Home Blog Page 473

ಬಾಲಕ ಪ್ರಾರಂಭಿಸಿದ ಉಚಿತ ನೃತ್ಯ ತರಬೇತಿ ಶಿಬಿರ

0

ಬೇಸಿಗೆ ರಜೆ ಬರುತ್ತಿದ್ದಂತೆ ಮಕ್ಕಳನ್ನು ವಿವಿಧ ಶಿಬಿರಗಳಿಗೆ ಸೇರಿಸಲು ಪೋಷಕರು ಆಸಕ್ತಿ ವಹಿಸುತ್ತಾರೆ. ಕ್ರೀಡೆ, ನಾಟಕ, ನೃತ್ಯ, ಚಿತ್ರಕಲೆ, ಹಾಡು ಮುಂತಾದ ತಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ತರಬೇತಿ ಪಡೆಯಲು ಮಕ್ಕಳೂ ಉತ್ಸುಕರಾಗಿರುತ್ತಾರೆ. ಎಲ್ಲಾ ಮಕ್ಕಳಿಗೂ ಆಸಕ್ತಿಯಿದ್ದರೂ ಈ ಅವಕಾಶವಿರುವುದಿಲ್ಲ.
ವಿಶೇಷವೆಂಬಂತೆ ನಗರದ ದೇಶದಪೇಟೆಯ ಬಾಲಕನೊಬ್ಬ ತಾನು ಕಲಿತ ನೃತ್ಯವನ್ನು ತನ್ನ ಬಡಾವಣೆಯ ಬಡ ಮಕ್ಕಳಿಗೆ ರಜೆಯಲ್ಲಿ ಉಚಿತವಾಗಿ ಹೇಳಿಕೊಡಲು ಪ್ರಾರಂಭಿಸಿದ್ದಾನೆ. ನಗರದ ಬಿಜಿಎಸ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಮನೋಜ್ಕುಮಾರ್, ಆಸಕ್ತ ಬಡ ಮಕ್ಕಳಿಗೆ ಜಾನಪದ, ದೇಶಭಕ್ತಿ, ಸಿನೆಮಾ ಮತ್ತು ದೇವರ ಹಾಡುಗಳಿಗೆ ನೃತ್ಯವನ್ನು ತರಬೇತಿ ನೀಡುತ್ತಿದ್ದಾನೆ.

ಮನೋಜ್ ಕುಮಾರ್
ಮನೋಜ್ ಕುಮಾರ್

‘ಮನೋಜ್ ಮೂರು ವರ್ಷ ವಯಸ್ಸಿನವನಿದ್ದಾಗಿಂದಲೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ. ಚಿಂತಾಮಣಿಯಲ್ಲಿ ಗುರುಗಳ ಬಳಿ ನೃತ್ಯ ಕಲಿತಿದ್ದಾನೆ. ಪ್ರತಿ ವಾರಾಂತ್ಯದಲ್ಲಿ ಅವನನ್ನು ಕರೆದುಕೊಂಡು ಚಿಂತಾಮಣಿಗೆ ಹೋಗಿ ಬರುತ್ತಿದ್ದೆವು. ಗಣೇಶ ಉತ್ಸವದಲ್ಲಿ, ಶಾಲೆಯಲ್ಲಿ, ವಿವಿದೆಡೆ ನಡೆಸುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾನೆ. ಹಲವಾರು ಕಡೆ ಪ್ರಶಸ್ತಿಗಳನ್ನೂ ಪಡೆದಿದ್ದಾನೆ. ಅವನ ನೃತ್ಯವನ್ನು ನೋಡಿ ನಮ್ಮ ಬಡಾವಣೆಯ ಕೆಲವು ಮಕ್ಕಳು ಕಲಿಯಲು ಆಸ್ತಿ ತೋರಿಸಿದಾಗ ಮನೆಯಲ್ಲಿ ಸಂಜೆಯ ವೇಳೆ ಉಚಿತವಾಗಿ ಕಲಿಸುತ್ತಿದ್ದ. ಆ ಮಕ್ಕಳ ತಂಡದ ಪ್ರದರ್ಶನವನ್ನೂ ನೀಡಿದ್ದರು. ಈಗ ಬೇಸಿಗೆಯ ರಜೆಯಲ್ಲಿ ಆಸಕ್ತ ಬಡ ಮಕ್ಕಳಿಗೆ ನೃತ್ಯವನ್ನು ಹೇಳಿಕೊಡಲು ಪ್ರಾರಂಭಿಸಿದ್ದಾನೆ. ವಿದ್ಯೆ ಹಂಚಿದಷ್ಟೂ ಹೆಚ್ಚಾಗುತ್ತದೆ. ಹಾಗಾಗಿ ಅವನ ಕೆಲಸಕ್ಕೆ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ’ ಎನ್ನುತ್ತಾರೆ ಮನೋಜ್ ತಂದೆ ತಾಯಿಯರಾದ ಶ್ರೀನಿವಾಸ್ ಮತ್ತು ಮಧುಮಾಲತಿ.
ಬೇಸಿಗೆಯ ಶೀಬಿರಗಳು ಎಲ್ಲೆಡೆ ಹಣಕ್ಕಾಗಿ ನಡೆಯುತ್ತವೆ. ಆದರೆ ನಮ್ಮ ದೇಶದಪೇಟೆಯಲ್ಲಿ ಮಕ್ಕಳಿಗೆ ನೃತ್ಯ ತರಬೇತಿಯು ಪುಟ್ಟ ಬಾಲಕನಿಂದಲೇ ಉಚಿತವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಅವರು ನೃತ್ಯದ ಪ್ರದರ್ಶನ ನೋಡಲು ಕಾತುರದಿಂದಿದ್ದೇವೆ ಎನ್ನುತ್ತಾರೆ ದೇಶದಪೇಟೆ ವಾಸಿಗಳು.
ನೃತ್ಯಾಸಕ್ತ ಮಕ್ಕಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9066207335

ಕನ್ನಮಂಗಲದಲ್ಲಿ ಆರ್ ಟಿಇ ದಿನಾಚರಣೆ

0

ಆರ್ ಟಿಇ ಕಾಯ್ದೆಯ ಅಂಶಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಪೋಷಕರು, ಶಿಕ್ಷಕರು ಹಾಗೂ ಸಮುದಾಯ ಹೆಚ್ಚು ಶ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಕರೆ ನೀಡಿದರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಆರ್ಟಿಇ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಆರ್ಟಿಇ ದಿನಾಚರಣೆ ಸಮಾರಂಭದಲ್ಲಿ ಶಾಮಂತಿ ಮಕ್ಕಳ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಆರ್ಟಿಇ ದಿನಾಚರಣೆ ಸಮಾರಂಭದಲ್ಲಿ ಶಾಮಂತಿ ಮಕ್ಕಳ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಕೆ.ಸುಮಾ ಮಾತನಾಡಿ, ೬-೧೪ ವರ್ಷದ ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿಸಲು ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಜಿ. ಗೋಪಾಲ್, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ‘ಉತ್ತಮಶಾಲೆ’ಎಂದು ಪುರಸ್ಕರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ.ಯ ಹಿಂದಿನ ಪದಾಧಿಕಾರಿಗಳಾದ ವೆಂಕಟೇಶ್, ಮುನಿನಾರಾಯಣಪ್ಪ, ಮುನಿರಾಜಗೌಡ, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಶಾಮಂತಿ ಮಕ್ಕಳ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ತಾಲ್ಲೂಕಿನ ಕನ್ನಮಂಗಲದಲ್ಲಿ ಗುರುವಾರ ಗ್ರಾಮದಲ್ಲಿ ಆರ್ಟಿಇ ಬಗ್ಗೆ ಜಾಗೃತಿ ಮಾಡಿಸಲು ಮಕ್ಕಳು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಜಾಥಾ ನಡೆಸಿದರು.
ಶಿಡ್ಲಘಟ್ಟ ತಾಲ್ಲೂಕಿನ ತಾಲ್ಲೂಕಿನ ಕನ್ನಮಂಗಲದಲ್ಲಿ ಗುರುವಾರ ಗ್ರಾಮದಲ್ಲಿ ಆರ್ಟಿಇ ಬಗ್ಗೆ ಜಾಗೃತಿ ಮಾಡಿಸಲು ಮಕ್ಕಳು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಜಾಥಾ ನಡೆಸಿದರು.

ಕಾರ್ಯಕ್ರಮಕ್ಕೆ ಮುನ್ನ ಗ್ರಾಮದಲ್ಲಿ ಆರ್ಟಿಇ ಬಗ್ಗೆ ಜಾಗೃತಿ ಮಾಡಿಸಲು ಮಕ್ಕಳು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಜಾಥಾ ನಡೆಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಮುನಿಆಂಜನಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯಮ್ಮ ಕದಿರಪ್ಪ, ಸದಸ್ಯರಾದ ದೇವರಾಜ್, ಸರೋಜಮ್ಮ ನಾಗರಾಜ್, ಸ್ನೇಹ ಯುವಕರ ಸಂಘದ ಅಧ್ಯಕ್ಷ ವಸಂತಕುಮಾರ್, ಐನಾ ಸಂಸ್ಥೆಯ ವೆರೋನಿಕ ಡೇವಿಡ್, ಮಕ್ಕಳ ಪರಿವೀಕ್ಷಣಾಧಿಕಾರಿ ರಾಮೇಗೌಡ, ಆರ್ಟಿಇ ಕಾರ್ಯಪಡೆಯ ಜೆ. ಸತೀಶ್, ಶಾಲೆಯ ಮುಖ್ಯ ಶಿಕ್ಷಕ ಎಚ್. ಮುನಿಯಪ್ಪ, ಸಹಶಿಕ್ಷಕರಾದ ಕೆ. ಶಿವಶಂಕರ, ಜೆ. ಶ್ರೀನಿವಾಸ, ಎಸ್. ಕಲಾಧರ, ಟಿ.ಜೆ. ಸುನೀತ ಹಾಗೂ ಅಂಗನವಾಡಿ ಶಿಕ್ಷಕಿ ಎನ್. ಪದ್ಮಾವತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಗೆ ಉದಾರವಾಗಿ ದತ್ತಿಗಳನ್ನು ನೀಡಿ

0

ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ಗೆ ಉದಾರವಾಗಿ ದತ್ತಿಗಳನ್ನು ನೀಡಿದಲ್ಲಿ ನಿರಂತರವಾಗಿ ಅವರುಗಳ ಹೆಸರಿನಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಹಲವು ದಾನಿಗಳ ದತ್ತಿಗಳ ಮೂಲಕ ಪ್ರತಿ ವರ್ಷ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಘ ಸಂಸ್ಥೆಗಳ ಹೆಸರಿನಲ್ಲಿ ಅಥವಾ ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ದತ್ತಿ ದಾನಿಗಳು ಉದಾರವಾಗಿ ಹಣ ನೀಡಿದಲ್ಲಿ, ಅದರ ಬಡ್ಡಿ ಹಣದಿಂದ ಪ್ರತಿ ವರ್ಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಬಹುದು. ಪ್ರಶಸ್ತಿಗಳನ್ನು ನೀಡಬಹುದು ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಪ್ರತಿಯೊಂದು ಕುಟುಂಬದವರೂ ಕ.ಸಾ.ಪ ಸದಸ್ಯತ್ವವನ್ನು ಪಡೆಯುವ ಮೂಲಕ ಸಾಹಿತ್ಯ ಪರಿಷತ್ತನ್ನು ಗಟ್ಟಿಗೊಳಿಸಬೇಕು ಎಂದು ಕೋರಿದರು.
ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಸುಧೀರ್, ಸುದರ್ಶನ್, ಎಸ್.ಆರ್.ಶ್ರೀನಿವಾಸ್, ಮುನಿಕೃಷ್ಣಪ್ಪ, ರೂಪೇಶ್, ಶಿವಾನಂದ, ರಾಘವೇಂದ್ರ, ಆನಂದ್, ಮಂಜುನಾಥ್, ಸುರೇಶ್, ಸಚಿನ್, ಬಚ್ಚೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಪ್ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ

0

ಶಕ್ತಶಾಲಿಯಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸುವ ಮೂಲಕ ರಾಜ್ಯ ಸರ್ಕಾರ ಭ್ರಷ್ಟಾಚಾರಿಗಳಿಗೆ ಬೆಂಗಾವಲಾಗಿ ನಿಂತಿದೆ ಎಂದು ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ನಾಗರಾಜ್ ಆರೋಪಿಸಿದರು.
ನಗರದ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ರಾಜ್ಯ ಸರ್ಕಾರದ ಜನವಿರೋಧಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಹಿಂಪಡೆಯುವಂತೆ ಒತ್ತಾಯಿಸಿ ಆಪ್ ಕಾರ್ಯಕರ್ತರು ಗುರುವಾರ ಕೈಗೊಂಡಿದ್ದ ‘24 ಗಂಟೆಗಳ ಉಪವಾಸ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕು. ಜನಪ್ರತಿನಿಧಿಗಳು ಪಾರದರ್ಶಕವಾಗಿದ್ದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಸರ್ಕಾರ ಸ್ಥಾಪನೆ ಮಾಡಬಾರದು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಆಪ್ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವುದರ ಬೆಂಬಲವಾಗಿ ನಾವು ಉಪವಾಸವನ್ನು ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರು ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ಮಂಜುನಾಥ್, ದ್ಯಾವಪ್ಪ, ರಾಕೇಶ್ಬಾಬು, ಪ್ರವೀಣ್, ಶಂಶುದ್ದೀನ್, ಇದಾಯತ್, ಷಫೀವುಲ್ಲಾ, ವೆಂಕಟಪ್ಪ, ಶಾವಿದ್, ನವೀದ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್ ಮತ್ತಿತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಜಾನುವಾರು ಸಾಕಾಣಿಕೆ ಕುರಿತು ಅರಿವು ಕಾರ್ಯಕ್ರಮ

0

ತಾಲ್ಲೂಕಿನಲ್ಲಿ ಬಹುತೇಕರು ಹೈನುಗಾರಿಕೆಯನ್ನು ಹೊಂದಿರುವುದರಿಂದ ಹಸು, ಮೇಕೆ, ಕುರಿ, ಕೋಳಿಗಳ ಸಂರಕ್ಷಣೆಯನ್ನು ಮಾಡುವುದು ಅವಶ್ಯಕ ಎಂದು ಗಂಜಿಗುಂಟೆ ಗ್ರಾಮ ಪಂಚಾಯತಿಯ ಪಶು ವೈದ್ಯ ಬಾಬು ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೊಪ್ಪಾರ್ಲಹಳ್ಳಿ ಗ್ರಾಮದಲ್ಲಿ ಈಚೆಗೆ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಹಮ್ಮಿಕೊಂಡಿದ್ದ ಜಾನುವಾರು ಸಾಕಾಣಿಕೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಹೆಚ್ಚು ಮಳೆಯಿಂದಾಗಿ ಕಳೆದ ವರ್ಷ ಸುಮಾರು ಕುರಿಗಳು ಸತ್ತು ಹೋದವು. ಅದರಿಂದ ಎಷ್ಟೋ ಕುಟುಂಬಗಳು ಹಾನಿಗೊಳಗಾದವು. ಆದ್ದರಿಂದ ನಾವು ನೀವುಗಳು ನಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೇವೆ ಅಷ್ಟೇ ಸ್ವಚ್ಛವಾಗಿ ದನ ಹಾಗೂ ಕುರಿ ದೊಡ್ಡಿಗಳನ್ನು ಇಟ್ಟುಕೊಳ್ಳಬೇಕು. ಇಲ್ಲವಾದರೆ ರೋಗಾಣುಗಳು ಕಾಣಿಸಿಕೊಂಡು ನಮ್ಮ ಜಾನುವಾರಗಳು ರೋಗಗಳಿಗೆ ತುತ್ತಾಗುತ್ತವೆ. ಹೆಚ್ಚು ಬೆಲೆಬಾಳುವ ಹಸುಗಳಾದ ಹೆಪ್, ಜೆರ್ಸಿ ಇವುಗಳಿಗೆ ವಿಮೆಮಾಡುವುದು ಅವಶ್ಯಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯವರು ಜನರಿಂದ ೨೦ ಕುರಿಗಳಿಗೆ ವಿಮೆಯನ್ನು ಮಾಡಿಸಿದರು. ವೈದ್ಯಾಧಿಕಾರಿ ಕುರಿಗಳಿಗೆ ವಿಮೆಯ ಒಲೆಗಳನ್ನು ಹಾಕಿ ಅವುಗಳಿಗೆ ಚುಚ್ಚುಮದ್ದನ್ನು ನೀಡಿದರು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಯೋಜನಾಧಿಕಾರಿಗಳಾದ ಶಿಲ್ಪಾ, ನಿಖತ, ಪ್ರತಿನಿಧಿಯಾದ ಗೋಪಿಚಂದ್ರ, ಸೌಭಾಗ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗಾಂಡ್ಲಚಿಂತೆ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆ

0

ಶಿಸ್ತು, ಸಂಯಮ, ಭಾವೈಕ್ಯತೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಭಾರತ ಸೇವಾ ದಳದ ಶಾಖೆಯನ್ನು ಪ್ರಾರಂಭಿಸುತ್ತಿರುವುದಾಗಿ ಭಾರತ ಸೇವಾದಳ ತಾಲ್ಲೂಕು ಸಮಿತಿ ಉಪಾಧ್ಯಕ್ಷ ಎಸ್.ಎನ್.ಶ್ರೀನಿವಾಸಪ್ಪ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇವಾದಳ ಇತರ ಸಮಘ ಸಂಸ್ಥೆಗಳಿಗಿಂತ ವಿಭಿನ್ನವಾದುದು. ರಾಷ್ಟ್ರಧ್ವಜದ ಸಂಪೂರ್ಣ ಮಾಹಿತಿಯನ್ನು ನೀಡುತ್ತಾ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಭಾರತ ಸೇವಾದಳದ ಕಾರ್ಯಕರ್ತರು ಸೇವೆಯಲ್ಲಿ ತೊಡಗಿಸಿಕೊಂಡು ಮಾನವೀಯ ಮೌಲ್ಯಗಳನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿಯನ್ನು ಸೇವಾದಳ ವೆಂಕಟರೆಡ್ಡಿ ಹೇಳಿಕೊಟ್ಟರು. ಶಾಲಾ ವಿದ್ಯಾರ್ಥಿಗಳು ಪಥಸಂಚಲನೆ, ಏರೋಬಿಕ್ಸ್, ಪದಕವಾಯತ್ ಪ್ರದರ್ಶಿಸಿದರು.
ಸಿ.ಆರ್.ಪಿ.ಶಿವಣ್ಣ, ಸಿ.ಆರ್.ಪಿ. ಲಕ್ಷ್ಮಣರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ, ಮುಖ್ಯಶಿಕ್ಷಕ ಮಂಜುನಾಥ, ಯಶಸ್ವಿನಿ, ಗೀತಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಯ-ವ್ಯಯದ ಬಜೆಟ್ ಮಂಡನೆ

0

ನಗರಸಭೆ ಕಚೇರಿಯಲ್ಲಿ ಬುಧವಾರ ೨೦೧೬-೧೭ ನೇ ಸಾಲಿನ ಆಯ-ವ್ಯಯದ ಬಜೆಟ್ ಮಂಡನೆ ಮಾಡಲಾಯಿತು.
ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಮುಷ್ಟರಿತನ್ವೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾರಂಭ ಶಿಲ್ಕು ೪೫ ಲಕ್ಷ ೬೨ ಸಾವಿರದ ೧೯೮ ರೂ ಸೇರಿದಂತೆ ೨೦೧೬-೧೭ ನೇ ಸಾಲಿನಲ್ಲಿ ನಿರೀಕ್ಷಿಸಲಾಗಿರುವ ೪೪ ಲಕ್ಷ ೩೭ ಸಾವಿರದ ೧೯೮ ರೂಗಳ ಉಳಿತಾಯ ಬಜೆಟ್ನ್ನು ಮಂಡಿಸಲಾಯಿತು.
ನಗರಸಭೆ ವ್ಯಾಪ್ತಿಗೆ ಬರುವ ಕಟ್ಟಡಗಳ ಉನ್ನತೀಕರಣಕ್ಕೆ ೭ ಕೋಟಿ ೫೦ ಲಕ್ಷ ರೂಗಳು ಸೇರಿದಂತೆ ಆರ್.ಸಿ.ಸಿ ಕಾಂಕ್ರೀಟ್ ರಸ್ತೆಗಳಿಗಾಗಿ ೨ ಕೋಟಿ, ಡಾಂಬರ್ ರಸ್ತೆ ಕಾಮಗಾರಿಗೆ ೧ ಕೋಟಿ ೫೦ ಲಕ್ಷ, ಆರ್.ಸಿ.ಸಿ ಡೆಕ್ ಸ್ಲ್ಯಾಬ್ ನಿರ್ಮಾಣಕ್ಕೆ ೧ ಕೋಟಿ, ಆರ್.ಸಿ.ಸಿ ಡ್ರೈನ್ ನಿರ್ಮಾಣಕ್ಕೆ ೧ ಕೋಟಿ ೨೦ ಲಕ್ಷ, ಹೊರಗುತ್ತಿಗೆ ಕಾರ್ಯಾಚರಣೆಯ ವೆಚ್ಚ ೧ ಕೋಟಿ ೨೦ ಲಕ್ಷ, ಕನಿಷ್ಠ ನೌಕರರ ವೇತನ ಪಾವತಿಸಲು ೩೦ ಲಕ್ಷ, ಬ್ಲೀಚಿಂಗ್ ಪೌಡರ್ ಖರೀದಿಗಾಗಿ ೭೫ ಲಕ್ಷ, ಕ್ರಿಮಿನಾಶಕಗಳ ಖರೀದಿಗಾಗಿ ೫೦ ಲಕ್ಷ, ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಲು ೫೦ ಲಕ್ಷ, ಹೊಸದಾಗಿ ಮೋಟರ್ ಪಂಪು ಖರೀದಿಸಲು ೩೦ ಲಕ್ಷ, ನಗರದಲ್ಲಿ ಬೀದಿನಾಯಿಗಳನ್ನು ಹಾಗೂ ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಲು ೫ ಲಕ್ಷ ರೂ, ನಗರಸಭೆಯ ವಾಹನಗಳಿಗೆ ಇಂಧನ ತುಂಬಿಸಲು ೧೬ ಲಕ್ಷ ರೂ, ನಗರದ ಸರಹದ್ದಿನಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಲು ೩೫ ಲಕ್ಷ ರೂಗಳು, ಜೆಸಿಬಿ ಯಂತ್ರ ಖರೀದಿಸಲು ೨೫ ಲಕ್ಷ, ಸಮುದಾಯ ಭವನ ನಿರ್ಮಿಸಲು ೨೦ ಲಕ್ಷ ರಸ್ತೆಗಳಿಗೆ ನಾಮಫಲಕ ಅಳವಡಿಸಲು ೧೫ ಲಕ್ಷ, ನಗರಸಭೆಯಲ್ಲಿ ನಡೆಯುವ ಸಭೆಗಳ ಖರ್ಚು ೫ ಲಕ್ಷ, ರೂಗಳ ಅಂದಾಜು ಖರ್ಚುಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ನಗರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್(ನಂದು), ನಗರಸಭೆ ಆಯುಕ್ತ ಎಚ್.ಎ.ಹರೀಶ್ ಸೇರಿದಂತೆ ಎಲ್ಲಾ ನಗರಸಭೆ ಸದಸ್ಯರು ಹಾಜರಿದ್ದರು.

ಸಾದಲಿಯಲ್ಲಿ ಪಿಂಚಣಿ ಅದಾಲತ್

0

ಪಿಂಚಣಿ ಪಡೆಯುವ ಪ್ರತಿಯೊಬ್ಬರೂ ಖಾತೆಯನ್ನು ಹೊಂದಿರಬೇಕು. ಮುಂದಿನ ದಿನಗಳಲ್ಲಿ ಪೋಸ್ಟ್ ಮ್ಯಾನ್ ಮುಖಾಂತರ ಪಿಂಚಣಿ ಬರುವುದಿಲ್ಲ. ನೇರವಾಗಿ ತಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ ಎಂದು ತಹಶೀಲ್ದಾರ್ ಮನೋರಮಾ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ನಾಡಕಚೇರಿಯಲ್ಲಿ ಬುಧವಾರ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಾರು 40 ಅರ್ಜಿಗಳನ್ನು ವಿಲೇವಾರಿ ಮಾಡಿ ನಂತರ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪಿಂಚಣಿ ಪಡೆಯಲು ದಾಖಲೆಗಳನ್ನು ಒಟ್ಟುಗೂಡಿಸುವಲ್ಲಿ ವಿಫಲರಾಗಿರುತ್ತಾರೆ. ಅವರಿಗೆ ಅನುಕೂಲವಾಗುವ ಹಾಗೆ ಅವರಿಗೆ ಅಗತ್ಯ ಮಾಹಿತಿಗಳನ್ನು ನೀಡಿ ದಾಖಲೆ ನೀಡಲು ಸಹಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ದಾಖಲೆಗಳನ್ನು ಒದಗಿಸಲು ವಿಫಲರಾದವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಉಪತಹಶೀಲ್ದಾರ್ ಲಕ್ಷ್ಮೀನಾರಾಯಣ್, ಜೈಪ್ರಕಾಶ್, ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ, ದೊಡ್ಡದಾಸರಹಳ್ಳಿ ಜಿ.ಕೃಷ್ಣಪ್ಪ, ಆನಂದ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಲಕ್ಷ್ಮೀ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಗರದಲ್ಲಿ ಕ್ಯಾಟರ್ ಬಿಲ್ ಅಥವಾ ಕವಣೆ ಮಾರಾಟ

0

ನಗರದಲ್ಲಿ ಕ್ಯಾಟರ್ ಬಿಲ್ ಅಥವಾ ಕವಣೆ ಎಂದು ಕರೆಯುವ ಕೋತಿ ಹಾಗೂ ಹಕ್ಕಿಗಳನ್ನು ಓಡಿಸುವ ಪುರಾತನ ಸಾಧನದ ಮಾರಾಟ ನಡೆಸುತ್ತಿದೆ.
ಆಂಧ್ರದ ತಿರುಪತಿ ಕಡೆಯಿಂದ ಹೊಟ್ಟೆಪಾಡಿಗಾಗಿ ಕವಣೆಗಳನ್ನು ಮಾರುತ್ತಾ ಬಂದಿರುವ ಮರಿಯಣ್ಣ ನಗರಿಗರಿಗೆ ಬಾಲ್ಯವನ್ನು ನೆನಪಿಸುತ್ತಾ ಹಳ್ಳಿಗರಿಗೆ ಅವಶ್ಯ ಸಾಧನ ಬಿಕರಿ ಮಾಡುತ್ತಿದ್ದಾರೆ.
ಪಂಜೆ ಮಂಗೇಶರಾವ್ ಅವರ “ಹುತ್ತರಿ ಹಾಡು” ಎಂಬ ಕವನದಲ್ಲಿ ಹುಲಿಯ ಹಾಲನು ಮೆದ್ದಂತಹ ಹೆಬ್ಬಾವನು ಕವಣೆ ಬೀಸಲು ಬಳಸಿದಂತಹ ವೀರರಾದ ಕೊಡವರ ವರ್ಣನೆಯಿದೆ. ತೆಲುಗಿನಲ್ಲಿ ‘ಒಡಿಸಿಲಿ’ ಎಂದು ಕರೆಯುವ ಕವಣೆಯನ್ನು ಬೆಳೆಗಳಿಗೆ ಹಾನಿ ಮಾಡುವ ಪ್ರಾಣಿ ಮತ್ತು ಪಕ್ಷಿಗಳನ್ನು ಬೆದರಿಸಲು ಮತ್ತು ಓಡಿಸಲು ತೋಟದ ಕಾವಲಿನವರು ಬಳಸುವ ಸ್ಥಳೀಯ ಉಪಕರಣ.
ಇಂಗ್ಲೀಷ್ನ ‘ವಿ’ ಆಕಾರದ ಕೋಲಿನ ಎರಡು ತುದಿಗೆ ರಬ್ಬರನ್ನು ಕಟ್ಟಿರುತ್ತಾರೆ. ಅವೆರಡೂ ರಬ್ಬರನ್ನು ಚರ್ಮದ ತುಂಡಿನಿಂದ ಬಂಧಿಸಿರುತ್ತಾರೆ. ಚರ್ಮದ ತುಂಡಿನಲ್ಲಿ ಕಲ್ಲನ್ನಿಟ್ಟು ಎಳೆದು ಬಿಟ್ಟರೆ ನಿಶ್ಚಿತ ಗುರಿಯನ್ನು ಕಲ್ಲು ಮುಟ್ಟುತ್ತದೆ. ಮೊದಲು ಬೇಕೆನಿದ ಹಣ್ಣು ಕಾಯಿಗಳನ್ನು ಬೀಳಿಸುವಂಥಹ ಅದ್ಭುತ ಗುರುಕಾರರಿದ್ದರು ಎಂದು ಹಿರಿಯರು ನೆನೆಯುತ್ತಾರೆ.
ಕೋವಿಯಂತಹ ಅಪಾಯಕಾರಿ ಮತ್ತು ಪ್ರಾಣಹಾನಿ ಮಾಡುವ ಸಾಧನಕ್ಕಿಂತ ‘ಇತ್ತ ಹಾವೂ ಸಾಯಬಾರದು ಅತ್ತ ಕೋಲೂ ಮುರಿಯಬಾರದು’ ಎಂಬಂತೆ ಬಳಸುವ ಈ ಕವಣೆ ನಮ್ಮ ಗ್ರಾಮೀಣರ ಪರಿಸರ ಪ್ರೇಮಿ ಅನ್ವೇಷಣೆ.
‘ನಾವು ಹಿಂದೆ ಮನೆಗಳ ಬಳಿ ಬರುತ್ತಿದ್ದ ಕೋತಿಗಳನ್ನು ಬೆದರಿಸಿ ಓಡಿಸಲು ಈ ಕ್ಯಾಟರ್ ಬಿಲ್ ಬಳಸುತ್ತಿದ್ದೆವು. ತೋಟಗಳಲ್ಲಿ ಇದು ಬಹಳ ಸಹಾಯಕ ಸಾಧನ. ಹುಣಸೆಕಾಯಿ, ಮಾವಿನಕಾಯಿಗಳನ್ನು ಇದರಿಂದ ಕಲ್ಲೆಸೆದು ಬೀಳಿಸಿ ತಿಂದದ್ದು ಮರೆಯಲಾಗದು. ನಾವು ಬಾಲ್ಯದಲ್ಲಿ ಬಳಸುತ್ತಿದ್ದ ಈ ಸಾಧನವನ್ನು ಈಗ ನಮ್ಮ ಮಕ್ಕಳಿಗೆ ತೋರಿಸಲಾದರೂ ಒಂದೊಂದು ಕೊಳ್ಳಬೇಕಿದೆ’ ಎನ್ನುತ್ತಾರೆ ಶ್ರೀನಿವಾಸ್.
‘ಮೊದಲಿನಂತೆ ಈಗ ಕ್ಯಾಟರ್ ಬಿಲ್ನ ವ್ಯಾಪಾರವಿಲ್ಲ. ಆದರೂ ನಾವು ಹೊಟ್ಟೆಪಾಡಿಗಾಗಿ ಊರೂರು ತಿರುಗಿ ವ್ಯಾಪಾರ ಮಾಡುತ್ತೇವೆ. ಮೂರ್ನಾಕು ಗುಣಮಟ್ಟದ್ದು ತಯಾರಿಸಿ ವಿವಿಧ ಬೆಲೆಗಳಿಗೆ ಮಾರುತ್ತೇವೆ’ ಎಂದು ಮರಿಯಣ್ಣ ತಿಳಿಸಿದರು.

‘24 ಗಂಟೆಗಳ ಉಪವಾಸ’

0

ರಾಜ್ಯ ಸರ್ಕಾರದ ಜನವಿರೋಧಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿಡ್ಲಘಟ್ಟ ಆಪ್ ಕಾರ್ಯಕರ್ತರು ಗುರುವಾರ ನಗರದ ಮಿನಿ ವಿಧಾನಸೌಧದ ಮುಂಭಾಗ ‘24 ಗಂಟೆಗಳ ಉಪವಾಸ’ವನ್ನು ಕೈಗೊಳ್ಳುತ್ತಿರುವುದಾಗಿ ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಪ್ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವುದರ ಬೆಂಬಲವಾಗಿ ನಾವು ಉಪವಾಸವನ್ನು ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರು ಬೆಂಗಳೂರಿನ ಪ್ರಾತಿಭಟನೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಮಂಗಲ ಶಾಲೆಯಲ್ಲಿ ಆರ್.ಟಿ.ಇ ದಿನಾಚರಣೆ

0

ಆರ್.ಟಿ.ಇ ಕಾರ್ಯಪಡೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಆರ್.ಟಿ.ಇ ದಿನಾಚರಣೆಯನ್ನು ಮಾರ್ಚ್ 31 ರ ಗುರುವಾರದಂದು ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುತ್ತಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು 2009ರ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸನ್ಮಾನ, ಶಾಮಂತಿ ಮಕ್ಕಳ ಹಕ್ಕುಗಳ ಸಂಘ ಹಾಗೂ ಮಕ್ಕಳ ಗ್ರಂಥಾಲಯದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ.

ನೂತನ ನ್ಯಾಯಾಲಯ ಸಂಕೀರ್ಣವು ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ

0

ಸ್ವಚ್ಚ ಭಾರತ ಮಿಷನ್ನಡಿಯಲ್ಲಿ ನಗರದ ಸರ್ಕಾರಿ ಕಟ್ಟಡಗಳಲ್ಲಿ ಸ್ವಚ್ಚತೆಯ ಬಗ್ಗೆ ನಗರಸಭೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದಾಗ ನಗರದ ನೂತನ ನ್ಯಾಯಾಲಯ ಸಂಕೀರ್ಣವು ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ನಗರಸಭೆ ಆಯುಕ್ತ ಹೆಚ್.ಎ.ಹರೀಶ್ ಹೇಳಿದರು.
ನಗರಸಭೆ ಕಛೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ವಚ್ಚತೆಯಲ್ಲಿ ನಗರ ಪೋಲೀಸ್ ಠಾಣೆ ದ್ವಿತೀಯ ಹಾಗು ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ. ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಗರದಲ್ಲಿ ಸ್ವಚ್ಚತೆಯನ್ನು ಕಾಪಾಡುತ್ತಿರುವ ಸರ್ಕಾರಿ ಕಟ್ಟಡಗಳ ಪರೀಶಿಲನೆ ನಡೆಸಿದಾಗ ನಗರದ ನ್ಯಾಯಾಲಯ ಸಂಕೀರ್ಣ, ನಗರ ಪೋಲೀಸ್ ಠಾಣೆ ಸೇರಿದಂತೆ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಸಮರ್ಪಕ ಕಸ ವಿಲೇವಾರಿ ಸೇರಿದಂತೆ ಶೌಚಾಲಯ ನಿರ್ವಹಣೆ, ಉತ್ತಮ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಸಮರ್ಪಕವಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ರೇಟಿಂಗ್ ನೀಡಲಾಗಿದೆ ಎಂದರು.
ನಗರದ ಉಳಿದ ಸರ್ಕಾರಿ ಕಟ್ಟಡಗಳಲ್ಲಿಯೂ ಸ್ವಚ್ಚತೆ ಕಾಪಾಡುವಂತೆ ಈಗಾಗಲೇ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ನಗರದಾದ್ಯಂತ ಪ್ಲಾಸ್ಟಿಕ್ ನಿಷೇಧಗೊಳಿಸುವ ಸಲುವಾಗಿ ಅಂಗಡಿ, ಹೋಟೆಲ್ ಸೇರಿದಂತೆ ಮಾಂಸದಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಬಳಸುತ್ತಿರುವವರ ವಿರುದ್ದ ದಂಡ ವಿಧಿಸುವ ಕೆಲಸ ಮಾಡಲಾಗುವುದು ಎಂದರು.
ನಗರದಲ್ಲಿ ಸುಸಜ್ಜಿತ ನೂತನ ನಗರಸಭಾ ಕಾರ್ಯಾಲಯವನ್ನು ನಿರ್ಮಾಣ ಮಾಡಲು ಸರ್ಕಾರ ಈಗಾಗಲೇ ಸುಮಾರು ೬ ಕೋಟಿ ರೂ ಹಣ ಮಂಜೂರು ಮಾಡಿದ್ದು ಕಟ್ಟಡದ ಕಾಮಗಾರಿ ಅತಿ ಶೀಘ್ರದಲ್ಲಿ ಮಾಡಲಾಗುವುದು ಎಂದರು.
ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ತಡೆಯಲು ಸುಮಾರು ೧೩ ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿದ್ದು ಇದರಲ್ಲಿ ಸುಮಾರು ನಾಳ್ಕು ಕೊಳವೆಬಾವಿಗಳನ್ನು ನಗರದ ಹೊರವಲಯದ ಗೌಡನಕೆರೆ ಆವರಣದಲ್ಲಿ ಕೊರೆಸಲಾಗಿದೆ. ಈ ಪೈಕಿ ನಾಲ್ಕು ಕೊಳವೆಬಾವಿಗಳಲ್ಲೂ ಉತ್ತಮ ನೀರು ಲಭ್ಯವಾಗಿರುವುದು ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಸಹಕಾರಿಯಾಗಲಿದೆ ಎಂದರು.
ನಗರಸಭೆ ವ್ಯವಸ್ಥಾಪಕ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್ (ನಂದು), ಸದಸ್ಯರಾದ ಷಫಿವುಲ್ಲಾ, ಮುಸ್ತು, ಮುಖಂಡರಾದ ಎಸ್.ಎಂ.ರಮೇಶ್, ಶ್ರೀನಾಥ್, ಅಂಜದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳನ್ನು ಹೆಚ್ಚಿಸಿ

0

ಸಮಸ್ತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸಿ ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳನ್ನು ಹೆಚ್ಚಿಸಲು ತಾಲ್ಲೂಕು ಅಧ್ಯಕ್ಷರಾದವರು ದಿಟ್ಟ ಹೆಜ್ಜೆ ಇಟ್ಟು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರೊಂದಿಗೆ ಚರ್ಚಿಸಿ ಕನ್ನಡ ಸಾಹಿತ್ಯ ಪರಿಷತ್ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಬಿ.ಆರ್.ಅನಂತಕೃಷ್ಣ ಅವರನ್ನು ಆಯ್ಕೆ ಮಾಡಿದ ನಂತರ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಸಾಹಿತ್ಯ ಪರಿಷತ್ತು ಸಕ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಉತ್ಸಾಹಿ ಬಳಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗುತ್ತಿರುವುದರಿಂದ ತಾಲ್ಲೂಕು ಅಧ್ಯಕ್ಷರ ಕಾರ್ಯತತ್ಪರತೆಯನ್ನು ಓರೆಗಚ್ಚಬೇಕಾಗಿದೆ. ಹಾಗಾಗಿ ಎಲ್ಲಾ ತಾಲ್ಲೂಕು ಕ.ಸಾ.ಪ ಘಟಕಗಳಿಗೆ ಒಂದು ವರ್ಷಕ್ಕೆ ಅನ್ವಯವಾಗುವಂತೆ ಅಧ್ಯಕ್ಷರ ಆಯ್ಕೆಯನ್ನು ಮಾಡಿ, ಶಿಡ್ಲಘಟ್ಟ ತಾಲ್ಲೂಕಿನ ಅಧ್ಯಕ್ಷರನ್ನಾಗಿ ಬಿ.ಆರ್.ಅನಂತಕೃಷ್ಣ ರವರನ್ನು ಘೋಷಿಸಿದ್ದೇನೆ.
ಅತಿ ಶೀಘ್ರದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಛೇರಿ ಆರಂಭಿಸಿ, ಹೋಬಳಿ ಘಟಕಗಳನ್ನು ರಚಿಸಲು ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಸೂಚಿಸಿದ್ದೇನೆ. ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ತಾಲ್ಲೂಕು ಹಾಗೂ ಹೋಬಳಿ ಘಟಕಗಳ ಪದಗ್ರಹಣ ಕಾರ್ಯಕ್ರಮ ನಡೆಸಲು ತಿಳಿಸಿರುವುದಾಗಿ ಹೇಳಿದರು.
ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷರಾದ ಎಸ್.ವಿ.ನಾಗರಾಜರಾವ್, ಮಾಜಿ ಜಿಲ್ಲಾ ಕೋಶಾಧ್ಯಕ್ಷ ವಾಸುದೇವಮೂರ್ತಿ, ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಕೃ.ನ.ಶ್ರೀನಿವಾಸ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಮಾಜಿ ಕ.ಸಾ.ಪ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ನಿಕಟಪೂರ್ವ ಗೌರವ ಕಾರ್ಯದರ್ಶಿ ಕೆ.ಮಂಜುನಾಥ್, ಎಸ್.ಶಂಕರ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಸಿ.ನಂದೀಶ್, ಸುಂದರಾಚಾರಿ, ವೆಂಕಟೇಶಪ್ಪ, ಮಾಜಿ ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ್, ತ್ಯಾಗರಾಜ್, ರಾಮಾಂಜಿ, ವೇಣು, ಮುನಿನಾರಾಯಣಪ್ಪ, ಎಸ್. ಸತ್ಯನಾರಾಯಣರಾವ್, ಬಿ.ಕೃಷ್ಣಮೂರ್ತಿ, ಭಾಸ್ಕರ್, ಮಧುಸೂದನ್, ಶಿವಕುಮಾರ್, ಚಿಂತಾಮಣಿ ಗಂಗರೆಡ್ಡಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕೌಶಲ್ಯ ತರಬೇತಿ ಅತ್ಯಗತ್ಯ

0

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ, ವಿವಿಧ ಬಗೆಯ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎನ್.ರಘುನಾಥ್ ಹೇಳಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಸೋಮವಾರ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ವಯಸ್ಕರ ಶಿಕ್ಷಣ ಇಲಾಖೆಯ ಮೂಲಕ ಮಹಿಳೆಯರಿಗೆ ಹೊಲಿಗೆ ತರಬೇತಿ, ಸೇರಿದಂತೆ ವಿವಿಧ ಬಗೆಯ ಕೌಶಲ್ಯಗಳ ತರಬೇತಿಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಕುಟುಂಬಗಳಲ್ಲಿ ಆರ್ಥಿಕ ಮಟ್ಟ ಸುಧಾರಣೆ ಮಾಡಬೇಕಾದರೆ, ಉಪಕಸುಬುಗಳು ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಪ್ರತಿಯೊಂದು ಮನೆಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ೨೦ ಮಂದಿ ಕಲಿಕಾರ್ಥಿಗಳಿಗೆ ಹೊಲಿಗೆಯಂತ್ರಗಳನ್ನು ಉಚಿತವಾಗಿ ನೀಡುವುದಾಗಿ ಅವರು ಭರವಸೆ ನೀಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಂದ್ರೇಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಕಾತ್ಯಾಯಿನಿ. ತಾಲ್ಲೂಕು ಪಂಚಾಯತಿ ಸದಸ್ಯ ಜೆ.ಟಿ.ನಾಗರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ, ಅರುಣ್ಕುಮಾರ್, ಶಾಂತಮ್ಮದೇವರಾಜ್, ನರಸಿಂಹಮೂರ್ತಿ, ಮಳ್ಳೂರು ಮುನಿರಾಜು, ಎಚ್.ಜಿ.ಶಶಿಕುಮಾರ್, ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ, ಸಂಯೋಜಕ ಟಿ.ವಿ.ಶ್ರೀನಿವಾಸ, ರತ್ನಮ್ಮಚಂದ್ರಪ್ಪ ಮತ್ತಿತರರು ಹಾಜರಿದ್ದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

0

ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಗಳ ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದರೂ ಕೂಡಾ ಭೂಮಿಯನ್ನು ಗುರ್ತಿಸಿಕೊಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಡಾ.ಬಿ.ಆರ್.ಅಂಬೆಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸುವಾಗ ತಹಶೀಲ್ದಾರರ ಹೇಳಿಕೆಯಿಂದ ಬೇಸತ್ತು ಹೊರಬಂದು ಅವರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ವಿಚಾರ ಪ್ರಸ್ತಾಪ ಮಾಡಿದಾಗ, ಸಭೆಯನ್ನು ಕರೆದಿರುವುದು ಕೇವಲ ಜಯಂತಿ ಆಚರಣೆಯ ಬಗ್ಗೆ ಮಾತ್ರ ಭವನದ ವಿಚಾರದ ಬಗ್ಗೆ ಈಗಾಗಲೇ ನಡಾವಳಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ನಮ್ಮ ಕೆಲಸ ನಾವು ಮಾಡಿದ್ದೇವೆ, ಇನ್ನೇನು ಮಾಡಬೇಕು ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ಮಾತನಾಡುತ್ತಿದ್ದಂತೆ, ಕೆರಳಿದ ದಲಿತ ಮುಖಂಡರು ಭವನ ನಿರ್ಮಾಣ ಮಾಡುವಂತೆ ಕಳೆದ ಕೆಲ ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಿದ್ದೇವೆ, ಕಾಟಾಚಾರಕ್ಕೆ ಸುಮಾರು ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಿದ್ದು, ಅದನ್ನು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರದಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸುಮಾರು ೧ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ತಾಲ್ಲೂಕು ಆಡಳಿತ ಭೂಮಿಯನ್ನು ಗುರ್ತಿಸುವಲ್ಲಿ ವಿಫಲವಾಗಿದೆ.
ನಗರದ ಹಳೇ ತಾಲ್ಲೂಕು ಕಛೇರಿಯ ಜಾಗದಲ್ಲಿದ್ದ ಸಿವಿಲ್ ನ್ಯಾಯಾಲಯವನ್ನು ಈಗ ಹೊಸಕಟ್ಟಡಕ್ಕೆ ವರ್ಗಾವಣೆ ಮಾಡಿದ್ದಾರೆ. ಈಗ ಹಳೇ ಕಟ್ಟಡ ಖಾಲಿಯಾಗಿದ್ದು, ಅದರ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು. ಭವನ ದಲಿತರು ಸೇರಿದಂತೆ ಎಲ್ಲಾ ಜನಾಂಗಗಳಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ವಿವಿಧ ಬಗೆಯ ತರಬೇತಿ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತಿರಬೇಕು. ಒಂದು ವೇಳೆ ಹಳೇ ತಾಲ್ಲೂಕು ಕಚೇರಿಯ ಜಾಗವನ್ನು ಮಂಜೂರು ಮಾಡದಿದ್ದರೆ, ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪುನಃ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ತಹಶೀಲ್ದಾರ್ ಮನೋರಮಾ, ಅವರು, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇವೆ, ನಿಮ್ಮ ಮನವಿಯಂತೆ ಹಳೇ ತಾಲ್ಲೂಕು ಕಛೇರಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿ, ಜಾಗ ಸೂಕ್ತವಾಗಿಲ್ಲವೆಂಬ ಕಾರಣಕ್ಕಾಗಿ ಬೇರೆ ಜಾಗವನ್ನು ಸೂಚಿಸುವಂತೆ ತಿಳಿಸಿದ್ದರು. ಅವರ ಆದೇಶದಂತೆ ಈಗಾಗಲೇ ಹನುಮಂತಪುರದ ಬಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಾಗವನ್ನು ಗುರ್ತಿಸಲಾಗಿದೆ ಎಂದು ಸಮಾಧಾನಪಡಿಸಿ ಪೂರ್ವಭಾವಿ ಸಭೆಗೆ ಬರುವಂತೆ ಮನವಿ ಮಾಡಿದರೂ ಕೂಡಾ ಪ್ರತಿಭಟನಾಕಾರರು ಒಪ್ಪಲಿಲ್ಲ. ನಂತರ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ನಡೆಯದ ಪೂರ್ವಭಾವಿ ಸಭೆ: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅಧಿಕಾರಿಗಳು ಭಾಗವಹಿಸಿದ್ದರಿಂದ ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್ ಮನೋರಮಾ ಮೋಬೈಲ್ ಮೂಲಕ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಭೆಯನ್ನು ಮುಂದೂಡಿದರು.
ಕೇಸು ದಾಖಲು ಮಾಡಲು ಒತ್ತಾಯ: ಕಳೆದ ಬಾರಿ ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಕರೆಯಲಾಗಿದ್ದ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವ ಕಾರಣ ಅಧಿಕಾರಿಗಳ ಮೇಲೆ ಕೇಸುದಾಖಲಾಗಿತ್ತು, ಅದೇ ಪ್ರಕಾರ ಈ ಸಭೆಗೆ ಬಾರದೇ ಇರುವ ಅಧಿಕಾರಿಗಳ ಮೇಲೆ ಕೇಸು ದಾಖಲು ಮಾಡಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ದಲಿತ ಮುಖಂಡರುಗಳಾದ ಸಿ.ಎಂ.ಮುನಿಯಪ್ಪ, ಚಿಕ್ಕಮುನಿಯಪ್ಪ, ಎನ್.ಎ.ವೆಂಕಟೇಶ್, ಲಕ್ಷ್ಮೀನಾರಾಯಣ, ನರಸಿಂಹಮೂರ್ತಿ, ಮುನೀಂದ್ರ, ಗುರುಮೂರ್ತಿ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಗ್ಯಾಸ್ನಾಗರಾಜ್, ಚಲಪತಿ, ಅರುಣ್ಕುಮಾರ್ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

ಅಕ್ಷರಸ್ಥರಾದುದರ ಲಾಭವನ್ನು ರೈತ ಪಡೆಯಲಿ!

0

ಜಮಾನಾ ಬದಲಾಗಿದೆ. ಈ ಹಿಂದಿನಂತೆ ರೈತರು ಅಆಇಈ ತಿಳಿಯದ ಅನಕ್ಷರಸ್ಥರಲ್ಲ. ಬರೆಯುವುದು ಅವರ ಪಾಲಿಗೆ ಸಾಹಸವೆಂದು ಅನ್ನಿಸಬಹುದಾದರೂ ಓದುವುದು ಸಲೀಸು. ಆದರೂ ಕೃಷಿಕರು ಓದುವವರಲ್ಲ. ಹೆಚ್ಚೆಂದರೆ ವಿದ್ಯುತ್ ಬಿಲ್, ಫೋನ್ ಬಿಲ್, ಬ್ಯಾಂಕ್ ನೋಟೀಸ್ ಓದಿ ಸುಸ್ತಾಗುತ್ತಾರಷ್ಟೇ! ವಾಸ್ತವವಾಗಿ, ಕೃಷಿಕರ ಒಂದು ಮಟ್ಟಿನ ಹಿನ್ನಡೆಗೆ ಈ ಓದಿನ ಕೊರತೆಯೂ ಕಾರಣ.
ಬೇರೆಯದನ್ನು ಬದಿಗಿಟ್ಟರೂ, ರೈತರು ಕೃಷಿ ಪತ್ರಿಕೆಗಳನ್ನು ಓದುವುದನ್ನು ತಮ್ಮ ಬೇಸಾಯದ ಒಂದು ಭಾಗ ಎಂದುಕೊಳ್ಳಲೇಬೇಕಾದ ದಿನಗಳಿವು. ಸಾಮಾನ್ಯವಾಗಿ ಕೃಷಿ ಪತ್ರಿಕೆಗಳನ್ನು ಓದಿ ಮರೆತುಬಿಡುವುದು ತರವಲ್ಲ. ಆ ಪತ್ರಿಕೆಗಳನ್ನು ಬಹುಕಾಲ ಜೋಪಾನವಾಗಿಟ್ಟುಕೊಳ್ಳಬೇಕು. ವರ್ಷದ ಸಂಚಿಕೆಗಳನ್ನು ಬುಕ್‍ಬೈಂಡ್ ಮಾಡಿಸಿ ಇರಿಸಿಕೊಂಡ ರೈತರನ್ನು ನಾನು ಕಂಡಿದ್ದೇನೆ. ಇವು ಇವತ್ತಲ್ಲವಾದರೂ ಇನ್ನಾವತ್ತೋ ನಿಮ್ಮ ಅನುಕೂಲಕ್ಕೆ ಬರಬಹುದು. ಬಹುಷಃ ಈ ಮಾತಿಗೆ ಈಗ ನೀವು ಓದುತ್ತಿರುವ ಈ `ಕೃಷಿ ಸಂಪದ’ ಪುರವಣಿಗಿಂತ ಬೇರೆ ಉದಾಹರಣೆ ಬೇಡವೇನೋ?
ಎಷ್ಟೋ ಬಾರಿ ರೈತ ತಮ್ಮ ಖರ್ಚು ಕಡಿಮೆ ಮಾಡಲು ಯೋಚಿಸಿದಾಗ ಮೊತ್ತಮೊದಲ ಕತ್ತರಿ ಕೃಷಿ ಪತ್ರಿಕೆಗಳ ಖರೀದಿಗೆ ಬೀಳುತ್ತದೆ. ಇಂದು ಕೃಷಿ ಪತ್ರಿಕೆಗೆ ವಾರ್ಷಿಕ ಬೀಳುವ ವೆಚ್ಚ ಬರೋಬ್ಬರಿ 200 ರೂ. ನಿಜಕ್ಕಾದರೆ, ರೈತನೊಬ್ಬ ಎರಡು ಮೂರು ಕೃಷಿ ಪತ್ರಿಕೆಗಳನ್ನು ಓದುವುದು ಅತ್ಯವಶ್ಯಕ. ಚಂದಾದಾರನಾದರಂತೂ ಭೇಷ್. ನೆನಪಿರಲಿ, ಬಹುಪಾಲು ಮಾದರಿ ಕೃಷಿಕರು ತಮ್ಮ ಸಾಧನೆಯ ಹಿಂದೆ ಕೃಷಿ ನಿಯತಕಾಲಿಕಗಳ ಹಾಗೂ ಕೃಷಿ ಪುಸ್ತಕಗಳ ನೆರವನ್ನು ಪಡೆದಿದ್ದಾರೆ. ಕನ್ನಡದ ಕೆಲವು ರೈತರಿಗಾಗಿಯೇ ಪ್ರಕಟಗೊಳ್ಳುವ ಪತ್ರಿಕೆಗಳನ್ನು ಪರಿಚಯಿಸುವ ಪ್ರಯತ್ನ ಇದು.
ಕೃಷಿ ನಿಯತಕಾಲಿಕಗಳಿಗೆ ಮಾದರಿ ಎನ್ನುವಂತಾದ್ದು `ಅಡಿಕೆ ಪತ್ರಿಕೆ’ ಮಾಸಿಕ. ನುಡಿಚಿತ್ರಕಾರ, ನೆಲ – ಜಲ ವಿಚಾರತಜ್ಞ ಶ್ರೀಪಡ್ರೆಯವರ ನೇತೃತ್ವದಲ್ಲಿ ರೂಪಗೊಂಡಿರುವ `ಅಪ’ಕ್ಕೆ ಈಗ 22ರ ಪ್ರಾಯ. ಪ್ರಕಟಿಸುವ ಪ್ರತಿ ವಿಷಯವನ್ನು ಹಲವು ಕೋನಗಳಿಂದ ವಿಶ್ಲೇಷಿಸಿಯೇ ಪ್ರಕಟಿಸುವ ಇದರ ಧ್ಯೇಯ ರೈತಪರವಾದದ್ದು. ಇದ್ದಕ್ಕಿದ್ದಂತೆ ಲಾಭಕರ ಬೆಳೆ, ಭರ್ಜರಿ ಆದಾಯ ಎನ್ನುವಂತ ಸುಳ್ಳು ಸುಳ್ಳೇ ಲೇಖನಗಳು ಇದರಲ್ಲಿ ಪ್ರಕಟವಾಗುವುದಿಲ್ಲ. ಅನುಭವಿ ರೈತರ, ಕೃಷಿಲೋಕದ ಲೇಖಕರ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಹಾಗೆಯೇ ಎರೆಗೊಬ್ಬರ, ನೀರು ಇಂಗಿಸುವಿಕೆ, ಹಲಸು ಮುಂತಾದ ಬೆಳೆಗಳ ಮೌಲ್ಯವರ್ಧನೆ…. ಹೀಗೆ ಒಂದು ವಿಚಾರದಲ್ಲಿ ರೈತರಿಗೆ ಮನದಟ್ಟಾಗುವಂತೆ ಬರಹ ಆಂದೋಲನವನ್ನೇ ಹಮ್ಮಿಕೊಳ್ಳುವುದು ಅಡಿಕೆ ಪತ್ರಿಕೆಯ ಹೆಗ್ಗಳಿಕೆ.
ಬಹುಷಃ ಇದಕ್ಕೆ `ಅಡಿಕೆ ಪತ್ರಿಕೆ’ ಎಂಬ ಶೀರ್ಷಿಕೆಯಿರುವುದೇ ಒಂದು ಸಮಸ್ಯೆಯಾಗಿರಲಿಕ್ಕೆ ಸಾಕು. ಅಡಿಕೆ ಬೆಳೆಯ ಹೊರತಾದ ಕೃಷಿಕರು ಇದು ತನಗಲ್ಲ ಎಂದುಕೊಂಡುಬಿಡುತ್ತಾರೆ. ಅಡಿಕೆ ಪತ್ರಿಕೆ ಹಾಗೇನೂ ಇಲ್ಲ. ಇದು ಎಲ್ಲ ಬೆಳೆಗಳ ಉಳುಮೆದಾರರಿಗೂ ಅನುಕೂಲಕರ. ಅಡಿಕೆ ಪತ್ರಿಕೆಯ ವಿಳಾಸ – ಅಂಚೆ ಪಟ್ಟಿಗೆ ಸಂಖ್ಯೆ 29, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574201.
ದಕ್ಷಿಣ ಕನ್ನಡದಿಂದಲೇ ಪ್ರಕಟಗೊಳ್ಳುವ ಇನ್ನೊಂದು ಕೃಷಿ ಮಾಸಿಕ `ಸುಜಾತ ಸಂಚಿಕೆ’. ಇದು ಸಂಪಾದಕೀಯ ಬಳಗದ ಲೇಖನಗಳಿಂದಲೇ ಅಲಂಕೃತವಾಗುವ ಪತ್ರಿಕೆ. ಗಮನಿಸಬೇಕಾದುದೆಂದರೆ, ಈ ಪತ್ರಿಕೆ ಒಂದು ವಿಷಯದಲ್ಲಿ ಪರಿಪೂರ್ಣ ಮಾಹಿತಿಯನ್ನು ಒಂದೇ ಸಂಚಿಕೆಯಲ್ಲಿ ನೀಡುತ್ತದೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ಎಲ್ಲ ಮಾದರಿಯ ಸ್ಪ್ರಿಂಕ್ಲರ್ ಬಗ್ಗೆ ಮಾಹಿತಿ ಹೊತ್ತು ತಂದಿದ್ದನ್ನು ಉದಾಹರಿಸಬಹುದು. ಸಾಮಾನ್ಯ ತಾಂತ್ರಿಕ ಮಾಹಿತಿಗಳಷ್ಟೂ ಇದರಲ್ಲಿ ಲಭ್ಯ. ಹಾಗೆಂದು ಸಾವಯವ – ರಾಸಾಯನಿಕಗಳ ವಿಚಾರದಲ್ಲಿ ಪತ್ರಿಕೆಗೆ ಮಡಿವಂತಿಕೆ ಇಲ್ಲ. ಇಲ್ಲಿ ಇನ್ನೊಂದು ಮಾತು ಪ್ರಸ್ತಾಪಾರ್ಹ. ಎಷ್ಟೋ ಬಾರಿ ಕೃಷಿ ಪತ್ರಿಕೆಗಳು ಲೇಖನಗಳಿಗಾಗಿಯಷ್ಟೇ ಅಲ್ಲ, ಕೃಷಿ ಉಪಕರಣಗಳ, ಬೀಜ – ಔಷಧಗಳ ಜಾಹೀರಾತುಗಳಿಗಾಗಿಯೂ ರೈತರಿಗೆ ಬೇಕಾಗುತ್ತವೆ! ಸುಜಾತ ಸಂಚಿಕೆಯ ವಿಳಾಸ – 107/108, ಸುಪ್ರಭಾತ, ಬಿಜೈ ಕಾಪಿಕಾಡ್, ಮಂಗಳೂರು – 575004.
ಮುಖಪುಟದ ಹೊರತಾಗಿ ಉಳಿದೆಲ್ಲ ಪುಟಗಳಲ್ಲಿ ಸುದ್ದಿ, ಲೇಖನಗಳಿಂದ ಶೃಂಗರಿಸಿಕೊಂಡ ದ್ವೈಮಾಸಿಕ ಸಹಜ ಸಾಗುವಳಿ.
28ರಿಂದ 32ರವರೆಗೆ ಪುಟಗಳು. ಆರಂಭಿಕ ದಿನಗಳ `ಅಡಿಕೆ ಪತ್ರಿಕೆ’ಯ ಆಕಾರ. ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಖಡಕ್ ನೀತಿ. ಹಾಗಾಗಿ ರಾಸಾಯನಿಕ ಗೊಬ್ಬರ, ಕೆಮಿಕಲ್ ಔಷಧಿ, ಬಿಟಿ ಜ್ಞಾನಗಳನ್ನು ಆಮೂಲಾಗ್ರವಾಗಿ ಸಹಜ ಸಾಗುವಳಿ ವಿರೋಧಿಸುತ್ತದೆ. ಇವುಗಳ ಮೂಲವಾದ ಬಹುರಾಷ್ಟ್ರೀಯ ಕಂಪನಿಗಳನ್ನು, ಉತ್ಪಾದಕರನ್ನು ಟೀಕಿಸುತ್ತಲೇ ಇರುವುದರಿಂದ ಜಾಹೀರಾತುಗಳ ಕಾಟ ಈ ಪತ್ರಿಕೆ ಓದುಗನಿಗಿಲ್ಲ.
ಸಹಜ ಸಾಗುವಳಿಯನ್ನು ಸರ್ಕಾರೇತರ ಸಂಸ್ಥೆ ಇಕ್ರಾ ಹೊರತರುತ್ತಿದೆ. ಇತ್ತೀಚೆಗೆ ನಡೆದ `ರೈತಶಕ್ತಿ’ ಎಂಬ ದೊಡ್ಡ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಇಕ್ರಾ ಪಾಲ್ಗೊಂಡಿತ್ತು. ಹಲವು ಪುಸ್ತಕ ಪ್ರಕಟನೆಗಳನ್ನು ಮಾಡಿದೆ ಕೂಡ. ಖುದ್ದು ಸಸಾ ತನ್ನನ್ನು ಸುಸ್ಥಿರ ಸಾವಯವ-ಸಹಜ ಕೃಷಿಗೆ ಮೀಸಲಾದ ಪತ್ರಿಕೆ ಎಂದು ಹೇಳಿಕೊಂಡಿದೆ. ಸಸಾ ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಣಗೊಳ್ಳುತ್ತಿದೆ. ಹಲವು ಲೇಖನಗಳನ್ನು ರೈತರ ಆಡುಭಾಷೆಯಲ್ಲಿಯೇ ಇಡುವುದು ವೈಶಿಷ್ಟ್ಯತೆ. ವಿಷಯ ವೈವಿಧ್ಯಕ್ಕೂ ಕೊರತೆಯಿಲ್ಲ. ಮುಖ್ಯವಾಗಿ, ರೈತರಲ್ಲದ ಓದುಗರು ಕೂಡ ಸಹಜ ಸಾಗುವಳಿಯನ್ನು ಖುಷಿಯಿಂದ ಓದಬಹುದು. ಜಿಎಂ ತಂತ್ರಜ್ಞಾನ, ಪರ್ಮಾಕಲ್ಚರ್‍ಗಳಂತ ಹತ್ತಾರು ವಿಚಾರಗಳ ಬಗ್ಗೆ ಮತ್ತು ಅದೇ ವೇಳೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಬಹುದು. ತಜ್ಞರ ಬರಹಗಳ ಭಾಷಾಂತರವೂ ಇಲ್ಲಿ ಲಭ್ಯ. ಬಿಡಿ ಪ್ರತಿಗೆ 12 ರೂ. ವಾರ್ಷಿಕ ಚಂದಾ 60 ರೂ. ಸಸಾ ವಿಳಾಸ -ಸಂಪಾದಕರು, ಸಹಜ ಸಾಗುವಳಿ, ನಂ 22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು – 560075 ದೂರವಾಣಿ – 080-25283370 / 25213104.
ಗಮನ ಸೆಳೆಯುವ ಇನ್ನೊಂದು ಕೃಷಿ ಪತ್ರಿಕೆ `ಹಿತ್ತಲ ಗಿಡ’. ಇದು ಚಾತುರ್ಮಾಸಿಕ. ಅಂದರೆ ನಾಲ್ಕು ತಿಂಗಳಿಗೆ ಒಮ್ಮೆ ಪ್ರಕಟಗೊಳ್ಳುವ ಪತ್ರಿಕೆ. ವರ್ಷಕ್ಕೆ ನಾಲ್ಕೇ ಸಂಚಿಕೆ. ಹಾಗಿದ್ದೂ ಮನೆಯಲ್ಲಿ ಜೋಪಾನವಾಗಿ ತೆಗೆದಿಡಲು ಬೇಕಾಗುವಷ್ಟು ಕೃಷಿ ವಿಚಾರಗಳು ಇದರಲ್ಲಿವೆ. ಕನ್ನಡ, ಇಂಗ್ಲೀಷ್ ಪತ್ರಿಕೆಗಳ ಅತ್ಯುತ್ತಮ ಮಾಹಿತಿಗಳನ್ನು ಹಿತ್ತಲ ಗಿಡದಲ್ಲಿ ಸಂಗ್ರಹಿಸಿ ಕೊಡಲಾಗುತ್ತಿದೆ. ಎಲ್ಲ ಪ್ರದೇಶದ ರೈತರಿಗೆ ಈ ಪತ್ರಿಕೆ ಉಪಯುಕ್ತ ಕೈಪಿಡಿ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಸಂಪರ್ಕ ವಿಳಾಸ – ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಹಿತ್ತಲ ಗಿಡ, ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು – 560065.
ಬೇಕೆಂತಲೇ ಈ ಪತ್ರಿಕೆಗಳ ಚಂದಾದರವನ್ನು ಪ್ರಸ್ತಾಪಿಸುತ್ತಿಲ್ಲ. ರೈತರಿಗೆ ಅವುಗಳ ಬೆಲೆ ಒಂದು ವಿಷಯವಾಗಬಾರದು. ನೂರಾರು ರೂ. ಕೊಟ್ಟು ಎಂಎಲ್ ಅಳತೆಯ ಕೀಟನಾಶಕವನ್ನು ತರುವವರು ನಾವು! ಈ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನುಭವಗಳು ನಮ್ಮ ಕೈಯಲ್ಲೇ ಔಷಧಿ ತಯಾರಿಕೆ ತಂತ್ರ ಇರುವುದನ್ನು ತೋರಿಸಬಲ್ಲದು. ಆಗ ಕೀಟನಾಶಕ ಯಾಕೆ ಬೇಕು? ಮಾಡಬೇಕಾದುದಿಷ್ಟೇ, ಸದರಿ ಪತ್ರಿಕೆಗಳಿಗೆ ಒಂದು ಪತ್ರ ಬರೆದು ಮಾದರಿ ಪ್ರತಿ ಕಳಿಸಿಕೊಡಲು ವಿನಂತಿಸಿ. ಅದಕ್ಕೂ ಮುನ್ನ, ಕನಿಷ್ಠ ಒಂದಾದರೂ ಕೃಷಿ ಪತ್ರಿಕೆಗೆ ಚಂದಾದಾರರಾಗಲು ಗಟ್ಟಿ ಮನಸ್ಸು ಮಾಡಿರಿ!
ನಿಜ, ಇನ್ನೂ ಹಲವು ಕೃಷಿ ಪತ್ರಿಕೆಗಳಿವೆ. ಎಂ.ಟಿ.ಶಾಂತಿಮೂಲೆಯವರು ಜೇನುಕೃಷಿಗೆ ಸಂಬಂಧಿಸಿದಂತೆ ನಿಯತಕಾಲಿಕವೊಂದನ್ನು ಹೊರತರುತ್ತಿರುವ ಸುದ್ದಿಯಿದೆ. ಉತ್ತರ ಕರ್ನಾಟಕದವರಿಗೆ ಆಪ್ತವಾಗುವ `ಅನ್ನದಾತ’ ಮಾಸಿಕವನ್ನು ಈ ಟಿವಿ ಬಳಗ ಹೊರತರುತ್ತಿದೆ. ಬೆಂಗಳೂರಿನ ಅನುರಾಗ್ ಪಬ್ಲಿಕೇಷನ್ಸ್ ಕೂಡ `ಕೃಷಿ ರಂಗ’ ಎಂಬ ಮಾಸಿಕವನ್ನು ಪ್ರಕಾಶಿಸುತ್ತಿದೆ. ಇಂತಹ ಹತ್ತು ಹಲವು ಪತ್ರಿಕೆಗಳನ್ನು ಓದುವುದರಿಂದ ನಷ್ಟದ ಮಾತೇ ಇಲ್ಲ. ಓದುವ ಆಂದೋಲನ ಆರಂಭವಾಗಲಿ…..
– ಮಾ.ವೆಂ.ಸ.ಪ್ರಸಾದ್

ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿಯಿರಿ

0

ಜಗತ್ತಿನ ಶ್ರೇಷ್ಠ ಧರ್ಮಗಳಲ್ಲೊಂದಾದ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ಧೈರ್ಯದಿಂದ ಹಿಂದೂಗಳು ಎಂದು ಹೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಕೈವಾರದ ಯೋಗಿನಾರಾಯಣ ಮಠದ ಧರ್ಮಾಧಿಕಾರಿ ಡಾ.ಎಂ.ಜಯರಾಂ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದಾಸ ಸಾಹಿತ್ಯ ಪರಿಷತ್ನ ನಗರ, ಮಹಿಳಾ, ಪ್ರಚಾರ ಘಟಕ ಹಾಗು ಹೋಬಳಿ ಘಟಕಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದಷ್ಟು ಶ್ರೇಷ್ಠ ಧರ್ಮ ಜಗತ್ತಿನಲ್ಲಿ ಮತ್ತೊಂದಿಲ್ಲ ಅಂತಹ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವುಗಳು ನಮ್ಮ ಧರ್ಮದ ಹೆಸರನ್ನು ಹೇಳಲು ಹಿಂಜರಿಯುವ ಬದಲಿಗೆ ಹೆಮ್ಮೆಯಿಂದ ನಾವು ಹಿಂದೂಗಳು ಎಂದು ಹೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು.
ಹಿಂದೂ ಧರ್ಮವನ್ನು ಪಾಲಿಸುತ್ತಿರುವ ನಾವುಗಳು ಧನ್ಯರು. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ ಹಾಗಂತ ನಮ್ಮ ಧರ್ಮ ನಮಗೆ ಶ್ರೇಷ್ಠ ಎಂದು ಹೇಳಿಕೊಳ್ಳಲು ಹಿಂಜರಿಕೆಯಾಕೆ ಎಂದರು.
ಇದೀಗ ಸತ್ಯಕಾಲದಲ್ಲಿ ಜೀವಿಸುತ್ತಿರುವ ನಾವುಗಳು ಏನೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ ಹಾಗಾಗಿ ಸತ್ಯ ಕಾಲಕ್ಕೆ ತಕ್ಕಂತೆ ಪ್ರತಿಯೊಬ್ಬರೂ ತಮ್ಮ ನಡೆ ನುಡಿಗಳನ್ನು ಸರಿದಾರಿಯಲ್ಲಿ ಸಾಗುವಂತೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಕೈವಾರದ ಯೋಗಿನಾರಾಯಣ ಮಠದ ಉಪಾಧ್ಯಕ್ಷ ವಿಭಾಕರರೆಡ್ಡಿ, ಬಾಲಕೃಷ್ಣ ಭಾಗವತಾರ್, ಪುರದಗಡ್ಡೆ ಕೃಷ್ಣಪ್ಪ, ಪ್ರವಚನಕಾರ ತಳಗವಾರ ಆನಂದ್, ಡಾ.ಸತ್ಯನಾರಾಯಣರಾವ್, ಬಿ.ಪಿ.ರಾಘವೇಂದ್ರ, ಶ್ರೀನಿವಾಸರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂತನ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಿ

0

ರೇಷ್ಮೆ ಬೆಳೆಗಾರರು ನೂತನ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡುವತ್ತ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಗ್ರೇನೇಜ್ನಲ್ಲಿ ಶನಿವಾರ ಆತ್ಮ ಯೋಜನೆಯಡಿಯಲ್ಲಿ ‘ರೇಷ್ಮೆ ಬೆಳೆಗಾರರಿಗೆ ಮಳೆಯಾಶ್ರಯದಲ್ಲಿ ಮರಗಡ್ಡಿ ವಿಧಾನದಲ್ಲಿ ಹಿಪ್ಪುನೇರಳೆ ಬೆಳೆಸುವ ಬಗ್ಗೆ ಮತ್ತು ದ್ವಿತಳಿ ಹುಳು ಸಾಕಾಣಿಕೆ’ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ರೇಷ್ಮೆಬೆಳೆಗಳನ್ನು ಬೆಳೆಯುತ್ತಿದ್ದಾರೆ. ೧೫೦೦ ಅಡಿಗಳ ಆಳಕ್ಕೆ ಕೊರೆದರೂ ಒಂದಿಂಚು ನೀರು ಸಿಗುತ್ತಿಲ್ಲ, ಇಂತಹ ವಿಷಮ ಪರಿಸ್ಥಿತಿಯಲ್ಲಿ ನೀರಿನ ಕೊರತೆ ಸುಧಾರಣೆ ಮಾಡಿಕೊಂಡು ಮರಗಳ ರೂಪದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವತ್ತ ಗಮನಹರಿಸಬೇಕು. ಹೊಸ ಹೊಸ ತಂತ್ರಜ್ಞಾನವನ್ನು ಬೆಳೆಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ರೇಷ್ಮೆ ಇಲಾಖೆಯ ವಿಜ್ಞಾನಿಗಳು, ರೇಷ್ಮೆಹುಳುಗಳಿಗೆ ಬರುವಂತಹ ರೋಗಗಳು, ಅವುಗಳನ್ನು ತಡೆಗಟ್ಟುವಂತಹ ವಿಧಾನಗಳು ಮತ್ತು ದ್ವಿತಳಿ ಗೂಡು ಬೆಳೆಯುವುದು ಹಾಗೂ ಅದರ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಜಂಗಮಕೋಟೆ ಜಿಲ್ಲಾ ಪಂಚಾಯತಿ ಸದಸ್ಯೆ ಪಿ.ನಿರ್ಮಲ, ತಾಲ್ಲೂಕು ಪಂಚಾಯತಿ ಸದಸ್ಯರಾದ ಎಚ್.ನರಸಿಂಹಯ್ಯ, ಚಂದ್ರಕಲಾ ಬೈರೇಗೌಡ, ರಾಜಶೇಖರ್, ಪಂಕಜಾ ನಿರಂಜನ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ, ಎಂ.ನಾರಾಯಣಸ್ವಾಮಿ ವಿಜ್ಞಾನಿಗಳಾದ ಫಣಿರಾಜ್, ಡಾ.ಮಹೇಶ್, ಡಾ.ಸುಧಾಕರ್, ಗುರುರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಾದಯಾತ್ರೆ

0

ಶಿಡ್ಲಘಟ್ಟದಲ್ಲಿ ಭಾನುವಾರ ಅಶ್ವತ್ ಋಷಿ ಗುರೂಜೀಗಳ ನೇತೃತ್ವದಲ್ಲಿ ವಿಜಯಪುರದಿಂದ ತಾಲ್ಲೂಕಿನ ದ್ಯಾವಪ್ಪ ಗುಡಿ ದೇವಸ್ಥಾನದವರಗೆ ಪಾದಯಾತ್ರೆ ಹಮ್ಮಿಕೊಂಡಿದ್ದ ತಂಡ ನಗರದ ಮುಖ್ಯ ರಸ್ತೆಯಲ್ಲಿ ಭಕ್ತರೊಂದಿಗೆ ಭಜನೆ ಮಾಡುತ್ತಾ ತೆರಳಿದರು. ಈ ಪಾದಯಾತ್ರೆಯಲ್ಲಿ ವಿಜಯಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಪಾಲ್ಗೊಂಡಿದ್ದರು.

ರಕ್ತದಾನ ಶಿಬಿರ

0

ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾವು ನಮ್ಮ ಅಭಿಮಾನಿಸುವ ನಟರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್ ಅಸೋಸಿಯೇಷನ್ ತಾಲ್ಲೂಕು ಅಧ್ಯಕ್ಷ ದಿನೇಶ್ ಬಾಬು ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮೆಗಾ ಪವರ್ ಸ್ಟಾರ್ ರಾಮ್ಚರಣ್ ತೇಜಾ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನ ಶಿಬಿರದ ಜೊತೆಯಲ್ಲಿ ಆಸ್ಪತ್ರೆಯಲ್ಲಿರುವ ಹೊರರೋಗಿಗಳಿಗೆ ಬ್ರೆಡ್, ಹಣ್ಣು, ಹಣ್ಣಿನ ರಸವನ್ನು ವಿತರಿಸಲಾಗುತ್ತಿದೆ. ಅಭಿಮಾನಿಗಳು ಮತ್ತು ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ನಮ್ಮ ಉದ್ದೇಶಕ್ಕೆ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮಾತನಾಡಿ, ಜನರಿಗೆ ಉಪಯುಕ್ತ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಈ ರೀತಿಯ ರಕ್ತದಾನ ಶಿಬಿರಗಳು ಅತ್ಯಗತ್ಯ ಮತ್ತು ಉಪಯುಕ್ತ ಎಂದು ಹೇಳಿದರು.
ಉಪನ್ಯಾಸಕ ವೆಂಕಟೇಶ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಬಾಲಕೃಷ್ಣ, ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಾದ ದೇವರಾಜು, ರವಿಚಂದ್ರ, ಮಧುಕುಮಾರ್, ಬಿ.ಮಂಜುನಾಥ, ಶ್ರೀನಿವಾಸ್, ರಾಧಾಕೃಷ್ಣ, ರಾಮ್, ಮುನಿರಾಜು, ರಾಮಮೂರ್ತಿ, ಇಸ್ಮಾಯಿಲ್, ಅಸದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.