ಸುಮಾರು 2500 ವರ್ಷಗಳ ಇತಿಹಾಸ ಸೇರಿದಂತೆ ಒಂಭತ್ತು ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರೂ, ಶಾಸ್ತ್ರೀಯ ಸ್ಥಾನಮಾನ ಪಡೆದಂತಹ ಕನ್ನಡ ಭಾಷೆಯ ಉಳಿವಿಗಾಗಿ ಇಂದಿಗೂ ಹೋರಾಟ ಮಾಡುವ ಸನ್ನಿವೇಶ ಬಂದಿರುವುದು ನಿಜಕ್ಕೂ ಶೋಚನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಶಿವರಾಮೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಗ್ರಾಮದ ಮುಖಂಡ ಶೇಖರಣ್ಣ ಅವರ ನೆನಪಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸುಮಾರು 400 ವರ್ಷಗಳ ಕಾಲ ದೇಶವನ್ನಾಳಿದ ಬ್ರಿಟೀಷರನ್ನು ಇಲ್ಲಿಂದ ಓಡಿಸಲು ಅನೇಕರು ಪ್ರಾಣ ತ್ಯಾಗ ಮಾಡುವುದರೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರಾದರೂ ನಮ್ಮವರ ಇಂಗ್ಲೀಷ್ ವ್ಯಾಮೋಹವನ್ನು ಹೋಗಲಾಡಿಸಲಾಗಲಿಲ್ಲ ಎಂದರು.
ನಮಗಿರುವ ಅನ್ಯ ಭಾಷೆಗಳ ಮೋಹದಿಂದಾಗಿ ನಮ್ಮ ಮಾತೃ ಭಾಷೆಯಾದ ಕನ್ನಡ ತೆರೆ ಮೆರಗೆ ಸರಿಯುತ್ತಿದ್ದು ನಮ್ಮ ಕಲೆ, ಸಂಸ್ಕøತಿಯನ್ನು ನಾವೇ ನಶಿಸುವಂತೆ ಮಾಡುತ್ತಿದ್ದೇವೆ ಎಂದರು.
ಇಂದಿನ ಮಕ್ಕಳಿಗೆ ನಮ್ಮ ದೇಶೀಯ ಕ್ರೀಡೆ ಸೇರಿದಂತೆ ಜಾನಪದ ಕಲೆ, ಸಾಹಿತ್ಯ ಸಂಸ್ಕøತಿಯನ್ನು ಕಲಿಸುವುದನ್ನು ಬಿಟ್ಟು ಕಂಪ್ಯೂಟರ್‍ಗಳ ಮೂಲಕ ಅವರನ್ನು ಬಂಧಿಸಿ ಅವರನ್ನು ಕೇವಲ ಒಂದು ಯಂತ್ರದಂತೆ ತಯಾರಿಸುತ್ತಿದ್ದೇವೆ ಎಂದರು.
ನಮ್ಮ ಮಕ್ಕಳು ಆಂಗ್ಲಮಾಧ್ಯಮ ಶಾಲೆಗಳಲ್ಲಿ ಓದಿದರೆ ನಮಗೆ ಗೌರವವೆಂಬಂತೆ ಭಾವಿಸಿ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿನ ಆಂಗ್ಲ ಮಾಧ್ಯಮ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದರಿಂದ ಇಂದಿನ ಮಕ್ಕಳಲ್ಲಿ ಕನ್ನಡ ಭಾಷೆಯ ಇತಿಹಾಸ ಗೊತ್ತಾಗುತ್ತಿಲ್ಲ ಎಂದರು.
ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆ ಕನ್ನಡವನ್ನು ಮಕ್ಕಳಿಗೆ ಕಲಿಸಲು ಮುಂದಾಗಬೇಕು ಹಾಗು ನಮ್ಮ ನೆಲ, ಜಲ, ಭಾಷೆಗೆ ಕುತ್ತು ಬಾರದಂತೆ ಅದನ್ನು ಉಳಿಸಿ ಬೆಳಸಲು ಕಂಕಣ ಬದ್ಧರಾಗಬೇಕು ಎಂದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಅಗಲಗುರ್ಕಿ ಚಲಪತಿ ಮಾತನಾಡಿ, ರಾಜ್ಯದ ಗಡಿಭಾಗಗಳಷ್ಟೆ ಅಲ್ಲದೆ ರಾಜ್ಯದೊಳಗೆ ಕನ್ನಡ ಭಾಷೆಯನ್ನು ರಕ್ಷಣೆ ಮಾಡುವುದರ ಜೊತೆಗೆ ಈ ಭಾಗದ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು ಎಂದರು.
ರೈತ ಉಳಿದರೆ ಮಾತ್ರ ದೇಶಕ್ಕೆ ಉಳಿಗಾಲವಿರುತ್ತದೆ ಹಾಗಾಗಿ ಈ ಭಾಗದ ರೈತರು ಶಾಶ್ವತ ನೀರಾವರಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರಕಾರವನ್ನು ಹೋರಾಟಗಳ ಮೂಲಕ ಎಚ್ಚರಿಸುವ ಕೆಲಸವನ್ನು ಸಂಘಟನೆ ಮಾಡಬೇಕು ಎಂದ ಅವರು ಸರ್ಕಾರ ಹೋರಾಟಗಾರರ ವಿನಾಕಾರಣ ಕೇಸು ದಾಖಲಿಸುತ್ತಿದ್ದು ಸರಕಾರದ ಯಾವುದೇ ಬೆದರಿಕೆಗಳಿಗೆ ಅಂಜದೇ ರೈತರ ಹೋರಾಟಕ್ಕೆ ಎಲ್ಲಾ ಸಂಘಟನೆಗಳು ಬೆಂಬಲಿಸುವುದರೊಂದಿಗೆ ಈ ಭಾಗದ ಜನರಿಗೆ ಕುಡಿಯುವ ನೀರು ಸೇರಿದಂತೆ ಕೃಷಿಗೆ ನೀರು ತರುವ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವಾಗುವವರೆಗೂ ಹೋರಾಟಗಳಲ್ಲಿ ಮನೆಗೊಬ್ಬರಂತೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸೇರಿದಂತೆ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಡಾ.ಡಿ.ಕೆ.ರಮೇಶ್, ಗ್ರಾಮದ ಹಿರಿಯ ಮುಖಂಡ ಬೈರೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ, ಗ್ರಾ.ಪಂ ಕಾರ್ಯದರ್ಶಿ ಸಿ.ರಾಜಣ್ಣ, ಕರವೇ ತಾಲ್ಲೂಕು ಅಧ್ಯಕ್ಷ ಮೇಲೂರು ಶ್ರೀಧರ್, ಚೌಡಸಂದ್ರ ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.
ಇಂಗ್ಲೀಷ್ ವ್ಯಾಮೋಹ ಬಿಡಿ ಮಾತೃಭಾಷೆ ಕಲಿ
ಗುಂಪುಘರ್ಷಣೆಯ ಹಿನ್ನಲೆಯಲ್ಲಿ ಶಾಂತಿಸಭೆ
ಯಾವುದೇ ಧರ್ಮದ ಜನರ ಭಾವನೆಗಳಿಗೆ ನೋವುಂಟು ಮಾಡದೇ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸುವಂತಾಗಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಭಾರಿ ಪೊಲೀಸ್ ವರಿಷ್ಟಾಧಿಕಾರಿ ಕೋರವಾರ ಹೇಳಿದರು.
ನಗರದಲ್ಲಿ ಈದ್‍ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಹಾರಿಸಿದ್ದ ಧ್ವಜಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಶುರುವಾದ ಗುಂಪುಘರ್ಷಣೆಯ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಠಾಣೆಯಲ್ಲಿ ಶಾಂತಿಸಭೆ ಏರ್ಪಡಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಧರ್ಮಗಳ ನಾಗರೀಕರು ಪ್ರೀತಿ ವಿಶ್ವಾಸಗಳಿಂದ ಬದುಕಿ ಬಾಳುವುದು ಒಳಿತು. ಆಯಾ ಧರ್ಮಗಳ ಮೇಲಿರುವ ನಂಬಿಕೆ ಅವರ ಮಟ್ಟಿಗೆ ದೊಡ್ಡದಾಗಿದ್ದರೂ ಕೂಡಾ ಎಲ್ಲಾ ಧರ್ಮದ ಜನರು ಮಾನವೀಯತೆಯ ನೆಲೆಗಟ್ಟಿನಲ್ಲಿ ಬದುಕಿ ಬಾಳಬೇಕಾಗಿದೆ ಎಂದರು.
ಯಾವುದೇ ಧರ್ಮ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ ಹಾಗಾಗಿ ಎಲ್ಲರೂ ಸಮಾಜದ ಇತರರ ಕೋಮಿನವರ ವಿಶ್ವಾಸ ಗಳಿಸುವುದರೊಂದಿಗೆ ಪ್ರೀತಿಯಿಂದ ಬದುಕು ನಡೆಸಬೇಕು ಎಂದರು.
ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ ಮುಖಂಡರು ಒಂದೆಡೆ ಕುಳಿತು ಸಮಾಲೋಚನೆಯ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕೆ ಹೊರತು ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿಕೊಂಡು ಮತೀಯ ಹೆಸರಿನಲ್ಲಿ ಸಮಾಝದ ಸ್ವಾಸ್ಥ್ಯ ಕೆಡಿಸುವುದು ಸರಿಯಲ್ಲ ಎಂದರು.
ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಸೇರಿದಂತೆ ಧಾರ್ಮಿಕ ಸಮಸ್ಯೆಗಳು ಎದುರಾದಾಗ ಮುಖಂಡರು ಬಂದು ಠಾಣೆಯಲ್ಲಿ ದೂರು ದಾಖಲಿಸಿ ಒಂದು ವೇಳೆ ಸ್ಥಳೀಯ ಪೋಲೀಸರು ನಿಮ್ಮ ದೂರಿಗೆ ಸ್ಪಂದಿಸಲಿಲ್ಲ ಎಂದಾದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಅದು ಬಿಟ್ಟು ದೂರು ನೀಡಲು ನೂರಾರು ಮಂದಿಯನ್ನು ಹಿಂದೆ ಹಾಕಿಕೊಂಡು ಬಂದು ಠಾಣೆಯ ಮುಂದೆ ಪ್ರತಿಭಟನೆ ಮಾಡುವುದು ತರವಲ್ಲ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದ ಅವರು ಪ್ರತಿಯೊಂದಕ್ಕೂ ಪೋಲೀಸರನ್ನು ಗುರಿ ಮಾಡುವುದನ್ನು ಬಿಟ್ಟು ನಗರದಲ್ಲಿ ಶಾಂತಿ ಕಾಪಾಡಲು ನಾಗರೀಕರು ಪೋಲೀಸರೊಂದಿಗೆ ಸಹಕರಿಸಬೇಕು ಎಂದರು.
ವಿವಿಧ ಸಮುದಾಯಗಳ ಮುಖಂಡರು ಈ ಬಗ್ಗೆ ಹೆಚ್ಚು ಚಿಂತನೆ ನಡೆಸುವುದರೊಂದಿಗೆ ಯುವಜನತೆಗೆ ಉತ್ತಮವಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.
ಸಭೆಯಲ್ಲಿ ಎರಡೂ ಕಡೆಯ ಮುಖಂಡರು ಮಾತನಾಡಿ, ನಾವು ಇಲ್ಲೆ ಹುಟ್ಟಿಬೆಳೆದಿದ್ದೇವೆ, ಯಾವುದೇ ಹಬ್ಬ ಹರಿದಿನಗಳಾಗಲಿ ಎಲ್ಲಾ ಸಮುದಾಯಗಳವರನ್ನು ಆಹ್ವಾನಿಸಿ ಆಚರಣೆ ಮಾಡಿಕೊಂಡು ಬರುವುದರೊಂದಿಗೆ ಅಣ್ಣ ತಮ್ಮಂದಿರ ತರಹ ಜೀವನ ನಡೆಸುತ್ತಿದ್ದೇವೆ. ಆದರೆ ಕೆಲವೇ ಕೆಲ ಕಿಡಿಗೇಡಿಗಳು ಮಾಡುವ ಇಂತಹ ಕೃತ್ಯಗಳಿಂದ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಹಾಗಾಗಿ ಇಂತಹ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಸಣ್ಣತಿಮ್ಮಪ್ಪ, ತಹಶೀಲ್ದಾರ್ ಮನೋರಮಾ, ಡಿ.ವೈ.ಎಸ್.ಪಿ. ಮಹೇಶ್ವರಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸಮೂರ್ತಿ, ಮುಖಂಡರಾದ ಅಪ್ಸರ್‍ಪಾಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಸಲಾಂ, ಸೈಯ್ಯದ್, ಕೆ.ಎಂ.ವಿನಾಯಕ, ಮತ್ತಿತರರು ಹಾಜರಿದ್ದರು.
ಮಳ್ಳೂರಾಂಭ ದೇವಿಯ ರಥೋತ್ಸವ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶುಕ್ರವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ಧನುರ್ಮಾಸ ಹುಣ್ಣಿಮೆಯ ವಿಶೇಷವಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆ ವಿಶೇಷವಾಗಿದ್ದು ನೆರೆರಾಜ್ಯಗಳಿಂದಲೂ ಜನರು ದನಗಳೊಂದಿಗೆ ಆಗಮಿಸುತ್ತಾರೆ.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಮನೋರಮಾ ರಥೋತ್ಸವಕ್ಕೆ ಚಾಲನೆ ನೀಡಿದರು. ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿ.ಎ.ಮಳ್ಳೂರಯ್ಯ, ರೆಡ್ಡಿಸ್ವಾಮಿ ಮತ್ತಿತರರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಯೂನಿಟಿ ಸಿಲ್ ಸಿಲಾ ಎಜುಕೇಷನಲ್ ಮತ್ತು ವೆಲ್ಫೇರ್ ಟ್ರಸ್ಟ್ ಹಾಗೂ ಕರ್ನಾಟಕ ಟಿಪ್ಪು ಸುಲ್ತಾನ್ ಸಂಘ, ಮುಸ್ಲಿಂ ಯೂತ್ ಸಂಘ, ಎಂ.ಸಿ.ಸಿ ಸ್ಪೋರ್ಟ್ಸ್್ ಕ್ಲಬ್ ಮತ್ತು ಪಿ.ಎಫ್.ವೈ ಸಂಘಟನೆಗಳು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಶುಕ್ರವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈದ್ ಮಿಲಾದ್ ಹಾಗೂ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ರೈತ ಮುಖಂಡರು ಚಾಲನೆ ನೀಡಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 306 ಯೂನಿಟ್ ರಕ್ತ ಸಂಗ್ರಹಣೆಯಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಬಿರದಲ್ಲಿ 202 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ರೈತ ಮುಖಂಡರಾದ ಬೈರೇಗೌಡ, ವೆಂಕಟಸ್ವಾಮಿ, ಯೂನಿಟಿ ಸಿಲ್ ಸಿಲಾ ಸಂಸ್ಥೆಯ ಅಧ್ಯಕ್ಷ ಅಸ್ಸದ್, ಅಕ್ರಂಪಾಷ, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಅಫ್ಜಲ್, ಇಮ್ತಿಯಾಜ್, ವಸೀಮ್ ಪಾಷ, ವಿಕ್ರಂ, ಮುದಾಸಿರ್, ರಹಮತ್ ಪಾಷ, ಮುಸ್ತಕ್, ಸರ್ಕಾರಿ ಆಸ್ಪತ್ರೆಯ ಸಮೀವುಲ್ಲಾ, ರೆಡ್ ಕ್ರಾಸ್ ಸೊಸೈಟಿಯ ರವಿ, ಗುರುರಾಜರಾವ್ ಮತ್ತಿತರರು ಹಾಜರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರೆಡೆಗೆ ಕೊಂಡೊಯ್ಯುತ್ತೇನೆ
ಕನ್ನಡಪರ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಳುವ ಗುರಿಯನ್ನು ಹೊಂದಿರುವುದಾಗಿ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು, ಸರ್ಕಾರಿ ನೌಕರರ ಸಂಘದ ಸದಸ್ಯರ ಸಮ್ಮುಖದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯಾದ ಅವರು ಗುರುವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇನೆ. ನಾಡಿನಾದ್ಯಂತ ಕನ್ನಡಪರ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡು ಎಲ್ಲರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಗೌರವದಿಂದ ಸ್ವೀಕರಿಸುತ್ತಾ ಕನ್ನಡತನವನ್ನು ನಾಡಿನಾದ್ಯಂತ ಬೆಳೆಸುವ ಕೈಂಕರ್ಯವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ತೆರಳಿ ಕನ್ನಡ ಪರ ಸಂಘಟನೆಗಳ ಸದಸ್ಯರು ನೀಡುವ ಅಮೂಲ್ಯ ಸಲಹೆಗಳನ್ನು ಪಡೆದು ಕನ್ನಡದ ಕೆಲಸಕ್ಕೆ ಮುಂದುವರಿಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಸದಸ್ಯರು ಮತ್ತು ಸರ್ಕಾರಿ ನೌಕರರ ಸಂಘದ ಸದಸ್ಯರು ಪಟೇಲ್ ಪಾಂಡು ಅವರನ್ನು ಸನ್ಮಾನಿಸಿದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಾಸುದೇವರಾವ್, ವಿ.ಕೃಷ್ಣಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಕಾರ್ಯದರ್ಶಿ ಅಕ್ಕಲರೆಡ್ಡಿ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಎಸ್.ವಿ.ನಾಗರಾಜರಾವ್, ಶ್ಯಾಮಸುಂದರ್, ಕ್ರೆಸೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ತಮೀಮ್ ಅನ್ಸಾರಿ, ಭಾಸ್ಕರ್, ಕೆಂಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಮಾಜದ ಋಣವನ್ನು ತೀರಿಸಿ
ಸಮಾಜದ ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕ ತಮ್ಮನ್ನು ಬೆಳೆಸಿದ ಸಮಾಜದ ಋಣವನ್ನು ತೀರಿಸುವಂತೆ ಮದೀನ ಮಸೀದಿ ಗುರುಗಳಾದ ಸಲೀಮ್ ಹಜರತ್ ತಿಳಿಸಿದರು.
ನಗರದಲ್ಲಿ ಗುರುವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಶಾಕಿರಣ ಅಂದ ಮಕ್ಕಳ ಶಾಲೆಯ ಮಕ್ಕಳಿಗೆ ಹೊದಿಕೆಗಳನ್ನು ವಿತರಿಸಿ ಅವರು ಮಾತನಾಡಿದರು. ಮನುಷ್ಯನ ಜೀವನ ಕೇವಲ ಹುಟ್ಟು ಸಾವಿಗೆ ಮೀಸಲಿರಿಸದೆ, ತಮ್ಮ ಜೀವನದಲ್ಲಿ ಏನಾದರೂ ಸಾದನೆ ಮಾಡುವ ಮೂಲಕ ತನ್ನ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು. ಮಹಮದ್ ಪೈಗಂಬರ್ ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದರು.
ಮಹಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮುಸ್ಲಿಂ ಭಾಂದವರಿಂದ ಹಣ್ಣು ಹಂಪಲು ಹಾಲು ವಿತರಿಸಲಾಯಿತು.
ಜಾಮೀಯ ಮಸೀದಿಯ ಸೈಯದ್ ತಾಜ್ ಪಾಷ, ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಎಚ್.ಅಬ್ದುಲ್ ಸಮದ್, ಎಚ್.ಎಸ್.ಏಜಾದ್ ಅಹ್ಮದ್, ಎಚ್.ಬಾಬು, ಶಕೀಬ್ ಹುಸೇನ್, ಅಮ್ಜದ್ ಪಾಷ, ನಗರಸಭೆ ಸದಸ್ಯ ವೆಂಕಟಸ್ವಾಮಿ, ಜೆ.ವಿ.ಸದಾಶಿವ, ಕೆಂಪರೆಡ್ಡಿ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು, ಸಂತಸದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಪುಸ್ತಕವನ್ನು ರೂಪಿಸಿ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತಿರುವುದಾಗಿ ಪ್ರಣತಿ ವೇದಿಕೆಯ ಸದಸ್ಯೆ ಉಷಾ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಣತಿ ವೇದಿಕೆಯಿಂದ ಪ್ರತಿ ವರ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈ ಬಾರಿಯಿಂದ ಮಕ್ಕಳ ಜ್ಞಾನ ಹೆಚ್ಚಿಸಲು, ತರ್ಕ, ಗಮನಿಸುವಿಕೆ ಮುಂತಾದ ಮೂಲಾಂಶಗಳನ್ನು ಕಲಿಯಲು ಅನುಕೂಲವಾಗುವಂತೆ ‘ಖುಷಿಯಿಂದ ಕಲಿ’ ಎಂಬ ಪುಸ್ತಕವನ್ನು ರೂಪಿಸಿದ್ದೇವೆ. ಒಂದರಿಂದ ಮೂರನೇ ತರಗತಿಯವರಿಗೆ ಮತ್ತು ನಾಲ್ಕರಿಂದ ಏಳನೇ ತರಗತಿಯವರಿಗೆ ಅನುಕೂಲವಾಗುವ ಹಾಗೆ ಎರಡು ರೀತಿಯ ಪುಸ್ತಕಗಳನ್ನು ರೂಪಿಸಲಾಗಿದೆ. ಶಿಕ್ಷಕರು ಮಕ್ಕಳಿಗೆ ನೆರವಾಗಿ ಸಂತಸದಿಂದ ಕಲಿಯಲು ಪ್ರೋತ್ಸಾಹಿಸುವಂತೆ ಕೋರಿದರು.
ಶಾಲೆಯ ಮುಖ್ಯ ಶಿಕ್ಷಕಿ ಉಮಾ, ಸಹಶಿಕ್ಷಕಿ ಹೇಮಾವತಿ ಈ ಸಂದರ್ಭದಲ್ಲಿ ಹಾಜರಿದ್ದರು.
ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ನಗರದಲ್ಲಿ ಉದ್ರಿಕ್ತ ವಾತಾವರಣ
ನಗರದಲ್ಲಿ ಗುರುವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲೀಮರು ಕಟ್ಟಿದ್ದ ಬಾವುಟಕ್ಕೆ ರಾತ್ರಿ 12 ಗಂಟೆ ಸುಮಾರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಪರಿಣಾಮ ಶುಕ್ರವಾರ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ನಗರದ ಕೋಟೆ ವೃತ್ತದ ಬಳಿ ಗುರುವಾರ ರಾತ್ರಿ ಮಂಜುನಾಥ್ ಮತ್ತು ಧನಂಜಯ ಎಂಬುವವರು ಮದ್ಯ ಸೇವಿಸಿ ಹಬ್ಬದ ಪ್ರಯುಕ್ತ ಕಟ್ಟಿದ್ದ ಮುಸ್ಲೀಮರ ಬಾವುಟಕ್ಕೆ ಬೆಂಕಿ ಹಚ್ಚಿದ್ದರು. ಶುಕ್ರವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಮುಸ್ಲೀಮರು ನಗರದ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟಿಸಿದರು.
ಪ್ರತಿಭಟನಾಕಾರರು ನೀಡಿದ ದೂರಿನ ಅನ್ವಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಅವರು ಸೇರಿದ್ದ ಗುಂಪನ್ನುದ್ದೇಶಿಸಿ ದೂರು ನೀಡಿರುವ ಪ್ರಕಾರ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರೂ ಪಟ್ಟು ಬಿಡದೆ ಪೊಲೀಸ್ ಠಾಣೆಗೆ ಜನರು ಮುತ್ತಿಗೆ ಹಾಕಿದರು.
ಪೊಲೀಸ್ ಠಾಣೆಯ ಮುಂದೆ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲಕ್ಕೆ ಬಂದೋಬಸ್ತ್ಗಾಗಿ ಪೊಲೀಸ್ ಸಿಬ್ಬಂದಿ ತೆರಳಿದ್ದರಿಂದಾಗಿ ಅತಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಸ್ಥಳಕ್ಕೆ ಪ್ರಭಾರಿ ಪೊಲೀಸ್ ಎಸ್.ಪಿ ಕೋರವಾರ, ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿದ್ದರು. ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿದ್ದು, ನಗರದಲ್ಲಿ ಶಾಂತಿ ಕಾಪಾಡಲು ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಕಡೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಸಿರುವುದಾಗಿ ಪೊಲೀಸ್ ಎಸ್.ಪಿ. ಕೋರವಾರ ತಿಳಿಸಿದರು.
ಈದ್-ಮಿಲಾದ್ ಹಬ್ಬದ ಆಚರಣೆ
ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಗುರುವಾರ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು.
ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ಮುಸ್ಲೀಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.
ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ಮುಸ್ಲೀಮರು ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ವಿವಿಧ ರೀತಿಯ ಪ್ರಾರ್ಥನಾ ಮಂದಿರಗಳ ಪ್ರತಿಕೃತಿಗಳನ್ನು ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗಳಲ್ಲಿ ತಯಾರಿಸಲಾಗಿದ್ದ ಸಿಹಿ ತಿಂಡಿ ವಿತರಿಸಿದರು.
ಸಂಜೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಧರ್ಮಗುರುಗಳು ಉಪದೇಶ ಬೋಧಿಸಿದರು. ಎಲ್ಲ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಗರದ ಮುಸ್ಲಿಂ ಜನಾಂಗದ ಎಲ್ಲ ಹಿರಿಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸುರಕ್ಷಿತ ಕೀಟನಾಶಕ ಬಳಕೆ ಕಾರ್ಯಕ್ರಮ
ರೈತರು ಬೆಳೆಗಳಿಗೆ ದಿನನಿತ್ಯದ ಬಳಕೆಗಾಗಿ ವಿವಿಧ ಕೀಟನಾಶಕಗಳನ್ನು ಬಳಸುವುದರಿಂದ ಅದನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವ ರೈತರು ಮನೆಯಲ್ಲಿರುವ ಮಕ್ಕಳಿಗೆ ಸಿಗದಂತೆ ಎಚ್ಚರವಹಿಸಬೇಕು ಹಾಗೂ ಹುಲ್ಲಿನ ಮೇವು ಇರುವ ಕಡೆ ಇಡಬಾರದು ಎಂದು ಕೀಟನಾಶಕ ತಜ್ಞೆ ಸುಮಿತ್ರಮ್ಮ ಹೇಳಿದರು.
ರೈತರ ದಿನಾಚರಣೆ ಅಂಗವಾಗಿ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಬುಧವಾರ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಅರಿವು ಮೂಡಿಸುವ ಸಲುವಾಗಿ ನಡೆದ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ಕೀಟ ನಾಶಕಗಳು ಚರ್ಮದ ಮೇಲೆ ಬಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಕೀಟನಾಶಕ ಸಿಂಪಡಿಸುವಾಗ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಹಾಗು ಅಗತ್ಯಕ್ಕಿಂತ ಹೆಚ್ಚು ಕೀಟನಾಶಕಗಳನ್ನು ಬಳಸಬಾರದು ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿ, ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸುರಕ್ಷಿತ ಕೀಟ ನಾಶಕಗಳ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಿಕೆಯ ಬಗ್ಗೆಯೂ ರೈತರಿಗೆ ಮಾಹಿತಿಯನ್ನು ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ದೇವೇಗೌಡ, ರೇಷ್ಮೆ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ರೈತ ಸಂಘದ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ಮಂಜುನಾಥ್, ಶ್ರೀನಿವಾಸಶರ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಲಿ
ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ತಮಿಳುನಾಡು ಸರ್ಕಾರ ಇದಕ್ಕೆ ಉದಾಹರಣೆಯಾಗಿದೆ ಎಂದು ಜೆ.ಡಿ.ಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ವಿಧಾನಪರಿಷತ್ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದವರು ಯಾವುದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಗೆದ್ದಿರುವುದಿಲ್ಲ. ಹಾಗಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಅವರು ಸ್ವತಂತ್ರರು. ಪ್ರಾದೇಶಿಕ ಪಕ್ಷ ಮಹತ್ವವನ್ನು ವಿವರಿಸಿ ಪ್ರತಿಯೊಬ್ಬರನ್ನೂ ಮತ ಯಾಚಿಸಿ. ಎರಡೂ ಜಿಲ್ಲೆಗಳ ಅಭಿವೃದ್ಧಿಗಾಗಿ ದುಡಿಯಲು ಹಾಗೂ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಲು ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸಿ.ಆರ್.ಮನೋಹರ್ ಅವರನ್ನು ಗೆಲ್ಲಿಸುವಂತೆ ಕೋರಿದರು.
ಜೆ.ಡಿ.ಎಸ್ ಪಕ್ಷವನ್ನು ತುಳಿಯಲು ಹಲವಾರು ಷಡ್ಯಂತ್ರಗಳು ನಡೆಯುತ್ತಿದ್ದರೂ, ಪಕ್ಷವನ್ನು ಜೀವವಿರುವವರೆಗೂ ಉಳಿಸಿ ಬೆಳೆಸುವುದಾಗಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆಯ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸಿ.ಆರ್.ಮನೋಹರ್ ಮಾತನಾಡಿ, ಶಾಶ್ವತ ನೀರಾವರಿ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವುದು ಖಂಡನೀಯ. ಶಾಶ್ವತ ನೀರಾವರಿ ಯೋಜನೆ ಜಾರಿಗಳೊಳಿಸಲು ಸರ್ವ ಪ್ರಯತ್ನ ನಡೆಸುತ್ತೇನೆ. ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಶಾಸಕ ಎಂ.ರಾಜಣ್ಣ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ವಿ.ನಾಗರಾಜ್, ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಮಾಲೂರು ಶಾಸಕ ಮಂಜುನಾಥಗೌಡ, ಕೆ.ಪಿ.ಬಚ್ಚೇಗೌಡ, ಬಂಕ್ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಲೀಲಾ ರಾಜಣ್ಣ, ಹರಿನಾಥರೆಡ್ಡಿ, ನಗರಸಭೆ ಸದಸ್ಯ ಅಫ್ಸರ್ಪಾಷ, ಅಮರನಾಥ್, ಚೌಡರೆಡ್ಡಿ, ಮೇಲೂರು ರವಿಕುಮಾರ್, ಮೇಲೂರು ಮಂಜುನಾಥ್, ಮೇಲೂರು ಉಮೇಶ್, ರಹಮತ್ತುಲ್ಲ ಮತ್ತಿತರರು ಹಾಜರಿದ್ದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಡ್ಲಘಟ್ಟದ ಪಾತ್ರ ಪ್ರಮುಖ
ಈ ಭಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಪಾತ್ರ ಪ್ರಮುಖವಾದದ್ದು ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಮುಖಂಡರ ಹಾಗು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರವೊಂದರಲ್ಲಿಯೇ ೩೩೪ ಕಾಂಗ್ರೆಸ್ ಮತಗಳಿದ್ದು ಎಲ್ಲವೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ಬೀಳಲಿದೆ. ವಿಧಾನ ಪರಿಷತ್ ಚುನಾವಣೆಯ ನಂತರ ಮುಂದಿನ ದಿನಗಳಲ್ಲಿ ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಾಜಿ ಸಚಿವ ವಿ.ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಹೇಳಿದರು.
ಟಿಕೆಟ್ ಹಂಚಿಕೆಗೂ ಮೊದಲು ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಗೊಂದಲವಿದ್ದುದು ನಿಜವೇ ಆದರೂ ನಾವೆಲ್ಲಾ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವುದರಿಂದ ಪಕ್ಷದ ವರಿಷ್ಠರು ಯಾರಿಗೇ ಸೂಚಿಸುತ್ತಾರೋ ಅವರಿಗೆ ಮತ ಹಾಕುವುದು ನಮ್ಮ ಧರ್ಮ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ವಿಧಾನಪರಿಷತ್ತಿನಲ್ಲಿ ಬಹುಮತವಿಲ್ಲದ ಕಾರಣ ಕೆಲವು ವಿಧೇಯಕಗಳು ಮಂಡನೆಯಾಗುತ್ತಿಲ್ಲ ಹಾಗಾಗಿ ೨೫ ಸ್ಥಾನಗಳ ಪೈಕಿ ಕನಿಷ್ಠ ೨೦ ಸ್ಥನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರೊಂದಿಗೆ ರಾಜ್ಯ ಸರ್ಕಾರವನ್ನು ಇನ್ನಷ್ಟು ಬಲಪಡಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮುಖಂಡರಾದ ಸಾದಲಿ ಜೈಪ್ರಕಾಶ್, ಹಂಡಿಗನಾಳ ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಚುನಾವಣೆ ಪ್ರಚಾರ ಸಭೆ
ನಗರದ ಕಾಂಗ್ರೆಸ್ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಇದೇ ಡಿಸೆಂಬರ್ ೨೩ ರ ಬುಧವಾರದಂದು ಮದ್ಯಾಹ್ನ ೧ ಗಂಟೆಗೆ ಚುನಾವಣೆ ಪ್ರಚಾರ ಸಭೆ ಆಯೋಜಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ವಹಿಸಲಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ಕುಮಾರ್ ಸಭೆಯಲ್ಲಿ ಹಾಜರಿರುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ
ಶಿಡ್ಲಘಟ್ಟ ನಗರದ ಎಸ್.ಎ.ಸೈಯ್ಯದ್ಬಾಬಾ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಯ ನಗರ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತಾಲ್ಲೂಕು ಅಧ್ಯಕ್ಷ ಜಿ.ಎಲ್.ವಸಂತ್ಕುಮಾರ್ ಆದೇಶ ಹೊರಡಿಸಿದ್ದಾರೆ.
ಕ್ರಿಸ್ಮಸ್ ಹಬ್ಬದ ಆಚರಣೆ
ಯೇಸುವಿನ ಭೋದನೆಗಳು ಸಾರ್ವಕಾಲಿಕವಾಗಿದ್ದು, ಎಲ್ಲಾ ಕಾಲಘಟ್ಟಗಳಿಗೂ ಅನ್ವಯಿಸುವಂತಹ ಸತ್ಯ ಬೋದನೆಗಳನ್ನು ಅನುಸರಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಹೇಳಿದರು.
ತಾಲ್ಲೂಕಿನ ಹುಜುಗೂರು ಗ್ರಾಮದಲ್ಲಿ ಇಮ್ಮಾನುವೆಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಶಾಂತಿ, ಐಕ್ಯತೆ, ನೆಲೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮುನುಷ್ಯನೂ ಕೂಡಾ ಯಾವುದೇ ಧರ್ಮದಲ್ಲಿದ್ದರೂ ಸಮಾಜದಲ್ಲಿನ ಬಡವರ್ಗದ ಜನತೆಯ ಹಿತವನ್ನು ಬಯಸಬೇಕು ಎಂದರು.
ಗ್ರಾಮದ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಬಡವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವುದರೊಂದಿಗೆ ದೀನರನ್ನು ಪ್ರೀತಿಸುವಂತಹ ಕೆಲಸವಾಗಬೇಕು. ಎಲ್ಲಾ ವರ್ಗದ ಜನತೆಗೂ ಕೂಡಾ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿ ಕಾಣುವಂತೆ ಪ್ರೋತ್ಸಾಹ ಮಾಡಿದಾಗ ಮಾತ್ರ ಹಬ್ಬದ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಇಮ್ಮಾನುವೆಲ್ ಚಾರಿಟೆಬಲ್ ಟ್ರಸ್ಟ್ನ ಮುನಿನಾರಾಯಣಪ್ಪ ಮಾತನಾಡಿ, ಯೇಸುಕ್ರಿಸ್ತನು ಮಾನವಕುಲಕ್ಕೆ ನೀಡಿದಂತಹ ಶಾಂತಿಯ ಸಂದೇಶಗಳನ್ನು ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಪರಹಿತವಾದ ಜೀವಿತವನ್ನು ಜೀವಿಸಿದಾಗ ಮಾನವನಿಗೆ ಮುಕ್ತಿದೊರೆಯುತ್ತದೆ. ಈ ನಿಟ್ಟಿನಲ್ಲಿ ಒತ್ತಡದ ಜೀವನದ ನಡುವೆಯೂ ಇಂತಹ ಧಾರ್ಮಿಕವಾದ ಕಾರ್ಯಗಳಿಂದ ರೋಗಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಯೇಸುವಿನ ಬಗ್ಗೆ ಭಕ್ತಿಗೀತೆಗಳನ್ನು ಆಯೋಜಿಸಲಾಗಿತ್ತು. ಟ್ರಸ್ಟಿನ ವತಿಯಿಂದ ಗ್ರಾಮದ ಬಡವರಿಗೆ ಬಟ್ಟೆಗಳನ್ನು ದಾನಮಾಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನಮ್ಮ, ಅಂಬರೀಶ್, ಲಕ್ಷ್ಮಣ್, ಮುಖಂಡರಾದ ಕದಿರಪ್ಪ, ದೇವರಾಜ, ನಾರಾಯಣಸ್ವಾಮಿ, ಶಾಮಣ್ಣ, ಗ್ರಾ.ಪಂ.ಪಿಡಿಓ ಅಂಜನ್ಕುಮಾರ್, ಟ್ರಸ್ಟಿನ ಮಂಜುನಾಥ್, ಚೌಡಪ್ಪ, ಗಂಗನಹಳ್ಳಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.
ವೈಕುಂಠ ದ್ವಾದಶಿ
ವೈಕುಂಠ ದ್ವಾದಶಿಯ ಪ್ರಯುಕ್ತ ಮಂಗಳವಾರದಂದು ನಗರದ ಪುರಾಣ ಪ್ರಸಿದ್ಧ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠದ ಬಾಗಿಲು ತೆಗೆಯಲಾಗಿತ್ತು. ವಿಶೇಷ ಪೂಜೆಯನ್ನು ವಾಸವಿ ಮಂಡಳಿ ಮತ್ತು ವಾಸವಿ ಯುವಜನ ಸಂಘದಿಂದ ಆಯೋಜಿಸಲಾಗಿತ್ತು.
ವಾಸವಿ ರಸ್ತೆಯಲ್ಲಿ ಸಾಲುಗಟ್ಟಿದ್ದ ಜನರು ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು. ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿರಿಸಿದ್ದು, ಭಕ್ತರು ದೇವರ ಅಡಿಯಲ್ಲಿ ಹಾದು ಬರಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ತಂಡೋಪತಂಡವಾಗಿ ಆಗಮಿಸಿದ ಭಕ್ತಾಧಿಗಳು ರಾತ್ರಿವರೆಗೂ ವೈಕುಂಠದ ಬಾಗಿಲ ಮೂಲಕ ದೇವರ ದರ್ಶನ ಪಡೆದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಕೇದಾರಿನಾಥ್, ವಾಸವಿ ಮಂಡಳಿಯ ಅಧ್ಯಕ್ಷ ಎಲ್.ವಿ.ವಿ.ಗುಪ್ತ, ನಾಗೇಶ್, ಸಂತೋಷ್, ರಾಜೇಶ್, ಸಂದೀಪ್, ವಿಘ್ನೇಶ್, ಕೆ.ಎಲ್.ವಿ.ಪ್ರಸಾದ್, ಭದ್ರಿನಾಥ್, ಸುರೇಶ್, ಸತ್ಯನಾರಾಯಣಶೆಟ್ಟಿ ಮತ್ತಿತರರು ಹಾಜರಿದ್ದರು.
ಶುದ್ಧ ನೀರಿನ ಹಕ್ಕೊತ್ತಾಯ ಮತ್ತು ಅಸ್ಪೃಶ್ಯತಾ ನಿವಾರಣೆ
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶುದ್ಧ ನೀರಿನ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ಒಂದು ಲಕ್ಷ ಅಂಚೆ ಕಾರ್ಡುಗಳನ್ನು ಕಳಿಸುವ ಮೂಲಕ ಹಾಗೂ ಈ ಕುರಿತಂತೆ ಮನೆಗೊಂದು ಕರಪತ್ರ ತಲುಪಿಸುವ ಮೂಲಕ ನಡೆಸುತ್ತಿರುವುದಾಗಿ ಸಾಹಿತಿ ಸ.ರಘುನಾಥ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಜಿಲ್ಲೆಗೆ ನೀರಿನ ಅಗತ್ಯತೆಯ ಕುರಿತಂತೆ ಕರಪತ್ರಗಳನ್ನು ಹಂಚುವ ಮೂಲಕ ನಡೆಸಿದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿಗಳಿಗೆ ‘ಹರಿದು ಬರದಿರಲಿ ವಿಷದ ಕೊಳಚೆ, ಹರಿಸಿ ತನ್ನಿ ಶುದ್ಧ ನೀರಿನ ಹೊಳೆ’, ‘ಶುದ್ಧ ನೀರು ಕೊಡಿ, ಬದುಕಿಗೆ ಬೇಸಾಯಕ್ಕೆ’ ಎಂದು ಬರೆದಿರುವ ಒಂದು ಲಕ್ಷ ಅಂಚೆ ಕಾರ್ಡುಗಳನ್ನು ಕಳುಹಿಸಲಾಗುವುದು. ಕರಪತ್ರವನ್ನು ವಿದ್ಯಾರ್ಥಿಗಳ ಮೂಲಕ ಮನೆಮನೆಗೂ ತಲುಪಿಸಿ ಶುದ್ಧವಾದ ನೀರಿನ ಮಹತ್ವ ಮತ್ತು ಅಗತ್ಯದ ಬಗ್ಗೆ ತಿಳಿಸುವಂತೆ ಕೋರಲಾಗುತ್ತಿದೆ. ಇದರೊಂದಿಗೆ ಅಸ್ಪೃಶ್ಯತಾ ನಿವಾರಣೆಗೆ ಪ್ರತಿಜ್ಞಾ ವಿಧಿಯನ್ನು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಹಸಿರುಹೊನ್ನು ಬಳಗ ಮತ್ತು ಡಾ.ಶಿವಪ್ಪ ಅವರಿಂದ ಆರಂಭಗೊಂಡ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮ ಜೊತೆಯಾಗಿ ‘ನೀರು ಮತ್ತು ಅಸ್ಪೃಶ್ಯತೆ’ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ. ಹಸುರನ್ನು ಉಳಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಈ ನಾಡಿಗೆ ಹಾಲು, ರೇಷ್ಮೆ , ಚಿನ್ನ, ತರಕಾರಿ ಮುಂತಾದ ಕೊಡುಗೆಯನ್ನು ಕೊಟ್ಟಿರುವಾಗ, ನಾಡಿನ ನದಿ ನೀರಿನಲ್ಲಿ ಪಾಲನ್ನು ಏಕೆ ಕೊಡುತ್ತಿಲ್ಲ. ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕಲ್ಲವೆ ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ 30 ಕಾಲೇಜುಗಳಲ್ಲಿ, 25 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕರಪತ್ರಗಳನ್ನು ಹಂಚಿ, ಅಂಚೆ ಕಾರ್ಡುಗಳನ್ನು ಬರೆಸಲಾಗಿದೆ. ಸುಮಾರು 60 ಸಾವಿರ ಕರಪತ್ರಗಳು ಮನೆಗಳಿಗೆ ತಲುಪಿವೆ. 30 ಸಾವಿರ ಅಂಚೆ ಕಾರ್ಡುಗಳು ಸಿದ್ಧವಾಗಿದ್ದಾವೆ. 50 ಸಾವಿರ ಕಾರ್ಡುಗಳು ಸಿದ್ಧವಾದೊಡನೆ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಮುತ್ತೂರು ಮತ್ತು ಮೇಲೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಅಭಿಯಾನವನ್ನು ನಡೆಸಿರುವುದಾಗಿ ಹೇಳಿದರು.
ಮುಳಬಾಗಿಲು ಡಾ.ಅರಿವು ಶಿವಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಪ್ರಾಧ್ಯಾಪಕ ಶಿವಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಿಂಡಿಪಾಪನಹಳ್ಳಿಯ ತತ್ವಪದ ಗಾಯಕಿ ಲಕ್ಷ್ಮಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿ
ನಾಡೋಜ ಪ್ರಶಸ್ತಿ ಪುರಸ್ಕೃತರಾದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಗ್ರಾಮವಾದ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತತ್ವಪದ ಗಾಯಕಿ ಲಕ್ಷ್ಮಮ್ಮ ಎಂಬುವರಿಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಗಂಡನನ್ನು ಕಳೆದುಕೊಂಡು ಮಗನೊಂದಿಗೆ ಚಿಕ್ಕ ಹೊಲದಲ್ಲಿ ಮಳೆಯಾಶ್ರಿತ ಬೆಳೆ ಬೆಳೆದುಕೊಂಡು ಜೀವಿಸುತ್ತಿರುವ ಪಿಂಡಿಪಾಪನಹಳ್ಳಿಯ ಲಕ್ಷ್ಮಮ್ಮ ಗ್ರಾಮದ ಮಹಿಳೆಯರ 20 ಮಂದಿ ತಂಡವನ್ನು ಕಟ್ಟಿಕೊಂಡು ಭಜನೆ ಮತ್ತು ತತ್ವಪದವನ್ನು ವಿವಿದೆಡೆ ತೆರಳಿ ನಡೆಸಿಕೊಡುತ್ತಾರೆ. ಪ್ರತಿ ಶುಕ್ರವಾರ ತಮ್ಮ ತಂಡದೊಂದಿಗೆ ಗ್ರಾಮದ ಸತ್ಯಮ್ಮನ ಗುಡಿ ಮತ್ತು ಮಂಗಳವಾರ ಗಂಗಮ್ಮನ ಗುಡಿಯಲ್ಲಿ ಭಜನೆ ಹಾಗೂ ಗಾಯನ ನಡೆಸುತ್ತಾರೆ. ಈಗಾಗಲೇ ತಿರುಪತಿ ಸೇರಿದಂತೆ ವಿವಿದೆಡೆ ತೆರಳಿ ಗಾಯನವನ್ನು ನಡೆಸಿಕೊಟ್ಟು ಬಂದಿದ್ದಾರೆ.
ಈಕೆಯ ಮಗ ಮಧು ತಮಟೆ ಕಲಾವಿದ ನಾಡೋಜ ಮುನಿವೆಂಕಟಪ್ಪ ಅವರ ಶಿಷ್ಯನಾಗಿದ್ದು, ಅವರೊಂದಿಗೆ ಎರಡು ಬಾರಿ ಅಮೆರಿಕೆಯ ಪ್ರವಾಸ ಮಾಡಿ ಕಲಾಪ್ರದರ್ಶನ ಮಾಡಿ ಬಂದಿದ್ದಾನೆ.
ಜಾನಪದ ಅಕಾಡೆಮಿ ಪ್ರಶಸ್ತಿಯು ಪ್ರಕಟವಾದ ಹಿನ್ನೆಲೆಯಲ್ಲಿ ಮಂಗಳವಾರ ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪಿಂಡಿಪಾಪನಹಳ್ಳಿಯ ಲಕ್ಷ್ಮಮ್ಮ ಅವರನ್ನು ಸನ್ಮಾನಿಸಿದರು.
‘ನಮ್ಮದೇ ಗ್ರಾಮದ ತತ್ವಪದ ಗಾಯಕಿ ಲಕ್ಷ್ಮಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸುತ್ತಿರುವುದು ಸಂತಸ ತಂದಿದೆ. ಕಳೆದ ವರ್ಷ ಗಂಡನನ್ನು ಕಳೆದುಕೊಂಡ ಈಕೆ ಮಗನೊಂದಿಗೆ ಪುಟ್ಟ ಮನೆಯಲ್ಲಿ ಹೊಲದ ಆಸರೆಯಲ್ಲಿ ಜೀವಿಸುತ್ತಿದ್ದಾಳೆ. ತತ್ವಪದ ಗಾಯನದ ತಂಡವೊಂದನ್ನು ಕಟ್ಟಿಕೊಂಡು ದೇವರಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾಳೆ. ಈ ಪ್ರಶಸ್ತಿಯು ಕಲಾವಿದರಿಗೆ ಪ್ರೇರಕ ಮತ್ತು ಪ್ರೋತ್ಸಾಹದಾಯಕ’ ಎಂದು ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.
‘ಕಲಬುರ್ಗಿಯಲ್ಲಿ ಡಿಸೆಂಬರ್ 27ರಂದು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ ಮೊದಲ ವಾರಕ್ಕೆ ದೂಡಲಾಗಿದೆ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ’ ಎಂದು ಅವರು ಹೇಳಿದರು.
ಅನಂತಪದ್ಮನಾಭ ಸ್ವಾಮಿಯ ತೆಪ್ಪೋತ್ಸವ
ತಾಲ್ಲೂಕಿನ ಕಂಬಾಲಹಳ್ಳಿಯ ಒಡೆಯನ ಕೆರೆ ತುಂಬಿರುವ ಪ್ರಯುಕ್ತ ಭಾನುವಾರ ಅನಂತಪದ್ಮನಾಭ ಸ್ವಾಮಿಯ ಉತ್ಸವಮೂರ್ತಿಯೊಂದಿಗೆ ವಿಜೃಂಭಣೆಯಿಂದ ತೆಪ್ಪೋತ್ಸವವನ್ನು ಆಚರಿಸಲಾಯಿತು.
ಸುತ್ತಮುತ್ತಲಿನ ತಾಲ್ಲೂಕುಗಳಿಂದ ಮತ್ತು ಗ್ರಾಮಾಂತರದಿಂದ ಭಕ್ತರು ಆಗಮಿಸಿ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ದೇವಾಲಯದ ಆವರಣದಲ್ಲಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದರು.
‘ನೀನು ಒಲಿದು ಬಂದರೆ ನನ್ನ ಸಾಲಗಳು ತೀರಿಹೋಗುವುವು’ ಎಂದು ಕೈವಾರ ತಾತಯ್ಯ ಏಮಮ್ಮ ಗಂಗಾಭವಾನಿ ಎಂಬ ಕೀರ್ತನೆಯಲ್ಲಿ ಹೇಳಿ ಬಯಲು ಸೀಮೆಗೆ ನೀರಿನಿಂದಲೇ ಸುಖ ಶಾಂತಿ ಎಂಬುದನ್ನು ಹೇಳಿರುವಂತೆಯೇ ಎರಡು ನೂರು ವರ್ಷಗಳು ಕಳೆದರೂ ಈ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಹಾಗೂ ಪ್ರಾರ್ಥನೆ ಮುಂದುವರೆದಿದೆ. ಅದರಂತೆಯೇ ಕೆರೆಗಳು ಮತ್ತು ದೊಡ್ಡ ಕುಂಟೆಗಳು ತುಂಬಿದರೆ ಜನ ತೆಪ್ಪೋತ್ಸವವನ್ನು ಆಚರಿಸುತ್ತಾ ಗಂಗೆಗೆ ಕೃತಜ್ಞತೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿಯೂ ಹದಿನಾರು ವರ್ಷಗಳ ನಂತರ ಕೆರೆ ತುಂಬಿ ಕೋಡಿ ಹೋದ ಹಿನ್ನೆಯಲ್ಲಿ ತೆಪ್ಪೋತ್ಸವವನ್ನು ಆಚರಿಸಲಾಗುತ್ತಿದೆ. ಕೆರೆ ತುಂಬಿರುವುದರಿಂದ ಅಂತರ್ಜಲ ವೃದ್ಧಿಸಿ, ಜನ ಜಾನುವಾರುಗಳಿಗೆ ನೆಮ್ಮದಿಯನ್ನು ತಂದಿದೆ’ ಎಂದು ಅನಂತಶಯನಾಚಾರ್ ತಿಳಿಸಿದರು.
ಅರ್ಚಕ ಅಶ್ವತ್ಥನಾರಾಯಣಾಚಾರ್, ಗೋಪಾಲಕೃಷ್ಣಾಚಾರ್, ಶಾಮಾಚಾರ್, ನರಸಿಂಹಾಚಾರ್, ಹರಿ, ಶ್ರೀರಂಗಾಚಾರ್, ಅನಂತಪದ್ಮನಾಭಾಚಾರ್, ವೇಣು ಮತ್ತಿತರರು ಹಾಜರಿದ್ದರು.
ಪ್ರತೀತಿ: ಬೆಟ್ಟಗಳ ನಡುವೆ ಚಂದ್ರಪುಷ್ಕರಣಿ ಎಂದು ಕರೆಯುವ ಒಡೆಯನ ಕೆರೆಯಲ್ಲಿ ಶಯನಾರೂಢನಾಗಿ ಅನಂತಪದ್ಮನಾಭಸ್ವಾಮಿ ಇರುವುದು ಇಲ್ಲಿನ ವಿಶೇಷ.
ಹಿಂದೆ ಚಿಂತಾಮಣಿ ಬಳಿಯ ಗವಿಚಂದ್ರಾಯಸ್ವಾಮಿ ದೇವಸ್ಥಾನದಲ್ಲಿ ದೈವಭಕ್ತಿಯುಳ್ಳ ಬ್ರಾಹ್ಮಣರು ವಾಸಿಸುತ್ತಿದ್ದರು. ಅವರಿಗೆ ಮೊದಲ ಪತ್ನಿಯಿಂದ ಏಳು ಹೆಣ್ಣುಮಕ್ಕಳು ಜನಿಸಿದ್ದರು. ಅಷ್ಟಾಕ್ಷರಿ ಮಹಾಯಾಗ ಮಾಡಿದ ಫಲವಾಗಿ ಅವರ ಎರಡನೇ ಪತ್ನಿಗೆ ಏಳು ಹೆಡೆಯ ಸರ್ಪವು ಜನಿಸಿತು. ಆ ಹೆಣ್ಣು ಮಕ್ಕಳ ಮದುವೆಯ ಸಂದರ್ಭದಲ್ಲಿ ಸರ್ಪವನ್ನು ಕಂಡರೆ ಅಪಶಕುನವಾದೀತೆಂದು ಒಂದು ಮರೆಯಲ್ಲಿ ಸಿಂಬೆಸುತ್ತಿಕೊಂಡು ಈ ಹಾವು ಮಲಗಿತ್ತು. ವಿವಾಹದಲ್ಲಿ ಅಡುಗೆಯವರು ತಿಳಿಯದೇ ಬಿಸಿಯಾದ ಪಾಯಸದ ಪಾತ್ರೆಯನ್ನು ಸಿಂಬೆಯೆಂದು ಬಗೆದು ಹಾವಿನ ಮೇಲಿಟ್ಟ ಪರಿಣಾಮ ಸರ್ಪ ಮರಣಿಸಿತು. ಇದನ್ನು ನೋಡಿ ಎದೆಯೊಡೆದು ಇಬ್ಬರು ತಾಯಂದಿರು ಹಾಗೂ ಏಳು ಮಂದಿ ಅಕ್ಕಂದಿರೂ ಸಾವನ್ನಪ್ಪಿದರು. ಶಾಪದಿಂದ ಸರ್ಪರೂಪ ತಳೆದಿದ್ದ ದೇವತೆಯು ಬ್ರಾಹ್ಮಣನಿಗೆ ಅಂತಿಮ ಸಂಸ್ಕಾರಕ್ಕೆ ಸ್ಥಳವನ್ನು ಸೂಚಿಸಿದರಂತೆ. ಈ ಸ್ಥಳದಲ್ಲಿ ಅನಂತಪದ್ಮನಾಭಸ್ವಾಮಿ ದೇವರನ್ನು ಸ್ಥಾಪಿಸಿ ಪೂಜಿಸಲು ಸೂಚಿಸಿದರಂತೆ.
ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಲಿ
ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಬೇಡಿ. ಹೆಣ್ಣುಮಕ್ಕಳು ಸ್ವಂತ ಚಿಂತನೆ, ಆರ್ಥಿಕ ಸ್ವಾವಲಂಬನೆ, ಶೈಕ್ಷಣಿಕ ಪ್ರಗತಿಯು ಗೌರವ ಸಮಾಜದ ಲಕ್ಷಣಗಳು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ ತಿಳಿಸಿದರು.
ನಗರದ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಾನವ ಹಕ್ಕುಗಳ ಜಾಗೃತಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ಧ ನೀರು, ವಾತಾವರಣ, ಆಹಾರ ಭದ್ರತೆ, ಮೂಲಭೂತ ಸೌಕರ್ಯಗಳು, ಆರೋಗ್ಯ, ಶಿಕ್ಷಣ ಎಲ್ಲವೂ ಮಾನವ ಹಕ್ಕುಗಳೇ. ಮಕ್ಕಳ ಹಾಗೂ ಮಹಿಳೆಯರ ಅಕ್ರಮ ಸಾಗಾಣಿಕೆ, ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಮಾನವ ಹಕ್ಕುಗಳ ಆಯೋಗದ ಪ್ರಯತ್ನ ನಿರಂತರವಾಗಿದೆ. ಯಾರು ಬೇಕಾದರೂ ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಲಿಖಿತವಾಗಿ, ದೂರವಾಣಿ ಮೂಲಕ, ಇ ಮೇಲ್ ಉಚಿತವಾಗಿ ದೂರು ನೀಡಬಹುದು. ಟೋಲ್ ಫ್ರೀ ನಂಬರು 180042523333 ಅಳವಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ 53 ಸಾವಿರ ದೂರುಗಳು ದಾಖಲಾಗಿದ್ದು, 38 ಸಾವಿರ ದೂರುಗಳನ್ನಾಗಲೇ ವಿಲೇವಾರಿ ಮಾಡಿದ್ದೇವೆ. ಮೊದಲು ಹೆಚ್ಚಾಗಿ ಪೊಲೀಸರ ವಿರುದ್ಧ ಬರುತ್ತಿದ್ದ ದೂರುಗಳು, ಕ್ರಮೇಣ ರಸ್ತೆ, ಚರಂಡಿ, ಆರೋಗ್ಯ ಮೊದಲಾದ ಮೂಲಭೂತ ಸೌಲಭ್ಯಗಳ ಕುರಿತಂತೆ ಬರುತ್ತಿವೆ. ತಮ್ಮ ಹಕ್ಕುಗಳ ಬಗ್ಗೆ ಎಳೆವಯಸ್ಸಿನಿಂದಲೇ ಮಕ್ಕಳು ಜಾಗೃತರಾದಾಗ ಸಾಮಾಜಿಕ ಸ್ವಾಸ್ಥ್ಯ ಮೂಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸ್ವಾಭಿಮಾನದ ಬಾಳನ್ನು ಕಟ್ಟಿಕೊಳ್ಳಲು, ಸಂಘರ್ಷ ರಹಿತ ಸಮಾಜವನ್ನು ನಿರ್ಮಿಸಲು ಸಕಾರಾತ್ಮಕ ಚಿಂತನೆಗಳು ಅತ್ಯಗತ್ಯ. ವಿದ್ಯಾರ್ಥಿಯ ಜೀವನ ವಿಶೇಷವಾದ್ದು. ವ್ಯಕ್ತಿತ್ವ ನಿರ್ಮಾಣವಾಗುವ ಮಹತ್ತರ ಘಟ್ಟವಿದು. ಸಮಾಜದ, ಸಂಬಂಧಿಕರ, ಗುರುಹಿರಿಯರ, ಗೆಳೆಯರ ಸಂಸರ್ಗದಿಂದ ವ್ಯಕ್ತಿಯಾಗಿ ರೂಪುಗೊಳ್ಳುವ ಕ್ರಿಯೆಗೆ ಪೂರಕ ವಾತಾವರಣ ಬೇಕಿದೆ ಎಂದು ಹೇಳಿದರು.
ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕೆಲವು ವಿಷಯಗಳಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಿವೃತ್ತ ಪೊಲೀಸ್ ಐ.ಜಿ.ಪಿ ಉಲ್ಫತ್ ಹುಸೇನ್, ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಲ್.ಬಾಲು, ಮಾನವ ಹಕ್ಕುಗಳ ಆಯೋಗದ ಕಾನೂನು ಸಲಹೆಗಾರ ಪಿ.ಆರ್.ವಿಜಯಕುಮಾರ್, ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷ ಅಮಾನುಲ್ಲಾ, ರಾಜ್ಯ ಘಟಕದ ಸುದರ್ಶನ್, ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಯೂಸುಫ್, ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

