Home Blog Page 476

ರಾಷ್ಟ್ರಮಟ್ಟದ ಗಣಿತ ಒಲಂಪಿಯಾಡ್ ಸ್ಫರ್ಧೆಯಲ್ಲಿ ವಿಜೇತರು

0

ಪಾಠದ ಜೊತೆಗೆ ಪಾಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದಾಗ ಮಕ್ಕಳ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಲು ಸಹಕಾರಿಯಾಗುತ್ತದೆ ಎಂದು ಡಾಲ್ಫಿನ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎ.ನಾಗರಾಜ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಗಣಿತ ಶಿಕ್ಷಕರ ಸಂಘದಿಂದ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಗಣಿತ ಒಲಂಪಿಯಾಡ್ ಸ್ಫರ್ಧೆಯಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂಧಿಸಿ ಅವರು ಮಾತನಾಡಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯ, ೨ನೆ ತರಗತಿಯ ಕೀರ್ತನಾಳಿಗೆ ಬೆಸ್ಟ್ ಮ್ಯಾಥಮೆಟಿಕ್ ಸ್ಟೂಡೆಂಟ್ ಅವಾರ್ಡ್ ಸೇರಿದಂತೆ ಒಂಬತ್ತು ವಿದ್ಯಾರ್ಥಿಗಳು ಬಂಗಾರದ ಪದಕಗಳನ್ನು ಪಡೆದಿದ್ದು ಎಲ್ಲರನ್ನೂ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರವಾಗಿ ಅಭಿನಂದಿಸಲಾಯಿತು.
ರಾಷ್ಟ್ರಮಟ್ಟದಲ್ಲಿ ಕೇಂದ್ರೀಯ ಶಿಕ್ಷಣ ಪಠ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ನಡೆಸಿದ ಗಣಿತ ಸ್ಫರ್ಧೆಯಲ್ಲಿ ಡಾಲ್ಫಿನ್ ಶಾಲೆಯ ೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ ೨ನೇ ತರಗತಿಯ ಕೀರ್ತನಾಳು ೧೦೦ಕ್ಕೆ ನೂರು ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಗಣಿತ ವಿದ್ಯಾರ್ಥಿ ಎಂಬ ಬಿರುದಿಗೆ ಪಾತ್ರಳಾಗಿದ್ದು ನೆನಪಿನ ಕಾಣಿಕೆ, ಪ್ರಮಾಣ ಪತ್ರ ಹಾಗೂ ಬಂಗಾರದ ಪದಕ ನೀಡಿ ಗೌರವಿಸಲಾಯಿತು.
ಶಾಲೆಯ ೯ ವಿದ್ಯಾರ್ಥಿಗಳು ೯೦ ಅಂಕಗಳನ್ನು ಪಡೆದಿದ್ದು ಬಂಗಾರದ ಪದಕಗಳನ್ನು ಪಡೆದಿದ್ದಾರೆ. ಕೀರ್ತನಾ ಸೇರಿದಂತೆ ಬಹುಮಾನ ಪಡೆದ ಅನಿರುದ್, ತರುಣ್, ಮೊಹಮದ್, ದರ್ಶನ್, ಜಯಂತ್, ವೀಕ್ಷಿತ, ರಿಫತ್ ಬೇಗಂ, ಅನೀಷ್ರವರನ್ನು ಶಾಲೆಯಲ್ಲಿ ಬಹುಮಾನ ನೀಡಿ ಅಭಿನಂದಿಸಲಾಯಿತು.
ಶಾಲೆಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಪ್ರಾಂಶುಪಾಲ ಥಾಮಸ್ ಫಿಲಿಪ್ಸ್ ಸೇರಿದಂತೆ ಬಹುಮಾನ ಪಡೆದ ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಗಾಂಡ್ಲಚಿಂತೆಯಲ್ಲಿ ಶಾಲಾ ವಾರ್ಷಿಕೋತ್ಸವ

0

ತಾಲ್ಲೂಕಿನ ಗಾಂಡ್ಲಚಿಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಉತ್ತರಕರ್ನಾಟಕದ ಜನಪದ ನೃತ್ಯಗಳಾದ ಕೊಂಕಣದ ಜಾಲಿಗರು, ಕೋಲಾಟ, ಸುಗ್ಗಿ ಮುಂತಾದ ನೃತ್ಯಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಗ್ರಾಮಸ್ಥರೆಲ್ಲ ಕಾರ್ಯಕ್ರಮದಲ್ಲಿ ಹಾಜರಿದ್ದು ಮಕ್ಕಳ ವಿವಿಧ ಚಟುವಟಿಕೆಗಳು, ಸಾಂಸ್ಕೃತಿಕ ನೃತ್ಯ, ನಾಟಕಗಳನ್ನು ನೋಡಿ ಆನಂದಿಸಿದರು.
ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಭೋಜನವನ್ನು ಏರ್ಪಡಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳೊಂದಿಗೆ ಪೋಷಕರು ಒಬ್ಬಟ್ಟು ಊಟವನ್ನು ಸವಿದುದು ವಿಶೇಷವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲೆಯಲ್ಲಿ 11 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ ಲಕ್ಷ್ಮಣರೆಡ್ಡಿ ಅವರನ್ನು ಸನ್ಮಾನಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲೆಯಲ್ಲಿ 11 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ ಲಕ್ಷ್ಮಣರೆಡ್ಡಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ 11 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ ಲಕ್ಷ್ಮಣರೆಡ್ಡಿ ಅವರನ್ನು ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಸ್.ದೇವರಾಜ, ಸಿ.ಆರ್.ಪಿ ಶಿವಪ್ಪ, ಬೈರಾರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ ಮುರಳಿ, ಗಂಗಪ್ಪ, ಮುಖ್ಯ ಶಿಕ್ಷಕ ಮಂಜುನಾಥ್, ಶಿಕ್ಷಕರಾದ ಮಂಜುನಾಥ್, ಯಶಸ್ವಿ, ಗೀತಾ, ಚಂದ್ರಶೇಖರ್, ಗಜೇಂದ್ರ, ಬಾಬು, ಸೇವಾದಳ ವೆಂಕಟರೆಡ್ಡಿ, ಎಸ್.ಎನ್.ಶ್ರೀನಿವಾಸಪ್ಪ, ಮುಖಂಡರಾದ ಸತ್ಯನಾರಾಯಣಪ್ಪ, ದೇವರೆಡ್ಡಿ ಮತ್ತಿತರರು ಹಾಜರಿದ್ದರು.

ಅಂಬೇಡ್ಕರ್ ವಿಚಾರಧಾರೆ ವಿದ್ಯಾರ್ಥಿಗಳಿಗೆ ಅತ್ಯಗತ್ಯ

0

ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರ ವಿಚಾರಧಾರೆ ಸಾರ್ವಕಾಲಿಕ ಮತ್ತು ಮನುಕುಲಕ್ಕೆ ಪೂರಕವಾದದ್ದು ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ‘ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ವಿಷಯದ ಕುರಿತಂತೆ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್ ಅಧ್ಯಯನ ಕೇಂದ್ರವು ‘ಯುವಕರು ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಎಂಬ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ನಿಜವಾದ ಪ್ರಜಾತಾಂತ್ರಿಕ ಸಮಾಜವನ್ನು ರೂಪಿಸಲು ನೆರವಾಗುವ ಅಂಬೇಡ್ಕರ್ ಅವರ ಕೆಲವು ಮೂಲ ಬರಹಗಳನ್ನು ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಆರಾಧನೆ ಮಾಡಿದರೆ ಸಾಲದು, ಅವರ ವಿಚಾರಗಳನ್ನು ಮತ್ತು ಪ್ರಸ್ತುತತೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ನಮಗೆ ಅಗತ್ಯವಾಗಿರುವ ಜಾತ್ಯಾತೀತ ಮೌಲ್ಯಗಳುಳ್ಳ ಜೀವಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬೇಕಾದ ಚಳುವಳಿಯ ವಿಸ್ತಾರವನ್ನು ಪಡೆಯಲು ಅವರ ಸಮಗ್ರ ಚಿಂತನೆಯ ಮರುಮಂಥನ ನಡೆಯಬೇಕಿದೆ ಎಂದರು.
‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಎಂಬ ಅಂಬೇಡ್ಕರ್ ಅವರ ಕೃತಿಯ ಕುರಿತಂತೆ ಪಿಎಚ್ಡಿ ವಿದ್ಯಾರ್ಥಿ ಬೈರಪ್ಪ ಉಪನ್ಯಾಸ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಾನಾಯಕ್, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ವಿ.ವೆಂಕಟೇಶ್, ಜನಾರ್ಧನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆ

0

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 574 ವಿದ್ಯಾರ್ಥಿಗಳು ಬರೆದರು.
ಇತಿಹಾಸ ಮತ್ತು ಗಣಕ ವಿಜ್ಞಾನದ ಪರೀಕ್ಷೆಗಳಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತೊಂದರೆಯಾಗದಂತೆ ಎಲ್ಲಾ ರೀತಿಯ ಅನುಕೂಲವನ್ನೂ ಮಾಡಿರುವುದಾಗಿ ಮುಖ್ಯ ಅಧೀಕ್ಷಕ ಚಿತ್ತಯ್ಯ ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಾಗಿ 19 ಕೊಠಡಿಗಳನ್ನು ಬಳಸುತ್ತಿದ್ದು, 7 ಕಾಲೇಜುಗಳ ವಿದ್ಯಾರ್ಥಿಗಳಿಲ್ಲಿ ಬಂದು ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತಿಯೊಂದು ಕೊಠಡಿಗೂ ಮೇಲ್ವಿಚಾರಕರಿದ್ದಾರೆ. ಇದಲ್ಲದೆ ಸ್ಕ್ವಾಡ್ ಸಹ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಇ–ಹರಾಜು ಅಡ್ಡಿಪಡಿಸಲು ಯತ್ನ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಈಚೆಗೆ ಇ–ಹರಾಜು ಪ್ರಾರಂಭವಾಗಿದ್ದು, ಶನಿವಾರ ಕೆಲವರು ಗುಂಪುಗೂಡಿ ಬಂದು ಇ–ಹರಾಜು ನಿಲ್ಲಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ ಘಟನೆ ನಡೆಯಿತು. ಪೊಲೀಸರ ಸಹಾಯದಿಂದ, ರೈತರು ಹಾಗೂ ರೀಲರುಗಳ ಮುಖಂಡರ ಬೆಂಬಲದಿಂದ ಅಧಿಕಾರಿಗಳು ಇ–ಹರಾಜನ್ನು ಮುಂದುವರೆಸಿದರು.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ರೀಲರುಗಳು ಮತ್ತು ರೈತ ಮುಖಂಡರು ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಂಬಂಧಪಡದ ರೀಲರ್ ಲೈಸೆನ್ಸ್ ಹೊಂದಿಲ್ಲದವರನ್ನು ಹೊರಕ್ಕೆ ಕಳುಹಿಸುವಂತೆ ಒತ್ತಾಯಿಸಿ, ಇ–ಹರಾಜು ನಡೆಸಲು ಅಧಿಕಾರಿಗಳಿಗೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ, ‘ಹಲವು ವರ್ಷಗಳಿಂದ ಪಾರದರ್ಶಕವಾಗ ಹರಾಜು ವ್ಯವಸ್ಥೆಗೆ ಆಗ್ರಹಿಸುತ್ತಿದ್ದೆವು. ಸರ್ಕಾರ ಈಗ ಇ–ಹರಾಜನ್ನು ತಂದಿದೆ. ಇ–ಹರಾಜು ಪ್ರಕ್ರಿಯೆ ಅತ್ಯಂತ ಪಾರದರ್ಶಕವಾದುದು. ಇದರಿಂದ ರೀಲರುಗಳಲ್ಲದವರು ಮಾರುಕಟ್ಟೆಯಲ್ಲಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬದುಕು ಕಂಡುಕೊಂಡಿದ್ದ ಮಧ್ಯವರ್ತಿಗಳು ಈಗ ಈ ಹೊಸ ಪದ್ಧತಿಯಿಂದ ಕಂಗಾಲಾಗಿದ್ದಾರೆ. ಟ್ರೇಗಳನ್ನು ಹಿಡಿದಿಡುವುದು, ರೇಷ್ಮೆ ಗೂಡನ್ನು ರೀಲರುಗಳಲ್ಲದವರು ಹರಾಜು ಕೂಗುವುದು ಸೇರಿದಂತೆ ಹಲವಾರು ಅವ್ಯವಸ್ಥೆಗಳಿದ್ದವು. ಈಗ ರೀಲರುಗಳ ಮತ್ತು ರೈತರ ಶ್ರಮ ಮಧ್ಯವರ್ತಿಗಳ ಪಾಲಾಗುವುದು ನಿಂತಿದೆ. ರೈತರು ಮತ್ತು ರೀಲರುಗಳು ಹೊಸ ಪದ್ಧತಿಗೆ ಹೊಂದಿಕೊಳ್ಳಲು ಕೆಲ ದಿನಗಳು ಬೇಕು. ರೀಲರುಗಳು ಮತ್ತು ರೈತರು ಅಧಿಕಾರಿಗಳಿಗೆ ಸಹಕರಿಸಿದಲ್ಲಿ ಈ ಪದ್ಧತಿಯಿಂದ ಅನುಕೂಲವಾಗುತ್ತದೆ. ಇದು ಇನ್ನೂ ಸುಧಾರಿಸಿ ರೀಲರುಗಳು ನೀಡುವ ಹಣವು ನೇರವಾಗಿ ರೈತರ ಬ್ಯಾಂಕಿನ ಅಕೌಂಟಿಗೆ ಹೋಗುವ ಹಾಗಾಗಬೇಕು’ ಎಂದು ಹೇಳಿದರು.
ರೇಷ್ಮೆ ಮಾರುಕಟ್ಟೆಯ ಜಂಟಿ ನಿರ್ದೇಶಕ ಪ್ರಭಾಕರ್, ಅಧಿಕಾರಿ ರತ್ನಯ್ಯಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೀಲರುಗಳಾದ ಅಬ್ದುಲ್ ಅಜೀಜ್, ರಾಮಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಇಲ್ಲ

0

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಕೆ.ಎನ್.ವೆಂಕಟನಾರಾಯಣ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಜಿಲ್ಲಾ ಕೇಂದ್ರಗಳಲ್ಲಿ ನಡೆಯ ಬೇಕಿದ್ದ ಚುನಾವಣೆಯು ನಡೆಯುವುದಿಲ್ಲ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ವಾಸುದೇವರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 13 ರಂದು ಮಹಾಸಭೆಯ ಅಧ್ಯಕ್ಷರ ಚುನಾವಣೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಮಾರ್ಚ್ 20 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದುದು ಈಗ ಇರುವುದಿಲ್ಲ. ಆದರೆ ಮಹಾಸಭೆಯ ಸರ್ವಸದಸ್ಯರ ಸಭೆ ಮಾತ್ರ ಈಗಾಗಲೇ ನಿಗದಿಪಡಿಸಿರುವಂತೆ ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ವಿಭಾಗ ಮಟ್ಟದ ಸರ್ಕಾರಿ ನೌಕರರ ಸಮಾವೇಶ

0

ಸಾಮಾನ್ಯ ಜನರೊಂದಿಗೆ ಬೆರೆತು ಅವರಿಗೆ ಉತ್ತಮವಾದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಾರ್ಚ್ ೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಹರ್ಷೋದಯ ಕನ್ವೆಂಷನ್ ಹಾಲ್ನಲ್ಲಿ ಬೆಂಗಳೂರು ವಿಭಾಗ ಮಟ್ಟದ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಿ ನೌಕರರ ವೇತನ ಮಾದರಿಯಲ್ಲೆ ರಾಜ್ಯ ಸರ್ಕಾರಿ ನೌಕರರಿಗೆ ವೇತನವನ್ನು ಜಾರಿಗೊಳಿಸಿ, ತಾರತಮ್ಯ ನೀತಿಯನ್ನು ತೊಲಗಿಸಬೇಕು. ವೇತನ ಆಯೋಗವನ್ನು ರದ್ದುಗೊಳಿಸಬೇಕು. ದೇಶದ ೨೪ ರಾಜ್ಯಗಳಲ್ಲಿ ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೆ ರಾಜ್ಯ ಸರ್ಕಾರಿ ನೌಕರರಿಗೂ ವೇತನವನ್ನು ನೀಡಲಾಗುತ್ತಿದ್ದು, ರಾಜ್ಯ ಸರ್ಕಾರವು ಆರ್ಥಿಕ ಪರಿಸ್ಥಿತಿಯಲ್ಲಿ ೭ ನೇ ಸ್ಥಾನದಲ್ಲಿದೆ. ಬಜೆಟ್ನಲ್ಲಿ ವೇತನಕ್ಕಾಗಿ ಪ್ರತ್ಯೇಕವಾಗಿ ಅನುದಾನ ಮೀಸಲಿಡಬೇಕು, ಸರ್ಕಾರಿ ನೌಕರರು ವಾರ್ಷಿಕವಾಗಿ ೬,೫೦೦ ಕೋಟಿ ರೂಪಾಯಿಗಳ ತೆರಿಗೆಯನ್ನು ಪಾವತಿ ಮಾಡುತ್ತಿದ್ದೇವೆ. ಜನವರಿ ೨೦೧೬ ರಿಂದ ಪೂರ್ವಾನ್ವಯವಾಗುವಂತೆ ವೇತನ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ, ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಸಮಾವೇಶಕ್ಕೆ ತಾಲ್ಲೂಕಿನಿಂದ ೪೦೦ ಮಂದಿ ನೌಕರರು ಭಾಗವಹಿಸಲಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ ಓ.ಓ.ಡಿಗೆ ಮನವಿ ಸಲ್ಲಿಸಲಾಗಿದ್ದು, ಓ.ಓ.ಡಿ.ನೀಡದಿದ್ದರೆ, ಸಾಮೂಹಿಕ ರಜೆಯನ್ನು ಹಾಕಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಕೋರಿದರು.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸುಬ್ಬಾರೆಡ್ಡಿ, ಕೇಶವರೆಡ್ಡಿ, ಅಕ್ಕಲರೆಡ್ಡಿ, ಲಲಿತಮ್ಮ, ಬಿ.ವಿ.ಶ್ರೀರಾಮಯ್ಯ, ಪದ್ಮಾವತಿ, ವೀಣಾ, ಅಂಗಪ್ಪ, ರಾಮಚಂದ್ರಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭ

0

ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿಕೊಂಡಿರುವ ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಇ-ಹರಾಜು ಪ್ರಾರಂಭವಾಯಿತು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರು ೫೦ ರಿಂದ ೬೦ ಟನ್ನಷ್ಟು ಗೂಡು, ರಾಜ್ಯ ಹಾಗೂ ಹೊರರಾಜ್ಯದಿಂದ ಬರುತ್ತಿದ್ದು, ರೈತರು ರೇಷ್ಮೆ ಗೂಡನ್ನು ಹಾಕಲು ಜಾಲರಿಗಳಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಮಂದಿ ಮಧ್ಯವರ್ತಿಗಳು ಜಾಲರಿಗಳಿಗಾಗಿ ರೈತರಿಂದ ಹಣವನ್ನು ತೆಗೆದುಕೊಂಡು ಬಿಟ್ಟುಕೊಡುತ್ತಿದ್ದ ದೂರುಗಳು ಹೆಚ್ಚಾಗಿ ರೈತರಿಂದ ಕೇಳಿ ಬರುತ್ತಿತ್ತು. ಈ ಸಮಸ್ಯೆಗಳನ್ನು ದೂರ ಮಾಡಲು ಪ್ರಾಥಮಿಕ ಹಂತವಾಗಿ ರಾಮನಗರ ಹಾಗೂ ಕೊಳ್ಳೆಗಾಲದಲ್ಲಿ ಇ-ಹರಾಜು ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗಿತ್ತು.
‘ಇ-ಹರಾಜಿನಲ್ಲಿ ರೀಲರುಗಳು ತಮ್ಮ ಮೊಬೈಲ್ಗಳ ಮೂಲಕ ಸ್ಕ್ರೀನ್ ಮೇಲೆ ಬರುವಂತಹ ಲಾಟುಗಳ ಸಂಖ್ಯೆ ಹಾಗೂ ಅದಕ್ಕೆ ಸಿಕ್ಕಿರುವ ದರಗಳನ್ನು ಆಧಾರ ಮಾಡಿಕೊಂಡು ಹರಾಜು ಮಾಡುತ್ತಾರೆ. ಹರಾಜು ಮುಗಿದ ನಂತರ ಒಂದು ಗಂಟೆಗಳ ಕಾಲ ಇ-ಹರಾಜು ನಿಲ್ಲಿಸಿ, ರೈತರ ಬಳಿಗೆ ಹೋಗಿ ದರಗಳು ಸಮಾಧಾನಕರವಾಗಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ರೈತರು ಒಪ್ಪಿಗೆ ಸೂಚಿಸಿದ ನಂತರವೇ ಅಂತಹ ಗೂಡನ್ನು ತೂಕ ಮಾಡಲು ತೆಗೆದುಕೊಂಡು ಹೋಗಲಾಗುತ್ತದೆ. ಪುನಃ ಎರಡನೇ ಬಾರಿಗೆ ಇ-ಹರಾಜು ಪ್ರಾರಂಭ ಮಾಡಲಾಗುತ್ತದೆ. ಈ ಹಂತದಲ್ಲೂ ಹರಾಜು ಮುಗಿದ ನಂತರ ಇಲಾಖೆಯ ಅಧಿಕಾರಿಗಳು ಹೋಗಿ ದರಗಳನ್ನು ಖಚಿತ ಪಡಿಸಿಕೊಂಡ ನಂತರವೇ ಗೂಡನ್ನು ತೂಕಕ್ಕೆ ಕಳುಹಿಸಲಾಗುತ್ತದೆ, ಒಂದು ವೇಳೆ ಎರಡೂ ಹರಾಜುಗಳಲ್ಲಿ ರೈತರು ಒಪ್ಪಿಗೆ ನೀಡದಿದ್ದಲ್ಲಿ ಗೂಡಿನ ಗುಣಮಟ್ಟದ ಹಾಗೂ ಮಾರುಕಟ್ಟೆಯಲ್ಲಿ ಹರಾಜಾದ ದರಗಳ ಆಧಾರದ ಮೇಲೆ ರೈತರ ಮನವೊಲಿಸಿ ಗೂಡನ್ನು ತೂಕ ಮಾಡಿಸಿ, ರೈತರಿಗೆ ಹಣವನ್ನು ಒದಗಿಸಲಾಗುತ್ತದೆ’ ಎಂದು ಜಂಟಿ ನಿರ್ದೇಶಕ ಪ್ರಭಾಕರ್ ತಿಳಿಸಿದರು.
ಮೊದಲ ಬಾರಿಗೆ ಇ-ಹರಾಜಿನಲ್ಲಿ ಭಾಗವಹಿಸಿದ್ದ ರೀಲರುಗಳು ಗೊಂದಲಕ್ಕೆ ಈಡಾಗುವಂತಾಯಿತು, ಕೆಲವು ರೀಲರುಗಳು ತಮ್ಮ ಮೊಬೈಲ್ಗಳ ಮೂಲಕ ಗೂಡಿಗೆ ದರನಿಗದಿಪಡಿಸುವಾಗ ನೂರು ರೂಪಾಯಿಗಳಷ್ಟು ದರವನ್ನು ಹೆಚ್ಚಿಗೆ ನೀಡಿ ಪೇಚಿಗೆ ಸಿಲುಕಿಕೊಂಡರು. ಹೆಚ್ಚು ದರಗಳನ್ನು ನೀಡಿರುವುದನ್ನು ಗಮನಿಸಿದ ರೈತರ ಮುಖದಲ್ಲಿ ಸಂತಸ ಕಂಡು ಬಂದರೆ, ರೀಲರುಗಳು ಕೈ ತಪ್ಪಿನಿಂದಾಗಿ ಆಗಿರುವ ತೊಂದರೆಗೆ ಅಧಿಕಾರಿಗಳ ಮೊರೆ ಹೋಗಿದ್ದರು. ಪ್ರಥಮವಾಗಿ ಪ್ರಾರಂಭವಾಗಿರುವುದರಿಂದ ಇಂತಹ ಗೊಂದಲಗಳು ಸಹಜವೆಂದು ರೈತರನ್ನು ಪುನಃ ಮನವೊಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದರು.
ಕಾವೇರಿ ಗೋಡನ್ನಲ್ಲಿ ಹರಾಜು ಪ್ರಾರಂಭವಾಗಿ ೧೫ ನಿಮಿಷಗಳು ಕಳೆದರೂ ಕೂಡಾ ವೈ.ಫೈ.ಕೆಲಸ ಮಾಡದೇ ರೀಲರುಗಳು ಸ್ವಲ್ಪಸಮಯ ಗಲಿಬಿಲಿಗೆ ಒಳಗಾಗಬೇಕಾಯಿತು. ಇದನ್ನರಿತ ಇಲಾಖೆಯ ಅಧಿಕಾರಿಗಳು ತಕ್ಷಣ ಕಂಟ್ರೋಲ್ ರೂಂಗೆ ಬಂದು, ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಫಲರಾದರು. ಮುಂದಿನ ದಿನಗಳಲ್ಲಿ ಕಂಟ್ರೋಲ್ ರೂಂನಲ್ಲಿ ಕುಳಿತು ಹರಾಜಿನ ಸಮಯಕ್ಕೆ ಸರಿಯಾಗಿ ಈ ರೀತಿಯ ಸಮಸ್ಯೆಗಳನ್ನು ಮಾಡಿದರೆ, ಎಲ್ಲಿ ಸಮಸ್ಯೆಯಾಗುತ್ತದೆಯೋ ಅಲ್ಲಿನ ರೈತರಿಗೆ ಅನ್ಯಾಯವಾಗುವುದಿಲ್ಲವೇ ಎಂದು ತಮ್ಮ ತಮ್ಮಲ್ಲೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು.
ದೇವನಹಳ್ಳಿ ತಾಲ್ಲೂಕಿನ ರೇಷ್ಮೆ ಸಹಾಯಕ ನಿರ್ದೇಶಕ ಬೋಜಣ್ಣ, ವಿಜಯಪುರ ಮಾರುಕಟ್ಟೆಯ ಉಪನಿರ್ದೆಶಕ ದಾದಾನೂರ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ತಾದೂರು ಮಂಜುನಾಥ್, ಎಸ್.ಎಂ.ರವಿಪ್ರಕಾಶ್, ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಿಂದ ಅಧಿಕಾರಿಗಳು ಆಗಮಿಸಿದ್ದರು.

ಕುಂದಲಗುರ್ಕಿ ಗ್ರಾಮದಲ್ಲಿ ಪಿಂಚಣಿ ಅದಾಲತ್

0

ಸರ್ಕಾರದಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ವಿಫಲವಾಗಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಲು ಪಿಂಚಣಿ ಅದಾಲತ್ ಸಹಕಾರಿಯಾಗಿದೆ ಎಂದು ಶಿರಸ್ತೇದಾರ್ ಲಕ್ಷ್ಮಿಕಾಂತಮ್ಮ ಹೇಳಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಅಂಗವಿಕಲರಿಗೆ ಮಾಸಿಕ ವೇತನ ಸೇರಿದಂತೆ ವಿಧವಾ ವೇತನ, ವೃದ್ದಾಪ್ಯ ವೇತನ ಹಾಗು ಮನಸ್ವಿನಿ ಯೋಜನೆಯ ಸವಲತ್ತು ಪಡೆಯಲು ನಾಗರಿಕರು ಪ್ರತಿನಿತ್ಯ ಕಚೇರಿಗೆ ಅಲೆಯುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅದಾಲತ್ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಿಂಚಣಿಗೆ ಸಂಬಂದಿಸಿದಂತೆ ೩೧ ಅರ್ಜಿಗಳನ್ನು ಜನರಿಂದ ಸ್ವೀಕರಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಪೈಕಿ ೨೬ ಅರ್ಜಿಗಳು ಮಂಜೂರಾತಿಗೆ ಸಿದ್ದವಾಗಿದ್ದು ಮುಂದಿನ ಹತ್ತು ದಿನಗಳೊಳಗೆ ಇವರಿಗೆ ಆದೇಶಪ್ರತಿ ನೀಡಲಾಗುವುದು. ಉಳಿದಂತೆ ಐದು ಅರ್ಜಿಗಳ ಫಲಾನುಭವಿಗಳು ಪಿಂಚಣಿಗೆ ಅರ್ಹರಲ್ಲದ ಕಾರಣ ವಜಾ ಗೊಳಿಸಲಾಗಿದೆ ಎಂದು ತಿಳಿಸಿದರು.
ರಾಜಸ್ವ ನಿರೀಕ್ಷಕ ಸುಬ್ರಮಣಿ, ಗ್ರಾಮಲೆಕ್ಕಾಧಿಕಾರಿ ನಾಗರಾಜು, ಸಿಬ್ಬಂದಿ ಕೋಮಲ, ರಮೇಶ್, ಮಂಜುಳ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಂಗನವಾಡಿ ಕಾರ್ಯಕರ್ತೆಗೆ ರಾಜ್ಯಪ್ರಶಸ್ತಿ

0

ತಾಲ್ಲೂಕಿನ ಕನ್ನಮಂಗಲ ಅಂಗನವಾಡಿ ಕಾರ್ಯಕರ್ತೆ ಎನ್.ಪದ್ಮಾವತಿ ಅವರಿಗೆ ರಾಜ್ಯಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಮತ್ತು ಪುರಸ್ಕಾರ ಸರ್ಕಾರದಿಂದ ಲಭಿಸಿದೆ.
ಅಂಗನವಾಡಿಯಲ್ಲಿ ಗೋಡೆಬರಹ, ಸುಭಾಷಿತ, ಚಾರ್ಟ್ ತಯಾರಿಸಿ ಕಲಿಕೆಗೆ ಬಳಸಿರುವುದಲ್ಲದೆ, ಮಕ್ಕಳಿಗಾಗಿ ಶಿಶುಶಿಕ್ಷಣ, ಶಿಶುಗೀತೆ ಮತ್ತು ಕಥೆ ಪುಸ್ತಕ ತಯಾರಿಸಿದ್ದಾರೆ. ಗ್ರಾಮಸ್ಥರಿಂದ, ದಾನಿಗಳಿಂದ ಮಕ್ಕಳಿಗೆ ಉಪಯುಕ್ತ ಆಟದ ಸಾಮಾನುಗಳನ್ನು ಪಡೆದು ಬಳಸುತ್ತಾ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಸುಮಾರು 24 ವರ್ಷಗಳಿಂದ ಕನ್ನಮಂಗಲ ಅಂಗನವಾಡಿ ಕಾರ್ಯಕರ್ತೆಯಾಗಿರುವ ಎನ್.ಪದ್ಮಾವತಿ ಅವರ ಕಾರ್ಯಪ್ರಗತಿಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಎನ್.ಪದ್ಮಾವತಿ ಅವರಿಗೆ ಪ್ರಶಸ್ತಿ ಮತ್ತು 5,000 ರೂಗಳ ಚೆಕ್ ನೀಡಿ ಗೌರವಿಸಿದ್ದಾರೆ.

ಹುಂಡಿ ಹಣ ತೆಗೆಯಲು ಗ್ರಾಮಸ್ಥರ ವಿರೋಧ

0

ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಹುಂಡಿ ಹಣ ತೆಗೆಯಲು ಹೋದ ತಾಲ್ಲೂಕು ಆಡಳಿತ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದು, ತಹಶೀಲ್ದಾರ್ ಮತ್ತು ಅಧಿಕಾರಿಗಳು ಹಿಂದಿರುಗಿದ ಘಟನೆ ಬುಧವಾರ ನಡೆದಿದೆ.
ಪುರಾಣ ಪ್ರಸಿದ್ಧ ಗಂಗಾದೇವಿಯ ಜಾತ್ರಾ ಮಹೋತ್ಸವ, ಕರಗ, ಅನ್ನಸಂತರ್ಪಣೆ ಮುಂತಾದವು ಜಿಲ್ಲೆಗೇ ಪ್ರಸಿದ್ಧವಾಗಿದೆ. ಈ ದೇವಿಯ ಭಕ್ತವೃಂದ ಸಾಕಷ್ಟಿದ್ದು, ಪ್ರತೀ ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ನಡೆಯುವ ವಿಶೇಷ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅನ್ನದಾನವೂ ನಡೆಯುತ್ತದೆ.
ಸಾಕಷ್ಟು ಹುಂಡಿ ಹಣ ಈ ದೇಗುಲದಲ್ಲಿ ಶೇಖರಣೆಯಾಗುತ್ತದೆ. ಈ ದೇವಾಲಯ ಮುರಾಯಿ ಇಲಾಖೆಗೆ ಸೇರಿ ವರ್ಷ ಕಳೆದಿದೆ. ಆದರೆ ಕಳೆದ ವರ್ಷ ಅಧಿಕಾರಿಗಳು ಬಂದು ಹಣವನ್ನು ತೆಗೆದುಕೊಂಡು ಹೋದರು, ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ದೇವಸ್ಥಾನದಲ್ಲಿ ನಡೆಯುವ ರಥೋತ್ಸವ, ಜಾತ್ರೆಯನ್ನು ಅಧಿಕಾರಿಗಳು ಈ ಬಾರಿ ಯಾವುದೇ ರೀತಿಯಲ್ಲೂ ನಿರ್ವಹಣೆ ಮಾಡಿಲ್ಲ. ಗ್ರಾಮಸ್ಥರು ಮತ್ತು ಭಕ್ತರು ಸೇರಿ ವಿಜೃಂಭಣೆಯಿಂದ ನಡೆಸಿದರು. ಅಧಿಕಾರಿಗಳ ನಿರ್ವಹಣೆಯಿಲ್ಲದೆ ಈ ಬಾರಿ ರಥಸಪ್ತಮಿ ಪೂಜೆ ನಿಲ್ಲುವಂತಾಯಿತು. ಕಳೆದ ಬಾರಿ ಹುಂಡಿಯಿಂದ ಸುಮಾರು ಎರಡು ಲಕ್ಷ ಎಪ್ಪತ್ತೈದು ಸಾವಿರ ರೂಗಳು ಮತ್ತು ದೇವರಿಗೆ ಅರ್ಪಿಸಿರುವ ಸೀರೆಗಳ ಹರಾಜಿನಿಂದ 38 ಸಾವಿರ ರೂಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು. ಇದರ ಜೊತೆಯಲ್ಲಿ ಬ್ಯಾಂಕಿನಲ್ಲಿ ನಿತ್ಯಪೂಜೆಗೆಂದು ಭಕ್ತರು ಕೊಟ್ಟ ಹಣವೂ ಮುಜರಾಯಿಗೆ ಸೇರಿತು.
ಆದರೆ ಈಗ ನಿತ್ಯ ಪೂಜೆಯೂ ನಿಂತಿದೆ, ವಿಶೇಷ ಪೂಜೆಗಳೂ ನಿಂತಿವೆ. ಕೇವಲ ಹಣ ತೆಗೆದುಕೊಂಡು ಹೋಗಲು ಮಾತ್ರ ಅಧಿಕಾರಿಗಳು ಬರುತ್ತಾರೆ. ದೇವಸ್ಥಾನದ ಆಗುಹೋಗುಗಳು, ಪೂಜೆ ಪುನಸ್ಕಾರಗಳು, ಅಭಿವೃದ್ಧಿ ಯಾವುದಕ್ಕೂ ತಲೆಹಾಕುವುದಿಲ್ಲ. ನಮ್ಮ ಗ್ರಾಮದೇವತೆಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸುತ್ತೇವೆ. ಈ ಮೊದಲಿದ್ದಂತೆ ಟ್ರಸ್ಟ್ ಜವಾಬ್ದಾರಿಗೆ ಬಿಟ್ಟುಬಿಡಿ. ಸುಸೂತ್ರವಾಗಿ ನಾವು ನಡೆಸಿಕೊಂಡು ಹೋಗುತ್ತೇವೆ. ನೀವು ಅಧಿಕಾರ ವಹಿಸಿಕೊಂಡಾಗಿನಿಂದ ಈ ದೇಗುಲದ ಅಭಿವೃದ್ಧಿ, ಪೂಜೆಯ ಬಗ್ಗೆ ಏನೂ ಕ್ರಮ ಕೈಗೊಳ್ಳದೆ, ದೇವಾಲಯಕ್ಕೆ ಮುಜರಾಯಿ ಸಮಿತಿ ಕೂಡ ರಚಿಸದೆ ಈಗ ಹುಂಡಿ ಹಣಕ್ಕೆ ಹೇಗೆ ಬಂದಿದ್ದೀರಿ ಎಂದು ಗ್ರಾಮಸ್ಥರು ತಹಶೀಲ್ದಾರ್ ಮನೋರಮಾ ಹಾಗೂ ಡಿ.ಟಿ.ಒ ರಾಮಕೃಷ್ಣಪ್ಪ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದರು.
ಗ್ರಾಮಸ್ಥರ ಆಕ್ರೋಷಕ್ಕೆ ಉತ್ತರಿಸಲಾಗದೇ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಹಿಂದಿರುಗಿದರು.
ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ, ಗ್ರಾಮದ ಮುಖಂಡರಾದ ರಾಮಕೃಷ್ಣಪ್ಪ, ಆರ್.ಎ.ಉಮೇಶ್, ಬಿ.ಎಮ್.ಶ್ರೀನಿವಾಸರೆಡ್ಡಿ, ಕೆ.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಧರ್ಮೇಂದ್ರ, ಸುದರ್ಶನ್, ಸುಧೀರ್, ಎಂ.ಡಿ. ನಾರಾಯಣಸ್ವಾಮಿ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಗುಡಿಹಳ್ಳಿಯಲ್ಲಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಗುಡಿಹಳ್ಳಿಯ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮನ್ಮಥನಾಮ ಸಂವತ್ಸರ ಮಾಘ ಮಾಸ ಬಹುಳ ಮಂಗಳವಾರದ ಅಭಿಜನ್ನ ಮಹೂರ್ತದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಕೆ.ಎಂ.ಮನೋರಮಾ ಚಾಲನೆ ನೀಡಿದರು.

ಪೋಟಿ ವೇಷ, ತಮಟೆ, ಡೋಲು ಮೆರವಣಿಗೆಯಲ್ಲಿದ್ದು, ಆಕರ್ಷಣೀಯವಾಗಿತ್ತು.
ಪೋಟಿ ವೇಷ, ತಮಟೆ, ಡೋಲು ಮೆರವಣಿಗೆಯಲ್ಲಿದ್ದು, ಆಕರ್ಷಣೀಯವಾಗಿತ್ತು.

ಶುಕ್ರವಾರದಿಂದ ಒಂದು ವಾರದ ಕಾಲ ನಡೆಯುವ ಪೂಜಾವಿಧಿಗಳಲ್ಲಿ ಮಂಗಳವಾರ ವಿಶೇಷವಾಗಿತ್ತು. ದೇವರನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ರಥವನ್ನೂ ಸಿಂಗರಿಸಿ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗೆ ಪೂಜೆಯನ್ನು ನೆರವೇರಿಸಿ ಭಕ್ತರು ರಥವನ್ನು ಎಳೆದರು. ದವನ ಸಿಕ್ಕಿಸಿರುವ ಬಾಳೆಹಣ್ಣನ್ನು ರಥದೆಡೆಗೆ ಎಸೆದು ಭಕ್ತಿಯಿಂದ ಪ್ರಾರ್ಥಿಸಿದರು.
ಪೋಟಿ ವೇಷ, ತಮಟೆ, ಡೋಲು ಮೆರವಣಿಗೆಯಲ್ಲಿದ್ದು, ಆಕರ್ಷಣೀಯವಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ನಡೆಸಲಾಯಿತು.
ಆಗಮಿಕರಾದ ಗಣೇಶ್ ದೀಕ್ಷಿತ್, ಗ್ರಾಮಸ್ಥರಾದ ಚನ್ನಕೃಷ್ಣಪ್ಪ, ಜಿ.ವಿ.ಮುನಿವೆಂಕಟಸ್ವಾಮಿ, ನರಸಿಂಹಮೂರ್ತಿ, ವೆಂಕಟರೆಡ್ಡಿ, ದೇವರಾಜ್, ಜಿ.ಎನ್.ನಾರಾಯಣಸ್ವಾಮಿ, ಶ್ರೀರಾಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಹಿಳಾ ಮೀಸಲಾತಿ ಸದ್ಭಳಕೆ ಮಾಡಿಕೊಳ್ಳಿ

0

ಮೀಸಲಾತಿಯ ಸ್ವಾತಂತ್ರ್ಯವನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಎನ್. ಶ್ರೀಕಂಠ ಹೇಳಿದರು.
ನಗರದ ಸ್ರೀ ಶಕ್ತಿ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರಿಗಾಗಿ ಶೇ. ೫೦ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದ್ದರೂ ಕೂಡಾ ಮಹಿಳೆಯರಿಗೆ ನೀಡುತ್ತಿರುವ ಸ್ವಾತಂತ್ರ್ಯವನ್ನು ಪುರುಷರು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮಹಿಳೆಯರು ಆಡಳಿತ ನಡೆಸುವುದಕ್ಕೆ ಅಡ್ಡಿಯಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡರೆ, ಸಮಾಜದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ, ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಿರುವುದರಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ಮಹಿಳೆಯರು, ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಸುಧಾರಣೆ ತರಬಹುದು ಎಂದರು.
ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ ಮಾತನಾಡಿ, ಮಹಿಳೆಯರು ಕುಟುಂಬಗಳ ನಿರ್ವಹಣೆಗಷ್ಟೆ ಸೀಮಿತವಾಗದೆ, ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ಮಕ್ಕಳಿಗೆ ಮೌಲ್ಯಾಧಾರಿತವಾದ ಶಿಕ್ಷಣವನ್ನು ಕೊಡಿಸುವುದರ ಜೊತೆಗೆ ಆರ್ಥಿಕವಾಗಿ ಸಬಲರಾಗುವ ಕಡೆಗೆ ಹೆಚ್ಚು ಗಮನಹರಿಸಬೇಕು. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು. ಪೌಷ್ಟಿಕ ಆಹಾರವನ್ನು ಒದಗಿಸಿ ಆರೋಗ್ಯವಂತರಾಗಿ ಜೀವಿಸುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕುಟುಂಬಕ್ಕೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವತ್ತ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಜಾಗೃತಿ ಮೂಡಿಸುವುದರಿಂದ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬಹುದಾಗಿದೆ. ಹೆಣ್ಣು ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಉನ್ನತಸ್ಥಾನಗಳನ್ನು ಅಲಂಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಒಟ್ಟು ಕುಟುಂಬ ಮತ್ತು ಪಿತ್ರಾರ್ಜಿತ ಆಸ್ತಿಗಳಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳು ಹಾಗೂ ಕಾನೂನಿನಡಿಯಲ್ಲಿ ಮಹಿಳೆಯರಿಗಿರುವ ಸೌಲಭ್ಯಗಳ ಕುರಿತು, ವಕೀಲೆ ಲಕ್ಷ್ಮಮ್ಮ ಮಹಿಳೆಯರಿಗೆ ಜಾಗೃತಿ ಮೂಡಿಸಿದರು.
೨೦೧೫-–೧೬ ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಅಂಗನವಾಡಿ ಶಿಕ್ಷಕಿಯರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ತಹಶೀಲ್ದಾರ್ ಕೆ.ಎಂ.ಮನೋರಮಾ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ ಮುಂತಾದವರು ಹಾಜರಿದ್ದರು.

ಇ ಬ್ಯಾಂಕಿಂಗ್‍ಗೆ ಗಾಳ ಹಾಕುವ ಖದೀಮರ `ಫಿಶಿಂಗ್'

0

ಕೆಲ ದಿನಗಳಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಗ್ರಾಹಕರ ನೊಂದಾಯಿತ ಮೊಬೈಲ್‍ಗಳಿಗೆ ಒಂದು ಎಸ್‍ಎಂಎಸ್ ಸಂದೇಶ ಪದೇ ಪದೇ ಬರುತ್ತಿದೆ, `ನಾವು ನಿಮ್ಮಿಂದ ಯೂಸರ್‍ನೇಮ್, ಪಾಸ್‍ವರ್ಡ್ ಮತ್ತು ಖಾತೆಯ ಯಾವುದೇ ಇತರ ಮಾಹಿತಿಗಳನ್ನು ಇ ಮೈಲ್ ಅಥವಾ ಫೋನ್ ಕರೆ, ಎಸ್‍ಎಂಎಸ್ ಮೂಲಕ ಕೇಳುವುದಿಲ್ಲ. ಅಂತಹ ನಕಲಿ ಪ್ರಯತ್ನಗಳತ್ತ ಜಾಗೃತೆಯಿರಲಿ’. ಒಂದು ಅಧ್ಯಯನದ ಪ್ರಕಾರ, ಬ್ಯಾಂಕಿಂಗ್ ಕನ್ನಕೋರರು ಒಂದು ಖಾತೆಯ ಮೇಲೆ ಧಾಳಿ ನಡೆಸಿದರೆ ಒಮ್ಮೆಗೆ ಕನಿಷ್ಟ 15 ಲಕ್ಷ ಗುಳುಂ ಮಾಡುತ್ತಾರೆ!
2008ರ ವೇಳೆಯಲ್ಲಿಯೇ ಅಹ್ಮದಾಬಾದ್‍ನ ಸೈಬರ್‍ರೂಂ ಎಂಬ ಕಂಪನಿ ಗ್ರಾಹಕರ ಇ-ಬ್ಯಾಂಕಿಂಗ್‍ನೊಳಗೆ ತೂರಿ ಖಾತೆಗೆ ಕನ್ನ ಕೊರೆಯುವರ ಕುರಿತು ಎಚ್ಚರಿಕೆ ನೀಡಿತ್ತು. ಆಗ ವ್ಯಾಪಕವಾಗಿ ಅಂತರ್ಜಾಲ ಬ್ಯಾಂಕಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ವಂಚನೆಗೊಳಗಾಗುವವರ ಸಂಖ್ಯೆ ಕಡಿಮೆಯಿತ್ತು. ಸೈಬರ್‍ರೂಂ ಇ-ಹಣಕಾಸು ಸುರಕ್ಷತೆಯ ವ್ಯವಸ್ಥೆಗಳ ಕುರಿತಾಗಿಯೇ ಕೆಲಸ ಮಾಡುತ್ತಿರುವುದಾಗಿ ಅದರ ಅಧ್ಯಕ್ಷ ನಿಖಿಲ್ ಜೈನ್ ಪ್ರಕಟಿಸಿದ್ದರು. ಅವತ್ತು ಅವರು ತಮ್ಮ ಕಂಪನಿಯ ವ್ಯಾಪಾರ ಬೆಳೆಯಲು ಹೆದರಿಸಿದ್ದರು ಎಂದು ಸಂಶಯಿಸಬಹುದಾದರೂ ಈಗ ಅಪಾಯ ನಮ್ಮ ನಿಮ್ಮ ಕಂಪ್ಯೂಟರ್ ಒಳಗೇ ನುಸುಳಿದೆ. ಈ ವಂಚನೆಯ ವ್ಯವಹಾರಕ್ಕೆ ಚಂದವಾಗಿ `ಫಿಶಿಂಗ್’ ಎನ್ನುತ್ತಾರೆ. ಇಲ್ಲಿ ನಾವೇ ಗಾಳ ಹಾಕಿಸಿಕೊಂಡ ಮೀನು!
ಅಂತರ್ಜಾಲದಲ್ಲಿ `ನಿಮಗೆ ಒಂದು ಲಕ್ಷ ಡಾಲರ್ ಬಹುಮಾನ ಬಂದಿದೆ, 72 ಇಂಚಿನ ಪ್ಲಾಸ್ಮಾ ಟಿವಿ ಗೆದ್ದಿದ್ದೀರಿ ಎಂಬ ವಂಚನೆಗಳು ಇ-ಬ್ಯಾಂಕಿಂಗ್ ಬಳಸುವ ಪ್ರಾಜ್ಞರಿಗೆ ತಿಳಿಯುತ್ತದೆ ಎಂದುಕೊಳ್ಳೋಣ. ಫಿಶಿಂಗ್‍ಗೆ ತುತ್ತಾಗುವವರು ಇದೇ ಬುದ್ಧಿವಂತರು ಎಂಬುದು ಸಂಶಯಾತೀತ. ಪುಟ್ಟ ಉದಾಹರಣೆಯೆಂದರೆ, ನಿಮ್ಮ ವ್ಯವಹಾರದ ಬ್ಯಾಂಕ್‍ನಿಂದ ಅಂದರೆ ಅದರ ಹೆಸರನ್ನು ಬಳಸಿದ ಐಡಿಯಿಂದ ಮೈಲ್ ಬರುತ್ತದೆ. ಯಾವುದೋ ಕಾರಣ ಹೇಳಿ ಪ್ರಸ್ತುತದ ನಿಮ್ಮ ಯೂಸರ್‍ನೇಮ್, ಪಾಸ್‍ವರ್ಡ್‍ನ್ನು ಬ್ಯಾಂಕ್‍ಗೆ ಒದಗಿಸಿ ಎನ್ನುತ್ತಾರೆ. ಕೊಟ್ಟಿರಿ ಎಂದರೆ ಕೆಟ್ಟಿರಿ!
ಸಾಮಾನ್ಯವಾಗಿ ಇಂತಹ ಮೈಲ್‍ನಲ್ಲಿ ಕೆಲವು ಲಿಂಕ್‍ಗಳಿರುತ್ತವೆ. ಕ್ಲಿಕ್ ಮಾಡಿ ಆ ವೆಬ್‍ಸೈಟ್‍ಗೆ ಹೊಕ್ಕಾಗ ಅಲ್ಲಿ ಸರಳವಾಗಿ, ನಿಮ್ಮ ಪಾಸ್‍ವರ್ಡ್ ಅವಧಿ ಮುಗಿದಿದೆ. ಬದಲಿಸಿ ಎಂಬ ಸೂಚನೆಯ ಜೊತೆಗೆ ಅಗತ್ಯ ವ್ಯವಸ್ಥೆಯೂ ಅಲ್ಲಿ ಕಾಣುತ್ತದೆ. ಮೋಸ! ಪಾಸ್‍ವರ್ಡ್ ಬದಲಾಗದಿರಬಹುದು, ಆದರೆ ನಿಮ್ಮ ಚಾಲ್ತಿಯದ್ದು ಕನ್ನಕೋರರಿಗೆ ಲಭ್ಯವಾಗಿರುತ್ತದೆ. ಖಾತೆಯಲ್ಲಿ ಹಣವಿದ್ದರೆ ಗೋವಿಂದ……..
ಎಸ್‍ಎಂಎಸ್ ಉಪಯೋಗಿಸಿ ಕೂಡ ನಿಮ್ಮನ್ನು ಪಿಗ್ಗಿಬೀಳಿಸಬಹುದು. ಆ ಸಂದೇಶದಲ್ಲಿ ಬ್ಯಾಂಕ್ ಮೇಲಿನಂತೆಯೇ ಸಬೂಬು ಹೇಳುತ್ತದೆ. ಹೊಸ ಪಾಸ್‍ವರ್ಡ್ ನಮೂದಿಸಲು ಕೆಳಗಿನ ನಂಬರ್‍ಗೆ ಕರೆ ಮಾಡಿ ಎಂದು ಸೂಚಿಸಲಾಗುತ್ತದೆ. ಇಲ್ಲಿ ಎಸ್‍ಎಂಎಸ್ ಬ್ಯಾಂಕ್‍ನ ಡಿಟ್ಟೋ ಹೆಸರಿನಲ್ಲಿ ಬರುವಂತೆ ಮಾಡಿರಲಾಗಿರುತ್ತದೆ. ಕರೆ ಮಾಡಿದರೆ ಅದು ಧ್ವನಿ ಮುದ್ರಿತ ಕರೆ ಸ್ವೀಕೃತಿ. ನಿಮ್ಮ ನಂಬಿಕೆ ವೃದ್ಧಿಸುತ್ತದೆ. ಅದು ನಿಮ್ಮ ಹಳೆಯ ಗುಪ್ತ ಸಂಖ್ಯೆಗಳನ್ನು ಫೋನ್‍ನಲ್ಲಿ ಅದುಮಲು ತಿಳಿಸುತ್ತದೆ. ಮುಂದಿನದು ನಿಮಗೆ ಬ್ಯಾಂಕ್ ಖಾತೆಯ ಶಿಲ್ಕು ಕೇಳಲು ಹೋದಾಗ ತಿಳಿಯುತ್ತದೆ!
ಅವರು ಚಾಣಾಕ್ಷರು. ಅವರ ಮೈಲ್ ನಮ್ಮ ಬ್ಯಾಂಕ್‍ನ ಐಡಿಯನ್ನೇ ಹೋಲುತ್ತಿರುತ್ತದೆ. ಉದಾಹರಣೆಗೆ, sbmonline.com ಎಂದು ಇರುವ ಅಧಿಕೃತ ವೆಬ್‍ನ್ನು ಹೋಲುವ sbmonline.com ಐಡಿ ಬಳಸಲಾಗುತ್ತದೆ. ಅಷ್ಟೇಕೆ, ಬ್ರೌಸರ್‍ನ ಅಡ್ರೆಸ್ ಬಾರ್‍ನಲ್ಲಿ ಅಂದಾಜಿಗೆ ನಾವು ಎಸ್‍ಬಿಎಂ ಎಂದು ದಾಖಲಿಸಿದೆವು ಎಂದುಕೊಳ್ಳೋಣ. ಆಗ ಮೊತ್ತಮೊದಲು ನಕಲಿಯೇ ಕಣ್ಣಿಗೆ ರಾಚುವಂತೆ ಮಾಡುವ ಶಾಣ್ಯಾತನವೂ ಫಿಶಿಂಗ್ ಭೂಪರಲ್ಲಿದೆ. ಬ್ಯಾಂಕ್‍ನ ಸಂಬಂಧಿತ ಪುಟಗಳಾಗಿಯೂ ಇವು ಗೂಗಲ್ ಮುಂತಾದ ಸರ್ಚ್ ಇಂಜಿನ್ ವ್ಯವಸ್ಥೆಯಲ್ಲಿ ನಮೂದಾಗಿಸಲಾಗುತ್ತದೆ. ಅವರ ಪ್ರತಿಯೊಂದು ಐಡಿ ನೊಂದಾಯಿತವೇ ಆಗಿರುತ್ತದೆ.
ಏನು ಮಾಡಬಹುದು? ಇ-ಬ್ಯಾಕಿಂಗ್ ರೂಢಿಸಿಕೊಂಡವರಿಗೆ ಸಲಹೆ ನೀಡಬೇಕಾಗಿಲ್ಲ. ಏನು ನಡೆಯುತ್ತಿದೆ ಎಂಬ ಮಾಹಿತಿಯೇ ಅವರಿಗೆ ಧಾರಾಳ ಸಹಾಯ. ನಿಜ ತಾನೆ? ಬ್ರೌಸಿಂಗ್‍ನಲ್ಲಿ ಯಾವ ಸೈಟ್ ಲಿಂಕ್‍ಗೂ ಕ್ಲಿಕ್ ಮಾಡುವುದು ತರವಲ್ಲ. ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ, ಕಾಪಿ-ಪೇಸ್ಟ್ ಮಾಡಿ. ಆನಂತರವೇ ಬೇಕಾದ, ಶಂಕಾತ್ಮಕ ಮತ್ತು ಅಪರಿಚಿತ ವೆಬ್‍ನೊಳಗೆ ನುಸುಳಿ.
ಬ್ಯಾಂಕ್‍ಗಳು ತಮ್ಮ ಇ-ವ್ಯವಹಾರಕ್ಕೆ ಪರಮಾವಧಿ ಸುರಕ್ಷೆ ಒದಗಿಸಿರುವುದೇನೋ ನಿಜ. ಆದರೆ ಗ್ರಾಹಕರೇ ತಮ್ಮ ಗುಪ್ತ ಮಾಹಿತಿಗಳನ್ನು ಅನ್ಯರಿಗೆ ಒದಗಿಸಿದಾಗ ಬ್ಯಾಂಕ್ ಕೂಡ ನಿಸ್ಸಹಾಯಕ. ಆದಾಗ್ಯೂ ಇತ್ತೀಚೆಗೆ ಬ್ಯಾಂಕ್‍ಗಳು ಪ್ರತಿ ವ್ಯವಹಾರದ ನಿಖರತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳುತ್ತಿವೆ. ಪ್ರತಿ ಒಂದು ಬಿಡಿ ವ್ಯವಹಾರಕ್ಕೂ ಪ್ರತ್ಯೇಕ ಸೆಕ್ಯುರಿಟಿ ಕೋಡ್‍ನ್ನು ರೂಪಿಸುತ್ತವೆ. ಗ್ರಾಹಕನ ನೊಂದಾಯಿತ ಮೊಬೈಲ್‍ಗೆ ಈ ಕೋಡ್ ಆ ಕ್ಷಣದಲ್ಲಿ ರವಾನೆಯಾಗುತ್ತದೆ. ಗ್ರಾಹಕ ಅದನ್ನು ನಮೂದಿಸದ ಹೊರತು ಸದರಿ ಹಣ ವ್ಯವಹಾರ ಪೂರ್ತಿಗೊಳ್ಳುವುದಿಲ್ಲ. ಇಂತಹ ಹತ್ತಾರು ರಕ್ಷಣೆಗಳಿದ್ದರೂ ಖದೀಮರು ಹೊಸ ದಾರಿ ಹುಡುಕುತ್ತಿರುತ್ತಾರೆ.
ಪ್ರಸ್ತುತ ಹಣಕಾಸು ಸಂಸ್ಥೆಗಳು ಇಂತಹ ಇ ಮೈಲ್ ಕಳಿಸಿದ ಸೆಂಡರ್ ಐಡಿ ಅಥವಾ ಎಸ್‍ಪಿಎಫ್ ಸರ್ವರ್‍ನ ದೃಢೀಕರಣದ ದಾಖಲೆಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿವೆ. ಅದು ಏನೇ ಇರಲಿ, ಇದು ಸುಶಿಕ್ಷಿತರ ಒಡನಾಟದ ಕ್ಷೇತ್ರವಾಗಿರುವುದರಿಂದ ಬಳಕೆದಾರರು ಮುಂಜಾಗರೂಕತೆ ವಹಿಸಿದ್ದರೆ ಸಾಕು, ಮುಕ್ಕಾಲು ಸಮಸ್ಯೆ ಇಲ್ಲವಾಗುತ್ತವೆ.
– ಮಾ.ವೆಂ.ಸ.ಪ್ರಸಾದ್

ವಿಸ್ಡಂ ಶಾಲಾ ವಾರ್ಷಿಕೋತ್ಸವ

0

ಶಾಲಾ ವಾರ್ಷಿಕೋತ್ಸವಶಿಡ್ಲಘಟ್ಟದ ವಿಸ್ಡಂ ವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿವಿದೆಡೆಯಲ್ಲಿ ಶಿವರಾತ್ರಿ ಆಚರಣೆ

0

ಶಿಡ್ಲಘಟ್ಟದ ಅಂಚೆ ಬೀದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖಾ ವತಿಯಿಂದ ಸೋಮವಾರ ಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮವನ್ನು ಶಾಸಕ ಎಂ.ರಾಜಣ್ಣ ಉದ್ಘಾಟಿಸಿದರು. ತಾಲ್ಲೂಕು ಸಂಚಾಲಕಿ ಬಿ.ಕೆ.ಜಯಕ್ಕ ಹಾಜರಿದ್ದರು.

ಕೋಟೆವೃತ್ತದಲ್ಲಿ ಶಿವರಾತ್ರಿ ಹಬ್ಬ
ಕೋಟೆವೃತ್ತದಲ್ಲಿ ಶಿವರಾತ್ರಿ ಹಬ್ಬ

ಶಿಡ್ಲಘಟ್ಟದ ಕೋಟೆವೃತ್ತದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ಶಿವರಾತ್ರಿ ಹಬ್ಬದ ಪ್ರಯುಕ್ರ ನಡೆದ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
 
 
 
 
 
 
 
ಮಲೆಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ
ಮಲೆಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ

ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ಮಲೆಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಶಿವರಾತ್ರಿ ಹಬ್ಬದ ಪ್ರಯುಕ್ರ ನಡೆದ ವಿಶೇಷ ಪೂಜೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಶಿವರಾತ್ರಿಯ ವಿಶೇಷ ಪೂಜೆಗಳು

0

ತಾಲ್ಲೂಕಿನಾದ್ಯಂತ ಶಿವರಾತ್ರಿಯನ್ನು ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಶಿವನ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಹಾಶಿವರ್ರಾತಿಯಂದು ನಗರದಲ್ಲಿರುವ ಕೋಟೆ ಸೋಮೆಶ್ವರ, ಪೇಟೆ ನಗರೇಶ್ವರ, ಅಶೋಕ ರಸ್ತೆಯ ಕಾಶಿ ವಿಶ್ವನಾಥೇಶ್ವರ, ಅಗ್ರಹಾರದ ಶಂಕರ ಮಠದಲ್ಲಿನ ಏಕಾಂಭರೇಶ್ವರ ಮತ್ತು ಶಾಮಣ್ಣಬಾವಿ ಬಳಿಯ ಜಲಕಂಠೇಶ್ವರ ದರ್ಶನ ಪಡೆದಲ್ಲಿ ಕೈಲಾಸ ಪ್ರಾಪ್ತಿ ಎಂಬ ಪ್ರತೀತಿ ಇದ್ದು ನೂರಾರು ಜನ ಭಕ್ತರು ನಗರದಲ್ಲಿನ ಪಂಚಲಿಂಗ ದರ್ಶನ ಪಡೆದರು.
ಇದಲ್ಲದೆ, ಮಯೂರ ವೃತ್ತದ ಬಳಿಯ ಚಂದ್ರಶೇಖರ, ಬೂದಾಳದ ಮಲೆಮಲ್ಲೇಶ್ವರ, ವೀರಾಪುರದ ಗವಿಗಂಗಾಧರೇಶ್ವರ, ಬಟ್ರೇನಹಳ್ಳಿಯ ಸಾಯಿಬಾಬ ಮಂದಿರದಲ್ಲಿರುವ ಜಲಕಂಠೇಶ್ವರ ಮುಂತಾದ ಪ್ರಮುಖ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಶಿವಪಾರ್ವತಿ ಮತ್ತು ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ಈ ಕೃಷ್ಣ ಪಕ್ಷದ ಕೊನೆಯ ದಿನದಂದು ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಇಂತಹ ಹವಾಮಾನ ವ್ಯತ್ಯಯದ ದಿನಗಳಲ್ಲಿ ನಮ್ಮ ದೇಹ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ದಿನ ನಾವು ಮಾಡುವ ಶಿವಪೂಜೆ ಮತ್ತು ಉಪವಾಸ ದೇಹಕ್ಕೆ ತುಂಬಾ ಉಪಯುಕ್ತ ಎಂದು ಅರ್ಚಕರು ತಿಳಿಸಿದರು.

ಮಕ್ಕಳ ಕ್ರಿಯಾಶೀಲತೆಗೆ ಗೃಹಿಣಿ ಲತಾರ ಪಾಠ

0

ಹತ್ತಿಯಿಂದ ಟೆಡ್ಡಿಬೇರ್, ಬಾದಾಮಿ ಚಿಪ್ಪಿನಿಂದ ಸೀತಾಫಲ, ಬೆಂಕಿಪೊಟ್ಟಣದಿಂದ ಬೃಂದಾವನ… ‘ಯಾವುದೂ ಅಮುಖ್ಯವಲ್ಲ’ ಎಂಬ ಕವಿ ಮಾತಿನಂತೆ, ಯಾವುದೂ ಕಸವಲ್ಲ, ಕಸದಿಂದ ಕಲಾಕೃತಿಗಳನ್ನು ತಯಾರಿಸಬಹುದೆಂದು ತೋರಿಸುತ್ತಾರೆ ಗೌಡರಬೀದಿಯ ಗೃಹಿಣಿ ಲತಾ.
ವೈವಿಧ್ಯಮಯ ಕಲಾಕೃತಿಗಳನ್ನು ತಾವು ತಯಾರಿಸುವುದರೊಂದಿಗೆ ಆಸಕ್ತ ಮಕ್ಕಳಿಗೆ ರಜಾ ದಿನಗಳಲ್ಲಿ ಉಚಿತವಾಗಿ ಹೇಳಿಕೊಡುತ್ತಾರೆ.
ಬಾಗಿಲಿಗೆ ಹಾಕುವ ತೋರಣವನ್ನು ಪೇಪರ್ ಬಳಸಿ ತಯಾರಿಸಿದರೆ, ಬಣ್ಣದ ಕಾಗದ ಬಳಸಿ ಚೈನೀಸ್ ಗಂಟೆ ತಯಾರಾಗುತ್ತದೆ. ಟಿಶ್ಯೂ ಪೇಪರ್ ಹಕ್ಕಿಯಾಗಿ ರೂಪುಗೊಳ್ಳುತ್ತದೆ. ಐಸ್ಕ್ರೀಮ್ ಕಡ್ಡಿಗಳು ಮನೆಯಾಗುತ್ತವೆ.
ಗೊಂಬೆಹಬ್ಬದಲ್ಲಂತೂ ಇವರ ಮನೆ ಅಕ್ಷರಶಃ ಗೊಂಬೆಮನೆಯಾಗುತ್ತದೆ. ಮನೆಯ ತುಂಬೆಲ್ಲಾ ಗೊಂಬೆಗಳನ್ನು ಪೌರಾಣಿಕ, ಜಾನಪದ, ಸಾಮಾಜಿಕ ಕಥನ ರೂಪದಲ್ಲಿ ಜೋಡಿಸಿಡುತ್ತಾರೆ. ಪ್ರತಿವರ್ಷ ಶ್ರೀಕೃಷ್ಣಜನ್ಮಾಷ್ಠಮಿಯಂದು ಕೃಷ್ಣನ ಒಂದೊಂದು ಲೀಲೆಯ ಕಥನ ರೂಪದಲ್ಲಿ ಭಾಗವತದ ದರ್ಶನ ನೀಡುತ್ತಾರೆ. ಬಗೆಬಗೆಯ ತಿಂಡಿ ತಯಾರಿಸಿಡುತ್ತಾರೆ. ಗೊಂಬೆಗಳ ಆಕರ್ಷಣೆಗೆ ಬರುವ ಮಕ್ಕಳಲ್ಲಿ ಆಸಕ್ತರು ಇವರ ಶಿಷ್ಯರಾಗುತ್ತಾರೆ.
‘ಮಂಜುನಾಥ್ ಅವರೊಂದಿಗೆ ನನ್ನ ವಿವಾಹವಾಗಿ 17 ವರ್ಷಗಳಾದವು. ಕಲೆಯಲ್ಲಿ ನನಗೆ ಮೊದಲಿಂದಲೂ ಆಸಕ್ತಿಯಿತ್ತು. ಶಿಡ್ಲಘಟ್ಟಕ್ಕೆ ಬಂದ ಮೇಲೆ ಮನೆಯಲ್ಲಿನ ಪೂರಕ ವಾತಾವರಣದಿಂದಾಗಿ ಬೊಂಬೆಹಬ್ಬ ಮತ್ತು ಶ್ರೀಕೃಷ್ಣಜನ್ಮಾಷ್ಠಮಿಗಾಗಿ ಮೊದಲು ಗೊಂಬೆಗಳನ್ನು ಮಾಡತೊಡಗಿದೆ. ಆನಂತರ ವಿವಿಧ ಕಲಾಕೃತಿಗಳನ್ನೂ ಸಹ ಮಾಡುತ್ತಿದ್ದೆ. ಕೆಲವು ವರ್ಷಗಳಿಂದ ಮಕ್ಕಳು ಆಸಕ್ತಿ ತೋರಿದ್ದರಿಂದ ಮೊದಲು ಚಿತ್ರಕಲೆಯನ್ನು ಕಲಿಸುತ್ತಿದ್ದೆ. ಈಗೀಗ ಚಿತ್ರಕಲೆಯೊಂದಿಗೆ ತ್ಯಾಜ್ಯದ ವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ತಯಾರಿಸುವುದನ್ನು ಕಲಿಸುತ್ತಿರುವೆ. ಮಕ್ಕಳು ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಕೊಂಡಷ್ಟು ಅವರ ಬುದ್ಧಿಮತ್ತೆ ಹೆಚ್ಚುತ್ತದೆ’ ಎನ್ನುತ್ತಾರೆ ಗೃಹಿಣಿ ಲತಾ.

ಜಿಲ್ಲೆಯ ಮೊಟ್ಟಮೊದಲ ಆಂಗ್ಲ ಬರಹಗಾರ್ತಿ ಸೌಮ್ಯ

0

‘ಬಳ್ಳಾಪುರಕ್ಕೆ ಹೋಗಿ ಬಂದ ಬುಕ್ಕಂಗಾರ ವೆಂಕಟರಾಯ’ ಎಂಬ ಆಡು ಮಾತು ಚಾಲ್ತಿಯಲ್ಲಿದೆ. ಹೋದ ಬಂದ, ಏನೂ ಅರಿಯಲಿಲ್ಲ, ಏನೂ ಪ್ರಯೋಜನವಿಲ್ಲ ಎಂಬ ಅರ್ಥದಲ್ಲಿ ಈ ಮಾತು ಬಳಸುತ್ತಾರೆ. ಬಹಳಷ್ಟು ಮಂದಿ ಪ್ರವಾಸ ಮಾಡಿಬಂದವರು ಇದೇ ಸಾಲಿಗೆ ಸೇರುತ್ತಾರೆ. ಬಹುತೇಕರು ತಾವು ಭೇಟಿ ಕೊಟ್ಟ ಸ್ಥಳದ ಹೆಸರು ಬಿಟ್ಟರೆ ಉಳಿದೇನೂ ತಿಳಿದಿರುವುದಿಲ್ಲ.
ಆದರೆ ಶಿಡ್ಲಘಟ್ಟದ ದೇಶದಪೇಟೆಯ ಗೃಹಿಣಿ ಸೌಮ್ಯ ತಾವು ಭೇಟಿ ನೀಡಿಬಂದ ಭೂತಾನ್ ದೇಶದ ಬಗ್ಗೆ ಪುಸ್ತಕವನ್ನೇ ರಚಿಸಿದ್ದಾರೆ. ಅದೂ ಆಂಗ್ಲಭಾಷೆಯಲ್ಲಿ. ಜಿಲ್ಲೆಯಲ್ಲೇ ಮೊಟ್ಟಮೊದಲ ಆಂಗ್ಲ ಬರಹಗಾರ್ತಿಯಾಗಿ ಭೂತಾನ್ ಕುರಿತ ಪ್ರವಾಸಕಥನವನ್ನು ರಚಿಸುವ ಮೂಲಕ ದಾಖಲಾಗಿದ್ದಾರೆ.
ಭೂತಾನ್ ದೇಶದ ಸಂಸ್ಕೃತಿ, ಸಂತಸದಿಂದ ದೇಶದ ಪ್ರಗತಿಯನ್ನು ಅವರು ಅಳೆಯುವ ಸಂಗತಿ, ಸ್ವರಗದಂತಹ ಸ್ಥಳಗಳು, ಜನಜೀವನ, ಆಹಾರ, ರಾಜಭಕ್ತಿ ಮುಂತಾದ ಹಲವು ಸಂಗತಿಗಳನ್ನು ತಮ್ಮ ಅನುಭವದ ಎರಕ ಹೊಯ್ದು ‘ಭೂತಾನ್ ಆನ್ ದ ವಿಂಗ್ಸ್ ಆಫ್ ಪೀಸ್ಫುಲ್ ಡ್ರಾಗನ್’ ಎಂಬ ವರ್ಣಮಯ ಪ್ರವಾಸ ಕಥನವನ್ನು ಹೊರತಂದಿದ್ದಾರೆ. ಇದು ಭೂತಾನ್ ದೇಶದಲ್ಲಿಯೂ ಬೇಡಿಕೆಯ ಪುಸ್ತಕವಾಗಿ ಮಾರಾಟವಾಗಿದೆ.
‘ಪ್ರವಾಸವೆಂದರೆ, ಹೊಸ ಸಂಸ್ಕೃತಿ, ಆಹಾರ ಪದ್ಧತಿ, ವೇಷಭೂಷಣ, ನಡವಳಿಕೆ, ಕರಕುಶಲತೆ, ವಾಸ್ತುಶೈಲಿ, ಇತಿಹಾಸ, ಪ್ರಕೃತಿ, ಪರಿಸರವನ್ನು ಅರಿಯುವುದಾಗಿದೆ. ಅಧ್ಯಯನದೊಂದಿಗೆ ಪ್ರವಾಸ ಮಾಡುತ್ತಾ ಹೊಸ ವಿಷಯಗಳನ್ನು ಗ್ರಹಿಸಿದಾಗ ಮಾತ್ರ ಪ್ರವಾಸ ಸಾರ್ಥಕ. ನೇಮಿಚಂದ್ರ ನನಗೆ ಪ್ರೇರಣೆ’ ಎನ್ನುತ್ತಾರೆ ಸೌಮ್ಯ.

ಸ್ವಾಭಿಮಾನದ ಹೆಣ್ಣು ಚೌಡಸಂದ್ರ ಗ್ರಾಮದ ರೂಪ

0

ಈಕೆಗೆ ಎರಡು ಕಾಲುಗಳು ಮತ್ತು ಒಂದು ಕೈ ಸ್ವಾಧೀನದಲ್ಲಿಲ್ಲ. ಸರಿಯಿರುವ ಒಂದು ಕೈಯಿನ ಬೆರಳುಗಳೂ ಸರಿಯಾಗಿಲ್ಲ. ಆದರೂ ಆತ್ಮಾಭಿಮಾನ ಈಕೆಯನ್ನು ದುಡಿಯಲು ಹಚ್ಚಿದೆ. ಸ್ವಾಭಿಮಾನದ ಬದುಕಿಗಾಗಿ ಇವರು ಚಿಲ್ಲರೆ ಅಂಗಡಿಯನ್ನು ನಡೆಸುತ್ತಾರೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ರೂಪ ಅಂಗವಿಕಲೆಯಾದರೂ ದುಡಿದು ಬದುಕುವ ಛಲದಿಂದ ಚೌಡಸಂದ್ರ ಗೇಟಿನ ಪ್ರಯಾಣಿಕರ ತಂಗುದಾಣದಲ್ಲಿ ಪ್ರತಿನಿತ್ಯ ಕಾಫಿ ಟೀ ಹಾಗೂ ತಿಂಡಿಗಳನ್ನು ಮಾರಾಟ ಮಾಡುತ್ತಾರೆ. ತನ್ನ ತಾಯಿ ಮತ್ತು ಎರಡನೇ ತರಗತಿಯಲ್ಲಿರುವ ಪುಟ್ಟ ಮಗನ ಆಸರೆಯಿಂದ ಜೀವನಕ್ಕಾಗಿ ಒಂಟಿ ಕೈಯಿನಿಂದಲೇ ಹೋರಾಡುತ್ತಿದ್ದಾರೆ.
ಪ್ರತಿನಿತ್ಯ ತನ್ನ ತ್ರಿಚಕ್ರ ವಾಹನದಲ್ಲಿ ಚಕ್ಕುಲಿ, ಕೋಡುಬಳೆ, ಬಿಸ್ಕತ್ ಮುಂತಾದ ತಿಂಡಿಗಳು ಮತ್ತು ಕಾಫಿ ಟೀಗಳ ಫ್ಲಾಸ್ಕ್ ನೊಂದಿಗೆ ಚೌಡಸಂದ್ರ ಗೇಟಿಗೆ ಆಗಮಿಸುತ್ತಾರೆ. ತನ್ನ ತಾಯಿ ಅಥವಾ ಗ್ರಾಮಸ್ಥರ ಸಹಾಯ ಪಡೆದು ತಿಂಡಿಗಳ ಬಾಟಲಿಗಳನ್ನು ಜೋಡಿಸಿಟ್ಟುಕೊಳ್ಳುತ್ತಾರೆ. ಬರುವ ಗಿರಾಕಿಗಳಿಗೆ ತಿಂಡಿ ತೆಗೆದುಕೊಡಲೂ ಇವರ ಕೈಲಿ ಆಗದು. ಅವರೇ ತೆಗೆದುಕೊಂಡು ಇವರಿಗೆ ಹಣ ನೀಡಿ ಹೋಗಬೇಕು.
‘ನನ್ನದು ದುರಂತ ಕಥೆ. ಮೂರು ವರ್ಷದ ಮಗುವಾಗಿದ್ದಾಗ ಜ್ವರ ಬಂದಿತ್ತಂತೆ. ಆಗ ನನ್ನ ಕಾಲುಗಳು ಮತ್ತು ಒಂದು ಕೈ ಸ್ವಾಧೀನ ಕಳೆದುಕೊಂಡಿತಂತೆ. ಇರುವ ಒಂದು ಕೈಯಿನ ಬೆರಳುಗಳು ಕೊಂಚ ತಿರುಚಿವೆ. ಚೌಡಸಂದ್ರದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಓದಿರುವೆ. ಮುಂದೆ ಓದಲು ಮೇಲೂರಿಗೆ ಹೋಗಲಾಗದೇ ಮನೆಯಲ್ಲೇ ಉಳಿದೆ. ನನ್ನ ತಾಯಿ ನಮ್ಮ ಸಂಬಂಧಿಕರಲ್ಲೇ ನನ್ನನ್ನು ಮದುವೆ ಮಾಡಿಕೊಟ್ಟರು. ಅವರಿಗೆ ನಾನು ಎರಡನೇ ಹೆಂಡತಿ. ಆದರೆ ಮಗುವಾದ ಮೇಲೆ ನನ್ನನ್ನು ತಾಯಿ ಮನೆಗೆ ಕಳುಹಿಸಿಬಿಟ್ಟರು. ನನ್ನ ತಾಯಿಗೆ ಹೊರೆಯಾಗಬಾರದೆಂದು ಕಷ್ಟಪಟ್ಟು ದುಡಿಯಲು ಯತ್ನಿಸುತ್ತಿರುವೆ’ ಎನ್ನುತ್ತಾರೆ ಚೌಡಸಂದ್ರದ ರೂಪ.
ಚೌಡಸಂದ್ರದ ರೂಪಾ ಅವರ ಮೊಬೈಲ್ ಸಂಖ್ಯೆ ೯೫೩೫೧೪೫೧೩೪.