Home Blog Page 487

ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಮಾಣ ಪತ್ರ

0

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಚನ್ನಕೃಷ್ಣ ಕರ್ನಾಟಕ ನಾಟಕ ಅಕಾಡೆಮಿಯ ನಾಟಕ ರಚನಾ ಶಿಬಿರದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಮಾಣ ಪತ್ರವನ್ನು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಶೇಖರ್ ಅವರಿಂದ ಪಡೆದಿದ್ದಾರೆ.

ಚುಟುಕು ಸಾಹಿತ್ಯ ಪರಿಷತ್ ವತಿನಿಂದ ಕುವೆಂಪು ಜನ್ಮದಿನಾಚರಣೆ

0

ಕನ್ನಡಮ್ಮನ ಮಡಿಲಿಗೆ ಮೊಟ್ಟ ಮೊದಲ ಜ್ಞಾನಪೀಠ ಪಶಸ್ತಿಯನ್ನು ನೀಡಿದ ಹಿರಿಯ ಸಾಹಿತ್ಯ ದಿಗ್ಗಜ ಕುವೆಂಪು ಅವರು ಇಡೀ ವಿಶ್ವದ ಜನರನ್ನು ಸೋದರರಂತೆ ಕಾಣಬೇಕೆಂದು ಸಂದೇಶ ಸಾರಿದ ಮೇರು ವ್ಯಕ್ತಿತ್ವ ಎಂದು ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಟಿ.ಎಂ ಈಶ್ವರ್ಸಿಂಗ್ ತಿಳಿಸಿದರು.
ನಗರದ ಟಿ.ಬಿ.ರಸ್ತೆಯ ನಗರಸಭೆ ಮಳಿಗೆಗಳಲ್ಲಿರುವ ಶ್ರೀ ಮಡಿವಾಳ ಮಾಚಿದೇವ ಯುವಕರ ಸಂಘದ ಕಚೇರಿಯಲ್ಲಿ ಶನಿವಾರ ಸಂಜೆ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚಾರಣೆ ನೆನಪಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸುವ ಮೂಲಕ ವಿಶ್ವಮಾನವರಾಗಿ ಸಾಹಿತ್ಯ ಪ್ರಿಯರ ಹೃದಯದಲ್ಲಿ ನಿರಂತರವಾಗಿ ಬದುಕುಳಿದವರು. ಉತ್ಕೃಷ್ಟ ಕೃತಿಗಳಾದ ಶ್ರೀರಾಮಾಯಣ ದರ್ಶನಂ, ಕೊಳಲು, ಪಾಂಚಜನ್ಯ, ಕಿಂದರಿಜೋಗಿ, ಮಲೆಗಳಲ್ಲಿ ಮದುಮಗಳು, ನಾಟಕಗಳು, ಕವನ ಸಂಕಲನಗಳ ಮೂಲಕ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಂ.ದೇವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ರವರ ತತ್ವ ಸಿದ್ದಾಂತಗಳನ್ನು ಎಲ್ಲಾ ವರ್ಗದ ಜನರು ಪಾಲಿಸುವ ಮೂಲಕ ವಿಶ್ವ ಮಾನವ ಕುವೆಂಪುರವರ ಪರಿಕಲ್ಪನೆಯನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಈಧರೆ ತಿರುಮಲಪ್ರಕಾಶ್,ಉಪಾಧ್ಯಕ್ಷ ದೇವರಮಳ್ಳೂರು ಚನ್ನಕೃಷ್ಣಪ್ಪ, ಶಿಕ್ಷಕರಾದ ಪ್ರಸಾದ್, ಚಿಕ್ಕವೆಂಕಟರಾಯಪ್ಪ, ಬಾಸ್ಕರ್, ಸಂಘಟನಾ ಕಾರ್ಯದರ್ಶಿ ಎಂ.ಎನ್.ನಾಗಭೂಷಣ್, ಗೌರವ ಸದಸ್ಯ ಬೂದಾಳ ರಾಮಾಂಜಿನಪ್ಪ, ತಬಲ ಕಲಾವಿದ ದ್ಯಾವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಿಕಿತ್ಸೆ ದುಬಾರಿಯಾಗಿದೆ, ಉಚಿತ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಿ

0

ಆರೋಗ್ಯ ಸಂಬಂಧಿಸಿದ ತಪಾಸಣೆ ಮತ್ತು ಚಿಕಿತ್ಸೆ ದುಬಾರಿಯಾಗಿರುವಾಗ ನುರಿತ ತಜ್ಞರು ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರೋಗಿಗಳನ್ನು ಪರೀಕ್ಷಿಸುತ್ತಿರುವ ವೈದ್ಯರು
ರೋಗಿಗಳನ್ನು ಪರೀಕ್ಷಿಸುತ್ತಿರುವ ವೈದ್ಯರು

ಬೆಂಗಳೂರಿನ ಸ್ಪೆಷಲಿಸ್ಟ್ ಆಸ್ಪತ್ರೆಯ ನುರಿತ ಫಿಸಿಷಿಯನ್, ಹೃದ್ರೋಗ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ನರರೋಗ ತಜ್ಞರು, ಸ್ತ್ರೀ ಮತ್ತು ಪ್ರಸೂತಿ ತಜ್ಞರು ಸೇರಿದಂತೆ ನುರಿತ ತಜ್ಞ ವೈದ್ಯರು ಆಗಮಿಸಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಆಶಾಕಿರಣ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಿದ್ದು, ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ಉಲ್ಲೂರು ಪೇಟೆ, ಮಾರುತಿ ನಗರ ಮತ್ತು ಗಾಂಧಿನಗರದ ಯುವಕರು ಸ್ವಯಂ ಸೇವಕರಾಗಿ ಕೆಲಸ ಮಾಡಿದರು.
ಬೆಂಗಳೂರಿನ ಸ್ಪೆಷಲಿಸ್ಟ್ ಆಸ್ಪತ್ರೆಯ ಮುಖ್ಯಸ್ಥ ಪ್ರಶಾಂತ್, ಹೃದಯ ತಜ್ಞ ಡಾ. ಅಬ್ದುಲ್, ನರರೋಗ ತಜ್ಞ ಡಾ.ವಿವೇಕಾನಂದ, ಮಧುಮೇಹ ತಜ್ಞ ಡಾ. ಆದಿತ್ಯ ಚೌಟಿ, ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ. ಲಕ್ಷ್ಮೀ, ಮಧು, ರಾಮಯ್ಯ, ವರ್ಷ, ಅರುಣ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರ ಗೌಡ, ಜಿಲ್ಲಾ ಉಪಧ್ಯಕ್ಷ ದಾಮೋದರ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ಗೌಡ, ಕೆಂಪರೆಡ್ಡಿ, ಮಂಜುಳಮ್ಮ, ಸುಜಾತಮ್ಮ, ನಾಗರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಹಿಳೆಯ ಬರ್ಭರ ಕೊಲೆ

0

ತಾಲ್ಲೂಕಿನ ಹಂಡಿಗನಾಳ ಪಂಚಾಯತಿಯ ಲಕ್ಕಹಳ್ಳಿ ಗೇಟ್ ಬಳಿ ಶನಿವಾರ ಬೆಳಿಗ್ಗೆ ಮಹಿಳೆಯನ್ನು ಬರ್ಭರವಾಗಿ ಕೊಲೆ ಮಾಡಿ ಒಡವೆಯನ್ನು ದೋಚಿರುವ ಘಟನೆ ನಡೆದಿದೆ.
ರಾಧಮ್ಮ(48) ಕೊಲೆಯಾದ ಮಹಿಳೆಯಾಗಿದ್ದಾರೆ. ನಗರದಿಂದ ಕೇವಲ 2 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಪಕ್ಕದಲ್ಲೇ ಆನಂದ್ ಎಂಬುವರ ಮನೆಯಿದ್ದು, ಅವರ ಪತ್ನಿ ರಾಧಮ್ಮ ತಮ್ಮ ಮನೆಯ ಹಿಂದೆ ಇರುವ ಹೊಲದಲ್ಲಿ ಬೆಳಿಗ್ಗೆ ಅವರೇಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಓಲೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮೃತಪಟ್ಟ ರಾಧಮ್ಮನ ಗಂಡ ನಗರದ ಬಸ್ ನಿಲ್ದಾಣದ ಬಳಿ ದಿನಸಿ ಅಂಗಡಿಯನ್ನಿಟ್ಟಿದ್ದಾರೆ. ಇವರ ಮೂವರು ಹೆಣ್ಣು ಮಕ್ಕಳಿಗೂ ವಿವಾಹವಾಗಿದ್ದು, ಮಗನೊಬ್ಬ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮನೆಯಲ್ಲಿ ಒಬ್ಬಳೇ ಮಹಿಳೆಯಿರುವುದನ್ನು ಹಾಗೂ ಸುತ್ತಮುತ್ತ ಜನ ಸಂಚಾರವಿರದಿರುವುದನ್ನು ಗಮನಿಸಿ ಈ ದುಷ್ಕೃತ್ಯ ಎಸಗಿರಬಹುದೆಂದು ಮೃತಳ ಗಂಡ ಆನಂದ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಎ.ಎಸ್.ಐ ನಾರಾಯಣಸ್ವಾಮಿ ಭೇಟಿ ನೀಡಿದ್ದರು. ಶ್ವಾನ ದಳವನ್ನು ಕರೆಸಲಾಗಿತ್ತು.

ಹಸಿರು ಪಡೆಯಿಂದ ನೂತನ ವರ್ಷಾಚರಣೆ

0

ಶಿಕ್ಷಣದ ಜೊತೆಗೆ ಉತ್ತಮ ಪರಿಸರವಿರಬೇಕು, ಅದನ್ನು ಸಂರಕ್ಷಿಸುವ ಹೊಣೆ ವಿದ್ಯಾರ್ಥಿಗಳೇ ವಹಿಸಬೇಕು. ಆಗ ನಾವು ಹಸಿರುಮಯ ವಾತಾವರಣವನ್ನು ಕಾಣಲು ಸಾಧ್ಯ ಎಂದು ಪ್ರಾಂಶುಪಾಲ ರಾಮಚಂದ್ರ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ (ಹಸಿರು ಪಡೆ) ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ವರ್ಷಾಚರಣೆ ೨೦೧೬ ಅಂಗವಾಗಿ ‘ಸಸಿ ನೆಡುವ ಮತ್ತು ಪರಿಸರ ಸಂರಕ್ಷಣೆ’ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪರಿಸರ ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್ ಮಾತನಾಡಿ, ಮನುಷ್ಯ ಉತ್ತಮವಾಗಿ ಜೀವಿಸಲು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕನಿಷ್ಟ ೧೦೦ ಗಿಡಗಳನ್ನಾದರೂ ನೆಟ್ಟು ಪೋಷಣೆ ಮಾಡಿ, ಸಮಾಜದಲ್ಲಿ ಹಸಿರುಮಯ ವಾತಾವರಣ ನಿರ್ಮಿಸಬೇಕು, ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಗಿಡಮರಗಳನ್ನು ನೆಟ್ಟು ಪೋಷಣೆ ಮಾಡಿ ಕಾಲೇಜಿಗೆ ಉತ್ತಮ ವಾತವಾರಣವನ್ನು ಕಲ್ಪಿಸಿ ಇತರರಿಗೆ ಮಾದರಿಯಾಗಬೆಕೆಂದು ತಿಳಿಸಿದರು.
ಮುಖ್ಯ ಅತಿಥಿಯಗಿ ಆಗಮಿಸಿದ್ದ ಬಾಲವಿಕಾಸ ಅಕಾಡೆಮಿಯ ಜಿಲ್ಲಾ ಸದಸ್ಯ ಮುನಿಕೃಷ್ಣ ಮಾತನಾಡಿ, ನಾವು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕಾದರೆ ಅದು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸಿ ಹಸಿರುಮಯ ವಾತವಾರಣ ಕಲ್ಪಿಸಿದಾಗ ಮಾತ್ರ ನಿಜವಾದ ದೇಶ ಸೇವೆಯಾಗುತ್ತದೆ ಎಂದರು.
ಉಪನ್ಯಾಸಕರಾದ ಹನುಮಂತಯ್ಯ, ಶ್ರೀನಿವಾಸ್, ಹಸಿರು ಪಡೆಯ ಅಧಿಕಾರಿ ಮುನಿರಾಜು, ಕೃಷ್ಣಪರಮಾತ್ಮ, ಆದಿನಾರಾಯಣ, ಸುಜಾತ, ಹಜೀರಾ, ನಾರಾಯಣಸ್ವಾಮಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಿರಬೇಕು

0

ಭವಿಷ್ಯವನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಷ್ಟ ಪಟ್ಟು ಓದಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಎಂ.ಮೂರ್ತಿ ಸ್ಮರಣಾರ್ಥ ಶನಿವಾರ ಏರ್ಪಡಿಸಲಾಗಿದ್ದ ಜ್ಞಾನಕಾರಂಜಿ ೨೦೧೫–೧೬ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ. ಕಳೆದು ಹೋದ ಕ್ಷಣ ಮತ್ತೆ ಬರುವುದಿಲ್ಲ. ಗುರಿಯಿಟ್ಟುಕೊಂಡು ಸಾಧನೆ ಮಾಡುವ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸುತ್ತಾರೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವುದು ಕಷ್ಟವೇ ಸರಿ. ಇಂತಹ ಪರಿಸ್ಥಿತಿಯಲ್ಲೂ ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಒಳ್ಳೆಯ ವಾತಾವರಣದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಈ ವಿದ್ಯಾ ಸಂಸ್ಥೆಯ ಕಾರ್ಯ ಶ್ಲಾಘನೀಯಎಂದು ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.
ರವಿ ಪುರಸ್ಕಾರ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ವ್ಯಕ್ತಿತ್ವ ತರಬೇತುದಾರ ಆರ್.ಎ.ಚೇತನ್ಕುಮಾರ್ ಮಾತನಾಡಿ, ಶಾಲಾ ಮಕ್ಕಳು ಕೇವಲ ಪಾಠ, ಪ್ರವಚನಕ್ಕೆ ಮಾತ್ರವೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮೆದುಳನ್ನು ಸದಾ ಕ್ರಿಯಾಶೀಲವಾಗಿರುವಂತೆ ಮಾಡುವ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಓದುವುದು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಆ ನಂತರ ಒಂದು ಉದ್ಯೋಗ ಪಡೆಯುವುದೆ ಗುರಿ ಎಂದು ಭಾವಿಸದೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಮನಹರಿಸಿಬೇಕು. ಇದರಿಂದ ಸಾಮಾಜಿಕ ಕಳಕಳಿ ಭಾವನೆ ಬೆಳೆಯಲು ಕಾರಣವಾಗುತ್ತದೆ. ನಮ್ಮ ನಡೆ, ನುಡಿ, ಕಾರ್ಯವೈಖರಿ ಇನ್ನೊಬ್ಬರಿಗೆ ಮಾದರಿಯಾಗುವಂತೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಶಾಲೆಯ ಶೈಕ್ಷಣಿಕ ಆಡಳಿತಾಧಿಕಾರಿ ಮನುಶ್ರೀ ರಾಜೀವ್ಕುಮಾರ್ ಶಾಲೆಯ ವರದಿಯನ್ನು ಮಂಡಿಸಿದರು.
ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ರಾಜೀವ್ಕುಮಾರ್, ಸಂಪನ್ಮೂಲ ವ್ಯಕ್ತಿ ಎಚ್.ಚಂದ್ರಶೇಖರ್, ಮುಖ್ಯ ಶಿಕ್ಷಕ ಎನ್.ಲಕ್ಷ್ಮಣಪ್ಪ, ಎಂ,ಕೆ.ಅಂಜನಾಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ?

0

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶುದ್ಧ ನೀರಿನ ಅಗತ್ಯತೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡುಗಳ ಮೂಲಕ ತಿಳಿಸಬೇಕಿದೆ ಎಂದು ಸಾಹಿತಿ ಸ.ರಘುನಾಥ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಈಚೆಗೆ ವಿದ್ಯಾರ್ಥಿಗಳಿಗೆ ಶುದ್ಧ ನೀರಿನ ಹಕ್ಕೊತ್ತಾಯ ಮತ್ತು ಅಸ್ಪೃಶ್ಯತಾ ನಿವಾರಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳಿಗೆ ‘ಹರಿದು ಬರದಿರಲಿ ವಿಷದ ಕೊಳಚೆ, ಹರಿಸಿ ತನ್ನಿ ಶುದ್ಧ ನೀರಿನ ಹೊಳೆ’, ‘ಶುದ್ಧ ನೀರು ಕೊಡಿ, ಬದುಕಿಗೆ ಬೇಸಾಯಕ್ಕೆ’ ಎಂದು ಬರೆದಿರುವ ಒಂದು ಲಕ್ಷ ಅಂಚೆ ಕಾರ್ಡುಗಳನ್ನು ಬರೆದು ಶುದ್ಧ ನೀರಿನ ಹಕ್ಕೊತ್ತಾಯವನ್ನು ಮಾಡಬೇಕು. ಜಿಲ್ಲೆಗೆ ನೀರಿನ ಅಗತ್ಯತೆಯ ಕುರಿತಂತೆ ರೂಪಿಸಿರುವ ಕರಪತ್ರಗಳನ್ನು ತಮ್ಮ ಮನೆಗಳಲ್ಲಿ ತೋರಿಸಿ ವಿವರಿಸಬೇಕು. ಹಸಿರನ್ನು ಉಳಿಸಿ ಬೆಳೆಸಬೇಕು. ಅಸ್ಪೃಶ್ಯತಾ ನಿವಾರಣೆಯು ವಿದ್ಯಾರ್ಥಿಗಳ ಮೂಲಕವೂ ಸಮಾಜಕ್ಕೆ ತಲುಪಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಈ ನಾಡಿಗೆ ಹಾಲು, ರೇಷ್ಮೆ , ಚಿನ್ನ, ತರಕಾರಿ ಮುಂತಾದ ಕೊಡುಗೆಯನ್ನು ಕೊಟ್ಟಿರುವಾಗ, ನಾಡಿನ ನದಿ ನೀರಿನಲ್ಲಿ ಪಾಲನ್ನು ಕೇಳಬಾರದೇ. ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡುಗಳನ್ನು ನೀಡಿ ಅವರಿಂದ ಮುಖ್ಯಮಂತ್ರಿಗಳಿಗೆ ಶುದ್ಧ ನೀರನ್ನು ನೀಡುವಂತೆ ಬರೆಸಲಾಯಿತು.
ಮುಳಬಾಗಿಲು ಡಾ.ಅರಿವು ಶಿವಪ್ಪ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಚಂದ್ರಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಲ ಸಕಾಲದಲ್ಲಿ ಮರುಪಾವತಿಸಿ

0

ಬ್ಯಾಂಕುಗಳಿಂದ ಪಡೆದ ಸಾಲವನ್ನು ನಿಗಧಿತ ಸಮಯದಲ್ಲಿ ಮರುಪಾವತಿ ಮಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ಸಾಲ ಪಡೆಯುವ ಅವಕಾಶ ಪಡೆದುಕೊಂಡು ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದು ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಶಿಡ್ಲಘಟ್ಟ ಡಿಸಿಸಿ ಬ್ಯಾಂಕ್ನಿಂದ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರಿಗೆ ಅವರ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ವಿತರಿಸುವ ವಿಶೇಷ ಯೋಜನೆಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅನುಷ್ಠಾನಗೊಳಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಡಿ.ಸಿ.ಸಿ ಬ್ಯಾಂಕ್ ತಮ್ಮ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ನೀಡುತ್ತಿದ್ದು ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೀರೋ ಅದಕ್ಕಾಗಿಯೇ ಹಣ ಬಳಸಿ ಸಕಾಲದಲ್ಲಿ ಸಾಲ ಮರು ಪಾವತಿಸಬೇಕು. ಇದರಿಂದ ಬ್ಯಾಂಕುಗಳು ಅಭಿವೃದ್ಧಿಯಾಗುತ್ತದೆ ಹಾಗೂ ಮತ್ತೊಬ್ಬರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ ಹಾಗಾಗಿ ಎಲ್ಲರೂ ಸಕಾಲದಲ್ಲಿ ಸಾಲ ಮರು ಪಾವತಿಸಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ಶ್ರೀ ಕಸ್ತೂರಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ೩ ಲಕ್ಷ, ಬಸವೇಶ್ವರ ಮಹಿಳಾ ಸ್ವ ಸಹಾಯ ಸಂಘಕ್ಕೆ ೪ ಲಕ್ಷ ೮೦ ಸಾವಿರ, ಶ್ರೀ ಲಕ್ಷ್ಮೀ ಸ್ವ ಸಹಾಯ ಸಂಘಕ್ಕೆ ೩ ಲಕ್ಷ ೭೫ ಸಾವಿರ, ಶಾಲವಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೪ ಲಕ್ಷ ೫೦ ಸಾವಿರ, ರಾಘವೇಂದ್ರ ಮಹಿಳಾ ಸ್ವ ಸಹಾಯ ಸಂಘಕ್ಕೆ ೪ ಲಕ್ಷ ೫೦ ಸಾವಿರ, ಚಾಮುಂಡೇಶ್ವರಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೩ ಲಕ್ಷ ೮೪ ಸಾವಿರ, ದುರ್ಗಾ ಪರಮೇಶ್ವರಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೬೬ ಸಾವಿರ, ಕಾಳಿಕಾಂಭ ಮಹಿಳಾ ಸ್ವಸಹಾಯ ಸಂಘಕ್ಕೆ ೧ ಲಕ್ಷ ೪ ಸಾವಿರ, ವರಲಕ್ಷ್ಮಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೨ ಲಕ್ಷ ೬೫ ಸಾವಿರ, ಶ್ರೀ ಭಾರತಾಂಬೆ ಮಹಿಳಾ ಸ್ವ ಸಹಾಯ ಸಂಘಕ್ಕೆ ೮೪ ಸಾವಿರ, ಶ್ರೀ ಆಂಜನೇಯಸ್ವಾಮಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೯೯ ಸಾವಿರ, ನಾಗಮಂಗಲ ಗ್ರಾಮದ ಶ್ರೀ ಲಕ್ಷ್ಮಿನಂದಿ ಮಹಿಳಾ ಸ್ವ ಸಹಾಯ ಸಂಘಕ್ಕೆ ೧ ಲಕ್ಷ ೬೦ ಸಾವಿರ ಹಾಗೂ ಬೆಳ್ಳೂಟಿ ಗ್ರಾಮದ ಶ್ರೀ ಲಕ್ಷ್ಮೀ ಮಹಿಳಾ ಸ್ವ ಸಹಾಯ ಸಂಘಕ್ಕೆ ೨ ಲಕ್ಷ ೮೫ ಸಾವಿರ ಸೇರಿದಂತೆ ಒಟ್ಟು ೩೫ ಲಕ್ಷ ೨ ಸಾವಿರ ರೂ ಗಳ ಸಾಲ ವಿತರಣೆ ಮಾಡಲಾಯಿತು.
ಶಿಡ್ಲಘಟ್ಟ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಆರ್.ಲಿಂಗರಾಜು, ವ್ಯವಸ್ಥಾಪಕ ಎಸ್.ಆನಂದ ಮಳಮಾಚನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ನಿರ್ದೇಶಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಜೀತ ಪದ್ಧತಿ ಇನ್ನೂ ನಿರ್ಮೂಲವಾಗಿಲ್ಲ

0

ಮೀಸಲಾತಿಯು ಪೂರ್ಣಪ್ರಮಾಣದಲ್ಲಿ ಸದ್ಭಳಕೆಯಾಗುತ್ತಿಲ್ಲ. ಜೀತ ಪದ್ಧತಿ ಇನ್ನೂ ನಿರ್ಮೂಲವಾಗಿಲ್ಲ ಎಂದು ಜೀವಿಕ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಘಟನೆಯಿಂದ ನಡೆದ ದಲಿತ ಯೋಧರ ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ತಮಟೆ ಪ್ರೋತ್ಸಾಹ ಕಮಿಟಿಯು ದಲಿತರ ಕಲೆಯನ್ನು ಉತ್ತೇಜಿಸುವ ಕಾರ್ಯ ಮಾಡಲಿದೆ. ದಲಿತರು ಶತಮಾನಗಳ ಕಾಲ ಶೋಷಣೆಯನ್ನು ಅನುಭವಿಸಿದ್ದಾರೆ. ಈಚೆಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ದಲಿತರು ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ್ದರೂ ಕೆಲವರಿಗಷ್ಟೇ ಮೀಸಲಾತಿ ಲಭಿಸುತ್ತಿರುವುದು ದುರದೃಷ್ಟಕರ.
ತಮಟೆ ವಾದ್ಯವು ಸಂತಸ ಮತ್ತು ದುಃಖದ ಕಾರ್ಯಕ್ರಮಗಳಲ್ಲೆಲ್ಲಾ ಬಳಕೆಯಲ್ಲಿದೆ. ಅದರ ಅವಶ್ಯಕತೆಯು ನಾನಾ ಕಾರ್ಯಕ್ರಮಗಳಲ್ಲಿದ್ದರೂ ಕಲಾವಿದರಿಗೆ ಸೂಕ್ತ ಸಂಭಾವನೆ ದೊರಕುತ್ತಿಲ್ಲ. ಕಲಾವಿದರಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಆರ್ಥಿಕವಾಗಿ ಸಹಾಯ ಮಾಡುವ ಅಗತ್ಯವಿದೆ ಎಂದು ಹೇಳಿದರು.
ತಮಟೆ ಕಲಾವಿದ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರು ತಮಟೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಕೀಲರಾದ ರಾಮಕೃಷ್ಣ, ಮೋಹನ್ ದಾಸ್, ಉಪನ್ಯಾಸಕ ಮೂರ್ತಿ, ಜೀವಿಕ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ, ತಾಲ್ಲೂಕು ಸಂಚಾಲಕ ರವಿಕುಮಾರ್, ಈಧರೆ ತಿರುಮಲ ಪ್ರಕಾಶ್, ತಮಟೆ ಕಲಾವಿದರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೊಸವರ್ಷದ ಸಂಭ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ಹೊಸವರ್ಷದ ಮೊದಲ ದಿನದ ಪ್ರಯುಕ್ತ ಸುದರ್ಶನ ಹೋಮ ಮತ್ತು ಮೃತ್ಯುಂಜಯ ಹೋಮವನ್ನು ನಡೆಸಲಾಯಿತು.

ಜಕಣಾಚಾರ್ಯರ ಸಂಸ್ಮರಣ ದಿನ

0

ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣ ದಿನವನ್ನು ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿರುವುದರಿಂದ ಶುಕ್ರವಾರ ವಿಶ್ವಕರ್ಮ ಜನಾಂಗದವರು ಬಸ್ ಮೂಲಕ ತೆರಳಿದರು.
ಕಾಳಿಕಾಂಬ ಕಮಠೇಶ್ವರ ದೇವಾಲಯದ ಬೆಳಿಗ್ಗೆ ಬಳಿ ಸೇರಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವಿಶ್ವಕರ್ಮ ಜನಾಂಗದವರು ತಮ್ಮ ಜನಾಂಗದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಸ್ಮರಣ ದಿನವನ್ನು ಯಶಸ್ವಿಗೊಳಿಸಲು ಹೊರಟರು.
ವಿಶ್ವಕರ್ಮ ತಾಲ್ಲೂಕು ಸಂಘದ ಅಧ್ಯಕ್ಷ ಅಮರನಾರಾಯಣಾಚಾರಿ, ಗೌರವಾಧ್ಯಕ್ಷ ಜನಾರ್ಧನಮೂರ್ತಿ, ಕಾಳಿಕಾಂಬ ಕಮಠೇಶ್ವರ ದೇವಾಲಯದ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ, ಉಪಾಧ್ಯಕ್ಷ ಈಶ್ವರಾಚಾರಿ, ಯುವಕರ ಸಂಘದ ಅಧ್ಯಕ್ಷ ರಾಘವೇಂದ್ರ, ಜಗದೀಶ್, ಗೋಪಿ, ಸುಂದರಾಚಾರಿ, ಶರತ್, ರಾಜೇಶ್, ನಾಗೇಶಾಚಾರಿ, ಮಾಣಿಕ್ಯಾಚಾರಿ, ಶ್ರೀಕರ, ನಾರಾಯಣಸ್ವಾಮಿ, ವಿನಯ್ ಮತ್ತಿತರರು ಹಾಜರಿದ್ದರು.

ಪರಿಸರ ಕಾಪಾಡಿಕೊಳ್ಳಲು ಪ್ರಯತ್ನಿಸಿ

0

ದೇಹ ಮತ್ತು ಮಾನಸಿಕ ಆರೋಗ್ಯದ ಜೊತೆಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡಲ್ಲಿ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಅನಿವಾಸಿ ಭಾರತೀಯ ಕನ್ನಡ ಲೇಖಕಿ ಪಿ.ಆರ್.ಮೀರಾ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಮಕ್ಕಳಿಗೆ ಸಿಹಿ ಹಂಚಿ ಅವರು ಮಾತನಾಡಿದರು.
ನಮ್ಮ ಬದುಕು ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುವುದರಿಂದ ಪರಿಸರವನ್ನು ಚೆನ್ನಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಮಕ್ಕಳು ಕಥೆಗಳನ್ನು ಕೇಳಬೇಕು ಮತ್ತು ಓದಬೇಕು. ಅದರಿಂದ ಕಲ್ಪನಾ ಶಕ್ತಿ ವಿಸ್ತಾರಗೊಳ್ಳುತ್ತದೆ ಮತ್ತು ತಪ್ಪು ಒಪ್ಪುಗಳ ತಿಳುವಳಿಕೆ ಮೂಡುತ್ತದೆ. ಪ್ರತಿಯೊಂದು ಕ್ಷಣದಲ್ಲೂ ಹೊಸತನವಿರುತ್ತದೆ. ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಲ್ಲಿ ಕಳೆದು ಹೋದ ದಿನಗಳ ಬಗ್ಗೆ ಪಶ್ಚಾತ್ತಾಪ ಉಂಟಾಗದು. ಮನಸ್ಸಿನಲ್ಲಿ ಹುಟ್ಟುವ ಆಲೋಚನೆಗಳು ಸದಾ ಒಳಿತಾಗಿರಬೇಕು. ಕೀಳರಿಮೆಯಿಂದ ಕಳಚಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಶಾಲೆಯ ಶಿಕ್ಷಕರಾದ ನಾಗಭೂಷಣ್, ರಾಮಕೃಷ್ಣ, ವೆಂಕಟರೆಡ್ಡಿ, ಶಿವಪ್ಪ, ರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಯುಜಿ-ಪಿಜಿ, ತಳಿಕೆ=ಬಂದಳಿಕೆ?

0

ಸಾಧ್ಯವಾದಷ್ಟು ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಬೇಕು ಎಂಬ ಕಳಕಳಿಯನ್ನು ಎಲ್ಲರೂ ಮೆಚ್ಚುವಂತಹದ್ದೇ. ಆ ಒಂದು ಉದ್ದೇಶದಿಂದಲೇ ಇಂದು ತಾಲ್ಲೂಕು ಮತ್ತು ಕೆಲವು ಹೋಬಳಿ ಮಟ್ಟದಲ್ಲೂ ಸರಕಾರ ಪದವಿ ಕಾಲೇಜುಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಆಯಾ ಪ್ರದೇಶಗಳ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಬಿ.ಎ., ಬಿ.ಕಾಂ., ಬಿ.ಬಿ.ಎಂ. ಮತ್ತು ಬಿ.ಎಸ್ಸಿ, ಪದವಿಗಳನ್ನು ಪ್ರಾರಂಭಿಸಲಾಗಿದೆ. ಹೀಗೆ ಯು.ಜಿ. (Under graduate) ಗಳು ಹೇಗೋ ಸಾಗುತ್ತಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ಪದವಿ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವ ದೃಷ್ಠಿಯಿಂದ ಅವುಗಳಲ್ಲಿ ಪಿ.ಜಿ. (Post Graduate) ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಒಮ್ಮೆಗೆ ಎಲ್ಲರಿಗೂ ಅವರವರು ಇರುವಲ್ಲೆ ಸ್ನಾತಕೋತ್ತರ ಶಿಕ್ಷಣ ದೊರಕುವಂತಾಗಬೇಕೆಂಬ ಆಸೆ ಸರಕಾರಕ್ಕೀರುವುದರಲ್ಲಿ ಯಾವುದೇ ದುರುದ್ದೇಶವಿಲ್ಲ. ಆದರೆ ಅದಕ್ಕನುಗುಣವಾಗಿ ಸಿದ್ಧತೆ ಇರದೇ ಹೋದರೆ ಅದು ಉದ್ದೇಶದ ಮೂಲತತ್ವಕ್ಕೆ ಧಕ್ಕೆ ನೀಡಬಹುದಾದ ಅಪಾಯವಿದೆ.
ಯು.ಜಿ. ಯೊಂದಿಗೆ ಪಿ.ಜಿ. ಗಳನ್ನು ತಳಿಕೆ ಹಾಕುತ್ತಾ ಹೋಗುವುದರಿಂದ ನಾವು ಅನೇಕ ಸ್ನಾತಕೋತ್ತರ ಶಿಕ್ಷಣ ಪಡೆದವರು ಪಡೆದ ಜ್ಞಾನ ಮತ್ತು ವ್ಯಕ್ತಿತ್ವವನ್ನು ಪ್ರಸ್ತುತ ಸನ್ನಿವೇಶದಲ್ಲಿ ಅವಲೋಕಿಸುತ್ತಲೇ ಅವಶ್ಯಕವಾದ ವಾತಾವರಣದ ಸೃಷ್ಠಿಯನ್ನು ಮಾಡುವತ್ತಾ ಮನ ಮಾಡಬೇಕಿದೆ.
ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ್ಕೋತರ ಅಧ್ಯಾಯನಕ್ಕೆ ಅಗತ್ಯವಾದ ವಾತಾವರಣವಿರುತ್ತದೆ. ಅಲ್ಲಿ ಅವರಷ್ಟೆ ಅಧ್ಯಯನದಲ್ಲಿ ತೊಡಗಿರುತ್ತಾರೆ. ಅವರಿಗೆ ಅಲ್ಲಿ ಅಗತ್ಯವಿರುವಷ್ಟು ಶಿಕ್ಷಕರ ಲಭ್ಯತೆ ಇದ್ದು, ಮಾರ್ಗದರ್ಶನಕ್ಕೆ ಕೊರತೆ ಇರುವುದಿಲ್ಲ. ಇದಕ್ಕೆ ಪೂರಕವಾಗಿ ಸುಸಜ್ಜಿತವಾದ ಗ್ರಂಥಾಲಯ ಸೌಲಭ್ಯ-ವಸತಿ ನಿಲಯಗಳ ಸೌಲಭ್ಯ ಎಲ್ಲವೂ ಒಂದೇ ಕ್ಯಾಂಪಸ್‍ನಲ್ಲಿ ಲಭ್ಯ. ಅದೂ ಅಲ್ಲದೇ ಅಲ್ಲಿನ ವಿಭಾಗಗಳಲ್ಲಿ ಹೊರಗಡೆಯಿಂದ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿಚಾರ ಸಂಕಿರಣ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಯುತ್ತಿರುತ್ತಾರೆ. ಹೀಗಾಗಿ ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ದೊರಕುವುದೂ ಅಲ್ಲದೇ ಅವರ ವ್ಯಕ್ತಿತ್ವ ವಿಕಸನಕ್ಕೆ ಅವು ಪೂರಕವಾಗಿರುತ್ತವೆ. ಡಾಕ್ಟರೇಟ್ ಆದ ಶಿಕ್ಷಕ ವೃಂದ-ಉತ್ತಮ ಗ್ರಂಥಾಲಯ-ಮಾರ್ಗದರ್ಶನ ಅವರಿಗೆ ಲಭ್ಯವಾಗುತ್ತಿರುತ್ತದೆ. ಆದರೆ ಯು.ಜಿ. ಪ್ರಾರಂಭಿಸಿದ ಪಿ.ಜಿ. ಗಳಲ್ಲಿ?
ಯಾವ ಯಾವುದೋ ಒತ್ತಡಕ್ಕೊಳಗಾಗಿ ಪದವಿ ಕಾಲೇಜು ಪ್ರಾರಂಭಿಸಿದ ಪಿ.ಜಿ.ಗಳ ವ್ಯವಸ್ಥೆ ಭಗವಂತನಿಗೆ ಪ್ರೀತಿ (ಅಪವಾದಗಳು ಇರಬಹುದು!) ನುರಿತ ಅಧ್ಯಾಪಕರ ಕೊರತೆ ಒಂದಡೆಯಾದರೆ-ಕೊಠಡಿಗಳ ಸಮಸ್ಯೆ ಒನ್ನೊಂದೆಡೆ ಪ್ರತ್ಯೇಕ ಗ್ರಂಥಾಲಯ ಸೌಲಭ್ಯ ಇರುವುದಿಲ್ಲ. ವಸತಿ ನಿಲಯಗಳ ಸಮಸ್ಯೆಯಂತೂ ಇದ್ದದ್ದೇ ಹಾಗಾಗಿ ಒಟ್ಟಾರೆ ಅವರು ತೆರೆದುಕೊಳ್ಳುವ ವಾತಾವರಣ ಕೇವಲ ಪದವಿ ಕಾಲೇಜಿನ ವಾತಾವರಣವೇ ವಿನಃ ವಿಶ್ವವಿದ್ಯಾಲಯದ ವಾತಾವರಣವಲ್ಲ. ವ್ಯಕ್ತಿತ್ವ ಅರಳುವುದು ಕೇವಲ ಪುಸ್ತಕದ ಓದಿನಿಂದಷ್ಟೆ ಸಾಧ್ಯವಿಲ್ಲ. ಅದಕ್ಕನುಗುಣವಾದ ವಾತಾವರಣ ಕೂಡ ಬಹಳ ಮುಖ್ಯ ಬಹುಶಃ ತಾವು ಗಮನಿಸಬಹುದಾದರೆ ಅಥವಾ ಗಮನಿಸಿದ್ದರೆ-ನೋಡಿ ಹೈಸ್ಕೂಲಿನ ಜೊತೆಗೆ ತಳಿಕೆ ಹಾಕಿಕೊಂಡು ಪಿಯುಸಿ ಓದಿದ ಮಕ್ಕಳು, ಸ್ವತಂತ್ರ್ಯವಾಗಿ ಪಿಯುಸಿ ಓದಿದ ಮಕ್ಕಳು, ಪದವಿ ಕಾಲೇಜುಗಳೊಂದಿಗೆ ತಳಿಕೆ ಹಾಕಿಕೊಂಡ ಪಿಯುಸು ಮಕ್ಕಳು ಇವರ ನಡಾವಳಿಕೆಗಳನ್ನು ಗಮನಿಸಿದ್ದವರಿಗೆ ನನ್ನ ಮಾತುಗಳು ಹೆಚ್ಚು ಸ್ಪಷ್ಟವಾಗಬಹುದು.
ಯಾವುದೇ ಸೌಲಭ್ಯಗಳನ್ನು ನೀಡದೇ ಒಟ್ಟಾರೆ ಯು.ಜಿ.ಯೊಂದಿಗೆ ಪಿ.ಜಿ.ಗಳನ್ನು ತಳಿಕೆ ಹಾಕಿದರೆ–ಅಲ್ಲಿ ಅದು ಸ್ನಾತಕೋತ್ತರ ಪದವಿಯಾಗುವುದುಕ್ಕೆ ಬದಲಾಗಿ ನಾಲ್ಕು ಮತ್ತು ಐದನೇ ವರ್ಷದ ಪದವಿಗಷ್ಟೆ ಆಗಿಬಿಡಬಹುದಾದ ಅಪಾಯವಿದೆ. ಸೂಕ್ತ ಶಿಕ್ಷಕರ ಕೊರತೆ ಕೂಡ ಇದಕ್ಕೆ ಕಾರಣ.
ಇಂದು ಪದವಿ ಕಾಲೇಜುಗಳಲ್ಲಿರುವ ಡಾಕ್ಟರೇಟ್ ಆದ ಒಬ್ಬರೋ ಇಬ್ಬರೋ ಅಲ್ಲಿ ನಿಗದಿಗೊಳಿಸಿದ ಸ್ನಾತಕೋತ್ತರ ಕೇಂದ್ರಗಳಲ್ಲಿ ಇದ್ದಲ್ಲಿ ಅವರಲ್ಲಿ ಸಂಯೋಜಕರಾಗಿದ್ದು-ಅವರುಗಳ ಬಹಳಷ್ಟು ಸಮಯ ವಿಶ್ವವಿದ್ಯಾಲಯ, ಸರ್ಕಾರ, ಇಲಾಖೆಗಳೊಂದಿಗೆ ವ್ಯವಹರಿಸುವುದರಲ್ಲೆ ವ್ಯಯವಾಗುತ್ತದೆ. ಈಗಂತೂ ಯು.ಜಿ. ಗೇ ಸಾಕಷ್ಟು ಶಿಕ್ಷಕರಿರದೇ ಅತಿಥಿ ಉಪನ್ಯಾಸಕರನ್ನು ತಾತ್ಕಲಿಕವಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅನುಭವದ ಕೊರತೆ, ಅನುಭವವು ಇರುವವರಿಗೆ ಯು.ಜಿ. ಮತ್ತು ಪಿ.ಜಿ. ಎರಡನ್ನು ನಿಭಾಯಿಸುವುದು ಕಷ್ಟ. ಇದು ಕೇವಲ ಮೂರು ಮೊಳದ ಬಟ್ಟೆಯಲ್ಲಿ ಮರ್ಯಾದೆ ಮುಚ್ಚುವಂತಹ ಕಸರತ್ತಾಗಿ ಬಿಡುತ್ತದೆ. ಮೇಲಕ್ಕೆಳೆದರೆ ಕೆಳಕ್ಕೆ ಖಾಲಿ-ಕೆಳಕ್ಕೆಳೆದರೆ ಮೇಲಕ್ಕೆ ಖಾಲಿ ಎರಡು ಕಡೆ ನ್ಯಾಯ ಒದಗಿಸಬೇಕಾದರೆ ಎರಡು ಕಡೆಗಳಿಗೆ ಸಾಲುವಷ್ಟು ಶಿಕ್ಷಕರ ನೇಮಕವಾಗಬೇಕು. ಪದವಿ ಕಾಲೇಜುಗಳಲ್ಲಿ ಆದರೂ ಸ್ನಾತಕೋತ್ತರ ಪದವಿ ಕೇಂದ್ರಗಳಿಗೇ ಪ್ರತ್ಯೇಕವಾದ ಕಟ್ಟಡ-ಸಾಕಷ್ಟು ಕೊಠಡಿಗಳು ಮತ್ತು ಸುಸಜ್ಜಿತ ಗ್ರಂಥಾಲಯದ ಸ್ಥಾಪನೆಯಾಗಬೇಕು. ಹಾಗಾದರೆ ಸಮಸ್ಯೆ ಒಂದಿಷ್ಟು ಬಗೆಹರಿದೀತು.
2ಯುಜಿಗಳಲ್ಲಿನ ಪಿಜಿಗಳು ಸ್ವತಂತ್ರ್ಯವಲ್ಲ. ಅವು ಪದವಿ ಕಾಲೇಜುಗಳು ಸಂಲಗ್ನಗೊಂಡ ವಿಶ್ವವಿದ್ಯಾಲಯಗಳಿಗೆ ಅಧೀನ ಆಯಾ ವಿಶ್ವವಿದ್ಯಾಲಯಗಳ ವಿಭಾಗಗಳಿಗೆ ನಿಗದಿ ಪಡಿಸಿದ ಪಠ್ಯಗಳನ್ನೆ ಇಲ್ಲೂ ಬೋಧಿಸಬೇಕು. ಅಲ್ಲಿ ಅವರು ಅವರ ಅನುಕೂಲಕ್ಕೆ ತಕ್ಕಂತೆ ತಯಾರಿಸಿದ ಪ್ರಶ್ನೆಪತ್ರಿಕೆಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಉತ್ತರಿಸಬೇಕು. ಅವುಗಳ ಮೌಲ್ಯ ಮಾಪನ ಕೂಡ ವಿಶ್ವವಿದ್ಯಾಲಯಗಳ ಶಿಕ್ಷಕರಿಂದ ಮಾತ್ರ. ಹೀಗಾದಾಗ ಸಹಜವಾಗಿ ಸೌಲಭ್ಯವುಳ್ಳ ಮತ್ತು ಸೌಲಭ್ಯವಿರದ ವಿದ್ಯಾರ್ಥಿಗಳ ನಡುವೆ ಸ್ಪಷ್ಟ ಅಂತರ ಏರ್ಪಡುತ್ತಾ ಹೋಗುವುದು ಸಹಜ. ವಿಶ್ವವಿದ್ಯಾಲಯದವರು ಅವರ ಮಟ್ಟದಲ್ಲೇ ಯೋಜನೆ ಮಾಡಿದರೆ-ಆ ಮಟ್ಟಕ್ಕೇರದ ಇಲ್ಲಿನ ವಿದ್ಯಾರ್ಥಿಗಳಿಗೆ ಕೀಳರಿಮೆ ಕಾಡಬಹುದು. ಇದನ್ನೆಲ್ಲ ಪ್ರಾಮಾಣಿಕವಾಗಿ ಪರಿಶೀಲಿಸುವ ತುರ್ತು ಇದೆ.
ಇನ್ನೂ ಯುಜಿ ಯೊಂದಿಗೆ ಪಿ.ಜಿ.ಗಳನ್ನು ತಳಿಕೆ ಹಾಕಿ ಆಯಾ ಪ್ರದೇಶಗಳಲ್ಲೇ ಸ್ನಾತಕೋತ್ತರ ಶಿಕ್ಷಣ ಲಭ್ಯವಾಗುತ್ತದೆಂದಾಗ ಅದರ ಗರಿಷ್ಠ ಪ್ರಯೋಜನವನ್ನು ಪಡೆಯುವವರು ವಿದ್ಯಾರ್ಥಿನಿಯರು ಹೆಚ್ಚಿನ ಅಂಕಗಳಿಸಿ ಪದವಿ ಪೂರೈಸಿದ ವಿದ್ಯಾರ್ಥಿನಿಯರು ಮನೆಯಲ್ಲಿದ್ದೇನು ಮಾಡುವುದು ಹೇಗೋ ಇಲ್ಲೆ ಪಿ.ಜಿ. ಇದೆ ಎಂದು ಸೇರಿದರೆ ಅದು ಅವರು ಹೊತ್ತು ಕಳೆಯಲು ಕಂಡು ಕೊಳ್ಳುವ ಸುಲಭ ಉಪಾಯವಾಗಬಹುದು. ನಿಜಕ್ಕೂ ಆಸಕ್ತಿವುಳ್ಳ ಸ್ವಲ್ಪ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಇಲ್ಲಿ ಜಾಗೆ ಸಿಗದೇ ಇನ್ನೆನೇನೋ ಕೆಲಸಗಳಲ್ಲಿ ತೊಡಗಿಸಿಬಿಡಬಹುದು. ಹೊತ್ತು ಹೋಗದೇ ಹವ್ಯಾಸಕ್ಕಾಗಿ ಬರುವವರೇ ಅಧಿಕವಾದರೆ ಆಸಕ್ತಿ ಇರುವವರ ಆಸಕ್ತಿಯನ್ನು ಒತ್ತಿಸಿದರೆ? ಒಟ್ಟಾರೆ ವಾತಾವರಣದ ಪ್ರಭಾವವನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಂತ ಅಪವಾದಗಳಿರುವುದಿಲ್ಲವೆಂದಲ್ಲ ಆದರೆ ಅಪವಾದಗಳನ್ನೆ ಎಂದಿಗೂ ವ್ಯಾಖ್ಯಾ ಎಂದು ಪರಿಗಣಿಸಲಾಗುವುದಿಲ್ಲ.
ಯುಜಿಗಳೊಂದಿಗಿನ ಪಿಜಿಗಳು ಪ್ರತಿವರ್ಷ ಬಹಳಷ್ಟು ಸ್ನಾತಕೋತ್ತರ ಪದವೀಧರರನ್ನು ಸಮಾಜಕ್ಕೆ ನೀಡಬಹುದು. ನಾವು ಹೆಚ್ಚು ಹೆಚ್ಚು ಜನರಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆ ಕುರಿತು ದಾಖಲೆಗಳನ್ನು ನೀಡಬಹುದು. ಆದರೆ ಯಾವತ್ತೂ ಉತ್ಪಾದನೆ ಬೇಡಿಕೆಯಾಧಾರಿತವಾಗಿರಬೇಕು. ರಾಶ್ಯುತ್ಪನ್ನ ಮಾಡಿ ಗಿರಾಕಿಗಳಿಲ್ಲದ್ದಿದ್ದಲ್ಲಿ ಅದು ದಿವಾಳಿತನಕ್ಕೆ ದಾರಿ ಮಾಡಿಕೊಡಬಲ್ಲದು. ಉತ್ಪನ್ನದ ವಿನಿಯೋಗ ಮತ್ತು ವಿತರಣೆ ಸಮರ್ಪಕವಾಗಿ ಆದಾಗಲೇ ಉತ್ಪನ್ನಕ್ಕೊಂದು ಬೆಲೆ ಬರುತ್ತದೆ ಎಂಬ ಸರಳ ಸತ್ಯವನ್ನು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಉದಾಹರಣೆಗೆ ಹೇಳುವುದಾದರೆ ತಾಲ್ಲೂಕು ಕೇಂದ್ರವಾದ ಸಾಗರ ಒಂದರಲ್ಲೇ ಎರಡು ಪದವಿ ಕಾಲೇಜುಗಳಲ್ಲಿ ಎಂ.ಕಾಂ. ಕಲಿಕೆಯ ಸೌಲಭ್ಯವಿದೆ. ಒಳ್ಳೆಯದೇ ಆದರೆ ಪ್ರತಿ ವರ್ಷ ಇವುಗಳಿಂದ ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯೋಗದ ಸಮಸ್ಯೆಗೆ ಉತ್ತರ ಸರಳವಾಗಿಲ್ಲ. ಸ್ನಾತಕೋತ್ತರ ಪಡೆದವರು ಅದಕ್ಕನುಗುಣವಾದ ಉದ್ಯೋಗವನ್ನು ನಿರೀಕ್ಷಿಸಿರುತ್ತಾರೆ. (ಅದೂ ತಪ್ಪು ಇರಬಹುದು) ಆದರೆ ಅದಕ್ಕನುಗುಣವಾಗಿ ಉದ್ಯೋಗ ದೊರಕದಿದ್ದಾಗ ಅವರೆಲ್ಲ ಅವರಿಗೆ ಶಿಕ್ಷಣ ನೀಡಿದ ಸರ್ಕಾರವನ್ನೇ ದೂಷಿಸುತ್ತಾರೆ ಅಥವಾ ಉದ್ಯೋಗ ದೊರಕದ ನಿರಾಶೆಯಿಂದ ಖಿನ್ನತೆಯ ಮುಖ ಹೊತ್ತು ಬೇರೆ ಬೇರೆ ಕಡೆ ಸೇರಿಕೊಳ್ಳುತ್ತಾರೆ. ಸಿಕ್ಕದ್ದನ್ನು ಪ್ರೀತಿಸದೇ-ಸಿಗದಿದ್ದುದ್ದಕ್ಕೆ ಹಪಹಪಿಸುತ್ತಾ ಮನಃ ಶಾಂತಿಯನ್ನು ಕಳೆದುಕೊಂಡ ಅತೃಪ್ತ ಗುಂಪೊಂದು ಸಮಾಜದಲ್ಲಿ ನಮ್ಮರಿವಿಗೆ ಬಾರದಂತೆ ಸೃಷ್ಟಿಯಾಗುತ್ತಾ ಹೋಗುವ ಸಾಧ್ಯತೆಗಳಿವೆ.
ಯುಜಿ ಯೊಂದಿಗೆ ಪಿಜಿ ತಳಿಕೆ ಹಾಕಿದರೆ ತಪ್ಪಲ್ಲ. ಆದರೆ ಅದಕ್ಕೆ ಅನುಗುಣವಾದ ಅವಶ್ಯಕತೆಗಳ್ನು ಪೂರೈಸಿಕೊಡದಿದ್ದಲ್ಲಿ ಪರಿಣಾಮದಲ್ಲಿ ಹೊರಬರುವ ಪ್ರತಿಭೆಗಳು ಬಂದಳಿಕೆಗಳಾಗುವ ಅಪಾಯವಿದೆ. ಅವರವರು ಅವರ ಕಾಲ ಮೇಲೆ ನಿಲ್ಲುವಂತಹ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವುದು ಇದಕ್ಕಿಂತ ಉತ್ತಮವೇನೋ? ಇದರೊಟ್ಟಿಗೆ ಚಿಂತಿಸಬೇಕಾದ ಇನ್ನೊಂದು ಅಂಶವೆಂದರೆ – ಒಂದೆಡೆ ರಾಶ್ಯುತ್ಪನ್ನ-ಇನ್ನೊಂದೆಡೆ ಗುಣಮಟ್ಟ-ಇವೆರಡನ್ನು ಸಂಬಾಳಿಸಿಕೊಂಡು ಪ್ರಗತಿ ಸಾಧಿಸುವತ್ತಾ ಕಾರ್ಯತತ್ಪರವಾಗುವುದು ಕಷ್ಟವಾದರೂ ಅಗತ್ಯವೆನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಲವೇ?
ರವೀಂದ್ರ ಭಟ್ ಕುಳಿಬೀಡು

ಹಾವು ಕಚ್ಚಿ ಮಹಿಳೆ ಸಾವು

0

ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಚಿಕ್ಕತೇಕಹಳ್ಳಿ ಗ್ರಾಮದ ಮಹಿಳೆ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಚಿಕ್ಕತೇಕಹಳ್ಳಿ ಗ್ರಾಮದ ವಾಸಿ ಜಯಮ್ಮ(40) ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಸೋಮವಾರ ಗ್ರಾಮದಲ್ಲಿ ಹೊಲ ಕೊಯ್ಯಲು ಕೂಲಿಗಾಗಿ ಹೋಗಿದ್ದಾಗ ಹಾವು ಕಡಿದಿದೆ. ತಕ್ಷಣ ಗ್ರಾಮಸ್ಥರು ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದು ಅದು ಫಲಿಸದೇ ಬುಧವಾರ ರಾತ್ರಿ ಜಯಮ್ಮ ಮೃತಪಟ್ಟಿದ್ದಾರೆ.
ಜಯಮ್ಮ ಅವರ ಗಂಡ ನಾಲ್ಕು ತಿಂಗಳ ಹಿಂದೆಯಷ್ಟೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಇವರಿಗೆ ಸ್ವಂತ ಜಮೀನಾಗಲೀ ಮನೆಯಾಗಲೀ ಇರಲಿಲ್ಲ. ಇವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರು ಪದವೀದರರಾಗಿದ್ದು, ಮತ್ತೊಬ್ಬರು ಪದವಿ ವ್ಯಾಸಂಗ ನಡೆಸುತ್ತಿದ್ದಾರೆ. ತಂದೆ ಮತ್ತು ತಾಯಿಯ ಅಗಲಿಕೆಯಿಂದಾಗಿ ಅನಾಥರಾದ ಹೆಣ್ಣು ಮಕ್ಕಳು ದಿಕ್ಕುತೋಚದಂತಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿಯ ಶವದ ಮುಂದೆ ಈ ಇಬ್ಬರು ಹೆಣ್ಣುಮಕ್ಕಳ ರೋಧನ ಮನಕಲಕುವಂತಿತ್ತು.

ತಾಲ್ಲೂಕು ಮಟ್ಟದ ಕಲಿಕೋತ್ಸವ

0

‘ಮಣ್ಣಲ್ಲಿ ದುಡಿಯುತ, ಬಿಸಿಲಲ್ಲಿ ಬೇಯುತ, ಮಳೆಯಲ್ಲಿ ನಡುಗುತ, ದುಡಿಯುವವ. ಅವ ಮಾನವನಲ್ಲ. ನಮ್ಮನ್ನು ಕಾಯಲು ಬಂದ ದೇವದೂತ’ ಎಂದು ಮಾತನಾಡಿದ್ದು ಭಾಷಣಕಾರರಲ್ಲ. ಐದನೇ ತರಗತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಯ ಭಾಷಣದ ಸಾಲುಗಳಿವು.
‘ರೈತ ನಮ್ಮ ದೇಶದ ಬೆನ್ನೆಲುಬು’ ಎಂಬ ವಿಷಯದ ಬಗ್ಗೆ ಮಾತನಾಡಿದ ಚರಣ್, ಬಶೆಟ್ಟಹಳ್ಳಿ ಹೋಬಳಿಯ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ. ರೈತನ ಬದುಕು, ದೇಶದ ಸ್ಥಿತಿ, ರೈತನ ಕಷ್ಟ, ಆತ್ಮಹತ್ಯೆ ಮತ್ತು ಪರಿಹಾರದ ಬಗ್ಗೆ ಪುಟ್ಟ ಬಾಲಕ ನಿರರ್ಗಳವಾಗಿ ಮಾತನಾಡುತ್ತಿದ್ದರೆ, ಹಿರಿಯರೂ ಕೂಡ ತಲೆದೂಗುವಂತಿತ್ತು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಓದು, ಬರಹ ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ವಿಧ ವಿಧವಾದ ಸ್ಪರ್ಧೆಗಳ ಮೂಲಕ ಪ್ರದರ್ಶಿಸಿದರು.
ತಾಲ್ಲೂಕಿನಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಿ ಆಯ್ಕೆಯಾದವರಿಗೆ ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ವಿಜೇತರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ. ಒಂದರಿಂದ ಎಂಟನೆ ತರಗತಿಯ 750 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಓದು, ಬರಹ ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರು ಕರೆತಂದಿದ್ದರು.
ತಾಲ್ಲೂಕು ಮಟ್ಟದ ಕಲಿಕೋತ್ಸವಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ‘ಶಾಲೆಯಲ್ಲಿ ಮಕ್ಕಳು ಕಲಿಯುತ್ತಿರುವ ವಿಷಯಗಳನ್ನು ಅಭಿವ್ಯಕ್ತಿಸಲು, ಗುಣಾತ್ಮಕವಾದ ಕಲಿಕೆಗೆ ಪ್ರೇರೇಪಿಸಲು ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಗುತ್ತಿದೆ. ಪರೋಕ್ಷವಾಗಿ ಮಕ್ಕಳನ್ನು ಕಲಿಯಲು ಪ್ರೋತ್ಸಾಹಿಸುವುದು, ಸ್ಪರ್ಧಾ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳಿಗೆ ಕಲಿಕೆಯು ಹೊರೆಯಾಗಬಾರದು. ಶಿಕ್ಷಣ ಒತ್ತಾಯವಾಗಿರದೆ ಉತ್ಸಾಹ ತುಂಬಬೇಕೆಂಬುದು ಆಶಯವಾಗಿದೆ’ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಮಾ, ಕ್ಷೇತ್ರ ಸಹಾಯಕ ನಿರ್ದೇಶಕ ರಂಗಪ್ಪ, ನಾರಾಯಣಸ್ವಾಮಿ, ಶ್ರೀರಾಮಯ್ಯ, ಸುಂದರಾಚಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜಕಣಾಚಾರ್ಯರ ಸಂಸ್ಮರಣ ದಿನ

0

ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣ ದಿನವನ್ನು ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ಜನವರಿ 1 ರ ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಶಿಡ್ಲಘಟ್ಟದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಳಿಕಾಂಬ ಕಮಠೇಶ್ವರ ದೇವಾಲಯದಿಂದ ಬೆಳಿಗ್ಗೆ 8 ಗಂಟೆಗೆ ಹೊರಡಲಿದ್ದು ವಿಶ್ವಕರ್ಮ ಜನಾಂಗದವರು ಭಾಗವಹಿಸುವಂತೆ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಕೋರಿದ್ದಾರೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಜನವರಿ 3 ರ ಭಾನುವಾರದಂದು ಅಶೋಕ ರಸ್ತೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 3.30ರವರೆಗೆ ತಾಲ್ಲೂಕು ಬಿಜೆಪಿ ಘಟಕ ಹಾಗೂ ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಫಿಸಿಷಿಯನ್, ಹೃದ್ರೋಗ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ನರರೋಗ ತಜ್ಞರು, ಸ್ತ್ರೀ ಮತ್ತು ಪ್ರಸೂತಿ ತಜ್ಞರು ಸೇರಿದಂತೆ ನುರಿತ ತಜ್ಞ ವೈದ್ಯರು ಆಗಮಿಸಲಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.

ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆ

0

ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಘಟನೆಯಿಂದ ಜನವರಿ 1 ರ ಶುಕ್ರವಾರದಂದು ಬೆಳಿಗ್ಗೆ 11.30ಕ್ಕೆ ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ದಲಿತ ಯೋಧರ ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಕೀಲ ಮಹೇಶ್ ದಾಸ್, ಉಪನ್ಯಾಸಕ ಮೂರ್ತಿ, ಜೀವಿಕ ಸಂಘಟನೆಯ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ಭಾಗವಹಿಸಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಲಕ್ಕೆ ಆಗಮಿಸಿದ ಯಂತ್ರದ ಪರಿಚಯ ಶಾಲಾ ಮಕ್ಕಳಿಗೆ

0

ಕೃಷಿಯಲ್ಲಿ ತಾಂತ್ರಿಕತೆಯು ಸ್ಥಾನ ಪಡೆಯುತ್ತಿದೆ. ರೈತರು ಕಾಲಕ್ಕೆ ತಕ್ಕಂತೆ ಆಧುನಿಕ ಯಂತ್ರೋಪಕರಣಗಳಿಗೆ ಶರಣಾಗುತ್ತಿದ್ದಾರೆ. ಈ ಬದಲಾವಣೆಗಳು ರೈತರ ಮಕ್ಕಳಿಗೆ ಅರಿವಿಗೇ ಬಂದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಈಚೆಗೆ ಕೃಷಿಯಲ್ಲಿ ಬಳಸುವ ಆಧುನಿಕ ಯಂತ್ರೋಪಕರಣದ ಪರಿಚಯವನ್ನು ಶಿಕ್ಷಕರು ಮಾಡಿಸಿದರು.
ಗ್ರಾಮದಲ್ಲಿ ಬೃಹತ್ ಯಂತ್ರದ ಆಗಮನವಾಗಿರುವುದನ್ನು ಕಂಡ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ರಾಗಿ ಬೆಳೆಯ ಕಟಾವನ್ನು ಯಂತ್ರದ ಮೂಲಕ ನಡೆಸಲಾಗುತ್ತಿರುವುದನ್ನು ಕಂಡು ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಲಕ್ಕೆ ಕರೆದೊಯ್ದು, ಸಮಯ ಹಾಗೂ ಹಣದ ಉಳಿತಾಯವಾಗುವ ಯಂತ್ರದ ಬಗ್ಗೆ ವಿವರಿಸಿದ್ದಾರೆ. ಹಿಂದೆ ಇದ್ದ ಪದ್ಧತಿಯ ರೀತಿ, ಯಂತ್ರದ ಕಾರ್ಯಕ್ಷಮತೆ, ಸಾಧಕ ಬಾಧಕಗಳ ಬಗ್ಗೆ ತಿಳಿಸಿದ್ದಾರೆ.
‘ಸಣ್ಣಗಾತ್ರದ ಯಂತ್ರಗಳನ್ನು ಅವಲಂಬಿಸಿದ್ದ ಕೃಷಿಕ ಈಗ ಬೃಹತ್ ಯಂತ್ರಗಳನ್ನು ತನ್ನ ಹೊಲಗದ್ದೆಗಳಿಗೆ ಬರಮಾಡಿಕೊಳ್ಳುತ್ತಿದ್ದಾನೆ. ಹಿಂದೆ ಹೊಲಗದ್ದೆಗಳ ಕೊಯ್ಲು ಕಾರ್ಯಗಳು ಮಾನವ ಶಕ್ತಿಯಿಂದ ನಡೆಯುತ್ತಿದ್ದವು. ಇದರ ಕಾಲಾವಧಿ ದಿನಗಟ್ಟಲೆ ಆಗುತ್ತಿತ್ತು. ಆಗ ಕೃಷಿ ಕಾರ್ಮಿಕರು ಸುಲಭವಾಗಿ ಸಿಗುತ್ತಿದ್ದರು.
ಬದಲಾದ ಪರಿಸರ ಮತ್ತು ಆಧುನಿಕ ಕೃಷಿ ವಿಜ್ಞಾನ ಕ್ಷೇತ್ರದಲ್ಲಾದ ಆವಿಷ್ಕಾರಗಳು ಆದ್ಯತೆಗಳ ಕ್ರಮವನ್ನೇ ಬದಲಿಸಿಬಿಟ್ಟವು. ಕೂರಿಗೆ ಬಿತ್ತನೆ, ಕೈ ಬಿತ್ತನೆ, ಕೂಲಿಕಾರರಿಂದ ಕಳೆ ತೆಗೆಸುವುದು, ಕೈ ಕುಯಿಲು ಇವೆಲ್ಲಾ ಹಿಂದಕ್ಕೆ ಸರಿದು ಮಾನವನ ಕೈ ಆಡುತ್ತಿದ್ದ ಹೊಲಗದ್ದೆಗಳಲ್ಲಿ ಯಂತ್ರಗಳ ಮುಳ್ಳು ಇಲ್ಲವೆ ಹಲ್ಲುಗಳು ಆಡತೊಡಗಿದವು’ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ಮನವರಿಕೆ ಮಾಡಿದರು.
ಕಟಾವು ಮತ್ತು ಕಾಳು ವಿಂಗಡಿಸುವ ಯಂತ್ರವನ್ನು ಆಂದ್ರದ ಅನಂತಪುರದಿಂದ ತರಿಸಿದ್ದಾರೆ. ಇದರ ವೆಚ್ಚ ಗಂಟೆಯೊಂದಕ್ಕೆ 3,500 ರೂಪಾಯಿಗಳು. ಒಂದು ಗಂಟೆಯ ಅವಧಿಯಲ್ಲಿ ಇದು ಒಂದರಿಂದ ಒಂದೂವರೆ ಎಕರೆಯಲ್ಲಿನ ಬೆಳೆಯನ್ನು ಕಟಾವು ಮಾಡಿ ಹುಲ್ಲು ಮತ್ತು ಕಾಳನ್ನು ಬೇರ್ಪಡಿಸುತ್ತದೆ. ಅವರೆ ಮತ್ತು ಜೋಳದ ಸಾಲುಗಳಿಲ್ಲದಿದ್ದರೆ ಮತ್ತು ಹೊಲ ಚದರವಾಗಿದ್ದರೆ ಕಟಾವಿನ ಕೆಲಸ ಬೇಗ ಮುಗಿಯುತ್ತದೆ. ಹಾಗೆಯೇ ವಿಂಗಡಿಸಿದ ಕಾಳನ್ನು ಈ ಯಂತ್ರ ತನ್ನ ಸಂಗ್ರಹ ಚೇಂಬರಿನಲ್ಲಿ ಇಟ್ಟುಕೊಂಡಿದ್ದು ಅದನ್ನು ಟ್ರಾಕ್ಟರಿಗೆ ವರ್ಗಾಯಿಸುತ್ತದೆ. ಹೀಗಾಗಿ ವರ್ಗಾಯಿಸುವ ಶ್ರಮವೂ ರೈತನಿಗಿರದು. ಜೊತೆಗೆ ಇದೇ ಯಂತ್ರ ದವಸವನ್ನು ಕಲ್ಲು ಮಣ್ಣುಗಳಿರದೆ ಸೋಸುತ್ತದೆ ಎಂದು ರೈತರಿಂದ ಮಾಹಿತಿಯನ್ನೂ ಪಡೆದರು.
‘ಈ ಕೊಯ್ಲು ಯಂತ್ರದಿಂದ ಅನುಕೂಲವಿದೆ. ಆದರೆ ಅವರೆ, ಜೋಳ, ನವಣೆ, ಹರಿಸಾಮೆ, ಹುಚ್ಚೆಳ್ಳಿನಂಥಹ ಬೆಳೆಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯುವ ಅವಕಾಶಗಳು ಕಡಿಮೆಯಾಗುತ್ತವೆ. ಮತ್ತು ತುಂಡು ಭೂಮಿ ಬೇಸಾಯಕ್ಕೆ ಈ ಯಂತ್ರ ಸಹಕಾರಿಯಲ್ಲ. ಈ ಯಂತ್ರದ ಬಳಕೆಯಿಂದ ಕಣದಲ್ಲಾಗುತ್ತಿದ್ದ ಕೆಲಸಗಳನ್ನು ಮಾಡಬಹುದಾದುದರಿಂದ ಈಗ ರಸ್ತೆಗಳಲ್ಲಿ ಒಕ್ಕಣಿಕೆಗಳಿಂದ ಉಂಟಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಬಹುದು’ ಎಂಬ ರೈತರ ಅಭಿಪ್ರಾಯವನ್ನು ವಿದ್ಯಾರ್ಥಿಗಳು ಕೇಳಿ ತಲೆದೂಗಿದರು.

ಗ್ರಾಮೀಣ ಕ್ರೀಡೋತ್ಸವ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಬುಧವಾರ ಗ್ರಾಮೀಣ ಕ್ರೀಡೋತ್ಸವ ನಡೆಯಿತು. ಪ್ರತಿದಿನ ದುಡಿಮೆ, ನೌಕರಿ ಮುಂತಾದ ಕೆಲಸಗಳಲ್ಲಿ ತೊಡಗುತ್ತಿದ್ದ ಜನ ಆಟಗಳನ್ನು ಆಡಿ ಖುಷಿಪಟ್ಟರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ ಈ ವಿಶೇಷ ಕ್ರೀಡಾಕೂಟದಲ್ಲಿ ಪುರುಷರಿಗೆ ಗೋಣಿಚೀಲ ಕಟ್ಟಿಕೊಂಡು ಓಡುವ ಸ್ಪರ್ಧೆ, ಸ್ಲೋ ಸೈಕಲ್, ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ರಂಗೋಲಿ, ಸಂಗೀತ ಕುರ್ಚಿ ಹಾಗೂ ಕುಂಟು ಮುಟ್ಟಾಟ ಸ್ಪರ್ಧೆಗಳು ನಡೆದವು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿನ ಜನ ಸದಾ ತಮ್ಮ ಕೌಟುಂಬಿಕ ಹಾಗೂ ತೋಟದ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಅವರಿಗೆ ಜೀವನದಲ್ಲಿ ಉತ್ಸಾಹವನ್ನು ಮೂಡಿಸಲು ಹಾಗೂ ಅವರಲ್ಲಿನ ಪ್ರತಿಭೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಗ್ರಾಮೀಣ ಕ್ರೀಡೋತ್ಸವವನ್ನು ನಡೆಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ವಿಜೇತರು ಮುಂದೆ ರಾಜ್ಯಮಟ್ಟವನ್ನು ಕೂಡ ಪ್ರತಿನಿಧಿಸಬಹುದು. ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಮಹಿಳಾ ಕ್ರೀಡಾಪಟುಗಳೆಲ್ಲಾ ಗ್ರಾಮೀಣ ಹಿನ್ನೆಲೆಯವರಾಗಿದ್ದಾರೆ’ ಎಂದು ಹೇಳಿದರು.
ಕ್ರೀಡಾಕೂಟಕ್ಕೆ ಸರ್ಕಾರದಿಂದ ಬಹುಮಾನವನ್ನು ಹಣದ ರೂಪದಲ್ಲಿ ನೀಡಿ ಪ್ರೋತ್ಸಾಹಿಸಲಾಗುತ್ತಿದ್ದು, ಮೊದಲ ಬಹುಮಾನ ಒಂದು ಸಾವಿರ ರೂ, ಎರಡನೇ ಬಹುಮಾನ 750 ರೂ ಮತ್ತು ಮೂರನೇ ಬಹುಮಾನ 500 ರೂ ನೀಡಲಾಗುತ್ತಿದೆ. ಗುಂಪು ಸ್ಪರ್ಧೆಗಳಿಗೆ ಮೊದಲ ಬಹುಮಾನ ಎರಡು ಸಾವಿರ ರೂ ಮತ್ತು ಎರಡನೇ ಬಹುಮಾನ ಒಂದು ಸಾವಿರ ರೂ ನೀಡಲಾಗುತ್ತಿದೆ.
ತಾಲ್ಲೂಕಿನ ದೇವರಮಳ್ಳೂರು ಹಾಗೂ ದೊಡ್ಡತೇಕಹಳ್ಳಿ ಪಂಚಾಯತಿಗಳಲ್ಲಿ ಗ್ರಾಮೀಣ ಕ್ರೀಡೋತ್ಸವ ಮುಗಿದಿದ್ದು, ಬುಧವಾರ ಹಂಡಿಗನಾಳ ಪಂಚಾಯತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಂ, ತ್ಯಾಗರಾಜ್, ನೆಹರೂ ಕ್ರೀಡಾಂಗಣದ ನಿರ್ವಾಹಕ ಶ್ರೀನಿವಾಸ್, ಕ್ರೀಡಾಪಟು ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಶ್ರೀಧರ್, ನಳಿನಾ, ರಾಧಾ, ರವಿ, ವಿಜಯ್, ಉಮಾ, ನೇತ್ರಾವತಿ ಮತ್ತಿತರರು ಹಾಜರಿದ್ದರು.