡರನ್ನು ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ತೋಟಗಾರಿಕಾ ಇಲಾಖೆ ಮತ್ತು ರೇಷ್ಮೆ ಇಲಾಖೆಯಿಂದ ನೀಡುವಂತಹ ವಿವಿಧ ಸೌಲಭ್ಯಗಳನ್ನು ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಮುಖಂಡರಾದ ಚಿಕ್ಕಮುನಿಯಪ್ಪ ಹಾಗೂ ಗಂಜಿಗುಂಟೆ ನರಸಿಂಹಮೂರ್ತಿರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ಮುನಿಯಪ್ಪ, ತನುಜಾರಘು, ತಹಸೀಲ್ದಾರ್ ಕೆ.ಎಂ.ಮನೋರಮಾ, ಕ್ಷೇತ್ರ ಶೀಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಶನ್(ನಂದು), ನಗರಸಭೆ ಸದಸ್ಯರಾದ ಅಪ್ಸರ್ಪಾಷ, ಲಕ್ಷ್ಮಯ್ಯ, ವೆಂಕಟಸ್ವಾಮಿ, ಮುಖಂಡರಾದ ಎಸ್.ಎಂ.ರಮೇಶ್ ಮತ್ತಿತರರು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ

0

ನಗರದ ಸಿದ್ಧಾರ್ಥನಗರದ ಬಹುಜನ ವಿದ್ಯಾರ್ಥಿ ಸಂಘ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜಯಂತಿಯ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದರು.
‘ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾಜಮುಖಿ ಆಶಯವನ್ನು ಪಾಲಿಸಲು ನಾವು ರಕ್ತದಾನ ಶಿಬಿರವನ್ನು ನಡೆಸುತ್ತಿದ್ದೇವೆ. ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ವಿಚಾರವನ್ನು ತಿಳಿಸುವ ಕೆಲಸ ಆಗಬೇಕಿದೆ. ಆದರ್ಶ ಮತ್ತು ಗುರಿಯಿಲ್ಲದ ಜೀವನ ನಿರರ್ಥಕ’ ಎಂದು ಬಹುಜನ ವಿದ್ಯಾರ್ಥಿ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ನರೇಶ್ ಬಾಬು ತಿಳಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಗುರುರಾಜರಾವ್, ಬಹುಜನ ವಿದ್ಯಾರ್ಥಿ ಸಂಘದ ಮೂರ್ತಿ, ಸುಂದರರಾಜ್, ಮಂಜುನಾಥ್, ರವಿ, ಮಣಿ, ಮುನಿಯಪ್ಪ, ಆನಂದ, ಮುರಳಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೂಲು ಬಿಚ್ಚಾಣಿಕೆದಾರರ ಆಚರಣೆ
15apr2ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ಪೂಜಮ್ಮ ದೇವಸ್ಥಾನದ ಬಳಿಯ ಕಚೇರಿಯಲ್ಲಿ ಆಚರಿಸಲಾಯಿತು.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ನರಸಿಂಹಪ್ಪ, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಅಜ್ಜಪ್ಪ, ರೀಲರ್ ಅನ್ವರ್ಸಾಬ್, ಕ.ರ.ವೇ ಅಧ್ಯಕ್ಷ ವೆಂಕಟರೋಣಪ್ಪ ಮತ್ತಿತರರು ಹಾಜರದ್ದರು.

ಶುಲ್ಕ ಪಡೆಯುವುದರಲ್ಲಿ ಪಾರದರ್ಶಕತೆಯಿರಲಿ

0

ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯಲು ಬರುವಂತಹ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದ್ದು, ಪಾರದರ್ಶಕತೆ ಕಾಪಾಡದಿರುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಹೇಳಿದರು.
ನಗರದ ಬಿ.ಆರ್.ಸಿ.ಕೇಂದ್ರದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಖಾಸಗಿ ಶಾಲಾ ಮುಖ್ಯಶಿಕ್ಷಕರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ಮತ್ತು ಅನುಧಾನಿತ ಶಾಲೆಗಳಲ್ಲಿ ಸರ್ಕಾರ ನಿಗಧಿಪಡಿಸಿರುವ ಶುಲ್ಕಕಿಂತ ಹೆಚ್ಚಿನ ಹಣವನ್ನು ಸಂಗ್ರಹ ಮಾಡುತ್ತಿದ್ದಾರೆ ಹಾಗೂ ವಸೂಲಿ ಮಾಡುತ್ತಿರುವ ಶುಲ್ಕಗಳಿಗೆ ರಸೀದಿಗಳನ್ನು ನೀಡುತ್ತಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಇಲಾಖೆಯಿಂದ ಕಟ್ಟಿನಿಟ್ಟಿನ ಆದೇಶಗಳು ಬಂದಿದ್ದು, ಯಾವ ಶಾಲೆಯಲ್ಲಿ ಸರ್ಕಾರಿ ಮಾನದಂಡಗಳನ್ನು ನಿರ್ವಹಿಸುವುದಿಲ್ಲವೋ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುತ್ತದೆ.
ಶಾಲೆಯಲ್ಲಿ ನಿಗದಿಪಡಿಸಿರುವ ಶುಲ್ಕದ ಬಗ್ಗೆ ಹಾಗೂ ಶಾಲೆಯಲ್ಲಿ ಲಭ್ಯವಿರುವ ಸೀಟುಗಳು, ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಗಳನ್ನು ಕಡ್ಡಾಯವಾಗಿ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ನಿಗದಿ ಪಡಿಸಿರುವ ಸರ್ಕಾರದ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.
ಎಸ್.ಸಿ.ಎಸ್.ಟಿ. ಮತ್ತು ಗುಂಪು ೦೧ ಮಕ್ಕಳಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ, ಎಲ್.ಕೆ.ಜಿ.ಮತ್ತು ಒಂದನೇ ತರಗತಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಮಕ್ಕಳು ಗಳಿಸಿಕೊಂಡಿರುವ ಅಂಕಗಳನ್ನು ಆಧರಿಸಿ ಆಯ್ಕೆ ಪಟ್ಟಿಯನ್ನು ತಯಾರು ಮಾಡಬೇಕು. ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ೫ ನೇ ತರಗತಿಯವರೆಗೆ ಬೋದನೇತರ ಶುಲ್ಕ ಹಾಗೂ ಬೋದನಾ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದ್ದು, ಅನುದಾನರಹಿತ ಶಾಲೆಗಳಲ್ಲಿ ವಿಶೇಷ ಅಭಿವೃದ್ಧಿ ಶುಲ್ಕವಾಗಿ ೬೦೦ ರೂಪಾಯಿಗಳನ್ನು ನಿಗದಿಪಡಿಸಬಹುದು, ೬ ರಿಂದ ೮ ನೇ ತರಗತಿಯವರೆಗೆ ಬೋದನೇತರ ಶುಲ್ಕ ೩೮ ರೂ ಆರ್.ಟಿ.ಇ.ಅನ್ವಯ, ಭೋಧನಾ ಶುಲ್ಕವಿಲ್ಲ, ವಿಶೇಷ ಅಭಿವೃದ್ಧಿ ಶುಲ್ಕ ೫೦೦, ಅನುದಾನ ರಹಿತ ಶಾಲೆಗಳಲ್ಲಿ ೬೦೦ ರೂಪಾಯಿಗಳು, ೯ ರಿಂದ ೧೦ ನೇ ತರಗತಿಯ ಮಕ್ಕಳಿಗೆ ಬೋಧನೇತರ ಶುಲ್ಕ ೧೮೫ ರೂಪಾಯಿಗಳು, ವಿಶೇಷ ಅಭಿವೃದ್ಧಿ ಶುಲ್ಕ ೫೦೦, ಅನುದಾನರಹಿತ ಶಾಲೆಗಳಲ್ಲಿ ಬೋಧನೇತರ ಶುಲ್ಕ ೧೮೫ ರೂಪಾಯಿಗಳನ್ನು ಮಾತ್ರ ವಸೂಲಿ ಮಾಡಬೇಕು, ವಿದ್ಯಾರ್ಥಿಗಳಿಂದ ಪಡೆದ ಹಣಕ್ಕೆ ಕಡ್ಡಾಯವಾಗಿ ಅಧಿಕೃತ ರಸೀತಿಯನ್ನು ನೀಡಬೇಕು, ಯಾವುದೇ ಚೀಟಿಗಳಲ್ಲಿ ಬರೆದುಕೊಡುವಂತಿಲ್ಲವೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ವಿವಿಧ ಅನುದಾನಿತ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರುಗಳು ಸಭೆಯಲ್ಲಿ ಹಾಜರಿದ್ದರು.

ರೇಣುಕಾ ಯಲ್ಲಮ್ಮದೇವಿಯ ಹೂವಿನ ಕರಗ

0

ನಗರದಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿಯ ಹೂವಿನ ಕರಗವು ಭಾನುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಮದ್ಯಾಹ್ನ ದೇವರಿಗೆ ಕಲ್ಯಾಣೋತ್ಸವ ನಡೆಯಿತು. ಸಂಜೆ ದಾಸಯ್ಯನವರ ಮಣಿಸೇವೆ. ನಂತರ ಕರಗ ಹೊರುವವರನ್ನು ಬಾವಿಯ ಬಳಿ ಕರೆದೊಯ್ದು ಗಂಗೆ ಪೂಜೆ ಮಾಡಿಸಿದರು. ಅವರಿಗೆ ದೇವಾಲಯದಲ್ಲಿ ಕಪ್ಪು ಬಳೆ, ಸೀರೆ, ಒಡವೆ ಇತ್ಯಾದಿ ಸ್ತ್ರೀಯರ ಅಲಂಕಾರ ಮಾಡಿದರು. ಕರಗಕ್ಕೆ ಪೂಜೆ ಸಲ್ಲಿಸಿ ತಲೆಯ ಮೇಲೆ ಹೊರಿಸಲಾಯಿತು. ಆಗ ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಎಲ್ಲಾ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿದ್ದರು. ವಾದ್ಯಗೋಷ್ಠಿಯನ್ನೂ ಆಯೋಜಿಸಲಾಗಿತ್ತು.
ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ ಪ್ರಾಚೀನವಾದದ್ದು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ಇದನ್ನು ಶಕ್ತಿಯ ಆರಾಧನೆ ಎಂದು ಪರಿಗಣಿಸಿರುವುದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ.
ತಮಿಳುನಾಡಿನಿಂದ ೧೪ನೆಯ ಶತಮಾನದಲ್ಲಿ ನಂದಿದುರ್ಗದಲ್ಲಿ ಬಂದ ನೆಲೆಸಿದ ರಣಭೈರೇಗೌಡರ ಮೂಲಕ ಈ ಕರಗದ ಕಲೆ ನಮ್ಮ ನಾಡಿಗೆ ಬಂತೆಂದು ನಂಬಲಾಗಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡ ಈತನ ವಂಶಸ್ಥನೇ. ಇವರು ಪಾಳೆಪಟ್ಟುಗಳನ್ನು ಕಟ್ಟಿ ಆಳ್ವಿಕೆ ಮಾಡಿರುವ ಚಿಕ್ಕಬಳ್ಳಾಪುರ, ದೊಟ್ಟಬಳ್ಳಾಪುರ, ಕೋಲಾರ, ಯಲಹಂಕ, ಬೆಂಗಳೂರು, ಆನೇಕಲ್ಲು, ಮಾಗಡಿ ಮುಂತಾದೆಡೆಯೆಲ್ಲ ಈ ಕರಗ ನಡೆಯುವುದು ಇದಕ್ಕೆ ಪೂರಕವಾಗಿದೆ.
ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.

ಗಿಡ ಬದುಕಿಸಲು ಟ್ಯಾಂಕರ್ ನೀರು

0

ಬೇಸಿಗೆಯ ಧಗೆ ಸುಡುತ್ತಿದೆ. ನೆಲವು ನೀರಿಗಾಗಿ ಪರಿತಪಿಸುತ್ತಿದೆ. ಆಳದಲ್ಲಿ ಬೇರೂರಿರುವ ಮರಗಳು ಮಳೆ ಬರುವವರೆಗೂ ತಡೆಯಬಲ್ಲವು. ಆದರೆ ಕಳೆದ ವರ್ಷ ನೆಟ್ಟ ಗಿಡಗಳು ಈ ಧಗೆಗೆ ಒಳಗಿಹೋಗುತ್ತವೆ.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯತಿಯ ೧೧ನೆ ಮೈಲಿ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಆವರಣದಲ್ಲಿ ಕಳೆದ ವರ್ಷವಷ್ಟೆ ಯುವಶಕ್ತಿ ಸಂಘಟನೆಯ ಸದಸ್ಯರು ಗಿಡಗಳನ್ನು ನೆಟ್ಟಿದ್ದರು. ತಾವು ನೆಟ್ಟ ಗಿಡಗಳು ಬಿಸಿಲಿಗೆ ಬಾಡದಂತೆ ಅವರು ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.
ನಾವೆಲ್ಲರೂ ವ್ಯರ್ಥ ಮಾಡುವ ನೀರನ್ನು ಮನೆಯ ಹತ್ತಿರವಿರುವ ಗಿಡ ಮರಗಳಿಗೆ ಹಾಕುವದರೊಂದಿಗೆ ಈ ಬೇಸಿಗೆಯಲ್ಲಿ ನೀರಿಲ್ಲದೆ ಒಣಗುವ ಒಂದು ಗಿಡವನ್ನಾದರು ಬದುಕಿಸೋಣ ಎನ್ನುವ ಯುವಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯಬಾವರೆಡ್ಡಿ, ನೀರು ಹಾಯಿಸಲು ಶ್ರಮಿಸಿದ ಕುದಪಕುಂಟೆ ವೆಂಕಟೇಶ್, ನಲ್ಲೋಜನಹಳ್ಳಿ ನಾಗರಾಜ್ ಮತ್ತು ಕಾಲೇಜಿನ ಸಿಬ್ಬಂದಿಗೆ ಧನ್ಯವಾದವನ್ನು ತಿಳಿಸುತ್ತಾರೆ.

ಮಹಿಳೆಯರೇ ಅಭಿನಯಿಸಿದ್ದ ಕನ್ನಡ ಪೌರಾಣಿಕ ನಾಟಕ

0

ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ಗ್ರಾಮದ ಗುಟ್ಟಾಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ‘ಕುರು ಪಾಂಡವ ಸಂಗ್ರಾಮ – ಶ್ರೀಕೃಷ್ಣ ಸಂಧಾನ’ ಎಂಬ ಕನ್ನಡ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿತ್ತು.
ನಾಟಕದ ವಿಶೇಷವೆಂದರೆ ಎಲ್ಲಾ ಪಾತ್ರಗಳನ್ನೂ ಸ್ತ್ರೀಯರೇ ನಿರ್ವಹಿಸಿದ್ದು, ಅದರಲ್ಲೂ ಮತ್ತೂ ವಿಶೇಷವೆಂದರೆ ಒಂದೇ ಕುಟುಂಬಕ್ಕೆ ಸೇರಿದ ಹದಿನಾರು ಮಂದಿ ಸ್ತ್ರೀಯರು ನಾಟಕದಲ್ಲಿ ಪಾತ್ರವಹಿಸಿ ಅಭಿನಯಿಸಿದ್ದರು. ತೆಲುಗು ಪೌರಾಣಿಕ ನಾಟಕಗಳನ್ನಷ್ಟೇ ಆಡುತ್ತಿದ್ದ ತಾಲ್ಲೂಕಿನಲ್ಲಿ ಕನ್ನಡದ ಪೌರಾಣಿಕ ನಾಟಕ ನಡೆದದ್ದು ಕೂಡ ವಿಶೇಷವಾಗಿತ್ತು.
ಬೆಂಗಳೂರಿನ ಶ್ರೀ ಆರಾದನಾ ಪ್ರಸನ್ನ ಕೃಪಾ ಪೋಷಿತ ನಾಟಕ ಮಂಡಳಿಯ ಮಹಿಳಾ ಸದಸ್ಯರು ದುರ್ಯೋಧನ, ದುಶ್ಯಾಸನ, ಕೃಷ್ಣ, ಭೀಮ, ಶಕುನಿ, ವಿಧುರ, ಭೀಷ್ಮ, ಅರ್ಜುನ, ದ್ರೋಣ, ಕರ್ಣನ ಪಾತ್ರಗಳನ್ನು ನಿರ್ವಹಿಸಿ ಯಾವುದೇ ಪುರುಷ ಪಾತ್ರಧಾರಿಗೂ ಕಡಿಮೆಯಿರದಂತೆ ಲೀಲಾಜಾಲವಾಗಿ ಅಭಿನಯಿಸಿದರು. ವೀರ, ಕ್ರೌರ್ಯ, ಭೀಭತ್ಸ, ಕೋಪ, ಶಾಂತ, ಹಾಸ್ಯ ಮುಂತಾದ ಪೌರುಷರಸಗಳನ್ನು ಅಭಿನಯದಲ್ಲಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು. ಹೆಣ್ಣು ಪಾತ್ರಗಳಂತೂ ತಮಗೆ ತಾವೇ ಸಾಟಿಯೆಂಬಂತೆ ಉತ್ತರೆ, ದ್ರೌಪದಿ, ಕುಂತಿ ಮೊದಲಾದ ಪಾತ್ರಗಳಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ತಾಲ್ಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ನಾಟಕ ವೀಕ್ಷಿಸಿದರು. ರಾತ್ರಿ 9 ಗಂಟೆಗೆ ಪ್ರಾರಂಭವಾದ ನಾಟಕ ಬೆಳಗಿನ ಜಾವದವರೆಗೂ ನಡೆದರೂ ಜನರು ಕುಳಿತು ನೋಡಿದರು. ಆಗಾಗ ಚಪ್ಪಾಳೆ, ಶಿಳ್ಳೆಗಳ ಮೂಲಕ ಮೆಚ್ಚುಗೆ ಮತ್ತು ಪ್ರೋತ್ಸಾಹ ವ್ಯಕ್ತಪಡಿಸಿದರು.
‘ನಮ್ಮ ಕುಟುಂಬದವರೆಲ್ಲರೂ ತಮ್ಮನ್ನು ರಂಗಭೂಮಿಗೆ ಸಮರ್ಪಿಸಿಕೊಂಡಿದ್ದಾರೆ. ಪ್ರತಿಯೊಬ್ಬರು ಒಂದಲ್ಲ ಒಂದು ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತರು. ನಾಟಕದ ನಿರ್ದೇಶನ, ವಾದ್ಯವೃಂದ, ಪ್ರಸಾದನ, ಅಭಿನಯ ಎಲ್ಲದರಲ್ಲೂ ತೊಡಗಿಸಿಕೊಳ್ಳುತ್ತೇವೆ. ಗಂಡಸರೆಲ್ಲ ವಾದ್ಯ, ಸಂಗೀತ, ನಿರ್ದೇಶನ ಮುಂತಾದ ತೆರೆ ಮರೆಯ ಕೆಲಸಗಳನ್ನು ನಡೆಸುತ್ತಾ ಮಹಿಳೆಯರನ್ನು ಪ್ರೋತ್ಸಾಹಿಸುವ ಕಾರಣ ಮಹಿಳೆಯರೇ ಅಭಿನಯಿಸುವ ನಾಟಕ ತಂಡವನ್ನು ಕಟ್ಟಿಕೊಂಡು ರಾಜ್ಯದ ವಿವಿದೆಡೆ ಪ್ರವಾಸ ಕೈಗೊಂಡಿದ್ದೇವೆ. ಎಲ್ಲರೂ ಸಂಬಂಧಿಗಳೇ ಆಗಿದ್ದು, ಕೌಟುಂಬಿಕ ನಾಟಕ ತಂಡವಾಗಿದ್ದೇವೆ. ಪೌರಾಣಿಕ ನಾಟಕವನ್ನು ಗ್ರಾಮದಲ್ಲಿ ಆಡಿಸಿದಾಗ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ನಾವು ನಾಟಕವಾಡಿದ ಮರುದಿನ ಮಳೆ ಬಂದ ನಿರ್ದರ್ಶನಗಳೂ ಇದ್ದು ನಾವೂ ಅವರ ನಂಬಿಕೆಗೆ ಬೆರಗಾಗಿದ್ದೇವೆ’ ಎನ್ನುತ್ತಾರೆ ದುರ್ಯೋಧನ ಪಾತ್ರಧಾರಿ ವರಲಕ್ಷ್ಮೀ.