Home Blog Page 482

ಪ್ರಚಾರ ಭರಾಟೆ ಪ್ರಾರಂಭ

0

ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಪ್ರಚಾರ ಭರಾಟೆ ತಾಲ್ಲೂಕಿನಲ್ಲಿ ಪ್ರಾರಂಭವಾಗಿದೆ.
ನಾಮಪತ್ರಗಳ ಪರಿಶಿಲನೆ ಕಾರ್ಯ ಮುಗಿದಿದ್ದು, ನಾಮಪತ್ರವನ್ನು ಹಿಂಪಡೆಯುವ ದಿನ ಫೆಬ್ರುವರಿ 4 ರ ಗುರುವಾರವಿದೆ. ಪಕ್ಷೇತರರಿಗೆ ಚಿಹ್ನೆಗಳು ನಂತರ ನೀಡಲಾಗುತ್ತದೆ. ಆದರೂ ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಕೆಲವು ಅಭ್ಯರ್ಥಿಗಳು ದೇವಸ್ಥಾನಗಳಲ್ಲಿ ಪೂಜೆಯಲ್ಲಿ ಪಾಲ್ಗೊಂಡು ಪ್ರಚಾರ ಕಾರ್ಯ ಪ್ರಾರಂಬಿಸಿದ್ದಾರೆ.
ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಅಭ್ಯರ್ಥಿಗಳು ಜೊತೆಯಾಗಿ ಬೆಂಬಲಿಗರೊಂದಿಗೆ ಮನೆಮನೆ ಬೇಟಿ ನೀಡುತ್ತಾ ಕರಪತ್ರಗಳನ್ನು ನೀಡುತ್ತಾ ಮತಯಾಚಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಸಿ.ವಿ.ಲೋಕೇಶ್ಗೌಡ ನಾಮಪತ್ರ ಸಲ್ಲಿಸಿದ ದಿನದಿಂದಲೇ ತಮ್ಮ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್, ‘ನಿಮ್ಮ ಅಮೂಲ್ಯ ಮತ ಒಂದು ಉತ್ಕೃಷ್ಟ ಭವಿಷ್ಯವನ್ನು ನಿರ್ಮಿಸಬಹುದು’ ಎಂದು ಕರಪತ್ರವನ್ನು ವಿತರಿಸುತ್ತಾ ಮತಯಾಚಿಸುತ್ತಿದ್ದಾರೆ.
ತಾಲ್ಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವವರಲ್ಲಿ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ವಿನುತಾ ಆರ್ ಶ್ರೀನಿವಾಸ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದವರು. ಮೊದಲು ಚೀಮಂಗಲ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಅವರು ಈ ಬಾರಿಯೂ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಿಲ್ಲಾ ಪಂಚಾಯತಿ ಹಾಲಿ ಸದಸ್ಯ ಸತೀಶ್ ಈ ಮೊದಲು ಜಂಗಮಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಬಾರಿ ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯ ಸಿ.ವಿ.ಲೋಕೇಶ್ಗೌಡ ವಿಧಾನ ಸಭೆ ಚುನಾವಣೆಗೆ ತಾವೊಮ್ಮೆ ಸ್ಪರ್ಧಿಸಿದ್ದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷರಾದಲ್ಲಿ ಸಂಪುಟ ಸ್ಥಾನಮಾನ ಸಿಗುವ ಸೌಲಭ್ಯ ಸಿಗುವುದರಿಂದ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಪೈಪೋಟಿ ನಡೆದಿದೆ.
ತಮ್ಮ ಪಕ್ಷಗಳ ಮುಖಂಡರ ಭಾವಚಿತ್ರಗಳಿರುವ ಹಾಗೂ ಸಾಧನೆಗಳ ವಿವರಗಳುಳ್ಳ ಕರಪತ್ರಗಳನ್ನು ಹಂಚುತ್ತಾ ಭರವಸೆಗಳನ್ನು ನೀಡುತ್ತಾ, ಹಿರಿಯರ ಕಾಲಿಗೆ ನಮಸ್ಕರಿಸುತ್ತಾ ಅಭ್ಯರ್ಥಿಗಳು ಮತಯಾಚಿಸುತ್ತಿದ್ದಾರೆ.

ಜಂಗಮಕೋಟೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

0

ತಾಲ್ಲೂಕಿನ ಜಂಗಮಕೋಟೆ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡಿರುವುದರಿಂದ ಜಂಗಮಕೋಟೆ ವ್ಯಾಪ್ತಿಯಲ್ಲಿ ಫೆಬ್ರುವರಿ 3 ರ ಬುಧವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಜಂಗಮಕೋಟೆ ಹೋಬಳಿ ವ್ಯಾಪ್ತಿಯ ವೆಂಕಟಾಪುರ, ಬಳುವನಹಳ್ಳಿ, ಸುಗಟೂರು, ಜಂಗಮಕೋಟೆ, ಜಂಗಮಕೋಟೆ ಕ್ರಾಸ್, ನಡಿಪಿನಾಯಕನಹಳ್ಳಿ, ನಾಗಮಂಗಲ, ಹೊಸಪೇಟೆ, ಚೊಕ್ಕಂಡಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಕಾರ್ಯ

0

ತಾಲ್ಲೂಕಿನಾದ್ಯಂತ ಫೆಬ್ರುವರಿ 13 ರಂದು ನಡೆಯಲಿರುವ ತಾಲ್ಲೂಕಿನ 5 ಜಿಲ್ಲಾ ಪಂಚಾಯತಿ ಮತ್ತು 17 ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಿತು.
ಐದು ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ 36 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕೊಂಡರಾಜನಹಳ್ಳಿ ಕೆ.ವಿ.ಶ್ರೀನಾಥ ಅವರ ನಾಮಪತ್ರ ತಿರಸ್ಕೃತವಾಗಿದೆ. 17 ತಾಲ್ಲೂಕು ಪಂಚಾಯತಿ ಸ್ಥಾನಗಳಿಗೆ 66 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಲ್ಲವೂ ಅಂಗೀಕೃತವಾಗಿವೆ.
‘ಒಟ್ಟು 169 ಮತಗಟ್ಟೆಗಳಿವೆ. ಫೆಬ್ರುವರಿ 8 ರಂದು ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲಿದ್ದು, ಚುನಾವಣೆಯು ಶಾಂತಯುತವಾಗಿ ನಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ತಿಳಿಸಿದ್ದಾರೆ.
ಕಾಂಗ್ರೆಸ್ ಬಂಡಾಯ: ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ, ಹಿರಿಯ ಕಾಂಗ್ರೆಸ್ ಮುಖಂಡರ ಮಧ್ಯಸ್ತಿಕೆಯಲ್ಲಿ ಒಂದಾದರೂ ಜಿಲ್ಲಾ ಪಂಚಾಯತಿಯ ಮೂರು ಕ್ಷೇತ್ರಗಳಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಓಬಳಪ್ಪ, ಗಂಜಿಗುಂಟೆ ಕ್ಷೇತ್ರದಲ್ಲಿ ದೊಗರನಾಯಕನಹಳ್ಳಿ ವೆಂಕಟೇಶ್, ಅಬ್ಲೂಡು ಕ್ಷೇತ್ರದಲ್ಲಿ ತಾತಹಳ್ಳಿ ನರಸಿಂಹಯ್ಯ ಮತ್ತು ಶಿವಮೂರ್ತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸಿ.ಪಿ.ಎಂ ನ ಏಕೈಕ ಅಭ್ಯರ್ಥಿ: ಸಿ.ಪಿ.ಐ.ಎಂ ಪಕ್ಷದಿಂದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸದಾನಂದ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿಗಳು: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ವಿನುತಾ ಶ್ರೀನಿವಾಸ್ ಚೀಮಂಗಲ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್ ದಿಬ್ಬೂರಹಳ್ಳಿ ಕ್ಷೇತ್ರ, ಗೋಪಾಲರೆಡ್ಡಿ ಗಂಜಿಗುಂಟೆ ಕ್ಷೇತ್ರ, ವೆಂಕಟೇಶಪ್ಪ ಅಬ್ಲೂಡು ಕ್ಷೇತ್ರ ಮತ್ತು ನಿರ್ಮಲಾ ಮುನಿರಾಜು ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಜಿ.ಪಂ. ಜೆಡಿಎಸ್ ಅಭ್ಯರ್ಥಿಗಳು: ತನುಜಾ ರಘು ಚೀಮಂಗಲ ಕ್ಷೇತ್ರ, ಚಿಕ್ಕನರಸಿಂಹಪ್ಪ ದಿಬ್ಬೂರಹಳ್ಳಿ ಕ್ಷೇತ್ರ, ಡಾ.ಜಯರಾಮರೆಡ್ಡಿ ಗಂಜಿಗುಂಟೆ ಕ್ಷೇತ್ರ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಅಬ್ಲೂಡು ಕ್ಷೇತ್ರ ಮತ್ತು ನಳಿನಾ ಮಂಜುನಾಥ್ ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಆಮ್ ಆದ್ಮಿ ಬೆಂಬಲಿತ ಅಭ್ಯರ್ಥಿ: ಪಲಿಚೇರ್ಲು ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಕನ್ನಂಪಲ್ಲಿ ನಾಗರತ್ನಮ್ಮ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಆಮ್ ಆದ್ಮಿ ಪಕ್ಷವು ಇವರನ್ನು ಬೆಂಬಲಿಸುತ್ತಿದೆ.
ಸರ್ವೋದಯ ಕರ್ನಾಟಕ ಪಕ್ಷ ಮತ್ತು ಸಮಾಜವಾದಿ ಪಕ್ಷ ಕಣಕ್ಕೆ:ಸಾದಲಿಯ ಎಸ್.ಡಿ.ಶ್ರೀನಿವಾಸ್ ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದರೆ, ಸಾದಲಿಯ ಎಸ್.ವಿ.ಶ್ರೀನಿವಾಸ್ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದಾರೆ.

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಾಹತ್ಯಾ ಪ್ರವೃತ್ತಿ

0

ಇತ್ತೀಚಿನ ದಿನಗಳಲ್ಲಿ ದಿನ ಪತ್ರಿಕೆಯ ಒಂದಲ್ಲ ಒಂದು ಕಡೆ ದೇಶದ ಒಂದಲ್ಲ ಒಂದು ಕಡೆ ವಿದ್ಯಾರ್ಥಿಗಳ ಆತ್ಮಹತ್ಯೆಯ ಕುರಿತು ವರದಿ ಪ್ರಕಟವಾಗುತ್ತಿರುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ಈ ಆತ್ಮಹತ್ಯಾ ಪ್ರವೃತ್ತಿ ಅತ್ಯಂತ ಅಘಾತಕಾರಿಯಾದುದ್ದಾಗಿ ಬೆಳೆದು ಆತಂಕ ಹೆಚ್ಚಿಸುವಂಥದ್ದು. ಬೆಳಗಬೇಕಾದವರು ಹೀಗೆ ನಾಶವಾಗುತ್ತಿರುವುದು ಸ್ವಾಸ್ಥ್ಯ ಸಮಾಜದ ಲಕ್ಷಣವಲ್ಲ. ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಇದರಿಂದ ನಿರೀಕ್ಷಿಸುವುದೂ ಕಷ್ಟ. ಪತ್ರಿಕೆಗಳ ವರದಿಯನ್ನು ಕೇವಲ ವರದಿಯೆಂದು ತಾತ್ಸರ ಮಾಡುವುದು ಸಮಸ್ಯೆಯ ಗಂಭೀರಯತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಈ ಕುರಿತು ಒಟ್ಟಾರೆ ಸಮಾಜದಲ್ಲಿ ಜಾಗೃತಿ ಮೂಡದಿದ್ದಲ್ಲಿ ಇದನ್ನು ತಡೆಗಟ್ಟಲು ಬೇಕಾದ ಮಾರ್ಗೊಪಾಯಗಳನ್ನು ಕಂಡುಕೊಳ್ಳದಿದ್ದರೆ ಭವಿಷ್ಯವೆನ್ನುವುದು ಭಯಾನಕವಾಗಬಹುದು.
ಪ್ರಾಥಮಿಕ ಶಾಲೆಗೆ ಹೋಗುತ್ತಿರುವ ಎಂಟು – ಹತ್ತು ವರ್ಷದ ಮಗುವೊಂದು – ಶಾಲೆಯಲ್ಲಿ ಶಿಕ್ಷಕರು ಬೈದರು ಎಂತಲೋ ಸಹಪಾಠಿಗಳು ಅಣಕಿಸಿದರು ಎಂತಲೂ ಮನೆಗೆ ಬಂದು ನೇಣಿಗೆ ಶರಣಾಗುವುದು – ಅಮ್ಮ ದೋಸೆಯೊಂದಿಗೆ ಪಲ್ಯವನ್ನು ಮಾಡಿಲ್ಲ ಎಂದು ನೇಣಿಗೆ ಶರಣಾಗುವುದು – ಇಲ್ಲ ವಿಷ ಸೇವಿಸುವುದು ನೋಡಿದರೆ ನೋವಾಗುತ್ತದೆ. ಯಾಕೆ ಇವರೆಲ್ಲ ಇಷ್ಟೊಂದು ಸೂಕ್ಷ್ಮವಾಗುತ್ತಿದ್ದಾರೆ ಒಂದು ಕ್ಷಣದ ಅವಸರದಲ್ಲಿ ಇಡೀ ಕುಟುಂಬವನ್ನು ದುಃಖದ ಮಡುವಿನಲ್ಲಿ ಕೆಡುವುತ್ತಾರೆ ಎಂದು ಯೋಚಿಸುತ್ತಾ ಹೋದರೆ – ತಪ್ಪುಗಳೆಲ್ಲಿಂದ ಪ್ರಾರಂಭವಾಗುತ್ತವೆ ಎಂದು ನಿರ್ಧಿಷ್ಟವಾಗಿ ತಿಳಿದುಕೊಳ್ಳುವುದೇ ಕಷ್ಟ.
ಬಹುಶಃ ತಂದೆ ತಾಯಿ ಮತ್ತು ಒಂದೋ – ಎರಡೋ ಮಕ್ಕಳು ಮಾತ್ರವಿರುವ ಚಿಕ್ಕ ಚಿಕ್ಕ ಕುಟುಂಬ ವ್ಯವಸ್ಥೆ ಕೂಡ ಕಾರಣವಾಗಿರಬಹುದೇನೋ ಅವಿಭಕ್ತ ಕುಟುಂಬ ಪದ್ಧತಿಯಿಂದಾಗಿ ದೊಡ್ಡಪ್ಪ – ದೊಡ್ಡಮ್ಮ – ಅಜ್ಜ – ಅಜ್ಜಿ ಹೀಗೆ ಒಬ್ಬರಲ್ಲ ಒಬ್ಬರು ಮಕ್ಕಳ ಯೋಗಕ್ಷೇಮದ ಕುರಿತು ನಿಗಾವಹಿಸುತ್ತಿದ್ದರು. ಅವರಲ್ಲಿ ಭರವಸೆ ತುಂಬುತ್ತಿದ್ದರು. ಬೆನ್ನು ತಟ್ಟುತ್ತಿದ್ದರು. ತರಗತಿ ಅನುತ್ತೀರ್ಣವಾದಾಗಲೂ – ಅದೇನೂ ಅಲ್ಲ ಎಂಬಂತೆ ಬಯ್ಯುವ ಯಾ ದಂಡಿಸುವ ಪಾಲಕರಿಂದ ಕಾಪಾಡುತ್ತಿದ್ದರು. ಈಗ ಮಕ್ಕಳ ಮೇಲೆ ನೇರವಾದ ಪರಿಣಾಮಗಳಾಗುತ್ತಿದ್ದು, ಅದನ್ನು ತಡೆದುಕೊಳ್ಳುವ ಶಕ್ತಿಯಾಗಲೀ – ತಿಳುವಳಿಕೆಯಾಗಲೀ ಅವರಿಗಿಲ್ಲದ್ದರಿಂದ ಸಹಜವಾಗಿ ಸಾವಿನ ಮನೆಯ ಕದ ತಟ್ಟುತ್ತಾರೆ ಎನಿಸುತ್ತದೆ. ತಾವು ನಡೆವಾಗ ಬಿದ್ದು ಪೆಟ್ಟಾದರೆ ಅಥವಾ ಸೈಕಲ್ ಕಲಿಯುವಾಗ ಬಿದ್ದು ಕೈ ಕಾಲು ತೆರಚಿ ಪೆಟ್ಟಾದರೆ – ಮಕ್ಕಳಿಗೆ ದೈಹಿಕವಾಗಿ ನೋವಾಗುತ್ತದೆ. ಆದರೆ ಅವರದನ್ನು ನಿಭಾಯಿಸಿಕೊಳ್ಳುತ್ತಾರೆ. ಅದೇ ಏನೋ ತಪ್ಪು ಮಾಡಿದರೆಂದು ಶಾಲಾ ಶಿಕ್ಷಕರು ಒಂದು ಪೆಟ್ಟು ಹೊಡೆದರೆ ಅದರ ನೋವಿಗಿಂತ ಎಲ್ಲರೆದರೂ ಹೊಡೆದರೆಂಬ ಮಾನಸಿಕ ನೋವು ಅಧಿಕವಾಗಿ ಬಿಡುತ್ತದೆ. ಪ್ರತಿಯೊಂದಕ್ಕೂ ಹೀಗೆ ಸೂಕ್ಷ್ಮವಾಗುತ್ತ ಸಾಗಿದರೆ – ಬದುಕನ್ನೆದುರಿಸುವುದು ಕಷ್ಟವಾಗುತ್ತದೆ. ಶಿಕ್ಷಕರು ಕೊಡುವ ಚಿಕ್ಕ ಪುಟ್ಟ ಶಿಕ್ಷೆಗಳು ತಮ್ಮನ್ನು ತಿದ್ದಲು – ತಮ್ಮನ್ನು ಸರಿದಾರಿಗೆ ಒಯ್ಯಲು ಎಂಬ ತಿಳುವಳಿಕೆ ಅವರಿಗೆ ಮೂಡುವಂತೆ ಆಗುವುದು ಅಗತ್ಯ. ಒಂದು ಚಿಕ್ಕ ಮಾತು – ಚಿಕ್ಕ ಪೆಟ್ಟು ಬದುಕನ್ನೇ ಕೊನೆಗೊಳಿಸಿಕೊಳ್ಳುವ ಹಂತವನ್ನು ತಲುಪಬಾರದು ದೋಸೆಗೆ ಪಲ್ಯವನ್ನಿಂದು ಮಾಡದಿದ್ದರೆ ಬದುಕಲ್ಲಿ ತಿನ್ನುವ ಅಂದಿನ ದೋಸೆಯೇ ಕೊನೆಯ ದೋಸೆಯಲ್ಲ ಎಂಬ ಸ್ಪಷ್ಟ ತಿಳುವಳಿಕೆ ಹೊಂದುವುದು ಅಗತ್ಯ. ಆದರೆ ಇದನ್ನು ತಿಳಿಸಿ ಹೇಳುವುದು ಹೇಗೆ ಮತ್ತು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.
ಪಾಲಕರ ಜವಾಬ್ದಾರಿ ಮತ್ತು ಶಿಕ್ಷಕರ ಜವಾಬ್ದಾರಿ ಬಹಳ ಮುಖ್ಯವಾದದ್ದು. ಆದಷ್ಟರಮಟ್ಟಿಗೆ ಮಕ್ಕಳು ಪ್ರತಿಯೊಂದು ವಿಷಯದಲ್ಲೂ ಅತೀ ಸೂಕ್ಷ್ಮವಾಗಿ ಪ್ರತಿಕ್ರಿಯಿಸದಂತೆ ನೋಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಬಹುಶಃ ಪ್ರಾಥಮಿಕ ಹಂತದಲ್ಲೂ ಆಪ್ತ ಸಲಹಾ ವ್ಯವಸ್ಥೆ ಅಗತ್ಯವೇನೋ.
ಶಾಲೆ – ಕಾಲೇಜುಗಳೆಂದರೆ ಪರೀಕ್ಷಾ ಪದ್ಧತಿ ಇದ್ದದ್ದೇ. ಅದನ್ನು ಧೈರ್ಯವಾಗಿ ಎದುರಿಸುವ ಮನಸ್ಥಿತಿ ಮೂಡಬೇಕು. ಕೇವಲ ಪಠ್ಯದ ಅಧ್ಯಯನವಷ್ಟೆ ಶಿಕ್ಷಣವಲ್ಲ. ಉತ್ತೀರ್ಣ ಅಥವಾ ಅನುತ್ತೀರ್ಣ ಪ್ರಥಮ ದರ್ಜೆ ಅಥವಾ ತೃತೀಯಾ ದರ್ಜೆ ಇದನ್ನು ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಳ್ಳದಂತೆ ನೋಡಿಕೊಳ್ಳುವ ದೃಷ್ಠಿಯಿಂದ ಅವರನ್ನು ತಯಾರುಮಾಡಬೇಕು ಇಂದು ಅನುತ್ತೀರ್ಣನಾದವನು ನಾಳೆ ಉತ್ತೀರ್ಣನಾಗಬಹುದು. ತೃತೀಯ ದರ್ಜೆಯವನು ಬರುವ ವರ್ಷಗಳಲ್ಲಿ ಪ್ರಥಮ ದರ್ಜೆ ಪಡೆಯಬಹುದು. ಆದರೆ ಹಾಗಾಗಲು ಆತ/ಆಕೆ ಬದುಕಬೇಕು. ಬದುಕಿದ್ದು ಏನನ್ನಾದರೂ ಸಾಧಿಸಬಹುದುದೇ ವಿನಃ ಸತ್ತು ಏನನ್ನು ಸಾಧಿಸಲು ಸಾಧ್ಯವಿಲ್ಲ. ಹೆತ್ತವರಿಗೆ ಶಾಶ್ವತವಾಗಿ ನೋವು ನೀಡುವುದನ್ನು ಬಿಟ್ಟು ಇನ್ನೇನೂ ಸಾಧ್ಯವಾಗುವುದಿಲ್ಲ. ಒಂದು ಕ್ಷಣದ ಅವಿವೇಕ ಅಥವಾ ಅಚಾತುರ್ಯ ಸಂಸಾರವನ್ನೇ ನಾಶಮಾಡಿಬಿಡಬಹುದು. ಹೀಗಾಗದಂತೆ ಎಚ್ಚರವಹಿಸುವುದರತ್ತಲೇ ಎಲ್ಲರ ಚಿತ್ತ ಇರಬೇಕಾದದ್ದು ಅಗತ್ಯ. ಇಂದಿನ ಸಿನೆಮಾ ಮತ್ತು ಟಿ.ವಿ. ಪ್ರಪಂಚ ಕ್ರೌರ್ಯವನ್ನೆ ವಿಜೃಂಭಿಸುತ್ತಿರುವುದು ಕೂಡ ಪರಿಸ್ಥಿತಿಯ ವಿಷಮತೆಗೆ ಆಜ್ಯವನ್ನು ಸುರಿಯುತ್ತಿದೆ. ಸ್ವಾಸ್ಥ್ಯ ಸಮಾಜವಿದ್ದಾಗ ಮಾತ್ರ ಅದಕ್ಕೊಂದು ಅರ್ಥ. ಹೀಗಾಗಿ ಇಂದಿನ ದೃಶ್ಯ ಮಾಧ್ಯಮಗಳ ಮೇಲೆ ಸರಕಾರ ಸದಾ ಹದ್ದಿನ ಕಣ್ಣಿಟ್ಟು ನೋಡಬೇಕಾಗಿದೆ. ಚಿಕ್ಕ ಮಕ್ಕಳ ಮನಸ್ಸುಗಳನ್ನು ಹದಗೆಡಿಸುವ ಅಂಶವಿದೆ ಎಂದಾದರೆ ನಿರ್ದಾಕ್ಷಿಣ್ಯವಾಗಿ ಕಿತ್ತೋಗೆಯುವ ಕಾನೂನು ಬೇಕು. ಅಕ್ರಮವಾಗಿ ಏನಾದರೂ ಮಾರುಕಟ್ಟೆಗೆ ಪ್ರವೇಶಿಸಿದರೆ ಕಠಿಣಶಿಕ್ಷೆ ಕಾದಿರಬೇಕು.
ಇನ್ನೂ ಹದಿಹರೆಯದವರಲ್ಲಿ ಪ್ರೀತಿ – ಪ್ರೇಮದ ಆಕರ್ಷಣೆ ಸಹಜ. ಹೀಗಂತ ಅದೇ ಕಾರಣಕ್ಕಾಗಿ ಆತ್ಮಹತ್ಯೆಗಿಳಿಯುವುದು ಅಥವಾ ಅದಕ್ಕೆ ನೂಕೂವುದು – ಸುಸಂಸ್ಕøತ ನಾಗರೀಕತೆಯ ಲಕ್ಷಣವಲ್ಲ. ಆ ವಯಸ್ಸಿನ ಚಿಕ್ಕ ಪುಟ್ಟ ಹುಡುಗಾಟಿಕೆಗಳನ್ನೆ ಇನ್ನಿಲ್ಲದಂತೆ ದೊಡ್ಡದಾಗಿ ಮಾಡುವುದು – ಗದ್ದಲವೆಬ್ಬಿಸುವುದು ಆ ಮೂಲಕ ಆತ್ಯಹತ್ಯೆಯತ್ತ ಅವರು ಮುಖ ಮಾಡುವಂತೆ ಮಾಡುವುದು ಸಲ್ಲದು. ಸೂಕ್ತ ತಿಳಿವಳಿಕೆ ಮಾರ್ಗದರ್ಶನ ನೀಡುವುದೇ ಸರಿಯಾದ ಕ್ರಮ ಹಾಗಲ್ಲದೇ ಹೋದರೆ ಬದುಕಿನ ಅನುಭಗಳಿಲ್ಲದ ಸಿಹಿ – ಕಹಿ ಭಾವನೆಗಳೇ ಬದುಕೆಂದು ಭ್ರಮಿಸಿದವರನ್ನು ಸಂಬಾಳಿಸಿ ಸರಿದಾರಿಗೆ ತರುವುದು ಕಷ್ಟದ ಕೆಲಸ.
ಇಂಗ್ಲೀಷ್‍ನ ಖ್ಯಾತ ಕವಿಯತ್ರಿ ಎಮಿಲಿ ಡಿಕನ್‍ಸನ್‍ಳಿಗೆ ಆತ್ಯಹತ್ಯೆ ಎನ್ನುವುದೇ ಒಂದು ಮೋಹ – ಸೆಳೆತವಾಗಿತ್ತು. ಅವಳದ್ದೇ ಕವಿತೆ “Becacuse I could not stop for death” ನೋಡಿ ಸಾವನ್ನು ಪ್ರಿಯಕರನಂತೆ ಕಾಣುವ ವಿಚಿತ್ರ ಕವಿತೆ. ಕೊನೆಗೂ ಅವಳ ಬದುಕು ಆತ್ಮಹತ್ಯೆಯಲ್ಲೆ ಅಂತ್ಯಗೊಂಡಿದ್ದು, ಹಾಗೆ ನಮ್ಮ ವಿದ್ಯಾರ್ಥಿಗಳಿಗೂ ಆತ್ಮಹತ್ಯೆ ಎನ್ನುವುದು ಗೀಳಾಗಬಾರದು. ಸಾವೇ ಸಮಸ್ಯೆಗಳಿಗೆಲ್ಲಾ ಉತ್ತರ ಎಂಬಂತಹ ತತ್ವ ಅವರಿಗೆ ಭೋದೆಯಾಗಕೂಡದು. ಕೆಲವರು ಅತಿಯಾದ ನೋವಾದಾಗ ಹೇಳುತ್ತಾರೆ. “ಓ ದೇವರೆ ನನ್ನ ಜೀವ ಯಾಕಾದರೂ ಹೋಗುವುದಿಲ್ಲವೋ” ಎಂದು ಆದರೆ ಹೀಗೆ ನೋವಿನಿಂದ ಹೇಳುವ ಬದಲಿಗೆ “ಓ ದೇವರೆ ಯಾರ ಜೀವ ಯಾಕಾದರೂ ಹೋಗಲೊಲ್ಲದು ಯಾಕೆ” ಎಂದು ಹೇಳುತ್ತಾ ನನ್ನ ಜೀವದ ಕುರಿತು ಜೀವ ಪ್ರೀತಿಯನ್ನು ಬೆಳೆಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾದರೆ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರವೃತ್ತಿಗೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು.
ರವೀಂದ್ರ ಭಟ್ ಕುಳಿಬೀಡು

ನಾಮಪತ್ರ ಸಲ್ಲಿಕೆ

0

ತಾಲ್ಲೂಕಿನ 5 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಒಟ್ಟು 28 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್(9), ಜೆಡಿಎಸ್(6), ಬಿಜೆಪಿ(3), ಎಸ್ಪಿ(1), ಸಿಪಿಐಎಂ(1), ಸರ್ವೋದಯ ಪಕ್ಷ(1)ಪಕ್ಷೇತರ(7).
ಜಿಲ್ಲಾ ಪಂಚಾಯಿತಿ ಕ್ಷೇತ್ರ :
ಅಬ್ಲೂಡು ಕ್ಷೇತ್ರ: (ಅನುಸೂಚಿತ ಪಂಗಡ) :
ಕಾಂಗ್ರೆಸ್: ವೆಂಕಟೇಶಪ್ಪ ತಾತಹಳ್ಳಿ,
ಜೆಡಿಎಸ್: ಮುನಿಯಪ್ಪ ಎಹುಣಸೇನಹಳ್ಳಿ,
ಪಕ್ಷೇತರ: ಎನ್.ನರಸಿಂಹಪ್ಪ, ತಾತಹಳ್ಳಿ, ಟಿ.ಶ್ರೀನಿವಾಸಯ್ಯ ಅಪ್ಪೇಗೌಡನಹಳ್ಳಿ, ಎಂ.ಎನ್.ಶಿವಮೂರ್ತಿ ತಾತಹಳ್ಳಿ.
ಚೀಮಂಗಲ ಕ್ಷೇತ್ರ: ( ಸಾಮಾನ್ಯ ಮಹಿಳೆ) :
ಕಾಂಗ್ರೆಸ್: ವಿನುತಾ ಆರ್ ಶ್ರೀನಿವಾಸ್, ಕೆ ಮುತ್ತುಕದಹಳ್ಳಿ.
ಜೆಡಿಎಸ್: ಬಿ.ಸಿ.ತನುಜ ರಘು, ತಾದೂರು,
ಬಿಜೆಪಿ: ಗೀತಾ ಶಂಕರ್, ಚೀಮಂಗಲ.
ದಿಬ್ಬೂರಹಳ್ಳಿ ಕ್ಷೇತ್ರ: (ಅನುಸೂಚಿತ ಜಾತಿ) :
ಕಾಂಗ್ರೆಸ್: ಕೆ.ಎಂ.ಸತೀಶ್, ಕಂಬದಹಳ್ಳಿ, ವಿ.ನಾರಾಯಣಪ್ಪ ಕಂಬದಹಳ್ಳಿ, ಡಿ.ವಿ.ಓಬಳಪ್ಪ ಎಸ್ ದೇವಗಾನಹಳ್ಳಿ.
ಜೆಡಿಎಸ್: ವಿ.ನಾರಾಯಣಸ್ವಾಮಿ ಇರಗಪ್ಪನಹಳ್ಳಿ, ಚಿಕ್ಕನರಸಿಂಹಪ್ಪ ಹಿರಿಯಲಚೇನಹಳ್ಳಿ.
ಬಿಜೆಪಿ: ಎಸ್.ಎನ್.ನಾಗರಾಜ್, ಶೆಟ್ಟಹಳ್ಳಿ, ನರಸಿಂಹಪ್ಪ ಸೀತಹಳ್ಳಿ.
ಪಕ್ಷೇತರ: ಎಸ್.ಜಿ.ಗಣೇಶ್ ಸಾದಲಿ, ಜಿ.ಪಿ.ಮುನಿಕೃಷ್ಣ ಜರುಗಹಳ್ಳಿ, ಆಂಜಿನಪ್ಪ ದಿಬ್ಬೂರಹಳ್ಳಿ, ಕೆ.ವಿ.ಶ್ರೀನಾಥ ಕೊಂಡರಾಜನಹಳ್ಳಿ,
ಸಮಾಜವಾದಿ ಪಕ್ಷ: ಎಸ್.ವಿ.ಶ್ರೀನಿವಾಸ್ ಸಾದಲಿ,
ಸರ್ವೋದಯ ಕರ್ನಾಟಕ ಪಕ್ಷ: ಎಸ್.ಡಿ.ಶ್ರೀನಿವಾಸ್ ಸಾದಲಿ.
ಜಂಗಮಕೋಟೆ ಕ್ಷೇತ್ರ: ( ಹಿಂದುಳಿದ ಅ ವರ್ಗ ಮಹಿಳೆ ) :
ಕಾಂಗ್ರೆಸ್: ಪಿ.ನಿರ್ಮಲಾ ಮುನಿರಾಜು, ಮಳ್ಳೂರು.
ಜೆಡಿಎಸ್: ನಳಿನಾಮಂಜುನಾಥ್ ಸೊಣ್ಣೇನಹಳ್ಳಿ.
ಗಂಜಿಗುಂಟೆ ಕ್ಷೇತ್ರ: (ಸಾಮಾನ್ಯ) :
ಕಾಂಗ್ರೆಸ್: ಟಿ.ಎಸ್.ಗೋಪಾಲರೆಡ್ಡಿ, ದೊಡ್ಡತೇಕಹಳ್ಳಿ. ಡಿ.ವಿ.ವೆಂಕಟೇಶ್, ದೊಗರನಾಯಕನಹಳ್ಳಿ.
ಜೆಡಿಎಸ್: ಡಿ.ಬಿ.ವೆಂಕಟೇಶ್, ಬಶೆಟ್ಟಹಳ್ಳಿ.
ಸಿಪಿಐ (ಎಂ): ಸದಾನಂದಚಾರಿ, ವೆಂಕಟಕೃಷ್ಣಮ್ಮನಹಳ್ಳಿ.
 
ತಾಲ್ಲೂಕು ಪಂಚಾಯತಿ ಕ್ಷೇತ್ರ:
೦೧. ಅಬ್ಲೂಡು ತಾ.ಪಂ.ಕ್ಷೇತ್ರ: (ಸಾಮಾನ್ಯ)
ಕಾಂಗ್ರೆಸ್: ಕೆ.ಎಂ.ಶ್ರೀನಿವಾಸ ಕೋಟಹಳ್ಳಿ, ಮುನಿರಾಜ ಅಬ್ಲೂಡು.
ಜೆಡಿಎಸ್: ಕೆ.ಎಸ್.ಕನಕಪ್ರಸಾದ್ ತಾತಹಳ್ಳಿ.
ಬಿಜೆಪಿ: ಆರ್.ಎಂ.ಚನ್ನಕೇಶವ, ಕುಂದಲಗುರ್ಕಿ.
ಸವೋದಯ ಕರ್ನಾಟಕ ಪಕ್ಷ: ಎಸ್.ಎಂ.ಗೋವಿಂದಪ್ಪ, ಶೆಟ್ಟಿಹಳ್ಳಿ.
೦೨. ಆನೂರು ತಾ.ಪಂ.ಕ್ಷೇತ್ರ: ( ಅನುಸೂಚಿತ ಪಂಗಡ) :
ಕಾಂಗ್ರೆಸ್: ವಿ.ನರಸಿಂಹಪ್ಪ, ಎ.ಹುಣಸೇನಹಳ್ಳಿ,
ಜೆಡಿಎಸ್: ಕೆ.ಬಿ.ಮಂಜುನಾಥ ಹಾಗು ಹೆಚ್.ಎಂ.ರಾಮಾಂಜಿನಪ್ಪ ಎ.ಹುಣಸೇನಹಳ್ಳಿ.
೦೩. ಬಶೆಟ್ಟಿಹಳ್ಳಿ ತಾ.ಪಂ.ಕ್ಷೇತ್ರ: ( ಸಾಮಾನ್ಯ)
ಕಾಂಗ್ರೆಸ್: ಜಿ.ಕೆ.ಸೊಣ್ಣೇಗೌಡ ಗೌಡನಹಳ್ಳಿ.
ಜೆಡಿಎಸ್: ಬಿ.ವಿ.ನಾರಾಯಣಸ್ವಾಮಿ, ಬಶೆಟ್ಟಿಹಳ್ಳಿ ಹಾಗೂ ಆರ್.ವೆಂಕಟರೆಡ್ಡಿ ಕಾಚನಾಯಕನಹಳ್ಳಿ.
ಬಿಜೆಪಿ: ಬಿ.ಬೈಯಾರೆಡ್ಡಿ, ಕೊಂಡರಾಜನಹಳ್ಳಿ.
೦೪. ಭಕ್ತರಹಳ್ಳಿ ತಾ.ಪಂ.ಕ್ಷೇತ್ರ: (ಸಾಮಾನ್ಯ ಮಹಿಳೆ)
ಕಾಂಗ್ರೆಸ್: ಎಂ.ಕವಿತ ಭಕ್ತರಹಳ್ಳಿ.
ಜೆಡಿಎಸ್: ಚಂದ್ರಕಲಾಬೈರೇಗೌಡ, ಭಕ್ತರಹಳ್ಳಿ
ಬಿಜೆಪಿ: ಪದ್ಮನಾಗರಾಜ ಕಾಕಚೊಕ್ಕಂಡಹಳ್ಳಿ.
೦೫. ಚೀಮಂಗಲ ತಾ.ಪಂ.ಕ್ಷೇತ್ರ: (ಅನುಸೂಚಿತ ಪಂಗಡ ಮಹಿಳೆ)
ಕಾಂಗ್ರೆಸ್: ಬಿ.ಎನ್.ಸಂತೋಷ್ಕುಮಾರ್ ಬೆಳ್ಳೂಟಿ.
ಜೆಡಿಎಸ್: ರಾಜಶೇಖರ ಮಳಮಾಚನಹಳ್ಳಿ.
ಬಿಜೆಪಿ: ಜಿ.ಮುನಿರಾಜು ಅರಿಕೆರೆ,
ಪಕ್ಷೇತರ: ಮುನಿಕೃಷ್ಣಪ್ಪ ಚೀಮಂಗಲ.
೦೬. ದೇವರಮಳ್ಳೂರು ತಾ.ಪಂ ಕ್ಷೇತ್ರ: ( ಸಾಮಾನ್ಯ ಮಹಿಳೆ)
ಕಾಂಗ್ರೆಸ್: ಆರ್.ಪಂಕಜ, ಸೊಣ್ಣೇನಹಳ್ಳಿ
ಜೆಡಿಎಸ್: ಕೃಷ್ಣ ಕುಮಾರಿ, ಕೊತ್ತನೂರು
ಬಿಜೆಪಿ : ರತ್ನಮ್ಮ, ದೇವರಮಳ್ಳೂರು
೦೭. ದಿಬ್ಬೂರಹಳ್ಳಿ ಕ್ಷೇತ್ರ: ( ಅನುಸೂಚಿತ ಜಾತಿ ಮಹಿಳೆ)
ಕಾಂಗ್ರೆಸ್: ಶಂಕರಮ್ಮ, ಜರುಗಹಳ್ಳಿ, ೨) ತಬಿತಾ, ದಿಬ್ಬೂರಹಳ್ಳಿ
ಜೆಡಿಎಸ್: ಸವಿತಾ, ಬೈಯ್ಯಪ್ಪನಹಳ್ಳಿ.
೦೮. ಗಂಜಿಗುಂಟೆ ತಾ.ಪಂ ಕ್ಷೇತ್ರ: (ಅನುಸೂಚಿತ ಪಂಗಡ ಮಹಿಳೆ )
ಕಾಂಗ್ರೆಸ್: ಅನಿತಾ.ಹೆಚ್. ಹಳೆಗಂಜಿಗುಂಟೆ
ಜೆಡಿಎಸ್: ನಾಗರತ್ನಮ್ಮ ಬಿನ್ನಮಂಗಲ, ದೀಪ, ಹಕ್ಕಿಪಿಕ್ಕಿ ಕಾಲೋನಿ, ಶ್ಯಾಮಲ, ಗೊರ್ಲಗುಮ್ಮನಹಳ್ಳಿ.
೦೯. ಹಂಡಿಗನಾಳ ತಾ.ಪಂ ಕ್ಷೇತ್ರ: ( ಸಾಮಾನ್ಯ)
ಕಾಂಗ್ರೆಸ್: ವಿ.ಬಿ.ನಾರಾಯಣಸ್ವಾಮಿ, ವರದನಾಯಕನಹಳ್ಳಿ,
ಜೆಡಿಎಸ್: ಕೆ.ಲಕ್ಷ್ಮಿನಾರಾಯಣ, ಅಪ್ಪೇಗೌಡನಹಳ್ಳಿ, ಕೆ.ಆನಂದಮೂರ್ತಿ, ಅಪ್ಪೇಗೌಡನಹಳ್ಳಿ
ಬಿಜೆಪಿ: ಎಂ.ಬಿ.ಬೈರಾರೆಡ್ಡಿ, ಮುತ್ತಗದಹಳ್ಳಿ.
೧೦.ಹೊಸಪೇಟೆ ತಾಲ್ಲೂಕು ಪಂಚಾಯತಿ ಕ್ಷೇತ್ರ: (ಸಾಮಾನ್ಯ ಮಹಿಳೆ)
ಕಾಂಗ್ರೆಸ್: ಕೆ.ಶೋಭಾಶಶಿಕುಮಾರ್, ಹೊಸಪೇಟೆ.
ಜೆಡಿಎಸ್: ಭಾರತಮ್ಮಮಂಜುನಾಥ್ ಹೊಸಹಳ್ಳಿ.
ಬಿಜೆಪಿ: ಕೆ.ಆರ್.ರೂಪ ಎಂ.ಆರ್.ಮುನಿರಾಜು. ಜೆ ವೆಂಕಟಾಪುರ
೧೧. ಜಂಗಮಕೋಟೆ ತಾ.ಪಂ ಕ್ಷೇತ್ರ: (ಸಾಮಾನ್ಯ)
ಕಾಂಗ್ರೆಸ್: ಜೆ.ಎನ್.ನಾಗರಾಜು ಜಂಗಮಕೋಟೆ,
ಜೆಡಿಎಸ್: ಜೆ.ಎಂ.ವೆಂಕಟೇಶ್ ಜಂಗಮಕೋಟೆ.
ಬಿಜೆಪಿ: ಎಸ್.ಆರ್.ಆನಂದ ಜೆ.ವೆಂಕಟಾಪುರ
೧೨.ಮೇಲೂರು ತಾ.ಪಂ.ಕ್ಷೇತ್ರ: (ಅನುಸೂಚಿತ ಜಾತಿ)
ಕಾಂಗ್ರೆಸ್: ಶಿವಾನಂದ ಗಂಗನಹಳ್ಳಿ,
ಜೆಡಿಎಸ್: ಮುನಿಯಪ್ಪ ಮಳ್ಳೂರು,
ಪಕ್ಷೇತರ: ವಿ.ನಾರಾಯಣಪ್ಪ ಕಂಬದಹಳ್ಳಿ, ಹಾಗು ದ್ಯಾವಪ್ಪ ಮಳ್ಳೂರು.
೧೩. ಪಲಿಚೇರ್ಲು ತಾ.ಪಂ.ಕ್ಷೇತ್ರ: (ಹಿಂದುಳಿದ ವರ್ಗ ‘ಅ’ಮಹಿಳೆ)
ಕಾಂಗ್ರೆಸ್: ನಳಿನಾದೇವಿ ದೊಗರನಾಯಕನಹಳ್ಳಿ,
ಜೆಡಿಎಸ್: ಮಂಜುಳಮ್ಮ ಕನ್ನಪ್ಪನಹಳ್ಳಿ.
ಪಕ್ಷೇತರ: ಎಚ್.ಜಿ.ರಾಧಮ್ಮ ಕನ್ನಪ್ಪನಹಳ್ಳಿ, ನಾಗರತ್ನಮ್ಮ ಕನ್ನಪ್ಪನಹಳ್ಳಿ.
೧೪. ಸಾದಲಿ ತಾ.ಪಂ.ಕ್ಷೇತ್ರ: (ಅನುಸೂಚಿತ ಜಾತಿ ಮಹಿಳೆ)
ಕಾಂಗ್ರೆಸ್: ನಾಗವೇಣಿವೆಂಕಟೇಶಪ್ಪ, ಸೊಣ್ಣಗಾನಹಳ್ಳಿ,
ಜೆಡಿಎಸ್: ಎಲ್.ಅನುಸೂಯಮ್ಮ ಆಂಜಿನಪ್ಪ, ಸಾದಲಿ.
ಬಿಜೆಪಿ: ಮರಿಯಮ್ಮ ವೆಂಕಟೇಶಪ್ಪ ಸಾದಲಿ.
೧೫. ಈ-ತಿಮ್ಮಸಂದ್ರ ತಾ.ಪಂ.ಕ್ಷೇತ್ರ: (ಸಾಮಾನ್ಯ ಮಹಿಳೆ).
ಕಾಂಗ್ರೆಸ್: ವಹೀದಾ ಬೇಗಂ ಈ.ತಿಮ್ಮಸಂದ್ರ.
ಜೆಡಿಎಸ್: ಈಶ್ವರಮ್ಮ ಆಟಗೊಲ್ಲಹಳ್ಳಿ.
ಬಿಜೆಪಿ : ಶೋಭಾ ದಿಬ್ಬೂರಹಳ್ಳಿ.
ಪಕ್ಷೇತರ: ಹಸೀನಾ ಶೆಟ್ಟಿಕೆರೆ ಹಾಗು ಜಯಮ್ಮ ಆಟಗೊಲ್ಲಹಳ್ಳಿ.
೧೬. ತುಮ್ಮನಹಳ್ಳಿ ತಾ.ಪಂ.ಕ್ಷೇತ್ರ: (ಅನುಸೂಚಿತ ಜಾತಿ).
ಕಾಂಗ್ರೆಸ್: ದೇವರಾಜ ಹುಜುಗೂರು,
ಜೆಡಿಎಸ್: ನರಸಿಂಹಯ್ಯ ಹೆಚ್. ಹುಜುಗೂರು.
ಪಕ್ಷೇತರ: ಎಂ.ನಾರಾಯಣಸ್ವಾಮಿ, ಗೊರಮಡಗು ಹಾಗು ಮುನಿಕೃಷ್ಣಪ್ಪ ಹುಜುಗೂರು.
೧೭. ಕುಂಬಿಗಾನಹಳ್ಳಿ ತಾ.ಪಂ.ಕ್ಷೇತ್ರ: (ಅನುಸೂಚಿತ ಜಾತಿ ಮಹಿಳೆ).
ಕಾಂಗ್ರೆಸ್: ನಾಗಲಕ್ಷ್ಮಮ್ಮಮುನಿರಾಜು, ದೇವೇನಹಳ್ಳಿ.
ಜೆಡಿಎಸ್: ಮುನಿನರಸಮ್ಮ ನಾರಾಯಣಸ್ವಾಮಿ, ವಲ್ಲಪನಹಳ್ಳಿ,
ಬಿಜೆಪಿ : ಮುನಿರತ್ನಮ್ಮ, ವಲ್ಲಪನಹಳ್ಳಿ.

ನಾಮಪತ್ರ ಸಲ್ಲಿಕೆ

0

ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆದಿನವಾಗಿದ್ದು ಕಾಂಗ್ರೆಸ್, ಜೆ.ಡಿ.ಸ್ ಮತ್ತು ಬಿ.ಜೆ.ಪಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.
ತಾಲ್ಲೂಕಿನ ೧೭ ತಾಲ್ಲೂಕು ಪಂಚಾಯತಿ ಹಾಗೂ ೫ ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಚುನಾವಣೆ ನಡೆಯಲ್ಲಿದ್ದು ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿವೆ. ತಮ್ಮ ಅಭ್ಯರ್ಥಿಗಳೊಂದಿಗೆ ಪಕ್ಷದ ಬಾವುಟಗಳನ್ನು ಹಿಡಿದು ಜೈಕಾರಗಳನ್ನು ಹಾಕುತ್ತಾ ಅಪಾರ ಸಂಖ್ಯೆಯಲ್ಲಿ ಎಲ್ಲಾ ಪಕ್ಷಗಳ ಕಾರ್ಯಕರ್ತರು ಜಮಾಯಿಸಿದ್ದರು. ತಾಲ್ಲೂಕು ಕಚೇರಿ ಮುಂಬಾಗ ಗಲಭೆಗೆ ಅವಕಾಶ ನೀಡದಂತೆ ಬಿಗಿ ಪೋಲಿಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ಜೆ.ಡಿ.ಸ್ ಅಭ್ಯರ್ಥಿಗಳು ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗಳು ತಮ್ಮ ಸ್ಥಳೀಯ ಮುಂಖಡರೊಂದಿಗೆ ನಾಮಪತ್ರ ಸಲ್ಲಿಸಿದರು.
ಬಂಡಾಯ: ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ, ಹಿರಿಯ ಕಾಂಗ್ರೆಸ್ ಮುಖಂಡರ ಮಧ್ಯಸ್ತಿಕೆಯಲ್ಲಿ ಒಂದಾದರೂ ಜಿಲ್ಲಾ ಪಂಚಾಯತಿಯ ಮೂರು ಕ್ಷೇತ್ರಗಳಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಓಬಳಪ್ಪ, ಗಂಜಿಗುಂಟೆ ಕ್ಷೇತ್ರದಲ್ಲಿ ದೊಗರನಾಯಕನಹಳ್ಳಿ ವೆಂಕಟೇಶ್, ಅಬ್ಲೂಡು ಕ್ಷೇತ್ರದಲ್ಲಿ ತಾತಹಳ್ಳಿ ನರಸಿಂಹಯ್ಯ ಮತ್ತು ಶಿವಮೂರ್ತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸಿ.ಪಿ.ಎಂ ನ ಏಕೈಕ ಅಭ್ಯರ್ಥಿ: ಸಿ.ಪಿ.ಐ.ಎಂ ಪಕ್ಷದಿಂದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸದಾನಂದ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿಗಳು: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ವಿನುತಾ ಶ್ರೀನಿವಾಸ್ ಚೀಮಂಗಲ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್ ದಿಬ್ಬೂರಹಳ್ಳಿ ಕ್ಷೇತ್ರ, ಗೋಪಾಲರೆಡ್ಡಿ ಗಂಜಿಗುಂಟೆ ಕ್ಷೇತ್ರ, ವೆಂಕಟೇಶಪ್ಪ ಅಬ್ಲೂಡು ಕ್ಷೇತ್ರ ಮತ್ತು ನಿರ್ಮಲಾ ಮುನಿರಾಜು ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಜಿ.ಪಂ. ಜೆಡಿಎಸ್ ಅಭ್ಯರ್ಥಿಗಳು: ತನುಜಾ ರಘು ಚೀಮಂಗಲ ಕ್ಷೇತ್ರ, ಚಿಕ್ಕನರಸಿಂಹಪ್ಪ ದಿಬ್ಬೂರಹಳ್ಳಿ ಕ್ಷೇತ್ರ, ಡಾ.ಜಯರಾಮರೆಡ್ಡಿ ಗಂಜಿಗುಂಟೆ ಕ್ಷೇತ್ರ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಅಬ್ಲೂಡು ಕ್ಷೇತ್ರ ಮತ್ತು ನಳಿನಾ ಮಂಜುನಾಥ್ ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಆಮ್ ಆದ್ಮಿ ಬೆಂಬಲಿತ ಅಭ್ಯರ್ಥಿ: ಪಲಿಚೇರ್ಲು ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಕನ್ನಂಪಲ್ಲಿ ನಾಗರತ್ನಮ್ಮ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಆಮ್ ಆದ್ಮಿ ಪಕ್ಷವು ಇವರನ್ನು ಬೆಂಬಲಿಸುತ್ತಿದೆ.

ದ್ರಾಕ್ಷಿ ಬೆಳೆಗೆ ಬೆಳೆ ವಿಮೆ

0

ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಬೆಳೆಗೆ ಬೆಳೆ ವಿಮೆ ಮಾಡಿಸಿಕೊಂಡು ಬೆಳೆ ನಷ್ಟಕ್ಕೆ ರಕ್ಷಣೆಯನ್ನು ಪಡೆದುಕೊಳ್ಳುವಂತೆ ಸಹಾಯಕ ತೋಟಗಾರಿಕೆ ನಿರ್ದೇಶಕ ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ರಾಕ್ಷಿ ಬೆಳೆಯಲ್ಲಿ ಕಾಯಿ ಕಚ್ಚುವ ಅವಧಿಯಿಂದ ಕಟಾವು ಹಂತದವರೆಗೆ ಅಧಿಕ ಮಳೆಯಿಂದ ಆಗುವ ಬೆಳೆ ನಷ್ಟಕ್ಕೆ ವಿಮಾ ಯೋಜನೆ ಅಡಿಯಲ್ಲಿ ರಕ್ಷಣೆ ಸಿಗುತ್ತದೆ. ರೈತರು ವಿಮಾ ಪ್ರೀಮಿಯಂ ಮೊತ್ತ 2,880 ರೂ ಕಟ್ಟಿದಲ್ಲಿ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ನೀಡುತ್ತದೆ. ಪ್ರತಿ ಎಕರೆಗೆ ಗರಿಷ್ಠ ವಿಮಾ ಮೊತ್ತ 48 ಸಾವಿರ ರೂಗಳು ಸಿಗಲಿದೆ ಎಂದು ತಿಳಿಸಿದ್ದಾರೆ.

ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಸಾಧಕ

0

ಸರ್ಕಾರಿ ಶಾಲೆಯೊಂದಕ್ಕೆ ಸಮುದಾಯದ ನೆರವು ದೊರೆತಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಸಾಧನೆ ಮಾಡಬಹುದು ಎಂಬುದಕ್ಕೆ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ ವಿದ್ಯಾರ್ಥಿ ಮನೋಜ್ ಸಾಕ್ಷಿಯಾಗಿದ್ದಾನೆ.
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ ವಿದ್ಯಾರ್ಥಿ ಮನೋಜ್ ಮೂಡಬಿದ್ರೆ ಬಳಿಯಿರುವ ಎಂ.ಐ.ಟಿ.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಗ ಓದುತ್ತಿದ್ದಾನೆ. ವಿಶೇಷವೆಂದರೆ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇದುವರೆಗೂ ಓದಿರುವ ವಿದ್ಯಾರ್ಥಿಗಳಲ್ಲಿ ಎಂಜಿನಿಯರಿಂಗ್ ಕಾಲೇಜ್ ಸೇರಿರುವುದರಲ್ಲಿ ಈತನೇ ಮೊದಲಿಗ.
ಹತ್ತಿರದ ಮೇಲೂರು ಮತ್ತು ಮಳ್ಳೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯಿದ್ದರೂ, ಗ್ರಾಮದಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದ ಮಕ್ಕಳು ಹೆಚ್ಚಿದ್ದರಿಂದ, ಗ್ರಾಮದ ಮುಖಂಡರಾದ ಚಂದ್ರೇಗೌಡ, ಕೆಂಪೇಗೌಡ, ವೇಣುಗೋಪಾಲಾಚಾರಿ ಮುಂತಾದವರು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಪ್ರೌಢಶಾಲೆಯನ್ನು 1994 ರಲ್ಲಿ ಪ್ರಾರಂಭಿಸಿದರು. ಎಂ.ಕೆ.ರೆಡ್ಡಿ ಎಂಬುವವರು ಶಾಲೆಗಾಗಿ ಭೂಮಿಯನ್ನು ದಾನವಾಗಿ ನೀಡಿದರು.
2008 ರಿಂದ ದಿ.ಸಂಜಯ್ದಾಸ್ಗುಪ್ತ ಕುಟುಂಬದವರು ಗ್ರಾಮದಲ್ಲಿ ‘ನಮ್ಮ ಮುತ್ತೂರು’ ಎಂಬ ಸಂಸ್ಥೆಯ ಮೂಲಕ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡರು. ವಿವಿಧ ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ ಸೋಲಾರ್ ದೀಪಗಳನ್ನು ವಿತರಿಸಿದರು. ಶಾಲೆಯಲ್ಲಿ ವಿಜ್ಞಾನದ ಲ್ಯಾಬ್ ಪ್ರಾರಂಭವಾಯಿತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ವಿಜ್ಞಾನ, ಪರಿಸರ, ಇಂಗ್ಲೀಷ್, ಕ್ರೀಡೆ ಮುಂತಾದವುಗಳನ್ನು ಕಲಿಸಿದರು. ಈ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪಾಸಾದವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ಕೊಡಲು ಪ್ರಾರಂಭಿಸಿದರು.
ಈ ರೀತಿಯಾಗಿ ವಿದ್ಯಾರ್ಥಿ ವೇತನ ಪಡೆದು ಸಿ.ಇ.ಟಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಮನೋಜ್ ಎಂಜಿನಿಯರಿಂಗ್ ಸೇರಿದ್ದಾನೆ. ಬಡ ರೈತ ಕುಟುಂಬದ ಹಿನ್ನೆಯಿರುವ ಮನೋಜ್ಗೆ ಪಿಯುಸಿ ಶಿಕ್ಷಣಕ್ಕೆ ನೆರವು ನೀಡಿದ ‘ನಮ್ಮ ಮುತ್ತೂರು’ ಸಂಸ್ಥೆ ಎಂಜಿನಿಯರಿಂಗ್ ಸೇರಿಸಲೂ ಆರ್ಥಿಕವಾಗಿ ನೆರವಾಗಿದೆ.
‘ನಮ್ಮ ಶಾಲೆಯು ಪ್ರಾರಂಭವಾದಂದಿನಿಂದ ಇದುವರೆಗೂ 700 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿದ್ದಾರೆ. ಬಹುತೇಕ ಮಕ್ಕಳೆಲ್ಲಾ ಬಡ ಕುಟುಂಬದ ಹಿನ್ನೆಲೆಯವರೇ. ಅವರಲ್ಲಿ ಪ್ರತಿಭೆಯಿದ್ದರೂ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿಗೆ ಓದಲು ಮುಂದುವರೆಯುತ್ತಿಲ್ಲ. ಆದರೆ ‘ನಮ್ಮ ಮುತ್ತೂರು’ ಸಂಸ್ಥೆಯ ಅಭಿವೃದ್ಧಿ ಕೆಲಸಗಳಿಂದಾಗಿ ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇಕಾದ ಆರ್ಥಿಕ ಸಹಾಯ ಸಿಗುವ ಮೂಲಕ ಕಡಿಶೀಗೇನಹಳ್ಳಿಯ ಮನೋಜ್ ಈಗ ಎಂಜಿನಿಯರಿಂಗ್ ಓದುವಂತಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ, ನೆರವು, ಮಾರ್ಗದರ್ಶನ ಸಿಕ್ಕಲ್ಲಿ ಸಾಧಕರು ಹೊರಹೊಮ್ಮುತ್ತಾರೆ’ ಎಂದು ವಿಜ್ಞಾನ ಶಿಕ್ಷಕ ಶ್ರೀನಿವಾಸ್ ತಿಳಿಸಿದರು.

ಮುನಿದಿದ್ದ ಮುನಿಯಪ್ಪ ದ್ವಯರು ಒಂದಾದರು

0

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾದ ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಪುನಃ ಸಂಧಾನವಾಗಿದ್ದು ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆಯಾಗಿದೆ.
ಕಳೆದ ವಿಧಾನಸಭೆಯ ಚುನಾವಣೆಯ ನಂತರ ಇಬ್ಬರು ಮುಖಂಡರ ನಡುವೆ ಪ್ರಾರಂಭವಾದ ಅಸಮಾಧಾನ ಮತ್ತು ಭಿನ್ನಮತ ಲೋಕಸಭಾ ಚುನಾವಣೆಯ ಬಳಿಕ ಪರಸ್ಪರ ಅಂತರ ಕಾಯ್ದುಕೊಳ್ಳುವಂತಾಗಿತ್ತು. ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿ ಕಾರ್ಯಕರ್ತರಲ್ಲಿ ಒಡಕುಂಟಾಗಿತ್ತು.
ಕಳೆದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಪಡೆಯಲು ಮಾಜಿ ಸಚಿವ ವಿ.ಮುನಿಯಪ್ಪ ಪ್ರಯತ್ನ ನಡೆಸಿದರೆ ಮತ್ತೊಂದಡೆ ಸಂಸದ ಕೆ.ಎಚ್.ಮುನಿಯಪ್ಪ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿ ಅನಿಲ್ಕುಮಾರ್ಗೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ತಮ್ಮ ಶಿಷ್ಯನನ್ನು ಗೆಲ್ಲಿಸಲು ಮಾತ್ರ ವಿಫಲರಾದರು. ಇಬ್ಬರು ನಾಯಕರ ಮಧ್ಯೆಯಿರುವ ಭಿನ್ನಮತ ಮತ್ತು ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡ ವಿರೋಧ ಪಕ್ಷದ ಜೆ.ಡಿ.ಎಸ್ ಅಭ್ಯರ್ಥಿ ಗೆಲುವು ಸಾಧಿಸಿದರು.
ಸಂಧಾನ: ಅವಿಭಜಿತ ಕೋಲಾರ ಜಿಲ್ಲೆ ಕಾಂಗ್ರೆಸ್ ಪಕ್ಷದ ಪಾಲಿಗೆ ಭದ್ರಕೋಟೆಯಾಗಿದ್ದು, ರಾಜಕೀಯ ಮುಖಂಡರ ಗುಂಪುಗಾರಿಕೆ ಮತ್ತು ಭಿನ್ನಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಜಿ ಸಂಧಾನಗಳು ನಡೆದಿವೆ. ಅವಳಿ ಜಿಲ್ಲೆಯ ಪ್ರಭಾವಿ ನಾಯಕರನ್ನು ಒಗ್ಗೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವ ಕೃಷ್ಣ ಬೈರೇಗೌಡ ಮತ್ತು ಶಾಸಕ ಶಿವಶಂಕರರೆಡ್ಡಿ ಸಂಧಾನಕಾರರಾಗಿ ಉಭಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಇಬ್ಬರೂ ಒಂದಾಗಿ ಹಾಗೂ ಜಂಟಿಯಾಗಿ ಪ್ರಚಾರ ನಡೆಸಬೇಕೆಂದು ಸಂಸದರು ಹಾಗೂ ಮಾಜಿ ಸಚಿವರನ್ನು ಒಪ್ಪಿಸಿದ್ದಾರೆ. ಈ ಹಿಂದೆ ನಡೆದಿರುವ ಬೆಳವಣಿಗೆಗಳನ್ನು ಮರೆತು ಪಕ್ಷ ಹಾಗೂ ಕಾರ್ಯಕರ್ತರ ಹಿತರಕ್ಷಣೆಗಾಗಿ ಸಂಘಟಿತರಾಗಬೇಕೆಂದು ಹಿರಿಯ ಮುಖಂಡರ ಸಂಧಾನಕ್ಕೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾದರೆ ಅದರ ಲಾಭ ಗಿಟ್ಟಿಸಿಕೊಳ್ಳಲು ಕಾದಿದ್ದ ಜೆ.ಡಿ.ಎಸ್ ಪಕ್ಷದವರಿಗೆ ನಿರಾಸೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಾದ ಬೆಳವಣಿಗೆಯಿಂದಾಗಿ ಜೆ.ಡಿ.ಎಸ್ ಪಕ್ಷದವರು ಚುನಾವಣಾ ತಂತ್ರಗಾರಿಕೆಯನ್ನು ಬದಲಾಯಿಸಿದ್ದಾರೆ.
ಆದರೂ ಬಿಫಾರಂ ಹಂಚಿಕೆಯ ನಂತರ ಎರಡೂ ಪಕ್ಷಗಳಲ್ಲಿ ಪ್ರಮುಖರಿಗೆ ಟಿಕೇಟ್ ಸಿಗದಿದ್ದಲ್ಲಿ ಭಿನ್ನಮತವು ಸ್ಫೋಟಿಸುವ ಅವಕಾಶಗಳಿವೆ.

ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟಿಸಿದರು

0

ಕೇಂದ್ರೀಯ ಮೋಟಾರ್ ವಾಹನ ನಿಯಮದ ತಿದ್ದುಪಡಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಯುವ ಆಂದೋಲನದಲ್ಲಿ ಭಾಗಿಯಾಗಲು ಭಾನುವಾರ ಶಿಡ್ಲಘಟ್ಟದಿಂದ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಆಟೋ ಚಾಲಕರು ತೆರಳಿದರು.
ನಗರದ ಅಮೀರ್ಬಾಬಾ ದರ್ಗಾ ಬಳಿ ಸೇರಿದ್ದ ಆಟೋ ಚಾಲಕರನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ವಿಸ್ಡಂ ನಾಗರಾಜ್, ‘ಕೇಂದ್ರೀಯ ಮೋಟಾರ್ ವಾಹನ ನಿಯಮದ ತಿದ್ದುಪಡಿಯಿಂದಾಗಿ ಬಹಳಷ್ಟು ಬಡ ಕುಟುಂಬಗಳು ಬೀದಿಗೆ ಬರುತ್ತವೆ. ಎಂಟನೇ ತರಗತಿ ಓದಿದವರಿಗೆ ಮಾತ್ರ ವಾಹನ ಚಾಲನೆ ಪರವಾನಗಿ ನೀಡಬೇಕೆಂಬ ನಿಯಮದಿಂದ ಸಾಕಷ್ಟು ಮಂದಿ ಬಡವರು ತೊಂದರೆಗೊಳಗಾಗುತ್ತಾರೆ. ಜನರನ್ನು ವಿದ್ಯಾವಂತರನ್ನಾಗಿಸುವ ನೆಪದಲ್ಲಿ ಸರ್ಕಾರ ಅವೈಜ್ಞಾನಿಕ ರೀತಿಯಲ್ಲಿ ಕಾನೂನು ಬದಲಯಿಸಬಾರದು. ಬಹುತೇಕ ವಾಹನ ಚಾಲಕರು ಬಡವರು ಮತ್ತು ಅವಿದ್ಯಾವಂತರೇ ಆಗಿರುತ್ತಾರೆ. ಹೀಗಿರುವಾಗ ಅವರ ಹೊಟ್ಟೆಯ ಮೇಲೆ ಹೊಡೆಯುವ ಕಾನೂನು ರೂಪಿಸುವ ಮೂಲಕ ಬಡವರ ವಿರೋಧಿ ನೀತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ. ಇದನ್ನು ವಿರೋಧಿಸುತ್ತೇವೆ’ ಎಂದು ಹೇಳಿದರು.
ಘೋಷಣೆಗನ್ನು ಕೂಗುತ್ತಾ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಆಟೋ ಚಾಲಕರು ಮೆರವಣಿಗೆಯನ್ನು ನಡೆಸಿ ನಂತರ ಬೆಂಗಳೂರಿನಲ್ಲಿನ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದರು.
ಆಮ್ ಆದ್ಮಿ ಪಕ್ಷದ ಸಹ ಸಂಚಾಲಕರಾದ ಇದಾಯತ್, ಇನಾಯತ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಮೌಲಾ, ಷಬೀರ್, ಅಸ್ಲಂ, ರಫೀಕ್, ಇಮ್ರಾನ್, ಅಹ್ಮದ್, ತೌಸೀಫ್, ಸುರೇಶ್, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಾಮಪತ್ರ ಸಲ್ಲಿಕೆ

0

ಫೆಬ್ರವರಿ ೧೩ ರಂದು ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಶನಿವಾರ ಜಿಲ್ಲಾ ಪಂಚಾಯತಿಗೆ ೪ ನಾಮಪತ್ರಗಳು ಹಾಗೂ ತಾಲ್ಲೂಕು ಪಂಚಾಯತಿಗೆ ೫ ನಾಮಪತ್ರಗಳು ಸಲ್ಲಿಕೆಯಾದವು.
ತಾಲ್ಲೂಕಿನ ೫ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಪೈಕಿ ಅನುಸೂಚಿತ ಜಾತಿಗೆ ಸೀಮಿತವಾಗಿರುವ ದಿಬ್ಬೂರಹಳ್ಳಿ ಕ್ಷೇತ್ರದಿಂದ ಸಂಸದ ಕೆ.ಎಚ್.ಮುನಿಯಪ್ಪ ಅವರ ಸಹೋದರ ಕಂಬದಹಳ್ಳಿ ಕೆ.ಎಚ್.ದೇವರಾಜು, ನಾಮಪತ್ರ ಸಲ್ಲಿಸಿದರು, ಬಿಜೆಪಿಯಿಂದ ಗುಡಿಹಳ್ಳಿ ಎನ್.ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ರಚನೆಯಾಗಿರುವ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್.ಮುನಿಶಾಮಪ್ಪ ಅವರ ಪುತ್ರ ಆನೆಮಡಗು ಡಾ.ಜಯರಾಮರೆಡ್ಡಿ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ್ದು, ಒಟ್ಟು ೪ ನಾಮಪತ್ರಗಳು ಸಲ್ಲಿಕೆಯಾಗಿವೆ.
ತಾಲ್ಲೂಕು ಪಂಚಾಯತಿ : ಅನುಸೂಚಿತ ಜಾತಿಗೆ ಮೀಸಲಾಗಿರುವ ಮೇಲೂರು ಕ್ಷೇತ್ರದಿಂದ ಮಾಜಿ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಮುನಿಯಪ್ಪ ಅವರ ಪುತ್ರ ಗಂಗನಹಳ್ಳಿ ಶಿವಾನಂದ, ಕಾಂಗ್ರೆಸ್ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಮೇಲೂರು ಗ್ರಾಮದ ಅಂಬರೀಶ್ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಶೆಟ್ಟಿಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಕೊಂಡರಾಜನಹಳ್ಳಿಯ ಬಿ.ಬೈರಾರೆಡ್ಡಿ, ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ, ಭಕ್ತರಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಕಾಕಚೊಕ್ಕಂಡಹಳ್ಳಿಯ ಪದ್ಮಾ ನಾಮಪತ್ರ ಸಲ್ಲಿಸಿದ್ದಾರೆ, ಗಂಜಿಗುಂಟೆ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಭಿನ್ನಮಂಗಲ ಗ್ರಾಮದ ನಾಗರತ್ನಮ್ಮ ಜೆಡಿಎಸ್ನಿಂದ ನಾಮಪತ್ರ ಸಲ್ಲಿಸಿದ್ದು, ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾಗಿವೆ.

ಉಚಿತ ನೇತ್ರ ತಪಾಸಣೆ ಶಿಬಿರ

0

ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಕೂಡ ನಾಡು ನುಡಿಯನ್ನು ಕಾಪಾಡಿದಷ್ಟೇ ಮುಖ್ಯವಾದದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ತಿಳಿಸಿದರು.
ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಮತ್ತು ಎಂ.ಎಸ್.ರಾಮಯ್ಯ ಆಸ್ವತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರವೇ ಸಂಘಟನೆಯ ಮೂಲಕ ಕನ್ನಡ ನಾಡು, ನುಡಿಯ ರಕ್ಷಣೆಯನ್ನು ಮಾಡುತ್ತಾ, ನಾಡಪರ ಹೋರಾಟಗಳನ್ನು ಮಾಡುವುದರ ಜೊತೆಗೆ ವಿವಿಧ ಸಾಮಾಜಿಕ ಕಳಕಳಿಯುಳ್ಳ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಆರೋಗ್ಯ ಶಿಬಿರಗಳ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಉಚಿತ ನೇತ್ರ ತಪಾಸಣೆ ಶಿಬಿರದೊಂದಿಗೆ ಶಸ್ತ್ರ ಚಿಕಿತ್ಸಾ ಶಿಬಿರ, ಕಣ್ಣಿನ ಪೊರೆ ಮತ್ತು ಇತರೆ ಕಣ್ಣಿನ ತೊಂದರೆಗಳಿಗೆ ಚಿಕಿತ್ಸೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವೆಂಕಟರೋಣಪ್ಪ, ಜಿಲ್ಲಾ ಉಪಾದ್ಯಕ್ಷ ರವಿ, ತಾಲ್ಲೂಕು ಸಂಚಾಲಕ ದೇವರಾಜು(ದೇವಿ), ಅಕ್ರಂ, ಮುನಿರಾಜು(ಕುಟ್ಟಿ),ವೀರಾಪುರ ಘಟಕದ ಅದ್ಯಕ್ಷ ಮಣಿಕಂಠ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಾಮಪತ್ರ ಸಲ್ಲಿಕೆ

0

ಫೆಬ್ರವರಿ ೧೩ ರಂದು ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಶುಕ್ರವಾರದಂದು ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾದವು. ಇದುವರೆಗೂ ಸಲ್ಲಿಕೆಯಾಗಿರುವ ನಾಮಪತ್ರಗಳ ಸಂಖ್ಯೆ ಆರಕ್ಕೇರಿದೆ.
ತಾಲ್ಲೂಕಿನ ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿ ಯಿಂದ ಶಶಿಕಲಾ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಯಿಂದ ಕಳೆದ ೨೦೦೪ ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಸಿ.ವಿ.ಲೋಕೇಶ್ಗೌಡ, ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಪ್ರಭಾಕರರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.
ಮೇಲೂರು ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿಯಿಂದ ಮಂಜುನಾಥ್ ಎಂಬುವವರು ನಾಮಪತ್ರವನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ರಾಮಕೃಷ್ಣನಾಯಕ್ ತಿಳಿಸಿದ್ದಾರೆ.

ಬಿನ್ (ಜಾಲರಿ) ಹಂಚಿಕೆ ಪ್ರಕ್ರಿಯೆ ಶನಿವಾರದಿಂದ ಪ್ರಾರಂಭ

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಬಿನ್(ಜಾಲರಿ) ಹಂಚಿಕೆ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಲಿದೆ. ಕೆಲವೇ ದಿನಗಳಲ್ಲಿ ಇ–ಹರಾಜು ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಇದರಿಂದ ರೈತರಿಗೆ ಮತ್ತು ರೀಲರುಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್ ತಿಳಿಸಿದರು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸಾವಿರಾರು ಲಾಟುಗಳು ರೇಷ್ಮೆ ಗೂಡು ಆಗಮಿಸುತ್ತವೆ. ಈ ಹಿಂದೆ ದೂರದ ಊರುಗಳಿಂದ ಬರುತ್ತಿರುವ ರೈತರುಗಳಿಗೆ ಜಾಲರಿಗಳು ಸಿಗದೆ, ನೆಲದ ಮೇಲೆ ಗೂಡನ್ನು ಹಾಕುವಂತಹ ಪರಿಸ್ಥಿತಿಯಿತ್ತು. ಕೆಲವು ಮಂದಿ ಮಧ್ಯವರ್ತಿಗಳು ಜಾಲರಿಗಳ ಮೇಲೆ ಹೆಸರುಗಳನ್ನು ಬರೆದು, ಅವುಗಳನ್ನು ರೈತರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದ ಬಗ್ಗೆಯೂ ದೂರುಗಳು ಕೇಳಿ ಬರುತ್ತಿದ್ದವು. ಇದರಿಂದ ರೈತರಿಗೆ ಅನ್ಯಾಯವಾಗುತ್ತಿತ್ತು.
ಆದ್ದರಿಂದ ಬಿನ್(ಜಾಲರಿ) ಹಂಚಿಕೆ ಪದ್ಧತಿಯನ್ನು ಜಾರಿಗೆ ತಂದಿದ್ದು, ಶನಿವಾರದಿಂದಲೇ ಆರಂಭವಾಗಲಿದೆ. ರೈತರು ತರುವಂತಹ ಗೂಡಿನ ಪ್ರಮಾಣಕ್ಕೆ ತಕ್ಕಂತೆ ೫೦ ಕೆ.ಜಿ.ಗೂಡಿಗೆ ಒಂದು ಬಿನ್ನಂತೆ ನೀಡಲಾಗುತ್ತದೆ, ಮಾರುಕಟ್ಟೆಯಲ್ಲಿನ ವಿವಿಧ ವಿಭಾಗಗಳಿಗೆ ನದಿಗಳಾದ ಹೇಮಾವತಿ, ಕಾವೇರಿ, ಕಬಿನಿ, ಪಾಪಾಗ್ನಿ, ಗಂಗಾ, ನೇತ್ರಾವತಿ, ತುಂಗಾ, ಭದ್ರಾ, ಚಿತ್ರಾವತಿ, ಶರಾವತಿ, ಯಮುನಾ, ಲಿನಾಕಿನಿ, ಕೃಷ್ಣಾ, ಅರ್ಕಾವತಿ ಎಂಬ ಹೆಸರುಗಳನ್ನು ಇಡಲಾಗಿದ್ದು, ಪ್ರತಿ ವಿಭಾಗಕ್ಕೆ ಕೌಂಟರ್, ಹರಾಜು ಕೂಗುವುದು, ತೂಕ ಮಾಡುವುದು, ಟೋಕನ್ ನೀಡುವುದು, ಹರಾಜು ಚೀಟಿಗಳನ್ನು ಕಂಪ್ಯೂಟರ್ ಕೊಠಡಿಗಳಿಗೆ ರವಾನಿಸುವ ವ್ಯವಸ್ಥೆ, ಮಾರುಕಟ್ಟೆ ಶುಲ್ಕ, ರೈತರ ಪಾಸ್ಪುಸ್ತಕ ಎಂಟ್ರಿ, ಹರಾಜು ಚೀಟಿ ವಿತರಣೆ, ಡಿ.ಟಿ.ಆರ್, ಮುಖ್ಯದ್ವಾರದ ಕಾವಲು, ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಗೂಡನ್ನು ಹೊರಗಿನಿಂದ ತೆಗೆದುಕೊಂಡು ಬರುವಂತಹ ರೈತರು ನೇರವಾಗಿ ಕೌಂಟರ್ಗೆ ಹೋಗಿ ಅಲ್ಲಿಂದ ಚೀಟಿಯನ್ನು ಪಡೆದುಕೊಂಡ ತಕ್ಷಣ ಯಾವ ವಿಭಾಗದಲ್ಲಿ ಬಿನ್ ನೀಡಲಾಗಿದೆ ಎಂಬುದು ಗೊತ್ತಾಗುತ್ತದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಬಿನ್ಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ಥಳೀಯರಿಗೆ ಸುಮಾರು ೩೦ ಟನ್ಗಳ (೬ ಶೆಡ್ಗಳನ್ನು) ಗೂಡಿಗೆ ಸರಿಹೊಂದುವಷ್ಟು ಜಾಲರಿಗಳನ್ನು ಮೀಸಲಾಗಿಡಲಾಗುತ್ತದೆ. ಆದ್ಯತೆಯ ಮೇರೆಗೆ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ೬೦ ರಿಂ೭೦ ಲಾಟುಗಳು, ೬ ರಿಂದ ಬೆಳಗಿನ ಜಾವ ೩ ಗಂಟೆಯವರೆಗೆ ೬೦ ರಿಂದ ೭೦ ಲಾಟುಗಳು, ಬೆಳಿಗ್ಗೆ ೩ ರಿಂದ ೯ ಗಂಟೆವೆರೆಗೆ ೭೦೦ ರಿಂದ ೮೦೦ ಲಾಟುಗಳು ಬರುತ್ತವೆ. ಯಾವ ರೈತರಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ರೈತರು ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಇ-–ಹರಾಜು ಪ್ರಕ್ರಿಯೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ರೈತರಿಗೆ ಟೀ ಶರ್ಟ್ ಹಾಗೂ ಟೋಪಿಗಳನ್ನು ಇಲಾಖೆಯಿಂದ ವಿತರಣೆ ಮಾಡಲಾಯಿತು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಲಕ್ಷೀಪತಿರೆಡ್ಡಿ, ಉಪನಿರ್ದೇಶಕರಾದ ಮೋಯಿನುದ್ದೀನ್, ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಬಿ.ಆರ್.ಸುಧಾಕರ್, ಸಿ.ಆರ್.ಆಂಜನೇಯರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಡುಗೆ ಅನಿಲ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ

0

ಗ್ಯಾಸ್ ಸೋರುವಿಕೆ ಬಂದ ತಕ್ಷಣ ಗ್ಯಾಸ್ ಸಿಬ್ಬಂದಿಯವರಿಗೆ ತಿಳಿಸಬೇಕು. ಎಚ್ಚರಿಕೆಯಿಂದ ಗ್ಯಾಸ್ ಉಪಯೋಗಿಸಿಬೇಕೆಂದು ವಾಸವಿ ಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ್ ತಿಳಿಸಿದರು.
ನಗರದ ವಾಸವಿ ಶಾಲೆಯಲ್ಲಿ ಗುರುವಾರ ಅಡುಗೆ ಅನಿಲ ಬಳಕೆಯ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ಯಾಸ್ ಸಿಲಿಂಡರ್ ಪಡೆಯುವಾಗ ವಾಷರ್ರನ್ನು ಪರೀಕ್ಷಿಸಿ ಗ್ಯಾಸ್ ಪಡೆದುಕೊಳ್ಳಿ. ವಾಷರ್ ಇಲ್ಲದ ಪಕ್ಷದಲ್ಲಿ ಗ್ಯಾಸ್ ಸಿಬ್ಬಂದಿಗೆ ತಿಳಿಸತಕ್ಕದ್ದು. ಕೆಲ ಮನೆಗಳಲ್ಲಿ ಗ್ಯಾಸ್ ಆನ್ ಮಾಡಿ ಟಿ.ವಿ.ಯಲ್ಲಿ ಧಾರಾವಾಹಿ ನೋಡುವುದಕ್ಕೆ ಹೋಗುತ್ತಾರೆ. ಈ ವಿಷಯದ ಬಗ್ಗೆ ಮಹಿಳೆಯರು ಜಾಗೃತರಿರಬೇಕೆಂದು ತಿಳಿಸಿದರು.
ಇಂಡಿಯನ್ ಅಯಲ್ ಕಾರ್ಪೊರೇಷನ್ ವತಿಯಿಂದ ಅಡುಗೆ ಅನಿಲದ ಚುಟುಕು ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಮೊದಲನೇ ಬಹುಮಾನವನ್ನು ಒಂಬತ್ತನೇ ತರಗತಿಯ ಅಮೂಲ್ಯ, ಎರಡನೇ ಬಹುಮಾನ ಎಂಟನೇ ತರಗತಿಯ ವೇದ ಮತ್ತು ಮೂರನೇ ಬಹುಮಾನ ಒಂಬತ್ತನೇ ತರಗತಿಯ ಸಹನಾಶ್ರೀ ಪಡೆದರು.
ವಾಸವಿ ಶಾಲೆಯ ಕಾರ್ಯದರ್ಶಿ ಸತ್ಯನಾರಾಯಣ ಶೆಟ್ಟಿ, ವಿಜ್ಞಾನ ವಿಭಾಗದ ಶಿಕ್ಷಕ ವಿಜಯ್ ಕುಮಾರ್, ಇಂಡಿಯನ್ ಗ್ಯಾಸ್ನ ಮಾಲೀಕ ನಾಗರಾಜು, ಇಂಡಿಯನ್ ಗ್ಯಾಸ್ನ ಭರತ್, ಅಣ್ಣಪ್ಪ, ಶಿವಣ್ಣ, ರಮೇಶ್, ಶಶಿಧರ್, ಶೌಕತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

0

ನಗರದ ಹಿರಿಯ ನಾಗರಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯರು ದೇವನಹಳ್ಳಿ ಟೋಲ್ ಬಳಿ ಬುಧವಾರ ಪ್ರತಿಭಟಿಸಿದ್ದಾರೆ.
ದೇವನಹಳ್ಳಿ ಸಮೀಪವಿರುವ ಟೋಲ್ನಲ್ಲಿ ಹಣ ನೀಡಿದರೂ ಹಿರಿಯ ನಾಗರಿಕರೊಂದಿಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಯು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಟೋಲ್ನಲ್ಲಿ ರೌಡಿಗಳನ್ನಿಟ್ಟುಕೊಂಡು ಹಣ ಸಂಗ್ರಹಿಸಲಾಗುತ್ತಿದೆ. ಕನಿಷ್ಠ ಸೌಜನ್ಯವಾಗಿ ನಡೆದುಕೊಳ್ಳದ ಸಿಬ್ಬಂದಿಯನ್ನು ಕೂಡಲೇ ವರ್ಗಾಯಿಸಬೇಕು ಎಂದು ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ಗ್ರಾಹಕರ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತಮೀಮ್ ಅನ್ಸಾರಿ ಆಗ್ರಹಿಸಿದರು.
ಟೋಲ್ ವ್ಯವಸ್ಥಾಪಕ ಪ್ರಕಾಶ್, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುತ್ತದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಶಿಡ್ಲಘಟ್ಟ ತಾಲ್ಲೂಕು ಕರವೇ ಕಾರ್ಯಕರ್ತರಾದ ಕಣಿತಹಳ್ಳಿ ಮೂರ್ತಿ, ನಾಗರಾಜ್, ವೀರಾಪುರ ಮಣಿ, ಶಿವಕುಮಾರ್, ಮುನಿರಾಜ್, ಪ್ರಕಾಶ್, ನ್ಯಾಮತ್ತುಲ್ಲ, ಇನಾಯತ್, ಇರ್ಫಾನ್, ಆಖಿಲ್, ಸಿದ್ದಿಕ್, ಶಾಯದ್ ಆಫ್ರಿದ್, ಕರವೇ ಬ್ಯಾಟರಾಯನಪುರ ಘಟಕದ ಅಧ್ಯಕ್ಷ ಸುರೇಶ್, ದೇವನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಮೂರ್ತಿ, ವಿಜಯಪುರ ತಾಲ್ಲೂಕು ಘಟಕದ ಅಧ್ಯಕ್ಷ ರಘು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಕೃಷಿ ಸಾಧಕ’ ಮತ್ತು ‘ವಿಶ್ವಮಾನ್ಯ ಒಕ್ಕಲಿಗ’ ಪ್ರಶಸ್ತಿ

0

ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರಿಗೆ ವಿಶ್ವ ಒಕ್ಕಲಿಗರ ಮಹಾ ವೇದಿಕೆ ವತಿಯಿಂದ ಇತ್ತೀಚೆಗೆ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಕೃಷಿ ಸಾಧಕ’ ಮತ್ತು ‘ವಿಶ್ವಮಾನ್ಯ ಒಕ್ಕಲಿಗ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಹಬ್ಬದ ಆಚರಣೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ಎಚ್.ಜಿ.ಗೋಪಾಲಗೌಡ ಅವರ ಕೃಷಿ ಬದುಕಿನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕಡಿಮೆ ನೀರು ಬಳಕೆ ಹಾಗೂ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪಿನ ಬೇಸಾಯ, ಗುಣಮಟ್ಟದ ರೇಷ್ಮೆ ಗೂಡಿನ ಬೆಳೆ, ಮಳೆಯಾಶ್ರಿತವಾಗಿ ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ನೂತನ ಮಾದರಿಯ ಚಂದ್ರಂಕಿ, ಹೂಜಿ ನೊಣ ತಡೆಯಲು ಮಾಡಿರುವ ಆವಿಷ್ಕಾರ, ಕೃಷಿ ಅಧ್ಯಯನಕ್ಕಾಗಿ ರಾಷ್ಟ್ರದ ನಾನಾ ರಾಷ್ಟ್ರಗಳ ಭೇಟಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮುಂತಾದ ಕೃಷಿ ಸಾಧನೆಯನ್ನು ಗುರುತಿಸಲಾಗಿದೆ.

ಅಗ್ಗವಾದ ಕೊತ್ತಂಬರಿ ಸೊಪ್ಪು

0

ತಾಲ್ಲೂಕು ಹಾಗೂ ಜಿಲ್ಲೆಯ ರೈತರ ಉಪಬೆಳೆಯಾದ, ಆರ್ಥಿಕ ಬೆಳೆಗಳಲ್ಲಿ ಒಂದಾದ ಕೊತ್ತಂಬರಿ ಸೊಪ್ಪನ್ನು ನಂಬಿದ್ದ ರೈತರು ಈ ಬಾರಿ ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.
ಕಳೆದೆರಡು ತಿಂಗಳ ಹಿಂದೆ ಬಿದ್ದ ಮಳೆಯಿಂದಾಗಿ ಎಲ್ಲೆಡೆ ಕೊತ್ತಂಬರಿ ಸೊಪ್ಪಿನ ಫಸಲು ಚೆನ್ನಾಗಿ ಬಂದಿದ್ದು, ಬೆಲೆಯು ನೆಲಕಚ್ಚಿರುವ ಹಿನ್ನೆಲೆಯಲ್ಲಿ ರೈತರು ಟಿಲ್ಲರ್ ಹಾಗೂ ಆಟೋಗಳಲ್ಲಿ ಕೊತ್ತಂಬರಿ ಸೊಪ್ಪನ್ನು ತಂದು ಒಂದು ದೊಡ್ಡ ಕಟ್ಟಿಗೆ 10 ರೂಗಳಂತೆ ಮಾರಾಟ ಮಾಡುತ್ತಿದ್ದಾರೆ.
‘ಅರ್ಧ ಎಕರೆಯಲ್ಲಿ ಸುಮಾರು ಎರಡು ಟನ್ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದೇನೆ. ಬೆಲೆ ಹೆಚ್ಚಿದ್ದಾಗ ತೋಟಕ್ಕೇ ಬಂದು ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದವರು ಈಗ ಹತ್ತಿರ ಕೂಡ ಸುಳಿಯುತ್ತಿಲ್ಲ. ಬೆಳೆಯನ್ನು ತೋಟದಲ್ಲಿ ಬಿಡಲಾಗದೇ, ಆಟೋ ಮಾಡಿಕೊಂಡು ತಂದು ಕನಿಷ್ಠ ಕೂಲಿಯಾದರೂ ಗಿಟ್ಟಲಿ ಎಂದು ಮಾರಾಟ ಮಾಡುತ್ತಿದ್ದೇನೆ. ಆಟೋ ಖರ್ಚು, ಪೆಟ್ರೋಲು, ನಮ್ಮ ಕೂಲಿ, ಶ್ರಮ, ಬೆಳೆ ಬೆಳೆಯಲು ಮಾಡಿದ ಖರ್ಚು ಲೆಕ್ಕ ಹಾಕಿದರೆ ನಮ್ಮ ಪಾಡು ಯಾರಿಗೂ ಬೇಡವೆನಿಸುತ್ತದೆ’ ಎನ್ನುತ್ತಾನೆ ರೈತ ಮುನಿರಾಜು.
ಕೊತ್ತಂಬರಿ ಸೊಪ್ಪನ್ನು ಅದೃಷ್ಟದ ಬೆಳೆ ಎಂದು ತಿಳಿದಿರುವ ರೈತರು ಇತರ ತರಕಾರಿ ಬೆಳೆ ಜೊತೆಗೆ ಒಂದಷ್ಟು ಜಮೀನನ್ನು ಕೊತ್ತಂಬರಿ ಸೊಪ್ಪು ಬೆಳೆಯಲು ಮೀಸಲಿಡುವುದು ಸಾಮಾನ್ಯ. ಕೆಲವು ಸಲ ಕೊತ್ತಂಬರಿ ಬೆಲೆ ದುಬಾರಿಯಾಗುವುದುಂಟು. ನಾಲ್ಕು ಬೆರಳು ಗಾತ್ರದ ಕಟ್ಟು 100 ರೂಗಳ ಗಡಿ ದಾಟಿದ್ದ ಉದಾಹರಣೆಯೂ ಇದೆ. ಬೆಲೆ ಎಷ್ಟಾದರೂ ಖರೀದಿಸಲೇಬೇಕಾದ ಅನಿವಾರ್ಯತೆ ಗ್ರಾಹಕರದ್ದು. ತಾಲ್ಲೂಕಿನಲ್ಲಿ ಬೆಳೆಯುವ ಕೊತ್ತಂಬರಿ ಸೊಪ್ಪು, ಆಂಧ್ರಪ್ರದೇಶದ ಮದನಪಲ್ಲಿ, ಕದಿರಿ, ಕಡಪ, ಹೈದರಾಬಾದ್, ತಮಿಳುನಾಡಿನ ಚೆನ್ನೈ, ರಾಜ್ಯದ ಬೆಂಗಳೂರು ಮಾರುಕಟ್ಟೆಗೆ ರವಾನೆಯಾಗುತ್ತದೆ. ಬೇಡಿಕೆ ಇದ್ದಾಗ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ವ್ಯಾಪಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ತೋಟಗಳನ್ನು ಗುತ್ತಿಗೆ ಪಡುತ್ತಾರೆ. ಬೆಲೆ ಕುಸಿದ ಸಂದರ್ಭದಲ್ಲಿ ಕೃಷಿಕರೇ ಕಿತ್ತು ಕಟ್ಟು ಕಟ್ಟಿ ಸಾಗಿಸಬೇಕಾಗುತ್ತದೆ.
ಒಂದೆಡೆ ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತದಿಂದಾಗಿ ರೈತರು ಬೇಸರಗೊಂಡಿದ್ದರೆ, ಮತ್ತೊಂದೆಡೆ ಗ್ರಾಹಕರು ಮತ್ತು ಗೃಹಿಣಿಯರು ಸಂತಸದಿಂದಿದ್ದಾರೆ. ಕೊತ್ತಂಬರಿ ಸೊಪ್ಪಿನ ಗೊಜ್ಜು, ಚಟ್ನಿ, ತಂಬುಳಿ, ಕಡುಬು ಮುಂತಾದ ಖಾದ್ಯಗಳ ತಯಾರಿಯೂ ನಡೆದಿದೆ.
‘ಕೊತ್ತಂಬರಿ ಸೊಪ್ಪು ನಮ್ಮ ಆಹಾರದ ಅವಿಭಾಜ್ಯ ಅಂಗ. ಆರೋಗ್ಯಕ್ಕೂ ಸಾಕಷ್ಟು ಒಳ್ಳೆಯದು. ಕೊತ್ತಂಬರಿ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು. ಅಥವಾ, ಆಹಾರದಲ್ಲಿ ಕೊತ್ತಂಬರಿಯನ್ನ ಹೆಚ್ಚು ಬಳಕೆ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲನ್ನ ಕರಗಿಸಲು ಸಹಾಯವಾಗುತ್ತದೆ. ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಬಿಪಿ, ಶುಗರನ್ನು ನಿಯಂತ್ರಣದಲ್ಲಿಡುತ್ತದೆ. ನರಗಳನ್ನು ಶಾಂತಗೊಳಿಸಿ, ಒತ್ತಡವನ್ನು ತಗ್ಗಿಸುತ್ತದೆ. ಮಾನಸಿಕ ಸ್ವಾಸ್ಥ್ಯವನ್ನ ಕಾಪಾಡುತ್ತದೆ. ಮೂಳೆಗಳ ಆರೋಗ್ಯಯುತ ಬೆಳವಣಿಗೆಗೆ ಸಹಕರಿಸುವುದಲ್ಲದೆ, ಗಾಯವಾದಾಗ ಬೇಗ ರಕ್ತ ಹೆಪ್ಪುಗಟ್ಟಲು ಸಹಕರಿಸುತ್ತದೆ. ಅನೀಮಿಯಾ ತಡೆಗಟ್ಟಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕೊತ್ತಂಬರಿ ಗೊಜ್ಜು ಮತ್ತು ಚಟ್ನಿ ಎಲ್ಲರಿಗೂ ಅಚ್ಚುಮೆಚ್ಚು’ ಎಂದು ಗೃಹಿಣಿ ಲಕ್ಷ್ಮಿ ತಿಳಿಸಿದರು.

ತುಂಬಿ ತುಳುಕುತ್ತಿರುವ ತ್ಯಾಜ್ಯದ ರಾಶಿ

0

ನಗರದ ಹತ್ತನೇ ವಾರ್ಡಿನ ಮನೆಗಳ ನಡುವಿನ ಸಂದಿಯಲ್ಲಿ ಕಸದ ರಾಶಿ ಇದ್ದರೂ ಸಹ ನಗರಸಭೆ ಯಾವುದೇ ರೀತಿಯ ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರವು ಸುಂದರವಾಗಿ ಕಾಣಬೇಕಾದರೆ ಸ್ವಚ್ಛತೆಯು ಪ್ರಮುಖವಾಗಿದೆ. ಈ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯು ಬಿದ್ದಿರುವುದು ಕಣ್ಣ ಮುಂದೆ ಕಾಣಿಸುತ್ತದೆ. ಕಸದ ರಾಶಿಗಳಿಂದಾಗಿ ಸೊಳ್ಳೆಗಳ ಕಾಟ, ಬೀದಿ ನಾಯಿಗಳ ಕಾಟ ಹೆಚ್ಚಿದೆ. ರೋಗ ರುಜಿನಗಳು ಹರಡುವ ಭಯದಿಂದ ಈ ಭಾಗದ ಜನರು ಪರದಾಡುವಂತಾಗಿದೆ. ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಜನ ಸಾಮಾನ್ಯರು ಸಂಚರಿಸಲು ತೊಂದರೆಯಾಗಿದ್ದು, ಈ ವಿಚಾರವಾಗಿ ನಗರಸಭೆಗೆ ಎಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ನಗರಸಭೆಯು ಸಂಪೂರ್ಣ ವಿಫಲವಾಗಿದೆ ಎಂದು ನಗರಸಭೆಯ ನಾಮಿನಿ ಸದಸ್ಯ ಕೆ.ಎಂ.ವಿನಾಯಕ ತಿಳಿಸಿದರು.
ಈ ನಗರವು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ ಹಲವಾರು ತಿಂಗಳುಗಳು ಕಳೆದರೂ ಅಭಿವೃದ್ಧಿ ಮಾತ್ರ ಹಿಂದುಳಿದಿರುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ. ನಗರಸಭೆಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳು ಅನುದಾನ ಬರುತ್ತಿದ್ದರೂ ವಾರ್ಡುಗಳಲ್ಲಿನ ಚರಂಡಿಗಳು, ಕಸದ ವಿಲೇವಾರಿ ಇನ್ನೂ ಮುಂತಾದ ಸಮಸ್ಯೆಗಳು ಎದ್ದು ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕರಾಟೆಯಲ್ಲಿ ಪದಕಗಳನ್ನು ಗೆದ್ದ ನಗರದ ಮಕ್ಕಳು

0

ಕರಾಟೆ ಕಲಿಯುವುದರಿಂದ ಬರೀ ಆತ್ಮರಕ್ಷಣೆಯಷ್ಟೇ ಅಲ್ಲದೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಕೊಳ್ಳಬಹುದು ಎಂದು ರಾಯಲ್ ಟ್ವೆಕೊಂಡೊ ಕರಾಟೆ ತರಭೇತಿ ಶಾಲೆಯ ತರಬೇತುದಾರ ಮುನಿಕೃಷ್ಣಪ್ಪ ಹೇಳಿದರು.
ನಗರದ ಕೋಟೆ ವೃತ್ತದ ಶಾಲಾವರಣದಲ್ಲಿ ನಡೆಯುತ್ತಿರುವ ರಾಯಲ್ ಟ್ವೆಕೊಂಡೊ ಕರಾಟೆ ತರಬೇತಿ ಶಾಲೆಯ ಮಕ್ಕಳು ಇತ್ತೀಚೆಗೆ ಬೆಂಗಳೂರಿನ ಗುಂಡೂರಾವ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಟ್ವೆಕೊಂಡೊ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಕರಾಟೆಯನ್ನು ಕಲಿಯುವುದರಿಂದ ಮಾನಸಿಕವಾದ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ, ಆತ್ಮರಕ್ಷಣೆಗೂ ಅನುಕೂಲವಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಸ್ವರಕ್ಷಣೆಗಾಗಿ ಕರಾಟೆಯನ್ನು ಕಲಿಯುವುದರಿಂದ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಶಿಡ್ಲಘಟ್ಟದ ರಾಯಲ್ ಟ್ವೆಕೊಂಡೊ ಕರಾಟೆ ಶಾಲೆಯ ೨೬ ಮಂದಿ ಮಕ್ಕಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ೨೩ ಚಿನ್ನ ಹಾಗೂ ೦೩ ಬೆಳ್ಳಿ ಪದಕಗಳನ್ನು ಪಡೆದು ವಿಜೇತರಾಗಿದ್ದಾರೆ.