ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಮೇಸ್ತ್ರಿಗಳಿಗೆ ಗುರುತಿನ ಚೀಟಿ ವಿತರಿಸುವ ಮೂಲಕ ಅವರಿಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನಾಗಿಸುವ ಪ್ರಯತ್ನ ನಡೆಸಿದ್ದೇವೆ ಎಂದು ಎ.ಸಿ.ಸಿ ಸಿಮೆಂಟ್ ಕಂಪೆನಿಯ ಅಧಿಕಾರಿ ಪವನ್ಕುಮಾರ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಎ.ಸಿ.ಸಿ ಸಿಮೆಂಟ್ ಕಂಪೆನಿಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಆಯೋಜಿಸಿದ್ದ ಕೌಶಲ್ಯ ತರಬೇತಿ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿನದ ಆದಾಯವನ್ನು ನಂಬಿ ಜೀವನ ನಡೆಸುವ ಕಟ್ಟಡ ಕಾರ್ಮಿಕರು ತಮ್ಮ ಕೌಶಲ್ಯವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬಹುದೆಂದು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕರು ಮತ್ತು ಮೇಸ್ತ್ರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಹಿತೈಷಿ, ಮುಖಿ, ಕೆ.ಪವನ್, ಮಂಜುನಾಥರೆಡ್ಡಿ, ಅನಿಲ್ಕುಮಾರ್, ರಾಮಾಂಜುಲು, ನಂದಗೋಕುಲ ಟ್ರೇಡರ್ಸ್ ನಾಗರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ
ಹೊಂಗೆಯಿಂದ ಶಾಲೆಗೆ ವರಮಾನ
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಂಗೆ ಬೀಜದ ಕೊಯ್ಲು ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಶ್ರಮದಿಂದ ಬೆಳೆದಿರುವ ಹೊಂಗೆಮರಗಳು ಪ್ರತಿವರ್ಷ ಅವರಿಗೆ ವರಮಾನವನ್ನು ತರುತ್ತಿದೆ.
ಹೊಂಗೆಯ ಬೀಜದಿಂದ ಎಣ್ಣೆ ತೆಗೆದು ಅದನ್ನು ಜೈವಿಕ ಇಂಧನ ರೂಪಕ್ಕೆ ಪರಿವರ್ತಿಸಿ ಬಳಕೆ ಮಾಡಲು ಸಾಧ್ಯವಿದೆ. ಗ್ರಾಮಗಳಲ್ಲಿ ಸಾಗುವಳಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಮತ್ತು ಹೊಲ, ತೋಟಗಳ ಬದುಗಳ ಮೇಲೆ ಬೆಳೆದರೆ ರೈತರಿಗೆ ಲಾಭವಿದೆಯೆಂದು ಅದನ್ನು ಬೆಳೆಸಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಆದರೂ ಹೊಂಗೆ ಮರಗಳನ್ನು ಅಷ್ಟಾಗಿ ಬೆಳೆಯಲು ಉತ್ಸುಕತೆಯಿಲ್ಲ.
ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ವೈವಿಧ್ಯಮಯ ಗಿಡಗಳೊಂದಿಗೆ ಹೊಂಗೆಯ ಮರಗಳನ್ನು ಬೆಳೆಸಿದ್ದಾರೆ. ಮಕ್ಕಳೇ ಬೆಳೆಸಿರುವ ಮರದಲ್ಲಿ ಕಾಯಿಗಳನ್ನು ಉದುರಿಸಿ ಒಣಗಿಸುತ್ತಾರೆ. ನಂತರ ಬೀಜವನ್ನು ಬೇರ್ಪಡಿಸಿ ಮಾರಾಟ ಮಾಡುತ್ತಾರೆ. ಬಂದ ಹಣ ಮಕ್ಕಳಿಗೆ ಅನುಕೂಲವಾಗುವ ಶಾಲೆಯಲ್ಲಿನ ಅಗತ್ಯ ವಸ್ತುಗಳನ್ನು ತರಲು ಬಳಸುತ್ತಾರೆ.
ಹೊಂಗೆ ಬೀಜದ ಮೂಲಕ ವಿದ್ಯಾರ್ಥಿಗಳಿಗೆ ಹೊಂಗೆಯ ಉಪಯುಕ್ತತೆಗಳು, ಬೀಜದಿಂದ ತಯಾರಿಸುವ ಬಯೋಡೀಸಲ್, ಪೋಷಕಾಂಶಗಳು ಹೆಚ್ಚಿರುವ ಹೊಂಗೆ ಎಲೆಯು ಗೊಬ್ಬರವಾದಾಗ ಸಾವಯವ ಗೊಬ್ಬರವಾಗುವ ರೀತಿ, ಭೂಮಿಯ ಫಲವತ್ತತೆ, ಬಯೋಡೀಸೆಲ್ ತಯಾರಿಕಾ ರೀತಿ, ಹೊಂಗೆ ಎಣ್ಣೆ ಸಂಸ್ಕರಿಸುವಾಗ ಗ್ಲಿಸರಿನ್ ಮತ್ತು ಸೋಪ್ ವಾಟರ್ ಸಿಗುವುದನ್ನು ಸೋಪು ತಯಾರಿಕೆಯಲ್ಲಿ ಬಳಸಬಹುದು, ಮುಂತಾದ ಹಲವು ವೈಜ್ಞಾನಿಕ, ಕೃಷಿ, ಸಂಗತಿಗಳ ಪಾಠವೂ ವಿದ್ಯಾರ್ಥಿಗಳಿಗೆ ನಡೆಯುತ್ತದೆ.
‘ವಿದ್ಯಾರ್ಥಿಗಳಲ್ಲಿ ಉತ್ಸಾಹ ಹೆಚ್ಚು. ಹೊಂಗೆ ಬೀಜಗಳನ್ನು ಮಾರುವ ಬದಲು ಎಣ್ಣೆ ತೆಗೆದು ಮಾರಾಟ ಮಾಡಿದರೆ ಹೆಚ್ಚು ಹಣ ಸಿಗುತ್ತದೆ. ಎಣ್ಣೆ ತೆಗೆದ ನಂತರ ಹಿಂಡಿ ಕೂಡ ಸಿಗುತ್ತದೆ. ಹಿಂಡಿಯನ್ನು ಗೊಬ್ಬರವಾಗಿ ಬಳಸಬಹುದು ಅಥವಾ ಮಾರಾಟ ಮಾಡಬಹುದು. ಮಾಡೋಣ ಸರ್, ಎನ್ನುತ್ತಾರೆ. ನಮ್ಮೂರಲ್ಲಿ ದಾರಿ ಪಕ್ಕ ಉದ್ದಕ್ಕೂ ಹೊಂಗೆ ಮರ ಹಾಕಬೇಕು ಸರ್. ನಮ್ಮ ವಿದ್ಯುತ್ ನಾವೇ ತಯಾರಿಸಬಹುದು ಅಲ್ವಾ ಎಂಬ ಆಲೋಚನೆಯನ್ನು ಮಕ್ಕಳು ಹೇಳುವಾಗ ನಮಗೆ ಖುಷಿಯಾಗುತ್ತದೆ’ ಎಂದು ಶಿಕ್ಷಕ ರಾಮಕೃಷ್ಣ ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಎಲ್ಲವೂ ಇದೆ, ಮಕ್ಕಳನ್ನು ಸೇರಿಸಿ
ಆಂಗ್ಲಮಾಧ್ಯಮದ ವ್ಯಾಮೋಹದಿಂದಾಗಿ ಬಡವರೂ ಕೂಡಾ ದುಬಾರಿ ಹಣವನ್ನು ಪಾವತಿಸಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು ದುರದೃಷ್ಟಕರ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಎರಡನೇ ಟಿ.ಎಂ.ಸಿ. ಲೇ ಔಟ್ನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಶೂಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಸರ್ಕಾರ ಸಾಮಾನ್ಯವರ್ಗದ ಮಕ್ಕಳಿಗೂ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಚಿತ ಪಠ್ಯಪುಸ್ತಕಗಳ ವಿತರಣೆ, ಸಮವಸ್ತ್ರಗಳ ವಿತರಣೆ, ಕ್ಷೀರಭಾಗ್ಯ ಯೋಜನೆ, ಸೈಕಲ್ ವಿತರಣೆ, ವಿದ್ಯಾರ್ಥಿವೇತನ ಸೇರಿದಂತೆ ಹೆಚ್ಚಿನ ವ್ಯಾಸಂಗಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಇತ್ತಿಚೆಗೆ ಎಲ್ಲಾ ಮಕ್ಕಳಲ್ಲಿ ಸಮಾನತೆ ಕಾಪಾಡಲು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶೂಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಯಾವುದೇ ಮಗುವಿನಲ್ಲಿ ಬೌದ್ಧಿಕವಾಗಿ ಕಲಿಕೆಯ ಮಟ್ಟವನ್ನು ಹೆಚ್ಚಿಸದಿದ್ದರೆ, ಅಂತಹ ಮಕ್ಕಳು ಸಮಾಜದಲ್ಲಿ ಉತ್ತಮವಾದ ಸ್ಥಾನಗಳನ್ನು ಗಳಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಮಕ್ಕಳು ಪ್ರಾಥಮಿಕ ಹಂತದಿಂದಲೇ ನಿರ್ಧಿಷ್ಟವಾದ ಗುರಿಯನ್ನು ಹೊಂದಿರಬೇಕು. ನಿರಂತರವಾದ ಪರಿಶ್ರಮ, ಆಸಕ್ತಿಯಿಂದ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಸಮಯಪಾಲನೆ ಬಹಳ ಮುಖ್ಯವಾಗುತ್ತದೆ, ಮಕ್ಕಳ ಬಗ್ಗೆ ಪೋಷಕರೂ ಕೂಡಾ ಹೆಚ್ಚಿನ ಕಾಳಜಿವಹಿಸಬೇಕು. ಶಿಸ್ತು, ಸಂಯಮಗಳನ್ನು ಪ್ರಾಥಮಿಕ ಹಂತದಿಂದಲೇ ಬೆಳೆಸಬೇಕು. ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಶಿಕ್ಷಕರೂ ಕೂಡಾ ಸರ್ಕಾರದಿಂದ ಮಕ್ಕಳಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ತಲುಪಿಸಿ, ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ನಗರಸಭಾ ಸದಸ್ಯರಾದ ಇಲಿಯಾಜ್ಬೇಗ್, ಅಪ್ಸರ್ಪಾಷಾ, ಮುಖಂಡರಾದ ರಘು, ಲಕ್ಷೀನಾರಾಯಣ, ಕನಕಪ್ರಸಾದ್, ಶ್ರೀಧರ್, ಸೂರ್ಯನಾರಾಯಣಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತರ ಉತ್ಪನ್ನಗಳಿಗೆ ತೆರಿಗೆಯನ್ನು ವಿಧಿಸಬಾರದು
ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಂದ ವಾರದ ಸಂತೆಗೆ ರೈತರು ಉತ್ಪಾದನೆ ಮಾಡಿ ತರುವಂತಹ ತರಕಾರಿಗಳು ಹಾಗೂ ವಿವಿಧ ಉತ್ಪನ್ನಗಳಿಗೆ ತೆರಿಗೆಯನ್ನು ವಿಧಿಸಬಾರದು ಎಂದು ರೈತ ಸಂಘದ ಪದಾಧಿಕಾರಿಗಳು ನಗರಸಭೆಯ ಆಯುಕ್ತರಿಗೆ ಬುಧವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ನಗರಸಭೆಯ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅವರು, ತಾಲ್ಲೂಕಿನ ವಿವಿಧ ಭಾಗಗಳಿಂದ ರೈತರು ತೀವ್ರ ಸಂಕಷ್ಟದಲ್ಲಿಯೂ ಕೂಡಾ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಬಂದರೂ ಅವರರ ಶ್ರಮಕ್ಕೆ ತಕ್ಕಂತೆ ಬೆಲೆಗಳು ಲಭ್ಯವಾಗುತ್ತಿಲ್ಲ. ಬೆಳೆಗಳಿಂದ ಬಂದಂತಹ ಹಣವನ್ನು ಕೂಲಿಕಾರ್ಮಿಕರಿಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಉಪಯೋಗಿಸುತ್ತಿರುವ ಔಷಧಿಗಳ ಬೆಲೆಗಳು ಏರಿಕೆಯಾಗಿವೆ. ಕಳಪೆ ಬಿತ್ತನೆ ಬೀಜಗಳಿಂದಲೂ ನಷ್ಟವನ್ನು ಅನುಭವಿಸುವಂತಾಗಿದ್ದು, ನಗರದಲ್ಲಿ ವಾರಕ್ಕೊಮ್ಮೆ ನಡೆಯುವಂತಹ ಸಂತೆಯಲ್ಲಿ ರೈತರ ಉತ್ಪನ್ನಗಳಿಗೆ ತೆಗೆದುಕೊಳ್ಳುತ್ತಿರುವ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ನಗರಸಭೆಯ ವ್ಯವಸ್ಥಾಪಕ ಮಂಜುನಾಥ್, ಮನವಿಯನ್ನು ಆಯುಕ್ತರ ಗಮನಕ್ಕೆ ತಂದು ರೈತರ ಸಂಕಷ್ಟದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರುಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಆನೂರು ದೇವರಾಜ್, ಮೂರ್ತಿ, ಅಶ್ವಥ್ಥನಾರಾಯಣಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ
ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ ಹೇಳಿದರು.
ನಗರದ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ೨೦೧೫-–೧೬ ನೇ ಸಾಲಿನ ೧೫೧ ಮಂದಿ ರೈತರರಿಗೆ ೧.೫ ಕೋಟಿ ರೂಪಾಯಿಗಳ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಕೃಷಿ ಚಟುವಟಿಕೆಗಳಿಗಾಗಿ ಸಾಲಗಳನ್ನು ಪಡೆದುಕೊಂಡು, ನಿಗದಿತ ಸಮಯದಲ್ಲಿ ಮರುಪಾವತಿ ಮಾಡದೇ, ಸರ್ಕಾರ ಮನ್ನಾ ಮಾಡುತ್ತದೆಯೆಂಬ ಅಸಡ್ಡೆಯನ್ನು ತೋರಿಸಬಾರದು. ಸಾಲವನ್ನು ಯಾವ ಉದ್ದೇಶಗಳಿಗಾಗಿ ಪಡೆದುಕೊಳ್ಳುತ್ತೀರೊ ಅದೇ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಸಾಲ ಮರುಪಾವತಿ ಮಾಡಬೇಕು. ಈ ಭಾಗಕ್ಕೆ ನೀರಾವರಿ ಯೋಜನೆಗಳು ಜಾರಿಯಾಗದ ಹೊರತು, ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ಜೀವನಾಡಿಯಾಗಿದ್ದ ರೇಷ್ಮೆ ಉದ್ಯಮವೂ ಕೂಡಾ ತೆರೆಮರೆಗೆ ಸರಿಯುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ, ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ ಎಂದರು.
ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಸಿ.ಎಂ.ಗೋಪಾಲ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಂಡು ತೀರಾ ಸಂಕಷ್ಟಕ್ಕೆ ಸಿಲುಕಿಕೊಂಡು ಸಾಲಗಳನ್ನು ಮರುಪಾವತಿ ಮಾಡಲಾಗದೆ ಇರುವ ರೈತರು, ಬಡ್ಡಿಯನ್ನು ಹೊರತುಪಡಿಸಿ, ಅಸಲು ಮಾತ್ರ ಪಾವತಿ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ, ಪಿ.ಎಲ್.ಡಿ.ಬ್ಯಾಂಕಿನ ಮೂಲಕವೂ ಕೂಡಾ ರೇಷ್ಮೆಮನೆ ನಿರ್ಮಾಣ, ಕಾಂಡ ಮೇಯಿಸುವ ಪದ್ದತಿ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಟ್ರ್ಯಾಕ್ಟರ್ಗಳ ಖರೀದಿಗಾಗಿ ಸಾಲಗಳನ್ನು ನೀಡಲಾಗುತ್ತಿದೆ ಎಂದರು.
ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ರವಿ, ನಿರ್ದೇಶಕರಾದ ರಮಾದೇವಿ, ಮಯೂರ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಕ್ಯಾತಪ್ಪ ಮುಂತಾದವರು ಹಾಜರಿದ್ದರು.
ಸಣ್ಣ ನೀರಾವರಿ ಇಲಾಖೆಯಿಂದ ನಾಲ್ಕು ಕೋಟಿ ರೂ ಬಿಡುಗಡೆ
ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ಸುಮಾರು ೪ ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ವರದನಾಯಕನಹಳ್ಳಿ ಗ್ರಾಮದಲ್ಲಿ ಬುಧವಾರ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೨೫ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಮ್ಮನಕೆರೆಗೆ ಸಂಪರ್ಕ ಕಲ್ಪಿಸುವ ಪೋಷಕ ಕಾಲುವೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಸರ್ಕಾರದ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮವನ್ನು ಆಯ್ಕೆ ಮಾಡುವುದರೊಂದಿಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅಬ್ಲೂಡು ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಬಹುತೇಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳ ನಿರ್ಮಾಣಕ್ಕಾಗಿ ತಲಾ ೨ ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಹಂಡಿಗನಾಳ ಕ್ಷೇತ್ರದ ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಲಕ್ಷ್ಮಿನಾರಾಯಣರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ದ್ಯಾವಪ್ಪ, ಅಬ್ಲೂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಸೂರ್ಯನಾರಾಯಣಗೌಡ, ಗೋಪಾಲಪ್ಪ, ವೆಂಕಟರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೇಷ್ಮೆ ಗೂಡಿನ ಮಾರುಕಟ್ಟೆಗೆ ಜಿಲ್ಲಾಧಿಕಾರಿಗಳ ಭೇಟಿ
ರೈತರ ಮತ್ತು ರೀಲರುಗಳ ಹಿತದೃಷ್ಠಿಯನ್ನು ಕೇಂದ್ರಬಿಂದುವನ್ನಾಗಿಸಿಕೊಂಡು ರೂಪಿಸಿರುವ ಇ–ಹರಾಜು ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಇದೇ ಮಾರ್ಚ್ ೧೦ ರಂದು ಚಾಲನೆ ನೀಡಲಾದ ಇ-ಹರಾಜು ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿರುವ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ತಂತ್ರಾಂಶ ಉನ್ನತೀಕರಿಸಿ ಮತ್ತೇ ಇ–ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.
ಪ್ರಾಯೋಗಿಕವಾಗಿ ಶುರುಮಾಡಿದ ಇ–ಹರಾಜು ಪ್ರಕ್ರಿಯೆಯ ಬಗ್ಗೆ ಈಗಾಗಲೇ ರೈತರು ಸೇರಿದಂತೆ ರೀಲರ್ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೀಲರ್ಗಳು ಒಮ್ಮೆಲೇ ದರ ನಿಗಧಿಪಡಿಸುವ ವೇಳೆ ಸರ್ವರ್ ಜಾಮ್ ಆಗಿದ್ದು, ತಂತ್ರಾಂಶದಲ್ಲಿ ಲೋಪ ಕಂಡುಬಂದಿರುವುದರ ಬಗ್ಗೆ ಈಗಾಗಲೇ ಸಂಬಂಧಪಟ್ಟ ಕಂಪೆನಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ತಂತ್ರಾಂಶ ಉನ್ನತೀಕರಣಗೊಳಿಸಿ ಇ–ಹರಜು ಪ್ರಕ್ರಿಯೆ ಶುರು ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್, ತಹಸೀಲ್ದಾರ್ ಕೆ.ಎಂ.ಮನೋರಮಾ, ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ, ನಗರಸಭೆ ಆಯುಕ್ತ ಎಚ್.ಎ.ಹರೀಶ್ ಮತ್ತಿತರರು ಹಾಜರಿದ್ದರು.
ಗ್ರಾಮ ಪಂಚಾಯತಿಯ ಅಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ
ಗ್ರಾಮ ಪಂಚಾಯತಿ ಅಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮುದ್ದುಲಕ್ಷ್ಮಮ್ಮ ಗುಮ್ಮರೆಡ್ಡಿ ಜೆಡಿಎಸ್ ಪಕ್ಷದವರಾಗಿದ್ದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಯಾವುದೇ ಸದಸ್ಯರ ಮಾತಿಗೆ ಬೆಲೆ ಕೊಡುವುದಿಲ್ಲ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದರೂ ಹಣ ಮಂಜೂರಾತಿಗೆ ಸಹಿ ಹಾಕುತ್ತಿಲ್ಲ. ಕೇಳಿದರೆ, ನಿಮ್ಮ ಕೈಲಾಗಿದ್ದು ಮಾಡಿಕೊಳ್ಳಿ ನಾನು ನಿಮಗೆ ಸಹಿ ಹಾಕುವುದಿಲ್ಲ ಎಂದು ದಾಖಲೆಗಳನ್ನು ಎಸೆಯುತ್ತಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತೇಕಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬ ವ್ಯಕ್ತಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಗ್ರಾಮ ಸಭೆಯಲ್ಲಿ ಹೆಸರು ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಂಬಂದಿಸಿದಂತೆ ನಮೂನೆ ೬ ರ ಅರ್ಜಿಯನ್ನು ಭರ್ತಿಮಾಡಿ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿದ್ದರೂ ಕೂಡ ಹಣ ಮಂಜೂರಾತಿಗೆ ಸಹಿ ಮಾಡದೇ ಗ್ರಾಮ ಪಂಚಾಯತಿ ಅಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಂತಮ್ಮರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಎಸ್.ಗೋಪಾಲರೆಡ್ಡಿ, ಸದಸ್ಯರಾದ ಗೊರಮಿಲ್ಲಹಳ್ಳಿ ವೆಂಕಟೇಶಪ್ಪ, ಲಕ್ಷ್ಮಮ್ಮ, ಪದ್ಮನಾರಾಯಣಸ್ವಾಮಿ, ಪಾಪಮ್ಮ ಪಿಳ್ಳಪ್ಪ, ಮುಖಂಡರಾದ ಕೆಂಪರೆಡ್ಡಿ, ಮಂಜುನಾಥ, ಕೃಷ್ಣಪ್ಪ, ಪ್ರದೀಪ್ ಮತ್ತಿತರರು ಹಾಜರಿದ್ದರು.
ಪಲಿಚೆರ್ಲು ಗ್ರಾಮದಲ್ಲಿ ಜಾತ್ರೆ
ತಾಲ್ಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಮುನೇಶ್ವರಸ್ವಾಮಿ, ದೊಡ್ಡಮ್ಮ ಮತ್ತು ಕಾಟೇರಮ್ಮನ ಜಾತ್ರೆಯನ್ನು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ಸೋಮವಾರ ವಿಶೇಷ ಪೂಜೆ ಮತ್ತು ಅಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಂದ ಭಜನೆ ಕಾರ್ಯಕ್ರಮ ಹಾಗೂ ಸಂಜೆ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು. ರಾತ್ರಿ ಕನ್ಮನ್ ಶ್ರೀ ಬಾಲನಾಗಮ್ಮ ಎಂಬ ತೆಲುಗು ಪೌರಾಣಿಕ ನಾಟಕವನ್ನು ಆಯೋಜಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ಗಂಗಾಪೂಜೆ, ನಂತರ ಮಹಿಳೆಯರಿಂದ ದೀಪೋತ್ಸವವು ನಡೆಯಿತು. ಮಹಾಮಂಗಳಾರತಿಯ ನಂತರ ಭೋಜನವನ್ನು ಭಕ್ತರಿಗೆ ಆಯೋಜಿಸಿದ್ದರು.
ಪಲಿಚೇರ್ಲು ಗ್ರಾಮ ಪಂಚಾಯತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ರಾಜ್ಯಪಾಲರಿಂದ ಪ್ರಶಸ್ತಿ ಪುರಸ್ಕಾರ
ನಗರದ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ವಿ. ಸೀತಾಲಕ್ಷ್ಮಿ ಅವರಿಗೆ ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಸೀನಿಯರ್ ಗೈಡರ್ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ವಿ. ಸೀತಾಲಕ್ಷ್ಮಿ ಅವರು ೧೯೭೭ರಲ್ಲಿ ಕೆ. ಜಿ. ಎಫ್. ನ ಸೇಂಟ್ ಜೋಸೆಫ್ಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಗೈಡ್ಸ್ ಘಟಕವನ್ನು ಪ್ರಾರಂಭಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಜಾಂಬೂರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಕ್ಕಳಿಗೆ ತರಬೇತಿ ನೀಡಿ ಅವರೊಂದಿಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪುರಸ್ಕಾರಕ್ಕೆ ಭಾಜನರಾದ ಏಕೈಕ ಮಹಿಳೆ ಇವರಾಗಿದ್ದಾರೆ.
ಇ-ಹರಾಜು ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ
ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಪ್ರಾರಂಭವಾಗಿದ್ದ ಇ-ಹರಾಜು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡು, ಸೋಮವಾರ ಹಿಂದಿನಂತೆ ಹರಾಜು ಪ್ರಕ್ರಿಯೆ ನಡೆದಿದೆ.
ನಗರದ ಮಾರುಕಟ್ಟೆಯಲ್ಲಿ ಇ-ಹರಾಜು ಪ್ರಕ್ರಿಯೆ ಈಚೆಗೆ ಪ್ರಾರಂಭ ಮಾಡಲಾಗಿತ್ತು. ಮಾರುಕಟ್ಟೆಗೆ ಸುಮಾರು ೫೦ ರಿಂದ ೬೦ ಸಾವಿರ ಕೆ.ಜಿ.ಗೂಡು ಪ್ರತಿನಿತ್ಯ ಆವಕವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಸಾವಿರಾರು ಮಂದಿ ರೀಲರುಗಳು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಇ-ಹರಾಜು ಪ್ರಕ್ರಿಯೆಗೆ ಅಳವಡಿಸಲಾಗಿರುವ ವೈಫೈ ಸಂಪರ್ಕವು ಮಾರುಕಟ್ಟೆಗೆ ಬರುತ್ತಿರುವ ರೀಲರುಗಳ ಸಂಖ್ಯೆಗೆ ತಕ್ಕಂತೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
‘ಮಾರುಕಟ್ಟೆಯಲ್ಲಿ ಪ್ರಾಯೋಗಿಕವಾಗಿ ಇ-ಹರಾಜು ಪ್ರಕ್ರಿಯೆ ಪ್ರಾರಂಭ ಮಾಡಲಾಗಿತ್ತು, ತಾಂತ್ರಿಕ ದೋಷದಿಂದಾಗಿದೆ. ಇ-ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ತಾಂತ್ರಿಕದೋಷದ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಗಿದೆ. ದೋಷವನ್ನು ಪರಿಹರಿಸಿದ ನಂತರ ಪುನಃ ಇ-ಹರಾಜು ಪ್ರಾರಂಭಿಸಲಾಗುತ್ತದೆ’ ಎಂದು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ತಿಳಿಸಿದ್ದಾರೆ.
ಐ.ಟಿ.ಐ.ಕಾಲೇಜಿನ ಗುದ್ದಲಿಪೂಜೆ
ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗಲೆಂದು ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸಲೆಂದು ಐ.ಟಿ.ಐ.ಕಾಲೇಜನ್ನು ಪ್ರಾರಂಭಿಸುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸುಮಾರು ೩ ಕೋಟಿ ೧೯ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಐ.ಟಿ.ಐ.ಕಾಲೇಜಿನ ೨೦ ಕೊಠಡಿಗಳ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ೪ ಪಿ.ಯು.ಸಿ.ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಅಗತ್ಯತೆ ಇದ್ದು, ಕಳೆದ ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವಾಲಯದಿಂದ ಒಂದೇ ಒಂದು ಕಾಲೇಜು ಸ್ಥಾಪಿಸಲು ಮುಂದಾಗಿಲ್ಲ. ಖಾಸಗಿ ಕಾಲೇಜುಗಳು ಮಾತ್ರ ಪ್ರತಿವರ್ಷವೂ ಹಲವಾರು ಪ್ರಾರಂಭವಾಗುತ್ತಿವೆ. ಬಡ ಗ್ರಾಮೀಣ ಮಕ್ಕಳಿಗೆ ಅನುಕೂಲ ಆಗಲಕೆಂದು ಈಗಾಗಲೇ ಉನ್ನತಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಸರ್ಕಾರದಿಂದ ಕಾಲೇಜುಗಳಿಗೆ ಮಂಜೂರಾತಿ ಸಿಕ್ಕರೆ, ತಾಲ್ಲೂಕಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಯಾಗುತ್ತದೆ.
ಹಿತ್ತಲಹಳ್ಳಿಯ ಬಳಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ನಿರ್ಮಾಣಕ್ಕೆ ಅಗತ್ಯವಾಗಿರುವ ಭೂಮಿಯ ದಾಖಲೆಗಳನ್ನು ಸಿದ್ದಪಡಿಸಿ, ಸರ್ಕಾರಕ್ಕೆ ಒದಗಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಡಿಪೋ ನಿರ್ಮಾಣಕ್ಕೆ ಅಗತ್ಯವಾಗಿರುವ ಅನುದಾನವನ್ನು ಮೀಸಲಿಡುವ ಭರವಸೆ ಇದೆ. ಅಗ್ನಿಶಾಮಕ ಠಾಣೆಗಾಗಿ ತಾಲ್ಲೂಕು ಕಚೇರಿಯ ಪಕ್ಕದಲ್ಲೆ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಲಾಗಿದ್ದು, ಮುಂದಿನ ೧೫ ದಿನಗಳಲ್ಲಿ ಅಗ್ನಿಶಾಮಕ ವಾಹನಗಳು ತಾಲ್ಲೂಕಿನ ಜನತೆಗೆ ಲಭ್ಯವಾಗಲಿವೆ ಎಂದರು.
ಅಬ್ಲೂಡು ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳ ಮಕ್ಕಳು ದುಬಾರಿ ಹಣವನ್ನು ಖರ್ಚು ಮಾಡಿಕೊಂಡು ಉದ್ಯೋಗಾಧಿಕಾರಿತ ಶಿಕ್ಷಣವನ್ನು ಪಡೆದುಕೊಳ್ಳಲು ದೂರದ ಊರುಗಳಿಗೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂತಹ ಕಟ್ಟಡಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಖಂಡ ಹುಜುಗೂರು ರಾಮಣ್ಣ ಮಾತನಾಡಿ, ತುಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವ್ಯಾಪ್ತಿಯಲ್ಲಿ ಸುಮಾರು ೧೧ ಹಳ್ಳಿಗಳು ಸೇರಿದ್ದು, ಅನಾರೋಗ್ಯವಾದರೆ, ಅನಿವಾರ್ಯವಾಗಿ ಶಿಡ್ಲಘಟ್ಟಕ್ಕೆ ಹೋಗಬೇಕಾಗುತ್ತಿದೆ. ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ, ಆದ್ದರಿಂದ ತ್ವರಿತವಾಗಿ ತುಮ್ಮನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ಕಾಲೇಜು ಸ್ಥಾಪನೆಯಾದ ನಂತರ ಇಲ್ಲಿಗೆ ಬಂದುಹೋಗುವಂತಹ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಸಾರಿಗೆ ವ್ಯವಸ್ಥೆಯನ್ನು ಅನುಕೂಲ ಮಾಡಿಕೊಡಬೇಕು ಎಂದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ಗೌಡ, ಚೀಮಂಗಲ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ಬಿ.ರಘು, ಮೇಲೂರು ತಾಲ್ಲೂಕು ಪಂಚಾಯತಿ ಸದಸ್ಯ ಮುನಿಯಪ್ಪ, ಹಂಡಿಗನಾಳ ಕ್ಷೇತ್ರದ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ, ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮಕದಿರಪ್ಪ, ಉಪಾಧ್ಯಕ್ಷ ಎಂ.ಸುರೇಂದ್ರ, ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎನ್.ರಘುನಾಥ್, ಜಂಗಮಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ಯೂನಿಯನ್ ನಿರ್ದೇಶಕ ತಾದೂರು ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಸ್ತೆಗಳ ಅಗಲೀಕರಣ – ಪರಿಹಾರವೇ?
ಇಂದು ನಾಡಿನ ಉದ್ದಗಲಕ್ಕೆ ಹರಡಿರುವ ಹಲವು ಬಗೆಯ ರಸ್ತೆಗಳ ಅಗಲೀಕರಣ ಅದಕ್ಕೆ ಸಂಬಂಧಿಸಿದಂತೆ ಜಾಗೆಯನ್ನು ಪಡೆಯುವ ಪ್ರಯತ್ನ ಮತ್ತು ಅವುಗಳ ಆಚೀಚೆ ಇರುವ ಕಟ್ಟಡಗಳ ನೆಲಸಮ, ಇವು ದಿನನಿತ್ಯದ ಸುದ್ದಿಗಳಾಗಿವೆ. ಈ ರಸ್ತೆಯನ್ನು ಇಷ್ಟು ಅಡಿ ಅಗಲ ಮಾಡಬೇಕು. ಆ ರಸ್ತೆಯನ್ನು ಅಷ್ಟು ಅಡಿ ಅಗಲಮಾಡಬೇಕು. ಟಾರ್ ಇಲ್ಲದ ರಸ್ತೆಗಳಿಗೆ ಟಾರ್ ಒರೆಸಬೇಕು. ಇದ್ದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಆಯ್ದ ಅಗಲ ರಸ್ತೆಗಳಿಗೆ ಕಾಂಕ್ರೀಟು ಹಾಕಿ ಗಟ್ಟಿಗೂಳಿಸಬೇಕು. ಇವು ಸರ್ಕಾರದ ಲೋಕೋಪಯೋಗಿ ಇಲಾಖೆಯಡಿಯ ಕಾರ್ಯಕ್ರಮ. ಅವುಗಳಿಗೆ ಸಾರ್ವಜನಿಕರಿಂದ ಒತ್ತಡ, ಒತ್ತಾಯ, ಮತ್ತೆ ಕೆಲವರಿಂದ ವಿರೋಧ, ಪ್ರತಿಭಟನೆ, ಸರಕಾರ ಒಮ್ಮೆ ಮನಸ್ಸು ಮಾಡಿದರೆ ಅದು ಯಾವುದಕ್ಕೂ ಜಗ್ಗುವುದಿಲ್ಲ. ಹಿಡಿದ ಕೆಲಸವನ್ನು ಪೂರೈಸುತ್ತದೆ. ಗುಣಮಟ್ಟದ ಕುರಿತಾದ ಮಾತು ಅಪ್ರಸ್ತುತ. ಅಂತೂ ನಾಡಿನೆಲ್ಲಡೆ ಸಂಪರ್ಕಕ್ಕೆ ಅನುಕೂಲವಾಗುವಂತಹ ರಸ್ತೆ ಕಾಮಗಾರಿಗಳು ಕಾಲದ ಹಂಗಿಲ್ಲದೆ ಭರದಿಂದ ಜರುಗುತ್ತಿರುವುದು, ನಿತ್ಯ ದೃಶ್ಯ. ರಸ್ತೆಗಳು ಹದಗೆಟ್ಟಿವೆ. ಈ ರಸ್ತೆಯಲ್ಲಿ ಸಾಗಿದರೆ ಸೊಂಟ ಸರಿಯಿರುವುದು ಕಷ್ಟ. ಇದರಲ್ಲಿ ವಾಹನಗಳ ಪಾರ್ಕಿಂಗ್‍ಗೆ ಜಾಗವೇ ಇಲ್ಲ. ಜನಗಳು ಓಡಾಡಲೂ ಕಷ್ಟ. ಇವೆಲ್ಲ ಪ್ರಯಾಣಿಕರು ಸದಾ ಎದುರಿಸುತ್ತಿರುವ ಅಣಿಮುತ್ತುಗಳು.
ನಿಜ. ಜನಗಳಿಗೆ ಓಡಾಡಲು ಒಳ್ಳೆಯ ರಸ್ತೆ ಬೇಕು. ಅದು ಉತ್ತಮ ಗುಣಮಟ್ಟದ್ದಾಗಿರಬೇಕು. ಒಂದು ಊರಿನಿಂದ ಇನ್ನೊಂದು ಊರಿಗೆ ಶೀಘ್ರವಾಗಿ ತಲುಪಲು ಉತ್ತಮ ರಸ್ತೆಗಳು ಅವಶ್ಯಕ. ಹಾಗೇ ವಾಹನಗಳ ದಟ್ಟಣೆಯನ್ನು ಗಮನಿಸಿ ರಸ್ತೆ ವಿಶಾಲಗೊಳ್ಳಬೇಕೆಂಬ ವಾದದಲ್ಲೂ ಹುರುಳಿದೆ. ಆದರೆ ಇದರ ಇನ್ನೊಂದು ಮುಖವನ್ನು ಗಮನಿಸುವುದೂ ಕೂಡ ಭವಿಷ್ಯದ ದೃಷ್ಟಿಯಿಂದ ಸೂಕ್ತ.
ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಒಂದೊಂದು ವಾಹನವನ್ನು ಹೊಂದಿರಲು ಹಾತೊರೆಯುತ್ತಾರೆ. ಕೆಲವರಂತೂ ಹಲವು ವಾಹನಗಳ ಒಡೆಯರೆಂದುಕೊಳ್ಳುವುದಕ್ಕೆ ಹೆಮ್ಮೆ ಪಡುತ್ತಾರೆ. ಅದಕ್ಕಾಗಿ ಅನೇಕ ಬಗೆಯ ಪ್ರಯತ್ನಗಳು, ಸಂಬಳದ ಉಳಿಕೆ, ವಾರ್ಷಿಕ ಆದಾಯದಲ್ಲಿ ಅದಕ್ಕೊಂದಿಷ್ಟು ಎಂದು ತೆಗೆದಿರಿಸುವುದು, ಹಾಗೇ ಸುಲಭ ಕಂತುಗಳಲ್ಲಿ ಲಭ್ಯವಾಗುವ ಸಾಲದ ಸೌಲಭ್ಯಗಳನ್ನು ಬಳಸಿಕೊಳ್ಳುವುದು. ಇದರಿಂದಾಗಿ ಇದು ಮನೆ ಮನೆಗಳಲ್ಲೂ ಬೈಕುಗಳು, ಕಾರುಗಳೂ ಇವೆ. ನಗರಗಳಲ್ಲಿಯ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಅಧಿಕ. ಹಳೆಯ ಎತ್ತಿನಗಾಡಿ, ಕುದುರೆಗಾಡಿ, ಸೈಕಲ್ಲುಗಳು ಕೂಡ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮಾತ್ರ ಎಂಬಂತೆ ಸರಕಾರ ಶಾಲಾ ಮಕ್ಕಳಿಗೆ ಉಚಿತ ಸೈಕಲ್ಲು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಪರಿಣಾಮವಾಗಿ ಮಾತ್ರ ಕೆಲವಷ್ಟು ಸೈಕಲ್ಲುಗಳು ಕಾಣುತ್ತವೆ. ಮತ್ತು ಹೀಗೆ ಸೈಕಲ್ಲುಗಳನ್ನು ಪಡೆದು ಕಲಿತ ಮಕ್ಕಳ ಮುಂದಿನ ಬೇಡಿಕೆ ಬೈಕು, ಸ್ಕೂಟಿ, ಕಾರು. ಹೀಗೆ ಇದು ಮುಂದುವರೆದರೆ ಮನೆ-ಮನೆಗಳಲ್ಲೂ ವಾಹನಗಳು. ಅವುಗಳು ರಸ್ತೆಗಿಳಿದರೆ ಯಾವ ರಸ್ತೆಯೂ ಸಾಲುವುದಿಲ್ಲ. ಎಷ್ಟೇ ಅಗಲ ಮಾಡಿದರೂ ಕಡಿಮೆ ಎನ್ನಿಸುತ್ತದೆ. ಮತ್ತೆ ಮತ್ತೆ ಈ ಕಾರಣಕ್ಕಾಗಿ ಅಗಲ ಮಾಡುತ್ತಲೇ ಸಾಗಿದರೆ ಮುಂದೆ ಒಂದು ದಿನ ಭೂಭಾಗದ ಬಹುತೇಕ ಪ್ರದೇಶಗಳು ಬರಿಯ ರಸ್ತೆಗಳೇ ಆಗಿಬಿಡಬಹುದು!
ಈಗಾಗಲೇ ಸಾಕಷ್ಟು ಅನಾಹುತಗಳಾಗಿವೆ. ರಸ್ತೆ ಬದಿಯ ಸಾಲು ಮರಗಳು ಹೋಗಿವೆ. ರೈತರ ಕೃಷಿಯೋಗ್ಯ ಭೂಮಿ ಕೂಡ ರಸ್ತೆಗಳ ಪಾಲಾಗಿದೆ. ರಸ್ತೆಗಳನ್ನು ಹೀಗೆ ಅಗಲಗೊಳಿಸುತ್ತಾ ಹೋಗುವ ಬದಲು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನೆ ಮಿತಿಗೊಳಿಸಿದರೆ ಹೇಗೆ? ಮನುಷ್ಯನ ಆರೋಗ್ಯಕ್ಕೆ ಮಾರಕವಾದ ಕಾರ್ಬನ್ ಮೊನೋಕ್ಸೆಡ್‍ನ ಪ್ರಮಾಣ ತಗ್ಗಿ ವಾಯುಮಾಲಿನ್ಯ ಇಳಿಮುಖವಾಗಲು ಸಾಧ್ಯ. ಜಾಗತಿಕ ತಾಪಮಾನ ತಗ್ಗಲು ಸಾಧ್ಯ. ಓಡಾಡುವವರು ಒಂದಿಷ್ಟು ನಿರಾಳವಾಗಿ ಓಡಾಡಬಹುದು. ಬಹು ಮುಖ್ಯವಾಗಿ ಈ ದೇಶದ ದೊಡ್ಡ ಮೊತ್ತದ ಸಂಪತ್ತು ವಾಹನಗಳಿಗೆ ಬಳಸುವ ಇಂಧನದ ಆಮದಿಗೆ ವೆಚ್ಚವಾಗುತ್ತಿದ್ದು ಅದು ಕಡಿಮೆಯಾದಷ್ಟು ದೇಶ ಶ್ರೀಮಂತವಾಗುವ ಸಾಧ್ಯತೆ ಇದೆ.
ದೇಶ ಮುಂದುವರಿಯುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆ ಕೂಡ ಅದಕ್ಕನುಪಾತದಲ್ಲಿ ಹೆಚ್ಚುವುದು ಅನಿವಾರ್ಯವೆಂದು ವಾದಿಸಲು ಸಾಧ್ಯ. ಆದರೆ ಹೀಗೂ ವಾದಿಸಬಹುದು. ವಿಪರೀತವಾದ ವಾಹನಗಳ ಸಂಖ್ಯೆ ತಗ್ಗಿಸವುದು, ಜನಸಂಖ್ಯೆಯನ್ನು ನಿಯಂತ್ರಿಸುವಷ್ಟೇ ಅಗತ್ಯ. ಅಂತಹಾ ಕಾರ್ಯಕ್ರಮಗಳನ್ನು ರೂಪಿಸಿದರೆ ನಷ್ಟವೇನಿಲ್ಲ. ಹಣವಿದೆ ಎಂಬುದಷ್ಟೇ ವಾಹನ ಖರೀದಿಗೆ ಅರ್ಹತೆಯಾಗ ಕೂಡದು. ಅದು ವ್ಯಕ್ತಿಗೆ ಅನಿವಾರ್ಯ ಅಗತ್ಯವೇ ಎಂದು ಗಮನಿಸಿ ಖರೀದಿಗೆ ಪರವಾನಗಿ ನೀಡುವುದು. ಅಗತ್ಯವಾದಂತೆ ವಾಹನ ಚಾಲನೆಗೆ ಆತ / ಆಕೆಗೆ ಪರವಾನÀಗಿ ನೀಡುವಾಗ ನಡೆಸುವ ಪರೀಕ್ಷೆ ಕೂಡ ಪಕ್ಕಾ ಆಗಿರುವಂತೆ ನೋಡಿಕೊಳ್ಳುವುದು, ಅನೇಕ ಅಪಾಯಗಳನ್ನು ತಪ್ಪಿಸುವ ಉಪಾಯವಾಗಬಲ್ಲದು. ಹಾಗೇ ಸರಕಾರ ಬಸ್ಸು ರೈಲುಗಳೆಲ್ಲ ಸರಿಯಾಗಿ ಸಕಾಲಕ್ಕೆ ಓಡಾಡುವಂತೆ ನೋಡಿಕೊಳ್ಳುವುದು ಮುಖ್ಯ. ನೌಕರರಿಗೆ ಸರಕಾರೀ ವಾಹನಗಳ ಸೌಲಭ್ಯ ಅನಿವಾರ್ಯವಾದಲ್ಲಿ ಮಾತ್ರ ನೀಡಬೇಕು. ಹಾಗೇ ಒಬ್ಬ ಅಧಿಕಾರಿಗೆ ನೀಡಿದ ವಾಹನದಲ್ಲಿ ಉಳಿದವರೂ ಪ್ರಯಾಣಿಸಲು ಸಾಧ್ಯವಾದ ಪಕ್ಷದಲ್ಲಿ ಅದನ್ನು ಕಡ್ಡಾಯಗೊಳಿಸಬೇಕು. ಒಬ್ಬೊಬ್ಬ ಅಧಿಕಾರಿ ಕೂಡ ಒಂದೊಂದು ವಾಹನ ಪಡೆದು, ಒಂದೆಡೆ ಹೋಗುವ ಬದಲು, ಎಲ್ಲರೂ ಒಂದೇ ವಾಹನದಲ್ಲಿ ಹೋಗಲು ಸಾಧ್ಯವಿದ್ದ ಕಡೆ ಆ ಏರ್ಪಾಡನ್ನು ಮಾಡಬೇಕು. ಒಬ್ಬೊಬ್ಬ ಮಂತ್ರಿ, ಶಾಸಕರು, ಅವರ ಅಧಿಕಾರಿಗಳು, ಹಿಂಬಾಲಕರು, ಎಲ್ಲ ತಲಾ ಒಂದೊಂದು ವಾಹನದಲ್ಲಿ ಒಂದೇ ಕಾರ್ಯಕ್ರಮಕ್ಕೆ ತೆರಳುವ ಕ್ರಮ ತಪ್ಪಿಸುವುದು ಒಳ್ಳೆಯದು. ವಾಹನದಲ್ಲಿನ ಆಸನದ ಸಂಖ್ಯೆಗೆ ಅನುಗುಣವಾಗಿಯೇ ಜನರನ್ನು ತುಂಬಿಕೊಂಡರೂ, ಬಹಳಷ್ಟು ವಾಹನಗಳ ಬಳಕೆ ತಪ್ಪಿಸಲು ಸಾಧ್ಯ.
ವಾಹನಗಳ ಖರೀದಿಯ ಮೇಲೆ ನಿಯಂತ್ರಣ ಹೇರುವುದು ಮುಖ್ಯ. ಅದಕ್ಕೆ ಕನಿಷ್ಟ ಅರ್ಹತೆಯನ್ನು ನಿಗದಿಮಾಡುವುದು ಒಳ್ಳೆಯದು. ನನ್ನಲ್ಲಿ ಹಣವಿದೆ, ನನಗೆ ಬೇಕಾದಂತೆ ಖರ್ಚು ಮಾಡುತ್ತೇನೆ, ನನಗೆ ಬೇಕಾದಷ್ಟು ಖರೀದಿಸಿ ಓಡಾಡುತ್ತೇನೆ, ಎಂಬುದು ಕೂಡ ತಪ್ಪು ಎಂದು ಸಾರಬೇಕು. ಹಣ ಅವರಲ್ಲಿ ಇರಬಹುದಾದರೂ ಅದು ಒಟ್ಟಾರೆ ದೇಶದ್ದು. ದೇಶದ ಹೊರಗಡೆ ಅದನ್ನು ಕಳಿಸಲು (ತೈಲೋತ್ಪನ್ನಗಳಿಗಾಗಿ) ಅಸಾಧ್ಯವೆಂದು ಕಾನೂನು ಮಾಡಿದರೆ ಹೇಗೆ? ಕಾನೂನು ಮಾಡುವವರು ಕೂಡ ಒಮ್ಮೆ ತಮ್ಮ ದರ್ಬಾರನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ‘ನನ್ನ ಹಣ, ನನ್ನ ಮೋಜು, ನನ್ನ ಸ್ವಾತಂತ್ಯ’, ಎಂಬ ಪರಿಕಲ್ಪನೆ ದೂರವಾಗಬೇಕು, ಅಥವಾ ದೂರಮಾಡಬೇಕು. ಹಾಗಿಲ್ಲದಿದ್ದಲ್ಲಿ ‘ನನ್ನ ಹಣ, ನನ್ನ ಮೋಜು, ನನ್ನ ಜೂಜು, ನನ್ನ ಹೆಂಡ, ನನ್ನ ಹೊಗೆ’, ಎಂದು ಪಟ್ಟು ಹಿಡಿದರೆ ಹೇಗೆ? ಒಂದೊಂದಕ್ಕೂ ಒಂದೊಂದು ನ್ಯಾಯವೆನ್ನುವುದು ಎಷ್ಟರ ಮಟ್ಟಿಗೆ ಸರಿ?
ದೇಶದ ಹಣ ದೇಶದಲ್ಲಿರಲಿ. ಅದು ಯಾವುದೇ ರೂಪದಲ್ಲಿ ಇರಲಿ, ಅನಾವಶ್ಯಕವಾಗಿ ಪರದೇಶಗಳಿಗೆ ಪೋಲಾಗುವುದಕ್ಕೆ ಬಿಡಬಾರದಲ್ಲ? ಇಲ್ಲಿನ ನೆಲ ಸೀಮಿತ. ಅದನ್ನು ಒತ್ತುವರಿ ಮಾಡಲಾಗುವುದಿಲ್ಲ. ಬರಿಯ ರಸ್ತೆಗಳನ್ನು ಮಾತ್ರ ಒತ್ತುವರಿ ಮಾಡುತ್ತಾ ಸಾಗಬಹುದು!. ಒಂದು ದಿನ ದೇಶದ ಭೂಪಟದ ತುಂಬ ರಸ್ತೆಗಳಷ್ಟೇ ಕಾಣಲು ಪ್ರಾರಂಭಿಸಿದರೆ ಕಷ್ಟ. ಚೈನಾ ತನ್ನ ರಾಷ್ಟೀಯ ವಾಹನವಾಗಿ ಸೈಕಲ್ಲನ್ನು ಕಡ್ಡಾಯವಾಗಿಸಿದ್ದು, ಅದರ ಆರ್ಥಿಕ ಬಲ ಹೆಚ್ಚಲು ಕಾರಣ ಎಂಬ ಅಭಿಪ್ರಾಯವಿದೆ. ಈಗ ಅಲ್ಲೂ ಅದು ಸಡಿಲಗೊಳ್ಳುತ್ತಿದೆ. ಎಂಬಂತಹ ವರ್ತಮಾನ ಕೇಳಿಬರುತ್ತಿದೆ. ಅದೇನೇ ಇದ್ದರೂ, ನಮಗೆ ಎಲ್ಲ ವಿಷಯಗಳಲ್ಲೂ ಮುಂದುವರಿದ ದೇಶಗಳಾದ ಅಮೇರಿಕಾ, ಜಪಾನ್‍ಗಳೇ ಆದರ್ಶಗಳಾಗಬೇಕಿಲ್ಲ. ನಮ್ಮಲ್ಲೂ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡಿದ್ದು ಸ್ತುತ್ಯಾರ್ಹ. ಹಾಗೇ ಉಳಿದವರಿಗೂ ಅದನ್ನೇ ಹೆಚ್ಚು ಹೆಚ್ಚಾಗಿ ಬಳಸಲು ಪ್ರೋತ್ಸಾಹಿಸಿದರೆ, ಇಂದಿನ ಉಳಿತಾಯವೂ ಹೌದು. ಪರಿಸರ ಮಾಲಿನ್ಯದಿಂದಲೂ ಮುಕ್ತಿ, ಮತ್ತು ಹಲವರ ಆರೋಗ್ಯವೂ ತನ್ನಿಂದ ತಾನೇ ಸುಧಾರಿಸಿತು. ಮುಖ್ಯವಾಗಿ ಎಲ್ಲ ಶಾಲೆ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸೈಕಲ್ ಮಾತ್ರ ತರಬಹುದು. ಉಳಿದ ಯಾವುದೇ ಬಗೆಯ ವಾಹನಗಳನ್ನು ತರುವಂತಿಲ್ಲ ಎಂದು ತಿಳಿಸಬೇಕು. (ಕೆಲವು ಶಿಕ್ಷಣ ಸಂಸ್ಥೆಗಳು ಈ ರೀತಿ ತಿಳಿಸಿವೆ ಎಂದು ಪತ್ರಿಕೆಗಳಲ್ಲಿ ಓದಿದ ನೆನಪು.) ಹದಿನೆಂಟು ವರ್ಷಕ್ಕೆ ನೀಡುವ ಚಾಲನಾ ಪರವಾನಗಿಯನ್ನು ಇಪ್ಪತ್ತೊಂದು ವರ್ಷಕ್ಕೆ ಏರಿಸಿದರೆ, ಎಷ್ಟೋ ವಾಹನಗಳ ಅನಾವಶ್ಯಕ ಓಡಾಟ ತಪ್ಪಿಸಬಹುದು.
ಮುಖ್ಯವಾಗಿ ಆಗಬೇಕಾಗಿದ್ದು, ನಮ್ಮ ದೃಷ್ಟಿಕೋನದಲ್ಲಿನ ಮಾರ್ಪಾಡು. ಅದು ವಿಶಾಲವಾಗಿ ಯೋಚಿಸುವಂತಾಗಬೇಕೇ ವಿನಃ ರಸ್ತೆಗಳು ವಿಶಾಲವಾಗುವತ್ತ ಸಾಗುತ್ತಲೇ ಹೋಗುವುದಲ್ಲ. ವಾಹನ ನಮ್ಮದಾಗಿರಬಹುದು ಹಣವೂ ನಮ್ಮಲ್ಲಿ ಇರಬಹುದು ಹಾಗಂತ ಅನಾವಶ್ಯಕವಾಗಿ ವಾಹನವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಳ್ಳಬೇಕು. ಒಬ್ಬನೇ ಅಥವಾ ಇಬ್ಬರು ಹೋಗುವುದಿದ್ದರೆ ಬೈಕು ಸಾಕು. ಕಾರು-ಜೀಪು ಯಾಕೆ ಬೇಕು?. ನಡೆದು ಹೋಗುವ ದೂರಕ್ಕೆ ವಾಹನದ ಅಗತ್ಯವಿದೆಯೇ? ಎರಡು ಮೂರು ಫರ್ಲಾಂಗ್ ನಡೆಯಲಾಗದೆ ವಾಹನಕ್ಕೆ ಮೊರೆಹೋಗುವ ಅದೆಷ್ಟೋ ಮಂದಿ ಬೆಳಗಿನ ಜಾವ, ಸಂಜೆ, ವ್ಯಾಯಾಮದ ಹೆಸರಿಲ್ಲಿ ಕಿಲೋಮೀಟರ್‍ಗಟ್ಟಲೆ ವಾಕಿಂಗ್ ಮಾಡುವುದಿಲ್ಲವೇ? ವಾಕಿಂಗ್‍ಗೆ ಆಗದ ದೂರ ಆಫೀಸಿಗೆ ಆಗುವುದು ಎಂದರೆ ಹೇಗೆ?
ನಮ್ಮ ನೈಸರ್ಗಿಕ ಸಂಪತ್ತಿಗೂ ಒಂದು ಮಿತಿಯಿದೆ. ನಮ್ಮ ಬಕಾಸುರ ನೀತಿಗೆ ಇಂದಲ್ಲ ನಾಳೆ ಅದು ಬರಿದಾದರೆ, ನಾಡಿದ್ದು ಏನು ಗತಿ? ಇಂದೇ ಯೋಚಿಸಬೇಕು. ಈ ದೇಶದ ಸಂಪತ್ತಿನ ಉಳಿವಿಗೆ ಮತ್ತು ಈ ಪ್ರಪಂಚದ ಸಂಪತ್ತಿನ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಪಡುವುದೇ ಹೌದಾದಲ್ಲಿ ಅದರ ಮೊದಲ ಮೆಟ್ಟಿಲಾಗಿ ವಾಹನಗಳ ಬಳಕೆಯ ಮೇಲೆ ನಿಯಂತ್ರಣ ಸಾಧ್ಯವಾಗಬೇಕು. ನಮ್ಮ ಇಂದಿನ ಮೋಜು, ಸ್ವಚ್ಛಂದ ಪ್ರವೃತ್ತಿ, ಭವಿಷ್ಯದ ಜನರ ಕನಿಷ್ಟ ಬದುಕಿನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಾರದೆಂಬ ಕಟ್ಟೆಚ್ಚರ ಅಗತ್ಯ.
ರವೀಂದ್ರ ಭಟ್ ಕುಳಿಬೀಡು
ಶುದ್ಧ ನೀರಿನ ಘಟಕ ಸ್ಥಾಪನೆ
ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಗ್ರಾಮದಲ್ಲಿ ೧೨ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಭಾನುವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಲುಷಿತ ನೀರಿನ ಸೇವನೆಯಿಂದ ಗ್ರಾಮೀಣ ಭಾಗದ ಬಹುತೇಕ ಜನ ವಿವಿಧ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ತಾಲ್ಲೂಕಿನ ಎಂಟು ಗ್ರಾಮಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕಗಳು ಉದ್ಘಾಟನೆಗೆ ಸಿದ್ದವಾಗಿವೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು, ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ಗ್ರಾಮಸ್ಥರು ಸಹಕರಿಸಬೇಕು. ಪ್ರತಿಯೊಬ್ಬರೂ ಶುದ್ಧ ನೀರಿನ ಸೇವನೆ ಮಾಡುವುದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ತಾಲ್ಲೂಕಿನ ಪೈಯಲಹಳ್ಳಿ, ಹರಳಹಳ್ಳಿ ಹಾಗೂ ತಾತಹಳ್ಳಿ ಗ್ರಾಮದಲ್ಲಿ ಎಸ್ಸಿಪಿ ಹಾಗು ಟಿಎಸ್ಪಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ಭಾನುವಾರ ನೆರವೇರಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರಾದ ಕೆ.ಬಿ.ಮಂಜುನಾಥ, ಆಂಜಿನಪ್ಪ, ಕರಗಪ್ಪ, ರಂಗಪ್ಪ, ಸುಬ್ಬಣ್ಣ, ಆನಂದ್, ಪುನೀತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ವೋತ್ತಮ ಸೇವಾ ಪ್ರಶಸ್ತಿ
ಶಿಡ್ಲಘಟ್ಟದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಯ ರೇಷ್ಮೆ ಪ್ರವರ್ತಕ ಎನ್.ಕೆ.ಗುರುರಾಜರಾವ್ ಅವರು ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಿನಪೂರ್ತಿ ನಡೆದ ಸಂಗೀತ ಮಹೋತ್ಸವ
ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀ ಮಾರುತಿ ಸಂಗೀತ ಅಕಾಡೆಮಿ ವತಿಯಿಂದ ಪುರಂದರಸಾಸರು, ತ್ಯಾಗರಾಜ ಸ್ವಾಮಿ, ಕನಕದಾಸರು, ಯೋಗಿ ನಾರೇಯಣ ಯತೀಂದ್ರರು ಹಾಗೂ ವಾಗ್ಗೇಯಕಾರರ ಆರಾಧನ ಸಂಗೀತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
‘ಪುರಾತನ ಕಾಲದಿಂದಲೂ ನಮ್ಮ ಸಮಾಜದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಯುವ ಪೀಳಿಗೆಗೆ ಸಂಗೀತವನ್ನು ಕಲಿಸುತ್ತಾ ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮಾರುತಿ ಸಂಗೀತ ಅಕಾಡೆಮಿಯು ಶ್ರಮಿಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳು ತ್ಯಾಗರಾಜರ ಮತ್ತು ಯೋಗಿನಾರಾಯಣ ಯತೀಂದ್ರರ ಕೀರ್ತನೆಗಳನ್ನು ಹಾಡಿ ಗಮನ ಸೆಳೆಯುವರು’ ಎಂದು ವಿದ್ವಾನ್ ಜಗದೀಶ್ ಕುಮಾರ್ ತಿಳಿಸಿದರು.
ಸಂಗೀತ ಮಹೋತ್ಸವಕ್ಕೆ ವಿವಿಧ ಕಡೆಯಿಂದ ಆಗಮಿಸಿದ್ದ ವಿದ್ವಾಂಸರು ಹಾಗೂ ಮಕ್ಕಳಿಂದ ದಿನಪೂರ್ತಿ ವಿಶೇಷ ಸಂಗೀತ ಗಾಯನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಾರುತಿ ಸಂಗೀತ ಅಕಾಡೆಮಿ ಅಧ್ಯಕ್ಷ ಸೋಮಶೇಖರ್, ಸಂಗೀತ ಶಿಕ್ಷಕಿ ಮಂಜುಳ, ಪಿಟೀಲು ವಿದ್ವಾನ್ ಜಗದೀಶ್ ಕುಮಾರ್, ಮೃದಂಗ ವಾದಕ ಅಶ್ಥಥನಾರಾಯಣಚಾರ್ ಮತ್ತು ಸಂಗೀತ ಕಲಾಭಿಮಾನಿಗಳು ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಯವರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮಾನಸಿಕ ಸ್ಥೈರ್ಯ ತುಂಬಿದರು. ಪೋಷಕರೊಂದಿಗೆ ಮಾತನಾಡಿ ಮಕ್ಕಳಿಗೆ ಮನೆ ಕೆಲಸದ ಹೊರೆ ಕಡಿಮೆ ಮಾಡಿ, ಟೀವಿ ಹಾಕಬೇಡಿ, ಮುಂಜಾನೆ ಎಬ್ಬಿಸಿ ಓದಲು ಹೇಳಿ ಎಂದು ತಿಳಿಸಿದರು. ಶಿಕ್ಷಕರಾದ ಎಂ.ಎಸ್.ಈರಯ್ಯ, ಬೈರಾರೆಡ್ಡಿ, ನಾರಾಯಣಸ್ವಾಮಿ, ಮಂಜುನಾಥ, ಲೋಕೇಶ ಹಾಜರಿದ್ದರು.
ಅಭಿವೃದ್ಧಿ ಕಾಮಗಾರಿಯನ್ನು ಉಪೇಕ್ಷಿಸಬೇಡಿ
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೆ ಅಭಿವೃದ್ಧಿ ಕಾಮಗಾರಿಯನ್ನು ಉಪೇಕ್ಷಿಸದೆ, ಸಾರ್ವಜನಿಕ ಆಸ್ತಿ ಎನ್ನುವ ಮನೋಭಾವ ಎಲ್ಲಾ ಗ್ರಾಮಸ್ಥರು ಮೂಡಿಸಿಕೊಳ್ಳಬೇಕಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಮ್ಮನಹಳ್ಳಿ ಹಾಗೂ ಮಲ್ಲಿಶೆಟ್ಟಿಪುರ ಗ್ರಾಮಗಳಲ್ಲಿ ಶುಕ್ರವಾರ ಎಸ್ಸಿಪಿ ಯೋಜನೆಯಡಿ ತಲಾ ೬ ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಭಾಗಿತ್ವ ಸಂಪೂರ್ಣವಾಗಿ ಇದ್ದಾಗ ಮಾತ್ರವೇ ಸರ್ಕಾರದ ಯಾವುದೆ ಯೋಜನೆ ಯಶಸ್ಸಾಗಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೇ ಯೋಜನೆಯಾಗಲಿ ಯಶಸ್ವಿಯಾಗದು ಎಂದರು.
ತಾಲ್ಲೂಕಿನಾದ್ಯಂತ ಇನ್ನೂ ಬಹಳಷ್ಟು ಅಭಿವೃದ್ಧಿಯ ಕೆಲಸಗಳು ಆಗಬೇಕಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ನರಸಿಂಹಯ್ಯ, ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಎಂ.ಸುರೇಂದ್ರ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಧ್ಯಯನ ಪ್ರವಾಸಕ್ಕೆ ಹೊರಟ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು
ಹೈನುಗಾರಿಕೆಯು ಬಯಲು ಸೀಮೆಯ ಬಹುತೇಕ ಜನರ ಆರ್ಥಿಕ ಚೇತರಿಕೆಗೆ ಕಾರಣವಾಗಿದೆ ಎಂದು ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಅಧ್ಯಯನ ಪ್ರವಾಸಕ್ಕೆ ಕೋಟೆ ವೃತ್ತದ ಶ್ರೀರಾಮ ದೇವಾಲಯದ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಂತರ್ಜಲ ಕುಸಿದು, ನೀರಿಗೆ ಅಭಾವವಿದ್ದರೂ ರೈತರು ಶ್ರಮಜೀವಿಗಳಾಗಿದ್ದು, ಹಾಲಿನ ಹೊಳೆ ಹರಿಸುವ ಮೂಲಕ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಇರುವಂತೆ ಹೈನುಗಾರಿಕೆಯ ಕ್ಷೇತ್ರದಲ್ಲೂ ಇದೆ. ವಿಜ್ಞಾನ ತಂತ್ರಜ್ಞಾನದ ಅಳವಡಿಕೆ ಅತ್ಯಗತ್ಯವಾಗಿದೆ. ಈ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ. ಹೀಗಾಗಿ ಅಧ್ಯಯನ ಪ್ರವಾಸಕ್ಕೆ ಕಳುಹಿಸುತ್ತಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಗುಣಮಟ್ಟದ ಹಾಲು ಉತ್ಪಾದನೆ, ರಾಸುಗಳ ಸಾಕಣೆ, ಮೇವು ನಿರ್ವಹಣೆ, ಕೊಟ್ಟಿಗೆ ನಿರ್ವಹಣೆ ಮುಂತಾದ ವಿಷಯಗಳ ಕುರಿತಂತೆ ಪ್ರವಾಸದಲ್ಲಿ ತಿಳಿಸಿಕೊಡಲಾಗುವುದು ಎಂದು ಪ್ರವಾಸದ ವಿಷಯ ಮತ್ತು ಉದ್ದೇಶಗಳನ್ನು ವಿವರಿಸಿದರು.
ತಾಲ್ಲೂಕಿನ 45 ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ತಂಡವನ್ನು ಮಂಗಳೂರು ಡೈರಿಗೆ ಅಧ್ಯಯನಕ್ಕೆಂದು ಕಳುಹಿಸಲಾಯಿತು.
ಕೋಚಿಮುಲ್ ಶಿಡ್ಲಘಟ್ಟ ಶಿಬಿರದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಉಮೇಶ್ ರೆಡ್ಡಿ, ಮಂಜುನಾಥ್, ಆನಂದ್, ಮುನೇಗೌಡ, ಕುಮ್ಮಣ್ಣ, ಸಿದ್ದೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೊತ್ತನೂರು ಸಮಸ್ಯೆಗಳು
ಒಂದೆಡೆ ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದರೆ, ಮತ್ತೊಂದೆಡೆ ರಸ್ತೆ ಒತ್ತುವರಿ ಕಾರ್ಯ ನಡೆದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಾಲ್ಲೂಕಿನ ಕೊತ್ತನೂರಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ದುಬಾರಿ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ನಿರ್ಮಿಸಲಾಗಿರುವ ರಸ್ತೆ ಹಾಗೂ ಚರಂಡಿಗಳನ್ನು ದುರುಪಯೋಗ ಪಡಿಸಿಕೊಂಡು ಒತ್ತುವರಿ ಮಾಡಲಾಗಿದೆ. ರಸ್ತೆಗಳಲ್ಲಿ ಕಸ, ಮಣ್ಣಿನ ರಾಶಿ ಸುರಿಯಲಾಗಿದೆ. ಚರಂಡಿ ಮೇಲೆ ಅನಧಿಕೃತ ನಿರ್ಮಾಣಗಳು, ರಸ್ತೆಗಳಲ್ಲಿ ಸಿಮೆಂಟ್ ಹಾಕಿದ್ದರೂ ಕಿತ್ತುಹಾಕಿ ಗಿಡಗಳನ್ನು ನೆಟ್ಟಿರುವುದು ತೆರವುಗೊಳಿಸಬೇಕು. ಚರಂಡಿಗಳು ತ್ಯಾಜ್ಯದಿಂದ ತುಂಬಿ ತುಳುಕುತ್ತಾ ಅನಾರೋಗ್ಯ ಹೆಚ್ಚುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾಧಿಕಾರಿಗಳಿಗೂ ಲಿಖಿತ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಕ.ರ.ವೇ ಸಂಚಾಲಕ ನಾರಾಯಣಪ್ಪ ದೂರಿದರು.

