Home Blog Page 480

ಊರದೇವರ ಬ್ರಹ್ಮರಥೋತ್ಸವ

0

‘ಶಿಡ್ಲಘಟ್ಟದ ದೇವರು ಹಿಂದುಮುಂದು’ ಎಂಬ ಗಾದೆ ಮಾತಿಗೆ ಕಾರಣವಾದ, ‘ಊರದೇವರು’ ಎಂದೇ ಪ್ರಸಿದ್ಧವಾದ ನಗರದ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಮುಜುರಾಯಿ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಲಾಯಿತು. ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥವನ್ನು ಎಳೆಯಲು ಕಾತುರದಿಂದ ಕಾಯುತ್ತಿದ್ದ ಭಕ್ತರು ಚಾಲನೆ ಸಿಗುತ್ತಿದ್ದಂತೆ ಉದ್ದವಾದ ಹಗ್ಗವನ್ನು ಹಿಡಿದು ರಥವನ್ನು ಎಳೆದು ಸಂಭ್ರಮಿಸಿದರು. ತಮಟೆವಾದನ, ಮಂಗಳವಾದ್ಯಗಳ ನಡುವೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಮಹಿಳೆಯರು ಕಾಯಿ ಒಡೆದು ಪೂಜಿಸಿ ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಸೌತೇಕಾಯಿ ಹೆಸರುಬೇಳೆಯನ್ನು ಭಕ್ತರಿಗೆ ಹಂಚಿದರು. ದೇವಾಲಯದಲ್ಲಿ ಪ್ರಸಾದ ವಿನಿಯೋಗಿಸಲಾಯಿತು. ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ರಸ್ತೆಯ ಬದಿಗಳಲ್ಲಿ ನಿಂತಿದ್ದ ಜನರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಬಾಳೆಹಣ್ಣು ಮತ್ತು ದವನವನ್ನು ರಥಕ್ಕೆ ಎಸೆದು ಹರಕೆ ಸಲ್ಲಿಸಿದರು.
ರಥೋತ್ಸವದ ಅಂಗವಾಗಿ ಈಧರೆ ಕಲಾತಂಡದಿಂದ ಡೊಳ್ಳುಕುಣಿತವನ್ನುಆಯೋಜಿಸಲಾಗಿತ್ತು.
‘ಈ ಹಿಂದೆ ಅಶೋಕ ರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ಬ್ರಹ್ಮ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ತಿರುಗಿಸಿ ರಥವನ್ನು ಹಿಂಬದಿ­ಯಿಂದ ಎಳೆದು ತರಲಾಗುತ್ತಿತ್ತು’ ಹೀಗಾಗಿ ‘ಶಿಡ್ಲಘಟ್ಟ ದೇವರು ಹಿಂದು­ಮುಂದು’ ಎಂಬ ಗಾದೆಮಾತು ಚಾಲ್ತಿಯಲ್ಲಿತ್ತು ಎಂದು ಭಕ್ತರೊಬ್ಬರು ನೆನಪಿಸಿಕೊಂಡರು.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಭಾನುವಾರದಿಂದ ಪ್ರಾರಂಭ­ವಾದ ಪೂಜಾ ಕಾರ್ಯಕ್ರಮಗಳು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ಋತ್ವಿಜರಾದ ಕೆ.ವಿ.ಸುಬ್ರಮಣ್ಯಶಾಸ್ತ್ರಿ, ಎಸ್.ಸತ್ಯನಾರಾಯಣರಾವ್, ಎನ್.ಆರ್.ಶ್ರೀನಾಥ್, ದೇವಾಲಯ ಸಮಿತಿ ಸಂಚಾಲಕ ರೂಪಸಿ ರಮೇಶ್, ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಕಾರ್ಯದರ್ಶಿ ಎಲ್.ಮಧುಸೂದನ್, ಪುರಸಭಾ ಸದಸ್ಯರಾದ ಬಾಲಕೃಷ್ಣ, ವೆಂಕಟಸ್ವಾಮಿ, ಚಿಕ್ಕಮುನಿಯಪ್ಪ, ಮತ್ತಿತರರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ

0

ಶಿಡ್ಲಘಟ್ಟದ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ನಾಗರಾಜಶೆಟ್ಟಿ ಅವರ ರಂಗಭೂಮಿಯ ಸೇವೆಯನ್ನು ಗುರುತಿಸಿ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎವರ್ಗ್ರೀನ್ ಇಂಟರ್ನ್ಯಾಷನಲ್ ಫೌಂಡೇಶನ್ ವಿಕಾರ್ಡ್ ಸಂಸ್ಥೆ ಮತ್ತು ರಾಜ್ಯ ಕಲ್ಚರಲ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಉಪಮಹಾಪೌರ ಎಸ್.ಪಿ.ಹೇಮಲತಾ, ಶಾಸಕ ಗೋಪಾಲಯ್ಯ, ನಿವೃತ್ತ ಉಪ ಪೊಲೀಸ್ ಆಯುಕ್ತ ಎಂ.ಆರ್.ಮಹೇಶ್ವರನ್, ಸಚಿವ ಎಸ್.ಆರ್.ಪಾಟೀಲ್, ವಿಕಾರ್ಡ್ ಸಂಸ್ಥೆ ಅಧ್ಯಕ್ಷ ಏಕಾಂತ ಮುದಿಗೌಡರ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಜರಿದ್ದರು.

ಆರ್.ಟಿ.ಇ ವ್ಯಾಪ್ತಿಗೆ 30 ಶಾಲೆಗಳು

0

ತಾಲ್ಲೂಕಿನಲ್ಲಿ 2016–17ನೇ ಸಾಲಿಗೆ ಒಟ್ಟು 30 ಖಾಸಗಿ ಅನುದಾನರಹಿತ ಶಾಲೆಗಳು ಆರ್.ಟಿ.ಇ ಕಾಯ್ದೆಯಂತೆ ಶೇ.25 ರಷ್ಟು ಉಚಿತ ಪ್ರವೇಶ ನೀಡಲು ಅರ್ಹವಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶಾಲೆಗಳ ಪೈಕಿ 8 ಶಾಲೆಗಳು ಒಂದನೇ ತರಗತಿಗೆ ಪ್ರವೇಶ ನೀಡಲಿದ್ದು, ಉಳಿದ 22 ಶಾಲೆಗಳು ಎಲ್ಕೆಜಿ ಗೆ ಪ್ರವೇಶ ನೀಡಲಿವೆ. ಈ ಅವಕಾಶವನ್ನು ಎಲ್ಲಾ ಅರ್ಹ ಫಲಾನುಭವಿ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು. ಫೆಬ್ರುವರಿ 23 ರಿಂದ ಮಾರ್ಚ್ 15 ರವರೆಗೆ ಆನ್ಲೈನ್ನಲ್ಲಿ ಪೋಷಕರು ಅರ್ಜಿ ಸಲ್ಲಿಸಬೇಕು. ವಾಸಸ್ಥಳಕ್ಕಾಗಿ ಆಧಾರ್ ಕಾರ್ಡ್ ಅಥವಾ ಮತದಾನದ ಗುರುತಿನ ಚೀಟಿಯಿರಬೇಕು. ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಪ್ರವರ್ಗ 1 ಇರುವವರು ಜಾತಿ ಪ್ರಮಾಣ ಪತ್ರವನ್ನು ನೀಡಿದರೆ ಸಾಕು. ಉಳಿದ ಎಲ್ಲಾ ವರ್ಗದವರೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕು. ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯುವಂತೆ ಕೋರಿದ್ದಾರೆ.

ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆ, ರೋಗಿಗಳ ಪರದಾಟ

0

ವೈ.ಹುಣಸೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣದ ಹಂತದಲ್ಲಿರುವುದರಿಂದ ಗ್ರಾಮ ಪಂಚಾಯತಿಯವರು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಳೆಯ ಪಂಚಾಯತಿ ಕಟ್ಟಡವನ್ನೇ ಆಸ್ಪತ್ರೆಗೆ ಬಿಟ್ಟುಕೊಟ್ಟಿದ್ದಾರೆ. ಸುತ್ತಮುತ್ತಲಿನ ಸುಮಾರು 15 ಗ್ರಾಮಗಳ ರೋಗಿಗಳು ಈ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ಈ ಆಸ್ಪತ್ರೆಯಲ್ಲಿ ವೈದ್ಯರು ಇದ್ದೂ ಇಲ್ಲದಂತಿದ್ದಾರೆ. ಡಾ.ಸತ್ಯನಾರಾಯಣರೆಡ್ಡಿ ಎಂಬುವವರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಬಾಗೇಪಲ್ಲಿ ತಾಲ್ಲೂಕಿನ ಶಿವಪುರ ಹಾಗೂ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ಇವರು ವಾರಕ್ಕೆ ತಲಾ ಮೂರು ದಿನ ಕೆಲಸ ಮಾಡಬೇಕಿದೆ. ಆದರೆ ಆ ಮೂರು ದಿನಗಳಲ್ಲೂ ಆಸ್ಪತ್ರೆಗೆ ಸರಿಯಾಗಿ ಬರದೆ ದಾದಿಯಿಂದ ಚಿಕಿತ್ಸೆ ಪಡೆಯುವಂತಾಗಿದೆ. ಸರ್ಕಾರದಿಂದ ಔಷಧಿ ಪೂರೈಕೆ ಇದ್ದರೂ ಖಾಸಗಿ ಔಷಧಿ ಅಂಗಡಿಗೆ ಬರೆದುಕೊಡುತ್ತಾರೆ. ಇದರಿಂದ ಬಡಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಮ್ಮ ತೊಂದರೆಯನ್ನು ವಿವರಿಸಿದರು.
ಸರ್ಕಾರಿ ಆಸ್ಪತ್ರೆಯು ಗ್ರಾಮೀಣ ಜನರ ಅನುಕೂಲಕ್ಕಾಗಿ ಮಾಡಿದ್ದರೂ ಸರಿಯಾದ ಸಮಯಕ್ಕೆ ತೆರೆಯುತ್ತಿಲ್ಲ. ಮನಸೋ ಇಚ್ಛೆ ದಾದಿಯು ಬಂದಾಗ ಆಸ್ಪತ್ರೆಯನ್ನು ತೆರೆಯುತ್ತಾರೆ. ವಯಸ್ಸಾದವರು, ಮಕ್ಕಳು, ಗ್ರಾಮೀಣ ಮಹಿಳೆಯರು ಸೂಕ್ತ ಚಿಕಿತ್ಸೆಯಿಲ್ಲದೆ ಆಸ್ಪತ್ರೆಯಲ್ಲಿ ಕಾಯುತ್ತಿರುತ್ತಾರೆ. ಇತ್ತ ನಗರಕ್ಕೆ ಹೋಗಲು ಸಾಧ್ಯವಾಗದೆ ಅತ್ತ ಚಿಕಿತ್ಸೆಯೂ ಸಿಗದೆ ರೋಗಿಗಳು ಕಷ್ಟಪಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಮಾಡುವ ಉದ್ದೇಶವೇ ಇಲ್ಲಿ ಈಡೇರದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ವೃದ್ಧಾಪ್ಯ – ಆರೋಗ್ಯ

0

ಮಾನವನ ಜೀವನದ ಪ್ರಮುಖವಾದ ಹಂತಗಳೆಂದರೆ ಜನನ, ಬಾಲ್ಯ, ಹರಯ (ಯೌವನ), ವೃದ್ಧಾಪ್ಯ ಹಾಗೂ ಮರಣ. ಜೀವನದ ಪ್ರತಿಯೊಂದು ಹಂತದಲ್ಲೂ ಮನುಷ್ಯನಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಅನೇಕ ಮಾರ್ಪಾಟುಗಳಾಗುತ್ತವೆ. ಈ ಪರಿವರ್ತನೆಗಳಿಗೆ ತಕ್ಕಂತೆ ನಮ್ಮ ಆಹಾರ ಸೇವನಾ ವಿಧಾನ ಹಾಗೂ ನಮ್ಮ ದೈನಂದಿನ ಚಟುವಟಿಕೆಗಳನ್ನೂ ಬದಲಾಯಿಸಿಕೊಳ್ಳಬೇಕು. ಇದರಿಂದ ಆರೋಗ್ಯ ರಕ್ಷಣೆಯೂ ಆಗುತ್ತದೆ. ಆಯಾ ಜೀವನದ ಹಂತಗಳಿಗೆ ಅನುಸಾರವಾಗಿ ಮನುಷ್ಯನು ಸರಿಯಾಗಿ ವಿಕಾಸ ಹೊಂದುತ್ತಾನೆ.
ಮುಪ್ಪಿನ ಹಂತದಲ್ಲಿ ಶರೀರದ ಎಲ್ಲಾ ಭಾಗಗಳಲ್ಲೂ ಸವೆಕಳಿ ಉಂಟಾಗುತ್ತದೆ. ದೃಷ್ಟಿ ಮಂದವಾಗುತ್ತದೆ. ಶ್ರವಣ ಶಕ್ತಿಯು ಕುಂಠಿತಗೊಳ್ಳುವುದು. ವಾಸನೆಯನ್ನು ಗ್ರಹಿಸುವ ಶಕ್ತಿ ಕಡಿಮೆಯಾಗುವುದು. ಚರ್ಮವು ಸುಕ್ಕುಗಟ್ಟುವುದು. ಚರ್ಮದ ಸ್ಪರ್ಶ ಗ್ರಹಣ ಶಕ್ತಿಯು ಕಡಿಮೆಯಾಗುವುದು. ನೆನಪಿನ ಶಕ್ತಿಯು ಕುಂದುವುದು. ಮೂತ್ರ ಜನಕಾಂಗ (Kidney) ಪಿತ್ತ ಜನಕಾಂಗ (Liver), ಹೃದಯ (Heart), ಶ್ವಾಸಕೋಶ (Lung) ಈ ಎಲ್ಲಾ ಅವಯವಗಳ ಕ್ರಿಯಾ ಸಾಮಥ್ರ್ಯ ಕುಂಠಿತಗೊಳ್ಳುವುದು. ಬದಲಾದ ಕುಟುಂಬ ಪದ್ಧತಿ ಹಾಗೂ ಜೀವನ ಶೈಲಿಯಿಂದಾಗಿ ಖಿನ್ನತೆ, ಮಾನಸಿಕ ಒತ್ತಡ, ಒಂಟಿತನದ ಭಾವ ಮುಂತಾದ ಮಾನಸಿಕ ತೊಂದರೆಗಳುಂಟಾಗುತ್ತವೆ. ಇನ್ನು ಮುಪ್ಪಿನ ಹಂತದಲ್ಲಿ ಜೀವನ ಶೈಲಿಯು ಆರೋಗ್ಯ ರಕ್ಷಣೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
1. ಮುಖ್ಯವಾಗಿ ಶಾರೀರಿಕವಾಗಿ ಹಾಗೂ ಮಾಕನಸಿಕವಾಗಿ ಬದಲಾವಣೆಗಳನ್ನು ಅರಿತುಕೊಳ್ಳಬೇಕು.
2. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು.
3. ಮುಪ್ಪಿನ ವಯಸ್ಸಿನಲ್ಲಿ ಜೀರ್ಣಶಕ್ತಿಯು ಕಡಿಮೆಯಾಗುವುದರಿಂದ ಸ್ವಲ್ಪ ಪ್ರಮಾಣದ ಆಹಾರವನ್ನು ನಿಗದಿತ ಸಮಯದಲ್ಲಿ ದಿನಕ್ಕೆ ನಾಲ್ಕು ಬಾರಿ ಸೇವಿಸುವುದು ಒಳ್ಳೆಯದು.
4. ಆಹಾರದಲ್ಲಿ ಏಕದಳ ಧಾನ್ಯಗಳಾದ ಅಕ್ಕಿ, ರಾಗಿ ಗೋಧಿ, ಜೋಳ ನವಣೆ ಸಜ್ಜೆ, ದ್ವಿದಳ ಧಾನ್ಯಗಳಾದ ಹೆಸರು, ಹುರುಳಿ, ಸೈಂಧವ ಎಂಬ ಉಪ್ಪು, ತರಕಾರಿಗಳಲ್ಲಿ ಮೂಲಂಗಿ, ಸೌತೆ, ಕ್ಯಾರಟ್, ನವಿಲುಕೋಸು, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪುಗಳಲ್ಲಿ ಮೆಂತ್ಯ, ಕೊತ್ತುಂಬರಿ, ಕರಿಬೇವು ಇವುಗಳ ಸೇವನೆ ಸೂಕ್ತ. ಮಾಂಸಾಹಾರವನ್ನು ಸೇವಿಸುವವರಿಗೆ ಮೇಕೆಯ ಮಾಂಸ, ಕೋಳಿಯ ಮಾಂಸ ಒಳ್ಳೆಯದು.
5. ಸಾಧ್ಯವಾದಷ್ಟು ಬೆಚ್ಚಗಿನ ನೀರನ್ನೇ ದಿನವಿಡೀ ಸೇವಿಸುವುದು ಒಳ್ಳೆಯದು.
6. ಊಟದಲ್ಲಿ ಒಂದು ಚಮಚ ಆಕಳ ತುಪ್ಪವನ್ನು ಬಳಸುವುದು ಸೂಕ್ತ.
7. ಪ್ರತಿದಿನ ಒಂದು ಲೋಟ ಆಕಳ ಹಾಲನ್ನು ಸೇವಿಸಬೇಕು.
8. ದಿನಕ್ಕೆ ಮೂರು ಲೀಟರ್ ನೀರು ಸೇವನೆ ಒಳ್ಳೆಯದು.
9. ಸುಲಭವಾಗಿ ಜೀರ್ಣವಾಗುವ ಆಹಾರ ಪದಾರ್ಥಗಳಾದ ಹಣ್ಣು ತರಕಾರಿಗಳು, ಬೇಯಿಸಿದ ಕಾಳು ಇವುಗಳನ್ನು ಸೇವಿಸಬೇಕು.
10. ಆಯಾ ಕಾಲಾನುಸಾರವಾಗಿ, ಆಯಾ ಸ್ಥಳಕ್ಕೆ ಅನುಸಾರವಾಗಿ ಲಭ್ಯವಾಗುವ ಹಣ್ಣು ತರಕಾರಿಗಳ ಬಳಕೆ ಪ್ರಶಸ್ತವಾದುದು.
11. ಬೆಳಿಗ್ಗೆ ಹಾಗೂ ಸಂಜೆ ಎರಡೂ ಹೊತ್ತು ನಡಿಗೆ (Walking) ಇರಲಿ.
12. ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಕೆಲಸ ಮಾಡಿ.
13. ದಿನಕ್ಕೆರಡು ಬಾರಿ ಪ್ರಾರ್ಥನೆ ಮಾಡಿ. ನಿಮ್ಮ ಮಾನಸಿಕ ಸ್ಥಿರತೆಗೆ ಒಳ್ಳೆಯದು.
14. ಯಾವಾಗಲೂ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
15. ಮಲಗುವ ಹಾಸಿಗೆ ಸಮತಟ್ಟಾಗಿರಲಿ, ಮೆತ್ತಗಿರವ, ಏರುತಗ್ಗಾಗಿರುವ ಹಾಸಿಗೆಯ ಮೇಲೆ ಮಲಗುವುದರಿಂದ ಬೆನ್ನು ನೋವು, ನೊಂಟ ನೋವಿನ ತೊಂದರೆÀಗಳು ಬರುವ ಸಾಧ್ಯತೆಗಳಿವೆ, ಹೆಚ್ಚಾಗುವ ಸಾಧ್ಯತೆಗಳೂ ಇವೆ.
16. ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನೇ ಸದಾ ಧರಿಸುವುದು ಸೂಕ್ತ.
17. ನಡೆಯುವಾಗ ಯಾವಾಗಲೂ ಆಧಾರಕ್ಕಾಗಿ ಊರುಗೋಲನ್ನು ಬಳಸಿಕೊಳ್ಳುವುದು ಬಹಳ ಒಳ್ಳೆಯದು.
18. ಪ್ರತಿದಿನ ಎಳ್ಳೆಣ್ಣೆಯನ್ನು ಮೈಗೆಲ್ಲಾ ಹಚ್ಚಿಕೊಳ್ಳುವುದು ಸೂಕ್ತ. ಅದರಲ್ಲೂ ಸಂಧಿ ಪ್ರದೇಶಗಳಾದ ಮೊಣಕೈ, ಮೊಣಕಾಲು, ಸೊಂಟದ ಪ್ರದೇಶ, ಭುಜ, ಕುತ್ತಿಗೆ, ತಲೆ, ಪಾದಗಳಿಗೆ (ಯಾವಾಗಲೂ) ದಿನಕ್ಕೊಮ್ಮೆಯಾದರೂ ಎಣ್ಣೆಯನ್ನು ನೀವಿಕೊಳ್ಳಬೇಕು.
19. ಸ್ನಾನಕ್ಕೆ ಬೆಚ್ಚಗಿನ ನೀರು ಸೂಕ್ತ.
20. ರಾತ್ರಿ ನಿದ್ದೆ ಕಡಿಮೆಯಾಗುವುದರಿಂದ ಹಗಲು ಸ್ವಲ್ಪ ವಿಶ್ರಾಂತಿ ಪಡೆಯುವುದು ಒಳ್ಳೆಯದು.
21. ಹೂದೋಟದ ಕೆಲಸ, ಒಳ್ಳೆಯ ಪುಸ್ತಕಗಳನ್ನು ಓದುವುದು ದಿನಪತ್ರಿಕೆಗಳ ಓದುವಿಕೆ, ನಡಿಗೆ, ಆತ್ಮೀಯರೊಡನೆ ಮಾತು, ಹಾಡು, ಕುಶಲಕಲೆ ಹೀಗೆ ಯಾವುದಾದರೊಂದು ಚಟುವಟಿಕೆಯಿರಲಿ.
22. ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ. ಹಾಗಾಗಿ ಯಾವುದಾದರೊಂದು ಕಲಿಕೆಯಲ್ಲಿ (ಅದು ಸಂಗೀತ, ಚಿತ್ರಕಲೆ, ಭಾಷೆ ಹೀಗೆ ಯಾವುದಾದರೊಂದು ಆಗಿರಲಿ) ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು.
23. ಸದಾ ಧನಾತ್ಮಕ ಆಲೋಚನೆ ನಿಮ್ಮದಾಗಿರಲಿ.
24. ಕ್ರಮಬದ್ಧವಾದ ದಿನಚರಿ, ಜೀವನ ಶೈಲಿ ನಿಮಗಿರಲಿ.
ವೃದ್ಧಾಪ್ಯವೆಂಬುದು ವರ, ವೃದ್ಧಾಪ್ಯವು ಹೊರೆಯಲ್ಲ, ವೃದ್ಧಾಪ್ಯವನ್ನರಿತು ಅದು ಸಹಜವೆಂದು ಸ್ವೀಕರಿಸಿದರೆ ಬಾಳು ಹಸನು, ಬದುಕಿಗೂ ಆಗ ಸಾರ್ಥಕತೆ.
ಡಾ. ಶ್ರೀವತ್ಸ.

ಘರ್ಷಣೆಯಲ್ಲಿ ಗಾಯಗೊಂಡಿದ್ದವರಿಗೆ ಸಾಂತ್ವನ

0

ಹಳ್ಳಿಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಂಡು ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗದಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರದಂದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಸಂಧರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೋಮವಾರ ಭೇಟಿ ಮಾಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರವಾಗಿ ಸೇವೆ ಮಾಡುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಇರುವ ಮಾರ್ಗ ಚುನಾವಣೆ. ಇಂತಹ ಚುನಾವಣೆಗಳಲ್ಲಿನು ಕೆಲವರು, ಸ್ವ-ಪ್ರತಿಷ್ಟೆಗಳು ಹಾಗೂ ಹಳೇ ದ್ವೇಷಗಳಿಗೆ ವೇದಿಕೆಯನ್ನಾಗಿ ದುರ್ಬಳಕೆ ಮಾಡಿಕೊಳ್ಳುವುದು ದುರಂತ. ಹಳ್ಳಿಗಳಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿ, ಜನಸಾಮಾನ್ಯರ ಜೀವನಗಳೊಂದಿಗೆ ಸೆಣಸಾಟವಾಡುವುದು ಖಂಡನೀಯವಾಗಿದೆ. ಪ್ರತಿನಿತ್ಯ ಒಂದೇ ಗ್ರಾಮದಲ್ಲಿ ವಾಸವಾಗಿರುವವರು ಪರಸ್ಪರ ಕಚ್ಚಾಡುವುದರಿಂದ ಸಾಮರಸ್ಯ ಹದಗೆಡುತ್ತದೆ. ಚುನಾವಣೆಯಲ್ಲಿ ನಡೆದ ಘರ್ಷಣೆಯ ವಿಚಾರದಲ್ಲಿ ಚುನಾವಣೆಯ ಅಧಿಕಾರಿಗಳು, ಸಿ.ಸಿ.ಕ್ಯಾಮಾರಾದಲ್ಲಿನ ವಿಡಿಯೋ ವೀಕ್ಷಣೆ ಮಾಡಿ, ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅವರು ಯಾವುದೇ ಪಕ್ಷದ ಮುಖಂಡರಿರಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.

ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ, ಘರ್ಷಣೆಯಲ್ಲಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ಸಾಂತ್ವನ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ, ಘರ್ಷಣೆಯಲ್ಲಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಗ್ರಾಮಸ್ಥರು,‘ಚುನಾವಣೆಯಲ್ಲಿ ನಡೆದ ಘರ್ಷಣೆಯಲ್ಲಿ ಜನರನ್ನು ರಕ್ಷಣೆ ಮಾಡಬೇಕಾಗಿದ್ದ ಪೊಲೀಸ್ ಅಧಿಕಾರಿಗಳು, ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಮತಗಟ್ಟೆಯಿಂದ ಸುಮಾರು ೬೦೦ ಮೀಟರ್ಗೂ ಹೆಚ್ಚು ದೂರವಿದ್ದ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ಮಾಡುವ ಮೂಲಕ ಏಕಪಕ್ಷೀಯವಾಗಿ ನಡೆದುಕೊಂಡು ತಮ್ಮ ಅಪ್ರಾಮಾಣಿಕತೆಯನ್ನು ಪ್ರದರ್ಶನ ಮಾಡಿದ್ದಾರೆ. ಗಲಾಟೆಯೆಲ್ಲಾ ಮುಗಿದ ಮೇಲೆ ಏನೂ ಅರಿಯದ ಅಮಾಯಕ ಹುಡುಗರ ಮೇಲೆಯೂ ಕೂಡಾ ಹಲ್ಲೆ ಮಾಡಿ, ಬಲವಂತವಾಗಿ ಠಾಣೆಗೆ ಕರೆದೊಯ್ದು ಮಾನಸಿಕವಾಗಿ ಹಿಂಸೆ ಪಡಿಸಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಪಟ್ಟುಹಿಡಿದರು.
ಗ್ರಾಮಸ್ಥರನ್ನು ಸಮಾಧಾನಪಡಿಸಿದ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ, ಒಂದು ಕಡೆ ವಿರೋಧ ಪಕ್ಷದವರಿಂದ ದೌರ್ಜನ್ಯಕ್ಕೆ ಒಳಗಾದ ನಂತರವೂ ಪೊಲೀಸ್ ಇಲಾಖೆಯ ಅಧಿಕಾರಿಗಳೂ ದೌರ್ಜನ್ಯ ನಡೆಸಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೂ ವಿಚಾರ ತರಲಾಗಿದ್ದು, ಯಾವುದೇ ಅಧಿಕಾರಿ ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೂ ಕೂಡಾ ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತೇವೆ. ಯಾರೊಬ್ಬರೂ ಭಯಭೀತರಾಗಿ ಧೃತಿಗೆಡದೆ, ಶಾಂತಿ, ಸೌಹಾರ್ಧತೆಯಿಂದ ಜೀವನ ಮಾಡುವ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಕಲ್ಲುತೂರಾಟದಲ್ಲಿ ಜಖಂಗೊಂಡಿದ್ದ ಮನೆಯನ್ನು ವೀಕ್ಷಣೆ ಮಾಡಿದ ಅವರು ದುರಸ್ಥಿ ಮಾಡಿಸಿಕೊಳ್ಳುವಂತೆ ಸಹಾಯಧನ ನೀಡಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ರವಿ, ಮುಖಂಡರಾದ ಬಿ.ಸಿ.ವೆಂಕಟೇಶಪ್ಪ, ಮಳ್ಳೂರು ನಾಗರಾಜ್, ಮುತ್ತೂರು ಚಂದ್ರೇಗೌಡ, ವೆಂಕಟರಾಜೇಗೌಡ, ಮುನಿಯಪ್ಪ, ದೊಡ್ಡಪಾಪಣ್ಣ, ಪ್ರಮೀಳಮ್ಮ, ಶಿವಣ್ಣ, ನಿಶಾಂತ್, ವೇಣುಗೋಪಾಲ್, ಗಿರೀಶ್, ಜಿ.ಎಂ.ಶಿವಾನಂದ, ಸುರೇಶ್, ಎಂ.ರಾಮಪ್ಪ, ನಾಗರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗಿರವಿ ಇಟ್ಟಿದ್ದ ರೇಷ್ಮೆ ಹರಾಜು

0

ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘದಲ್ಲಿ ಸದಸ್ಯರೂ ಸೇರಿದಂತೆ ವಿವಿಧ ರೀಲರ್ಗಳು ಗಿರವಿ ಇಟ್ಟಿದ್ದ ರೇಷ್ಮೆಯನ್ನು ಸೋಮವಾರ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡಲಾಯಿತು.
ನಗರದ ಒಂದನೇ ಟಿ.ಎಂ.ಸಿ.ಬಡಾವಣೆಯಲ್ಲಿರುವ ಶಿಡ್ಲಘಟ್ಟ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘ ಕಳೆದ ೧೫ ವರ್ಷಗಳ ಹಿಂದೆ ನಿಂತುಹೋಗಿತ್ತು. ಸಂಘದಲ್ಲಿ ಸದಸ್ಯರಾಗಿದ್ದ ಕೆಲವು ಮಂದಿ ಸದಸ್ಯರು ಹಾಗೂ ರೀಲರ್ಗಳು ಸಹಕಾರ ಸಂಘದಿಂದ ಹಣವನ್ನು ಪಡೆದುಕೊಂಡು ಗಿರವಿ ಇಟ್ಟಿದ್ದ ಸುಮಾರು ೩೦ ಮೂಟೆಗಳಷ್ಟು ರೇಷ್ಮೆಯನ್ನು ಸೋಮವಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಹರಾಜು ಮಾಡಲಾಯಿತು.
ಹರಾಜಿನಲ್ಲಿ ಭಾಗವಹಿಸಿದ್ದ ೨೮ ಮಂದಿ ರೀಲರ್ಗಳು ಇ.ಎಂ.ಡಿ ಹಣವಾಗಿ ೧೫ ಸಾವಿರದಂತೆ ಪಾವತಿ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ನಗರಸಭೆ ಸದಸ್ಯ ಅಫ್ಸರ್ಪಾಷ, ರೀಲರ್ಗಳಾದ ಅಕ್ಮಲ್ಪಾಷ, ಸೈಯ್ಯದ್, ರೆಹಮಾನ್, ವೆಂಕಟೇಶ್, ಮುನೀಂದ್ರ ಮತ್ತಿತರರು ಹರಾಜಿನಲ್ಲಿ ಪಾಲ್ಗೊಂಡಿದ್ದರು.

ಸತತ ಧ್ಯಾನಾಭ್ಯಾಸದಿಂದ ಸಾಕಷ್ಟು ಅನುಕೂಲಗಳಿವೆ

0

ಸತತ ಧ್ಯಾನಾಭ್ಯಾಸದಿಂದ ನಿತ್ಯ ಜೀವನದ ಒತ್ತಡಗಳು, ಆಯಾಸ, ನೋವು ದೂರವಾಗುವವು. ಕೋಪ, ಅಸಹನೆ, ಭಯ ದೂರವಾಗಿ ತಾಳ್ಮೆ ಹೆಚ್ಚಾಗುವುದು. ಮನಸ್ಸಿಗೆ ನೆಮ್ಮದಿ ದೊರೆಯುವುದು ಎಂದು ಮಳ್ಳೂರು ಪಿಳ್ಳವೆಂಕಟಸ್ವಾಮಪ್ಪ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಭಾನುವಾರ ಸಂಜೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ 14ನೇ ವಾರ್ಷಿಕೋತ್ಸವ ಹಾಗೂ ಹೊಸ ಕಟ್ಟಡಕ್ಕೆ ಸೇವಾ ಕೇಂದ್ರದ ಸ್ಥಳಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಏಕಾಗ್ರತೆ, ಗ್ರಹಿಸುವ ಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು. ಆತ್ಮಸ್ಥೈರ್ಯ ಹೆಚ್ಚುವುದು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುವುದು. ಉತ್ತಮ ಸಾಮಾಜಿಕ ನಡವಳಿಕೆ ಮತ್ತು ಸಮಯ ಪ್ರಜ್ಞೆ ಮೂಡುವುದು ಎಂದು ವಿವರಿಸಿದರು.
ದಿಬ್ಬೂರಹಳ್ಳಿ ಚಿಕ್ಕಪ್ಪಯ್ಯಣ್ಣ ಮಾತನಾಡಿ, ಗೀತಾ ಸಾರದ ಬಗ್ಗೆ ಪ್ರತಿದಿನ ನಡೆಸುವ ತರಗತಿಗಳಲ್ಲಿ ಭಾಗವಹಿಸುವುದರಿಂದ ನಿತ್ಯ ಜೀವನದ ಸಮಸ್ಯೆಗಳನ್ನು ಎದುರಿಸಲು ಪರಿಹಾರೋಪಾಯಗಳು ಸಿಗುತ್ತವೆ. ಒತ್ತಡದ ಜೀವನವನ್ನು ಎದುರಿಸುವ ಆತ್ಮಸ್ಥೈರ್ಯ ಗೀತೆಯ ಸಾರದಲ್ಲಿ ಸಿಗುತ್ತದೆ. ಮೇಲೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಈ ಗೀತಾ ಸಾರ ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 7 ರಿಂದ 8 ಗಂಟೆಯವರೆಗೂ ನಡೆಸುತ್ತಿದ್ದು, ಸಾಕಷ್ಟು ಮಂದಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಿಡ್ಲಘಟ್ಟ ಸೇವಾ ಕೇಂದ್ರದ ಸಂಚಾಲಕಿ ಜಯಕ್ಕ, ದಿಬ್ಬೂರಹಳ್ಳಿ ಅಶ್ವತ್ಥರೆಡ್ಡಿ, ಮೇಲೂರು ಮಂಜುನಾಥ್, ತೋಟಗಾರಿಕಾ ಇಲಾಖೆಯ ರಮೇಶ್, ಮಂಜುನಾಥ, ಎಂ.ಎ.ರಾಮಕೃಷ್ಣ, ಅನಿಲ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶೇ. ೮೦.೦೯ ರಷ್ಟು ಮತದಾನ

0

ಕ್ಷೇತ್ರದ ಐದು ಜಿಲ್ಲಾ ಪಂಚಾಯತಿ ಹಾಗು ೧೭ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಶನಿವಾರ ನಡೆದ ಮತದಾನದಲ್ಲಿ ೫೩,೮೯೯ ಪುರುಷರು, ೫೦,೭೦೨ ಮಹಿಳೆಯರು ಸೇರಿ ಒಟ್ಟು ೧,೦೪,೬೦೧ ಮಂದಿ ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸುವುದರೊಂದಿಗೆ ಒಟ್ಟು ಶೇ. ೮೦.೦೯ ರಷ್ಟು ಮತದಾನವಾಗಿದೆ.

ಶಾಂತ ಮತದಾನ, ಅಲ್ಲಲ್ಲಿ ಅಹಿತಕರ ಘಟನೆ

0

ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಐದು ಜಿಲ್ಲಾ ಪಂಚಾಯತಿ ಹಾಗು ೧೭ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಶನಿವಾರ ನಡೆದ ಚುನಾವಣೆಯ ಮತದಾನ ಪ್ರಕ್ರಿಯೆ ಬಹುತೇಕ ಶಾಂತವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದ ಮತಗಟ್ಟೆಯಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ದಂಪತಿ ತಮ್ಮ ಮತ ಚಲಾಯಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದ ಮತಗಟ್ಟೆಯಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ದಂಪತಿ ತಮ್ಮ ಮತ ಚಲಾಯಿಸಿದರು.

ಚುನಾವಣೆಯ ಹಿನ್ನಲೆಯಲ್ಲಿ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರಕ್ಕೆ ಬಾರದೇ ಇದ್ದುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಠಿಯಾಗಿತ್ತು.
ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾದ ಚುನಾವಣೆಯಲ್ಲಿ ಮತಚಲಾಯಿಸಲು ಕೆಲವೆಡೆ ಜನರು ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಮತದಾನ ಮಾಡಿದರೆ, ಕೆಲವೆಡೆ ಮಧ್ಯಾಹ್ನದ ವರೆಗೂ ಜನರು ಬರುವುದು ಕಡಿಮೆಯಾಗಿತ್ತು.
ಶಾಸಕ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಮತಚಲಾಯಿಸಿದರೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಮ್ಮ ಸ್ವಗ್ರಾಮ ಹಂಡಿಗನಾಳ ಗ್ರಾಮದಲ್ಲಿ ಮತಚಲಾಯಿಸಿದರು.
ಕಲ್ಲುತೂರಾಟ: ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಹಾಗು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ.
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಯಕರ್ತರ ನಡುವೆ ಕಲ್ಲುತೂರಾಟ ನಡೆದಿದ್ದು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಯಕರ್ತರ ನಡುವೆ ಕಲ್ಲುತೂರಾಟ ನಡೆದಿದ್ದು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿದ್ದು ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ಮತದಾನ ಪ್ರಕ್ರಿಯೆ ಮತ್ತೆ ಶುರುವಾಯಿತು.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಎನ್.ಚೈತ್ರಾ, ಚುನಾವಣಾಧಿಕಾರಿ ಹಾಗು ತಹಸೀಲ್ದಾರ್ ಕೆ.ಎಂ.ಮನೋರಮಾ, ಜಾಗೃತದಳದ ಮುಖ್ಯಸ್ಥ ಹೆಚ್.ಎ.ಹರೀಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲ್ಲುತೂರಾಟದಲ್ಲಿ ಗ್ರಾಮಸ್ಥರಾದ ಕರಗಪ್ಪ, ಬೈರೇಗೌಡ, ಭಾಗ್ಯಮ್ಮ, ರಾಮಣ್ಣ, ಲಕ್ಷ್ಮಿದೇವಮ್ಮ, ಸುಶೀಲಮ್ಮ, ನಾರಾಯಣಪ್ಪ ಮತ್ತಿತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಉಳಿದಂತೆ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಸೊಣ್ಣೇನಹಳ್ಳಿ, ಆನೇಮಡುಗು ಮತ್ತಿತರ ಗ್ರಾಮಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಯಾವುದೇ ಅಹಿತಕರ ಘಟನೆಯಾಗಿಲ್ಲ.

ತ್ರೀಡಿ ಮ್ಯೂರಲ್ ಕಲೆಗೆ ಮನಸೋತ ಶಿಡ್ಲಘಟ್ಟದ ಜನತೆ

0

ಮ್ಯೂರಲ್ ಅಥವಾ ಮ್ಯೂರಲ್ ಆರ್ಟ್ ಕೇರಳದ ಸಾಂಪ್ರದಾಯಿಕ ಕಲಾ ಪ್ರಕಾರ. ಹೆಚ್ಚಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಲ್ಪನೆಯ ಚಿತ್ರಗಳು ಈ ಪದ್ಧತಿಯ ವೈಶಿಷ್ಟ್ಯ. ಅದಕ್ಕಾಗಿಯೇ ಕೇರಳದ ಅರಮನೆಗಳು, ದೇವಾಲಯಗಳು ಹಾಗೂ ಕಲಾ ಮಂದಿರಗಳಲ್ಲಿ ಈ ಕಲಾಕೃತಿಯ ವೈಭವ ಕಾಣಸಿಗುತ್ತದೆ.
ಈ ಕಲೆಯಲ್ಲಿ ಪಳಗಿರುವ ಕಲಾವಿದರು ಬಹಳ ಅಪರೂಪ. ಆದರೆ, ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಪಂಚಾಯತಿಯ ನಾರಾಯಣದಾಸರಹಳ್ಳಿಯ ಶಿವರಾಜ್ ಈ ಮ್ಯೂರಲ್ ಕಲೆಯಲ್ಲಿ ಸಿದ್ಧಹಸ್ತರಾಗಿದ್ದು, ಶಿಡ್ಲಘಟ್ಟ ಹಾಗೂ ಸುತ್ತಮುತ್ತ ನೂತನವಾಗಿ ಕಟ್ಟಿಸುವ ಮನೆಗಳನ್ನು ತ್ರೀಡಿ ಮ್ಯೂರಲ್ ಕಲೆಯಿಂದ ಸಿಂಗರಿಸುತ್ತಿದ್ದಾರೆ. ಈ ಕಲೆಯನ್ನು ಮನೆಗಳಿಗೆ ಮಾತ್ರವಲ್ಲದೆ, ಮಸೀದಿ ಮತ್ತು ಚರ್ಚ್ಗಳಿಗೂ ವಿಸ್ತರಿಸಿದ್ದಾರೆ.
ಕೆಲವೊಂದು ಕಾಲಘಟ್ಟದಲ್ಲಿ ಕೆಲ ಕಲಾಪ್ರಕಾರಗಳನ್ನು ಜನರು ಇಷ್ಟಪಡುವಂತೆ ಈಗೀಗ ತಾಲ್ಲೂಕು ಹಾಗೂ ಸುತ್ತ ಮುತ್ತಲಿನ ನಗರಗಳ ಜನರು ಮ್ಯೂರಲ್ ಕಲೆಗೆ ಮನಸೋತಿದ್ದಾರೆ. ನೂತನವಾಗಿ ಕಟ್ಟಿಸುವ ಮನೆಗಳಿಗೆ ಕೆಲವರು ವಾಸ್ತುಪ್ರಕಾರದ ಮ್ಯೂರಲ್ ಮಾಡಿಸಿದರೆ, ಇನ್ನು ಕೆಲವರು ದೇವರುಗಳ ಮ್ಯೂರಲ್ ಮಾಡಿಸುತ್ತಿದ್ದಾರೆ.
ಯಾವ ಆಕಾರ, ಚಿತ್ರಗಳು ಬೇಕೆಂಬುದನ್ನು ಕೇಳಿ ಚಿತ್ರ ಬಿಡಿಸಿಕೊಂಡು ಶಿವರಾಜ್, ಅತ್ಯುತ್ತಮ ಜೇಡಿ ಮಣ್ಣನ್ನು ತಂದು ಹದ ಮಾಡಿಕೊಳ್ಳುತ್ತಾರೆ. ನಂತರ ಚಿತ್ರದ ಅಚ್ಚು ತಯಾರಿಸಿ, ಫೈಬರ್ ಎರಕಹೊಯ್ದು, ಒಣಗಿದ ನಂತರ ಬಣ್ಣ ಹಚ್ಚುತ್ತಾರೆ. ಸಾಕಷ್ಟು ಸಮಯ, ಕೈಚಳಕ, ಕಲ್ಪನೆ ಬೇಕಾದ ಈ ಕಲೆಯಲ್ಲಿ ಪರಿಣತಿ ಪಡೆಯಲು ಇವರು ಸಾಕಷ್ಟು ಶ್ರಮಿಸಿದ್ದಾರೆ.
ತಾಲ್ಲೂಕಿನ ನಾರಾಯಣದಾಸರಹಳ್ಳಿಯಿಂದ ಕಲೆಯ ಅಭ್ಯಾಸಕ್ಕಾಗಿ ದಿಲ್ಲಿಯವರೆಗೂ ಸಾಗಿದ ಇವರ ಪಯಣ ಕೊನೆಗೆ ತನ್ನ ಸ್ವಂತ ತಾಲ್ಲೂಕಿನಲ್ಲೇ ಬಣ್ಣ ಕಾಣುವಂತಾಗಿದೆ. ಬೆಂಗಳೂರಿನಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದ ಶಿವರಾಜ್, ಸ್ನಾತಕೋತ್ತರವನ್ನು ಮೈಸೂರಿನ ಲಲಿತ ಕಲಾ ಅಕಾಡೆಮಿಯಲ್ಲಿ ಪೂರೈಸಿದ್ದಾರೆ. ತ್ರಿಡಿ ಅನಿಮೇಷನ್ ದೆಹಲಿಯಲ್ಲಿ ಕಲಿತಿದ್ದಾರೆ.
ಕೆಲ ಕಾಲ ತಾಲ್ಲೂಕಿನ ಮೇಲೂರು ಗ್ರಾಮದ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದ ಅವರು ಪ್ರಸ್ತುತ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಾರಕ್ಕೆ ಮೂರುದಿನ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಉಳಿದ ದಿನಗಳನ್ನು ಮ್ಯೂರಲ್ ಕಲೆಗೆ ಮೀಸಲಿಟ್ಟಿದ್ದಾರೆ.
ಚಿಂತಾಮಣಿಯಲ್ಲಿ 20 ಮನೆಗಳು, ಚಿಕ್ಕಬಳ್ಳಾಪುರದಲ್ಲಿ 40 ಮನೆಗಳು, ವಿಜಯಪುರದಲ್ಲಿ 15 ಮನೆಗಳು, ಗೌರಿಬಿದನೂರಿನಲ್ಲಿ 7 ಮನೆಗಳು, ಬಾಗೇಪಲ್ಲಿಯಲ್ಲಿ 8 ಮನೆಗಳ ಮೇಲೆ ಮ್ಯೂರಲ್ ಚಿತ್ರವನ್ನು ರೂಪಿಸಿಕೊಟ್ಟಿರುವ ಶಿವರಾಜ್ಗೆ ಮಸೀದಿ ಮತ್ತು ಚರ್ಚ್ಗಳ ಮೇಲೂ ಮ್ಯೂರಲ್ ರೂಪಿಸಲು ಒಪ್ಪಿಕೊಂಡಿದ್ದಾರೆ.
‘ಒಂದೊಂದು ತ್ರೀಡಿ ಮ್ಯೂರಲ್ ಕಲೆಯನ್ನು ರೂಪಿಸಲು ಸುಮಾರು 10 ರಿಂದ 20 ದಿನಗಳು ಬೇಕಾಗುತ್ತದೆ. ಧೂಳು, ರಾಸಾಯನಿಕಗಳ ಸಹವಾಸದಿಂದ ಮತ್ತು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕೆಲಸ ಮಾಡಬೇಕಾಗುವುದರಿಂದ ಆರೋಗ್ಯವು ಆಗಾಗ ಕೈಕೊಡುತ್ತದೆ. ಆದರೆ ಕಲಿತ ಕಲೆಯ ಬಗೆಗಿನ ಆಸಕ್ತಿ ಮತ್ತು ಹುಟ್ಟಿದೂರಿನ ಮಮಕಾರದಿಂದ ಹಣ ಸಂಪಾದಿಸಲು ಆಗದಿದ್ದರೂ ಉತ್ಸಾಹವನ್ನು ಕಳೆದುಕೊಂಡಿಲ್ಲ. ಮಕ್ಕಳ ಸೃಜನಶೀಲತೆಯನ್ನು ಬೆಳೆಸಲು ಕಸ ಅಥವಾ ಬೇಡದ ವಸ್ತುಗಳನ್ನು ಕಲೆಯಾಗಿಸುವ ಬಗ್ಗೆ ಶಾಲೆಗಳಲ್ಲಿ ಕಲಿಸಲು ಆಸಕ್ತಿಯಿದೆ. ಆದರೆ ಅವಕಾಶಗಳು ಸಿಗುತ್ತಿಲ್ಲ. ಶಾಲೆಗಳಲ್ಲಿ ಕಲೆಗೂ ಸಮಯವನ್ನು ಮೀಸಲಿಡಬೇಕು. ಪ್ರತಿಭಾ ಕಾರಂಜಿಗೆ ಮಾತ್ರ ತೀರ್ಪುಗಾರನಾಗಿ ನನ್ನನ್ನು ಕರೆಯುತ್ತಾರಷ್ಟೆ. ಅವಕಾಶ ಸಿಕ್ಕಲ್ಲಿ ನಮ್ಮ ತಾಲ್ಲೂಕಿನ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಶ್ರಮಿಸುವೆ’ ಎನ್ನುತ್ತಾರೆ ಶಿವರಾಜ್. ಶಿವರಾಜ್ ದೂರವಾಣಿ ಸಂಖ್ಯೆ: 9972948994

ಚುನಾವಣೆಯ ನಂತರ ಘರ್ಷಣೆ

0

ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆಂಬ ಕಾರಣಕ್ಕೆ ರಾತ್ರಿಯಲ್ಲಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ದೊಗರನಾಯಕನಹಳ್ಳಿಯ ಮುನಿವೆಂಕಟಪ್ಪ, ಬಾಬು, ಲಕ್ಷ್ಮಣ್ ಎಂಬುವವರು ಭಾನುವಾರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ತಾಲ್ಲೂಕಿನ ದೊಗರನಾಯಕನಹಳ್ಳಿ ಗ್ರಾಮದ ನಾವು ಕಳೆದ ಕೆಲ ದಿನಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರಿಂದ, ಶನಿವಾರದಂದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಮುಗಿದ ನಂತರ, ಸಂಜೆ ೭ ಗಂಟೆಯ ಸಮಯದಲ್ಲಿ ಜೆಡಿಎಸ್ನ ೧೦ ಮಂದಿಯ ಗುಂಪೊಂದು ಏಕಾಏಕಿ ದಾಳಿ ಮಾಡಿ, ದೊಣ್ಣೆಗಳಿಂದ, ಹೊಡೆದಿದ್ದಾರೆ’ ಎಂದು ಗಾಯಾಳುಗಳು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರಾಣಿತಿಹಾಸಗಳ ಜೊತೆ ವರ್ತಮಾನ

0

ದೇವಭೂಮಿಯ ಜಾಡಿನಲ್ಲಿ……
ಚಾರ್‍ಧಾಮ್ ಯಾತ್ರಾ ಕಥನ.
ಲೇ: ಎಂ. ಶ್ರೀನಿವಾಸನ್.
ಪ್ರವಾಸ ಕಥನಗಳು ಕನ್ನಡ ಸಾಹಿತ್ಯ ಪರಂಪರೆಗೆ ಹೊಸದೆನಲ್ಲ, ಹೆಚ್ಚು ಪ್ರಸಿದ್ಧವಾದದ್ದು. ‘ಅಮೇರಿಕೆಯಲ್ಲಿ ಗೂರುರರು’ ಹಾಗೇ ಅನೇಕರು ತಾವು ಮಾಡಿದ ಪ್ರವಾಸದ ಕುರಿತಾಗಿ ಅಲ್ಲಿ ಪಡೆದ ಅಥವಾ ಅಲ್ಲಿ ಅವರಿಗೆ ದಕ್ಕಿದ ಅನುಭವಗಳನ್ನು ಅಣಿಬದ್ದಗೊಳಿಸಿದ್ದಾರೆ. ಕೆಲವು ಪುಸ್ತಕ ರೂಪದಲ್ಲಿ – ಇನ್ನು ಕೆಲವು ಪತ್ರಿಕೆಗಳಲ್ಲಿ ಲೇಖನಗಳಾಗಿ ಪ್ರಕಟವಾಗಿದೆ.
ಪ್ರಸ್ತುತ ದೇವಭೂಮಿಯ ಜಾಡಿನಲ್ಲಿ – ಎಂಬ ಪ್ರವಾಸ ಕಥನ ಲೇಖಕರ ಮೂರನೆಯ ಪ್ರವಾಸ ಕಥನ. ಮೊದಲೆರಡು ಪ್ರವಾಸ ಕಥನಗಳು ಬರೆದ ಅನುಭವದ ಆಧಾರದಲ್ಲಿ ಇದರ ಬರವಣಿಗೆಗೆ ಲೇಖಕರಿಗೆ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ಎಂಬುದು ಇದರ ಈಟದಿಂದಲೇ ಅರ್ಥವಾಗುತ್ತದೆ. ಈ ಪ್ರವಾಸ ಕಥನವನ್ನು ಅವರು ‘ಚಾರ್ ಧಾಮ್ ಯಾತ್ರಾ ಕಥನ’ ವೆಂದೆ ಕರೆದಿದ್ದಾರೆ. ಚಾರ್ ಧಾಮ್ ಯಾತ್ರೆಯೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ ಕ್ಷೇತ್ರದರ್ಶನ.
ಯಾತ್ರೆ ಎಂದರೆ ಪ್ರವಾಸವೇ ಹೌದಾದರೂ ಅದರ ಉದ್ದೇಶ ಧಾರ್ಮಿಕವಾದದ್ದು. ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಇವು ರೂಪುಗೊಳ್ಳುತ್ತವೆ. ಈ ದೃಷ್ಟಿಯಿಂದ ಶ್ರೀ ಶ್ರೀನಿವಾಸನ್‍ನವರು ಅಪ್ಪಟ ಧಾರ್ಮಿಕ ಶ್ರದ್ಧೆಯನ್ನು ಹೊತ್ತೇ ಯಾತ್ರೆಗೆ ತೆರಳಿದ್ದ ಇಲ್ಲಿನ ಪ್ರತಿಯೊಂದು ಪುಟದಲ್ಲೂ ಸ್ಪಷ್ಟವಾಗುತ್ತದೆ. ವಿಶೇಷವೆಂದರೆ ಇವರ ಧಾರ್ಮಿಕ ಶ್ರದ್ಧೆಯೊಂದಿಗೆ – ಪ್ರತಿಯೊಂದನ್ನು ಚಿಕಿತ್ಸಕ ದೃಷ್ಟಿಯಿಂದ ಪರಿಶೀಲಿಸುವ ಇವರ ಸ್ವಭಾವ ಇಡೀ ಪುಸ್ತಕವನ್ನು ಒಂದು ಸಂಗ್ರಹ ಯೋಗ್ಯ ಕೃತಿಯನ್ನಾಗಿಸಿದೆ.
ತಮ್ಮಂತೆ ಯಾತ್ರೆಯನ್ನು ಕೈಗೊಳ್ಳಬಹುದಾದವರಿಗೆ ಅನುಕೂಲವಾಗಲು ನೀಡಿದ ಕೆಲವೊಂದು ಮಾಹಿತಿಗಳು ನಿಜಕ್ಕೂ ಉಪಯುಕ್ತವಾದವುಗಳು. ಅವರು ತಮ್ಮ ಯಾತ್ರೆಯುದ್ದಕ್ಕೂ ಪಡೆದ ಅನುಭವಗಳು ಬೆರಗು ಹುಟ್ಟಿಸುವಂತಿದೆ. ಇದು ಮೋಜಿನ ಪ್ರವಾಸವಲ್ಲ. ಪ್ರಯಾಸದ ಯಾತ್ರೆ ಪುಣ್ಯ ಸಂಗ್ರಹವೂ ಉದ್ದೇಶಗಳಲ್ಲಿ ಒಂದಾಗಿದ್ದೀತು ಇವರು ಕೇವಲ ಸ್ಥಳಗಳನ್ನು ನೋಡಿ ಅದನ್ನು ಓದುಗರ ಕಣ್ಣಿಗೆ ಕಟ್ಟುವಂತೆ ವರ್ಣಿಸುವುದಕ್ಕೆ ಸೀಮಿತವಾಗದೆ ಪ್ರತಿಯೊಂದು ಸ್ಥಳದ ಪುರಾಣ ಇತಿಹಾಸಗಳನ್ನು ಸಮಗ್ರವಾಗಿ ಸಂಗ್ರಹಿಸಿ ನೀಡಿದ್ದಾರೆ.
ಪ್ರತಿಯೊಂದು ಕ್ಷೇತ್ರದ ವಿಶಿಷ್ಟತೆಯನ್ನು ಅಧ್ಯಾಯವಾರು ತಿಳಿಸಿಕೊಟ್ಟಿದ್ದಾರೆ. ಅದರ ಜೊತೆ ಜೊತೆಗೆ ತಮ್ಮ ಆಳವಾದ ಅಧ್ಯಯನದ ಮೂಲಕ ಪ್ರತಿಯೊಂದರ ಕುರಿತು ವಿವರಣೆ ನೀಡಿದ್ದಾರೆ. ಹಾಗಾಗಿ ಕೆಲವೊಮ್ಮೆ ಪುರಾಣಗಳನ್ನು ಅಧ್ಯಾಯನ ಮಾಡುತ್ತಿರುವಂತೆ ನಮಗನ್ನಿಸಿದರೆ – ತಕ್ಷಣ ಯಾರು ಯಾವಾಗ-ಎಲ್ಲಿ-ಏತಕ್ಕಾಗಿ ಇದನ್ನು ನಿರ್ಮಿಸಿದರು ಎಂದು ಸ್ಥಳದ ಇತಿಹಾಸವನ್ನು ಅವರು ನೀಡುತ್ತಾರೆ. ಚಾರ್ ಧಾಮ ಯಾತ್ರೆಗೆ ಯಾರಾದರೂ ಹೋಗುವುದಿದ್ದರೆ – ಇದನ್ನು ಓದಿಕೊಂಡು ಹೋದಲ್ಲಿ ಅಲ್ಲಿನ ವಿಷಯಗಳು ಅವರಿಗೆ ಸರಳವಾಗಿ ಅರ್ಥವಾಗಲು ಸಾಧ್ಯ . ಇದು ಆ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡಬಲ್ಲದು. ಆ ದೃಷ್ಟಿಯಿಂದ ಇದು ಓದು ಆಕರ ಗ್ರಂಥವೂ ಆಗಬಲ್ಲದು.
ಯಮುನಾ ನದಿ, ಗಂಗಾನದಿಯ ಕುರಿತು ಲೇಖಕರಿಗೆ ವಿಶೆಷವಾದ ಆಕರ್ಷಣೆ ಇದ್ದಿರುವುದು ನಿಜ. ಹಾಗಾಗಿ ಅವುಗಳ ವರ್ಣನೆಯಲ್ಲಿ ಲೇಖಕರ ತಾದಾತ್ಮ್ಯತೆಯನ್ನು ನಾವು ಗಮನಿಸಬಹುದು. ದೇವಾನುದೇವತೆಗಳ ವರ್ಣನೆಗಿಂತ-ನದಿ-ಪರ್ವತ – ಒಟ್ಟಾರೆ ನಿಸರ್ಗದ ಕುರಿತಾದ ಮೋಹ ಇವರ ಗದ್ಯಕ್ಕೂ ಒಂದು ಪದ್ಯದ ಶಕ್ತಿಯನ್ನು ನೀಡಿದೆ ಎಂದರೆ ಅದು ಖಂಡಿತ ಉತ್ಪ್ರೇಕ್ಷೆಯಾಗಲಾರದು. ಹೀಗಿದ್ದೂ ಲೇಖಕರು ಕೇವಲ ಆಧ್ಯಾತ್ಮ ಚಿಂತನೆಯಲ್ಲಿ ನಿಸರ್ಗದ ಸೌಂದರ್ಯ ಸ್ವಾದನೆಯಲ್ಲಿ ಸಂಪೂರ್ಣವಾಗಿ ಕಳೆದುಕೊಳ್ಳುವುದಿಲ್ಲ. ವರ್ತಮಾನದ ವಿವರಗಳನ್ನು ಮರೆಯದೆ ಪ್ರಸ್ತಾಪಿಸುತ್ತಾ ಸಾಗುತ್ತಾರೆ. ಯಾತ್ರೆಯೆನ್ನುವುದು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಬೇಕಿಲ್ಲ ಎಂಬ ಹಿತವಚನವನ್ನು ಹೇಳಿದ ಅವರ ಬಸ್ ಡ್ರೈವರ್ ರಮೋಲಾನ ಮಾತನ್ನು ಮರೆಯದೇ ಉದ್ಗರಿಸುತ್ತಾರೆ. ಇಂಥ ಇಳಿಯವಸ್ಸಿನಲ್ಲಿ ಇಷ್ಟು ಕಷ್ಟದ ಯಾತ್ರೆ ಬರುತ್ತೀರಿ. ಒಳ್ಳೆ ವಯಸ್ಸಿನಲ್ಲಿ ಎಲ್ಲಾ ಸೌಲಭ್ಯಗಳೂ ಸಿಗುವುದಿಲ್ಲ. ಬಾಂಬೆ ತಿರುಗುತ್ತೀರಿ ಅದರ ಬದಲಿಗೆ ಯೌವನ ಇರುವಾಗಲೇ ನೀವುಗಳು ಈ ರೀತಿಯ ಮಾತ್ರೆಗಳನ್ನು ಮುಗಿಸಿಬಿಟ್ಟರೆ ಇಳಿವಯಸ್ಸಿನಲ್ಲಿ ಬೇಕಿದ್ದರೆ ಸುಖವಾಗಿ ದಿಲ್ಲಿ, ಬಾಂಬೆ ತಿರುಗಬಹುದು. ಆದರೆ ಯಾರು ಹಾಗೆ ಮಾಡುವುದಿಲ್ಲ. ಎಲ್ಲ ಉಲ್ಟಾ ಮಾಡುತ್ತಾರೆ. ಅರ್ಥ ಪೂರ್ಣವಾದದ್ದು ಯಾರಿಂದ ಲಭ್ಯವಾದರೂ ಅದನ್ನು ಸ್ವೀಕರಿಸಿ ತಿಳಿಸುವ ದೊಡ್ಡತನ ಲೇಖಕರಿಗಿದೆ. ಅದೂ ಅಲ್ಲದೇ ಎಲ್ಲೂ ಕೂಡ ಸಹ ಪ್ರಯಾಣಿಕರ ಕುರಿತಾದ ಅಸಮಾಧಾನವನ್ನಾಗಲೀ, ಅಸಹನೆಯನ್ನಾಗಲೀ ಲೇಖಕರು ವ್ಯಕಪಡಿಸುವುದಿಲ್ಲ. ಯಾತ್ರೆಯನ್ನು ಏರ್ಪಡಿಸಿದವರ ಅಸಹಾಯಕ ಸ್ಥಿತಿಯನ್ನು (ಕೆಲವೊಮ್ಮೆ ಅನಿವಾರ್ಯ) ಸ್ಥಿತಪ್ರಜ್ಞನಂತೆ ಸ್ವೀಕರಿಸಿ ಸಾಗುತ್ತಾರೆ. ಯಾತ್ರೆಯ ಉದ್ದೇಶ ಕೇವಲ ನೋಡುವುದಲ್ಲ – ಕೈಮುಗಿದು – ತೀರ್ಥ ಪ್ರಸಾದವನ್ನು ಪಡೆಯುವುದಷ್ಟೆ ಅಲ್ಲ – ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥೈಸಿಕೊಳ್ಳುವುದು ಎಂಬ ಸಂಕಲ್ಪ ಹೊತ್ತ ಯಾತ್ರಿಯಂತೆ ಇದರ ನಡೆ.
ಪುಸ್ತಕದ ಹೂರಣಕ್ಕೆ ಹೆಚ್ಚಿನ ಮಹತ್ವವನ್ನು – ಅವರು ಅಲ್ಲಲ್ಲಿ ನೀಡಿದ ಫೋಟೋಗಳು ಕಪ್ಪು – ಬಿಳಿಯಲ್ಲಿ ಮಾತ್ರ ಇದ್ದರೂ ಇವು ಅವುಗಳ ಹೌದೆಂಬುದನ್ನು ಇವು ಸಾಬೀತುಪಡಿಸುತ್ತವೆ. ಹಾಗೇ ಯಾತ್ರೆಯ ಕುರಿತಾದ ಮಾರ್ಗದ ನಕ್ಷೆಗಳು ಕೂಡ ಓದುಗರಿಗಿಂತಲೂ ಹೆಚ್ಚಾಗಿ – ಇಂಥ ಯಾತ್ರೆಗಳಲ್ಲಿ ಆಸಕ್ತಿಯುಳ್ಳವರಿಗೆ ಸಹಾಯ ನೀಡಬಲ್ಲದು. ಜೊತೆಗೆ ಭಾರತದ ಭೌಗೋಳಿಕ ಚಿತ್ರ – ಸಚಿತ್ರವಾಗಿ ನಮ್ಮೆದುರಿಗೆ ಗೋಚರಿಸುತ್ತದೆ. “ದೂರವನ್ನು ಕಿ.ಮೀ. ಗಳಲ್ಲಿ ಹೇಳುವುದಕ್ಕೆ ಬದಲಾಗಿ ಗಂಟೆಗಳಲ್ಲಿ ಹೇಳುವುದೇ ಸೂಕ್ತ” ಎಂಬುದು ಲೇಖಕರ ವೈಯುಕ್ತಿಕ ಅಭಿಪ್ರಾಯ. ಹೀಗೆ ಅಲ್ಲಲ್ಲಿ ಲೇಖಕರು ತಮ್ಮ ವೈಯುಕ್ತಿಕ ಅಭಿಪ್ರಾಯಗಳನ್ನು ಮಂಡಿಸಿದ್ದಿದೆ. ಉದಾಹರಣೆಗೆ ಹೇಳುವುದಾದರೆ ಉತ್ತರ ಕಾಶಿಯನ್ನು ಈ ಚಾರ್‍ಧಾಮ್ ಯಾತ್ರೆಯ ಕೇಂದ್ರ ಸ್ಥಾನವನ್ನಾಗಿ ರೂಪಿಸಿದರೆ ಹೇಗೆಂಬ ಚರ್ಚೆ (ಪು.99).
ಯಾತ್ರೆಯ ಪ್ರಾರಂಭದಲ್ಲೆ ಲೇಖಕರು ತಾವು ಅಪ್ಪಟ ಕನ್ನಡಿಗರು – ಕನ್ನಡಾಭಿಮಾನಿ ಎಂಬುದನ್ನು ಅವರಿಗರಿವಿಲ್ಲದೇ ಪ್ರಕಟಿಸಿಬಿಡುತ್ತಾರೆ. ಹಾಗಾಗಿಯೇ ದೇವನಹಳ್ಳಿ ವಿಮಾನ ನಿಲ್ದಾಣದ ಆಂಗ್ಲಮಯ ವಾತಾವರಣ ಇವರಿಗೆ ಅಭಾಸವಾಗಿ ಕಾಣುತ್ತದೆ. ಆದರೆ ಇಲ್ಲಿ ಈ ಸಹಜತೆಯ ಜೊತೆಗೆ ಕನ್ನಡವನ್ನು ಧಿಕ್ಕರಿಸುವ, ತುಚ್ಛಿಕರಿಸುವ ಅಸಹಜತೆಯೂ ಭಾಸವಾಗುತ್ತದೆ (ಪು08). ಇಷ್ಟಾಗಿ ಕೂಡ ವೃತ್ತಿಯಲ್ಲಿ ಪತ್ರಕರ್ತರಾದ ಇವರಿಗೆ ಇಂಗ್ಲೀಷ್ ನುಸುಳುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಉದಾಹರಣೆಗೆ ಒಟ್ಟಾರೆಯಾಗಿ ತಾವು ಮಾಡಿರುವ ವ್ಯವಸ್ಥೆಯ ಬಗೆಗೆ ಒಂದು ಪುಟ್ಟ ಲೆಕ್ಚರ್ ಹೊಡೆದರು (ಪು10) ಇಲ್ಲಿ ಲೆಕ್ಚರ್ ಹೊಡೆದು ಬದಲಿಗೆ ಭಾಷಣ ಬಿಗಿದರು ಎಂದು ಬರೆಯಬಹುದಿತ್ತು! ಹಾಗೇ ಆದರೆ “ನಾನಂತು ದಿಲ್ಲಿಯಲ್ಲಿ ಒಂದು ಐಸ್‍ಕಡ್ಡಿ ಶಾಪಿಂಗ್‍ನ್ನು ಮಾಡದೇ” ಎಂಬ ವಾಕ್ಯವನ್ನು ಗಮನಿಸಿ ಹಾಗೇ ಕೆಲವೊಂದು ವಾಕ್ಯಗಳಲ್ಲಿ ಅನವಶ್ಯಕ ಶಬ್ದಾಡಂಬರಗಳೂ ಕಾಣಸಿಗುತ್ತವೆ. ‘ವೀರಭದ್ರ ತನ್ನ ವೀರವನ್ನು ಮೆರೆದುದು (ಪುಟ41) ಇಲ್ಲಿ ವೀರವನ್ನು ಪದದ ಬದಲಿಗೆ ವೀರತನವನ್ನು ಎಂದಾಗಬೇಕಿತ್ತೇನೋ?
ಅದೇನೇ ಇದ್ದರೂ ಇಡಿಯ ಯಾತ್ರಾಕಥನ ಯಾವುದೇ ತೊಂದರೆಯಿಲ್ಲದೇ ಓದಬಹುದಾದ ಕೃತಿ ಪ್ರವಾಸ ಸಾಧ್ಯವಾಗದಿದ್ದರೂ ಸರಿ ಪ್ರವಾಸದ ಅನುಭವವನ್ನು ಪಡೆಯಬಹುದು. ವಿಶೇಷವಾಗಿ ನಮ್ಮ ಪೌರಾಣಿಕ ಮತ್ತು ಐತಿಹಾಸಿಕ ಜ್ಞಾನವೃದ್ಧಿಗೊಳ್ಳಲಂತೂ ಇದು ಸಾಕಷ್ಟು ಅನುವು ಮಾಡಿಕೊಡುತ್ತದೆ.
ಪುಸ್ತಕದ ಕುರಿತು ಇರುವ ಅಸಮಧಾನವೆಂದರೆ ಇದರ ಮುಖಪುಟ ಗಟ್ಟಿರಟ್ಟಿನಿಂದ ರಚಿತವಾಗಿದ್ದರೆ, ಎಂಬುದು 2011 ರ ಸೆಪ್ಟೆಂಬರ್ 15 ರಿಂದ 3 ರವರೆಗೆ ಕೈಗೊಂಡ ಯಾತ್ರೆಯೊಂದರ ಕಥನ ಇಷ್ಟು ಶ್ರೇಷ್ಠವಾಗಿ ನಮಗೆ ಓದಲು ದಕ್ಕಿದ್ದು, ಸಂತಸದ ಸಂಗತಿ. ಹಾಗೇ ಇದನ್ನು ಧಾರವಾಹಿಯಾಗಿ ಮೊದಲು ಪ್ರಕಟಿಸಿದ ಶಿವಮೊಗ್ಗದ ನಾವಿಕ ಪತ್ರಿಕೆ ಕೂಡ ಸ್ತುತ್ಯಾರ್ಹóವಾದ ಕೆಲಸವನ್ನೇ ಮಾಡಿದ್ದು, ಅದಕ್ಕೂ ಅಭಿನಂದನೆಗಳು ಸಲ್ಲಬೇಕು.
ರವೀಂದ್ರ ಭಟ್ ಕುಳಿಬೀಡು.

ಚುನಾವಣಾ ವೀಕ್ಷಕರಿಂದ ಪರಿಶೀಲನೆ

0

ತಾಲ್ಲೂಕಿನ ೫ ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಮತ್ತು ೧೭ ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ಮುಕ್ತಾಯವಾಗಿದ್ದು, ಎಲ್ಲಾ ಅಭ್ಯರ್ಥಿಗಳ ಭವಿಷ್ಯ, ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಚುನಾವಣಾ ವೀಕ್ಷಕರು ಭಾನುವಾರ ಮತಪೆಟ್ಟಿಗೆಗಳಿಗೆ ಒದಗಿಸಲಾಗಿರುವ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದರು.
ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಟ್ಟಿರುವ ಮತಪೆಟ್ಟಿಗೆಗಳಿಗೆ ಒದಗಿಸಿರುವ ಭದ್ರತೆ ಹಾಗೂ ನಿಯೋಜನೆ ಮಾಡಲಾಗಿರುವ ಪೊಲೀಸ್ ಸಿಬ್ಬಂದಿಯ ಬಗ್ಗೆ ತಹಶೀಲ್ದಾರ್ ಕೆ.ಎಂ.ಮನೋರಮಾ ಅವರಿಂದ ಮಾಹಿತಿ ಪಡೆದುಕೊಂಡ ಚುನಾವಣಾ ವೀಕ್ಷಕ ರವಿ, ಮತಗಟ್ಟೆ ಅಧಿಕಾರಿಗಳು ಒದಗಿಸಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಭದ್ರತಾಕೊಠಡಿಯ ಸುತ್ತಮುತ್ತಲಿನ ಪ್ರದೇಶ ಬಯಲಾಗಿರುವುದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಹೆಚ್ಚು ಭದ್ರತೆಯನ್ನು ಒದಗಿಸುವ ಮೂಲಕ ಸೂಕ್ತ ಭದ್ರತೆಯನ್ನು ವಹಿಸಬೇಕು, ಎಂದು ಸೂಚಿಸದರು.
ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಚುನಾವಣಾಧಿಕಾರಿಗಳಾದ ಪುರುಷೋತ್ತಮ್, ಲಕ್ಷ್ಮೀನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪೊಲೀಸ್ ಪೇದೆಗಳಿಂದ ನಗರಸಭಾ ಸದಸ್ಯನ ಮೇಲೆ ಹಲ್ಲೆ

0

ಪಾನಮತ್ತರಾಗಿ ಕಾರಿನ ತಪಾಸಣೆಯ ನೆಪದಲ್ಲಿ ಹಲ್ಲೆ ನಡೆಸಿರುವ ಪೊಲೀಸ್ ಪೇದೆಗಳನ್ನು ಅಮಾನತ್ತು ಪಡಿಸಿ, ಕಾನೂನು ಕ್ರಮ ಜರುಗಿಸಿ, ನ್ಯಾಯ ಒದಗಿಸಿಕೊಡಬೇಕು ಎಂದು ೧೮ ನೇ ವಾರ್ಡಿನ ನಗರಸಭಾ ಸದಸ್ಯ ಇಲಿಯಾಜ್ಬೇಗ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ಫೆಬ್ರುವರಿ 11 ರಂದು ರಾತ್ರಿ, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಶೆಟ್ಟಿಹಳ್ಳಿ ಬಳಿಯಿರುವ ಕೋಳಿಫಾರಂ ಬಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ನನ್ನ ಕಾರನ್ನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೇದೆಗಳಾದ ದೇವರಾಜು ಮತ್ತು ಬೈರಾರೆಡ್ಡಿ ಎಂಬುವವರು ತಡೆದರು. ಕಾರನ್ನು ತಪಾಸಣೆ ಮಾಡಿದರು. ನಂತರ ಎಲ್ಲಿಗೆ ಹೋಗಿ ಬರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು, ನಾನು ನಗರಸಭಾ ಸದಸ್ಯ, ನನ್ನ ಕೋಳಿಫಾರಂ ಬಳಿಗೆ ಹೋಗಿ ಬರುತ್ತಿರುವುದಾಗಿ ಹೇಳಿ, ನನ್ನ ಕಾರಿನ ದಾಖಲೆ ಪತ್ರಗಳು, ನನ್ನ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಕೊಟ್ಟರೂ ಕೂಡಾ ಪಾನಮತ್ತರಾಗಿದ್ದ ಪೇದೆಗಳು, ನಾನು ಹೇಳುವ ಯಾವ ಮಾತನ್ನೂ ಕೇಳಿಸಿಕೊಳ್ಳಲು ತಾಳ್ಮೆಇಲ್ಲದೆ, ಕಾರಿನೊಳಗಿಂದ ನನ್ನನ್ನು ಹೊರಗೆಳೆದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಬಶೆಟ್ಟಿಹಳ್ಳಿ ಗ್ರಾಮಸ್ಥರು ನನ್ನ ಸಹಾಯಕ್ಕೆ ಬಂದರು. ನಂತರ ನಾನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹಾ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೂ ದೂರು ನೀಡಿದ್ದರೂ ಕೂಡಾ ನಮ್ಮ ದೂರಿಗೆ ಅವರೂ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ (ನಂದು) ಮಾತನಾಡಿ, ಇತ್ತಿಚೆಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳು ನಾಗರಿಕರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿಲ್ಲ, ಪದೇ ಪದೇ ದುರ್ವರ್ತನೆ ಮಾಡುವ ಮೂಲಕ ಪೊಲೀಸ್ ಇಲಾಖೆಯ ಮೇಲೆ ನಾಗರಿಕರಿಗೆ ಇರುವ ನಂಬಿಕೆಯನ್ನು ಕೆಡಿಸುವಂತೆ ಮಾಡುತ್ತಿದ್ದಾರೆ, ನಗರಸಭಾ ಸದಸ್ಯರ ದೂರಿಗೆ ಪೊಲೀಸ್ ಇಲಾಖೆಯ ಜಿಲ್ಲಾ ವರಿಷ್ಟಾಧಿಕಾರಿ ಸ್ಪಂದಿಸಿ ನ್ಯಾಯ ಒದಗಿಸದಿದ್ದಲ್ಲಿ, ನಗರಸಭೆ ಎಲ್ಲಾ ಸದಸ್ಯರೂ ಸೇರಿದಂತೆ ನಾಗರಿಕರೊಂದಿಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಸಭಾ ಸದಸ್ಯರಾದ ವೆಂಕಟಸ್ವಾಮಿ, ಕೇಶವಮೂರ್ತಿ, ಮುಖಂಡರಾದ ಮುಸ್ತು, ಜಬೀವುಲ್ಲಾ, ಲಕ್ಷ್ಮೀನಾರಾಯಣ, ನಾಮಿನಿ ಸದಸ್ಯ ಅಬ್ದುಲ್ಗಪೂರ್ ಈ ಸಂದರ್ಭದಲ್ಲಿ ಹಾಜರಿದ್ದರು.

ರಥಸಪ್ತಮಿ ಆಚರಣೆ

0

ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಡ್ಲಘಟ್ಟ ಶಾಖೆಯ ವತಿಯಿಂದ ಭಾನುವಾರ ರಥಸಪ್ತಮಿಯನ್ನು ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಸೂರ್ಯನಮಸ್ಕಾರಗಳನ್ನು ಮಾಡುವುದರ ಮೂಲಕ ಆಚರಿಸಲಾಯಿತು.
ಬೆಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಸೂರ್ಯ ಭಗವಂತನ ಚಿತ್ರಪಠಕ್ಕೆ ಪೂಜೆ ಸಲ್ಲಿಸುವುದರಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಒಟ್ಟಾಗಿ 89 ಜನ ಯೋಗ ಬಂಧು-ಭಗಿನಿಯರು ಸೇರಿ 50,280 ಸೂರ್ಯನಮಸ್ಕಾರಗಳನ್ನು ಮಾಡಿದರು. ಅನಂತಲಕ್ಷ್ಮಿ 950, ಸೌಭಾಗ್ಯ 930 ಹಾಗೂ ಶ್ರೀಕಾಂತ್, ಮಂಜುನಾಥ, ಗೋಪಿ, ರಮಣ, ಚಿಕ್ಕಣ್ಣ ತಲಾ 1008 ಸೂರ್ಯನಮಸ್ಕಾರಗಳನ್ನು ಮಾಡಿದರು.

ಶಿಡ್ಲಘಟ್ಟದಲ್ಲಿ ಭಾನುವಾರ ರಥಸಪ್ತಮಿಯ ಪ್ರಯುಕ್ತ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ನಡಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಆಯೋಜಿಸಲಾಗಿತ್ತು.
ಶಿಡ್ಲಘಟ್ಟದಲ್ಲಿ ಭಾನುವಾರ ರಥಸಪ್ತಮಿಯ ಪ್ರಯುಕ್ತ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ನಡಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಆಯೋಜಿಸಲಾಗಿತ್ತು.

ನಂತರ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ನಡಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಆಯೋಜಿಸಲಾಗಿತ್ತು. ಭಾರತಮಾತೆಗೆ, ವೀರ ಯೋಧರಿಗೆ ಜೈಕಾರ ಕೂಗುತ್ತಾ, ದೇಶಭಕ್ತಿ ಹಾಗೂ ಯೋಗಗೀತೆಗಳನ್ನು ಹಾಡುತ್ತಾ ಮೆರವಣಿಗೆ ನಡೆಸಿದರು.
ನಂತರ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜಿಯನ್ನು ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಸೌಪರ್ಣಿಕಾ ವಲಯ ಪ್ರಮುಖ್ ಪಿ.ಶ್ರೀಕಾಂತ್, ಜಿಲ್ಲಾ ಸಂಚಾಲಕ ಸುಂದರಾಚಾರಿ, ಅಧ್ಯಕ್ಷ ಶಂಕರ್, ಎಲ್. ಕೇಶವ ಮೂರ್ತಿ, ಶಶಿಕಾಂತ್ ಹಾಗೂ ಯೋಗ ಬಂಧು-ಭಗಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದುಷ್ಕರ್ಮಿಗಳಿಂದ ಬೆಳೆ ನಾಶ

0

ತಾಲ್ಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ಎನ್.ಸಿ.ರಾದಪ್ಪ ಎಂಬುವರಿಗೆ ಸೇರಿದ ಟೊಮೆಟೋ ಬೆಳೆಗೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಳೆನಾಶಕ ಔಷಧಿಯನ್ನು ಸಿಂಪಡಿಸಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ನಡಿಪಿನಾಯಕನಹಳ್ಳಿ ಗ್ರಾಮದ ಎನ್.ಸಿ.ರಾದಪ್ಪ ಅವರು ಒಂದೂವರೆ ಎಕರೆಯಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು. ಹೂಗಳನ್ನು ಬಿಟ್ಟಿದ್ದು, ಫಸಲು ಬರುವ ಸಮಯದಲ್ಲಿ ದುಷ್ಕರ್ಮಿಗಳು ನಡೆಸಿರುವ ಕೃತ್ಯದಿಂದಾಗಿ ಬೆಳೆಯು ಸರ್ವನಾಶವಾಗಿದೆ.
‘ಇಪ್ಪತ್ತೆರಡು ವರ್ಷಗಳಿಂದ ಜಮೀನನ್ನು ನೀರಿಲ್ಲದೆ ಬೀಡುಬಿಟ್ಟಿದ್ದೆವು. ಮೂರು ತಿಂಗಳ ಹಿಂದಷ್ಟೆ ಕೊಳವೆ ಬಾವಿಯನ್ನು ಕೊರೆಸಿದ್ದು, ನೀರು ಸಿಕ್ಕಿತ್ತು. ಅದಕ್ಕಾಗಿ ಟೊಮೆಟೋ ಬೆಳೆ ಬೆಳೆದೆವು. ಉತ್ತಮ ಫಸಲನ್ನು ನಿರೀಕ್ಷಿಸಿದ್ದು, ಸುಮಾರು 10 ಲಕ್ಷ ರೂಗಳವರೆಗೂ ಆದಾಯವನ್ನು ನಿರೀಕ್ಷಿಸಿದ್ದೆವು. ನಮ್ಮ ಶ್ರಮ, ಕೊಳವೆ ಬಾವಿಗೆ ಮಾಡಿರುವ ಖರ್ಚು, ಟೊಮೆಟೋ ಬೆಳೆಗಾಗಿ ಮಾಡಿರುವ ಲಕ್ಷಗಟ್ಟಲೆ ಖರ್ಚು ಎಲ್ಲವೂ ಸರ್ವನಾಶವಾಗಿ ನಾವು ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದ್ದೇವೆ. ಈಗಾಗಲೇ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ತಾಲ್ಲೂಕು ಕಚೇರಿಯಲ್ಲೂ ದೂರು ನೀಡಲಿದ್ದೇವೆ. ಈ ದುಷ್ಕೃತ್ಯ ನಡೆಸಿದವರಿಗೆ ಶಿಕ್ಷೆ ಆಗಬೇಕು’ ಎಂದು ರೈತ ಎನ್.ಸಿ.ರಾದಪ್ಪ ತಿಳಿಸಿದರು.

ಚುನಾವಣೆಗೆ ಸಕಲ ಸಿದ್ದತೆ

0

ಫೆಬ್ರವರಿ ೧೩ ರಂದು ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಚುನಾವಣೆಯ ಪೂರ್ವಸಿದ್ದತೆಗಳ ಬಗ್ಗೆ ಅವರು ಮಾತನಾಡಿದರು.
ಈಗಾಗಲೇ ೧೬ ಮಂದಿ ಗೃಹರಕ್ಷಕದಳದ ಸಿಬ್ಬಂದಿಯೂ ಸೇರಿದಂತೆ ೨೦೦ ಮಂದಿಗೆ ಈಗಾಗಲೇ ಅಂಚೆಯ ಮೂಲಕ ಮತಪತ್ರಗಳನ್ನು ಕಳುಹಿಸಲಾಗಿದ್ದು, ಉಳಿದ ಮತಪತ್ರಗಳನ್ನು ಕಳುಹಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿಯ ಪಟ್ಟಿಯನ್ನು ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ರವಾನಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ, ಡಿಪೋ ಇಲ್ಲದೆ ಇರುವ ಕಾರಣ ಚಿಕ್ಕಬಳ್ಳಾಪುರ ವ್ಯವಸ್ಥಾಪಕರಿಂದ ಪಟ್ಟಿಯನ್ನು ತೆಗೆದುಕೊಂಡು ಅಂಚೆ ಬ್ಯಾಲೇಟ್ ಕಳುಹಿಸಲಾಗುತ್ತದೆ.
ಚುನಾವಣಾ ಕರ್ತವ್ಯಕ್ಕಾಗಿ ೨೮ ಬಸ್ಸುಗಳು, ೪ ಜೀಪುಗಳನ್ನು ೩೨ ಮಾರ್ಗಗಳಿಗೆ ವ್ಯವಸ್ಥೆ ಮಾಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಈಗಾಗಲೇ ಸಿದ್ದಪಡಿಸಿದ್ದು, ಭದ್ರತಾಕೊಠಡಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಯಾವುದೇ ಯಂತ್ರದಲ್ಲಿ ಲೋಪದೋಷಗಳು ಕಂಡು ಬಂದಿಲ್ಲ. ಚುನಾವಣೆಯ ಕರ್ತವ್ಯಕ್ಕಾಗಿ ತರಬೇತಿಯನ್ನು ಹೊಂದಿರುವ ಸಿಬ್ಬಂದಿಯಲ್ಲಿ ಅಂಗವಿಕಲರು, ಗರ್ಭೀಣಿಯರು, ಬಾಣಂತಿಯರ ಬದಲಾಗಿ ಬೇರೆಯವರನ್ನು ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.
ಎಲ್ಲಾ ಮತಗಟ್ಟೆಗಳನ್ನು ಸಿದ್ದಪಡಿಸಲಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯವಾಗಿರುವ ಮೂಲಭೂತಸೌಕರ್ಯಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ, ಮತಗಟ್ಟೆಗಳಲ್ಲಿ ಉತ್ತಮವಾದ ಬೆಳಕಿನ ವಾತಾವರಣವಿರುವಂತೆ, ನೋಡಿಕೊಳ್ಳಲಾಗಿದೆ, ಮತಯಂತ್ರಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ತೆರಳುವಂತಹ ಅಧಿಕಾರಿಗಳಿಗೆ ಜೂನಿಯರ್ ಕಾಲೇಜಿನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಸಿಬ್ಬಂದಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮ ಸಹಾಯಕರೂ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ರಾಜಣ್ಣ ಹೇಳಿಕೆಗೆ ತಿರುಗೇಟು

0

ವ್ಯಕ್ತಿಗತವಾಗಿ ಹೇಳಿಕೆಗಳನ್ನು ನೀಡುವುದು ಶಾಸಕರಿಗೆ ತರವಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವ ಕೀಳು ಪ್ರವೃತ್ತಿ ತಮ್ಮದಲ್ಲ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸುವ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಈಚೆಗೆ ಶಾಸಕ ಎಂ.ರಾಜಣ್ಣ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಮೇಲೆ ಆರೋಪ ಮಾಡಿರುವುದಕ್ಕೆ ಉತ್ತರ ನೀಡಿದರು.
ಮಾಜಿ ಶಾಸಕರಾದ ದಿವಂಗತ ಎಸ್.ಮುನಿಶಾಮಪ್ಪನವರೂ ರಾಜಕೀಯ ಮಾಡುತ್ತಿದ್ದರು, ಅವರೆಂದೂ ವ್ಯಕ್ತಿಗತವಾಗಿ ಕೀಳುಮಟ್ಟದ ರಾಜಕಾರಣ ಮಾಡಿರಲಿಲ್ಲ, ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಮಾತನಾಡುತ್ತಿದ್ದರು, ಈ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಅವಿಭಾಜ್ಯ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸುಮಾರು ೧,೦೨೪ ಕೆರೆಗಳ ಹೂಳು ತೆಗೆದು ಅಂತರ್ಜಲದ ಮಟ್ಟವನ್ನು ವೃದ್ಧಿ ಮಾಡಲು ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸಿ, ಹಲವಾರು ಕೆರೆಗಳನ್ನು ಅಭಿವೃದ್ಧಿ ಮಾಡಿಸಿದ್ದೇನೆ. ಶಿಡ್ಲಘಟ್ಟದಲ್ಲಿ ಅಗ್ನಿಶಾಮಕ ಠಾಣೆಯನ್ನು ಮಾಡಲು ಮುಂದಾಗಿದ್ದೇ ನಮ್ಮ ಅವಧಿಯಲ್ಲಿ.ಬಸ್ಡಿಪೋ ನಿರ್ಮಾಣಕ್ಕಾಗಿ ಪ್ರಯತ್ನ ಮಾಡಿದ್ದು, ಹಿತ್ತಲಹಳ್ಳಿ ಬಳಿಯಲ್ಲಿ ಜಮೀನು ಗುರ್ತಿಸುತ್ತಿದ್ದೆವು. ಅಷ್ಟರಲ್ಲಿ ಚುನಾವಣೆಗಳು ಬಂದಿತ್ತು, ಹನುಮಂತಪುರದ ಬಳಿಯಲ್ಲಿ ಗುರ್ತಿಸಿರುವ ಜಮೀನು ಖಾಸಗಿ ವ್ಯಕ್ತಿಗಳದ್ದು, ಅದು ಸರ್ಕಾರದ್ದಲ್ಲ, ಆದ್ದರಿಂದ ಅಲ್ಲಿ ಡಿಪೋ ಕಾಮಗಾರಿ ಪ್ರಾರಂಭವಾಗಲಿಲ್ಲ ಎಂದರು.
ಸಂಸದ ಕೆ.ಎಚ್.ಮುನಿಯಪ್ಪ, ನಾನು ಬಾಲ್ಯಸ್ನೇಹಿತರು, ರಾಜಕೀಯವಾಗಿಯೂ ಒಗ್ಗಟ್ಟಾಗಿ ಚುನಾವಣೆಗಳನ್ನು ನಡೆಸಿದವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜ, ಈಗ ಒಗ್ಗಟ್ಟಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮದ ರಾಮರೆಡ್ಡಿ ಮತ್ತು ಜಯಚಂದ್ರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಖಂಡರಾದ ಮುತ್ತೂರು ಚಂದ್ರೇಗೌಡ, ವೆಂಕಟೇಶಪ್ಪ, ಮುನಿಯಪ್ಪ, ಮಳ್ಳೂರು ನಾಗರಾಜ್, ವೆಂಕಟರಾಜೇಗೌಡ, ಗಿರೀಶ್, ಶ್ರೀಧರ್, ಪಿ.ನಿರ್ಮಲಾ ಮುನಿರಾಜು, ಶಿವಾನಂದ, ಜಿ.ಕೆ.ಶಿವಾನಂದ, ರಾಮಪ್ಪ, ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.

ಚುನಾವಣಾ ಪ್ರಚಾರ

0

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ರೈತ ಸಂಘದ ಸದಸ್ಯರು ಬುಧವಾರ ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಡಿ.ಶ್ರೀನಿವಾಸ್ ಅವರ ಪರವಾಗಿ ಮತಯಾಚಿಸಿದರು.