ತಾಲ್ಲೂಕಿನ ಕೆ.ಮುತ್ತುಗದಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ನಡೆದಿದೆ.
ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಕೆ.ಮುತ್ತುಗದಹಳ್ಳಿ ಆರ್.ವಿನುತಾ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು ಮತ್ತು ಜೆಡಿಎಸ್ ಪಕ್ಷದಿಂದ ತಾದೂರಿನ ತನುಜಾ ರಘು ಸ್ಪರ್ಧಿಸಿದ್ದರು. ಜೆಡಿಎಸ್ ಗೆದ್ದ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಕೆ.ಮುತ್ತುಗದಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಮನೆಯ ಬಳಿ ವಿಜೇತ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿದಾಗ ಘರ್ಷಣೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಲಘು ಲಾಟಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಎರಡೂ ಪಕ್ಷಗಳ 20 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಾದ ಸುರೇಶ್, ಶ್ರೀನಾಥ್, ಮಂಜುನಾಥ್, ರಾಮಚಂದ್ರ ಮತ್ತು ಜೆಡಿಎಸ್ ಕಾರ್ಯಕರ್ತರಾದ ಕೇಶವ, ವೆಂಕಟೇಶಮೂರ್ತಿ, ಟಿ.ಕೃಷ್ಣಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ
ಚುನಾವಣೆಯ ಫಲಿತಾಂಶದ ನಂತರ ಘರ್ಷಣೆ
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಪಕ್ಷದವರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕದಿರಿನಾಯಕನಹಳ್ಳಿ ಗ್ರಾಮದ ನಾರಾಯಣಸ್ವಾಮಿ, ರಾಜೇಶ್ ಮತ್ತು ಗಂಗರಾಜು ಎಂಬುವವರಿಗೆ ಅವರ ಮನೆಗೆ ತೆರಳಿ ಧಾಳಿ ನಡೆಸಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲುಗಳನ್ನು ತೂರಿ ಧಾಳಿ ನಡೆಸಿದ್ದೆನ್ನಲಾಗಿದ್ದು, ನಾರಾಯಣಸ್ವಾಮಿ ಅವರಿಗೆ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ಗೆ ಕರೆದೊಯ್ಯಲಾಗಿದೆ. ಗಂಗರಾಜು ಅವರಿಗೆ ಸೊಂಟ ಹಾಗೂ ಕಾಲಿನ ಮೂಳೆಗೆ ಪೆಟ್ಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜೆಡಿಎಸ್ ಪಕ್ಷದವರು ಈ ಭಾಗದಲ್ಲಿ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಸೋತಿದ್ದರಿಂದ ಬಂದು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರನ್ನು ನೀಡಿರುವುದಾಗಿ ಹಲ್ಲೆಗೊಳಗಾದವರು ತಿಳಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಮತ ಎಣಿಕೆಯ ಸಂದರ್ಭದಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ನಡೆಯಿತು.
ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಮತ ಎಣಿಕೆ ನಡೆದು ಕಾಂಗ್ರೆಸ್ ಪಕ್ಷದ ಪಿ.ನಿರ್ಮಲಾ ಮುನಿರಾಜು ವಿಜೇತರೆಂದು ಘೋಷಿಸಿದಾಗ ಅತ್ಯಂತ ಕಡಿಮೆ ಅಂತರವಿದ್ದುದರಿಂದ ಜೆಡಿಎಸ್ ಕಾರ್ಯಕರ್ತರು ಮರು ಎಣಿಕೆಗೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಎಣಿಕೆ ಸರಿಯಾಗಿ ನಡೆದಿದೆ, ನಮಗೆ ಪ್ರಮಾಣಪತ್ರ ನೀಡಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಈ ವಿಷಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಮೀರುವಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ, ಏಜೆಂಟರ ಸಮ್ಮುಖದಲ್ಲಿ ಮರುಎಣಿಕೆ ನಡೆಸಿದರು. ಮರುಎಣಿಕೆಯಲ್ಲಿಯೂ ಅಷ್ಟೇ ಮತಗಳು ಬಂದು ಕಾಂಗ್ರೆಸ್ ಪಕ್ಷದ ಪಿ.ನಿರ್ಮಲಾ ಮುನಿರಾಜು ಗೆಲುವನ್ನು ಸಾಧಿಸಿರುವರೆಂದು ಘೋಷಿಸಲಾಯಿತು.
ಅಬ್ಲೂಡು ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಂ.ಶ್ರೀನಿವಾಸ 7 ಮತಗಳ ಅಂತರದಿಂದ ಗೆಲುವು ಸಾಧಿಸಿರುವರೆಂದು ಘೋಷಿಸಿದಾಗ ಮರು ಎಣಿಕೆಗೆ ಜೆಡಿಎಸ್ ಕಾರ್ಯಕರ್ತರು ಮನವಿ ನೀಡಿದರು. ಮರುಎಣಿಕೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಂ.ಶ್ರೀನಿವಾಸ ಅಷ್ಟೇ ಮತಗಳನ್ನು ಪಡೆದು ಗೆಲುವು ಸಾಧಿಸಿರುವರೆಂದು ಘೋಷಿಸಲಾಯಿತು.
ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿದ ಜೆಡಿಎಸ್
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಫಲಿತಾಂಶವು ಈ ಬಾರಿ ಕ್ಷೇತ್ರದಲ್ಲಿ ಜೆ.ಡಿ.ಎಸ್ ಪರವಾಗಿದೆ. ಐದು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಮೂರನ್ನು, 17 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಲ್ಲಿ 9 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡು ಜೆಡಿಎಸ್ ಪಕ್ಷ ಯಶಸ್ಸನ್ನು ಕಂಡಿದೆ.
ಕಳೆದ ಬಾರಿ ನಾಲ್ಕು ಜಿ.ಪಂ ಕ್ಷೇತ್ರಗಳಲ್ಲಿ 3 ಸ್ಥಾನ ಪಡೆದಿದ್ದ, 16 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಲ್ಲಿ 11 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಸಾಕಷ್ಟು ಹಿನ್ನಡೆಯನ್ನು ಕಂಡಿದೆ. ಅಬ್ಲೂಡು ಕ್ಷೇತ್ರವು ಈ ಹಿಂದೆಯೂ ಜೆಡಿಎಸ್ ಪಕ್ಷದ್ದಾಗಿದ್ದು ಈ ಬಾರಿಯೂ ಮುಂದುವರೆದಿದೆ. ಕಾಂಗ್ರೆಸ್ ವಶದಲ್ಲಿದ್ದ ಚೀಮಂಗಲ ಕ್ಷೇತ್ರವನ್ನು ಈ ಬಾರಿ ಜೆಡಿಎಸ್ ತನ್ನದಾಗಿಸಿಕೊಂಡಿದ್ದಲ್ಲದೆ ಹೊಸ ಕ್ಷೇತ್ರ ಗಂಜಿಗುಂಟೆಯಲ್ಲೂ ವಿಜಯ ಸಾಧಿಸಿದೆ.
ಕಳೆದ ಬಾರಿ 16 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿದ್ದವು. ಅವುಗಳಲ್ಲಿ ಜೆಡಿಎಸ್ ಪಕ್ಷವು ಕೇವಲ 5 ಸ್ಥಾನಗಳನ್ನಷ್ಟೆ ಗಳಿಸಿತ್ತು. ಆದರೆ ಈ ಬಾರಿ ಹೆಚ್ಚುವರಿಯಾದ ಕುಂಬಿಗಾನಹಳ್ಳಿ ಕ್ಷೇತ್ರವೂ ಸೇರಿದಂತೆ ಒಟ್ಟು 9 ಸ್ಥಾನಗಳನ್ನು ಜೆಡಿಎಸ್ ಪಕ್ಷವು ಗಳಿಸಿದೆ. ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳಾದ ಭಕ್ತರಹಳ್ಳಿ, ಚೀಮಂಗಲ, ಗಂಜಿಗುಂಟೆ, ಪಲಿಚೆರ್ಲು ಮತ್ತು ತುಮ್ಮನಹಳ್ಳಿಯನ್ನು ಜೆಡಿಎಸ್ ಪಕ್ಷವು ತನ್ನದಾಗಿಸಿಕೊಂಡಿದೆ. ಕಳೆದ ಬಾರಿ ಜೆಡಿಎಸ್ ಪಾಲಾಗಿದ್ದ ಅಬ್ಲೂಡು ಮತ್ತು ಆನೂರು ಕ್ಷೇತ್ರಗಳನ್ನು ಕಾಂಗ್ರೆಸ್ ಈ ಬಾರಿ ಗಳಿಸಿಕೊಂಡಿದೆ. ಆದರೂ 8 ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದು ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.
ಸಂಸದ ಕೆ.ಎಚ್.ಮುನಿಯಪ್ಪ ಅವರ ಅಣ್ಣನ ಮಗ ಕೆ.ಎಂ. ಸತೀಶ್, ಕಳೆದ ಬಾರಿ ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಗೆದ್ದಿದ್ದರು. ಈ ಬಾರಿ ಅವರು ದಿಬ್ಬೂರಹಳ್ಳಿ ಕ್ಷೇತ್ರದಿಂದ ಪುನಃ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ. ಮಾಜಿ ಶಾಸಕ ದಿ.ಮುಸಿಶಾಮಪ್ಪ ಅವರ ಮಗ ಹಾಗೂ ಹಾಲಿ ಶಾಸಕ ಎಂ.ರಾಜಣ್ಣ ಅವರ ಬಾವಮೈದ ಡಾ.ಎ.ಎಂ.ಜಯರಾಮರೆಡ್ಡಿ ಗಂಜಿಗುಂಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದು ಅವರ ಪ್ರಥಮ ಚುನಾವಣೆ ಹಾಗೂ ಗಂಜಿಗುಂಟೆ ಕ್ಷೇತ್ರವೂ ನೂತನ ಕ್ಷೇತ್ರವಾಗಿರುವುದು ವಿಶೇಷವಾಗಿದೆ.
ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರವು ಇದುವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈ ಹಿಂದೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿದ್ದ ವಿನುತಾ ಶ್ರೀನಿವಾಸ್ ಅವರು ಚೀಮಂಗಲ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಮತದಾರರು ಹೊಸ ಅಭ್ಯರ್ಥಿ ಜೆಡಿಎಸ್ ಪಕ್ಷದ ತನುಜಾ ರಘು ಅವರನ್ನು ಆಯ್ಕೆ ಮಾಡಿದ್ದಾರೆ.
ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಒಂದಾಗಿದ್ದೇವೆಂದು ಘೋಷಿಸಿ ಮತಯಾಚಿಸಿದರೂ ಕಾಂಗ್ರೆಸ್ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದೆ. ಆಡಳಿತಾರೂಢ ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕುವ ಮೂಲಕ ಜಯದ ನಗೆ ಬೀರಿದೆ.
ವಿದೇಶಿ ವಿದ್ಯಾರ್ಥಿಗಳಿಂದ ಅಂತರ್ಜಲ ಕುಸಿತ ಹಾಗೂ ಕೃಷಿಯ ಬಗ್ಗೆ ಅಧ್ಯಯನ
ಇಸ್ರೇಲ್, ಇಂಗ್ಲೆಂಡ್ ಮುಂತಾದ ದೇಶಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ತಂಡ ತಾಲ್ಲೂಕಿನ ಹಿತ್ತಲಹಳ್ಳಿ ಮತ್ತಿತರ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಅಂತರ್ಜಲ ಮಟ್ಟ ಕುಸಿತದಿಂದ ಕೃಷಿಕರು ಹಾಗೂ ಕೃಷಿ ಕ್ಷೇತ್ರದ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದರು.
ಇಸ್ರೇಲ್ನ ಟೆಲ್ ಅವೀವ್ ವಿಶ್ವವಿದ್ಯಾಲಯ ಸೇರಿದಂತೆ ಇಂಗ್ಲೆಂಡ್, ಭಾರತದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ತಂಡದ ಏಳು ಮಂದಿ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರ ತಂಡವು ರೈತರ ತೋಟಗಳಿಗೆ ಭೇಟಿ ನೀಡಿ, ಅಂತರ್ಜಲ ಮಟ್ಟ ಕುಸಿತದಿಂದ ಕೃಷಿಕರು ಹಾಗೂ ಕೃಷಿಯ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಂಡರು.
ಕೊಳವೆ ಬಾವಿ ಇನ್ನಿತರೆ ಮೂಲಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಮೇಲೆ ಕೃಷಿಕರು ಕೈಗೊಳ್ಳುತ್ತಿರುವ ಪರ್ಯಾಯ ಕಸುಬುಗಳು, ನಗರದತ್ತ ಹೆಚ್ಚುತ್ತಿರುವ ವಲಸೆ, ಆಹಾರ ಪದಾರ್ಥಗಳ ಕೊರತೆ, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳ, ಮಾರುಕಟ್ಟೆಯ ಪರಿಣಾಮ ಇನ್ನಿತರೆ ಹತ್ತು ಹಲವು ವಿಚಾರಗಳ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
ನಂತರ ಐ.ಎಫ್.ಎಂ.ಆರ್.ಸಂಶೋಧನಾ ಸಂಸ್ಥೆಯ ಮಂಜುಳ ಮಾತನಾಡಿ, ‘ಕರ್ನಾಟಕದಲ್ಲಿ ಯಾವ ಸ್ಥಿತಿಯಲ್ಲಿ ಕೊಳವೇಬಾವಿಗಳು ಇವೆ. ಎಷ್ಟು ಜನ ಕೊಳವೆ ಬಾವಿಗಳನ್ನು ಹಾಕಿಸಿದ್ದಾರೆ. ಅವುಗಳಲ್ಲಿ ಎಷ್ಟು ಕೆಲಸ ಮಾಡುತ್ತಿವೆ, ಎಷ್ಟು ಕೆಲಸ ಮಾಡುತ್ತಿಲ್ಲ. ರೈತರು ಯಾವರೀತಿ ನಷ್ಠವನ್ನು ಅನುಭವಿಸುತ್ತಿದ್ದಾರೆ. ಯಾವ ರೀತಿ ಕಷ್ಠವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಅದ್ಯಾಯನ ಮಾಡುತ್ತಿದ್ದೇವೆ. ಅಧ್ಯಾಯನ ನಡೆಸಿದ ನಂತರ ಇದನ್ನು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಿದ್ದೇವೆ. ನಾವು ಮಾಡುವಂತಹ ಅಧ್ಯಾಯನ ಸರ್ಕಾರ ಯೋಜನೆಗಳನ್ನು ರೂಪಿಸಲು ತುಂಬಾ ಉಪಯುಕ್ತವಾಗುತ್ತದೆ’ ಎಂದು ತಿಳಿಸಿದರು.
ಇನ್ನೂ ಮುಂದಿನ ದಿನಗಳಲ್ಲಿ ಕೆಲವು ಬಾಗಗಳಲ್ಲಿ ಸಭೆಗಳನ್ನು ಸಹ ಮಾಡುತ್ತೇವೆ. ಸುಮಾರು ೨ ಸಾವಿರ ಪ್ರಗತಿಪರ ರೈತರನ್ನು ಬೇಟಿ ಮಾಡಿ ಮಾಹಿತಿಗಳನ್ನು ಸಂಗ್ರಹ ಮಾಡುವ ಉದೇಶ ಹೊಂದಿದ್ದೇವೆ ಎಂದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡ ಮತ್ತು ಇತರ ರೈತರು ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಎದುರಾಗಿರುವ ಬರಗಾಲದ ಸ್ಥಿತಿಯು ರೈತರ ಆರ್ಥಿಕ ಸ್ಥಿತಿ ಗತಿ, ಜೀವನ ಕ್ರಮದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಅವರಿಗೆ ವಿವರಿಸಿದರು.
ನಂತರ ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಬೇಟಿ ನೀಡಿ ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ಹಾಗೂ ಹಣ್ಣಾಗಿ ಗೂಡು ಕಟ್ಟುವ ವಿಧಾನವನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆದರು.
ಅಧ್ಯಯನ ತಂಡದಲ್ಲಿ ಟಿ.ಎ.ಯು ಡಾ.ರಾಮ್ ಫಿಶ್ಮನ್, ಐ.ಸಿ.ಅರ್.ಐ.ಎಸ್.ಎ.ಟಿ. ಡಾ.ಕೆ.ವಿ.ರಾಜು, ಕೆ.ಎಸ್.ಎನ್.ಡಿ.ಎಂ.ಸಿ. ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಡಾ.ವಿ.ಎಸ್.ಪ್ರಕಾಶ್ ಮತ್ತಿತರರು ಹಾಜರಿದ್ದರು.
ತಲಕಾಯಲಬೆಟ್ಟದಲ್ಲಿ ಬ್ರಹ್ಮರಥೋತ್ಸವ
ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶಿಡ್ಲಘಟ್ಟ ನಗರದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಸಪ್ತ ಬೆಟ್ಟಗಳ ಸಾಲಿನಲ್ಲಿ, ಸಸ್ಯ ಸಂಪತ್ತಿನ ರಾಶಿ ನಡುವೆ ನೆಲೆನಿಂತ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತ ಛಾಪು ಮೂಡಿಸಿದ ವೆಂಕಟರಮಣಸ್ವಾಮಿಯ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದಲೂ ನಾನಾ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದೊಂದು ದಿನವೂ ಒಂದೊಂದು ರೀತಿಯಲ್ಲಿ ದೇವರನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥದ ಹಗ್ಗ ಹಿಡಿದೆಳೆದ ಭಕ್ತರು ನಮೋ ನಮೋ ಎಂದು ದೇವರ ಸ್ಮರಣೆ ಮಾಡಿದರಲ್ಲದೆ ದವನದೊಂದಿಗೆ ಬಾಳೆ ಹಣ್ಣನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಠಾರ್ಥಗಳನ್ನು ಈಡೇರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.
ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ, ದೇವಾಲಯದ ಅಭಿವೃದ್ಧಿ ಸಮಿತಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ದೇವರ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣಾ ಫಲಿತಾಂಶ
ಶಿಡ್ಲಘಟ್ಟ :
ಜಿಲ್ಲಾ ಪಂಚಾಯಿತಿ :
ಜಿ.ಪಂ ಒಟ್ಟು ಕ್ಷೇತ್ರ: 5
ಕಾಂಗ್ರೆಸ್: 2
ಜೆಡಿಎಸ್: 3
ಅತಿ ಹೆಚ್ಚು ಮತಗಳ ಅಂತರದಿಂದ ವಿಜೇತರಾದವರು:
ಚೀಮಂಗಲ ಕ್ಷೇತ್ರ :
ವಿಜೇತರು: ಬಿ.ಸಿ.ತನುಜ ರಘು, ತಾದೂರು(ಜೆಡಿಎಸ್)
ಪಡೆದ ಮತ: 11,265
ಗಲುವಿನ ಅಂತರ: 1,968
ಅಬ್ಲೂಡು ಕ್ಷೇತ್ರ :
ವಿಜೇತರು: ಮುನಿಯಪ್ಪ ಎಹುಣಸೇನಹಳ್ಳಿ(ಜೆಡಿಎಸ್)
ಪಡೆದ ಮತ: 12,853
ಗಲುವಿನ ಅಂತರ: 1,225
ಪ್ರತಿಸ್ಪರ್ಧಿ: ವೆಂಕಟೇಶಪ್ಪ ತಾತಹಳ್ಳಿ (ಕಾಂಗ್ರೆಸ್, ಪಡೆದ ಮತ: 11,628)
ಚೀಮಂಗಲ ಕ್ಷೇತ್ರ :
ವಿಜೇತರು: ಬಿ.ಸಿ.ತನುಜ ರಘು, ತಾದೂರು(ಜೆಡಿಎಸ್)
ಪಡೆದ ಮತ: 11,265
ಗಲುವಿನ ಅಂತರ: 1,968
ಪ್ರತಿಸ್ಪರ್ಧಿ: ವಿನುತಾ ಆರ್ ಶ್ರೀನಿವಾಸ್, ಕೆ ಮುತ್ತುಕದಹಳ್ಳಿ (ಕಾಂಗ್ರೆಸ್, ಪಡೆದ ಮತ: 9,297)
ದಿಬ್ಬೂರಹಳ್ಳಿ ಕ್ಷೇತ್ರ :
ವಿಜೇತರು: ಕೆ.ಎಂ.ಸತೀಶ್, ಕಂಬದಹಳ್ಳಿ(ಕಾಂಗ್ರೆಸ್)
ಪಡೆದ ಮತ: 9,501
ಗಲುವಿನ ಅಂತರ: 1,170
ಪ್ರತಿಸ್ಪರ್ಧಿ: ಚಿಕ್ಕನರಸಿಂಹಪ್ಪ ಹಿರಿಯಲಚೇನಹಳ್ಳಿ (ಜೆಡಿಎಸ್, ಪಡೆದ ಮತ: 8,331)
ಜಂಗಮಕೋಟೆ ಕ್ಷೇತ್ರ :
ವಿಜೇತರು: ಪಿ.ನಿರ್ಮಲಾ ಮುನಿರಾಜು, ಮಳ್ಳೂರು (ಕಾಂಗ್ರೆಸ್)
ಪಡೆದ ಮತ: 11,443
ಗಲುವಿನ ಅಂತರ: 11
ಪ್ರತಿಸ್ಪರ್ಧಿ: ನಳಿನಾಮಂಜುನಾಥ್ ಸೊಣ್ಣೇನಹಳ್ಳಿ(ಜೆಡಿಎಸ್, ಪಡೆದ ಮತ: 11,432)
ಗಂಜಿಗುಂಟೆ ಕ್ಷೇತ್ರ :
ವಿಜೇತರು: ಡಾ.ಎ.ಎಂ.ಜಯರಾಮರೆಡ್ಡಿ, ಆನೆಮಡುಗು (ಜೆಡಿಎಸ್)
ಪಡೆದ ಮತ: 10,254
ಗಲುವಿನ ಅಂತರ: 1,555
ಪ್ರತಿಸ್ಪರ್ಧಿ: ಟಿ.ಎಸ್.ಗೋಪಾಲರೆಡ್ಡಿ, ದೊಡ್ಡತೇಕಹಳ್ಳಿ (ಕಾಂಗ್ರೆಸ್, ಪಡೆದ ಮತ: 8,699)
ತಾಲ್ಲೂಕು ಪಂಚಾಯತಿ :
ತಾ.ಪಂ ಒಟ್ಟು ಕ್ಷೇತ್ರ: 17
ಕಾಂಗ್ರೆಸ್: 8
ಜೆಡಿಎಸ್: 9
ಅತಿ ಹೆಚ್ಚು ಮತಗಳ ಅಂತರದಿಂದ ವಿಜೇತರಾದವರು:
ಬಶೆಟ್ಟಿಹಳ್ಳಿ :
ವಿಜೇತರು: ಬಿ.ವಿ.ನಾರಾಯಣಸ್ವಾಮಿ, ಬಶೆಟ್ಟಿಹಳ್ಳಿ (ಜೆಡಿಎಸ್)
ಪಡೆದ ಮತ: 3,579
ಗಲುವಿನ ಅಂತರ: 1,210
೦೧.ಅಬ್ಲೂಡು :
ವಿಜೇತರು: ಕೆ.ಎಂ.ಶ್ರೀನಿವಾಸ, ಕೋಟಹಳ್ಳಿ (ಕಾಂಗ್ರೆಸ್)
ಪಡೆದ ಮತ: 3,684
ಗಲುವಿನ ಅಂತರ: 7
ಪ್ರತಿಸ್ಪರ್ಧಿ: ಕೆ.ಎಸ್.ಕನಕಪ್ರಸಾದ್, ತಾತಹಳ್ಳಿ (ಜೆಡಿಎಸ್, ಪಡೆದ ಮತ: 3,677)
೦೨.ಆನೂರು :
ವಿಜೇತರು: ವಿ.ನರಸಿಂಹಪ್ಪ ಎ.ಹುಣಸೇನಹಳ್ಳಿ (ಕಾಂಗ್ರೆಸ್)
ಪಡೆದ ಮತ: 2,865
ಗಲುವಿನ ಅಂತರ: 221
ಪ್ರತಿಸ್ಪರ್ಧಿ: ಕೆ.ಬಿ.ಮಂಜುನಾಥ ಎ.ಹುಣಸೇನಹಳ್ಳಿ (ಜೆಡಿಎಸ್, ಪಡೆದ ಮತ: 2,644)
೦೩.ಬಶೆಟ್ಟಿಹಳ್ಳಿ :
ವಿಜೇತರು: ಬಿ.ವಿ.ನಾರಾಯಣಸ್ವಾಮಿ, ಬಶೆಟ್ಟಿಹಳ್ಳಿ (ಜೆಡಿಎಸ್)
ಪಡೆದ ಮತ: 3,579
ಗಲುವಿನ ಅಂತರ: 1,210
ಪ್ರತಿಸ್ಪರ್ಧಿ: ಜಿ.ಕೆ.ಸೊಣ್ಣೇಗೌಡ ಗೌಡನಹಳ್ಳಿ (ಕಾಂಗ್ರೆಸ್, ಪಡೆದ ಮತ: 2,369)
೦೪.ಭಕ್ತರಹಳ್ಳಿ :
ವಿಜೇತರು: ಚಂದ್ರಕಲಾಬೈರೇಗೌಡ, ಭಕ್ತರಹಳ್ಳಿ (ಜೆಡಿಎಸ್)
ಪಡೆದ ಮತ: 2,621
ಗಲುವಿನ ಅಂತರ: 60
ಪ್ರತಿಸ್ಪರ್ಧಿ: ಎಂ.ಕವಿತ ಭಕ್ತರಹಳ್ಳಿ (ಕಾಂಗ್ರೆಸ್, ಪಡೆದ ಮತ: 2,561)
೦೫.ಚೀಮಂಗಲ :
ವಿಜೇತರು: ರಾಜಶೇಖರ ಮಳಮಾಚನಹಳ್ಳಿ (ಜೆಡಿಎಸ್)
ಪಡೆದ ಮತ: 3,811
ಗಲುವಿನ ಅಂತರ: 1,071
ಪ್ರತಿಸ್ಪರ್ಧಿ: ಬಿ.ಎನ್.ಸಂತೋಷ್ ಬೆಳ್ಳೂಟಿ (ಕಾಂಗ್ರೆಸ್, ಪಡೆದ ಮತ: 2,740)
೦೬. ದೇವರಮಳ್ಳೂರು :
ವಿಜೇತರು: ಆರ್.ಪಂಕಜ, ಸೊಣ್ಣೇನಹಳ್ಳಿ (ಕಾಂಗ್ರೆಸ್)
ಪಡೆದ ಮತ: 3,387
ಗಲುವಿನ ಅಂತರ: 143
ಪ್ರತಿಸ್ಪರ್ಧಿ: ಕೃಷ್ಣ ಕುಮಾರಿ, ಕೊತ್ತನೂರು (ಜೆಡಿಎಸ್, ಪಡೆದ ಮತ: 3,244)
೦೭. ದಿಬ್ಬೂರಹಳ್ಳಿ :
ವಿಜೇತರು: ಶಂಕರಮ್ಮ, ಜರುಗಹಳ್ಳಿ (ಕಾಂಗ್ರೆಸ್)
ಪಡೆದ ಮತ: 2,976
ಗಲುವಿನ ಅಂತರ: 176
ಪ್ರತಿಸ್ಪರ್ಧಿ: ಸವಿತಾ, ಬೈಯ್ಯಪ್ಪನಹಳ್ಳಿ (ಜೆಡಿಎಸ್, ಪಡೆದ ಮತ: 2,800)
೦೮. ಗಂಜಿಗುಂಟೆ :
ವಿಜೇತರು: ದೀಪ, ಹಕ್ಕಿಪಿಕ್ಕಿ ಕಾಲೋನಿ (ಜೆಡಿಎಸ್)
ಪಡೆದ ಮತ: 3,451
ಗಲುವಿನ ಅಂತರ: 502
ಪ್ರತಿಸ್ಪರ್ಧಿ: ಎಚ್. ಅನಿತಾ, ಹಳೆಗಂಜಿಗುಂಟೆ (ಕಾಂಗ್ರೆಸ್, ಪಡೆದ ಮತ: 2,942)
೦೯. ಹಂಡಿಗನಾಳ :
ವಿಜೇತರು: ಕೆ.ಲಕ್ಷ್ಮಿನಾರಾಯಣ, ಅಪ್ಪೇಗೌಡನಹಳ್ಳಿ (ಜೆಡಿಎಸ್)
ಪಡೆದ ಮತ: 2,639
ಗಲುವಿನ ಅಂತರ: 572
ಪ್ರತಿಸ್ಪರ್ಧಿ: ವಿ.ಬಿ.ನಾರಾಯಣಸ್ವಾಮಿ, ವರದನಾಯಕನಹಳ್ಳಿ (ಕಾಂಗ್ರೆಸ್, ಪಡೆದ ಮತ: 2,067)
೧೦.ಹೊಸಪೇಟೆ :
ವಿಜೇತರು: ಕೆ.ಶೋಭಾಶಶಿಕುಮಾರ್, ಹೊಸಪೇಟೆ (ಕಾಂಗ್ರೆಸ್)
ಪಡೆದ ಮತ: 3,496
ಗಲುವಿನ ಅಂತರ: 258
ಪ್ರತಿಸ್ಪರ್ಧಿ: ಭಾರತಮ್ಮಮಂಜುನಾಥ್ ಹೊಸಹಳ್ಳಿ (ಜೆಡಿಎಸ್, ಪಡೆದ ಮತ: 3,238 )
೧೧.ಜಂಗಮಕೋಟೆ :
ವಿಜೇತರು: ಜೆ.ಎನ್.ನಾಗರಾಜು ಜಂಗಮಕೋಟೆ (ಕಾಂಗ್ರೆಸ್)
ಪಡೆದ ಮತ: 3,071
ಗಲುವಿನ ಅಂತರ: 395
ಪ್ರತಿಸ್ಪರ್ಧಿ: ಜೆ.ಎಂ.ವೆಂಕಟೇಶ್ ಜಂಗಮಕೋಟೆ (ಜೆಡಿಎಸ್, ಪಡೆದ ಮತ: 2,676)
೧೨.ಮೇಲೂರು :
ವಿಜೇತರು: ಮುನಿಯಪ್ಪ ಮಳ್ಳೂರು (ಜೆಡಿಎಸ್)
ಪಡೆದ ಮತ: 3,349
ಗಲುವಿನ ಅಂತರ: 615
ಪ್ರತಿಸ್ಪರ್ಧಿ: ಶಿವಾನಂದ ಗಂಗನಹಳ್ಳಿ (ಕಾಂಗ್ರೆಸ್, ಪಡೆದ ಮತ: 2,734)
೧೩.ಪಲಿಚೇರ್ಲು :
ವಿಜೇತರು: ಮಂಜುಳಮ್ಮ ಕನ್ನಪ್ಪನಹಳ್ಳಿ (ಜೆಡಿಎಸ್)
ಪಡೆದ ಮತ: 3,473
ಗಲುವಿನ ಅಂತರ: 111
ಪ್ರತಿಸ್ಪರ್ಧಿ: ನಳಿನಾದೇವಿ ದೊಗರನಾಯಕನಹಳ್ಳಿ (ಕಾಂಗ್ರೆಸ್, ಪಡೆದ ಮತ: 3,362)
೧೪.ಸಾದಲಿ :
ವಿಜೇತರು: ನಾಗವೇಣಿವೆಂಕಟೇಶಪ್ಪ, ಸೊಣ್ಣಗಾನಹಳ್ಳಿ (ಕಾಂಗ್ರೆಸ್)
ಪಡೆದ ಮತ: 3,714
ಗಲುವಿನ ಅಂತರ: 852
ಪ್ರತಿಸ್ಪರ್ಧಿ: ಎಲ್.ಅನುಸೂಯಮ್ಮ ಆಂಜಿನಪ್ಪ, ಸಾದಲಿ (ಜೆಡಿಎಸ್, ಪಡೆದ ಮತ: 2,862 )
೧೫.ಈ.-ತಿಮ್ಮಸಂದ್ರ :
ವಿಜೇತರು: ವಹೀದಾ ಬೇಗಂ ಈ.ತಿಮ್ಮಸಂದ್ರ (ಕಾಂಗ್ರೆಸ್)
ಪಡೆದ ಮತ: 3,208
ಗಲುವಿನ ಅಂತರ: 697
ಪ್ರತಿಸ್ಪರ್ಧಿ: ಈಶ್ವರಮ್ಮ ಮದ್ದಿರೆಡ್ಡಿ ಆಟಗೊಲ್ಲಹಳ್ಳಿ (ಜೆಡಿಎಸ್, ಪಡೆದ ಮತ: 2,511)
೧೬.ತುಮ್ಮನಹಳ್ಳಿ :
ವಿಜೇತರು: ಎಚ್.ನರಸಿಂಹಯ್ಯ, ಹುಜುಗೂರು (ಜೆಡಿಎಸ್)
ಪಡೆದ ಮತ: 3,535
ಗಲುವಿನ ಅಂತರ: 255
ಪ್ರತಿಸ್ಪರ್ಧಿ: ದೇವರಾಜ ಹುಜುಗೂರು (ಕಾಂಗ್ರೆಸ್, ಪಡೆದ ಮತ: 3,280)
೧೭.ಕುಂಬಿಗಾನಹಳ್ಳಿ :
ವಿಜೇತರು: ಎನ್.ಮುನಿನರಸಮ್ಮ ನಾರಾಯಣಸ್ವಾಮಿ, ವಲ್ಲಪನಹಳ್ಳಿ (ಜೆಡಿಎಸ್)
ಪಡೆದ ಮತ: 3,296
ಗಲುವಿನ ಅಂತರ: 553
ಪ್ರತಿಸ್ಪರ್ಧಿ: ಡಿ.ನಾಗಲಕ್ಷ್ಮಮ್ಮಮುನಿರಾಜು, ದೇವೇನಹಳ್ಳಿ (ಕಾಂಗ್ರೆಸ್, ಪಡೆದ ಮತ: 2,743)
ಜಾತಿ, ವೃತ್ತಿ, ಧರ್ಮ ಮೀರಿದ್ದು ಕ.ಸಾ.ಪ
ಜಿಲ್ಲೆಯ ನೆಲ, ಜಲ, ಭಾಷೆ, ಸಂಸ್ಕೃತಿ ಸೇರಿದಂತೆ ಇತರೆ ಆಶೋತ್ತರಗಳನ್ನಿಟ್ಟುಕೊಂಡು ಪ್ರಸಕ್ತ ಸಾಲಿನ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮತನೀಡಿ ಗೆಲ್ಲಿಸಿ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೈವಾರ ಶ್ರೀನಿವಾಸ್ ಕೋರಿದರು.
ನಗರ ಹಾಗೂ ತಾಲ್ಲೂಕಿನಲ್ಲಿ ಸೋಮವಾರ ಮತಯಾಚನೆ ಮಾಡಿ ಅವರು ಮಾತನಾಡಿದರು. ಸಾಹಿತ್ಯದ ಪರಿಚಾಲಕನಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಸಾಪ ಕಾರ್ಯಕ್ರಮಗಳನ್ನು ನಡೆಸುವುದು, ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳನ್ನು ಗುರುತಿಸುವುದು, ಪ್ರೋತ್ಸಾಹಿಸುವುದು, ಕನ್ನಡದ ಓದುವಿಕೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವಿದೆ. ಜಾತಿ, ವೃತ್ತಿ, ಧರ್ಮ, ಮೇಲು, ಕೀಳು ಎಂಬುದು ಕ.ಸಾ.ಪ ದಲ್ಲಿ ಇಲ್ಲ. ಮುಂದೆಯೂ ಅದೇ ವಿಶ್ವಕನ್ನಡದ ಸದುದ್ದೇಶವು ಮುಂದುವರೆಯಲಿದೆ ಎಂದರು.
ತಾಲ್ಲೂಕಿನ ಮೇಲೂರು, ಮಳ್ಳೂರು, ಅಪ್ಪೇಗೌಡನಹಳ್ಳಿ ಹಾಗೂ ನಗರದಲ್ಲಿ ಅವರು ಕಸಾಪ ಸದಸ್ಯರ ಬೆಂಬಲವನ್ನು ಕೋರಿದರು.
ಎಸ್.ವಿ.ನಾಗರಾಜರಾವ್, ಬಿ.ಆರ್.ಅನಂತಕೃಷ್ಣ, ವಿ.ಕೃಷ್ಣ, ವಾಸು, ಶಂಕರ್ ಮತ್ತಿತರರು ಹಾಜರಿದ್ದರು.
ಆಂಜನೇಯಸ್ವಾಮಿ ದೇವಾಲಯಕ್ಕೆ ಮೀನಾಕ್ಷಿ ಸುಂದರಮ್ ಭೇಟಿ
ಶಿಡ್ಲಘಟ್ಟದ ಮಯೂರವೃತ್ತದ ಅಶ್ವತ್ಥಕಟ್ಟೆಯ ಮಹಾಮುಖ್ಯಪ್ರಾಣ ಆಂಜನೇಯಸ್ವಾಮಿ ದೇವಾಲಯಕ್ಕೆ ಈಚೆಗೆ ವೇಲೂರು ದೇವಸ್ಥಾನದ ಸಮಿತಿಯ ಅಧ್ಯಕ್ಷ ಮೀನಾಕ್ಷಿ ಸುಂದರಮ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹನುಮಂತಪ್ಪ, ಎಂ.ಮುನಿರಾಜು, ಶ್ರೀಧರ್, ಸುರೇಶ್, ಶ್ರೀರಾಮ್, ರವಿಸ್ವಾಮಿ, ರಮೇಶ್ ಹಾಜರಿದ್ದರು.
ವೀಳ್ಯದ ಎಲೆಯ ಬಳ್ಳಿ & ಅಡಿಕೆ ಎಲೆಯ ಸಂಬಂಧ
ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿ ಮುನಿರಡ್ಡಿಜಗದೀಶ್ ಅವರ ಮನೆ ಬಳಿ ಅಡಿಕೆ ಮರಕ್ಕೆ ಸೊಂಪಾಗಿ ಹಬ್ಬಿರುವ ವೀಳ್ಯದ ಎಲೆಯ ಬಳ್ಳಿಯು ಅಡಿಕೆ ಎಲೆಯ ಸಂಬಂಧವನ್ನು ಪ್ರದರ್ಶಿಸುತ್ತಿದೆ.
ಕನ್ನಡತನವನ್ನು ಉಳಿಸಿ ಬೆಳೆಸಲು ಮತ ನೀಡಿ
ಫೆಬ್ರವರಿ ೨೮ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಕನ್ನಡ ಭಾಷೆ ಹಾಗೂ ಕನ್ನಡತನವನ್ನು ಉಳಿಸಿ ಬೆಳೆಸಲು ಮತಗಳನ್ನು ನೀಡುವಂತೆ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಬಿ.ಹನುಮಂತಪ್ಪ ಕೋರಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ವಿವಿಧ ರಂಗಗಳಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಿದ್ದು, ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಉಳಿವು ಹಾಗೂ ಕನ್ನಡ ಮಾದ್ಯಮ ಶಾಲೆಗಳ ಉಳಿಗಾಗಿ, ತಮ್ಮನ್ನು ಬೆಂಬಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡದ ಅಭಿವೃದ್ಧಿ, ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಶಾಲೆಗಳನ್ನು ಮುಚ್ಚದಂತೆ ಹಾಗೂ ಉಳಿವಿಗಾಗಿ ಹೋರಾಟ ನಡೆಸುವುದು, ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿಯುಳ್ಳ ಮಹಿಳೆಯರನ್ನು, ಯುವಕರನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹ ಮಾಡುವಂತಹ ಕಾರ್ಯವನ್ನು ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ, ಗ್ರಾಮೀಣ ಭಾಗದ ಕಲೆ, ಸಾಹಿತ್ಯಗಳನ್ನು ಅಭಿವೃದ್ಧಿ ಪಡಿಸುವುದು, ಕನ್ನಡ ಸಾಹಿತ್ಯ ಕುರಿತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದು, ಸಾಹಿತ್ಯ ದತ್ತಿ ನಿಧಿಗಳನ್ನು ಸ್ಥಾಪನೆ ಮಾಡುವುದು, ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಅನ್ಯ ಭಾಷಾ ಶಾಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಕನ್ನಡವನ್ನು ಬೆಂಬಲಿಸುವ ಉದ್ದೇಶವಿದೆ. ಗ್ರಂಥ ಭಂಡಾರಗಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸುವಂತಹ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದ್ದು, ಜಿಲ್ಲೆಯ ಶಿಕ್ಷಕರು, ಅಧಿಕಾರಿಗಳು, ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ.
ಕಳೆದ ಅವಧಿಯಲ್ಲಿದ್ದ ಅಧ್ಯಕ್ಷರುಗಳು, ಕೇಂದ್ರ ಕಚೇರಿಗೆ ಲೆಕ್ಕಪತ್ರಗಳನ್ನು ಸಲ್ಲಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ನನಗೆ ಮಾಹಿತಿಯಿಲ್ಲ, ಜಿಲ್ಲಾ ಸಮಿತಿಯಿಂದ ಯಾವುದೇ ಲೆಕ್ಕಗಳನ್ನು ತಾಲ್ಲೂಕುಗಳಿಗೆ ರವಾನೆ ಮಾಡುತ್ತಿರಲಿಲ್ಲ, ಲೆಕ್ಕಗಳನ್ನು ಕೇಳಲು ಸಭೆಯನ್ನೂ ಕರೆಯುತ್ತಿರಲಿಲ್ಲ ಎಂದರು.
ಶಿಕ್ಷಕ ಗೋಪಿನಾಥ್, ದೇವರಾಜ್, ಶಾಮಣ್ಣ, ಸುಂದರಂ, ಮುನಿರತ್ನಾಚಾರಿ, ಶ್ರೀನಿವಾಸಮೂರ್ತಿ, ಸುಂದರಾಚಾರಿ ಮುಂತಾದವರು ಹಾಜರಿದ್ದರು.
ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು
ಜೆಎನ್ಯು ವಿದ್ಯಾರ್ಥಿಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ಹೊರಗುಳಿದ ಘಟನೆ ಸೋಮವಾರ ನಡೆಯಿತು.
ನಮ್ಮ ದೇಶದ ವಿರುದ್ಧ ಘೋಷಣೆಗಳನ್ನು ಕೂಗಿದ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದೆ ಕೇಂದ್ರ ಸರ್ಕಾರ ಮೃದು ಧೋರಣೆಯನ್ನು ಅನುಸರಿಸುತ್ತಿದೆ. ಭಯೋತ್ಪಾದಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತಾಲ್ಲೂಕು ವಕೀಲರ ಸಂಘ ಬೆಂಬಲಿಸುತ್ತಿದೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಕೀಲರು ಒತ್ತಾಯಿಸಿದರು.
ವಕೀಲರಾದ ಈ.ನಾರಾಯಣಪ್ಪ, ಡಿ.ಅಶ್ವತ್ಥನಾರಾಯಣ, ರವೀಂದ್ರನಾಥ್, ವಿ.ಸುಬ್ರಮಣ್ಯಪ್ಪ, ಎ.ನಾರಾಯಣಸ್ವಾಮಿ, ಮಂಜುನಾಥ್, ವೇಣುಗೋಪಾಲ, ಶ್ರೀನಿವಾಸ್, ಭಾಸ್ಕರ, ಚಂದ್ರಶೇಖರ್, ರಾಘವೇಂದ್ರ, ಬಾಬು, ಕೆಂಪೇಗೌಡ, ವೆಂಕಟೇಶ, ಮುನಿಶಾಮಗೌಡ, ಲಕ್ಷ್ಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ಲಾಸ್ಟಿಕ್, ಪ್ಲಾಸ್ಟಿಕ್…. ಬೇಡ ಪ್ಲಾಸ್ಟಿಕ್
ಭಾರತ ದೀರ್ಘಕಾಲದ ಸ್ವಾತಂತ್ರ್ಯ ಹೋರಾಟ ನಡೆಸಿದ ದೇಶ. ಬ್ರಿಟಿಷರ ವಿರುದ್ಧ ಅವರ ಕಾನೂನು ಮುರಿಯುವ ಆತ್ಮವಿಶ್ವಾಸದ ಚಳುವಳಿಗಳು ಹಲವು. ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹಗಳನ್ನು ಇಲ್ಲಿ ನೆನಪಿಸಬಹುದು. ಅದಕ್ಕೇ ಇರಬೇಕು, ಸ್ವತಂತ್ರ ಭಾರತದಲ್ಲೂ ಭಾರತೀಯರು ಕಾನೂನುಗಳನ್ನು ಮುರಿಯುವುದರಲ್ಲೇ ಹೆಚ್ಚು ಆಸಕ್ತರು!
ಇದಕ್ಕೆ ಸ್ವಚ್ಛ ಉದಾಹರಣೆ ಪ್ಲಾಸ್ಟಿಕ್ ಬಳಕೆ. ಸರ್ಕಾರ 40 ಮೈಕ್ರಾನ್‍ನಷ್ಟು ತೆಳುವಾದ ಪ್ಲಾಸ್ಟಿಕ್ ಚೀಲಗಳ ತಯಾರಿಕೆ, ಬಳಕೆಯನ್ನು ನಿಷೇಧಿಸಿದೆ. ಹಲವು ರಾಜ್ಯಗಳಲ್ಲಿ ಒಟ್ಟಾರೆ ಪ್ಲಾಸ್ಟಿಕ್ ಕವರ್‍ಗಳಿಗೇ ಬಹಿಷ್ಕಾರವಿದೆ. Who cares? ಕ್ಯೂ ಮುರಿದು ಟಿಕೆಟ್ ಪಡೆಯುವುದರಲ್ಲಿಯೇ ಗೆಲುವಿನ ನಗೆ ಬೀರುವ, ಏಕಮುಖ ಸಂಚಾರ ರಸ್ತೆಯಲ್ಲಿ ರಸ್ತೆ ನಿಯಮ ಮುರಿದು ನುಗ್ಗುವ ಕೆಚ್ಚಿನ ನಮಗೆ ಪ್ಲಾಸ್ಟಿಕ್ ನಿಷೇಧ ಅನ್ವಯವಾಗುವುದು ಇತರರಿಗೆ ಮಾತ್ರ ಎನ್ನಿಸಿಬಿಟ್ಟಿದೆ!
ಬ್ರಿಟಿಷರ ಆಳ್ವಿಕೆಯಿಂದಾಗಿ ಅವರ ಹತ್ತು ಹಲವು ಸಂಪ್ರದಾಯಗಳನ್ನು ಅಳವಡಿಸಿಕೊಂಡವರು ನಾವು. ಅವರ ಸಂವಿಧಾನವನ್ನು ಅನುಕರಿಸಿದ್ದೂ ನಿಜ. ಪ್ಲಾಸ್ಟಿಕ್ ಕುರಿತ ಅವರ ಕ್ರಮಗಳನ್ನು ನಾವು ಪಾಲಿಸಿದ್ದರೆ ಕ್ರಾಂತಿಕಾರಕ ಬದಲಾವಣೆ ಸಾಧ್ಯವಿತ್ತು. ಇಂದು ಪ್ಲಾಸ್ಟಿಕ್ ನಿಷೇಧ ಕುರಿತಂತೆ ಇಂಗ್ಲೆಂಡ್‍ನಿಂದ ಹರಿದು ಬರುತ್ತಿರುವ ಅಂಕಿಅಂಶಗಳು ನಮಗೂ ಆ ದಿಕ್ಕಲ್ಲಿ ಉತ್ತೇಜಿಸುವಂತವು.
ಇಂದು ಅಲ್ಲಿನ ಅಂಗಡಿಯವರು ಶೇ.85ರಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಿದ್ದಾರೆ. ಅಲ್ಲಿನ ಮಾಕ್ರ್ಸ್ ಸ್ಪೆನ್ಸರ್ ಮಾರಾಟ ಮಳಿಗೆ ಕಂಪನಿ ಹೇಳುವ ಪ್ರಕಾರ, ಮನೆಗೆ ಪ್ಲಾಸ್ಟಿಕ್ ಬ್ಯಾಗ್ ಪಡೆದು ಪದಾರ್ಥ ಒಯ್ಯುವವರ ಸಂಖ್ಯೆ ಶೇ.80ರಷ್ಟು ಕುಸಿದಿದೆ. ಸಂಖ್ಯೆಯಲ್ಲಿ ಹೇಳುವುದಾದರೆ, ವಾರ್ಷಿಕ 460 ಮಿಲಿಯನ್ ಬ್ಯಾಗ್ ಬಳಕೆಯಿಂದ 80 ಮಿಲಿಯನ್‍ಗೆ ಕುಸಿದಿದೆ.
ಅಲ್ಲಿನ ಟೆಸ್ಕೋ ವ್ಯಾಪಾರಿ ಮಳಿಗೆ ಗ್ರಾಹಕರಿಗೆ `ಗ್ರೀನ್ ಪಾಯಿಂಟ್’ ಆಮಿಷ ಒಡ್ಡಿದೆ. ಪ್ರತಿಬಾರಿ ಹಳೆಯ ಪ್ಲಾಸ್ಟಿಕ್ ಬ್ಯಾಗ್‍ನ್ನೇ ತಂದು ವ್ಯಾಪಾರ ಮಾಡುವವರಿಗೆ ಹಸಿರು ಅಂಕಗಳು ಸಿಗುತ್ತವೆ. ನಿರ್ದಿಷ್ಟ ಅಂಕಗಳು ಒಟ್ಟಾದಾಗ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು ಲಭ್ಯ. ಈ ವಿಧಾನದಿಂದ ಟೆಸ್ಕೋ ಒಂದು ಸಂಸ್ಥೆಯೇ ಮೂರು ಬಿಲಿಯನ್ ಬ್ಯಾಗ್‍ನ್ನು ಉಳಿಸಿದೆಯಂತೆ.
ಈ ನಡುವೆ ವಿಪರೀತ ಪ್ಲಾಸ್ಟಿಕ್‍ನಿಂದಾಗಿ ಬ್ರಿಟನ್‍ನ ಪ್ಲಾಸ್ಟಿಕ್ ಸಂಸ್ಕರಣ ಘಟಕಗಳ ಮೇಲೆ ಆಗಾಗ ಒತ್ತಡ ಬೀಳುತ್ತಿತ್ತು. ಅಲ್ಲಿನ ವೇಸ್ಟ್ ರಿಸೋರ್ಸ್ ಆ್ಯಕ್ಷನ್ ಪ್ರೋಗ್ರಾಂನ ಮಾಹಿತಿಯ ಅನ್ವಯ 2006ರ 13.4 ಬಿಲಿಯನ್‍ನಿಂದ ಎರಡೇ ವರ್ಷಗಳಲ್ಲಿ 9.9 ಬಿಲಿಯನ್‍ಗೆ ಪ್ಲಾಸ್ಟಿಕ್‍ನ ಬಳಕೆ ಪಟ್ಟಿ ಕುಸಿದಿತ್ತು. ಸರ್ಕಾರ `ನಿಮ್ಮೊಂದಿಗೆ ಸದಾ ಒಂದು ಬ್ಯಾಗ್’ ಆಂದೋಲನ ಹಮ್ಮಿಕೊಂಡಾಗಲಂತೂ ಭಾರೀ ಉತ್ತೇಜಕ ಪ್ರತಿಕ್ರಿಯೆ ಸಿಕ್ಕಿತ್ತು. ಸರಾಸರಿ ವಾರ್ಷಿಕ ಐದು ಬಿಲಿಯನ್ ಬ್ಯಾಗ್ ಬಳಕೆ ತಗ್ಗಲಾರಂಭಿಸಿದೆ. ಒಂದು ಅಂದಾಜಿನ ಪ್ರಕಾರ, ಈವರೆಗೆ 130,000 ಟನ್‍ಗಳ ಕಾರ್ಬನ್ ಡೈ ಆಕ್ಸೈಡ್‍ನ್ನು ಉಳಿಸಲಾಗಿದೆ. ಇದು ವಾರ್ಷಿಕ 41 ಸಾವಿರ ಕಾರುಗಳನ್ನು ರಸ್ತೆಯಿಂದ ಹೊರಗಿಟ್ಟಷ್ಟು ಸ್ವಚ್ಛ ಪರಿಸರವನ್ನು ಕೊಡುವುದು ಎನ್ನಬಹುದು.
ಭಾರತದಲ್ಲೂ ಬಿಗ್‍ಬಜಾರ್‍ಗಳಂತ ಮಾಲ್ ವ್ಯವಸ್ಥೆಯಿದೆ. ಹೇಳಿ ಕೇಳಿ ನಾವು ಆಮಿಷಗಳಲ್ಲಿ ಆಸಕ್ತರು. ಭಾರತದಲ್ಲೂ `ಹಸಿರು ಅಂಕ’ ಕೊಡುವ ತಂತ್ರ ರೂಪಿಸಬಹುದು. ನಿರ್ದಿಷ್ಟ ಅಂಕ ಗಳಿಸಿದಾಗ ಗಿಫ್ಟ್ ತಗೊಳ್ಳಿ ಎನ್ನಬಹುದು. ಬರೀ ಮಾಲ್‍ಗೆ ಅಂತಲ್ಲ, ಎಲ್ಲೆಡೆ ಹೊಗುವಾಗಲೂ ನಮ್ಮ ಜೊತೆಗೆ ಕನಿಷ್ಟ ಮೂರು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಒಯ್ದಿರಬೇಕು. ಇದು ಬೇರೆಯವರಿಗೆ ಹೇಳಬೇಕಾದ ಮಾತಲ್ಲ. ನಾವೇ ಇವತ್ತಿನಿಂದಲೇ ಜಾರಿ ಮಾಡಬೇಕು. ನೆನಪಿರಲಿ, ನಾವೇ! ಆಗ ಇಂಗ್ಲೆಂಡಿಗರಿಂದಾದ ಅಂಕಿಅಂಶಗಳು ನಮ್ಮಲ್ಲೂ ಸೃಷ್ಟಿಯಾಗುತ್ತವೆ.
ಪ್ಲಾಸ್ಟಿಕ್ ಬಳಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿರುವುದು ಪ್ಲಾಸ್ಟಿಕ್ ಬಾಟಲಿಯ ಕುಡಿಯುವ ನೀರು. ಇಂದು ವಾರ್ಷಿಕ 2.7 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ರಾಜ್ಯ ಇದರಿಂದ ಸೃಷ್ಟಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಪುನರ್ಬಳಕೆ ಅಪರೂಪವಾಗಿರುವ ಹಾಗೂ ಈ ಲೆಕ್ಕದಲ್ಲಿ ತಂಪು ಸಾಫ್ಟ್ ಪಾನೀಯಗಳ ಬಾಟಲಿ ಲೆಕ್ಕ ಸೇರದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಂಭೀರತೆ ನಿಮಗೂ ಅರ್ಥವಾದೀತು.
ಬಾಟಲಿ ತ್ಯಾಜ್ಯ ಬಚಾಯಿಸಲು ಹಲವು ಸಾಧ್ಯತೆಗಳಿವೆ. ಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರಿನನಲ್ಲಿ ವ್ಯವಸ್ಥೆ ಮಾಡಿದರೆ ಸಾಕು. ಇಂತಹ ಕ್ರಮದಿಂದ 2008ರಿಂದ ಶೇ.ಒಂಬತ್ತರ ಪ್ಲಾಸ್ಟಿಕ್ ಬಾಟಲಿ ಬಳಕೆ ಕಡಿಮೆಯಾಗಿದೆ. ಸಾರ್ವತ್ರಿಕವಾಗಿ ಇದು ಎಲ್ಲ ದೇಶಗಳ ಆಡಳಿತ ಜಾರಿಗೆ ತಂದರೆ ಕ್ರಾಂತಿಯೇ ಆದೀತು.
2009ರ ಜುಲೈನಲ್ಲಿ ಆಸ್ಟ್ರೇಲಿಯಾದ ಬಂಡನೋನ್ ನಗರ ಬಾಟಲಿ ಕುಡಿಯುವ ನೀರನ್ನು ನಿಷೇಧಿಸಿದೆ. ಪರ್ಯಾಯವಾಗಿ ಪುನರ್ಬಳಕೆ ಬಾಟಲಿ ಬಳಕೆಯನ್ನು ಪ್ರೋತ್ಸಾಹಿಸಲಾಗಿದೆ. ಇ ಸೈಕಲ್ ಎಂಬ ಅಂತರ್ರಾಷ್ಟ್ರೀಯ ಪ್ರಶಸ್ತಿ ಗಳಿಸಿರುವ ಈ ಧಾತುವಿನ ಕಾರಣ ಬಾಟಲಿಯನ್ನು ಪದೇ ಪದೇ ಬಳಸಬಹುದು. ಮಾತ್ರವಲ್ಲ, ಹಾಳಾದ ಬಾಟಲಿಗಳನ್ನು ರೀ-ಸೈಕಲ್ ಮಾಡಬಹುದು. ಅಲಾದಿನ್ ಕಂಪನಿಯ ಈ ತಂತ್ರ ಪೇಟೆಂಟ್ ವ್ಯಾಪ್ತಿಯ ಹೊರಗಿಡುವ ಕೆಲಸವಾಗಬೇಕು.
ಕೊನೆಪಕ್ಷ, ಪುನರ್ಬಳಕೆ ಬಾಟಲಿಗಳು ಬಂದರೂ ಸಾಕು. ಈಗ ಪರಿಸರ ಬಚಾವ್ ಒಂದು ಫ್ಯಾಷನ್ ಕೂಡ ಆಗಿರುವುದರಿಂದ ಅಪಾಯವಿಲ್ಲ ಎಂಬ ಸೂಚನೆ ಸಿಕ್ಕರೆ ಪುನರ್ಬಳಕೆ ಸಲೀಸು. 2009ರ ಸುಂಡೇನ್ ಉತ್ಸವದಲ್ಲಿ `ನಲ್ಗೀನ್’ ಕಂಪನಿ ರೀ ಯೂಸ್ ಬಾಟಲಿಯನ್ನು ಪೂರ್ಣ ಫೆಸ್ಟಿವಲ್‍ನಲ್ಲಿ ಒದಗಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತದ ಮಟ್ಟಿಗೆ ಹೇಳುವುದಾದರೆ, ಮತ್ತೆ ಹಳೇ ಜಮಾನಾದಲ್ಲಿದ್ದಂತೆ ಕಾಗದದ ಪ್ಯಾಕಿಂಗ್‍ನ ಬಿಸ್ಕೇಟ್, ಅಡಿಕೆ ಪುಡಿ, ಟೂತ್‍ಪೇಸ್ಟ್ ಮೊದಲಾದವುಗಳ ತಯಾರಿಕೆಯನ್ನು ಪುನರಾರಂಭಿಸಬೇಕೆ ವಿನಃ ಜನರಿಗೆ ಬುದ್ಧಿ ಹೇಳುವುದು ಕಷ್ಟ ಕಷ್ಟ!
– ಮಾ.ವೆಂ.ಸ.ಪ್ರಸಾದ್
ಹಾಡಹಗಲೇ ಕಳ್ಳತನ
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹಾಡಹಗಲೇ ದ್ವಿಚಕ್ರವಾಹನವೊಂದು ಕಳುವಾಗಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ದೊಗರನಾಯಕನಹಳ್ಳಿ ಗ್ರಾಮದ ಚನ್ನಕೇಶವ ಎಂಬುವವರಿಗೆ ಸೇರಿದ ಕೆಎ 40, ಕ್ಯೂ 1200 ಸಂಖ್ಯೆಯ ದ್ವಿಚಕ್ರ ವಾಹನವು ಭಾನುವಾರ ಹಾಡ ಹಗಲಲ್ಲೇ ಕಳುವಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದು ಪರಿಚಯಸ್ಥರೊಬ್ಬರನ್ನು ನೋಡಲೆಂದು ಬಂದಿದ್ದ ಸಂದರ್ಭದಲ್ಲಿ ದ್ವಿ ಚಕ್ರ ವಾಹನ ಕಳುವಾಗಿದ್ದು ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಆಸ್ಪತ್ರೆಯ ಆವರಣ ಸೇರಿದಂತೆ ನಗರದ ವಿವಿದೆಡೆ ದ್ವಿಚಕ್ರ ವಾಹನಗಳು ಕಳುವಾಗುತ್ತಿದ್ದರೂ ಪೋಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ನಾಗರೀಕರಲ್ಲಿ ಬೇಸರ ಮೂಡಿಸಿದೆ.
ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಳುವಾದ ಬೈಕ್ ಮಾಲೀಕರು ಪೊಲೀಸ್ ಠಾಣೆ ಮುಂಭಾಗದಲ್ಲಿ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಪಲ್ಸ್ ಪೋಲಿಯೋ ಕಾರ್ಯಕ್ರಮ
ತಾಲ್ಲೂಕಿನಾದ್ಯಂತ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೋಷಕರು ಭಾಗಿಯಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‍ಕುಮಾರ್ ಹೇಳಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ 2 ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡಿ, ದೀರ್ಘಕಾಲ ಭೀಕರ ಪರಿಣಾಮ ಬೀರುವ ಪೋಲಿಯೋ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಶ್ರೀನಿವಾಸ್, ಅಕ್ಕಲರೆಡ್ಡಿ, ವಿಜಯಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲೂಕಿನ ಜಂಗಮಕೋಟೆ, ಮೇಲೂರು, ಮಳ್ಳೂರು, ನಾಗಮಂಗಲ, ಅಬ್ಲೂಡು, ಸೇರಿದಂತೆ ವಿವಿಧ ಕಡೆ ಪಲ್ಸ್ ಪೋಲೀಯೋ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಾನಪದ ಹಬ್ಬ
ನಾಗರೀಕತೆ ಬೆಳೆದಂತೆಲ್ಲಾ ಗ್ರಾಮೀಣ ಪ್ರದೇಶಗಳ ಸಂಸ್ಕøತಿ ಮತ್ತು ಜನಪದ ಕಲೆಗಳನ್ನು ಮರೆಯುತ್ತಿದ್ದು ಮಕ್ಕಳಿಗೆ ಜನಪದ ಕಲೆ ಹಾಗು ಹಿಂದಿನ ನಮ್ಮ ಸಂಪ್ರದಾಯದ ಬಗ್ಗೆ ತಿಳಿಸುವ ಸಲುವಾಗಿ ಶಾಲೆಯಲ್ಲಿ ಜಾನಪದ ಹಬ್ಬ ಆಚರಿಸಲಾಗುತ್ತಿದೆ ಎಂದು ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಗರಾಜ್ ಅಭಿಪ್ರಾಯಪಟ್ಟರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಾನಪದ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗಾರೀಕತೆ, ಆಧುನೀಕತೆ ನೆಪದಲ್ಲಿ ನಮ್ಮ ಜಾನಪದ ಕಲೆ, ಗ್ರಾಮೀಣ ಸಂಸ್ಕøತಿಗಳು ಮರೆಯಾಗುತ್ತಿದ್ದು ಇಂದಿನ ಮಕ್ಕಳಿಗೆ ಜಾನಪದ ಹಾಗು ಗ್ರಾಮೀಣ ಸಂಸ್ಕøತಿಯ ಬಗ್ಗೆ ತಿಳಿಸಲು ಜಾನಪದ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದ್ದು ಇಂದು ಶಾಲೆಯಲ್ಲಿ ಗ್ರಾಮೀಣ ಜನಜೀವನ, ಕೃಷಿ, ಆಚಾರ, ವಿಚಾರ, ಪರಿಸರವನ್ನು ವಿದ್ಯಾರ್ಥಿಗಳು ಸೃಷ್ಠಿಸಿದ್ದಾರೆ ಎಂದರು.
ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಧರಿಸಿ ಶಾಲೆಯನ್ನು ಹೂಗಳಿಂದ ಅಲಂಕರಿಸಲಾಗಿತ್ತು.
ಬಣ್ಣಬಣ್ಣದ ರಂಗೋಲಿಗಳು ಸೇರಿದಂತೆ ವಿದ್ಯಾರ್ಥಿಗಳಿಂದ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾಲ್ಫಿನ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ಪ, ಡಿಎಡ್ ವಿಭಾಗದ ಪ್ರಾಂಶುಪಾಲ ಮುನಿಶಾಮಪ್ಪ, ಶಾಲೆಯ ಶಿಕ್ಷಕರು ಮತ್ತಿತರರು ಹಾಜರಿದ್ದರು.
ಎನ್.ಅಶೋಕ್, ಡಾಲ್ಫಿನ್ ವಿದ್ಯಾಸಂಸ್ಥೆಯ ನಿರ್ದೇಶಕರು: `ನಮ್ಮ ದೇಶೀ ಸಂಸ್ಕೃತಿ, ಆಚಾರ ವಿಚಾರ, ಜನಜೀವನ, ಜಾನಪದ ಮುಂತಾದ ವಿಚಾರಗಳು ಮಕ್ಕಳ ಮನಸ್ಸಿಗೆ ತಲುಪಲು ಅವರೇ ಅನುಭವಿಸಿ ಪ್ರದರ್ಶಿಸುವ ಉದ್ದೇಶದಿಂದ ಜಾನಪದ ಹಬ್ಬ ಕಾರ್ಯಕ್ರಮ ಶಾಲೆಯಲ್ಲಿ ಆಚರಿಸುತ್ತಿದ್ದೇವೆ. ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹಾಗು ಮಕ್ಕಳಲ್ಲಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಕಾರ್ಯಕ್ರಮಗಳು ಅನುಕೂಲವಾಗಲಿವೆ.
ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು
ಡಿ.ಸಿ.ಸಿ.ಬ್ಯಾಂಕಿನ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲಗಳನ್ನು ನಿಗದಿತ ಅವಧಿಯಲ್ಲಿ ಮರುಫಾವತಿ ಮಾಡುವುದರ ಜೊತೆಗೆ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದು ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ನಗರದ ಡಿ.ಸಿ.ಸಿ.ಬ್ಯಾಂಕಿನಲ್ಲಿ ಆಯೋಜನೆ ಮಾಡಲಾಗಿದ್ದ ಸಾಲವಿತರಣೆ ಕಾರ್ಯಕ್ರಮದಲ್ಲಿ 07 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸುಮಾರು 35 ಲಕ್ಷ ರೂಪಾಯಿಗಳ ಸಾಲವನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಮಹಿಳೆಯರ ಸಬಲೀಕರಣವಾದಾಗ ಮಾತ್ರ ರಾಷ್ಟ್ರದ ಸಮಗ್ರ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ತತ್ವದಡಿಯಲ್ಲಿ ಡಿ.ಸಿ.ಸಿ.ಬ್ಯಾಂಕಿನ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೆ ಅವರ ಬ್ಯಾಂಕ್ ಖಾತೆಯ ಉಳಿತಾಯ ಮೊತ್ತಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಸಾಲವನ್ನು ನೀಡಲಾಗುತ್ತಿದ್ದು, ನಗದು ರೂಪದಲ್ಲೆ ಅವರಿಗೆ ವಿತರಣೆ ಮಾಡಲಾಗುತ್ತಿದೆ, ಜಿಲ್ಲೆಯಲ್ಲಿ ಸುಮಾರು 250 ಕೋಟಿ ರೂಪಾಯಿಗಳ ಸಾಲಗಳನ್ನು ವಿತರಣೆ ಮಾಡುವ ಮೂಲಕ ಪ್ರತಿಯೊಂದು ಕುಟುಂಬವು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ವಿತರಣೆ ಮಾಡಲಾಗುತ್ತಿದೆ, ನಗರದ ಎಸ್.ಎಫ್.ಸಿ.ಎಸ್ ಬ್ಯಾಂಕಿಗೂ ಕೂಡಾ 3 ಕೋಟಿ ರೂಪಾಯಿಗಳ ಸಾಲಗಳನ್ನು ವಿತರಣೆ ಮಾಡಲಾಗಿದ್ದು, ಪಡೆದುಕೊಂಡಿದ್ದ ಸಾಲವನ್ನು 2.65 ಕೋಟಿ ಮರುಪಾವತಿ ಮಾಡುವ ಮೂಲಕ ಆಡಳಿತ ಮಂಡಳಿ ಮೆಚ್ಚುಗೆಗೆ ಪಾತ್ರವಾಗಿದೆ, ಪುನಃ 1.5 ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಗುತ್ತಿದೆ, ರೈತರಿಗೂ ಕೂಡಾ ಪಾಲಿಹೌಸ್ ನಿರ್ಮಾಣಕ್ಕಾಗಿ ಡಿ.ಸಿ.ಸಿ.ಬ್ಯಾಂಕಿನಿಂದ ಸಹಾಯಧನವನ್ನು ನೀಡಲಾಗುತ್ತದೆ, ರೈತರಿಂದ ಯಾವುದೇ ಶೂರಿಟಿ ಇಲ್ಲದೆ ಸಾಲವನ್ನು ವಿತರಣೆ ಮಾಡಲಾಗುತ್ತದೆ, ಯಾವ ರೈತರು ಬೇಕಾದರೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ, 10 ಗುಂಟೆ ಜಮೀನಿರುವ ರೈತರು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ನಿರುದ್ಯೋಗಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ, ಪರಿಶಿಷ್ಟ ಜಾತಿ/ಪಂಗಡ ರೈತರಿಗೆ ಶೇ 90 ರಷ್ಟು ಸಹಾಯಧನ, ಸಾಮಾನ್ಯ ವರ್ಗದ ರೈತರಿಗೆ ಶೇ 75 ರಷ್ಟು ಸಹಾಯಧನ ನೀಡಲಾಗುತ್ತದೆ, ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ರಾಜ್ಯಗಳಿಂದ ಬರುವಂತಹ ಖಾಸಗಿ ಫೈನಾನ್ಸ್ ಕಂಪನಿಗಳು ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ನೀಡಿ, ಚಕ್ರಬಡ್ಡಿಯ ಸಮೇತವಾಗಿ ಹಣವನ್ನು ವಸೂಲಿ ಮಾಡುತ್ತಿರುವ ದಂಧೆಯನ್ನು ಸ್ಥಗಿತಗೊಳಿಸುವುದು ಮೂಲ ಉದ್ದೇಶವಾಗಿದೆ, ಎಲ್ಲಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ನೇರವಾಗಿ ಡಿ.ಸಿ.ಸಿ.ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು ವ್ಯವಹರಿಸಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮಹಿಳೆಯರು ಡಿ.ಸಿ.ಸಿ.ಬ್ಯಾಂಕುಗಳು ಮೂಲಕ ಸಿಗುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆಯ ಜೀವನ ನಡೆಸಬೇಕು, ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು, ಮಹಿಳೆಯರು ಪಡೆದುಕೊಳ್ಳುವ ಸಾಲದ ಹಣವನ್ನು ದುರುಪಯೋಗಪಡಿಸಿಕೊಳ್ಳದೆ, ಉಪಕಸುಬುಗಳನ್ನು ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿಹೊಂದಬೇಕು, ಗುಡಿಕೈಗಾರಿಕೆಗಳನ್ನು ಸ್ಥಾಪನೆ ಮಾಡಿ, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಹುಜುಗೂರು ರಾಮಣ್ಣ, ಎಸ್.ಎಫ್.ಸಿ.ಬ್ಯಾಂಕಿನ ಅಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕರಾದ ವೆಂಕಟೇಶಪ್ಪ, ಲಕ್ಷ್ಮೀನಾರಾಯಣಪ್ಪ, ನಾರಾಯಣಸ್ವಾಮಿ, ಹಾಗೂ ಸಿಬ್ಬಂದಿ, ಆನಂದ್, ನಾಗರಾಜಪ್ಪ, ಗೋಪಾಲ್, ಲಿಂಗರಾಜು, ಚಿದಾನಂದ, ಚಿನ್ನಪ್ಪ, ಇನ್ನಿತರರು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜಕೀಯ
ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ನನಗೆ ಮತಗಳನ್ನು ನೀಡುವಂತೆ ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕೆ.ಪಿ.ನವಮೋಹನ್ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರಾಗಿ ಈ ಹಿಂದೆ ಇದ್ದಂತಹವರು ಯಾವುದೇ ತಾಲ್ಲೂಕು ಅಧ್ಯಕ್ಷರುಗಳನ್ನು ಪರಿಗಣಿಸುತ್ತಿರಲಿಲ್ಲ. ಸರ್ಕಾರದಿಂದ ಯಾವುದೇ ಅನುದಾನಗಳು ಬಿಡುಗಡೆಯಾದರೂ ಕೂಡಾ ಯಾವುದೇ ಅಧ್ಯಕ್ಷರುಗಳಿಗೆ ಮಾಹಿತಿ ನೀಡುತ್ತಿರಲಿಲ್ಲ, ಇದರಿಂದ ಬೇಸತ್ತು, ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಯಿತು. ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಅಭ್ಯರ್ಥಿಯನ್ನು ನೇಮಕ ಮಾಡುವಂತಹ ವಿಚಾರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕೆಲವು ಮಂದಿ ಬೆಂಬಲಿಗರನ್ನು ಮಾತ್ರ ಸೇರಿಸಲಾಗಿತ್ತು. ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಇರಲಿಲ್ಲ.
ಕೆಲವು ಮಂದಿ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಯಾರಿಗೂ ಮಾಹಿತಿ ನೀಡುತ್ತಿರಲಿಲ್ಲ. ಈ ಹಿಂದೆ ಹಿರಿಯರಿಗೆ ಅವಕಾಶ ಮಾಡಿಕೊಟ್ಟು, ಎರಡು ಬಾರಿ ಕಣದಿಂದ ಹಿಂದೆ ಸರಿದಿದ್ದೆ, ಆದರೂ ಈ ಬಾರಿ ನಮಗೆ ಸಹಕಾರ ನೀಡಲಿಲ್ಲ. ಆದ್ದರಿಂದ ಕಣದಲ್ಲಿ ಉಳಿದುಕೊಂಡಿದ್ದೇನೆ, ಈ ಹಿಂದೆ ಅನೇಕ ಕಾರ್ಯಕ್ರಮಗಳನ್ನು ಕನ್ನಡಪರವಾಗಿ ಕೆಲಸ ಮಾಡಿದ್ದು, ಈ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟರೆ, ಕನ್ನಡಪರವಾದ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ (ಮೊಬೈಲ್ಬಾಬು), ಕೃಷ್ಣಪ್ಪ ಹಾಜರಿದ್ದರು.
ಆಹಾರ ಇಲಾಖೆಯ ಗೋದಾಮಿಗೆ ಜಿಲ್ಲಾಧಿಕಾರಿಗಳ ಬೇಟಿ
ರೈತರಿಂದ ಸ್ಯಾಂಪಲ್ ಪಡೆದುಕೊಂಡ ಎರಡು ಮೂರು ದಿನಗಳಲ್ಲಿ ರಾಗಿಯನ್ನು ಖರೀದಿ ಮಾಡಿ, ಹಣವನ್ನು ಆರ್.ಟಿ.ಜಿ.ಎಸ್.ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮಿಗೆ ಬುಧವಾರ ಬೇಟಿ ನೀಡಿ ಆಹಾರಧಾನ್ಯಗಳ ಗುಣಮಟ್ಟವನ್ನು ಪರಿಶೀಲನೆ ಮಾಡಿದ ನಂತರ ಅವರು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದರು.
ನಿಗದಿತ ಸಮಯದಲ್ಲಿ ಆಹಾರ ಧಾನ್ಯಗಳನ್ನು ಪಡಿತರ ಚೀಟಿದಾರರಿಗೆ ವಿತರಣೆ ಮಾಡಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಬೇಟಿ ನೀಡಿ, ವಿತರಣಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಬೇಕು. ನಾಗರಿಕರಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು, ರೈತರಿಂದ ರಾಗಿಯನ್ನು ಸ್ಯಾಂಪಲ್ ಪಡೆದುಕೊಂಡ ಎರಡು ಮೂರು ದಿನಗಳಲ್ಲಿ ರಾಗಿಯನ್ನು ಖರೀದಿ ಮಾಡಬೇಕು. ರೈತರು ತರುವ ಮೂಟೆಗಳನ್ನು ಇಳಿಸಲು ಮೂಟೆಗೆ ೫ ರೂಪಾಯಿಗಳು ಮಾತ್ರ ತೆಗೆದುಕೊಳ್ಳಬೇಕು. ಒಂದು ಮೂಟೆಗೆ ಕೇವಲ ೨ ಕೆ.ಜಿ.ರಾಗಿ ಮಾತ್ರ ಪಡೆದುಕೊಳ್ಳಬೇಕು. ೪ ಕೆ.ಜಿ.ಪಡೆದುಕೊಳ್ಳುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಸ್ಥಳದಲ್ಲೆ ಹಾಜರಿದ್ದ ಕಾರ್ಮಿಕರು, ಗೋದಾಮುಗಳು ದೊಡ್ಡದಾಗಿರುವುದರಿಂದ ೫ ರೂಪಾಯಿ ಪಡೆದುಕೊಂಡು ಮೂಟೆಗಳನ್ನು ಇಳಿಸುವುದು ಕಷ್ಟಕರವಾಗಿದೆ, ಆದ್ದರಿಂದ ೧೦ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇಲಾಖೆಯಿಂದ ನಮಗೆ ಸಂಭಾವನೆ ಕೊಡದೇ ಇರುವ ಕಾರಣ, ಒಂದು ಮೂಟೆಗೆ ೪ ಕೆ.ಜೆ.ರಾಗಿಯನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ಕಾರ್ಮಿಕರು ಜಿಲ್ಲಾಧಿಕಾರಿಗೆ ತಿಳಿಸಿದರು.
ಕಾರ್ಮಿಕರು ಹಾಗೂ ರೈತರೊಂದಿಗೆ ಚರ್ಚೆ ಮಾಡಿ, ಯಾರಿಗೂ ಹೊರೆಯಾಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸದ ನಂತರ ಚಿಂತಾಮಣಿ ರಸ್ತೆಯಲ್ಲಿನ ರಾಗಿ ಗೋದಾಮಿಗೆ ಬೇಟಿ ನೀಡಿದರು. ಸ್ವಚ್ಚತೆಯಿಲ್ಲದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಗ್ಯಾಸ್ ವಿತರಣೆ ಮಾಡುತ್ತಿರುವ ಏಜೆನ್ಸಿಯವರು, ದುಬಾರಿ ಹಣವನ್ನು ತೆಗೆದುಕೊಂಡು ಹೊಸ ಸಂಪರ್ಕಗಳನ್ನು ನೀಡುತ್ತಿದ್ದಾರೆ. ಕೂಡಲೇ ಸರಿಪಡಿಸುವಂತೆ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀನಿವಾಸಯ್ಯ, ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಕೃಷಿ ಇಲಾಖೆಯ ಅಧಿಕಾರಿ ಗೋಪಾಲಸ್ವಾಮಿ, ಆಹಾರ ನಿರೀಕ್ಷಕ ಪ್ರಕಾಶ್ ಮತ್ತಿತರರು ಹಾಜರಿದ್ದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಹೋರಾಟದಲ್ಲಿ ಭಾಗವಹಿಸಿ, ಸರ್ಕಾರ ನೀಡಿದ ಆಶ್ವಾಸನೆಯ ಮೇರೆಗೆ ಪುನಃ ಕಾಲೇಜಿಗೆ ಬಂದರೆ, ಪ್ರಾಂಶುಪಾಲರು, ನಮಗೆ ಹಾಜರಾತಿಯನ್ನು ನೀಡದೆ, ಲಿಖಿತವಾಗಿ ಪತ್ರ ಬರೆದುಕೊಟ್ಟು ಕೆಲಸ ಮಾಡುವಂತೆ ಹೇಳುತ್ತಿದ್ದಾರೆಂದು ಆರೋಪಿಸಿ ಅತಿಥಿ ಉಪನ್ಯಾಸಕರು ಕಾಲೇಜಿನ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಥಮದರ್ಜೆ ಕಾಲೇಜಿನ ಸುಮಾರು ೧೭ ಮಂದಿ ಅತಿಥಿ ಉಪನ್ಯಾಸಕರು, ಕಳೆದ ಒಂದು ತಿಂಗಳಿನಿಂದ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿದ್ದರು. ಸರ್ಕಾರದ ಭರವಸೆಯನ್ನು ಒಪ್ಪಿಕೊಂಡು ಪುನಃ ತಾವು ಸೇವೆ ಸಲ್ಲಿಸುತ್ತಿದ್ದ ಕಾಲೇಜಿಗೆ ವಾಪಸ್ಸು ಬಂದ ಅತಿಥಿ ಉಪನ್ಯಾಸಕರಿಗೆ ಕಾಲೇಜಿನ ಪ್ರಾಂಶುಪಾಲರು, ಹಾಜರಾತಿಯನ್ನು ನೀಡದೆ, ನೀವು ಮೊದಲು ಕೆಲಸ ಮಾಡಿ, ಅನಂತರ ನಿಮಗೆ ಹಾಜರಾತಿಯನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಮುಂದೆ ನೀವು ಯಾವುದೇ ಧರಣಿ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲವೆಂದು, ಒಂದು ಪತ್ರವನ್ನು ಬರೆದುಕೊಟ್ಟು ಆ ನಂತರ ಪಾಠಪ್ರವಚನಗಳನ್ನು ಮಾಡುವಂತೆ ಹೇಳುವ ಮೂಲಕ ಗಾಯದ ಮೇಲೆ ಬರೆಯನ್ನು ಎಳೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆಂದು ಅತಿಥಿ ಉಪನ್ಯಾಸಕರು ಆರೋಪಿಸಿ ಪ್ರತಿಭಟನೆ ನಡೆಸಿದರು. ಅತಿಥಿ ಉಪನ್ಯಾಸಕರಿಗೆ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಸಹಕಾರ ನೀಡಿದರು.
ಈ ಬಗ್ಗೆ ಪ್ರಾಂಶುಪಾಲ ಚಂದ್ರನಾಯಕ್ ಅವರನ್ನು ಅತಿಥಿ ಉಪನ್ಯಾಸಕರ ಪ್ರತಿಭಟನೆಯ ಬಗ್ಗೆ ಕೇಳಿದಾಗ, ಪ್ರತಿಭಟನೆ ನಮ್ಮ ಕಾಲೇಜಿನ ಮುಂದೆ ಮಾಡುತ್ತಿದ್ದಾರಾ? ನನಗೇನು ಗೊತ್ತಿಲ್ಲ, ಯಾರು ಮಾಡುತ್ತಿದ್ದಾರೆ? ಎಂದು ವಿಚಾರವೇ ಗೊತ್ತಿಲ್ಲದಂತೆ ನಟನೆ ಮಾಡತೊಡಗಿದರು. ಕಳೆದ ಒಂದು ತಿಂಗಳಿನಿಂದ ಅತಿಥಿ ಉಪನ್ಯಾಸಕರು, ಕಾಲೇಜಿನಲ್ಲಿ ಕೆಲಸ ಮಾಡಿಲ್ಲ, ಧರಣಿಯಲ್ಲಿದ್ದರು, ಮಂಗಳವಾರ ಕಾಲೇಜಿಗೆ ಬಂದು ಪಾಠ ಮಾಡಲು ಬಂದಿದ್ದೇವೆ ಎಂದರು, ಇಲಾಖೆಯ ಜಂಟಿ ನಿರ್ದೇಶಕರ ಆದೇಶದಂತೆ ಯಾವುದೇ ಪ್ರತಿಭಟನೆ, ಹಾಗೂ ಧರಣಿಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡುವಂತೆ ಹೇಳಿದ್ದೇವೆ. ಅದಕ್ಕೆ ಅವರು ಸಿದ್ದರಿರಲಿಲ್ಲ, ಹಾಗಾಗಿ ನಾನು ಮೇಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡಬೇಕಾಗಿರುವುದರಿಂದ ಹಾಜರಾತಿ ನೀಡಿಲ್ಲವೆಂದು ಅವರು ತಿಳಿಸಿದರು.
ನಾನು ಯಾವ ಉಪನ್ಯಾಸಕರಿಗೂ ಪಾಠ ಮಾಡಬೇಡಿ ಎಂದು ಹೇಳಿಲ್ಲ, ನಿಮ್ಮ ಪಾಡಿಗೆ ನೀವು ಪಾಠ ಮಾಡಿ, ನಿಮಗೆ ಹಾಜರಾತಿಯನ್ನು ಕೊಡುವ ಜವಾಬ್ದಾರಿ ನನ್ನದು ಎಂದಷ್ಟೆ ಹೇಳಿದ್ದೆ. ಯಲಹಂಕ ಸೇರಿದಂತೆ ಬೇರೆ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕರಿಂದ ಪಾಠ ಮಾಡಿಸುವ ಬಗ್ಗೆ ವಿಚಾರಿಸಿದ್ದೆ. ಅವರು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದು ಹೇಳಿದ್ದರು ಎಂದರು.
ಅಧಿಕೃತವಾಗಿ ಜಂಟಿ ನಿರ್ದೇಶಕರಿಂದ ಆದೇಶ ಬಂದಿದೆಯೆ ಎಂದು ಪ್ರಶ್ನಿಸಿದಾಗ. ಇಲ್ಲ ಮೌಖಿಕ ಆದೇಶ ಮಾತ್ರ ಬಂದಿದೆ. ಅಧಿಕೃತವಾಗಿ ಆದೇಶವೇನೂ ಬಂದಿಲ್ಲ, ಇಷ್ಟು ಮಾತ್ರಕ್ಕೆ ಅವರು ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲವೆಂದು ಎಂದು ಉತ್ತರ ನೀಡಿದರು.

