Home Blog Page 489

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅವಿರೋಧ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೆ.ಡಿ.ಎಸ್ ಬೆಂಬಲಿತ ಸಿ.ಎಚ್.ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯರಾದ ಕೆ.ಮಂಜುನಾಥ್ ಹಾಜರಿದ್ದಾರೆ.

ಗಾಂಧೀಜಿಯವರ ವಿಚಾರಧಾರೆ ಮಕ್ಕಳಿಗೆ ತಿಳಿಸಬೇಕು

0

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸುವುದರೊಂದಿಗೆ ಮಕ್ಕಳನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರೂ ಸೇರಿದಂತೆ ಶಿಕ್ಷಕರ ಮೇಲಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಹೇಳಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಭಕ್ತರಹಳ್ಳಿಯ ಶಾಲಾವರಣದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಗಾಂಧೀ ಅಧ್ಯಯನ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗಾಂಧಿಯವರ ಅಹಿಂಸೆಯೇ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಂತಾಗಿದ್ದರಿಂದ ಪ್ರತಿಯೊಬ್ಬರೂ ಅದರಲ್ಲಿಯೂ ಮುಖ್ಯವಾಗಿ ಇಂದಿನ ಮಕ್ಕಳು ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಅವರನ್ನು ಸಿದ್ದಗೊಳಿಸಬೇಕು. ಗಾಂಧೀ ತತ್ವಗಳೊಂದಿಗೆ ಸಮಾಜದಲ್ಲಿ ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ಸತ್ಯ, ಶಾಂತಿ, ಅಹಿಂಸೆ ಯನ್ನು ರೂಡಿಸಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣ ಕರ್ತರಾಗಬೇಕು ಎಂದರು.
ಸಾಮಾಜಿಕ ಸೇವಾಕರ್ತೆ ಸರೋಜ ವಿ ನಾಯ್ಡು ಮಾತನಾಡಿ, ಸಮಾಜದ ಭಾವೀ ಪ್ರಜೆಗಳಾದ ಮಕ್ಕಳು ಸರ್ವತೋಮುಖವಾಗಿ ಬೆಳೆಯಲು ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆರ್ಥಿಕವಾಗಿ ಉತ್ತಮವಾಗಿರುವವರು ಸಮಾಜದಲ್ಲಿನ ದುರ್ಬಲ ವರ್ಗದ ಜನರಿಗೆ ಸಹಾಯಹಸ್ತ ಚಾಚಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಗಾಂಧೀ ಅಧ್ಯಯನ ಕೇಂದ್ರ ಸ್ಥಾಪಿಸಿರುವ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಶಾಲೆಯ ತ್ರೈವಾರ್ಷಿಕ ಸಂಚಿಕೆ ಹೊಂಬಾಳೆ-–೨ ಪುಸ್ತಕವನ್ನು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಪ್ರೊ, ಜಿ.ಬಿ.ಶಿವರಾಜು ಬಿಡುಗಡೆಗೊಳಿಸಿದರು.
ಶಾಲಾ ಮಕ್ಕಳಿಂದ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ, ಸೋಲಾರ್, ಮಣ್ಣಿನ ಸವಕಳಿ, ಹಾಗೂ ರಾಕೆಟ್ ಉಡಾವಣೆ ಸೇರಿದಂತೆ ವಿವಿಧ ಮಾದರಿಯ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ಶಿಕ್ಷಣ ತಜ್ಞೆ ಎಸ್.ಕೆ.ಪ್ರಭಾ, ನಿವೃತ್ತ ಪ್ರಾಂಶುಪಾಲರಾದ ಡಾ.ರವಿಕಲಾ ಕಾಳಪ್ಪ, ಬಿ.ಎಂ.ವಿ.ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ಕೋಟೆಚನ್ನೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ವೆಂಕಟೇಶ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

ಮುಸ್ಲಿಂ ನಾಗರಿಕರ ಬೃಹತ್ ಪ್ರತಿಭಟನೆ

0

ಹಜರತ್ ಮೊಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರಾಷ್ಟ್ರೀಯ ಹಿಂದು ಮಹಾಸಭಾ ಕಾರ್ಯಕಾರಿ ಅಧ್ಯಕ್ಷ ಕಮಲೇಶ್ ತಿವಾರಿ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ನೂರಾರು ಮುಸ್ಲಿಂ ನಾಗರಿಕರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಕಮಲೇಶ್ ತಿವಾರಿ ವಿರುದ್ಧ ಧಿಕಾರಗಳನ್ನು ಕೂಗುತ್ತಾ ಅಶೋಕ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಿಂದ ತಾಲ್ಲೂಕು ಕಚೇರಿಯವರೆಗೂ ಹಾಗೂ ಅಮೀರ್ಬಾಬಾ ದರ್ಗಾದಿಂದ ತಾಲ್ಲೂಕು ಕಚೇರಿಯವರೆಗೆ ಎರಡು ಪ್ರತಿಭಟನಾ ಮೆರವಣಿಗೆಗಳು ನಡೆದವು.
ಭಾರತ ಸಂವಿಧಾನವು ನಮಗೆ ನಮ್ಮ ಧರ್ಮದನುಸಾರ ಜೀವಿಸಲು ಅಧಿಕಾರ ನೀಡಿದೆ. ಇಡೀ ವಿಶ್ವದಲ್ಲೇ ಬಹು ಧರ್ಮ ಹಾಗೂ ಬಹುಭಾಷೆಗೆ ಹೆಸರಾದ ಭಾರಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿರುವ ಕಮಲೇಶ್ ತಿವಾರಿ, ಮೊಹಮ್ಮದ್ ಪೈಗಂಬರ್ ಅವರ ಕುರಿತಂತೆ ಇಲ್ಲದ ಸಲ್ಲದ ಮಾತುಗಳನ್ನಾಡಿರುವುದು ಖಂಡನೀಯ. ಇತರ ಧರ್ಮೀಯರ ಮನಸ್ಸಿಗೆ ನೋವುಂಟು ಮಾಡುವ ಇಂಥಹವರನ್ನು ಯಾವುದೇ ಸಂಘ ಹಾಗೂ ಸಭೆಗಳಲ್ಲಿ ಸದಸ್ಯತ್ವವನ್ನು ಕೂಡ ನೀಡಬಾರದು. ಸರ್ವಧರ್ಮೀಯರು ಸೌಹಾರ್ಧದಿಂದ ಸಹಬಾಳ್ವೆಯಿಂದ ಬದುಕುತ್ತಿರುವ ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಬಿತ್ತುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಅಹ್ಲೇ ಸುನ್ನತ್ ಉಲ್ ಜಮಾತ್ ಜಾಮಿಯಾ ಮಸೀದಿ ಕಾರ್ಯದರ್ಶಿ ಸಯ್ಯದ್ ಸಲಾಮ್ ಮುಂತಾದ ಮುಖಂಡರು ತಹಶಿಲ್ದಾರ್ ಮನೋರಮಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ಧಾಳಿ

0

ನಕಲಿ ವೈದ್ಯರ ಕ್ಲಿನಿಕ್ಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಮೇರೆಗೆ ನಗರದಲ್ಲಿ ಶುಕ್ರವಾರ ನಗರಸಭೆ ಆಯುಕ್ತ ಹರೀಶ್ ನೇತೃತ್ವದ ತಂಡ ಹಲವು ಕ್ಲಿನಿಕ್ಗಳ ಮೇಲೆ ಧಿಡೀರ್ ಧಾಳಿ ನಡೆಸಿದರು.
ಓ.ಟಿ ವೃತ್ತದ ವಂದನಾ ಕ್ಲಿನಿಕ್, ಸರಸ್ವತಿ ವಿದ್ಯಾಸಂಸ್ಥೆಯ ಪಕ್ಕದಲ್ಲಿರುವ ಮುಬಾರಕ್ ಕ್ಲಿನಿಕ್, ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಎ.ಎಸ್.ಕ್ಲಿನಿಕ್ಗೆ ಧಾಳಿ ನಡೆಸಿ ಸೂಕ್ತ ದಾಖಲೆಗಳ ಪತ್ರವಿಲ್ಲದಿರುವುದರಿಂದ ಮುಚ್ಚಿಸಲಾಯಿತು.
ತಾಲ್ಲೂಕಿನಲ್ಲಿ ಸುಮಾರು 49 ನಕಲಿ ಕ್ಲಿನಿಕ್ಗಳ ಪಟ್ಟಿಯನ್ನು ಜಿಲ್ಲಾ ವೈದ್ಯಕೀಯ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುಷ್ ಅಧಿಕಾರಿಗಳು ತಯಾರಿಸಿದ್ದು, ನಗರದ 21 ಕ್ಲಿನಿಕ್ಗಳು ಪಟ್ಟಿಯಲ್ಲಿವೆ. ಯಾವುದೇ ರಾಜ್ಯದಲ್ಲಿ ಪದವಿ ಪಡೆ­ದಿದ್ದರೂ, ಕರ್ನಾಟಕದಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಕರ್ನಾಟಕ ಯುನಾನಿ ಮತ್ತು ಆಯುರ್ವೇದ ಮಂಡಳಿಯಲ್ಲಿ ಹೆಸರು ನೋಂದಾಯಿಸಿರಬೇಕು. ನಾವು ಹೋಗಿದ್ದ ಕ್ಲಿನಿಕ್ಗಳನ್ನು ಮೂಲ ಪ್ರಮಾಣ ಪತ್ರಗಳು ಇರಲಿಲ್ಲ. ಆದ ಕಾರಣ ಮುಚ್ಚಿಸಲಾಗಿದೆ ಎಂದು ನಗರಸಭೆ ಆಯುಕ್ತ ಹರೀಶ್ ತಿಳಿಸಿದರು.
ನಗರಸಭೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಕಲಾವಿದರಿಗೆ ಸನ್ಮಾನ

0

ತಾಲ್ಲೂಕಿನ ಕೆಂಪನಹಳ್ಳಿಯ ಅಕ್ಕಮಹಾದೇವಿ ದೇವಾಲಯ ಸಮಿತಿ ವತಿಯಿಂದ ಶುಕ್ರವಾರ ತಾಲ್ಲೂಕಿನ ಹಿರಿಯ ತಬಲ ವಿದ್ವಾಂಸರಾದ ವರದನಾಯಕನಹಳ್ಳಿ ವೆಂಕಟರಾಯಪ್ಪ ದಂಪತಿಗಳನ್ನು ಹಾಗೂ ಕೀರ್ತನಕಾರ ತಿಪ್ಪೇನಹಳ್ಳಿ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ವರದನಾಯಕನಹಳ್ಳಿ ವೆಂಕಟರಾಯಪ್ಪ ಅವರು ಸುಮಾರು 30 ವರ್ಷಗಳಿಂದ ಪ್ರತಿ ತಿಂಗಳೂ ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿರುವುದಲ್ಲದೆ, ಅನೇಕ ನಾಟಕ, ಹರಿಕಥೆ, ಭಜನೆ, ದಾಸರ ಆರಾಧನೆಗಳಲ್ಲಿ ಪಾಲ್ಗೊಂಡು ಸನ್ಮಾನ ಹಾಗೂ ಅಭಿನಂದನೆಗೆ ಪಾತ್ರರಾಗಿದ್ದಾರೆ. ದಿ.ವಿ.ಎಸ್.ಪುಟ್ಟನಾಗರಾಜ್, ಮೃದಂಗ ಮುನಿಯಪ್ಪ, ಹನುಮಂತಪ್ಪ ಅವರಲ್ಲಿ ಶಿಕ್ಷಣ ಪಡೆದಿದ್ದ ಇವರು ಸನ್ಮಾನ ಸ್ವೀಕರಿಸಿದಾಗ ಗುರುಗಳನ್ನು ನೆನೆದು ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಗೀತ ಹಾಗೂ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪಿಟೀಲು ವಿದ್ವಾನ್ ವಿ.ಶ್ಯಾಮಸುಂದರ್, ಕಲಾವಿದರಾದ ಎಸ್.ವಿ.ರಾಮಮೂರ್ತಿ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಶಿವಶಂಕರ, ಮುನಿರೆಡ್ಡಿ, ಶೆಟ್ಟಹಳ್ಳಿ ಸೀನಪ್ಪ, ನಾಗರಾಜ್, ಮುನಿಕೃಷ್ಣಪ್ಪ, ಲೋಕೇಶ, ಗ್ರಾಮಸ್ಥರಾದ ಅಬ್ಲೂಡು ಬೈರಪ್ಪ, ನಾರಾಯಣಮ್ಮ ಮತ್ತಿತರರು ಹಾಜರಿದ್ದರು.

ಯಂತ್ರದ ಆಗಮನದಿಂದ ರಾಗಿ ಬೆಳೆಯ ಕಟಾವಿಗೆ ಅನುಕೂಲಕರ

0

ವ್ಯವಸಾಯಕ್ಕೆ ಬರುವ ಜಾನುವಾರುಗಳ ಸಾಕಣಿಕೆ ಕ್ಷೀಣವಾದದ್ದು, ಕೂಲಿಯಾಳುಗಳ ಅಭಾವ, ತೀವ್ರ ಜಲಕ್ಷಾಮ ಮುಂತಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ತಮ್ಮ ಕೈಗೆ ಎಟುಕುವಂತಹ ಆಧುನಿಕ ಕೃಷಿ ಯಂತ್ರೋಪಕರಣಗಳಿಗೆ ಶರಣಾಗತೊಡಗಿದ್ದಾರೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಗೆ ಬೃಹತ್ ಯಂತ್ರದ ಆಗಮನವಾಗಿದೆ. ರಾಗಿ ಬೆಳೆಯ ಕಟಾವನ್ನು ಯಂತ್ರದ ಮೂಲಕ ನಡೆಸಲಾಗುತ್ತಿದೆ. ಒಬ್ಬರಿಂದೊಬ್ಬರು ಯಂತ್ರದ ಬಗ್ಗೆ ತಿಳಿದುಕೊಂಡು ತಮ್ಮ ಹೊಲಕ್ಕೂ ಕರೆದೊಯ್ಯುತ್ತಿದ್ದಾರೆ. ಸಮಯ ಹಾಗೂ ಹಣದ ಉಳಿತಾಯವಾಗುತ್ತದೆಂದು ರೈತರು ಯಂತ್ರದ ಮೊರೆಹೋಗಿದ್ದಾರೆ.
ಕೃಷಿಯಲ್ಲಿ ಮಿತ್ಸುಬಿಷಿ ಟಿಲ್ಲರ್ ಪ್ರವೇಶದೊಂದಿಗೆ ಯಂತ್ರಗಾರಿಕೆಯ ಪ್ರವೇಶವಾಯಿತು ಎನ್ನಬಹುದು. ನಂತರದಲ್ಲಿ ಟ್ರಾಕ್ಟರ್ ಇತ್ಯಾದಿಗಳು ಬರುತ್ತಿದ್ದಂತೆ ಕೃಷಿಯಲ್ಲಿ ಎತ್ತು ಮತ್ತು ಕೋಣಗಳ ಪ್ರಾಶಸ್ತ್ಯ ಅಥವಾ ಬಳಕೆ ಕಡಿಮೆಯಾಗತೊಡಗಿತು. ಇದಕ್ಕೆ ಅನುಕೂಲವೆಂಬಂತೆ ಜಾನುವಾರು ಮೇವು ನೀರುಗಳಿಗೆ ಬರವುಂಟಾಗುವಂತೆ ಮಳೆರಾಯ ಮಾಡಿದ. ವರ್ಷದಿಂದ ವರ್ಷಕ್ಕೆ ವರ್ಷಾಪಾತ ಕಡಿಮೆಯಾದಂತೆ ಅದರ ಪ್ರಭಾವ ಕೃಷಿ ಮತ್ತು ಜಾನುವಾರು ಕೆಲಸಗಳ ಮೇಲೆ ಉಂಟಾಯಿತು. ಈ ಕೊರತೆಯನ್ನು ನಿವಾರಿಸಿಕೊಳ್ಳಲು ಕೃಷಿ ಯಂತ್ರಗಳಿಗೆ ಮೊರೆಹೋಗುವುದು ರೈತನಿಗೆ ಅನಿವಾರ್ಯವಾಯಿತು. ಸಣ್ಣಗಾತ್ರದ ಯಂತ್ರಗಳನ್ನು ಅವಲಂಬಿಸಿದ್ದ ಕೃಷಿಕ ಈಗ ಬೃಹತ್ ಯಂತ್ರಗಳನ್ನು ತನ್ನ ಹೊಲಗದ್ದೆಗಳಿಗೆ ಬರಮಾಡಿಕೊಳ್ಳುತ್ತಿದ್ದಾನೆ.
ಹಿಂದೆ ಹೊಲಗದ್ದೆಗಳ ಕೊಯ್ಲು ಕಾರ್ಯಗಳು ಮಾನವ ಶಕ್ತಿಯಿಂದ ನಡೆಯುತ್ತಿದ್ದವು. ಇದರ ಕಾಲಾವಧಿ ದಿನಗಟ್ಟಲೆ ಆಗುತ್ತಿತ್ತು. ಆಗ ಕೃಷಿ ಕಾರ್ಮಿಕರು ಸುಲಭವಾಗಿ ಸಿಗುತ್ತಿದ್ದರು. ಕಾರಣ ಸರ್ಕಾರಿ ಯೋಜನೆಗಳ ಕೃಷಿಯೇತರ ಕಾಮಗಾರಿಗಳು ಮತ್ತು ಗುತ್ತಿಗೆ ಪದ್ಧತಿ ಬಹಳ ಕಡಿಮೆಯದಾಗಿತ್ತು. ದುಡಿಮೆಯೆಂದರೆ ಕೃಷಿರಂಗದಲ್ಲಿ ಮಾತ್ರ ಎಂಬಂತಾಗಿತ್ತು.
ಬದಲಾದ ಪರಿಸರ ಮತ್ತು ಆಧುನಿಕ ಕೃಷಿ ವಿಜ್ಞಾನ ಕ್ಷೇತ್ರದಲ್ಲಾದ ಆವಿಷ್ಕಾರಗಳು ಆದ್ಯತೆಗಳ ಕ್ರಮವನ್ನೇ ಬದಲಿಸಿಬಿಟ್ಟವು. ಹಾಗೆಯೇ ಬೀಜ ಸಂಸ್ಕೃತಿ ಮತ್ತು ಬೇಸಾಯದ ಕಾಲ – ಕ್ರಮಗಳಲ್ಲಿಯೂ ಬದಲಾವಣೆಗಳಾದವು. ಇದನ್ನು ಅನುಸರಿಸುವುದು ಲಾಭದಾಯಕ ಅನ್ನಿಸಿ ಮತ್ತು ಕಾರ್ಯಶೀಘ್ರತೆ ಎಂಬುದನ್ನು ಮನಗಂಡು ಕೂರಿಗೆ ಬಿತ್ತನೆ, ಕೈ ಬಿತ್ತನೆ, ಕೂಲಿಕಾರರಿಂದ ಕಳೆ ತೆಗೆಸುವುದು, ಕೈ ಕುಯಿಲು ಇವೆಲ್ಲಾ ಹಿಂದಕ್ಕೆ ಸರಿದು ಮಾನವನ ಕೈ ಆಡುತ್ತಿದ್ದ ಹೊಲಗದ್ದೆಗಳಲ್ಲಿ ಯಂತ್ರಗಳ ಮುಳ್ಳು ಇಲ್ಲವೆ ಹಲ್ಲುಗಳು ಆಡತೊಡಗಿದವು.
ಸರಳ ಹಾಗೂ ಸುಲಭವಾದದ್ದನ್ನು ಬಳಸಿಕೊಳ್ಳುವುದು ಮಾನವನ ಸಹಜ ಗುಣವಾಗಿ ಬೆಳೆದುಬಂದಂತೆ ಶ್ರಮಿಕನಾದ ರೈತನು ಇದರಿಂದ ದೂರ ಸರಿಯದೆ ಯಂತ್ರೋಪಕರಣಗಳನ್ನು ತನ್ನ ಕೆಲಸಕಾರ್ಯಗಳಲ್ಲಿ ಬಳಕೆಗೆ ತಂದುಕೊಂಡ. ದೊಡ್ಡ ಮತ್ತು ಸ್ಥಿತಿವಂತ ರೈತರು ಬಂಡವಾಳ ಹಾಕಿ ಯಂತ್ರೋಪಕರಣಗಳನ್ನು ಖರೀದಿಸಿಕೊಂಡರೆ ಮಧ್ಯಮ ವರ್ಗದ ಅನುಕೂಲಸ್ಥ ರೈತ ಬ್ಯಾಂಕು ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಮಾಡಿ ಇವನ್ನು ತೆಗೆದುಕೊಳ್ಳುವಂತಾಯಿತು. ಸಣ್ಣ ಹಿಡುವಳಿದಾರ ರೈತ ಹಾಗೂ ಅತಿ ಸಣ್ಣ ರೈತರು ಇಂತಹ ಯಂತ್ರಗಳನ್ನು ಬಾಡಿಗೆಗೆ ಪಡೆಯಬೇಕಾಗಿತು.
ಇದು ಹೊಸ ಪದ್ಧತಿಯೇನೂ ಅಲ್ಲ. ಹಿಂದೆ ಕೂಲಿ ನೇಗಿಲುಗಳು ಎತ್ತಿನ ಗಾಡಿಗಳು ಇದ್ದವು. ಅವುಗಳ ಜಾಗದಲ್ಲಿ ಈಗ ಯಂತ್ರಗಳು ಬಂದಿವೆಯಷ್ಟೆ. ಇದು ಕೃಷಿ ವಲಯದ ಸ್ಥಿತ್ಯಂತರಗಳು. ಹುಲ್ಲು, ಹುರುಳಿ ಬೇಳೆ, ಬೂಸ, ಕಲಗಚ್ಚು, ಕೃಷಿ ಜಾನುವಾರುಗಳಿಗೆ ಉರುವಲಾಗಿದ್ದವು. ಆ ಜಾಗದಲ್ಲಿ ಈಗ ಡೀಸಲ್ ಬಳಕೆಯಾಗುತ್ತಿದೆಯಷ್ಟೆ.
ಕಟಾವು ಮತ್ತು ಕಾಳು ವಿಂಗಡಿಸುವ ಯಂತ್ರವನ್ನು ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಬಚ್ಚಣ್ಣ ಆಂದ್ರದ ಅನಂತಪುರದಿಂದ ತರಿಸಿದ್ದಾರೆ. ಇದರ ವೆಚ್ಚ ಗಂಟೆಯೊಂದಕ್ಕೆ 3,500 ರೂಪಾಯಿಗಳು. ಒಂದು ಗಂಟೆಯ ಅವಧಿಯಲ್ಲಿ ಇದು ಒಂದರಿಂದ ಒಂದೂವರೆ ಎಕರೆಯಲ್ಲಿನ ಬೆಳೆಯನ್ನು ಕಟಾವು ಮಾಡಿ ಹುಲ್ಲು ಮತ್ತು ಕಾಳನ್ನು ಬೇರ್ಪಡಿಸುತ್ತದೆ. ಅವರೆ ಮತ್ತು ಜೋಳದ ಸಾಲುಗಳಿಲ್ಲದಿದ್ದರೆ ಮತ್ತು ಹೊಲ ಚದರವಾಗಿದ್ದರೆ ಕಟಾವಿನ ಕೆಲಸ ಬೇಗ ಮುಗಿಯುತ್ತದೆ. ಹಾಗೆಯೇ ವಿಂಗಡಿಸಿದ ಕಾಳನ್ನು ಈ ಯಂತ್ರ ತನ್ನ ಸಂಗ್ರಹ ಚೇಂಬರಿನಲ್ಲಿ ಇಟ್ಟುಕೊಂಡಿದ್ದು ಅದನ್ನು ಟ್ರಾಕ್ಟರಿಗೆ ವರ್ಗಾಯಿಸುತ್ತದೆ. ಹೀಗಾಗಿ ವರ್ಗಾಯಿಸುವ ಶ್ರಮವೂ ರೈತನಿಗಿರದು. ಜೊತೆಗೆ ಇದೇ ಯಂತ್ರ ದವಸವನ್ನು ಕಲ್ಲು ಮಣ್ಣುಗಳಿರದೆ ಸೋಸುತ್ತದೆ ಎಂದು ಅವರು ಹೇಳಿದರು.
ಸುಗ್ಗಿಕಾಲಕ್ಕೆ ಈ ಯಂತ್ರವನ್ನು ಬರಮಾಡಿಕೊಳ್ಳಲಾಗುತ್ತದೆ. ಒಬ್ಬರ ಕೆಲಸ ಮುಗಿಸಿದ ನಂತರ ಅಕ್ಕಪಕ್ಕದವರು ಇದನ್ನು ಬಾಡಿಗೆಗೆ ಪಡೆಯುತ್ತಾರೆ. ಹೀಗೆ ಈ ಯಂತ್ರ ಹಲವರ ಹೊಲಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಇಂಥಹ ಯಂತ್ರ ಹತ್ತಿರದಲ್ಲೇ ದೊರೆಯುವಂತಾಗಿದ್ದರೆ, ಸ್ವಲ್ಪ ಮಟ್ಟಿಗಿನ ಖರ್ಚು ಕಡಿಮೆಯಾಗುತ್ತಿತ್ತು ಎಂಬುದು ಬಚ್ಚಣ್ಣನವರ ಅನಿಸಿಕೆ.
ಈ ಕೊಯ್ಲು ಯಂತ್ರದಿಂದ ಅನುಕೂಲವಿರುವುದು ಸರಿಯೇ. ಆದರೆ ಅವರೆ, ಜೋಳ, ನವಣೆ, ಹರಿಸಾಮೆ, ಹುಚ್ಚೆಳ್ಳಿನಂಥಹ ಬೆಳೆಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯುವ ಅವಕಾಶಗಳು ಕಡಿಮೆಯಾಗುತ್ತವೆ. ಮತ್ತು ತುಂಡು ಭೂಮಿ ಬೇಸಾಯಕ್ಕೆ ಈ ಯಂತ್ರ ಸಹಕಾರಿಯಲ್ಲ ಎಂಬುದನ್ನು ಗ್ರಹಿಸಬೇಕಿದೆ. ನಮ್ಮಲ್ಲಿ ತುಂಡು ಭೂಮಿಯ ಬೇಸಾಯಗಾರರು ಅನೇಕರಿದ್ದಾರೆ. ಈ ಯಂತ್ರ ಫಾರಮ್ ಸ್ವರೂಪದ ಬೇಸಾಯಗಾರರಿಗೆ ಹೆಚ್ಚು ಉಪಯುಕ್ತ. ಈ ಯಂತ್ರದ ಬಳಕೆಯಿಂದ ಕಣದಲ್ಲಾಗುತ್ತಿದ್ದ ಕೆಲಸಗಳನ್ನು ಮಾಡಬಹುದಾದುದರಿಂದ ಈಗ ರಸ್ತೆಗಳಲ್ಲಿ ಒಕ್ಕಣಿಕೆಗಳಿಂದ ಉಂಟಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಬಹುದು.

ಮಾದರಿ 'ತರಕಾರಿ' ಹಿರಿಯ ಪ್ರಾಥಮಿಕ ಶಾಲೆ

0

ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಬಿಸಿಯೂಟಕ್ಕಾಗಿ ಅಕ್ಕಿಯ ಜೊತೆಗೆ ಬೇಳೆ ಕಾಳನ್ನು ನೀಡುತ್ತಿದೆ. ಮಕ್ಕಳಿಗೆ ಎಲ್ಲಾ ದಿನವೂ ಕೇವಲ ಬೇಳೆ ಸಾರು ಮಾಡಲಾಗುವುದಿಲ್ಲವಲ್ಲ. ಜೊತೆಗೆ ಸಾಂಬಾರಿನಲ್ಲಿ ಪೌಷ್ಟಿಕಾಂಶ ಬೇಕು. ಅದಕ್ಕಾಗಿ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ತರವನ್ನು ಕಂಡುಕೊಂಡಿದ್ದಾರೆ.
ಬಗೆ ಬಗೆಯ ತರಕಾರಿಗಳನ್ನು ಶಾಲಾ ಆವರಣದಲ್ಲಿ ಬೆಳೆಸಿ ಅದನ್ನು ಮಕ್ಕಳಿಗಾಗಿ ಬಳಸುವ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರರಿಗೆ ಮಾದರಿಯಾಗಿದ್ದಾರೆ. ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದ್ದು, ಸರ್ಕಾರದ ಅನುದಾನ ಮತ್ತು ಗ್ರಾಮ-­ಸ್ಥರ ನೆರವಿನಿಂದ ಕಾಂಪೌಂಡ್ ನಿರ್ಮಿಸ­ಲಾಗಿದೆ. ‘ವಿಷನ್ ಗ್ರೀನ್’ ಎಂಬ ಸಂಘ ರಚಿಸಿಕೊಂಡು, ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶ ಹೊಂದಿರುವ ಒಂದು ತಂಡ ಶಾಲೆಯೊಂದಿಗೆ ಸೇರಿ ಕಳೆದ ವರ್ಷ ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ, ಮಹಾ­ಗನಿ, ಬಸವನ ಪಾದ, ಮಾವು, ಗಸಗಸೆ, ಅರಳಿ, ಕಾಡು ಬಾದಾಮಿ, ಅತ್ತಿ, ನುಗ್ಗೆ ಮುಂತಾದ ನೂರು ಗಿಡಗಳನ್ನು ನೆಟ್ಟು ಹನಿ ನೀರಾವರಿ ಪೈಪ್ಗಳನ್ನು ಅಳವಡಿಸಿದ್ದರು.
ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಲು ಮುಂದಾದರು. ತೊಗರಿಕಾಯಿ, ಅಲಸಂದಿ, ಕುಂಬಳಕಾಯಿ, ಬಸಲೆಸೊಪ್ಪು, ಅರಿವೆಸೊಪ್ಪು, ನುಗ್ಗೆಕಾಯಿ, ಕರಿಬೇವು, ಅಮೃತಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಗೊಂಗೂರ ಸೊಪ್ಪು, ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಮುಂತಾದವುಗಳನ್ನು ಬೆಳೆಯುತ್ತಾ ಬಿಸಿಯೂಟದ ರುಚಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬೇಳೆ ಸಾರು ಮಾತ್ರವಿದ್ದರೆ, ವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬೇಳೆ ಕಾಳಿನ ಜೊತೆಗೆ ಬಸಳೆ, ಹರಿವೆ, ನುಗ್ಗೆಕಾಯಿ, ಬೆಂಡೆಕಾಯಿ, ವಿವಿಧ ಸೊಪ್ಪುಗಳು ಹೀಗೆ ವಿಧವಿಧ ತರಕಾರಿಗಳ ಸಾಂಬಾರು ಸಿಗುತ್ತದೆ.
‘ತೋಟವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಆ ಮೂಲಕ ಮಕ್ಕಳಿಗೆ ಸ್ವಾವಲಂಬನೆ, ಕೃಷಿ, ಪರಿಸರದ ಪಾಠ. ಶಾಲೆಗೆ ಬೇಕಾದಷ್ಟು ತರಕಾರಿಯನ್ನು ಈ ತೋಟದಲ್ಲಿ ಬೆಳೆಸಲಾಗುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಬಳಸುತ್ತಿಲ್ಲ. ತರಗೆಲೆ ಸೊಪ್ಪುಗಳು, ಸೆಗಣಿ ಹಾಗೂ ತೊಳೆದ ನೀರು ಗೊಬ್ಬರವಾಗಿ ಬಳಕೆಯಾಗುತ್ತದೆ. ಕೋತಿಗಳ ಕಾಟವಿದ್ದರೂ ವಿದ್ಯಾರ್ಥಿಗಳ ಉತ್ಸಹಕ್ಕೆ ಕಮ್ಮಿಯಿಲ್ಲ’ ಎನ್ನುತ್ತಾರೆ ಶಿಕ್ಷಕ ರಾಮಕೃಷ್ಣ.

ವಿದ್ಯಾರ್ಥಿಗಳಿಗೆ ಮಹಾ ವಿಜ್ಞಾನ ಮೇಳ

0

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು, ವಿಜ್ಞಾನದ ಪ್ರಯೋಗಗಳ ಮೂಲಕ ಅವರ ಆಲೋಚನೆಯ ದಿಕ್ಕನ್ನು ಬದಲಿಸುವುದು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಪಠ್ಯ ಮತ್ತು ಪಠ್ಯೇತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡುವ ಉದ್ದೇಶದಿಂದ ವಿಜ್ಞಾನ ಮೇಳವನ್ನು ಆಯೋಜಿಸಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿ.ವೈ.ಪಿ.ಸಿ.ಆರ್.ಎಂ.ಎಸ್.ಎ ಮಂಜುನಾಥ್ ತಿಳಿಸಿದರು.
ನಗರದ ವಾಸವಿ ಶಾಲೆಯ ಆವರಣದಲ್ಲಿ ಗುರುವಾರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎರಡು ದಿನಗಳ ಕಾಲ ವಿವಿಧ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಹಾ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪಠ್ಯಕ್ಕೆ ಪೂರಕವಾದ ಈ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಆಗಿದೆ. ಮುಂದಿನ ಕಲಿಕೆಗೆ ಇದು ಇಂಬು ನೀಡುವ ಕಾರ್ಯಕ್ರಮ ಆಗಿದೆ. ಆಡುತ್ತಾ ಕಲಿಯುವ ಸನ್ನಿವೇಶ ಇಲ್ಲಿದೆ. ಸಂವಾದ, ಆರೋಗ್ಯದ ಕುರಿತಂತೆ ಅರಿವು, ಕಡಿಮೆ ವೆಚ್ಚದ ಮಾದರಿಗಳ ಘಟಕ, ಔಷದೀಯ ಸಸ್ಯಗಳ ಮಾಹಿತಿ, ಸೌರಶಕ್ತಿಯ ಘಟಕದ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಶಾಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದರು. ಸಣ್ಣ ಸಣ್ಣ ಗುಂಪುಗಳಲ್ಲಿ ಕುಳಿತು ವೈವಿದ್ಯಮಯ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಪ್ರತಿ ತಂಡಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಕರು ಇದ್ದರು.
ವಿಜ್ಞಾನ ಮೇಳದಲ್ಲಿ ಮಕ್ಕಳಿಗೆ ವೈಜ್ಞಾನಿಕ ದೃಷ್ಟಿಕೋನ, ಸೃಜನಶೀಲತೆ, ಪ್ರಶ್ನೆ ಕೇಳುವ ಮನೋಭಾವ, ಆರೋಗ್ಯ, ನೈರ್ಮಲ್ಯ, ಪರಿಸರ ಪ್ರೇಮ, ವಿಜ್ಞಾನದ ಮಾದರಿಗಳನ್ನು ತಯಾರಿಸುವುದು, ವೈಜ್ಞಾನಿಕ ತಳಹದಿ ಮೇಲೆ ಮನರಂಜನೆ ನೀಡುವ ಆಟಿಕೆಗಳನ್ನು ತಯಾರಿಸುವುದು ಇವುಗಳ ಬಗ್ಗೆ ತರಬೇತಿ ನೀಡಲಾಯಿತು. ಇದರೊಂದಿಗೆ ಮಕ್ಕಳು ತಯಾರಿಸಿ ತಂದ ವೈಜ್ಞಾನಿಕ ಮಾದರಿಗಳ ಪ್ರದರ್ಶನವನ್ನೂ ನಡೆಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಸುಮಾ, ಶಿಕ್ಷಣ ಇಲಾಖೆಯ ಲಕ್ಷ್ಮೀನರಸಿಂಹಗೌಡ, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಗೋಪಿನಾಥ್, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ವಲಯ ಅಧಿಕಾರಿ ಅರುಣ್ ಕುಮಾರ್, 108 ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಾಟಕ ರಚನಾ ಶಿಬಿರಕ್ಕೆ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ವಿ.ಚನ್ನಕೃಷ್ಣ ಕರ್ನಾಟಕ ನಾಟಕ ಅಕಾಡೆಮಿ ರಾಮನಗರ ಜಿಲ್ಲೆಯ ಜಾನಪದ ಲೋಕದಲ್ಲಿ ನಡೆಸಲಿರುವ ನಾಟಕ ರಚನಾ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 21 ರ ಸೋಮವಾರ ಬಂದ್ಗೆ ಕರೆ

0

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹಾಗೂ ಶಾಶ್ವತ ನೀರಾವರಿ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬಂದ್ ಆಚರಿಸದೇ ಬೇರೆ ಮಾರ್ಗವಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ವಿವಿಧ ಸಂಘಟನೆಗಳೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶಾಶ್ವತ ನೀರಾವರಿಗಾಗಿ ಅನಿರ್ಧಿಷ್ಟಕಾಲ ಹೋರಾಟವನ್ನು ನಡೆಸುತ್ತಿದ್ದರೂ ಇದುವರೆಗೂ ಸರ್ಕಾರ ಯಾವುದೇ ಸ್ಪಷ್ಟವಾದ ನಿಲುವಿಗೆ ಬರದೆ ಬಯಲು ಸೀಮೆಯ ಜಿಲ್ಲೆಗಳನ್ನು ಕಡೆಗಣಿಸಿದೆ. ಶುದ್ಧ ಜಲವನ್ನು ಕೇಳುವುದು ನಮ್ಮ ಹಕ್ಕು. ಅದಕ್ಕಾಗಿ ಶಾಶ್ವತ ಯೋಜನೆಯನ್ನು ರೂಪಿಸದೇ ಸರ್ಕಾರ ಕೇವಲ ದಿನದೂಡುತ್ತಿದ್ದರೆ ಬಯಲು ಸೀಮೆ ಮರುಭೂಮಿಯಾಗುತ್ತದೆ. ರೈತರು, ಜಾನುವಾರುಗಳು ಈಗಾಗಲೇ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಆರ್ಥಿಕ ದುಷ್ಪರಿಣಾಮ ಎಲ್ಲಾ ವ್ಯಾಪಾರ ವ್ಯವಹಾರಗಳಿಗೂ ಬಿಸಿ ತಟ್ಟಿದೆ. ಕಾಲಹರಣ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಡಿಸೆಂಬರ್ 21 ರ ಸೋಮವಾರದಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬಂದ್ನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಂಗಡಿಮುಂಗಟ್ಟುಗಳು, ಹೋಟೆಲ್, ಸಿನಿಮಾಮಂದಿರಗಳು, ಪೆಟ್ರೋಲ್ ಬಂಕ್, ಶಾಲಾ ಕಾಲೇಜುಗಳನ್ನು, ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಬಂದ್ ಮಾಡುವ ಮೂಲಕ ನೀರಾವರಿ ಹೋರಾಟಕ್ಕೆ ಬೆಂಬಲಿಸಬೇಕೆಂದು ಕೋರಿದರು.
ಬಂದ್ ನಡೆಸಿ ಸರ್ಕಾರವನ್ನು ಒತ್ತಾಯಿಸಲು ವಿವಿಧ ಸಂಘಟನೆಗಳ ಮುಖಂಡರು ಸಹಮತವನ್ನು ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬೈರೇಗೌಡ, ಮಳ್ಳೂರು ಹರೀಶ್, ಯಲುವಳ್ಳಿ ಸೊಣ್ಣೇಗೌಡ, ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ಮುನಿನಂಜಪ್ಪ, ತಿರುಮಳೇಶ್, ವೆಂಕಟೇಶ್, ವಿವಿಧ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಥ್ಲೆಟಿಕ್ಸ್ ನಲ್ಲಿ ಜಯ

0

ಶಿಡ್ಲಘಟ್ಟ ತಾಲ್ಲೂಕಿನ ಜಯಂತಿಗ್ರಾಮದ ಕ್ರೀಡಾಪಟು ನಾರಾಯಣಸ್ವಾಮಿ ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ 36ನೇ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ 5000 ಮೀಟರ್ ಓಟದಲ್ಲಿ ಚಿನ್ನ, 10 ಸಾವಿರ ಮೀಟರ್ ಓಟದಲ್ಲಿ ಬೆಳ್ಳಿ ಮತ್ತು 400 ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿ ಪದಕವನ್ನು ಪಡೆದು ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಜ್ಞೆ ಬೇಕು ಸ್ವಾಸ್ಥ್ಯಕೆ

0

‘ಪ್ರಜ್ಞೆ’ ಏನಿದು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಇದು ಕೇವಲ ಎಚ್ಚರವಾಗಿರುವ ಸ್ಥಿತಿಯೇ ಅಥವಾ ಅದಕ್ಕಿಂತ ಹೆಚ್ಚಿನದೇ? ಪ್ರಜ್ಞೆ ಎಂಬುದು ಬುದ್ಧಿ. ತಪ್ಪು ಸರಿಗಳನ್ನು ವಿವೇಚಿಸುವ, ಸುಖ-ದು:ಖಗಳನ್ನು ಗ್ರಹಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವಂತೆ ನೋಡಿಕೊಳ್ಳುವ ಮನುಜನ ಒಂದು ವಿಶೇಷ ಘಟಕವೇ ಈ ಪ್ರಜ್ಞೆ. “ಪ್ರಜ್ಞೆ” ಎಂಬ ಮನುಜನ ಘಟಕ ಸರಿಯಾಗಿ ಕಾರ್ಯ ನಿರ್ವಹಿಸಿದರೆ ವ್ಯಕ್ತಿಗೆ ಆರೋಗ್ಯ ನಿಶ್ಚಿತ ಪ್ರಜ್ಞೆಯು ಏರುಪೇರಾದರೆ ರೋಗವು ಖಚಿತ. ಈ ಪ್ರಜ್ಞೆಯ ವ್ಯಾಪ್ತಿಯು ಬಹಳ ವಿಸ್ತಾರವಾದುದು. ಜೀವನದ ಪ್ರತಿಯೊಂದು ಹಂತದಲ್ಲೂ ಪ್ರಜ್ಞೆ ಎಂಬುದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಪ್ರಜ್ಞೆ ಸಮರ್ಪಕವಾಗಿ ಕೆಲಸ ಮಾಡಿದಾಗ ಆರೋಗ್ಯ ಲಾಭ ಸಾಧ್ಯ. ಅದೇ ಪ್ರಜ್ಞೆ ಎಂಬ ಮನುಜನ ಘಟಕ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ, ರೋಗ ಬರುವುದು ಶತ: ಸಿದ್ಧ. ಇಂದಿನ ದಿನಗಳಲ್ಲಿ ಮನುಜ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾನೆ. ಕುಡಿತ, ಧೂಮಪಾನ, ಮಾದಕ ದ್ರವ್ಯ ಸೇವನೆ ಮೊದಲಾದ ಕೆಟ್ಟ ಚಟಗಳಿಗೆ ಮನುಜ ಬಲಿಯಾಗಲು ಮುಖ್ಯ ಕಾರಣವೇ ಅವನ ಈ ಪ್ರಜ್ಞೆ ಎಂಬ ಘಟಕ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು. ವ್ಯಕ್ತಿಯ ಪ್ರಜ್ಞೆಯ ಮಟ್ಟವು ಉತ್ತಮ ಸ್ಥಿತಿಯಲ್ಲಿದ್ದಾಗ ಅವನಲ್ಲಿ ಯಾವುದೇ ರೀತಿಯ ವೈಪರಿತ್ಯ ಉಂಟಾಗದು. ನಮ್ಮ ದೈನಂದಿನ ಚಟುವಟಿಕೆಗಳು, ಆಹಾರ ವಿಧಿ ವಿಧಾನಗಳು ಪ್ರಜ್ಞೆಯನ್ನು ಹೆಚ್ಚಿಸುವಂತೆ ಇರಬೇಕು.
ಪರಿಪೂರ್ಣ ಆಹಾರವೆಂದರೆ ಏಕದಳ ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ, ಜೋಳ, ದ್ವಿದಳ ಧಾನ್ಯಗಳಾದ ಹೆಸರು, ಕಡಲೆ, ಹುರುಳಿ ಮೊದಲಾದವುಗಳು, ಶುದ್ಧವಾದ ನೀರು, ಆಕಳ ಹಾಲು, ತುಪ್ಪ, ಸೈಂದವ ಎಂಬ ವಿಧವಾದ ತಪ್ಪು, ಜೇನುತುಪ್ಪ, ಬೆಟ್ಟದ ನೆಲ್ಲಿಕಾಯಿ, ಕಾಲಾನುಸಾರವಾದ ಹಣ್ಣು ತರಕಾರಿಗಳು. ಈ ರೀತಿಯ ಪರಿಪೂರ್ಣ ಆಹಾರದ ಸೇವನೆಯು ಪ್ರಜ್ಞೆಯ ಮಟ್ಟವನ್ನು ಕಾಪಾಡುವಲ್ಲಿ ಹಾಗೂ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಇನ್ನು ನಮ್ಮ ವೃತ್ತಿ ಜೀವನವೂ ಕ್ರಮಬದ್ಧವಾಗಿರಬೇಕು. ನಮ್ಮ ವೃತ್ತಿಯು ಯಾವಾಗಲೂ ನಮ್ಮ ಬೆಳವಣಿಗೆಗೆ ಪೂರಕವಾಗಿ ಇರಬೇಕೇ ಹೊರತು ಅದು ನಮ್ಮ ವಿಕಾಸಕ್ಕೆ ಮಾರಕವಾಗಕೂಡದು. ಸುಖದ ಹಿಂದೇ ಸಾಗುತ್ತಿರುವ ಮನುಜನು ತನ್ನ ಆರೋಗ್ಯವನ್ನೂ ಪಣವಾಗಿಟ್ಟು ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಸ್ವರ್ಧಾತ್ಮಕವಾದಂತಹ ಇಂದಿನ ಯುಗದಲ್ಲಿ ವೃತ್ತಿಯೆಂಬುದು ವ್ಯಕ್ತಿಗೆ ಒಂದು ಒತ್ತಡವೇ ಆಗುತ್ತಿದೆ. ಯಾವಾಗ ವ್ಯಕ್ತಿಯು ವೃತ್ತಿಯನ್ನು (Pಡಿoಜಿessioಟಿ) ಸಮರ್ಪಕವಾಗಿ ನಿರ್ವಹಿಸುತ್ತಾನೋ ಆಗ ಆತ ಬದುಕಿನಲ್ಲೂ ಯಶಸ್ವಿಯಾಗುತ್ತಾನೆ. ತನ್ನ ವೃತ್ತಿಯನ್ನು ಕುಶಲತೆಯಿಂದ ನಿಭಾಯಿಸುವ ಕಲೆಯನ್ನು ರೂಢಿಸಿಕೊಂಡಾಗ ಮಾತ್ರ ವ್ಯಕ್ತಿಯ ಪ್ರಜ್ಞೆಯು ಉತ್ತೇಜನಗೊಳ್ಳುವುದು.
ಇನ್ನು ಕ್ರಮಬದ್ಧವಾದ ಉಸಿರಾಟವೂ ಕೂಡ ಪ್ರಜ್ಞೆಯ ವಿಕಾಸದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಶರೀರ ಹಾಗೂ ಮನಸ್ಸನ್ನು ಜೋಡಿಸುವ ಒಂದೇ ಒಂದು ಮನುಜನಲ್ಲಿರುವ ಕ್ರಿಯೆಯೆಂದರೆ ಉಸಿರಾಟ. ಈ ಉಸಿರಾಟದ ಕ್ರಮಬದ್ಧತೆಗೆ ಯೋಗಶಾಸ್ತ್ರದಲ್ಲಿ ಹಲವಾರು ಪ್ರಾಣಾಯಾಮದ ವಿಧಾನಗಳನ್ನು ತಿಳಿಸಲಾಗಿದೆ. ಅತ್ಯಂತ ಸರಳವಾದ ವಿಧಾನ ಎಂದರೆ ನಮ್ಮ ಉಸಿರಾಟವನ್ನು ನಾವು ಗಮನಿಸಿಕೊಳ್ಳುತ್ತಾ ಇರುವುದು. ಸಾಧ್ಯವಾದಷ್ಟು ನಿಧಾನವಾದ ಗತಿಯಲ್ಲಿ ಸಮಪ್ರಮಾಣದಲ್ಲಿ ಉಸಿರನ್ನು ತೆಗೆದುಕೊಳ್ಳುವುದು ಹಾಗೂ ಉಸಿರನ್ನು ಬಿಡುವುದು – ಈ ವಿಧಾನವನ್ನು ಅನುಸರಿಸಬೇಕು. ಸರಳವಾದಂತಹ ಈ ಕ್ರಮವನ್ನು ಬೆಳಿಗ್ಗೆ ಹಾಗೂ ಸಂಜೆ ಹತ್ತು ನಿಮಿಷಗಳವರೆಗೆ (ಕನಿಷ್ಠ ಪ್ರಮಾಣದಲ್ಲಿ) ಮಾಡಿದರೂ ಪ್ರಜ್ಞೆಯ ಮಟ್ಟ ವಿಕಾಸವಾಗುತ್ತಾ ಹೋಗುತ್ತದೆ. ಪೂಜ್ಯರಾದ ಓಶೋರವರು ಒಂದು ವಿಶಿಷ್ಟವಾದ ವಿಧಾನವನ್ನು “ಪ್ರಜ್ಞಾ ವಿಕಾಸ” ಕ್ಕಾಗಿ ಹೇಳುತ್ತಾರೆ. ನಮ್ಮ ದೈನಂದಿನ ಎಲ್ಲಾ ಚಟುವಟಿಕೆಗಳನ್ನೂ ಗಮನವಿಟ್ಟು ಮಾಡುವುದು ಹಾಗೂ ಎಲ್ಲಾ ಚಟುವಟಿಕೆಗಳನ್ನು ಆನಂದದಿಂದ ಮಾಡುವುದು. ಇದರಿಂದ ಖಂಡಿತವಾಗಿಯೂ ಪ್ರಜ್ಞೆ ವಿಕಾಸ ಹೊಂದುತ್ತದೆ.
ಜೀವನ ಶಾಸ್ತ್ರ ಆಯುರ್ವೇದವು ಪ್ರಜ್ಞೆಯ ಬಗ್ಗೆ ಅತಿ ಹೆಚ್ಚಿನ ಒತ್ತು ನೀಡಿದೆ. ಹಿತ ಮಿತವಾದ ಆಹಾರವನ್ನು ಕಾಲಕ್ಕೆ ಅನುಸಾರವಾಗಿ ಸೆವಿಸುವುದು, ಒತ್ತಡವಿಲ್ಲದ ವೃತ್ತಿ ಜೀವನ, ಜ್ಞಾನೇಂದ್ರಿಯಗಳ ಸಮರ್ಪಕ ರೀತಿಯ ಬಳಕೆ, ಕ್ರಮಬದ್ಧವಾದ ಉಸಿರಾಟ, ಶಿಸ್ತಿನ ಜೀವನಶೈಲಿ ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಪ್ರಜ್ಞಾ ವಿಕಾಸ ಸಾಧ್ಯ ಎಂಬುದು ಆಯುರ್ವೇದ ಗ್ರಂಥವಾದ ಚರಕ ಸಂಹಿತೆ ಹಾಗೂ ಯೋಗ ದರ್ಶನಗಳಲ್ಲಿ ಹೇಳಲ್ಪಟ್ಟಿದೆ.
ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗವೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ.
“ಸತ್ಯ ಶಿವ ಸುಂದರದ ಸಚ್ಚಿದಾನಂದನದ||
ಭಿತ್ತಿಯಲಿ ಬಣ್ಣ ಬಣ್ಣದ ಜೀವಚಿತ್ರ||
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ
ವೃತ್ತಿ ತನ್ಮಯವಹುದೋ ಮಂಕುತಿಮ್ಮ||
ಪ್ರಜ್ಞೆಯನ್ನು ಅರಿಯೋಣ, ಅರಿತು ಅಳವಡಿಸಿಕೊಳ್ಳೋಣ, ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ ತನ್ಮೂಲಕ ವಿಕಾಸ ಹೊಂದೋಣ.
ಡಾ. ಶ್ರೀವತ್ಸ.

ಅರಣ್ಯಾಧಿಕಾರಿ ವರ್ಗಾವಣೆ

0

ಶಿಡ್ಲಘಟ್ಟದ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಸೋಮವಾರ ವರ್ಗಾವಣೆಗೊಂಡ ವಲಯ ಅರಣ್ಯಾಧಿಕಾರಿ ಎಲ್.ಆರ್.ಸುಬ್ಬರಾವ್ ಅವರಿಗೆ ಬೀಳ್ಕೊಡುಗೆಯನ್ನು ಅರಣ್ಯ ಇಲಾಖೆಯ ಸಿಬ್ಬಂಧಿ ಏರ್ಪಡಿಸಿದ್ದರು. ನೂತನ ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ, ಉಪವಲಯ ಅರಣ್ಯಾಧಿಕಾರಿ ರಾಮಾಂಜನೇಯುಲು, ಅರಣ್ಯರಕ್ಷಕರಾದ ವಿಜಯ್, ಅಭಿಷೇಕ್, ಹುಸೇನ್ ಹಾಜರಿದ್ದರು.

ವಿಪ್ಲವ ಸಾಹಿತ್ಯದಂತೆ ಕನ್ನಡ ಸಾಹಿತ್ಯ ಹೊರಹೊಮ್ಮಲಿ

0

ತೆಲುಗನ್ನಡ ಪ್ರದೇಶವಾದ ನಮ್ಮಲ್ಲಿ ಸಾಹಿತ್ಯದ ಕೊಡುಕೊಳ್ಳುವಿಕೆಯ ಮೂಲಕ ಕನ್ನಡವನ್ನು ಬೆಳೆಸುವ ಕೆಲಸ ನಡೆಯಬೇಕಿದೆ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸೋಮವಾರ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ಕುರುಬರಪೇಟೆಯ ಭುವನಗಿರಿ ಭುವನೇಶ್ವರಿ ವೇದಿಕೆಯಲ್ಲಿ ನಡೆದ ತಾಲ್ಲೂಕು ಮಟ್ಟದ 60 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಅವರು ಮಾತನಾಡಿದರು.
ಕನ್ನಡ ಭಾಷೆಯು ಬೆಳೆಯಲು ಭಾಷಾ ಸಾಮರಸ್ಯವೂ ಒಂದು ಕಾರಣವಾಗುತ್ತದೆ. ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳ ವಿಶಿಷ್ಠ ತೆಲುಗನ್ನಡ ಶಬ್ಧಗಳು ಕನ್ನಡದ ಆಸ್ತಿಯಾಗಿವೆ. ತೆಲುಗಿನ ಸಾಹಿತ್ಯವನ್ನು ಕನ್ನಡಕ್ಕೆ ಕನ್ನಡದ ಸಾಹಿತ್ಯವನ್ನು ತೆಲುಗಿಗೆ ಪರಿಚಯಿಸುವುದರೊಂದಿಗೆ ನಮ್ಮ ಜಿಲ್ಲೆಯಲ್ಲಿನ ವಿಶಿಷ್ಠ ಪದಗಳ ಪ್ರಯೋಗವೂ ಸಾಹಿತ್ಯದ ಮೂಲಕ ಇತರರಿಗೆ ಪರಿಚಿತವಾಗಬೇಕಿದೆ. ರೇಷ್ಮೆ ಮತ್ತು ನೀರಿಗಾಗಿ ನಡೆಸುವ ಹೋರಾಟಗಳು ತೆಲುಗಿನ ವಿಪ್ಲವ ಸಾಹಿತ್ಯದ ಮಾದರಿಯಲ್ಲಿ ಕನ್ನಡದಲ್ಲಿ ಹೊರಹೊಮ್ಮಬೇಕು. ಸಾಹಿತ್ಯವು ಮಣ್ಣಿನ ನೋವು, ನಲಿವನ್ನು ಪ್ರತಿನಿಧಿಸುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇಡಿಯೋ ದೂರದರ್ಶಕ ಕೇಂದ್ರದ ವಿಜ್ಞಾನಿ ಜಿ.ಎನ್.ರಾಜಶೇಖರ, ಹಿರಿಯ ಕನ್ನಡ ಪರ ಹೋರಾಟಗಾರ ಖ.ರಾ.ಖಂಡೇರಾವ್, ಸಾವಯವ ಕೃಷಿಕ ಸೋಮೇನಹಳ್ಳಿ ವೆಂಕಟೇಶಪ್ಪ ಮತ್ತು ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಅವರನ್ನು ಸನ್ಮಾನಿಸಲಾಯಿತು.
ಸಮಾನ ಮನಸ್ಕರ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎನ್.ಈ.ಜಗದೀಶ್ಬಾಬು, ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪ್ರತೀಶ್, ತಾದೂರು ಮಂಜುನಾಥ್, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಎಸ್.ವಿ.ನಾಗರಾಜರಾವ್, ಶ್ರೀನಿವಾಸ್, ಅಕ್ರಂಪಾಷ, ಪುರುಷೋತ್ತಮ್, ಶ್ರೀಧರ್, ಮುನಿರಾಜು, ಹರ್ಷದ್, ಅಫ್ಜಲ್, ತ್ಯಾಗರಾಜ್, ಮುರಳಿ, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಣಕು ಸಂಸತ್ತು

0

ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಅಣಕು ಸಂಸತ್ತು ಕಾರ್ಯಕಲಾಪವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕಿ ಎ.ಎಂ.ಸಾವಿತ್ರಿ ದೇವಿ ಅವರು ಚಾಲನೆ ನೀಡಿದ ನಂತರ ಸದನವು ಪ್ರಾರಂಭವಾಗಿ ಸಂತಾಪಸಭೆ , ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆಗಳು, ವಿಧೇಯಕಗಳ ಮಂಡನೆ, ಅಲ್ಪ ಕಾಲಾವಧಿ ಚರ್ಚೆಯನ್ನು ನಡೆಸಿದರು.
ಸಭಾಧ್ಯಕ್ಷರಾಗಿ ಹರಿಪ್ರಸಾದ್, ಮುಖ್ಯಮಂತ್ರಿಯಾಗಿ ವಿನಯ್ ಕುಮಾರ್, ಉಪಮುಖ್ಯಮಂತ್ರಿಯಾಗಿ ನಾಗವೇಣಿ, ಗೃಹಮಂತ್ರಿಯಾಗಿ ರವಿಕುಮಾರ್, ಹಣಕಾಸು ಮಂತ್ರಿಯಾಗಿ ಯಶ್ವಂತ್, ಶಿಕ್ಷಣ ಸಚಿವೆ ಬಾಂಧವ್ಯ, ಕೃಷಿ ಸಚಿವ ಅರುಣ್ ಕುಮಾರ್, ಪಶುಸಂಗೋಪನೆ ಸಚಿವೆ ರಮ್ಯ, ರೇಷ್ಮೆ ಸಚಿವ ಸಲೀಂ ಪಾಷ, ಗ್ರಾಮೀಣಾಭಿವೃದ್ಧಿ ಹಾಗೂ ವಿದ್ಯುತ್ ಸಚಿವೆ ಭೂಮಿಕ, ನೀರಾವರಿ ಸಚಿವೆ ಭಾರ್ಗವಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಅರ್ಚನಾ, ಆಹಾರ ಸಚಿವ ಮನೋಜ್ ಕುಮಾರ್, ಲೋಕೋಪಯೋಗಿ ಸಚಿವೆ ಮೌನಿಕ, ಸಾರಿಗೆ ಸಚಿವೆ ಕಲ್ಪನ, ಆರೋಗ್ಯ ಸಚಿವೆ ಐಶ್ವರ್ಯ ಭಾಗವಹಿಸಿದ್ದರು.
ವಿರೋಧ ಪಕ್ಷದಲ್ಲಿ ಭರತ್ ಕುಮಾರ್, ಚಲಪತಿ, ಪುನೀತ್ ಕುಮಾರ್, ರವಿಕುಮಾರ್, ಸುರೇಶ್, ಗಜವತಿ , ಗಗನ, ಕೃಷಿ, ರೇಷ್ಮೆ, ಕಬ್ಬು ಬೆಳೆಗಾರರ ಸಮಸ್ಯೆ, ಜಾನುವಾರುಗಳಿಗೆ ಹರಡುವ ಕಾಲುಬಾಯಿ ರೋಗ, ಶಾಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಶಿಕ್ಷಕರ ಕೊರತೆಯ ಬಗ್ಗೆ ಚರ್ಚಿಸಲಾಯಿತು. ರಸ್ತೆಗಳು, ವಿದ್ಯುತ್ ಸಮಸ್ಯೆ, ಇತ್ತಿಚಿನ ನೆರೆ ಹಾವಳಿ, ಅರಣ್ಯದಲ್ಲಿನ ಕಳ್ಳ ಸಾಗಣೆ, ಭ್ರಷ್ಟಾಚಾರಗಳ ಬಗ್ಗೆ ಕೂಡ ಚರ್ಚಿಸಲಾಯಿತು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಮುಖ್ಯಶಿಕ್ಷಕಿ ಎ. ಎಂ. ಸಾವಿತ್ರಿದೇವಿ, ಸಹಶಿಕ್ಷಕರುಗಳಾದ ಎಂ. ಜಿ. ವಿ. ಶಾಸ್ತ್ರೀ, ವಾಣಿ, ಮಮತ, ಆಶಾಜ್ಯೋತಿ, ಸತೀಶ, ಮೂರ್ತಿ, ಸುಶ್ಮಾ ನಾರಾಯಣಕರ್, ಎಸ್ ಡಿ ಎಂ ಸಿ ನಾಮನಿರ್ದೇಶನ ಸದಸ್ಯರಾದ ಬಿ. ಬೈರೇಗೌಡ , ಬಿ. ಎನ್. ಕೃಷ್ಣಯ್ಯ ಸದನದ ಕಾರ್ಯಕಲಾಪಗಳನ್ನು ವೀಕ್ಷಿಸಿ ಆನಂದಿಸಿದರು.

ಕನ್ನಡ ಭಾಷೆಯನ್ನು ಗೌರವಿಸುವುದು ಆದ್ಯತೆಯಾಗಲಿ

0

ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ನೀಡಬೇಕಾದ ಗೌರವ ನೀಡುವುದನ್ನು ಎಲ್ಲಿಯವರೆಗೆ ಕೊಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ಮನೋರಮಾ ತಿಳಿಸಿದರು.
ನಗರದಲ್ಲಿ ಸೋಮವಾರ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ಮಟ್ಟದ 60 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ನಾವು ಮಾತೃಭಾಷೆಯಲ್ಲಿ ತಿಳಿಯುವಷ್ಟು, ಕಲಿಯುವಷ್ಟು ಬೇರೆ ಯಾವ ಭಾಷೆಯಲ್ಲೂ ತಿಳಿಯಲು ಸಾಧ್ಯವಿಲ್ಲ. ಕನ್ನಡ ನಾಡಿನ ಪ್ರಖ್ಯಾತ ಬರಹಗಾರರ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವು ಬಳಸಿ ಬೆಳೆಸದೆ ಬೇರೆ ಯಾರು ತಾನೆ ಉಳಿಸಲು ಸಾಧ್ಯ ಎಂದು ಹೇಳಿದರು.

ಶಿಡ್ಲಘಟ್ಟದ ಸೋಮವಾರ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ಮಟ್ಟದ 60 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಧ್ವಜಾರೋಹಣವನ್ನು ತಹಶೀಲ್ದಾರ್ ಮನೋರಮಾ ನೆರವೇರಿಸಿದರು. ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್ ಹಾಜರಿದ್ದರು.
ಶಿಡ್ಲಘಟ್ಟದ ಸೋಮವಾರ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ಮಟ್ಟದ 60 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಧ್ವಜಾರೋಹಣವನ್ನು ತಹಶೀಲ್ದಾರ್ ಮನೋರಮಾ ನೆರವೇರಿಸಿದರು. ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್ ಹಾಜರಿದ್ದರು.

ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ಸ್ತಬ್ದ ಚಿತ್ರಗಳು, ವೇಷಭೂಷಣಗಳು, ಜಾನಪದ ಕಲಾ ಪ್ರದರ್ಶನ, ಮಂಗಳ ವಾದ್ಯಗಳೊಡನೆ ಭುವನೇಶ್ವರಿಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಗೆ ಚಾಲನೆ ನೀಡಿದ ಹಿರಿಯ ಕನ್ನಡಪರ ಹೋರಾಟಗಾರ ಖ.ರಾ.ಖಂಡೇರಾವ್, ‘ನಮ್ಮ, ಭಾಷೆ, ಪರಂಪರೆ, ಸಂಸ್ಕೃತಿ, ಮಣ್ಣು, ಕೃಷಿ ಮುಂತಾದ ನಮ್ಮತನಗಳನ್ನು ಮೆಲುಕು ಹಾಕುತ್ತಾ ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ನಡೆಸುವ ದಿನವಿದು. ಮುಂದಿನ ದಿನಗಳಲ್ಲಿ ಭಾಷೆಯ ಕುರಿತು ಎಲ್ಲರೂ ಒಗ್ಗೂಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.
ತಾಲ್ಲೂಕಿನ ಹೊಸಪೇಟೆ, ಅಬ್ಲೂಡು, ಕುಂಬಿಗಾನಹಳ್ಳಿ, ಚೀಮಂಗಲ, ವೈ.ಹುಣಸೇನಹಳ್ಳಿ, ಮಳಮಾಚನಹಳ್ಳಿ, ಕುಂದಲಗುರ್ಕಿ, ಸಾದಲಿ, ಈ.ತಿಮ್ಮಸಂದ್ರ, ಬಶೆಟ್ಟಹಳ್ಳಿ, ನಾಗಮಂಗಲ, ಎಸ್.ದೇವಗಾನಹಳ್ಳಿ, ಮೇಲೂರು, ಮಳ್ಳೂರು, ಆನೂರು, ಪಲಿಚೇರ್ಲು, ದೇವರಮಳ್ಳೂರು ಮುಂತಾದ ಗ್ರಾಮ ಪಂಚಾಯತಿಗಳಿಂದ ಅಲಂಕೃತವಾದ ಟ್ರಾಕ್ಟರ್ಗಳು ಆಗಮಿಸಿದ್ದವು. ಪಂಚಾಯತಿಯ ವಿವಿಧ ಯೋಜನೆಗಳ ಭಿತ್ತಿಚಿತ್ರಗಳನ್ನು ಅಂಟಿಸಿಕೊಂಡು ಬಂದಿದ್ದ ಟ್ರಾಕ್ಟರ್ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವೀರಗಾಸೆ, ಗಾರುಡಿಗೊಂಬೆ ಮುಂತಾದ ಕಲಾತಂಡಗಳು ತಮಟೆ ನಾದದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪ್ರತೀಶ್, ತಾದೂರು ಮಂಜುನಾಥ್, ಜಗದೀಶ್ಬಾಬು, ಅಕ್ರಂಪಾಷ, ಪುರುಷೋತ್ತಮ್, ಶ್ರೀಧರ್, ಹರ್ಷದ್, ಅಫ್ಜಲ್, ತ್ಯಾಗರಾಜ್, ಮುರಳಿ, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ಮಖಾನಾ ಬೆಳೆಯುವುದು ಸುಖಾನಾ?

0

ಕೆಲವು ವರ್ಷಗಳ ಹಿಂದೆ ಸಾವಯವ ಗೊಬ್ಬರ ತಯಾರಿಸುವ ಮಿತ್ರರೊಬ್ಬರು ಹೇಳಿದ್ದು ನೆನಪಾಗುತ್ತದೆ. ಅವರೊಮ್ಮೆ ಬಿಹಾರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಹಳ್ಳಿಗಳಲ್ಲಿ ಸಣ್ಣ ಪುಟ್ಟ ನೀರಿನ ಹೊಂಡಗಳಲ್ಲಿ ವಿಶಿಷ್ಟ ಬೀಜವೊಂದನ್ನು ಬೆಳೆದು ಮಾರುವುದನ್ನು ತಿಳಿಸಿದ್ದರು. ಅಂತರ್ಜಾಲದಲ್ಲಿ, ಇಂಗ್ಲೀಷ್ ಪತ್ರಿಕೆಗಳಲ್ಲಿ ಜಾಲಾಡಿದಾಗ ಆ ಬೆಳೆಯ ಪರಿಚಯವಾಗಿತ್ತು. ಅದು ಮಖಾನಾ!
ಬಿಹಾರದ ಉತ್ತರ ಪೂರ್ವ ಪ್ರದೇಶದಲ್ಲಿ ವಿಶ್ವದ ಶೇ. 90ರಷ್ಟು ಮಖಾನಾ ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ 90ರ ದಶಕದಲ್ಲಿಯೇ ಈ ಬೆಳೆಯನ್ನು ಇಲ್ಲಿನ ಕೃಷಿಕರು ವ್ಯವಸ್ಥಿತವಾಗಿ ಬೆಳೆದುದಕ್ಕೆ ದಾಖಲೆಗಳಿವೆ. ಅಲ್ಲಿನ ಮಧುಬನಿ ಜಿಲ್ಲೆಯ ಉಜ್ಜಾನ್‍ನ ರೈತ ಕೇದಾರ್‍ನಾಥ್ ಜಾ ತಮ್ಮದಲ್ಲದೆ ಗುತ್ತಿಗೆ ಮೂಲಕ ಒಟ್ಟು 70 ಹೊಂಡಗಳಲ್ಲಿ ಮಖಾನಾ ಬೆಳೆದು ವಾರ್ಷಿಕ ಸಂಪಾದಿಸುವ ಆದಾಯ 17 ಲಕ್ಷ ರೂ.!
ಮಖಾನಾ ಒಂದು ವಿಶಿಷ್ಟ ಬೆಳೆ. ಇದನ್ನು ಬೆಳೆಯಲು ನೀರಿನ ಆಧಾರ ಬೇಕು. ನೀರಿರುವ ಹೊಂಡ ಬೇಕು. ಪ್ರತಿ ವರ್ಷದ ಡಿಸೆಂಬರ್–ಜನವರಿ ಬೀಜವನ್ನು ಬಿತ್ತಬೇಕಾದ ಸಮಯ. ಸುಮಾರು ಐದು ಅಡಿ ಆಳದ ನೀರಿನ ಹೊಂಡದಲ್ಲಿ ಒಂದರಿಂದ ಒಂದೂವರೆ ಮೀಟರ್ ಅಂತರದಲ್ಲಿ ಬೀಜವನ್ನು ಬಿತ್ತಬೇಕು. ಒಂದು ಹೆಕ್ಟೇರ್ ಅಂದರೆ ಎರಡೂವರೆ ಎಕರೆ ವ್ಯಾಪ್ತಿಯ ಹೊಂಡಕ್ಕೆ 80 ಕೆ.ಜಿ. ತೂಕದ ಬೀಜ ಬೇಕಾಗುತ್ತದೆ. ಹೊಂಡದ ಅಗಲ ರೈತನ ಅಗತ್ಯತೆ, ಲಭ್ಯತೆಯನ್ನು ಆಧರಿಸಿರುತ್ತದೆ.
ಬಿತ್ತನೆಗೆ ಮುನ್ನ ಬೀಜೋಪಚಾರ ನಡೆಸುವುದು ಕ್ಷೇಮ. ಇದರಿಂದ ಮೊಳಕೆಯ ಶೇಕಡಾವಾರು ಪ್ರಮಾಣ ಹೆಚ್ಚುವುದು ಖಚಿತ. ಜಾ ಹೇಳುತ್ತಾರೆ, ಬಿತ್ತನೆಗೆ ಮುನ್ನ ಒಂದು ವಾರ ಕಾಲ ಒದ್ದೆ ಮಾಡಿದ ಸೆಣಬಿನ ದಾರದ ಚೀಲದಲ್ಲಿ ಬೀಜವನ್ನು ಇರಿಸಿರುತ್ತೇನೆ. ಇದರಿಂದ ಫಲವತ್ತತೆ ಹೆಚ್ಚುತ್ತದೆ.
ಮಖಾನಾ ನೀರಿನೊಳಗೇ ಗಿಡವಾಗಿ ಬೆಳೆಯುತ್ತದೆ. ಏಪ್ರಿಲ್ ವೇಳೆಗೆ ಮಖಾನಾ ಹೂವು ಹೊರಗೆ ಬಂದು ನೀರಿನ ಮೇಲೆ ಹರಡಿಕೊಳ್ಳುತ್ತದೆ. ಪರಾಗ ಸ್ಪರ್ಶವನ್ನು ಪ್ರಕೃತಿ ನಡೆಸುವ ಕಾರಣದಿಂದಾಗಿ ವಾತಾವರಣಕ್ಕೆ ತೆರೆದುಕೊಳ್ಳುತ್ತದಿರಬೇಕು. ನಂತರದ 3-4 ದಿನಗಳಲ್ಲಿ ಮತ್ತೆ ನೀರಿನೊಳಗೆ ಮಖಾನಾ ಮಾಯ!
ಸಾಮಾನ್ಯವಾಗಿ ಜೂನ್ ಜುಲೈ ಸಮಯದಲ್ಲಿ ಹಣ್ಣುಗಳು ಸೃಷ್ಟಿಯಾಗುತ್ತವೆ. ಕೇವಲ 24ರಿಂದ 48 ತಾಸು ನೀರಿನ ಮೇಲೆ ಅವು ತೇಲಾಡುತ್ತವೆ. ಮತ್ತೆ ನೀರಿನಲ್ಲಿ ಹಣ್ಣು ಮುಳುಗುತ್ತವೆ! ಅದರ ಬೀಜಗಳನ್ನು ಸೆಪ್ಟೆಂಬರ್ ಅಕ್ಟೋಬರ್ ಅವಧಿಯಲ್ಲಿ ಹೊಂಡಗಳಿಂದ ಸಂಗ್ರಹಿಸಬೇಕಾಗುತ್ತದೆ.
ಬೀಜಗಳ ಸಂಗ್ರಹದ ನಂತರ ಸಂಸ್ಕರಣೆ ನಡೆಸಬೇಕು. ಬೀಜಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿ ಒಣಗಿಸಿದ ನಂತರ ಗಾತ್ರದ ಆಧಾರದಲ್ಲಿ ವರ್ಗೀಕರಣ ನಡೆಸಬೇಕಾಗುತ್ತದೆ. ಒಣಗಿಸುವ ಪ್ರಕ್ರಿಯೆಗೆ ನಾನಾ ವಿಧದ ಆಧುನಿಕ ತಂತ್ರಜ್ಞಾನಗಳನ್ನು ಬಳಸಬಹುದು.
ಕರ್ನಾಟಕದಲ್ಲಿ ಈ ಬೆಳೆ ಹೊಂದಿಕೊಂಡೀತೆ? ಮಿಲಿಯನ್ ಡಾಲರ್ ಪ್ರಶ್ನೆ. ಹವಾಮಾನಗಳನ್ನು ಅಧ್ಯಯನ ನಡೆಸಿರುವವರು ಹೇಳುವ ಪ್ರಕಾರ ಸಮಸ್ಯೆ ಇಲ್ಲ. ಚುರುಮುರಿಯಾಗಿ, ಕಾರ್ನ್ ಆಗಿ ಮೌಲ್ಯವರ್ಧನೆ ನಡೆಸಬಹುದಾದ ಮಖಾನಾಕ್ಕೆ ಒಳ್ಳೆಯ ದರವೂ ಸಿಕ್ಕೀತು. ನೀರಿನಡಿಯೇ ಬೆಳೆಯುವುದರಿಂದ ದೊಡ್ಡ ಪ್ರಮಾಣದ ಶತ್ರುಗಳು, ರೋಗಗಳು ಎದುರಾಗಲಿಕ್ಕಿಲ್ಲ. ಮುಖ್ಯವಾದುದೆಂದರೆ, ನೀರು ಸಮೃದ್ಧ ಇರಬೇಕು. ನೀರಿನಲ್ಲಿ ಪರ್ಯಾಯ ಬೆಳೆ ಅರ್ಥಾತ್ ಮೀನು ಸಾಕಾಣಿಕೆಯಂತದು ಸಾಧ್ಯವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಹೊಂಡಗಳಿಂದ ಬಿಳಿಯದಾದ ಚಿಕ್ಕದಾದ ಮಖಾನಾ ಬೀಜಗಳನ್ನು ಆಯುವುದು ತ್ರಾಸವಾದೀತು. ಬೆಳಗಿನ ಜಾವ ಕೃಷಿಕರು ಕೃತಕ ಪರಾಗಸ್ಪರ್ಶ ನಡೆಸಿ ವೆನಿಲ್ಲಾ ಕೋಡುಗಳನ್ನು ಬೆಳೆದಿದ್ದಾರೆಂದ ಮೇಲೆ ಇದು ಯಾವ ಲೆಕ್ಕ?
ಇಂದು ಕೇದಾರ್‍ನಾಥ್ ಜಾ 20-25 ಸಾವಿರ ರೂ. ಖರ್ಚು ಮಾಡಿ ಹೆಕ್ಟೇರ್‍ಗೆ 40ರಿಂದ 50 ಸಾವಿರದ ನಿವ್ವಳ ಆದಾಯ ಪಡೆಯುತ್ತಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಮಖಾನಾದ ಪರಿಷ್ಕರಣೆಗೆ ಆಧುನಿಕ ಕಾರ್ಖಾನೆ ಸ್ಥಾಪನೆಯಾಗಿದೆ. ಬಿಹಾರದ ಎಂಟು ಜಿಲ್ಲೆಗಳ ಸಣ್ಣ ಪುಟ್ಟ ರೈತರು ಬೆಳೆದದ್ದನ್ನು ಖರೀದಿಸಲು ಸತ್ಯಜೀತ್ ಕುಮಾರ್ ಸಿಂಗ್ ಎಂಬಾತ 70 ಕೋಟಿ ಬಂಡವಾಳದ ಈ ಕಾರ್ಖಾನೆ ಸ್ಥಾಪಿಸಿದ್ದಾರೆ. ಖುದ್ದು ಜಾರಂತ ದೊಡ್ಡ ರೈತರು ಹೆಕ್ಟೇರ್‍ಗೆ ಒಂದರಿಂದ ಒಂದೂವರೆ ಟನ್ ಮಖಾನಾ ಬೆಳೆಯುತ್ತಾರೆ. ಇನ್ನೂ ವಾರ್ಷಿಕ 400ರಿಂದ 500 ಕೋಟಿ ರೂಪಾಯಿ ಮೌಲ್ಯದ ಮಖಾನಾಕ್ಕೆ ಬೇಡಿಕೆಯಿದೆಯೆಂದು ಆಹಾರ ತಜ್ಞರು ಹೇಳುತ್ತಾರೆ.
ನಮ್ಮ ರೈತರಿಗೆ ಅವಕಾಶವಂತೂ ಇದೆ. ಇನ್ನಷ್ಟು ಅಧ್ಯಯನದ ಅಗತ್ಯವೂ ಕಾಣುತ್ತದೆ. 2002ರಲ್ಲಿಯೇ ಭಾರತ ಸರ್ಕಾರದ ಕೃಷಿ ಸಂಶೋಧನಾಲಯ ಮಖಾನಾದ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ದರ್ಬಾಂಗ್‍ನಲ್ಲಿ ತೆರೆದಿದೆ.
ಮಾ.ವೆಂ.ಸ. ಪ್ರಸಾದ.

ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಬಿಜೆಪಿಗೆ ವರದಾನ

0

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟಗಳಿಂದ ಮುಂದಿನ ದಿನಗಳಲ್ಲಿ ಹೀನಾಯವಾಗಿ ಸೋಲುವುದರೊಂದಿಗೆ ರಾಜ್ಯದಲ್ಲಿ ೨೫ ಸ್ಥಾನಗಳಿಗೆ ಇಳಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಭಾನುವಾರ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿನ ಸಭೆ ಸಮಾರಂಭಗಳಲ್ಲಿ ತಮ್ಮ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟಗಳು ಹಾಗೂ ಜೆಡಿಎಸ್ ಪಕ್ಷದ ಗೊಂದಲದ ವಾತಾವರಣದಿಂದಾಗಿ ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಮೇಗೌಡ ಗೆಲವು ಸಾಧಿಸುತ್ತಾರೆ ಎಂದರು.
ಇದೇ ಡಿದೆಂಬರ್ ೨೭ ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವಂತಹ ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಬಿಜೆಪಿ ಕಾರ್ಯಕರ್ತರು ಅವರ ಮನವೊಲಿಸುವುದರೊಂದಿಗೆ ಬಿಜೆಪಿ ಪಕ್ಷದ ಅಧಿಕಾರಾವಧಿಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿರುವ ಗೊಂದಲವನ್ನು ಬಿಜೆಪಿ ಮತಗಳಾಗಿ ಪರಿವರ್ತನೆ ಮಾಡಬೇಕು ಎಂದರು.
ಬಿಜೆಪಿ ಪಕ್ಷದ ಅಭ್ಯರ್ಥಿ ರಾಮೇಗೌಡ ಮಾತನಾಡಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ. ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ್ದ ವಿಧಾನ ಪರಿಷತ್ ಸದಸ್ಯರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡಲಿಲ್ಲ. ಆದ್ದರಿಂದ ಈ ಬಾರಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಸದಸ್ಯರ ಮನವೊಲಿಸಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಬಿಜೆಪಿಗೆ ನೀಡುವಂತೆ ಮನವೊಲಿಸಬೇಕು ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಬಿಜೆಪಿ ಪಕ್ಷದ ರಮೇಶ್ಬಾಯಿರಿ, ಬಳುವನಹಳ್ಳಿ ಶ್ರೀಧರ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಸಿ.ವಿ.ಲೊಕೇಶ್ಗೌಡ, ಶ್ರೀರಾಮರೆಡ್ಡಿ, ನಂದೀಶ್, ಶಿವಕುಮಾರ್ಗೌಡ, ದಾಮೋದರ್, ಜೆ.ವಿ.ಸದಾಶಿವ, ಎ.ಎಂ.ತ್ಯಾಗರಾಜ್, ಸುಜಾತಮ್ಮ, ಮುನಿರತ್ನಮ್ಮ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಣ್ಣಿನ ಮಕ್ಕಳಾದ ಮುತ್ತೂರು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಮನ್ನಣೆ

0

ಇತ್ತೀಚೆಗಷ್ಟೆ ‘ವಿಶ್ವ ಮಣ್ಣಿನ ದಿನ’ವನ್ನು ಕೃಷಿ ಇಲಾಖೆಯ ವತಿಯಿಂದ ಆಚರಿಸಲಾಯಿತು. ನಗರದ ಸ್ತ್ರೀ ಶಕ್ತಿ ಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಕೆಲವೇ ರೈತರಿಗೆ ‘ಮಣ್ಣಿನ ಆರೋಗ್ಯ ನಿರ್ವಹಣೆ’ ಕುರಿತಂತೆ ಅಧಿಕಾರಿಗಳ ಭಾಷಣದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಆದರೆ ಎಲೆಮರೆಯ ಕಾಯಿಗಳಂತೆ, ಕಳೆದೊಂದು ವರ್ಷದಿಂದ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿನ ರೈತರ ತೋಟಗಳಲ್ಲಿ ಮಣ್ಣು ಪರೀಕ್ಷೆ ನಡೆಸಿ ವರದಿ ನೀಡುತ್ತಾ ಸಹಾಯ ಮಾಡುತ್ತಿದ್ದಾರೆ. ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವೈಜ್ಞಾನಿಕ ಲ್ಯಾಬ್ನ ಕಾರ್ಯಚಟುವಟಿಕೆಯನ್ನು ಈ ರೀತಿಯಾಗಿ ಹಮ್ಮಿಕೊಂಡಿರುವ ಈ ವಿದ್ಯಾರ್ಥಿಗಳ ವೈಜ್ಞಾನಿಕ ದೃಷ್ಟಿಕೋನ ಮತ್ತು ಸಾಮಾಜಿಕ ಉಪಯುಕ್ತತೆಯನ್ನು ಪರಿಗಣಿಸಿ ಗುಜರಾತ್ನ ಅಹ್ಮದಾಬಾದ್ನಲ್ಲಿ ಈಚೆಗೆ ಗೌರವಿಸಲಾಗಿದೆ.
‘ನಮ್ಮ ಮುತ್ತೂರು’ ಸಂಸ್ಥೆ ಹಾಗೂ ‘ಸೆಲ್ಕೋ ಫೌಂಡೇಷನ್’ ಸಹಯೋಗದಲ್ಲಿ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನದ ಪ್ರಯೋಗಾಲಯವನ್ನು ನಡೆಸಲಾಗುತ್ತಿದೆ. ತ್ಯಾಜ್ಯ ನಿರ್ವಹಣೆ, ಔಷಧಿವನ, ಪಕ್ಷಿ, ಕೀಟ ವೀಕ್ಷಣೆ ಮತ್ತು ದಾಖಲಾತಿ, ವೈಜ್ಞಾನಿಕ ಪ್ರಯೋಗಗಳು ಮುಂತಾದ ಹಲವು ಉಪಯುಕ್ತ ಚಟುವಟಿಕೆಗಳನ್ನು ವಿದ್ಯಾರ್ಥಿಗಳನ್ನು ವಿಂಗಡಿಸಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಗ್ರಾಮದಲ್ಲಿ ಹಿಪ್ಪುನೇರಳೆ, ದ್ರಾಕ್ಷಿ, ಗುಲಾಬಿ, ರಾಗಿ, ಜೋಳ, ಆಲೂಗಡ್ಡೆ ಮುಂತಾದ ಬೆಳೆ ಬೆಳೆಯುವ ರೈತರ ಜಮೀನುಗಳಲ್ಲಿ ಮಣ್ಣನ್ನು ಸಂಗ್ರಹಿಸಿ, ಶಾಲೆಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಅದರ ವರದಿಯನ್ನು ರೈತರಿಗೆ ನೀಡಿ, ಅವರ ಜಮೀನಿನ ಮಣ್ಣಿನಲ್ಲಿರುವ ಪೌಷ್ಠಿಕಾಂಶಗಳ ಬಗ್ಗೆ ವಿವರ ನೀಡಿ, ಬೆಳೆಯ ಗುಣಮಟ್ಟ ಹಾಗೂ ಇಳುವರಿ ಹೆಚ್ಚಿಸಲು ನೀಡಬೇಕಾದ ಪೌಷ್ಠಿಕಾಂಶಗಳ ಬಗ್ಗೆಯೂ ವಿವರಿಸಲಾಗುತ್ತಿದೆ.
ಕೇವಲ ವೈಜ್ಞಾನಿಕ ಚಟುವಟಿಕೆಯಾಗಿ ನಡೆಸಿಕೊಂಡು ಬರುತ್ತಿದ್ದ ವಿದ್ಯಾರ್ಥಿಗಳ ಮಣ್ಣು ಪರೀಕ್ಷೆಯ ಸಂಗತಿಯು ಈಗ ರಾಷ್ಟ್ರಮಟ್ಟದ ಮನ್ನಣೆಗೆ ಪಾತ್ರವಾಗಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ‘ಬದಲಾವಣೆಗಾಗಿ ವಿನ್ಯಾಸ’ ಎಂಬ ವಿಶಿಷ್ಠವಾದ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ದೇಶದಾದ್ಯಂತ ಸಾವಿರಾರು ಮಂದಿ ವಿದ್ಯಾರ್ಥಿಗಳ ವಿನ್ಯಾಸಗಳನ್ನು ಪರಿಗಣಿಸಲಾಗುತ್ತದೆ. ಹಣ ಸಂಪಾದಿಸಲು ಅಲ್ಲದೆ ಸಾಮಾಜಿಕ ಬದ್ಧತೆಯಿಂದ, ಉಪಯುಕ್ತತೆಯಿಂದ ಕೂಡಿರುವ ವಿನ್ಯಾಸಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಈ ಬಾರಿ ದೇಶದ 2,546 ಶಾಲೆಗಳಿಂದ 4,756 ವಿನ್ಯಾಸಗಳನ್ನು ಪರೀಕ್ಷಿಸಿ 100 ವಿನ್ಯಾಸಗಳನ್ನು ಆಯ್ಕೆ ಮಾಡಿದ್ದಾರೆ. ಅವರಲ್ಲಿ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಕೃಷಿ ಅಗತ್ಯಕ್ಕೆ ಮಣ್ಣು ಪರೀಕ್ಷೆಯ ವಿನ್ಯಾಸವೂ ಆಯ್ಕೆಯಾಗಿರುವುದು ತಾಲ್ಲೂಕಿಗೆ ಹಿರಿಮೆಯನ್ನು ತಂದಿದೆ.
ಅಹ್ಮದಾಬಾದ್ನಲ್ಲಿ ಡಿಸೆಂಬರ್ 5 ರಂದು ನಡೆದ ಕಾರ್ಯಕ್ರಮಕ್ಕೆ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಿಂಧು, ಅನೂಷಾ, ಲೋಕೇಶ್, ಶಾಲೆಯ ಮುಖ್ಯ ಶಿಕ್ಷಕ ಆಂಜನೇಯ, ವಿಜ್ಞಾನ ಪ್ರಯೋಗಾಲಯದ ಬೋಧಕ ಮೆಹಬೂಬ್ಪಾಷ, ಸೆಲ್ಕೋ ಫೌಂಡೇಷನ್ನ ನವೀನ್ ಮತ್ತು ಸ್ನೇಹ ತೆರಳಿದ್ದರು.
‘ನಮ್ಮ ಶಾಲೆಯಲ್ಲಿ ಪಠ್ಯಕ್ಕೆ ಉಪಯುಕ್ತವಾಗುವ ವಿಜ್ಞಾನ ಪ್ರಯೋಗಾಲಯವನ್ನು ‘ನಮ್ಮ ಮುತ್ತೂರು’ ಸಂಸ್ಥೆ ಹಾಗೂ ‘ಸೆಲ್ಕೋ ಫೌಂಡೇಷನ್’ ಸಹಯೋಗದಲ್ಲಿ ಕೆಲ ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಶಾಲೆಯಲ್ಲಿನ ನೀರಿನ ಸದ್ಭಳಕೆ, ತ್ಯಾಜ್ಯದಿಂದ ಬಯೋಗ್ಯಾಸ್ ನಿರ್ವಹಣೆ ಹಾಗೂ ಅದರಿಂದ ಅಡುಗೆ ಮಾಡುವುದು, ಔಷಧಿವನ ಮುಂತಾದ ಹಲವಾರು ಕೆಲಸಗಳನ್ನು ಮಾಡುತ್ತಿದ್ದೇವೆ. ಇದರ ಭಾಗವಾಗಿ ನಾವು ನಡೆಸುವ ಕೃಷಿ ಅಗತ್ಯಕ್ಕೆ ಮಣ್ಣು ಪರೀಕ್ಷೆಯು ರಾಷ್ಟ್ರಮಟ್ಟದ ಮನ್ನಣೆಗೆ ಪಾತ್ರವಾಗಿದ್ದು ನಿಜಕ್ಕೂ ಸಂತಸ ತಂದಿದೆ. ನಮ್ಮನ್ನು ಅಷ್ಟು ದೂರದ ಅಹ್ಮದಾಬಾದ್ಗೆ ಹೋಗಲು ನಮ್ಮ ಮುತ್ತೂರು ಸಂಸ್ಥೆಯ ನಿರ್ವಾಹಕಿ ಉಷಾಶೆಟ್ಟಿ ಆರ್ಥಿಕ ಸಹಾಯವನ್ನು ಒದಗಿಸಿ ಪ್ರೇರೇಪಿಸಿದರು. ಅಹ್ಮದಾಬಾದ್ನಲ್ಲಿ ಹಲವಾರು ಹೊಸ ವಿಷಯಗಳನ್ನು ಕಲಿತೆವು, ಸಮಾನ ಮನಸ್ಕರ ಪರಿಚಯವಾಯಿತು. ಕಾರ್ಯಕ್ರಮವನ್ನು ಮಕ್ಕಳಿಗಾಗಿಯೇ ಅಲ್ಲಿನವರು ವಿಶಿಷ್ಠವಾಗಿ ನಡೆಸಿದ್ದರು’ ಎಂದು ವಿದ್ಯಾರ್ಥಿಗಳಾದ ಸಿಂಧು, ಅನೂಷಾ ಮತ್ತು ಲೋಕೇಶ್ ತಮ್ಮ ಅನುಭವಗಳನ್ನು ವಿವರಿಸಿದರು.

ಬೀರು ಹೊತ್ತೊಯ್ದ ಕಳ್ಳರು

0

ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದ ನಿವಾಸಿ ಗಣೇಶ್ ಎಂಬುವವರ ಮನೆಗೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಬೀರುವೊಂದನ್ನು ಹೊತ್ತೊಯ್ದು ಊರ ಹೊರಗಡೆ ಬೀರುವಿನ ಬಾಗಿಲು ಮುರಿದು ಅದರಲ್ಲಿದ್ದ ಒಂದು ಜೊತೆ ಬೆಳ್ಳಿಯ ಕಾಲು ಚೈನು, ಮೂರು ಉಂಗುರ ಸೇರಿದಂತೆ ೨,೦೦೦ ರೂ ನಗದು ದೋಚಿ ಪರಾರಿಯಾಗಿದ್ದಾರೆ.
ಶಿಡ್ಲಘಟ್ಟ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.