ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯಿಂದ ಬಜೆಟ್ ರೂಪಿಸಿದೆ ಎಂದು ಆರೋಪಿಸಿ ಸಿ.ಐ.ಟಿ.ಯು ನೇತೃತ್ವದಲ್ಲಿ ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಗ್ರಾಮ ಪಂಚಾಯತಿ ನೌಕರರು ತಾಲ್ಲೂಕು ಕಚೇರಿಯ ಮುಂದೆ ಮಂಗಳವಾರ ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ಕೇವಲ ಕಾರ್ಪೊರೇಟ್ ಕಂಪೆನಿಗಳಿಗೆ ಪೂರಕವಾಗುವಂತೆ ಬಜೆಟ್ ಮಂಡಿಸಿದೆ. ಬಡ ಕಾರ್ಮಿಕರನ್ನು ಕಡೆಗಣಿಸಿದೆ. ಬಿಸಿಯೂಟ, ಅಂಗನವಾಡಿ, ಗ್ರಾಮ ಪಂಚಾಯತಿ ನೌಕರರು ಹಲವಾರು ವರ್ಷಗಳಿಂದ ದುಡಿಯುತ್ತಿದ್ದರೂ ಅವರ ಸೇವಾ ಭದ್ರತೆಯನ್ನು ನೀಡದೆ, ಕನಿಷ್ಠವೇತನ ಜಾರಿಗೊಳಿಸದೆ ಕೇಂದ್ರ ಸರ್ಕಾರ ನುಳುಚಿಕೊಳ್ಳುತ್ತಿದೆ. ಸಾಮಾಜಿಕ ನ್ಯಾಯದ ಭಾಗವಾಗಿರುವ ಬಿಸಿಯೂಟ ಯೋಜನೆಗೆ ಸರ್ಕಾರ ತನ್ನ ಬಜೆಟ್ನಲ್ಲಿ 13,215 ಕೋಟಿ ರೂಗಳಿಂದ 9,236 ಕೋಟಿ ರೂಪಾಯಿಗಳಿಗೆ ಅನುದಾನ ಇಳಿಸಿದೆ. ಇದರಿಂದಾಗಿ ಈ ಯೋಜನೆಯ ಮೇಲೆ ಕರಿನೆರಳು ಬೀಳುವ ಸಾಧ್ಯತೆಯಿದೆ.
ದುಡಿಯುವ ಮಹಿಳೆಯರಿಗೆ ಕೇಂದ್ರ ಸರ್ಕಾರ 7 ವರ್ಷದಿಂದ ಸಂಭಾವನೆ ಹೆಚ್ಚಿಸಿಲ್ಲ. ಆಶಾ ಕಾರ್ಯಕರ್ತೆಯರ ಪರಿಸ್ಥಿತಿ ಶೋಚನೀಯವಾಗಿದೆ. ದುಡಿಯುವ ವರ್ಗದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಪ್ರತಿಭಟಿಸುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಧಹನ ಮಾಡಿದರು.
ತಹಶೀಲ್ದಾರ್ ಮನೋರಮಾ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿದರು.
ಸಿಐಟಿಯು ಸಂಘಟನೆಯ ಮುನಿಲಕ್ಷ್ಮಮ್ಮ, ಎಂ.ಆರ್.ಗೀತಾ, ಅಶ್ವತ್ಥಮ್ಮ, ಡಿವೈಎಫ್ಐ ಮುನೀಂದ್ರ, ಆಶಾಕಾರ್ಯಕರ್ತೆಯರ ಅಧ್ಯಕ್ಷೆ ನಂಜಮ್ಮ ಮತ್ತಿತತರರು ಹಾಜರಿದ್ದರು.
ಸಿ.ಐ.ಟಿ.ಯು ನೇತೃತ್ವದಲ್ಲಿ ಪ್ರತಿಭಟನೆ
ತಾಲ್ಲೂಕಿನಲ್ಲಿ ಮಹಾನುಭಾವರ ಮೂರ್ತಿಗಳ ನಿರ್ಮಾಣ
ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಕನಕದಾಸರು, ಮೀರಾಬಾಯ್, ಕಿಟಲ್, ಬಸವಣ್ಣ ಮುಂತಾದ ಮಹಾನುಭಾವರ ಮೂರ್ತಿಗಳು ತಾಲ್ಲೂಕಿನ ಚೀಮಂಗಲ ಪಂಚಾಯತಿಯ ನಾರಾಯಣದಾಸರಹಳ್ಳಿಯಲ್ಲಿ ರೂಪುಗೊಳ್ಳುತ್ತಿವೆ. ನಾಡಿನ ನಾನಾ ಕಡೆ ನಡೆಯುವ ಸನ್ಮಾನ ಸಮಾರಂಭಗಳಿಗೆ ಈ ಮಹಾನ್ ವ್ಯಕ್ತಿಗಳ ಮೂರ್ತಿಗಳಿರುವ ನೆನಪಿನ ಕಾಣಿಕೆಗಳು ಬಳಕೆಯಾಗುತ್ತಿವೆ.
ಎನ್.ಪುರುಷೋತ್ತಮ್ ಎಂಬ ನಾರಾಯಣದಾಸರಹಳ್ಳಿಯ ಕಲಾವಿದ ರೂಪಿಸುವ ಈ ಮೂರ್ತಿಗಳು ನಾಡಿನಲ್ಲೆಲ್ಲಾ ತಾಲ್ಲೂಕಿನ ಕಲೆಯ ಪ್ರತಿನಿಧಿಗಳಾಗಿ ಹೆಮ್ಮೆಯ ಕುರುಹುಗಳಾಗಿ ಪಸರಿಸುತ್ತಿವೆ.
ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳನ್ನು ರೂಪಿಸುವ ಕೆಲಸ ಸುಲಭವಲ್ಲ. ಅದಕ್ಕೆ ಕಲೆ, ಶ್ರಮ, ಮಣ್ಣಿನ ಹದ, ಮಿಶ್ರಣ ಮಾಡಬೇಕಾದ ರಸಾಯನಿಕಗಳ ಜ್ಞಾನ ಅತ್ಯವಶ್ಯ. ಇವೆಲ್ಲವನ್ನೂ ಕರಗತ ಮಾಡಿಕೊಂಡಿರುವ ಗ್ರಾಮೀಣ ಪ್ರತಿಭೆಯಿಂದ ಹಲವಾರು ಪ್ರತಿಮೆಗಳು ತಯಾರಾಗುತ್ತಿವೆ.
ಹದವಾದ ಮಣ್ಣನ್ನು ಆರಿಸಿಕೊಂಡು ಚಿತ್ರಿತ ಮೂರ್ತಿಯ ರೂಪವನ್ನು ತಯಾರಿಸಿಕೊಳ್ಳುವ ಇವರು ಸಿಲಿಕಾನ್ ರಬ್ಬರನ್ನು ಬಳಸಿ ಅಚ್ಚನ್ನು ತಯಾರಿಸಿಕೊಳ್ಳುತ್ತಾರೆ. ಕಣ್ಣು, ಮೂಗು, ಮುಖದ ಅಳತೆ, ಆಕಾರ ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ತಯಾರಿಸುವುದು ಕಲಾವಿದನ ಕೈಚಳಕವನ್ನು ತೋರಿಸುತ್ತದೆ. ನಂತರ ಫೈಬರ್ ಪದಾರ್ಥದಿಂದ ಅಚ್ಚಿನೊಳಗೆ ಹಾಕಿ ಮೂರ್ತಿಯನ್ನು ತಯಾರಿಸುತ್ತಾರೆ. ಆಮೇಲೆ ಬಣ್ಣ ಹಚ್ಚುತ್ತಾರೆ.
ಬಸವಣ್ಣ, ಅಂಬೇಡ್ಕರ್, ಕನಕದಾಸರು, ಗಾಂಧೀಜಿ ಮೂರ್ತಿಗಳನ್ನು ಅವರವರ ಜಯಂತ್ಯುತ್ಸವಗಳಲ್ಲಿ ನೆನಪಿನ ಕಾಣಿಕೆಯಾಗಿ ನೀಡಲು ಇವರಿಂದ ಮಾಡಿಸಿಕೊಳ್ಳುತ್ತಾರೆ. ಬಿಬಿಎಂಪಿ ಗೆ ಕೆಂಪೇಗೌಡರ ಮೂರ್ತಿಗಳನ್ನು, ಗಾಂಧಿಭವನಕ್ಕೆ ಗಾಂಧೀಜಿ ಮೂರ್ತಿಗಳನ್ನು ಮಾಡಿಕೊಟ್ಟಿದ್ದಾರೆ. ದಸರಾ ಉತ್ಸವಕ್ಕೆ ಮಾಡುವ ಟ್ಯಾಬ್ಲೋ ಕೆಲಸದಲ್ಲೂ ಪಾಲ್ಗೊಂಡಿದ್ದಾರೆ. ಶಿಡ್ಲಘಟ್ಟದಲ್ಲಿನ ಕೆಂಪೇಗೌಡ ಪ್ರತಿಮೆಯ ಕೆಲಸದಲ್ಲೂ ಭಾಗಿಯಾಗಿದ್ದಾರೆ.
‘ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ನನಗೆ ಆಸಕ್ತಿಯಿತ್ತು. ಬಿಡದಿಬಳಿಯ ಜೋಗದದೊಡ್ಡಿಯಲ್ಲಿ ಕೆನರಾಬ್ಯಾಂಕ್ ಕರಕುಶಲಕೇಂದ್ರದಲ್ಲಿ ತರಬೇತಿಯನ್ನು ಪಡೆದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಶೀಬಿರಗಳಲ್ಲಿ ಪಾಲ್ಗೊಂಡೆ. ಆನಂತರ ಹಲವೆಡೆಯಿಂದ ನನಗೆ ಕೆಲಸ ಮಾಡಲು ಅವಕಾಶಗಳು ದೊರೆಯಿತು. ಈಗೀಗ ನೆನಪಿನ ಕಾಣಿಕೆಗಳ ಮೂರ್ತಿಗಳ ಬೇಡಿಕೆ ಬರುತ್ತಿವೆ. ಸುಮಾರು ಹತ್ತು ವರ್ಷಗಳಿಂದಲೂ ಇದೇ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದೇನೆ. ನಗರಗಳಲ್ಲಿರುವವರಿಗೆ ಸಿಗುವಷ್ಟು ಅವಕಾಶಗಳು ಸಿಗದಿದ್ದರೂ ಇಲ್ಲಿಯೇ ಇದ್ದು ಕಲೆಯಿಂದ ಬದುಕಲು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಎನ್.ಪುರುಷೋತ್ತಮ.
ಕಲೆಯನ್ನು ನಂಬಿರುವ ಈ ಕಲಾವಿದನಿಗೆ ದೆಹಲಿ ಕರ್ನಾಟಕ ಸಂಘ, ಲೇಪಾಕ್ಷಿ ಮತ್ತು ಕೊಪ್ಪಳದ ಜವಾಹರ ನವೋದಯ ವಿದ್ಯಾಲಯ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳು ಲಭಿಸಿವೆ.
ಪುರುಷೋತ್ತಮ್ ಮೊಬೈಲ್ ಸಂಖ್ಯೆ : 9611288202
ವಧು ಸಮಸ್ಯೆಯತ್ತ
ಮಲೆನಾಡಿನಲ್ಲಿ ಅದೂ ವಿಶೇಷವಾಗಿ ಕೃಷಿ ಕುಟುಂಬಗಳಿಗೆ, ವಧುಗಳ ಕೊರತೆ. ಹಳ್ಳಿಯಲ್ಲಿ ಕೃಷಿ ಅಥವಾ ಇನ್ನಿತರ ಚಿಕ್ಕ ಪುಟ್ಟ ವೃತ್ತಿಗಳಲ್ಲಿ ತೊಡಗಿದವರಿಗೆ ಹೆಣ್ಣುಗಳು ಸಿಕ್ಕುತ್ತಿಲ್ಲ, ಒಪ್ಪುತ್ತಿಲ್ಲ. ಕಾಶ್ಮೀರದಿಂದಲಾದರೂ ಸರಿ ವಧುಗಳನ್ನು ಆಮದುಮಾಡಿಕೊಳ್ಳಬೇಕಾದ ಅನಿವಾರ್ಯತೆ ಅಥವಾ ಅಗತ್ಯ, ಅದಕ್ಕಾಗಿ ಸಂಘಟನೆಗಳ ಮೂಲಕ ಪ್ರಯತ್ನ, ಯಶಸ್ಸು ಸಿಕ್ಕೀತೆ? ಕಾದುನೋಡಬೇಕು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು, ಹಳ್ಳಿಗಳಲ್ಲಿನ ಮತ್ತು ಚಿಕ್ಕಪುಟ್ಟ ಪಟ್ಟಣಗಳಲ್ಲಿನ ಗಂಡುಗಳಿಗೂ ವಧುಗಳ ಬರ. ಪರಿಹಾರ ಕಾಣದೆ ಕಂಗೆಟ್ಟು ಅಶ್ವತ್ಥವೃಕ್ಷ ಸುತ್ತುವುದು ಒಂದು ಕಡೆ ಸಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಕಳೆದ ವರ್ಷ ಮದುವೆಯಾದ, ಕಳೆದು ತಿಂಗಳು ಮದುವೆಯಾಗಿ ಹೋದವರು, ಈಗ ಬೇರೆ ಬೇರೆಯಾಗಿದ್ದಾರಂತೆ, ವಿಚ್ಚೇದನವಾಯಿತಂತೆ, ಅರ್ಜಿ ಹಾಕಿದ್ದಾರಂತೆ ಎಂಬಿತ್ಯಾದಿ ಮಾತುಗಳು ಬೆಂಗಳೂರು ಮತ್ತು ದೂರದ ಶಹರಗಳಿಂದ ಕೇಳಿಬರುತ್ತಿದ್ದು, ಅಲ್ಲಿಗೆ ಆಸೆಪಟ್ಟು ಹೆಣ್ಣು ಕಳಿಸಿದ ಹೆಣ್ಣು ಹೆತ್ತವರು ಇಲ್ಲಿ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಇದ್ದರೆ, ಅಲ್ಲಿ ದುಡಿಮೆಯಲ್ಲಿರುವವರು ಇದೆಲ್ಲಾ ಮಾಮುಲಿ ಎಂಬಂತೆ ಜಾಲಿಯಾಗಿದ್ದಾರೆಂಬುದು ಸತ್ಯವೋ, ಸುಳ್ಳೋ ಮಾತುಗಳಂತೂ ದಿನನಿತ್ಯ ಕೇಳಿಬರುತ್ತಿರುವುದು ಸತ್ಯ.
ವಧುವಿನ ಕೊರತೆಯ ಸಮಸ್ಯೆಯೋ, ವಧುವಿನದ್ದೆ ಸಮಸ್ಯೆಯೋ ಅರ್ಥವಾಗದ ಸಂಗತಿಯಾದಂತಿದೆ, ಗಂಡು ಹೆಣ್ಣಿನ ಅನುಪಾತದಲ್ಲಾದ ವ್ಯತ್ಯಾಸ, ಹಳ್ಳಿಗಳಲ್ಲಿರುವ ಗಂಡುಗಳಿಗೆ ಹೆಣ್ಣುಗಳೆ ಸಿಗದಂತೆ ಆಗಿರುವುದಕ್ಕೆ ಕಾರಣವೇ? ನಿಜವಾಗಿ ಯೋಚಿಸಿದರೆ ವ್ಯತ್ಯಾಸ ಚಿಕ್ಕದು, ಆದರೆ ಸಮಸ್ಯೆ ದೊಡ್ಡದಾಗಿದೆ. ಹಾಗಂತ ಸಮಸ್ಯೆಯ ವೈಭವೀಕರಣ ಮಾಡಲಾಗುತ್ತದೆ ಎಂದು ಕೂಡ ಹೇಳುವಂತಿಲ್ಲವಾಗಿದೆ. ಇಂಥ ಸಮಸ್ಯೆಯ ಹಿಂದೆ, ಆಧುನಿಕ ವಧುಗಳ ಆಧುನಿಕ ದೃಷ್ಟಿಕೋನ ಕೂಡ ಕೆಲಸಮಾಡುತ್ತಿದೆ. ಹಳ್ಳಿ ಮತ್ತು ಚಿಕ್ಕ, ಪುಟ್ಟ ಪಟ್ಟಣಗಳ ಹೆಣ್ಣುಮಕ್ಕಳಿಗೆ, ನೌಕರಿ ಮತ್ತು ನಗರದ ಪ್ರಬಲ ಆಕರ್ಷಣೆ, ಅದೂ ಸಾಪ್ಟವೇರ್, ಮಲ್ಟಿನ್ಯಾಶನಲ್ ಬೆಂಗಳೂರು ಅಥವಾ ಅಂಥ ಲಗ್ನವಾಗುವವರು ಉದ್ಯೋಗದಲ್ಲಿರಬೇಕು, ಬೆಂಗಳೂರು ಅಥವಾ ಅಂಥ ಪಟ್ಟಣಗಳಲ್ಲೆ ಇರಬೇಕು. ಧಾರವಾಡ, ಬೆಳಗಾವಿಗಳು ಯೋಗ್ಯವಲ್ಲ!.
ಕೈತುಂಬ ಸಂಬಳ ತರಬೇಕು. ತಾನು ಮತ್ತು ತನ್ನ ಗಂಡ ಮಾತ್ರ ಖುಷಿಯಾಗಿ ಪಟ್ಟಣಿಗರಾಗಿರಬೇಕು. ಹೀಗೆ ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಹಳ್ಳಿಗಳತ್ತ ದೃಷ್ಟಿ ಹರಿಸುವವರ ಸಂಖ್ಯೆ ಸಹಜವಾಗಿ ಇಳಿಮುಖವಾಗುತ್ತಿದೆ. ಅಲ್ಲಿ ಅವರೆಷ್ಟು ಹೊತ್ತು ಹೊರಗಡೆ ದುಡಿಯುತ್ತಿರುತ್ತಾರೆ? ಎಷ್ಟು ಹೊತ್ತು ಮನೆಯಲ್ಲಿರುತ್ತಾರೆ? ಎಷ್ಟು ಬಾರಿ ಮನೆಯಲ್ಲೇ ಊಟ-ತಿಂಡಿ ಮಾಡುತ್ತಾರೆ? ದಿನೇ ದಿನೇ ಅವರ ಆರೋಗ್ಯವೇನಾಗುತ್ತಿದೆ ಎಂದು ಯಾರು ಯೋಚಿಸುವುದೇ ಇಲ್ಲ. ಹಣದ ಎದುರು ಎಲ್ಲವೂ ಗೌಣವಾಗುತ್ತದೆ.
ಇಲ್ಲಿನ ಗ್ರಾಮೀಣ ಪ್ರದೇಶದ ಮತ್ತು ಚಿಕ್ಕ, ಪುಟ್ಟ ಪಟ್ಟಣಗಳ ಹುಡುಗಿಯರೆಲ್ಲ, ಕಾಲೇಜು ಶಿಕ್ಷಣದ ಲಭ್ಯತೆ ಹತ್ತಿರದಲ್ಲೆ ಇರುವ ಕಾರಣದಿಂದ ಮತ್ತು ಕೆಲವೂಮ್ಮೆ ಮನೆಯಲ್ಲಿ ಹೊತ್ತು ಹೋಗದ ಕಾರಣದಿಂದ ಹಾಗೂ ಮದುವೆ ಮಾಡಲು ಇನ್ನು ಕೆಲ ವರ್ಷಗಳು ಕಳೆಯಬೇಕೆಂಬ ಕಾರಣದಿಂದ ಯಾವುದಾದರು ಒಂದು ಡಿಗ್ರಿಯನ್ನು ಪೂರೈಸುತ್ತಾರೆ. ಹಾಗೇ ಸ್ಥಳೀಯವಾಗಿ ಸಾಧ್ಯವಾದರೆ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ದೂರಶಿಕ್ಷಣದ ಉಪಯೋಗವನ್ನು ಪಡೆಯುತ್ತಾರೆ. ಹೊರ ಪ್ರಪಂಚದ ಆಕರ್ಷಣೆ ಅಧಿಕವಾಗುತ್ತದೆ. ತಮ್ಮೊಂದಿಗಿದ್ದವರು ಬೆಂಗಳೂರಿಗೆ ಮದುವೆಯಾಗಿ ಅಥವಾ ಕೆಲಸಕ್ಕಾಗಿ ತೆರಳಿದರೆ, ತಾವೂ ಹಾಗೇ ತೆರಳಬೇಕೆಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾದದ್ದರಿಂದ ಇಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಬಹತೇಕ ಹುಡುಗರಿಗೆ ಹೆಣ್ಣುಗಳು ಲಭ್ಯವಾಗುವುದಿಲ್ಲ. ಹುಡುಗರು ಕೂಡ ಡಿಗ್ರಿ ಪಡೆದೂ ಊರಿನಲ್ಲೇ ಇರಲು ದೊಡ್ಡ ಮನಸ್ಸು ಮಾಡಿ ಇದ್ದರೆ, ಅವರಿಗೆ ‘ಮದುವೆ’ ಕನಸಿನ ಮಾತಾಗುತ್ತಿರುವುದರಿಂದ, ಅವರೆಲ್ಲರೂ ಬೆಂಗಳೂರಿನತ್ತ ಗುಳೆ ಹೋಗುತ್ತ, ಪ್ರತಿ ಹಳ್ಳಿಗಳು ವೃದ್ಧರಿಗಷ್ಟೆ ಸೀಮಿತವಾಗಿ, ಒಟ್ಟಾರೆ ಪಾಳು ಬೀಳುತ್ತದೆ. ಕೆಲಸ ಮಾಡುವ ಚೈತನ್ಯವಿರುವವರು ಪಟ್ಟಣಕ್ಕೆ ಕೈಲಾಗದವರು, ಕೈ ಸಾಗದವರು ಹಳ್ಳಿಗಳಲ್ಲಿ, ಮತ್ತೆ ಈ ದೇಶ ಹಳ್ಳಿಗಳ ದೇಶ!
ಹಿಂದೆ ಬಯಲು ಸೀಮೆಯ ಕಡೆ ಹುಡುಗಿಯೊಬ್ಬಳು ಹುಡುಗನನ್ನು ಆಯ್ಕೆಮಾಡಿಕೊಳ್ಳುವಾಗ ಒಂದು ಪದ್ಧತಿಯಿದ್ದಿತ್ತಂತೆ. ಅದು ಆ ಹುಡುಗನಿಗೆ ಹಸ್ತಲಾಘವ ಮಾಡುವ ಮುಖಾಂತರ, ಅದು ಗಟ್ಟಿಯಾಗಿ, ಬಿರುಸಾಗಿದ್ದರೆ, ಹುಡುಗ ಯೋಗ್ಯ ‘ಅವನು ಕಾಯಕದಲ್ಲಿ ತೊಡಗಿದವನು. ಅದೇ ಹಸ್ತ ಮೃದುವಾಗಿದ್ದ ಪಕ್ಷದಲ್ಲಿ ಆತ ಮೈಗಳ್ಳ, ಸೋಮಾರಿ ಅಂಥವನನ್ನವರು ತಿರಸ್ಕರಿಸುತ್ತಿದ್ದರಂತೆ. ಆದರೆ ಇಂದಿನ ಸಂದರ್ಭದಲ್ಲಿ ಮೃದು ಹಸ್ತವೇ ಎಲ್ಲರ ಬಯಕೆ ಯಾವುದೇ ಹುಡುಗಿಯಾಗಲಿ, ಅವಳನ್ನು ಹೆತ್ತವರಾಗಲಿ ಹುಡುಕುವುದು ಸಾಫ್ಟ್‍ವೇರ್‍ಗಳನ್ನು, ಪಟ್ಟಣವಾಸಿಗಳನ್ನು, ಡಾಲರ್ ತರುವವರನ್ನು, ಇದರೊಟ್ಟಿಗೆ ಹುಡುಗನಿಗೆ ಅವನ ತಾಯಿ, ತಂದೆಯರ ಜವಬ್ದಾರಿ ಇರಬಾರದು. ಊರಲ್ಲಿ ಸಾಕಷ್ಟು ಆಸ್ತಿ ಇದ್ದರೆ ಒಳ್ಳೆಯದು. (ಅನಿವಾರ್ಯವಾದಾಗ ಬಳಸಿಕೊಳ್ಳಲು, ಪಿಕ್‍ನಿಕ್‍ಗೆ ಬಂದು ಹೋದ ಹಾಗೆ ಒಂದು ಹೋಗಲು) ಹಾಗೇ ಪೇಟೆಯಲ್ಲಿನ ಹುಡುಗಿಯರು, ಹುಡುಗರು ತಮಗಿಷ್ಟ ಬಂದವರನ್ನು ಪ್ರೀತಿಸಿ ಮದುವೆಯಾಗುತ್ತಾರೆಂದಾಗಲು ಜಾತಿ, ಪಂಗಡ ಇತ್ಯಾದಿಗಳ ಪ್ರಶ್ನೆ ಅಪ್ರಸ್ತುತವೇ, ಅದೇನಿದ್ದರೂ ಹಳ್ಳಿಗಳ ಸೊತ್ತು. ಇಲ್ಲೂ ಸಡಿಲಿಕೆ ಪ್ರಾರಂಭವಾಗಿದ್ದರು ಆ ಪ್ರಮಾಣದಲ್ಲಿ ಬಂದಿಲ್ಲ.
ಆಶ್ಚರ್ಯದ ಸಂಗತಿಯೆಂದರೆ ಯಾವುದೇ ಹುಡುಗಿ ಅಥವಾ ಹೆತ್ತವರು, ಹುಡುಗನೊಬ್ಬನನ್ನು ಹುಡುಕುವ ಸಂದರ್ಭದಲ್ಲಿ ಆ ಹುಡುಗ ಯೋಗ್ಯನೇ? ಪ್ರಾಮಾಣಿಕನೇ? ಹೃದಯವಂತಿಕೆ ಉಳ್ಳವನೇ? ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲವನೇ? ಮಡದಿಯಾದವಳಿಗೂ ಅಗತ್ಯವಾದ (ಅಡಂಬರವಿಲ್ಲ) ಅನುಕೊಲತೆಗಳನ್ನು ಒದಗಿಸಿಕೊಡಬಲ್ಲವನೇ? ಎಂದು ವಿಚಾರಿಸುವುದಿಲ್ಲ. ಮೂಲಭೂತವಾಗಿ ಬೇಕಾದ ಗುಣಗಳನ್ನು ಗ್ರಹಿಸುವುದನ್ನು ಬಿಟ್ಟು ಹೀಗಾದಾಗ ಸಹಜವಾಗಿಯೇ, ಗ್ರಾಮೀಣ ಪ್ರದೇಶದ ಕೃಷಿ, ಇನ್ನಿತರ ವೃತ್ತಿಗಳಲ್ಲಿರುವ ಯೋಗ್ಯ, ಸಂಭಾವಿತ, ಸಶಕ್ತ ಗಂಡುಗಳಿಗೆ ಹೆಣ್ಣುಗಳು ದೊರಕುವುದಿಲ್ಲ, ವಿಪರ್ಯಾಸದ ಇನ್ನೊಂದು ಸಂಗತಿ ಎಂದರೆ, ಮನೆಯಲ್ಲಿರುವ ಮಗಳಿಗೆ ಬೆಂಗಳೂರಿನ ಸಾಫ್ಟ್‍ವೇರ್ ಹುಡುಗನೇ ಬೇಕು. ಮನೆಯಲ್ಲಿರುವ ಮಗನಿಗೆ ಯಾರಾದರೂ ಒಳ್ಳೆಯ ಹುಡುಗಿಯನ್ನು ಕೊಡಬೇಕು! ತಮಗಾದರೆ ಒಂದು ಮಾನದಂಡ, ಬೇರೆಯವರಿಗಾದರೆ ಇನ್ನೊಂದು ಮಾನದಂಡ. ಹೀಗಾಗಿ ಇವರಿಚ್ಚೆಯಂತೆ ಹೆಣ್ಣುಮಕ್ಕಳು ಬೆಂಗಳೂರು (ಉದಾಹರಣೆಗೆ ಹೇಳಿದ ನಗರ) ಕಡೆ ನಡೆದರು. ಗಂಡು ಮಕ್ಕಳಿಗೆ ಇಲ್ಲಿನವರು ಸಿಗುತ್ತಿಲ್ಲ, ಬೆಂಗಳೂರಿನ ಕಡೆಯಿಂದತೂ ಖಂಡಿತ ಬರುವುದಿಲ್ಲ. ಇಲ್ಲಿನ ನೆಲ, ಜಲ, ಕೃಷಿಯ ಸಂಪೂರ್ಣ ಪರಿಚಯವಿರುವ ಹೆಣ್ಣುಮಕ್ಕಳಿಗೇ ಇದು ಬೇಡವಾದರೆ, ಬೇರೆಯವರಿಗೆ ಬೇಕಾಗಲಿ ಎಂದು ಹೇಗೆ ತಾನೇ ಹಾರೈಸಲು ಸಾಧ್ಯ.
ಆಕರ್ಷಣೆಯ ಕೇಂದ್ರವಾದ ನಗರ ಮತ್ತು ನೌಕರಿಗೆ ಮರುಳಾಗಿ ತೆರಳುವುದೇನೋ ಸರಿ. ಆದರೆ ಅಲ್ಲಿನ ಬದುಕಿಗೆ ಅಷ್ಟು ಸಹಜವಾಗಿ ಹೊಂದಿಕೊಳ್ಳಲಾಗುತ್ತದೆಯೇ ಎಂದು ಕೂಡ ಯಾರೂ ವಿಚಾರ ಮಾಡುತ್ತಿಲ್ಲ. ಅಲ್ಲಿನ ಜಗತ್ತು ಮತ್ತು ಅಲ್ಲಿನ ರೀತಿ ರಿವಾಜುಗಳಿಗೆ ಹೊಂದಿಕೊಳ್ಳಲಾಗದೆ ಅನಂತರ ಚಡಪಡಿಸುತ್ತ ಸಿಡಿಮಿಡಿಗೊಳ್ಳುತ್ತಿದ್ದರೆ, ಮತ್ತೆಲ್ಲಿ ತನ್ನಿಂದ ತಾನೇ ‘ವಿಚ್ಛೇದನ’ ಹುಟ್ಟಿಕೊಳ್ಳುತ್ತದೆ. ಅಲ್ಲಿನ ಹುಡುಗರು ನಡಾವಳಿಕೆಗೆ ಹೊಂದಿಕೊಂಡು ತಾವೂ ಹಾಗೇ ಒಂದಿಷ್ಟು ದುಡಿಯುತ್ತ ನಡಾವಳಿಕೆಗೆ ಹೊಂದಿಕೊಂಡು ಸತತ ಕಸರತ್ತುಗಳಿಗೆ ಸಿದ್ದರಾದರೆ ಹೇಗೋ ಸಾಗಿತು ಬದುಕು. ಹೇಗೆ ಹೇಗೋ ಗೋಚರಿಸುವ ಭ್ರಮಾಲೋಕ.
ಹೀಗಾಗಿ ‘ವಧು ಸಮಸ್ಯೆ’ ಎನ್ನುವುದು ಕೇವಲ ಗಂಡು, ಹೆಣ್ಣಿನ ಸಂಖ್ಯಾನುಪಾತದಿಂದಷ್ಟೇ ಸೃಷ್ಠಿಯಾದದ್ದಲ್ಲ, ಆಧುನಿಕ ಬದುಕಿನ ಬಗೆ ಬಗೆಯಾದ ಆಕರ್ಷಣೆಗಳಿಂದ ಸೃಷ್ಟಿಯಾದದ್ದು ಎಂಬುದನ್ನು ಅಲಕ್ಷಿಸುವಂತಿಲ್ಲ. ಪ್ರತಿಯೊಂದು ಹಳ್ಳಿಯೂ ಇಂದು ಹೆಚ್ಚು ಕಡಿಮೆ ಸುಧಾರಣೆಯಾಗುತ್ತಿದ್ದು ಸಾಧ್ಯವಾದಷ್ಟು ಮೂಲಭೂತ ಸೌಕರ್ಯಗಳ ಲಭ್ಯತೆ ಕೂಡ ಒದಗಿಸುತ್ತಿದೆ. ಎಲ್ಲ ಹಳ್ಳಿಗಳಿಗೂ ಒಂದು ರೀತಿಯಲ್ಲಿ ನಗರವಾಗಲು ಹವಣಿಸುತ್ತಿವೆ. ವಧುಗಳಿಗೆ ಗೋಚರಿಸುತ್ತಿದೆಯಾ? ಅಥವಾ ಗಾಂಧಾರಿಯಂತೆ ಕೃತಕ ಕುರುಡತನಕ್ಕೆ ತುತ್ತಾಗಿದ್ದಾರಾ ಬಹುಶಃ ಸತ್ಯದರ್ಶನವಾಗುವುದರೊಳಗಾಗಿ, ಮದುವೆಯನ್ನು ಕಾಣದ ಅನೇಕ ಗ್ರಾಮೀಣ ಪ್ರದೇಶ ಹುಡುಗರು ಹಾಗೇ ಹಳಹಳಿಕೆಯಲ್ಲೆ ಮುಪ್ಪಿಗೆ ಸಾಗುತ್ತಿರುವುದಂತೂ ಸದ್ಯದ ವಾಸ್ತವ ಸಂಗತಿ.
ರವೀಂದ್ರ ಭಟ್ ಕುಳಿಬೀಡು.
ಅಪಘಾತದಲ್ಲಿ ಶಿಕ್ಷಕ ಸಾವು
ತಾಲ್ಲೂಕಿನ ಹುಣಸೇನಹಳ್ಳಿ ಸ್ಟೇಷನ್ ಬಳಿ ಕಾರು ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ನಗರದ ರಾಘವೇಂದ್ರ ಶಾಲೆಯ ಶಿಕ್ಷಕ ಎಲ್.ವಿ.ಪ್ರಸಾದ್(50) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅವರು ಅರಳೇಪೇಟೆಯ ವಾಸಿಯಾಗಿದ್ದರು. ಮೃತರ ಪತ್ನಿ ಶ್ಯಾಮಲಾ ಅವರು ಕೂಡ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಜೊತೆಯಲ್ಲಿದ್ದ ಮಂಜುನಾಥ್ ಎಂಬುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಾರ್ಚ್ 3 ರಂದು ಬೃಹತ್ ಪ್ರತಿಭಟನಾ ಟ್ರಾಕ್ಟರ್ ರ್ಯಾಲಿ
ಬೆಂಗಳೂರಿನ ಅಭಿವೃದ್ಧಿ ಕೆಲಸಗಳನ್ನು ಸಮರೋಪಾದಿಯಲ್ಲಿ ನಡೆಸುವ ಜನಪ್ರತಿನಿಧಿಗಳು ಗ್ರಾಮೀಣ ಭಾಗಗಳನ್ನು ಕಡೆಗಣಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಹೋರಾಟಗಳು ನಡೆಸಿದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
158 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮಾಡಿದರೂ ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸಾವಿರಾರು ಟ್ರಾಕ್ಟರ್ ಗಳ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಶಾಶ್ವತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಿದ್ಧತೆ ನಡೆಸಿದೆ. ಈ ಸಂಬಂಧವಾಗಿ ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲಕರವಾಗಿ ಶೀಘ್ರವಾಗಿ ಯೋಜನೆಗಳನ್ನು ರೂಪಿಸುವ ಸರ್ಕಾರಗಳು, ಬಯಲು ಸೀಮೆಯ ಜನರ ನೋವು ಹಾಗೂ ಕಷ್ಟಕ್ಕೆ ಇದುವರೆಗೂ ಸ್ಪಂದಿಸಿಲ್ಲ. ನೀರಿಗಾಗಿ ಹೋರಾಟವನ್ನು ನಡೆಸುತ್ತಿದ್ದರೂ ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಬಯಲು ಸೀಮೆಯ ಜನರ ಕೋಪಕ್ಕೆ ಸರ್ಕಾರ ಗುರಿಯಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸದ ಸರ್ಕಾರಕ್ಕೆ ಬೃಹತ್ ಪ್ರತಿಭಟನಾ ಟ್ರಾಕ್ಟರ್ ರ್ಯಾಲಿಯೊಂದಿಗೆ ವಿಧಾನಸೌಧವನ್ನು ಮಾರ್ಚ್ 3 ರಂದು ಮುತ್ತಿಗೆ ಹಾಕಲಿದ್ದೇವೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ತಲಾ ಒಂದೊಂದು ಟ್ರಾಕ್ಟರ್ ಕಳಿಸುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ಟ್ರಾಕ್ಟರ್ ಉಳ್ಳ ರೈತರು ಹಾಗೂ ಗ್ರಾಮಸ್ಥರು ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕೋರಿದರು.
ಎಲ್ಲಾ ಜನಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಎಲ್ಲ ಪಕ್ಷದವರೂ ಭಾಗವಹಿಸುತ್ತಿದ್ದಾರೆ. ನೀರಿಗೆ ಬೇಧವಿಲ್ಲದಂತೆ ನೀರಿನ ಹೋರಾಟಕ್ಕೂ ಬೇಧವಿಲ್ಲ. ಜನ ಜಾನುವಾರುಗಳು ನೀರಿಗಾಗಿ ತಪಿಸುತ್ತಿರುವಾಗ ಎಲ್ಲರೂ ಒಗ್ಗೂಡಿ ಹೋರಾಡಬೇಕಾದದ್ದು ಅನಿವಾರ್ಯವಾಗಿದೆ. ನಮ್ಮನ್ನಾಳುವವರಿಗೆ ನಮ್ಮ ನೋವು, ಕಷ್ಟ, ತಾಪತ್ರಯ, ಅಗತ್ಯವನ್ನು ಮನಗಾಣಿಸಬೇಕಿದೆ. ನೀರು ನಮಗೆ ಅತ್ಯಗತ್ಯವಾಗಿದ್ದು, ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ನುಡಿದರು.
ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಎಸ್.ಎಂ.ನಾರಾಯಣಸ್ವಾಮಿ, ಯಲುವಳ್ಳಿ ಸೊಣ್ಣೇಗೌಡ, ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ, ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಅಬ್ಲೂಡು ಆರ್.ದೇವರಾಜ್, ಮಂಜುನಾಥ್, ವೇಣುಗೋಪಾಲ್, ನಂಜಪ್ಪ, ತ್ಯಾಗರಾಜ್, ಶಿಕ್ಷಕರ ಸಂಘದ ಶ್ರೀರಾಮಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ.ಸಾ.ಪ ಚುನಾವಣೆಯಲ್ಲಿ ಹಿಂದೆ ಸರಿದ ಹನುಮಂತು
ಫೆಬ್ರುವರಿ 28 ರ ಭಾನುವಾರದಂದು ನಡೆಯುವ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿರುವ ಹನುಮಂತು, ಚುನಾವಣೆಯಿಂದ ಹಿಂದೆ ಸರಿದಿದ್ದು, ಕೈವಾರ ಶ್ರೀನಿವಾಸ್ ಅವರನ್ನು ಬೆಂಬಲಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರು, ಉತ್ಸಾಹಿಗಳು, ಸಂಘಟನಾ ಶಕ್ತಿಯಿರುವವರು ಅಧ್ಯಕ್ಷರಾದಲ್ಲಿ ಗ್ರಾಮೀಣ ಮಟ್ಟದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿದೆ. ರಾಜ್ಯಮಟ್ಟದ ಹಾಗೂ ಅಖಿಲಭಾರತ ಮಟ್ಟದ ಕನ್ನಡದ ಸಮ್ಮೇಳನಗಳನ್ನು ನಡೆಸಬಹುದು. ಹಾಗಾಗಿ ಕೈವಾರ ಶ್ರೀನಿವಾಸ್ ಅವರಿಗೆ ಬೆಂಬಲಿಸಿರುವುದಾಗಿ ಹೇಳಿದ್ದಾರೆ.
ಮಕ್ಕಳಿಗೆ ಜಾನಪದ ಗೀತೆಗಳ ಕಲಿಕೆ
ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕಲಾವಿದರು ಮಕ್ಕಳಿಗೆ ಜಾನಪದ ಸುಗ್ಗಿ ಹಾಡುಗಳನ್ನು ಕಲಿಸಿದರು.
ಕಲಾವಿದರಾದ ನಂಜುಂಡಪ್ಪ, ಅನಿತ, ನರಸಿಂಹಪ್ಪ, ಶ್ರೀನಿವಾಸ, ಮಕ್ಕಳಿಗೆ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಸ್ವಚ್ಛತೆ, ದೇಶಪ್ರೇಮ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಗೀತೆಗಳನ್ನೂ ಹಾಡಿ ರಂಜಿಸಿದರು. ಸುಗ್ಗಿ ಗೀತೆಗಳ ಮಹತ್ವ, ಅದರ ಹಿಂದಿನ ಸಾಮಾಜಿಕ ತತ್ವವನ್ನು ವಿವರಿಸಿದರು.
ಮುಖ್ಯ ಶಿಕ್ಷಕ ವಿ.ಎಂ.ಮಂಜುನಾಥ, ಶಿಕ್ಷಕರಾದ ವೆಂಕಟರೆಡ್ಡಿ, ಯಶಸ್ವಿನಿ, ಗೀತಾ, ಶಶಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಾಜಿ ಸಚಿವ ವಿ.ಮುನಿಯಪ್ಪ ವಿರುದ್ಧ ಶಾಸಕ ಎಂ.ರಾಜಣ್ಣ ವಾಗ್ದಾಳಿ
ಕಳೆದ ಇಪ್ಪತ್ತೈದು ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಕ್ಷೇತ್ರದಲ್ಲಿ ನಡೆಸಿರುವ ಶಾಶ್ವತ ಅಭಿವೃದ್ಧಿ ಕೆಲಸಗಳ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಚಿವ ವಿ.ಮುನಿಯಪ್ಪರಿಗೆ ಶಾಸಕ ಎಂ.ರಾಜಣ್ಣ ಆಹ್ವಾನ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸುದ್ದಿಘೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ವಿ.ಮುನಿಯಪ್ಪನವರು ಇತ್ತೀಚೆಗೆ ಮಾಧ್ಯಮಗಳೆದರು ನನ್ನ ಬಗ್ಗೆ ಸುಳ್ಳುಗಾರ, ವಿಭೂತಿ ಕುಂಕುಮವನ್ನಿಟ್ಟಿಟ್ಟುಕೊಂಡು, ಗಡ್ಡ ಬಿಟ್ಟು ಜನರನ್ನು ಮರಳು ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ರಾಜಕೀಯ ಗಂಧವೇ ಗೊತ್ತಿಲ್ಲದವರು, ಎಂಬಿತ್ಯಾದಿ ಮಾತಗಳನ್ನಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹೌದು ಸ್ವಾಮೀ ನನಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ತಮ್ಮ ೨೫ ವರ್ಷದ ರಾಜಕೀಯದಲ್ಲಿ ತಾವು ಮಾಡಲಾಗದ ಕೆಲಸಗಳಾದ ಬಸ್ಡಿಪೋ, ಅಗ್ನಿಶಾಮಕ ದಳ ನಿರ್ಮಿಸಲು ಮುಂದಾಗಿದ್ದೇನೆ. ತಾಲ್ಲೂಕಿನಾಧ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದೇನೆ. ಇದನ್ನು ಸಹಿಸದ ತಾವು ಪ್ರತಿಯೊಂದಕ್ಕೂ ಅಡ್ಡಗಾಲು ಹಾಕುತ್ತಿರುವಿಸರಿ’ ಎಂದು ಪ್ರತಿಕ್ರಯಿಸಿದರು.
ತಾವು ಕ್ಷೇತ್ರಕ್ಕೆ ಮಾಡಿರುವ ಉಪಯೋಗವಾದರೂ ಏನು? ತಮ್ಮ ಸುತ್ತಲೂ ಗೂಂಡಾಪಡೆ ಇಟ್ಟುಕೊಂಡು ಕ್ಷೇತ್ರದಾಧ್ಯಂತ ಇರುವ ಮತದಾರರನ್ನು ಮೋಸಮಾಡಿ ಕೋಟ್ಯಾಂತರ ರೂ ಗಳಿಸಿ ಬೆಂಗಳೂರಿನಲ್ಲಿ ಭವ್ಯ ಬಂಗಲೆಗಳು ಸೇರಿದಂತೆ ಕಾಲೇಜು ನಿರ್ಮಿಸಿಕೊಂಡು ಕ್ಷೇತ್ರದ ಜನತೆಗೆ ಮೋಸ ಮಾಡಿದ ನೀವು ಹುಟ್ಟು ಸುಳ್ಳುಗಾರರು ಎಂದು ಆರೋಪಿಸಿದರು.
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ತಾವು ಮಾಡದ ಅಭಿವೃದ್ದಿ ಕೆಲಸಗಳನ್ನು ನನ್ನ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಮಾಡಿರುವುದರಿಂದಲೇ ಚುನಾವಣೆಯಲ್ಲಿ ಜನರು ನನ್ನನ್ನು ಆಶೀರ್ವದಿಸುತ್ತಿದ್ದು, ನಿಮ್ಮನ್ನು ತಿರಸ್ಕರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಹಾಗಾಗಿ ಜನರು ನೀಡಿದ ತೀರ್ಮಾನವನ್ನು ಗೌರವಿಸುವುದರೊಂದಿಗೆ ಆರೋಗ್ಯಯುತ ರಾಜಕೀಯ ಮಾಡಲು ಮುಂದಾಗಿ ಎಂದರು.
ಇನ್ನು ನಾನೊಬ್ಬ ಹಿಂದೂ ಧರ್ಮೀಯನಾಗಿದ್ದು ದೇವರಲ್ಲಿ ಅತೀವ ನಂಬಿಕೆಯನ್ನಿಟ್ಟುಕೊಂಡಿರುವ ನಾನು ಹಣೆಗೆ ಕುಂಕುಮ, ವಿಭೂತಿ ಇಡುತ್ತೇನೆ. ಕಾಲೇಜು ವ್ಯಾಸಂಗ ಮಾಡುವಾಗಿನಿಂದಲೂ ಗಡ್ಡ ಬಿಡುತ್ತೇನೆ, ಇದನ್ನು ಪ್ರಶ್ನಿಸುವ ನೀವು ೧೯೮೯ ರ ವಿಧಾನಸಭೆ ಚುನಾವಣೆಯಲ್ಲಿ ತಾವು ಹಾಗು ತಮ್ಮ ಪತ್ನಿ ಯಾವ ರೀತಿ ಮತದಾರರ ಬಳಿ ಬಂದು ಮತ ಯಾಚಿಸಿದಿರಿ ನೆನಪಿಸಿಕೊಳ್ಳಿ ಎಂದರು.
ಇನ್ನು ತಾವು ಶಾಸಕರಾಗಿ ಸಚಿವರಾಗಿ ಅಧಿಕಾರ ನಡೆಸಿದ ಅನುಭವವುಳ್ಳವರು. ಚುನಾವಣೆ ವೇಳೆ ತಾಲ್ಲೂಕಿನ ವಿವಿದೆಡೆ ನಡೆದ ಹಲ್ಲೆಯನ್ನು ಖಂಡಿಸುವ ಬದಲಿಗೆ ತಮ್ಮ ಚೇಲಾಗಳಿಗೆ ಕುಮ್ಮಕ್ಕು ನೀಡಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದವರ ಮನೆಗಳಿಗೆ ನುಗ್ಗಿ ಅಮಾಯಕರ ಮೇಲೆ ಹಲ್ಲೆ ಮಾಡುವಂತೆ ಪ್ರೇರೇಪಿಸುವ ಕೆಲಸವನ್ನು ಬಿಡಬೇಕು ಎಂದರು.
ತಾವು ರೇಷ್ಮೆ ಖಾತೆ ಸಚಿವರಾಗಿದ್ದಾಗ ತಾಲ್ಲೂಕಿನಲ್ಲಿ ಆಗಬೇಕಿದ್ದ ರೇಷ್ಮೆಕೃಷಿ ಕಾಲೇಜನ್ನು ನೆರೆಯ ಚಿಂತಾಮಣಿಗೆ ನೀಡಿದ ತಾವುಗಳು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದೀರಿ. ತಮ್ಮದೇ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದಂತೆ ತಾವು ರಾಜಕೀಯಕ್ಕೆ ಬರುವ ಮೊದಲು ತಮಗಿದ್ದ ಆಸ್ತಿ ಹಾಗೂ ಹಾಲಿ ಈಗಿರುವ ಆಸ್ತಿಯ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಿ ಎಂದರು.
ಅಬ್ಲೂಡು ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ಮುನಿಯಪ್ಪ ಮಾತನಾಡಿ ಚುನಾವಣೆಯಲ್ಲಿ ಮತದಾರನ ತೀರ್ಪೆ ಅಂತಿಮ. ಹಾಗಾಗಿ ಮತದಾರ ನೀಡಿದ ತೀರ್ಪಿಗೆ ವಿರುದ್ದವಾಗಿ ಅಮಾಯಕ ಜನರ ಮೇಲೆ ಹಲ್ಲೆ ಮಾಡಲು ಕುಮ್ಮಕ್ಕು ನೀಡುವುದನ್ನು ಮಾಜಿ ಸಚಿವ ವಿ.ಮುನಿಯಪ್ಪ ಬಿಡಬೇಕು ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಗಂಜಿಗುಂಟೆ ಜಿಲ್ಲಾ ಪಂಚಾಯತಿ ಸದಸ್ಯ ಡಾ.ಎ.ಎಂ.ಜಯರಾಮರೆಡ್ಡಿ, ಚೀಮಂಗಲ ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯರಾದ ಬಿ.ವಿ.ನಾರಾಯಣಸ್ವಾಮಿ, ರಾಜಶೇಖರ್, ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಂದ್ರ, ನಗರಸಭೆ ಸದಸ್ಯ ಅಪ್ಸರ್ಪಾಷ, ಮುಖಂಡರಾದ ತಾದೂರು ರಘು, ಮುಗಿಲಡಪಿ ನಂಜಪ್ಪ, ಕನ್ನಮಂಗಲ ಚಿಕ್ಕಆಂಜಿನಪ್ಪ, ಮುನಿರೆಡ್ಡಿ ಮತ್ತಿತರರು ಹಾಜರಿದ್ದರು.
ಶಾಶ್ವತ ನೀರಾವರಿಗಾಗಿ ವಿಧಾನಸೌಧ ಮುತ್ತಿಗೆಯ ಪೂರ್ವಭಾವಿ ಸಭೆ
158 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮಾಡಿದರೂ ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸಾವಿರಾರು ಟ್ರಾಕ್ಟರ್ ಗಳ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಶಾಶ್ವತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಿದ್ಧತೆ ನಡೆಸಿದೆ. ಈ ಸಂಬಂಧವಾಗಿ ನಗರದ ಪ್ರವಾಸಿಮಂದಿರದಲ್ಲಿ ಫೆಬ್ರುವರಿ 27 ರ ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಿರುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಪೂರ್ವಭಾವಿ ಸಭೆ
ಮೆಘಾಸ್ಟಾರ್ ಚಿರಂಜೀವಿ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮೆಗಾ ಪವರ್ ಸ್ಟಾರ್ ರಾಮ್ಚರಣ್ ತೇಜಾ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಮಾರ್ಚ್ 23 ರಂದು ನಡೆಸಲು ತೀರ್ಮಾನಿಸಿದೆ. ಈ ಸಂಬಂಧವಾಗಿ ಅಭಿಮಾನಿಗಳ ಸಭೆಯನ್ನು ಫೆಬ್ರುವರಿ 28 ರ ಭಾನುವಾರದಂದು ಕರೆಯಲಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ
ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳು ಪ್ರಗತಿ ಸಾಧಿಸಲು ಸಾಧ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತಲದುಮ್ಮನಹಳ್ಳಿ ಹಾಗು ಸುಗಟೂರು ಗ್ರಾಮಗಳಲ್ಲಿ ತಲಾ ೬ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ ರಸ್ತೆ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದೀಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆವಹಿಸಿದ್ದು, ಕಾಲ ಕಾಲಕ್ಕೆ ಕಾಮಗಾರಿಯ ಮೇಲೆ ನಿಗಾವಹಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ವೀರಾಪುರ ಮುನಿರೆಡ್ಡಿ, ಮಳ್ಳೂರಯ್ಯ, ದೇವರಾಜ್, ಲೋಕೋಪಯೋಗಿ ಇಲಾಖೆಯ ಎಇಇ ಜಮೀರ್ಅಹಮ್ಮದ್, ಕೆ.ಬಿ.ಮಂಜುನಾಥ್ ಮತ್ತಿತರರು ಹಾಜರಿದ್ದರು.
ಚುನಾವಣೆಯ ಕಾವು ಕಳೆದು ಬೇಸಿಗೆಯ ಕಾವು
ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಅವರೆಕಾಯಿ ಒಕ್ಕಣೆ ಮಾಡುತ್ತಿರುವ ದೃಶ್ಯ, ಚುನಾವಣೆಯ ಕಾವು ಕಳೆದು ಬೇಸಿಗೆಯ ಕಾವು ಪ್ರಾರಂಭವಾದ ಹಿನ್ನೆಲೆಯಲ್ಲಿ ರೈತಾಪಿ ಕೆಲಸ ಸಾಗುತ್ತಿರುವ ದ್ಯೋತಕವಾಗಿದೆ.
ಅತಿಥಿ ಉಪನ್ಯಾಸಕರ ಪ್ರತಿಭಟನೆ
ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ವಿಶೇಷ ನಿಯಮಾವಳಿ ರೂಪಿಸಿ ಸೇವೆಯಲ್ಲಿ ವಿಲೀನಗೊಳಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಅತಿಥಿ ಉಪನ್ಯಾಸಕರು, ಡಿ.ವೈ.ಎಫ್.ಐ ಹಾಗೂ ಎಸ್.ಎಫ್.ಐ ಸಂಘಟನೆಯ ಸದಸ್ಯರು ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರು.
ರಾಜ್ಯಾದ್ಯಂತ ಸುಮಾರು 14,531 ಅತಿಥಿ ಉಪನ್ಯಾಸಕರು ತಮ್ಮನ್ನು ಸೇವೆಯಲ್ಲಿ ವಿಲೀನಗೊಳಿಸುವ ಬಗ್ಗೆ 35 ದಿನಗಳ ಕಾಲ ಧರಣಿ ನಡೆಸಿದ್ದು, ಸರ್ಕಾರವು ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸುವಂತೆ ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಆಗ್ರಹಿಸುತ್ತಿದ್ದೇವೆ. ಸರ್ಕಾರಿ ಶಾಲಾ ಕಾಲೇಜುಗಳನ್ನು ಆಧುನಿಕರಿಸಬೇಕು. ರಾಜ್ಯ ಬಜೆಟ್ನಲ್ಲಿ ಶೇಕಡಾ 30, ಕೇಂದ್ರ ಬಜೆಟ್ನಲ್ಲಿ ಶೇಕಡಾ 10 ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಕೇಂದ್ರೀಯ ಶಾಸನ ಜಾರಿಗೆ ತನ್ನಿ. ಎಲ್ಲಾ ಹಾಸ್ಟೆಲ್ಗಳನ್ನು ಆಧುನೀಕರಿಸಿ, ಊಟದ ಭತ್ಯೆ ಹೆಚ್ಚಿಸಿ ಮುಂತಾದ ಬೇಡಿಕೆಗಳನ್ನಿಟ್ಟು ಬಂದ್ ಆಚರಿಸಿರುವುದಾಗಿ ತಾಲ್ಲೂಕು ಅತಿಥಿ ಉಪನ್ಯಾಸಕರು, ಡಿ.ವೈ.ಎಫ್.ಐ ಹಾಗೂ ಎಸ್.ಎಫ್.ಐ ಸಂಘಟನೆಯ ಸದಸ್ಯರು ಹೇಳಿದರು.
ನಗರದ ಸರ್ಕಾರಿ ಕಾಲೇಜುಗಳು ಮತ್ತು ಸರಸ್ವತಿ ವಿದ್ಯಾಸಂಸ್ಥೆಗಳು ಬಂದ್ ಮಾಡುವ ಮೂಲಕ ಅತಿಥಿ ಉಪನ್ಯಾಸಕರಿಗೆ ಬೆಂಬಲ ನೀಡಿದರು.
ಡಿ.ವೈ.ಎಫ್.ಐ ಹಾಗೂ ಎಸ್.ಎಫ್.ಐ ಸಂಘಟನೆಯ ಸದಸ್ಯರು ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಸಲ್ಲಿಸಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ನರಸಿಂಹಪ್ಪ, ಬಾಬು, ಸುಬ್ರಮಣಿ, ಅತಿಥಿ ಉಪನ್ಯಾಸಕರ ಸಂಘದ ರಾಮಚಂದ್ರಪ್ಪ, ಬಾಬಾಜಾನ್, ಶ್ರೀನಿವಾಸ್, ರವಿ, ಸಾದತ್, ಮಂಜುನಾಥ, ವೆಂಕಟಾಚಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕು ಸರ್ಕಾರಿ ನೌಕರರ ಪ್ರತಿಭಟನೆ
ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಸರ್ಕಾರಿ ನೌಕರರು ಶುಕ್ರವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಆವರಣದಿಂದ ಮೆರವಣಿಗೆ ನಡೆಸಿದ ತಾಲ್ಲೂಕು ಸರ್ಕಾರಿ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿದರು.
ಐದು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುವ ಸಂಪ್ರದಾಯವನ್ನು ಪರಾಮರ್ಶಿಸಿದಲ್ಲಿ ರಾಜ್ಯ ಸರ್ಕಾರವು ಇದುವರೆಗೂ ಸುಮಾರು 10 ವೇತನ ಆಯೋಗಗಳನ್ನು ರಚಿಸಬೇಕಿತ್ತು. ಆದರೆ ಸರ್ಕಾರ ರಚಿಸಿರುವ ಸಮಿತಿಗಳು ಅವೈಜ್ಞಾನಿಕ ಸಿದ್ಧಾಂತಗಳನ್ನು ಅನುಸರಿಸುವ ಮುಖಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಮತ್ತು ಭತ್ಯೆಗಳನ್ನು ಮಂಜೂರು ಮಾಡುವಲ್ಲಿ ವಿಫಲವಾಗಿದೆ. ವೇತನ ಆಯೋಗಗಳ ರಚನೆಯಲ್ಲಿ ಆಗಿರುವ ಕಾಲಮಿತಿ ತಾರತಮ್ಯವನ್ನು ತಪ್ಪಿಸಲು ರಾಜ್ಯ ಸರ್ಕಾರಿ ನೌಕರರಿಗೂ ಸಹ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಶೀಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ರಾಷ್ಟ್ರದಲ್ಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಅತ್ಯಂತ ಕಡಿಮೆ ವೇತನ ಹಾಗೂ ಭತ್ಯೆಗಳನ್ನುಪಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ತಲುಪಿಸಲು ಮನವಿ ಪತ್ರವನ್ನು ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಸಲ್ಲಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಕಾರ್ಯದರ್ಶಿ ಅಕ್ಕಲರೆಡ್ಡಿ, ವಿಜಯಕುಮಾರ್, ಕೆ.ಎನ್.ಸುಬ್ಬರೆಡ್ಡಿ, ರಾಮಚಂದ್ರಪ್ಪ, ಶಶಿಕುಮಾರ್, ಗೋಪಿನಾಥ್, ಕೇಶವರೆಡ್ಡಿ, ಶ್ರೀರಾಮಯ್ಯ, ಸಿ.ಎಂ.ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶುಕ್ರವಾರ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳ ಬಂದ್
ತಾಲ್ಲೂಕಿನಾದ್ಯಂತ ಫೆಬ್ರುವರಿ 26 ರ ಶುಕ್ರವಾರದಂದು ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ಮೂಲಕ ಶೈಕ್ಷಣಿಕ ಬಂದ್ ಆಚರಿಸುತ್ತಿರುವುದಾಗಿ ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಎಸ್.ಎಫ್.ಐ, ಡಿ.ವೈ.ಎಫ್.ಐ ಮತ್ತು ಅತಿಥಿ ಉಪನ್ಯಾಸಕರ ಸಂಘ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಬಂದ್‌ಗೆ ಕರೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶುಕ್ರವಾರ ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ವಿಶೇಷ ನಿಯಮಾವಳಿ ರೂಪಿಸಲು ಒತ್ತಾಯಿಸಿ ಶಾಲಾ ಕಾಲೇಜುಗಳ ಶೈಕ್ಷಣಿಕ ಬಂದ್ ಆಚರಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಆಗ್ರಹಿಸುತ್ತಿದ್ದೇವೆ. ಸರ್ಕಾರಿ ಶಾಲಾ ಕಾಲೇಜುಗಳನ್ನು ಆಧುನಿಕರಿಸಬೇಕು. ರಾಜ್ಯ ಬಜೆಟ್ನಲ್ಲಿ ಶೇಕಡಾ 30, ಕೇಂದ್ರ ಬಜೆಟ್ನಲ್ಲಿ ಶೇಕಡಾ 10 ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಕೇಂದ್ರೀಯ ಶಾಸನ ಜಾರಿಗೆ ತನ್ನಿ. ಎಲ್ಲಾ ಹಾಸ್ಟೆಲ್ಗಳನ್ನು ಆಧುನೀಕರಿಸಿ, ಊಟದ ಭತ್ಯೆ ಹೆಚ್ಚಿಸಿ ಮುಂತಾದ ಬೇಡಿಕೆಗಳನ್ನಿಟ್ಟು ಬಂದ್ ಆಚರಿಸುತ್ತಿರುವುದಾಗಿ ಹೇಳಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಸದಾನಂದ, ನರಸಿಂಹಪ್ಪ, ಮಂಜುನಾಥ, ಅತಿಥಿ ಉಪನ್ಯಾಸಕರ ಸಂಘದ ರಾಮಚಂದ್ರಪ್ಪ, ಶ್ರೀನಿವಾಸ, ಗೀತಾ, ಸುಬೋದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಜಗೋಪುರ ಮತ್ತು ಕಲ್ಲಿನ ಕಾಂಪೌಂಡ್ ನಿರ್ಮಾಣ
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನಾಲ್ಕು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ರಾಜಗೋಪುರ ಮತ್ತು ಕಲ್ಲಿನ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಲಾಯಿತು.
ಸುಮಾರು 82 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಾಜಗೋಪುರ ಮತ್ತು 42 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲ್ಲಿನ ಕಾಂಪೌಂಡ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ವಿಶೇಷ ಪೂಜೆಯೊಂದಿಗೆ ಅಡಿಪಾಯ ಪೂಜೆ ನಡೆಸಲಾಯಿತು.
ಚಿಕ್ಕಲ್‌ಸಂದ್ರ ಅಪ್ಪಯ್ಯಸ್ವಾಮಿ ಕುಟುಂಬ, ದೇವಾಲಯ ಕುಲಬಾಂಧವರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಶಾಕಿರಣ ಅಂದ ಮಕ್ಕಳ ಶಾಲೆಯ ಸಂಸ್ಥಾಪಕ ನಾಗರಾಜಯ್ಯ ನಿಧನ, ದೇಹದಾನ
ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಸಂಸ್ಥಾಪಕ ನಾಗರಾಜಯ್ಯ ಅವರು ಮಂಗಳವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ೨೦ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನ ಹೊಂದಿದ್ದು, ಅವರ ಸ್ವ ಇಚ್ಚೆಯಂತೆ, ಅವರ ದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ. ಅವರ ಕಣ್ಣುಗಳನ್ನು ಸಹ ದಾನ ಮಾಡಿದ್ದಾರೆ.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಶಿಡ್ಲಘಟ್ಟ, ವಿಜಯಪುರದ ನೂರಾರು ಅಂಗವಿಲಕರು, ಅಂಧ ಮಕ್ಕಳು, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ರೂಪಸಿ ರಮೇಶ್, ಸಿ.ಡಿ.ಪಿ.ಓ ಲಕ್ಷೀದೇವಮ್ಮ ಮತ್ತಿತರರು ಅಂತಿಮ ದರ್ಶನ ಪಡೆದಿದ್ದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಗ್ರಾಮೀಣ ಭಾಗದಲ್ಲೇ ತಾಲ್ಲೂಕು ಮಟ್ಟದ ಸಮ್ಮೇಳನ
ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕ.ಸಾ.ಪ ಕೇವಲ ನಗರಕ್ಕೆ ಸೀಮಿತವಾಗದಂತೆ ಗ್ರಾಮೀಣ ಭಾಗದಲ್ಲೇ ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು, ಭಕ್ತರಹಳ್ಳಿ, ಆನೂರು, ಮೇಲೂರು ಮುಂತಾದ ಗ್ರಾಮಗಳಲ್ಲಿನ ಕ.ಸಾ.ಪ ಮತದಾರರನ್ನು ಬುಧವಾರ ಭೇಟಿ ಮಾಡಿ ಮತಯಾಚಿಸಿ ಅವರು ಮಾತನಾಡಿದರು.
ಶಾಶ್ವತ ನೀರಾವರಿ ಹೋರಾಟ, ರೇಷ್ಮೆಯ ಸಮಸ್ಯೆ, ರೈತರ ತೊಂದರೆಗಳು, ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಕೂಡ ಕ.ಸಾ.ಪ ಜವಾಬ್ದಾರಿಯಾಗುತ್ತದೆ. ಜನರ ಬದುಕಿಗೆ ಹತ್ತಿರವಾಗುವುದೇ ನಿಜವಾದ ಕನ್ನಡದ ಸೇವೆಯಾಗುತ್ತದೆ ಎಂದು ಹೇಳಿದರು.
ಸಾಹಿತಿ ಗೋಪಾಲಗೌಡ ಕಲ್ವಮಂಜರಿ, ಯಲುವಳ್ಳಿ ಸೊಣ್ಣೇಗೌಡ, ಮಂಚನಬಲೆ ಶ್ರೀನಿವಾಸ್, ಮಳ್ಳೂರು ಹರೀಶ್, ಎಸ್.ವಿ.ನಾಗರಾಜರಾವ್, ಬಿ.ಆರ್.ಅನಂತಕೃಷ್ಣ, ವಿನಾಯಕ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ
ಏಳನೇ ವೇತನ ಆಯೋಗ ರಚನೆ ಹಾಗೂ ಕೇಂದ್ರ ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಫೆಬ್ರುವರಿ 26 ರ ಶುಕ್ರವಾರದಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ತಹಶೀಲ್ದಾರ್ ಕಚೇರಿಯ ಮುಂದೆ ಮಧ್ಯಾಹ್ನ 1.30 ರಿಂದ 2.30 ರವರೆಗೆ ಪ್ರತಿಭಟನೆ ನಡೆಸಲಾಗುವುದೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಹಾಗೂ ಕಾರ್ಯದರ್ಶಿ ಅಕ್ಕಲರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಾರಿ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿ
ತಾಲ್ಲೂಕಿನ ಜಂಗಮಕೋಟೆ ಕೆರೆಯ ಕಟ್ಟೆಯ ಮೇಲೆ ಲಾರಿ ಮತ್ತು ಟೆಂಪೋ ಬುಧವಾರ ಬೆಳಿಗ್ಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ವಿಜಯಪುರದಿಂದ ಕೋಲಾರದ ಕಡೆಗೆ ಸಾಗುತ್ತಿದ್ದ ಸರಕು ಸಾಗಾಣಿಕಾ ಲಾರಿ ಮತ್ತು ಕೋಲಾರದ ಕಡೆಯಿಂದ ಚಿಕ್ಕಬಳಖ್ಳಾಪುರದ ಕಡೆಗೆ ಟೊಮೆಟೋ ಸಾಗಿಸುತ್ತಿದ್ದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕನ ಬಲಗಾಲು ಮುರಿದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಜಂಗಮಕೋಟೆ ಹೊರಠಾಣೆ ಎಎಸ್ಐ ಮತ್ತು ಸಿಬ್ಬಂದಿ ಆಗಮಿಸಿ, 108 ಆಂಬುಲೆನ್ಸ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ಗಾಯಾಳುವನ್ನು ಕಳುಹಿಸಿದರು.
ಕೆರೆ ಕಟ್ಟೆಯ ಮೇಲಿನ ರಸ್ತೆ ಅತ್ಯಂತ ಕಿರಿದಾಗಿದ್ದು, ಹಳ್ಳಕೊಳ್ಳಗಳಿರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತದೆ. ಅತ್ಯಂತ ಹೆಚ್ಚು ವಾಹನ ಸಂಚಾರವಿರುವುದರಿಂದ ಈ ರಸ್ತೆಯನ್ನು ಅಗಲೀಕರಣ ಮಾಡಿ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

