ಹೆಣ್ಣುಮಕ್ಕಳ ಸಂವೇದನೆ, ನೋವು, ದುಗುಡ, ದುಃಖ, ಆಕಾಂಕ್ಷೆ, ಬೇಸರ, ಕೋಪ ತಾಪಗಳನ್ನು ಪ್ರತಿಧ್ವನಿಸುವ ಬರಹಗಳಿಗಾಗಿ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತ, ರಾಜ್ಯ ಮಟ್ಟದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಪಡೆದಿದ್ದಾಳೆ.
ಕನ್ನಮಂಗಲ ಗ್ರಾಮದ ಕೆ.ಎನ್.ಅಮೃತ ಪ್ರಾಥಮಿಕ ಶಿಕ್ಷಣವನ್ನು ಪಡೆದದ್ದು ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ಈಗ ಓದುತ್ತಿರುವುದು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ.
‘ಕನ್ನಮಂಗಲ ಶಾಲೆಯಲ್ಲಿನ ಸಾಹಿತ್ಯಿಕ ವಾತಾವರಣ ‘ನಾನೂ ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸ ಮೂಡಿಸಿತು. ಕನ್ನಮಂಗಲದ ಸ್ನೇಹ ಪ್ರಕಾಶನದ ವಸಂತಕುಮಾರ್ ನೇತೃತ್ವದಲ್ಲಿ ಪ್ರತೀ ವರ್ಷ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬರೆದ ಬರವಣಿಗೆಗಳ ಸಂಕಲನ ‘ಶಾಮಂತಿ’ ಹೊರತರುವುದರಿಂದಾಗಿ ಹಲವಾರು ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಅದರಲ್ಲಿ ನನ್ನ ಬರಹಗಳು ಪ್ರಕಟವಾದಾಗ ಖುಷಿಯಾಯಿತು. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಕೈಗೊಂಡ ನನಗೆ ಅಲ್ಲಿಯೂ ಶಿಕ್ಷಕರ ಪ್ರೋತ್ಸಾಹ ಲಭಿಸಿತು. ಹೀಗಾಗಿ ನನ್ನ ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸಲು ಸಾಧ್ಯವಾಯಿತು’ ಎಂದು ಕೆ.ಎನ್.ಅಮೃತ ತಿಳಿಸಿದರು.
‘ಅಮೃತ’ಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಅತ್ತೆ ಸೊಸೆಯರು ತಯಾರಿಸುವ ರುಚಿಕರ ಒಬ್ಬಟ್ಟು
ನಗರದ ವಾಸವಿ ರಸ್ತೆಯ ಎರಡನೇ ಕ್ರಾಸ್ ನಲ್ಲಿರುವ ಅತ್ತೆ ಸೊಸೆಯರಾದ ಮನ್ಮಥಮ್ಮ ಮತ್ತು ರಾಧಾ ತಾವು ತಯಾರಿಸುವ ರುಚಿಕರ ಒಬ್ಬಟ್ಟಿನಿಂದಾಗಿ ತಾಲ್ಲೂಕು, ಜಿಲ್ಲೆಯಷ್ಟೇ ಅಲ್ಲದೆ ವಿದೇಶಗಳಲ್ಲೂ ಪರಿಚಿತರಾಗಿದ್ದಾರೆ.
ಈ ಅತ್ತೆ ಸೊಸೆಯರು ತಯಾರಿಸುವ ಒಬ್ಬಟ್ಟು ಅಥವ ಹೋಳಿಗೆ ಲಂಡನ್ ಮತ್ತು ಅಮೆರಿಕಾ ದೇಶಗಳಿಗೂ ಪ್ರಯಾಣ ಬೆಳೆಸಿವೆ. ದೇವನಹಳ್ಳಿ, ಬೆಂಗಳೂರು, ವಿಜಯಪುರ ಮುಂತಾದೆಡೆಗಳಿಂದ ಯಾರೇ ವಿದೇಶಕ್ಕೆ ತೆರಳಿದರೂ ಇವರಿಗೆ ತಿಳಿಸಿ ಒಬ್ಬಟ್ಟನ್ನು ಕಟ್ಟಿಸಿಕೊಂಡು ಹೋಗುವುದು ಮಾತ್ರ ಮರೆಯುವುದಿಲ್ಲ.
ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಅನೇಕರು ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ, ಔತಣಕೂಟ ಏರ್ಪಡಿಸಿದಾಗ ಎಲ್ಲರೂ ಇಷ್ಟಪಡುವ ಒಬ್ಬಟ್ಟನ್ನು ಇವರಿಂದ ಮಾಡಿಸಿಕೊಳ್ಳುವುದು ರೂಢಿಯಾಗಿದೆ.
‘ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಮತ್ತು ನಮ್ಮ ಅತ್ತೆ ಹೋಳಿಗೆಯನ್ನು ಮಾಡುತ್ತಿದ್ದೇವೆ. ನಮ್ಮತ್ತೆ ಒಬ್ಬಟ್ಟನ್ನು ಬಹಳ ರುಚಿಯಾಗಿ ತಯಾರಿಸುತ್ತಿದ್ದುದನ್ನು ಕಂಡು ಕೆಲವರು ಕೇಳುತ್ತಿದ್ದರು. ಹಾಗೆಯೇ ಒಬ್ಬರಿಂದೊಬ್ಬರಿಗೆ ವಿಷಯ ತಿಳಿಯುವ ಮೂಲಕ ನಾವು ಹೆಚ್ಚಿನ ಸಂಖ್ಯೆಯಲ್ಲಿ ಒಬ್ಬಟ್ಟನ್ನು ತಯಾರಿಸಿಕೊಡಲು ಪ್ರಾರಂಭಿಸಿದೆವು. ದಿನಕ್ಕೆ ಹೆಚ್ಚೆಂದರೆ 200 ಹೋಳಿಗೆಯನ್ನು ಮಾಡುತ್ತೇವೆ. ಹಲವಾರು ಮುಸ್ಲೀಮರೂ ಹೋಳಿಗೆ ಕೇಳಿ ಮಾಡಿಸಿಕೊಳ್ಳುತ್ತಾರೆ. ವಿದೇಶಕ್ಕೆ ಹೋಗುವವರು ಕೇಳಿದಾಗ ವಿಶೇಷವಾಗಿ ಪ್ಯಾಕ್ ಮಾಡಿಕೊಡುತ್ತೇವೆ’ ಎನ್ನುತ್ತಾರೆ ರಾಧಮ್ಮ.
ರಾಧಮ್ಮ ಅವರ ದೂರವಾಣಿ ಸಂಖ್ಯೆ: 9035871987
ಹಕ್ಕಿಪಿಕ್ಕಿ ಮಹಿಳೆಯರ ಕರಕುಶಲ ಕಲೆ
ಶುದ್ಧ ಅಲೆಮಾರಿಗಳಾಗಿದ್ದ ಹಕ್ಕಿಪಿಕ್ಕಿ ಜನಾಂಗದವರು ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯಲ್ಲಿ ಹಕ್ಕಿಪಿಕ್ಕಿಕಾಲೋನಿ ಮತ್ತು ಬಾಳೇಗೌಡನಹಳ್ಳಿ ಎಂಬ ಎರಡು ಗ್ರಾಮಗಳಲ್ಲಿ ನೆಲೆಯನ್ನು ಕಂಡುಕೊಂಡಿದ್ದಾರೆ.
ಹಕ್ಕಿಪಿಕ್ಕಿಗಳು ಬೇಟೆಯಲ್ಲಿ ಪರಿಣಿತರಾಗ್ದಿದವರು. ಆದರೆ ಸರ್ಕಾರ ಬೇಟೆಯನ್ನು ನಿಷೇಧಿಸಿರುವುದರಿಂದ ಈಗ ಹಕ್ಕಿಪಿಕ್ಕಿ ಮಹಿಳೆಯರು ಸರ, ತೋರಣ, ಹೂವಿನ ಕುಂಡ ಮೊದಲಾದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಿ ಜೀವನ ನಡೆಸುತ್ತಾರೆ. ಅಲಂಕಾರಿಕ ಸಾಮಗ್ರಿಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಬೆಂಗಳೂರಿನಿಂದ ಸಾಲ ತರುತ್ತಾರೆ. ಅಲಂಕಾರಿಕ ಸಾಮಗ್ರಿಗಳನ್ನು ಮಾರಿ ಸಾಲ ತೀರಿಸಿ ಉಳಿದ ಹಣದಲ್ಲಿ ಜೀವನ ನಡೆಸುತ್ತಾರೆ. ಗಂಡಸರು ಹೊಲದ ಕೆಲಸಕ್ಕೆ ಹೋದರೆ, ಮಹಿಳೆಯರು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
‘ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಲು ಆಂಧ್ರ, ತಮಿಳುನಾಡು, ಕರ್ನಾಟಕದ ಹಲವಾರು ಊರುಗಳಿಗೆ ತಿರುಗುತ್ತೇವೆ. ಒಮ್ಮೊಮ್ಮೆ ಹೋಗಿ ಮಾರಾಟ ಮಾಡಿ ಬರಲು ಮೂರ್ನಾಕು ತಿಂಗಳು ಹಿಡಿಯುತ್ತದೆ’ ಎನ್ನುತ್ತಾರೆ ಹಿರಿಯರಾದ ಮೋಜಿನ್ಬಾಯಿ.
‘ನಮ್ಮಲ್ಲಿ ಚಾಮುಂಡೇಶ್ವರಿ ಮತ್ತು ಎಲಮ್ಮ ಮಹಿಳಾ ಸಂಘಗಳಿದೆ. ಕಷ್ಟವಿದ್ದವರಿಗೆ ಶೇಕಡಾ ೨ ಬಡ್ಡಿ ದರದಲ್ಲಿ ಸಾಲ ಕೊಟ್ಟು ನಂತರ ವಸೂಲಿ ಮಾಡಿ ಸಂಘಕ್ಕೆ ಕಟ್ಟಿಸುತ್ತೇವೆ. ನಮ್ಮಲ್ಲಿ ಬಹುತೇಕ ಕುಟುಂಬಗಳಲ್ಲಿ ವ್ಯಾವಹಾರಿಕ ಕೆಲಸಗಳು ಹೆಂಗಸರೇ ನಿರ್ವಹಿಸುವುದರಿಂದ ಕುಟುಂಬದ ಆರ್ಥಿಕ ಸುಧಾರಣೆ ಪರವಾಗಿಲ್ಲ’ ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಫರೀದಾ ಅಭಿಪ್ರಾಯಪಡುತ್ತಾರೆ.
ಮಹಿಳೆಯರು ತಯಾರಿಸುವ ಮುತ್ತೂರು ಬ್ಯಾಗುಗಳು
ಅಂಗಡಿಗೆ ಹೋಗಲು ಶಾಪಿಂಗ್ ಬ್ಯಾಗ್, ತಾಂಬೂಲ ಹಾಕಿ ಕೊಡಲು ಬ್ಯಾಗು, ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗು, ಮೊಬೈಲ್ ಇಟ್ಟುಕೊಳ್ಳುವ ಬ್ಯಾಗು, ಲ್ಯಾಪ್ ಟಾಪ್ ಇಡುವ ಬ್ಯಾಗು, ಊಟದ ಬಾಕ್ಸ್ ಇಡುವ ಬ್ಯಾಗು… ಹೀಗೇ ತರಹಾವರಿ ಬ್ಯಾಗುಗಳ ಲೋಕವೇ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ತಯಾರಾಗುತ್ತಿವೆ.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಏಳು ಮಂದಿ ಮಹಿಳೆಯರ ಕ್ರಿಯಾಶೀಲ ಕೊಡುಗೆಯೇ ಈ ಬ್ಯಾಗುಗಳ ಪ್ರಂಪಂಚ. ಸಿಂಗಪೂರ್, ಅಂಡಮಾನ್ ಮುಂತಾದ ಪ್ರದೇಶಗಳಿಗೆ ಹೋಗಿ ತಲುಪಿರುವ ಮುತ್ತೂರಿನ ಬ್ಯಾಗುಗಳು ವೈವಿಧ್ಯತೆಯೊಂದಿಗೆ ಗುಣಮಟ್ಟವನ್ನೂ ಕಾಯ್ದುಕೊಂಡಿದೆ.
ಮುತ್ತೂರು ಗ್ರಾಮದಲ್ಲಿ ದಿ.ಸಂಜಯ್ ದಾಸ್ ಗುಪ್ತ ಅವರ ನೆನಪಿನಲ್ಲಿ ‘ನಮ್ಮ ಮುತ್ತೂರು’ ಸಂಸ್ಥೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಬೆಂಗಳೂರಿನ ಕೋರಮಂಗಲದ ರೋಟರಿ ಸಂಸ್ಥೆಯ ಸಹಾಯದಿಂದ ಎರಡು ವರ್ಷಗಳ ಹಿಂದೆ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಕೊಡಿಸಿತು. ಶಿಕ್ಷಕಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಹೊಲಿಗೆಯನ್ನು ಕಲಿಸಲಾಯಿತು. ಹೊಲಿಗೆ ಕಲಿತ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಆಲೋಚಿಸಿ, ವಿವಿಧ ರೀತಿಯ ಬ್ಯಾಗುಗಳ ತಯಾರಿಕೆಗೆ ಅವರನ್ನು ಸಜ್ಜುಗೊಳಿಸಿದರು.
‘ಮಹಿಳೆಯರಿಗೆ ಏನಾದರೂ ಕೈಕಸುಬು ಕಲಿಸುವ ನಿಟ್ಟಿನಲ್ಲಿ ಟೈಲರಿಂಗ್ ತರಬೇತಿ ಕೊಟ್ಟೆವು. ಆನಂತರ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ಕೊಟ್ಟೆವು. ವಿವಿಧ ರೀತಿಯ ಬ್ಯಾಗುಗಳನ್ನು ತಯಾರಿಸಿದಲ್ಲಿ ಪ್ಲಾಸ್ಟಿಕ್ ಬಳಕೆಗೂ ಕಡಿವಾಣ ಹಾಕಬಹುದೆಂದು ಅದರ ಬಗ್ಗೆ ಗಮನ ಹರಿಸಿದೆವು. ಈಗ ಬೆಂಗಳೂರಿನ ಹಲವಾರು ಸಂಸ್ಥೆಗಳು ನಮ್ಮಿಂದ ಬ್ಯಾಗುಗಳನ್ನು ಖರೀದಿಸುತ್ತಿವೆ. ಮದುವೆ ಮುಂತಾದ ಸಮಾರಂಭಗಳಿಗೆ ತಾಂಬೂಲದ ಬ್ಯಾಗುಗಳಿಗೆ ಬಹಳ ಬೇಡಿಕೆಯಿದೆ. ಕಾನ್ಫರೆನ್ಸ್ ಗಾಗಿ ಕಂಪೆನಿಯೊಂದು ಈಚೆಗೆ ಬ್ಯಾಗುಗಳನ್ನು ಖರೀದಿಸಿತು. ಸಿಂಗಾಪೂರಿನ ಸಂಸ್ಥೆಯೊಂದಕ್ಕೆ ಮೊಬೈಲ್ ಇಡುವ ಬ್ಯಾಗುಗಳನ್ನು ಹೊಲಿದು ಕೊಟ್ಟಿದ್ದೇವೆ. ಅಂಡಮಾನ್ಗೂ ಹಲವಾರು ಬ್ಯಾಗುಗಳನ್ನು ಕಳುಹಿಸಿದ್ದೇವೆ’ ಎಂದು ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
‘ಏಳು ಮಂದಿ ಮಹಿಳೆಯರು ಈಗಿಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಮಾರ್ಗದರ್ಶನ ನೀಡಲು ಶಿಕ್ಷಕಿ ಇದ್ದಾರೆ. ಒಟ್ಟು ಐದು ಹೊಲಿಗೆ ಯಂತ್ರಗಳಿದ್ದು, ಅದರಲ್ಲಿ ಮೂರನ್ನು ರೋಟರಿ ಸಂಸ್ಥೆ, ಒಂದನ್ನು ಖಲೀಜಾ ದಾಸ್ ಗುಪ್ತ ಮತ್ತೊಂದನ್ನು ದಾನಿಯೊಬ್ಬರಿಂದ ಪಡೆಯಲಾಗಿದೆ. ಮೊದಲು ಬಾಡಿಗೆ ಮನೆಯೊಂದರಲ್ಲಿ ತರಬೇತಿಯನ್ನು ಪ್ರಾರಂಬಿಸಿದೆವು. ನಂತರ ವಿವಿಧ ದಾನಿಗಳಿಂದ ಗ್ರಾಮದಲ್ಲಿ ಹಾಳು ಬಿದ್ದಿದ್ದ ಮಡಿವಾಳಿ ನಂದೆಪ್ಪನವರ ಧರ್ಮಛತ್ರವನ್ನು ದುರಸ್ತಿಗೊಳಿಸಿ ಅಲ್ಲಿ ಹೊಲಿಗೆ ಕೇಂದ್ರವನ್ನು ನಡೆಸುತ್ತಿದ್ದೇವೆ. ನಮ್ಮ ಗ್ರಾಮದ ಮಹಿಳೆಯರು ತಯಾರಿಸುವ ಉತ್ಪನ್ನಗಳು ದೇಶ ವಿದೇಶಗಳಿಗೆ ತಲುಪಿಸುವುದು ನಮ್ಮ ಗುರಿ’ ಎಂದು ಅವರು ತಿಳಿಸಿದರು.
ಮಹಿಳಾ ರೈತಕೂಟ
ತಾಲ್ಲೂಕಿನ ಮಳ್ಳೂರು, ಮುತ್ತೂರು ಮತ್ತು ಕಾಚಹಳ್ಳಿ ವ್ಯಾಪ್ತಿಯ ಮಹಿಳಾ ರೈತರು ಸ್ಥಾಪಿಸಿರುವ ರೈತ ಒಕ್ಕೂಟ ಜಿಲ್ಲೆಯ ಏಕೈಕ ಮಹಿಳಾ ರೈತ ಒಕ್ಕೂಟವಾಗಿದ್ದು ಮಾದರಿಯಾಗಿ ರೂಪುಗೊಂಡಿದೆ.
ಹದಿನೈದು ಸದಸ್ಯೆಯರ ಸಂಖ್ಯೆಯ ಭಾರತಾಂಬೆ ಮಹಿಳಾ ರೈತ ಒಕ್ಕೂಟ ೨೦೦೯ರಲ್ಲಿ ಕೆನರಾಬ್ಯಾಂಕ್ ಮಹಾಪ್ರಬಂಧಕ ರವೀಂದ್ರಭಂಡಾರಿಯವರಿಂದ ಉದ್ಘಾಟನೆಗೊಂಡಿತ್ತು. ನಬಾರ್ಡ್ ನೆರವಿನಿಂದ ಅಧ್ಯಯನ ಪ್ರವಾಸ ಕೈಗೊಂಡಿದ್ದ ಮಹಿಳೆಯರು ಅಲ್ಲಿನ ಕಲಿಕೆಯಿಂದ ತಮ್ಮ ಕೃಷಿಯಲ್ಲಿ ಹಲವಾರು ಬದಲಾವಣೆಗಳನ್ನು ರೂಪಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.
ಉತ್ಕೃಷ್ಟ ರೇಷ್ಮೆ ಬೆಳೆ, ಜೇನು ಸಾಕಾಣಿಕೆ, ಗಿರಿರಾಜಕೋಳಿ ಸಾಕಾಣಿಕೆ, ಸೈಲೇಜ್ ಮುಖಾಂತರ ಮೇವು ಸಂಗ್ರಹಿಸಿ ಕುರಿ ಸಾಕಾಣಿಕೆ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಕಾಲಕಾಲಕ್ಕೆ ವಿಜ್ಞಾನಿಗಳನ್ನು ಕರೆಸಿ ರೈತ ಒಕ್ಕೂಟ ಮತ್ತು ಇತರೇ ರೈತರಿಗೂ ಮಾಹಿತಿ ದೊರಕಿಸಿಕೊಡುತ್ತಿದ್ದಾರೆ. ಕೃಷಿ ಮೇಳ, ಫಲಪುಷ್ಪಪ್ರದರ್ಶನ ಮೇಳಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ.
’ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಅವರು ಮಾರ್ಗದರ್ಶನ ಮಾಡಿ ಮಹಿಳಾ ರೈತಕೂಟವನ್ನು ಸ್ಥಾಪಿಸಿದರು. ನಾವು ಪ್ರತಿವಾರವೂ ತಲಾ ನೂರು ರೂಗಳನ್ನು ಸಂಗ್ರಹಿಸಿ ಹಣ ಉಳಿತಾಯ ಮಾಡುತ್ತಿದ್ದೇವೆ. ಪ್ರವಾಸದಿಂದ ಸಾಕಷ್ಟು ಜ್ಞಾನ ಪಡೆದು ನಮ್ಮಲ್ಲಿಯೂ ಅಳವಡಿಸಿಕೊಂಡು ಇತರರಿಗೂ ತಿಳಿಸಿಕೊಡುತ್ತಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳಿಂದ ಗ್ರಾಮದಲ್ಲಿ ಸಿಗುವ ನೆರವನ್ನೂ ಹಾಗೂ ನೈರ್ಮಲ್ಯೀಕರಣದ ಕೆಲಸಗಳನ್ನೂ ಮಾಡಿಸುತ್ತೇವೆ. ಕುಟುಂಬಗಳ ವ್ಯಾಜ್ಯ ಹಾಗೂ ಸಣ್ಣಪುಟ್ಟ ಜಗಳಗಳನ್ನೂ ನಾವುಗಳೇ ಇತ್ಯರ್ಥ ಮಾಡುತ್ತೇವೆ. ನಬಾರ್ಡ್ ಆರ್ಥಿಕ ನೆರವು ಮತ್ತು ಮೇಲೂರು ಶಾಖೆ ಕೆನರಾ ಬ್ಯಾಂಕ್ ಸಹಕಾರದಿಂದ ನಾವು ಆರ್ಥಿಕ ಪ್ರಗತಿ ಕಾಣುತ್ತಿದ್ದೇವೆ’ ಎಂದು ಭಾರತಾಂಬೆ ಮಹಿಳಾ ರೈತ ಒಕ್ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ತಿಳಿಸಿದರು.
’ಹೆಣ್ಣು ಮಕ್ಕಳ ಶಿಕ್ಷಣ, ಆರ್ಥಿಕ ಸ್ವಾವಲಂಬನೆಗೆ ಸಹಾಯಕವಾಗುವ ಯೋಜನೆಗಳನ್ನು ರೂಪಿಸಿ ನಮ್ಮ ಭಾಗದ ಗ್ರಾಮೀಣ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ರೈತಕೂಟದ್ದು’ ಎಂದು ಅವರು ಹೇಳಿದರು.
ಭಾರತಾಂಬೆ ಮಹಿಳಾ ರೈತ ಒಕ್ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಕಾರ್ಯದರ್ಶಿ ವನಿತಾ, ಸಹಕಾರ್ಯದರ್ಶಿ ಮುತ್ತೂರು ನಳಿನಾ, ಸದಸ್ಯೆಯರಾದ ಸರೋಜಮ್ಮ, ಸಂಪಂಗಿಯಮ್ಮ, ಲಲಿತಮ್ಮ, ಶಾಂತಮ್ಮ, ಸುಜಾತಾ, ಅಶ್ವತ್ಥಮ್ಮ, ಸುಮಾ, ರೇಖಾ, ಶ್ವೇತಾ.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ
ವಿದ್ಯೆಯು ಯಾರೂ ಅಪಹರಿಸಲಾಗದ ಅಮೂಲ್ಯವಾದ ಆಸ್ತಿ. ವಿದ್ಯೆಯು ಎಲ್ಲವನ್ನೂ ಸಂಪಾದಿಸಿಕೊಳ್ಳುವ ಶಕ್ತಿಯನ್ನು ವ್ಯಕ್ತಿಗೆ ನೀಡುತ್ತದೆ ಎಂದು ಪ್ರವಚನಕಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ತಿರುವನ್ನು ನೀಡುವ ಕಾಲಘಟ್ಟದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಆಯ್ಕೆ ಮಾಡಿಕೊಂಡು ಏಕಾಗ್ರತೆಯಿಂದ ಸಾಧನೆ ಮಾಡಬೇಕು. ಗಿಡವು ಹೆಚ್ಚು ಬೇರುಬಿಟ್ಟಲ್ಲಿ ಹೆಚ್ಚು ಬಾಳುತ್ತದೆ. ಅದೇ ರೀತಿಯಾಗಿ ಈಗ ಓದುವ ಸಾಹಿತ್ಯ, ಪಠ್ಯ, ಕಲಿಕೆಗಳು ಜೀವನದಲ್ಲಿ ಸಹಕಾರಿಯಾಗುತ್ತವೆ. ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಆನಂದ, ಉಲ್ಲಾಸ, ಕಲಾಸ್ವಾದನೆಯೊಂದಿಗೆ ಕ್ರಿಯಾಶೀಲತೆಯನ್ನೂ ಹೆಚ್ಚಿಸುತ್ತದೆ. ಉತ್ತಮ ಹವ್ಯಾಸಗಳು ನಿಮ್ಮ ಗುರಿ ಸಾಧನೆಗೂ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾರದಾದೇವಿಯ ಪೂಜೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲ ಎನ್.ಆನಂದ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳಾ, ಉಪನ್ಯಾಸಕರಾದ ಶಿವಶಂಕರ್, ಶಿವಾರೆಡ್ಡಿ, ಮುನಿರಾಜು, ದೇವರಾಜು, ನಾಗಮಣಿ, ಸುಬ್ಬಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ನಗರದ ಮಯೂರ ವೃತ್ತದಲ್ಲಿರುವ ಅಶ್ವತ್ಥಕಟ್ಟೆಯ ಮಹಾಮುಖ್ಯ ಪ್ರಾಣ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಡಾ. ಡಿ.ಟಿ.ಸತ್ಯನಾರಾಯಣರಾವ್ ಅವರು ಉದ್ಘಾಟಿಸಿದರು.
‘ಸಾರ್ವಜನಿಕರು ದಿನ ನಿತ್ಯದ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಆರ್ಥಿಕವಾಗಿ ಸಬಲರಾಗುವ ಜೊತೆಗೆ ಆರೋಗ್ಯವಂತಾಗಿಯೂ ಇರಬೇಕು. ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿನುಸಾರ ಜನರು ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ.ಮಾರುತಿ ಪ್ರಸಾದ್ (ಆರ್ಯುವೇದ ), ಡಾ.ನರಸಿಂಹಮೂರ್ತಿ (ಶಸ್ತ್ರಚಿಕಿತ್ಸಾ ಮತ್ತು ಚರ್ಮರೋಗ), ಡಾ.ಸಂತೋಷ್ ಬಾಬು(ಅರವಳಿಕೆ), ಡಾ.ಪೂರ್ಣಿಮ (ಮೆಡಿಕಲ್ ಆಫಿಸರ್) ಮತ್ತಿತರ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಆರ್.ಟಿ.ಇ ಷರತ್ತುಗಳನ್ನು ಸಡಿಲಗೊಳಿಸಿ
ಆರ್.ಟಿ.ಇ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ಒಂದಿ ಕಿ.ಮೀ ಅಂತರ ವಿಧಿಸಿರುವುದರಿಂದ ರೈತ ಮಕ್ಕಳು ಪ್ರವೇಶ ಪಡೆಯಲು ವಂಚಿತರಾಗುತ್ತಿದ್ದಾರೆ. ಉತ್ತಮ ಖಾಸಗಿ ಶಾಲೆಗಳು ನಗರಕ್ಕೆ ಹೊಂದಿಕೊಂಡಂತೆ ಇದ್ದು, ಈ ಯೋಜನೆ ಬಳಕೆಯಾಗದಂತಾಗಿದೆ. ಆದ್ದರಿಂದ ಈ ಯೋಜನೆಯ ನಿಬಂಧನೆಗಳನ್ನು ಸಡಿಲಗೊಳಿಸಬೇಕು. ಪ್ರವೇಶ ದಾಖಲಾತಿ ದಿನಾಂಕವನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಬಾಲಮುರಳಿಕೃಷ್ಣ, ಬಿ.ಕೆ.ಮುನಿಕೆಂಪಣ್ಣ, ಮಾರಪ್ಪ, ವೆಂಕಟೇಶಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಪಘಾತ ಬೈಕ್ ಸವಾರ ಸಾವು
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿಯ ವಾರದಹುಣಸೇನಹಳ್ಳಿ ಗ್ರಾಮದ ಸುರೇಶ್(35) ಬೈಕ್ ಅಪಘಾತದಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬಚ್ಚಹಳ್ಳಿ ಗೇಟ್ ಬಳಿ ಭಾರತ್ ಗ್ಯಾಸ್ ಸಿಲಿಂಡರ್ಗಳನ್ನು ತುಂಬಿಕೊಂಡು ಶಿಡ್ಲಘಟ್ಟದ ಕಡೆಯಿಂದ ಹೋಗುತ್ತಿದ್ದ ಲಾರಿಗೆ ಚಿಂತಾಮಣಿ ಕಡೆಯಿಂದ ಬೂಸ ಮೂಟೆ ಇಟ್ಟುಕೊಂಡು ಬೈಕ್ನಲ್ಲಿ ಬರುತ್ತಿದ್ದ ಸುರೇಶ್ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದಾರೆ. ಅಪಘಾತದ ಪರಿಣಾಮ ಎರಡೂ ಕಾಲುಗಳು ತುಂಡಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ.
ತಾಲ್ಲೂಕಿನ ಬಚ್ಚಹಳ್ಳಿ ಗೇಟ್ ಬಳಿ ರಸ್ತೆ ಕಿರಿದಾಗಿದ್ದು, ಹಳ್ಳಗಳಿಂದ ಕೂಡಿದೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ ಕಾರ್ಯಕ್ರಮ
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಠಿಸಿಕೊಡಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮನೆಯಲ್ಲಿ ದೂರದರ್ಶನ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ತಮ್ಮ ಮುದ್ದು ಮಾತಿನಲ್ಲಿ ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಸ್ವಾಮೀಜಿ ವಿತರಿಸಿದರು.
ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಹದೇವ್, ಕೆಂಪರೆಡ್ಡಿ, ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಸ್ತೆ ತಡೆ – ಪ್ರತಿಭಟನೆ
ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗೇಟ್ ಬಳಿ ಟೈರ್ ಸುಟ್ಟು ರಸ್ತೆ ತಡೆ ನಡೆಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟಿಸಿದರು.
ಗಿರವಿ ಮತ್ತು ಚಿನ್ನ ಬೆಳ್ಳಿ ವರ್ತಕರ ಸಂಘದಿಂದ ಮನವಿ
ಚಿನ್ನದ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ತಾಲ್ಲೂಕಿನ ಗಿರವಿ ಮತ್ತು ಚಿನ್ನ ಬೆಳ್ಳಿ ವರ್ತಕರು ತಹಶೀಲ್ದಾರ್ ಮನೋರಮಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಗಿರವಿ ಮತ್ತು ಚಿನ್ನ ಬೆಳ್ಳಿ ವರ್ತಕರ ಸಂಘದ ತಾಲ್ಲೂಕು ಅಧ್ಯಕ್ಷ ಕಾಶಿನಾಥ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಆಮದು ಸುಂಕ ಹೆಚ್ಚಿಸಿ ಚಿನ್ನವನ್ನು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡಿಸಿರುವ ಕಾರಣ ವರ್ತಕರಿಗೆ ಹಾಗೂ ಗ್ರಾಹಕರಿಗೆ ಹೊರೆಯಾಗಿದೆ. ಸರ್ಕಾರ ತೆರಿಗೆ ಹೆಚ್ಚಿಸಿದರೆ ಅದನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ಆದ್ದರಿಂದ ಜನರ ಹಿತದೃಷ್ಟಿಯಿಂದ ಕೂಡಲೇ ಎಲ್ಲ ರೀತಿಯ ತೆರಿಗೆ ಮತ್ತು ಸುಂಕ ಕಡಿತಗೊಳಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಧಾನ ಮಂತ್ರಿಗಳಿಗೆ ರವಾನಿಸಲು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ದೇವಾರಾಮ್, ವಿ.ಎ.ಕಾಶಿನಾಥ್, ಮುನಿರತ್ನಾಚಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜದ್ದರು.
ರೈತರಿಗೆ ಗಾಯದ ಮೇಲೆ ಬರೆ; ಶನಿವಾರ ರೇಷ್ಮೆ ಗೂಡಿನ ದರ ಕುಸಿಯುವ ಭಯ
ಪೊಲೀಸರ ಲಾಠಿ ಏಟಿನಿಂದ ಜರ್ಜರಿತರಾಗಿರುವ ರೈತರಿಗೆ ಮತ್ತೊಂದು ತೂಗುಕತ್ತಿ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ಕಾದುನಿಂತಿದೆ.
ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶುಕ್ರವಾರ 900 ಗೂಡು ಆವಕವಾಗಿತ್ತು. ಆಗಮಿಸಿದ್ದ ಸುಮಾರು 50 ಟನ್ ರೇಷ್ಮೆ ಗೂಡಿನಿಂದ ಸುಮಾರು 2 ಕೋಟಿ ರೂಗಳಷ್ಟು ವಹಿವಾಟು ಸಾಧ್ಯವಿತ್ತು. ಆದರೆ, ಬೆಂಗಳೂರಿನಲ್ಲಿ ಶಾಶ್ವತ ನೀರಿನ ಕೂಗು ವಿಧಾನಸೌಧಕ್ಕೆ ಮುಟ್ಟಿಸಲು ಹೋದ ರೈತರನ್ನು ಅಮಾನುಷವಾಗಿ ಹೊಡೆದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಗೂಡಿನ ಹರಾಜನ್ನು ನಿಲ್ಲಿಸಲಾಯಿತು. ಇದರಿಂದಾಗಿ ಒಂದೆಡೆ ಗೂಡು ತಂದಿದ್ದ ರೈತರು 24 ಗಂಟೆಗಳು ಕಾಯಬೇಕಾದ ಪರಿಸ್ಥಿತಿ ಇದ್ದರೆ, ಮತ್ತೊಂದೆಡೆ ನಾಳೆ ಆವಕವಾಗುವ ಅಷ್ಟೇ ಪ್ರಮಾಣದ ರೇಷ್ಮೆ ಗೂಡಿನಿಂದ ಬೆಲೆ ಕುಸಿಯುವ ಆಂತಕವಿದೆ.
ಶನಿವಾರ ಆಗಮಿಸುವ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಸ್ಥಳದ ಅಭಾವ ಮತ್ತು ಹೆಚ್ಚು ಗೂಡು ಆವಕವಾಗುವುದರಿಂದಾಗಿ ಗೂಡಿನ ದರ ಕುಸಿತವಾಗುತ್ತದೆ. ನೋವಿನಲ್ಲಿರುವ ರೈತರಿಗೆ ಗಾಯದ ಮೇಲೆ ಉಪ್ಪು ಸವರಿದಂತ ಪರಿಸ್ಥಿತಿ ಈಗ ಮೂಡಿದೆ.
ಕಳೆದ ಕೆಲ ದಿನಗಳಿಂದ ರೇಷ್ಮೆ ಗೂಡಿನ ದರ ಒಂದು ಕೆಜಿಗೆ 400 ರೂಗಳ ಆಸುಪಾಸಿನಲ್ಲಿತ್ತು. ಇದರಿಂದ ರೇಷ್ಮೆ ಬೆಳೆಗಾರರು ಕಳೆದ ವರ್ಷಗಳಲ್ಲಿ ಆದ ನಷ್ಟವನ್ನು ತುಂಬಿಕೊಳ್ಳುವ ಪ್ರಯತ್ನದಲ್ಲಿದ್ದರು. ಈಗ ತಮ್ಮದಲ್ಲದ ತಪ್ಪಿಗೆ ತಾವು ಬಲಿಪಶುಗಳಾಗುವ ಪರಿಸ್ಥಿತಿ ರೈತರದ್ದಾಗಿದೆ.
‘ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಒಮ್ಮೆಗೆ ಎರಡು ಸಾವಿರ ಲಾಟ್ ಬಂದರೆ ಅವನ್ನು ಇಡಲು ಸ್ಥಳವಿರುವುದಿಲ್ಲ. ಬಯಲಲ್ಲಿ ಬಿಸಿಲಲ್ಲಿ ಹಾಕಿದರೆ ಗೂಡು ಹಾಳಾಗುತ್ತದೆ, ರೈತರಿಗೆ ನಷ್ಟವಾಗುತ್ತದೆ. ನಮ್ಮಲ್ಲಿ ಹರಾಜು ಕೂಗುವ ಸಿಬ್ಬಂದಿಯ ಕೊರತೆಯೂ ಇದೆ. ಆದಷ್ಟು ರೇಷ್ಮೆ ಬೆಳೆಗಾರರು ಶನಿವಾರ ಬರದಿದ್ದರೆ, ಅವರಿಗೂ ಒಳಿತು, ನಮಗೂ ಅನುಕೂಲ’ ಎಂದು ರೇಷ್ಮೆ ಗೂಡಿನ ಮಾರುಕಟ್ಟೆಯ ಅಧಿಕಾರಿ ರತ್ನಯ್ಯಶೆಟ್ಟಿ ತಿಳಿಸಿದರು.
ತಾಲ್ಲೂಕಿನಾದ್ಯಾಂತ ಬಂದ್ ಯಶಸ್ವಿ
ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರ ಖಂಡಿಸಿ ತಾಲ್ಲೂಕಿನಾದ್ಯಾಂತ ಬಂದ್ ಯಶಸ್ವಿಯಾಗಿ ಆಚರಿಸಲಾಯಿತು.
ತಾಲ್ಲೂಕಿನ ರೈತ ಸಂಘಟನೆ ಮತ್ತು ವಿವಿದ ಸಂಘಟನೆಗಳು ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ತಾಲ್ಲೂಕಿನಾದ್ಯಾಂತ ರಸ್ತೆ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಳೆದ ೧೬೫ ದಿನಗಳಿಂದ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಸರಿಯಾಗಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಾರ್ಚ್ ೩ ರಂದು ಬೆಂಗಳೂರಿನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಜಿಲ್ಲೆದ್ಯಾಂತ ಪ್ರತಿ ಹಳ್ಳಿಯಿಂದ ಟ್ರಾಕ್ಟರ್ ಮೂಲಕ ಹೊರಟ ರೈತರನ್ನು ಬೆಂಗಳೂರಿನಲ್ಲಿ ತಡೆದ ಪೋಲಿಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದನ್ನು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಖಂಡಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಚಿಂತಾಮಣಿ- ಮತ್ತು ಚಿಕ್ಕಬಳ್ಳಾಪುರ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ವಿವಿಧ ಸಂಘಟನೆಗಳ ಸದಸ್ಯರು ಮಾನವ ಸರಪಣಿ ನಿರ್ಮಿಸಿ ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗಿದರು.
ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ರೈತರು ಮಾರುಕಟ್ಟೆ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ಸೂಚಿಸಿದರು. ತಾಲ್ಲೂಕು ವಕೀಲರ ಸಂಘ ಕಲಾಪ ಬಹಿಷ್ಕರಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು.
ಅಂಗಡಿ ಮುಗ್ಗಟ್ಟುಗಳು,ಹೋಟೆಲ್, ಚಿತ್ರಮಂದಿರ, ಬ್ಯಾಂಕ್, ಶಾಲಾ ಕಾಲೇಜುಗಳು, ವಿವಿಧ ಕಚೇರಿಗಳು, ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಬಂದ್ ದಿನಗಳಲ್ಲಿ ತೆರೆಯಲು ಅವಕಾಶವಿರುವ ಔಷಧಿ ಅಂಗಡಿಗಳು, ಪೊಲೀಸ್ ಲಾಠಿ ಏಟಿನಿಂದ ನೋವಿನಲ್ಲಿರುವ ರೈತರಿಗೆ ಮಾನಸಿಕ ಸ್ಥೈರ್ಯ ನೀಡುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚುವ ಮೂಲಕ ಬಂದ್ಗೆ ಸಾಥ್ ನೀಡಿದರು.
ನಗರದ ಉಲ್ಲೂರುಪೇಟೆಯ ನಿವಾಸಿ ಅಶ್ವಥ್ಥ ಎಂಬುವರಿಗೆ ಪೋಲಿಸರ ಲಾಠಿ ಪ್ರಹಾರದಿಂದ ಬೆರಳು ಮುರಿದಿರುವುದನ್ನು ಖಂಡಿಸಿ ಈ ಭಾಗದ ನಿವಾಸಿಗಳು ರಸ್ತೆಯಲ್ಲಿ ಬೆಂಕಿಯನ್ನು ಹಾಕಿ ಪ್ರತಿಭಟಿಸಿದರು.
ಅಪ್ಪೇಗೌಡನಹಳ್ಳಿ ಗ್ರಾಮದವರು ತಮ್ಮ ಗ್ರಾಮದ ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ನೂರಾರು ಯುವಕರು ಬೆಂಗಳೂರು ಮುಖ್ಯ ರಸ್ತೆಯಲ್ಲಿ ಮುಳ್ಳು ಮತ್ತು ಮರದ ದಿಂಡುಗಳನ್ನು ಹಾಕಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾದ್ಯಕ್ಷ ಹರೀಶ್ಗೆ ಪೋಲಿಸರ ಲಾಠಿ ಪ್ರಹಾರದಿಂದ ಕಾಲಿನ ಮೂಳೆ ಮುರಿದಿರುವ ಹಿನ್ನೆಲೆಯಲ್ಲಿ, ಮೇಲೂರು, ಮಳ್ಳೂರು ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಹಲವೆಡೆ ರಸ್ತೆಯಲ್ಲೇ ಅಡುಗೆಗಳನ್ನು ಮಾಡಿದರು.
ತಾಲ್ಲೂಕಿನ ಜಂಗಮಕೋಟೆ, ಎಚ್ಕ್ರಾಸ್, ನಾಗಮಂಗಲ, ಹೊಸಪೇಟೆ, ಮಳಮಾಚನಹಳ್ಳಿ, ಬೋದಗೂರು, ಆನೂರು, ದಿಬ್ಬೂರಳ್ಳಿ, ಮೇಲೂರು, ಮಳ್ಳೂರು, ಅಬ್ಲೂಡು, ಸೊಣ್ಣೆನಹಳ್ಳಿ, ತಲದುಮ್ಮನಹಳ್ಳಿ, ಬಚ್ಚಹಳ್ಳಿ, ಕೊತ್ತನೂರು, ಸಾದಲಿ ಗ್ರಾಮಗಳಲ್ಲಿ ರಸ್ತೆ ತಡೆನಡೆಸಿದ ರೈತರು ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಿಂದ ಹೊರಟ ಬೃಹತ್ ಪ್ರತಿಭಟನಾ ಟ್ರ್ಯಾಕ್ಟರ್ ರ್ಯಾಲಿ
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಸಂಯುಕ್ತಾಶ್ರಯದಲ್ಲಿ ಬಯಲು ಸೀಮೆಗೆ ಸಮಗ್ರ ಶಾಶ್ವತ ನೀರಾವರಿ ಒತ್ತಾಯಿಸಿ ಗುರುವಾರ ಬೃಹತ್ ಪ್ರತಿಭಟನಾ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ನಗರದಿಂದ ಹೊರಟ ಟ್ರ್ಯಾಕ್ಟರ್ಗಳಿಗೆ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಚಾಲನೆ ನೀಡಿದರು.
ನಗರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹೊರಟ ಪ್ರತಿಭಟನಾಕಾರರ ಟ್ರ್ಯಾಕ್ಟರ್ಗಳು ಹಂಡಿಗನಾಳದ ಬಳಿಯಲ್ಲಿ ಸೇರಿ ಹೊರಟವು. ಇತ್ತ ದಿಬ್ಬೂರಹಳ್ಳಿ ಕಡೆಯಿಂದ, ಜಂಗಮಕೋಟೆ, ಚೀಮಂಗಲ ಮೇಲೂರು, ಮಳ್ಳೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರ ಮುಂತಾದೆಡೆಯಿಂದಲೂ ಟ್ರ್ಯಾಕ್ಟರ್ ಹೊರಟವು.
ಖಾಲಿ ಬಿಂದಿಗೆಗಳನ್ನು ಕಟ್ಟಿಕೊಂಡು, ಬಿಸಿಲಿಗೆ ನೆರಳಾಗಿ ಸೊಪ್ಪು, ಬಟ್ಟೆಯನ್ನು ಕಟ್ಟಿಕೊಂಡು ಬೆಂಗಳೂರಿನ ಕಡೆಗೆ ಪ್ರತಿಭಟನಾಕಾರರು ಪ್ರಯಾಣ ಬೆಳೆಸಿದರು.
‘ನೀರಿಗಾಗಿ ಶಾಶ್ವತ ಯೋಜನೆಯನ್ನು ರೂಪಿಸದ ಜನಪ್ರತಿನಿಧಿಗಳಿಗೆ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ನಮ್ಮ ಕಷ್ಟವನ್ನು ತಿಳಿಸಲಿದ್ದೇವೆ. ಶ್ರಮಜೀವಿಗಳಾದ ಬಯಲುಸೀಮೆಯ ಜನರಿಗೆ ನೀರನ್ನು ನೀಡಿದಲ್ಲಿ ಈ ಭಾಗ ಸುಭಿಕ್ಷವಾಗುತ್ತದೆ. ಹಲವಾರು ವರ್ಷಗಳಿಂದ ಹೋರಾಡುತ್ತಿದ್ದರೂ ಶಾಶ್ವತ ಯೋಜನೆಯನ್ನು ರೂಪಿಸದೇ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತಿರುವ ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಭಟಿಸುತ್ತಿದ್ದೇವೆ’ ಎಂದು ರೈತಮುಖಂಡರು ತಿಳಿಸಿದರು.
ತಾದೂರು ಮಂಜುನಾಥ್, ಮುನಿನಂಜಪ್ಪ, ಕೆ.ವಿ.ವೇಣುಗೋಪಾಲ್, ವೈ.ರಾಮಕೃಷ್ಣಪ್ಪ, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರವೇ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನಗರದ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮ ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆಯಿತು.
ಗೌರವ ಅಧ್ಯಕ್ಷ ವಜೀರ್ ಅಹಮದ್, ಅಧ್ಯಕ್ಷ ಎಸ್.ಎ.ಸೈಯದ್ ಬಾಬಾ, ಉಪಾಧ್ಯಕ್ಷ ಆರ್.ರಾಜೇಶ್, ಕಾರ್ಯದರ್ಶಿ ಖಾಜಿ ಅಜೀಮುದ್ದೀನ್, ಸಹಕಾರ್ಯದರ್ಶಿ ವಿ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪತಿ, ಖಜಾಂಚಿ ಕೆ.ಎ.ವೇಣುಗೋಪಾಲ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ಚಂದ್ರಶೇಖರ್, ಸಂಚಾಲಕ ಎ.ದೇವರಾಜ್, ಸಹಸಂಚಾಲಕ ಅಸಜದ್, ಕಾನೂನು ಸಲಹೆಗಾರರಾಗಿ ಕೆ.ಯೋಗಾನಂದ್ ಆಯ್ಕೆಯಾಗಿದ್ದಾರೆ.
ಆಯ್ಕೆಯ ಕಾರ್ಯಕ್ರಮದಲ್ಲಿ ಚೌಡರೆಡ್ಡಿ, ವೈ.ಕೆ.ಮಂಜುನಾಥ್, ಡಿ.ಎಚ್.ನಾಗರಾಜ್, ನಾರಾಯಣಸ್ವಾಮಿ, ಆನಂದ್, ಚನ್ನಕೃಷ್ಣಪ್ಪ ಹಾಜರಿದ್ದರು.
ಕಂದಾಯ ಇಲಾಖೆಯ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪತಹಶೀಲ್ದಾರ್ ಹಾಗೂ ಶಿರಸ್ತೆದಾರರ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಸೇರ್ಪಡೆಗೊಳಿಸಬಾರದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಕಪ್ಪುಪಟ್ಟಿಯನ್ನು ಧರಿಸಿಕೊಂಡು ಮೌನಮೆರವಣಿಗೆ ನಡೆಸಿದರು.
ನಗರದ ಪ್ರವಾಸಿಮಂದಿರದಿಂದ ಮೆರವಣಿಗೆಯ ಮೂಲಕ ಕೋಟೆ ವೃತ್ತದ ವರೆಗೂ ಮೌನ ಮೆರವಣಿಗೆ ನಡೆಸಿದ ನಂತರ ತಹಶೀಲ್ದಾರ್ ಕೆ.ಎಂ.ಮನೋರಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಕಂದಾಯ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನಾಗರಿಕರಿಗೆ ತೊಂದರೆ ಬಾರದಂತೆ, ನಿಗದಿತ ಸಮಯದಲ್ಲಿ ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಕೆಲಸದಲ್ಲಿ ನಿರತರಾಗಿರುವ ಅಧಿಕಾರಿಗಳ ಸ್ಥಾನಗಳಲ್ಲಿ ಸರ್ಕಾರ ಪಂಚಾಯತ್ರಾಜ್ ಇಲಾಖೆಯಲ್ಲಿನ ಅಧಿಕಾರಿಗಳನ್ನು ವೀಲಿನಗೊಳಿಸಲು ನಿರ್ಧರಿಸಿದೆ. ಇದರಿಂದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಹಾಗೂ ಇಲಾಖೆಯಲ್ಲಿನ ಇತರೆ ಅಧಿಕಾರಿಗಳ ಮುಂಬಡ್ತಿಗಳಿಗೆ ತೊಡಕಾಗಲಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು. ಒಂದು ವೇಳೆ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್ ಎಚ್ಚರಿಕೆ ನೀಡಿದರು.
ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಉಪತಹಶೀಲ್ದಾರ್ ಮುನಿಕೃಷ್ಣಪ್ಪ, ಶಿರಸ್ತೆದಾರ್ ನರೇಂದ್ರಬಾಬು, ಲಕ್ಷ್ಮೀಕಾಂತಮ್ಮ, ಚುನಾವಣಾ ಶಿರಸ್ತೆದಾರ್ ಲಕ್ಷ್ಮೀನಾರಾಯಣ, ಜಂಗಮಕೋಟೆ ಹೋಬಳಿ ರಾಜಸ್ವ ನಿರೀಕ್ಷಕ ಮೋಹನ್, ವೆಂಕಟಲಕ್ಷ್ಮಮ್ಮ, ಗ್ರಾಮ ಲೆಕ್ಕಾಧಿಕಾರಿಗಳಾದ ಆನಂದ್, ನಾಗರಾಜ್, ಚಂದ್ರಮ್ಮ, ಅಕ್ಷತಾ, ಭವ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಜ್ಞಾನ ವಸ್ತುಪ್ರದರ್ಶನದ ಮೂಲಕ ಪರಿಸರದ ಬಗ್ಗೆ ಅರಿವು
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರನ್ನು ಉಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಬಚ್ಚಹಳ್ಳಿ ಗ್ರಾಮದ ವಿಜ್ಞಾನ ವಿದ್ಯಾರ್ಥಿ ಗೋಪಿನಾಥ್ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿದರು.
ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ವಿಜ್ಞಾನ ವಸ್ತುಪ್ರದರ್ಶನ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕತೆ ಬೆಳೆದಂತೆಲ್ಲಾ ಜನರು ತಮ್ಮ ಸ್ವಾರ್ಥಕ್ಕಾಗಿ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿರುವುದರಿಂದ ಸರಿಯಾದ ಸಮಯಕ್ಕೆ ಮಳೆ ಬೆಳೆಗಳಾಗದೆ ಕಂಗಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ೨೦ ವರ್ಷಗಳ ಹಿಂದೆ ಇದ್ದಂತಹ ಉತ್ತಮವಾದ ಪರಿಸರವನ್ನು ನಾವು ಕಳೆದುಕೊಂಡಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಹೆಸರಿನಲ್ಲಿ ಮರಗಿಡಗಳನ್ನು ಕಡಿಯಲಾಗುತ್ತಿದೆ. ಮರಳು ಗಣಿಗಾರಿಕೆಯಿಂದ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿಯುತ್ತಿವೆ. ಜಲಚರ ಪ್ರಾಣಿಗಳನ್ನು ಕೇವಲ ಚಿತ್ರಗಳಲ್ಲಿ ನೋಡಿಕೊಳ್ಳಬೇಕಾದಂತಹ ದುಸ್ಥಿತಿ ಒದಗಿ ಬಂದಿದೆ.
ಕೆರೆ ಕುಂಟೆಗಳು ಬತ್ತಿಹೋಗಿದ್ದು, ಜನರು ಕುಡಿಯುವ ನೀರಿಗಾಗಿ ಅನಿವಾರ್ಯವಾಗಿ ಕೊಳವೆಬಾವಿಗಳನ್ನು ಅವಲಂಬಿಸಬೇಕಾದಂತಹ ಪರಿಸ್ಥಿತಿ ಉಂಟಾಗಿರುವುದು ಮುಂದಿನ ಪೀಳಿಗೆಗೆ ಕಾದಿರುವ ದುರ್ಗತಿಯನ್ನು ಸೂಚಿಸುತ್ತದೆ. ಆದ್ದರಿಂದ ಶಾಲಾ ಮಕ್ಕಳು, ತಲಾ ಒಂದೊಂದು ಗಿಡವನ್ನು ನೆಟ್ಟು, ಪರಿಸರವನ್ನು ಸಂರಕ್ಷಣೆ ಮಾಡುವ ಕಡೆಗೆ ಹೆಚ್ಚು ಕಾಳಜಿವಹಿಸಬೇಕು. ನಾಗರಿಕರೂ ಕೂಡಾ ಮರಗಿಡಗಳನ್ನು ಬೆಳೆಸುವ ಮೂಲಕ ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂದು ಪ್ರಾತ್ಯಕ್ಷಿಕೆಯ ಮುಖಾಂತರವಾಗಿ ವಿವರಿಸಿದರು.
ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ, ತಿಮ್ಮಣ್ಣ, ಮುನಿಶಾಮಿ, ಗೋವಿಂದು, ವೆಂಕಟೇಶ್, ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.
ನೈರ್ಮಲ್ಯಕ್ಕಾಗಿ ಒತ್ತಾಯಪಡಿಸುವ ಕಾರ್ಯಾಗಾರ
ಪ್ರತಿಯೊಂದು ಮನೆಯಲ್ಲಿಯೂ ವೈಯಕ್ತಿಕ ಶೌಚಾಲಯ ನಿರ್ಮಾಣ ಸೇರಿದಂತೆ ಅಸುರಕ್ಷಿತ ತಿಪ್ಪೆಗುಂಡಿಗಳನ್ನು ಗ್ರಾಮದ ಹೊರಗೆ ಸಾಗಿಸುವುದು ಹಾಗೂ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ವೈಯಕ್ತಿಕ ಶುಚಿತ್ವದ ಗುಣಗಳು ಬೆಳೆಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯಮಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯ ಎಂದು ತಾಲ್ಲೂಕು ಪಂಚಾಯತಿ ಇಓ ಸಿ.ಎಸ್.ಶ್ರೀನಾಥಗೌಡ ಹೇಳಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಚಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನೈರ್ಮಲ್ಯಕ್ಕಾಗಿ ಒತ್ತಾಯಪಡಿಸುವ ತಾಲ್ಲೂಕು ಮಟ್ಟದ ಕಾರ್ಯಾಗಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶಿಡ್ಲಘಟ್ಟ ತಾಲ್ಲೂಕಿಗೆ ಮೂರು ಕಂತುಗಳಲ್ಲಿ ಸುಮಾರು ಎರಡು ಕೋಟಿಯಷ್ಟು ಅನುದಾನ ಜಿಲ್ಲಾ ಪಂಚಾಯತಿಯಿಂದ ಬಿಡುಗಡೆಯಾಗಿದ್ದು ಮಾರ್ಚ್ ೦೧ ರಿಂದ ಮಾ ೦೯ ರವರೆಗೂ ನಡೆಯುತ್ತಿರುವ ಈ ನೈರ್ಮಲ್ಯಕ್ಕಾಗಿ ಒತ್ತಾಯಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು ಗ್ರಾಮ ಪಂಚಾಯತಿಯ ನೆರವು ಪಡೆಯಬಹುದು ಎಂದರು.
ಈ ಯೋಜನೆಯ ಲಾಭವನ್ನು ಎಲ್ಲಾ ಕುಟುಂಬಗಳು ಪಡೆದುಕೊಳ್ಳುವ ಮೂಲಕ ಬಯಲು ಮಲವಿಸರ್ಜನೆ ಮುಕ್ತ ಗ್ರಾಮಗಳನ್ನು ನಿರ್ಮಿಸಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ಶಪಥ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಸಿಡಿಪಿಓ ಲಕ್ಷ್ಮೀದೇವಮ್ಮ, ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್.ಆರ್.ಭವ್ಯ ಮಂಜುನಾಥ್, ಪಿಡಿಓ ರಾಮಚಂದ್ರಪ್ಪ, ಮುಖಂಡರಾದ ನಾರಾಯಣಸ್ವಾಮಿ, ಹರಿನಾಥ್, ಮುನಿಯಪ್ಪ ಮತ್ತಿತರರು ಹಾಜರಿದ್ದರು.
ಗ್ರಾಮ ಪಂಚಾಯತಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿಯ ನೂತನ ಸದಸ್ಯೆ ತನುಜಾರಘು ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಮಂಗಳವಾರ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಬೈರೇಗೌಡ, ಉಪಾಧ್ಯಕ್ಷೆ ಮುನಿರತ್ನಮ್ಮ, ಮಾಜಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ಕಾರ್ಯದರ್ಶಿ ರಾಜಣ್ಣ ಹಾಜರಿದ್ದರು.

