ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳನ್ನು ಮಾಡಿ ಗ್ರಾಮೀಣ ಭಾಗಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಪ್ರೀತಿಯನ್ನು ಮನೆಮನಗಳಿಗೆಲ್ಲ ತಲುಪಿಸುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್. ಶ್ರೀನಿವಾಸ್ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಉದ್ದಗಲಕ್ಕೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ನಾಡು ನುಡಿಯ ಸಂರಕ್ಷಣೆ ಮತ್ತು ಏಳ್ಗೆಯ ಧ್ಯೇಯವನ್ನಿಟ್ಟುಕೊಂಡು ಮುನ್ನಗ್ಗಲು ಎಲ್ಲರೂ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಗುರಿ ಹೊಂದಿದ್ದೇನೆ. ಕಸಾಪ ಚುಬನಾವಣೆಯ ಮುಂಚೆ ನಾನು ಮತದಾರರ ಮುಂದೆ ಹೇಳಿದ್ದ ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ನಡೆಸುವ ಮೂಲಕ ಮಾತು ಉಳಿಸಿಕೊಳ್ಳುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ಕನ್ನಡ ಭಾಷೆ ಹಾಗು ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡು ಕಸಾಪ ಸದಸ್ಯತ್ವ ಪಡೆಯಬೇಕೆ ಹೊರತು ಪರಿಷತ್ನಲ್ಲಿ ಜಾತಿಯ ವಿಷಬೀಜ ಬಿತ್ತಿ ಇದರಲ್ಲಿ ಉನ್ನತ ಹುದ್ದೆ ಪಡೆಯಲಿಕ್ಕೋ ಅಥವ ಚುನಾವಣೆಯಲ್ಲಿ ತಮ್ಮದೇ ಕೋಮಿನ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶದಿಂದಲೋ ಸದಸ್ಯತ್ವ ಮಾಡಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಚಿಂತಾಮಣಿ ತಾಲ್ಲೂಕು ಕಸಾಪ ಅಧ್ಯಕ್ಷ ದೇವತಾ ದೇವರಾಜ್, ಗುಡಿಬಂಡೆ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಜೆ.ವಿ.ವೆಂಕಟಸ್ವಾಮಿ, ಜಗದೀಶ್ಬಾಬು ಮತ್ತಿತರರು ಹಾಜರಿದ್ದರು.
ಜಿಲ್ಲಾಧ್ಯಕ್ಷರ ಅಸಮಾಧಾನ: ಅಭಿನಂದನೆ ಸಭೆಯಲ್ಲಿ ತಾಲ್ಲೂಕು ಕಸಾಪ ಪದಾಧಿಕಾರಿಗಳಿಂದ ಗೌರವ ಸಮರ್ಪಣೆ ಸಲ್ಲಿಸಿದ ನಂತರ ವೇದಿಕೆಗೆ ಆಗಮಿಸಿದ ಕೆಲವರು ತಾವು ಈಚೆಗೆ ನಡೆದ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಪರಾಭವಗೊಂಡ ಸಿ.ಬಿ.ಹನುಮಂತಪ್ಪ ಪರ ಕೆಲಸ ಮಾಡಿದ್ದು ಅವರ ಅಭಿಮಾನಿ ಬಳಗದವರಾಗಿದ್ದೇವೆ. ಹಾಗಾಗಿ ಮುಂದಿನ ಅವಧಿಗೆ ತಾಲ್ಲೂಕು ಅಧ್ಯಕ್ಷರಾಗಿ ಸಿ.ಬಿ.ಹನುಮಂತಪ್ಪ ಬಣದವರನ್ನೇ ಆಯ್ಕೆ ಮಾಡಬೇಕೆಂಬ ಮನವಿಯನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಅವರಿಗೆ ಉತ್ತರಿಸುತ್ತಾ, ಚುನಾವಣೆಯಲ್ಲಿ ತಮಗಿಷ್ಟವಾದವರ ಪರ ದುಡಿಯಲು ಎಲ್ಲರೂ ಸ್ವತಂತ್ರರು. ಆದರೆ ಇದೀಗ ಚುನಾವಣೆ ಮುಗಿದಿದ್ದು ಎಲ್ಲರೂ ಕನ್ನಡ ಬಣ ಎಂಬ ಮನೋಭಾವದೊಂದಿಗೆ ಪರಿಷತ್ ಏಳಿಗೆಗಾಗಿ ಶ್ರಮಿಸಬೇಕು. ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಒಂದು ಕೋಮಿಗೆ, ಒಂದು ಗುಂಪಿಗೆ ಮೀಸಲಾಗಿಲ್ಲ ಬದಲಿಗೆ ಅದು ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿದೆ. ಹಾಗಾಗಿ ಪರಿಷತ್ನಲ್ಲಿ ಯಾವುದೇ ಗುಂಪು, ಬಣ ಗಳನ್ನು ವಿಂಗಡಿಸದೇ ಕನ್ನಡದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಅಭಿನಂದನಾ ಸಭೆಯಲ್ಲಿ ಕಿಡಿಗೇಡಿ ಗುಂಪಿನಿಂದ ಅಡಚಣೆ: ಕಸಾಪ ಜಿಲ್ಲಾಧ್ಯಕ್ಷರು ಬೈಲಾ ಪ್ರಕಾರ ತಾಲ್ಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶುರುಮಾಡಿ, ತಾಲ್ಲೂಕು ಅಧ್ಯಕ್ಷರಾಗಬಯಸುವ ಆಕಾಂಕ್ಷಿಗಳು ವೇದಿಕೆಗೆ ಬಂದು ಈವರೆಗೂ ಪರಿಷತ್ನಲ್ಲಿ ತಾವು ದುಡಿದಿರುವ ಬಗ್ಗೆ ಹಾಗೂ ಮುಂದಿನ ತಮ್ಮ ಗುರಿಯ ಬಗ್ಗೆ ಸ್ಪಷ್ಟವಾಗಿ ತಿಳಿಸುವಂತೆ ಸೂಚಿಸಿದರು. ಅದರಂತೆ ತಾಲ್ಲೂಕು ಅಧ್ಯಕ್ಷ ಆಕಾಂಕ್ಷಿಗಳಾಗಿ ಬಿ.ಆರ್.ಅನಂತಕೃಷ್ಣ, ಕೆ.ಮಂಜುನಾಥ್, ಚಿಕ್ಕವೆಂಕಟರಾಯಪ್ಪ, ಸುಂದರಾಚಾರಿ ಮತ್ತಿತರರು ತಮ್ಮ ಸೇವೆ ಮತ್ತು ಮುಂದಿನ ಗುರಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಈ ತಾಲ್ಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಒಂದು ಗುಂಪು ವಿರೋಧ ವ್ಯಕ್ತಪಡಿಸಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಿಗೆ ಸವಾಲು ಹಾಕಿ, ಬೆರಳು ತೋರಿಸಿ ಏಕವಚನದಲ್ಲಿ ಸಂಭೋದಿಸಿ ಅಡಚಣೆಗೆ ಮುಂದಾದರು. ಸಭೆಯಲ್ಲಿ ವಿನಾಕಾರಣ ಕಿರಿ ಕಿರಿ ಮಾಡಿದ ಕಿಡಿಗೇಡಿ ಗುಂಪಿನ ವಿರುದ್ಧ ಕಸಾಪ ಪದಾಧಿಕಾರಿಗಳು ಸೇರಿದಂತೆ ಮೇಲೂರಿನ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ತಿರುಗಿಬಿದ್ದು ಮಾತಿನ ಚಕಮಕಿ ನಡೆಸಿದಾಗ ಕಿಡಿಗೇಡಿ ಗುಂಪಿನವರು ಒಬ್ಬೊಬ್ಬರೇ ಸಭೆಯಿಂದ ಕಾಲ್ಕಿತ್ತರು.
ಅಂತಿಮವಾಗಿ ತಾಲ್ಲೂಕು ಅಧ್ಯಕ್ಷ ಆಕಾಂಕ್ಷಿಗಳ ಪಟ್ಟಿ ಸಂಗ್ರಹಿಸಿದ ಜಿಲ್ಲಾಧ್ಯಕ್ಷರು ಕಸಾಪ ಹಿರಿಯ ಪದಾಧಿಕಾರಿಗಳ ಸಮಿತಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ಪತ್ರಿಕೆಗಳಲ್ಲಿ ತಾಲ್ಲೂಕು ಅಧ್ಯಕ್ಷರ ಹೆಸರು ಪ್ರಕಟಿಸಲಾಗುವುದು ಎಂದು ಹೇಳಿ ಸಭೆ ಮುಕ್ತಾಯಗೊಳಿಸಿದರು.
ಕಸಾಪ ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
ಹಸಿರು ಉಸಿರಿಗೆ ಕಾರಣವಾದರೆ, ಬೆಂಕಿ ಅಪಾಯಕ್ಕೆ ಕಾರಣ
ಬೇಸಿಗೆ ಕಾಲ ಬಂತೆಂದರೆ ಗ್ರಾಮದ ಆಸ್ತಿಗಳಾದ ಗೋಮಾಳ, ಗುಂಡುತೋಪು, ಬೆಟ್ಟ, ಗುಡ್ಡ ಹಾಗೂ ಅರಣ್ಯಗಳಿಗೆ ಬೆಂಕಿ ಬೀಳುವ ಸಾದ್ಯತೆಗಳು ಹೆಚ್ಚಾಗಿದ್ದು, ಗ್ರಾಮದ ಜನರು ಬೆಂಕಿಯ ಅವಘಡಗಳನ್ನು ತಡೆಯಲು ಅಗತ್ಯ ಮುಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎಫ್.ಇ.ಎಸ್. ಸಂಸ್ಥೆಯ ಯೋಜನಾಧಿಕಾರಿ ಶಿಲ್ಪಾ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವೇಮಗಲ್ ಗ್ರಾಮದಲ್ಲಿ, ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಬೆಂಕಿ ತಡೆಗೆ ಜನ ಜಾಗೃತಿ ಆಂದೋಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಗ್ರಾಮವು ಹಚ್ಚಹಸಿರಾದ ೧೦೦ ಎಕರೆಗಿಂತ ಹೆಚ್ಚು ಗೋಮಾಳವನ್ನು ಹೊಂದಿದ್ದು ೬೪ ಕುಟುಂಬಗಳು ಬೇರೆ ಬೇರೆ ರೀತಿಯಲ್ಲಿ ಅವಲಂಬನೆಯನ್ನು ಹೊಂದಿವೆ, ಇವರ ಮುಖ್ಯ ಉದ್ಯೋಗ ಜಾನುವಾರು ಸಾಕಾನಿಕೆ ಆಗಿರುವದರಿಂದ ಗೋಮಾಳವನ್ನು ಬೇಸಿಗೆ ಕಾಲದಲ್ಲಿ ಬೆಂಕಿಬಿಳದಂತೆ ಕಾಪಾಡುವದು ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಪ್ರತಿನಿಧಿಯಾದ ಸೌಭಾಗ್ಯ ಅವರು ಬೆಂಕಿಯ ಅನಾಹುತ ಮತ್ತು ಮುಂಜಾಗೃತಿ ಕ್ರಮಗಳ ವಿಷಯದ ಕುರಿತಾಗಿ ಗ್ರಾಮಸ್ಥರೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡರು.
ಗ್ರಾಮದ ಜನರು ಇಂತಹ ಬೆಂಕಿಯ ಅವಘಡಗಳನ್ನು ತಡೆಯಲು ಅಗತ್ಯ ಮುಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುಲು ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಚಂದ್ರ ಮತ್ತು ಹರೀಶ್ ಜನರಿಗೆ ಜಾಗೃತಿ ಹಾಡುಗಳನ್ನು ಹಾಡುವದರ ಮೂಲಕ ಬೆಂಕಿಯ ಅನಾಹುತದ ಬಗ್ಗೆ ಮನವರಿಕೆ ಮಾಡಿದರು. ಗ್ರಾಮದ ಎಲ್ಲ ಕುಟುಂಬದವರೂ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು ಹಾಗೂ ಈ ಸಂದರ್ಭದಲ್ಲಿ ಗೋಮಾಳ, ಗುಂಡುತೋಪು ಮತ್ತು ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಕುರಿತು ಜನರೊಂದಿಗೆ ಚರ್ಚೆ ನಡೆಸಲಾಯಿತು.
ಬಿಜೆಪಿ ಪಕ್ಷವನ್ನು ಸಂಘಟಿಸುತ್ತೇವೆ
ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಉತ್ತಮವಾಗಿ ಸಂಘಟಿಸಿ, ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗೆ ಸಿದ್ಧಮಾಡಿಕೊಳ್ಳುವುದಾಗಿ ಬಿಜೆಪಿ ಮುಖಂಡ ಸುರೇಶ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯ ಅಂಗವಾಗಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸುಮಾರು ೨೦ ಸಾವಿರಕ್ಕೂ ಅಧಿಕ ಬಿಜೆಪಿ ಮತದಾರರು ಇದ್ದಾರೆ. ಈ ಹಿಂದೆ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೂ ಕೂಡಾ ಪಕ್ಷ ಯಶಸ್ಸು ಕಂಡಿಲ್ಲ. ಬೆಂಗಳೂರಿನ ಹೆಬ್ಬಾಳದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದುಡಿದಿರುವ ಅನುಭವವಿದೆ. ಕೇಂದ್ರ ನಾಯಕರ ಸೂಚನೆ ಮೇರೆಗೆ ಶಿಡ್ಲಘಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಬಂದಿದ್ದೇನೆ. ಯಾವುದೇ ಕಾರಣಕ್ಕೂ ವಾಪಸ್ಸು ಹೋಗುವುದಿಲ್ಲ. ಇಲ್ಲೆ ಆಸ್ತಿ ಇದೆ. ಉತ್ತಮ ಜನ ಸಂಪರ್ಕವಿದೆ. ಮಾಜಿ ಶಾಸಕರು, ಹಾಲಿ ಶಾಸಕರು ಎಲ್ಲರೊಂದಿಗೂ ವಿಶ್ವಾಸವಿದೆ. ತಳಮಟ್ಟದಿಂದ ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರಲು ಬೇಕಾಗಿರುವ ಎಲ್ಲಾ ಸಾಮರ್ಥ್ಯ ನನ್ನಲ್ಲಿದೆ. ನಿಷ್ಠೆಯಿಂದ ದುಡಿಯುತ್ತೇನೆ ಎಂದರು.
ಮತ್ತೊಬ್ಬ ಬಿಜೆಪಿ ಮುಖಂಡ ಗುರುವಯ್ಯಯಾದವ್ ಮಾತನಾಡಿ, ನಾನು ಮೂಲತಃ ಆಂದ್ರದಿಂದ ಬಂದಿದ್ದರೂ, ನನ್ನ ಚಟುವಟಿಕೆಗಳು ಕರ್ನಾಟಕದಲ್ಲಿಯೇ ಇವೆ, ಶಿಡ್ಲಘಟ್ಟದಲ್ಲಿ ಬಿಜೆಪಿ ಸಂಘಟನೆ ಮಾಡಲು ಬಂದಿದ್ದೇನೆ. ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ರಾಘವೇಂದ್ರ, ಬಿ.ಸಿ.ನಂದೀಶ್, ದಾಮೋದರ್, ಮಂಜುಳಮ್ಮ, ಹಾಜರಿದ್ದರು.
ಪಂಚಾಯತಿ ಸದಸ್ಯರ ಸ್ಪಷ್ಟನೆ
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಯಾರಿಗೂ ತಾರತಮ್ಯ ಮಾಡುತ್ತಿಲ್ಲವೆಂದು ಪಂಚಾಯತಿ ಸದಸ್ಯರು ಸ್ಪಷ್ಟನೆ ನೀಡಿದರು.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ಆನೆಮಡಗು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಜೆಡಿಎಸ್ ಬೆಂಬಲಿತ ಸದಸ್ಯರು ಸ್ಪಷ್ಟನೆ ನೀಡಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ಈಚೆಗೆ ಬೀಗ ಹಾಕಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಅಧ್ಯಕ್ಷರ ಕಾರ್ಯ ವೈಖರಿಯ ವಿರುದ್ಧ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ನಾವು ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯ ಮಾಡಿಲ್ಲ, ಮಾಜಿ ಅಧ್ಯಕ್ಷ ಗೋಪಾಲರೆಡ್ಡಿ, ಕಳೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಸೋತರು, ಇದರಿಂದ ಅವರು ಹತಾಶರಾಗಿ ಈ ರೀತಿ ಜನರನ್ನು ಎತ್ತಿಕಟ್ತಿದ್ದಾರೆ. ಅವರ ಅವಧಿಯಲ್ಲಿ ಸುಮಾರು ೧೪ ಲಕ್ಷ ಸಾಲವನ್ನು ಪಂಚಾಯತಿಯ ತಲೆ ಮೇಲೆ ಹಾಕಿದ್ದಾರೆ. ದೇವಸ್ಥಾನ ಅಭಿವೃದ್ಧಿಗೆಂದು ನೀಡಿದ್ದ ಒಂದು ಲಕ್ಷ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಪಂಚಾಯತಿಗೆ ಸೇರಿದ್ದ ತೋಪು ಹರಾಜಿನಲ್ಲಿ ಸುಮಾರು ೫೦ ಲಕ್ಷ ರೂಪಾಯಿಗಳಷ್ಟು ನಷ್ಟ ಮಾಡಿದ್ದಾರೆ. ಗ್ರಾಮ ಪಂಚಾಯತಿಯಲ್ಲಿರುವ ಎಲ್ಲಾ ಸದಸ್ಯರಗಳ ಸಮ್ಮುಖದಲ್ಲೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಆದರೂ ಅವರು ವಿನಾಕಾರಣ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಸತ್ಯವಿಲ್ಲ. ನಾವೇ ಬಹಿರಂಗವಾಗಿ ಚರ್ಚೆಗೆ ವ್ಯವಸ್ಥೆ ಮಾಡ್ತೀವಿ ಬಂದು ಭಾಗವಹಿಸಲಿ ಅವರ ಅಕ್ರಮಗಳನ್ನ ದಾಖಲೆಗಳ ಸಮೇತ ಬಹಿರಂಗ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಮುದ್ದುಲಕ್ಷ್ಮಮ್ಮ, ಸದಸ್ಯರಾದ ಆನೆಮಡಗು ಮುರಳಿ, ಗುಮ್ಮರೆಡ್ಡಿ, ಕೆ.ಬೈರಾರೆಡ್ಡಿ, ದೇವರಾಜ್, ಗಂಗಾಧರ, ನರಸಿಂಹಪ್ಪ, ಆಂಜನೇಯರೆಡ್ಡಿ, ಶ್ರೀನಿವಾಸ್, ಮಂಜುನಾಥ್, ಮುನಿನರಸಿಂಹಪ್ಪ, ವೆಂಕಟಸ್ವಾಮಿ, ಮರಿಹಳ್ಳಿ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತು ಉದ್ಘಾಟನೆ
ದಾಸ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಯೋಗಿ ನಾರೇಯಣ ಮಠದದ ಸಂಯುಕ್ತ ಆಶ್ರಯದಲ್ಲಿ ಶಿಡ್ಲಘಟ್ಟ ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ನಗರ ಘಟಕ, ಮಹಿಳಾ ಘಟಕ, ಪ್ರಚಾರ ಘಟಕ ಹಾಗೂ ಹೋಬಳಿ ಘಟಕಗಳ ಉದ್ಟಾಟನಾ ಕಾರ್ಯಕ್ರಮವನ್ನು ನಗರದ ಅಶೋಕ ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ -ಶನಿವಾರ ನಡೆಯಲಿದೆ ಎಂದು ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯರಮರೆಡ್ಡಿಹಳ್ಳಿ ವೆಂಕಟರವಣಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೈವಾರ ಶ್ರೀ ಯೋಗಿನಾರೇಯಣ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಬಾಲಕೃಷ್ಣ ಭಾಗವತರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಡ್ಲಘಟ್ಟ ತಾಲ್ಲೂಕು ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರು ವಹಿಸಲಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿ
ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ೩೮ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿ ಹಾಗು ಗ್ರಾಮದ ಎಸ್ಸಿ ಕಾಲೋನಿಯಲ್ಲಿ ೬ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ತಾಲ್ಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುವುದೆಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸ್ಥಳೀಯ ಮುಖಂಡರೂ ಸೇರಿದಂತೆ ಗ್ರಾಮಸ್ಥರು ನಿಗಾ ವಹಿಸಬೇಕು. ಕಾಮಗಾರಿಯ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದರು.
ಅಬ್ಲೂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಪಲಿಚೇರ್ಲು ತಾಲ್ಲೂಕು ಪಂಚಾಯತಿ ಸದಸ್ಯೆ ಮಂಜುಳಮ್ಮ, ಗ್ರಾಮ ಪಂಚಾಯತಿ ಸದಸ್ಯೆ ಅರುಣ, ಮುಖಂಡರಾದ ಮುನಿಯಪ್ಪ, ಗುಮ್ಮರೆಡ್ಡಿ, ಬೈರರೆಡ್ಡಿ ಮತ್ತಿತರರು ಹಾಜರಿದ್ದರು.
ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಭಕ್ತರ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ನಗರದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಹಾಗೂ ತಹಶೀಲ್ದಾರ್ ಮನೋರಮಾ ಚಾಲನೆ ನೀಡಿದರು.
‘ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು.
ಚಿಕ್ಕದಾಸರಹಳ್ಳಿ, ಮಳಮಾಚನಹಳ್ಳಿ, ದೊಡ್ಡದಾಸರಹಳ್ಳಿ, ಮುಗಿಲಡಪಿ, ಜಪ್ತಿಹೊಸಹಳ್ಳಿ, ನಾರಾಯಣದಾಸರಹಳ್ಳಿ, ಬೋದಗೂರು ಮೊದಲಾದ ಗ್ರಾಮಸ್ಥರು ಪಾನಕ ವಿತರಿಸಿದರು.
ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು.
ಪೂಜಮ್ಮ ದೇವಿ ಹೂವಿನ ಕರಗ
ನಗರದ ಹಳೆಯ ರೇಷ್ಮೆಗೂಡು ಮಾರುಕಟ್ಟೆ ಹಿಂಭಾಗದಲ್ಲಿ ನೆಲೆಸಿರುವ ಪೂಜಮ್ಮ ದೇವಿ ಹೂವಿನ ಕರಗ ಮಹೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೀಪಾಲಂಕಾರಗಳ ಪೂಜಮ್ಮ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು. ಕದಿರಿಹುಣ್ಣಿಯಂದು ಪ್ರತಿವರ್ಷವೂ ನಗರದ ಪೂಜಮ್ಮ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಕರಗವನ್ನು ನಡೆಸಲಾಗುತ್ತದೆ.
ಆಕರ್ಷಕ ತಮಟೆ ವಾದ್ಯ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು. ಪ್ರತಿ ಮನೆಯವರು ಕರಗಕ್ಕೆ ಪೂಜೆ ಸಲ್ಲಿಸಿ ಹೂವನ್ನು ಅರ್ಪಿಸಿದರು. ಕೋಟೆ ವೃತ್ತ ಹಾಗೂ ಓ.ಟಿ ವೃತ್ತದ ಬಳಿ ವಾದ್ಯಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಚಲನಚಿತ್ರ ನಟ ಲೂಸ್ ಮಾದ, ನಿರ್ದೇಶಕ ಚಂದ್ರು, ಸಂಸದ ಕೆ.ಎಚ್.ಮುನಿಯಪ್ಪ, ಕೆ.ಪಿ.ಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಕರವೇ ತಾಲ್ಲೂಕು ಅಧ್ಯಕ್ಷ ವೆಂಕಟರೋಣಪ್ಪ, ನಗರಸಭಾ ಸದಸ್ಯರಾದ ಲಕ್ಷ್ಮಣ, ನಂದಕಿಶನ್, ಚಿಕ್ಕಮುನಿಯಪ್ಪ, ಮುಖಂಡರಾದ ನಾಗನರಸಿಂಹ, ಮುನಿನರಸಿಂಹ, ರವಿ ಮತ್ತಿತರರು ಹಾಜರಿದ್ದರು.
ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು
ನಗರದ ಜೌಗುಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಮಗುವೊಂದನ್ನು ಬಿಟ್ಟು ಬೀಗ ಹಾಕಿಕೊಂಡು ಹೋದ ಘಟನೆ ಮಂಗಳವಾರ ನಡೆದ ಹಿನ್ನೆಲೆಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಲಕ್ಷ್ಮೀದೇವಮ್ಮ ಸ್ಥಳಕ್ಕೆ ಭೇಟಿ ನೀಡಿದ್ದರು.
ಮಗುವಿನ ಮೇಲೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದಾಗ, ‘ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಲಾಗುತ್ತದೆ. ಸೋಮವಾರದೊಳಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಆಯಾರನ್ನು ಬೇರೆಗೆ ವರ್ಗಾವಣೆ ಮಾಡಲಾಗುವುದು. ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ರೀತಿಯ ಅಚಾತುರ್ಯವಾಗದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡುತ್ತೇವೆ’ ಎಂದು ತಿಳಿಸಿದರು.
ನೀರನ್ನು ಮಿತವಾಗಿ ಬಳಸಿ
ನೀರು ನಮ್ಮ ಅಮೂಲ್ಯ ಸಂಪತ್ತು, ಅದನ್ನು ಮಿತವಾಗಿ ಬಳಸಿ, ನೀರು ನಾವು ಸೃಷ್ಟಿ ಮಾಡುವ ವಸ್ತುವಲ್ಲ, ಆದ್ದರಿಂದ ಅಂತಹ ಜೀವಜಲವನ್ನು ಹಿತಮಿತವಾಗಿ ಬಳಸುವುದು ಒಳಿತು ಎಂದು ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಎನ್.ಎ. ಶ್ರೀಕಂಠ ತಿಳಿಸಿದರು.
ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ‘ಅಂತಾರಾಷ್ಟ್ರೀಯ ನೀರಿನ ದಿನಾಚರಣೆ’ಯ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯೊಂದಿಗೆ ಆಯೋಜಿಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರಿನ ಅಭಾವದ ಅನುಭವವಿದ್ದೂ ಅದರ ಬಗ್ಗೆ ಎಚ್ಚರ ವಹಿಸದಿರುವುದು ತಪ್ಪಾಗುತ್ತದೆ. ನಮ್ಮ ದಿನನಿತ್ಯದ ಬಳಕೆಯಲ್ಲಿ ಅರಿವಿಲ್ಲದೇ ನೀರು ಪೋಲು ಮಾಡುತ್ತಿರುವುದು ಇನ್ನಾದರೂ ನಾವು ಗಮನಿಸಬೇಕಿದೆ. ಒಂದು ಕಡೆ ನೀರು ಸಿಗದೆ ಬರಗಾಲವೆಂದು ಒದ್ದಾಡುತ್ತಿದ್ದರೆ, ಮತ್ತೊಂದೆಡೆ ಬೇಕಾದಷ್ಟು ನೀರಿದೆಯೆಂದು ಬೇಕಾಬಿಟ್ಟಿ ಉಪಯೋಗಿಸುತ್ತಿದ್ದಾರೆ. ಈ ಅಂತರವನ್ನು ಆದಷ್ಟು ಬೇಗ ಹೋಗಲಾಡಿಸಬೇಕಾಗಿದೆ. ನಮ್ಮನ್ನು ನಾವು ತಿದ್ದಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ‘ಸಾಮಾಜಿಕವಾಗಿರಲಿ, ರಾಜಕೀಯವಾಗಿರಲಿ ಎಲ್ಲಾ ವ್ಯವಸ್ಥೆಗಳ ಆಧಾರಗಳು ಮನುಷ್ಯರ ಒಳ್ಳೆಯತನದ ಮೇಲೆ ನಿಂತಿರುತ್ತದೆ. ಯಾವುದೇ ರಾಷ್ಟ್ರವು ಅದರ ಪ್ರಜೆಗಳಿಂದಾಗಿ, ಅವರ ಚಿಂತನೆಗಳಿಂದಾಗಿ ಮಹತ್ತರವಾದುದು ಹಾಗು ಉತ್ತಮವಾದುದೆನಿಸುತ್ತದೆ’ ಎಂಬ ಅಬ್ದುಲ್ ಕಲಾಂರ ಚಿಂತನೆಯ ಮಾತು ನಮಗೆ ದಾರಿದೀಪವಾಗಲಿ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಮುಂದೆ ಜೀವನದಲ್ಲಿ ಪ್ರತಿ ಹೆಜ್ಜೆಗೂ ವಿವಿಧ ಪರೀಕ್ಷೆಗಳು ಎದುರಾಗುತ್ತವೆ. ಧೈರ್ಯವಾಗಿರಿ. ಗುರಿಯಿರಲಿ, ಗುರುವಿನ ಬಗ್ಗೆ ಗೌರವವಿರಲಿ ಎಂದು ಹೇಳಿದರು.
ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರಾದ ಬೈರಾರೆಡ್ಡಿ, ನಾಗೇಂದ್ರಬಾಬು, ಮಂಜುನಾಥ್, ಲೋಕೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಮ್ಆದ್ಮಿ ಪಕ್ಷದ ಕಚೇರಿ ಉದ್ಘಾಟನೆ
ದೇಶದ ರಾಜಧಾನಿಯಲ್ಲಿ ಆಡಳಿತ ನಡೆಸಸುತ್ತಿರುವ ಅರವಿಂದ್ ಕ್ರೇಜಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಜನರ ಅಶೋತ್ತರಗಳಿಗೆ ಸ್ವಂದಿಸುತ್ತಿದ್ದು, ನಮ್ಮ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮಿಸಲಾಗುವುದು ಎಂದು ಆಮ್ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು.
ನಗರದ ಓ.ಟಿ.ವೃತ್ತದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಭ್ರಷ್ಟಚಾರ ಮುಕ್ತ ಆಡಳಿತ ನೀಡಬೇಕಾದ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸಂಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದೆ. ಸರ್ಕಾರದ ವಿರುದ್ದ ಆಮ್ ಆದ್ಮಿ ಪಾರ್ಟಿಯಿಂದ ರಾಜ್ಯಾದ್ಯಾಂತ ಹೋರಾಟ ನಡೆಸುವುದಾಗಿ ತಿಳಿಸಿದರು.
ಭ್ರಷ್ಟಚಾರದಲ್ಲಿ ತೊಡಗಿರುವ ಕಾಂಗ್ರೆಸ್, ಬಿ.ಜೆ.ಪಿ, ಜೆ.ಡಿ.ಸ್ ಪಕ್ಷಗಳು ನಮಗೆ ಸಮಾನಾಂತರ ಶತ್ರುಗಳಾಗಿವೆ. ಮುಂದಿನ ದಿನಗಳಲ್ಲಿ ಭ್ರಷ್ಟಚಾರ ವಿರೋಧಿ, ಸಾಮಾನ್ಯ ಜನರ ಪಕ್ಷವಾದ ಆಮ್ ಆದ್ಮಿಯನ್ನು ಅಧಿಕಾರಕ್ಕೆ ತರುವದೇ ನಮ್ಮ ಗುರಿಯಾಗಿದೆ. ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಪ್ರಚಂಡ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಆಮ್ ಆದ್ಮಿ ಪಕ್ಷದ ಕರಪತ್ರಗಳನ್ನು ಹಂಚಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಆಮ್ ಆದ್ಮಿ ಪಕ್ಷ ಸೇರಿ ಎಂಬ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.
ಸಭೆಯಲ್ಲಿ ಈಧರೆ ಪ್ರಕಾಶ್ ಮತ್ತು ಸಂಗಡಿಗರು ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಸಂಚಾಲಕ ಅಭಿಲಾಷ್, ತಾಲ್ಲೂಕು ಸಂಚಾಲಕ ವಿಸ್ಡಂ ನಾಗರಾಜ್, ಹಸಿರುಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ಹಸಿರುಸೇನೆ ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಮತ್ತು ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಹಾಜರಿದ್ದರು.
ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸಿ
ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ ತಮ್ಮ ತಾಯಿಯ ಜ್ಞಾಪಕಾರ್ಥವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪ್ಯಾಡ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ಮನಸ್ಸಿನಿಂದ ಅಳಿಸಿಹಾಕಿ. ಅಂಜಿಕೆ ಬಿಟ್ಟು ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಎದುರಿಸುವ ಪ್ರವೃತ್ತಿ ಬೆಳೆಸಿಕೊಂಡಾಗ ಮಾತ್ರ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ವೃಥಾ ಕಾಲವನ್ನು ವ್ಯಯಿಸದೇ ಗಮನವಿಟ್ಟು ಓದಿ, ಮನನ ಮಾಡಿಕೊಳ್ಳಿ. ಶಾಲೆ ಹಾಗೂ ತಾಲ್ಲೂಕಿಗೆ ಕೀರ್ತಿಯನ್ನು ತನ್ನಿ ಎಂದು ಹುರಿದುಂಬಿಸಿದರು.
ಪರೀಕ್ಷೆಯ ಸಮಯದಲ್ಲಿ ಭಯದಿಂದ ನಿದ್ದೆಗೆಟ್ಟು ಊಟವನ್ನು ಬಿಟ್ಟು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬಗ್ಗೆ ಮಕ್ಕಳು ಎಚ್ಚರವಹಿಸಬೇಕು, ಪರೀಕ್ಷಾ ಸಮಯದಲ್ಲಿ ಆತಂಕ ಹಾಗೂ ಭಯದಿಂದ ಆನಾ ರೋಗ್ಯಕ್ಕೆ ತುತ್ತಾಗಿ ವರ್ಷವಿಡಿ ಶ್ರಮಪಟ್ಟು ಕಲಿತ ವಿದ್ಯೆಯನ್ನು ಹಾಳುಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಾಲಯದ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ
ತಾಲ್ಲೂಕಿನ ಭಕ್ತರಹಳ್ಳಿ ಪಂಚಾಯತಿ ವ್ಯಾಪಿಯ ತೊಟ್ಲಗಾನಹಳ್ಳಿ ಗೇಟ್ ಬಳಿ ಇರುವ ಆಂಜನೇಯಸ್ವಾಮಿ ಹಾಗೂ ಕೈವಾರ ತಾತಯ್ಯನವರ ದೇವಾಲಯದ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಭಾನುವಾರ ಮತ್ತು ಸೋಮವಾರ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತೊಟ್ಲಗಾನಹಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವರ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗಂಗಾಪೂಜೆ, ಕಳಸ ಸ್ಥಾಪನೆ, ಗಣಪತಿ ಪೂಜೆ, ಅಗ್ನಿ ಪ್ರತಿಷ್ಠಾಪನೆ, ವಾಸ್ತು ಹೋಮ, ಗಣ ಹೋಮ, ಮೃತ್ಯುಂಜಯ ಹೋಮ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಭಕ್ತರಿಗೆ ಅನ್ನಸಂರ್ಪಣೆಯನ್ನು ಏರ್ಪಡಿಸಲಾಗಿತ್ತು. ನುರಿತ ಕಲಾವಿದರಿಂದ ಭಜನೆಯನ್ನು ನಡೆಸಲಾಯಿತು.
ದ್ಯಾವಪ್ಪ, ತ್ಯಾಗರಾಜು, ವೆಂಕಟರಾಜು, ನಾರಾಯಣಸ್ವಾಮಿ, ಅಶ್ವತ್ಥ, ಕೃಷ್ಣಪ್ಪ, ಅಂಬರೀಷ್ ಮತ್ತಿತರರು ಹಾಜರಿದ್ದರು.
ಗಂಧದ ಉತ್ಸವ
ಹಿಂದು ಮುಸ್ಲಿಂ ಭಾವೈಕ್ಯದ ಸಂಕೇತವಾದ ದರ್ಗಾದಲ್ಲಿ ಜಾತಿ ಬೇಧ ಮರೆತು ಗಂಧದ ಅಭಿಷೇಕವನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ತಿಳಿಸಿದರು.
ನಗರದ ಗಾರ್ಡನ್ ರಸ್ತೆಯಲ್ಲಿರುವ ಹಜರತ್ ಸಯ್ಯದ್ ಹುಸೇನಿ ಸರ್ಮಸ್ತ್ ಷಾ ವಲೀ ದರ್ಗಾದಲ್ಲಿ ಶನಿವಾರ ರಾತ್ರಿ ನಡೆಸಿದ ಗಂಧದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಂತಿ, ನೆಮ್ಮದಿ, ಮಳೆ, ಬೆಳೆ ಉತ್ತಮವಾಗಲಿ, ಸರ್ವರಿಗೂ ಒಳ್ಳೆಯದಾಗಲೆಂಬ ಆಶಯದಿಂದ ಪ್ರತಿವರ್ಷವೂ ದರ್ಗಾದಲ್ಲಿ ಗಂಧದ ಅಭಿಷೇಕ ಹಾಗೂ ಉತ್ಸವ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಜಾತಿ ಬೇಧವಿಲ್ಲದೆ ದರ್ಗಾಗೆ ಬಂದು ಜನರು ಆಶೀರ್ವಾದ ಪಡೆಯುವುದು ರೂಢಿ. ಸರ್ವಧರ್ಮ ಶಾಂತಿಯ ದ್ಯೋತಕವಾದ ಈ ಆಚರಣೆಯಲ್ಲಿ ಭಾಗವಹಿಸಿದವರಿಗೆ ಶುಭವಾಗಲಿ ಎಂದು ಹೇಳಿದರು.
ವಾದ್ಯವೃಂದದೊಂದಿಗೆ ಬಣ್ಣಬಣ್ಣದ ದೀಪಗಳಿಂದ ಹೂಗಳಿಂದ ಅಲಂಕೃತಗೊಂಡ ದೇವಸ್ಥಾನ, ಮಸೀದಿಗಳ ಪ್ರತಿಕೃತಿಗಳ ಮೆರವಣಿಗೆಯನ್ನು ಮಾಡಲಾಯಿತು.
ದರ್ಗಾದಲ್ಲಿ ಆಗಮಿಸಿದ ಗಣ್ಯರು ಹೂವು ಮತ್ತು ಛಾದರ್ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು.
ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಾದಂಬರಿ ಬಿಡುಗಡೆ
ಸರ್ಕಾರಿ ಶಾಲೆ ಮಕ್ಕಳಲ್ಲಿ ಹೆಚ್ಚು ಕ್ರಿಯಾಶೀಲತೆ ಇರುತ್ತದೆ. ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಮನಸ್ಸುಗಳು ಬೇಕಿವೆ ಎಂದು ಮಕ್ಕಳ ಸಾಹಿತಿ ಹನುಮಂತ ಎಸ್. ಬ್ಯಾಕೋಡ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಾಹಿತಿ ಹನುಮಂತ ಎಸ್. ಬ್ಯಾಕೋಡ ತಮ್ಮ ಮಕ್ಕಳ ಕಾದಂಬರಿ ‘ನವೀನ ಸಾಕಿದ ನವಿಲು’ ಶಾಲಾ ಮಕ್ಕಳಿಂದ ಬಿಡುಗಡೆ ಮಾಡಿಸಿ ಮಾತನಾಡಿದರು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ಕೆ. ವಸಂತ ಕುಮಾರ್ ಮಾತನಾಡಿ, ‘ನಗರದ ಲೇಖಕರು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಪುಸ್ತಕ ಬಿಡುಗಡೆ ಹಮ್ಮಿಕೊಂಡಿರುವುದು ಸಂತಸದ ವಿಷಯ. ಇದರಿಂದ ಶಾಲೆಗಳಲ್ಲಿ ಸಾಹಿತ್ಯಕ ವಾತಾವರಣ ಮೂಡಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.
ಶಾಲೆಯ ವಿದ್ಯಾರ್ಥಿಗಳಾದ ಸಂದೀಪ ಹಾಗೂ ವಿಜಯ್ ನವಿಲಿನ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂತರ, ಭವಾನಿ, ಜೀವಂತ್, ನಂದಿನಿ ಪುಸ್ತಕವನ್ನು ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳಾದ ಎಸ್.ಕೆ. ನಿನಾದ್, ಡಿ.ಕೆ. ಕಿರಣ್, ಕೆ.ವಿ. ತೇಜಸ್ ಪುಸ್ತಕದ ಕುರಿತು ಮಾತನಾಡಿದರು. ಲೇಖಕರಾದ ಹನುಮಂತ ಬ್ಯಾಕೋಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಎಚ್. ಮುನಿಯಪ್ಪ, ಸ್ನೇಹ ಯುವಕರ ಸಂಘದ ಅಧ್ಯಕ್ಷ ಕೆ. ವಸಂತ ಕುಮಾರ್, ಸದಸ್ಯರಾದ ವಾಸುದೇವ್, ರಘು, ಮಂಜುನಾಥ್, ಕೇಶವ ಶಿಕ್ಷಕರಾದ ಜೆ. ಶ್ರೀನಿವಾಸ್, ಎಸ್. ಕಲಾಧರ, ಟಿ.ಜೆ.ಸುನೀತ ಹಾಗೂ ಬೆಂಗಳೂರಿನ ರಕ್ಷಕ್, ಶ್ರೀನಿವಾಸ್, ಶ್ರೀನಾಥ್, ಕೃಷ್ಣ, ನಾಝಿರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮ
ಶಿಡ್ಲಘಟ್ಟದ ಪ್ರಗತಿಪರ ಕುರಿ ಸಾಗಾಣಿಕೆದಾರರ ಸಹಕಾರ ಸಂಘದ ವತಿಯಿಂದ ತಾಲ್ಲೂಕಿನ ಕುರಿ ಸಾಕಾಣಿಕೆದಾರರಿಗೆ ಉಚಿತವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಯ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇದರ ಸಹಯೋಗದೊಂದಿಗೆ ಬೆಂಗಳೂರಿನಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಆವರಣದ ತಂತ್ರಜ್ಞಾನ ವರ್ಗಾವಣೆ ಕೇಂದ್ರದಲ್ಲಿ ನುರಿತ ಅಧ್ಯಾಪಕರಿಂದ ತರಬೇತಿ ನೀಡಲಾಯಿತು.
ಡಿ.ಸಿ.ಸಿ.ಬ್ಯಾಂಕಿನ ಮೂಲಕ ಬಡ್ಡಿರಹಿತ ಸಾಲ
ಅವಿಭಾಜ್ಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ರೈತರನ್ನು ಮೀಟರ್ ಬಡ್ಡಿದಂಧೆಯಿಂದ ಪಾರುಮಾಡುವ ಉದ್ದೇಶದಿಂದ ಡಿ.ಸಿ.ಸಿ.ಬ್ಯಾಂಕಿನ ಮೂಲಕ ೩ ಲಕ್ಷ ರೂಪಾಯಿಗಳವರೆಗೂ ಬಡ್ಡಿರಹಿತ ಸಾಲವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಕೋಲಾರ ಡಿ.ಸಿ.ಸಿ.ಬ್ಯಾಂಕಿನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ನಗರದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು ೧ ಕೋಟಿ ೭೦ ಲಕ್ಷ ರೂಪಾಯಿಗಳ ಸಾಲವನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ತೀವ್ರ ನೀರಿನ ಭವಣೆ ಅನುಭವಿಸುತ್ತಿರುವ ಅವಿಭಾಜ್ಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ರೈತರು ಸಂಕಷ್ಟದಲ್ಲಿದ್ದು, ಜೀವನ ನಿರ್ವಹಣೆ ಮಾಡಲು ಅನಿವಾರ್ಯವಾಗಿ ಮೀಟರ್ ಬಡ್ಡಿದಂಧೆಗೆ ಸಿಲುಕುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಡ್ಡಿರಹಿತ ಸಾಲ ವಿತರಣೆ ಮಾಡಲಾಗುತ್ತಿದೆ. ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೂ ಕೂಡಾ ಸಾಲಗಳನ್ನು ವಿತರಣೆ ಮಾಡುತ್ತಿದ್ದು, ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಉಳಿಸುವ ಮೂಲಕ ಆರ್ಥಿಕವಾಗಿಯೂ ಸಬಲರಾಗಬೇಕು. ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಉತ್ಪಾದಕರು ಕೂಡಾ ಸಹಕಾರಿ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು ವ್ಯವಹರಿಸುವ ಮೂಲಕ ಬ್ಯಾಂಕುಗಳ ಶ್ರೇಯೋಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮಹಿಳಾ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು, ಬ್ಯಾಂಕುಗಳಿಂದ ಪಡೆದುಕೊಳ್ಳುವಂತಹ ಸಾಲಗಳನ್ನು ನಿಗದಿತ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯಾಗಬೇಕು. ತಮ್ಮ ದಿನನಿತ್ಯದ ಕಸಬುಗಳ ಜೊತೆಗೆ ಉಪಕಸುಬುಗಳನ್ನು ಮೈಗೂಡಿಸಿಕೊಂಡು ಸ್ವಾವಲಂಬನೆಯ ಜೀವನ ನಡೆಸಬೇಕು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತಹ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದರು.
ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಿಗೆ ಕೆ.ಸಿ.ಸಿ. ಸಾಲದ ಚೆಕ್ಕುಗಳು ಹಾಗೂ ಮಹಿಳಾ ಸಂಘಗಳಿಗೆ ಆರ್ಥಿಕ ಸಾಲವನ್ನು ನಗದು ರೂಪದಲ್ಲಿ ವಿತರಣೆ ಮಾಡಲಾಯಿತು.
ಕೋಚಿಮುಲ್ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಎಸ್.ಎಫ್.ಸಿ.ಎಸ್ ಬ್ಯಾಂಕಿನ ಅಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕ ಎಂ.ರಾಮಣ್ಣ, ರಾಘವೇಂದ್ರ, ವ್ಯವಸ್ಥಾಪಕಿ ದೇವಿಕಾ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ, ಆರೀಫುಲ್ಲಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸರ್ಕಾರಿ ಶಾಲೆಯ ಪಕ್ಕದಲ್ಲೇ ಹಾಳು ಬಾವಿ
ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಪ್ಪನಹಳ್ಳಿಯಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲೇ ಹಾಳು ಬಾವಿಯೊಂದಿದ್ದು, ತುರ್ತಾಗಿ ಅದನ್ನು ಮುಚ್ಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಾವಿಯ ಒಂದು ಬದಿಯಲ್ಲಿ ಸರ್ಕಾರಿ ಶಾಲೆಯಿದೆ, ಮತ್ತೊಂದು ಕಡೆ ರಸ್ತೆಯಿದೆ ಮತ್ತು ಮತ್ತೊಂದೆಡೆ ಮನೆಗಳಿವೆ. ಹಳೆಯ ಕಾಲದ ಬಾವಿಯಾಗಿರುವುದರಿಂದ ಅದಕ್ಕೆ ಯಾವುದೇ ಅಡತಡೆಯಿಲ್ಲ. ಮಳೆ ನೀರು ಹರಿದು ಸುತ್ತಲಿನ ದಿಬ್ಬವೆಲ್ಲಾ ಕುಸಿದು ಅಪಾಯಕಾರಿಯಾಗಿದೆ. ಬಾವಿಯ ಒಳಗೂ ಮತ್ತು ಹೊರಗೂ ಗಿಡಗಂಟೆಗಳು ಬೆಳೆದಿದ್ದು, ಕತ್ತಲಲ್ಲಿ ಬಾವಿಯಿರುವುದೂ ತಿಳಿಯದಂತಿದೆ. ಸುಮಾರು 45 ರಿಂದ 50 ಅಡಿ ಆಳವಿದ್ದು, ಸಾರ್ವಜನಿಕರು ಕತ್ತಲಲ್ಲಿ ಈ ಭಾಗದಲ್ಲಿ ಓಡಾಡಲು ಭಯಪಡುವಂತಾಗಿದೆ. ಹಲವು ಬಾರಿ ದನಕರುಗಳು ಮತ್ತು ಕೋಳಿಗಳು ಈ ಬಾವಿಯಲ್ಲಿ ಬಿದ್ದ ಘಟನೆ ನಡೆದಿವೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲೇ ಬಾವಿಯಿರುವುದರಿಂದ ಶಾಲೆ ಬಿಟ್ಟಾಗ ಮಕ್ಕಳು ಈ ಬಾವಿಯ ಹತ್ತಿರ ಆಡುತ್ತಾ ಇಣುಕುವುದು, ಕಲ್ಲೆಸೆಯುವುದೂ ಮಾಡುತ್ತಿರುತ್ತಾರೆ. ಇದರಿಂದ ಪೋಷಕರು ಆತಂಕಕ್ಕೊಳಗಾಗುತ್ತಿರುತ್ತಾರೆ.
ಈ ಬಗ್ಗೆ ಗ್ರಾಮಸ್ಥರು ಈಗಾಗಲೇ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಏನಾದರೂ ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ತುರ್ತಾಗಿ ಸ್ಥಳ ಪರಿಶೀಲಿಸಿ ಬಾವಿಯನ್ನು ಮುಚ್ಚಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳ ನಿರ್ಮಾಣ
ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಕನಕದಾಸರು, ಮೀರಾಬಾಯ್, ಕಿಟಲ್, ಬಸವಣ್ಣ ಮುಂತಾದ ಮಹಾನುಭಾವರ ಮೂರ್ತಿಗಳು ತಾಲ್ಲೂಕಿನ ಚೀಮಂಗಲ ಪಂಚಾಯತಿಯ ನಾರಾಯಣದಾಸರಹಳ್ಳಿಯಲ್ಲಿ ರೂಪುಗೊಳ್ಳುತ್ತಿವೆ. ನಾಡಿನ ನಾನಾ ಕಡೆ ನಡೆಯುವ ಸನ್ಮಾನ ಸಮಾರಂಭಗಳಿಗೆ ಈ ಮಹಾನ್ ವ್ಯಕ್ತಿಗಳ ಮೂರ್ತಿಗಳಿರುವ ನೆನಪಿನ ಕಾಣಿಕೆಗಳು ಬಳಕೆಯಾಗುತ್ತಿವೆ.
ಎನ್.ಪುರುಷೋತ್ತಮ್ ಎಂಬ ನಾರಾಯಣದಾಸರಹಳ್ಳಿಯ ಕಲಾವಿದ ರೂಪಿಸುವ ಈ ಮೂರ್ತಿಗಳು ನಾಡಿನಲ್ಲೆಲ್ಲಾ ತಾಲ್ಲೂಕಿನ ಕಲೆಯ ಪ್ರತಿನಿಧಿಗಳಾಗಿ ಹೆಮ್ಮೆಯ ಕುರುಹುಗಳಾಗಿ ಪಸರಿಸುತ್ತಿವೆ.
ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳನ್ನು ರೂಪಿಸುವ ಕೆಲಸ ಸುಲಭವಲ್ಲ. ಅದಕ್ಕೆ ಕಲೆ, ಶ್ರಮ, ಮಣ್ಣಿನ ಹದ, ಮಿಶ್ರಣ ಮಾಡಬೇಕಾದ ರಸಾಯನಿಕಗಳ ಜ್ಞಾನ ಅತ್ಯವಶ್ಯ. ಇವೆಲ್ಲವನ್ನೂ ಕರಗತ ಮಾಡಿಕೊಂಡಿರುವ ಗ್ರಾಮೀಣ ಪ್ರತಿಭೆಯಿಂದ ಹಲವಾರು ಪ್ರತಿಮೆಗಳು ತಯಾರಾಗುತ್ತಿವೆ.
ಹದವಾದ ಮಣ್ಣನ್ನು ಆರಿಸಿಕೊಂಡು ಚಿತ್ರಿತ ಮೂರ್ತಿಯ ರೂಪವನ್ನು ತಯಾರಿಸಿಕೊಳ್ಳುವ ಇವರು ಸಿಲಿಕಾನ್ ರಬ್ಬರನ್ನು ಬಳಸಿ ಅಚ್ಚನ್ನು ತಯಾರಿಸಿಕೊಳ್ಳುತ್ತಾರೆ. ಕಣ್ಣು, ಮೂಗು, ಮುಖದ ಅಳತೆ, ಆಕಾರ ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ತಯಾರಿಸುವುದು ಕಲಾವಿದನ ಕೈಚಳಕವನ್ನು ತೋರಿಸುತ್ತದೆ. ನಂತರ ಫೈಬರ್ ಪದಾರ್ಥದಿಂದ ಅಚ್ಚಿನೊಳಗೆ ಹಾಕಿ ಮೂರ್ತಿಯನ್ನು ತಯಾರಿಸುತ್ತಾರೆ. ಆಮೇಲೆ ಬಣ್ಣ ಹಚ್ಚುತ್ತಾರೆ.
ಬಸವಣ್ಣ, ಅಂಬೇಡ್ಕರ್, ಕನಕದಾಸರು, ಗಾಂಧೀಜಿ ಮೂರ್ತಿಗಳನ್ನು ಅವರವರ ಜಯಂತ್ಯುತ್ಸವಗಳಲ್ಲಿ ನೆನಪಿನ ಕಾಣಿಕೆಯಾಗಿ ನೀಡಲು ಇವರಿಂದ ಮಾಡಿಸಿಕೊಳ್ಳುತ್ತಾರೆ. ಬಿಬಿಎಂಪಿ ಗೆ ಕೆಂಪೇಗೌಡರ ಮೂರ್ತಿಗಳನ್ನು, ಗಾಂಧಿಭವನಕ್ಕೆ ಗಾಂಧೀಜಿ ಮೂರ್ತಿಗಳನ್ನು ಮಾಡಿಕೊಟ್ಟಿದ್ದಾರೆ. ದಸರಾ ಉತ್ಸವಕ್ಕೆ ಮಾಡುವ ಟ್ಯಾಬ್ಲೋ ಕೆಲಸದಲ್ಲೂ ಪಾಲ್ಗೊಂಡಿದ್ದಾರೆ. ಶಿಡ್ಲಘಟ್ಟದಲ್ಲಿನ ಕೆಂಪೇಗೌಡ ಪ್ರತಿಮೆಯ ಕೆಲಸದಲ್ಲೂ ಭಾಗಿಯಾಗಿದ್ದಾರೆ.
‘ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ನನಗೆ ಆಸಕ್ತಿಯಿತ್ತು. ಬಿಡದಿಬಳಿಯ ಜೋಗದದೊಡ್ಡಿಯಲ್ಲಿ ಕೆನರಾಬ್ಯಾಂಕ್ ಕರಕುಶಲಕೇಂದ್ರದಲ್ಲಿ ತರಬೇತಿಯನ್ನು ಪಡೆದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಶೀಬಿರಗಳಲ್ಲಿ ಪಾಲ್ಗೊಂಡೆ. ಆನಂತರ ಹಲವೆಡೆಯಿಂದ ನನಗೆ ಕೆಲಸ ಮಾಡಲು ಅವಕಾಶಗಳು ದೊರೆಯಿತು. ಈಗೀಗ ನೆನಪಿನ ಕಾಣಿಕೆಗಳ ಮೂರ್ತಿಗಳ ಬೇಡಿಕೆ ಬರುತ್ತಿವೆ. ಸುಮಾರು ಹತ್ತು ವರ್ಷಗಳಿಂದಲೂ ಇದೇ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದೇನೆ. ನಗರಗಳಲ್ಲಿರುವವರಿಗೆ ಸಿಗುವಷ್ಟು ಅವಕಾಶಗಳು ಸಿಗದಿದ್ದರೂ ಇಲ್ಲಿಯೇ ಇದ್ದು ಕಲೆಯಿಂದ ಬದುಕಲು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಎನ್.ಪುರುಷೋತ್ತಮ.
ಕಲೆಯನ್ನು ನಂಬಿರುವ ಈ ಕಲಾವಿದನಿಗೆ ದೆಹಲಿ ಕರ್ನಾಟಕ ಸಂಘ, ಲೇಪಾಕ್ಷಿ ಮತ್ತು ಕೊಪ್ಪಳದ ಜವಾಹರ ನವೋದಯ ವಿದ್ಯಾಲಯ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳು ಲಭಿಸಿವೆ.
ಪುರುಷೋತ್ತಮ್ ಮೊಬೈಲ್ ಸಂಖ್ಯೆ : 9611288202

