Home Blog Page 486

ಜನಪದ ಉತ್ಸವ

0

ಜನಪದಕ್ಕೆ ಅಪಾರ ಶಕ್ತಿಯಿದ್ದು, ಬದುಕಿಗೆ ನಿರಂತರ ದಾರಿ ದೀಪವಾಗಿದೆ. ಜನಪದಕ್ಕೆ ಜನಮನ್ನಣೆಯೂ ಸಿಗುತ್ತಿದೆ. ಕಲಾವಿದರು ಆಳವಾಗಿ ತೊಡಗಿಸಿಕೊಂಡು ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಂಗಮಕೋಟೆ ಪ್ರೌಢಶಾಲಾ ಆವರಣದಲ್ಲಿ ಈಚೆಗೆ ನಡೆದ ‘ಜನಪದ ಉತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದಕ್ಕೆ ಆದಿ ಮತ್ತು ಅಂತ್ಯವಿಲ್ಲ. ಜನಪದ ಸಾಮೂಹಿಕ ಬದುಕಿನ ಸೊಗಡನ್ನು ಬಿಂಬಿಸುತ್ತದೆ. ಜನಪದ ದೇಸಿಯ ಕಲೆಗಳು ಜೀವಂತವಾಗಿರಲು ಪ್ರೋತ್ಸಾಹ ಅತ್ಯಗತ್ಯ ಎಂದು ನುಡಿದರು.
ತಾಲ್ಲೂಕಿನ ಕಾಳನಾಯಕನಹಳ್ಳಿಯ ರತ್ನಾವಳಿ ನಾಟ್ಯ, ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಕೋಲಾಟ ಪ್ರದರ್ಶನ ಮತ್ತು ‘ಮಾಧ್ಯಮ ವ್ಯಾಯೋಗ’ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ವಿಶ್ವ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ‘ಜಾನಪದ ಗೀತೆಗಳ ಗಾಯನ’ ನಡೆಸಿಕೊಟ್ಟರೆ, ಪರಿವರ್ತನ ಪ್ರತಿಷ್ಠಾನ ಸಂಸ್ಥೆ ‘ಜಾನಪದ ನೃತ್ಯ’ವನ್ನು ಪ್ರದರ್ಶಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಎಂ.ಎಸ್.ಈರಯ್ಯ, ಜೆ.ಕೆ.ಮಂಜುನಾಥ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಳೆನಾಶಕದಿಂದ ಬೆಳೆ ನಾಶ

0

ದುಷ್ಕರ್ಮಿಗಳು ಔಷಧಿ ಸಿಂಪಡಿಸುವ ಡ್ರಮ್ಮಿಗೆ ಕಳೆನಾಶಕವನ್ನು ಬೆರೆಸಿದ್ದರಿಂದಾಗಿ ತಾಲ್ಲೂಕಿನ ಚಿಂತಡಪಿಯ ರೈತ ಸಿ.ಎಂ.ಮಾರುತಿ ಅವರ ಐದೂವರೆ ಎಕರೆ ಜಮೀನಿನಲ್ಲಿನ ಮೂರು ಬೆಳೆಗಳು ನಾಶವಾಗಿ ಸುಮಾರು ಐದು ಲಕ್ಷ ರೂಗಳ ನಷ್ಟವುಂಟಾಗಿದೆ.
ಕಳೆದ ಆರು ದಿನಗಳ ಹಿಂದೆ ಔಷಧಿ ಸಿಂಪಡಿಸಲು ತೋಟದಲ್ಲಿಟ್ಟಿದ್ದ ಡ್ರಮ್ಮಿಗೆ ದುಷ್ಕರ್ಮಿಗಳು ಕಳೆನಾಶಕವನ್ನು ಬೆರೆಸಿದ್ದಾರೆ. ತಿಳಿಯದೇ ಬೆಳಗಿನ ಜಾವ ಔಷಧಿಯೊಂದಿಗೆ ಡ್ರಮ್ಮಿನಲ್ಲಿದ್ದ ಕಳೆನಾಶಕ ಬೆರೆತ ನೀರನ್ನು ತನ್ನ ಐದೂವರೆ ಎಕರೆ ಜಮೀನಿನಲ್ಲಿದ್ದ ಬೀನ್ಸ್, ಶಾಮಂತಿ ಮತ್ತು ಹೂಕೋಸಿನ ನಾರಿಗೆ ಸಿಂಪಡಿಸಿ ತೆರಳಿದ್ದಾರೆ. ಪ್ರವಾಸಕ್ಕೆ ಹೋಗಿದ್ದ ರೈತ ಸಿ.ಎಂ.ಮಾರುತಿ ಐದು ದಿನಗಳ ತರುವಾಯ ಬಂದು ಜಮೀನಿಗೆ ನೋಡಿದಾಗ ಎಲೆಯೆಲ್ಲಾ ಒಣಗಿ ಉದುರಿ ಬೆಳೆಗಳೆಲ್ಲಾ ನಾಶವಾಗಿರುವುದು ಕಂಡುಬಂದಿದೆ.
ರೈತಸಂಘ ಹಾಗೂ ಹಸಿರುಸೇನೆ ಸದಸ್ಯರೊಂದಿಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪ್ರದೀಪ್ ಪೂಜಾರಿ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
`ರೈತನಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು. ರೈತರ ಬೆಳೆ ನಾಶಕ್ಕೆ ಕಾರಣವಾದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷಿಸಬೇಕು’ ಎಂದು ರೈತಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧರ್ಯಕ್ಷ ರವಿಪ್ರಕಾಶ್ ಮತ್ತು ಕಾರ್ಯದರ್ಶಿ ಪ್ರತೀಶ್ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಸಾಲಭಾದೆಯಿಂದ ಆತ್ಮಹತ್ಯೆ

0

ಸಾಲಭಾದೆಯಿಂದಾಗಿ ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಮುನೇಗೌಡ (೩೦) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ.
ಖಾಸಗಿ ಪೈನಾನ್ಸ್ ಕಂಪನಿಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಸಾಲಗಳನ್ನು ಮಾಡಿಕೊಂಡಿದ್ದನೆನ್ನಲಾಗಿದ್ದು, ಸಾಲಗಳನ್ನು ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಮೃತನಿಗೆ ಇಬ್ಬರು ಮಕ್ಕಳಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ

0

ಮೊಬೈಲ್ಗೆ ಬರುತ್ತಿದ್ದ ಅನಾಮದೇಯ ಮೆಸೆಜ್ಗಳ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಸುಮಾರು ಐದಾರು ಮಂದಿ ಪುರುಷರು, ಆಶಾ ಕಾರ್ಯಕರ್ತೆರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಗುಡ್ಲುನಾರಸಿಂಹನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಎಂಬಾಕೆ ವೈ.ಹುಣಸೇನಹಳ್ಳಿ ಗ್ರಾಮದ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರದಂದು ಇಂದ್ರಧನುಷ್ ಲಸಿಕೆಯನ್ನು ಹಾಕಿಸುವ ಕೆಲಸದ ನಿಮಿತ್ತ ಅಲಸೂರು ದಿನ್ನೆ ಗ್ರಾಮಕ್ಕೆ ಹೋಗಿದ್ದಾಗ, ಅಲ್ಲಿಗೆ ಬಂದಿರುವ ನಾಲ್ಕೈದು ಮಂದಿ ಪುರುಷರ ಗುಂಪು ಮೊಬೈಲ್ಗೆ ಮೆಸೆಜ್ಗಳು ಬರುತ್ತಿವೆ ಎಂದು ದೂರು ನೀಡಿರುವುದು ನೀವೆನಾ ಎಂದು ಕೇಳಿದ್ದಾರೆ. ಹೌದು ನಾನೇ ಎಂದ ತಕ್ಷಣ ಮರದ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ, ಗ್ರಾಮದ ಅಂಗನವಾಡಿ ಕೇಂದ್ರದಲ್ಲಿದ್ದ ಗರ್ಭಿಣಿ ಮಹಿಳೆಯರು ಕಿರುಚಾಡಿಕೊಂಡು ಹೊರಹೋಗಿದ್ದಾರೆ, ಸಹಾಯಕ್ಕೆ ಬಂದ ಶಾಲೆಯ ಶಿಕ್ಷಕರ ಮೇಲೂ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಮುಂದಾಗಿದ್ದಾರೆ.

ವೀರಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ

0

ನಗರದ ಕೋಟೆ ವೃತ್ತದಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿಯ ವತಿಯಿಂದ ಪಂಜಾಬ್ನ ಪಠಾಣ್ಕೋಟ್ ಪ್ರದೇಶದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ ದೇಶಕ್ಕಾಗಿ ಪ್ರಾಣ ನೀಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಯಿತು.
ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ ನಂತರ ಮಾತನಾಡಿದ ಸಮಾನ ಮನಸ್ಕರ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ದೇಶ ರಕ್ಷಣೆಗಾಗಿ ಗಡಿಭಾಗಗಳಲ್ಲಿ ಪ್ರತಿನಿತ್ಯ ಕಾಯುವಂತಹ ಯೋಧರು ಮೃತಪಟ್ಟಾಗ ಅವರ ಕುಟುಂಬಗಳಿಗೆ ರಕ್ಷಣೆ ಹಾಗೂ ಜೀವನೋಪಾಯವನ್ನು ಒದಗಿಸಿಕೊಡುವಂತಹ ಪ್ರಾಮಾಣಿಕವಾದ ಕೆಲಸವನ್ನು ಮಾಡಬೇಕು ಎಂದರು.
ನಗರಠಾಣೆಯ ಸಬ್ ಇನ್ಸ್ಪೆಕ್ಟರ್ ಆರ್.ವಿಜಯ್ ಮಾತನಾಡಿ, ದೇಶಕ್ಕಾಗಿ ಪ್ರತಿನಿತ್ಯ ಹೋರಾಟ ಮಾಡಿ ಉಗ್ರಗಾಮಿಗಳೊಂದಿಗೆ ಸೆಣಸಾಡುತ್ತಿರುವ ಯೋಧರನ್ನು ಗೌರವಿಸುವಂತಹ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ದೇಶದ ಗಡಿಭಾಗದಲ್ಲಷ್ಟೆ ಅಲ್ಲದೆ ದೇಶದೊಳಗೂ ಅಕ್ರಮ ಚಟುವಟಿಕೆಗಳು ನಡೆಸದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದರು.
ಶ್ರದ್ಧಾಂಜಲಿಯ ಅಂಗವಾಗಿ ಮೇಣದ ಬತ್ತಿಗಳನ್ನು ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಮೃತ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ರೈತ ಸಂಘದ ಜಿಲ್ಲಾ ಸಂಚಾಲಕ ಹುಸೇನ್ಸಾಬ್, ತಾಲ್ಲೂಕು ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಮುನಿಕೆಂಪಣ್ಣ, ಮೌಲಾ, ಎ.ಎಂ.ತ್ಯಾಗರಾಜ್, ಪುರುಷೋತ್ತಮ್, ದೇವರಾಜು(ದೇವಿ), ದೇವರಮಳ್ಳೂರು ಕೃಷ್ಣಪ್ಪ, ಎಸ್.ಎಂ.ರಮೇಶ್, ಜಯಂತಿ ಗ್ರಾಮ ದೇವರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕೌಶಲ್ಯ ತರಬೇತಿಗಳ ಅಗತ್ಯವಿದೆ

0

ನಗರಗಳಿಗೆ ವಲಸೆ ನಿಯಂತ್ರಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ವೃತ್ತಿಯಾಧಾರಿತ ಕೌಶಲ್ಯ ತರಬೇತಿಗಳ ಅಗತ್ಯವಿದೆ ಎಂದು ಕೌಶಲ್ಯ ಅಭಿವೃದ್ಧಿ ತರಬೇತಿ ನಿಗಮದ ಅಧ್ಯಕ್ಷೆ ಪುಷ್ಪಲಕ್ಷ್ಮಣಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ನೂತನವಾಗಿ ಲೋಕಿ ಪೌಂಡೇಷನ್ ವತಿಯಿಂದ ಆರಂಭಗೊಂಡಿರುವ ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಭವನವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ನೀಡುವಂತಹ ತರಬೇತಿಗಳನ್ನು ಪಡೆದುಕೊಂಡು ಮಹಿಳೆಯರೂ ಕೂಡಾ ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು, ಈ ಕೇಂದ್ರದಲ್ಲಿ ತಜ್ಞರಿಂದ ಉಚಿತವಾಗಿ ಕಂಪ್ಯೂಟರ್, ಹಾರ್ಡ್ವೇರ್, ಮತ್ತು ಸಾಫ್ಟ್ವೇರ್ ತರಬೇತಿ, ಅಗರಬತ್ತಿ ತಯಾರಿಕೆ, ಸ್ಪೋಕನ್ ಇಂಗ್ಲೀಷ್, ಮೋಟರ್ ವೈಂಡಿಂಗ್, ಪ್ಲಂಬಿಂಗ್, ರೇಷ್ಮೆ ಗೂಡಿನಿಂದ ಹಾರ ಮುಂತಾದ ಕಲಾಕೃತಿಗಳನ್ನು ತಯಾರಿಸುವ ತರಬೇತಿ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳು ಅಥವಾ ಸಂಘ ಸಂಸ್ಥೆಗಳು ಬಯಸಿದ್ದಲ್ಲಿ ಅಗರಬತ್ತಿ ತಯಾರಿಸುವ ಅತ್ಯಾಧುನಿಕ ಯಂತ್ರವನ್ನು ಕಡಿಮೆ ಬೆಲೆಗೆ ಕೊಡಿಸಲಾಗುವುದು. ಜೊತೆಯಲ್ಲಿ ಕಚ್ಚಾ ಸಾಮಗ್ರಿ ನೀಡುವುದು. ತಯಾರಾದ ಸಾಮಗ್ರಿಯನ್ನು ಕೊಳ್ಳುವ ಮೂಲಕ ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಡಲಾಗುತ್ತದೆ.
ನಿರುದ್ಯೋಗಿ ಯುವಕ ಮತ್ತುಯುವತಿಯರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಇದಕ್ಕೆ ಪೂರಕವಾಗಿ ನಿಗಮದಿಂದ ಅವಶ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ವಿಜ್ಞಾನಿ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢಿಕರಣ ಮಾಡಿಕೊಂಡು ವಿವಿಧ ಬಗೆಯ ವಸ್ತುಗಳನ್ನು ತಯಾರು ಮಾಡುವುದನ್ನು ರೂಡಿಸಿಕೊಳ್ಳಬೇಕು, ಭಾರತ ದೇಶದಲ್ಲಿ ಸುಗಂಧದ್ರವ್ಯಗಳನ್ನು ಬಳಕೆ ಮಾಡಲು ಪ್ರತಿವರ್ಷ ೬೦ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದ್ದು, ಇಂತಹ ಸುಗಂಧದ್ರವ್ಯಗಳನ್ನು ತಯಾರಿಕೆ ಮಾಡುವಂತಹ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕು ಎಂದರು.
ಲೋಕಿ ಪೌಂಡೇಷನ್ ಅಧ್ಯಕ್ಷ ಲೋಕೇಶ್ಗೌಡ, ಎಂ.ಸಿ.ಎ ಅಧ್ಯಕ್ಷ ಎಲ್.ಎನ್.ಮೂರ್ತಿ, ಜಂಟಿ ನಿರ್ದೇಶಕ ವೆಂಕಟೇಶ್, ಪ್ರಗತಿಪರ ಕುರಿಸಾಕಾಣಿಕೆದಾರರ ಸಂಘದ ನಿರ್ದೇಶಕ ರಾಮಣ್ಣ, ಸದಸ್ಯೆ ಸುಜಾತಮ್ಮ, ಡಾ.ಮುನಿನಾರಾಯಣರೆಡ್ಡಿ, ಅರಿಕೆರೆ ಮುನಿರಾಜು, ಮುನಿರತ್ನಮ್ಮ, ಕಾಚಹಳ್ಳಿ ರತ್ನಮ್ಮ, ಹರಿಪ್ರಸಾದ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಹಿರಂಗಗೊಂಡ ಕಾಂಗ್ರೆಸ್ ಪಕ್ಷದ ಭಿನ್ನಾಭಿಪ್ರಾಯ– ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳ ಸಭೆ

0

ಕಳೆದ ವಿಧಾನಪರಿಷತ್ ಚುನಾವಣೆಯ ಮುಂಚೆ ಪತ್ರಿಕಾಗೋಷ್ಠಿ ಕರೆದಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಕಾಂಗ್ರೆಸ್ ಪಕ್ಷದಲ್ಲಿ ಒಡಕಿಲ್ಲ, ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ, ಪಕ್ಷ ವಿರೋಧಿ ಚಟುವಟಿಕೆಗೆ ಶಿಸ್ತು ಕ್ರಮ ಜರುಗಿಸಲು ಮಾಡಿದ್ದ ಶಿಫಾರಸ್ಸನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದರು.
ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ನಂತರ ಫೆಬ್ರುವರಿ ತಿಂಗಳಿನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಒಡಕು ಬಹಿರಂಗಗೊಂಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಬಣ ಮತ್ತು ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿತರ ಬಣ ಎಂದು ಗುರುತಿಸಿಕೊಳ್ಳುವಂತಾಗಿದೆ. ಕೆಲವರು ಎರಡೂ ಕಡೆ ಕಾಣಿಸಿಕೊಳ್ಳುತ್ತಾ ಇನ್ನೂ ಸಂದಿಗ್ಧತೆಯಲ್ಲಿದ್ದಾರೆ. ಇದರೊಂದಿಗೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಹಂಚಿಕೆ ಮಾಡುವವರು ಯಾರು ಎನ್ನುವ ಗೊಂದಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡಲಾರಂಬಿಸಿದೆ. ಟಿಕೆಟ್ ಆಕಾಂಕ್ಷಿಗಳು ಯಾರ ಬಣದಲ್ಲಿದ್ದರೆ ಕ್ಷೇಮ ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಈಚೆಗೆ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಂಡಿಗನಾಳದ ತಮ್ಮ ಸ್ವಗೃಹದಲ್ಲಿ ಬೆಂಗಲಿಗರನ್ನು ಕರೆದು ಸಭೆ ನಡೆಸಿದ್ದು, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮೋಸವಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗದಂತೆ ಮಾಡಲಾಯಿತು. ಇದರಿಂದ ಪಕ್ಷದ ಚಟುವಟಿಕೆಗಳು ಹಾಗೂ ಬೆಳವಣಿಗೆಗೆ ಹಿನ್ನೆಡೆಯಾಗಿದೆ. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ’ ಎಂದು ಹೇಳಿದ್ದಾರೆ.
ಬುಧವಾರ ಬಸ್ ನಿಲ್ದಾಣದ ಬಳಿಯ ವೆಂಕಟರಾಯಪ್ಪ ಫ್ಯಾಕ್ಟರಿಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿತರು ಸಭೆ ನಡೆಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ಕೋಟಿಗಟ್ಟಲೆ ಆಸ್ತಿ, ಅವರ ಬೆಂಬಲಿತರ ಅಕ್ರಮ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ ಬೂದಿ ಮುಚ್ಚಿದ ಕೆಂಡದಂತಿದ್ದ ಮುನಿಯಪ್ಪ ದ್ವಯರ ಭಿನ್ನಾಭಿಪ್ರಾಯ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನು ಪರಿಸ್ಥಿತಿ ಕ್ಷೇತ್ರದಲ್ಲಿ ಮೂಡಿದ್ದು, ಜೆಡಿಎಸ್ ಪಕ್ಷಕ್ಕೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ. ಕಾಂಗ್ರೆಸ್ ಪಕ್ಷದ ಭಿನ್ನಾಭಿಪ್ರಾಯವು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ.

ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

0


ಅಂದಾಜು ಒಂದು ಕೋಟಿ ರೂಗಳ ವೆಚ್ಚದಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ರಾಜಣ್ಣ ಭರವಸೆ ನೀಡಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗುರುಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುಭವನದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ವಿವಿಧ ಮೂಲಗಳಿಂದ ಹಣವನ್ನು ಕ್ರೋಡಿಕರಿಸಿ ಸುಸಜ್ಜಿತ ಗುರುಭವನ ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ. ಗುರುಭವನವು ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಅದರ ಮೂಲಕ ತಾಲ್ಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸಲು ಸಹಕಾರಿಯಾಗುವಂತೆ ನೋಡಿಕೊಳ್ಳಬೇಕು. ಆದಷ್ಟು ಶೀಘ್ರವಾಗಿ ಕಾಮಗಾರಿಗಳು ನಡೆಯುವಂತೆ ಗುರುಭವನ ಸಮಿತಿ ಸದಸ್ಯರು ಶ್ರಮಿಸಬೇಕು ಹಾಗೂ ಶಿಕ್ಷಕರು ಸರ್ವರೀತಿಯಲ್ಲೂ ನೆರವಾಗಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಶಿಕ್ಷಕರಿಗೆ ನೆರವಾಗುವ ಹಾಗೂ ಶೈಕ್ಷಣಿಕ ಸಂಬಂಧಿಸಿದ ಕಾರ್ಯಕ್ರಮಗಳು ಗುರುಭವನದಲ್ಲಿ ನಡೆಯುವಂತಾಗಬೇಕು ಎಂಬ ಆಶಯವಿದೆ. ಶಿಕ್ಷಕರ ಸಮಾವೇಶ, ಕಾರ್ಯಾಗಾರ, ತರಬೇತಿ, ಮದುವೆ, ನಾಮಕರಣಕ್ಕೂ ಬಳಕೆಯಾಗಬೇಕು. ಸಾರ್ವಜನಿಕರ ಅನುಕೂಲಕ್ಕೂ ಗುರುಭವನ ಒದಗಿಬರಬೇಕು ಎಂದು ನುಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸಿ.ಎಂ.ಮುನಿರಾಜು ವೈಯಕ್ತಿಕವಾಗಿ ಗುರುಭವನ ನಿರ್ಮಾಣಕ್ಕೆ ಒಂದು ಲಕ್ಷ ರೂಗಳನ್ನು ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜ್, ಗುರುಭವನ ನಿರ್ಮಾಣ ಸಮಿತಿ ಕಾರ್ಯದರ್ಶಿ ಬಿ.ಆರ್.ನಾರಾಯಣಸ್ವಾಮಿ, ಖಜಾಂಚಿ ಆನಂದ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸಮನ್ವಯಾಧಿಕಾರಿ ಸುಮಾ, ದೈಹಿಕ ಶಿಕ್ಷಣ ಸಮನ್ವಯಾಧಿಕಾರಿ ಶ್ರೀನಿವಾಸ್, ರಂಗಪ್ಪ, ಬೈರಾರೆಡ್ಡಿ, ವಿಜಯಕುಮಾರ್, ಮುನಿರಾಜು, ಅಕ್ಕಲರೆಡ್ಡಿ, ಸುಬ್ಬಾರೆಡ್ಡಿ, ಚಂದ್ರಶೇಖರ್, ಎಲ್.ವಿ.ವೆಂಕಟರೆಡ್ಡಿ, ರಾಮಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ಥಾಯಿ ಸಮಿತಿ ನೂತನ ಅಧ್ಯಕ್ಷ

0

ನಗರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೪ ನೇ ವಾರ್ಡಿನ ನಂದು (ಕಿಶನ್) ಆಯ್ಕೆಯಾಗಿದ್ದಾರೆ.
ನಗರದ ನಗರಸಭಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ನೂತನವಾಗಿ ಆಯ್ಕೆಯಾಗಿರುವ ಸ್ಥಾಯಿ ಸಮಿತಿ ಅಧ್ಯಕ್ಷ ನಂದು (ಕಿಶನ್) ಅವರನ್ನು ಅಧ್ಯಕ್ಷೆ ಮುಷ್ಟರಿತನ್ವೀರ್ ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಆಯುಕ್ತ ಹರೀಶ್ ಸೇರಿದಂತೆ ಸದಸ್ಯರುಗಳು ಅಭಿನಂದಿಸಿದರು.
ಕಾರ್ಯಾಲಯದ ಹೊರಗೆ ನಂದು ಬೆಂಬಲಿಗರು ಪಟಾಕಿಗಳನ್ನು ಸಿಡಿಸಿ ಮೆರವಣಿಗೆಯ ಮೂಲಕ ಸಂಭ್ರಮಾಚರಣೆ ಮಾಡಿದರು.
ಸ್ಥಾಯಿ ಸಮಿತಿಯ ಪದಾಧಿಕಾರಿಗಳು: ನಂದು (ಪಿ.ಕೆ.ಕಿಶನ್) ಅಧ್ಯಕ್ಷ, ಸದಸ್ಯರಾದ ಶಮಿವುಲ್ಲಾ, ರಾಘವೇಂದ್ರ, ಸರಳಶ್ರೀಧರ್, ಜಬೀವುಲ್ಲಾ, ಸುನೀತಾಶ್ರೀನಾಥ್, ಸುಹೇಲ್ಅಹ್ಮದ್, ವಹೀದಾಕೌಸರ್, ಎಚ್.ಎಸ್.ನಯಾಜ್, ಸಿಕಂದರ್, ಶಾಹಿದಾ.

ಬೆಳೆನಷ್ಟ ಪರಿಹಾರ ಶೀಘ್ರವಾಗಿ ನೀಡುವಂತೆ ರೈತರ ಒತ್ತಾಯ

0

ಕಳೆದ ತಿಂಗಳು ಬಿದ್ದಂತಹ ಅಕಾಲಿಕ ಮಳೆಯಿಂದಾಗಿ ನಷ್ಟಕ್ಕೆ ಒಳಗಾಗಿರುವ ರಾಗಿ ಬೆಳೆಯು ಸೇರಿದಂತೆ ಇತರೆ ಬೆಳೆಗಳಿಗೆ ನಷ್ಟಪರಿಹಾರವನ್ನು ತ್ವರಿತವಾಗಿ ವಿತರಣೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆಯ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ತಾಲ್ಲೂಕು ಕಚೇರಿಯ ಮುಂದೆ ಮಂಗಳವಾರ ಧರಣಿ ನಡೆಸಿದರು.
ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬಿದ್ದಂತಹ ಅಕಾಲಿಕ ಮಳೆಯಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿಗಳ ಬೆಳೆಗಳು ನಷ್ಟವಾಗಿವೆ, ಪರಿಹಾರವನ್ನು ವಿತರಣೆ ಮಾಡುವಂತೆ ದಾಖಲೆಗಳನ್ನು ನೀಡಿದ್ದಾರೆ, ಆದರೆ ಇದುವರೆಗೂ ಒಂದೇ ಒಂದು ಬಿಡಿಗಾಸು ಪರಿಹಾರ ವಿತರಣೆಯಾಗಿಲ್ಲ, ರಾಗಿ ಬೆಳೆಯೂ ಸೇರಿದಂತೆ ತರಕಾರಿ ಬೆಳೆಗಳು, ಹೂವಿನ ಬೆಳೆಗಳು, ನಾಶವಾಗಿವೆ. ಮನೆಗಳು ಕುಸಿದುಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು, ಬಿದ್ದು ಹೋಗಿರುವ ಮನೆಗಳಿಗೆ ಅನುದಾನಗಳನ್ನು ನೀಡಿ ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಮುನಿಕೆಂಪಣ್ಣ, ಹಿತ್ತಲಹಳ್ಳಿ ದೇವರಾಜು, ಮೌಲಾ, ಡಿ.ಸಿ.ರಮೇಶ್, ಎಂ.ಬಿ.ಬೈರೇಗೌಡ, ಕೆ.ಎನ್.ಮಂಜುನಾಥ್, ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಚಿಕ್ಕದಾಸೇನಹಳ್ಳಿ ಮುನೇಗೌಡ, ವೆಂಕಟರೆಡ್ಡಿ, ಎಸ್.ಎನ್. ಮಾರಪ್ಪ, ಡಿ.ವಿ.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳ ಹೋರಾಟದ ಬದುಕು

0

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಪೊಲೀಸರು ನಡೆಸಿದ ಗೋಲೀಬಾರಿನಲ್ಲಿ ಭಕ್ತರಹಳ್ಳಿಯ ಕುಂಬಾರ ದೊಡ್ಡ ನಾರಾಯಣಪ್ಪ ಎಂಬ ದೇಶಭಕ್ತರು ವೀರಮರಣವನ್ನಪ್ಪಿದ್ದರು. ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹಾಗೂ ಹಲವಾರು ಹೋರಾಟಗಾರರನ್ನು ಹೊಂದಿದ್ದ ಗ್ರಾಮ ಭಕ್ತರಹಳ್ಳಿ ಅಂದು ದೇಶಭಕ್ತರಹಳ್ಳಿ ಎಂದೇ ಖ್ಯಾತಿಯಾಯಿತು.
ದೇಶಕ್ಕಾಗಿ ಪ್ರಾಣತೆತ್ತ ಕುಂಬಾರ ಮನೆತನದ ದೊಡ್ಡ ನಾರಾಯಣಪ್ಪ ಅವರ ಮೊಮ್ಮಕ್ಕಳು ತಮ್ಮ ಕುಟುಂಬದ ಹೆಸರಿನೊಂದಿಗೆ ಅಂಟಿಕೊಂಡ ಮಣ್ಣಿನ ಸೊಗಡನ್ನು ನಂಬಿಯೇ ಇಂದಿಗೂ ಜೀವನ ನಡೆಸುತ್ತಿದ್ದಾರೆ. ಮಣ್ಣಿನ ವಸ್ತುಗಳು ಜನರಿಂದ ದೂರವಾಗುತ್ತಿದ್ದರೂ ಕುಂಬಾರಿಕೆಯ ವೃತ್ತಿಯನ್ನೇ ಇಂದಿಗೂ ಅವರು ಅವಲಂಬಿಸಿದ್ದಾರೆ. ತಮ್ಮ ತಾತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೆ, ಇವರು ಪರಂಪರಾಗತ ವೃತ್ತಿಯನ್ನೇ ನೆಚ್ಚಿಕೊಂಡು ಬದಲಾದ ಕಾಲಘಟ್ಟದಲ್ಲಿ ಜೀವನ ನಡೆಸಲು ಹೋರಾಟ ನಡೆಸಿದ್ದಾರೆ.
ಪರಂಪರಾಗತ ಬಂದ ವೃತ್ತಿಗಳಲ್ಲಿ ಇಂದು ಬಹುತೇಕ ನೆಲಕಚ್ಚಿವೆ. ಅದರಲ್ಲೂ ಮಣ್ಣಿನ ಮಡಕೆಯನ್ನು ಬಳಸುವವರು ಕಡಿಮೆಯಾಗಿದ್ದಾರೆ. ಸ್ಟೀಲ್ ಮತ್ತು ಪ್ಲಾಸ್ಟಿಕ್ಗಳ ಪೈಪೋಟಿ ಬೇರೆ. ಮಡಕೆ ಕೊಳ್ಳುವವರಿಲ್ಲದೆ ಅದರ ತಯಾರಿಕೆಯನ್ನೇ ಅವಲಂಬಿಸಿದ ನೂರಾರು ಕುಟುಂಬಗಳು ಸೋತು ಸೊರಗಿವೆ.
ಹೀಗಿದ್ದರೂ ತಾಲ್ಲುಕಿನ ಭಕ್ತರಹಳ್ಳಿಯಲ್ಲಿ ಈಗಲೂ ತಿಗರಿ ತಿರುಗುವ ಗರಗರಾ ಸದ್ದು ಕೇಳುತ್ತಲೇ ಇದೆ. ಮನೆಯಂಗಳದಲ್ಲಿ ಜೇಡಿಮಣ್ಣಿನ ರಾಶಿ. ಒಣಗುತ್ತಿರುವ ಹಸಿಮಡಕೆ. ಸುಡುತ್ತಿರುವ ಒಣಗಿದ ಮಡಕೆ. ಭಕ್ತ ಕುಂಬಾರನಂತೆ ಮಣ್ಣಿನ ಆಕೃತಿಯ ಮಡಕೆಗಳನ್ನು ತಯಾರಿಸುತ್ತಾ, ಸಿದ್ಧಗೊಂಡ ನಾನಾ ಆಕಾರದ ಮಣ್ಣಿನ ಕಲಾಕೃತಿಗಳನ್ನು ಅವರ ಮನೆಯಂಗಳದಲ್ಲಿ ಕಂಡಾಗ ಈ ಕುಟುಂಬದ ಶ್ರಮಜೀವನ, ಕಾಲದೊಂದಿಗಿನ ಹೋರಾಟ ಸ್ಪಷ್ಟವಾಗುತ್ತದೆ.
ಕೇವಲ ಮಣ್ಣಿನ ಮಡಿಕೆಯನ್ನಷ್ಟೆ ತಯಾರಿಸಿದರೆ ಸಾಲದು, ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಆಕರ್ಷಕವಾಗಿ ಬಣ್ಣಗಳನ್ನು ಬಳಿದಲ್ಲಿ ಹೆಚ್ಚು ಜನರನ್ನು ತಲುಪಬಹುದೆಂದು ಬುದ್ಧ, ಆನೆ, ಕುದುರೆ, ಲಾಫಿಂಗ್ ಬುದ್ಧ, ದೀಪಗಳು, ಹೂಕುಂಡಗಳು, ಕಲಾತ್ಮಕ ಹೂಜಿಗಳು, ಕರಂಡಕಗಳು, ಮಣ್ಣಿನ ಗಂಟೆಗಳು, ಗಿಳಿ, ತೋರಣಗಳು ಮುಂತಾದವುಗಳನ್ನೂ ತಯಾರಿಸುತ್ತಿದ್ದಾರೆ.
‘ಸುಮಾರು 30 ವರ್ಷಗಳಿಂದ ಈ ಕುಂಬಾರಿಕೆಯನ್ನು ಮಾಡುತ್ತಾ ಬಂದಿದ್ದೇನೆ. ಕುಲದ ಕಸುಬಾದ್ದರಿಂದ ಮುಂದುವರೆಸಿದ್ದೇನೆ. ಆದರೆ ಈಗ ಬದುಕು ಕಷ್ಟಕರವಾಗಿದೆ. ಮಣ್ಣನ್ನು ಕೊಂಡು ತಂದು ತಯಾರಿಸುವ ವಸ್ತುವಿಗೆ ಸೂಕ್ತ ಬೆಲೆಯಿಲ್ಲದೆ, ಮಾರಾಟವಾಗದೇ ವೃತ್ತಿಯು ಸಂಕಷ್ಟದಲ್ಲಿದೆ. ನಮ್ಮ ಮುಂದಿನ ತಲೆಮಾರು ಇದನ್ನು ಮುಂದುವರೆಸಲು ಅಸಾಧ್ಯವಾಗಿದೆ. ನಮಗೆ ಬೇರೆ ಕೆಲಸ ಗೊತ್ತಿಲ್ಲವಾದ್ದರಿಂದ ಇದನ್ನೇ ಅವಲಂಬಿಸಿದ್ದೇವೆ. ಸರ್ಕಾರದಿಂದ ನಮ್ಮ ವೃತ್ತಿಗೆ ಪುನಶ್ಚೇತನ ಸಿಕ್ಕಲ್ಲಿ ನಮಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಭಕ್ತರಹಳ್ಳಿ ಮುನಿರಾಜು.

 
 
 

ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಾರಂಭ

0

ತಾಲ್ಲೂಕಿನ ಬಡ ನಿರುದ್ಯೋಗ ಯುವಕ ಯುವತಿಯರಿಗೆ ಅಹಾಯಕವಾಗುವಂತೆ ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಭವನ್ ಪ್ರಾರಂಭಿಸುತ್ತಿರುವುದಾಗಿ ಲೋಕಿ ಫೌಂಡೇಷನ್ ಅಧ್ಯಕ್ಷ ಲೋಕೇಶ್ ಗೌಡ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ರೀತಿಯಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಲು ಸುಸಜ್ಜಿತ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ನಗರದ ಕೋಟೆ ವೃತ್ತದ ಬಳಿ ಎಚ್.ಎಂ.ಎಸ್ ಕಾಂಪ್ಲೆಕ್ಸ್ನಲ್ಲಿ ಜನವರಿ 7 ರ ಗುರುವಾರ ಪ್ರಾರಂಭಿಸಲಾಗುತ್ತಿದೆ. ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ ಮುಂತಾದ ಅಧಿಕಾರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತಜ್ಞರಿಂದ ಉಚಿತವಾಗಿ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ತರಬೇತಿ, ಅಗರಬತ್ತಿ ತಯಾರಿಕೆ, ಸ್ಪೋಕನ್ ಇಂಗ್ಲೀಷ್, ಮೋಟರ್ ವೈಂಡಿಂಗ್, ಪ್ಲಂಬಿಂಗ್, ರೇಷ್ಮೆ ಗೂಡಿನಿಂದ ಹಾರ ಮುಂತಾದ ಕಲಾಕೃತಿಗಳನ್ನು ತಯಾರಿಸುವ ತರಬೇತಿ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳು ಅಥವಾ ಸಂಘ ಸಂಸ್ಥೆಗಳು ಬಯಸಿದ್ದಲ್ಲಿ ಅಗರಬತ್ತಿ ತಯಾರಿಸುವ ಅತ್ಯಾಧುನಿಕ ಯಂತ್ರವನ್ನು ಕಡಿಮೆ ಬೆಲೆಗೆ ಕೊಡಿಸಲಾಗುವುದು. ಜೊತೆಯಲ್ಲಿ ಕಚ್ಚಾ ಸಾಮಗ್ರಿ ನೀಡುವುದು, ತಯಾರಾದ ಸಾಮಗ್ರಿಯನ್ನು ಕೊಳ್ಳುವ ಮೂಲಕ ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಡಲಾಗುತ್ತದೆ.
ನಮ್ಮ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತರಬೇತಿ ಹೊಂದಿದ ಯುವಕ ಯುವತಿಯರಿಗೆ ಮುದ್ರಾ ಯೋಜನೆಯಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯವನ್ನು ಕೊಡಿಸಲಾಗುವುದು, ಮಾರುಕಟ್ಟೆ ಸೌಲಭ್ಯ ಹಾಗೂ ಉದ್ಯೋಗವಕಾಶವನ್ನು ಸಹ ಒದಗಿಸಲಾಗುವುದು ಎಂದು ತಿಳಿಸಿದರು.
ಲೋಕಿ ಫೌಂಡೇಷನ್ ವತಿಯಿಂದ ಈಗಾಗಲೇ ತಾಲ್ಲೂಕಿನ ಹಲವಾರು ಮಂದಿ ಕುರಿ ಸಾಕಾಣಿಕೆದಾರರಿಗೆ ಉಚಿತ ತರಬೇತಿ ಕೊಡಿಸಲಾಗಿದೆ. ಟೈಲರಿಂಗ್ ಕೇಂದ್ರ ಈಗಾಗಲೇ ಯಶಸ್ವಿಯಾಗಿ ಹಲವರಿಗೆ ಉಪಯುಕ್ತವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಜನರಿಗೆ ಅತ್ಯಗತ್ಯವಾಗಿರುವ ಹಲವು ರೀತಿಯ ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಉದ್ಯೋಗವಕಾಶ ಹಾಗೂ ಆರ್ಥಿಕತೆಯ ಹೆಚ್ಚಳಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಪ್ರಗತಿಪರ ಕುರಿ ಸಾಕಾಣಿಕಾ ಸಂಘದ ವೀರಾಪುರ ರಾಮಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

ಗೋ ಅನಿಲ ಸ್ಥಾವರ – `ಸುರಕ್ಷಿತ' ಮಾಹಿತಿಗಳು!

0

ಸಬ್ಸಿಡಿ ಯುಗ ಮುಗಿಯುತ್ತ ಬಂದಿದೆ. ಇಂದಿನ ಮುಕ್ತ ಆರ್ಥಿಕ ನೀತಿಯನ್ವಯ ಸಬ್ಸಿಡಿ ಕಡಿತಗೊಳಿಸುವುದು ಕೇಂದ್ರಕ್ಕೆ ಅನಿವಾರ್ಯವಾಗಿದೆ. ಮುಕ್ತ ಆರ್ಥಿಕ ನೀತಿ – ಸಬ್ಸಿಡಿಗೂ ಈ ಗೋ ಅನಿಲ ಸ್ಥಾವರಕ್ಕೂ ಇರುವ ಸಂಬಂಧ ಗೋಕುಲಾಷ್ಟಮಿಯಲ್ಲಿ ಇಮಾಮ್ ಸಾಬಿಯಂತದೇನೂ ಅಲ್ಲ, ಹೇಗೆ? ನೀವೇ ನೋಡಿ, ಇಂದು ಅಡಿಗೆ ಮಾಡಲು ಕಟ್ಟಿಗೆ ಬಳಸುವುದು ಕಡಿಮೆಯಾಗಿದೆ. ದುರ್ಲಭ ಕೂಡ. ಹೆಚ್ಚು ಜನ ಅಡಿಗೆ ಅನಿಲದ ಸಿಲೆಂಡರ್‍ಗೆ ಮೊರೆ ಹೋಗಿದ್ದಾರೆ. ಸಾಮಾನ್ಯ ಜನರಿಗೆ ಸುಲಭವಾಗಿ ದೊರಕಲು ಸರ್ಕಾರದ ಇದಕ್ಕೆ ಪ್ರೋತ್ಸಾಹಧನ ನೀಡಿ ಪೋಷಿಸುತ್ತಿದೆ. ಆದರೆ ಖಾಸಗಿ ಕಂಪನಿಗಳಿಗೂ ಮಾರುಕಟ್ಟೆಯಲ್ಲಿ ಅವಕಾಶ ನೀಡಿರುವಾಗ ಇದು ಸಾಧ್ಯವಿಲ್ಲ. ಸಾಧುವೂ ಅಲ್ಲ. ಈ ಕಾರಣದಿಂದ ಸಿಲೆಂಡರ್‍ಗಳ ಬೆಲೆ ಇವತ್ತಲ್ಲ ನಾಳೆ ತಾನೇತಾನಾಗಿ ಹೆಚ್ಚುತ್ತದೆ. ಮುಖ್ಯವಾಗಿ ಹಳ್ಳಿಗರಿಗೆ-ಜಾನುವಾರು ಸಾಕುವುದರಿಂದ ಗೋ ಅನಿಲ ಸ್ಥಾವರ ತಲೆಬಿಸಿ ತಾರದ ಸೌಲಭ್ಯವಾಗಿದೆ. ಸಮರ್ಪಕವಾಗಿ ಗೋ ಗ್ಯಾಸ್ ನಿರ್ಮಿಸಿಕೊಳ್ಳದಿದ್ದರೆ ಮಾತ್ರ ತಲೆಬಿಸಿ ಗ್ಯಾರಂಟಿ!
ಸೂಕ್ತ ಡ್ರಮ್‍ನ ಆಯ್ಕೆ:- ಗ್ಯಾಸ್ ಡ್ರಂನಲ್ಲಿ ಅನೇಕ ವಿಧದವು ದೊರೆಯುತ್ತವೆ. ಕಬ್ಬಿಣದ್ದು ದುಬಾರಿಯಾದರೂ ಹೆಚ್ಚು ಸುರಕ್ಷಿತ ಎಂಬ ಮಾತಿತ್ತು. ಅದು ಕೂಡ 10 ವರ್ಷಕ್ಕಿಂತ ಹೆಚ್ಚು ಬಾಳದು ಎಂಬುದು ನಮ್ಮಲ್ಲಿ ವೇದ್ಯವಾಗಿದೆ. ಸಿಮೆಂಟಿನ ಬಾನಿ, ಡೂಮ್ ರಚನೆಯಂಥವು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಅವುಗಳಲ್ಲಿ ಅನಿಲ ಪೂರೈಕೆಯಲ್ಲಿ ಸಮಸ್ಯೆಗಳು ಕಾಣಿಸಿವೆ. ಸದ್ಯ ಹೆಚ್ಚು ಸಮಸ್ಯೆಗಳಿಲ್ಲದ, ವಿಪರೀತ ದುಬಾರಿಯೂ ಅಲ್ಲದ ಫೈಬರ್ ಡ್ರಂಗಳು ಸೂಕ್ತ. ಉಳಿದೆಲ್ಲವುಗಳಿಗಿಂತ ಬಾಹ್ಯವಾಗಿ ವ್ಯವಸ್ಥಿತ ರಕ್ಷಣೆ ಬಯಸುತ್ತದೆ. ಅನಿಲ ಪೂರೈಕೆಯಲ್ಲಿ ಒತ್ತಡ ತರಲು ಡ್ರಮ್ ಮೇಲೆ ಒಂದೆರಡು ಮರಳು ತುಂಬಿದ ಸಿಮೆಂಟ್ ಚೀಲ ಇಡುವುದು ಒಳ್ಳೆಯದು.
ಸ್ಥಳದ ಆಯ್ಕೆ:- ಶಾಶ್ವತ ಕೆಲಸವಾದ್ದರಿಂದ ಸ್ಥಾವರವನ್ನು ಸರಿಯಾದ ಸ್ಥಳದಲ್ಲಿ ನಿಯೋಜಿಸಬೇಕು. ಅಡಿಗೆ ಮನೆ, ಬಾವಿಗಳಿಂದ ಕನಿಷ್ಟ ಐವತ್ತು ಅಡಿ ದೂರದಲ್ಲಿರಬೇಕು. ಕೊಟ್ಟಿಗೆಗೆ ಸಾಧ್ಯವಾದಷ್ಟು ಸಮೀಪವಿರಬೇಕು. ಕೊಟ್ಟಿಗೆಯಿಂದ ನೇರವಾಗಿ ಸಗಣಿಯನ್ನು ಸ್ಥಾವರದ ಕದಡುವ ಛೇಂಬರ್‍ಗೆ ಹಾಕುವಂತೆ ಮಾಡಿಕೊಂಡರೆ ಪರಮಾನುಕೂಲ. ಅಡಿಗೆ ಮನೆಗೆ ತುಂಬಾ ಹತ್ತಿರವಿದ್ದರೆ ಸಮಸ್ಯೆ ವಾಸನೆ, ಸೊಳ್ಳೆಯದು ಮಾತ್ರ.
ಸ್ಥಾವರದ ಬಾವಿಯ ಅಕ್ಕಪಕ್ಕ ಹಲಸು, ಮಾವುಗಳ ಮರ ಇಲ್ಲದಿರುವುದೇ ಕ್ಷೇಮ. ಅವುಗಳ ಬೇರುಗಳು ಯಾವತ್ತಾದರೂ ಸ್ಥಾವರದ ಒಳಗಡೆ ನುಸುಳಿ ಗಂಡಾಂತರ ತರುವ ಸಾಧ್ಯತೆಗಳಿವೆ. ಅಂತಹ ಉದಾಹರಣೆಗಳಿವೆ. ಸ್ಥಾವರದ ಬಾವಿಯನ್ನು ಶಿಲೆಗಲ್ಲುಗಳನ್ನು ಬಳಸಿ, ನುರಿತ ಕೆಲಸಗಾರರಿಂದಲೇ ಗಾರೆ ಮಾಡಿಸಬೇಕು. ಬಾವಿಯ ನಿರ್ಮಾಣ ಆದರೆ ಅರ್ಧ ಕೆಲಸ ಮುಗಿದಂತೆ.
ಬಾವಿ ಹೇಗಿರಬೇಕು?:- ಇದು ಮಹತ್ವದ ಮಾತು. ಸ್ಥಾವರದ ಬಾವಿಯನ್ನು ನಿಮಗೆಷ್ಟು ಅನಿಲ ಬೇಕೆಂಬ ಸೂತ್ರಕ್ಕಿಂತ ನಿಮ್ಮಲ್ಲಿ ದೊರಕುವ ಸಗಣಿಯ ಲೆಕ್ಕಾಚಾರ ಹಾಕಿ ತಯಾರಿಸುವುದು ಲೇಸು. ಈ ಬಾವಿ ನಿಮ್ಮ ನೀರಿನ ಬಾವಿಯ ಅಂತರ್ಜಲ ಮಟ್ಟಕ್ಕಿಂತ ತುಸು ಮೇಲೆ ಇರುವುದು ಅಗತ್ಯ. ನೆಲಮಟ್ಟಕ್ಕಿಂತ ಎರಡು ಅಡಿಗಳಷ್ಟು ಮೇಲಿನವರೆಗೆ ಬಾವಿ ಮುಂದುವರಿಸಬಹುದು. ಅದಕ್ಕೂ ಹೆಚ್ಚಿನ ಎತ್ತರ ಸುರಕ್ಷಿತವಲ್ಲ. ಸಗಣಿ ಕದಡುವ ಚೇಂಬರ್‍ನ ಮಧ್ಯದಲ್ಲಿ ಕಬ್ಬಿಣದ ಕಿರುಸ್ತಂಭ (ಪೋಲ್) ನಿರ್ಮಿಸಿ, ಇದು ರಾಟೆ ಬಳಸಿ ಕದಡುವ ವ್ಯವಸ್ಥೆ ಮಾಡಿಕೊಳ್ಳಲು ನೆರವಾಗುತ್ತದೆ. ಸ್ಥಾವರ ಹೊರಚೆಲ್ಲುವ ರಾಡಿಯನ್ನು ಸಂಗ್ರಹಿಸಲು ದೊಡ್ಡದಾಗಿ ಟ್ಯಾಂಕ್ ನಿರ್ಮಿಸಿಕೊಳ್ಳುವುದು ಕ್ಷೇಮ. ವಾರಕ್ಕೊಮ್ಮೆ ಖಾಲಿ ಮಾಡಿದರಾಯಿತು. ನೇರವಾಗಿ ಗೊಬ್ಬರದ ಗುಂಡಿಗೆ ಹೋಗುವಂತಿರುವುದು ಅಷ್ಟರಮಟ್ಟಿಗೆ ಕೆಲಸ ದುಡಿಮೆ ಮಾಡುತ್ತದೆ.
ಮೊದಲು ಬಾರಿ ಸ್ಲರಿ ತುಂಬಲು:- 2-3 ಜಾನುವಾರುಗಳನ್ನಷ್ಟೇ ಹೊಂದಿರುವವರು ಹತ್ತು ದಿನಗಳಷ್ಟು ಹಿಂದಿನಿಂದಲೇ ಸಗಣಿ ಸಂಗ್ರಹಿಸತೊಡಗಬೇಕು. ಕಸ, ಕಡ್ಡಿ, ಹುಲ್ಲು ಅದರಲ್ಲಿ ಯಾವತ್ತೂ ಇರಬಾರದು. ಸಾಧ್ಯವಾದಷ್ಟು ಮಟ್ಟಿಗೆ ಬಿಸಿಲು ನೇರವಾಗಿ ಬೀಳದಿರುವ ಸ್ಥಳದಲ್ಲಿ ಸಗಣಿಯನ್ನು ಸಂಗ್ರಹಿಸಿ. ಸಮ ಪ್ರಮಾಣದ ಸಗಣಿ ನೀರು ಬಳಸಿ ಎಂಬುದು ತಜ್ಞರ ಹೇಳಿಕೆಯಾದರೂ ಅದನ್ನು ಅನುಸರಿಸುವುದು ನಮಗೆ ಕಷ್ಟವಾದೀತು. ಹೇಗೆ ನಮ್ಮಲ್ಲಿ ದೋಸೆ ಹಿಟ್ಟು ಇರುತ್ತದೆಯೋ ಹಾಗೆಯೇ ಈ ಸಗಣಿಯ ಸ್ಲರಿ ಇದ್ದರಾಯಿತು. ಮೊದಲ ಬಾರಿ ಸ್ಲರಿಯಲ್ಲಿ ಬಾವಿಯಲ್ಲಿ ತುಂಬುವಾಗ ಬಾವಿಯೊಳಗಿರುವ ಎರಡು ಪ್ರತ್ಯೇಕ ವಿಭಾಗಗಳಲ್ಲೂ ಸಮನಾಗಿ ತುಂಬುತ್ತಾ ಹೋಗಬೇಕು. ಒಂದೊಮ್ಮೆ ಒಂದಕ್ಕೆ ತುಂಬಿದರೆ ಮಧ್ಯದ ಗೋಡೆ ದುರ್ಬಲವಾಗಬಹುದು. ಕೆಲವೊಮ್ಮೆ ಕುಸಿಯುವ ಸಂದರ್ಭ ಕೂಡ ಇದೆ. ಉಪ್ಪು ನೀರು ಸಾಬೂನಿನ ನೀರು ಸಗಣಿ ಕದಡಲು ಬಳಸಬೇಡಿ. ಹಾಗೆಯೇ ಫಿನಾಯಿಲ್, ಸುಣ್ಣ, ಡಿಡಿಟಿ ಅಥವಾ ಇನ್ನಾವುದೇ ಕ್ರಿಮಿನಾಶಕಗಳನ್ನು ಕೊಟ್ಟಿಕೆಗೆ ಹಾಕಿದಾಗ ದೊರಕಿದೆ ಸಗಣಿಯನ್ನು ಬಳಸುವುದು ಸೂಕ್ತವಲ್ಲ. ಇವೆಲ್ಲಾ ಅನಿಲ ಬಿಡುಗಡೆಯನ್ನು ಕುಂಠಿತಗೊಳ್ಳುತ್ತದೆ. ಕೊಟ್ಟಿಗೆಯಲ್ಲಿ ಆದಷ್ಟೂ ಇವುಗಳ ಬಳಕೆಯನ್ನು ನಿಯಂತ್ರಿಸಿ.
ಸ್ಥಾವರದ ದೈನಂದಿನ ನಿರ್ವಹಣೆ:- ನಿಮ್ಮಲ್ಲಿ ಇರುವಷ್ಟು ಸಗಣಿಯನ್ನು ಸ್ಥಾವರಕ್ಕೆ ತುಂಬುವ ಅಗತ್ಯವಿಲ್ಲ. ಸಾಧಾರಣವಾಗಿ 4-5 ಜನರಿರುವ ಒಂದು ಅನುಕೂಲ ಕುಟುಂಬಕ್ಕೆ ಒಂದು ಬುಟ್ಟಿ ಸಗಣಿ (15 ಕೆ.ಜಿ.)ಯ ಸ್ಲರಿ ಸಾಕಾಗುತ್ತದೆ. ಹೆಚ್ಚಿಗೆ ಹಾಕುವುದೆಂದರೆ ನಷ್ಟ ಮಾಡಿಕೊಂಡಂತೆಯೇ ಸರಿ. ಹೆಚ್ಚು ಹೆಚ್ಚು ಸ್ಲರಿ ಸ್ಥಾವರದ ಒಳ ಸೇರಿದಂತೆ ಅಷ್ಟೇ ಪ್ರಮಾಣದ ರಾಡಿ ತನ್ನಲ್ಲಿನ ಪೂರ್ತಿ ಅನಿಲವನ್ನು ಹೊರ ಬಿಡುವ ಮುನ್ನವೇ ಹೊರಚೆಲ್ಲಲ್ಪಡುತ್ತದೆ. ಒಣಗಿದ ಸಗಣಿಯನ್ನು ಸ್ಥಾವರಕ್ಕೆ ಹಾಕಲೇಬೇಡಿ. ಇದು ಗ್ಯಾಸ್ ಹುಟ್ಟಿಸುವುದಿಲ್ಲ. ಮಾತ್ರವಲ್ಲ, ರಾಡಿಯ ಮೇಲೆ ಒಂದು ರೀತಿಯ ಪದರವಾಗಿ ನಿಂತು ಸಮರ್ಪಕ ಅನಿಲ ಪೂರೈಕೆಗೂ ಕಲ್ಲು ಹಾಕುತ್ತದೆ.
ಕೆಲವು ಅವಶ್ಯ ಟಿಪ್ಸ್‍ಗಳು:- 1. ಸ್ಲರಿಯನ್ನು ತಯಾರಿಸಲು ನೀರು ಬಳಸುವ ಬದಲು ಜಾನುವಾರುಗಳ ಮೂತ್ರವನ್ನು ಬಳಸುವುದರಿಂದ ಗ್ಯಾಸ್ ಇಳುವರಿ ಹೆಚ್ಚುತ್ತದೆ. ಈ ಕ್ರಮದಿಂದ ಮೂತ್ರದ ಉಪಯೋಗ ಆಗುತ್ತದಲ್ಲದೆ ನೀರಿಗೆ ಅಭಾವವಿರುವ ಇಂದಿನ ದಿನಗಳಲ್ಲಿ ಅದಕ್ಕೊಂದು ಪರ್ಯಾಯವನ್ನು ಸಾಧಿಸಿದಂತಾಗುತ್ತದೆ.
2. ಜಾನುವಾರುಗಳಿಗೆ ಹಸಿರು ಹುಲ್ಲು ಹಾಕುವಾಗ ಅನಿಲ ಉತ್ಪಾದನೆ ಕಡಿಮೆ. ಬೈಹುಲ್ಲು ಬಳಸುವಾಗ ಉತ್ಪಾದನೆ ಪ್ರಮಾಣ ಜಾಸ್ತಿ. ಹಾಗೆಯೇ ಚಳಿಗಾಲ, ಮಳೆಗಾಲಕ್ಕಿಂತ ಬೇಸಿಗೆಯಲ್ಲಿ ಇಳುವರಿ ಹೆಚ್ಚು. ಗ್ಯಾಸ್ ಇಳುವರಿ ಹೆಚ್ಚಿಸಲು ಕೆಲವು ಅನುಭವಿಗಳು ಈ ತಂತ್ರ ಬಳಸುತ್ತಾರೆ. ಸಗಣಿ ಕದಡಲು ತಣ್ಣಗಿನ ನೀರಿನ ಬದಲು ಬಿಸಿ ನೀರು ಉಪಯೋಗಿಸುತ್ತಾರೆ. ಈ ಕ್ರಮದಿಂದ ಅನಿಲದ ಶೀಘ್ರ ಬಿಡುಗಡೆ ಸಾಧ್ಯವೆನ್ನಬಹುದು. ಆದರೆ ಹೆಚ್ಚು ಅನಿಲ ಸಿಗುತ್ತದೆನ್ನುವುದನ್ನು ನಂಬುವುದು ಕಷ್ಟ.
3. ಡ್ರಮ್‍ನಲ್ಲಿ ಅನಿಲ ಸಂಗ್ರಹಣೆ ಮಿತಿ ಮೀರಿ ಡ್ರಮ್‍ನ ಪಕ್ಕದಿಂದ ಹೊರ ಹೋಗತೊಡಗಿದಾಗ ಅದನ್ನು ನಿಲ್ಲಿಸುವ ಪ್ರಯತ್ನವೇನೂ ಮಾಡಬೇಡಿ. ಸಾಧ್ಯವಿದ್ದರೆ ಹೆಚ್ಚು ಉರಿ ಬೇಕಾಗುವ ಯಾವುದಾದರೂ ಬದಲಿ ಕೆಲಸವಿದ್ದರೆ ಮಾಡಿ. ಉದಾ:- ಅಡಿಕೆ ಹುರಿಯುವುದು, ಹೀಗೆ ಅನಿಲ ಉಕ್ಕುತ್ತಿರುವಾಗ ಒಂದು ದಿನ ಸಗಣಿ ಕದಡುವುದನ್ನೇ ಬಿಡುವುದು ಸೂಕ್ತ. ಖಂಡಿತವಾಗಿ ಈ ಕ್ರಮದಿಂದ ಅನಿಲದ ಇಳುವರಿಯಲ್ಲಿ ಯಾವ ಅಧ್ಯಾನವೂ ಸಂಭವಿಸುವುದಿಲ್ಲ.
4. ಶಾಶ್ವತ ಕೆಲಸವಾಗಬೇಕೆಂದು ಬಯಸುವವರು ಈ ಅಂಶ ಗಮನಿಸಿ. ಅನಿಲವನ್ನು ಪ್ಲಾಂಟಿನಿಂದ ಅಡಿಗೆ ಮನೆಗೆ ಸಾಗಿಸಲು ಬಳಸುವ ಪೈಪನ್ನು ಭೂಮಿಯೊಳಗೆ ಸಾಗಿಸುವುದು ಸುತಾರಾಂ ಸಲ್ಲದು. ಕೆಲವೊಮ್ಮೆ ರಸ್ತೆ ಮೂಲಕ ಸಾಗಬೇಕಿದ್ದರೆ ಕನಿಷ್ಠ ಪ್ರಮಾಣದಲ್ಲಿ ಅನಿವಾರ್ಯವಾಗಿ ಸಾಗಿಸಬೇಕಾದೀತು. ಬೇಸಿಗೆಯಲ್ಲಿ ಪೈಪ್‍ನೊಳಗೆ ನೀರಾವಿ ಉತ್ಪತ್ತಿಯಾಗಿ ಶೇಖರಣೆಗೊಂಡು ಅನಿಲದ ಚಲನೆಗೆ ತಡೆಯನ್ನುಂಟು ಮಾಡುತ್ತದೆ. ನೀರಾವಿಯನ್ನು ತೆಗೆಯುವುದೂ ಕಷ್ಟ. ಪೈಪ್‍ನಲ್ಲೇನಾದರೂ ಬಿರುಕು ಕಾಣಿಸಿದರೆ ಸರಿಪಡಿಸುವುದು ಸುಲಭವಲ್ಲ. ಖರ್ಚಿಗೆ ಕಾರಣವಾಗುವ ಈ ತಂತ್ರದಲ್ಲಿ ಬದಲಿ ವ್ಯವಸ್ಥೆಯೂ ದುಬಾರಿಯಾದೀತು. ಆದ್ದರಿಂದ ಭೂಮಿ ಮೇಲೆಯೇ ಅನಿಲ ಸಂಪರ್ಕ ಜಾಲ ಬೆಳೆಸಬೇಕು. ಪೈಪ್‍ನಲ್ಲಿ ಒಂದೊಮ್ಮೆ ನೀರು ಕಾಣಿಸಿದರೂ ಅದು ಸ್ಥಾವರಕ್ಕೆ ಹರಿದು ಬರುವ ರೀತಿಯಲ್ಲಿ ಪೈಪ್ ಜೋಡಿಸಿ.
5. ಗ್ಯಾಸ್ ತಯಾರಿಸಿ ಹೊರ ಬರುವ ರಾಡಿ ಗೊಬ್ಬರವಾಗಲು ಯೋಗ್ಯವೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತದೆ. ನಮ್ಮಲ್ಲಿ ಒಂದು ಅಡಿಕೆ ಮರಕ್ಕೆ ಒಂದು ಹೆಡಿಗೆ ಗೊಬ್ಬರ ಎಂಬ ಅಳತೆ ಬಳಸುತ್ತೇವೆ. ಆದರೆ ರಾಡಿ ಒಣಗಿಸಿದಾಗ ದೊರೆಯುವ ಪ್ರಮಾಣ ಗೊಬ್ಬರಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಹಾಗಾಗಿ ಜನ ಈ ಗೊಬ್ಬರ ಒದಗುವುದಿಲ್ಲ ಎನ್ನುತ್ತಾರೆ. ದರಲೆ, ಹಸಿರೆಲೆಗಳಲ್ಲಿ ಇದನ್ನು ಚೆಲ್ಲಿ ಕಾಂಪೋಸ್ಟ್ ಮಾಡುವುದು ಇದರಿಂದ ಸುಲಭ. ಗುಣಮಟ್ಟದ ದೃಷ್ಟಿಯಲ್ಲಿ ಇದು ಹಟ್ಟಿಗೊಬ್ಬರಕ್ಕಿಂತ ಭಾರಿಯೇನೂ ಹಿಂದಿಲ್ಲ.
6. ಅನಿಲ ಬಂದಿದೆ, ಇಲ್ಲಾ ಎಂಬುದನ್ನು ನೋಡಲು ಅನಿಲ ಕೊಳವೆಯ ವಾಲ್ವ್ ಹತ್ತಿರ ಪರೀಕ್ಷೆ ಬೇಡ. ಒಲೆ ಹಚ್ಚಿ ಪರೀಕ್ಷಿಸಿ. ಸಾಧ್ಯವಾದಷ್ಟು ಮಕ್ಕಳನ್ನು ಸ್ಥಾವರದಿಂದ ದೂರವಿಡಿ. ಅದಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಅದರ ಅಪಾಯ ಅನಾಹುತಗಳನ್ನು ಮನವರಿಕೆ ಮಾಡಿಕೊಡಿ.
7. ಒಂದೊಮ್ಮೆ ಅನಿಲ ಸರಿಯಾಗೇ ಪೂರೈಕೆಯಾಗದಿದ್ದಲ್ಲಿ ಡ್ರಮ್‍ನ ವಾಲ್ವ್ ಕಟ್ಟಿ ಪರೀಕ್ಷಿಸಿ. ಪೈಪ್‍ನಲ್ಲಿ ಸೋರುತ್ತಿದೆಯೇ ಅಥವಾ ಡ್ರಮ್‍ನಲ್ಲೇ ಎಂಬುದು ಸ್ಪಷ್ಟವಾಗುತ್ತದೆ.
– ಮಾ.ವೆಂ.ಸ.ಪ್ರಸಾದ್

ಮಂಜಿನ ಪಂಜನ್ನುರಿಸುತ್ತಾ ಮರಗಳು ವಿದಾಯ ಹೇಳುತ್ತಿವೆ

0

ತಾಲ್ಲೂಕಿನಲ್ಲಿ ಸೋಮವಾರ ಚುಮುಚುಮು ಚಳಿಯ ಮುಂಜಾವಿನಲ್ಲಿ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುತ್ತಿರಲ್ಲ.
ಶಿಡ್ಲಘಟ್ಟದಿಂದ ಚಿಂತಾಮಣಿಗೆ ಹೋಗುವ ರಸ್ತೆಯಲ್ಲಿನ ಬಿಳಲುಗಳನ್ನು ಚಾಚಿನಿಂತ ಆಲದಮರಗಳ ಸಾಲು ಮಂಜಿನ ಪಂಜನ್ನು ಹೊತ್ತುನಿಂತಂತೆ ಭಾಸವಾಗುತ್ತಿತ್ತು. ದುರಂತವೆಂದರೆ ಇದು ಈ ಮರಗಳಿಗೆ ಜೀವಮಾನದ ಕಟ್ಟಕಡೆಯ ಚಳಿಗಾಲ. ನೋಡುಗರಾದ ನಮಗೂ ಕಟ್ಟಕಡೆಯ ದೃಶ್ಯಕಾವ್ಯ. ರಸ್ತೆಯ ಅಗಲೀಕರಣದಿಂದ ರಸ್ತೆ ಬದಿಯ ಮರಗಳಿಗೆ ಕೊಡಲಿ ಬೀಳುತ್ತಿವೆ. ಈಗಾಗಲೇ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ನಡುಚಿನ ರಸ್ತೆ ಬದಿಯ ಮರಗಳು ಧರೆಗುರುಳುತ್ತಿದ್ದು, ಚಿಂತಾಮಣಿ ರಸ್ತೆಯಲ್ಲಿರುವ ಈ ಬೃಹತ್ ಆಲದ ಮರಗಳೂ ದಿನಗಳೆಣಿಸುತ್ತಿವೆ. ಆರುವ ಮುಂಚಿನ ದೀಪದಂತೆ ಮಂಜಿನ ಪಂಜನ್ನುರಿಸುತ್ತಾ ಮರಗಳು ವಿದಾಯ ಹೇಳುತ್ತಿವೆ.

ಸಂಚಾರಕ್ಕೆ ಅಡ್ಡಿಯಾದ ವಿದ್ಯುತ್ ಕಂಬ

0

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮಕ್ಕೆ ಮೇಲೂರಿನಿಂದ ಸಂಚಾರ ಮಾಡುವಂತಹ ಜಲ್ಲಿ ರಸ್ತೆಯ ಸನಿಹದಲ್ಲೆ ವಿದ್ಯುತ್ ಕಂಬವಿದ್ದು, ರೈತರಿಗೆ ತೊಂದರೆಯಾಗಿದೆ. ಈ ಭಾಗದಲ್ಲಿ ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪನ್ನು ತೆಗೆದುಕೊಂಡು ಹೋಗುತ್ತಾರೆ, ದನಕರುಗಳಿಗೆ ಮೇವುಗಳನ್ನು ತರಬೇಕಾದರೂ ಜನರು ಇದೇ ರಸ್ತೆಯಲ್ಲೆ ಸಂಚಾರ ಮಾಡುತ್ತಾರೆ, ಹೊಲಗಳಲ್ಲಿ ಕಟಾವು ಮಾಡಿರುವ ಬೆಳೆಗಳನ್ನು ಸಾಗಾಣಿಕೆ ಮಾಡಬೇಕಾದರೆ ವಿದ್ಯುತ್ ಕಂಬ ಅಡ್ಡಿಯಾಗಿದ್ದು, ಟ್ರ್ಯಾಕ್ಟರ್ಗಳು ಸೇರಿದಂತೆ ಬಾರೀ ವಾಹನಗಳು ಈ ಭಾಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಬೆಸ್ಕಾಂ ಇಲಾಖಾಧಿಕಾರಿಗಳು ಈ ಕಡೆಗೆ ಗಮನಹರಿಸಿ ಕಂಬವನ್ನು ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯ ತೋಟಗಳ ರೈತರು ಒತ್ತಾಯ ಮಾಡಿದ್ದಾರೆ.

ನಗರಸಭಾ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

0

ಸುಮಾರು ೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ನಗರಸಭಾ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಂಡಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಆದಷ್ಟು ಬೇಗ ಹಣ ಮಂಜೂರು ಮಾಡಿಸುವಂತೆ ಶಾಸಕ ಎಂ.ರಾಜಣ್ಣ ಅವರಿಗೆ ನಗರಸಭಾ ಆಯುಕ್ತ ಎಚ್.ಎ.ಹರೀಶ್ ಕಟ್ಟಡದ ನೀಲನಕ್ಷೆಯನ್ನು ಸೋಮವಾರ ನೀಡಿದರು.
ನಗರದ ಹಳೆಯ ಪುರಪೊಲೀಸ್ ಠಾಣೆಯ ಪಕ್ಕದಲ್ಲಿರುವ ನಗರಸಭೆಯ ಖಾಲಿ ನಿವೇಶನದಲ್ಲಿ ಮೂರು ಅಂತಸ್ತುಗಳ ಸುಂದರವಾದ ನಗರಸಭಾ ಕಾರ್ಯಾಲಯವನ್ನು ನಿರ್ಮಾಣ ಮಾಡಲು ನೀಲ ನಕ್ಷೆಯನ್ನು ತಯಾರಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಡಾ.ಮಂಜುಳಾ ಅವರ ಅವಧಿಯಲ್ಲಿ ಹಣ ಮಂಜೂರಾಗಿತ್ತು, ಆದರೆ ಇದುವರೆಗೂ ಕಟ್ಟಡ ಕಾಮಗಾರಿಯನ್ನು ಪ್ರಾರಂಭ ಮಾಡಲು ಸಾಧ್ಯವಾಗಿರಲಿಲ್ಲ, ಈಗ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸರ್ವಸಿದ್ಧತೆಯನ್ನು ನಡೆಸಲಾಗಿದೆ. ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರಿಗೆ ತಿಳಿಸಿ ಹಣವನ್ನು ಶೀಘ್ರವಾಗಿ ಮಂಜೂರು ಮಾಡಿಸಲು ಕೋರಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭಾ ಸದಸ್ಯರಾದ ವೆಂಕಟಸ್ವಾಮಿ, ಷಫಿವುಲ್ಲಾ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಂತೆಯಲ್ಲಿ ಏರಿದ ತರಕಾರಿ ಬೆಲೆಗೆ ಕಂಗಾಲಾದ ಗ್ರಾಹಕರು

0

ಕಳೆದ ಎರಡು ತಿಂಗಳ ಹಿಂದೆ ೨೦ ದಿನಗಳ ಕಾಲ ಬಿದ್ದಂತಹ ಜಡಿಮಳೆಯ ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿ ಬಾರದೆ ಇರುವುದರಿಂದ ಬೆಲೆಗಳು ದುಪ್ಪಟ್ಟಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ನಗರದಲ್ಲಿ ಸೋಮವಾರದಂದು ನಡೆದ ವಾರದ ಸಂತೆಯಲ್ಲಿ ತರಕಾರಿ ಖರೀದಿಗಾಗಿ ಬಂದಿದ್ದ ಗ್ರಾಹಕರು ತರಕಾರಿ ಬೆಲೆಗಳನ್ನು ಕೇಳಿ ಬೆಚ್ಚಿಬೀಳುವಂತಾಗಿದ್ದರು.
ಆಲೂಗಡ್ಡೆ ಪ್ರತಿ ಕೆ.ಜಿಗೆ ೨೦ರೂ, ಈರುಳ್ಳಿ ೨೦ರೂ, ಬೀನ್ಸ್ ೬೦ರೂ, ಕ್ಯಾರೇಟ್ ೮೦ರೂ, ನವಕೋಲು ೬೦ರೂ, ಮೂಲಂಗಿ ೪೦ರೂ, ಬೆಳ್ಳುಳ್ಳಿ ೧೨೦ರೂ, ಹಸಿಮೆಣಸಿನಕಾಯಿ ೫೦ರೂ, ಟಮೋಟೊ ೪೦ರೂ, ಬದನೆಕಾಯಿ ೬೦ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ಮಧ್ಯಮವರ್ಗದ ಕುಟುಂಬಗಳ ಜನರು ತರಕಾರಿಗಳ ಖರೀದಿಗೆ ಹಿಂದೇಟು ಹಾಕುವಂತಾಗಿತ್ತು.
‘ಮಾರುಕಟ್ಟೆಗೆ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ, ೧೫ ಸಾವಿರ ರೂಪಾಯಿಗಳ ಬಂಡವಾಳ ಹಾಕಿದರೂ ಕೂಡಾ ಖರೀದಿ ಮಾಡಲು ಗ್ರಾಹಕರು ಸರಿಯಾಗಿ ಬರುತ್ತಿಲ್ಲ, ಒಂದು ಕೆ.ಜಿ.ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಕಾಲು ಕೆ.ಜಿ. ಖರೀದಿ ಮಾಡುತ್ತಿದ್ದಾರೆ, ತರಕಾರಿಗಳನ್ನು ಹೆಚ್ಚು ದಿನಗಳ ಕಾಲ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದ ಆರ್ಥಿಕವಾಗಿ ನಮಗೆ ಹೊರೆಯಾಗುತ್ತಿದೆ’ ಎಂದು ತರಕಾರಿ ವ್ಯಾಪಾರ ಮಾಡುವ ಭಾಗ್ಯಮ್ಮ ತಮ್ಮ ತೊಂದರೆಯನ್ನು ವಿವರಿಸಿದರು.
‘ಮನೆಗಳಿಗೆ ತರಕಾರಿಗಳನ್ನ ಖರೀದಿ ಮಾಡುವುದು ತುಂಬಾ ಕಷ್ಟಕರವಾಗಿದೆ. ಇಲ್ಲಿನ ಬೆಲೆಗಳಿಗೆ ಅನುಗುಣವಾಗಿ ಖರೀದಿ ಮಾಡಬೇಕಾದರೆ, ವಾರವೆಲ್ಲಾ ಕೂಲಿ ಮಾಡಿದರೂ ತರಕಾರಿಗೆ ಹಣ ಸಾಕಾಗುವುದಿಲ್ಲ’ ಎನ್ನುತ್ತಾರೆ ಸೀತಹಳ್ಳಿಯ ಬೈರೇಗೌಡ.

ಸಿದ್ದಾರ್ಥನಗರಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಲು ಒತ್ತಾಯ

0

ನಗರದ ೭, ೮, ಮತ್ತು ೯ ನೇ ವಾರ್ಡುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ನಗರಸಭಾ ಆಯುಕ್ತರಿಗೆ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ಸಿದ್ದಾರ್ಥನಗರದ ವಾರ್ಡುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ರಸ್ತೆಗಳು ಹದಗೆಟ್ಟಿವೆ, ಸ್ವಚ್ಚತೆ ಇಲ್ಲ, ಚರಂಡಿಗಳಲ್ಲಿ ಸ್ವಚ್ಚ ಮಾಡದೆ ಇರುವುದರಿಂದ ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದಾಗಿ ಈ ವಾರ್ಡುಗಳಲ್ಲಿನ ಜನರು ಪದೇ ಪದೇ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದು, ಸಂಪಾದನೆ ಮಾಡುವಂತಹ ಹಣವನ್ನು ಆಸ್ಪತ್ರೆಗಳಿಗೆ ಖರ್ಚು ಮಾಡಬೇಕಾಗಿದೆ. ಈ ಬಗ್ಗೆ ಅನೇಕ ಬಾರಿಗೆ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ, ಆದ್ದರಿಂದ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ನೆನೆಗುದಿಗೆ ಬಿದ್ದಿರುವ ಚರಂಡಿಯ ಮೇಲ್ವಾವಣಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿಪತ್ರವನ್ನು ಸ್ವೀಕರಿಸಿ ಮಾತನಾಡಿದ ಆಯುಕ್ತ ಹರೀಶ್, ಮಂಗಳವಾರದಂದು ಸಾಮಾನ್ಯಸಭೆಯನ್ನು ಕರೆಯಲಾಗಿದ್ದು, ಸಭೆ ಮುಕ್ತಾಯವಾದ ಕೂಡಲೇ ವಾರ್ಡುಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎನ್.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಎಂ.ನಾಗರಾಜ್, ಉಪಾಧ್ಯಕ್ಷ ಕೆ.ಮುನಿರಾಜು, ಕಾರ್ಯದರ್ಶಿ ಸುಭ್ರಮಣಿ, ಖಜಾಂಚಿ ಎನ್.ವೆಂಕಟರಾಜು, ಸುಂದರರಾಜು, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ವಿತರಣೆ

0

ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶ್ರಮ ಶಕ್ತಿ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗಕ್ಕಾಗಿ ತಲಾ ಹತ್ತು ಸಾವಿರ ರೂಗಳ ಸಾಲವನ್ನು ೩೫೩ ಮಂದಿಗೆ ಫಲಾನುಭವಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
ಒಟ್ಟಾರೆ ೩೯ ಲಕ್ಷ ರೂಪಾಯಿಗಳ ಸಾಲವನ್ನು ನೀಡುತ್ತಿದ್ದು, ಅದರಲ್ಲಿ ಸಹಾಯಧನವೂ ಸೇರಿರುತ್ತದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಹಲವಾರು ಯೋಜನೆಗಳ ಮುಖಾಂತರ ಸಹಾಯಧನಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ವ್ಯಾಪಾರ ವಹಿವಾಟುಗಳು ಹಾಗೂ ಸಣ್ಣ ಉದ್ದಿಮೆಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸೌಲಭ್ಯಗಳಿಗೆ ನೇರವಾಗಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭಾ ಸದಸ್ಯರಾದ ಅಫ್ಸರ್ಪಾಷ, ವೆಂಕಟಸ್ವಾಮಿ, ಷಫಿವುಲ್ಲಾ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲ, ಅಲಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಇಂತಿಯಾಜ್ಪಾಷಾ, ಮುಂತಾದವರು ಹಾಜರಿದ್ದರು.

ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಪಡಿಸಲು ಸಲಹೆ

0

ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಕರು ಶ್ರಮಿಸಬೇಕು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಕರೆನೀಡಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಪ್ರೌಢಶಾಲಾ ಸಹಶಿಕ್ಷಕರ ಸಂಘವು ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಫಲಿತಾಂಶ ಉತ್ತಮಪಡಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದು ಎಂದರು.
ಸಂಘದ ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಜನವರಿ ೨೩ ರಿಂದ ಎಲ್ಲಾ ವಿಷಯಗಳ ಬೋಧಕರಿಗೆ ಶಿಡ್ಲಘಟ್ಟದಲ್ಲಿ ಸಮಾಲೋಚನ ಸಭೆ ನಡೆಸಿ ಕನಿಷ್ಟ ಕಲಿಕೆಯ ಮಕ್ಕಳಲ್ಲಿ ಕಲಿಕೆಯನ್ನು ಉತ್ತಮಪಡಿಸಲು ತರಬೇತಿ ನಡೆಸಲಾಗುವುದು. ಅದೇ ಸಂದರ್ಭದಲ್ಲಿ ಕನಿಷ್ಟ ಕಲಿಕೆಯ ಮಕ್ಕಳಿಗೆ ಅನುಕೂಲವಾಗುವಂತೆ ಕಲಿಕಾಸಾಮಗ್ರಿ ವಿತರಿಸಲು ತೀರ್ಮಾನಿಸಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಕೆಂಪಣ್ಣ ಮಾತನಾಡಿ, ಎಸ್ಎಸ್ಎಲ್ಸಿ ಮಕ್ಕಳಿಗೆ ಅನುಕೂಲವಾಗಿ ರಾಜ್ಯಸಂಘವು ಹೊರತಂದಿರುವ ಚಟುವಟಿಕೆಗಳ ಕೈಪಿಡಿಯನ್ನು ಶಿಕ್ಷಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಘವು ಹೊರತಂದಿರುವ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು. ಎಸ್ಎಸ್ಎಲ್ಸಿ ಸಿಲಬಸ್ ಆಧಾರಿತ ಚಟುವಟಿಕೆಗಳ ಕೈಪಿಡಿಗಳನ್ನು ವಿತರಿಸಲಾಯಿತು.
ಜಿಲ್ಲಾ ಸಂಘದ ಪ್ರತಿನಿಧಿ ಟಿ.ವಿ.ಚಂದ್ರಶೇಖರ್, ಉಪಾಧ್ಯಕ್ಷೆ ಇಂದಿರಾ, ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತ್ಯನಾರಾಯಣ್, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಸಂಘಟನಾ ಕಾರ್ಯದರ್ಶಿ ನವೀನ್ಕುಮಾರ್ ಹಾಜರಿದ್ದರು.