Home Blog Page 490

ತಮಟೆವಾದನ ಜಾನಪದ ಕಲೆಯಲ್ಲಿ ಗಂಡು ಕಲೆ

0

ಶತಮಾನಗಳ ಕಾಲದಿಂದ ಬೆಳೆದು ಬಂದಿರುವ ತಮಟೆವಾದನ ಜಾನಪದ ಕಲೆಯಲ್ಲಿ ಗಂಡು ಕಲೆ ಎನಿಸಿದೆ. ಇದು ಜನಸಮುದಾಯದ ನಡುವೆ ಸಾಮರಸ್ಯವನ್ನು ಉಂಟು ಮಾಡುತ್ತದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಬಸ್ನಿಲ್ದಾಣದ ಬಳಿಯಿರುವ ರೇಷ್ಮೆ ಇಲಾಖೆಯ ತಾಂತ್ರಿಕ ಕೇಂದ್ರದ ಬಳಿ ಭಾನುವಾರ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯು ಆಯೋಜಿಸಿರುವ ‘ಮಿಂಚು 12’ ಎಂಬ ರಾಜ್ಯಮಟ್ಟದ ದಲಿತ ಸಂಗೀತ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಜಾನಪದ ಸಂಸ್ಕೃತಿಯು ಎಲ್ಲಾ ಜ್ಞಾನ ಶಾಖೆಗಳಿಗೂ ತಾಯಿ ಬೇರಾಗಿದೆ. ಗ್ರಾಮೀಣ ಪ್ರದೇಶದ ಜನಸ­ಮುದಾಯ ಇಂದಿಗೂ ನಮ್ಮ ಪೂರ್ವಿ­ಕರ ಸಂಸ್ಕೃತಿಯನ್ನು ಉಳಿಸಿ­ಕೊಂಡು ಬರು­ತ್ತಿದೆ. ಜಾನಪದ ಕಲೆಯ ಬೆಳವಣಿಗೆಗೆ ಸರ್ಕಾರ, ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ನೆಲ ಸಂಸ್ಕೃತಿಯ ತಮಟೆ ವಾದನ ಕಲೆಗೆ ನಮ್ಮ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದರು. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ. ಅವರ ಪ್ರೇರಣೆಯು ಎಲ್ಲಾ ಕಲಾವಿದರಿಗೂ ಸಿಗಲಿ ಎಂದು ಹಾರೈಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ತಮಟೆ ಪ್ರದರ್ಶನಗಳು ಹಾಗೂ ತಮಟೆ ಕಲಾವಿದರಿಗೆ ಸನ್ಮಾನವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು, ವಿಶೇಷವಾಗಿ ತಮಿಳುನಾಡು ದಿಂಡಿಗಲ್ ಶಕ್ತಿ ಮಹಿಳಾ ತಂಡದಿಂದ ತಮಟೆ ಹೊಡೆತ ಮತ್ತು ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.
ಜೀವಿಕ ಸಂಚಾಲಕ ಕಿರಣ್ ಕಮಲ್ ಪ್ರಸಾದ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷೆ ಯೋಗೀಶ್ವರಿ ವಿಜಯ, ನಾಡೋಜ ಮುನಿವೆಂಕಟಪ್ಪ, ಈಧರೆ ತಿರುಮಲ ಪ್ರಕಾಶ್, ಜೀವಿಕ ಸಂಸ್ಥೆಯ ರವಿಕುಮಾರ್, ಗೋಪಾಲ, ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗೆಲುವಿಗಾಗಿ ಹೋರಾಟ

0

ಡಿಸೆಂಬರ್ 27 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ರಣತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.
ತೀವ್ರ ಪ್ರತಿಷ್ಠೆಗಳ ನಡುವೆ ಸಲ್ಲಿಕೆಯಾಗಿರುವ ನಾಮಪತ್ರಗಳು, ಪ್ರಮುಖ ರಾಜಕೀಯ ಪಕ್ಷಗಳಲ್ಲಿನ ಗುಂಪುಗಾರಿಕೆಗಳು, ಟಿಕೆಟ್ ಸಿಗದೆ ನಿರಾಸೆಗೊಂಡಿರುವ ಆಕಾಂಕ್ಷಿಗಳ ಬೆಂಬಲಿಗರ ಪರ್ಯಾಯ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸಲ್ಲಿಕೆ ಮಾಡಿಸಿ ನಂತರ ನಾಮಪತ್ರಗಳನ್ನು ಪಡೆದುಕೊಂಡಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸ್ಪರ್ಧೆ ನಡೆಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್‍ಕುಮಾರ್, ಹಾಗೂ ಜೆಡಿಎಸ್ ಪಕ್ಷದಿಂದ ಸ್ಪರ್ದೆ ನಡೆಸಿರುವ ಮನೋಹರ್, ಮತ್ತು ಬಿಜೆಪಿಯಿಂದ ತಮ್ಮ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರಾಮೇಗೌಡ, ಇವರ ನಡುವೆ ತ್ರಿಕೋನ ಹಣಾಹಣಿ ಉಂಟಾಗಿದೆ, ಈ ಚುನಾವಣೆಯಲ್ಲಿ ಮತಗಳನ್ನು ಚಲಾಯಿಸುವಂತಹ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಹಾಗೂ ನಗರಸಭೆ/ಪುರಸಭೆಗಳ ಸದಸ್ಯರು, ಹಾಗೂ ನಾಮಿನಿ ಸದಸ್ಯರುಗಳಿಗೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಂದ ಇನ್ನಿಲ್ಲದ ಬೇಡಿಕೆಗಳು ಬರತೊಡಗಿವೆ.
ಈ ಮಧ್ಯೆ ಕಾಂಗ್ರೆಸ್, ಜೆಡಿಎಸ್, ಪಕ್ಷಗಳಲ್ಲಿನ ಆಂತಕರಿಕ ಒಡಕನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಕೆಲವು ನಾಯಕರುಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಾದರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ನಂಜೇಗೌಡ ನಾಮಪತ್ರವನ್ನು ವಾಪಸ್ಸು ಪಡೆದುಕೊಂಡಿರುವ ರಾಜಕೀಯವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಶ್ರೀನಿವಾಸಪುರ ಶಾಸಕ ರಮೇಶ್‍ಕುಮಾರ್, ತಾವು ಸೂಚಿಸಿದ ವ್ಯಕ್ತಿಗೆ ಟಿಕೆಟ್ ನೀಡಲಿಲ್ಲವೆಂಬ ಅಸಮಾಧಾನವನ್ನು ಹೊಂದಿದ್ದರೆ, ಶಿಡ್ಲಘಟ್ಟದ ಮಾಜಿ ಶಾಸಕ ವಿ.ಮುನಿಯಪ್ಪ ಅವರಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಗೌರಿಬಿದನೂರು ಶಾಸಕ ಎನ್.ಹೆಚ್.ಶಿವಶಂಕರೆಡ್ಡಿ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್, ಸೇರಿದಂತೆ ವಿ.ಮುನಿಯಪ್ಪ ಬೆಂಬಲಿಗರು, ಯಾರಿಗೆ ಮತಗಳನ್ನು ಚಲಾವಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ, ಕೋಲಾರದ ಸಂಸದ ಕೆ.ಹೆಚ್. ಮುನಿಯಪ್ಪ, ಹಾಗೂ ಚಿಕ್ಕಬಳ್ಳಾಪುರದ ಸಂಸದ ಎಂ.ವೀರಪ್ಪಮೊಯ್ಲಿ ಅವರಿಬ್ಬರೂ ಕೊನೆಯ ಕ್ಷಣದವರೆಗೂ ತಾವು ಸೂಚಿಸಿದ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ನಡೆಸಿದಂತಹ ಹೋರಾಟದಲ್ಲಿ ಕೆ.ಹೆಚ್. ಮುನಿಯಪ್ಪ ಪಕ್ಷದ ಹೈಕಮಾಂಡ್‍ನ ಸಹಕಾರದಿಂದ ತಮ್ಮ ಕಟ್ಟಾ ಬೆಂಬಲಿಗ ಅನಿಲ್‍ಕುಮಾರ್‍ಗೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ವೀರಪ್ಪಮೊಯ್ಲಿ ಅವರಿಗೆ ಹಿನ್ನಡೆಯಾಗಿದೆ, ಶತಾಯಗತಾಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಆಲೋಚನೆಯಲ್ಲಿ ತೊಡಗಿರುವ ಕೆ.ಹೆಚ್. ಮುನಿಯಪ್ಪ, ಸಂಘಟನೆಯಲ್ಲಿ ತೊಡಗಿಸಿಕೊಂಡು ರಣತಂತ್ರ ರೂಪಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಕೋಲಾರದ ಶಾಸಕ ವರ್ತೂರು ಪ್ರಕಾಶ್, ಮುಳಬಾಗಿಲಿನ ಶಾಸಕ ಮಂಜುನಾಥ್, ಮಾಲೂರಿನ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ, ಶ್ರೀನಿವಾಸಪುರ ಶಾಸಕ ರಮೇಶ್‍ಕುಮಾರ್, ಬೆಂಬಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಪಕ್ಷದ ಮುಖಂಡರದ್ದಾಗಿದ್ದು, ಇತ್ತಿಚೆಗೆ ಸಂಸದರ ಜೊತೆಯಲ್ಲೆ ಒಡನಾಟವಿಟ್ಟುಕೊಂಡಿರುವ ಜೆಡಿಎಸ್ ಪಕ್ಷದ ಶಾಸಕರಾದ ಶಿಡ್ಲಘಟ್ಟದ ಎಂ.ರಾಜಣ್ಣ, ಚಿಂತಾಮಣಿಯ ಕೃಷ್ಣಾರೆಡ್ಡಿ, ಅವರು ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ, ಶಿಡ್ಲಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯ್ತಿಗಳು ಕಾಂಗ್ರೆಸ್ ಬೆಂಬಲಿತವಾಗಿದ್ದು, ಶಾಸಕರೂ ಕೂಡಾ ಯಾವ ರೀತಿಯಾದ ತಂತ್ರಗಾರಿಕೆಯನ್ನು ಅನುಸರಿಸುತ್ತಾರೆಂಬುದನ್ನು ಕಾದು ನೋಡಬೇಕಾಗಿದ್ದು, ಈ ಚುನಾವಣೆ ಜನವರಿ ತಿಂಗಳಿನಲ್ಲಿ ನಡೆಯಬಹುದಾದ ಜಿಲ್ಲಾ ಪಂಚಾಯ್ತಿ, ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ದಿಕ್ಸೂಚಿಯಾಗಲಿದೆಯೆಂದೇ ಬಿಂಬಿಸಲಾಗುತ್ತಿದ್ದು, ಮುಂದೆ ಏನಾಗುತ್ತದೆ ಯಾವ ಯಾವ ನಾಯಕರು ಯಾವ ಯಾವ ರೀತಿಯಾದ ತಂತ್ರಗಾರಿಕೆ ನಡೆಸುತ್ತಾರೆ ಎಂಬುದನ್ನು ಕಾದುನೋಡುವ ಉತ್ಸುಕದಲ್ಲಿ ಜನತೆ ಕಾಯುತ್ತಿದ್ದಾರೆ.

ಅಕ್ರಮ ಮರಳು ಸಾಗಾಣಿಕೆ

0

ಅಕ್ರಮ ಮರಳು ಸಾಗಾಣಿಕೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿಷೇಧವಿದ್ದರೂ ಕೂಡಾ ಎಗ್ಗಿಲ್ಲದೆ ಸಾಗಾಣಿಕೆಯಾಗುತ್ತಿರುವ ಮರಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದರೂ ಕೂಡಾ ಅಧಿಕಾರಿಗಳ ಕಣ್ಣಿಗೆ ಮರಳು ಎರಚುತ್ತಿರುವ ಮರಳು ಮಾಫಿಯಾ ಕುಳಗಳು ರಾತ್ರೋ ರಾತ್ರಿ ಮರಳು ಸಾಗಾಣಿಕೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ, ಪಲಿಚೇರ್ಲು, ದಿಬ್ಬೂರಹಳ್ಳಿಯ ಕಡೆಯಿಂದ ಮಳಮಾಚನಹಳ್ಳಿ ಮೂಲಕ ಜಂಗಮಕೋಟೆ ಮೂಲಕ ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಮರಳು ಸಾಗಾಣಿಕೆಯ ಆರೋಪದಡಿಯಲ್ಲಿ ಇದುವರೆಗೂ ಗ್ರಾಮಾಂತರ ಠಾಣೆಯಲ್ಲಿ ಒಟ್ಟು 98 ದೂರುಗಳು ದಾಖಲಾಗಿವೆ, 30 ಲಕ್ಷಕ್ಕೂ ಹೆಚ್ಚು ಹಣವನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಸಲ್ಲಿಕೆ ಮಾಡಲಾಗಿದೆ, ಕಂದಾಯ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮರಳು ಸಾಗಾಣಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದಾರೆ ಎಂದು ಸ್ಥಳೀಯ ನಾಗರೀಕರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದ 10 ಟ್ರ್ಯಾಕ್ಟರ್ ಹಾಗೂ 03 ಲಾರಿಗಳನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಸ್ಲಿಂ ಸಮಾಜದವರ ಪ್ರತಿಭಟನೆ

0

ಪ್ರವಾದಿ ಮಹಮದ್‍ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಕಮಲೇಶ್ ಅವರ ಮೇಲೆ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ನೂರಾರು ಮಂದಿ ಮುಸ್ಲಿಂ ಜನರು ಪ್ರತಿಭಟನೆ ನಡೆಸಿದರು.
ನಗರದ ಬಿಲಾಲ್ ಮಸೀದಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಜಮಾವಣೆಗೊಂಡ ಮುಸ್ಲಿಂ ಬಾಂಧವರು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಕಮಲೇಶ್ ತಿವಾರಿಯ ವಿರುಧ್ಧ ಘೋಷಣೆಗಳನ್ನು ಕೂಗಿದರಲ್ಲದೇ ತಿವಾರಿಯ ಅಣಕು ಶವಕ್ಕೆ ಬೆಂಕಿ ಇಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾದಿ ಮೊಹ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡುವ ಮೂಲಕ ಹಿಂದೂ ಮಹಾಸಭಾದ ಮುಖಂಡ ಇಡೀ ಜಗತ್ತಿನಲ್ಲಿರುವ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದು ಸಮಾಜದಲ್ಲಿ ಜಾತಿ ಮತಗಳ ಹೆಸರಿಲ್ಲಿ ವೈಮನಸ್ಸು ಬೆಳೆಯಲು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದು ಹೇಳಿಕೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಗಂಗಾ ಜಮುನಾ ಸಂಸ್ಕøತಿಯನ್ನು ಹೊಂದಿರುವ ದೇಶದಲ್ಲಿ ಜಾತಿ ಮತಭೇದ ಮರೆತು ಸೌರ್ಹಾದತೆಯಿಂದ ಜೀವನ ನಡೆಸುತ್ತಿದ್ದು ಇದನ್ನು ಸಹಿಸದ ಕೋಮುವಾದಿ ಶಕ್ತಿಗಳು ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತನೆ ಮಾಡುವ ಕೆಲಸ ಮಾಡುತ್ತಿದ್ದಾರೆ, ಇದೀಗ ಧರ್ಮಗುರುಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥವನ್ನು ಹಾಳು ಮಾಡಲು ಹುನ್ನಾರ ನಡೆಸಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಿಲಾಲ್ ಮಸೀದಿಯ ಯುವಜನ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನಗರದ ಬಹುತೇಕ ಮುಸ್ಲಿಂರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಮಗಾರಿಯ ಕಳಪೆತನದ ಬಗ್ಗೆ ಗ್ರಾಮಸ್ಥರ ಆಕ್ರೋಷ

0

ಕುಡಿಯುವ ನೀರಿಗಾಗಿ ಅಳವಡಿಕೆ ಮಾಡುತ್ತಿರುವ ಪೈಪ್‍ಲೈನ್‍ಗಳನ್ನು ವ್ಯವಸ್ಥಿತವಾಗಿ ಅಳವಡಿಕೆ ಮಾಡಿಲ್ಲವೆಂದು ನಾಗರೀಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದಲ್ಲಿ, ಗ್ರಾಮ ಪಂಚಾಯ್ತಿಯಿಂದ 13 ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯುವ ನೀರಿಗಾಗಿ ಪೈಪ್‍ಲೈನ್ ಅಳವಡಿಕೆ ಮಾಡುವಂತಹ ಕಾಮಗಾರಿ ಪ್ರಗತಿಯಲ್ಲಿದ್ದು, ಗ್ರಾಮದ ಮನೆಗಳ ಮುಂಭಾಗದಲ್ಲಿ ಕೇವಲ 4 ಕೆ.ಜಿ. ತೂಕದ ಕಳಪೆ ಗುಣಮಟ್ಟದ ಪೈಪ್‍ಗಳನ್ನು ಸುಮಾರು 500 ಮೀಟರ್‍ಗಳಿಗಿಂತಲೂ ಹೆಚ್ಚಿನ ದೂರದಲ್ಲಿ ಅಳವಡಿಕೆ ಮಾಡಲಾಗಿದೆ, ಪೈಪ್‍ಲೈನ್‍ನ್ನು ಭೂಮಿಯ ಒಳಗೆ 3 ಅಡಿಗಳ ಆಳದಲ್ಲಿ ಹಾಕಬೇಕು, ಆದರೆ ಕೇವಲ 1/2 ಅಡಿ ಆಳದಲ್ಲಿ ಹಾಕಿದ್ದಾರೆ, ಈ ಬಗ್ಗೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನನ್ನ ಗಮನಕ್ಕೆ ಬಂದಿಲ್ಲವೆಂದಿದ್ದ ಅವರು, ನಂತರ ಕಾಮಗಾರಿಯು ಸರಿಯಾಗಿಲ್ಲ ಸರಿಪಡಿಸುತ್ತೇವೆ ಎಂದು ಜಾರಿಕೆಯ ಉತ್ತರ ನೀಡುತ್ತಿದ್ದಾರೆ, ಗ್ರಾಮದ ಸೋಮೇಶ್ವರಸ್ವಾಮಿ ದೇವಾಲಯದ ಸಮೀಪದಲ್ಲಿರುವ ಕೊಳವೆ ಬಾವಿಗೆ ಇಂಗುಗುಂಡಿಯನ್ನು ಮಾಡುತ್ತಿದ್ದು, 6.ಎಂ.ಎಂ. ಜಲ್ಲಿಕಲ್ಲುಗಳು, ಹಾಗೂ ಮರಳಿನಿಂದ ತುಂಬಿಸಿ ಮಳೆಯ ನೀರು ಇಂಗುವಂತೆ ಮಾಡಿ, ಅಂತರ್ಜಲದಮಟ್ಟವನ್ನು ವೃದ್ದಿ ಮಾಡಬೇಕು, ಆದರೆ ಕೊಳವೆ ಬಾವಿಯ ಸುತ್ತಲೂ ಗುಂಡಿಯನ್ನು ತೋಡಿದ್ದು, ಚೆಕ್‍ಡ್ಯಾಂಗಳಿಗೆ ಬಳಕೆ ಮಾಡುವಂತಹ ಕಲ್ಲುಗುಂಡುಗಳನ್ನು ಕೊಳವೆಬಾವಿಯ ಸುತ್ತಲೂ ಹಾಕಿ ಮುಚ್ಚುವಂತಹ ಪ್ರಯತ್ನ ಮಾಡಿದ್ದಾರೆ, ಈ ಕಾಮಗಾರಿಯನ್ನು ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಸ್ಥಳೀಯ ಗ್ರಾ.ಪಂ. ಸದಸ್ಯರಿಗೂ ಗೊತ್ತಿಲ್ಲ, ಗ್ರಾಮದಲ್ಲಿ ಚರಂಡಿಗಳು ಮುಚ್ಚಿ ಹೋಗಿದ್ದು, ಮನೆಗಳಲ್ಲಿ ಉಪಯೋಗಿಸಲ್ಪಟ್ಟ ನೀರು ರಸ್ತೆಗಳು ಸೇರಿದಂತೆ ಮನೆಗಳ ಪಕ್ಕದಲ್ಲಿ ಕುಂಟೆಗಳಲ್ಲಿ ನೀರು ನಿಲ್ಲುವಂತೆ ನಿಂತಿರುವುದರಿಂದ ಸಂಜೆಯಾದರೆ ವಿಪರೀತ ಸೊಳ್ಳೆಗಳ ಕಾಟದಿಂದಾಗಿ ಮಕ್ಕಳು ಸೇರಿದಂತೆ ಗ್ರಾಮದಲ್ಲಿ ಅನೇಕ ಮಂದಿ ನಾಗರೀಕರು ಜ್ವರದ ಪ್ರಕರಣಗಳಿಂದಾಗಿ ಆಸ್ಪತ್ರೆಗಳಿಗೆ ಹೋಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವಂತಾಗಿದೆ, ಗ್ರಾಮದಲ್ಲಿರುವ ಗೋಕುಂಟೆಯ ಜಾಗವನ್ನು ಕೆಲವು ಮಂದಿ ಪ್ರಭಾವಿಗಳು ಗ್ರಾಮ ಪಂಚಾಯ್ತಿಯಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವ ಬಗ್ಗೆ ಅನುಮಾನಗಳಿದ್ದು, ಅಧಿಕಾರಿಗಳು ಈ ವಿಚಾರವನ್ನು ಬಹಿರಂಗಪಡಿಸಬೇಕು ಎಂದು ಸ್ಥಳೀಯ ನಾಗರೀಕರು ಆರೋಪ ಮಾಡಿದ್ದಾರೆ.
ಗ್ರಾಮದ ನಾಗರೀಕರಿಗೆ ಕುಡಿಯುವ ನೀರಿಗಾಗಿ ಪೈಪ್‍ಲೈನ್ ಅಳವಡಿಕೆ: ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬಗಳಿಗೂ ವೈಯಕ್ತಿಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪೈಪ್‍ಲೈನ್ ಮೇಲೆಯೇ ಅಳವಡಿಸಲಾಗಿದೆ, ಗ್ರಾಮದಲ್ಲಿ ಸಿ.ಸಿ. ರಸ್ತೆಗಳನ್ನು ಮಾಡುವುದರಿಂದ ರಸ್ತೆಯ ಮೇಲೆಯೇ ಒಂದೂವರೆ ಅಡಿ ಬರುವುದರಿಂದ ಸರಿ ಹೋಗುತ್ತದೆ, ಇಂಗು ಗುಂಡಿಯ ಬಳಿಯ ಕಲ್ಲುಗಳು ಹಾಕಿರುವುದು ಗಮನಕ್ಕೆ ಬಂದ ನಂತರ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ, ಇದುವರೆಗೂ ಬಿಲ್ಲು ಮಾಡಿಲ್ಲ, ಕಾಮಗಾರಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ ಹಾಲಿ ಸದಸ್ಯ ವೆಂಕಟರೆಡ್ಡಿ ತಿಳಿಸಿದ್ದಾರೆ.
ಗ್ರಾಮದ ಮುಖಂಡರಾದ ಗುಡಿಹಳ್ಳಿ ಚಂದ್ರು, ನಾರಾಯಣಸ್ವಾಮಿ, ಕೆಂಪಣ್ಣ, ವೇಣುಗೋಪಾಲ್, ಮುನಿತಿಮ್ಮಯ್ಯ, ಗೋಪಾಲ್, ನರಸಿಂಹಮೂರ್ತಿ, ಬಿ.ಎನ್.ಮೂರ್ತಿ, ರಮೇಶ್, ನವೀನ್‍ಗೌಡ, ಮಂಜುನಾಥ್, ಮುಂತಾದವರು ಹಾಜರಿದ್ದರು.

ಹಗಲು ವೇಳೆ ವಿದ್ಯುತ್ ದೀಪ

0

ಶಿಡ್ಲಘಟ್ಟದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಬಳಿ ನಗರಸಭೆಯ ನಿರ್ಲಕ್ಷದಿಂದಾಗಿ ಹಗಲು ವೇಳೆ ವಿದ್ಯುತ್ ದೀಪ ಉರಿಯುತ್ತಿದ್ದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಾಟ ಮತ್ತು ಜಾನಪದ ನೃತ್ಯಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನೀಲಿನಾಲಿಗೆ ರೋಗ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು

0

ತಾಲೂಕಿನಾಧ್ಯಂತ ಕುರಿ ಮತ್ತು ಮೇಕೆಗಳಿಗೆ ತಗುಲಿರುವ ನೀಲಿನಾಲಿಗೆ ರೋಗ ನಿವಾರಣೆಗೆ ಕುರಿ ಸಾಕಾಣಿಕೆದಾರರು ಕುರಿ ಕೊಟ್ಟಿಗೆಯನ್ನು ಸ್ವಚ್ಚವಾಗಿಟ್ಟು ಕೊಳ್ಳುವುದರೊಂದಿಗೆ ಕೀಟ ಮತ್ತು ಸೊಳ್ಳೆಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಕೃಷಿ ನಿರ್ದೇಶಕ ಡಾ.ಬೈರೇಗೌಡ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಕುರಿ ಸಾಕಾಣಿಕೆದಾರರಿಗೆ ಕುರಿ ಮತ್ತು ಮೇಕೆಗಳಿಗೆ ತಗುಲಿರುವ ನೀಲಿ ನಾಲಿಗೆ ರೋಗ ಹಾಗು ಅದರ ನಿವಾರಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಯಪಡಿಸಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ನವೆಂಬರ್ ತಿಂಗಳಿನಲ್ಲಿ ತಾಲ್ಲೂಕಿನಾದ್ಯಂತ ಬಿದ್ದ ಜಡಿ ಮಳೆಯಿಂದ ನಿಂತಿರುವ ನೀರಿನಲ್ಲಿ ಉತ್ಪಾದನೆಯಾಗುವ ಕೀಟ (ವೈರಸ್) ಗಳಿಂದ ಕುರಿ ಮತ್ತು ಮೇಕೆಗಳಿಗೆ ನೀಲಿ ನಾಲಿಗೆ ಹರಡುತ್ತಿದೆ. ನೀಲಿ ನಾಲಿಗೆ ರೋಗ ಲಕ್ಷಣಗಳೆಂದರೆ ಜ್ವರ ಬರುವುದು, ಬಾಯಿಯಿಂದ ಜೊಲ್ಲು ಸುರಿಸುವುದು, ಬಾಯಿ ಮೂಗಿನ ಪದರವೆಲ್ಲಾ ಕೆಂಪಾಗಿ ಒಸಡುಗಳು ಊದಿಕೊಳ್ಳುವುದು ಸೇರಿದಂತೆ ಭೇದಿ ಮತ್ತು ಆಮಶಂಕೆ, ಕುಂಟುವಿಕೆ ಕಾಣಿಸುತ್ತದೆ.
ಯಾವುದೇ ನಿರ್ದಿಷ್ಠ ಚಿಕಿತ್ಸೆಯಿಲ್ಲದ ಈ ರೋಗಕ್ಕೆ ಕುರಿಗಳ ದೇಹದ ಮೇಲೆ ಕಾಣಿಸುವ ಹುಣ್ಣುಗಳನ್ನು ಕ್ರಿಮಿನಾಶಕ ದ್ರಾವಣದಿಂದ ಸ್ವಚ್ಚಗೊಳಿಸುವುದು ಸೇರಿದಂತೆ ಸಾಯಂಕಾಲದ ವೇಳೆಯಲ್ಲಿ ಕೊಟ್ಟಿಗೆಯ ಸುತ್ತಲೂ ಬೇವಿನ ಹೊಗೆ ಹಾಕಬೇಕು ಹಾಗೂ ಕೊಟ್ಟಿಗೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ರೋಗದಿಂದ ಕುರಿ ಹಾಗು ಮೇಕೆಗಳ ಸಾವು ಸಂಭವಿಸುವುದು ಕಡಿಮೆಯಾದರೂ ಗರ್ಭಪಾತ ಹೆಚ್ಚಾಗಿ ಆಗುತ್ತದೆ. ನೀಲಿ ನಾಲಿಗೆ ಸೋಂಕಿತ ಕುರಿಗಳನ್ನು ಆರೋಗ್ಯವಂತ ಕುರಿಗಳ ಗುಂಪಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಸಾಕಬೇಕು ಎಂದರು.
ಪ್ರಗತಿಪರ ಕುರಿಸಾಕಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ಗೌಡ ಮಾತನಾಡಿ, ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸುವ ನೀಲಿನಾಲಿಗೆ ರೋಗವು ನಿಂತ ನೀರಿನಿಂದ ಉತ್ಪಾದನೆಯಾಗುವ ನೊಣದಿಂದ ಹರಡುವುದರಿಂದ ಕೊಟ್ಟಿಗೆ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ರೋಗ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಜಂಟಿ ನಿರ್ದೇಶಕಿ ಡಾ.ಶೋಭಾರಾಣಿ, ಡಾ.ರಂಗನಾಥ್, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮೂರು ಉಪವಿಭಾಗಗಳಲ್ಲಿ ಪ್ರಥಮರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೃಷಿ ಉಪವಿಭಾಗದಲ್ಲಿ ಎನ್.ಜಿ.ಅಕ್ಷಯ್ಕುಮಾರ್ ಮತ್ತು ಎನ್.ಸಿ.ಮನೋಜ್, ವಿಪತ್ತು ನಿರ್ವಹಣೆ ಉಪವಿಭಾಗದಲ್ಲಿ ಬಿ.ರಾಗಿಣಿ ಮತ್ತು ಎನ್.ಎಂ.ರಘುಕುಮಾರ್, ಉತ್ತಮ ಜೀವನಕ್ಕಾಗಿ ಗಣಿತ ಉಪವಿಭಾಗದಲ್ಲಿ ವೈ.ಜಿ.ನಿರಂಜನ್ ಗೌಡ ಮತ್ತು ಜಿ.ಅನೂಷಾ ಆಯ್ಕೆಯಾಗಿದ್ದಾರೆ.

ಮೃತರ ಕಣ್ಣುಗಳಿಂದ ಇಬ್ಬರ ಅಂಧರಿಗೆ ಬೆಳಕು

0

ನಗರದ ಎಲ್.ಐ.ಸಿ ಪಾಲಸಿದಾರ ಎಚ್.ಎನ್.ಶ್ರೀನಿವಾಸ್(50) ಗುರುವಾರ ವಿದ್ಯುತ್ ಶಾಕ್ನಿಂದಾಗಿ ಮೃತಪಟ್ಟಿದ್ದಾರೆ. ನಗರದ ಕೆ.ಕೆ.ಪೇಟೆಯ ಕಾದಿರಪ್ಪ ರಸ್ತೆಯ ನಿವಾಸಿಯಾದ ಶ್ರೀನಿವಾಸ್ ಮೋಟರ್ ಪಂಪಿಗೆ ವಿದ್ಯುತ್ ಸಂಪರ್ಕ ನೀಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್ನಿಂದಾಗಿ ಮೃತಪಟ್ಟಿದ್ದಾರೆ. ಮೃತರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಹಲವಾರು ವೃದ್ಧರಿಗೆ ಉಚಿತವಾಗಿ ಔಷಧಿ ವಿತರಿಸುತ್ತಾ, ಕೆಲ ಬಡ ವಿದ್ಯಾರ್ಥಿಗಳಿಗೆ ಶಾಲಾ ಫೀಸನ್ನು ಕಟ್ಟುತ್ತಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಕಣ್ಣುಗಳನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಇಬ್ಬರ ಅಂಧರ ಬಾಳಿಗೆ ಬೆಳಕಾಗಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.
ಅಂತಿಮ ಸಂಸ್ಕಾರವನ್ನು ಗುರುವಾರ ಸಂಜೆ ಅವರ ತೋಟದಲ್ಲಿ ನಡೆಸುವುದಾಗಿ ಅವರ ಬಂಧುಗಳು ತಿಳಿಸಿದ್ದಾರೆ.
ನಗರಸಭೆಯ ಶವಸಾಗಣೆ ವಾಹನ ನಿಲ್ಲಿಸಿದ್ದ ಶೆಡ್ನ ಶಟರ್ ತೆರೆಯಲಾಗದ ಕಾರಣ ಖಾಸಗಿ ವಾಹನದಲ್ಲಿ ಶವವನ್ನು ತೆಗೆದುಕೊಂಡು ಹೋಗಬೇಕಾಯಿತು. ನಗರಸಭೆಯ ಸಿಬ್ಬಂದಿ ಹರಸಾಹಸ ಪಟ್ಟರೂ ಶಟರ್ ಅರ್ಧಂಬರ್ಧ ತೆರೆಯಲ್ಪಟ್ಟಿತಷ್ಟೆ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ತಂದ ಶವಸಾಗಾಣಿಕೆ ವಾಹನವಿದ್ದರೂ ಉಪಯೋಗಕ್ಕೆ ಬರದಂತಾಗಿದೆ. ಡೀಸಲ್ ಬಿಲ್ ಮಾತ್ರ ನಗರಸಭೆಯವರು ಖರ್ಚು ಹಾಕುತ್ತಿರುತ್ತಾರೆ ಎಂದು ಬೇಸರಗೊಂಡ ನಾಗರಿಕರು ಈ ಸಂದರ್ಭದಲ್ಲಿ ದೂರಿದರು.

ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ

0

ಸಾರ್ವಜನಿಕರ ವಾಹನಗಳ ಪಾರ್ಕಿಂಗ್ನ್ನು ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಯ ಪಕ್ಕದಲ್ಲಿರುವ ಸರ್ಕಾರಿ ನೌಕರರ ಸಂಘದ ಜಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಮನೋರಮಾ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿನಿತ್ಯ ಹಲವಾರು ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ಮಾತನಾಡಿದರು.
ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿನಿತ್ಯ ವಾಹನಗಳನ್ನು ಎಲ್ಲೆಂದರಲ್ಲಿ ಬಿಟ್ಟು, ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ನಾಗರಿಕರಿಂದ ದಿಬ್ಬೂರಹಳ್ಳಿಯ ಕಡೆಗೆ ಸಂಚಾರ ಮಾಡುವಂತಹ ವಾಹನಗಳು, ಹಾಗೂ ಇದೇ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜುಗಳಿಗೆ ಹೋಗುವಂತಹ ವಿಧ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅನೇಕ ಬಾರಿ ಅಪಘಾತಗಳು ಸಂಭವಿಸಿರುವ ಬಗ್ಗೆ ನಾಗರಿಕರಿಂದ ದೂರುಗಳು ಕೇಳಿ ಬಂದಿದ್ದು, ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಯ ಪಕ್ಕದಲ್ಲಿರುವ ಸರ್ಕಾರಿ ನೌಕರರ ಸಂಘದ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಪಿ.ಎಸ್.ಐ.ಗಳಾದ ಪ್ರದೀಪ್ಪೂಜಾರಿ, ಆರ್.ವಿಜಯ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಡುಗೆ ಅನಿಲ್ ಸಂಪರ್ಕಕ್ಕೆ ದುಪ್ಪಟ್ಟು ಹಣ

0

ಸರ್ಕಾರ ಬಿ.ಪಿ.ಎಲ್.ಕಾರ್ಡುದಾರರಿಗೆ ವಿಧಿಸಿರುವ ದರಕ್ಕಿಂತ ದುಪ್ಪಟ್ಟು ಹಣವನ್ನು ಪಡೆದುಕೊಂಡು ಅಡುಗೆ ಅನಿಲ್ ಸಂಪರ್ಕವನ್ನು ಕೊಡುತ್ತಿದ್ದು, ಸಂಬಂಧಪಟ್ಟ ಏಜೆನ್ಸಿಯವರ ಮೇಲೆ ಸೂಕ್ತ ಕ್ರಮಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಮನವಿ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು, ಶಿಡ್ಲಘಟ್ಟ ನಗರದ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲೀಕರು, ಸರ್ಕಾರದ ನಿಯಮದಂತೆ ೧,೬೫೦ ರೂಪಾಯಿಗಳಿಗೆ ಅನಿಲ ಸಂಪರ್ಕವನ್ನು ನೀಡದೆ, ೩,೫೦೦ ರೂಪಾಯಿಗಳನ್ನು ಪಡೆದುಕೊಂಡರೂ ಕೂಡಾ ತಿಂಗಳುಗಟ್ಟಲೆ ಸತಾಯಿಸುತ್ತಿದ್ದಾರೆ. ಗ್ಯಾಸ್ಸ್ಟೌವ್ ನಮ್ಮಲ್ಲೆ ಪಡೆದುಕೊಳ್ಳಬೇಕು ಎಂದು ನಿರ್ಬಂಧ ಹೇರುತ್ತಿದ್ದಾರೆ. ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮಾಂತರ ಪ್ರದೇಶಗಳ ರೈತಾಪಿ ವರ್ಗದ ಜನರಿಗೆ ತೀರಾ ತೊಂದರೆಯಾಗಿದೆ. ಸಿಲಿಂಡರ್ಗಳ ಬೆಲೆ ಎಷ್ಟು ಎನ್ನುವ ಬಗ್ಗೆ ದರಪಟ್ಟಿಯನ್ನು ಹಾಕಿಲ್ಲ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡಾ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಏಜೆನ್ಸಿಯವರನ್ನು ಕರೆಸಿ, ರೈತರ ಸಮ್ಮುಖದಲ್ಲಿ ಅವರಿಂದ ಮಾಹಿತಿಯನ್ನು ಪಡೆಯಬೇಕು. ತಾಲ್ಲೂಕಿನ ನಾಗರಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಡಿ.ವಿ.ನಾರಾಯಣಸ್ವಾಮಿ, ಎಸ್.ಎನ್.ಮಾರಪ್ಪ, ಮುನೇಗೌಡ, ಮಳ್ಳೂರು ಅಶೋಕ್, ವೇಣು, ಎಂ.ಸತೀಶ್, ನಾಗೇಶ್, ನವೀನ್, ವೆಂಕಟಾಚಲಪತಿ, ಮಂಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಚುನಾವಣೆಯನ್ನು ಬದ್ಧತೆಯಿಂದ ನಡೆಸಬೇಕಿದೆ

0

ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು, ಚುನಾವಣೆಗಾಗಿ ನೇಮಕವಾಗಿರುವ ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ತಮ್ಮ ಕಾರ್ಯನಿರ್ವಹಣೆ ಮಾಡಬೇಕು ಎಂದು ತಹಶೀಲ್ದಾರ್ ಮನೋರಮಾ ತಿಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಚುನಾವಣೆಯ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ೩೦ ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಸೂಕ್ಷ್ಮಮತಗಟ್ಟೆಗಳು ೧೮, ಅತಿಸೂಕ್ಷ್ಮ ಮತಗಟ್ಟೆಗಳು ೧೨ ಎಂದು ಗುರುತಿಸಲಾಗಿದೆ. ಈ ಚುನಾವಣೆಯಲ್ಲಿ ಗ್ರಾಮ ಪಂಚಾಯತಿಗಳ ಸದಸ್ಯರು, ನಗರಸಭಾ ಸದಸ್ಯರು, ನಾಮಿನಿ ಸದಸ್ಯರುಗಳು, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳ ಸದಸ್ಯರುಗಳು ಮತಚಲಾವಣೆ ಮಾಡುತ್ತಾರೆ. ಒಟ್ಟು ೪೭೩ ಮಂದಿ ಮತದಾನ ಮಾಡಲಿದ್ದು, ಗ್ರಾಮ ಪಂಚಾಯತಿಗಳ ಕೇಂದ್ರಸ್ಥಾನಗಳಲ್ಲಿ ಆಯಾ ಪಂಚಾಯತಿಗಳ ಸದಸ್ಯರುಗಳು ಮತಚಲಾವಣೆ ಮಾಡುತ್ತಾರೆ. ಜಿ.ಪಂ. ಸದಸ್ಯರು ಹಾಗೂ ತಾ.ಪಂ.ಸದಸ್ಯರುಗಳು ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ತೆರೆಯಲಾಗುವ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಲಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಾಗ್ರತೆವಹಿಸಬೇಕು, ತಾಲ್ಲೂಕಿನ ಮಟ್ಟದಲ್ಲಿ ಜಾಗೃತಿದಳವನ್ನು ರಚನೆ ಮಾಡಿದ್ದು, ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್, ಅಬಕಾರಿ ಇಲಾಖಾಧಿಕಾರಿ ಹಾಗೂ ಪಿ.ಎಸ್.ಐ.ಗಳ ತಂಡವನ್ನು ರಚನೆ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಎಇಇ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವನ್ನು ರಚನೆ ಮಾಡಿ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಲಾಗುತ್ತಿದೆ ಎಂದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಆನಂದ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಎಇಇ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಉಪತಹಶೀಲ್ದಾರ್ ವಾಸುದೇವಮೂರ್ತಿ, ಮುನಿಕೃಷ್ಣಪ್ಪ, ಚುನಾವಣೆ ಶಾಖೆಯ ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಂಬೇಡ್ಕರ್ ಭವನಕ್ಕೆ ಒತ್ತಾಯ

0

ರಾಷ್ಟ್ರಾದ್ಯಂತ ಎಲ್ಲಾ ಆಡಳಿತಾತ್ಮಕ ಕಛೇರಿಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ರ ಪ್ರತಿಮೆ, ಭಾವಚಿತ್ರಗಳನ್ನಿಟ್ಟು ಪೂಜಿಸುವುದರೊಂದಿಗೆ ಸ್ಮಾರಕ ನಿರ್ಮಾಣ ಮಾಡಿ ಗೌರವಿಸಲಅಗುತ್ತಿದೆ. ಆದರೆ ನಗರದಲ್ಲಿ ಒಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗದಿರುವುದು ದಲಿತ ಸಮುದಾಯದ ದುರದೃಷ್ಟ ಎಂದು ದ.ಸಂ.ಸ ತಾಲ್ಲೂಕು ಅಧ್ಯಕ್ಷ ಎನ್.ಎ.ವೆಂಕಟೇಶ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಪಕ್ಕದಲ್ಲಿರುವ ಹಳೆಯ ನ್ಯಾಯಾಲಯ ಕಟ್ಟಡದ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲಿಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಕೆ.ಎಂ.ಮನೋರಮಾ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ತಾಲ್ಲೂಕು ಕೇಂದ್ರ ಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಜನರು ಅನ್ಯ ಕೆಲಸಗಳ ನಿಮಿತ್ತ ಬರುವುದರಿಂದ ತಾಲ್ಲೂಕು ಕಛೇರಿ ಸಮೀಪದಲ್ಲಿಯೇ ಇರುವ ಹಳೆಯ ನ್ಯಾಯಾಲಯ ಕಟ್ಟಡದ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ದ.ಸಂ.ಸ ಪ್ರಧಾನ ಕಾರ್ಯದರ್ಶಿ ಎನ್.ನರಸಿಂಹಮೂರ್ತಿ, ಗುರುಮೂರ್ತಿ, ನಾರಾಯಣಪ್ಪ, ಅರುಣ್ ದೊಡ್ಡತಿರುಮಲಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಡಿಸೆಂಬರ್ 15 ರಂದು ಬೃಹತ್ ವಿಧಾನಸೌಧ ಚಲೋ

0

‘ಮಂಚಿಮಾಟಿಕಿ ಮಾಮಿಡಿಕಾಯಿ ಉದಿರೇಲೇದು’(ಒಳ್ಳೆ ಮಾತಿಗೆ ಮಾವಿನಕಾಯಿ ಉದುರುವುದಿಲ್ಲ), ‘ಏಡಿಸೇದಾನಿ ಮಗುಡೊಸ್ತೆ ನಾ ಮಗುಡೂ ವಸ್ತಾಡನಿ’ (ಅಳುವ ಹೆಗಂಸಿನ ಗಂಡನೊಂದಿಗೆ ನನ್ನ ಗಂಡನೂ ಬರುತ್ತಾನೆ) ಎಂದು ಸುಮ್ಮನಿರದಿರಿ. ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಪರಿಸ್ಥಿತಿ ಮೂಡಿದೆ ಎಂದು ರಾಜ್ಯ ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ರೇಷ್ಮೆ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 15 ರಂದು ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಭಾಗವಹಿಸಬೇಕೆಂದು ಕೋರಿದರು.
ವಾಸ್ತವ ಉತ್ಪಾದನಾ ವೆಚ್ಚದ ಆಧಾರದಲ್ಲಿ ರೇಷ್ಮೆ ಗೂಡಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕು. ಕಳೆದ 7 ತಿಂಗಳಿಂದ ರೈತರಿಗೆ ಆಗಿರುವ ಸುಮಾರು 450 ಕೋಟಿ ರೂಗಳ ನಷ್ಟವನ್ನು ನೀಡಬೇಕು. ರೇಷ್ಮೆ ಮೇಲಿನ ಆಮದು ಸುಂಕವನ್ನು ಮತ್ತೆ ಶೇ.31ಕ್ಕೆ ಏರಿಸಬೇಕು ಇತ್ಯಾದಿ ಬೇಡಿಕೆಗಳನ್ನು ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರದ ಮುಂದಿಟ್ಟು ಆಗ್ರಹಿಸಲಾಗುತ್ತಿದೆ.
ವಿಪರ್ಯಾಸವೆಂದರೆ, ಯುಪಿಎ ಸರ್ಕಾರ ಕೇಂದ್ರದಲ್ಲಿದ್ದಾಗ ರೇಷ್ಮೆ ಬೆಳೆಗಾರರ ವಿರುದ್ಧವಾಗಿತ್ತು,ಆಗಿದ್ದ ಬಿಜೆಪಿ ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ಪರವಾಗಿತ್ತು. ಅದೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಬಂದಾಗ ರೇಷ್ಮೆ ಬೆಳೆಗಾರರ ವಿರುದ್ಧವಾಯಿತು, ರಾಜ್ಯದ ಕಾಂಗ್ರೆಸ್ ಸರ್ಕಾರ ರೇಷ್ಮೆ ಬೆಳೆಗಾರರ ಪರವಾಗಿದೆ. ಒಟ್ಟಾರೆ ರೇಷ್ಮೆ ಬೆಳೆಯುವವರ ಬಾಳು ಹಸನಾಗಲಿಲ್ಲ. ಸಂಕಷ್ಟ ಮುಂದುವರೆದಿದೆ. ಹೋರಾಟ ಮಾಡದಿದ್ದರೆ ಉಳಿಗಾಲವಿಲ್ಲ ಎಂದು ಅವರು ಹೇಳಿದರು.
ಸಾವಿರದ ಆರುನೂರು ಅಡಿಗಳ ಆಳದಿಂದ ಹೊರತೆಗೆಯುವ ನೀರಿನಿಂದ ರೇಷ್ಮೆ ಬೆಳೆಯುತ್ತಿದ್ದೇವೆ. ಒಂದು ಲಕ್ಷ ಕೋಟಿಗೂ ಅಧಿಕ ರೈತರ ಬಂಡವಾಳದಿಂದ ಐದು ಲಕ್ಷ ಜನರಿಗೆ ಆಸರೆಯಾದ ಉದ್ದಿಮೆಯಿದು. ಬಂಡವಾಳಶಾಹಿಗಳ ಪರವಾಗಿ ಕೇಂದ್ರ ಸರ್ಕಾರ ಮಾಡಿರುವ ತಪ್ಪು ನೀತಿಯಾದ ರೇಷ್ಮೆ ಮೇಲಿನ ಆಮದು ಸುಂಕ ಕಡಿಮೆ ಮಾಡಿದ್ದರಿಂದಾಗಿ ರೇಷ್ಮೆ ಗೂಡಿನ ಬೆಲೆ ಕುಸಿದಿದೆ. ಪ್ರತಿದಿನ 2 ಕೋಟಿ ರೂಗಳ ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಕೂಡ ರೇಷ್ಮೆ ಬೆಳೆಗಾರರ ನೆರವಿಗೆ ಬಂದಿಲ್ಲ ಎಂದು ದೂರಿದರು.
‘ಒಂದು ಕೆಜಿ ರೇಷ್ಮೆಗೆ ಬೇಕು 350 ರೂಪಾಯಿ’, ‘ಒಂದು ಕೆಜಿ ರೇಷ್ಮೆ ನೂಲಿಗೆ ಬೇಕು 3000 ರೂಪಾಯಿ’, ‘ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ.50 ಕ್ಕೆ ಏರಿಸಬೇಕು’ ಎಂದು ಈ ಸಂದರ್ಭದಲ್ಲಿ ರೈತರು ಮತ್ತು ರೀಲರುಗಳು ಘೋಷಣೆಗಳನ್ನು ಕೂಗಿದರು.
ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ, ಕೆಂಪರೆಡ್ಡಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪ್ರತೀಶ್, ಅಫ್ಸಲ್ ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವರ್ಷಾ ಋತು (ಮಳೆಗಾಲ)

0

“ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ”….. ಮಳೆಯ ಈ ಹಾಡು ಬಾಲ್ಯದ ಮಳೆಗಾಲದ ದಿನಗಳನ್ನು ನೆನಪಿಸುತ್ತದೆ. ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಅವ್ಯಕ್ತ ಸಂತೋಷ. ಪ್ರಾರಂಭದ ಮಳೆಗೆ ಒದ್ದೆಯಾದ ಮಣ್ಣಿನ ಘಮ, ಹರಿಯುವ ನೀರಿನಲ್ಲಿ ಕಾಗದದ ದೋಣಿಗಳನ್ನು ಮಾಡಿ ಬಿಡುವ ಸಂಭ್ರಮ, ಸಣ್ಣ ತುಂತುರು ಮಳೆಯಲ್ಲಿ ನೆನೆಯುವ ಆನಂದ, ಇವೆಲ್ಲವುಗಳನ್ನೂ ಮೆಲುಕು ಹಾಕುತ್ತಿದ್ದಂತೆಯೇ ಬೇಸಿಗೆ ಕಳೆದು ಮಳೆಗಾಲದ ಆಗಮನವಾಗಿರುತ್ತದೆ.
ಬೇಸಿಗೆಯ ಬಿಸಿಲಿನ ಧಗೆ, ಬೆವರು, ಸುಸ್ತು, ಆಯಾಸ ಇವೆಲ್ಲವುಗಳಿಗೆ ಮುಕ್ತಿಯೆಂಬಂತೆ ಬರುವುದು ಈ ಮಳೆಗಾಲ. ಮೈ ಮನಗಳಿಗೆ ತಂಪನ್ನೆರೆಯುವುದು. ರೈತರಿಗೆ ಮಳೆಗಾಲ ಎಂಬುದು ಸುಗ್ಗಿಯ ಕಾಲ, ಬೇಸಾಯ ಮಾಡಲು ಅನುಕೂಲಕರ ವಾತಾವರಣ.
ಈ ಋತುವಿನಲ್ಲಿ ವಾತ, ಪಿತ್ತ ಹಾಗೂ ಕಫ ಈ ಮೂರೂ ದೋಷಗಳು ದೇಹದಲ್ಲಿ ಹೆಚ್ಚಾಗಿರುತ್ತವೆ. ಜೀರ್ಣಶಕ್ತಿಯು ಕಡಿಮೆ ಇರುತ್ತದೆ. ವಾತಾವರಣದಲ್ಲಿ ಕ್ಲೇದಾಂಶ (ಆದ್ರ್ರತೆ) ಹೆಚ್ಚಾಗಿರುತ್ತದೆ. ಇದು ದೇಹದ ಮೇಲೂ ಪರಿಣಾಮ ಬೀರುವುದುರಿಂದ ದೇಹದಲ್ಲಿಯೂ ಕ್ಲೇದತೆ ಹೆಚ್ಚಾಗುತ್ತದೆ. ನೆಗಡಿ ಜ್ವರ, ಕೆಮ್ಮು ಹಾಗೂ ಇನ್ನಿತರೇ ಶ್ವಾಸಕೋಶದ ಸೋಂಕುಗಳು ಹೆಚ್ಚಾಗಿ ಕಂಡು ಬರುತ್ತವೆ.
ಆಹಾರ: 1. ಈ ಋತುನಲ್ಲಿ ಪ್ರಧಾನವಾಗಿ ಬಿಸಿ ಇರುವ, ಜಿಡ್ಡಿನಿಂದ ಕೂಡಿದ, ಹುಳಿ, ಸಿಹಿ, ಉಪ್ಪು ರಸಗಳನ್ನೊಳಗೊಂಡ ಆಹಾರ ಸೇವನೆ ಮಾಡುವುದು ಹಿತಕರ.
2. ಮಳೆ ಬರುತ್ತಿರುವ ಸಮಯದಲ್ಲಿ ಮಾವಿನ ಹುಳಿ (ಬೇಸಿಗೆಯಲ್ಲಿಯೇ ಸಿದ್ಧಪಡಿಸಿಟ್ಟುಕೊಂಡಿರುವ) ಚಿತ್ರಾನ್ನ ಲಿಂಬೇ ಹುಳಿ ಅಥವಾ ಹಂಚೀಕಾಯಿ ಹುಳಿ ಚಿತ್ರಾನ್ನವನ್ನು ಸಿದ್ಧಪಡಿಸಿ ಸೇವಿಸುವುದು ಉತ್ತಮ.
3. ಈ ಋತುವಿನಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಗಡ್ಡೆ, ಗೆಣಸುಗಳು, ಬೀಟ್ರೂಟ್, ಆಲೂಗಡ್ಡೆ ಇತ್ಯಾದಿಗಳ ಸೇವನೆ ಅಷ್ಟಾಗಿ ಸೂಕ್ತವಲ್ಲ.
4. ಹೀರೇಕಾಯಿ, ಪಡುವಲಕಾಯಿ, ಮೂಲಂಗಿ ಕ್ಯಾರಟ್, ಸೀಮೆ ಬದನೆಕಾಯಿ, ಸೊಪ್ಪುಗಳು (ಬಸಳೆ, ಪಾಲಕ್ ಮೆಂತ್ಯ, ಹರಿವೆ.), ನುಗ್ಗೇಕಾಯಿ, ಇತ್ಯಾದಿ ತರಕಾರಿಗಳು ಹಿತಕರ.
5. ಹಳೆಯ ಅಕ್ಕಿ, ಗೋಧಿ ಬಾರ್ಲಿ, ಜವೆಗೋಧಿ ಇತ್ಯಾದಿಗಳನ್ನು ಬಳಸಬೇಕು.
6. ದೇಹದಲ್ಲಿ ಕ್ಲೇದಾಂಶ ಹೆಚ್ಚಾಗುವುದರಿಂದ ಕುಡಿಯುವ ನೀರಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ. ಅಲ್ಲದೆ ಕೆಲವೊಂದು ಆಹಾರ ಪದಾರ್ಥಗಳೊಡನೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದೂ ಕೂಡ ಆರೋಗ್ಯಕರ.
7. ಕಾಳು ಮೆಣಸು, ಶುಂಠಿ, ಹಿಪ್ಪಲಿ, ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿಗಳನ್ನು ಬೇರೆ ಬೇರೆ ಆಹಾರ ಪದಾರ್ಥಗಳ ರೂಪದಲ್ಲಿ (ಉದಾ: ಸಾರು, ಚಟ್ನಿ, ಗೊಜ್ಜು ಇತ್ಯಾದಿ) ಅಥವಾ ಆಹಾರ ಪದಾರ್ಥಗಳ ಸಂಸ್ಕಾರಕ್ಕೆ (ಉದಾ: ಒಗ್ಗರಣೆಗೆ) ಬಳಸಬಹುದು.
8. ಮೊಸರಿನ ಮೇಲ್ಭಾಗದ ತಿಳಿಗೆ ಹಿಪ್ಪಲಿ, ಹಿಪ್ಪಲಿಮೂಲ, ಶುಂಠಿ, ಕಾಳು ಮೆಣಸಿನ ಪುಡಿಗಳನ್ನು ಬೆರೆಸಿ ಸೇವಿಸುವುದೂ ಕೂಡ ಈ ಋತುವಿನಲ್ಲಿ ಹಿತಕರ.
ವಿಹಾರ: 1. ಸ್ನಾನ, ಶೌಚ ಹಾಗೂ ಕುಡಿಯಲು ಬಿಸಿ ನೀರಿನ ಬಳಕೆ ಸೂಕ್ತ.
2. ಬೆಚ್ಚಗಿನ ಹತ್ತಿ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸುವುದು ಅನುಕೂಲಕರ.
3. ಆದಷ್ಟು ಮನೆಯಲ್ಲಿ ಕೆಂಡದ ಒಲೆ, ಅಗ್ಗಿಷ್ಠಿಕೆಗಳನ್ನು ಉರಿಸಿ ಬೆಚ್ಚನೆಯ ವಾತಾವರಣವನ್ನು ನಿರ್ಮಿಸಿಕೊಂಡರೆ ಒಳ್ಳೆಯದು.
4. ವೈದ್ಯರ ಸಲಹೆಯ ಮೇರಗೆ ಆಸ್ಥಾಪನಾ ಬಸ್ತಿ (ಗುದದ್ವಾರದ ಮೂಲಕ ಔಷಧೀಯ ದ್ರವ್ಯಗಳನ್ನು ಸೇರಿಸುವುದು) ತೆಗೆದುಕೊಳ್ಳಬಹುದು.
5. ಅತಿಯಾದ ವ್ಯಾಯಾಮ ಮಳೆಯಲ್ಲಿ ಅಡ್ಡಾಡುವುದು ಹಾಗೂ ಹಗಲು ನಿದ್ದೆ ಈ ಋತುವಿನಲ್ಲಿ ನಿಷಿದ್ಧ.
6. ಹೊರಗಡೆ ವಿಹರಿಸುವಾಗ ಪಾದರಕ್ಷೆ, ಛತ್ರಿಗಳನ್ನು ಬಳಸಬೇಕು.
ಶರದ್ ಋತು: ವರ್ಷಾ ಋತುವಿನ (ಮಳೆಗಾಲದ) ನಂತರ ಬರುವುದೇ ಶರದ್ ಋತು ಈ ಋತುವಿನಲ್ಲಿ ಪಿತ್ತ ಪ್ರಕೋಪದ ಲಕ್ಷಣಗಳು ಕಂಡು ಬರುತ್ತವೆ. ಮಳೆಗಾಲದ ನಂತರದ ಹಾಗೂ ಚಳಿಗಾಲ ಆರಂಭವಾಗುವ ಮೊದಲಿನ ಅವಧಿಯೇ ಈ ಶರದ್ ಋತು.
ಆಹಾರ: 1. ಈ ಋತುವಿನಲಿ ಒಣಗಿದ, ಜೀರ್ಣಕ್ಕೆ ಹಗುರವಾದಂಥಹ ಹಾಗೂ ತಂಪಾದ ಆಹಾರ ಪದಾರ್ಥಗಳ ಸೇವನೆ ಹಿತಕರ.
2. ಪ್ರಧಾನವಾಗಿ ಸಿಹಿ, ಕಹಿ ಹಾಗೂ ಒಗರು ರಸಗಳನ್ನು ಹೊಂದಿರುವ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ.
3. ಖಾರ, ಉಪ್ಪು ಹಾಗೂ ಕ್ಷಾರ ರಸ ಪ್ರಧಾನ ಆಹಾರಗಳ ಅತಿಯಾದ ಸೇವನೆ ಈ ಋತುವಿನಲ್ಲಿ ನಿಷಿದ್ಧ.
4. ಅಕ್ಕಿ ಹೆಸರು ಬೇಳೆ, ಗೋಧಿ ಬಾರ್ಲಿ ಇತ್ಯಾದಿಗಳಿಂದ ಸಿದ್ಧಪಡಿಸಿದ ಆಹಾರ ಉತ್ತಮ.
5. ಅಕ್ಕಿಹಿಟ್ಟು, ಗೋಧಿ ಹಿಟ್ಟು ಬಾರ್ಲಿ ಹಿಟ್ಟು ಇತ್ಯಾದಿಗಳಿಂದ ರೊಟ್ಟಿ ದೋಸೆ ಇತರೇ ಖಾದ್ಯ ಪದಾರ್ಥಗಳನ್ನು ತಯಾರಿಸಿ ಸೇವಿಸುವುದು ಹಿತಕರ.
6. ಹೆಸರು ಬೇಳೆಯಿಂದ ತಯಾರಿಸಿದ ತೊವ್ವೆ ಮತ್ತು ಹೆಸರು ಬೇಳೆಯಿಂದ ತಯಾರಿಸಿದ ದೋಸೆ, ಹಲ್ವಾಗಳೂ ಕೂಡ ಈ ಋತುವಿನಲ್ಲಿ ಹಿತಕರ.
7. ಪಡುವಲಕಾಯಿ, ಹಾಗಲಕಾಯಿ, ಹೀರೇಕಾಯಿ, ಸೌತಗೆಕಾಯಿ, ಕಂಬಳಕಾಯಿ, ಸೀಮೆ ಬದನೆಕಾಯಿ, ತೊಂಡೆಕಾಯಿ ಇತ್ಯಾದಿ ತರಕಾರಿಗಳ ಬಳಕೆ ಈ ಋತುವಿನಲ್ಲಿ ಹಿತಕರ.
8. ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಪದಾರ್ಥಗಳ ಸೇವನೆ ಈ ಋತುವಿನಲ್ಲಿ ಅಹಿತಕರ.
9. ಲಾವಂಚವನ್ನು ಕುದಿಯುವ ನೀರಿಗೆ ಸೇರಿಸಿ ತಣ್ಣಗಾದ ನೀರನ್ನು ಕುಡಿಯುವುದು ಉತ್ತಮ.
ವಿಹಾರ: 1. ಇಬ್ಬನಿಯಲ್ಲಿ ಓಡಾಡುವುದು, ಗಾಳಿ ಬೀಸುತ್ತಿರುವಾಗ ಓಡಾಡುವುದು, ಹಗಲುನಿದ್ದೆ, ಅತಿಯಾದ ವ್ಯಾಯಾಮ ಈ ಋತುವಿನಲ್ಲಿ ನಿಷಿದ್ಧ.
2. ತಜ್ಞ ವೈದ್ಯರ ಸಲಹೆಯ ಮೇರೆಗೆ ಹಾಗೂ ಅವರ ನೇರ ನಿಗಾವಣೆಯಲ್ಲಿ ಪಂಚಕರ್ಮ ಚಿಕಿತ್ಸೆಗಳದ ವರೇಚನ ಹಾಗು ರಕ್ತಮೋಕ್ಷಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.
3. ಕರ್ಪೂರ, ಚಂದನ ಲಾವಂಚ ಇತ್ಯಾದಿಗಳನ್ನು ಸ್ನಾನದ ನಂತರ ಮೈಗೆ ಲೇಪಸಿಕೊಳ್ಳಬಹುದು.
4. ಮುತ್ತಿನ ಹಾರವನ್ನು ಧರಿಸುವುದೂ ಕೂಡ ಈ ಋತುವಿನಲ್ಲಿ ಹಿತಕರ.
ಡಾ. ನಾಗಶ್ರೀ. ಕೆ.ಎಸ್.

ಕಾರ್ತಿಕ ಸೋಮವಾರದ ವಿಶೇಷ ಪೂಜೆ

0

ಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಲಕ್ಷದೀಪೋತ್ಸವ ಆಯೋಜನೆ ಮಾಡಲಾಗಿತ್ತು.
ನಗರದ ಕೋಟೆ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯ ಸೇರಿದಂತೆ ಅಶೋಕ ರಸ್ತೆಯ ನಗರೇಶ್ವರಸ್ವಾಮಿ ದೇವಾಲಯ, ವಾಸವಿ ರಸ್ತೆಯಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯ, ಮೇಲೂರಿನ ಈಶ್ವರ ದೇವಾಲಯ, ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಾಲಯ, ಬೂದಾಳ ಗ್ರಾಮದ ಮಲೆಮಹದೇಶ್ವರಸ್ವಾಮಿ, ಗವಿಗುಟ್ಟದ ಗವಿಗಂಗಾಧರೇಶ್ವರ, ಅಪ್ಪೇಗೌಡನಹಳ್ಳಿ ಗೇಟ್ ನಲ್ಲಿರುವ ಬೈಲಾಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದುಕೊಂಡರು.

ಚಾವಣಿಯಿಲ್ಲದೇ ಸಾಗಿದೆ ಜೀವನ

0

ತಾಲ್ಲೂಕಿನಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಸಿದ್ದಾರ್ಥ ನಗರದ ಹರಿಜನ ಕಾಲೋನಿಯಲ್ಲಿ ಸುಮಾರು ಹದಿನೈದು ಮನೆಗಳು ಬಿದ್ದುಹೋಗಿದ್ದವು. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲವಾದರೂ ಮನೆ ಕಳೆದುಕೊಂಡವರು ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೇ ಪ್ಲಾಸ್ಟಿಕ್ ಶೀಟ್ಗಳನ್ನು ಮನೆಯ ಮೇಲ್ಚಾವಣೆಗೆ ಅಳವಡಿಸಿ ಜೀವನ ನಡೆಸುವಂತಾಗಿದೆ.
ಸ್ಥಳಕ್ಕೆ ನವೆಂಬರ್ ೧೯ ರಂದು ಜಿಲ್ಲಾಧಿಕಾರಿ ಸೇರಿದಂತೆ ತಹಸೀಲ್ದಾರ್ ಭೇಟಿ ನೀಡಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ನೀಡುವ ಭರವಸೆ ನೀಡಿದ್ದರಾದರೂ ಈವರೆಗೂ ಪರಿಹಾರದ ಹಣ ಫಲಾನುಭವಿಗಳ ಕೈ ಸೇರಿಲ್ಲವಾದ್ದರಿಂದ ಕಳೆದ ೨೦ ದಿನಗಳಿಂದಲೂ ಅದೇ ಬಿದ್ದು ಹೋಗಿರುವ ಮನೆಗಳಿಗೆ ಪೇಪರ್ ಅಳವಡಿಸಿಕೊಂಡು ಜೀವಿಸುವಂತಾಗಿದೆ.
ನಗರದ ಸಿದ್ದಾರ್ಥನಗರದ ೮ ಮತ್ತು ೯ ನೇ ವಾರ್ಡುಗಳಲ್ಲಿ ವಾಸಮಾಡುತ್ತಿರುವವರು ಶೇ. ೯೦ ರಷ್ಟು ಮಂದಿ ಪರಿಶಿಷ್ಟಜಾತಿಗೆ ಸೇರಿದ ರೇಷ್ಮೆ ಕೂಲಿ ಕೆಲಸ ಮಾಡುವವರಾಗಿದ್ದಾರೆ. ಈವರೆಗೂ ಇಲ್ಲಿನ ಜನರಿಗೆ ವಾಸ ಮಾಡಲು ಯೋಗ್ಯವಾದ ಮನೆಗಳಿಲ್ಲ, ರಸ್ತೆಯಿಲ್ಲ, ಉತ್ತಮ ಶಾಲೆಯಿಲ್ಲ ಕೇವಲ ಚುನಾವಣೆ ಸಮಯದಲ್ಲಿ ಓಟಿಗಾಗಿ ಬಳಸಿಕೊಳ್ಳುವ ಇವರಿಗೆ ಮೂಲಭೂತ ಸವಲತ್ತು ಕಲ್ಪಿಸುವಲ್ಲಿ ಹಿಂದಿನ ಹಾಗೂ ಹಾಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ದೂರುತ್ತಾರೆ ಇಲ್ಲಿನ ನಾಗರೀಕರು.
ಕೂಡಲೇ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಲು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಶಾಸಕರ ಮನೆ ಮುಂದೆ ಧರಣಿ ಹಮ್ಮಿಕೊಳ್ಳುವುದಾಗಿ ಜನರು ಎಚ್ಚರಿಸಿದ್ದಾರೆ.
‘ಮನೆ ಬಿದ್ದು ೨೦ ದಿನಗಳಾಯಿತು ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಕೂಲಿ ನಾಲಿ ಮಾಡುವ ನಾವುಗಳು ಬೇರೆ ಮನೆ ಬಾಡಿಗೆಗೆ ಪಡೆಯಬೇಕು ಎಂದರೆ ಕಷ್ಟ. ಆರ್ಥಿಕವಾಗಿ ಹಿಂದುಳಿದಿರುವ ನಮ್ಮಂತಹವರು ಸಾವಿರಾರು ರೂ ಬಾಡಿಗೆ ನೀಡಲು ಆಗಲ್ಲ. ಹಾಗಾಗಿ ಬಿದ್ದು ಹೋಗಿರುವ ಮನೆಗೆ ಪ್ಲಾಸ್ಟಿಕ್ ಪೇಪರ್ ಅಳವಡಿಸಿಕೊಂಡು ಜೀವಿಸುತ್ತಿದ್ದೇವೆ’ ಎಂದು ಮನೆ ಕಳೆದುಕೊಂಡ ಆನಂದ್ ತಿಳಿಸಿದ್ದಾರೆ.

ಚನ್ನೈನ ನೆರೆ ಸಂತ್ರಸ್ಥರಿಗೆ ಸಹಾಯ

0

ಶಿಡ್ಲಘಟ್ಟದ ಶಾರದಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೋಮವಾರ ಚನ್ನೈನ ನೆರೆ ಸಂತ್ರಸ್ಥರಿಗೆ ನಗರದಲ್ಲಿ ಸುಮಾರು 25 ಸಾವಿರ ರೂಗಳಷ್ಟು ದೇಣಿಗೆಯನ್ನು ಸಂಗ್ರಹಿಸಿದರು.

ಬಿ.ಎಸ್.ಎನ್.ಎಲ್ ಕಚೇರಿಯ ಮುಂದೆ ಹಳ್ಳ

0

ಶಿಡ್ಲಘಟ್ಟದ ಬಿ.ಎಸ್.ಎನ್.ಎಲ್ ಕಚೇರಿಯ ಮುಂದಿನ ರಸ್ತೆಯಲ್ಲಿ ದೊಡ್ಡ ಹಳ್ಳವುಂಟಾಗಿದ್ದು ಅಪಾಯಕಾರಿಯಾಗಿದೆ.