Home Blog Page 485

ಸಂಕ್ರಾಂತಿಗೆ ಸ್ವಾಗತ ಕೋರುತ್ತಾ ಆಲದ ಮರಗಳು ವಿದಾಯ ಹೇಳುತ್ತಿವೆ

0

ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆನಂತರ ಸೂರ್ಯನ ಪಥ ಉತ್ತರಾಭಿಮುಖವಾಗುತ್ತದೆ. ಬೆಳಕು ಹೆಚ್ಚುತ್ತದೆ. ಚಳಿಗಾಲ ಮುಗಿಯಿತು. ಇನ್ನೇನಿದ್ದರೂ ಬಿಸಿಲು ಪ್ರಾರಂಭ ಎಂಬುದನ್ನು ಸಂಕ್ರಾಂತಿ ಸೂಚಿಸುತ್ತದೆ.
ಮುಂಜಾನೆಯ ಕಾಯಕ ನಿರತರಾದ ರೈತರು, ಹಾಲಿನವರು, ಪೇಪರ್, ಹೂ, ತರಕಾರಿ ಮಾರಾಟಗಾರರು ಈ ಬಾರಿಯ ಚಳಿ ಮತ್ತು ಮಂಜಿನ ಹೊಡೆತಕ್ಕೆ ನಲುಗಿದ್ದರು. ಸಂಕ್ರಾಂತಿ ಬೇಗ ಬರಲಿ, ಚಳಿಯ ನಡುಕದಿಂದ ಪಾರಾಗಬಹುದು ಎಂದು ಅವರು ಸ್ವರ್ಗದ ಬಾಗಿಲು ತೆರೆಯುತ್ತದೆಂದು ನಂಬಿದ ಈ ಪರ್ವ ಕಾಲಕ್ಕೆ ಎದುರು ನೋಡುತ್ತಿದ್ದರು. ಕಾದಿದ್ದ ದಿನ ಆಗಮಿಸಿದೆ.
ಆದರೆ ದೀಪವಾರುವ ಮುನ್ನ ಜೋರಾಗಿ ಉರಿಯುವಂತೆ ತಾಲ್ಲೂಕಿನಲ್ಲಿ ಗುರುವಾರ ಚುಮುಚುಮು ಚಳಿಯ ಮುಂಜಾವಿನಲ್ಲಿ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುತ್ತಿರಲಿಲ್ಲ.
ಶಿಡ್ಲಘಟ್ಟದಿಂದ ಚಿಂತಾಮಣಿಗೆ ಹೋಗುವ ರಸ್ತೆಯಲ್ಲಿನ ಬಿಳಲುಗಳನ್ನು ಚಾಚಿನಿಂತ ಆಲದಮರಗಳ ಸಾಲು ಮಂಜಿನ ಪಂಜನ್ನು ಹೊತ್ತುನಿಂತಂತೆ ಭಾಸವಾಗುತ್ತಿತ್ತು. ದುರಂತವೆಂದರೆ ಇದು ಈ ಮರಗಳಿಗೆ ಜೀವಮಾನದ ಕಟ್ಟಕಡೆಯ ಚಳಿಗಾಲ. ನೋಡುಗರಾದ ನಮಗೂ ಕಟ್ಟಕಡೆಯ ದೃಶ್ಯಕಾವ್ಯ.
ರಸ್ತೆಯ ಅಗಲೀಕರಣದಿಂದ ರಸ್ತೆ ಬದಿಯ ಮರಗಳಿಗೆ ಕೊಡಲಿ ಬೀಳುತ್ತಿವೆ. ರಾಷ್ಟ್ರೀಯ ಹೆದ್ದಾರಿ- 234ರ ವಿಸ್ತರಣೆ ಕಾರ್ಯ ಪ್ರಾರಂಭವಾಗಿದ್ದು, ರಸ್ತೆ ಅಕ್ಕಪಕ್ಕದ ಮರಗಳನ್ನು ಕಡಿದು ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡಲಾಗುತ್ತಿದೆ. ಮೂಡಬಿದರೆ ಮುಳಬಾಗಿಲು ನಡುವಿನ ರಾಷ್ಟ್ರೀಯ ಹೆದ್ದಾರಿ -234ನ್ನು ಈಗಿನ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿ ತಲಾ 50 ಅಡಿಗಳಷ್ಟು ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಧರಿಸಿದೆ. ಅದರ ಭಾಗವಾಗಿ ಈಗ ರಸ್ತೆಯ ಎರಡೂ ಬದಿಗಳಲ್ಲಿನ ಹಲವಾರು ವರ್ಷಗಳ ಬೃಹತ್ ಮರಗಳನ್ನು ಕಡಿಯಲಾಗುತ್ತಿದೆ. ಮೂಡಬಿದರೆಯಿಂದ ಪ್ರಾರಂಭವಾಗುವ ಈ ರಸ್ತೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮಾರ್ಗವಾಗಿ ಮುಳಬಾಗಲಿಗೆ ಸಂಪರ್ಕ ನೀಡಲಿದೆ. ಅಲ್ಲಿಂದ ಚೆನ್ನೈಗೂ ಈ ರಸ್ತೆ ಸಂಪರ್ಕ ಸಾಧಿಸಲಿದೆ. ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು ಕಳೆದೆರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು.
ಈಗಾಗಲೇ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ನಡುವಿನ ರಸ್ತೆ ಬದಿಯ ಬೃಹತ್ತಾದ ಪುರಾತನ ಮರಗಳು ಧರೆಗುರುಳುತ್ತಿದ್ದು, ಚಿಂತಾಮಣಿ ರಸ್ತೆಯಲ್ಲಿ ಬೂದಾಳ ಮತ್ತು ವೀರಾಪುರ ಗ್ರಾಮಗಳ ಸಮೀಪವಿರುವ ಬೃಹತ್ ಆಲದ ಮರಗಳೂ ದಿನಗಳೆಣಿಸುತ್ತಿವೆ. ಆರುವ ಮುಂಚಿನ ದೀಪದಂತೆ ಗುರುವಾರ ಮುಂಜಾನೆ ಮಂಜಿನ ಪಂಜನ್ನುರಿಸುತ್ತಾ ಮರಗಳು ವಿದಾಯ ಹೇಳುತ್ತಿರುವಂತೆ ಅವು ಕಂಡು ಬಂದವು.
‘ರಸ್ತೆ ಬದಿಯಲ್ಲಿ ಮರಗಳನ್ನು ನೆಡುವ ಸಂಸ್ಕೃತಿ ಅಶೋಕನ ಕಾಲದಿಂದಲೂ ಪ್ರಚಲಿತವಾದುದು. ಹಿಂದಿನವರು ರಸ್ತೆ ಬದಿಯಲ್ಲಿ ನೆರಳಿಗಾಗಿ ಮರಗಳು ಮತ್ತು ದಾರಿಹೋಕರ ದಣಿವಾರಿಸಲು ನೀರು ಹಾಕಿಡುತ್ತಿದ್ದ ಶಿಲೀಂದ್ರ ಅಥವಾ ಅರೆವಟ್ಟಿಗೆಗಳನ್ನು ನಿರ್ಮಿಸುವಲ್ಲಿ ರಸ್ತೆಗೆ ನೀಡುವಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೀಗ ಅಭಿವೃದ್ಧಿಯ ನೆಪದಲ್ಲಿ ಬೃಹತ್ ಮರಗಳ ಮಾರಣಹೋಮ ನಡೆಯುತ್ತಿದೆ. ಅಷ್ಟು ದೊಡ್ಡದಾಗಿ ಮರಗಳು ಬೆಳೆಯಲು ಸಾಕಷ್ಟು ವರ್ಷಗಳು ಬೇಕು. ಆದರೆ ರಸ್ತೆ ಮಾಡುವವರು ಪುನಃ ರಸ್ತೆ ಬದಿ ಮರಗಳನ್ನು ನೆಡುವ ನೈತಿಕತೆ ಹೊಂದಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಒಂದು ಮರದ ನಾಶದಿಂದ ಅದನ್ನು ಅವಲಂಬಿತವಾದ ಹಲವಾರು ಕೀಟಗಳು, ಪಕ್ಷಗಳು ಹಾಗೂ ಇನ್ನಿತರ ಜೀವಿಗಳ ನಾಶ ಎಂಬುದನ್ನು ಮರೆಯಬಾರದು’ ಎನ್ನುತ್ತಾರೆ ಹಿರಿಯ ವಕೀಲ ಡಿ.ಎ.ಅಶ್ವತ್ಥನಾರಾಯಣ.

ಬಾಲ ಜಗತ್ತಿನ ಸ್ಪಂದನಗಳನ್ನು ಹಿಡಿದಿಡುವ ‘ಮಕ್ಕಳ ಪುಸ್ತಕ’ ಶಾಮಂತಿ

0

‘ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನುಕಳುಹಿಸುತ್ತಿರುವ ಎಲ್ಲಾ ತಂದೆ ತಾಯಿಗಳಿಗೆ ಈ ಶಾಮಂತಿ’ ಎಂದು ಶಾಮಂತಿ ಪುಸ್ತಕವನ್ನು ಮುದ್ದಾದ ಮಗುವಿನ ಬರಹದ ಮೂಲಕವೇ ಅರ್ಪಣೆ ಮಾಡಲಾಗಿದೆ. ಈ ಪುಸ್ತಕವು ಬಿಡುಗಡೆಯಾಗಿರುವುದು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ.
ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬರಹಗಳು ಮತ್ತು ಚಿತ್ರಗಳನ್ನೊಳಗೊಂಡ ಸುಂದರ ‘ಶಾಮಂತಿ – ಮಕ್ಕಳ ತೋಟದ ಹೂವ್ವು’ ಪುಸ್ತಕ ಸತತವಾಗಿ ಐದನೇ ವರ್ಷ ಪ್ರಕಟವಾಗುತ್ತಿದೆ. ಶಿಕ್ಷಕ ಎಸ್.ಕಲಾಧರ ಸಂಪಾದಿಸಿರುವ ಶಾಮಂತಿಯನ್ನು ಕನ್ನಮಂಗಲ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ತಮ್ಮ ಸ್ನೇಹ ಪ್ರಕಾಶನದಿಂದ ಹೊರತಂದಿದ್ದಾರೆ.
ಇರಾನಿ ನಿರ್ದೇಶಕ ಮಾಜಿದ್ ಮಜಿದಿ ನಿರ್ದೇಶಿಸಿದ ‘ಚಿಲ್ಡ್ರನ್ ಆಫ್ ಹೆವನ್’ ಚಲನಚಿತ್ರವನ್ನು ಶಾಲೆಯಲ್ಲಿ ತೋರಿಸಿದಾಗ ಏಳನೆಯ ತರಗತಿಯ ಗಾಯತ್ರಿ ಈ ‘ಸ್ವರ್ಗದ ಮಕ್ಕಳ’ ಭಾಷೆ ಅರ್ಥವಾಗದಿದ್ದರೂ ಭಾವನೆಯನ್ನು ಅರ್ಥೈಸಿಕೊಂಡು ಬರೆದಿದ್ದಾಳೆ. ಗಾಯತ್ರಿಗೆ ಚಿತ್ರದಲ್ಲಿನ ಅಲಿ ಮತ್ತು ಝಾರಾ ತಮ್ಮ ಸಹಪಾಠಿಗಳಂತೆನಿಸಿದ್ದಾರೆ.
ಆರನೆ ತರಗತಿಯ ದೀಪಿಕ ತನ್ನ ಪುಟಾಣಿ ತಂಗಿಯನ್ನು ಶಾಲೆಗೆ ಕರೆತಂದು ಪಟ್ಟ ಅವಾಂತರವನ್ನು ಬರೆದಿದ್ದಾಳೆ. ಕೋಕಿಲ ಅನ್ನೋ ಹುಡುಗಿ ಹುಣಸೇ ಕಾಯಿಯ ಲಾಲಿಪಾಪ್ ಮಾಡಿ ತಿನ್ನುವುದನ್ನು ಹೇಳುತ್ತಾಳೆ. ಆರನೆಯ ತರಗತಿಯ ನಿರಂಜನ್ ಕೋಳಿ ಮರಿಯನ್ನು ಹಾರಿಸಿಕೊಂಡು ಹೋಗಲು ಬಂದ ಹದ್ದನ್ನು ಓಡಿಸಿ ಕೋಳಿ ಮರಿಗೆ ಆಯಿಂಟ್ಮೆಂಟ್ ಹಚ್ಚಿದ ಬಗ್ಗೆ ತಿಳಿಸಿದ್ದಾನೆ. ರಾಜೇಶ್ ತಮ್ಮೂರಿನ ಪಾಚಿನೀರಿನ ಕುಂಟೆಯ ಬಗ್ಗೆ ಕವಿತೆ ರಚಿಸಿದ್ದಾನೆ. ಶಿಕ್ಷಕರು ಆದಿಮಕ್ಕೆ ಕರೆದೊಯ್ದಿದ್ದರ ಬಗ್ಗೆ ನವೀನ್ ಕುಮಾರ್ ಗುನಗುನಿಸುವ ಹಾಗಿರುವ ಪದ್ಯ ರಚಿಸಿದ್ದಾನೆ.
ಇದರಲ್ಲಿ ತಾವು ಕಂಡ ಮಳೆ, ಮೋಡ, ಏಡಿ, ಬೆಕ್ಕು, ಬೆಟ್ಟ, ಎತ್ತು, ಕೋಳಿ, ನಾಯಿ, ಅಮ್ಮ, ಒಲೆ, ಹಂದಿಯ ಬಗ್ಗೆ ಮಕ್ಕಳು ಕವನ ರಚಿಸಿದ್ದಾರೆ. ಅಜ್ಜಿ ಹೇಳಿದ ಕತೆಯನ್ನು ತಮ್ಮದೇ ಮುದ್ದಾದ ಭಾಷೆಯಲ್ಲಿ ಬರೆದಿದ್ದಾರೆ. ಸಾಂಬಾರ್ ಕಾಗೆ, ಹದ್ದು, ಪಾರಿವಾಳಗಳ ಬಗ್ಗೆಯೂ ತಿಳಿಸಿದ್ದಾರೆ. ಬುಗುರಿ, ಚಿಣ್ಣಿ ದಾಂಡು, ಚಾಕಲೇಟ್ ಪೇಪರ್ ಹಾರ ಮಾಡುವ ಬಗ್ಗೆ ಹೇಳಿದ್ದಾರೆ. ತಾವು ಕಂಡಿರುವ ಜೀವತಾಣಗಳನ್ನು ಪರಿಚಯಿಸಿದ್ದಾರೆ. ಉಪ್ಪು ಮಾರುವವರು, ಜಾತ್ರೆ, ಕಟಿಂಗ್ ನಾರಾಯಣಪ್ಪ ಮುಂತಾದ ಜನಪದವನ್ನೂ ಬರಹಕ್ಕಿಳಿಸಿದ್ದಾರೆ. ಒಂಬತ್ತನೇ ತರಗತಿಯ ಕೆ.ಎನ್.ಭವಾನಿ ಒಂದು ಬಿಂದೆಗೆ ನೀರಿಗಾಗಿ ಜಗಳವಾಡುವ ಗ್ರಾಮದ ಮಹಿಳೆಯರ ನೀರಿನ ಬವಣೆಯ ಬಗ್ಗೆ ‘ನೀರಿನ ಕದನ’ ಎಂಬ ನಾಟಕವನ್ನೇ ರಚಿಸಿದ್ದಾಳೆ. ಸುಟಿಕೆ ಇಡುವ ನಂಬಿಕೆಯ ಬಗ್ಗೆ ಆಶಾ ಬರೆದಿದ್ದಾಳೆ. ಕನಸಿನ ಬಗ್ಗೆ, ಮರಗಳನ್ನು ನೆಡುವ ಬಗ್ಗೆ, ಹಾವನ್ನು ಕಾಪಾಡುವ ಸ್ನೇಕ್ ನಾಗರಾಜ್ ಬಗ್ಗೆ, ಏಡಿ ಹಿಡಿಯುವ ಬಗ್ಗೆ, ರೇಷ್ಮೆ ಸಾಕಾಣಿಕೆ, ಸೌತೆಬೆಳೆಯ ಬಗ್ಗೆಯೂ ಮಕ್ಕಳು ಬರೆದಿದ್ದಾರೆ.
ತಮ್ಮ ಶಾಲೆಯ ಗ್ರಂಥಾಲಯದಿಂದ ಓದಿರುವ ಪುಸ್ತಕಗಳಾದ ನನ್ನ ಗೋಪಾಲ, ತೊತ್ತೋಚಾನ್, ನೆಗೆತ, ಚಿನ್ನಾರಿಮುತ್ತ, ನಿಸರ್ಗ ಮತ್ತು ಗುಬ್ಬಚ್ಚಿ ಕುರಿತಂತೆ ಮಕ್ಕಳು ಬರೆದಿದ್ದಾರೆ. ಇರಾನಿಯನ್ ಚಲನಚಿತ್ರಗಳಾದ ಕಲರ್ ಆಫ್ ಪ್ಯಾರಡೈಸ್, ಚಿಲ್ಡ್ರನ್ ಆಫ್ ಹೆವನ್, ಕನ್ನಡದ ಕಾಡಹಾದಿಯ ಹೂಗಳು, ಇಂಗ್ಲಿಷ್ನ ಆಲಿವರ್ ಟ್ವಿಸ್ಟ್ ಬಗ್ಗೆಯೂ ಮಕ್ಕಳು ಬರೆದಿರುವುದು ಅಚ್ಚರಿ ಮೂಡಿಸುತ್ತದೆ.
ಜಿಲ್ಲೆಯ ಆಡುಮಾತಿನಲ್ಲಿರುವ ತೆಲುಗನ್ನಡ ಪದಗಳಾದ ‘ತರಿಮಿಕೊಂಡು’, ‘ಹುಲ್ಲಾಮೆ’, ‘ಎಗರ್ಲಾಡೋದು’, ‘ರವಷ್ಟು’, ‘ಕುಲ್ಲು’, ‘ಯಮಕೆ’, ‘ಕಿತ್ಲಾಡು’ ಮುಂತಾದವು ಮಕ್ಕಳ ಬರಹದಲ್ಲಿದ್ದು, ಗ್ರಾಮೀಣ ಸೊಗಡನ್ನು ಓದುಗರಿಗೆ ರವಾನಿಸುತ್ತವೆ.
‘ನಮ್ಮ ಗ್ರಾಮ ಹಿಂದೆ ಬಹಳ ಹಿಂದುಳಿದಿತ್ತು. ಈಗ ಆಧುನಿಕತೆಯ ಹೊಸಗಾಳಿ ಬೀಸುತ್ತಿದೆ. ಈ ಬದಲಾವಣೆಯ ಹಿಂದೆ ನಮ್ಮೂರ ಸರ್ಕಾರಿ ಶಾಲೆಯಿದೆ. ನಮ್ಮ ಶಾಲೆಯ ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಸ್ನೇಹ ಯುವಕರ ಸಂಘವನ್ನು ಹುಟ್ಟು ಹಾಕುವ ಮೂಲಕ ನಮ್ಮೂರ ಶಾಲೆಯ ಶಿಕ್ಷಕರು ಗ್ರಾಮದ ಯುವಕರ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅದರಂತೆ ಹನ್ನೆರಡು ವರ್ಷಗಳಿಂದಲೂ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ನಮ್ಮೂರ ಮಕ್ಕಳ ಬರವಣಿಗೆಗಳನ್ನು ಪ್ರಕಟಿಸುವ ಕೆಲಸಕ್ಕೂ ಕೈಹಾಕಿದ್ದೇವೆ. ಈ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬೆಳೆಯಬಹುದಾದ ಸಾಹಿತ್ಯಪ್ರೇಮ, ಚಿಂತನಶೀಲತೆ ಹಾಗೂ ಸೃಜನಶೀಲತೆಗಳು ಮುಂದೆ ನಮ್ಮ ಗ್ರಾಮವನ್ನು ಇನ್ನಷ್ಟು ಸುಂದರವಾಗಿ ರೂಪಿಸಲಿ ಎಂಬುದೇ ನಮ್ಮ ಆಶಯ’ ಎನ್ನುತ್ತಾರೆ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತಕುಮಾರ್.
‘ಈ ಮಕ್ಕಳಿಗೆ ದೊಡ್ಡವರ ಹಾಗೆ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಅಂತೆಲ್ಲ ಗೊತ್ತಿಲ್ಲ, ಅದೆಲ್ಲ ಲೆಕ್ಕ ಅವಕ್ಕೆ ಗೊತ್ತಿಲ್ಲ. ಏನೇನೆಲ್ಲ ಹೇಳಿಬಿಡಬೇಕು ಅಂತ ಅನಿಸಿದೆಯೋ ಅದನ್ನೆಲ್ಲ ಹೇಳಿಬಿಟ್ಟಿವೆ. ಹಾಗಾಗಿ ಈ ಮಕ್ಕಳ ಬರಹಗಳು ಈಗ ತಾನೆ ಗಿಡದಲ್ಲಿ ಅರಳಿದ ಸೇವಂತಿಯ ಹಾಗಿವೆ. ಅದೇ ಶುಭ್ರತೆ, ಸ್ವಚ್ಛ ಹೃದಯವುಳ್ಳ ಇವರು ‘ದೇವರು ಮಕ್ಕಳಲ್ಲಿರುತ್ತಾರೆ’ ಎಂಬ ಮಾತಿಗೆ ಪ್ರತಿರೂಪದಂತಿದ್ದಾರೆ. ಮಕ್ಕಳ ಬರಹಗಳನ್ನು ಓದುತ್ತಿದ್ದರೆ, ಅವರೊಂದಿಗೆ ಬುತ್ತಿ ಹಂಚಿಕೊಂಡು ಅವರ ಮಾತುಕತೆ ಕಿಲಿಕಿಲಿ ಎಲ್ಲ ಆಲಿಸಿದಂತಿದೆ. ಹಿರಿಯರು ಕಳೆದುಹೋದ ತಮ್ಮ ಬಾಲ್ಯವನ್ನು ಮಕ್ಕಳ ಬರಹದಿಂದ ಮೊಗೆದುಕೊಳ್ಳಬಹುದು. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಓದಲು ಒಳ್ಳೊಳ್ಳೆ ಪುಸ್ತಕಗಳನ್ನು ಕೊಡುತ್ತಾರೆ. ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಚಲನಚಿತ್ರ ತೋರಿಸುತ್ತಾರೆ. ನಾಟಕ ತೋರಿಸ್ತಾರೆ, ಆಡಿಸ್ತಾರೆ. ಬರೆಸುತ್ತಾರೆ, ಬರೆದದ್ದನ್ನು ಪ್ರಕಟಿಸುತ್ತಾರೆ. ಈ ಶಾಮಂತಿ ಹೂವುಗಳ ಮಾಲೆ ಪೋಣಿಸಿ ಚೆಂದವಾಗಿ, ಬಣ್ಣಬಣ್ಣವಾಗಿ ಕಟ್ಟುತ್ತಿರುವ ಎಲ್ಲ ಕೈಗಳಿಗೆ ಸಲಾಮುಗಳು’ ಎಂದು ಲೇಖಕ ಆನಂದ ಪಾಟೀಲ ಮುನ್ನುಡಿಯಲ್ಲಿ ಬರೆದಿದ್ದಾರೆ.
ಶಾಮಂತಿಯ ಮಕ್ಕಳ ಬರಹಗಳನ್ನು ಮೆಚ್ಚಿ ನಾಡಿನ ಹೆಸರಾಂತ ಲೇಖಕರಾದ ನಾಡಿಸೋಜ, ಸುನಂದಾ ಪ್ರಕಾಶ ಕಡಮೆ, ಬೇಲೂರು ರಘುನಂದನ್, ಸಂದೀಪ ನಾಯಕ, ಅಕ್ಷತಾ ಹುಂಚದಕಟ್ಟೆ, ಬಿ.ಶ್ರೀಪಾದ ಭಟ್, ರಂಗಮ್ಮ ಹೊದೇಕಲ್, ಮಂಜುನಾಥ ಅದ್ದೆ, ಮಮತಾ ಸಾಗರ್, ಮಲ್ಲಿಕಾರ್ಜುನ ಹೊಸಪಾಳ್ಯ ತಮ್ಮ ಅನಿಸಿಕೆಗಳನ್ನು ಬರೆದುಕೊಟ್ಟು ಅಭಿನಂದಿಸಿದ್ದಾರೆ.
ಪುಸ್ತಕ ಬೇಕಿದ್ದಲ್ಲಿ ಸಂಪರ್ಕಿಸಿ, ಎಸ್.ಕಲಾಧರ (9900695142)

ಮಳಮಾಚನಹಳ್ಳಿಯ ಬಿ.ಕೆ.ಶಂಕರ್ ನಿಧನ

0

ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮಳಮಾಚನಹಳ್ಳಿ ಗ್ರಾಮದ ಹಿರಿಯ ಮುಖಂಡ ಮಾಜಿ ಸಿಂಡಿಕೇಟ್ ಸದಸ್ಯ ಬಿ.ಎನ್.ಕೃಷ್ಣಯ್ಯ ಅವರ ಹಿರಿಯ ಪುತ್ರ ಬಿ.ಕೆ.ಶಂಕರ್ ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ನಡೆಯುತ್ತಿದ್ದ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಅವರ ನಿಧನಕ್ಕೆ ಶಾಶ್ವತ ನೀರಾವರಿ ಹೋರಾಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದಿದ್ದು, ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.
ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜಿನೇಯರೆಡ್ಡಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ವಿ.ಸುಭ್ರಮಣಿ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.

ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

0

ತಾಲ್ಲೂಕಿನಾದ್ಯಂತ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಪೋಷಕರು ಸಹಕರಿಸಬೇಕೆಂದು ತಹಶೀಲ್ದಾರ್ ಮನೋರಮಾ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ಬುಧವಾರ ಪಲ್ಸ್ ಪೋಲಿಯೋ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಥಮ ಹಂತದಲ್ಲಿ ಜನವರಿ ೧೭ ರಿಂದ ೨೦ ತನಕ ನಡೆಯುವ ಪಲ್ಸ್ಪೋಲಿಯೋ ಲಸಿಕೆ ಹಾಕಿಸಲಾಗುತ್ತಿದ್ದು ಶಿಡ್ಲಘಟ್ಟ ನಗರದ ೭,೦೯೫ ಮಕ್ಕಳು ಸೇರಿದಂತೆ ತಾಲ್ಲೂಕಿನಾದ್ಯಂತ ೨೭,೩೨೪ ಮಕ್ಕಳಿಗೆ ಲಸಿಕೆ ಹಾಕಿಸಲು ಗುರಿ ಹೊಂದಲಾಗಿದ್ದು ಅದಕ್ಕಾಗಿ ತಾಲ್ಲೂಕಿನಾದ್ಯಂತ ೧೦೫ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆ ಹಾಗೂ ೧೧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು ಅದಕ್ಕಾಗಿ ೪೨೦ ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮವನ್ನು ನಿರ್ವಹಣೆ ಮಾಡಲು ೨೨ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಸುವ ಮಕ್ಕಳಿಗೆ ಹಾಗೂ ರೈಲಿನಲ್ಲಿ ಸಂಚರಿಸುವ ಪ್ರಯಾಣಿಸುವ ಮಕ್ಕಳಿಗೆ ಲಸಿಕೆ ಹಾಕಿಸಲು ಕೇಂದ್ರವನ್ನು ತೆರೆಯಲಾಗಿದೆ ಎಂದರು.
ನಗರ ಪ್ರದೇಶದಲ್ಲಿ ನಾಲ್ಕು ದಿನಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೂರು ದಿನಗಳ ಕಾಲ ಲಸಿಕೆ ಹಾಕಲಾಗುತ್ತಿದ್ದು ಈ ಕಾರ್ಯಕ್ರಮ ಯಶಸ್ವಿಯಾದ ಬಳಿಕ ದ್ವಿತೀಯ ಹಂತದಲ್ಲಿ ಫೆಬ್ರವರಿ ೨೧ ರಿಂದ ೨೪ ತನಕ ಪಲ್ಸ್ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಪೋಷಕರು ಐದು ವರ್ಷದೊಳಗಿನ ಮಕ್ಕಳಿಗೆ ಸಮೀಪದ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಗ್ರೇಡ್-೨ ವಾಸುದೇವಮೂರ್ತಿ, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ್ರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ಸಹಾಯಕ ಆರೋಗ್ಯಾಧಿಕಾರಿ ದಾದಾಪೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿವೇಕಾನಂದರ ವಿಚಾರವನ್ನು ಯುವಕರು ಓದಬೇಕು

0

ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ವಿಚಾರಧಾರೆಯಿಂದ ವ್ಯಕ್ತಿತ್ವ ವಿಕಸನ ಹೊಂದಲು ಸಾಧ್ಯವಿದೆ ಎಂದು ವಕೀಲ ರವೀಂದ್ರನಾಥ್ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನೆಹರು ಯುವ ಕೇಂದ್ರ, ಸರ್ವೋದಯ ಸ್ವಯಂ ಸೇವಾ ಸಂಸ್ಥೆ ಮತ್ತು ಎಬಿವಿಪಿ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ 153ನೇ ಜಯಂತಿಯ ಪ್ರಯುಕ್ತದ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಯ ಸರ್ವತೋಮುಖ ಬೆಳವಣಿಗೆಗೆ ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನ ವಿಚಾರಧಾರೆಗಳು ಮತ್ತು ಅವರ ಬಹುಮುಖ ವ್ಯಕ್ತಿತ್ವವನ್ನು ಅರಿಯುವ ಕೆಲಸ ಆಗಬೇಕಿದೆ. ಸ್ವಾಮಿ ವಿವೇಕಾನಂದರ ಉಪದೇಶಗಳಿಂದ ಪ್ರಭಾವಿತರಾದ ಯುವಕರಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ಹಾಗೂ ಪರಿಪೂರ್ಣ ವ್ಯಕ್ತಿತ್ವವನ್ನು ವಿಕಸಿಸಲು ಸಹಕಾರಿಯಾಗುತ್ತದೆ. ನಮ್ಮ ದೇಶದ ಆಧ್ಯಾತ್ಮಿಕ ಚಿಂತನೆಗಳ ಕುರಿತು ಅವರು ವಿದ್ವತ್ ಪೂರ್ಣವಾಗಿ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರ ವಿಚಾರವನ್ನು ಓದುವ ಕೆಲಸ ಯುವಕರು ಶ್ರದ್ಧೆಯಿಂದ ಮಾಡಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಕೆ.ನರೇಶ್ ಕುಮಾರ್, ರಾಷ್ಟ್ರೀಯ ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಎನ್.ಎಸ್.ಎಸ್ ಘಟಕಾಧಿಕಾರಿ ಎಚ್.ಸಿ.ಮುನಿರಾಜು, ಮಂಜುನಾಥ, ಸುರೇಶ್, ಮಧುಸೂದನ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕುರಿಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ

0

ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕುರಿ ಮತ್ತು ಉಣ್ಣೆ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿ ಡಾ.ಮಧುರನಾಥ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ಪ್ರಗತಿಪರ ಕುರಿ ಸಾಕಾಣಿಕಾ ಸಹಕಾರ ಸಂಘದ ವತಿಯಿಂದ ಬುಧವಾರ ಸಂಘದ ಕಚೇರಿಯಲ್ಲಿ ಕುರಿಸಾಕಾಣಿಕೆದಾರ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಕುರಿಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಕುರಿಗಳು ಮನೆಯಲ್ಲಿ ಎಟಿಎಂ ಇದ್ದಂತೆ. ರೈತನ ಕಷ್ಟಕ್ಕೆ ನೆರವಾಗುವ ಈ ಕುರಿಸಾಕಾಣಿಕೆಯನ್ನು ಹೆಚ್ಚು ಮಂದಿ ಕೈಗೊಳ್ಳಬೇಕು. ಕುರಿ ಸಾಕಾಣಿಕೆದಾರರು ಕುರಿ ಸತ್ತಲ್ಲಿ ಕಾರಣವನ್ನು ದಾಖಲಿಸುವ ಮೂಲಕ ಪರಿಹಾರ ಧನವನ್ನು ಪಡೆಯಬಹುದಾಗಿದೆ. ಕುರಿಗಳಿಗೆ ಸಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 26 ಮಂದಿ ಫಲಾನುಭವಿಗಳಿಗೆ ಒಬ್ಬರಿಗೆ 52 ಸಾವಿರ ರೂಗಳಂತೆ ಒಟ್ಟು 13 ಲಕ್ಷ 52 ಸಾವಿರ ರೂಗಳ ಸಾಲ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.
ಪ್ರಗತಿಪರ ಕುರಿ ಸಾಕಾಣಿಕಾ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ, ನಿರ್ದೇಶಕ ರಾಮಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕಿನ ಆರ್ಥಿಕ ಪರಿಸ್ಥಿತಿ ರೇಷ್ಮೆಯನ್ನು ಅವಲಂಬಿಸಿದೆ

0

ರೇಷ್ಮೆ ಉದ್ದಿಮೆಯನ್ನು ನಂಬಿಕೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಿಡ್ಲಘಟ್ಟ ನಗರದ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಗರದ ಜೊತೆಗೆ ತಾಲ್ಲೂಕಿನಾದ್ಯಂತ ಈ ಉದ್ದಿಮೆಯನ್ನು ಜನರು ಅವಲಂಬಿತರಾಗಿದ್ದಾರೆ ಎಂದು ರೇಷ್ಮೆ ವಿಜ್ಞಾನಿ ಮಹೇಶ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬುಧವಾರ ಆಗಮಿಸಿದ್ದ ಯಲಹಂಕದ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚಿಟ್ಟೆಯಿಂದ ಬಟ್ಟೆಯವರೆಗೆ ಸಾಗುವ ರೇಷ್ಮೆ ಉದ್ದಿಮೆಯನ್ನು ನಂಬಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ರಾಜ್ಯದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಶಿಡ್ಲಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಾಸರಿ ದಿನಕ್ಕೆ 40 ಸಾವಿರ ಕೆಜಿ ರೇಷ್ಮೆ ಗೂಡನ್ನು ಮಾರಾಟ ಮಾಡಲಾಗುತ್ತದೆ. ಬಹಿರಂಗ ಹರಾಜಿನ ಮೂಲಕ ರೇಷ್ಮೆ ಗೂಡನ್ನು ರೀಲರುಗಳು ಕೊಂಡು ಕೌಂಟರಿನಲ್ಲಿ ಹಣ ಕಟ್ಟಿ ನಂತರ ಒಯ್ಯುತ್ತಾರೆ. ಮಾರಾಟ ಮಾಡಿದ ರೈತರು ತಮ್ಮ ಹಣವನ್ನು ಕೌಂಟರಿನಲ್ಲಿ ಪಡೆದು ಹಿಂದಿರುಗುತ್ತಾರೆ. ರಾಜ್ಯ ಹಾಗೂ ನೆರೆ ರಾಜ್ಯದ ರೈತರು ಇಲ್ಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದೆಂಬ ಆಶಾಭಾವನೆಯಿಂದ ಬರುತ್ತಾರೆ ಎಂದು ವಿವರಿಸಿದರು.
ಚಾಕಿ, ಹುಳುಮನೆ, ಹಿಪ್ಪುನೇರಳೆ ಬೇಸಾಯ, ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ, ಹುರಿ ನೂಲು ತಯಾರಿಕಾ ಘಟಕ ಮುಂತಾದವುಗಳನ್ನು ನಡೆಸುತ್ತಾ ನೇರವಾಗಿ ಅನೇಕರು ಅವಲಂಬಿತರಾಗಿದ್ದಾರೆ. ಇನ್ನುಳಿದಂತೆ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಒಲೆ ಹಚ್ಚಲು ಬಳಸುವ ಹಳೆಯ ಟೈರುಗಳನ್ನು ಮಾರುವವರು, ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಬಳಸಬೇಕಿರುವ ಹಳೆಯ ವೃತ್ತಪತ್ರಿಕೆಗಳನ್ನು ಮಾರುವವರು, ಹೋಟೆಲಿನವರು, ಚಹಾ ಅಂಗಡಿಯವರು, ಬಿದಿರು ಕೆಲಸಗಾರರು ಮತ್ತಿತರರು ಪರೋಕ್ಷವಾಗಿ ಈ ಉದ್ದಿಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ತಾಲ್ಲೂಕಿನ ಆರ್ಥಿಕ ಪರಿಸ್ಥಿತಿ ರೇಷ್ಮೆಯನ್ನು ಅವಲಂಬಿಸಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಕರೆತಂದಿದ್ದ ಯಲಹಂಕದ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಸಂಪತ್ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಸಮುದಾಯಗಳು ಮತ್ತು ಆಚರಣೆಗಳು’ ಎಂಬ ವಿಷಯವಿದೆ. ಅದರ ಭಾಗವಾಗಿ ರೇಷ್ಮೆಯನ್ನೇ ಅವಲಂಬಿಸಿರುವ ಜನಜೀವನ, ಅವರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿ, ನೋವು ನಲಿವು, ಕಷ್ಟ ನಷ್ಟಗಳು ಮುಂತಾದ ಹಲವು ಆಯಾಮಗಳನ್ನು ಪ್ರತ್ಯಕ್ಷವಾಗಿ ಕಂಡು ಅಭ್ಯಸಿಸಲು ವಿದ್ಯಾರ್ಥಿಗಳನ್ನು ಕರೆತಂದಿದ್ದೇವೆ. ರೇಷ್ಮೆ ಗೂಡಿನ ಮಾರುಕಟ್ಟೆ, ಚಾಕಿ, ಹುಳು ಸಾಕಾಣಿಕೆ, ರೀಲಿಂಗ್, ಟ್ವಿಸ್ಟಿಂಗ್ ಮುಂತಾದವುಗಳನ್ನು ತೋರಿಸಲಿದ್ದೇವೆ’ ಎಂದು ನುಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ರತ್ನಯ್ಯಶೆಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು.

ಕವಿಗದ್ದಿಗೆ ಕಾರ್ಯಕ್ರಮ

0

ತಾಲ್ಲೂಕಿನ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಸಂಕ್ರಾತಿ ಕವಿಗದ್ದಿಗೆ ಕಾರ್ಯಕ್ರಮವನ್ನು ಜನವರಿ ೧೫ ರಂದು ಮಳ್ಳೂರು ಸಮೀಪದ ಸಾಯಿಬಾಬಾ ಜ್ಞಾನಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕವಿಗಳು ಹಾಗೂ ಬಾಲ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಕವಿಗೋಷ್ಠಿಯಲ್ಲಿ ಭಾಗವಹಿಸಬಹುದು. ಕವನ ವಾಚಿಸುವ ಕವಿಗಳಿಗೆ ಸಂಕ್ರಾಂತಿ ಕವಿಗದ್ದೆಗೆಯಿಂದ ನೆನಪಿನ ಪತ್ರ ನೀಡಿ ಗೌರವಿಸಲಾಗುವುದು.
ತಮ್ಮ ಹೆಸರನ್ನು ನೊಂದಾಯಿಸಲು ೯೯೭೨೮೭೬೯೭೦, – ೯೭೪೦೩೮೪೪೧೧ ಈ ಸಂಖ್ಯೆಗೆ ಕರೆ ಮಾಡಿ ತಿಳಿಸಲು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಈ ಧರೆ ಪ್ರಕಾಶ್, ಉಪಾದ್ಯಕ್ಷ ದೇವರಮಳ್ಳೂರು ಚನ್ನಕೃಷ್ಣಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿವೇಕಾನಂದರ ಜಯಂತಿ

0

ಶಿಡ್ಲಘಟ್ಟದ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಂಗಳವಾರ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು.

ಗ್ರಾಮೀಣ ಭಾಗದ ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ

0

ಗ್ರಾಮೀಣ ಭಾಗದ ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವೇದಿಕೆಗಳ ಅವಶ್ಯಕತೆಯಿದೆ. ಎಳೆಯ ವಯಸ್ಸಿನಲ್ಲಿಯೇ ಮಕ್ಕಳ ಅಭಿರುಚಿ, ಆಸಕ್ತಿಗಳಿಗೆ ನೀರೆರೆಯುವ ಕೆಲಸ ಆಗಬೇಕಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ ಮಾಡಲಾಗಿದ್ದ ಚಿಗುರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ನಾಡಿನ ಸಂಸ್ಕೃತಿ, ಕಲೆ, ಪರಂಪರೆಯನ್ನು ಪರಿಚಯ ಮಾಡುವ ಕೆಲಸಗಳು ಶಾಲಾ ಮಟ್ಟದಲ್ಲಿ ನಡೆಯಬೇಕು. ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಪ್ರೋತ್ಸಾಹ ಮಾಡುವ ಮೂಲಕ ಅವರಲ್ಲಿರುವ ಉತ್ತಮವಾದ ಪ್ರತಿಭೆಗಳನ್ನು ಗುರ್ತಿಸಬೇಕು. ಕಲೆಯ ಮೂಲಕ ದೇಶಕ್ಕೆ ಉತ್ತಮವಾದ ಕೀರ್ತಿಯನ್ನು ತರುವ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಆರ್.ಎ.ಉಮೇಶ್ ಮಾತನಾಡಿ, ಮಕ್ಕಳಲ್ಲಿ ಅಪಾರವಾದ ಪ್ರತಿಭೆಗಳಿವೆ, ಆದರೆ ಆರ್ಥಿಕವಾದ ಸಮಸ್ಯೆಗಳಿಂದಾಗಿ ಮಕ್ಕಳು ಅವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಖಾಸಗಿ ವಾಹಿನಿಗಳ ಮೂಲಕ ತಮ್ಮ ಪ್ರತಿಭೆಗಳನ್ನು ಹೊರಪಡಿಸುವಂತಹ ಮಕ್ಕಳು ಶ್ರೀಮಂತ ಕುಟುಂಬಗಳಿಂದ ಬರುವುದರಿಂದ ಬಡವರು, ಮಧ್ಯಮ ವರ್ಗದ ಮಕ್ಕಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸಲು ಅಗತ್ಯವಾಗಿರುವ ಸಹಕಾರ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಹಿಂದೂಸ್ಥಾನಿ ಗಾಯನ, ಸುಗಮ ಸಂಗೀತ, ಜನಪದಗೀತೆಗಳ ಗಾಯನ, ಶಾಸ್ತ್ರೀಯ ಭರತನಾಟ್ಯ, ಸಮೂಹ ನೃತ್ಯ ರೂಪಕ, ಏಕಪಾತ್ರಾಭಿನಯ, ನಾಟಕ, ಮುಂತಾದ ಕಾರ್ಯಕ್ರಮಗಳನ್ನು ಪ್ರದರ್ಶನವನ್ನು ಮಕ್ಕಳು ಪ್ರದರ್ಶಿಸಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಮುಖ್ಯ ಶಿಕ್ಷಕಿ ಮಂಗಳಗೌರಮ್ಮ, ಸಾಹಿತಿ ಸುಭಾನ್ಪ್ರಿಯಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜನಾರ್ಧನ್, ಶ್ರೀನಿವಾಸ್, ಧರ್ಮೇಂದ್ರ, ಸುಧೀರ್, ರೂಪಶ್ರೀಅರವಿಂದ್, ಕಲಾವಿದ ಕೋಲಾರ್ರಮೇಶ್, ಸೋ.ಸು.ನಾಗೇಂದ್ರ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜೀವನ ಚರಿತ್ರೆಗಳನ್ನು ಓದದವನು ಚರಿತ್ರೆಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದಿಲ್ಲ

0

ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ನಾಯಕರುಗಳ ಜೀವನವನ್ನು ಆದರ್ಶವಾಗಿಸಿಕೊಂಡಲ್ಲಿ ವಿದ್ಯಾರ್ಥಿಗಳು ಉತ್ತಮವಾದ ಚಾರಿತ್ರ್ಯವನ್ನು ರೂಪಿಸಿಕೊಳ್ಳಬಹುದು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪೂರ್ಣಾನಂದಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿವಿವೇಕಾನಂದ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಸ್ವಾಮಿ ವಿವೇಕಾನಂದರ ೧೫೩ ನೇ ವರ್ಷದ ಜನ್ಮದಿನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಯ ದೆಸೆಯಲ್ಲಿಯೆ ಮಕ್ಕಳು ನಿರಂತರವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಕೆಟ್ಟ ವ್ಯಸನಗಳಿಂದ ದೂರವುಳಿದು ಏಕಾಗ್ರತೆಯಿಂದ ತಮ್ಮ ಗುರಿಯನ್ನು ಮುಟ್ಟಲು ಸಾಧನೆ ಮಾಡಬೇಕು. ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಸಮಾಜ ಸುಧಾರಕರಾಗಬೇಕು. ಜೀವನ ಚರಿತ್ರೆಗಳನ್ನು ಓದದವನು ಚರಿತ್ರೆಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದಿಲ್ಲ. ಯುವಜನತೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಸದೃಢವಾದ ದೇಶವನ್ನು ಕಟ್ಟುವಲ್ಲಿ ಆಸಕ್ತರಾಗಬೇಕು. ಪ್ರತಿಭೆಗಳನ್ನು ಹೊರಗೆಳೆಯುವಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರ್ತಿಸಬೇಕು. ಯಾವುದೇ ಕಾರ್ಯವನ್ನು ಮಾಡಬೇಕಾದರೆ ಏಕಾಗ್ರತೆಯ ಜೊತೆಗೆ ನಂಬಿಕೆ ಸ್ಥಿರವಾಗಿರಬೇಕು. ಶ್ರದ್ದೆ, ಸಹನೆ, ಸತತವಾದ ಪ್ರಯತ್ನದ ಮುಖಾಂತರ ಆತ್ಮವಿಶ್ವಾಸದಿಂದ ಉತ್ತಮವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಾನ್ ನಾಯಕರ ವಿಚಾರಧಾರೆಗಳು ಮಕ್ಕಳಿಗೆ ಮನದಟ್ಟು ಮಾಡುವಂತಹ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು.
ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾಗಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರಗಳೊಂದಿಗೆ ಪುರಸ್ಕಾರ ನೀಡಲಾಯಿತು.
ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ರಾಮಾಂಜಿನಪ್ಪ, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಲಕ್ಷ್ಮೀಪತಿ, ಎಂ.ನಾಗರಾಜ್, ಎಂ.ಎನ್.ಗೋಪಾಲಪ್ಪ, ಸಿ.ನಾರಾಯಣಸ್ವಾಮಿ, ಸಿ.ಎಂ.ದೇವರಾಜ್, ಎಂ.ಕೆ.ಚಂದ್ರಶೇಖರ್, ಪಿಳ್ಳವೆಂಕಟಸ್ವಾಮಪ್ಪ, ಪ್ರಾಂಶುಪಾಲ ಜಿ.ಎಂ.ಚಂದ್ರಕುಮಾರ್, ಮುಖ್ಯಶಿಕ್ಷಕ ನರಸಿಂಹಮೂರ್ತಿ, ನಾಗರತ್ನಮ್ಮ, ಕೆ.ಎಂ.ಚಂದ್ರಶೇಖರ್, ವಿ.ಶ್ಯಾಮಲ, ಜಿ.ಎನ್.ನಿರ್ಮಲ, ಜಿ.ಟಿ.ವಿಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿವೇಕಾನಂದರ ಆಲೋಚನೆಗಳಿಂದ ಸ್ಪೂರ್ತಿ ಪಡೆಯಿರಿ

0

ವಿವೇಕಾನಂದರ ಆಲೋಚನೆಗಳಿಂದ ಸ್ಪೂರ್ತಿ ಹೊಂದಿ ಜೀವನದಲ್ಲಿ ನಾಯಕರಾಗಿ ಮೆರೆಯಬೇಕು ಎಂದು ಮುಖ್ಯ ಶಿಕ್ಷಕ ಎಸ್.ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರ ೧೫೩ನೇಯ ಜಯಂತಿಯ ಪ್ರಯುಕ್ತ ವಿಶ್ವ ಚೇತನವಾದ ಸಿಂಹ ಪುರುಷನಿಗೆ ಪೂಜೆ ಸಲ್ಲಿಸಿದರಷ್ಟೆ ಸಾಲದು. ಅವರ ಭಾಷಣಗಳನ್ನು, ಜೀವನ ಗಾಥೆಯನ್ನು ಓದಬೇಕು. ಅವರ ಚಿಂತನೆಗಳಿಂದ ಪ್ರಭಾವ ಹೊಂದಬೇಕು ಎಂದು ಹೇಳಿದರು.
ಮೈಸೂರು ರಾಮಕೃಷ್ಣಾಶ್ರಮದ ವತಿಯಿಂದ ನಡೆದಿದ್ದ ಸ್ವಾಮಿ ವಿವೇಕಾನಂದರ ಕುರಿತಾದ ಪರೀಕ್ಷೆಯನ್ನು ಶಾಲೆಯ 50 ಮಂದಿ ಮಕ್ಕಳು ಬರೆದಿದ್ದರು. ಅವರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯರಾದವರಿಗೆ ಬಹುಮಾನಗಳು ಮತ್ತು ಪಾಸಾದವರಿಗೆ ಪ್ರಮಾಣ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ವಿವೇಕ ದೃಷ್ಟಿ ನವ ಭಾರತ ಸೃಷ್ಟಿಯ ಕಾರ್ಯಕ್ರಮವನ್ನು ನಡೆಸಿ, ಅದರಲ್ಲಿ ಸಿಬ್ಬಂದಿ ವರ್ಗದವರು ಭಾಗವಹಿಸಿ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಶಾಲಾ ಶಿಕ್ಷಕರಾದ ಎಚ್.ಎಸ್.ವಿಠಲ್, ಎಂ.ಶಿವಕುಮಾರ್, ಎ.ವಿ.ನವೀನ್ ಕುಮಾರ್, ಬಿ.ಸಿ.ದೊಡ್ಡನಾಯಕ್, ಡಿ.ಭವ್ಯ, ಪಿ.ಸವಿತಾ, ಸಯ್ಯದ್ ಶರ್ಫುದ್ದೀನ್ ಪಾಷ, ಬಿ.ಜೆ.ಶಿವಶಂಕರ್, ಪಿ.ಶ್ರೀನಿವಾಸ್ ಹಾಜರಿದ್ದರು.

ಸೆಮಿಸ್ಟರ್ – ಒಂದು ಅವಲೋಕನ

0

ವರ್ಷವಿಡೀ ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿರಲಿ. ವರ್ಷದಲ್ಲಿ ಓದಿದ್ದನ್ನೆಲ್ಲ ಒಂದೇ ಬಾರಿ ಉತ್ತರಿಸುವುದಕ್ಕಿಂತ, ಅರ್ಧಧನ ವರ್ಷ ಓದಿ ಉತ್ತರಿಸಲಿ, ತನ್ಮೂಲಕ ಫಲಿತಾಂಶ ಹೆಚ್ಚಳವಾಗಲಿ ಎಂಬಿತ್ಯಾದಿ ಘನ ಉದ್ದೇಶದಿಂದ ವಿಶ್ವವಿದ್ಯಾನಿಲಯಗಳಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದಿತು. ಇದರಿಂದ ಉದ್ದೇಶಗಳು ಈಡೇರಿದವೇ ಎಂಬ ಕುರಿತಾದ ಅವಲೋಕನ ಕೂಡ ಇಂದಿನ ಅಗತ್ಯ. ಆದರೆ ಆ ಕುರಿತು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಬದಲಿಗೆ ಬಂದ ವ್ಯವಸ್ಥೆಯನ್ನು ಒಪ್ಪಿಕೊಂಡು ಹೇಗೋ ಹಾಗೆ ಎಂದು ಮುಂದುವರೆಸುತ್ತಿದ್ದಾರೆ. ಇದರಿಂದಾಗುತ್ತಿರುವ ತೊಂದರೆಗಳ ಕುರಿತು ಚಕಾರ ಎತ್ತದ ಸ್ಥಿತಿಯೊಳಗೆ ನಾವಿದ್ದೇವೆ.
ವರ್ಷವಿಡೀ ವಿದ್ಯಾರ್ಥಿಗಳು ಶೈಕ್ಷಣಿಕ ವಾತಾವರಣದಲ್ಲಿದ್ದು, ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿರಬೇಕೆಂಬ ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ. ಆದರೆ ಶೈಕ್ಷಣಿಕ ವಾತಾವರಣಕ್ಕೆ ಬದಲಾಗಿ ಬರಿಯ ಓದಿನ ಕಂಠಪಾಠ ಮಾಡುವುದಕಷ್ಟೇ ವಿದ್ಯಾರ್ಥಿಗಳು ಸೀಮಿತವಾಗುತ್ತಿದ್ದಾರೆ. ಒಂದು ಸೆಮಿಸ್ಟರ್‍ನಲ್ಲಿ ಎರಡು ಕಿರುಪರೀಕ್ಷೆಗಳು. ಅವುಗಳನ್ನಾಧರಿಸಿ ಆಂತರಿಕ ಅಂಕಗಳು. ಹೀಗಾಗಿ ವಿದ್ಯಾರ್ಥಿಗಳು ಸದಾ ಪರೀಕ್ಷೆಗಳನ್ನು ಎದುರಿಸುವ ಭಯದೊಳಗೆ ಬದುಕುತ್ತಿದ್ದಾರೆ. ಒಂದು ಸೆಮಿಸ್ಟಾರ್‍ಗಾಗಲೀ ಪಠ್ಯೇತರ ಚಟುವಟಿಕೆಗಳಿಗಾಗಲೀ ವೇಳೆ ಅಲಭ್ಯ. ಹೀಗಾಗಿ ವಿದ್ಯಾರ್ಥಿಗಳು ಉರುಹಚ್ಚುವ ಹಕ್ಕಿಗಳಾಗುತ್ತಿದ್ದಾರೆಯೇ ವಿನ: ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ತಮ್ಮನ್ನು ತೆರೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಅನಿವಾರ್ಯವಾಗಿ ಮುಕ್ತಾಯ ಸಮಾರಂಭಗಳಷ್ಟೇ ನಡೆಯುತ್ತಿದೆ. ಯಾಕೆಂದರೆ ಪಠ್ಯಗಳನ್ನು ಮುಗಿಸುವ ಪರೀಕ್ಷೆಗಳನ್ನು ನಡೆಸುವ ಆಂತರಿಕ ಅಂಕಗಳನ್ನು ನೀಡುವ ಮೌಲ್ಯಮಾಪನ ಮಾಡುವ ಒತ್ತಡದಲ್ಲಿ ಶಿಕ್ಷಕರೂ ಇರುತ್ತಾರೆ. ಹಾಗಾಗಿ ಪರಸ್ಪರ ಹೊಂದಾಣಿಕೆ ಕೂಡಾ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆ ಇದ್ದಂತಹಾ ಸಾಂಸ್ಕøತಿಕ ಕ್ರೀಡಾ ವಾತಾವರಣ ವಿದ್ಯಾರ್ಥಿಗಳಿಗೆ ಲಭ್ಯವಾಗದೇ ಬರಿಯ ಓದಿನ ಏಕತಾನತೆಗೆ ಅವರು ಒಗ್ಗಿಕೊಳ್ಳುತ್ತಾ ಕುಗ್ಗುತ್ತಿದ್ದಾರೆ.
ವರ್ಷವಿಡೀ ಇರುವ ಸಿಲೆಬಸ್ಸನ್ನು ಅರ್ಧ ಅರ್ಧ ವಿಂಗಡಿಸಿ, ಒಂದೊಂದು ಸೆಮಿಸ್ಟರ್‍ಗೆಂದು ನಿಗದಿಪಡಿಸಿ, ಅಷ್ಟಕ್ಕೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಷ್ಟಷ್ಟನ್ನೇ ನೆನಪಿಟ್ಟುಕೊಳ್ಳುವುದು ಸುಲಭವೆಂದು ಸಾರುತ್ತಾರೆ. ಆದರೆ ಪ್ರಶ್ನೆಯೆಂದರೆ ಒಂದು ವರ್ಷ ಓದಿದ್ದನ್ನು ನೆನಪಿಟ್ಟುಕೊಳ್ಳಲಾಗದ ವಿದ್ಯಾರ್ಥಿಗಳು ಓದಿದ್ದನ್ನು ಜೀವನ ಪರ್ಯಂತ ನೆನಪಿಟ್ಟುಕೊಳ್ಳಲು ಹೇಗೆ ಸಾಧ್ಯ?. ಕಲಿತಂತೆ ಮರೆಯಬೇಕೆಂದಾದರೆ ಆ ಕಲಿಕೆಯಾದರೂ ಯಾಕೆ?
ಈ ಸೆಮಿಸ್ಟರ್ ಪದ್ದತಿಯಲ್ಲಿ ಪರೀಕ್ಷೆಗಳದ್ದೇ ಒಂದು ದೊಡ್ಡ ಕೆಲಸ. ನಾಲ್ಕು ನಾಲ್ಕು ತಿಂಗಳ ಕಲಿಕಾ ಅವಧಿ. ಎರಡೆರಡು ತಿಂಗಳ ಪರೀಕ್ಷಾ ಮೌಲ್ಯಮಾಪನದ ಅವಧಿ. ಇದು ಹೆಚ್ಚಾದದ್ದೂ ಇದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳೇ ವರ್ಷದ ನಾಲ್ಕು ತಿಂಗಳನ್ನು ಆಪೋಷಣೆ ತೆಗೆದುಕೊಳ್ಳುವುದು ವ್ಯವಸ್ಥೆಯ ದುರಂತ. ಹೀಗಾಗಿ ಇದು ಒಂದೆಡೆ ಶಿಕ್ಷಕ ಸ್ನೇಹಿಯೂ ಆಗದೇ, ಇನ್ನೊಂದೆಡೆ ವಿದ್ಯಾರ್ಥಿ ಸ್ನೇಹಿಯೂ ಆಗದೇ ನಡೆಯುತ್ತಿದೆ. ಶಿಕ್ಷಕರಿಗೂ ವರ್ಷವಿಡೀ ಇದೇ ಕೆಲಸವಾಗಿ, ರಜೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದರೂ, ಇವರನ್ನು ಇನ್ನೂ ಮಧ್ಯಂತರ ರಜೆ ಪಡೆವ ನೌಕರ ವರ್ಗ ಎಂದೇ ಸರ್ಕಾರ ಪರಿಭಾವಿಸುವುದರಿಂದ ಇವರಿಗೆ ಅತ್ತ ರಜೆಯೂ ಇರದೇ, ಇತ್ತ ಗಳಿಕೆ ರಜೆ ಕೂಡಾ ಲಭ್ಯವಾಗದೇ ಬೇಸರದಲ್ಲಿರುವುದು ನಿಜ. ಪದವಿಗೆ ಸೇರಿದವರಿಗೆ ಪದವಿ ಮುಗಿಯುವ ಹೊತ್ತಿಗೆ ಒಟ್ಟು ಆರು ಸೆಮಿಸ್ಟರ್ ಮುಗಿಸಬೇಕು. ಪ್ರತೀ ಸೆಮಿಸ್ಟರ್ ಪದ್ದತಿಯು ವಿಶ್ವ ವಿದ್ಯಾಲಯದ ಪಬ್ಲಿಕ್ ಪರೀಕ್ಷೆ. ಕೇಂದ್ರ ಮೌಲ್ಯಮಾಪನ ಇದರ ಬದಲಿಗೆ ಮೊದಲನೆಯ ನಾಲ್ಕು ಸೆಮಿಸ್ಟರ್ ಪರೀಕ್ಷೆಗಳನ್ನು ಆಯಾ ಶಿಕ್ಷಣ ಸಂಸ್ಥೆಗಳಲ್ಲೇ ಮಾಡಿ ಫಲಿತಾಂಶ ನೀಡಿದರೆ ಹೆಚ್ಚು ಅನುಕೂಲ. ಕೊನೆಯ ಎರಡು ಸೆಮಿಸ್ಟರ್ ಪರೀಕ್ಷೆಗಳಿಗೆ ಬೇಕಾದರೆ ಪಬ್ಲಿಕ್ ಪರೀಕ್ಷೆಗಳು ಜರುಗಿ ಕೇಂದ್ರ ಮೌಲ್ಯ ಮಾಪನ ಜರುಗಿದರೆ ಸಾಕು. ಇದರ ಆಧಾರದ ಮೇಲೆ ಫಲಿತಾಂಶ ನಿರ್ಧಾರಿತವಾದರೆ ಅಷ್ಟೇ ಸಮಯ ಮತ್ತು ಶ್ರಮದ ಉಳಿತಾಯದ ಜೊತೆಗೆ ವಿಶ್ವವಿದ್ಯಾಲಯಕ್ಕೆ ಹಣದ ಉಳಿತಾಯವೂ ಆಗುತ್ತದೆ. ಬೇಕಿದ್ದರೆ ವೃತ್ತಿಪರ ಕೋರ್ಸ್‍ಗಳಿಗೆ ಪಿಯುಸಿ ಪರೀಕ್ಷೆಯ ಅನಂತರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದರೂ ಆದೀತು. ಅದರ ಆಧಾರದ ಮೇಲೆ ಬಿಎ, ಎಂಎ ಇತ್ಯಾದಿಗಳಿಗೆ ಸೇರಲು ಸಾಧ್ಯವಾಗಬೇಕು. ಹೀಗಾದಾಗ ಒಟ್ಟಾರೆ ಪರೀಕ್ಷೆಗಳ ಸಂಖ್ಯೆ, ಮೌಲ್ಯಮಾಪನ ದಿನಗಳಿಗಾಗಿ ವ್ಯಯಿಸುವ ದಿನಗಳು, ಕಡಿಮೆಯಾಗುವುದು ಎಲ್ಲರೂ ಒಪ್ಪುವ ವಿಷಯ. ಹಾಗೂ ಅಷ್ಟರ ಮಟ್ಟಿಗೆ ಪರೀಕ್ಷಾ ಅಕ್ರಮಗಳು ಕಡಿಮೆಯಾಗಬಹುದೇನೋ?.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಪ್ರಶ್ನೆ ಪತ್ರಿಕೆ ಬಹಿರಂಗದಂತಹ ಪ್ರಕರಣಗಳಿಗೆ ಉತ್ತರ ಪತ್ರಿಕೆಗಳನ್ನು ಮತ್ತೆ ಸೇರಿಸುವ ಪ್ರಕರಣಗಳನ್ನೂ ಸೇರಿಸಿಕೊಂಡು ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಜನರು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಪೂರ್ಣ ಪರಿಹಾರ ಸಾಧ್ಯವಾಗದಿರಬಹುದಾದರೂ, ಪರಿಹಾರಕ್ಕೆ ಪ್ರಯತ್ನಿಸಲು ಯತ್ನಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಶೇಕಡಾ 75 ರ ಹಾಜರಾತಿ, ಕಡ್ಡಾಯ ಎಂದು ತಿಳಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತಾಗಬೇಕು. ವರ್ಷವಡೀ ಕನಿಷ್ಟ ತರಗತಿಯಲ್ಲಿ ಕೂತಿದ್ದರೆ, ಕಲಿಕೆಗೆ ಅಷ್ಟು ಸಾಕು. ಗುಣಮಟ್ಟ ತನ್ನಿಂದ ತಾನೇ ಬರಬಲ್ಲದು. ಇದಕ್ಕೆ ಅಗತ್ಯವಾಗಿ ಪ್ರತೀ ತರಗತಿಗೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದರೆ ವಿದ್ಯಾರ್ಥಿ ಮತ್ತು ಶಿಕ್ಷಕರಿಬ್ಬರೂ ಫೋರ್ಜರೀ ಹಾಜರಾತಿ ನೀಡಲು ಸಾಧ್ಯವಾಗುವುದಿಲ್ಲ. ಕಾಲೇಜಿಗೇ ಬಾರದೇ ಅಡ್ಡ ದಾರಿಯ ಮೂಲಕ ವಿದ್ಯಾರ್ಥಿಗಳು ಉತ್ತೀರ್ಣರಾಗುವುದಕ್ಕೆ ಅವಕಾಶವಿರುವುದಾದರೆ ನ್ಯಾಯಯುತವಾಗಿ ಪ್ರತೀದಿನವೂ ಕಾಲೇಜಿಗೆ, ಕ್ಲಾಸಿಗೆ ಕುಳಿತುಕೊಳ್ಳುವವರನ್ನು ಯಾಕೆ ಉತ್ತೀರ್ಣ ಎಂದು ಘೋಷಿಸಬಾರದು? ಮೊದಲ ಎರಡು ವರ್ಷಗಳ ನಾಲ್ಕು ಸೆಮಿಸ್ಟರ್‍ಗೆ ಈ ಪದ್ದತಿಯಾದರೂ ಸಾಕು. ಕೊನೆಯ ಎರಡು ಸೆಮಿಸ್ಟರ್‍ಗೆ ಈ ಪದ್ಧತಿಯೊಂದಿಗೆ ಪಬ್ಲಿಕ್ ಪರೀಕ್ಷೆ ಕೂಡಾ ಜರುಗಲಿ. ಇನ್ನು ತರಗತಿಯಲ್ಲಿ ಸಿಸಿ ಟಿವಿಯನ್ನು ಅಳವಡಿಸಿದರೆ ಸೂಕ್ತ. ವಿದ್ಯಾರ್ಥಿಗಳ ಪ್ರತಿಯೊಂದೂ ಚಲನವಲನಗಳು ಹಾಗೆ ಶಿಕ್ಷಕರದ್ದೂ ಕೂಡಾ ದಾಖಲಾಗುವಂತಾದರೆ ಒಂದು ಹದದ ಎಚ್ಚರಿಕೆ ಇರುತ್ತದೆ. ಅದೇ ಸಾಕಾಗುತ್ತದೆ. ಇಷ್ಟಕ್ಕೂ ಈ ಸಾಮಾನ್ಯ ಪದವಿ ಪರೀಕ್ಷೆಗಳ ಅಂಕ ಪಟ್ಟಿಯನ್ನಷ್ಟೇ ನೋಡಿ ಇಂದು ಯಾರೂ ನೌಕರಿ ನೀಡುವುದಿಲ್ಲ. ನೌಕರಿ ನೀಡಲು ಪ್ರತೀ ಸಂಸ್ಥೆ ಕೂಡಾ ತನ್ನ ಅಗತ್ಯಕ್ಕನುಗುಣವಾಗಿ ಪ್ರತ್ಯೇಕ ಪರೀಕ್ಷೆಗಳನ್ನೇ ನಡೆಸಿ ಆಯ್ಕೆ ಮಾಡಿಕೊಳ್ಳುತ್ತದೆ.
ಕೇವಲ ಫಲಿತಾಶ ಹೆಚ್ಚಳವಾಗಬೇಕೆಂದಿದ್ದರೆ, ಒಂದು ವಿಷಯದಲ್ಲಿ ಕನಿಷ್ಠ 40 ಅಂಕಗಳನ್ನು ಪಡೆದರೆ ಉತ್ತೀರ್ಣ ಎಂದಿದ್ದಲ್ಲಿ, ಓದುವ ಒಟ್ಟಾರೆ ವಿಷಯಗಳಲ್ಲಿ ಶೇಕಡಾ 40 ರಷ್ಟು ವಿಷಯಗಳಲ್ಲಿ ಉತ್ತೀರ್ಣರಾದರೆ ಒಟ್ಟಾರೆ ಉತ್ತೀರ್ಣ ಎಂದು ಘೋಷಿಸುವುದು ಸೂಕ್ತ. ಫಲಿತಾಂಶದ ಹೆಚ್ಚಳ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದ ಹೆಚ್ಚಳವೇ ವಿನ: ಅವರ ಗುಣಮಟ್ಟದ ಹೆಚ್ಚಳದ ಅಳತೆಗೋಲಲ್ಲ. ಹೆಚ್ಚು ಹೆಚ್ಚು ಪರೀಕ್ಷೆಗಳ ಒತ್ತಡವಿರದಿದ್ದಾಗ ಮಾತ್ರ ವಿದ್ಯಾರ್ಥಿಗಳು ಸಾಂಸ್ಕøತಿಕ ಚಟುವಟಿಕೆಗಳಲ್ಲಿ, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸಾಧ್ಯ. ಇದರಿಂದಾಗಿ ಒತ್ತಡದ ವಾತಾವರಣದಿಂದ ಒಂದಷ್ಟು ಹಗುರವಾಗಿ ಇರುವಂತಾದರೆ, ಅದು ಒಟ್ಟಾರೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡಬಲ್ಲದು.
ವರ್ಷದ ನಾಲ್ಕು ತಿಂಗಳುಗಳಷ್ಟು ಸುದೀರ್ಘವಾದ ಅವಧಿಯನ್ನು ಪರೀಕ್ಷಾ ಕಾರ್ಯಗಳಿಗಾಗಿ ಮೀಸಲಿಡುವುದರ ಮುಖಾಂತರ ಆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ದೊರಕಬಹುದಾದ ಶೈಕ್ಷಣಿಕ ವಾತಾವರಣ ದೊರಕದಂತಾಗಿದೆ. ಮತ್ತು ನಾಲ್ಕು ತಿಂಗಳುಗಳ ಕಾಲ ಪರೀಕ್ಷಾ ಒತ್ತಡದಲ್ಲಿಯೇ ವಿದ್ಯಾರ್ಥಿ ಸಮುದಾಯ ಮತ್ತು ಶಿಕ್ಷಕ ಸಮುದಾಯ ಇರಬೇಕಾಗಿದೆ. ಸೆಮಿಸ್ಟರ್ ಪದ್ದತಿಯ ಹಿಂದೆ ಇರುವ ಆದರ್ಶವನ್ನು ಪ್ರಶ್ನಿಸಲಾಗದು. ಆದರೆ ಅದರಿಂದಾಗುತ್ತಿರುವ ಅಪಾಯಗಳನ್ನು ಪ್ರಶ್ನಿಸದೇ ಇರಲೂ ಆಗದು. ಮತ್ತು ಅದೀಗ ಕೇವಲ ಮರೀಚಿಕೆಯಾಗಿದೆಯೇ ಅಥವಾ ಅದರ ಗುರಿಯನ್ನು ಸಂಪೂರ್ಣವಾಗಿಯಲ್ಲದಿದ್ದರೂ, ಪೂರ್ಣತೆಗೆ ಹತ್ತಿರವಾಗಿಯಾದರೂ ಸಾಧಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಬೇಕಾದದ್ದು ಯಾವುದೇ ಸುಧಾರಣೆಗೆ ಮುನ್ನ ಅನುಸರಿಸಬೇಕಾದ ಕ್ರಮ. ಪ್ರಶ್ನಿಸಿಕೊಳ್ಳುತ್ತಲೇ, ಉತ್ತರಗಳನ್ನು ಕಂಡುಕೊಳ್ಳುತ್ತಲೇ ಬೆಳವಣಿಗೆ ಸಾಧ್ಯವಾಗಬಹುದೇ ವಿನ: ಒಪ್ಪಿಕೊಳ್ಳುತ್ತಾ, ತೆಪ್ಪಗೆ ಸಾಗುವುದಕಷ್ಟೇ ಸೀಮಿತವಾಗುವುದರಿಂದಲ್ಲ.
ರವೀಂದ್ರ ಭಟ್ ಕುಳಿಬೀಡು

ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ

0

ವಾಹನ ಸವಾರರು ರಸ್ತೆಗಳಲ್ಲಿ ಸಂಚಾರ ಮಾಡುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಪ್ರಾದೇಶಿಕ ಸಾರಿಗೆ ನಿರೀಕ್ಷಕ ಕಮಲ್ಬಾಬು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಡೆಸಿದ ೨೭ ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ –೨೦೧೬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಟೋ ಚಾಲಕರು, ದ್ವಿಚಕ್ರ ವಾಹನ ಸವಾರರು, ಕಾರುಗಳ ಚಾಲಕರು, ಹಾಗೂ ಬಾರಿ ವಾಹನಗಳ ವಾಹನಗಳ ಸವಾರರು, ರಸ್ತೆಗಳ ಮೇಲೆ ವಾಹನಗಳ ಚಾಲನೆ ಮಾಡುವ ಮುನ್ನಾ ತಮ್ಮ ವಾಹನಗಳ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕು, ವಾಹನಗಳನ್ನು ಯಾವಾಗಲೂ ಸುಸ್ಥಿತಿಯಲ್ಲಿಡಬೇಕು, ಕಡ್ಡಾಯವಾಗಿ ಚಾಲಕರು ಹಾಗೂ ಹಿಂಬದಿಯ ಸವಾರರು ಹೆಲ್ಮೇಟ್ ಧರಿಸಬೇಕು, ವಾಹನದಲ್ಲಿರುವ ಇಬ್ಬರೂ ಧರಿಸುವುದರಿಂದ ಅಪಘಾತಗಳಲ್ಲಿ ಪ್ರಾಣಹಾನಿಯನ್ನು ತಪ್ಪಿಸಬಹುದಾಗಿದೆ, ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಪರವಾನಗಿಯನ್ನು ಹೊಂದಿರಬೇಕು, ರಸ್ತೆಗಳಲ್ಲಿರುವ ಮುಂಜಾಗ್ರತಾ ಸೂಚನಾ ಫಲಕಗಳಲ್ಲಿರುವ ಮಾಹಿತಿಗಳನ್ನು ಪಾಲಿಸಬೇಕು, ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ಅವಕಾಶಗಳನ್ನು ನೀಡಬಾರದು, ವಾಹನ ಚಾಲನೆ ಮಾಡುವಾಗ ಮಧ್ಯಪಾನ ಮಾಡಬಾರದು, ಮೊಬೈಲ್ಗಳನ್ನು ಮಾತನಾಡುವುದನ್ನು ಮಾಡಬಾರದು ಇಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆಗಳಲ್ಲಿ ಆಗಬಹುದಾದಂತಹ ಅಪಘಾತಗಳನ್ನು ತಡೆಗಟ್ಟುವ ಮೂಲಕ ವಾಹನ ಸವಾರರು ತಮ್ಮ ಪ್ರಾಣಗಳನ್ನು ರಕ್ಷಣೆ ಮಾಡಿಕೊಳ್ಳುವ ಮೂಲಕ ಇತರರ ಪ್ರಾಣಗಳನ್ನು ಉಳಿಸಿ ರಕ್ಷಣೆ ಮಾಡಬೇಕು, ರಸ್ತೆಗಳಲ್ಲಿ ಇತ್ತಿಚೆಗೆ ರಾಗಿಯ ಬೆಳೆಗಳನ್ನು ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಇದರಿಂದ ಅನೇಕ ಮಂದಿಯ ಪ್ರಾಣಗಳಿಗೆ ತೊಂದರೆಯಾಗುತ್ತಿದೆ, ರೈತರು ಒಕ್ಕಣೆ ಮಾಡಲು ಬೇರೆ ಸ್ಥಳಗಳನ್ನು ನಿಗದಿ ಮಾಡಿಕೊಳ್ಳಬೇಕು, ಈ ಬಗ್ಗೆ ರೈತ ಸಂಘಟನೆಗಳು ಗಮನಹರಿಸಿ ಜಾಗೃತಿ ಮೂಡಿಸಬೇಕು, ಇದೇ ಪರಿಸ್ಥಿತಿ ಮುಂದುವರೆಸಿದರೆ, ಯಾರು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಾರೊ ಅಂತಹವರ ಮೇಲೆ ಕೇಸು ದಾಖಲಿಸಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಹೇಳಿದರು.
ಎಸ್.ಎಲ್.ವಿ.ಮೋಟಾರ್ಸ್ ನವಮೋಹನ್, ಮಂಜುನಾಥ್, ಅಶೋಕ್ ಹಾಗೂ ಹಲವಾರು ಮಂದಿ ಆಟೋ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದರ್ಗಾಗಳ ಅಭಿವೃದ್ಧಿ ಕಾಮಗಾರಿ

0

ತಾಲ್ಲೂಕಿನಾದ್ಯಂತ ವಿವಿಧ ದರ್ಗಾಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸುಮಾರು 50 ಲಕ್ಷ ರೂಗಳನ್ನು ಮಂಜೂರು ಮಾಡಿಸಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಸುಲ್ತಾನ್ ಗಯಬ್ ಷಾ ವಲ್ಲಿ ಬಾಬ ದರ್ಗಾದ ಆರು ಲಕ್ಷ ರೂ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಅಜ್ಜಕದಿರೇನಹಳ್ಳಿಯಿಂದ ಚಿಕ್ಕತೇಕಹಳ್ಳಿ ಮಾರ್ಗವಾಗಿ ಬಶೆಟ್ಟಹಳ್ಳಿವರೆಗೆ ಹಾಗೂ ಸಾದಲಿಯಿಂದ ಪೆರೇಸಂದ್ರ ರಸ್ತೆಯವರೆಗೆ 54 ಲಕ್ಷ ರೂಪಾಯಿಗಳ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ತಾಲ್ಲೂಕಿನಾದ್ಯಂತ 76 ಹಳ್ಳಿಗಳಲ್ಲಿ ಸಿಸಿ ರಸ್ತೆಯ ಗುದ್ದಲಿ ಪೂಜೆ ಮಾಡಲಾಗುತ್ತಿದೆ. ಕೆಲವು ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಗ್ರಾಮಸ್ಥರು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣ, ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಸುಲ್ತಾನ್ ಗಯಬ್ ಷಾ ವಲ್ಲಿ ಬಾಬ ದರ್ಗಾದಲ್ಲಿ ಚಾದರ್ ಹೊದಿಸಿ ಪೂಜೆ ಸಲ್ಲಿಸಿದರು.
ನಗರಸಭಾ ಸದಸ್ಯ ಅಫ್ಸರ್ ಪಾಷ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಂಜುಂಡಪ್ಪ, ಆನೂರು ಶಿವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿದ್ಯೆ ವಿಕಾಸಕ್ಕೆ ಮಾರ್ಗದರ್ಶಿ

0

ವಿದ್ಯೆ ವಿಕಾಸಕ್ಕೆ ಮಾರ್ಗದರ್ಶಿ. ಗ್ರಾಮೀಣ ಭಾಗದಲ್ಲಿ ಕಡಿಮೆ ವೆಚ್ಚದ ಶಿಕ್ಷಣ, ಮೂಲಸೌಕರ್ಯ ನೀಡುತ್ತಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹೊಣೆಯನ್ನು ಹೊತ್ತಿರುವುದಾಗಿ ಲೋಕಮಾತಾ ಎಜುಕೇಷನಲ್‌ ಟ್ರಸ್ಟ್‌ ಕಾರ್ಯದರ್ಶಿ ಎನ್‌.ಆರ್‌.ಕೃಷ್ಣಮೂರ್ತಿ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆ ಹಾಗೂ ಕಪಿಲಮ್ಮ ಸಂಯುಕ್ತ ಕಾಲೇಜಿನ ದಶಮಾನೋತ್ಸವ, ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಕಾಳಜಿ ವಹಿಸಬೇಕು, ಈಚೆಗೆ ಗ್ರಾಮಸ್ಥರ ಆಸಕ್ತಿಯಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ. ಯಾವುದೇ ಸಾಧನೆ ಕೇವಲ ಮಕ್ಕಳನ್ನು ಮಾತ್ರ ಅವಲಂಬಿಸಿರುವುದಿಲ್ಲ. ಶಾಲೆಯ ಪ್ರತಿಯೊಂದು ವಿಭಾಗದಲ್ಲಿನ ಸಿಬ್ಬಂದಿಯ ಸತತ ಪರಿಶ್ರಮ, ದೈಹಿಕ ಮಾನಸಿಕ ಸೇವೆ, ಮಕ್ಕಳ ಏಕಾಗ್ರತೆ ಸಾಧನೆಗೆ ದಾರಿಯಾಗುತ್ತದೆ ಎಂದರು.
ಶಾಲಾ ವಾರ್ಷಿಕೋತ್ಸವ ಮತ್ತು ಕಾಲೇಜಿನ ದಶಮಾನೋತ್ಸವದ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ವಿಭಾಗಗಳ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು.
ವಿವಿಧ ಪಠ್ಯೇತರ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದಯಾನಂದ ಸಾಗರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದೈಹಿಕ ಶಿಕ್ಷಣ ನಿರೀಕ್ಷಕ ಕೆ.ಎ.ಅಶೋಕ್‌ ಕುಮಾರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎ.ನಾಗಪ್ರಕಾಶ್‌, ಲೋಕಮಾತಾ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷೆ ಎನ್‌.ಆರ್‌.ಲಲಿತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಕೆ.ಜಿ.ಇಂದಿರಾ, ಗಿರಿಜಾ ರಮೇಶ್‌, ವನರಾಜಲಕ್ಷ್ಮಿ, ಎಚ್‌.ಎಸ್‌.ಶ್ರೀಕಾಂತ್‌, ಪ್ರೊ.ಶಶಿಧರ್‌, ಎನ್‌.ಆರ್‌.ನಾಗರಾಜರಾವ್‌, ಡಿ.ಎಲ್‌.ಜನಾರ್ಧನರಾವ್‌, ಆರ್‌.ಮಧು, ಮುಖ್ಯ ಶಿಕ್ಷಕ ಸತ್ಯನಾರಾಯಣ್‌, ಪ್ರಾಂಶುಪಾಲ ಸುದರ್ಶನ್‌, ಶಿಕ್ಷಕರಾದ ಸುಮಾ, ಪ್ರಕಾಶ್‌ ಮತ್ತಿತರರು ಹಾಜರಿದ್ದರು.

ಕಾಮಗಾರಿಯ ಗುಣಮಟ್ಟದಲ್ಲಿ ರಾಜಿಯಾಗದಿರಿ

0

ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಕೂಡದು ಎಂದು ಮೇಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಶುಕ್ರವಾರ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಸುಮಾರು ಆರು ಲಕ್ಷ ರೂಗಳ 75 ಮೀಟರ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಒಳಿತಿಗೆ ಸಹಕರಿಸಬೇಕು. ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.
ಮೇಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯರಾದ ಆರ್.ಎ.ಉಮೇಶ್, ಕೆ.ಮಂಜುನಾಥ್, ಮಮತಾ ಲಕ್ಷ್ಮಣ್, ರೂಪೇಶ್, ಕೃಷ್ಣಮೂರ್ತಿ, ಶ್ರೀನಿವಾಸ್, ಮಾಜಿ ಸದಸ್ಯರಾದ ಚಂದ್ರಶೇಖರ್, ವೆಂಕಟೇಶಮೂರ್ತಿ, ಎಚ್.ಟಿ.ನಾರಾಯಣಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ಸದಸ್ಯ ಆರ್.ಬಿ.ಜಯದೇವ್, ಎಂ.ಪಿ.ಸಿ.ಎಸ್.ಅಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಕೃಷ್ಣಪ್ಪ, ಮುಖಂಡರಾದ ರಾಜಣ್ಣ, ರಾಮಚಂದ್ರ, ಕೆ.ನಾರಾಯಣಸ್ವಾಮಿ, ಅರ್ಚಕ ವೇಣುಗೋಪಾಲಾಚಾರಿ, ಎಂಜಿನಿಯರ್ ದಿನೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳು ವೃತ್ತಿ ಶಿಕ್ಷಣವನ್ನು ಪಡೆದಾಗ ಅವರ ಕ್ರಿಯಾಶೀಲತೆಯು ಅರಳುತ್ತದೆ

0

ಶಿಕ್ಷಣದಲ್ಲಿ ವೃತ್ತಿ ಶಿಕ್ಷಣವು ಅವಿಭಾಜ್ಯ ಅಂಗವಾಗಬೇಕು. ಗಾಂಧೀಜಿ ಮತ್ತು ರವೀಂದ್ರನಾಥ ಠಾಗೋರ್ ಅವರ ಪರಿಕಲ್ಪನೆಯ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿತ್ತು ಎಂದು ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಮುನಿರತ್ನಂ ತಿಳಿಸಿದರು.
ನಗರದ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದೊಂದಿಗೆ ಮಕ್ಕಳು ವೃತ್ತಿ ಶಿಕ್ಷಣವನ್ನು ಪಡೆದಾಗ ಅವರ ಕ್ರಿಯಾಶೀಲತೆಯು ಅರಳುತ್ತದೆ. ಪ್ರಪಂಚ ಜ್ಞಾನ ವೃದ್ಧಿಸುತ್ತದೆ ಹಾಗೂ ಮುಂದೆ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.
ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಆಂಜಿನಪ್ಪ ಮಾತನಾಡಿ, ಜಿಲ್ಲೆಯ ಆರು ತಾಲ್ಲೂಕುಗಳಿಂದ 36 ಶಾಲೆಗಳು ಈ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಹೊಲಿಗೆ ಎಂದು ಜಿಲ್ಲೆಯಲ್ಲಿ ವೃತ್ತಿ ಶಿಕ್ಷಣದ ನಾಲ್ಕು ವಿಭಾಗಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳನ್ನು ನೀಡುತ್ತುದ್ದು, ಪ್ರಥಮರಾದವರನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ಹೇಳಿದರು.
ಶಾರದಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ಎಂ.ಶ್ರೀಕಾಂತ್, ಮುಖ್ಯ ಶಿಕ್ಷಕ ವೆಂಕಟರಮಣಪ್ಪ, ಡಿ.ವೈ.ಪಿ.ಸಿ ಚಂದ್ರಶೇಖರಬಾಬು, ವೃತ್ತಿ ಶಿಕ್ಷಣ ಶಿಕ್ಷಕಿ ಹೇಮಾಕುಮಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳ ಸೃಜನಶೀಲತೆಯನ್ನು ಅರಳಿಸುವ ಕೆಲಸ ಅತ್ಯಗತ್ಯ

0

ಮಕ್ಕಳ ಅಭಿವ್ಯಕ್ತಿಗೆ ಸ್ವಾತಂತ್ರ್ಯವನ್ನು ಕಲ್ಪಿಸಿ ಅವರ ಸೃಜನಶೀಲತೆಯನ್ನು ಅರಳಿಸುವ ಕೆಲಸ ಎಲ್ಲಾ ಶಾಲೆಗಳಲ್ಲೂ ನಡೆಯಬೇಕು ಎಂದು ಸಾಹಿತಿ ಬೇಲೂರು ರಘುನಂದನ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಇಂಡಿಯನ್ ಫೌಂಡೇಷನ್ ಫಾರ್ ಆರ್ಟ್ಸ್ ಸಹಭಾಗಿತ್ವದಲ್ಲಿ ನಡೆಸಿದ 12ನೇ ವರ್ಷದ ಶಾಲಾ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಬರಹಗಳ ಸಂಕಲನ ‘ಶಾಮಂತಿ–5’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಗುವು ತನ್ನ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ತೆರದುಕೊಳ್ಳಲು ಅವಕಾಶ ಸಿಕ್ಕಲ್ಲಿ, ಅದು ಬೆಳವಣಿಗೆಗೆ ಪೂರಕವಾಗುತ್ತದೆ. ಮುಂದೆ ಉತ್ತಮ ಮನುಷ್ಯನಾಗಲು ಸಹಕಾರಿಯಾಗುತ್ತದೆ. ಶಿಕ್ಷಣವೆಂಬುದು ಕೇವಲ ಅಂಕಗಳಿಕೆಯಲ್ಲ, ಅಕ್ಷರ ಕಲಿಕೆಯೂ ಅಲ್ಲ. ಕಲಿಕೆಯೆಂಬುದು ಎಲ್ಲ ರೀತಿಯ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ. ಮಕ್ಕಳ ಸಾಹಿತ್ಯ ಎಂದರೆ ಕೇವಲ ದೊಡ್ಡವರು ಮಕ್ಕಳಿಗೆ ಬರೆಯುವುದು ಎಂಬ ಕಲ್ಪನೆಯಿದೆ. ಆದರೆ ಮಕ್ಕಳೇ ಬರೆದ ಸಾಹಿತ್ಯವೇ ನಿಜವಾದ ಮಕ್ಕಳ ಸಾಹಿತ್ಯ. ಅದರಿಂದ ದೊಡ್ಡವರು ಕಲಿಯಬೇಕಾದ್ದು ಸಾಕಷ್ಟಿದೆ. ಕುವೆಂಪು ಅವರು ಹೇಳಿರುವ ವಿಶ್ವಮಾನವತೆಯ ಪರಿಕಲ್ಪನೆಯನ್ನು ಮಕ್ಕಳ ಮನೋಲೋಕದ ಮೂಲಕ ನಡೆಸಿರುವ ಕಾರ್ಯವನ್ನು ಶಾಮಂತಿ ಪುಸ್ತಕದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಐ.ಎಫ್.ಎ. ಸಂಸ್ಥೆಯ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಮಗುವಿನ ಕುತೂಹಲಗಳಿಗೆ, ಪ್ರಶ್ನೆಗಳಿಗೆ ಪೋಷಕರು ಮತ್ತು ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಬೇಕು. ತಾಲ್ಲೂಕಿನ ಶಾಲಾ ಮಕ್ಕಳಿಗಾಗಿ ಪ್ರತಿವರ್ಷ ನಡೆಸುವ ನಾಟಕೋತ್ಸವ ನಿಜಕ್ಕೂ ಮಾದರಿಯಾಗಿದೆ. ಶಾಮಂತಿ ಪುಸ್ತಕದಲ್ಲಿ ಮಕ್ಕಳ ಬರಹಗಳು ಮತ್ತು ಚಿತ್ರಗಳ ಸುಂದರ ಭಾವನಾಪ್ರಪಂಚವಿದೆ. ಮಕ್ಕಳ ಲೋಕದಲ್ಲಿ ವಿಹರಿಸುವ ಮೂಲಕ ದೊಡ್ಡವರೂ ಮಗುವಾಗುವ ಅವಕಾಶವನ್ನಿಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ನೇಹ ಯುವಕರ ಸಂಘದಿಂದ ಶಿಕ್ಷಕರನ್ನು ಅಭಿನಂದಿಸಲಾಯಿತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್, ಸುಬ್ರಮಣಿ, ಡಿ.ಕೆ.ಶ್ರೀರಾಮ್, ಗ್ರಾಮ ಪಂಚಾಯತಿ ಸದಸ್ಯೆ ಸರೋಜಮ್ಮ ನಾಗರಾಜ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಕೆ.ಮುನಿರಾಜಗೌಡ, ಅರಿಕೆರೆ ಮುನಿರಾಜು, ಕೆ.ಕೃಷ್ಣಾರೆಡ್ಡಿ, ಟಿ.ಎಂ.ಮುನಿರಾಜು, ಸ್ನೇಹ ಯುವಕರ ಸಂಘದ ಅಧ್ಯಕ್ಷ ವಸಂತಕುಮಾರ್, ರೈಲ್ವೆ ಇಲಾಖೆಯ ಮಂಜುಳಾ, ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ಮುನಿಯಪ್ಪ, ಶಾಮಂತಿ ಪುಸ್ತಕದ ಸಂಪಾದಕ ಎಸ್.ಕಲಾಧರ, ಶಿಕ್ಷಕ ದೇವರಾಜ್, ಗ್ರಾಮದ ಹಿರಿಯರಾದ ಸುಬ್ಬಣ್ಣ, ಕೆ.ಸಿ.ಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೈವೋಲ್ಟೀನ್ ತಳಿಯ ಗೂಡುಗಳನ್ನು ಗರಿಷ್ಠ ದರಕ್ಕೆ ಮಾರಾಟ ಮಾಡಿದ ರೈತ

0

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆ ಅಗ್ರಸ್ಥಾನವನ್ನು ಹೊಂದಿದ್ದರೂ ಸಹ ಬೈವೋಲ್ಟೀನ್ ತಳಿಯನ್ನು ಬೆಳೆಯಲು ರೈತರಿಗೆ ಸರ್ಕಾರ ಪ್ರೋತ್ಸಾಹಿಸಬೇಕೆಂದು ರೇಷ್ಮೆ ಬೆಳೆಗಾರರು ಹಾಗೂ ಬಿಜೆಪಿ ಮುಖಂಡ ಸಿ.ವಿ.ಲೋಕೇಶ್ಗೌಡ ಒತ್ತಾಯಿಸಿದರು.
ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬೈವೋಲ್ಟೀನ್ ತಳಿಯ ಗೂಡುಗಳನ್ನು ಗರಿಷ್ಠ ೩೩೦ ರೂಗಳಿಗೆ ಮಾರಾಟ ಮಾಡಿ ಪ್ರಮಾಣಮತ್ರ ಸ್ವೀಕರಿಸಿ ಅವರು ಮಾತನಾಡಿದರು. ರೇಷ್ಮೆ ಉದ್ಯಮವನ್ನು ಅಭಿವೃದ್ಧಿಪಡಿಸಲು ಸರ್ಕಾರ ಮತ್ತು ರೇಷ್ಮೆ ಅಧಿಕಾರಿಗಳು ಬೈವೋಲ್ಟೀನ್ ತಳಿಯ ಗೂಡುಗಳನ್ನು ಬೆಳೆಸಬೇಕೆಂದು ಪ್ರೇರೇಪಿಸುತ್ತಿದ್ದಾರೆ. ಪ್ರತಿ ಕೆಜಿ ಗೂಡಿಗೆ ೫೦ ರೂಗಳು ಪ್ರೋತ್ಸಾಹ ದನವನ್ನು ಸರ್ಕಾರ ನೀಡುತ್ತಿದ್ದು ಅದನ್ನು ೧೦೦ ರೂಗಳಿಗೆ ಏರಿಸಬೇಕೆಂದು ಅವರು ಒತ್ತಾಯಿಸಿದರು.
ಮಿಶ್ರ ತಳಿಯ ಗೂಡು ಬೆಳೆಯಲು ಹಾಗೂ ಬೈವೋಲ್ಟೀನ್ ತಳಿಯ ಗೂಡುಗಳನ್ನು ಬೆಳೆಯಲು ತೀರಾ ವ್ಯತ್ಯಾಸವಿದೆ. ಹಾಗಾಗಿ ಶ್ರಮಕ್ಕೆ ತಕ್ಕಂತೆ ಬೈವೋಲ್ಟೀನ್ ತಳಿಯ ಗೂಡುಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ. ಸರ್ಕಾರ ಬಯಲು ಸೀಮೆಯ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಾಯಧನವನ್ನು ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ರತ್ನಯ್ಯಶೆಟ್ಟಿ,ಎಸ್.ಇ.ಓ ಆಂಜಿನೇಯರೆಡ್ಡಿ ಹಾಜರಿದ್ದರು.