ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ನಿರ್ಮಿಸಲಾಗುತ್ತಿರುವ ಶುದ್ಧ ನೀರಿನ ಘಟಕಕ್ಕೆ ಈಗಾಗಲೇ ೨೦*೧೨ ಸ್ಥಳವನ್ನು ಗ್ರಾಮ ಪಂಚಾಯಿತಿಗೆ ದಾನವಾಗಿ ನೀಡಿದ್ದು, ಗ್ರಾಮದ ಅಭಿವೃದ್ಧಿ ಸಹಿಸದ ಕೆಲ ಕಾಂಗ್ರೆಸ್ ಮುಖಂಡರು ಶುದ್ಧ ನೀರಿನ ಘಟಕವನ್ನು ಖಾಸಗಿ ಸ್ಥಳದಲ್ಲಿ ನಿರ್ಮಿಸಿದ್ದಾರೆ ಎಂದು ಹೇಳುವ ಮೂಲಕ ಗ್ರಾಮಸ್ಥರಲ್ಲಿ ಗೊಂದಲ ಮೂಡಿಸುವುದರೊಂದಿಗೆ ಗ್ರಾಮದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪ ಮುನಿಶಾಮಿರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂದಾಳ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಈಗಾಗಲೇ ಅವಶ್ಯಕ ಸಿದ್ದತೆಗಳನ್ನು ನಡೆಸಲಾಗಿದೆ. ಗ್ರಾಮದಲ್ಲಿ ಯಾವುದೇ ಸರ್ಕಾರಿ ಅಥವ ಗ್ರಾಮ ಪಂಚಾಯತಿಗೆ ಸೇರಿದ ಸ್ಥಳವಿಲ್ಲದ ಕಾರಣ ನಮ್ಮದೇ ಸ್ವಂತ ಜಮೀನಿನಲ್ಲಿ ೨೦*೧೨ ಸ್ಥಳವನ್ನು ಗ್ರಾಮ ಪಂಚಾಯತಿಗೆ ದಾನ ಪತ್ರದ ಮೂಲಕ ಬರೆದುಕೊಡಲಾಗಿದ್ದು, ಅಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರ ಸಹಿಗಳನ್ನೊಳಗೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮದ ಅಭಿವೃದ್ಧಿ ಸಹಿಸದ ಕೆಲ ಕಾಂಗ್ರೆಸ್ ಮುಖಂಡರು ಶುದ್ಧ ನೀರಿನ ಘಟಕ ನಿರ್ಮಿಸಲು ತೊಂದರೆ ಕೊಡುವುದು ಸೇರಿದಂತೆ ಬೂದಾಳ ಗ್ರಾಮದ ಜನರಲ್ಲಿ ಗೊಂದಲ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ವಿನಾಕಾರಣ ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಅಡ್ಡಿಯುಂಟುಮಾಡುವ ಕಾಂಗ್ರೆಸ್ ಮುಖಂಡರು ಅವರದೇ ಸ್ಥಳವನ್ನು ಗ್ರಾಮ ಪಂಚಾಯತಿಗೆ ಬರೆದುಕೊಟ್ಟಲ್ಲಿ ಅದೇ ಸ್ಥಳದಲ್ಲಿ ನಿರ್ಮಿಸುತ್ತಿದ್ದೆವು. ನಮ್ಮದೇ ಸ್ವಂತ ಸ್ಥಳವನ್ನು ಗ್ರಾಮ ಪಂಚಾಯತಿಗೆ ಬರೆದುಕೊಟ್ಟು ನಂತರ ಆ ಸ್ಥಳ ಗ್ರಾಮ ಪಂಚಾಯತಿಗೆ ಸೇರಿದ ಆಸ್ತಿಯಾಗುತ್ತದೆ. ವಿನಾಕಾರಣ ವಿಷಯ ಗೊತ್ತಿಲ್ಲದೇ ಖಾಸಗಿ ಜಾಗದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸುತ್ತಿದ್ದಾರೆ ಎಂದು ಜನರನ್ನು ಮರಳು ಮಾಡುವುದನ್ನು ಕೂಡಲೇ ಕಾಂಗ್ರೆಸ್ ಮುಖಂಡರು ಬಿಡಬೇಕು ಎಂದಿದ್ದಾರೆ.
ಬೂದಾಳ ಹಾಗು ವೀರಾಪುರ ಗ್ರಾಮಗಳೆರಡೂ ಹೊಂದಿಕೊಂಡಂತಿದ್ದು ಎರಡೂ ಗ್ರಾಮಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಎರಡೂ ಗ್ರಾಮಗಳ ಮಧ್ಯದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲು ಆಲೋಚಿಸಿತ್ತಾದರೂ ಸ್ಥಳಾವಕಾಶದ ಕೊರತೆಯಿಂದ ಬೂದಾಳ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ವೀರಾಪುರ ಗ್ರಾಮದಲ್ಲಿಯೂ ಶುದ್ಧ ನೀರಿನ ಘಟಕ ನಿರ್ಮಿಸಲು ಈಗಾಗಲೇ ಶಾಸಕ ಎಂ.ರಾಜಣ್ಣರೊಂದಿಗೆ ಚರ್ಚಿಸಿದ್ದು ವೀರಾಪುರ ಗ್ರಾಮದಲ್ಲಿಯೂ ಒಂದು ಶುದ್ಧ ನೀರಿನ ಘಟಕ ನಿರ್ಮಿಸಲು ಶಾಸಕರು ಭರವಸೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ವೀರಾಪುರ ಗ್ರಾಮದಲ್ಲಿಯೂ ಒಂದು ಶುದ್ಧ ನೀರಿನ ಘಟಕ ನಿರ್ಮಿಸಲಾಗುವುದು. ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಲು ಕಾಂಗ್ರೆಸ್ ಮುಖಂಡರು ಮುಂದಾಗಬೇಕು ಎಂದಿದ್ದಾರೆ.
ಶುದ್ಧ ನೀರಿನ ಘಟಕ ನಿರ್ಮಾಣಕ್ಕೂ ರಾಜಕೀಯ
ಕಲಾ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮ
ವಿದ್ಯಾರ್ಥಿ ಹಂತದ ಪ್ರಮುಖ ಘಟ್ಟದಲ್ಲಿ ತೆಗೆದು ಕೊಂಡ ನಿರ್ಣಯವು ಜೀವನವನ್ನು ನಿರ್ದೇಶಿಸುತ್ತದೆ. ಹಣ ಸಂಪಾದನೆಯ ಜೊತೆಗೆ ನಮ್ಮ ಜೀವನ ರೂಪಿಸಿದ ಸಮಾಜಕ್ಕೆ ಋಣಿಯಾಗುವುದನ್ನು ಮರೆಯಬಾರದು ಎಂದು ನಿವೃತ್ತ ಪಾಂಶುಪಾಲ ಎಂ.ಎನ್. ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಕಲಾ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಕಾಳಜಿ, ಹಿರಿಯರ ಆದರ್ಶ, ರಾಷ್ಟ್ರಪ್ರೇಮ, ಪರಂಪರೆಯ ಅರಿವು, ಸಾಮಾಜಿಕ ಬದ್ಧತೆ, ಶಿಸ್ತು, ಸಾಮಾಜಿಕ ಕಳಕಳಿ, ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಅನುಭವಗಳು, ಗುರುಗಳೊಂದಿಗೆ ಹಾಗೂ ಸಹಪಾಠಿಗಳೊಂದಿಗಿನ ಅನುಭವವನ್ನು ತಿಳಿಸಿದರು. ತಮ್ಮ ಮುಂದಿನ ಜೀವನದ ಗುರಿಗಳ ಬಗ್ಗೆ ಅನಿಸಿಕೆಯನ್ನು ಹೇಳಿದರು.
ಪ್ರಾಂಶುಪಾಲ ಚಂದ್ರಾನಾಯಕ್, ಉಪನ್ಯಾಸಕರಾದ ರಮೇಶ್ ರೆಡ್ಡಿ, ನಾಯ್ಡು, ರಾಮಚಂದ್ರಪ್ಪ, ಛಾಯಣ್ಣ, ವೆಂಕಟರೋಣಪ್ಪ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದ ಸ್ವಚ್ಛತೆಗಾಗಿ ಡಿ.ಪಿ.ಆರ್ ವರದಿ
ನಗರದ ಸ್ವಚ್ಛತೆ ಕಾಪಾಡಲು ಸ್ವಚ್ಛಭಾರತ್ ಮಿಶನ್ ಯೋಜನೆಗಾಗಿ ಡಿ.ಪಿ.ಆರ್ ವರದಿ ತಯಾರಿಸಲಾಗಿದೆ. ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ 20 ಟನ್ ಕಸ ವಿಲೇವಾರಿ ಮಾಡುವ ರೂಪುರೇಷೆಯನ್ನು ಸಿದ್ಧಪಡಿಸಿರುವುದಾಗಿ ಪೌರಾಯುಕ್ತ ಹರೀಶ್ ತಿಳಿಸಿದರು.
ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ನಗರಸಭೆ ಸದಸ್ಯರು ಈ ವರದಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅನುಮೋದಿಸಬೇಕೆಂದು ಹೇಳಿದರು.
2011ರ ಜನಗಣತಿಯ ಪ್ರಕಾರ ನಗರದ ಜನಸಂಖ್ಯೆ 51,159 ರಷ್ಟಿದೆ. 5 ಚದರ ಕಿಮೀ ನಗರವನ್ನು 27 ವಾರ್ಡುಗಳಾಗಿ ವಿಂಗಡಿಸಲಾಗಿದ್ದು, 70 ಕಿಮೀರಷ್ಟು ರಸ್ತೆಗಳನ್ನು ಹೊಂದಿದೆ. 10,159 ಮನೆಗಳಿವೆ. ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ವರದಿನ್ನು ತಯಾರಿಸಿದೆ. ಕೇಂದ್ರದಿಂದ ಸಿಗುವ ಅನುದಾನಗಳನ್ನು ಬಳಸಿ ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬಹುದು. ಹೆಚ್ಚು ಮಂದಿ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ ಎಂದು ವಿವರಿಸಿದರು.
ಸಭೆಯಲ್ಲಿ ಎಂಜಿನಿಯರ್ ರಂಗನಾಥ್ ಡಿ.ಪಿ.ಆರ್ ವರದಿಯನ್ನು ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ನಗರಸಭಾ ಸದಸ್ಯರಿಗೆ ವಿವರಿಸಿದರು.
ನಗರಸಭಾ ಸದಸ್ಯ ಇಲಿಯಾಜ್, ‘ನಮ್ಮ ವಾರ್ಡ್ ಸ್ವಚ್ಛಗೊಳಿಸುತ್ತಿಲ್ಲ. ನೀರಿನ ಅನಾನುಕೂಲತೆಯಿದೆ. ಶಾಲೆಯ ಬಳಿ ಇದುವರೆಗೂ ನೀರಿನ ನಲ್ಲಿ ಹಾಕಲು ಆಗಿಲ್ಲ. ಎಷ್ಟೋಬಾರಿ ಈ ಬಗ್ಗೆ ತಿಳಿಸಿದರೂ ಕೆಲಸ ಮಾಡಿಲ್ಲ. ಈ ತಾರತಮ್ಯ ಧೋರಣೆ ಏಕೆ’ ಎಂದು ಪೌರಾಯುಕ್ತ ಹರೀಶ್ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಪೌರಾಯುಕ್ತರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕೆಲವು ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದ ನಂತರ ಸಭೆ ಮುಂದುವರೆಯಿತು. ಸಭೆಯಲ್ಲಿ ನಗರಸಭೆಯ ಸದಸ್ಯರು ಹಾಜರಿದ್ದರು.
ಮಕ್ಕಳ ಬರವಣಿಗೆಯಿಂದ ಲಭಿಸಿದ ಶಾಲೆಗೆ ಕೊಡುಗೆ
ಶಾಲೆಯ ಮಕ್ಕಳ ಬರವಣಿಗೆಯು ಶಾಲೆಗೆ ದಾನಿಗಳನ್ನು ಕರೆತಂದ ಘಟನೆ ತಾಲ್ಲೂಕಿನ ಕನ್ನಮಂಗಲದಲ್ಲಿ ನಡೆದಿದೆ.
ತಾಲ್ಲೂಕಿನ ಕನ್ನಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕತೆ, ಕವನ, ನಾಟಕ, ಅನುಭವ, ಚಿತ್ರ ಮುಂತಾದ ಬರವಣಿಗೆಯನ್ನು ಪ್ರತೀ ವರ್ಷ ಅವರ ಶಿಕ್ಷಕರು ‘ಶಾಮಂತಿ’ ಎಂಬ ಪುಸ್ತಕವನ್ನು ಹೊರತರುತ್ತಾರೆ. ಈ ಪುಸ್ತಕಕ್ಕೆ ರಾಜ್ಯಮಟ್ಟದ ಪ್ರಶಸ್ತಿಯೂ ಲಭಿಸಿದೆ.
ಶಾಲೆಯ ಶಾಮಂತಿ ಪುಸ್ತಕ ಓದಿ ಪ್ರೇರಣೆಗೊಂಡು ಈ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿ ಬೆಂಗಳೂರಿನ ಶಿಶುತಜ್ಞ ವೈದ್ಯರಾದ ಡಾ. ಇಲಾನಾ ಕಾರ್ಯಪ್ಪ ಸ್ವಯಂಪ್ರೇರಣೆಯಿಂದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಅವರು ೧೩,೦೦೦ ರೂ. ಮೌಲ್ಯದ ಪ್ರಿಂಟರ್ ಅನ್ನು ಶಾಲೆಗೆ ಕೊಡುಗೆಯಾಗಿ ಬುಧವಾರ ನೀಡಿದರು. ಇದಲ್ಲದೇ ಶಾಲೆಯ ಮಕ್ಕಳಿಗೆ ಪುಸ್ತಕಗಳು, ಕರಕುಶಲ ಕಲೆಯ ಸಾಮಾಗ್ರಿಗಳನ್ನು ನೀಡಿದರು.
ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಕ್ಕಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಬಾಲ್ಯ, ಕೊಡಗಿನ ಜೀವನ ಶೈಲಿ, ವಿದ್ಯಾಭ್ಯಾಸ, ಪ್ರವಾಸ, ಹವ್ಯಾಸ ಹಾಗೂ ವಿದೇಶಗಳ ಅನುಭವಗಳ ಕುರಿತು ಮಕ್ಕಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಇದಲ್ಲದೇ ಮಕ್ಕಳನ್ನು ವಿವಿಧ ಪ್ರಶ್ನೆಗಳನ್ನು ಕೇಳಿ ಟಿ.ವಿ. ಹಾಗೂ ಮೊಬೈಲ್ ಫೋನ್ಗಳಿಂದ ಆದಷ್ಟು ದೂರವಿದ್ದು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿ ಡಿ.ಕೆ.ಕಿರಣ್ ಮಾತನಾಡಿ, ನಾವು ಶಾಮಂತಿ ಪುಸ್ತಕ ಮಾಡಲು ಪ್ರಿಂಟರ್ ಕೊರತೆ ಇತ್ತು ಇನ್ನು ಸುಲಭವಾಗಿ ನಾವು ವಿವಿಧ ಪುಸ್ತಕಗಳನ್ನು ಮಾಡುತ್ತೇವೆ ಎಂದು ಅನಿಸಿಕೆ ವ್ಯಕ್ತಪಡಿಸಿದನು.
ಈ ಸಂದರ್ಭದಲ್ಲಿ ಗ್ರಾಮದ ಸ್ನೇಹ ಯುವಕರ ಸಂಘದ ಅಧ್ಯಕ್ಷರಾದ ಕೆ.ವಿ. ವಸಂತ ವಲ್ಲಭ ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ. ಶಿವಶಂಕರ್, ಜೆ. ಶ್ರೀನಿವಾಸ್, ಎಸ್. ಕಲಾಧರ್ ಹಾಗೂ ಎನ್. ಪದ್ಮಾವತಿ ಹಾಜರಿದ್ದರು.
ಕನ್ನಡ ಭವನ ನಿರ್ಮಿಸಲು ನಿವೇಶನ ದೊರಕಿಸಿಕೊಡಿ
ನಗರದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನ ದೊರಕಿಸಿಕೊಡಬೇಕು ಮತ್ತು ಕನ್ನಡ ಸಾಹಿತ್ಯ ಪರಿಷತ್ಗೆ ಕಛೇರಿಯನ್ನು ದೊರಕಿಸಿಕೊಡುವಂತೆ ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೇತೃತ್ವದಲ್ಲಿ ಕ.ಸಾ.ಪ ಸದಸ್ಯರು ಗುರುವಾರ ಶಾಸಕ ಎಂ.ರಾಜಣ್ಣ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ನಿರ್ವಹಿಸಲು ಮತ್ತು ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ನಗರದಲ್ಲಿ ಕನ್ನಡ ಭವನದ ಅವಶ್ಯಕತೆಯಿರುವುದರಿಂದ ಸೂಕ್ತವಾದ ನಿವೇಶನವನ್ನು ಕನ್ನಡ ಭವನ ನಿರ್ಮಿಸಲು ದೊರಕಿಸಿಕೊಡಿ. ಇದರಿಂದ ತಾಲ್ಲೂಕಿನ ಎಲ್ಲಾ ಸಾಹಿತ್ಯಾಸಕ್ತರು ಹಾಗೂ ಕಲಾಭಿಮಾನಿಗಳಿಗೆ ಅನುಕೂಲವಾಗುತ್ತದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ನಡೆಸಲು ನಗರದಲ್ಲಿ ಕಚೇರಿ ಸೌಲಭ್ಯವಿಲ್ಲ. ಇದರಿಂದ ಪರಿಷತ್ ಕಾರ್ಯ ನಡೆಸಲು ತುಂಬಾ ತೊಂದರೆಯಾಗುತ್ತದೆ. ಹಾಗಾಗಿ ನಗರದ ಕೋಟೆ ಬಾಲಕರ ಶಾಲೆ ಆವರಣದಲ್ಲಿ ಒಂದು ಕೊಠಡಿಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಗಾಗಿ ಮುಂದಿನ ಕನ್ನಡ ಭವನ ನಗರದಲ್ಲಿ ಪ್ರಾರಂಭವಾಗುವವರೆಗೂ ದೊರಕಿಸಿಕೊಡಬೇಕೆಂದು ಮನವಿಯನ್ನು ಸಲ್ಲಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ತಾಲ್ಲೂಕು ಕಸಾಪ ಕಛೇರಿಗೆ ಕೊಠಡಿಯನ್ನು ಕೊಡಿಸಲಾಗುವುದು. ಸೂಕ್ತ ನಿವೇಶನವನ್ನು ಕನ್ನಡ ಭವನಕ್ಕೆ ನೀಡಲಾಗುವುದು. ಈ ಮೂಲಕ ಕನ್ನಡ ಕಾರ್ಯಕ್ರಮಗಳು ಸದಾ ನಡೆಯುವಂತಾಗಲಿ ಎಂದು ಭರವಸೆ ನೀಡಿದರು.
ಕ.ಸಾ.ಪ ಪದಾಧಿಕಾರಿಗಳಾದ ಎಸ್.ವಿ.ನಾಗರಾಜರಾವ್, ಗುರುರಾಜರಾವ್, ವಿ.ಕೃಷ್ಣ, ಕೆ.ಮಂಜುನಾಥ್, ಕೃ.ನಾ.ಶ್ರೀನಿವಾಸ್, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಮಂಜುನಾಥ್, ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನ ವಿವಿದೆಡೆ ಬಾಬು ಜಗಜೀವನರಾಂ ಭವನ ಹಾಗು ಸಮುದಾಯ ಭವನ
ಬಾಬು ಜಗಜೀವನರಾಂ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ ಬದಲಿಗೆ ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಬಾಬು ಜಗಜೀವನರಾಂರ ೧೦೯ ನೇ ಜನ್ಮದಿನದ ಅಂಗವಾಗಿ ಮಂಗಳವಾರ ತಾಲ್ಲೂಕಿನ ವಿವಿದೆಡೆ ಬಾಬು ಜಗಜೀವನರಾಂ ಭವನ ಹಾಗು ಸಮುದಾಯ ಭವನಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಶೋಷಿತವರ್ಗ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ಹೋಗಲಾಡಿಸುವ ಸಲುವಾಗಿ ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದರೆ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯರೂಪಕ್ಕೆ ತಂದ ಕೀರ್ತಿ ಡಾ. ಬಾಬು ಜಗಜೀವನರಾಮ್ ರವರಿಗೆ ಸಲ್ಲುತ್ತದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ತಂದಂತಹ ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರವಾದರೂ ಜನರಲ್ಲಿರುವ ಮೂಡನಂಬಿಕೆ ಹಾಗು ಮೌಡ್ಯತೆಯನ್ನು ಹೋಗಲಾಡಿಸುವ ದೃಷ್ಠಿಯಿಂದ ತಾಲ್ಲೂಕಿನಲ್ಲಿ ಐದು ಸಮುದಾಯ ಭವನಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ ಎಂದರು.
ತಾಲ್ಲೂಕಿನ ಗಂಭೀರನಹಳ್ಳಿ ಸೇರಿದಂತೆ ಚಿಕ್ಕದಾಸರಹಳ್ಳಿ, ವೈ ಹುಣಸೇನಹಳ್ಳಿ, ಗಂಜಿಗುಂಟೆ ಗ್ರಾಮಗಳಲ್ಲಿ ತಲಾ ೧೦ ಲಕ್ಷ ರೂ ಗಳ ವೆಚ್ಚದಲ್ಲಿ ಬಾಬು ಜಗಜೀವನರಾಂ ಭವನ ಹಾಗು ಚಿಂತಡಿಪಿ ಗ್ರಾಮದಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಚೀಮಂಗಲ ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್ ಮುಖಂಡರಾದ ಬ್ಯಾಟರಾಯಶೆಟ್ಟಿ, ಬೈರೇಗೌಡ, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚೌಡೇಶ್ವರಿ ದೇವಾಲಯದಲ್ಲಿ ನಡೆದ ಅಲಗುಸೇವೆ
‘ಶ್ರೀಜಗದಾಂಬ ಶೃಂಗಾರ ಚೌಡಾಂಬ, ರಾಜರಾಜೇಶ್ವರಿ ರಮಣೀ ಮುಖಾಂಬ, ಭುಜಗಭೂಷಣ ಪಾಣಿ, ಭಳಿರೇ ಗೀರ್ವಾಣಿ, ಅಜನುರಾರ್ಜಿತ ಅಂಬುಜಾ ಪಾಣಿ, ನಿನ್ನು ನೇ ವರ್ಣಿಂಪ ಎಂತಡವಾಡನು…’ ಎಂದು ಸಾಗುವ ಚೌಡೇಶ್ವರಿ ದೇವಿಯ ದಂಡಕವನ್ನು ಪಠಿಸುತ್ತಾ ಎದೆಗೆ ಭರ್ಜಿಗಳಿಂದ ಚುಚ್ಚಿಕೊಳ್ಳುವುದನ್ನು ಜನರು ಭಯ, ಭೀತಿ ಮತ್ತು ಅಚ್ಚರಿಯಿಂದ ನೋಡುತ್ತಿದ್ದರು.
ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಈಚೆಗೆ ನಡೆದ ಚೌಡೇಶ್ವರಿ ಜ್ಯೋತಿ ಉತ್ಸವ ಎಂಬ ವೈಶಿಷ್ಟ್ಯಪೂರ್ಣ ಜನಪದ ಆಚರಣೆಗೆ ಗ್ರಾಮಸ್ಥರು ಸಾಕ್ಷಿಯಾದರು. ಅನಾದಿಕಾಲದಿಂದ ಆಚರಣೆಯಲ್ಲಿರುವ ತೊಗಟವೀರ ಜನಾಂಗದ ವೈಶಿಷ್ಟ್ಯಪೂರ್ಣ ಜ್ಯೋತಿ ಉತ್ಸವವು ಈಚೆಗೆ ಕಡಿಮೆಯಾಗಿದ್ದು, ಸದ್ದಹಳ್ಳಿಯಲ್ಲಿ ನಡೆದ ಉತ್ಸವವು ಅಳಿಯುತ್ತಿರುವ ಆಚರಣೆಯನ್ನು ಮೆಲುಕು ಹಾಕುವಂತೆ ಮಾಡಿತು. ಹಿಂದೆ ಪ್ರತಿವರ್ಷವೂ ಶ್ರಾವಣ ಶುದ್ಧ ಹುಣ್ಣಿಮೆಯಿಂದ ನಾಲ್ಕು ದಿನಗಳವರೆಗೆ ದೇವಿಯ ಉತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಈಗ ಅದು ಒಂದು ದಿನದ ಆಚರಣೆಗೆ ಸೀಮಿತವಾಗಿದೆ.
ಜ್ಯೋತಿ ಉತ್ಸವವೆಂಬುದು ಅಗ್ನಿಪೂಜೆ ಮತ್ತು ತಂಬಿಟ್ಟು ದೀಪಹೊತ್ತ ಮಹಿಳೆಯರ ಸಾಲಂಕೃತ ಮೆರವಣಿಗೆಯನ್ನು ಹೊಂದಿರುತ್ತದೆ. ಚೌಡೇಶ್ವರಿ ದೇವಾಲಯದಲ್ಲಿ ವಿಧಿವತ್ತಾಗಿ ಕಳಸ ಪೂಜೆ ಮಾಡಿದ ನಂತರ ಕುಲಬಾಂಧವರಿಂದ ಕೆಲವು ಪೂಜಾವಿಧಿಗಳನ್ನು ಆಚರಿಸುತ್ತಾರೆ.
ದಂಡಕಗಳನ್ನು ಹೇಳುತ್ತಾ ಮಾಡುವ ಅಲಗುಸೇವೆ ಆವೇಶಭರಿತವೂ ಮತ್ತು ರೋಮಾಂಚನಕಾರಿಯಾದುದು. ಮಡಿಯುಟ್ಟ ವೀರಕುಮಾರರು ಕತ್ತಿಯನ್ನಿಡಿದು ವಿಶಿಷ್ಟ ರೀತಿಯಲ್ಲಿ ಝಳಪಿಸುತ್ತಾ ತಮ್ಮ ಎದೆ ಮತ್ತು ಸೊಂಟದ ಮೇಲೆ ಹೊಡೆದುಕೊಳ್ಳುತ್ತಾರೆ. ಈ ರೀತಿಯ ಅಲಗು ಸೇವೆಗೂ ಒಂದು ಐತಿಹ್ಯವಿದೆ. ಇದೇ ಸಂದರ್ಭದಲ್ಲಿ ಹರಕೆಯನ್ನು ಹೊತ್ತವರು ಮತ್ತು ಮಕ್ಕಳಿಗೆ ಒಳ್ಳೆಯದಾಗಲೆಂದು ಚೂಪಾದ ದಬ್ಬಳದಿಂದ ದವಡೆಗೆ ಮತ್ತು ಅಂಗೈಗಳಿಗೆ ಚುಚ್ಚಿಸಿಕೊಳ್ಳುತ್ತಾರೆ. ಅಚ್ಚರಿಯೆಂದರೆ ಗಾಯದಿಂದ ರಕ್ತ ಬರುವುದೇ ಇಲ್ಲ. ದೇವರ ಭಂಡಾರ ಸೋಕಿದ ಕೆಲವೇ ಗಂಟೆಗಳಲ್ಲಿ ಗಾಯದ ಗುರುತುಗಳು ಸಿಗದಂತೆ ವಾಸಿಯಾಗುತ್ತವೆ. ಗಾವು ಸಿಗಿಯುವುದು ಮತ್ತು ಮಾಂಸದಡಿಗೆಯ ನೈವೇದ್ಯ ಮಾಡಿ ನಂತರ ಪ್ರಸಾದದಂತೆ ಹಂಚುತ್ತಾರೆ.
‘ನಮ್ಮ ಗ್ರಾಮದಲ್ಲಿರುವ ಚೌಡೇಶ್ವರಿ ದೇವರಿಗೆ ದೂರದ ಊರುಗಳಲ್ಲಿರುವ ತೊಗಟವೀರ ಕ್ಷತ್ರಿಯರು ಆಗಮಿಸಿ ಪೂಜೆ ನೆರವೇರಿಸುತ್ತಾರೆ. ಎರಡು ವರ್ಷಕ್ಕೊಮ್ಮೆ ಬರುವ ಇವರು ಹೇಳುವ ದೇವರ ಪದಗಳು, ಹಲಗು ಸೇವೆ, ಗಾವು ಸಿಗಿತ, ದಬ್ಬಳದಿಂದ ದವಡೆಗೆ ಚುಚ್ಚಿಕೊಳ್ಳುವುದು ನೋಡುವುದಕ್ಕೆ ಭೀಕರ ಮತ್ತು ರೋಮಾಂಚಕ’ ಎನ್ನುತ್ತಾರೆ ಸದ್ದಹಳ್ಳಿಯ ಎಸ್ಎಲ್.ವಿ. ಗೋಪಾಲ್.
ತೊಗಟವೀರ ಕ್ಷತ್ರಿಯರ ಜನನದ ಬಗ್ಗೆ ಒಂದು ಐತಿಹ್ಯವಿದೆ. ದೇವದಾನವರ ಯುದ್ಧದಲ್ಲಿ ದಾನವರ ಮೇಲುಗೈ ಆದಾಗ ತ್ರಿಮೂರ್ತಿಗಳ ಶಕ್ತಿಯಿಂದ ಉದ್ಭವಿಸಿದ್ದೇ ಚಾಮುಂಡಿ ಅಥವಾ ಚೌಡೇಶ್ವರಿ. ಈ ಚೌಡೇಶ್ವರಿ ದೇವಿಯ ಬಾಯಿಯ ಬೆಂಕಿಯ ಮೂಲಕ ಉದ್ಭವಿಸಿದ ಭಟರೇ ಅಗ್ನಿಕುಲೋದ್ಭವರಾಗಿ ವೀರರಾಗಿ ಹೋರಾಡಿದ್ದರಿಂದ ವೀರಕ್ಷತ್ರಿಯರೆಂದು ಕಾಲಕ್ರಮೇಣ ತೊಗಟವೀರ ಕ್ಷತ್ರಿಯರೆಂದು ಹೆಸರಾದರು. ಆಗಿನಿಂದಲೂ ತೊಗಟವೀರ ಕ್ಷತ್ರಿಯರು ಚೌಡೇಶ್ವರಿ ದೇವಿಯನ್ನು ಮನೆದೇವರನ್ನಾಗಿ ಸ್ವೀಕರಿಸಿ ವರ್ಷಂಪ್ರತಿ ಯುಗಾದಿ ತದಿಗೆಯಲ್ಲಿ ಚೌಡೇಶ್ವರಿ ಜ್ಯೋತಿ ಉತ್ಸವ ಮತ್ತು ದಂಡಕಗಳೊಂದಿಗೆ ಅಲಗುಸೇವೆ ಮಾಡುತ್ತಾರೆ. ಇಂಥಹ ಆಚರಣೆಗಳು ಈಗ ವಿರಳವಾಗುತ್ತಿರುವುದರಿಂದ ಇವನ್ನು ದಾಖಲಿಸಬೇಕಿದೆ. ಇವರ ಮೂಲ ಸ್ಥಳ ಆಂದ್ರದ ನಂದಾವರಂ. ನಂದವರಿಕ ಬ್ರಾಹ್ಮಣರದ್ದೂ ಕೂಡ ಅದೇ ಮೂಲ. ಇಬ್ಬರಿಗೂ ಚೌಡೇಶ್ವರಿಯೇ ದೇವರು ಹಾಗೂ ಇವರಿಬ್ಬರ ಕುಲಗೋತ್ರಗಳಲ್ಲೂ ಸಾಕಷ್ಟು ಸಾಮ್ಯತೆಯಿದೆ. ಒಬ್ಬರ ಶಾಖಾಹಾರಿ ದೇವತೆ ಮತ್ತೊಬ್ಬರ ಮಾಂಸಾಹಾರಿ ದೇವತೆ ಹೇಗಾದರು ಎಂಬುದರ ಬಗ್ಗೆಯೂ ಸಾಕಷ್ಟು ಸಂಶೋಧನೆಗಳಾಗಬೇಕಿದೆ’ ಎಂದು ಜನಪದ ತಜ್ಞ ಡಾ.ಶ್ರೀನಿವಾಸಯ್ಯ ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ
ಶಿಡ್ಲಘಟ್ಟದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಮುಂದೆ ಮಂಗಳವಾರ ಪ್ರತಿಭಟಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಸದಸ್ಯರು ರೈತರ ಬರಪರಿಹಾರ ಅನುದಾನವನ್ನು ರೈತರ ಖಾತೆಗಳಿಗೆ ಜಮಾ ಮಾಡುವಂತೆ ವ್ಯವಸ್ಥಾಪಕಿ ಹೇಮಲತಾ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ರೈತರ ಬರಪರಿಹಾರ ಅನುದಾನ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ಜಮಾ ಮಾಡದಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಸದಸ್ಯರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಮುಂದೆ ಮಂಗಳವಾರ ಪ್ರತಿಭಟಿಸಿದರು.
ರೈತರು ಈಗಾಗಲೇ ಸಾಕಷ್ಟು ಕಷ್ಟ ಹಾಗೂ ನಷ್ಟದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ಬರಗಾಲದ ಅನುದಾನ ರೈತರಿಗೆ ತಾತ್ಕಾಲಿಕ ಪರಿಹಾರವನ್ನು ನೀಡಲಿದೆ. ತಹಶೀಲ್ದಾರರು 4,36,28,478 ರೂಗಳನ್ನು ಬ್ಯಾಂಕಿಗೆ ಜಮೆ ಮಾಡಿದ್ದು, 8,478 ಫಲಾನುಭವಿ ರೈತರ ಪಟ್ಟಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಆದರೂ ರೈತರ ಖಾತೆಗಳಿಗೆ ಇನ್ನೂ ಜಮೆ ಮಾಡಿಲ್ಲ ಎಂದು ಆರೋಪಿಸಿದರು.
ತಕ್ಷಣ ರೈತರ ಬರಪರಿಹಾರದ ಹಣ ರೈತರ ಖಾತೆಗಳಿಗೆ ಜಮಾ ಮಾಡುವಂತೆ ಬ್ಯಾಂಕ್ ವ್ಯವಸ್ಥಾಪಕಿ ಹೇಮಲತಾ ಅವರಿಗೆ ಮನವಿ ಸಲ್ಲಿಸಿದರು.
ಬ್ಯಾಂಕ್ ವ್ಯವಸ್ಥಾಪಕಿ ಹೇಮಲತಾ ಮಾತನಾಡಿ, ಫಲಾನುಭವಿಗಳ ಕಾತೆಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದ ಕಾರಣ ಗೊಂದಲವಾಗಿ ತಡವಾಗಿದೆ. ಎರಡು ಮೂರು ದಿನಗಳಲ್ಲಿ ಫಲಾನುಭವಿ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದೆಂದು ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ರಮೇಶ್, ಮುನಿಕೆಂಪಣ್ಣ, ಬಾಲಮುರಳಿಕೃಷ್ಣ, ವೆಂಕಟರೆಡ್ಡಿ, ಶಿವಣ್ಣ, ನಾರಾಯಣಸ್ವಾಮಿ, ನಾಗರಾಜ್, ಮಾರಪ್ಪ, ಗೋವಿಂದಪ್ಪ, ನಾಗೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ
ಭ್ರಷ್ಟರ ಪಾಲಿಗೆ ಸಿಂಹಸ್ವಪ್ನದಂತಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ಜಾರಿಗೊಳಿಸಲು ಮುಂದಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಮ್ಮ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೧೯೮೦ ರ ಏಪ್ರಿಲ್ ೬ ರಂದು ಅಟಲ್ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಅಡ್ವಾಣಿ ಯವರನ್ನೊಳಗೊಂಡ ಡಾ.ಶ್ಯಾಂ ಪ್ರಸಾದ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ಉದಯವಾದ ಬಿಜೆಪಿ ಪಕ್ಷ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ೨೫ ವರ್ಷಗಳ ಕಾಲ ಬೇಕಾಯಿತು. ರಾಷ್ಟ್ರದ ಅಭಿವೃದ್ಧಿಯಾಗಬೇಕಾದರೆ ಅದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ರಾಷ್ಟ್ರದಲ್ಲಿ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಇದೀಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕು ಎಂದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎಸಿಬಿ ವಿರುದ್ದ ಸಹಿ ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸಿ.ವಿ.ಲೋಕೇಶ್ಗೌಡ, ಶ್ರೀಧರ್, ಶ್ರೀರಾಮರೆಡ್ಡಿ, ಸುಜಾತಮ್ಮ, ಮಂಜುಳಮ್ಮ, ಸುರೇಶ್, ಗುರುವಯ್ಯಯಾದವ್, ದಾಮೋದರ್, ಮುನಿವೆಂಕಟಪ್ಪ ಮತ್ತಿತರರು ಹಾಜರಿದ್ದರು.
ಮುತ್ತೂರು ಶಾಲೆಯಲ್ಲಿ ಬೇಸಿಗೆಯ ಶಿಬಿರ
ನಗರದ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಹಲವೆಡೆ ನಡೆಸಲಾಗುತ್ತದೆ. ಆದರೆ ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸುವವರು ಅಪರೂಪ.
ಅಪರೂಪದ ಸಂಗತಿಯೆನ್ನುವಂತೆ ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಯು ಮುಗಿಯುತ್ತಿದ್ದಂತೆಯೆ ಎರಡು ದಿನಗಳ ಕಾಲ ಬೇಸಿಗೆ ಶಿಬಿರವನ್ನು ಉಚಿತವಾಗಿ ನಡೆಸಲಾಯಿತು.
ಬೆಂಗಳೂರಿನ ಬ್ಯಾಂಬಿನೋ ಪಬ್ಲಿಕ್ ಶಾಲೆಯ ನಂದಿತಾ ಕ್ಸೇವಿಯರ್ ಮತ್ತು ಸಂಗಡಿಗರು ಮುತ್ತೂರು ಶಾಲೆಯಲ್ಲಿ ಬೇಸಿಗೆಯ ಶಿಬಿರದ ನೆಪದಲ್ಲಿ ಮಕ್ಕಳ ಉತ್ಸವವನ್ನೇ ಆಚರಿಸಿದ್ದಾರೆ. ಹಗ್ಗ ಜಗ್ಗಾಟ, ವೇಗದ ಓಟ, ಅಡೆತಡೆಯ ಓಟ, ಮ್ಯೂಸಿಕಲ್ ಚೇರ್, ರಿಲೇ ಮುಂತಾದ ಕ್ರೀಡೆಗಳನ್ನು ಆಡಿ ದಣಿದ ಮಕ್ಕಳಿಗೆ ಶಕ್ತಿ ತುಂಬಲು ಸಿಹಿ ಮತ್ತು ಖಾರದ ಬನ್ನುಗಳನ್ನು ನೀಡಲಾಯಿತು. ಪೇಪರ್ ಬಳಸಿ ಹಕ್ಕಿ, ಕಿರೀಟ ಮುಂತಾದವುಗಳನ್ನು ತಯಾರಿಸುವುದನ್ನು ಕಲಿಸಲಾಯಿತು. ಚಿತ್ರ ರಚನೆಯ ಬಗ್ಗೆಯೂ ತಿಳಿಸಿಕೊಡಲಾಯಿತು. ಮೀನು, ಏರೋಪ್ಲೇನ್, ಚಿಟ್ಟೆ, ಟ್ರಕ್ಕು, ಟ್ರೇನು, ಹೂವು ಮುಂತಾದವುಗಳನ್ನು ಚಿತ್ರಿಸಿ, ಬಣ್ಣ ತುಂಬಿ, ಚಮಕಿಗಳನ್ನು ಹಾಕುವ ಮೂಲಕ ಅಲಂಕರಿಸಿದ ಮಕ್ಕಳು, ಮೊಲದ ಕಿವಿಗಳನ್ನು ಪೇಪರಿನಲ್ಲಿ ತಯಾರಿಸಿ ಧರಿಸಿ ಸಂಭ್ರಮಿಸಿದರು.
ಸಂಗೀತಾ ಎಂಬುವವರು ಮಕ್ಕಳಿಗೆ ಹಾಡು ಮತ್ತು ನೃತ್ಯವನ್ನು ಕಲಿಸಿದರು. ಕನ್ನಡ, ತೆಲುಗು ಮತ್ತು ಹಿಂದಿ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿದರು.
ಎರಡು ದಿನಗಳ ಶಿಬಿರ ಕ್ಷಣಗಳಂತೆ ಮುಗಿದು ಹೋದಂತೆ ಮಕ್ಕಳಿಗೆ ಅನಿಸುತ್ತಾ, ಇನ್ನಷ್ಟು ಇದ್ದಿದ್ದರೆ ಚೆನ್ನಾಗಿತ್ತು ಎಂದ ಮಕ್ಕಳಿಗೆ ಚಿತ್ರ ರಚಿಸಲು ಪುಸ್ತಕ, ಬಣ್ಣದ ಪೆನ್ಸಿಲ್ಗಳು, ಲೇಖನ ಸಾಮಗ್ರಿಗಳು, ನೋಟ್ ಪುಸ್ತಕ, ತಿನಿಸುಗಳನ್ನು ನೀಡಿ ರಜೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಯಿತು.
‘ಎರಡು ದಿನಗಳ ಕಾಲ ಮುತ್ತೂರಿನ ಶಾಲಾ ವಿದ್ಯಾರ್ಥಿಗಳೊಂದಿಗೆ ಕಳೆದದ್ದು ಸಾರ್ಥಕವಾಯಿತು. ಮಕ್ಕಳು ನಗುತ್ತಾ, ಆಡುತ್ತಾ, ಸಂತೋಷದಿಂದ ಹಲವಾರು ವಿಷಯಗಳನ್ನು ಕಲಿತರು. ಮಕ್ಕಳೊಂದಿಗೆ ಬೆರೆತು ನಾವೂ ನಮ್ಮ ಬಾಲ್ಯವನ್ನು ಕಂಡೆವು. ‘ನಮ್ಮ ಮುತ್ತೂರು’ ಸಂಸ್ಥೆಯ ಮೂಲಕ ನಮಗೆ ಈ ಅವಕಾಶ ಸಿಕ್ಕಿತು. ಹಲವು ಮಂದಿ ದಾನಿಗಳು ಕೈಜೋಡಿಸಿದ್ದರಿಂದ ಈ ಶಿಬಿರ ಯಶಸ್ವಿಯಾಯಿತು’ ಎಂದು ನಂದಿತಾ ಕ್ಸೇವಿಯರ್ ತಿಳಿಸಿದರು.
ಜೇನು ಹುಳುಗಳ ಕಡಿತದಿಂದ ಮಹಿಳೆ ಸಾವು
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಚೌಡರೆಡ್ಡಿಹಳ್ಳಿ ಗ್ರಾಮದ ವೆಂಕಟಮ್ಮ(55) ಎಂಬುವವರು ಮಂಗಳವಾರ ಸಂಜೆ ಜೇನು ಹುಳುಗಳು ಕಚ್ಚಿದ್ದರಿಂದ ಮೃತಪಟ್ಟಿದ್ದಾರೆ.
ತಮ್ಮ ಹೊಲದ ಬಳಿ ಹೋಗುತ್ತಿದ್ದ ವೆಂಕಟಮ್ಮ ಜೇನಿನ ಧಾಳಿಗೆ ತುತ್ತಾಗಿದ್ದಾರೆ. ತಕ್ಷಣ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಅದೇ ಸಂದರ್ಭದಲ್ಲಿ ಕುರಿ ಮೇಯಿಸಲು ಹೋಗಿದ್ದ ಸದ್ದಹಳ್ಳಿಯ ಬೈರಪ್ಪ ಮತ್ತು ಬೇಬಿ ಎಂಬುವವರೂ ಜೇನಿನ ಕಡಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಚಿತ ಸಾಮೂಹಿಕ ಉಪನಯನ
ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಉಚಿತ ಸಾಮೂಹಿಕ ಉಪನಯನಗಳನ್ನು ನಡೆಸಿಕೊಡಲಿದ್ದು, ವಿಪ್ರಬಾಂದವರು ನೋಂದಾಯಿಸಿಕೊಳ್ಳು ಕೋರಲಾಗಿದೆ.
ಶಂಕರ ಮಠದಲ್ಲಿ ಮೇ 7 ರಿಂದ 11ನೇ ತಾರೀಖಿನವರೆಗೂ ಶಂಕರಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಅಂಗವಾಗಿ ಮೇ 11 ರ ಬುಧವಾರದಂದು 10 ವಟುಗಳಿಗೆ ಉಚಿತ ಸಾಮೂಹಿಕ ಉಪನಯನವನ್ನು ಏರ್ಪಡಿಸಲಾಗಿದೆ. ಹೆಸರನ್ನು ನೋಂದಾಯಿಸುವವರು ಎ.ಎಸ್.ರವಿ (9448713681), ಬಿ.ಕೃಷ್ಣಮೂರ್ತಿ(9902139017), ಎಸ್.ವಿ.ನಾಗರಾಜರಾವ್(9845437633), ಬಿ.ಆರ್.ಅನಂತಕೃಷ್ಣ (9964182305) ಸಂಪರ್ಕಿಸಲು ಕೋರಲಾಗಿದೆ.
ದಾಂಪತ್ಯದ ಪ್ರೀತಿಯನ್ನು ನವೀಕರಿಸುತ್ತಾ ಇರಿ!
ಪ್ರೀತಿಯನ್ನು ನವೀಕರಿಸುತ್ತಾ ಇರಬೇಕು ಎಂದರೆ ಹೊಸ ಹೊಸ ಪ್ರೀತಿಗಳನ್ನು, ಪ್ರೀತಿಸುವವರನ್ನು ಹುಡುಕಿಕೊಂಡು ಹೋಗಬೇಕು ಅಂತ ಅಲ್ಲ! ಹಾಗೆ ಮಾಡುವುದು ಕುಟುಂಬ ಜೀವನವನ್ನು ಮೂರಾಬಟ್ಟೆಯನ್ನಾಗಿ ಮಾಡಿಕೊಳ್ಳುವುದಕ್ಕೆ ಖಾತ್ರಿಯಾದ ಮಾರ್ಗ.
“ಇತ್ತೀಚೆಗೆ ನಾನು ಅಂದ್ರೆ ನಿನಗೆ ಸ್ವಲ್ಪ ಅಸಡ್ಡೆ ಕಣೆ, ನಾನು ಕರೆದಾಗ ನೀನು ಬರೋದಿಲ್ಲ, ನನ್ನ ಕೆಲಸ ಮಾಡೋದಿಲ್ಲ”.
“ನೀವೂ ಅಷ್ಟೇ ಅಲ್ವೇನ್ರಿ, ಬರೀ ನಿಮ್ಮ ಕೆಲಸ ಇದ್ದಾಗ ಕರೀತೀರಾ. ಬೇರೆ ಸಮಯದಲ್ಲಿ ನಾನು ಇದ್ದೀನೋ ಸತ್ತಿದೀನೋ ಅಂತ ವಿಚಾರಿಸುವುದೂ ಇಲ್ಲ”.
ಮಧ್ಯವಯಸ್ಕ ದಂಪತಿಗಳ ಮಧ್ಯೆ ಸಾಮಾನ್ಯವಾಗಿ ನಡೆಯಬಹುದಾದ ಸಂಭಾಷಣೆ ಇದು. ದಾಂಪತ್ಯ ಸಲಹೆಗೆ ಬಂದವರ ಮಧ್ಯೆ ಇಂತಹ ತಕರಾರುಗಳು ಕೇಳಿ ಬರುತ್ತದೆ. ಹಾಗಿದ್ದರೆ ಅಂತಹ ದಂಪತಿಗಳ ಮಧ್ಯೆ ಪ್ರೀತಿ ನಿಧಾನವಾಗಿ ಕಡಿಮೆಯಾಗುತ್ತಾ ಬಂದಿದೆಯೇ? ಅಷ್ಟೆಲ್ಲಾ ವರ್ಷ ಒಟ್ಟಾಗಿ ಬದುಕಿದ ಮೇಲೆಯೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿರುವುದಿಲ್ಲವೇ? ಅಥವಾ ಇದಕ್ಕೆ ಬೇರೆ ಕಾರಣಗಳಿರಬಹುದೇ? ಪತಿ ದೈಹಿಕ ಅಗತ್ಯಗಳಿಗೆ ಮಾತ್ರ ತನ್ನ ಹತ್ತಿರ ಬರುತ್ತಾರೆ, ಉಳಿದಂತೆ ತನ್ನನ್ನು ಕಡೆಗಣಿಸುತ್ತಾರೆ, ಅಂತ ಸಾಕಷ್ಟು ಪತ್ನಿಯರಿಗೆ ಏಕೆ ಅನ್ನಿಸುತ್ತದೆ?
ಮದುವೆಯಾದ ಹೊಸದರಲ್ಲಿ ಪತಿಪತ್ನಿಯರು ಪರಸ್ಪರ ಒಟ್ಟಾಗಿ ಸಮಯ ಕಳೆಯುವುದಕ್ಕೆ ಹಾತೊರೆಯುವುದು ಸಹಜ. ಇದಕ್ಕೆ ದೈಹಿಕ ಆಕರ್ಷಣೆ ಕೂಡ ಪೂರಕವಾಗಿ ಸಹಾಯ ಮಾಡುತ್ತದೆ. ಆದರೆ ಸಮಯ ಕಳೆಯುತ್ತಾ ಬಂದಂತೆ ಕುಟುಂಬ ಬೆಳೆಯುತ್ತದೆ, ಜವಾಬ್ದಾರಿಗಳು ಹೆಚ್ಚುತ್ತವೆ. ಮಕ್ಕಳು ಮರಿ, ದುಡಿತ, ಇವುಗಳ ಮಧ್ಯೆ ಪತಿಪತ್ನಿಯರ ಖಾಸಗೀ ಸಮಯ ಕಡಿಮೆಯಾಗುತ್ತಾ ಹೋಗುತ್ತದೆ. ದೈಹಿಕ ಸಂಬಂಧದಲ್ಲಿ ಮೊದಲಿದ್ದ ತೀವ್ರತೆ ಅಥವಾ ಹೊಸತನ ಕಡಿಮೆಯಾಗುತ್ತಾ ಬರುತ್ತಿದೆ ಎನ್ನುವ ತಪ್ಪು ತಿಳುವಳಿಕೆಯಿಂದ ಒಟ್ಟಾಗಿ ಸಮಯ ಕಳೆಯುವುದನ್ನು ಕಡಿಮೆ ಮಾಡುತ್ತಾ ಬರುತ್ತಾರೆ. ಅಷ್ಟೇ ಅಲ್ಲದೆ, ಇಷ್ಟೆಲ್ಲಾ ಕಾಲ ಒಟ್ಟಾಗಿ ಬದುಕಿದ ಮೇಲೆ ತಮ್ಮಿಬ್ಬರ ಮಧ್ಯೆ ಪ್ರೀತಿ, ನಂಬಿಕೆಗಳು ಆಳವಾಗಿ ಬೇರೂರಿದೆ, ಇನ್ನು ಅದು ತನ್ನಿಂದ ತಾನೆ ಮುಂದುವರೆಯುತ್ತದೆ-ಎಂದು ಸಾಕಷ್ಟು ದಂಪತಿಗಳು ಅಂದುಕೊಳ್ಳುತ್ತಾರೆ. ಹೀಗೆ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆ ಕಡಿಮೆಯಾಗುತ್ತಾ ಬಂದಂತೆ ಅವರಲ್ಲಿ ಭಿನ್ನಾಭಿಪ್ರಾಯಗಳು, ತಪ್ಪು ತಿಳುವಳಿಕೆಗಳು ಗೊತ್ತೇ ಆಗದಂತೆ ಬೇರು ಬಿಡತೊಡಗುತ್ತದೆ. ಇಂತಹದೇ ಸಮಯಕ್ಕೆ ಕಾದಿರುವ ಕೆಲವರು ದಂಪತಿಗಳ ಸಂಬಂಧದಲ್ಲಿ ತಮ್ಮ ಕೊಳಕು ಮೂಗು ತೂರಿಸಿ, ಅದನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಇವೆಲ್ಲಾ ನಮ್ಮ ಸಿನಿಮಾ ಅಥವಾ ಧಾರವಾಹಿಗಳಲ್ಲಿ ತೋರಿಸುವಷ್ಟು ಒರಟಾಗಿ ನಡೆಯದಿದ್ದರೂ, ನಯವಾಗಿ ವಂಚಿಸುವವರು ಎಲ್ಲಾ ಕಡೆ ಇರಬಹುದು ಎನ್ನುವುದನ್ನು ನಾವು ಮರೆಯುವಂತಿಲ್ಲ.
ಒಮ್ಮೆ ಸರಾಗವಾಗಿ ಮಾತುಕತೆಗಳು ನಡೆಯದಿರುವಾಗ ಯಾವಾಗಲೋ ಮೂಡಿರುವ ಅನುಮಾನಗಳು ಪರಿಹಾರವಾಗದೆ ಬೆಳೆಯುತ್ತಾ ಹೋಗಿ ದಂಪತಿಗಳ ಮಧ್ಯೆ ದೊಡ್ಡ ಕಂದಕವುಂಟಾಗಬಹುದು. ಪತಿಪತ್ನಿಯರು ಜಗಳವಾದಾಗಲೆಲ್ಲಾ ಠೂ ಬಿಡುವುದು ಸಹಜವಲ್ಲವೇ? ನಾವೆಲ್ಲಾ ನೆನಪಿಡಬೇಕಾಗಿರುವುದು ಇಂತಹ ಮೌನದಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಪರಿಹಾರವಾಗುವುದಿಲ್ಲ. ಹಾಗಾಗಿ ಇಬ್ಬರೂ ಒಣ ಬಿಗುಮಾನ ಬಿಟ್ಟು ಮಾತನಾಡಲು ಶುರು ಮಾಡಿದರೆ ತಾವು ಎಂತಹ ಸಾಮಾನ್ಯ ವಿಷಯಕ್ಕೆ ದೂರವಾಗಿದ್ದೆವು ಎನ್ನುವುದು ತಿಳಿಯುತ್ತದೆ.
ಅಂದರೆ ದಾಂಪತ್ಯದಲ್ಲಿ ಪ್ರೀತಿಯನ್ನು ಸದಾ ಉಳಿಸಿಕೊಳ್ಳಲು ಒಟ್ಟಾಗಿ ಸಮಯ ಕಳೆಯುವುದು ಅಗತ್ಯ ಎಂದಾಯಿತು. ದೈಹಿಕ ಸಂಪರ್ಕಕ್ಕೆ ಹೊರತಾಗಿಯೂ ಪತಿಪತ್ನಿಯರು ವಾರಕ್ಕೆ ಒಂದೆರೆಡುಗಂಟೆಯಾದರೂ ಇಬ್ಬರೇ ಕಳೆಯಬೇಕು. ಮಾತನಾಡಲು ಏನು ವಿಷಯವಿಲ್ಲದಿದ್ದರೂ ಪ್ರೇಮಿಗಳಂತೆ ಕಣ್ಣಲ್ಲಿ ಕಣ್ಣಿಟ್ಟು, ಸುಮ್ಮನೆ ಕೈಹಿಡಿದು ಕುಳಿತುಕೊಂಡರೂ ಸಾಕು! ಮೌನ ಒಡೆದು ಮಾತಿನ ಮುತ್ತುಗಳು ಮೂಡಿ ಆತ್ಮೀಯತೆ ಹಿಂದಿನಂತೆಯೇ ಮುಂದುವರೆಯುತ್ತದೆ.
“ಸಾರ್ ನಾನು ಆಫೀಸಿನಿಂದ ನೇರವಾಗಿ ಮನೆಗೆ ಬರ್ತೀನಿ, ಆಮೇಲೆ ಹೊರಗೆಲ್ಲೂ ಹೋಗದೆ ಹೆಂಡತಿ ಮಕ್ಕಳ ಜೊತೆಗೇ ಇರ್ತೀನಿ. ಆದರೂ ನನ್ನ ಹೆಂಡತಿದು ಕಿರಿಕಿರಿ ಇರುತ್ತೆ ಏನ್ಮಾಡೋದು?” ಅಂತ ಆಪ್ತಸಲಹೆಗೆ ಬಂದಿದ್ದ ಮದುವೆಯಾಗಿ ಹದಿನೈದು ವರ್ಷವಾಗಿದ್ದ ಪತಿ ಕೇಳಿದರು.
“ಮನೆಗೆ ಬಂದ ಮೇಲೆ ಏನ್ಮಾಡ್ತೀರಿ?” ನಾನು ಕೇಳಿದೆ.
“ಹೆಂಡತಿ ಟೀವಿ ಧಾರಾವಾಹಿಗಳಲ್ಲಿ ಮುಳುಗಿರುತ್ತಾಳೆ, ನಾನು ಕಂಪ್ಯೂಟರ್‍ನಲ್ಲಿ ಏನಾದರೂ ಮಾಡ್ತಾ ಇರ್ತೀನಿ”.
ಈ ರೀತಿ ಜೊತೆಗೇ ಇದ್ದರೂ ಅಪರಿಚಿತರಂತೆ ಬದುಕುತ್ತಿರುವಾಗ ಆತ್ಮೀಯತೆ ಮೂಡುವುದು ಹೇಗೆ ಸಾಧ್ಯ? ಅಂದರೆ ದಂಪತಿಗಳು ತಾವಿಬ್ಬರೂ ಒಟ್ಟಾಗಿ ಕಳೆಯುವ ಸಮಯ ಇಬ್ಬರಿಗೂ “ಕ್ವಾಲಿಟಿಟೈಮ್” ಎನ್ನಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇದಕ್ಕಾಗಿ ಕುಟುಂಬದ, ಮಕ್ಕಳ ಭವಿಷ್ಯದಂತಹ ವಿಷಯಗಳ ಜೊತೆಗೆ ಇಬ್ಬರಿಗೂ ಖುಷಿಯಾಗುವಂತಹ ಇತರ ಆಸಕ್ತಿಗಳನ್ನು ಗುರುತಿಸಿಕೊಳ್ಳಬೇಕು. ಆಗ ಒಟ್ಟಾಗಿ ಬದುಕುವುದಕ್ಕೆ ಒಂದು ಉದ್ದೇಶ, ಗುರಿ, ಅರ್ಥ ಎಲ್ಲವೂ ಮೂಡುತ್ತದೆ. ಇದರಿಂದ ಪರಸ್ಪರ ಆಕರ್ಷಣೆ, ಪ್ರೀತಿಗಳೆಲ್ಲವೂ ಜೀವನ ಪರ್ಯಂತ ಉಳಿಯುವುದು ಸಾಧ್ಯವಾಗುತ್ತದೆ.
ಪ್ರೀತಿಯನ್ನು ನವೀಕರಿಸಲು ಶಬ್ದಗಳನ್ನು ಬಳಸಲು ಮುಜುಗುರಪಟ್ಟುಕೊಳ್ಳಬೇಕಾಗಿಲ್ಲ. ನಾವು ಬದುಕುತ್ತಿರುವ ವಾತಾವರಣದಲ್ಲಿ ಪಾಶ್ಚಿಮಾತ್ಯರಂತೆ, “ಐ ಲವ್ ಯೂ” ಎಂದು ಹೇಳುವುದು ಗಂಡಹೆಂಡತಿಯರಿಗೆ ಸೂಕ್ತವೆನ್ನಿಸಲಾರದು. ಆದರೂ ಪ್ರೀತಿಯನ್ನು ಬೇರೆ ಬೇರೆ ಶಬ್ದಗಳಲ್ಲಿ ವ್ಯಕ್ತಪಡಿಸಬಹುದು. “ದಂಪತಿಗಳು ಅಂದ ಮೇಲೆ ಪ್ರೀತಿ ಇದ್ದೇ ಇರುತ್ತೆ, ಅದನ್ನು ದಿನಾ ಹೇಳ್ತಾ ಇರೋಕೆ ಜೀವನ ಏನು ಸಿನಿಮಾನಾ ಸಾರ್” ಎಂದು ಆಪ್ತಸಲಹೆಗೆ ಬಂದವರು ಕೇಳಿದ್ದಾರೆ. ಸಿನಿಮಾದ ರೀತಿಯಲ್ಲಿ ಬೇಡ, ಸಾಮಾನ್ಯ ರೀತಿಯಲ್ಲಾದರೂ ಆಗಾಗ ಪ್ರೀತಿಯ ಹಂಚಿಕೆಯಾಗದಿದ್ದರೆ, ನಿಧಾನವಾಗಿ ಅದು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ “ನೀನು ನನ್ನ ಜೀವನದ ಪ್ರಮುಖ ಭಾಗ, ನಿಮ್ಮ ಅಗತ್ಯ ನನಗೆ ಯಾವಾಗಲೂ ಇದೆ, ನಿನ್ನಿಂದ ನನ್ನ ಬದುಕು ಉತ್ತಮವಾಗಿದೆ, ನೀವಿಲ್ಲದಿದ್ದರೆ ನನ್ನ ಬದುಕು ಅಪೂರ್ಣವಾಗುತ್ತಿತ್ತು, ನಿನ್ನ ಇಂತಿತಾ ಗುಣಸ್ವಭಾವಗಳು ನನಗೆ ತುಂಬಾ ಇಷ್ಟ” ಎನ್ನುವ ಅರ್ಥ ಬರುವಂತಹ ಮಾತುಗಳನ್ನು ಆಗಾಗ ಹೇಳುತ್ತಿದ್ದರೆ ಉತ್ತಮ. ಇಂತಹ ಮಾತುಗಳನ್ನು ಇಬ್ಬರೇ ಇದ್ದಾಗ ಮಾತ್ರ ಹೇಳದೆ, ಎಲ್ಲರೆದುರೂ ಆಡುತ್ತಿದ್ದರೆ ಇಬ್ಬರ ಆತ್ಮಗೌರವವೂ ಹೆಚ್ಚಿ ಸಂಬಂಧಗಳು ಗಟ್ಟಿಯಾಗುತ್ತವೆ. ಮಾತುಗಳು ಮನಸ್ಸಿನ ಪ್ರಾಮಾಣಿಕ ಭಾವನೆಯ ಅಭಿವ್ಯಕ್ತಿಯಾಗಿರಬೇಕು. ಅವು ಬರೀ ಬೂಟಾಟಿಕೆಯಾಗಿದ್ದರೆ ಉಪಯೋಗಕ್ಕಿಂತ ಅಪಾಯವಾಗುವ ಸಾದ್ಯತೆಗಳೇ ಹೆಚ್ಚು.
ಪ್ರೀತಿಯ ಇನ್ನೊಂದು ಪ್ರಮುಖ ಅಭಿವ್ಯಕ್ತಿ ಸ್ಪರ್ಷ. ಭಾರತೀಯ ಕುಟುಂಬಗಳಲ್ಲಿ ಪತಿಪತ್ನಿಯರು ಸಾರ್ವಜನಿಕವಾಗಿ ಸ್ಪರ್ಷಿಸುವುದನ್ನು ಕೀಳಾಗಿ ನೋಡಲಾಗುತ್ತದೆ. ಇದಕ್ಕೆ ಕಾರಣಗಳೇನೇ ಇದ್ದರೂ ದಂಪತಿಗಳು ಎಲ್ಲರೆದುರು ದೂರ ದೂರ ಇರುವುದು ಸೌಜನ್ಯ ಅಥವಾ ಸಂಸ್ಕøತಿ ಎಂದುಕೊಳ್ಳಬೇಕಿಲ್ಲ. ಪಾಶ್ಚಿಮಾತ್ಯರಂತೆ ಸಾರ್ವಜನಿಕವಾಗಿ ಚುಂಬಿಸುವುದು ಮುಜುಗರದ ವಿಚಾರವಾದರೆ ಹಾಗೆ ಮಾಡಬೇಕೆಂದಿಲ್ಲ. ಆದರೆ ಪರಸ್ಪರ ಹಸ್ತಲಾಘವ, ಹೆಗಲ ಮೇಲೆ ಕೈಹಾಕುವುದು, ತಲೆ ನೇವರಿಸುವುದು, ಮುಂತಾದ ಪ್ರೀತಿಯ ಅಭಿವ್ಯಕ್ತಿಗಳನ್ನು ತೋರಿಸಲು ಹಿಂಜರಿಯಬೇಕಿಲ್ಲ. ಎಲ್ಲರೆದುರು ಹೀಗೆ ಮಾಡುವವರು ಹೆಚ್ಚು ಪ್ರೀತಿಸುತ್ತಾರೆ ಅಂತೇನೂ ಅಲ್ಲ. ಕೆಲವರಿಗೆ ಇದು ಬೂಟಾಟಿಕೆಯಾಗಿರಬಹುದು. ಆದರೆ ಇದನ್ನು ನೈಜವಾಗಿ ಖುಷಿಯನ್ನು ಹಂಚಿಕೊಳ್ಳುವ ಅಭಿವ್ಯಕ್ತಿಯನ್ನಾಗಿಯೂ ಉಪಯೋಗಿಸಬಹುದು. ಇಂತಹ ಸ್ಪರ್ಷಕ್ರಿಯೆಯಲ್ಲಿ ಮಕ್ಕಳನ್ನೂ ಸೇರಿಸಿಕೊಂಡರೆ ಇಡೀ ಕುಟುಂಬ ಒಂದೇ ಘಟಕವಾಗಿ ಬದುಕಲು ಸಹಾಯವಾಗುತ್ತದೆ.
ನೀವು ಅಪ್ಪ ಅಮ್ಮಂದಿರಿಗೆ ಹೆದರದೆ ಈಗ ಯಾರನ್ನಾದರೂ ಪ್ರೀತಿಸುತ್ತಾ ಇದ್ದು, ಮುಂದೆ ಮದುವೆಯಾಗಬೇಕೆಂದಿದ್ದರೆ ಒಂದು ಉಪಾಯವನ್ನು ಹೇಳುತ್ತೇನೆ. ಮೆಲು, ಮೆಸೇಜುಗಳ ಈ ಯುಗದಲ್ಲೂ ಓಬೀರಾಯನ ಕಾಲದವರಂತೆ ಕೈಬರಹದ ಪ್ರೇಮ ಪತ್ರಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ತುಸು ಶ್ರಮದಾಯಕ ನಿಜ, ಆದರೂ ಇಂತಹ ಪತ್ರಗಳು ಕೊಡುವ ಆತ್ಮೀಯತೆಯ ಆನಂದ ಬೇರಾವ ಮಾಧ್ಯಮದಲ್ಲೂ ಸಿಗುವುದಿಲ್ಲ. ತಾತ್ಕಾಲಿಕವಾಗಿ ದೂರವಿರುವ ಪತಿಪತ್ನಿಯರೂ ಪ್ರೇಮಪತ್ರಗಳ ಮೂಲಕ ನಿರಂತರ ಪ್ರೀತಿ ಹಂಚಿಕೊಳ್ಳಬಹುದು. ಮುಂದೆ ಜಗಳವಾದಾಗಲೆಲ್ಲಾ ಮತ್ತೆ ಮತ್ತೆ ಇದರ ಮೇಲೆ ಕಣ್ಣೋಡಿಸಿದರೆ ಪ್ರೇಮ ಹಿಂದಿನಂತೆಯೇ ಉಕ್ಕಿ ಹರಿಯುತ್ತದೆ! ವೃದ್ಧಾಪ್ಯದ ನೀರಸ ದಿನಗಳನ್ನೂ ರಸಭರಿತಗೊಳಿಸಬಲ್ಲದು ಈ ಪ್ರೇಮ ಪತ್ರಗಳು! ಡಿಲೀಟ್ ಮಾಡಿಬಿಡುವ ಮೈಲ್, ಮೆಸೇಜುಗಳಿಗೆ ಕೈಬರಹದ ಪ್ರೇಮ ಪತ್ರಗಳ ನವಿರು, ಸೊಬಗು ಇರುವುದು ಸಾಧ್ಯವೇ ಇಲ್ಲ. ನಿಮ್ಮ ಉದ್ದೇಶವೇ ‘ಕ್ಯಾಶುಯಲ್ ಅಫೈರ್’ ಆಗಿದ್ದರೆ ಅದಕ್ಕೆ ಮೈಲು, ಮೆಸೇಜುಗಳೇ ಸರಿ ಬಿಡಿ; ಆದರೆ ನನ್ನ ಬರಹ ಅಂತವರಿಗಾಗಿ ಅಲ್ಲ!
ವಸಂತ್ ನಡಹಳ್ಳಿ
ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ
ಲೋಕಾಯುಕ್ತ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ನಿಷ್ಕ್ರಿಯೆಗೊಳಿಸಬಾರದು ಹಾಗೂ ಎಸಿಬಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿಮಂದಿರದಿಂದ ಮೆರವಣಿಗೆಯ ಮೂಲಕ ತೆರಳಿದ ರೈತ ಮುಖಂಡರು, ರಾಜ್ಯ ಸರ್ಕಾರ ತನ್ನ ಅಕ್ರಮಗಳನ್ನು ಮುಚ್ಚಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ಯನ್ನು ಜಾರಿಗೆ ತರಲು ಹೊರಟಿರುವುದು ಜನವಿರೋಧಿಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ೧೯೮೫ ರಿಂದ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಾ ರಾಜ್ಯದ ವಿವಿಧ ನಾಯಕರು ಸೇರಿದಂತೆ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿ ಭ್ರಷ್ಟ ಆಡಳಿತ ವ್ಯವಸ್ಥೆಗೆ ಮುಂದಾಗಿರುವ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ದ್ವೀತಿಯ ಪಿ.ಯು.ಸಿ. ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವವರ ವಿರುದ್ದ ಕ್ರಮಕ್ಕೆ ಮುಂದಾಗಬೇಕು, ಕೃಷಿ ವಿಶ್ವ ವಿದ್ಯಾಲಯವನ್ನು ಖಾಸಗೀಕರಣ ಮಾಡಬಾರದು ಹಾಗೂ ನಗರದ ತಾಲ್ಲೂಕು ಕಚೇರಿಯಲ್ಲಿಯೂ ಕೂಡಾ ಭಷ್ಟಾಚಾರ ತಾಂಡವವಾಡುತ್ತಿದೆ ಎಂದ ಪ್ರತಿಭಟನಾಕಾರರು ಭೂ ಮಾಪಿಯಾಗಳ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಯೇ ಹೊರತು ಕಳೆದ ಕೆಲ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಈವರೆಗೂ ಯಾವುದೇ ಭೂ ಮಂಜೂರಾತಿ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ ತಹಸೀಲ್ದಾರ್ ಮನೋರಮಾ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ಟಿ.ಕೃಷ್ಣಪ್ಪ, ಎಂ.ದೇವರಾಜ್, ವೇಣುಗೋಪಾಲ್, ಅಬ್ಲೂಡು ಆರ್.ದೇವರಾಜ್, ಲಕ್ಕಹಳ್ಳಿ ದೇವರಾಜ್, ಡಿ.ಬಿ.ಶ್ರೀನಿವಾಸರೆಡ್ಡಿ ಮತ್ತಿತರರು ಹಾಜರಿದ್ದರು.
ವಾಗ್ಗೇಯಕಾರರ ಆರಾಧನಾ ಮಹೋತ್ಸವ
ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಮಯೂರಿ ನಾಟ್ಯಕಲಾ ಕೇಂದ್ರದಿಂದ ಪುರಂದರದಾಸರು, ತ್ಯಾಗರಾಜರು, ಕನಕದಾಸರು, ವಾಗ್ಗೇಯಕಾರರ ಆರಾಧನಾ ಮಹೋತ್ಸವ ಹಾಗೂ ನಟರಾಜೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಯೂರಿ ನಾಟ್ಯಕಲಾ ಕೇಂದ್ರದ ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಸಂಗೀತ, ಲಘು ಸಂಗೀತ, ವೀಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ವಾನ್ ಚಿಂತಲಪಲ್ಲಿ ಸೋಮಶೇಖರ್ ತಂಡ ವಾದ್ಯವೃಂದದ ಸಹಕಾರ ನೀಡಿದರು.
‘ಸುಮಾರು ಹತ್ತು ವರ್ಷಗಳಿಂದಲೂ ಪ್ರತಿ ವರ್ಷ ವಾಗ್ಗೇಯಕಾರರ ಆರಾಧನಾ ಮಹೋತ್ಸವ ಹಾಗೂ ನಟರಾಜೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಗೀತ ಮತ್ತು ನೃತ್ಯವನ್ನು ಕಲಿತ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಪ್ರದರ್ಶಿಸಲು ಇದೊಂದು ಅವಕಾಶವಾಗಿದೆ. ಕಲಾಸಕ್ತರು ಆಗಮಿಸಿ ಈ ಕಾರ್ಕ್ರಮದಲ್ಲಿ ಮಕ್ಕಳ ಕಲೆಯನ್ನು ನೋಡಿ ಪ್ರೋತ್ಸಾಹಿತ್ತಿದ್ದಾರೆ’ ಎಂದು ಮಯೂರಿ ನಾಟ್ಯಕಲಾ ಕೇಂದ್ರದ ಅಧ್ಯಕ್ಷೆ ವಿದುಷಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್ ತಿಳಿಸಿದರು.
ನಿಧನ ವಾರ್ತೆ
ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ, ಬಶೆಟ್ಟಹಳ್ಳಿ ಹೋಬಳಿಯ ರಾಮಲಿಂಗೇಶ್ವರ ದೇವಾಲಯದ ಕನ್ವೀನರ್ ಹಾಗೂ ಅಬಕಾರಿ ಗುತ್ತಿಗೆದಾರ ಡಿ.ಎಂ.ಶ್ರೀನಿವಾಸರೆಡ್ಡಿ(53) ಶುಕ್ರವಾರ ನಿಧನರಾಗಿದ್ದಾರೆ. ಜಾಂಡೀಸ್ನಿಂದಾಗಿ ಅನಾರೋಗ್ಯದಿಂದಿದ್ದ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಪತ್ನಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಎಂ.ಸುನೀತಾ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ತಾಲ್ಲೂಕಿನ ದ್ಯಾವರಹಳ್ಳಿಯಲ್ಲಿನ ಅವರ ತೋಟದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದೆಂದು ಕುಟುಂಬವರ್ಗದವರು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಭಟಿಸನೆ
ಶಿಡ್ಲಘಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟಿಸಿದರು.
ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ತಾಲ್ಲೂಕು ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟಿಸಿದರು.
ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ನ್ಯಾಯ ಒದಗಿಸಬೇಕು. ನೌಕರರ ಇಳಿವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004 ರ ನಂತರ ಹಾಗೂ ರಾಜ್ಯ ಸರ್ಕಾರವು 2006 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಂಡಿರುವವರಿಗೆ ರದ್ದುಪಡಿಸಿದ್ದಾರೆ. ಅದನ್ನು ಮರುಸ್ಥಾಪಿಸಬೇಕೆಂದು ಹೋರಾಟ ನಡೆಸುತ್ತಿದ್ದೇವೆ. ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪೋಸ್ಟ್ ಕಾರ್ಡ್ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ತಾಲ್ಲೂಕು ಕಛೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕು ಪಂಚಾಯತಿ ಮುಂತಾದೆಡೆ ಸರ್ಕಾರಿ ನೌಕರರು ಕಪ್ಪು ಬ್ಯಾಡ್ಜ್ ಧರಿಸಿ ಕಾರ್ಯನಿರ್ವಹಿಸಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಅಕ್ಕಲರೆಡ್ಡಿ, ನರಸಿಂಹರಾಜು, ವೀಣಾ, ವಿಜಯಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗೌರವ ಸಮರ್ಪಣೆ
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರಿಗೆ ಗೌರವ ಸಮರ್ಪಿಸಿ ಕ.ಸಾ.ಪ ಕಾರ್ಯಕ್ರಮಗಳಿಗೆ ಸಹಕರಿಸಲು ಕೋರಿದರು. ಕ.ಸಾ.ಪ ಹಿರಿಯ ಪದಾಧಿಕಾರಿಗಳಾದ ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಲಕ್ಷ್ಮೀನಾರಾಯಣ, ಬಿ.ಪಿ.ರಾಘವೇಂದ್ರ, ಕೆ.ಗುಡಿಯಪ್ಪ, ತ್ಯಾಗರಾಜ್ ಹಾಜರಿದ್ದರು.
ಗೌರವ ಸಮರ್ಪಣೆ
ಶಿಡ್ಲಘಟ್ಟದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಮತ್ತು ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಶಾಸಕ ಎಂ.ರಾಜಣ್ಣ ಅವರಿಗೆ ಗೌರವ ಸಮರ್ಪಿಸಿ ಕ.ಸಾ.ಪ ಕಾರ್ಯಕ್ರಮಗಳಿಗೆ ಸಹಕರಿಸಲು ಕೋರಿದರು. ಕ.ಸಾ.ಪ ಹಿರಿಯ ಪದಾಧಿಕಾರಿಗಳಾದ ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ರೂಪಸಿ ರಮೇಶ್ ಮತ್ತಿತರರು ಹಾಜರಿದ್ದರು.
ಪರಿಸರ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಬೇಕು
ನಗರದಲ್ಲಿ ಪರಿಸರ ಮಾಲಿನ್ಯವಾಗದಂತೆ ತಡೆಗಟ್ಟುವಂತಹ ಜವಾಬ್ದಾರಿಯನ್ನು ನಗರಸಭೆಯ ಅಧಿಕಾರಿಗಳದ್ದು. ಅವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧ್ಯಕ್ಷ ಮಂಜುನಾಥ್ ಹೇಳಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ಮಾಲಿನ್ಯ ನಿಯಂತ್ರಣಾ ಮಂಡಳಿ, ರೇಷ್ಮೆಇಲಾಖೆ, ಹಾಗೂ ನಗರಸಭೆ ಶಿಡ್ಲಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ರೀಲರುಗಳ ಸಭೆಯಲ್ಲಿ ಅವರು ಮಾತನಾಡಿದರು.
ರೇಷ್ಮೆನೂಲು ಬಿಚ್ಚಾಣಿಕೆ ಮಾಡುವಂತಹ ರೀಲರುಗಳು, ತಾವು ಬಳಕೆಮಾಡಿದಂತಹ ನೀರು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದರಿಂದ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಉಪಯೋಗಿಸಿದ ನೀರು ರೇಷ್ಮೆ ತ್ಯಾಜ್ಯದೊಂದಿಗೆ ನೇರವಾಗಿ ಚರಂಡಿಗಳಲ್ಲಿ ಸೇರುವುದರಿಂದ ಮತ್ತಷ್ಟು ಮಾಲಿನ್ಯವಾಗಲು ಕಾರಣವಾಗುತ್ತದೆ. ರೀಲರುಗಳು ನೂಲುಬಿಚ್ಚಾಣಿಕೆಗೆ ಉಪಯೋಗ ಮಾಡಿದಂತಹ ನೀರಿನಿಂದಾಗುವಂತಹ ದುಷ್ಪರಿಣಾಮಗಳ ಬಗ್ಗೆಯೂ ಚಿಂತನೆ ನಡೆಸಬೇಕು. ತೊಟ್ಟಿಗಳನ್ನು ನಿರ್ಮಾಣ ಮಾಡಿ, ಹಂತ ಹಂತವಾಗಿ ನೀರನ್ನು ಹೊರಬಿಡುವುದರಿಂದಲೂ ಜಲಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಈ ಹಿಂದೆ ಸಬೆಯನ್ನು ನಡೆಸಿ ಕೆಲವು ಬದಲಾವಣೆಗಳ ಬಗ್ಗೆ ಚರ್ಚೆ ಮಾಡಲಾಗಿತ್ತಾದರೂ ನಗರಸಭೆಯವರು ಅದನ್ನು ಕಾರ್ಯಗತಗೊಳಿಸಲಿಲ್ಲ, ನಗರದಲ್ಲಿ ಉತ್ಪತ್ತಿಯಾದ ತ್ಯಾಜ್ಯನೀರನ್ನು ಒಂದು ಕಡೆಗೆ ಶೇಖರಣೆ ಮಾಡಿದರೆ, ವೈಜ್ಞಾನಿಕವಾಗಿ ಹೊಸ ತಂತ್ರಜ್ಞಾನದ ಮೂಲಕ ನೀರನ್ನು ಮರುಬಳಕೆ ಅಥವಾ ಅಂತರ್ಜಲವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ನಗರದಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರೀಲರುಗಳು ಗೂಡಿನ ಶೇಖರಣೆ, ಪ್ಯೂಪಾಗಳ ನಿರ್ವಹಣೆ ಹಾಗೂ ತ್ಯಾಜ್ಯನೀರಿನ ವಿಲೇವಾರಿ ಎಲ್ಲವನ್ನೂ ಜಾಗದ ಕೊರತೆಯಿಂದಾಗಿ ಒಂದೇ ಕಡೆಯಲ್ಲಿ ಮಾಡಿಕೊಳ್ಳಬೇಕು. ಮಾರುಕಟ್ಟೆಯ ಆವರಣದಲ್ಲೆ ಆರೋಗ್ಯಕರವಾದ ವಾತಾವರಣವಿಲ್ಲ, ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.
ರೇಷ್ಮೆಇಲಾಖೆಯ ಉಪನಿರ್ದೆಶಕ ನಾಗಭೂಷಣ್, ಶಿಡ್ಲಘಟ್ಟ ಮಾರುಕಟ್ಟೆಯ ಉಪನಿರ್ದೆಶಕ ರತ್ನಯ್ಯಶೆಟ್ಟಿ, ವಿಜ್ಞಾನಿ ಮಹೇಶ್, ನಗರಸಭೆ ಪರಿಸರ ಎಂಜಿನಿಯರ್ ದಿಲೀಪ್, ರಾಮ್ಕುಮಾರ್, ನರಸಿಂಹಮೂರ್ತಿ, ರೀಲರುಗಳಾದ ರಾಮಕೃಷ್ಣಪ್ಪ, ನಾಗನರಸಿಂಹ, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

