Home Blog Page 484

ಪೋಲಿಯೋ ರೋಗ ಕುರಿತು ಜನಜಾಗೃತಿ

0

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಬಿ.ಎಂ.ವಿ ಪ್ರೌಢಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ನ ವತಿಯಿಂದ ವಿದ್ಯಾರ್ಥಿಗಳು ಗ್ರಾಮದಲ್ಲಿ ಪೋಲಿಯೋ ರೋಗ ಕುರಿತು ಜನಜಾಗೃತಿ ನಡೆಸಿದರು.

ಹೆಜ್ಜೇನು ಹುಳುಗಳ ಗೂಡುಗಳನ್ನು ನಾಶಮಾಡಿ

0

ಸಾರ್ವಜನಿಕ ಸ್ಮಶಾನದಲ್ಲಿರುವ ಆಲದಮರದಲ್ಲಿನ ಹೆಜ್ಜೇನು ಹುಳುಗಳ ಗೂಡುಗಳನ್ನು ನಾಶಪಡಿಸುವಂತೆ ಮುತ್ತೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುತ್ತೂರು ಗ್ರಾಮದಿಂದ ಮೇಲೂರು ಕಡೆಗೆ ಸಂಚಾರ ಮಾಡುವ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ಸ್ಮಶಾನದ ಜಾಗದಲ್ಲಿರುವ ಬೃಹತ್ ಗಾತ್ರದ ಆಲದಮರದಲ್ಲಿ ಅನೇಕ ಹೆಜ್ಜೇನುಗೂಡುಗಳು ಕಟ್ಟಿಕೊಂಡಿವೆ. ಯಾರಾದರೂ ಮೃತಪಟ್ಟಾಗ ಶವಸಂಸ್ಕಾರಕ್ಕಾಗಿ ಹೋದಾಗಲೆಲ್ಲಾ ಹೆಜ್ಜೇನುಗಳು ದಾಳಿಮಾಡಿ ಕಚ್ಚುತ್ತಿರುವುದರಿಂದ ಅನೇಕ ಮಂದಿ ಆಸ್ಪತ್ರೆ ಪಾಲಾಗುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದೆ, ಈ ಮುಂಚೆಯೂ ಕೂಡಾ ಶವಸಂಸ್ಕಾರಕ್ಕೆ ಹೋದಾಗ ೧೫ ಮಂದಿಗೆ ಕಚ್ಚಿದ್ದರಿಂದ ಗಾಯಗೊಂಡು ಆಸ್ಪತ್ರೆಗಳಿಗೆ ಸೇರುವಂತಾಗಿತ್ತು, ಶುಕ್ರವಾರವೂ ಕೂಡಾ ಶವಸಂಸ್ಕಾರಕ್ಕೆಂದು ಹೋಗಿದ್ದಾಗ ಹುಳುಗಳು ದಾಳಿ ನಡೆಸಿವೆ.
ಮಳ್ಳೂರು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಅನೇಕ ಬಾರಿಗೆ ಮನವಿಗಳನ್ನು ಕೊಟ್ಟಿದ್ದರೂ ಕೂಡಾ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಮರದಲ್ಲಿರುವ ಹೆಜ್ಜೇನು ಗೂಡುಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮಂಜುನಾಥ್, ಗಂಗರೆಡ್ಡಿ, ನಾಗಪ್ಪ, ಸುಧಾಕರ್, ಗಂಗಾಧರ, ಮುನಿಯಪ್ಪ, ಮುನಿವೆಂಕಟಪ್ಪ, ಸರಸ್ವತಮ್ಮ, ವೆಂಕಟಮ್ಮ, ನಾರಾಯಣಸ್ವಾಮಿ, ಮುಂತಾದವರು ಒತ್ತಾಯಿಸಿದ್ದಾರೆ.

ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು

0

ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಅಧಿಕಾರಿಗಳು ಹೆಚ್ಚು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ವೆಂಕಟಪ್ಪ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಪಂಚಾಯತಿ ಅವಧಿಯ ಕೊನೆಯ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ತಾಲ್ಲೂಕು ಪಂಚಾಯತಿಗೆ ಬರುವಂತಹ ಎಲ್ಲಾ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು. ಗ್ರಾಮ ಪಂಚಾಯತಿಗಳ ಅಧಿಕಾರಿಗಳೂ ಸೇರಿದಂತೆ ಎಲ್ಲಾ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅರಿತುಕೊಂಡು ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆಗಳನ್ನು ತಯಾರು ಮಾಡುವ ಮೂಲಕ ಅವಶ್ಯಕತೆ ಇರುವ ಕಡೆಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು, ಚರಂಡಿಗಳು, ಬೀದಿದೀಪಗಳ ನಿರ್ವಹಣೆಯೂ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆಯನ್ನು ನೀಡಬೇಕು. ಕುಡಿಯುವ ನೀರಿನ ಸಂಪರ್ಕಕ್ಕಾಗಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಂಪರ್ಕ ಕಲ್ಪಿಸಲು ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲು ದುಬಾರಿಯಾದ ಕ್ರೀಯಾಯೋಜನೆ ತಯಾರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರಗಳು ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಕೆಲವು ಮಂದಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಮಿತ್ತನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಅನೈರ್ಮಲ್ಯದಿಂದಾಗಿ ಮಕ್ಕಳಿಗೆ ಕಾಯಿಲೆಗಳು ಬರುತ್ತಿದೆ. ಕೇಂದ್ರದ ಸುತ್ತಲೂ ಹಾಕಿರುವ ತಿಪ್ಪೆಗುಂಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗೆ ಸೂಚಿಸಿದ ಅವರು, ಗಂಗನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಹಾಳಾಗಿದ್ದು, ನೆಲಹಾಸು ಕಿತ್ತುಹೋಗಿದ್ದು, ಅದನ್ನು ದುರಸ್ಥಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಮೂಲಕ ನಡೆಯುತ್ತಿರುವ ಬಾಲಕರ ವಿದ್ಯಾರ್ಥಿನಿಲಯದಲ್ಲಿನ ಸ್ನಾನದ ಗೃಹಗಳನ್ನು ನಿರ್ಮಾಣ ಮಾಡಿ, ಮೂರು ವರ್ಷಗಳು ಕಳೆದರೂ ಇದುವರೆಗೂ ಬಾಗಿಲಿಟ್ಟಿಲ್ಲ, ಅದರ ಬಗ್ಗೆ ಗಮನಹರಿಸುವಂತೆ ಹಾಗೂ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು, ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಚಳಿಗಾಲದಲ್ಲಿ ನೀಲಿನಾಲಿಗೆ ರೋಗ ಕಾಣಿಸಿಕೊಂಡು ಅನೇಕ ಕುರಿಗಳು ಸಾವನ್ನಪ್ಪಿದ್ದು, ಇದುವರೆಗೂ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ಸಹಾಯಧನ ಬರುತ್ತಿರಲಿಲ್ಲ, ಈಗ ಸರ್ಕಾರದಿಂದ ಸಹಾಯಧನ ನೀಡುವಂತಹ ಸೌಲಭ್ಯವಿದ್ದು, ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು, ಕುರಿಸಾಕಾಣಿಕೆ ಮಾಡುವಂತಹ ರೈತರು, ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಲಹೆಗಳನ್ನು ಪಡೆಯಬೇಕು ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಮುನಿನಾರಾಯಣರೆಡ್ಡಿ ಹೇಳಿದರು.
ಕಳೆದ ೫ ವರ್ಷಗಳ ಹಿಂದೆ ಚುನಾಯಿತರಾಗಿ ಆಯ್ಕೆಯಾಗಿ ಬಂದಿದ್ದ ಸದಸ್ಯರ ಅವಧಿ ಮುಕ್ತಾಯವಾಗುತ್ತಿದ್ದು, ಕೊನೆಯ ಸಭೆಯಾಗಿದ್ದರಿಂದ ಎಲ್ಲಾ ಸದಸ್ಯರನ್ನು ಗೌರವಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ಗೌಡ, ಸದಸ್ಯರಾದ ವೇಣುಗೋಪಾಲ್, ಯರಬಚ್ಚಪ್ಪ, ಸರಸ್ವತಮ್ಮ, ದ್ಯಾವಮ್ಮ, ಶಶಕಲಾ, ಶ್ರೀನಾಥ್, ಚನ್ನಕೃಷ್ಣಪ್ಪ, ನೇತ್ರಾವತಿ, ಗೌರಮ್ಮ, ಮಂಜುಳಮ್ಮ, ಅಧಿಕಾರಿಗಳಾದ ದೇವೆಗೌಡ, ನಾರಾಯಣಸ್ವಾಮಿ, ಪುರುಷೋತ್ತಮ್, ಮಧು, ಲಕ್ಷ್ಮೀದೇವಮ್ಮ, ಪ್ರಕಾಶ್ ಮತ್ತಿತರರು ಹಾಜರಿದ್ದರು.

ಪಲ್ಸ್ ಪೋಲಿಯೋ ಜಾಗೃತಿ ಜಾಥಾ

0

ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡಿ, ದೀರ್ಘಕಾಲ ಭೀಕರ ಪರಿಣಾಮ ಬೀರುವ ಪೋಲಿಯೋ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಇಂತಹ ಕಾರ್ಯಕ್ರಮ ನಡೆಸುವುದು ನಮ್ಮ ಆದ್ಯ ಕರ್ತವ್ಯ ಎಂದು -ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ತಿಳಿಸಿದರು.
ನಗರದಲ್ಲಿ ಶನಿವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿಮಿತ್ತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಲಿಯೊ ರೋಗವು ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು. ಪ್ರಥಮ ಹಂತದಲ್ಲಿ ಜನವರಿ ೧೭ ರಿಂದ ೨೦ ತನಕ ನಡೆಯುವ ಪಲ್ಸ್ಪೋಲಿಯೋ ಲಸಿಕೆ ಹಾಕಿಸಲಾಗುತ್ತಿದ್ದು ಶಿಡ್ಲಘಟ್ಟ ನಗರದ ೭,೦೯೫ ಮಕ್ಕಳು ಸೇರಿದಂತೆ ತಾಲ್ಲೂಕಿನಾದ್ಯಂತ ೨೭,೩೨೪ ಮಕ್ಕಳಿಗೆ ಲಸಿಕೆ ಹಾಕಿಸಲು ಗುರಿ ಹೊಂದಲಾಗಿದ್ದು ಅದಕ್ಕಾಗಿ ತಾಲ್ಲೂಕಿನಾದ್ಯಂತ ೧೦೫ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪೋಲಿಯೋ ಲಸಿಕೆ ಹಾಕಿಸುವಂತೆ ಘೋಷಣೆಗಳನ್ನು ಕೂಗುತ್ತಾ ಜನ ಜಾಗೃತಿ ನಡೆಸಿದರು.

ಶುದ್ಧ ಕುಡಿಯುವ ನೀರಿನ ಘಟಕ

0

ಶುದ್ಧ ನೀರಿನ ಘಟಕ ಪ್ರತಿಯೊಂದು ಗ್ರಾಮಗಳಲ್ಲೂ ಆಗಬೇಕು. ಅದರ ಮೂಲಕ ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಸುಧಾರಿಸುವಂತಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶನಿವಾರ ಏಳೂವರೆ ಲಕ್ಷ ರೂಗಳ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕದ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿಗೆ ಒಟ್ಟು 39 ಕುಡಿಯುವ ನೀರಿನ ಘಟಕಗಳಿಗೆ ಯೋಜನೆ ರೂಪಿಸಿದ್ದು, ಅವುಗಳಲ್ಲಿ 11 ಮಂಜೂರಾಗಿವೆ. ಅತಿ ಶೀಖ್ರದಲ್ಲೇ ಕಾಮಗಾರಿಗಳು ನಡೆಯಲಿವೆ. ಎಣ್ಣಂಗೂರು ಗ್ರಾಮದಲ್ಲಿ ಕಾಲೋನಿಯಲ್ಲಿ 5 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪ್ರಾರಂಭವಾಗಲಿದೆ. ಜಂಗಮಕೋಟೆ ಹೋಬಳಿಯ ಎಣ್ಣಂಗೂರು ಗ್ರಾಮಕ್ಕೆ ನನ್ನ ವಿವೇಚನೆಯ ಕೋಟಾದಡಿಯಲ್ಲಿ ಬರುವ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ 28 ಲಕ್ಷ ರೂಪಾಯಿಗಳು ಮಂಜೂರಾಗಿವೆ. ಇದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿ ನಡೆಸಲಾಗುವುದು ಎಂದು ಹೇಳಿದರು.
ನಾಗಮಂಗಲ ಗ್ರಾಮದಲ್ಲಿ 2 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನೂ ಪ್ರಾರಂಭಿಸಲಾಗುವುದು. ಇರಗಪ್ಪನಹಳ್ಳಿ, ಚಾಕುಪ್ಪನಹಳ್ಳಿ, ಎರ್ರನಾಗೇನಹಳ್ಳಿ, ಗಡಿಮಿಂಚೇನಹಳ್ಳಿ, ಎಸ್.ಕುರುಬರಹಳ್ಳಿ, ಎಸ್.ದೇವಗಾನಹಳ್ಳಿ ಮುಖೇನ ಸಾದಲಿ ಮತ್ತು ಪೆರೇಸಂದ್ರವನ್ನು ಸಂಪರ್ಕಿಸುವ ರಸ್ತೆಗಳ ಸುಮಾರು 65 ಲಕ್ಷ ರೂಪಾಯಿಗಳ ಕಾಮಗಾರಿಯೂ ಪ್ರಾರಂಭವಾಗುತ್ತಿದೆ. ಗಂಜಿಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದು ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮೂರೂವರೆ ಕಿ ಮೀ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ನಡೆಯುವುದಾಗಿ ನುಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ ಶಿವಕುಮಾರ್, ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಸದಸ್ಯ ಶ್ರೀನಿವಾಸಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ವೆಂಕಟೇಶಪ್ಪ, ಆಂಜಿನಪ್ಪ, ತಾದೂರು ರಮೇಶ್, ರಘು, ಮುನಿರಾಜು, ಗೋಪಿನಾಥ್, ಮಂಜುನಾಥ, ರಾಮಣ್ಣ, ಸೋಮನಾಥ್, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮುತ್ತೂರು ಗ್ರಾಮದಲ್ಲಿ ಹೆಜ್ಜೇನು ಧಾಳಿ

0

ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶುಕ್ರವಾರ ಹೆಜ್ಜೇನಿನ ಧಾಳಿ ನಡೆದಿದ್ದು ಸುಮಾರು 30 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ಮುತ್ತೂರು ಗ್ರಾಮದ ಮುನಿಗಂಗಪ್ಪ ಎನ್ನುವವರು ನಿಧನರಾಗಿದ್ದು, ಅವರು ಸತ್ತ ನಂತರದ ಮೂರನೆಯ ದಿನದ ಪೂಜಾ ಕಾರ್ಯಕ್ಕೆ ಗ್ರಾಮದ ಸ್ಮಶಾನಕ್ಕೆ ತೆರಳಿ ಬರುವಾಗ ಹೆಜ್ಜೇನು ಧಾಳಿ ನಡೆಸಿದೆ. ಧಾಳಿಗೊಳಗಾದವರು ಮೇಲೂರು ಸರ್ಕಾರಿ ಆಸ್ಪತ್ರೆ, ವಿಜಯಪುರ ಸರ್ಕಾರಿ ಆಸ್ಪತ್ರೆ ಹಾಗೂ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಈ ರೀತಿಯ ಘಟನೆ ಐದನೆಯ ಬಾರಿ ನಡೆದಿದ್ದು, ಈ ಬಗ್ಗೆ ಪಂಚಾಯತಿಯವರು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇ – ಹರಾಜು ಪದ್ಧತಿಯಿಂದ ರೈತರು ತರುವ ರೇಷ್ಮೆ ಗೂಡಿಗೆ ಹೆಚ್ಚು ಬೆಲೆ ಸಿಗಲಿದೆ

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಡೆಯುವ ಬಹಿರಂಗ ಹರಾಜು ಪದ್ಧತಿಯಲ್ಲಿ ಹಲವಾರು ನ್ಯೂನತೆಗಳಿದ್ದು, ಅವನ್ನು ನಿವಾರಿಸಲು ಇ – ಹರಾಜು ಪದ್ಧತಿಯನ್ನು ಅಳವಡಿಸಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ರಾಜ್ಯದ ಒಂಭತ್ತು ಜಿಲ್ಲೆಗಳ ಇಲಾಖೆಯ 350 ಅಧಿಕಾರಿಗಳಿಗೆ ಇ–ಹರಾಜು ಪದ್ಧತಿಯ ಬಗ್ಗೆ ತಿಳುವಳಿಕೆ ಮೂಡಿಸಲು ಕಾರ್ಯಾಗಾರ ನಡೆಸದ ನಂತರ ಅವರು ಮಾತನಾಡಿದರು.
ಇ–ಹರಾಜು ಪ್ರಕ್ರಿಯೆಯಿಂದ ಮುಕ್ತ, ಪಾರದರ್ಶಕ ಹಾಗೂ ಸದ್ದು ಗದ್ದಲವಿಲ್ಲದ ವಹಿವಾಟಿಗೆ ಅವಕಾಶವಿರುತ್ತದೆ. ರೇಷ್ಮೆ ಬೆಳೆಗಾರರಿಗೆ ಗುಣಮಟ್ಟದ ಗೂಡಿಗೆ ನ್ಯಾಯಯುತ ನಿಖರವಾದ ದರ ಸಿಗುತ್ತದೆ. ನಿಖರ ತೂಕ, ಹಣ ಪವತಿ ವ್ಯವಸ್ಥೆ ಜಾರಿಯಾಗಲಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರು ಗೂಡಿನ ಗುಣಮಟ್ಟ ಆಧರಿಸಿ ಸೂಕ್ತ ಬೆಲೆ ನೀಡಲು ಯಾವುದೇ ತೊಂದರೆ ಇಲ್ಲದೆ, ಗಲಾಟೆ ಗದ್ದಲವಿಲ್ಲದೆ ವಹಿವಾಟಿನಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ರೀಲರ್ಗಳು ಮಾರುಕಟ್ಟೆಯಲ್ಲಿರುವ ಎಲ್ಲಾ ತಂಡಗಳಿಗೂ ಬಿಡ್ ಮಾಡುವ ಅವಕಾಶವಿರುತ್ತದೆ. ಹರಾಜು ಪ್ರಕ್ರಿಯೆ ಮುಗಿದ ನಂತರ ದರ ಅಂಗೀಕಾರ ಮಾಡಲು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.ರೇಷ್ಮೆ ಇಲಾಖೆಯಿಂದ ಇ–ಹರಾಜು ಸೌಲಭ್ಯವನ್ನು ಈಗಾಗಲೇ ಕೊಳ್ಳೇಗಾಲ, ರಾಮನಗರ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಅಲ್ಲಿನ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಇ–ಹರಾಜು ವಹಿವಾಟಿನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇ–ಹರಾಜು ಪ್ರಕ್ರಿಯೆಯಿಂದ ಒಂದು ಕೆ.ಜಿ ರೇಷ್ಮೆ ಗೂಡಿನ ಬೆಲೆ 20 ರೂಗಳಿಂದ 40 ರೂಗಳವರೆಗೆ ಹೆಚ್ಚಾಗಿರುವುದು ಕಂಡು ಬಂದಿದೆ. ಈ ಅನುಕೂಲ ರಾಜ್ಯದ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಹೊಂದಿರುವ ಶಿಡ್ಲಘಟ್ಟದಲ್ಲೂ ಅಳವಡಿಸಲು ಕ್ರಮ ವಹಿಸಿದ್ದೇವೆ. ಅಧಿಕಾರಿಗಳು ಅವರವರ ಕ್ಷೇತ್ರಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಮತ್ತು ನೂಲು ಬಿಚ್ಚಾಣಿಕೆದಾರರಿಗೆ ಅರಿವು ಮೂಡಿಸಬೇಕು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಣಕು ಬಿಡ್ಡಿಂಗ್ ವ್ಯವಸ್ಥೆಯನ್ನು ಸಹ ಮಾಡಿ ತೋರಿಸಲಾಯಿತು.
ರೇಷ್ಮೆ ಇಲಾಖೆಯ ಬಿತ್ತನೆ ವಲಯದ ಜಂಟಿ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ವಿನಿಮಯ ಕೇಂದ್ರದ ಮಮೀನ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಉಪನಿರ್ದೇಶಕರಾದ ಮೌನುದ್ದೀನ್, ರತ್ನಯ್ಯಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

 

ಸಂಕ್ರಾಂತಿ ಹಬ್ಬದ ಸಂಭ್ರಮ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದ ವತಿಯಿಂದ ಶುಕ್ರವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಾಸುಗಳ ಕಿಚ್ಚು ಹಾಯಿಸುವಿಕೆಯಲ್ಲಿ ಉತ್ಸಾಹದಿಂದ ಜೋಡಿ ರಾಸುಗಳನ್ನು ಕರೆತಂದು ಕಿಚ್ಚು ಹಾಯಿಸಲಾಯಿತು. ಈ ಸಂದರ್ಭದಲ್ಲಿ ಬೆಂಕಿಯ ಭರಾಟೆ ತಿರುಗಿಸುವಿಕೆ, ಸೀಮೆ ಎಣ್ಣೆಯನ್ನು ಬಾಯಲ್ಲಿ ಉಗುಳಿ ಬೆಂಕಿ ಚಿಮ್ಮಿಸುವಿಕೆಯ ಪ್ರದರ್ಶನವೂ ನಡೆಯಿತು.

ಸಂಕ್ರಾಂತಿ ಕವಿಗದ್ದಿಗೆ

0

ಸಾಹಿತ್ಯ ಸಮಾಜದ ಕೈಗನ್ನಡಿ. ಪದ ಸಂಪತ್ತನ್ನು ಹೆಚ್ಚಾಗಿ ಯುವ ಕವಿಗಳು ತಮ್ಮದಾಗಿಸಿಕೊಂಡು ಸ್ವರಚಿತ ಕವನ ಮತ್ತು ಚುಟುಕುಗಳ ಮುಖಾಂತರ ಸಮಾಜ ಓರೆ ಕೋರೆಗಳನ್ನು ತಿದ್ದುವಂತ ಕೆಲಸ ಮಾಡಬಹುದು ಎಂದು ನಿವೃತ್ತ ಜಂಟಿ ನಿರ್ದೇಶಕ ಸಿ.ಬಿ ಹನುಮಂತಪ್ಪ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸಂಕ್ರಾಂತಿ ಕವಿಗದ್ದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಹಲವಾರು ಕೆಲಸಗಳ ಮುಖಾಂತರ ಸಮಾಜವನ್ನು ತಿದ್ದವಂತ ಕೆಲಸ ಮಾಡುತ್ತಿರುತ್ತಾರೆ. ಎಲ್ಲದಕ್ಕಿಂತ ಅಕ್ಷರ ರೂಪದಲ್ಲಿ ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಹಿರಿಯ ಕವಿಗಳ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳುವಂತ ಕಾಯಕದಲ್ಲಿ ನಿರಂತರವಾಗಿ ತೊಡಗಬೇಕು. ನಾಡು ನುಡಿಗಾಗಿ ಮತ್ತು ದೇಶ ಕಟ್ಟುವಂತ ರೀತಿಯಲ್ಲಿ ಯುವ ಕವಿಗಳಿಂದ ಹೊರ ಬಂದಾಗ ಸಮಾಜ ಸುಧಾರಣೆಯ ಕನಸು ನನಸಾಗಲು ಸಾಧ್ಯ ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಚಲಪತಿಗೌಡ ಮಾತನಾಡಿ, ಸಮಾಜದ ಒಳಿತಿಗಾಗಿ ಪಂಪ, ರನ್ನ, ಪುರಂದರ ದಾಸರು, ಕನಕದಾಸರು, ಬಸವಣ್ಣ, ಅಕ್ಕಮಹಾದೇವಿ ಹಲವಾರು ಮಹನೀಯರು ವಚನ ಸಾಹಿತ್ಯ ಮೂಲಕ ಜನರೊಳಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಸೇವೆ ಸಲ್ಲಿಸಿದ್ದಾರೆ. ಇಂದಿನ ಜನರು ಜಾತಿ ಧರ್ಮಗಳನ್ನು ಬದಿಗೊತ್ತಿ ಸಮಾನತೆಯತ್ತ ನಡೆದಾಗ ಮಾತ್ರ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಕವಿಗಳಾದ ಕೆ.ಎನ್.ಭವಾನಿ, ವಾಣಿಶ್ರೀ, ಅಶ್ವಿನಿ, ಶಿಲ್ಪ, ಸ್ವಾತಿ, ಭವ್ಯ, ನವೀನ್ಕುಮಾರ್, ಅನುಷಾ, ಚಂದನಾ, ಧರ್ಮೇಂದ್ರ, ರಘು, ಮುನಿರಾಜು, ಹರೀಶ್, ಗುಣಶ್ರೀ ಕವನಗಳನ್ನು ವಾಚಿಸಿದರು. ಚುಟುಕ ಸಾಹಿತ್ಯ ಪರಿಷತ್ ವತಿಯಿಂದ ಭಾಗವಹಿಸಿದ್ದ ಕವಿಗಳಿಗೆ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು.
ವಿದ್ಯಾಸಾಗರ ರಾಜ್ಯ ್ರಶಸ್ತಿ ಪುರಸ್ಕೃತೆ ಕೆ.ಎನ್.ಅಮೃತಾ, ಉಪನ್ಯಾಸಕ ಹಾಲಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮರೆಡ್ಡಿ, ಉಪನ್ಯಾಸಕ ಸುರೇಶ್, ಚುಟುಕ ಸಾಹಿತ್ಯ ಪರಿಷತ್ ತಾಲ್ಲೂಕು ಗೌರವಾಧ್ಯಕ್ಷ ಎಂ.ದೇವರಾಜ್, ಅಮರ್, ಶಿಕ್ಷಕ ಎನ್.ವಿ.ಪ್ರಸಾದ್, ಚುಸಾಪ ಅಧ್ಯಕ್ಷ ಈಧರೆ ಪ್ರಕಾಶ್, ಕಾರ್ಯದರ್ಶಿ ಈಶ್ವರ್ಸಿಂಗ್, ವೇಣುಗೋಪಾಲ್, ನರಸಿಂಹರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಸ್ಲಿಂ ಯುವಕರ ಸಂಕ್ರಾಂತಿ

0

ನಗರದಲ್ಲಿ ಶುಕ್ರವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಸ್ಲಿಂ ಯುವಕರು ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಎತ್ತುಗಳನ್ನು ಸಿಂಗರಿಕೊಂಡು ಮೆರವಣಿಗೆಯಲ್ಲಿ ಕರೆದೊಯ್ದು ಸಾಮರಸ್ಯವನ್ನು ಸಾರಿದರು.
ಮಹಬೂಬ್ನಗರದ ವಾಸಿಗಳಾದ ಷಫೀವುಲ್ಲಾ, ವಲೀಬಾ ಮತ್ತು ಮಹಬೂಬ್ಪಾಷ ತಮ್ಮ ಎತ್ತುಗಳನ್ನು ತೊಳೆದು ಸಿಂಗರಿಸಿ, ಕುಂಕುಮವಿರಿಸಿ, ಬಣ್ಣದ ಪೇಪರ್ ಮತ್ತು ಬೆಲೂನುಗಳನ್ನು ಕಟ್ಟಿ ಚಿಂತಾಮಣಿ ರಸ್ತೆಯಲ್ಲಿ ಆಂಜನೇಯಸ್ವಾಮಿ ದೇವಾಲಯದ ಬಳಿ ಕಿಚ್ಚು ಹಾಯಿಸಲು ಕರೆದೊಯ್ದರು.
ಶಿಡ್ಲಘಟ್ಟ ನಗರದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಉತ್ತಮ ರೇಷ್ಮೆ ತಯಾರಾಗಲು ನೀರಿನ ಗುಣಮಟ್ಟ ಬಹಳ ಮುಖ್ಯ. ಹಾಗಾಗಿಯೇ ಈ ನೀರನ್ನು ಸಾಗಿಸುವುದನ್ನೇ ಕೆಲವರು ತಮ್ಮ ಜೀವನೋಪಾಯವನ್ನಾಗಿಸಿಕೊಂಡಿದ್ದಾರೆ. ಹಿಂದೆ ನೀರನ್ನು ಸಾಗಿಸಲು ಎತ್ತಿನ ಗಾಡಿಗಳು ಮಾತ್ರವಿದ್ದವು. ಈಗ ಟ್ಯಾಂಕರುಗಳು ಹೆಚ್ಚಿವೆ. ಗಲ್ಲಿಗಳಲ್ಲಿರುವ ರೇಷ್ಮೆ ತಯಾರಿಸುವ ಘಟಕಗಳಿಗೆ ಈಗಲೂ ಎತ್ತಿನ ಗಾಡಿಗಳ ಮೂಲಕವೇ ನೀರು ಸರಬರಾಜಾಗಬೇಕು. ಹಾಗಾಗಿ ಎತ್ತುಗಳನ್ನು ಸಾಕಿರುವ ನೀರಿನ ಗಾಡಿಗಳವರು ಈ ದಿನ ಅವನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ದರು.
‘ಸಂಕ್ರಾಂತಿಯಂದು ಕಿಚ್ಚು ಹಾಯಿಸಿದಲ್ಲಿ ಎತ್ತುಗಳಿಗೆ ರೋಗ ಬಾರದು ಎಂಬ ನಂಬಿಕೆಯಿದೆ. ನಮ್ಮ ವೃತ್ತಿಗಾಗಿ ನಾವು ಎತ್ತುಗಳನ್ನು ನಂಬಿದ್ದೇವೆ. ಎಲ್ಲಾ ಧರ್ಮಾಚರಣೆಗಳೂ ನಮ್ಮ ಒಳ್ಳೆಯದಕ್ಕೆ ಮಾಡಿದ್ದಾರೆ. ಹಾಗಾಗಿ ನಾವು ಈ ದಿನ ಎತ್ತುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತೇವೆ. ಇತರರೂ ತರುತ್ತಾರೆ ಅವರೊಂದಿಗೆ ನಾವು ಕಿಚ್ಚು ಹಾಯಿಸುತ್ತೇವೆ’ ಎಂದು ಷಫೀವುಲ್ಲಾ ತಿಳಿಸಿದರು.

ಮೇಲೂರು ಗ್ರಾಮದಲ್ಲಿ ಉತ್ಸವ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶುಕ್ರವಾರ ಸೀತಾರಾಮ ಲಕ್ಷ್ಮಣಮೂರ್ತಿ ಸಮೇತ ಆಂಜನೇಯಸ್ವಾಮಿ ಉತ್ಸವವನ್ನು ಅದ್ದೂರಿಯಾಗಿ ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು.
ಸುಮಾರು ಐದು ನೂರು ವರ್ಷಗಳಿಗೂ ಹಿಂದಿನದ್ದೆನ್ನಲಾಗಿರುವ ಉತ್ಸವ ಮೂರ್ತಿಗಳನ್ನು ಗ್ರಾಮದೆಲ್ಲೆಡೆ ಮೆರವಣಿಗೆ ನಡೆಸಲಾಯಿತು. ಪ್ರತಿ ಮನೆಯವರೂ ಪೂಜೆ ಸಲ್ಲಿಸಿದರು. ಉತ್ಸವ ನಡೆಸಿದ ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರೂ ಪೂಜೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
‘ಧನುರ್ಮಾಸದಲ್ಲಿ ಒಂದು ತಿಂಗಳ ಕಾಲ ನಡೆಯುವ ಭಜನೆಯೊಂದಿಗಿನ ಈ ಉತ್ಸವವನ್ನು ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಅದನ್ನು ನಾವು ಮುಂದುವರೆಸಿದ್ದೇವೆ. ಸಂಕ್ರಾಂತಿಯಂದು ಮುಕ್ತಾಯವಾಗುವ ಈ ಉತ್ಸವದ ಕಡೆಯ ದಿನ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ಹಾಗೂ ಹಿರಿಯರಿಗೆ ಸನ್ಮಾನ ನಡೆಸುತ್ತೇವೆ’ ಎಂದು ಭಜನೆ ತಂಡದ ಹಿರಿಯರಾದ ಎನ್.ಗೋಪಾಲಪ್ಪ ತಿಳಿಸಿದರು.
ಭಜನೆ ತಂಡದ ಚೌಡಸಂದ್ರದ ಹನುಮಂತಪ್ಪ, ಬೆಳ್ಳೂಟಿ ಮುನಿಯಪ್ಪ, ಎಂ.ಎಂ.ಸ್ವಾಮಿ, ರಾಮಾಂಜಿನಪ್ಪ, ನಾಗರಾಜಶೆಟ್ಟಿ, ಆಂಜಿನಪ್ಪ, ನಾರಾಯಣಸ್ವಾಮಿ, ರತ್ನಮ್ಮ, ಶಾಂತಮ್ಮ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಚನ ಸಾಹಿತ್ಯವನ್ನು ಪ್ರಚಾರಪಡಿಸಬೇಕು

0

ಶಿವಯೋಗಿ ಸಿದ್ದರಾಮೇಶ್ವರ ಅವರ ತತ್ವಗಳನ್ನು ಒಂದು ಜಾತಿ ಅಥವಾ ವರ್ಗಕ್ಕೆ ಸಮೀತಗೊಳಿಸುವುದನ್ನು ಬಿಟ್ಟು ಮಾನವನ ಬದುಕು ಸಾಕಾರಗೊಳ್ಳಲು ಅವರ ವಚನ ಸಾಹಿತ್ಯವನ್ನು ಪ್ರಚಾರಪಡಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ೩ ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
೧೨ ನೇ ಶತಮಾನದಲ್ಲಿ ಜಾತಿ ಪದ್ದತಿಯಿಂದಾಗಿ ಸಮಾಜದಲ್ಲಿ ತಲೆದೋರಿದ್ದ ಅಶಾಂತಿಯನ್ನು ತೊಡೆದುಹಾಕುವ ಸಲುವಾಗಿ ವಚನಕಾರ ಸಿದ್ದರಾಮೇಶ್ವರ ಅವರು ಅನುಭವ ಮಂಟಪದಲ್ಲಿ ತನ್ನ ವಚನಸಾಹಿತ್ಯಗಳ ಮೂಲಕ ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದರು. ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದಂತಹ ಅಂಬೇಡ್ಕರ್, ಬುದ್ದ, ಬಸವಣ್ಣ, ವಾಲ್ಮೀಕಿ, ಕನಕದಾಸರು ಸೇರಿದಂತೆ ಹಲವಾರು ಮಂದಿ ದಾರ್ಶನಿಕರನ್ನು ಕೆಲವು ಜಾತಿಗಳ ಸಮುದಾಯಗಳಿಗೆ ಸೀಮಿತಗೊಳಿಸಿಕೊಳ್ಳುತ್ತಿರುವುದು ದುಃಖಕರವಾದ ಸಂಗತಿಯಾಗಿದೆ, ೧೨ ನೇ ಶತಮಾನದಲ್ಲಿ ಜಾತಿ ಪದ್ದತಿ ತಾಂಡವಾಡುತ್ತಿದ್ದರೂ ಕೂಡಾ ವಚನಕಾರ ಬಸವಣ್ಣನವರು ಸ್ಥಾಪನೆ ಮಾಡಿದ್ದಂತಹ ಅನುಭವ ಮಂಟಪದಲ್ಲಿ ಸಿದ್ದರಾಮೇಶ್ವರ ಅವರಿಗೆ ನೀಡಿದ್ದ ಅವಕಾಶಗಳನ್ನು ಗಮನಿಸಿದಾಗ ಜಾತಿ ಪದ್ದತಿ ನಿರ್ಮೂಲನೆಗೆ ಶರಣರು ನೀಡಿದ್ದ ಪ್ರಾಶಸ್ತ್ಯವು ತಿಳಿಯುತ್ತದೆ. ಪ್ರತಿಯೊಂದು ಜನಾಂಗದವರನ್ನು ಪ್ರೀತಿಸುವ ಮೂಲಕ, ಸಾಮರಸ್ಯದಿಂದ ಬದುಕಿ ಬಾಳಬೇಕಾಗಿದೆ. ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ಮಾತ್ರ ಜಾತಿವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗುತ್ತದೆ ಎಂದರು.
ತಹಶೀಲ್ದಾರ್ ಕೆ.ಎಂ.ಮನೋರಮಾ ಮಾತನಾಡಿ, ಸಮಾಜದಲ್ಲಿನ ಪ್ರತಿಯೊಂದು ವರ್ಗದ ಜನರು ಸಹೋದರತೆಯಿಂದ, ಜಾತಿ, ಮತ, ಬೇದಗಳನ್ನು ಬದಿಗೊತ್ತಿ, ಸಾಮರಸ್ಯದ ಜೀವನ ನಡೆಸಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಶರಣರ ಮಾರ್ಗದರ್ಶನ ಹಾಗೂ ಅವರ ದೂರದೃಷ್ಟಿಯನ್ನು ಅರಿತುಕೊಂಡು ಎಲ್ಲಾ ವರ್ಗದ ಜನರು, ಸಾಮರಸ್ಯ ಬದುಕನ್ನು ರೂಪಿಸಿಕೊಂಡು ಹೋಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ತಾಲ್ಲೂಕು ಬೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ, ನರಸಪ್ಪ, ಎನ್.ರಾಜಣ್ಣ, ಕೆ.ವಿ.ಚಲಪತಿ, ಎಂ.ಶ್ರೀನಿವಾಸ್, ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಶಿರಸ್ತೆದಾರ ಲಕ್ಷ್ಮೀಕಾಂತಮ್ಮ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಮೋಹನ್ಕುಮಾರ್, ಗ್ರಾಮಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್, ಜಿ.ವಿ.ದೇವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಪಘಾತ – ಸಾವು

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿ ಸರ್ಕಾರಿ ಬಸ್ ಹಾಗು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಅಪ್ಪೇಗೌಡನಹಳ್ಳಿ ಗ್ರಾಮದ ಪಿಳ್ಳೇಗೌಡ (೫೨) ಮೃತ ದುರ್ದೈವಿಯಾಗಿದ್ದಾನೆ.
ಮೃತ ಪಿಳ್ಳೇಗೌಡ ಶಿಡ್ಲಘಟ್ಟದಿಂದ ಅಪ್ಪೇಗೌಡನಹಳ್ಳಿ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಗಿ ಬಣವೆಗೆ ಕಿಡಿಗೇಡಿಗಳಿಂದ ಬೆಂಕಿ

0

ರಾಗಿ ಬಣವೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಸುಮಾರು ೨ ಲಕ್ಷ ರೂಗಳಿಗೂ ಹೆಚ್ಚು ಮೌಲ್ಯದ ರಾಗಿ ಬಣವೆ ರಾಗಿಯ ಸಮೇತ ಸುಟ್ಟುಹೋಗಿದೆ.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ರೈತ ವಿ.ಕೆಂಪಯ್ಯ ಎಂಬುವವರಿಗೆ ಸೇರಿದ ರಾಗಿ ಬಣವೆಗೆ ಬುಧವಾರ ರಾತ್ರಿ ಸುಮಾರು ೧೧ ಗಂಟೆಯಲ್ಲಿ ಕಿಡಿಗೇಡಿಗಳು ಬೆಂಕಿಹಚ್ಚಿದ್ದಾರೆ ಎನ್ನಲಾಗಿದ್ದು, ರೈತನ ಕುಟುಂಬದವರು ರಾತ್ರಿ ಸುಮಾರು ೧೨ ಗಂಟೆಯಲ್ಲಿ ಪಂಪ್ಸೆಟ್ನಿಂದ ತೋಟಕ್ಕೆ ನೀರು ಹಾಯಿಸಲು ಹೋದಾಗ ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದನ್ನು ಗಮನಿಸಿದ್ದಾರೆ. ರಾತ್ರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನೀರನ್ನು ಹಾಕಿ ಬೆಂಕಿ ನಂದಿಸಲು ಸಾಧ್ಯವಾಗದೆ, ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ.
ಚಿಕ್ಕಬಳ್ಳಾಪುರದಿಂದ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬಣವೆಯು ರಾಗಿಯ ಸಮೇತ ಸಂಪೂರ್ಣವಾಗಿ ಸುಟ್ಟುಹೋಗಿದೆ. ರೈತನಿಗೆ ಸುಮಾರು ೨ ಲಕ್ಷ ರೂಪಾಯಿಗಳು ನಷ್ಟವಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರೈತ ಸಂಘದಒತ್ತಾಯ: ಕಳೆದ ಎರಡು ತಿಂಗಳ ಹಿಂದೆ ಬಿದ್ದಂತಹ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದಿರುವ ಬೆಳೆಗಳು ನಷ್ಟವಾಗಿದ್ದು, ಈಗ ಕಿಡಿಗೇಡಿಗಳು ರಾಗಿ ಬಣವೆಗೆ ಬೆಂಕಿ ಹಚ್ಚಿರುವುದರಿಂದ ಲಕ್ಷಾಂತರ ರೂಪಾಯಿಗಳ ಬೆಳೆ ನಷ್ಟವಾಗಿದೆ. ಕಂದಾಯ ಇಲಾಖೆಯಿಂದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಒತ್ತಾಯಿಸಿದ್ದಾರೆ.

ಸಂಕ್ರಾಂತಿ ಹಬ್ಬ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಸಂಜೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಯ್ಯಪ್ಪಸ್ವಾಮಿಗೆ ವೀಳೆದೆಲೆ, ಗುಲಾಬಿ ಮತ್ತು ಚೆಂಡು ಹೂಗಳಿಂದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಬ್ಯಾಟರಾಯಸ್ವಾಮಿ ದೇವಾಲಯದ ಬಳಿ ಯಾತ್ರಿನಿವಾಸ

0

ಇತಿಹಾಸ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ೫೦ ಲಕ್ಷ ರೂ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯಿರುವ ಬ್ಯಾಟರಾಯಸ್ವಾಮಿ ದೇವಾಲಯದ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಯಾತ್ರಿನಿವಾಸ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಸಾವಿರ ವರ್ಷಗಳ ಇತಿಹಾಸವಿದ್ದು, ಯಾತ್ರಿನಿವಾಸ ಕಾಮಗಾರಿಯಲ್ಲಿ ಭಕ್ತಾದಿಗಳು ಉಳಿದುಕೊಳ್ಳಲು ಎಂಟು ಕೊಠಡಿ ಸೇರಿದಂತೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಈಗಾಗಲೇ ತಾಲೂಕಿನ ತಲಕಾಯಲಬೆಟ್ಟಕ್ಕೆ ೧ ಕೋಟಿ, ಹಾಗು ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಲಿಂಗೇಶ್ವರನ ಬೆಟ್ಟಕ್ಕೆ ೧.೫ ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬ್ಯಾಟರಾಯಸ್ವಾಮಿ ದೇವಾಲಯದವರು ಮತ್ತೊಂದು ಪ್ರಸ್ತಾವನೆ ಸಲ್ಲಿಸಿದಲ್ಲಿ ದೇವಾಲಯದ ಬಳಿ ಸಭೆ ಸಮಾರಂಭಗಳನ್ನು ಮಾಡಲು ಒಂದು ಬೃಹತ್ ಕೊಠಡಿ ನಿರ್ಮಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ಸಹಕಾರಿ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಗ್ರಾಮದ ಮುಖಂಡರಾದ ಮುನಿರಾಜು, ದಾಮೋದರ್, ಮಂಜುನಾಥ, ವಕೀಲ ಎಂ.ಬಿ.ಲೋಕೇಶ್ ಮತ್ತಿತರರು ಹಾಜರಿದ್ದರು.

ಅನ್ನಸಂತರ್ಪಣೆ

0

ಶಿಡ್ಲಘಟ್ಟದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬುಧವಾರ ಜ್ಯೂನಿಯರ್ ಎನ್.ಟಿ.ಆರ್ ಅವರ ಚಿತ್ರ ನಾನಕು ಪ್ರೇಮತೋ ಚಲನಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಅಭಿಮಾನಿಗಳಾದ ಕಾರ್ತಿಕ್, ಮಧು, ಸುನಿಲ್, ಮನೋಜ್, ಅರುಣ್, ಮಹೇಶ್, ನವೀನ್, ಮುರಳಿ, ಬಾಬು ಅನ್ನಸಂತರ್ಪಣೆ ಮಾಡಿ ಸಿಹಿಯನ್ನೂ ಹಂಚಿದರು.

ಪರೀಕ್ಷೆಗೆ ತಯಾರಾಗುವುದು ಒಂದು ಕಲೆ

0

ಎಷ್ಟೇ ಚುರುಕುಮತಿಗಳಾದರೂ, ಬುದ್ಧಿವಂತರಾದರೂ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವಾಗ ಭಯಪಡುತ್ತಾರೆ. ಸರಿಯಾಗಿ ಓದುವುದು ಮತ್ತು ಪರೀಕ್ಷೆಗೆ ತಯಾರಾಗುವುದು ಒಂದು ಕಲೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ‘ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ’ ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.
ಜ್ಞಾನ ಸಂಪಾದನೆಗಾಗಿ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ, ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನ ಮಾಡುವುದು ಅಷ್ಟೇ ಮುಖ್ಯ. ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ. ಓದಿನಲ್ಲಿ ತನ್ಮಯತೆ ಮತ್ತು ಸತತ ಅಭ್ಯಾಸದಿಂದ ಏಕಾಗ್ರತೆಯನ್ನು ಪಡೆದುಕೊಳ್ಳಬಹುದು. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಭಯ ಹೋಗುತ್ತದೆ ಎಂದು ಹೇಳಿದರು.
ಪರೀಕ್ಷಾ ಸಿದ್ಧತೆಯನ್ನು ಏಳು ಹಂತಗಳಲ್ಲಿ ಮಾಡಿಕೊಳ್ಳುವುದರ ಕುರಿತು, ವಿದ್ಯಾರ್ಥಿಗಳು ಅನುಸರಿಸಬೇಕಾದ ತಂತ್ರಗಳು, ಜವಾಬ್ದಾರಿಗಳ ಬಗ್ಗೆ ಹಾಗೂ ಶೇಕಡಾ 100 ರಷ್ಟು ಅಂಕಗಳನ್ನು ಗಳಿಸುವುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಶಿಕ್ಷಕಿ ಕೆ.ಮಂಜುಳಾ, ಶಿಕ್ಷಕರಾದ ಸೈಯಿದಾ ಇಷ್ರತ್, ಜಮೀಲಾ ಖಾತೂನ್, ಸರ್ದಾರ್ ಚಾಂದ್ಪಾಷ, ಎಂ.ಇಂದಿರಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರೇಷ್ಮೆ ಗೂಡಿನ ಮಾರುಕಟ್ಟೆಯ ಕುಂದುಕೊರತೆ ನಿವಾರಿಸಿ

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾಕಷ್ಟು ಕುಂದುಕೊರತೆಗಳಿದ್ದು, ಅವನ್ನು ಪರಿಹರಿಸಬೇಕೆಂದು ಸಮಾನ ಮನಸ್ಕರ ಹೋರಾಟ ಸಮಿತಿ ಸದಸ್ಯರು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು. ಮಾರುಕಟ್ಟೆಯಲ್ಲಿ ಹರಾಜಾದ ಗೂಡನ್ನು ನಿಗದಿತ ವೇಳೆಯಲ್ಲಿ ತೂಕ ಮಾಡತಕದ್ಕದ್ದು. ರೇಷ್ಮೆ ಗೂಡಿನ ಮಾರುಕಟ್ಟೆಯ ಪಕ್ಕದಲ್ಲಿ ಸ್ಯಾಂಪಲ್ ನೂಲು ಬಿಚ್ಚಾಣಿಕಾ ಘಟಕವನ್ನು ತೆರವುಗೊಳಿಸುವುದಾಗಿ ಆರು ತಿಂಗಳ ಹಿಂದೆಯೇ ಹೇಳಿದ್ದರೂ ಇನ್ನೂ ತೆರವುಗೊಳಿಸಿಲ್ಲ. ರೈತರ ಗೂಡು ಸ್ಯಾಂಪಲ್ ಹೆಸರಿನಲ್ಲಿ ಮಾರುಕಟ್ಟೆಯ ಹೊರಕ್ಕೆ ಅನಧಿಕೃತವಾಗಿ ಹೋಗುವುದನ್ನು ತಡೆಯಬೇಕು. ಮಾರುಕಟ್ಟೆಗೆ ಬರುವ ರಸ್ತೆಯು ಹದಗೆಟ್ಟಿದೆ. ದೂರದಿಂದ ಬರುವ ರೈತರಿಗೆ ರಾತ್ರಿ ಉಳಿಯಲು ವಿಶ್ರಾಂತಿಗೃಹ ನಿರ್ಮಿಸಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಜಾಗವನ್ನು ಕಾಯ್ದಿರಿಸುವ ಮಧ್ಯವರ್ತಿಗಳ ಹಾವಳಿ ತಡೆಯಬೇಕು ಎಂಬ ತೊಂದರೆಗಳ ಪಟ್ಟಿಯನ್ನು ನೀಡಿದರು.
ಮನವಿಯನ್ನು ಸ್ವೀಕರಿಸಿದ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಮಾತನಾಡಿ, ಇ–ಹರಾಜು ಪ್ರಕ್ರಿಯೆಯು ಪ್ರಾರಂಭವಾಗುತ್ತಿದ್ದು, ಹಲವಾರು ಸಮಸ್ಯೆಗಳು ಇದರಿಂದ ಪರಿಹಾರವಾಗಲಿದೆ. ರಸ್ತೆಯ ಕಾಮಗಾರಿ ಮೂರು ತಿಂಗಳೊಳಗೆ ನಡೆಯಲಿದೆ. ಉಳಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಅಕ್ರಂ ಪಾಷ, ದಾದಾಪೀರ್, ಅಸಾದ್, ಮಂಜುನಾಥ, ಪುರುಷೋತ್ತಮ, ಮಾರಪ್ಪ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಯುವಜನತೆ ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ

0

ರೈತ ದೇಶದ ಬೆನ್ನೆಲುಬು ಎಂಬ ಮಾತು ಎಲ್ಲರೂ ಹೇಳುತ್ತರಾದರೂ ವಾಸ್ತವದಲ್ಲಿ ಯುವಜನತೆ ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸುಜಾತ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಗುರುವಾರ ಸುಮಾರು 40 ಮಂದಿ ವಿದ್ಯಾರ್ಥಿಗಳೊಂದಿಗೆ ಕೃಷಿ ಆರ್ಥಿಕ ಅಧ್ಯಯನ ಪ್ರವಾಸ ಕೈಗೊಂಡಿದ್ದ ಅವರು ಪ್ರಗತಿಪರ ಕೃಷಿಕ ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ, ರೇಷ್ಮೆ, ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಜನಸಂಖ್ಯೆ ಏರಿದಂತೆ ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿದೆ. ಆದರೂ ಕೃಷಿಯನ್ನು ಅವಲಂಬಿಸಿರುವವರು ಹಣ ಸಂಪಾದಿಸುವುದಿಲ್ಲ ಎಂಬ ನಂಬಿಕೆ ಮಾತ್ರ ಎಲ್ಲೆಡೆ ಪ್ರಚಲಿತವಾಗಿದೆ. ಸಾಲದ ಹೊರೆ ಹೊರಲಾಗದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಓದಿ ವಿದ್ಯಾವಂತ ಯುವಜನತೆ ಕೃಷಿಯತ್ತ ಆಕರ್ಷಿತರಾಗುತ್ತಿಲ್ಲ. ಕೃಷಿಯನ್ನು ಹೇಗೆ ಮಾಡಿದರೆ ಲಾಭ ಸಂಪಾದಿಸಬಹುದು ಎಂದು ಕಂಡುಕೊಳ್ಳಲು ವಾಣಿಜ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಕಡಿಮೆ ನೀರು, ವಿದ್ಯುತ್ ಅಭಾವ, ಕೂಲಿಯಾಳುಗಳ ಸಮಸ್ಯೆಯನ್ನು ಎದುರಿಸಿಯೂ ಲಾಭ ಸಂಪಾದಿಸುತ್ತಿರುವ ಮಾದರಿ ಕೃಷಿಕರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಎಚ್.ಜಿ.ಗೋಪಾಲಗೌಡ ಸಮಗ್ರ ಕೃಷಿ ಪದ್ಧತಿ, ಸಾವಯವ ಬೇಸಾಯ, ಕಡಿಮೆ ನೀರಿನಿಂದ ಮಾಡಬಹುದಾದ ಕೃಷಿ, ರೇಷ್ಮೆ ಹುಳು ಸಾಕಣೆ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ‘ಕೃಷಿ ಅಧ್ಯಯನ ಪ್ರವಾಸಗಳನ್ನು ಪ್ರತಿಯೊಂದು ಕಾಲೇಜುಗಳಲ್ಲೂ ನಡೆಸಬೇಕು. ತಮ್ಮ ಜಮೀನುಗಳನ್ನು ಬರಡು ಬಿಟ್ಟು ಅಥವಾ ಮಾರಾಟ ಮಾಡಿ ನಗರಗಳಿಗೆ ವಲಸೆ ಹೋಗುವ ಯುವ ವಿದ್ಯಾವಂತರಿಗೆ ಕೃಷಿಯಲ್ಲಿಯೂ ಹಣವಿದೆ, ಗೌರವವಿದೆ, ಹೆಮ್ಮೆಯಿದೆ ಎಂಬುದನ್ನು ತಿಳಿಸಿಕೊಡಬೇಕು’ ಎಂದು ಹೇಳಿದರು.